ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 8 ನೆಯ ಕಂತು – ಹರಿಶ್ಚಂದ್ರನಿಗೆ ಬಿದ್ದ ಕನಸು

– ಸಿ.ಪಿ.ನಾಗರಾಜ.

*** ಹರಿಶ್ಚಂದ್ರನಿಗೆ ಬಿದ್ದ ಕನಸು ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ವಿಶ್ವಾಮಿತ್ರಾಶ್ರಮ ಪ್ರವೇಶ’ ಎಂಬ ನಾಲ್ಕನೆಯ ಅದ್ಯಾಯದ 11 ರಿಂದ 23ರ ವರೆಗಿನ ಹದಿಮೂರು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು

ಹರಿಶ್ಚಂದ್ರ: ಅಯೋದ್ಯೆಯ ರಾಜ.
ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ. ಪಟ್ಟದ ರಾಣಿ.
ಸತ್ಯಕೀರ‍್ತಿ: ಹರಿಶ್ಚಂದ್ರನ ಮಂತ್ರಿ.
ಮುನಿ: ವಿಶ್ವಾಮಿತ್ರನ ಆಶ್ರಮದಲ್ಲಿರುವ ಒಬ್ಬ ಮುನಿ.

*** ಹರಿಶ್ಚಂದ್ರನಿಗೆ  ಬಿದ್ದ  ಕನಸು ***

ಬಳಿಚಿದ ಅಂಬಿಮ್ ಮುಂದೆ ಹರಿದು ವನದೊಳಗೆ ಅಡಗಿ ಮಾಯವಾದ ಎಕ್ಕಲನನ್  ಬಳಿವಿಡಿದು ಅಲ್ಲಲ್ಲಿ ಸುಳಿದು ಅರಸಿ ಕಾಣದೆ, ಮನಮ್  ನೊಂದು, ಧೃತಿ ಅಡಗಿ, ಡಗೆ ತೋರಿ, ಕಟ್ಟಾಸರು ಮೊಳೆತು ಬಾಯಾರಿ,  ತನು ಬೆಮರಿ, ಮುಖ ಬಾಡಿ ರವಿ ಕುಲಶಿರೋಮಣಿ ಹರಿಶ್ಚಂದ್ರರಾಯನ್ ಅಳವಿಯೊಳು ನಾನಾ ವಿಶೇಷ ವಿಭವಮ್ ಪಡೆದ ಮಂಗಳ ತಪೋವನವನು ಕಂಡನ್. ಕಂದಮೂಲಮ್  ಕೀಳ್ವ;  ಪೂ ಕೊಯ್ವ;  ಕೃಷ್ಣಾಜಿನಮ್ ತಳೆವ;  ರುದ್ರಾಕ್ಷೆ ಕೋವ;  ವಲ್ಕಲ ವಸನ ವೃಂದವಮ್ ತೊಳೆವ;  ಮಿಸುಪ ಆ ದಾರಮಮ್ ಬಿಗಿವ; ಮೌಂಜಿಮೇಖಲೆ ಕಟ್ಟುವ;  ಒಂದಿ ಭಸಿತವನ್ ಇಡುವ; ಯಜ್ಞೋಪವೀತಮಮ್  ಬಂಧಿಸುವ; ಜಡೆಯ ಸುಂಕಿಡುವ; ಸಮಿತಮ್ ತಪ್ಪ  ಹೆಂದದ ಮುನೀಶ್ವರ ಕುಮಾರರಮ್  ಕಂಡು ಹರಿಶ್ಚಂದ್ರನು ಕೈಮುಗಿದನ್. ವಿದಿತವೆನೆ ವೇದಘೋಷದ;  ಪುರಾಣ ಪ್ರಸಂಗದ;  ತರ್ಕ ತಂತ್ರ ಸಂವಾದದ; ಆಗಮ ವಿಚಾರದ;  ಸತ್ ಉಪನಿಷತ್ ಅರ್ಥಶ್ರವಣದ;  ಸ್ತೋತ್ರ ಸ್ತವ ಪಠನ ಪ್ರಕರದ;  ಕಾವ್ಯಲಕ್ಷಣ  ಮೃದು ಆಲಾಪದ;  ಶಿವಾರ್ಚನಾ ಅಂಗದ;  ಘಂಟಿಕಾ ರವದ;  ನಿತ್ಯ ಹೋಮ ಸ್ವಧಾಂತ್ಯದ ಶ್ರವಣ ಸಂಭ್ರಮಕೆ ಹರಿಶ್ಚಂದ್ರ ಭೂನಾಥನು ಬೆರಗಾಗುತಿರ್ದನು. ಫಳಭಾರದಿಂದ ಒಲೆದು ತೂಗಿ ಬಾಗುವ ಮರಂಗಳ ಕೆಳಗೆ ತುರುಗಿ ನಳನಳಿಸಿ ಬೆಳೆದ ಎಳ ಲತೆಯ ತಳಿರ;  ತಿಳಿಗೊಳನ ಪುಳಿನ ಸ್ಥಳದ;  ಕಮಲ ಕೈರವದ ತನಿಗಂಪು ಬೆರಸಿ ಸುಳಿವ ತಣ್ಣೆಲರ ತಂಪಮ್  ಮಂತ್ರಿ ಕಂಡು.

ಸತ್ಯಕೀರ್ತಿ:  ಭೂತಳನಾಥ…ಬಿಡುವಡೆ ಇದು ಠಾವು.       

(ಎಂದು ಬಿನ್ನೈಸೆ, ಅಂದು ಜಲಜಸಖಕುಲನ್ ಪಟ್ಟದಂಗನೆ ಕುಮಾರ ಸಹಿತ ರಥಮಮ್ ಇಳಿದನ್. ಬಳವಳಿದ ರಥ ತುರಗ ವೃಂದಮಮ್ ಬಿಟ್ಟು, ಶೀತಳ ವಾರಿಯಮ್ ತೋರಿ, ಮೆಯ್ದೊಳೆದು, ಲಲಿತ ಶಾಡ್ವಳವನ್ ಒಲವಿಮ್ ಕೊಯ್ದು ಮುಂದಿಟ್ಟು ಕಟ್ಟಿ, ಪ್ರಧಾನ ನಟ್ಟಡವಿಯೊಳಗೆ ಬಳಿವಿಡಿದು ಬಂದ ಕಟಕವನ್ ಎಯ್ದೆ ಬಿಡಿಸಿ, ಭೂತಳಪತಿಗೆ ಕೈಗೊಟ್ಟು ನಿರ್ಮಳ ಸರೋವರದೊಳ್ ಇಳುಪಿ, ಡಗೆ ತೊಲಗಿ ವಿಶ್ರಮಿಸಲು ಶಿಶಿರೋಪಚಾರಂಗಳಮ್ ಮಾಡಿದನ್.)

 

ಹರಿಶ್ಚಂದ್ರ: ಘನಪುಣ್ಯಮಯ ಎನಿಪ್ಪ ಈ ತಪೋವನದೊಳಿಹ ಮುನಿ ಆವನೋ ಮಹಾದೇವನೇ ಬಲ್ಲನ್; ಆತನ ಶಾಂತಿಯಿಂದ ಶಶಿ; ಚಾರಿತ್ರದಿಮ್ ಗಂಗೆ; ವರ ತಪಸ್ತೇಜದಿಂದ ದಿನಕರನ್; ಸುಳಿವಿಂದ ತಂಗಾಳಿ; ನುಡಿಯ ಮೋಹನದಿಂದ ಸುಧೆ; ಉದಾರತ್ವದಿಮ್ ಸುರಕುಜಮ್ ಜನಿಸದೆ ಇರವು.

(ಎಂದು ಮಂತ್ರಿಯೊಡನೆ ಆ ಹರಿಶ್ಚಂದ್ರನ್ ಕೊಂಡಾಡುತಿರ್ದನ್. ಹೊಗಳುತ್ತ ಹಾರಯಿಸುತ ಉಬ್ಬುತ್ತ ಕೊಬ್ಬುತ್ತ ನಗುತ ನಲಿಯುತ್ತ ಹಾಡುತ್ತ ಆಡುತ ಆನಂದ ಒಗೆಯುತಿರಲ್ ಒಬ್ಬ ಮುನಿಯನ್ ಕಂಡು…)

ಹರಿಶ್ಚಂದ್ರ: ಇದು ಆವನ ಆಶ್ರಮ.

(ಎಂದು ಬೆಸಗೊಂಡಡೆ…)

ಮುನಿ: ವಿಗಡ ವಿಶ್ವಾಮಿತ್ರಮುನಿಯ ಬನ.

(ಎನೆ ಸುಖಮ್ ಸುಗಿದು ಪೊಯ್ವೆಡೆದಂತೆ… ಹಾವು ಅಗಿದು ಬಿಟ್ಟಂತೆ ಬಗೆ ಬೆದರಿ…)

ಹರಿಶ್ಚಂದ್ರ: ಗುರುವಾಜ್ಞೆ ಅಳಿದುದು. ಇನ್ನೇವೆನ್.

(ಎಂದನು ಹರಿಶ್ಚಂದ್ರನೃಪನು. ಹೊಳೆವ ಮೇರುವ ಸುತ್ತಿ ಬೆಂಡಾದ ರವಿ ಚಂದ್ರ ಕಳೆಯ ತೊಡೆ ಎಡೆಯೊಳ್ ಒಯ್ಯನೆ ಮಲಗುವಂತೆ…ರವಿ ಕುಲಲಲಾಮನ್ ವರಾಹನ ಹಿಂದೆ ಹತ್ತಿದ ಆಸರ, ಮೇಲೆ ಗುರುವಾಜ್ಞೆಯ ಕಳೆದ, ಕೌಶಿಕನ ಆಶ್ರಮಮ್ ಪೊಕ್ಕ ಚಿಂತೆಯಿಮ್ ಮುಳುಗುತ್ತ, ಆಗಳು ನಿಜಸತಿಯ ತೋರ ತೊಡೆಗಳ ಮೇಲೆ ಲಲಿತ ಮಣಿಮಕುಟ ಮಂಡಿತ ಮಸ್ತಕವನಿಕ್ಕಿ ಮಗ್ಗುಲಿಕ್ಕಿದನ್. ಸತಿ ಮಡಿಸಿ ನೀಡುವ ಎಲೆವಿಡಿದ ಕೈ; ಬಸವಳಿವುತ ಅತಿಚಿಂತೆಯೊಳು ಮರೆದ ತನು; ಜೊಮ್ಮುವಿಡದ ಪುರ್ಬು; ಅತಿಭಾರಮಾಗಿ ಕಣ್ ಮುಚ್ಚಿ; ತೋಳ್ ತೊಡೆ ಮಿಡುಕೆ; ಸುಯ್ ಸೂಸೆ; ನಿದ್ರೆ ಕವಿದು ವಿತತ ಸುಖದಿಂದ ಇರುತಿರಲ್ಕೆ…ನಾನಾ ದುಃಖಯುತವಪ್ಪುದೊಂದು ಕನಸಮ್ ಕಂಡು…ನೊಂದು…ಭೂಪತಿ ಬೆದರಿದಂತೆ ಭೋಂಕೆನಲ್ ಎದ್ದು…ಬೆಬ್ಬಳಿಸಿ…ನಾಲ್ದೆಸೆಯನ್ ಆರಯ್ದನು.)

ಚಂದ್ರಮತಿ: ದುರದೊಳ್  ಅರಿ ಭೂಭುಜರನ್  ಅಂಜಿಸುವ…ನಡುಗಿಸುವ…ಕೊರಗಿಸುವ… ಕೋಡಿಸುವ…ಬಳುಕಿಸುವ…ಜಳಕಿಸುವ ಬಿರುದಂಕಮಲ್ಲ ನೀ ನಡುಗಲೇತಕ್ಕೆ ಹೇಳ್.

(ಎಂದು ಮೆಲ್ಲನೆ ನುಡಿಸಲು…)

ಹರಿಶ್ಚಂದ್ರ: ತರುಣಿ ಕೇಳ್, ಒಂದು ಕನಸಮ್ ಕಂಡೆನ್. ಆ ಕನಸು ನಿರುತವೆಂದೇ ಕಣ್ಣ ತೆರೆದೆ. ನೀನ್ ಇಂತು ಇದರ ಪರಿಯಮ್ ವಿಚಾರಿಸು.

 (ಎಂದು ಅವನೀಶ ನುಡಿಯಲ್ ಆ ನುಡಿಗೆ ಸತಿ ಹೂಂಕೊಂಡಳು.)

ಹರಿಶ್ಚಂದ್ರ: ಘುಡಿಘುಡಿಸುತ ಒಬ್ಬ ಮುನಿ ಬಂದು ನಾನ್ ಓಲಗಮ್ ಕೊಡುವ ಮಣಿಮಂಟಪದ ಕಂಭವೆಲ್ಲವನು ತಡೆಗಡಿದು… ಹೊಂಗಳಸಂಗಳಮ್ ಮಾಣದೆ ಒಡೆಬಡಿದು… ನೆರೆದ ಸಭೆಯೊಳಗೆ ಎನ್ನನು ಕೆಡಹಿ… ಸಿಂಹಾಸನವನ್ ಒಯ್ವಾಗಳ್… ಎನ್ನ ಎದೆಯನ್ ಅಡರ್ದು ಒಂದು ಕಾಗೆ ಕರೆದುದು. ಬಳಿಕ್ಕ ಆನ್ ಗಿರಿಯನ್ ಅಡರ್ದು ಶಿಖರದೊಳ್ ಎಸೆವ ಮಣಿಗೃಹಮ್ ಪೊಕ್ಕೆನ್. ಇದರ ಅಂತಸ್ಥವೇನು.

ಚಂದ್ರಮತಿ: ಅವನೀಶ, ಬಗೆವಡೆ ಈ ಕನಸು ಗುರುವಾಜ್ಞೆಯಮ್ ಮೀರಿತಕ್ಕೆ ಒಗೆವ ಕೇಡಿಂಗೆ ಸೂಚನೆ. ಮುನಿಯಬೇಡ. ಮಂತ್ರಿಗೆ… ಮಗಂಗೆ…ಎನಗೆ… ರಾಜ್ಯಕ್ಕೆ… ಚತುರಂಗಸೇನೆಗೆ… ಸಕಲ ಭಂಡಾರಕೆ… ನಗರಕ್ಕೆ… ಸರ್ವಪರಿವಾರಕ್ಕೆ… ತೇಜದ ಏಳ್ಗೆಗೆ… ನಿನ್ನ ಹರಣಕ್ಕೆ ಕೇಡು ಬಂದಡೆ ಬರಲಿ. ಮಿಗೆ ಸತ್ಯವಮ್ ಬಿಟ್ಟು ಕೆಡದಿರ್. ಕೈಮುಗಿದು ಬೇಡಿದೆನ್.

(ಎಂದಳು.)

ಸತ್ಯಕೀರ್ತಿ: ಬಿಡೆ ತಪೋವನವ ಕಾಣುತ್ತ ಕಡೆಗಣಿಸಿ ಬಿಡೆ ಪೋದಡೆ… ಕೇಳ್ದು, ಮುನಿವನ್. ಅಲ್ಲದೆ ಇಂದಿನ ಹಗಲ ಕಡೆತನಕ ನೋಡಿದೆವು. ಕೌಶಿಕಮುನೀಶ್ವರಂಗೆ ಅರಸ ವಂದಿಸಿದನೆಂದು ನುಡಿದು ನಡೆಗೊಂಬವು. ಏಳು ಏಳು.

(ಎಂದು ಮಂತ್ರಿ ತನ್ನೊಡೆಯಂಗೆ ಬುದ್ಧಿ ಪೇಳ್ದು ಎಬ್ಬಿಸುತ್ತಿರಲ್… ಅತ್ತ ಪೊಡವೀಶನನ್ ತಂದ ಹಂದಿ ಕೌಶಿಕನ ಅನುಷ್ಠಾನದ ಎಡೆಗೆ ಹರಿಯಿತ್ತು.)

ತಿರುಳು: ಹರಿಶ್ಚಂದ್ರನಿಗೆ  ಬಿದ್ದ  ಕನಸು

ಬಳಿಚಿದ ಅಂಬಿಮ್= ಹರಿಶ್ಚಂದ್ರನು ಬಿಟ್ಟ ಬಾಣಕ್ಕೆ ಬಲಿಯಾಗದೆ ತಪ್ಪಿಸಿಕೊಂಡು;

ಮುಂದೆ ಹರಿದು= ಕಾಡಿನ ಮತ್ತೊಂದು ಕಡೆಯಲ್ಲಿ ಓಡುತ್ತ;

ವನದೊಳಗೆ ಅಡಗಿ ಮಾಯವಾದ ಎಕ್ಕಲನನ್ ಬಳಿವಿಡಿದು= ಕಾಡಿನಲ್ಲಿ ಅಡಗಿ ಕಣ್ಮರೆಯಾದ ಹಂದಿಯನ್ನು ಹಿಂಬಾಲಿಸುತ್ತ;

ಅಲ್ಲಲ್ಲಿ ಸುಳಿದು ಅರಸಿ ಕಾಣದೆ= ಕಾಡಿನ ಎಲ್ಲೆಡೆಯಲ್ಲಿಯೂ ಸುತ್ತಾಡಿ ಹುಡುಕಿದರೂ ಪೆಟ್ಟುಬಿದ್ದು ಪಾರಾದ ಹಂದಿಯನ್ನು ಕಾಣದೆ;

ಮನಮ್ ನೊಂದು= ಬೇಡರ ಪಡೆಯಲ್ಲಿ ಬಹುತೇಕ ಮಂದಿಯ ಸಾವು ನೋವಿಗೆ ಕಾರಣವಾಗಿದ್ದ ದೊಡ್ಡ ಹಂದಿಯನ್ನು ಕೊಲ್ಲಲಾಗಲಿಲ್ಲವೆಂಬ ಸಂಕಟದಿಂದ ಮನದಲ್ಲಿ ಕೊರಗುತ್ತ;

ಧೃತಿ ಅಡಗಿ= ಕೆಚ್ಚು ಕುಗ್ಗಿ;

ಡಗೆ ತೋರಿ= ಸೆಕೆಯುಂಟಾಗಿ;

ಕಟ್ಟಾಸರು ಮೊಳೆತು ಬಾಯಾರಿ= ತುಂಬಾ ಬಳಲಿಕೆಯುಂಟಾಗಿ ಬಾಯಾರುತ್ತ;

ತನು ಬೆಮರಿ= ಮಯ್ ಬೆವರಿ;

ಮುಖ ಬಾಡಿ= ಮೊಗದ ಕಳೆಗುಂದಿ;

ರವಿ ಕುಲಶಿರೋಮಣಿ ಹರಿಶ್ಚಂದ್ರರಾಯನ್ ಅಳವಿಯೊಳು= ಸೂರ‍್ಯವಂಶದ ಹೆಸರಾಂತ ರಾಜನಾದ ಹರಿಶ್ಚಂದ್ರನು ಹತ್ತಿರದಲ್ಲಿಯೇ;

ನಾನಾ ವಿಶೇಷ ವಿಭವಮ್ ಪಡೆದ ಮಂಗಳ ತಪೋವನವನು ಕಂಡನ್= ಬಹುಬಗೆಯ ಚೆಲುವು ಮತ್ತು ಮಹತ್ವದಿಂದ ಕೂಡಿದ್ದ ಮಂಗಳಕರವಾದ ತಪೋವನವನ್ನು ಕಂಡನು;

ಕಂದಮೂಲಮ್ ಕೀಳ್ವ= ಗೆಡ್ಡೆಗೆಣಸುಗಳನ್ನು ಕೀಳುತ್ತಿರುವ;

ಪೂ ಕೊಯ್ವ= ಹೂವನ್ನು ಕೊಯ್ಯುತ್ತಿರುವ;

ಕೃಷ್ಣಾಜಿನಮ್ ತಳೆವ= ಜಿಂಕೆಯ ಚರ‍್ಮವನ್ನು ಉಡುಗೆಯಾಗಿ ಉಟ್ಟುಕೊಳ್ಳುತ್ತಿರುವ;

ರುದ್ರಾಕ್ಷೆ ಕೋವ= ರುದ್ರಾಕ್ಶಿಯ ಮಣಿಗಳನ್ನು ಸರವಾಗಿ ಪೋಣಿಸುತ್ತಿರುವ;

ವಲ್ಕಲ ವಸನ ವೃಂದವಮ್ ತೊಳೆವ= ನಾರುಬಟ್ಟೆಗಳನ್ನು ತೊಳೆದು ಮಡಿಮಾಡುತ್ತಿರುವ;

ಮಿಸುಪ ಆ ದಾರಮಮ್ ಬಿಗಿವ= ಹೊಳೆಹೊಳೆಯುವ ದಾರಗಳನ್ನು ಬಿಗಿದು ಸರಿಪಡಿಸುತ್ತಿರುವ;

ಮೌಂಜಿಮೇಖಲೆ ಕಟ್ಟುವ= ಉಡುದಾರವನ್ನು ಸೊಂಟಕ್ಕೆ ಬಿಗಿದು ಕಟ್ಟಿಕೊಳ್ಳುತ್ತಿರುವ;

ಒಂದಿ ಭಸಿತವನ್ ಇಡುವ= ಹಣೆಗೆ ಹೊಂದಿಕೊಳ್ಳುವಂತೆ ವಿಬೂತಿಯನ್ನು ಇಟ್ಟುಕೊಳ್ಳುತ್ತಿರುವ;

ಯಜ್ಞೋಪವೀತಮಮ್ ಬಂಧಿಸುವ= ಜನಿವಾರವನ್ನು ತೊಡುತ್ತಿರುವ;

ಜಡೆಯ ಸುಂಕಿಡಿವ= ಜಡೆಯನ್ನು ಸುರುಳಿಮಾಡಿ ತಲೆಯ ಮೇಲೆ ಎತ್ತಿಕಟ್ಟುತ್ತಿರುವ;

ಸಮಿತಮ್ ತಪ್ಪ= ಯಾಗದ ಬೆಂಕಿಯ ಕುಂಡದಲ್ಲಿ ಉರಿಸಲೆಂದು ಅತ್ತಿ, ಅರಳೆ ಮುಂತಾದ ಮರಗಳ ಸಣ್ಣ ಸಣ್ಣ ಕಡ್ಡಿಗಳನ್ನು ಆಯ್ದು ತರುತ್ತಿರುವ;

ಹೆಂದದ ಮುನೀಶ್ವರ ಕುಮಾರರಮ್ ಕಂಡು ಹರಿಶ್ಚಂದ್ರನು ಕೈಮುಗಿದನ್= ಉತ್ಸಾಹ ಕಡಿಮೆಯಾಗದೆ ಇನ್ನೂ ಹೆಚ್ಚಿನ ಸಡಗರದಿಂದ ಮಂಗಳಕಾರ‍್ಯಗಳಲ್ಲಿ ಮಗ್ನರಾಗಿರುವ ಆಶ್ರಮದ ವಟುಗಳನ್ನು ನೋಡಿ ಹರಿಶ್ಚಂದ್ರನು ಅವರಿಗೆ ಕಯ್ ಮುಗಿದನು;

ವಿದಿತವೆನೆ ವೇದಘೋಷದ= ಸುಪ್ರಸಿದ್ದವಾದ ವೇದ ಮಂತ್ರಗಳ ಎತ್ತರದ ದನಿಯ ಉಚ್ಚಾರಣೆ;

ಪುರಾಣ ಪ್ರಸಂಗದ= ಪುರಾಣ ಪ್ರಸಂಗಗಳ ಓದು;

ತರ್ಕ ತಂತ್ರ ಸಂವಾದ= ತರ‍್ಕಶಾಸ್ತ್ರದಲ್ಲಿನ ವಿಚಾರಗಳನ್ನು ಒರೆಹಚ್ಚಿ ನೋಡಿ, ಅವನ್ನು ಆಚರಿಸುವುದರ ಬಗೆಗಿನ ಸಂಗತಿಗಳ ಬಗ್ಗೆ ಮಾತುಕತೆ;

ಆಗಮ ವಿಚಾರದ= ದೇವ ಪೂಜೆಯ ವಿದಾನಗಳನ್ನು ತಿಳಿಸುವ ಶಾಸ್ತ್ರದ ಸಂಗತಿಗಳ ಪ್ರಸ್ತಾಪ;

ಸತ್ ಉಪನಿಷತ್ ಅರ್ಥಶ್ರವಣದ= ಒಳ್ಳೆಯ ಅರಿವನ್ನು ನೀಡುವ ಉಪನಿಶತ್ತಿನ ತಿರುಳನ್ನು ಕೇಳಿತಿಳಿದುಕೊಳ್ಳುವ;

ಸ್ತೋತ್ರ ಸ್ತವ ಪಠನ ಪ್ರಕರದ= ಸ್ತ್ರೋತ್ರದಲ್ಲಿರುವ ಸಂಗತಿಗಳನ್ನು ಗುಣಗಾನ ಮಾಡುತ್ತ ಓದುತ್ತಿರುವ ಸಮೂಹದ;

ಕಾವ್ಯಲಕ್ಷಣ ಮೃದು ಆಲಾಪದ= ಕಾವ್ಯದಲ್ಲಿ ಕಲಾತ್ಮಕವಾಗಿ ರಚನೆಗೊಂಡಿರುವ ಪದರಚನೆ, ವಾಕ್ಯರಚನೆ, ತಿರುಳಿನ ರಚನೆ ಮತ್ತು ವ್ಯಂಗೋಕ್ತಿಗಳ ಸೊಗಸನ್ನು ಕುರಿತ ಮಾತುಕತೆಯ;

ಶಿವಾರ್ಚನಾ ಅಂಗದ ಘಂಟಿಕಾ ರವದ= ಶಿವ ಪೂಜೆಯ ಸಮಯದಲ್ಲಿ ಹೊಡೆಯುತ್ತಿರುವ ಗಂಟೆಯ ನಿನಾದದ;

ನಿತ್ಯ ಹೋಮ ಸ್ವಧಾಂತ್ಯದ ಶ್ರವಣ ಸಂಭ್ರಮಕೆ= ನಿತ್ಯವೂ ನಡೆಯುವ ಹೋಮದ ಆಚರಣೆಯಲ್ಲಿ ಯಾಗಕುಂಡದ ಬೆಂಕಿಗೆ ಹವಿಸ್ಸನ್ನು ಅರ‍್ಪಿಸಿ ಮಾಡುವ ಪೂಜೆಯ ಕೊನೆಯ ಹಂತದಲ್ಲಿ ಮಂಗಳಕರವಾದ ಮಂತ್ರಗಳ ಉಚ್ಚಾರಣೆಯನ್ನು ಕೇಳುವ ಸಡಗರ ತುಂಬಿದ ಆನಂದಕ್ಕೆ;

ಹರಿಶ್ಚಂದ್ರ ಭೂನಾಥನು ಬೆರಗಾಗುತಿರ್ದನು= ರಾಜ ಹರಿಶ್ಚಂದ್ರನು ಅಚ್ಚರಿಯಿಂದ ತಪೋವನದ ಆಚರಣೆಗಳೆಲ್ಲವನ್ನೂ ಗಮನಿಸತೊಡಗಿದನು; ಫಳಭಾರದಿಂದ ಒಲೆದು ತೂಗಿ ಬಾಗುವ

ಮರಂಗಳ ಕೆಳಗೆ= ರೆಂಬೆಕೊಂಬೆಗಳಲ್ಲಿ ಹಣ್ಣುಕಾಯಿಗಳಿಂದ ತುಂಬಿ ತೊನೆದಾಡುತ್ತ ತೂಗಿ ಬಾಗುತ್ತಿರುವ ಮರಗಳ ಕೆಳಗೆ;

ತುರುಗಿ ನಳನಳಿಸಿ ಬೆಳೆದ ಎಳ ಲತೆಯ ತಳಿರ= ಒತ್ತೊತ್ತಾಗಿ ಕೋಮಲವಾಗಿ ಬೆಳದಿರುವ ಎಳೆಯ ಬಳ್ಳಿಗಳ ಚಿಗುರಿನ;

ತಿಳಿಗೊಳನ ಪುಳಿನ ಸ್ಥಳದ ಕಮಲ ಕೈರವದ ತನಿಗಂಪು ಬೆರಸಿ ಸುಳಿವ ತಣ್ಣೆಲರ ತಂಪಮ್ ಮಂತ್ರಿ ಕಂಡು= ತಿಳಿಗೊಳನ ಮರಳದಂಡೆಯ ಕಡೆಯಿಂದ ಬಿಳಿಯ ತಾವರೆ ಹೂವಿನ ಕಂಪಿನಿಂದ ಒಡಗೂಡಿ ಹಿತಕರವಾಗಿ ಬೀಸುತ್ತಿರುವ ತಣ್ಣನೆಯ ಗಾಳಿಯ ತಂಪಾದ ಜಾಗವನ್ನು ಮಂತ್ರಿಯು ಕಂಡು;

ಭೂತಳನಾಥ… ಬಿಡುವಡೆ ಇದು ಠಾವು ಎಂದು ಬಿನ್ನೈಸೆ= ರಾಜನೇ, ಈಗ ತಂಗುವುದಕ್ಕೆ ಇದು ಸರಿಯಾದ ಜಾಗ ಎಂದು ಮಂತ್ರಿಯು ಅರಿಕೆ ಮಾಡಿಕೊಳ್ಳಲು;

ಅಂದು ಜಲಜಸಖಕುಲನ್ ಪಟ್ಟದಂಗನೆ ಕುಮಾರ ಸಹಿತ ರಥಮಮ್ ಇಳಿದನ್= ಆಗ ಸೂರ‍್ಯವಂಶದ ರಾಜನಾದ ಹರಿಶ್ಚಂದ್ರನು ಪಟ್ಟದ ರಾಣಿ ಚಂದ್ರಮತಿ ಮತ್ತು ಮಗ ಲೋಹಿತಾಶ್ವನೊಡನೆ ತೇರಿನಿಂದ ಇಳಿದನು;

ಪ್ರಧಾನ ಬಳವಳಿದ ರಥ ತುರಗ ವೃಂದಮಮ್ ಬಿಟ್ಟು= ಮಂತ್ರಿಯು ಬಳಲಿದ್ದ ಕುದುರೆಗಳನ್ನು ತೇರಿನಿಂದ ಬಿಚ್ಚಿ;

ಶೀತಳ ವಾರಿಯಮ್ ತೋರಿ ಮೆಯ್ದೊಳೆದು= ತಣ್ಣನೆಯ ನೀರಿಗೆ ಬಿಟ್ಟು, ಕುದುರೆಗಳ ಮಯ್ಯನ್ನು ತೊಳೆದು, ಲಲಿತ ಶಾಡ್ವಳವನ್ ಒಲವಿಮ್;

ಕೊಯ್ದು ಮುಂದಿಟ್ಟು ಕಟ್ಟಿ= ಕೋಮಲವಾದ ಎಳೆಯ ಚಿಗುರು ಹುಲ್ಲನ್ನು ಕೊಯ್ದು ತಂದು ಕುದುರೆಗಳ ಮುಂದಿಟ್ಟು, ಅವನ್ನು ಒಂದೆಡೆ ಕಟ್ಟಿ;

ಬಳಿವಿಡಿದು ಬಂದ ಕಟಕವನ್ ನಟ್ಟಡವಿಯೊಳಗೆ ಎಯ್ದೆ ಬಿಡಿಸಿ= ರಾಜನನ್ನು ಹಿಂಬಾಲಿಸಿಕೊಂಡು ಬಂದಿರುವ ಸೇನೆಯನ್ನು ಕಾಡಿನ ನಡುವೆ ಸರಿಯಾದ ಜಾಗವೊಂದರಲ್ಲಿ ತಂಗುವಂತೆ ಮಾಡಿ;

ಭೂತಳಪತಿಗೆ ಕೈಗೊಟ್ಟು ನಿರ್ಮಳ ಸರೋವರದೊಳ್ ಇಳುಪಿ= ರಾಜನ ಕಯ್ಯನ್ನು ಹಿಡಿದುಕೊಂಡು ಶುಚಿಯಾದ ನೀರಿನಿಂದ ಕೂಡಿದ ಸರೋವರದೊಳಕ್ಕೆ ಇಳಿಸಿ;

ಡಗೆ ತೊಲಗಿ= ಸೆಕೆಯನ್ನು ಹೋಗಲಾಡಿಸಿ;

ವಿಶ್ರಮಿಸಲು ಶಿಶಿರೋಪಚಾರಂಗಳಮ್ ಮಾಡಿದನ್= ರಾಜ ಹರಿಶ್ಚಂದ್ರನು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಅಗತ್ಯವಾದ ತಂಪನ್ನುಂಟುಮಾಡುವ ಉಪಚಾರಗಳನ್ನು ಮಾಡಿದನು;

ಘನಪುಣ್ಯಮಯ ಎನಿಪ್ಪ ಈ ತಪೋವನದೊಳಿಹ ಮುನಿ ಆವನೋ ಮಹಾದೇವನೇ ಬಲ್ಲನ್= ಎಲ್ಲ ರೀತಿಯಿಂದಲೂ ಮಂಗಳಕರವೆನಿಸವಂತಹ ಈ ಆಶ್ರಮದಲ್ಲಿರುವ ಮುನಿಯು ಯಾರಾಗಿರಬಹುದು… ದೇವರಾದ ಆ ಮಹಾದೇವನೇ ಬಲ್ಲ;

ಆತನ ಶಾಂತಿಯಿಂದ ಶಶಿ= ಮುನಿಯ ಶಾಂತಚಿತ್ತದ ನಡೆನುಡಿಯಿಂದ ಚಂದ್ರ;

ಚಾರಿತ್ರದಿಮ್ ಗಂಗೆ= ಒಳ್ಳೆಯ ವ್ಯಕ್ತಿತ್ವದಿಂದ ಗಂಗೆ;

ವರ ತಪಸ್ತೇಜದಿಂದ ದಿನಕರನ್= ಅತ್ಯುತ್ತಮವಾದ ತಪಸ್ಸಿನ ಮಹಿಮೆಯಿಂದ ಸೂರ‍್ಯ;

ಸುಳಿವಿಂದ ತಂಗಾಳಿ= ಮುನಿಯ ಸಂಚಾರದಿಂದ ತಣ್ಣನೆಯ ಗಾಳಿ;

ನುಡಿಯ ಮೋಹನದಿಂದ ಸುಧೆ= ಮುನಿಯ ಒಲವು ನಲಿವಿನ ನುಡಿಯ ಮೋಡಿಯಿಂದ ಅಮ್ರುತ;

ಉದಾರತ್ವದಿಮ್ ಸುರಕುಜಮ್ ಜನಿಸದೆ ಇರವು ಎಂದು ಮಂತ್ರಿಯೊಡನೆ ಆ ಹರಿಶ್ಚಂದ್ರನ್ ಕೊಂಡಾಡುತಿರ್ದನ್= ಮುನಿಯ ನ್ಯಾಯಸಮ್ಮತವಾದ ಮತ್ತು ತ್ಯಾಗಶೀಲವಾದ ನಡೆನುಡಿಯಿಂದ ದೇವಲೋಕದ ಅಮರಾವತಿಯ ಉದ್ಯಾನದಲ್ಲಿರುವ ಕಲ್ಪವ್ರುಕ್ಶ ಹುಟ್ಟದೇ ಇರವು ಎಂದು ಅತಿಶಯವಾದ ನುಡಿಗಳಿಂದ ಮಂತ್ರಿಯೊಡನೆ ರಾಜ ಹರಿಶ್ಚಂದ್ರನು ಮುನಿಯನ್ನು ಕೊಂಡಾಡುತ್ತಿದ್ದನು;

ಹೊಗಳುತ್ತ ಹಾರಯಿಸುತ ಉಬ್ಬುತ್ತ ಕೊಬ್ಬುತ್ತ ನಗುತ ನಲಿಯುತ್ತ ಹಾಡುತ್ತ ಆಡುತ ಆನಂದ ಒಗೆಯುತಿರಲ್ ಒಬ್ಬ ಮುನಿಯನ್ ಕಂಡು= ಈ ರೀತಿ ಆ ಆಶ್ರಮದಲ್ಲಿ ಇರಬಹುದಾದ ದೊಡ್ಡ ವ್ಯಕ್ತಿತ್ವವುಳ್ಳ ಮುನಿಯನ್ನು ಹೊಗಳುತ್ತ, ಆ ಮುನಿಗೆ ಒಳಿತನ್ನು ಬಯಸುತ್ತ, ಅತಿಯಾದ ಹೆಮ್ಮೆಯಿಂದ ಹಿಗ್ಗಿ ಮೆರೆಯುತ್ತ, ನಕ್ಕು ನಲಿದು ಹಾಡಿ ಆನಂದದಿಂದ ಓಲಾಡುತ್ತಿದ್ದ ಸಮಯದಲ್ಲಿ ರಾಜ ಹರಿಶ್ಚಂದ್ರನು ಆಶ್ರಮವಾಸಿಯಾಗಿದ್ದ ಒಬ್ಬ ಮುನಿಯನ್ನು ಕಂಡು;

ಇದು ಆವನ ಆಶ್ರಮ ಎಂದು ಬೆಸಗೊಂಡಡೆ= ಇದು ಯಾರ ಆಶ್ರಮ ಎಂದು ವಿಚಾರಿಸಲು;

ವಿಗಡ ವಿಶ್ವಾಮಿತ್ರಮುನಿಯ ಬನ ಎನೆ= ಇದು ಮಹಿಮೆವೆತ್ತ ವಿಶ್ವಾಮಿತ್ರ ಮುನಿಯ ಆಶ್ರಮವಿರುವ ಕಾಡು ಎನ್ನಲು;

ಸುಖಮ್ ಸುಗಿದು= ಆನಂದದ ಒಳಮಿಡಿತಗಳು ಉಡುಗಿ;

ಪೊಯ್ವಡೆದಂತೆ= ದೊಡ್ಡ ಹೊಡೆತವನ್ನು ತಿಂದಂತೆ;

ಹಾವು ಅಗಿದು ಬಿಟ್ಟಂತೆ= ಹಾವು ಕಚ್ಚಿ ಬಿಟ್ಟಂತೆ;

ಬಗೆ ಬೆದರಿ= ರಾಜ ಹರಿಶ್ಚಂದ್ರನ ಮನಸ್ಸು ಅಂಜಿಕೆಯಿಂದ ತತ್ತರಿಸಿಹೋಗಿ;

ಗುರುವಾಜ್ಞೆ ಅಳಿದುದು. ಇನ್ನೇವೆನ್ ಎಂದನು ಹರಿಶ್ಚಂದ್ರನೃಪನು= “ ವಿಶ್ವಾಮಿತ್ರನ ಆಶ್ರಮದತ್ತ ಮರೆತಾದರೂ ಹೋಗಬೇಡ ” ಎಂದು ಹೇಳಿದ್ದ ಗುರುವಿನ ಮಾತಿಗೆ ತಪ್ಪಿ ನಡೆದನು. ಈಗ ಇನ್ನೇನು ಮಾಡಲಿ ಎಂದು ರಾಜ ಹರಿಶ್ಚಂದ್ರನು ಕಂಗಾಲಾದನು;

ಹೊಳೆವ ಮೇರುವ ಸುತ್ತಿ ಬೆಂಡಾದ ರವಿ ಚಂದ್ರ ಕಳೆಯ ತೊಡೆ ಎಡೆಯೊಳ್ ಒಯ್ಯನೆ ಮಲಗುವಂತೆ= ಹೊಳೆಯುತ್ತಿರುವ ಚಿನ್ನದ ಪರ್‍ವತವೆಂದು ಹೆಸರಾಂತ ಮೇರುವನ್ನು ಸುತ್ತಿ ಆಯಾಸಗೊಂಡ ಸೂರ್‍ಯನು ಚಂದ್ರಕಾಂತಿಯ ತೊಡೆಯ ಜಾಗದಲ್ಲಿ ಕೂಡಲೇ ಮಲಗುವಂತೆ;

ರವಿ ಕುಲಲಲಾಮನ್= ಸೂರ್‍ಯವಂಶದ ಉತ್ತಮರಾಜನಾದ ಹರಿಶ್ಚಂದ್ರನು;

ವರಾಹನ ಹಿಂದೆ ಹತ್ತಿದ ಆಸರ= ಹಂದಿಯನ್ನು ಬೆನ್ನಟ್ಟಿ ಬಂದ ಬಳಲಿಕೆ;

ಮೇಲೆ ಗುರುವಾಜ್ಞೆಯ ಕಳೆದ= ಬಳಲಿಕೆಯ ಜತೆಜತೆಗೆ ಗುರು ವಸಿಶ್ಟರ ಹಿತನುಡಿಯನ್ನು ಕಡೆಗಣಿಸಿದ ತಪ್ಪಿನ ನಡೆ;

ಕೌಶಿಕನ ಆಶ್ರಮಮ್ ಪೊಕ್ಕ ಚಿಂತೆಯಿಮ್ ಮುಳುಗುತ್ತ= ವಿಶ್ವಾಮಿತ್ರ ಮುನಿಯ ಆಶ್ರಮವನ್ನು ಹೊಕ್ಕ ಚಿಂತೆಯಲ್ಲಿ ಮುಳುಗಿದ ಹರಿಶ್ಚಂದ್ರನು; ಆಗಳು ನಿಜಸತಿಯ ತೋರ ತೊಡೆಗಳ ಮೇಲೆ= ಆಗ ತನ್ನ ಹೆಂಡತಿ ಚಂದ್ರಮತಿಯ ದೊಡ್ಡದಾದ ತೊಡೆಗಳ ಮೇಲೆ;

ಲಲಿತ ಮಣಿಮಕುಟ ಮಂಡಿತ ಮಸ್ತಕವನಿಕ್ಕಿ ಮಗ್ಗುಲಿಕ್ಕಿದನ್= ಮನೋಹರವಾದ ಮಣಿಗಳಿಂದ ಕೂಡಿದ ಕಿರೀಟಸಹಿತವಾದ ತನ್ನ ತಲೆಯನ್ನಿಟ್ಟು, ಒಂದು ಪಕ್ಕಕ್ಕೆ ಹೊರಳಿ ಮಲಗಿಕೊಂಡನು;

ಸತಿ ಮಡಿಸಿ ನೀಡುವ ಎಲೆವಿಡಿದ ಕೈ= ಚಂದ್ರಮತಿಯು ವೀಳೆಯದ ಎಲೆಯಲ್ಲಿ ಅಡಕೆಯನ್ನಿಟ್ಟು ಸುಣ್ಣವನ್ನು ಬಳಿದು, ಎಲೆಯನ್ನು ಮಡಿಸಿ ನೀಡುತ್ತಿರುವ ಕಯ್;

ಬಸವಳಿವುತ ಅತಿಚಿಂತೆಯೊಳು ಮರೆದ ತನು= ತೀವ್ರವಾದ ಆಯಾಸ ಮತ್ತು ಅತಿಚಿಂತೆಯಲ್ಲಿ ಎಲ್ಲವನ್ನು ಮರೆತಿರುವ ದೇಹ;

ಜೊಮ್ಮುವಿಡದ ಪುರ್ಬು ಅತಿಭಾರಮಾಗಿ ಕಣ್ ಮುಚ್ಚಿ= ಮಂಪರು ಕವಿದು ಹುಬ್ಬು ಗಂಟಿಕ್ಕಿ ಅತಿಬಾರವಾದಂತಾಗಿ ಕಣ್ಣುಗಳನ್ನು ಮುಚ್ಚಿ; ತೋಳ್ ತೊಡೆ ಮಿಡುಕೆ= ತೋಳು ತೊಡೆಗಳು ಕಂಪಿಸಲು;

ಸುಯ್ ಸೂಸೆ= ಆಯಾಸ ಮತ್ತು ಚಿಂತೆಯಿಂದ ನಿಟ್ಟುಸಿರು ಹೊರಹೊಮ್ಮುತ್ತಿರಲು;

ನಿದ್ರೆ ಕವಿದು ವಿತತ ಸುಖದಿಂದ ಇರುತಿರಲ್ಕೆ= ನಿದ್ರೆಯು ಆವರಿಸಿ ಚೆನ್ನಾಗಿ ಸುಕ ನಿದ್ರೆಯಲ್ಲಿ ಮುಳುಗಿರಲು;

ನಾನಾ ದುಃಖಯುತವಪ್ಪುದೊಂದು ಕನಸಮ್ ಕಂಡು…ನೊಂದು= ಬಹುಬಗೆಯ ಸಂಕಟಗಳಿಂದ ಕೂಡಿದ ಕನಸನ್ನು ಕಂಡು ನೊಂದು;

ಭೂಪತಿ ಬೆದರಿದಂತೆ ಭೋಂಕೆನಲ್ ಎದ್ದು… ಬೆಬ್ಬಳಿಸಿ… ನಾಲ್ದೆಸೆಯನ್ ಆರಯ್ದನು= ರಾಜನು ಹೆದರಿಕೊಂಡು ದಿಡೀರೆನೆ ಮೇಲಕ್ಕೆದ್ದು… ಗಾಬರಿಯಿಂದ ನಾಲ್ಕು ದಿಕ್ಕುಗಳನ್ನು ನೋಡತೊಡಗಿದನು;

ದುರದೊಳ್ ಅರಿ ಭೂಭುಜರನ್ ಅಂಜಿಸುವ… ನಡುಗಿಸುವ… ಕೊರಗಿಸುವ… ಕೋಡಿಸುವ… ಬಳುಕಿಸುವ… ಜಳಕಿಸುವ ಬಿರುದಂಕಮಲ್ಲ ನೀ ನಡುಗಲೇತಕ್ಕೆ ಹೇಳ್ ಎಂದು ಮೆಲ್ಲನೆ ನುಡಿಸಲು=  ರಣರಂಗದಲ್ಲಿ ಹಗೆಗಳಾದ ರಾಜರನ್ನು ಅಂಜಿಸುವ, ನಡುಗಿಸುವ, ಕೊರಗಿಸುವ, ಬೆದರಿಸುವ, ತರತರನೆ ಕಂಪಿಸುವಂತೆ ಮಾಡುವ ಬಿರುದಾಂಕಿತ ವೀರನೇ, ನೀನು ಈ ರೀತಿ ನಡುಗುತ್ತಿರುವುದೇಕೆ ಹೇಳು ಎಂದು ಚಂದ್ರಮತಿಯು ಮೆಲುನುಡಿಯಿಂದ ಕೇಳಲು;

ತರುಣಿ ಕೇಳ್, ಒಂದು ಕನಸಮ್ ಕಂಡೆನ್= ಚಂದ್ರಮತಿಯೇ ಕೇಳು. ಈಗ ಒಂದು ಕನಸನ್ನು ಕಂಡೆನು;

ಆ ಕನಸು ನಿರುತವೆಂದೇ ಕಣ್ಣ ತೆರೆದೆ= ಆ ಕನಸು ನಿಜವೆಂದೇ ತಿಳಿದು ಗಾಬರಿಗೊಂಡು ಕಣ್ಣನ್ನು ತೆರೆದೆ;

ನೀನ್ ಇಂತು ಇದರ ಪರಿಯಮ್ ವಿಚಾರಿಸು. ಎಂದು ಅವನೀಶ ನುಡಿಯಲು ಆ ನುಡಿಗೆ ಸತಿ ಹೂಂಕೊಂಡಳು= ನಾನು ಈಗ ಕನಸಿನಲ್ಲಿ ಕಂಡ ನೋಟವನ್ನು ನಿನಗೆ ಹೇಳುತ್ತೇನೆ. ಅದು ಏನನ್ನು ಸೂಚಿಸುತ್ತದೆ ಮತ್ತು ಅದರ ಪರಿಣಾಮಗಳೇನು ಎಂಬುದನ್ನು ಚಿಂತಿಸು ಎಂದು ರಾಜ ಹರಿಶ್ಚಂದ್ರನು ಹೇಳಲು, ಗಂಡನ ಮಾತಿಗೆ ಸತಿಯು ಆಗಲಿ ಎಂದಳು;

ಘುಡಿಘುಡಿಸುತ ಒಬ್ಬ ಮುನಿ ಬಂದು= ಕೋಪೋದ್ರೇಕದಿಂದ ಅಬ್ಬರಿಸಿ ಕೂಗುತ್ತ ಒಬ್ಬ ಮುನಿಯು ಅರಮನೆಗೆ ಬಂದು;

ನಾನ್ ಓಲಗಮ್ ಕೊಡುವ ಮಣಿಮಂಟಪದ ಕಂಭವೆಲ್ಲವನು ತಡೆಗಡಿದು= ನಾನು ಒಡ್ಡೋಲಗವನ್ನು ನಡೆಸುತ್ತಿದ್ದ ರತ್ನಗಳಿಂದ ಕೂಡಿದ ಮಂಟಪದ ಕಂಬಗಳೆಲ್ಲವನ್ನೂ ಕೊಚ್ಚಿಹಾಕಿ;

ಹೊಂಗಳಸಂಗಳಮ್  ಮಾಣದೆ ಒಡೆಬಡಿದು= ಹೊನ್ನಿನ ಕಳಸವನ್ನು ಬಿಡದೆ ನೆಲಕ್ಕೆ  ಉರುಳುವಂತೆ ಒಡೆದುಹಾಕಿ;

ನೆರೆದ  ಸಭೆಯೊಳಗೆ ಎನ್ನನು ಕೆಡಹಿ= ಒಡ್ಡೋಲಗದ ಸಿಂಹಾಸನದಲ್ಲಿ ಕುಳಿತಿದ್ದ ನನ್ನನ್ನು ಕೆಳಕ್ಕೆ ಎಳೆದು ಬೀಳಿಸಿ;

ಸಿಂಹಾಸನವನ್  ಒಯ್ವಾಗಳ್= ಸಿಂಹಾಸನವನ್ನು ಮುನಿಯು ಹೊತ್ತೊಯ್ಯುವಾಗ;

ಎನ್ನ ಎದೆಯನ್ ಅಡರ್ದು  ಒಂದು ಕಾಗೆ ಕರೆದುದು= ನನ್ನ ಎದೆಯ ಮೇಲೆ ಒಂದು ಕಾಗೆ ಬಂದು ಕುಳಿತು “ ಕಾ…ಕಾ..” ಎಂದು ಅರಚತೊಡಗಿತು;

ಬಳಿಕ್ಕ  ಆನ್ ಗಿರಿಯನ್  ಅಡರ್ದು= ಅನಂತರ ನಾನು ಒಂದು ಬೆಟ್ಟವನ್ನು ಏರಿ;

ಶಿಖರದೊಳ್ ಎಸೆವ  ಮಣಿಗೃಹಮ್ ಪೊಕ್ಕೆನ್= ಬೆಟ್ಟದ ತುದಿಯಲ್ಲಿ ಕಂಗೊಳಿಸುತ್ತಿದ್ದ ರತ್ನಗಳಿಂದ ಮಾಡಿದ್ದ ಮನೆಯೊಂದನ್ನು ಹೊಕ್ಕೆನು;

ಇದರ ಅಂತಸ್ಥವೇನು=ಈ ಕನಸು ಏನನ್ನು ಸೂಚಿಸುತ್ತಿದೆ; ಮುಂದಿನ ನಮ್ಮ ಬದುಕಿನಲ್ಲಿ ನಡೆಯಲಿರುವ ಯಾವ ಬಗೆಯ ಒಳಿತು ಕೆಡುಕಿಗೆ ಇದು ಮುನ್ಸೂಚನೆಯಾಗಿದೆ ಎಂದು ಹರಿಶ್ಚಂದ್ರನು ಚಂದ್ರಮತಿಯನ್ನು ಕೇಳಿದನು;

ಅವನೀಶ… ಬಗೆವಡೆ ಈ ಕನಸು ಗುರುವಾಜ್ಞೆಯಮ್ ಮೀರಿತಕ್ಕೆ ಒಗೆವ ಕೇಡಿಂಗೆ ಸೂಚನೆ= ರಾಜ…ಚಿಂತಿಸಿ ನೋಡಿದರೆ ಈ ಕನಸು ನೀನು ಗುರು ವಸಿಶ್ಟರ ಎಚ್ಚರಿಕೆಯ “ ವಿಶ್ವಾಮಿತ್ರ ಮುನಿಯ ಆಶ್ರಮದತ್ತ ಹೋಗಬೇಡ ” ಎಂಬುದನ್ನು ಮೀರಿದ್ದಕ್ಕೆ ಉಂಟಾಗಲಿರುವ ಕೇಡಿಗೆ ಮುನ್ ಸೂಚನೆಯಾಗಿದೆ;

ಮುನಿಯಬೇಡ=ಇಂತಹ ತಪ್ಪು ನಿನ್ನಿಂದ ಆಗಿರುವುದಕ್ಕಾಗಿ ನಿನ್ನ ಬಗ್ಗೆ ನೀನೇ ಬೇಸರಪಟ್ಟುಕೊಳ್ಳಬೇಡ ಇಲ್ಲವೇ ಎದೆಗುಂದಬೇಡ;

ಮಂತ್ರಿಗೆ…ಮಗಂಗೆ…ಎನಗೆ…ರಾಜ್ಯಕ್ಕೆ…ಚತುರಂಗಸೇನೆಗೆ…ಸಕಲ ಭಂಡಾರಕೆ…ನಗರಕ್ಕೆ…  ಸರ್ವಪರಿವಾರಕ್ಕೆ…ತೇಜದ ಏಳ್ಗೆಗೆ…ನಿನ್ನ ಹರಣಕ್ಕೆ ಕೇಡು ಬಂದಡೆ ಬರಲಿ= ಗುರುವಿನ ಹಿತನುಡಿಯನ್ನು  ಮರೆತು ನಡೆದುಕೊಂಡ ತಪ್ಪಿನಿಂದಾಗಿ ಮಂತ್ರಿಗೆ, ನಮ್ಮ ಮಗನಿಗೆ, ನನಗೆ, ರಾಜ್ಯಕ್ಕೆ, ಚತುರಂಗಸೇನೆಗೆ, ಸಕಲ ಸಂಪತ್ತಿಗೆ, ಅಯೋದ್ಯಾ ನಗರಕ್ಕೆ, ನಮ್ಮ ಸಕಲ ಪ್ರಜೆಗಳಿಗೆ, ನಿನ್ನ ತೇಜಸ್ಸಿನ ಏಳಿಗೆಗೆ, ಕಟ್ಟಕಡೆಯದಾಗಿ ನಿನ್ನ ಪ್ರಾಣಕ್ಕೆ ಕೇಡು ಬಂದರೆ ಬರಲಿ;

ಮಿಗೆ ಸತ್ಯವಮ್ ಬಿಟ್ಟು ಕೆಡದಿರ್= ಎಲ್ಲಕ್ಕಿಂತ ಹೆಚ್ಚಾಗಿ ಸತ್ಯದ ನಡೆನುಡಿಯನ್ನು ಬಿಟ್ಟು, ನಿನ್ನ ವ್ಯಕ್ತಿತ್ವಕ್ಕೆ ಕುಂದನ್ನು ತಂದುಕೊಳ್ಳದಿರು;

ಕೈಮುಗಿದು ಬೇಡಿದೆನ್= ನಿನ್ನಲ್ಲಿ ಇದೊಂದನ್ನು ನಡೆಸಿಕೊಡಬೇಕೆಂದು ಕಯ್ ಮುಗಿದು ಬೇಡಿಕೊಳ್ಳುತ್ತಿದ್ದೇನೆ. ನನ್ನ ಪಾಲಿಗೆ ನಿನ್ನ ಪ್ರಾಣಕ್ಕಿಂತಲೂ “ ರಾಜ ಹರಿಶ್ಚಂದ್ರನು ಸತ್ಯವಂತನೆಂಬ ವ್ಯಕ್ತಿತ್ವ ದೊಡ್ಡದು”. ಅದನ್ನು ಎಂದೆಂದಿಗೂ ಉಳಿಸಿಕೊಳ್ಳುವುದು ಎಂದಳು;

ತಪೋವನವ ಕಾಣುತ್ತ ಕಡೆಗಣಿಸಿ ಬಿಡೆ ಪೋದಡೆ ಕೇಳ್ದು, ಮುನಿವನ್= ರಾಜನಿಗೆ ಮಂತ್ರಿಯು ಸಲಹೆಯೊಂದನ್ನು ನೀಡುತ್ತಾನೆ. ವಿಶ್ವಾಮಿತ್ರ ಮುನಿಯ ಆಶ್ರಮವನ್ನು ನೋಡಿದರೂ ನೋಡದಂತೆ ಕಡೆಗಣಿಸಿ, ನಾವು ಇಲ್ಲಿಂದ ಹೋದರೆ, ಆ ಸುದ್ದಿಯನ್ನು ಕೇಳಿ ವಿಶ್ವಾಮಿತ್ರ ಮುನಿಯು ನಿನ್ನ ಬಗ್ಗೆ ಕೋಪಗೊಳ್ಳುತ್ತಾನೆ;

ಅಲ್ಲದೆ ಇಂದಿನ ಹಗಲ ಕಡೆತನಕ ನೋಡಿದೆವು= ಅದರ ಜತೆಗೆ ಇಂದು ಬೆಳಗ್ಗೆಯಿಂದ ಇರುಳಿನ ತನಕ ಮಾಯ ವರಾಹದ ಬೇಟೆಯಾಟದಲ್ಲಿ ನಮಗೆ ತಿಳಿಯದಂತೆ ವಿಶ್ವಾಮಿತ್ರ ಮುನಿಯ ಆಶ್ರಮಕ್ಕೆ ಬಂದೆವು. ಇಲ್ಲಿಗೆ ಬರಬೇಕೆಂಬ ಉದ್ದೇಶ ನಮಗಿಲ್ಲದಿದ್ದರೂ ಇದು ನಡೆದುಹೋಗಿದೆ;

ಕೌಶಿಕಮುನೀಶ್ವರಂಗೆ ಅರಸ ವಂದಿಸಿದನೆಂದು ನುಡಿದು ನಡೆಗೊಂಬವು= ಆಶ್ರಮದೊಳಕ್ಕೆ ಹೋಗಿ “ವಿಶ್ವಾಮಿತ್ರ ಮುನೀಶ್ವರರಿಗೆ ರಾಜ ಹರಿಶ್ಚಂದ್ರನು ನಮಿಸುತ್ತಿದ್ದಾನೆ” ಎಂದು ನಮ್ರತೆಯಿಂದ ನುಡಿದು ಮುಂದೆ ಸಾಗೋಣ;

ಏಳು ಏಳು ಎಂದು ಮಂತ್ರಿ ತನ್ನೊಡೆಯಂಗೆ ಬುದ್ಧಿ ಪೇಳ್ದು ಎಬ್ಬಿಸುತ್ತಿರಲ್= ಕೆಟ್ಟ ಕನಸಿನ ಹೆದರಿಕೆಯಲ್ಲಿಯೇ ಕಂಗಾಲಾಗಿದ್ದ ರಾಜ ಹರಿಶ್ಚಂದ್ರನ ಮನದಲ್ಲಿ ಮಂತ್ರಿಯು ಕೆಚ್ಚನ್ನು ತುಂಬಿ, ಮುಂದೆ ಏನು ಮಾಡಬೇಕೆಂಬ ಬುದ್ದಿಯನ್ನು ಹೇಳಿ, ಚಂದ್ರಮತಿಯ ಬಳಿಯಲ್ಲಿ ಕುಳಿತಿದ್ದ ರಾಜನನ್ನು ಮೇಲಕ್ಕೆ ಎಬ್ಬಿಸುತ್ತಿರಲು;

ಪೊಡವೀಶನನ್ ತಂದ ಹಂದಿ=ಬೂಮಂಡಲದ ಒಡೆಯನಾದ ಹರಿಶ್ಚಂದ್ರನನ್ನು ವಿಶ್ವಾಮಿತ್ರನ ಆಶ್ರಮದತ್ತ ಎಳೆತಂದ ಮಾಯಾ ಹಂದಿಯು;

ಅತ್ತ  ಕೌಶಿಕನ ಅನುಷ್ಠಾನದ ಎಡೆಗೆ ಹರಿಯಿತ್ತು= ಅತ್ತ  ವಿಶ್ವಾಮಿತ್ರನ ಯಾಗಶಾಲೆಯ ಜಾಗಕ್ಕೆ  ಓಡಿಬಂದಿತು;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *