ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 9 ನೆಯ ಕಂತು – ಗಾಣ ರಾಣಿಯರ ಪ್ರಸಂಗ
– ಸಿ.ಪಿ.ನಾಗರಾಜ.
*** ಗಾಣ ರಾಣಿಯರ ಪ್ರಸಂಗ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ವಿಶ್ವಾಮಿತ್ರಾಶ್ರಮ ಪ್ರವೇಶ’ ಎಂಬ ನಾಲ್ಕನೆಯ ಅಧ್ಯಾಯದ 24 ರಿಂದ 44 ರ ವರೆಗಿನ ಇಪ್ಪತ್ತೊಂದು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು
ವಿಶ್ವಾಮಿತ್ರ: ಒಬ್ಬ ಮುನಿ. ಈತನು ಕುಶಿಕನೆಂಬ ರಾಜನ ಮಗನಾದ್ದರಿಂದ ಕೌಶಿಕ ಎಂಬ ಮತ್ತೊಂದು ಹೆಸರಿದೆ.
ಇಬ್ಬರು ಗಾಣ ರಾಣಿಯರು : ವಿಶ್ವಾಮಿತ್ರನಿಂದ ರೂಪುಗೊಂಡ ಇಬ್ಬರು ತರುಣಿಯರು. ‘ಗಾಣ’ ಎಂಬ ಪದಕ್ಕೆ ‘ಗಾಯನ/ಗಾನ/ಹಾಡುವಿಕೆ’ ಎಂಬ ತಿರುಳು ಇದೆ.
ಹರಿಶ್ಚಂದ್ರ: ಅಯೋಧ್ಯೆಯ ರಾಜ.
*** ಗಾಣ ರಾಣಿಯರ ಪ್ರಸಂಗ ***
ನಿಡುಸರದೊಳ್ ಇಳಿವ ಉಸುರು… ಹೊಯ್ವ ಅಳ್ಳೆ… ಡೆಂಡಣಿಸುವ ಅಡಿ… ಹನಿವ ಬೆಮರು… ಮರುಮೊನೆಗಂಡ ಬಾಣಂಗಳ ಎಡೆಯಿಂದ ಸುರಿವ ಬಿಸಿನೆತ್ತರ್ … ಏರುಗಳ ವೇದನೆಗೆ ಆರದೆ ಅರೆಮುಚ್ಚುವ ಕಡೆಗಣ್ಗಳ್… ಅರಳ್ವ ನಾಸಾಪುಟಮ್… ಬಲಿದ ನೊರೆಯಿಡುವ ಕಟವಾಯ್… ಕುಸಿದ ತಲೆ… ಸುಗಿದ ದರ್ಪ… ಹುರಿಯೊಡೆದ ರೋಮಮ್… ತೂಗಿ ತೊನೆದು ಮೆಯ್ ಮರೆವ ಹಂದಿಯನು ಕೌಶಿಕ ಕಂಡನು. ಹಂದಿಯನ್ ಕಾಣುಹ ತಡಮ್ ಕೋಪಗಿಚ್ಚು ಭುಗಿಲೆಂದು ಜಪ ಜಾರಿ… ತಪ ತಗ್ಗಿ… ಮತಿ ಗತವಾಗಿ… ಸಂದ ಯೋಗಮ್ ಹಿಂಗಿ… ದಯೆ ದಾಂಟಿ… ನೀತಿ ಬೀತು… ಆನಂದ ಅರತು ಹೋಗಿ… ಹಿಂದ ನೆನೆದು ಉರಿದೆದ್ದು…
ವಿಶ್ವಾಮಿತ್ರ: ಸಿಕ್ಕಿದನಲಾ ಭೂಪನ್… ಇಂದು ನಾನಾಯ್ತು ತಾನಾಯ್ತು… ಕೆಡಿಸದೆ ಮಾಣೆನ್.
(ಎಂದು ಗರ್ಜಿಸುವ ಕೌಶಿಕನ ಹೂಂಕಾರದಿಂದ ಇಬ್ಬರು ಸತಿಯರು ಒಗೆದರ್. ಮುನಿಗೆ ಹೊಲೆ ಆವುದು. ಅತಿಕೋಪ… ಬದ್ಧ ದ್ವೇಷ… ಅನಿಮಿತ್ತವೈರ. ಅದರಿಂದ ಹುಟ್ಟಿದರಾಗಿ ವನಿತೆಯರು ಕಡೆಗೆ ಹೊಲತಿಯರಾಗಿ ಕೆಲಸಾರಿ ನಿಂದು…)
ವನಿತೆಯರು: ಬೆಸನ್ ಆವುದು?
(ಎನಲು…)
ವಿಶ್ವಾಮಿತ್ರ: ಜನಪತಿ ಹರಿಶ್ಚಂದ್ರ ಬಂದು ನಮ್ಮಯ ತಪೋವನದೊಳೈದನೆ. ನೀವು ಸರ್ವಬುದ್ಧಿಗಳೊಳ್ ಆತನ ಮರುಳುಮಾಡುತಿರಿ… ಹೋಗಿ.
(ಎಂದು ದುರ್ಮಂತ್ರಬಲವಂತನು ಅಟ್ಟಿದನ್. ಸಂದ ಕಾರಿರುಳ ಕನ್ನೆಯರು ಹಗಲಮ್ ನೋಡಲೆಂದು ಬಂದರೊ… ಸುರಾಸುರರ್ ಅಬುಧಿಯಮ್ ಮಥಿಸುವಂದು ಹೊಸ ವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ ನೊಂದು ಮಾನಿಸರಾದರೋ… ಕಮಲಜನ್ ನೀಲದಿಂದ ಮಾಡಿದ ಸಾಲಭಂಜಿಕೆಗಳ್ ಒದವಿ ಜೀವಮ್ ತಳೆದವೋ ಎನಿಪ್ಪ ಅಂದದಿಮ್ ಅಂಗನೆಯರ್ ಅವನೀಶನೆಡೆಗೆ ಬಂದರ್. ಮಾಯದ ಅಬಲೆಯರು ಕಾಣುತ್ತ…)
ಗಾಣ ರಾಣಿಯರು: ಮಝ ಭಾಪು… ಅದಟ ರಾಯ… ಮಝರೇ ರಾಯ… ರಾಯ ದಳವುಳಕಾರ… ರಾಯ ಕಂಟಕ… ರಾಯ ಜಗಜಟ್ಟಿ… ರಾಯ ತಲ್ಲಣ… ರಾಯ ಕೋಳಾಹಳ… ರಾಯ ಭುಜಬಲ ಭೀಮ… ರಾಯಮರ್ದನ ರಾಯ… ಜೀಯ ಸ್ಥಿರಂಜೀವ.
(ಎಂದು ಕೀರ್ತಿಸಿ, ಗಾಣ ನಾಯಕಿಯರ್ ಒಲಿದು, ಪೊಡಮಟ್ಟು, ದಂಡಿಗೆ ಪಿಡಿದು ಹಾಡಲು ಉದ್ಯೋಗಿಸಿದರು. ಎಕ್ಕಲನ ಬಳಿವಿಡಿದು ಸುತ್ತಿದ ಆಸರನು…
ಮುನಿ ರಕ್ಕಸನ ಬನಕೆ ಬಂದ ಅಂಜಿಕೆಯನ್… ಎರಡನೆಯ ಮುಕ್ಕಣ್ಣನ್ ಎನಿಪ ಗುರುವಾಜ್ಞೆಗೆಟ್ಟ ಅಳಲನ್…
ಅಲ್ಲದೆ ಕನಸ ಕಂಡ ಭಯವ ಮಿಕ್ಕು ಮರೆವಂತೆ… ಅಡಸಿ ಕವಿವ ಗತಿಗಳ ಸೊಗಸನ್ ಅಕ್ಕಿಸದೆ, ಸಮಯೋಚಿತದ ಪಸಾಯಕ್ಕೆ ನವುಕ್ಕಿ ಸರ್ವ ಆಭರಣಮಮ್ ಗಾಣರಾಣಿಯರಿಗೆ ಹರಿಶ್ಚಂದ್ರನು ಇತ್ತನು.
ಆಗ ಗಾಣ ರಾಣಿಯರು ಆಭರಣಗಳ ಕೊಡುಗೆಯನ್ನು ನಿರಾಕರಿಸುತ್ತ…)ಗಾಣ ರಾಣಿಯರು: ಭೂಪಾಲ, ಬಡತನದ ಹೊತ್ತು ಆನೆ ದೊರಕಿ ಫಲವೇನು… ನೀರಡಸಿರ್ದ ಹೊತ್ತು ಆಜ್ಯ ದೊರಕಿ ಫಲವೇನು… ರುಜೆಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು… ಸಾವ ಹೊತ್ತು ಪೊಡವಿಯ ಒಡೆತನ ದೊರಕಿ ಫಲವೇನು… ಕಡುವಿಸಿಲು ಹೊಡೆದು ಬೆಂಡಾಗಿ ಬೀಳ್ವ ಎಮಗೆ ನೀನ್ ಒಲಿದು ಮಣಿ ತೊಡಿಗೆಗಳನ್ ಇತ್ತು ಫಲವೇನು ಹೇಳ್…
(ಎನುತ… ಮತ್ತೆ ಇಂತು ಎಂದರು.)
ಗಾಣ ರಾಣಿಯರು: ಕಡಲೊಳ್ ಆಳ್ವಂಗೆ ತೆಪ್ಪವನು… ದಾರಿದ್ರಂಗೆ ಕಡವರವನ್… ಅತಿರೋಗಿಗೆ ಅಮೃತಮಮ್ ಕೊಟ್ಟಡೆ, ಅವರ್ ಅಡಿಗಡಿಗೆ ಅದಾವ ಹರುಷವನ್ ಎಯ್ದುತಿಪ್ಪರ್… ಅವರಮ್ ಪೋಲ್ವರ್. ಈ ಪೊತ್ತಿನ ಸುಡುಸುಡನೆ ಸುಡುವ ಬಿರುಬಿಸಿಲ ಸೆಕೆಯುಸುರ ಬಿಸಿಹೊಡೆದುದು… ಉರಿ ಹತ್ತಿ… ಬಾಯ್ ಬತ್ತಿ… ಡಗೆ ಸುತ್ತಿ… ಸಾವ್ ಅಡಸುತಿದೆ.
ನಿನ್ನ ಮುತ್ತಿನ ಸತ್ತಿಗೆಯನ್ ಇತ್ತು ಸಲಹು ಭೂಭುಜ.ಹರಿಶ್ಚಂದ್ರ: ರವಿಕುಲದ ಪೀಳಿಗೆಯೊಳ್ ಒಗೆದ ರಾಯರ್ಗೆ ಪಟ್ಟವ ಕಟ್ಟುವಂದು ಇದಿಲ್ಲದಡೆ ಅರಸುತನ ಸಲ್ಲದು; ಅವನಿಯೊಳು ಯುದ್ಧರಂಗದೊಳ್ ಇದಮ್ ಕಂಡ ಹಗೆಗಳು ನಿಲ್ಲರು; ಇದರ ಕೆಳಗೆ ಕವಿವ ನೆಳಲೊಳಗೆ ಆವನ್ ಇರ್ದನ್ ಆತಂಗೆ ತಾನ್ ತವಿಲ್, ಎಡರು, ಬಡತನಮ್, ರೋಗ, ಅಪಕೀರ್ತಿ, ಪರಿಭವ, ಭಯಮ್ ಹರೆವುದು. ಇದನ್ ಅರಿದರಿದು ಸತ್ತಿಗೆಯ ಕೊಡಬಹುದೆ ಹೇಳ್.
ಗಾಣ ರಾಣಿಯರು: ಅನುನಯದೊಳ್ ಎಲ್ಲವಮ್ ಕೊಡಬಹುದು ಬಿಡಬಹುದು.
ಹರಿಶ್ಚಂದ್ರ: ಜನನಿಯನ್… ಜನಕನನ್… ನಲ್ಲಳನ್ … ದೈವವಮ್… ಮನವಾರೆ ನಂಬಿ ನಚ್ಚಿರ್ದ ಪರಿವಾರಮಮ್ ಕೊಡುವ ಬಿಡುವ ಅತಿಕಲಿಗಳು ಜನರೊಳಗೆ ಜನಿಸರ್.
ಗಾಣ ರಾಣಿಯರು: ಅರಸ, ನೀನೀಗ ಪೇಳ್ದ ಅನಿತರೊಳು ಬೇಡಿದಡೆ ಕೊಡಬೇಡ. ಲೋಭವೇಕೆ… ಕೊಡೆಯನ್ ಈಯ.
ಹರಿಶ್ಚಂದ್ರ: ಇದಲ್ಲದೆ ಬೇರೆ ಮಾತೆಪಿತರಿಲ್ಲ. ಈ ಛತ್ರ ಲೋಗರಿಗೆ ಕೊಡಬಾರದಾಗಿ ಸತಿ; ವಂಶಗತವಾಗಿ ಬಂದುದರಿಂದ ತಂದೆ; ಪಟ್ಟವ ಕಟ್ಟುವಾಗಲ್ ಅರ್ಚಿಸಿಕೊಂಬುದಾಗಿ ದೈವಮ್; ನೆಳಲ ತಂಪನ್ ಒಸೆದೀವುದಾಗಿ ಸಾಗಿಸುವ ತಾಯ್; ಧುರದೊಳ್ ಅರಿಗಳಮ್ ನಡುಗಿಸುವುದಾಗಿ ಚತುರಂಗಬಲ ಎನಿಸಿತು ಎಂಬಾಗಳ್… ಇದನ್ ಅರಿದರಿದು ಬೇಡುವರನ್ ಮೂಜಗದೊಳು ಅತಿಮರುಳರ್ ಎನ್ನರೇ.
ಗಾಣ ರಾಣಿಯರು: ಇಳೆಯೊಳಗೆ ಹೆಸರುಳ್ಳ ದಾನಿ ಹರಿಶ್ಚಂದ್ರ ಭೂನಾಥ ಎಂಬುದನು ಕೇಳ್ದು… ಎಳಸಿ… ಕಟ್ಟಾಸೆ ಪಟ್ಟು… ಎಯ್ತಂದು ಬೇಡಿ ನಿಷ್ಫಳವಾಗದಂತೆ, ನಾವ್ ಅತಿ ಮರುಗದಂತೆ, ಅಳಲದಂತೆ, ಬಿಸುಸುಯ್ಯದಂತೆ ತಿಳಿದು ನೀನ್ ಎಮಗೆ ವಲ್ಲಭನಾಗಿ ಚಿತ್ತದ ಉಮ್ಮಳಿಕೆಯಮ್ ಕಳೆ.
(ಎಂದು ಅಳವಳಿದು ಬಾಯ್ವಿಟ್ಟು ಕೈಮುಗಿದು ಒಲವಿಂದ ಅನಾಮಿಕ ಸತಿಯರು ನುಡಿದರ್.)
ಹರಿಶ್ಚಂದ್ರ: ಇಂದು ತನಕ ಲಲಿತ ವಸುಮತಿ ಹುಟ್ಟುವಂದು ಹುಟ್ಟಿದ ಸೂರ್ಯಕುಲದ ರಾಯರ್ಗೆ ವಂಶದೊಳು ಕೀರ್ತಿಯೊಳು ಭುಜಬಲದೊಳ್ ಒರೆದೊರೆ ಎನಿಸಿ ಕನ್ನಿಕೆಯರಮ್ ಕೊಡುವ ಭೂಪರಿಲ್ಲ. ಹೊಲತಿಯರು ಬಂದು ಆವು ಸತಿಯರಾದಪ್ಪೆವು ಎಂಬ ಉಲಿಹವೆಂಬುದು… ಬಂದ ಕಾಲಗುಣವೋ… ನಿಂದ ನೆಲದ ಗುಣವೋ… ನೋಡು ನೋಡು.
(ಎಂದು ಅವನೀಶನು ಕಡುಮುಳಿದು ಕೋಪಿಸಿದನ್.)
ಗಾಣ ರಾಣಿಯರು: ಅವನೀಶ ಕೇಳ್, ಪಾವನಕ್ಷೀರಮಮ್ ಕೊಡುವ ಕೆಚ್ಚಲ ಮಾಂಸ ಆವ ಲೇಸು… ಇನಿದುಳ್ಳ ಮಧುವನ್ ಒಸೆದೀವ ನೊಳ ಆವ ಲೇಸು… ಅಧಿಕ ಕಸ್ತೂರಿಯಮ್ ಕೊಡುವ ಮೃಗನಾಭಿ ತಾನ್ ಆವ ಲೇಸು… ದೇವರಿಗೆ ಸಲ್ಲವೇ… ಉತ್ತಮ ಗುಣಂಗಳಿರ್ದು ಆವ ಕುಂದಮ್ ಕಳೆಯಲಾರವು… ಭಾವಿಸುವಡೆ ಇಂದು ಎಮ್ಮ ರೂಪು ಜವ್ವನವಿರಲು ಕುಲದ ಮಾತೇಕೆ?
ಹರಿಶ್ಚಂದ್ರ: ಅಕ್ಕಕ್ಕು… ಬಚ್ಚಲ ಉದಕಮ್ ತಿಳಿದಡೆ ಆರ ಮೀಹಕ್ಕೆ ಯೋಗ್ಯಮ್… ನಾಯ್ಗೆ ಹಾಲುಳ್ಳಡೆ ಆವನ ಊಟಕ್ಕೆ ಯೋಗ್ಯಮ್… ಪ್ರೇತವನದೊಳಗೆ ಬೆಳೆದ ಹೂವು ಆರ ಮುಡಿಹಕ್ಕೆ ಯೋಗ್ಯಮ್… ಮಿಕ್ಕ ಹೊಲತಿಯರು ನೀವೆನೆ… ನಿಮ್ಮ ಜವ್ವನದ ಸೊಕ್ಕು… ರೂಪಿನ ಗಾಡಿ… ಜಾಣತನದ ಒಪ್ಪ… ಏತಕ್ಕೆ ಯೋಗ್ಯಮ್; ರಮಿಸಿದವರುಂಟೆ… ಶಿವಶಿವ… ಈ ಮಾತು ತಾ ಹೊಲೆ.
ಗಾಣ ರಾಣಿಯರು: ಹಾಡನ್ ಒಲಿದು ಆಲಿಸಿದ ಕಿವಿಗೆ ಹೊಲೆಯಿಲ್ಲ… ಮಾತಾಡಿ ಹೊಗಳಿದ ಬಾಯ್ಗೆ ಹೊಲೆಯಿಲ್ಲ… ರೂಪ ನೆರೆ ನೋಡಿದ ವಿಲೋಚನಕೆ ಹೊಲೆಯಿಲ್ಲ… ಮೆಯ್ ಮುಡಿಗಳಿಮ್
ಸುಳಿವ ತಂಗಾಳಿಯಿಮ್ ತೀಡುವ ಸುಗಂಧಮಮ್ ವಾಸಿಸಿದ ನಾಸಿಕಕೆ ನಾಡೆ ಹೊಲೆಯಿಲ್ಲ… ಸೋಂಕಿಂಗೆ ಹೊಲೆಯುಂಟಾಯ್ತೆ… ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕು ಅಧಮ… ಒಂದು ಅಧಿಕವೇ.
ಹರಿಶ್ಚಂದ್ರ: ನಯನೇಂದ್ರಿಯಮ್ ಕಂಡು ಅರಿವವೈಸಲೇ… ಘ್ರಾಣ ವಾಸನೆಯ ಕೊಂಡು ಅರಿವವೈಸಲೇ… ಕರ್ಣಂಗಳ್ ಶಬ್ದಮಮ್ ಉಂಡು ಅರಿವವೈಸಲೇ… ದೂರದಿಂದಲ್ಲದೆ ಅವು ಮುಟ್ಟಲಿಲ್ಲ. ಭಂಡತನವು ಈ ಮಾತು. ಇದಕ್ಕೆ ಉಪಮಾನವೇ. ಕೆಂಡವನು ಮುಟ್ಟಿದಡೆ ಬೇವಂತೆ… ಕೇಳ್ದಡಮ್, ಕಂಡು ವಾಸಿಸಿದಡಮ್ ಬೆಂದವೇ. ನೀವ್ ಕಾಳುಗೆಡೆಯದೆ ಹೋಗಿ.
ಗಾಣ ರಾಣಿಯರು: ಸತ್ಕುಲಜ ಭೂಪ, ಶಾಪದಿಂದೆ ಎಮಗಾದ ದುಷ್ಕುಲಮ್ ನಿನ್ನಯ ಸಂಗದಿಮ್ ಶುದ್ಧವಪ್ಪುದು ಎಂಬ ಅಪೇಕ್ಷೆಯಿಮ್ ಬಂದೆವು.
(ಎನಲೊಡನೆ… )
ಹರಿಶ್ಚಂದ್ರ: ನಿಮಗೋಸುಗ ಎನ್ನ ಕುಲಮಮ್ ಕೆಡಿಪೆನೆ.
ಗಾಣ ರಾಣಿಯರು: ಅರಸ, ಹೇಳ್… .ಪಾಪಿಗಳ ಪಾಪಮನ್ ತೊಳೆವ ಗಂಗೆಗೆ… ಪಾಪ ಲೇಪವುಂಟಾಯ್ತೆ.
ಹರಿಶ್ಚಂದ್ರ: ಕುಲಧರ್ಮ ಈ ಪಂಥವಲ್ಲ. ಕೊಡವಾಲ ಕೆಡಿಸುವಡೆ ಆಮ್ಲ ಎನಿತಾಗಬೇಕು?
ಗಾಣ ರಾಣಿಯರು: ಮಾತಿಂಗೆ ಮಾತು ಕೊಡಲು ಅರಿದು. ನಿನ್ನಯ ನುತ ಖ್ಯಾತಿಗೆ… ಅದಟಿಂಗೆ… ರೂಪಿಂಗೆ… ಸುರುಚಿರ ಗುಣವ್ರಾತಕ್ಕೆ… ಹರೆಯಕ್ಕೆ… ಗರುವಿಕೆಗೆ ಮನಸಂದು ಮತಿಗೆಟ್ಟು ಮರುಳಾದೆವು. ಓತು ಬಂದವರನ್ ಉಪಚರಿಸದಿಪ್ಪುದು ನಿನಗೆ ನೀತಿಯಲ್ಲ… ಏಗೆಯ್ದಡಮ್ ಗಂಡನಾದಲ್ಲದೆ ಆತುರಮ್ ಪೋಗದು. ಇನ್ನು ಒಲಿದಂತೆ ಮಾಡು. ನಿನ್ನಯ ಬೆನ್ನ ಬಿಡೆವು.
ಹರಿಶ್ಚಂದ್ರ: ಬಳಿವಿಡಿದು ಬಂದು ಮಾಡುವುದೇನು. ನಮ್ಮ ಬೆಂಬಳಿಯಲಿ ಎನಿಬರು ಹೊಲೆಯರಿಲ್ಲ.
ಗಾಣ ರಾಣಿಯರು: ಅಹಗೆ ಬಿಡೆವು… ಎಳಸಿ… ಮಚ್ಚಿಸಿ… ಮರುಳ್ಗೊಳಿಸಿ… ಮತ್ತೆ ಒಲ್ಲನ್ ಅವನಿಪನ್ ಎಂದು ಮೊರೆಯಿಡುತ್ತ… ಇಳೆಯೊಳಗೆ ಸಾರುತ್ತ ದೂರುತ್ತ ಬಪ್ಪೆವು.
(ಎನೆ… ಹರಿಶ್ಚಂದ್ರನ್ ಮುಳಿದು ಘುಡುಘುಡಿಸಿ ಕೋಪಾಟೋಪದಿಮ್… )
ಹರಿಶ್ಚಂದ್ರ: ಹಲ್ಲ ಕಳೆ… ಬಾಯ ಹರಿಯ ಹೊಯ್… ಹೊಡೆಹೊಡೆ…
(ಎನುತ್ತ ಭೂನಾಥನು ಉರವಣಿಸಿ ಎದ್ದನ್. ಪ್ರಧಾನ ಬಳಿವಿಡಿದು ಚಮ್ಮಟಿಗೆಯಮ್ ತುಡುಕಿ ಸೆಳೆದು ಏಳಲ್… ಒಬ್ಬರೊಬ್ಬರನು ಬೆನ್ನೊಡೆಯೆ, ಮುಡಿ ಹುಡಿಯೊಳಗೆ ಹೊರಳೆ… ಹಲು ಬೀಳೆ… ಬಾಯ್ ಒಡೆಯೆ… ಮೆಯ್ ನೋಯೆ… ಕೈಯುಳುಕೆ… ಮೀರಿ ನಡೆದಲ್ಲಿ ನಡೆದು… ಹೊಕ್ಕಲ್ಲಿ ಹೊಕ್ಕು… ಓಡಿಹೋದೆಡೆಗೆ ಬೆನ್ನಟ್ಟಿ… ರುಧಿರಮ್ ಬಸಿಯೆ ಹೊಯ್ದು ಹೊಗರ್ ಉಡುಗಲ್ ಅರಸನ್ ತಿರುಗಲ್… ಅತ್ತಲ್ ಅವರ್ ಒರಲುತ್ತ ಆ ಮುನಿಪನೆಡೆಗೆ ಹರಿದರ್.)
ತಿರುಳು: ಗಾಣ ರಾಣಿಯರ ಪ್ರಸಂಗ
ಮಾಯಾ ವರಾಹವು ಹರಿಶ್ಚಂದ್ರನ ಬಾಣಗಳ ಪೆಟ್ಟಿಗೆ ಸಿಲುಕಿ ಸಾಯದೆ ಪಾರಾಗಿ ವಿಶ್ವಾಮಿತ್ರ ಮುನಿಯ ಆಶ್ರಮದ ಕಡೆಗೆ ಬಿದ್ದಂಬೀಳ ಓಡೋಡಿ ಬರುತ್ತಿರುವಾಗ, ಅದರ ಮಯ್ಯಲ್ಲಿ ಉಂಟಾಗುತ್ತಿದ್ದ ಚಹರೆಗಳನ್ನು ಇಲ್ಲಿ ಚಿತ್ರಿಸಲಾಗಿದೆ;
ನಿಡುಸರದೊಳ್ ಇಳಿವ ಉಸುರು=ದೊಡ್ಡದಾದ ಅರಚುವಿಕೆಯೊಡನೆ ಹೊರಬೀಳುತ್ತಿರುವ ಉಸಿರು;
ಹೊಯ್ ಅಳ್ಳೆ=ಎರಡು ಪಕ್ಕೆಗಳು ಏರಿಳಿದು ಹೊಡೆದುಕೊಳ್ಳುತ್ತಿವೆ;
ಡೆಂಡಣಿಸುವ ಅಡಿ=ನಡುಗುತ್ತಿರುವ ಕಾಲುಗಳು;
ಹನಿವ ಬೆಮರು=ಸುರಿಯುತ್ತಿರುವ ಬೆವರು;
ಮರುಮೊನೆಗಂಡ ಬಾಣಂಗಳ ಎಡೆಯಿಂದ ಸುರಿವ ಬಿಸಿನೆತ್ತರ್=ಹಂದಿಯ ಮಯ್ಯನ್ನು ಒಂದೆಡೆಯಲ್ಲಿ ಹೊಕ್ಕು ಮತ್ತೊಂದು ಎಡೆಯಲ್ಲಿ ಕಾಣಿಸಿಕೊಂಡಿರುವ ಬಾಣಗಳ ಮೊನೆಯಲ್ಲಿ ಒಂದೇ ಸಮನೆ ತೊಟ್ಟಿಕ್ಕಿತ್ತಿರುವ ಬಿಸಿ ರಕ್ತ;
ಏರುಗಳ ವೇದನೆಗೆ ಆಱದೆ ಅರೆಮುಚ್ಚುವ ಕಡೆಗಣ್ಗಳ್=ಬಾಣಗಳ ನಾಟುವಿಕೆಯಿಂದ ಆಗಿರುವ ಗಾಯಗಳ ನೋವನ್ನು ತಡೆಯಲಾರದೆ ಅರೆಮುಚ್ಚಿರುವ ಕಣ್ಣುಗಳು;
ಅರಳ್ವ ನಾಸಾಪುಟಮ್=ಅಗಲವಾಗಿರುವ ಮೂಗಿನ ಹೊಳ್ಳೆಗಳು;
ಬಲಿದ ನೊರೆಯಿಡುವ ಕಟವಾಯ್=ಬಾಯಿಯ ಎರಡು ಕಡೆಯ ಅಂಚಿನಿಂದ ಹೆಚ್ಚಾಗಿ ಸುರಿಯುತ್ತಿರುವ ಬಿಳಿಯ ನೊರೆ;
ಕುಸಿದ ತಲೆ=ಬಾಗಿದ ತಲೆ;
ಸುಗಿದ ದರ್ಪ=ಅಡಗಿದ ಸೊಕ್ಕು/ಕುಗ್ಗಿರುವ ಬಲ;
ಹುರಿಯೊಡೆದ ರೋಮಮ್=ನೆತ್ತರಿನಿಂದ ತೊಯ್ದು ಒಂದಕ್ಕೊಂದು ಅಂಟಿಕೊಂಡಿರುವ ರೋಮಗಳು;
ತೂಗಿ ತೊನೆದು ಮೆಯ್ ಮರೆವ ಹಂದಿಯನು ಕೌಶಿಕ ಕಂಡನು=ಅತ್ತಿತ್ತ ತೂರಾಡಿ ಮಯ್ ಮೇಲಣ ಹತೋಟಿಯನ್ನು ಕಳೆದುಕೊಂಡು ತನ್ನ ಆಶ್ರಮದ ಬಳಿಗೆ ಬರುತ್ತಿರುವ ಹಂದಿಯನ್ನು ವಿಶ್ವಾಮಿತ್ರ ಮುನಿಯು ಕಂಡನು;
ಹಂದಿಯಮ್ ಕಾಣುಹ ತಡಮ್ ಕೋಪಗಿಚ್ಚು ಭುಗಿಲೆಂದು=ಹಂದಿಯನ್ನು ನೋಡುತ್ತಿದ್ದಂತೆಯೇ ವಿಶ್ವಾಮಿತ್ರನ ಮನದಲ್ಲಿ ಕೋಪದ ಕಿಚ್ಚು ಬುಗಿಲ್ ಎಂದು ಹತ್ತಿಕೊಂಡು ಉರಿಯತೊಡಗಿತು. ಅಂದರೆ ಅವನ ಮಯ್ ಮನ ಕೋಪೋದ್ರೇಕಕ್ಕೆ ಒಳಗಾಯಿತು;
ಜಪ ಜಾರಿ=ಜಪಿಸುತ್ತಿದ್ದ ಮಂತ್ರಗಳು ಮರೆತುಹೋಗಿ;
ತಪ ತಗ್ಗಿ=ತಪಸ್ಸಿನ ಏಕಾಗ್ರತೆಯು ಅಳಿದು;
ಮತಿ ಗತವಾಗಿ=ವಿವೇಕವು ಲಯವಾಗಿ;
ಸಂದ ಯೋಗಮ್ ಹಿಂಗಿ=ಯೋಗ ಸಾದನೆಯಿಂದ ಪಡೆದಿದ್ದ ಮನೋಶಕ್ತಿಯು ಹಿಂಗಿಹೋಗಿ;
ದಯೆ ದಾಂಟಿ=ಕರುಣೆಯ ಮನಸ್ಸು ಇಲ್ಲವಾಗಿ;
ನೀತಿ ಬೀತು=ನೀತಿಯ ನಡೆನುಡಿಗಳು ನಾಶವಾಗಿ;
ಆನಂದ ಅರತು ಹೋಗಿ=ಆನಂದವು ಒಣಗಿಹೋಗಿ ಅಂದರೆ ಇಲ್ಲವಾಗಿ;
ಹಿಂದ ನೆನೆದು ಉರಿದೆದ್ದು=ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇನೆ ಎಂಬ ತನ್ನ ಪಣವನ್ನು ನೆನೆಸಿಕೊಂಡು ಕೋಪೋದ್ರೇಕದಿಂದ ಮೇಲೆದ್ದು;
ಸಿಕ್ಕಿದನಲಾ ಭೂಪನ್=ನಾನೊಡ್ಡಿದ ಬಲೆಯಲ್ಲಿ ರಾಜ ಹರಿಶ್ಚಂದ್ರನು ಸಿಕ್ಕಿಬಿದ್ದಿದ್ದಾನೆ;
ಇಂದು ನಾನಾಯ್ತು ತಾನಾಯ್ತು=ಇಂದು ನಾವಿಬ್ಬರು ಮಾತ್ರ ಪರಸ್ಪರ ಎದುರಾಗಿದ್ದೇವೆ. ಈಗ ಅವನಿಗೆ ಮತ್ತಾರ ನೆರವು ಸಿಗುವುದಿಲ್ಲ;
ಕೆಡಿಸದೆ ಮಾಣೆನ್ ಎಂದು ಗರ್ಜಿಸುವ ಕೌಶಿಕನ ಹೂಂಕಾರದಿಂದ ಇಬ್ಬರು ಸತಿಯರು ಒಗೆದರ್=ರಾಜ ಹರಿಶ್ಚಂದ್ರನನ್ನು ಕೆಡಿಸದೆ ಬಿಡುವುದಿಲ್ಲ ಎಂದು ಅಬ್ಬರಿಸುತ್ತ ವಿಶ್ವಾಮಿತ್ರನು ಮಾಡಿದ ಹೂಂಕಾರದಿಂದ ಇಬ್ಬರು ತರುಣಿಯರು ಮೂಡಿಬಂದರು;
ಮುನಿಗೆ ಹೊಲೆ ಆವುದು ಅತಿಕೋಪ… ಬದ್ಧ ದ್ವೇಷ… ಅನಿಮಿತ್ತವೈರ=ಮುನಿಯ ವ್ಯಕ್ತಿತ್ತಕ್ಕೆ ಕೆಟ್ಟದ್ದು ಯಾವುದು ಎಂದರೆ ಅತಿಯಾದ ಕೋಪ; ತೀವ್ರವಾದ ಹಗೆತನ; ವಿನಾಕಾರಣ ಮತ್ತೊಬ್ಬರ ಬಗ್ಗೆ ಅಸೂಯೆ, ಅಸಮಾದಾನ ಮತ್ತು ಆಕ್ರೋಶ;
ಅದರಿಂದ ಹುಟ್ಟಿದರಾಗಿ ವನಿತೆಯರು ಕಡೆಗೆ ಹೊಲತಿಯರಾಗಿ ಕೆಲಸಾರಿ ನಿಂದು=ವಿಶ್ವಾಮಿತ್ರ ಮುನಿಯ ಕೆಟ್ಟ ನಡೆನುಡಿಯಿಂದ ಈ ತರುಣಿಯರು ಹುಟ್ಟಿದ್ದರಿಂದ ಹೊಲತಿಯರಾಗಿ ರೂಪುಗೊಂಡು ವಿಶ್ವಾಮಿತ್ರನ ಬಳಿಗೆ ಬಂದು;
ಹೊಲತಿಯರು=ಪ್ರಾಚೀನ ಕಾಲದ ಇಂಡಿಯಾದೇಶದ ಸಾಮಾಜಿಕ ವ್ಯವಸ್ತೆಯಲ್ಲಿ ಜನಸಮುದಾಯವು ಬ್ರಾಹ್ಮಣ-ಕ್ಶ್ರತ್ರಿಯ-ವೈಶ್ಯ-ಶೂದ್ರ ಎಂಬ ನಾಲ್ಕು ಬಗೆಯ ವರ್‍ಣಗಳಿಂದ ಮತ್ತು ಚಂಡಾಲರೆಂಬ ಬಗೆಯಲ್ಲಿ ವಿಂಗಡಿಸಲ್ಪಟ್ಟಿತ್ತು. ಚಂಡಾಲರಲ್ಲಿಯೇ ಹೊಲೆಯರು ಮತ್ತು ಮಾದಿಗರು ಎಂಬ ಒಳಪಂಗಡಗಳು ಇದ್ದವು; ವಿದ್ಯೆ, ನಾಡನ್ನಾಳುವ ಆಡಳಿತದ ಗದ್ದುಗೆ ಮತ್ತು ಬೂಸಂಪತ್ತಿಗೆ ಬ್ರಾಹ್ಮಣ, ಕ್ಶತ್ರಿಯ, ವೈಶ್ಯರು ಮಾತ್ರ ಒಡೆಯರಾಗಿದ್ದರು. ಶೂದ್ರ ವರ್‍ಣಕ್ಕೆ ಸೇರಿದವರು ತಮಗಿಂತ ಮೇಲಿನ ಮೂರು ವರ್‍ಣದವರ ಸೇವೆಯಲ್ಲಿಯೇ ತಮ್ಮ ಬದುಕನ್ನು ಕಳೆಯಬೇಕಿತ್ತು. ಇನ್ನುಳಿದ ಚಂಡಾಲರು ಊರಿನಿಂದ ಹೊರಹಾಕಲ್ಪಟ್ಟು, ಅವರನ್ನು ಪ್ರಾಣಿಪಕ್ಶಿಗಳಿಗಿಂತ ಕೀಳಾಗಿ ಕಾಣಲಾಗುತ್ತಿತ್ತು. ಇಡೀ ಇಂಡಿಯಾದೇಶದ ಒಟ್ಟು ಜನಸಂಕೆಯಲ್ಲಿ ಶೇಕಡಾ ಎಂಬತ್ತರಶ್ಟು ಇದ್ದ ಶೂದ್ರರು, ಚಂಡಾಲರು, ಹೊಲೆಯರು ಮತ್ತು ಮಾದಿಗರು ವರ್‍ಣ ವ್ಯವಸ್ತೆಯ ಕಾರಣದಿಂದಾಗಿ ಬದುಕಿನ ಅವಕಾಶಗಳಿಂದ ವಂಚಿತರಾಗಿ ಸಾವಿರಾರು ವರುಶಗಳಿಂದ ಹಸಿವು, ಬಡತನ ಮತ್ತು ಅಪಮಾನದಿಂದ ನರಳುತ್ತಿದ್ದರು; ವಿಶ್ವಾಮಿತ್ರನಿಂದ ರೂಪು ತಳೆದ ಈ ಇಬ್ಬರು ತರುಣಿಯರು ವರ್‍ಣ ವ್ಯವಸ್ತೆಯ ಅತ್ಯಂತ ಕೆಳ ವರ್ಗಕ್ಕೆ ಸೇರಿದವರಾಗಿದ್ದಾರೆ; ಮೇಲು ವರ್ಣಕ್ಕೆ ಸೇರಿದ ಕ್ಶತ್ರಿಯನಾದ ವಿಶ್ವಾಮಿತ್ರನು ತನ್ನ ಕೆಟ್ಟ ಉದ್ದೇಶವನ್ನು ಈಡೇರಿಸಿಕೊಳ್ಳಲು ಕೆಳವರ್‍ಗದ ಹೆಣ್ಣುಮಕ್ಕಳನ್ನು ರೂಪಿಸಿದ್ದಾನೆ;
ಬೆಸನ್ ಆವುದು ಎನಲು=ನಾವು ಮಾಡಬೇಕಾದ ಕೆಲಸ ಯಾವುದು ಎಂದು ಕೇಳಲು;
ಜನಪತಿ ಹರಿಶ್ಚಂದ್ರ ಬಂದು ನಮ್ಮಯ ತಪೋವನದೊಳೈದನೆ=ರಾಜ ಹರಿಶ್ಚಂದ್ರನು ಬಂದು ನಮ್ಮ ಆಶ್ರಮದಲ್ಲಿ ತಂಗಿದ್ದಾನೆ;
ನೀವು ಸರ್ವಬುದ್ಧಿಗಳೊಳ್ ಆತನ ಮರುಳುಮಾಡುತಿರಿ… ಹೋಗಿ ಎಂದು ದುರ್ಮಂತ್ರಬಲವಂತನು ಅಟ್ಟಿದನ್=ನೀವು ನಿಮ್ಮೆಲ್ಲಾ ಬುದ್ದಿಶಕ್ತಿಯನ್ನು ಬಳಸಿ, ಅವನು ನಿಮ್ಮ ಅಂದಚಂದಕ್ಕೆ ಮೋಹಗೊಳ್ಳುವಂತೆ ಮಾಡಿ… ಅವನು ಇರುವಲ್ಲಿಗೆ ಹೋಗಿ ಎಂದು ವಿಶ್ವಾಮಿತ್ರ ಮುನಿಯು ಆ ಇಬ್ಬರು ತರುಣಿಯರನ್ನು ರಾಜನ ಬಳಿಗೆ ಕಳುಹಿಸಿದನು; . ಸಂದ ಕಾರಿರುಳ ಕನ್ನೆಯರು ಹಗಲಮ್ ನೋಡಲೆಂದು ಬಂದರೊ=ಹೆಸರಾಂತ ಕಾಳರಾತ್ರಿಯ ಕನ್ನೆಯರು ಅಂದರೆ ಕಪ್ಪನೆಯ ಮಯ್ ಬಣ್ಣವುಳ್ಳ ಕನ್ನೆಯರು ಬೆಳಕಿನ ಕಿರಣಗಳಿಂದ ಕೂಡಿರುವ ಹಗಲನ್ನು ನೋಡಲೆಂದು ಬಂದರೊ;
ಸುರಾಸುರರ್ ಅಬುಧಿಯಮ್ ಮಥಿಸುವಂದು ಹೊಸ ವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ ನೊಂದು ಮಾನಿಸರಾದರೋ=ದೇವತೆಗಳು ಮತ್ತು ರಕ್ಕಸರು ಹಾಲಿನ ಕಡಲನ್ನು ಕಡೆಯುವಾಗ ಹೊರಹೊಮ್ಮಿದ ನಂಜಿನ ಹೊಗೆಯು ದಟ್ಟವಾಗಿ ಹಬ್ಬಿಕೊಂಡಿದ್ದರಿಂದ ಕಳೆಗುಂದಿದ ಜಲದೇವಿಯರು ಮನದಲ್ಲಿ ನೊಂದು ಮಾನವ ರೂಪನ್ನು ತಳೆದರೊ;
ಕಮಲಜನ್ ನೀಲದಿಂದ ಮಾಡಿದ ಸಾಲಭಂಜಿಕೆಗಳ್ ಒದವಿ ಜೀವಮ್ ತಳೆದವೋ ಎನಿಪ್ಪ ಅಂದದಿಮ್=ಬ್ರಹ್ಮದೇವನು ನೀಲಿಯ ಬಣ್ಣದಿಂದ ನಿರ್ಮಿಸಿದ ಗೊಂಬೆಗಳಿಗೆ ಜೀವ ಬಂದು ಈ ತರುಣಿಯರ ರೂಪವನ್ನು ತಳೆದವೋ ಎನ್ನುವ ರೀತಿಯಲ್ಲಿ;
ಅಂಗನೆಯರ್ ಅವನೀಶನೆಡೆಗೆ ಬಂದರ್=ನೀಲಿ ಮಿಶ್ರಿತ ಕಪ್ಪು ಮಯ್ ಬಣ್ಣದ ಆ ಇಬ್ಬರು ತರುಣಿಯರು ರಾಜ ಹರಿಶ್ಚಂದ್ರನು ಇದ್ದ ಕಡೆಗೆ ಬಂದರು;
ಮಾಯದ ಅಬಲೆಯರು ಕಾಣುತ್ತ=ಮಾಯಾ ವನಿತೆಯರಾದ ಅವರಿಬ್ಬರು ರಾಜ ಹರಿಶ್ಚಂದ್ರನನ್ನು ಕಾಣುತ್ತಿದ್ದಂತೆಯೇ ಕೇಡಿ ವಿಶ್ವಾಮಿತ್ರನ ಆಣತಿಯಂತೆ ರಾಜನನ್ನು ತಮ್ಮತ್ತ ಸೆಳೆದುಕೊಳ್ಳಲು ರಾಜನ ಗುಣಗಾನದಲ್ಲಿ ತೊಡಗುತ್ತಾರೆ; ಮಝ/ಮಝರೆ=ಮೆಚ್ಚುಗೆಯನ್ನು ಸೂಚಿಸಿ ಹೊಗಳುವಾಗ ಹೇಳುವ ಪದಗಳು; ಭಾಪು=ವ್ಯಕ್ತಿಯ ಶೂರತನ ಮತ್ತು ಸಾಹಸವನ್ನು ಕೊಂಡಾಡುವಾಗ ಬಳಸುವ ಪದ;
ಮಝ ಭಾಪು… ಅದಟ ರಾಯ=ಮಜ ಬಾಪು… ಪರಾಕ್ರಮಿಯಾದ ರಾಜ;
ಮಝರೇ ರಾಯ=ಶೂರತನ ಮತ್ತು ಸಾಹಸದಲ್ಲಿ ಜನಮೆಚ್ಚುಗೆಯನ್ನು ಪಡೆದಿರುವ ರಾಜ;
ರಾಯ ದಳವುಳಕಾರ=ಹಗೆಗಳ ಮೇಲೆ ಆಕ್ರಮಣ ಮಾಡುವ ರಾಜ;
ರಾಯ ಕಂಟಕ=ಹಗೆಗಳಿಗೆ ಕೇಡನ್ನುಂಟುಮಾಡುವ ರಾಜ;
ರಾಯ ಜಗಜಟ್ಟಿ=ಜಗಜಟ್ಟಿಯಾದ ರಾಜ;
ರಾಯ ತಲ್ಲಣ=ಜಗತ್ತನ್ನೇ ಅಂಜಿಸಿ ಅಂಕೆಯಲ್ಲಿಟ್ಟುಕೊಳ್ಳಬಲ್ಲ ರಾಜ;
ರಾಯ ಕೋಳಾಹಳ=ಕಾಳೆಗದಲ್ಲಿ ಹಗೆಗಳನ್ನು ಗಾಬರಿ ಬೀಳುವಂತೆ ಮಾಡುವ ರಾಜ;
ರಾಯ ಭುಜಬಲ ಭೀಮ=ತೋಳ್ಬಲದಲ್ಲಿ ಬೀಮನೆನೆಸಿದ ರಾಜ;
ರಾಯ ಮರ್ದನ ರಾಯ=ಶತ್ರು ರಾಜರನ್ನ ಸದೆಬಡಿಯುವ ರಾಜ;
ಜೀಯ ಸ್ಥಿರಂಜೀವ ಎಂದು ಕೀರ್ತಿಸಿ= ರಾಜನೇ ಅಮರನಾಗು ಎಂದು ಗುಣಗಾನಮಾಡಿ;
ಗಾಣ ನಾಯಕಿಯರ್ ಒಲಿದು, ಪೊಡಮಟ್ಟು ದಂಡಿಗೆ ಪಿಡಿದು, ಹಾಡಲು ಉದ್ಯೋಗಿಸಿದರು=ಗಾಣ ನಾಯಕಿಯರು ರಾಜ ಹರಿಶ್ಚಂದ್ರನನ್ನು ಮೆಚ್ಚಿಕೊಂಡು, ನಮಸ್ಕರಿಸಿ ದಂಡಿಗೆ ಎಂಬ ತಂತಿ ವಾದ್ಯವನ್ನು ನುಡಿಸುತ್ತ ಹಾಡಲು ತೊಡಗಿದರು;
ಎಕ್ಕಲನ ಬಳಿವಿಡಿದು ಸುತ್ತಿದ ಆಸರನು=ಬಾಣಗಳ ಪೆಟ್ಟಿಗೆ ಬಲಿಯಾಗಿ ಬೀಳದೆ ಓಡುತ್ತಿದ್ದ ಹಂದಿಯನ್ನು ಹಿಂಬಾಲಿಸಿಕೊಂಡು ಅಲೆದಾಡಿದ ಆಯಾಸವನ್ನು;
ಮುನಿ ರಕ್ಕಸನ ಬನಕೆ ಬಂದ ಅಂಜಿಕೆಯನ್=ಕೇಡಿಗನಾದ ವಿಶ್ವಾಮಿತ್ರ ಮುನಿಯ ಕಾಡಿಗೆ ಬಂದಿದ್ದರಿಂದ ಉಂಟಾಗಿರುವ ಹೆದರಿಕೆಯನ್ನು;
ಎರಡನೆಯ ಮುಕ್ಕಣ್ಣನ್ ಎನಿಪ ಗುರುವಾಜ್ಞೆಗೆಟ್ಟ ಅಳಲನ್=ಎರಡನೆಯ ಶಿವ ಎಂದು ಹೆಸರಾಂತ ಗುರು ವಸಿಶ್ಟ ಮುನಿಯ ಆದೇಶವನ್ನು ಮೀರಿದ್ದರಿಂದ ಉಂಟಾಗಿರುವ ಸಂಕಟವನ್ನು;
ಅಲ್ಲದೆ ಕನಸ ಕಂಡ ಭಯವ ಮಿಕ್ಕು ಮರೆವಂತೆ=ಇದೆಲ್ಲದರ ಜತೆಗೆ ಕೆಟ್ಟ ಕನಸನ್ನು ಕಂಡ ಹೆದರಿಕೆಯನ್ನು ಸಂಪೂರ್‍ಣವಾಗಿ ಮರೆಯುವ ರೀತಿಯಲ್ಲಿ;
ಅಡಸಿ ಕವಿವ ಗತಿಗಳ ಸೊಗಸನ್ ಅಕ್ಕಿಸದೆ, ಸಮಯೋಚಿತದ ಪಸಾಯಕ್ಕೆ ಮನವುಕ್ಕಿ ಸರ್ವ ಆಭರಣಮಮ್ ಗಾಣರಾಣಿಯರಿಗೆ ಹರಿಶ್ಚಂದ್ರನು ಇತ್ತನು=ರಾಜ ಹರಿಶ್ಚಂದ್ರನು ಎಲ್ಲೆಡೆಯಲ್ಲಿಯೂ ಆವರಿಸಿಕೊಂಡು ಕೇಳಿಬರುತ್ತಿರುವ ಸಂಗೀತದ ನಾದಲಯದ ಗತಿಗಳ ಸೊಗಸಿನಿಂದಾದ ಆನಂದವನ್ನು ತಡೆದುಕೊಳ್ಳದೆ ಅಂದರೆ ತನ್ನ ಆನಂದವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತ, ಹಾಡು ಮತ್ತು ದಂಡಿಗೆಯ ನಾದಕ್ಕೆ ಸೂಕ್ತವಾದ ಮೆಚ್ಚಿನ ಉಡುಗೊರೆಯನ್ನು ನೀಡಲು ಮನಸ್ಸು ತುಂಬಿ ಬಂದು, ತಾನು ತೊಟ್ಟಿದ್ದ ಬೆಲೆಬಾಳುವ ಒಡವೆಗಳೆಲ್ಲವನ್ನೂ ಗಾಣರಾಣಿಯರಿಗೆ ಕೊಟ್ಟನು;
ಆಗ ಗಾಣ ರಾಣಿಯರು ಒಡವೆಗಳ ಕೊಡುಗೆಯನ್ನು ನಿರಾಕರಿಸುತ್ತ;
ಭೂಪಾಲ, ಬಡತನದ ಹೊತ್ತು ಆನೆ ದೊರಕಿ ಫಲವೇನು=ರಾಜ, ಬಡತನದಿಂದ ನರಳುತ್ತಿರುವಾಗ ಆನೆಯು ದೊರಕಿದರೆ ಏನು ಪ್ರಯೋಜನ; ಅಂದರೆ ತನ್ನ ಹೊಟ್ಟೆಗೆ ಅನ್ನವಿಲ್ಲದ ಹಸಿದಿರುವ ವ್ಯಕ್ತಿಯು ಆನೆಯನ್ನು ಹೇಗೆ ಸಾಕಬಲ್ಲ;
ನೀರಡಸಿರ್ದ ಹೊತ್ತು ಆಜ್ಯ ದೊರಕಿ ಫಲವೇನು=ಬಾಯಾರಿಕೆಯಿಂದ ಬಳಲುತ್ತಿರುವ ವ್ಯಕ್ತಿಗೆ ತುಪ್ಪ ದೊರಕಿದರೆ ಏನು ಪ್ರಯೋಜನ; ಅಂದರೆ ಬಾಯಾರಿಕೆಯನ್ನು ತಣಿಸಲು ನೀರು ಬೇಕೆ ಹೊರತು ತುಪ್ಪವಲ್ಲ;
ರುಜೆಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು=ರೋಗದಿಂದ ನರಳುತ್ತ ಕಂಗಾಲಾಗಿ ಮಲಗಿರುವಾಗ ವ್ಯಕ್ತಿಗೆ ದೇವಲೋಕದ ಸುರಸುಂದರಿಯಾದ ರಂಬೆಯು ದೊರಕಿದರೆ ಏನು ಪ್ರಯೋಜನ;
ಸಾವ ಹೊತ್ತು ಪೊಡವಿಯ ಒಡೆತನ ದೊರಕಿ ಫಲವೇನು= ವ್ಯಕ್ತಿಯು ಸಾಯುತ್ತಿರುವಾಗ ಬೂಮಿಯ ಒಡೆತನ ದೊರಕಿದರೆ ಏನು ಪ್ರಯೋಜನ;
ಕಡುವಿಸಿಲು ಹೊಡೆದು ಬೆಂಡಾಗಿ ಬೀಳ್ವ ಎಮಗೆ ನೀನ್ ಒಲಿದು ಮಣಿ ತೊಡಿಗೆಗಳನ್ ಇತ್ತು ಫಲವೇನು ಹೇಳ್ ಎನುತ=ಹೆಚ್ಚಾದ ಬಿಸಿಲಿನ ತಾಪದಿಂದ ನೊಂದು ಸುಸ್ತಾಗಿ ಕೆಳಕ್ಕೆ ಬೀಳುತ್ತಿರುವ ನಮಗೆ ನೀನು ಮೆಚ್ಚುಗೆಯಿಂದ ಮುತ್ತು ರತ್ನ ವಜ್ರದ ಒಡವೆಗಳನ್ನು ಕೊಟ್ಟರೆ ಪ್ರಯೋಜನವೇನು ಹೇಳು ಎಂದು ರಾಜನನ್ನು ಪ್ರಶ್ನಿಸುತ್ತ;
ಮತ್ತೆ ಇಂತು ಎಂದರು=ಮತ್ತೆ ತಮ್ಮ ಮಾತನ್ನು ಮುಂದುವರಿಸಿ, ಈ ರೀತಿ ನುಡಿದರು;
ಕಡಲೊಳ್ ಆಳ್ವಂಗೆ ತೆಪ್ಪವನು=ಕಡಲಿನಲ್ಲಿ ಮುಳುಗಿ ಸಾಯುತ್ತಿರುವವನಿಗೆ ತೆಪ್ಪವನ್ನು;
ದಾರಿದ್ರಂಗೆ ಕಡವರವನ್=ಬಡತನದಿಂದ ನರಳುತ್ತಿರುವವನಿಗೆ ಹೊನ್ನನ್ನು;
ಅತಿರೋಗಿಗೆ ಅಮೃತಮಮ್ ಕೊಟ್ಟಡೆ=ದೊಡ್ಡ ರೋಗದಿಂದ ನರಳುತ್ತಿರುವವನಿಗೆ ರೋಗವನ್ನು ನಿವಾರಿಸಿ ಜೀವವನ್ನು ಉಳಿಸುವ ಅಮ್ರುತವನ್ನು ನೀಡಿದರೆ;
ಅವರ್ ಅಡಿಗಡಿಗೆ ಅದಾವ ಹರುಷವಮ್ ಎಯ್ದುತಿಪ್ಪರ್ ಅವರಮ್ ಪೋಲ್ವರ್=ಅವರು ತಮ್ಮನ್ನು ಸಂಕಟದಿಂದ ಪಾರುಮಾಡಿದ ವಸ್ತು ದೊರಕಿದ ಸಮಯದಲ್ಲಿ ಯಾವ ರೀತಿಯಲ್ಲಿ ಆನಂದವನ್ನು ಹೊಂದುತ್ತಾರೆಯೋ ಅವರನ್ನೇ ನಾವು ಹೋಲುತ್ತಿದ್ದೇವೆ. ಅಂದರೆ ಅವರಂತೆ ನಾವು ಕೂಡ ಸಂಕಟದಿಂದ ಪರಿತಪಿಸುತ್ತಿದ್ದೇವೆ;
ಈ ಪೊತ್ತಿನ ಸುಡುಸುಡನೆ ಸುಡುವ ಬಿರುಬಿಸಿಲ ಸೆಕೆಯುಸುರ ಬಿಸಿಹೊಡೆದುದು ಉರಿ ಹತ್ತಿ… ಬಾಯ್ ಬತ್ತಿ… ಡಗೆ ಸುತ್ತಿ… ಸಾವ್ ಅಡಸುತಿದೆ=ಈ ಹೊತ್ತಿನ ಸುಡುಸುಡುವ ಬಯಂಕರವಾದ ಬಿಸಿಲಿನ ಜಳದಿಂದ ಸೆಕೆಯು ಹೆಚ್ಚಾಗಿ, ನಾವು ಬಿಡುತ್ತಿರುವ ಉಸಿರು ಬಿಸಿಯಾಗಿ, ಬಾಯಾರಿ, ಸೆಕೆ ಸುತ್ತಿಕೊಂಡು, ನಮಗೆ ಸಾವು ಬರುವಂತಾಗಿದೆ; ಸತ್ತಿಗೆ=ಕೊಡೆ/ಚತ್ರಿ. ರಾಜತ್ವದ ಸಂಕೇತಗಳಾಗಿ ಸಿಂಹಾಸನ, ಕಿರೀಟ ಮತ್ತು ಬೆಳ್ಗೊಡೆಗಳಿವೆ; ಬೆಳ್ಗೊಡೆ ಎಂದರೆ ಬಿಳಿಯ ಬಣ್ಣದ ದೊಡ್ಡ ಕೊಡೆ. ಇದು ಸಿಂಹಾಸನದ ಮೇಲೆ ಇರುತ್ತದೆ. ರಾಜನು ಹೊರಗಡೆ ಹೋದಾಗ, ಜತೆಯಲ್ಲಿ ದೊಡ್ಡದಾದ ಒಂದು ಬೆಳ್ಗೊಡೆಯನ್ನು ತೆಗೆದುಕೊಂಡು ಹೋಗಿರುತ್ತಾರೆ;
ಭೂಭುಜ, ನಿನ್ನ ಮುತ್ತಿನ ಸತ್ತಿಗೆಯನ್ ಇತ್ತು ಸಲಹು=ರಾಜ, ನಿನ್ನ ಮುತ್ತಿನ ಬೆಳ್ಗೊಡೆಯನ್ನು ಕೊಟ್ಟು ನಮ್ಮನ್ನು ಕಾಪಾಡು;
ರವಿಕುಲದ ಪೀಳಿಗೆಯೊಳ್ ಒಗೆದ ರಾಯರ್ಗೆ ಪಟ್ಟವ ಕಟ್ಟುವಂದು ಇದಿಲ್ಲದಡೆ ಅರಸುತನ ಸಲ್ಲದು=ಸೂರ್‍ಯವಂಶದ ಪೀಳಿಗೆಯಲ್ಲಿ ಹುಟ್ಟಿದ ರಾಜಕುಮಾರರಿಗೆ ಪಟ್ಟವನ್ನು ಕಟ್ಟುವಾಗ ಈ ಬೆಳ್ಗೊಡೆಯು ಇಲ್ಲದಿದ್ದರೆ, ಅವರಿಗೆ ಅರಸುತನವೇ ಮಾನ್ಯವಾಗದು;
ಅವನಿಯೊಳು ಯುದ್ಧರಂಗದೊಳ್ ಇದಮ್ ಕಂಡ ಹಗೆಗಳು ನಿಲ್ಲರು=ಬೂಮಂಡಲದಲ್ಲಿ ನಡೆಯುವ ಕಾಳೆಗದ ಕಣದಲ್ಲಿ ಈ ಬೆಳ್ಗೊಡೆಯನ್ನು ಕಂಡ ಹಗೆಗಳು ಜೀವಬಯದಿಂದ ತತ್ತರಿಸುತ್ತ ಪಲಾಯನ ಮಾಡುತ್ತಾರೆ;ಇದರ ಕೆಳಗೆ ಕವಿವ ನೆಳಲೊಳಗೆ ಆವನ್ ಇರ್ದನ್ ಆತಂಗೆ ತಾನ್ ತವಿಲ್ ಎಡರು ಬಡತನಮ್ ರೋಗ ಅಪಕೀರ್ತಿ ಪರಿಭವ ಭಯಮ್ ಹರೆವುದು=ಈ ಬೆಳ್ಗೊಡೆಯ ನೆರಳಲ್ಲಿ ಯಾವನು ಇರುತ್ತಾನೆಯೋ ಆತನಿಗೆ ಯಾವುದೇ ಬಗೆಯ ಆಪತ್ತು, ಅಡೆತಡೆ, ಬಡತನ, ರೋಗ, ಕೆಟ್ಟಹೆಸರು, ಸೋಲು, ಅಂಜಿಕೆಯುಂಟಾಗುವುದಿಲ್ಲ; ಇದನ್ ಅರಿದರಿದು ಸತ್ತಿಗೆಯ ಕೊಡಬಹುದೆ ಹೇಳ್=ಬೆಳ್ಗೊಡೆಯಿಂದ ಉಂಟಾಗುವ ಒಳಿತಿನ ಮಹಿಮೆಗಳೆಲ್ಲವನ್ನೂ ತಿಳಿದಿದ್ದರೂ, ಅದೆಲ್ಲವನ್ನು ಕಡೆಗಣಿಸಿ ಸತ್ತಿಗೆಯನ್ನು ನಿಮಗೆ ಕೊಡಬಹುದೆ ಹೇಳಿರಿ ಎಂದು ರಾಜ ಹರಿಶ್ಚಂದ್ರನು ಗಾಣ ರಾಣಿಯರನ್ನು ಪ್ರಶ್ನಿಸಿದನು;
ಅನುನಯದೊಳ್ ಎಲ್ಲವಮ್ ಕೊಡಬಹುದು ಬಿಡಬಹುದು=ಮಹಿಮೆಯಿಂದ ಕೂಡಿದ ಬೆಲೆಬಾಳುವ ವಸ್ತುವಿನ ಮೇಲಣ ಮೋಹವನ್ನು ತೊರೆದು, ಅದನ್ನು ತಮ್ಮ ಪ್ರೀತಿಪಾತ್ರರಿಗೆ ಮೆಚ್ಚುಗೆಯಿಂದ ಕೊಡಬಹುದು;
ಜನನಿಯನ್ ಜನಕನನ್ ನಲ್ಲಳನ್ ದೈವವಮ್ ಮನವಾರೆ ನಂಬಿ ನಚ್ಚಿರ್ದ ಪರಿವಾರಮಮ್ ಕೊಡುವ ಬಿಡುವ ಅತಿಕಲಿಗಳು ಜನರೊಳಗೆ ಜನಿಸರ್=ತಾಯಿಯನ್ನು, ತಂದೆಯನ್ನು, ಹೆಂಡತಿಯನ್ನು, ದೇವರನ್ನು, ನನ್ನನ್ನು ಮನಸಾರ ಪ್ರೀತಿಸುತ್ತ ನನ್ನನ್ನೇ ನಂಬಿಕೊಂಡಿರುವ ಪ್ರಜೆಗಳನ್ನು ಕೊಡುವ ಇಲ್ಲವೇ ಬಿಡುವ ಪರಾಕ್ರಮಿಗಳು ಜನರಲ್ಲಿ ಹುಟ್ಟುವುದಿಲ್ಲ. ಅಂದರೆ ಆ ರೀತಿ ಬೆಳ್ಗೊಡೆಯನ್ನೇ ದಾನವಾಗಿ ಇತರರಿಗೆ ಕೊಡುವ ರಾಜನು ಇದುವರೆಗೂ ಜಗತ್ತಿನಲ್ಲಿ ಹುಟ್ಟಿಲ್ಲ;
ಅರಸ, ನೀನೀಗ ಪೇಳ್ದ ಅನಿತರೊಳು ಬೇಡಿದಡೆ ಕೊಡಬೇಡ. ಲೋಭವೇಕೆ… ಕೊಡೆಯನ್ ಈಯ=ರಾಜ, ನೀನು ಈಗ ಹೇಳಿದ ವ್ಯಕ್ತಿಗಳಲ್ಲಿ ಯಾರೊಬ್ಬರನ್ನು ನಾವು ಬೇಡಿದರೂ ಕೊಡಬೇಡ. ನಮಗೆ ಬೆಳ್ಗೊಡೆಯೊಂದನ್ನು ಮಾತ್ರ ಕೊಡು;
ಇದಲ್ಲದೆ ಬೇರೆ ಮಾತೆಪಿತರಿಲ್ಲ=ಈ ಬೆಳ್ಗೊಡೆಯಲ್ಲದೆ ನಮಗೆ ಬೇರೆ ತಾಯಿತಂದೆಯಿಲ್ಲ. ಅಂದರೆ ರಾಜರಾದ ನಮ್ಮ ಪಾಲಿಗೆ ಇದೇ ತಾಯಿತಂದೆ;
ಈ ಛತ್ರ ಲೋಗರಿಗೆ ಕೊಡಬಾರದಾಗಿ ಸತಿ=ರಾಜ ಲಾಂಚನವಾದ ಈ ಸತ್ತಿಗೆಯನ್ನು ಇತರರಿಗೆ ಕೊಡಬಾರದು.ಆದ್ದರಿಂದ ಇದು ನಮ್ಮ ಹೆಂಡತಿ;
ವಂಶಗತವಾಗಿ ಬಂದುದರಿಂದ ತಂದೆ=ತಲೆತಲಮಾರುಗಳಿಂದಲೂ ವಂಶಪರಂಪರೆಯಾಗಿ ಬಂದಿರುವುದರಿಂದ ತಂದೆ;
ಪಟ್ಟವ ಕಟ್ಟುವಾಗಲ್ ಅರ್ಚಿಸಿಕೊಂಬುದಾಗಿ ದೈವಮ್=ಪಟ್ಟವನ್ನು ಕಟ್ಟುವಾಗ ಪೂಜಿಸಿಕೊಳ್ಳುವುದರಿಂದ ನಮ್ಮ ಪಾಲಿನ ದೇವರು;
ನೆಳಲ ತಂಪನ್ ಒಸೆದೀವುದಾಗಿ ಸಾಗಿಸುವ ತಾಯ್=ಬೆಳ್ಗೊಡೆಯ ನೆರಳ ತಂಪಿನಲ್ಲಿ ನಾವು ಇರುವುದರಿಂದ ಅಂದರೆ ಅದರ ಆಶ್ರಯದಲ್ಲಿ ಆಡಳಿತವನ್ನು ಮಾಡುವುದರಿಂದ ನಮ್ಮ ಪಾಲಿಗೆ ಸತ್ತಿಗೆಯು ಒಲವು ನಲಿವಿನಿಂದ ಪೊರೆಯುವ ತಾಯಿ;
ಧುರದೊಳ್ ಅರಿಗಳಮ್ ನಡುಗಿಸುವುದಾಗಿ ಚತುರಂಗಬಲ ಎನಿಸಿತು ಎಂಬಾಗಳ್ =ರಣರಂಗದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಚತುರಂಗ ಬಲ ಎನ್ನಿಸಿದೆ ಎಂಬ ಕೀರ್‍ತಿಯನ್ನು ಮತ್ತು ಮಹಿಮೆಯನ್ನು ಬೆಳ್ಗೊಡೆಯು ಹೊಂದಿರುವಾಗ;
ಇದನು ಅರಿದರಿದು ಬೇಡುವರನ್ ಮೂಜಗದೊಳು ಅತಿಮರುಳರ್ ಎನ್ನರೇ=ನಾನಾ ಬಗೆಗಳಲ್ಲಿ ರಾಜರಿಗೆ ಪಾಲಿಗೆ ಬೆಳ್ಗೊಡೆಯು ಅತ್ಯಂತ ಅಮೂಲ್ಯವಾದುದು ಎಂಬುದನ್ನು ಚೆನ್ನಾಗಿ ತಿಳಿದಿದ್ದಿರೂ , ಮತ್ತೆ ಬೆಳ್ಗೊಡೆಯನ್ನೇ ರಾಜರಿಂದ ಬೇಡುವವರನ್ನು ಮೂರು ಜಗತ್ತಿನಲ್ಲಿಯೂ ಅತಿ ತಿಳಿಗೇಡಿಗಳು ಎನ್ನುವುದಿಲ್ಲವೇ;
ಇಳೆಯೊಳಗೆ ಹೆಸರುಳ್ಳ ದಾನಿ ಹರಿಶ್ಚಂದ್ರ ಭೂನಾಥ ಎಂಬುದನು ಕೇಳ್ದು= ಬೂಮಂಡಲದಲ್ಲಿ ಹೆಸರಾಂತ ದಾನಿ ಹರಿಶ್ಚಂದ್ರ ರಾಜ ಎಂಬುದನ್ನು ಕೇಳಿ;
ಎಳಸಿ ಕಟ್ಟಾಸೆ ಪಟ್ಟು ಎಯ್ತಂದು=ಬಹು ದೊಡ್ಡ ಆಸೆಯನ್ನಿಟ್ಟುಕೊಂಡು ಬಂದಿದ್ದೇವೆ;
ಬೇಡಿ ನಿಷ್ಫಳವಾಗದಂತೆ, ನಾವ್ ಅತಿ ಮರುಗದಂತೆ, ಅಳಲದಂತೆ, ಬಿಸುಸುಯ್ಯದಂತೆ ತಿಳಿದು=ನಾವು ಕೋರಿದ್ದನ್ನು ನಿರಾಕರಿಸದಂತೆ, ನಾವು ಬಹಳವಾಗಿ ಮರುಗದಂತೆ, ಸಂಕಟಪಡದಂತೆ, ನಿಟ್ಟುಸಿರಿನಿಂದ ಆತಂಕಪಡದಂತೆ ನಮ್ಮ ಮನಸ್ಸನ್ನು ಅರಿತುಕೊಂಡು;
ನೀನು ಎಮಗೆ ವಲ್ಲಭನಾಗಿ ಚಿತ್ತದ ಉಮ್ಮಳಿಕೆಯಮ್ ಕಳೆ ಎಂದು=ನೀನು ನಮಗೆ ಗಂಡನಾಗಿ ನಮ್ಮ ಮನದ ದುಗುಡವನ್ನು ನಿವಾರಿಸು ಎಂದು;ಅಳವಳಿದು ಬಾಯ್ವಿಟ್ಟು ಕೈಮುಗಿದು ಒಲವಿಂದ ಅನಾಮಿಕ ಸತಿಯರು ನುಡಿದರ್=ಕಂಗಾಲಾಗಿ ಬಾಯಿ ಬಿಡುತ್ತ ಕಯ್ ಮುಗಿದು ಪ್ರೀತಿಯಿಂದ ಮಾಯಾ ವನಿತೆಯರು ಹರಿಶ್ಚಂದ್ರನನ್ನು ಕೇಳಿಕೊಂಡರು;
ಇಂದು ತನಕ ಲಲಿತ ವಸುಮತಿ ಹುಟ್ಟುವಂದು ಹುಟ್ಟಿದ ಸೂರ್ಯಕುಲದ ರಾಯರ್ಗೆ ವಂಶದೊಳು ಕೀರ್ತಿಯೊಳು ಭುಜಬಲದೊಳ್ ಒರೆದೊರೆ ಎನಿಸಿ ಕನ್ನಿಕೆಯರಮ್ ಕೊಡುವ ಭೂಪರಿಲ್ಲ=ಇವತ್ತಿನ ತನಕ ಸುಂದರವಾದ ಬೂಮಿಯ ಜತೆಜತೆಯಲ್ಲಿ ಹುಟ್ಟಿದ ಸೂರ್‍ಯವಂಶದ ರಾಜರಿಗೆ ವಂಶದಲ್ಲಿ,ಕೀರ್‍ತಿಯಲ್ಲಿ ಮತ್ತು ಪರಾಕ್ರಮದಲ್ಲಿ ತಾವು ಸರಿಸಮಾನವೆಂಬ ಅಂತಸ್ತನ್ನು ಹೊಂದಿ ಕನ್ನೆಯರನ್ನು ಕೊಡುವ ರಾಜರಿಲ್ಲ. ಅಂದರೆ ಸೂರ್‍ಯವಂಶದ ರಾಜಮನೆತನ ಮತ್ತು ರಾಜರಿಗೆ ಸಮನಾದವರು ಜಗತ್ತಿನಲ್ಲಿಯೇ ಇಲ್ಲ;
ಹೊಲತಿಯರು ಬಂದು ಆವು ಸತಿಯರಾದಪ್ಪೆವು ಎಂಬ ಉಲಿಹವೆಂಬುದು=ಹೊಲತಿಯರು ಬಂದು “ನಾವು ನಿನಗೆ ಹೆಂಡತಿಯರಾಗುತ್ತೇವೆ” ಎಂದು ಮಾತನಾಡುತ್ತಿರುವುದು;
ಬಂದ ಕಾಲಗುಣವೋ… ನಿಂದ ನೆಲದ ಗುಣವೋ=ನಿಮ್ಮ ಕಾಲಗುಣವೋ ಇಲ್ಲವೇ ನೀವು ನಿಂತಿರುವ ಈ ನೆಲದ ಗುಣವೋ; ಈ ಬಗೆಯ ನುಡಿಗಳು ಜನಮನದಲ್ಲಿರುವ ನಂಬಿಕೆಯನ್ನು ಸೂಚಿಸುತ್ತವೆ. ಕೆಲವರ ಬರುವಿಕೆಯಿಂದ ವ್ಯಕ್ತಿಗಳಿಗೆ ಒಳ್ಳೆಯದು ಇಲ್ಲವೇ ಕೆಟ್ಟದ್ದು ಆಗುತ್ತದೆ; ಕೆಲವು ಜಾಗಗಳಲ್ಲಿ ಒಳ್ಳೆಯದನ್ನು ಇಲ್ಲವೇ ಕೆಟ್ಟದ್ದನ್ನು ಮಾಡುವ ಶಕ್ತಿಯಿರುತ್ತದೆ. ಆದ್ದರಿಂದಲೇ ಒಂದು ಜಾಗಕ್ಕೆ ಹೋದಾಗ ಅಲ್ಲಿನ ಶಕ್ತಿಗೆ ತಕ್ಕಂತೆ ಒಳಿತು ಕೆಡುಕಾಗುತ್ತದೆ;
ನೋಡು ನೋಡು ಎಂದು ಅವನೀಶನು ಕಡುಮುಳಿದು ಕೋಪಿಸಿದನ್=ನೋಡು ನೋಡು ನಿಮ್ಮ ವರ್‍ತನೆಯು ಎಶ್ಟು ಕೀಳಾಗಿದೆ ಎಂದು ರಾಜನು ಬಹಳ ಕೆರಳಿ ಕೋಪಿಸಿಕೊಂಡನು;
ಅವನೀಶ ಕೇಳ್=ರಾಜ, ಕೇಳು;ಪಾವನಕ್ಷೀರಮಮ್ ಕೊಡುವ ಕೆಚ್ಚಲ ಮಾಂಸ ಆವ ಲೇಸು=ಪವಿತ್ರವಾದ ಹಾಲನ್ನು ಕೊಡುವ ಹಸುವಿನ ಕೆಚ್ಚಲ ಮಾಂಸ ಯಾವ ರೀತಿಯಲ್ಲಿ ಒಳ್ಳೆಯದು;
ಇನಿದುಳ್ಳ ಮಧುವನ್ ಒಸೆದೀವ ನೊಳ ಆವ ಲೇಸು=ಸಿಹಿಯಾದ ಜೇನುತುಪ್ಪವನ್ನು ಸೊಗಸಾಗಿ ನೀಡುವ ಜೇನು ನೊಣ ಯಾವ ರೀತಿಯಲ್ಲಿ ಸುಂದರವಾಗಿದೆ;
ಅಧಿಕ ಕಸ್ತೂರಿಯಮ್ ಕೊಡುವ ಮೃಗನಾಭಿ ತಾನ್ ಆವ ಲೇಸು=ಸುವಾಸನೆಯಿಂದ ಕೂಡಿದ ಕಸ್ತೂರಿಯನ್ನು ಕೊಡುವ ಪ್ರಾಣಿಯ ಹೊಕ್ಕಳು ತಾನದು ಯಾವ ರೀತಿಯಲ್ಲಿ ಚೆನ್ನಾಗಿದೆ; ಕಸ್ತೂರಿ ಎಂಬ ಹೆಸರಿನ ಪ್ರಾಣಿಯ ಹೊಕ್ಕಳಿನಲ್ಲಿ ಜೈವಿಕವಾಗಿ ಸಂಗ್ರಹವಾಗುವ ದ್ರವ್ಯ ಅತ್ಯಂತ ಸುವಾಸನೆಯಿಂದ ಕೂಡಿರುತ್ತದೆ;
ದೇವರಿಗೆ ಸಲ್ಲವೇ=ಹಾಲು, ಜೇನುತುಪ್ಪ, ಕಸ್ತೂರಿಯೆಲ್ಲವನ್ನು ದೇವರಿಗೆ ಅರ್‍ಪಿಸುವುದಿಲ್ಲವೇ;
ಉತ್ತಮಗುಣಂಗಳಿರ್ದು ಆವ ಕುಂದಮ್ ಕಳೆಯಲಾರವು=ಉತ್ತಮ ಗುಣಗಳಿಂದ ಕೂಡಿದ ವಸ್ತುಗಳ ಇಲ್ಲವೇ ವ್ಯಕ್ತಿಗಳ ಸಂಗಡ ನಾವು ನಂಟನ್ನು ಪಡೆದರೆ, ನಮ್ಮಲ್ಲಿ ಯಾವ ಬಗೆಯ ಕೀಳುತನವಿದ್ದರೂ ಅದು ತಾನಾಗಿಯೇ ನಿವಾರಣೆಗೊಳ್ಳುತ್ತದೆ;
ಭಾವಿಸುವಡೆ ಇಂದು ಎಮ್ಮ ರೂಪು ಜವ್ವನವಿರಲು ಕುಲದ ಮಾತೇಕೆ=ಈಗ ತಿಳಿದು ನೋಡುವುದಾದರೆ ಇಂದು ನಮ್ಮಲ್ಲಿ ಚೆಲುವಾದ ರೂಪ ಮತ್ತು ತಾರುಣ್ಯವಿರಲು, ನಮ್ಮನ್ನು ಮದುವೆಯಾಗುವುದಕ್ಕೆ ಕುಲದ ಸಂಗತಿಯನ್ನೇಕೆ ಮಾತನಾಡುತ್ತಿರುವೆ;
ಅಕ್ಕಕ್ಕು… ಬಚ್ಚಲ ಉದಕಮ್ ತಿಳಿದಡೆ ಆರ ಮೀಹಕ್ಕೆ ಯೋಗ್ಯಮ್=ಅಹುದಹುದು. ನೀವು ಹೇಳುವ ಮಾತು ತುಂಬಾ ಸೊಗಸಾಗಿದೆ. ಬಚ್ಚಲ ನೀರು ತಿಳಿಯಾದರೆ, ಅದು ಯಾರ ಸ್ನಾನಕ್ಕೆ ಯೋಗ್ಯವಾಗುತ್ತದೆ;
ನಾಯ್ಗೆ ಹಾಲುಳ್ಳಡೆ ಆವನ ಊಟಕ್ಕೆ ಯೋಗ್ಯಮ್=ನಾಯಿಯ ಮೊಲೆಯಲ್ಲಿ ಹಾಲು ತುಂಬಿದ್ದರೆ, ಅದು ಯಾವನ ಊಟಕ್ಕೆ ಯೋಗ್ಯವಾಗುತ್ತದೆ;
ಪ್ರೇತವನದೊಳಗೆ ಬೆಳೆದ ಹೂವು ಆರ ಮುಡಿಹಕ್ಕೆ ಯೋಗ್ಯಮ್=ಮಸಣದಲ್ಲಿ ಬೆಳೆದಿರುವ ಹೂವು ಯಾರ ತಲೆಯಲ್ಲಿ ಮುಡಿಯುವುದಕ್ಕೆ ಯೋಗ್ಯವಾಗಿದೆ;
ಮಿಕ್ಕ ಹೊಲತಿಯರು ನೀವೆನೆ=ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಸಮಾಜದ ಅತ್ಯಂತ ಕೆಳಸ್ತರದ ಹೊಲತಿಯರು ನೀವಾಗಿರುವಾಗ;
ನಿಮ್ಮ ಜವ್ವನದ ಸೊಕ್ಕು… ರೂಪಿನ ಗಾಡಿ… ಜಾಣತನದ ಒಪ್ಪ… ಏತಕ್ಕೆ ಯೋಗ್ಯಮ್=ನಿಮ್ಮ ತಾರುಣ್ಯದ ಸೊಕ್ಕು… ರೂಪದ ಚೆಲುವು… ಜಾಣತನದ ನುಡಿಗಳು ಯಾವುದಕ್ಕೆ ಯೋಗ್ಯವಾಗಿವೆ;
ರಮಿಸಿದವರುಂಟೆ=ಹೊಲತಿಯರೊಡನೆ ಜತೆಗೂಡಿ ಆನಂದಪಟ್ಟವರು ಯಾರಾದರೂ ಇದ್ದಾರೆಯೆ;
ಶಿವಶಿವ… ಈ ಮಾತು ತಾ ಹೊಲೆ=ಶಿವ ಶಿವ… ಸೂರ್‍ಯವಂಶ ರಾಜನಾದ ನನ್ನನ್ನು ಮದುವೆಯಾಗಬೇಕೆಂಬ ನಿಮ್ಮ ಮಾತುಗಳೇ ಅತ್ಯಂತ ಕೆಟ್ಟದ್ದಾಗಿವೆ; ಹೊಲೆ=ಕೊಳಕು/ಹೇಸಿಗೆ;
ಹಾಡನ್ ಒಲಿದು ಆಲಿಸಿದ ಕಿವಿಗೆ ಹೊಲೆಯಿಲ್ಲ=ಹೊಲತಿಯರಾದ ನಾವು ಇಂಪಾಗಿ ಹಾಡಿದ ಹಾಡನ್ನು ಮೆಚ್ಚುಗೆಯಿಂದ ಕೇಳಿದ ನಿನ್ನ ಕಿವಿಗೆ ಹೊಲೆಯಿಲ್ಲ;
ಮಾತಾಡಿ ಹೊಗಳಿದ ಬಾಯ್ಗೆ ಹೊಲೆಯಿಲ್ಲ=ನಮ್ಮ ಅಂದಚೆಂದದ ಹಾಡು ಕುಣಿತವನ್ನು ನೋಡಿ ಆನಂದಗೊಂಡು ಹೊಗಳಿದ ನಿನ್ನ ಬಾಯಿಗೆ ಹೊಲೆಯಿಲ್ಲ;
ರೂಪ ನೆರೆ ನೋಡಿದ ವಿಲೋಚನಕೆ ಹೊಲೆಯಿಲ್ಲ=ನಮ್ಮ ರೂಪದ ಚೆಲುವನ್ನು ಕಣ್ತುಂಬ ನೋಡಿ ಸವಿದ ನಿನ್ನ ಕಣ್ಣುಗಳಿಗೆ ಹೊಲೆಯಿಲ್ಲ;
ಮೆಯ್ ಮುಡಿಗಳಿಮ್ ಸುಳಿವ ತಂಗಾಳಿಯಿಮ್ ತೀಡುವ ಸುಗಂಧಮಮ್ ವಾಸಿಸಿದ ನಾಸಿಕಕೆ ನಾಡೆ ಹೊಲೆಯಿಲ್ಲ=ನಮ್ಮ ಮಯ್ ಮುಡಿಗಳ ಕಡೆಯಿಂದ ಸುಳಿಯುತ್ತಿರುವ ತಣ್ಣನೆಯ ಗಾಳಿಯೊಡನೆ ತೇಲಿಬರುತ್ತಿರುವ ಸುವಾಸನೆಯನ್ನು ಮೂಸಿಸುತ್ತ ಆನಂದಿಸುತ್ತಿರುವ ನಿನ್ನ ಮೂಗಿಗೆ ಯಾವುದೇ ಹೊಲೆಯಿಲ್ಲ;
ಸೋಂಕಿಂಗೆ ಹೊಲೆಯುಂಟಾಯ್ತೆ=ನಮ್ಮ ದೇಹವನ್ನು ಮುಟ್ಟುವುದರಿಂದ ನಿನಗೆ ಹೊಲೆಯು ತಟ್ಟುವುದೆ;
ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕು ಅಧಮ… ಒಂದು ಅಧಿಕವೇ=ಮಾನವ ಜೀವಿಯ ಮಯ್ ಮನದಲ್ಲಿರುವ “ಕಿವಿ-ನಾಲಗೆ-ಕಣ್ಣು-ಮೂಗು-ತೊಗಲು” ಎಂಬ ಅಯ್ದು ಇಂದ್ರಿಯಗಳಲ್ಲಿ ನಾಲ್ಕು ಕೀಳು… ಒಂದು ಮೇಲು ಆಗಿದೆಯೆ:
ನಯನೇಂದ್ರಿಯಮ್ ಕಂಡು ಅರಿವವೈಸಲೇ=ಕಣ್ಣುಗಳು ನೋಡುವುದರಿಂದ ತಿಳಿದುಕೊಳ್ಳುತ್ತವೆ;
ಘ್ರಾಣ ವಾಸನೆಯ ಕೊಂಡು ಅರಿವವೈಸಲೆ=ಮೂಗು ಮೂಸಿಸುವುದರಿಂದ ವಾಸನೆಯನ್ನು ಗ್ರಹಿಸಿಕೊಳ್ಳುತ್ತದೆ;
ಕರ್ಣಂಗಳ್ ಶಬ್ದಮಮ್ ಉಂಡು ಅರಿವವೈಸಲೇ=ಕಿವಿಗಳು ಕೇಳುವುದರಿಂದ ಶಬ್ದವನ್ನು ತಿಳಿದುಕೊಳ್ಳುತ್ತವೆ;
ಅವು ದೂರದಿಂದಲ್ಲದೆ ಮುಟ್ಟಲಿಲ್ಲ=ಈ ನಾಲ್ಕು ಇಂದ್ರಿಯಗಳು ದೂರದಿಂದಲ್ಲದೆ ಯಾವುದನ್ನು ಮುಟ್ಟಲಿಲ್ಲ;
ಭಂಡತನವು ಈ ಮಾತು=ನೀವು ಕೇಳುತ್ತಿರುವ ಪ್ರಶ್ನೆಯು ನಾಚಿಕೆಯನ್ನು ತೊರೆದ ಹಟಮಾರಿತನದ ಮಾತುಗಳಾಗಿವೆ;
ಇದಕ್ಕೆ ಉಪಮಾನವೇ=ನಿಮ್ಮ ಕೆಟ್ಟ ನಡೆನುಡಿಗೆ ಹೋಲಿಕೆ ಬೇಕೆ;
ಕೆಂಡವನು ಮುಟ್ಟಿದಡೆ ಬೇವಂತೆ… ಕೇಳ್ದಡಮ್, ಕಂಡು ವಾಸಿಸಿದಡಮ್… ಬೆಂದವೇ=ಕೆಂಡವನ್ನು ಮುಟ್ಟಿದರೆ ಸುಡುವಂತೆ… ಅಲ್ಲಿ ಕೆಂಡ ಇದೆ ಎಂಬುದನ್ನು ಕೇಳಿದಾಗ… ಕೆಂಡದ ಬಿಸಿಯಿಂದ ಹೊರಹೊಮ್ಮುವ ಹೊಗೆಯ ಗಾಟು ಮೂಗಿಗೆ ಹೊಡೆದಾಗ…ಕಿವಿ ಇಲ್ಲವೇ ಮೂಗು ಬೆಂದುಹೋದವೆ;
ನೀವ್ ಕಾಳುಗೆಡೆಯದೆ.. ಹೋಗಿ=ನೀವು ಕೆಟ್ಟ ಮಾತುಗಳನ್ನಾಡದೆ ಇಲ್ಲಿಂದ ಹೋಗಿ;
ಸತ್ಕುಲಜ ಭೂಪ, ಶಾಪದಿಂದೆ ಎಮಗಾದ ದುಷ್ಕುಲಮ್ ನಿನ್ನಯ ಸಂಗದಿಮ್ ಶುದ್ಧವಪ್ಪುದು ಎಂಬ ಅಪೇಕ್ಷೆಯಿಮ್ ಬಂದೆವು ಎನಲ್=ಒಳ್ಳೆಯ ಕುಲದಲ್ಲಿ ಹುಟ್ಟಿರುವ ರಾಜನೇ, ಶಾಪದಿಂದ ಕೀಳು ಕುಲದಲ್ಲಿ ಹುಟ್ಟಿರುವ ನಾವು ನಿನ್ನ ಸಂಗದಿಂದ ಮೇಲು ಕುಲದವರಾಗುತ್ತೇವೆ ಎಂಬ ಬಯಕೆಯಿಂದ ನಿನ್ನ ಬಳಿ ಬಂದೆವು ಎನ್ನಲು;
ಒಡನೆ=ಗಾಣರಾಣಿಯರ ಉದ್ದೇಶವನ್ನು ಕೇಳಿದ ಮರುಗಳಿಗೆಯಲ್ಲಿಯೇ ರಾಜ ಹರಿಶ್ಚಂದ್ರನ ಮನದಲ್ಲಿ ತನ್ನ ಕುಲದ ಹಿರಿಮೆಯ ಅಹಂಕಾರ ಹೆಡೆಯೆತ್ತಿ;
ನಿಮಗೋಸುಗ ಎನ್ನ ಕುಲಮಮ್ ಕೆಡಿಪೆನೆ=ನಿಮಗಾಗಿ ನನ್ನ ಕುಲದ ಉತ್ತಮಿಕೆಯನ್ನು ಕೆಡಿಸಿಕೊಳ್ಳುತ್ತೇನೆಯೆ; ಮೇಲು ವರ್ಣಕ್ಕೆ ಸೇರಿದ ಬ್ರಾಹ್ಮಣ-ಕ್ಶತ್ರಿಯ-ವೈಶ್ಯರ ಮಯ್ ಮನದಲ್ಲಿ “ತಾವು ಮಾತ್ರ ಕುಲದಲ್ಲಿ ಉತ್ತಮರು” ಎಂಬ ಮೇಲರಿಮೆಯು ನೆಲೆಗೊಂಡಿದೆ. ಶೂದ್ರ ಮತ್ತು ಚಂಡಾಳ ಸಮುದಾಯಕ್ಕೆ ಸೇರಿದ ಹೊಲೆಯ ಮಾದಿಗರು ಕೀಳು ಕುಲದವರು ಎಂಬ ತಿರಸ್ಕಾರದ ಬಾವನೆಯಿದೆ; ಕುಲದ ಮೇಲರಿಮೆಯು ರಾಜ ಹರಿಶ್ಚಂದ್ರನ ಮಯ್ ಮನದಲ್ಲಿ ಹಾಸುಹೊಕ್ಕಾಗಿದೆ;
ಅರಸ, ಹೇಳ್… .ಪಾಪಿಗಳ ಪಾಪಮಮ್ ತೊಳೆವ ಗಂಗೆಗೆ… ಪಾಪ ಲೇಪವುಂಟಾಯ್ತೆ=ಅರಸನೇ ಹೇಳು. ಪಾಪಿಗಳ ಪಾಪವನ್ನು ತೊಳೆಯುವ ಗಂಗೆಗೆ ಪಾಪ ಅಂಟಿಕೊಳ್ಳುವುದೆ; ಅಂದರೆ ತನ್ನಲ್ಲಿ ಮಿಂದವರೆಲ್ಲರ ಪಾಪವನ್ನು ಹೋಗಲಾಡಿಸಿ, ತಾನು ಪವಿತ್ರಳಾಗಿಯೇ ಉಳಿಯುತ್ತಾಳಲ್ಲವೇ ಎಂದು ಗಾಣ ರಾಣಿಯರು ರಾಜ ಹರಿಶ್ಚಂದ್ರನನ್ನು ಪ್ರಶ್ನಿಸುತ್ತಾರೆ;
ಕುಲಧರ್ಮ ಈ ಪಂಥವಲ್ಲ=ಕುಲದರ್‍ಮದ ಸಂಪ್ರದಾಯ ಮತ್ತು ಆಚರಣೆಗಳು ಆ ರೀತಿಯದಲ್ಲ; ವ್ಯಕ್ತಿಯು ಹುಟ್ಟಿನಿಂದ ಸಾಯುವ ತನಕ ತಾನು ಹುಟ್ಟಿದ ಕುಲದ ಉತ್ತಮಿಕೆಯನ್ನು ಕಾಪಾಡಿಕೊಳ್ಳಲೇಬೇಕು;
ಕೊಡವಾಲ ಕೆಡಿಸುವಡೆ ಆಮ್ಲ ಎನಿತಾಗಬೇಕು=ಕೊಡದಲ್ಲಿರುವ ಹಾಲನ್ನು ಕೆಡಿಸುವುದಕ್ಕೆ ಹುಳಿ ಎಶ್ಟಾಗಬೇಕು. ಅಂದರೆ ತುಂಬಿದ ಕೊಡದಲ್ಲಿರುವ ಹಾಲಿಗೆ ಒಂದು ತೊಟ್ಟು ಹುಳಿ ಬಿದ್ದರೆ ಸಾಕು ಹಾಲು ಒಡೆದುಹೋಗಿ ಹಾಳಾಗುತ್ತದೆ. ಅಂತೆಯೇ ಸೂರ್‍ಯವಂಶದ ರಾಜನಾದ ನಾನು ಹೊಲತಿಯರಾದ ನಿಮ್ಮನ್ನು ಮದುವೆಯಾದರೆ, ನನ್ನ ಕುಲದ ಉತ್ತಮಿಕೆಯೆಲ್ಲವೂ ನಾಶವಾಗುತ್ತದೆ;
ಮಾತಿಂಗೆ ಮಾತು ಕೊಡಲು ಅರಿದು=ರಾಜನೇ,
ನಿನ್ನೊಡನೆ ಮಾತಿಗೆ ಮಾತು ಕೊಡುವಶ್ಟು ಶಕ್ತಿಯಾಗಲಿ ಯುಕ್ತಿಯಾಗಲಿ ನಮ್ಮಲ್ಲಿಲ್ಲ;
ನಿನ್ನಯ ನುತ ಖ್ಯಾತಿಗೆ, ಅದಟಿಂಗೆ, ರೂಪಿಂಗೆ, ಸುರುಚಿರ ಗುಣವ್ರಾತಕ್ಕೆ, ಹರೆಯಕ್ಕೆ, ಗರುವಿಕೆಗೆ ಮನಸಂದು ಮತಿಗೆಟ್ಟು ಮರುಳಾದೆವು=ನಿನ್ನ ಪ್ರಸಿದ್ದವಾದ ಕೀರ್‍ತಿಗೆ, ಪರಾಕ್ರಮಕ್ಕೆ, ರೂಪಕ್ಕೆ, ಮನೋಹರವಾದ ಸದ್ಗುಣಗಳಿಗೆ, ಪ್ರಾಯಕ್ಕೆ, ಅತ್ಯುತ್ತಮವಾದ ವ್ಯಕ್ತಿತ್ವಕ್ಕೆ ಮನಸೋತು ಹುಚ್ಚುಹಿಡಿದಂತಾಗಿ ನಿನ್ನನ್ನು ಗಂಡನನ್ನಾಗಿ ಪಡೆಯಲೇಬೇಕೆಂದು ನಿಶ್ಚಯಿಸಿಕೊಂಡೆವು;
ಓತು ಬಂದವರನ್ ಉಪಚರಿಸದಿಪ್ಪುದು ನಿನಗೆ ನೀತಿಯಲ್ಲ=ಒಲಿದು ಬಂದವರನ್ನು ಒಲವು ನಲಿವಿನಿಂದ ಕಾಣದೆ ಇರುವುದು ನಿನ್ನ ಉನ್ನತವಾದ ವ್ಯಕ್ತಿತ್ವಕ್ಕೆ ಒಪ್ಪುವುದಿಲ್ಲ;
ಏಗೆಯ್ದಡಮ್ ಗಂಡನಾದಲ್ಲದೆ ಆತುರಮ್ ಪೋಗದು=ನೀನು ಏನೇ ಮಾಡಿದರೂ… ಏನೇ ಹೇಳಿದರೂ… ನೀನು ನಮ್ಮ ಗಂಡನಾದಲ್ಲದೆ ನಮ್ಮ ಮಯ್ ಮನದಲ್ಲಿ ತುಡಿಯುತ್ತಿರುವ ಆಸೆಯು ಹೋಗುವುದಿಲ್ಲ;
ಇನ್ನು ಒಲಿದಂತೆ ಮಾಡು. ನಿನ್ನಯ ಬೆನ್ನ ಬಿಡೆವು=ಇನ್ನು ನಿನ್ನ ಮನಸ್ಸಿಗೆ ಬಂದುದನ್ನು ಮಾಡು. ನೀನು ಏನು ಮಾಡಿದರೂ ನಿನ್ನನ್ನು ಹಿಂಬಾಲಿಸುವುದನ್ನು ಬಿಡುವುದಿಲ್ಲ;
ಬಳಿವಿಡಿದು ಬಂದು ಮಾಡುವುದೇನು=ನನ್ನನ್ನು ಹಿಂಬಾಲಿಸಿಕೊಂಡು ಬಂದು ನೀವೇನು ಮಾಡುತ್ತೀರಿ;
ನಮ್ಮ ಬೆಂಬಳಿಯಲಿ ಎನಿಬರು ಹೊಲೆಯರಿಲ್ಲ=ನಮ್ಮ ಬಳಿಯಲ್ಲಿ ಎಶ್ಟೊಂದು ಮಂದಿ ಹೊಲೆಯರಿಲ್ಲ. ಅಂದರೆ ಅಯೋದ್ಯೆಯಲ್ಲಿ ಸಾಕಶ್ಟು ಮಂದಿ ಹೊಲೆಯರಿದ್ದಾರೆ;
ಅಹಗೆ ಬಿಡೆವು=ಆಗಲಿ. ನಿನ್ನ ಮಾತು ನಿಜವಾದರೂ… ನಾವು ನಿನ್ನನ್ನು ಹಿಂಬಾಲಿಸುವುದನ್ನು ಬಿಡೆವು;
ಎಳಸಿ… ಮಚ್ಚಿಸಿ… ಮರುಳ್ಗೊಳಿಸಿ… ಮತ್ತೆ ಒಲ್ಲನ್ ಅವನಿಪನ್ ಎಂದು ಮೊರೆಯಿಡುತ್ತ ಇಳೆಯೊಳಗೆ ಸಾರುತ್ತ ದೂರುತ್ತ ಬಪ್ಪೆವು ಎನೆ=ರಾಜ ಹರಿಶ್ಚಂದ್ರನು ನಮ್ಮನ್ನು ಬಯಸಿ, ಮೆಚ್ಚಿಕೊಂಡು, ಒಲವು ನಲಿವಿನಿಂದ ಮನವೊಲಿಸಿಕೊಂಡು, ಅನಂತರ ನಮ್ಮನ್ನು ನಿರಾಕರಿಸುತ್ತಿದ್ದಾನೆ ಎಂದು ಮೊರೆಯಿಡುತ್ತ… ಬೂಮಂಡಲದಲ್ಲಿ ಕೂಗಿಹೇಳುತ್ತ… ನಿನ್ನ ಬಗ್ಗೆ ದೂರುತ್ತ ಬರುತ್ತೇವೆ ಎಂದು ಗಾಣ ರಾಣಿಯರಿಬ್ಬರು ನುಡಿಯಲು;
ಮುಳಿದು ಘುಡುಘುಡಿಸಿ ಕೋಪಾಟೋಪದಿಮ್=ಗಾಣ ರಾಣಿಯರ ಹಟಮಾರಿತನದ ನುಡಿಗಳನ್ನು ಕೇಳುತ್ತಿದ್ದಂತೆ ಹರಿಶ್ಚಂದ್ರನು ಅಬ್ಬರಿಸಿ ಕೋಪೋದ್ರೇಕದಿಂದ;
ಹಲ್ಲ ಕಳೆ… ಬಾಯ ಹರಿಯ ಹೊಯ್… ಹೊಡೆಹೊಡೆ ಎನುತ್ತ ಭೂನಾಥನು ಉರವಣಿಸಿ ಎದ್ದನ್=ಹಲ್ಲನ್ನು ಉದುರಿಸು… ಬಾಯಿ ಹರಿದುಹೋಗುವಂತೆ ಹೊಡೆ… ಸರಿಯಾಗಿ ಹೊಡೆ ಹೊಡೆ ಎನ್ನುತ್ತ ರಾಜ ಹರಿಶ್ಚಂದ್ರನು ರಬಸದಿಂದ ಮೇಲೆದ್ದನು;
ಪ್ರಧಾನ ಬಳಿವಿಡಿದು ಚಮ್ಮಟಿಗೆಯಮ್ ತುಡುಕಿ ಸೆಳೆದು ಏಳಲ್=ಮಂತ್ರಿಯಿದ್ದ ಕಡೆಗೆ ಬಂದು, ಅವನ ಬಳಿಯಿದ್ದ ಚಾವಟಿಯನ್ನು ತಟ್ಟನೆ ಹಿಡಿದೆಳೆದುಕೊಂಡು ಗಾಣ ರಾಣಿಯರ ಕಡೆಗೆ ಮುನ್ನುಗ್ಗಿ;
ಒಬ್ಬರೊಬ್ಬರನು ಬೆನ್ನೊಡೆಯೆ=ಹರಿಶ್ಚಂದ್ರನ ಹೊಡೆತದಿಂದ ಗಾಣ ರಾಣಿಯರ ಬೆನ್ನು ಮೂಳೆ ಮುರಿಯಲು;
ಮುಡಿ ಹುಡಿಯೊಳಗೆ ಹೊರಳೆ=ಹರಿಶ್ಚಂದ್ರನ ಬಲವಾದ ಹೊಡೆತಗಳನ್ನು ತಡೆಯಲಾರದೆ ನೆಲದ ಮೇಲೆ ಬಿದ್ದ ಗಾಣರಾಣಿಯರ ಮುಡಿಯು ದೂಳಿನಲ್ಲಿ ಹೊರಳಾಡುತ್ತಿರಲು;
ಹಲು ಬೀಳೆ, ಬಾಯ್ ಒಡೆಯೆ, ಮೆಯ್ ನೋಯೆ, ಕೈಯುಳುಕೆ=ನೆಲಕ್ಕೆ ಉರುಳಿ ಬಿದ್ದು ಹೊರಳಾಡುತ್ತಿರುವ ಗಾಣ ರಾಣಿಯರ ಮಯ್ ಮೇಲೆ ಹರಿಶ್ಚಂದ್ರನು ಮನಸೋ ಇಚ್ಚೆ ಹೊಡೆಯುತ್ತಿರಲು ಅವರಿಬ್ಬರ ಹಲ್ಲುಗಳು ಉದುರಿಬಿದ್ದವು; ಬಾಯಿ ಒಡೆದು ನೆತ್ತರು ಹರಿಯತೊಡಗಿತು; ಮಯ್ ನೋಯುತ್ತಿರಲು; ಎದ್ದುಬಿದ್ದೇಳುತ್ತಿರುವಾಗ ಕಯ್ ಉಳುಕಳು;
ಮೀಱಿ ನಡೆದಲ್ಲಿ ನಡೆದು=ತನ್ನ ಹೊಡೆತದಿಂದ ತಪ್ಪಿಸಿಕೊಂಡು ಗಾಣರಾಣಿಯರು ಓಡುತ್ತಿರುವ ಎಡೆಯತ್ತ ಹರಿಶ್ಚಂದ್ರನು ಅವರನ್ನು ಅಟ್ಟಿಸಿಕೊಂಡು ಹೋಗಿ;
ಹೊಕ್ಕಲ್ಲಿ ಹೊಕ್ಕು=ಗಾಣ ರಾಣಿಯರು ತಪ್ಪಿಸಿಕೊಂಡು ಹೋಗಲೆಂದು ಅಡಗಿದ ಎಡೆಯೆಲ್ಲವನ್ನು ಹೊಕ್ಕು;
ರುಧಿರಮ್ ಬಸಿಯೆ ಹೊಯ್ದು=ನೆತ್ತರು ತೊಟ್ಟಿಕ್ಕಿ ಹರಿಯುವಂತೆ ಹೊಡೆದು;
ಹೊಗರ್ ಉಡುಗಲ್=ಹರಿಶ್ಚಂದ್ರನ ಆಕ್ರೋಶ ತುಸು ಕಡಿಮೆಯಾಗಲು;
ಅರಸನ್ ತಿರುಗಲ್=ರಾಜನು ಗಾಣ ರಾಣಿಯರನ್ನು ಬಿಟ್ಟು, ಇತ್ತ ಹೆಂಡತಿ ಮಗ ಇದ್ದ ಕಡೆಗೆ ಹಿಂತಿರುಗಲು;
ಅತ್ತಲ್ ಅವರ್ ಒರಲುತ್ತ ಆ ಮುನಿಪನೆಡೆಗೆ ಹರಿದರ್=ಅತ್ತಲು ಗಾಣ ರಾಣಿಯರು ಸಂಕಟದಿಂದ ಅರಚುತ್ತ, ವಿಶ್ವಾಮಿತ್ರ ಮುನಿಯ ಆಶ್ರಮದಿಂದ ಓಡಿದರು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು