ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 16 ನೆಯ ಕಂತು – ಪತ್ನೀ ಪುತ್ರ ವಿಕ್ರಯ
– ಸಿ.ಪಿ.ನಾಗರಾಜ.
*** ಪ್ರಸಂಗ – 16 : ಪತ್ನೀ ಪುತ್ರ ವಿಕ್ರಯ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಪತ್ನೀ ಪುತ್ರ ವಿಕ್ರಯ—ಆತ್ಮ ವಿಕ್ರಯ’ ಎಂಬ ಏಳನೆಯ ಅಧ್ಯಾಯದ 22 ರಿಂದ 28 ಪದ್ಯದ ವರೆಗಿನ ಏಳು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ಹರಿಶ್ಚಂದ್ರ: ಅಯೋಧ್ಯಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜ್ಯ ಸಂಪತ್ತನ್ನು ನೀಡಿ, ಈಗ ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ.
ವಿಪ್ರ: ಅಗ್ನಿದೇವ. ವಿಶ್ವಾಮಿತ್ರನ ಆದೇಶದಂತೆ ದೇವಲೋಕದ ಅಗ್ನಿದೇವನು ಬ್ರಾಹ್ಮಣನ ಉಡುಗೆ ತೊಡುಗೆಯನ್ನು ತೊಟ್ಟು ಕಾಶಿ ನಗರಕ್ಕೆ ಬಂದಿದ್ದಾನೆ.
ನಕ್ಷತ್ರಕ: ವಿಶ್ವಾಮಿತ್ರ ಮುನಿಯ ಆಪ್ತ ಶಿಷ್ಯ. ಹರಿಶ್ಚಂದ್ರನಿಂದ ಬರಬೇಕಾದ ಸಂಪತ್ತನ್ನು ವಸೂಲು ಮಾಡಲೆಂದು ನೇಮಕಗೊಂಡಿರುವ ತೆರಕಾರ.
ಲೋಹಿತಾಶ್ವ: ಚಂದ್ರಮತಿ ಮತ್ತು ಹರಿಶ್ಚಂದ್ರ ದಂಪತಿಯ ಮಗ.
*** ಪ್ರಸಂಗ – 16: ಪತ್ನೀ ಪುತ್ರ ವಿಕ್ರಯ ***
ಪೊಡವಿಪನ್ ಸತಿಸುತರ ತಲೆಗಳಲಿ ಹುಲುಗಟ್ಟಿ, ನಾಚಿಕೆಯನ್ ಉಳಿದು ಕೈವಿಡಿದು ಮುಂದೊಡ್ಡಿ ತೋರುತಮ್, ಗಡಿಗಳೊಳು…ಬೀದಿಯೊಳು…ಸಂದಿಯೊಳು…ಪುರದೊಳ್ ಓರಂತೆ ನಡೆನಡೆದು…
ಹರಿಶ್ಚಂದ್ರ: ಪೊಡವಿಪ ಹರಿಶ್ಚಂದ್ರಭೂವರನ ತನಯನನ್ ಮಡದಿಯನ್ ಮಾರುಗೊಂಬ ಅಧಿಕರಿಲ್ಲಾ.
(ಎಂದು ಸತ್ಯನಿಧಿ ಭೂಪಾಲನು ನಿಡುಸರದೊಳ್ ಒರಲಿ, ಜನಕೆ ಅರುಪುತ್ತ ತೊಳಲಿದನ್. ಅನಿಮಿತ್ತ ಮುನಿವ ಮುನಿಪನ ಬೆಸದೊಳ್ ಅಗ್ನಿ ವಿಪ್ರನ ವೇಷದಿಂದ ಬಂದು…)
ವಿಪ್ರ: ಆವಾವ ಸತಿಪುತ್ರರ್ ಎನಿಪರ್ ಅವರ್.
ಹರಿಶ್ಚಂದ್ರ: ಇವರ್ ಇಬ್ಬರ್.
ವಿಪ್ರ: ಇವನ್ ಅಬಲನ್…ಈ ವನಿತೆ ಮುಪ್ಪಿನವಳು…ಮನೆಯೊಳ್ ಇನ್ನು ಒಳ್ಳಿತಹರ್ ಆರುಂಟು ತಾ.
ಹರಿಶ್ಚಂದ್ರ: ಎನಗೆ ಉಳ್ಳರ್ ಇವರಯ್ಯ. ಕೊಂಡು ಎನ್ನ ಸಾಕಿಕೊಳ್ಳು.
ವಿಪ್ರ: ಬೆಲೆಯ ಹೇಳ್…ಎನಗೆ ಲಾಗಾಗೆ ಏಳೆಂಟು ದಿನಕೆ ಹೊನ್ ಕೊಡುವೆನ್.
ಹರಿಶ್ಚಂದ್ರ: ಇಂದು ಬೈಗಿಂದೊಳಗೆ ರಾಸಿ ಹೊನ್ನಮ್ ಕೊಡುವೆನ್ ಎಂದು ಭಾಷೆಯನ್ ಇತ್ತೆನ್. ಈಯದಿರ್ದಡೆ ಹಾನಿ ಬಂದಪುದು. ಲಾಗನರಸದೆ ನಿನ್ನ ಮನಕೆ ಬಂದನಿತು
ಅರ್ಥಮಮ್ ಕರುಣಿಸು ತಂದೆ.
ವಿಪ್ರ: ವನಿತೆಗೆ ಇಪ್ಪತ್ತು ಸಾಸಿರವನ್… ಈ ನಂದನಂಗೆ ಇಪ್ಪತ್ತು ಸಾಸಿರವನ್ ಈವೆನ್.
ಹರಿಶ್ಚಂದ್ರ: ಎಮ್ಮ ತೆರಕಾರಗೆ ಬಂದುದು ಎನಿಸುವುದು.
ನಕ್ಷತ್ರಿಕ: ಬಂದುದು.
ಹರಿಶ್ಚಂದ್ರ: ಬಂದುದೇ ನಕ್ಷತ್ರ ನಾಮ ಮುನಿ.
ನಕ್ಷತ್ರಿಕ: ಏನು ಬಂದುದು. ಆನ್ ಬಂದ ದಿನ ಮೊದಲ್ ಇಂದು ತನಕ ಎನ್ನ ಹಿಂದುಳಿದ ಬತ್ತಾಯ ಬಂದುದು. ಎನ್ನ ಒಡೆಯಂಗೆ ಕೊಡುವ ಹೊಸ ರಾಸಿ ಹೊನ್ನ ತಂದೀಗ
ಕೊಡು. ಕೊಡದಡೆ…ಇಲ್ಲ ಎನ್ನು ಹೋಗಬೇಕು.
ಹರಿಶ್ಚಂದ್ರ: ಈ ಹೊನ್ನ ಬತ್ತಾಯಕ್ಕೆ ತೆರುವನಲ್ಲ.
ನಕ್ಷತ್ರಿಕ: ಈ ಮಧ್ಯಸ್ಥ ವಿಪ್ರ ಮೆಚ್ಚಲು ಕೊಂಬೆನ್. ಅವನೀಶ ಕೇಳ್.
ಹರಿಶ್ಚಂದ್ರ: ತಾತ, ಈತನ್ ಇನಿತು ಅರ್ಥವಮ್ ಕೊಂಬುದು ಉಚಿತವೆ ಪಕ್ಷೀಕರಿಸದೆ ಹೇಳು.
ವಿಪ್ರ: ನಾಲ್ಕೆರಡು ಮಾತಂಗದ ಉದ್ದದ ಅರ್ಥದ ಸಾಲವಮ್ ಬೇಡ ಬಂದವಂಗೆ ಇನಿತು ಘನವೇ. ಭೂತಳಾಧಿಪ, ಮುನಿದು ಪೇಳೆನ್. ಇರ್ದುದನ್ ಎಂಬೆನ್. ಈತಗೆ ಇದು ಮರಿಯಾದೆ.
ಹರಿಶ್ಚಂದ್ರ: ಜಲವನುಳಿದ ಅಬುಜಕೆ ಆ ತರಣಿ ಮುನಿವನ್ ಎನೆ… ನೆಲೆಗೆಟ್ಟು ಬಂದವರ್ಗೆ ಮುನಿಯದವರ್ ಆರ್.
ವಿಪ್ರ: ಜನಪ, ವಿನಯದಿಮ್ ಕಂಡುದಮ್ ನುಡಿದಡೆ ಎನ್ನನ್ ನಿನಗೆ ಮುನಿದನ್ ಎಂದೆಂಬೆ… ನೀನ್ ಮುನಿದು ಮಾಡುವುದೇನು. ಎಮ್ಮ ಒಡವೆಯಮ್ ಕೊಂಡೀಗ ಹೋಹೆವು…
(ಎಂದು ನುಡಿದು, ಚಂದ್ರಮತಿಯನ್ನು ಕುರಿತು)
ಏಳ್, ಎಲಗೆ…ಸವುಡಿದೊತ್ತೆ… ಮನೆಯ ಕೆಲಸಕ್ಕೆ ನಡೆ. ಏಳ್, ಎಲವೊ ಚಿಣ್ಣ, ಹುಲು ಹುಳ್ಳಿ ತರಲು ಕಾನನಕೆ ಹೋಗು.
(ಎಂದು ಅಕಟ ಆ ಕಪಟವಟು ವೇಷಮಯದ ಅನಿಲಸಖನು ಮಾನಿನಿಯನ್ ಕುಮಾರನನ್ ಜರೆದನ್.)
ಲೋಹಿತಾಶ್ವ: ಹೋಹೆನೇ ತಂದೆ…ಬೊಪ್ಪಯ್ಯ…
(ಎಂದೆಂದು ಕಡುನೇಹದಿಂದ ಅಪ್ಪಿ, ಕರುಣಮ್ ತೋರಿ ಕಂಬನಿಯ ಕಾಹೊನಲೊಳ್ ಅದ್ದುವ ಕುಮಾರನನ್, ಕಾಲ್ಗೆರಗಿ ತಲೆವಾಗಿ ನಿಂದ ಸತಿಯ…)
ವಿಪ್ರ: ಬೇಹೊಡೆಯ ನಾನಿರಲು…ಮಾರಿದವನನ್ ಕೇಳ್ವ ಸಾಹಸವ ನೋಡ…
(ಎಂದು ಕೆಡೆಹೊಯ್ದು ನೂಕಿ, ಅವನಿಪನ ಮನ ಮರುಗಬೇಹುದೆಂದು ಜರೆಯುತ್ತ ನಿಜಗೇಹಕ್ಕೆ ಕೊಂಡೊಯ್ದನ್.)
ತಿರುಳು: ಪತ್ನೀ ಪುತ್ರ ವಿಕ್ರಯ = ಹೆಂಡತಿ ಮತ್ತು ಮಗನ ಮಾರಾಟ
ಪೊಡವಿಪನ್ ಸತಿಸುತರ ತಲೆಗಳಲಿ ಹುಲುಗಟ್ಟಿ=ಹೆಂಡತಿ ಮತ್ತು ಮಗನನ್ನು ಮಾರಾಟ ಮಾಡಲು ಒಪ್ಪಿಕೊಂಡ ಹರಿಶ್ಚಂದ್ರನು ಅವರ ತಲೆಗಳ ಮೇಲೆ ಹುಲ್ಲನ್ನು ಕಟ್ಟಿ; ಮಾರಾಟಕ್ಕೆ ಇಟ್ಟಿರುವ ವ್ಯಕ್ತಿಯ ತಲೆಗೆ ಹುಲ್ಲನ್ನು ಕಟ್ಟುವುದು ಅಂದಿನ ಕಾಲದಲ್ಲಿ ಇದ್ದಂತಹ ಒಂದು ಆಚರಣೆಯಾಗಿರಬಹುದು;
ನಾಚಿಕೆಯನ್ ಉಳಿದು ಕೈವಿಡಿದು ಮುಂದೊಡ್ಡಿ ತೋರುತಮ್=ಹೆಂಡತಿ ಮತ್ತು ಮಗನನ್ನು ಮಾರಾಟಮಾಡುವ ಹೀನಗತಿ ಬಂದಿತಲ್ಲ ಎಂಬ ಅಪಮಾನದ ಸಂಕಟವನ್ನು ಹತ್ತಿಕ್ಕಿಕೊಂಡು, ಅವರಿಬ್ಬರ ಕಯ್ಯನ್ನು ಹಿಡಿದು, ಜನಗಳ ಮುಂದೆ ಅವರನ್ನು ತೋರಿಸುತ್ತ;
ಗಡಿಗಳೊಳು ಬೀದಿಯೊಳು ಸಂದಿಯೊಳು ಪುರದೊಳ್ ಓರಂತೆ ನಡೆನಡೆದು=ಕಾಶಿ ನಗರದ ಎಲ್ಲ ನೆಲೆಗಳಲ್ಲಿ, ಬೀದಿಯಲ್ಲಿ, ಸಂದಿಗೊಂದಿಗಳಲ್ಲಿ, ಪಟ್ಟಣದ ಒಳಗೆಲ್ಲಾ ಒಂದೇ ಸಮನೆ ಸುತ್ತುತ್ತ;
ಪೊಡವಿಪ ಹರಿಶ್ಚಂದ್ರಭೂವರನ ತನಯನನ್ ಮಡದಿಯನ್ ಮಾರುಗೊಂಬ ಅಧಿಕರಿಲ್ಲಾ ಎಂದು ಸತ್ಯನಿಧಿ ಭೂಪಾಲನು ನಿಡುಸರದೊಳ್ ಒರಲಿ ಜನಕೆ ಅರುಪುತ್ತ ತೊಳಲಿದನ್= “ ರಾಜ ಹರಿಶ್ಚಂದ್ರನ ಮಗನನ್ನು ಹೆಂಡತಿಯನ್ನು ಬೆಲೆಕೊಟ್ಟು ಕೊಂಡುಕೊಳ್ಳುವ ಸಿರಿವಂತರಿಲ್ಲವೇ ” ಎಂದು ಸತ್ಯವಂತನಾದ ಹರಿಶ್ಚಂದ್ರನು ನೀಳವಾದ ದನಿಯಲ್ಲಿ ಜೋರಾಗಿ ಕೂಗುತ್ತ, ಜನರಿಗೆ ಮಾರಾಟದ ಸಂಗತಿಯನ್ನು ತಿಳಿಸುತ್ತ, ಕಾಶಿ ನಗರದ ಎಲ್ಲೆಡೆಯಲ್ಲಿಯೂ ತಿರುಗಿದನು;
ಅನಿಮಿತ್ತ ಮುನಿವ ಮುನಿಪನ ಬೆಸದೊಳ್ ಅಗ್ನಿ ವಿಪ್ರನ ವೇಷದಿಂದ ಬಂದು=ವಿನಾಕಾರಣ ಕೋಪಗೊಳ್ಳುವ ನಡೆನುಡಿಯ ವಿಶ್ವಾಮಿತ್ರನ ಆದೇಶದಂತೆ ಅಗ್ನಿದೇವನು ಬ್ರಾಹ್ಮಣನ ಉಡುಗೆತೊಡುಗೆಯನ್ನು ತೊಟ್ಟುಬಂದು;
ಆವಾವ ಸತಿಪುತ್ರರ್ ಎನಿಪರ್ ಅವರ್=ಹರಿಶ್ಚಂದ್ರನನ್ನು ಕುರಿತು “ ನೀನು ಮಾರಾಟಕ್ಕಿಟ್ಟಿರುವ ಹೆಂಡತಿ ಮತ್ತು ಮಗ ಎನ್ನುವವರು ಯಾರು ” ಎಂದು ವಿಚಾರಿಸಲು;
ಇವರ್ ಇಬ್ಬರ್=ಇವರು ಇಬ್ಬರು ಎಂದು ಚಂದ್ರಮತಿಯನ್ನು ಮತ್ತು ಲೋಹಿತಾಶ್ವನನ್ನು ಹರಿಶ್ಚಂದ್ರನು ತೋರಿಸುತ್ತಾನೆ;
ಇವನ್ ಅಬಲನ್…ಈ ವನಿತೆ ಮುಪ್ಪಿನವಳು…ಮನೆಯೊಳ್ ಇನ್ನು ಒಳ್ಳಿತಹರ್ ಆರುಂಟು ತಾ=ಇವನು ಶಕ್ತಿಯಿಲ್ಲದ ಚಿಕ್ಕ ಹುಡುಗ…ಇವಳು ವಯಸ್ಸಾದ ಹೆಂಗಸು. ನಿನ್ನ ಮನೆಯಲ್ಲಿ ಇನ್ನು ಗಟ್ಟಿಮುಟ್ಟಾಗಿರುವಂತಹವರು ಯಾರಿದ್ದಾರೆ. ಅವರನ್ನು ಮಾರಾಟಕ್ಕಿಡು;
ಎನಗೆ ಉಳ್ಳರ್ ಇವರಯ್ಯ. ಕೊಂಡು ಎನ್ನ ಸಾಕಿಕೊಳ್ಳು=ನನ್ನವರು ಎಂದು ಇರುವವರು ಇವರಿಬ್ಬರು ಮಾತ್ರ. ಇವರನ್ನು ಕೊಂಡು, ನನ್ನನ್ನು ಕಾಪಾಡು;
ಬೆಲೆಯ ಹೇಳ್…ಎನಗೆ ಲಾಗಾಗೆ ಏಳೆಂಟು ದಿನಕೆ ಹೊನ್ ಕೊಡುವೆನ್=ಬೆಲೆಯನ್ನು ಹೇಳು. ನನಗೆ ಸರಿಬಂದರೆ ಏಳೆಂಟು ದಿನದಲ್ಲಿ ಹಣವನ್ನು ಕೊಡುತ್ತೇನೆ;
ಇಂದು ಬೈಗಿಂದೊಳಗೆ ರಾಸಿ ಹೊನ್ನಮ್ ಕೊಡುವೆನ್ ಎಂದು ಭಾಷೆಯನ್ ಇತ್ತೆನ್=ಈ ದಿನ ಸಂಜೆಯೊಳಗೆ ನಾನು ಸಾಲವಾಗಿ ಹಿಂತಿರುಗಿಸಬೇಕಾದ ಹಣವನ್ನು ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ;
ಈಯದಿರ್ದಡೆ ಹಾನಿ ಬಂದಪುದು=ಕೊಡದಿದ್ದರೆ ನನಗೆ ಕೇಡಾಗುತ್ತದೆ;
ಲಾಗನರಸದೆ ನಿನ್ನ ಮನಕೆ ಬಂದನಿತು ಅರ್ಥಮಮ್ ಕರುಣಿಸು ತಂದೆ=ಸಮಯಕ್ಕಾಗಿ ಕಾಯದೆ ನಿನ್ನ ಮನಸ್ಸಿಗೆ ಬಂದಶ್ಟು ಹಣವನ್ನು ಈಗಲೇ ನೀಡು ತಂದೆ;
ವನಿತೆಗೆ ಇಪ್ಪತ್ತು ಸಾಸಿರವನ್… ಈ ನಂದನಂಗಿ ಇಪ್ಪತ್ತು ಸಾಸಿರವನ್ ಈವೆನ್=ಹೆಂಗಸಿಗೆ ಇಪ್ಪತ್ತು ಸಾವಿರವನ್ನು…ಈ ನಿನ್ನ ಮಗನಿಗೆ ಇಪ್ಪತ್ತು ಸಾವಿರವನ್ನು ಕೊಡುತ್ತೇನೆ;
ಎಮ್ಮ ತೆರಕಾರಗೆ ಬಂದುದು ಎನಿಸುವುದು=ನಮ್ಮಿಂದ ಸಾಲವನ್ನು ವಸೂಲು ಮಾಡಲು ಬಂದಿರುವ ತೆರಕಾರನ ಬಾಯಲ್ಲಿ “ಹಣವು ಸಂದಾಯವಾಗಿದೆ” ಎಂದು ಹೇಳಿಸು;
ಬಂದುದು=ವಿಪ್ರನು ನಲವತ್ತು ಸಾವಿರ ಚಿನ್ನದ ನಾಣ್ಯಗಳನ್ನು ನಕ್ಶತ್ರಕನಿಗೆ ಕೊಡಲು…ಆಗ ನಕ್ಶತ್ರಕನು “ಹಣವು ಸಂದಾಯವಾಗಿದೆ” ಎಂದನು;
ಬಂದುದೇ ನಕ್ಷತ್ರ ನಾಮ ಮುನಿ=ನಕ್ಶತ್ರಕ ಮುನಿಯೇ, ನಾನು ಕೊಡಬೇಕಾದ ಹಣ ನಿಮಗೆ ಕಯ್ ಸೇರಿತಲ್ಲವೇ;
ಏನು ಬಂದುದು. ಆನ್ ಬಂದ ದಿನ ಮೊದಲ್ ಇಂದು ತನಕ ಎನ್ನ ಹಿಂದುಳಿದ ಬತ್ತಾಯ ಬಂದುದು=ಯಾವ ಹಣ ಬಂತು. ನಾನು ಬಂದ ದಿನದಿಂದ ಮೊದಲುಗೊಂಡು ಇಂದಿನವರೆಗೆ ನಿನ್ನೊಡನೆ ಬಂದಿದ್ದಕ್ಕಾಗಿ ನೀನು ನನಗೆ ಕೊಡಬೇಕಾದ ಕೂಲಿಯ ಹಣ ತಲುಪಿತು;
ಎನ್ನ ಒಡೆಯಂಗೆ ಕೊಡುವ ಹೊಸ ರಾಸಿ ಹೊನ್ನ ತಂದೀಗ ಕೊಡು=ನನ್ನ ಒಡೆಯನಾದ ವಿಶ್ವಾಮಿತ್ರನಿಗೆ ಕೊಡಬೇಕಾದ ದೊಡ್ಡ ಮೊತ್ತದ ಹಣವನ್ನು ತಂದು, ನನಗೆ ಒಪ್ಪಿಸು;
ಕೊಡದಡೆ ಇಲ್ಲ ಎನ್ನು ಹೋಗಬೇಕು=ಕೊಡುವುದಕ್ಕೆ ನಿನ್ನಿಂದ ಆಗದಿದ್ದರೆ, ಕೊಡಲಾರೆ ಎಂದು ಹೇಳು. ನಾನು ಆಶ್ರಮಕ್ಕೆ ಹೋಗಬೇಕು;
ಈ ಹೊನ್ನ ಬತ್ತಾಯಕ್ಕೆ ತೆರುವನಲ್ಲ=ನನ್ನ ಹೆಂಡತಿ ಮತ್ತು ಮಗನನ್ನು ಮಾರಿ ಬಂದಿರುವ ಹಣವನ್ನು ನಿನ್ನ ಕೂಲಿಯಾಗಿ ಕೊಡುವುದಿಲ್ಲ;
ಈ ಮಧ್ಯಸ್ಥ ವಿಪ್ರ ಮೆಚ್ಚಲು ಕೊಂಬೆನ್=ನನ್ನ ನಿನ್ನ ನಡುವೆ ವಾದ ಬೇಡ. ಈ ವಿಪ್ರನು ನನ್ನ ಮಾತನ್ನು ಸರಿಯೆಂದು ಒಪ್ಪಿಕೊಂಡರೆ, ಹಣವನ್ನು ನಾನೇ ಇಟ್ಟುಕೊಳ್ಳುತ್ತೇನೆ;
ಅವನೀಶ ಕೇಳ್=ಹರಿಶ್ಚಂದ್ರನೇ, ನಾನು ಬೇಡ. ನೀನೇ ವಿಪ್ರನನ್ನು ಯಾರು ಮಾತು ಸರಿ ಎಂದು ಕೇಳು;
ತಾತ, ಈತನ್ ಇನಿತು ಅರ್ಥವಮ್ ಕೊಂಬುದು ಉಚಿತವೆ ಪಕ್ಷೀಕರಿಸದೆ ಹೇಳು=ಹಿರಿಯನಾದ ವಿಪ್ರನೇ, ಈ ನಕ್ಶತ್ರಕನು ಇಶ್ಟೊಂದು ಹಣವನ್ನು ಕೂಲಿಯಾಗಿ ತೆಗೆದುಕೊಳ್ಳುವುದು ನ್ಯಾಯವೇ ಎಂಬುದನ್ನು ಯಾರೊಬ್ಬರ ಪರವನ್ನು ವಹಿಸದೆ ಸಮಚಿತ್ತದಿಂದ ಹೇಳು;
ನಾಲ್ಕೆರಡು ಮಾತಂಗದ ಉದ್ದದ ಅರ್ಥದ ಸಾಲವಮ್ ಬೇಡ ಬಂದವಂಗೆ ಇನಿತು ಘನವೇ=ಅನೇಕ ಆನೆಗಳ ಎತ್ತರದಶ್ಟು ದೊಡ್ಡ ರಾಶಿಯ ಸಂಪತ್ತಿನ ಸಾಲವನ್ನು ವಸೂಲು ಮಾಡಲು ಬಂದವನಿಗೆ ಇಶ್ಟು ಸಣ್ಣ ಮೊತ್ತದ ಹಣವು ದೊಡ್ಡದೇ;
ಭೂತಳಾಧಿಪ, ಮುನಿದು ಪೇಳೆನ್. ಇರ್ದುದನ್ ಎಂಬೆನ್. ಈತಗೆ ಇದು ಮರಿಯಾದೆ=ಹರಿಶ್ಚಂದ್ರನೇ, ನಾನು ನಿನ್ನ ಬಗ್ಗೆ ಕೋಪಿಸಿಕೊಂಡು ಹೇಳುತ್ತಿಲ್ಲ. ಇರುವ ಸಂಗತಿಯನ್ನು ಹೇಳುತ್ತಿದ್ದೇನೆ. ಇಶ್ಟು ಮೊತ್ತದ ಹಣವನ್ನು ಈತನಿಗೆ ಕೊಡುವುದು ಆತನ ಜವಾಬ್ದಾರಿಗೆ ತಕ್ಕುದಾಗಿದೆ;
ಜಲವನುಳಿದ ಅಬುಜಕೆ ಆ ತರಣಿ ಮುನಿವನ್ ಎನೆ… ನೆಲೆಗೆಟ್ಟು ಬಂದವರ್ಗೆ ಮುನಿಯದವರ್ ಆರ್=ನೀರಿನಿಂದ ಹೊರಕ್ಕೆ ಹಾಕಲ್ಪಟ್ಟ ತಾವರೆಗೆ, ಆ ಸೂರ್‍ಯನು ಕೋಪಿಸಿಕೊಳ್ಳುತ್ತಾನೆ ಎಂದ ಮೇಲೆ, ಮನೆಮಟವನ್ನು ಕಳೆದುಕೊಂಡು ಬಂದ ಪರದೇಶಿಗಳಿಗೆ ಕೋಪಿಸಿಕೊಳ್ಳದವರು ಯಾರು; ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ಕೊಳದ ನೀರಿನ ದಂಟಿನಲ್ಲಿ ತಾವರೆಯ ಹೂವು ಇದ್ದಾಗ ಸೂರ್‍ಯನ ಕಿರಣಗಳು ತಾವರೆಯನ್ನು ಅರಳಿಸುತ್ತವೆ. ಅದೇ ತಾವರೆಯ ಹೂವು ದಂಟಿನಿಂದ ಕಿತ್ತು ಹೊರಕ್ಕೆ ಬಿದ್ದಾಗ, ಅದೇ ಸೂರ್‍ಯನ ಕಿರಣಗಳು ಅದನ್ನು ಬಾಡಿಸುತ್ತವೆ. ಅಂತೆಯೇ ಸಂಪತ್ತನ್ನು ಕಳೆದುಕೊಂಡು ಗತಿಹೀನರಾದವರಿಗೆ ಯಾರೂ ಕರುಣೆಯನ್ನು ತೋರಿಸುವುದಿಲ್ಲ ಮತ್ತು ಅವರ ಪರವಾಗಿ ಮಾತನಾಡುವುದಿಲ್ಲ;
ಜನಪ, ವಿನಯದಿಮ್ ಕಂಡುದಮ್ ನುಡಿದಡೆ ಎನ್ನನ್ ನಿನಗೆ ಮುನಿದನ್ ಎಂದೆಂಬೆ=ಹರಿಶ್ಚಂದ್ರನೇ, ವಿನಯದಿಂದಲೇ ನಾನು ತಿಳಿದುಕೊಂಡಿದ್ದನ್ನು ಹೇಳಿದರೆ, ನಿನ್ನ ಬಗ್ಗೆ ನಾನು ಕೋಪಿಸಿಕೊಂಡಿದ್ದೇನೆ ಎಂದು ತಪ್ಪಾಗಿ ತಿಳಿದಿರುವೆ;
ನೀನ್ ಮುನಿದು ಮಾಡುವುದೇನು=ನೀನು ನನ್ನ ಬಗ್ಗೆ ತಪ್ಪು ತಿಳಿದು ಕೋಪಿಸಿಕೊಂಡು ಏನನ್ನು ತಾನೆ ಮಾಡಬಲ್ಲೆ;
ಎಮ್ಮ ಒಡವೆಯಮ್ ಕೊಂಡೀಗ ಹೋಹೆವು ಎಂದು ನುಡಿದು=ನಾವು ಕೊಂಡುಕೊಂಡಿರುವ ವಸ್ತುವನ್ನು ಈಗ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿ; ಸವುಡಿದೊತ್ತು=ಸವುಡಿ+ತೊತ್ತು;
ಸವುಡಿದೊತ್ತು=ಅಪ್ರಯೋಜಕಳಾದ ದಾಸಿ; ಕೂಲಿಯಾಳುಗಳನ್ನು ಇಲ್ಲವೇ ಒತ್ತೆಯಿಟ್ಟುಕೊಂಡವರನ್ನು ಬಯ್ಯುವಾಗ “ನೀನು ಯಾವ ಕೆಲಸಕ್ಕೂ ಬಾರದವನು/ಳು” ಎಂದು ಅಲ್ಲಗಳೆಯುವ ನುಡಿಗಟ್ಟು;
ಎಲಗೆ…ಸವುಡಿದೊತ್ತೆ, ಏಳ್… ಮನೆಯ ಕೆಲಸಕ್ಕೆ ನಡೆ=ಚಂದ್ರಮತಿಯನ್ನು ಕುರಿತು “ಎಲೆ ಹೆಂಗುಸೆ, ಕೆಲಸಕ್ಕೆ ಬಾರದವಳೆ, ಸಿದ್ದಳಾಗು…ಮನೆಯ ಕೆಲಸಕ್ಕೆ ನಡೆ;”
ಎಲವೊ ಚಿಣ್ಣ, ಏಳು… ಹುಲು ಹುಳ್ಳಿ ತರಲು ಕಾನನಕೆ ಹೋಗು ಎಂದು=ಎಲವೊ ಬಾಲಕ, ತಯಾರಾಗು…ಹುಲ್ಲು ಮತ್ತು ಒಣಗಿದ ಸಣ್ಣಪುಟ್ಟ ಕಟ್ಟಿಗೆಯನ್ನು ತರಲು ಕಾಡಿನತ್ತ ನಡೆ ಎಂದು ಅಬ್ಬರಿಸುತ್ತ;
ಅಕಟ ಆ ಕಪಟವಟು ವೇಷಮಯದ ಅನಿಲಸಖನು ಮಾನಿನಿಯನ್ ಕುಮಾರನನ್ ಜರೆದನ್=ಅಯ್ಯೋ…ಬ್ರಾಹ್ಮಣ ವೇಶವನ್ನು ತೊಟ್ಟಿರುವ ಅಗ್ನಿದೇವನು ಚಂದ್ರಮತಿಯನ್ನು ಮತ್ತು ಲೋಹಿತಾಶ್ವನನ್ನು ಗದರಿಸಿದನು; ಬೊಪ್ಪಯ್ಯ=ಅಪ್ಪನನ್ನು ಪ್ರೀತಿಯಿಂದ ಕರೆಯುವಾಗ ಬಳಸುವ ಪದ;
ಹೋಹೆನೇ ತಂದೆ…ಬೊಪ್ಪಯ್ಯ ಎಂದೆಂದು ಕಡುನೇಹದಿಂದ ಅಪ್ಪಿ=ಅಪ್ಪಾ ಹೋಗುತ್ತೇನೆ ಎಂದು ಲೋಹಿತಾಶ್ವನು ಹೇಳುತ್ತ, ಹರಿಶ್ಚಂದ್ರನನ್ನು ಬಹಳ ಪ್ರೀತಿಯಿಂದ ಅಪ್ಪಿಕೊಂಡು; ಕಾಹೊನಲ್+ಒಳ್; ಕಾಹೊನಲ್=ಕಾಡಿನಲ್ಲಿ ತುಂಬಿ ಹರಿಯುವ ನದಿ;
ಕಂಬನಿಯ ಕಾಹೊನಲ್=ಇದೊಂದು ರೂಪಕ. ಕಣ್ಣೀರಿನ ಕಡಲು ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;
ಕರುಣಮ್ ತೋರಿ ಕಂಬನಿಯ ಕಾಹೊನಲೊಳ್ ಅದ್ದುವ ಕುಮಾರನನ್=ಅಪ್ಪನನ್ನು ಬಿಟ್ಟಿರಲಾರದ ಸಂಕಟದಿಂದ ಕರುಣೆಯನ್ನು ಹುಟ್ಟಿಸುವಂತೆ ಕಣ್ಣೀರಿನ ಕಡಲಲ್ಲಿ ಮುಳುಗಿರುವ ಲೋಹಿತಾಶ್ವನನ್ನು;
ಕಾಲ್ಗೆರಗಿ ತಲೆವಾಗಿ ನಿಂದ ಸತಿಯ=ಹರಿಶ್ಚಂದ್ರನ ಪಾದಗಳಿಗೆ ತಲೆ ಬಗ್ಗಿಸಿ ನಮಿಸುತ್ತಿರುವ ಚಂದ್ರಮತಿಯನ್ನು ವಿಪ್ರನು ನೋಡಿ; ಬೇಹೊಡೆಯ=ಹಣವನ್ನು ಕೊಟ್ಟು ಕೊಂಡುಕೊಂಡಿರುವ ಯಜಮಾನ;
ಬೇಹೊಡೆಯ ನಾನಿರಲು…ಮಾರಿದವನನ್ ಕೇಳ್ವ ಸಾಹಸವ ನೋಡ… ಎಂದು ಕೆಡೆಹೊಯ್ದು ನೂಕಿ=ದಣಿಯಾದ ನಾನಿರಲು, ಮಾರಿದವನ ಬಳಿ ಹೋಗಲು ಒಪ್ಪಿಗೆಯನ್ನು ಕೇಳುತ್ತಿರುವ ಇವರ ಕೆಚ್ಚನ್ನು ನೋಡು ಎಂದು ಅಬ್ಬರಿಸುತ್ತ ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಕೆಳಕ್ಕೆ ಬೀಳುವಂತೆ ಹೊಡೆದು ಮುಂದಕ್ಕೆ ತಳ್ಳಿ;
ಅವನಿಪನ ಮನ ಮರುಗಬೇಹುದೆಂದು ಜರೆಯುತ್ತ ನಿಜಗೇಹಕ್ಕೆ ಕೊಂಡೊಯ್ದನ್= ಹರಿಶ್ಚಂದ್ರನ ಮನಸ್ಸು ಗಾಸಿಗೊಂಡು ನರಳುವಂತೆ ಮಾಡಬೇಕೆಂದು ವಿಪ್ರನು ಅವರಿಬ್ಬರನ್ನು ಬಯ್ಯುತ್ತ, ತನ್ನ ಮನೆಗೆ ಕರೆದುಕೊಂಡು ಹೋದನು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು