ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 18 ನೆಯ ಕಂತು: ಸುಡುಗಾಡಿನ ಕಾವಲುಗಾರನಾಗಿ ಹರಿಶ್ಚಂದ್ರ
– ಸಿ.ಪಿ.ನಾಗರಾಜ.
ಪ್ರಸಂಗ-18: ಸುಡುಗಾಡಿನ ಕಾವಲುಗಾರನಾಗಿ ಹರಿಶ್ಚಂದ್ರ
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ಪತ್ನೀ ಪುತ್ರ ವಿಕ್ರಯ—ಆತ್ಮ ವಿಕ್ರಯ’ ಎಂಬ ಏಳನೆಯ ಅಧ್ಯಾಯದ 42 ರಿಂದ 48ನೆಯ ಪದ್ಯದ ವರೆಗಿನ ಏಳು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ವೀರಬಾಹುಕ: ಕಾಶಿನಗರದಲ್ಲಿರುವ ಸುಡುಗಾಡಿನ ಒಡೆಯ.
ಹರಿಶ್ಚಂದ್ರ: ಅಯೋದ್ಯಾಪುರವನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜಸಂಪತ್ತನ್ನು ನೀಡಿ, ಈಗ ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ. ಈಗ ವೀರಬಾಹುಕನ ದಾಸನಾಗಿದ್ದಾನೆ.
*** ಪ್ರಸಂಗ-18: ಸುಡುಗಾಡಿನ ಕಾವಲುಗಾರನಾಗಿ ಹರಿಶ್ಚಂದ್ರ ***
ಹಲವು ಎಲುವಿನ ಎಕ್ಕೆಗಳ ಬಿಗಿದು ಬೀವಮ್ ನೆಯ್ದ ನುಲಿಯ ಮಂಚದ ಮೇಲೆ ಹಂದೊಗಲ ಹಾಸಿನೊಳು, ಹೊಲೆಯನ್ ಓಲಗವಿತ್ತು, ನರಕಪಾಲದೊಳು ತೀವಿದ ಹಸಿಯ ಗೋಮಾಂಸವ ಮೆಲುತ, ಮದ್ಯವನ್ ಈಂಟುತಿರ್ಪ ಪತಿಯನ್ ಕಂಡು, ನೆಲದಲ್ಲಿ ಕುಳ್ಳಿರ್ದ ರವಿಕುಲನ ಹೆಗಲ ಮೇಲೆ ಎಲೆಲೆ ಕಾಲನ್ ನೀಡಿದನು. ಕಾಲನ್ ಒಂದೆರಡು ಕುಲಗಿರಿಯ ಭಾರವೆನಲು… ಏಳ್ ಅಬುಧಿ ಕಡೆಯಾದ ಸರ್ವರಾಜ್ಯಶ್ರೀಯ ಮೇಳದೊಳು ವೀರಸಿರಿಯಮ್ ವಿಜಯಸಿರಿಗಳಮ್ ತಾಳಲಾಪ ಅದಟುಳ್ಳ ಭುಜವು ಅನಾಮಿಕನ ಪದಭಾರಕ್ಕೆ ಬಸವಳಿವುದೇ… ಕಾಳೆಗದೊಳ್ ಅರಿನೃಪರ ಖಂಡಮಮ್ ರುಧಿರಮಮ್ ಕಾಳಿಜವನ್ ಅಡಗನ್ ಒಳ್ಗರುಳ ಹಿಣಿಲಮ್ ಹೊರುವ ಬಾಳ ಪಡೆದಿಪ್ಪನ್ ಈ ಹೇಯಕ್ಕೆ ಹೇಸುವನೆ ಎನಿಸಿ ಲೆಕ್ಕಿಸದೆ ಇರ್ದನು.
ವೀರಬಾಹು: ಎಲವೊ, ನೀ ದಿಟ ರಾಯನಾದಡೆ ಅಳುಕದೆ ಬಂದು ನೆಲದಲ್ಲಿ ಕುಳ್ಳಿರ್ಪೆ… ಸತ್ಕುಲಜನಾದಡಮ್ ಹೊಲೆಯನಾದ ಎನ್ನ ಕಾಲಮ್ ಹೊರುವೆ… ಮುನಿಮತೋಚಿತ ಶಿವಾರ್ಚಕನಾದಡೆ ಹೊಲಸಿನ ಅಟ್ಟುಳಿಗೆ ಕೊಕ್ಕರಿಸದಿಹೆ… ರಾಜ್ಯಸಿರಿ ತೊಲಗಿದಡೆ ಪೂರ್ವಗುಣ ಅಳಿವುದೇ… ಮುನ್ನ ಭವಿನಿಲಯದೊಳು ತಲೆಮುಟ್ಟಿ ದುಡಿದ ಗಾವದಿಯೈಸೆ… ಭೂಪಾಲನಲ್ಲ.
ಹರಿಶ್ಚಂದ್ರ: ಹಸುವನ್ ಅಳಿ; ಹಾರುವನನ್ ಇರಿ; ಮಾತೆಪಿತರ ಬಾಧಿಸು; ಸುತನ ತಿವಿ; ಸತಿಯ ಕೊಲು; ಮಾರಿಗೆ ಒರೆಗಟ್ಟು; ವಿಷವ ಕುಡಿ; ಹಾವ ಹಿಡಿ; ಹುಲಿಗೆ ಮಲೆ; ದಳ್ಳುರಿಯೊಳ್ ಅಡಗು ಹೋಗು ಎಂದು ಒಡೆಯನು ಬೆಸಸಿದಡೆ ನಾನ್ ಆರೆನ್ ಎನಬಾರದು ಎಂಬಾಗಳ್, ಅಸವಸದೊಳ್ ಇವಕೆ ಅಲಸಿ ಸೆಡೆದೆನಾದಡೆ, ಕೊಟ್ಟ ಬೆಸನ ನಡಸುವೆನ್ ಎಂಬ ನುಡಿ ಸಡಿಲವಾಗದೇ ಹೇಳ್.
ವೀರಬಾಹು: ಏನನ್ ಆನ್ ಬೆಸನ್ ಇತ್ತೊಡೆ, ನೀನ್ ಅದ ಬಿಡದೆ ನಡಸುವಾ…
ಹರಿಶ್ಚಂದ್ರ: ನಡಸದಿರ್ದಡೆ ನೀನು ಕೊಟ್ಟ ಒಡವೆ ದಾನವೇ… ಬಗೆಯೆ ಕರಿ ಹೂಳುವನಿತು ಅರ್ಥಮಮ್ ಕೊಂಡು, ಮಾಡದೆ ಮಾಣ್ದಡೆ, ಈ ನೆಲಮ್ ಹೊರುವುದೇ… ನಾನಿತ್ತ ನಂಬುಗೆಗೆ ಹಾನಿಯಾಗದೆ ಹೋಹುದೇ…
ವೀರಬಾಹು: ಸುಡುಗಾಡನ್ ಆನಂದದಿಮ್ ಕಾದುಕೊಂಡಿರುತಿರು.
(ಎಂದು ಬೆಸಸಿದನು. ಮನದನುವರಿಯಲು.)
ಹರಿಶ್ಚಂದ್ರ: ಸುಡುಗಾಡ ಕಾಹವು ಎಂದೆ ಏನ್ ಅದರ ಪಂಥಮಮ್ ನುಡಿದು ಪೇಳ್.
ವೀರಬಾಹು: ಸುಡುವ ನೆಲದೆರೆಯ ಹಾಗ, ಹೆಣದ ಉಡಿಗೆಯಮ್ ತಂದು ಎನಗೆ ಕೊಡುವುದು. ಆ ತಲೆಯಕ್ಕಿಯಮ್ ನಿನ್ನ ಸಂಬಳಕ್ಕೆ ಪಡಿಯಾಗಿ ಕೊಂಡುಂಬದು. ಅಳುಪದಿರು. ಹುಸಿಯದಿರು. ಬಿಡದಿರು.
(ಎಂದು ವನಧಿ ಮುದ್ರಿತಧರಾಪತಿಗೆ ಉಡುಗೊರೆಯ ವೀಳೆಯದ ಕೂಡೆ ತಾ ಹಿಡಿದ ಸಂಬಳಿಗೋಲ ಮುದ್ರೆಗೊಟ್ಟನ್.)
ವೀರಬಾಹು: ಪುರದೊಳಗೆ ಎಯ್ದೆ ಜನವರಿಯೆ ಹೆಸರ ಹೇಳುತ್ತ, ಸಾರುತ್ತ, ಮೈಗುರುಹ ತೋರಿಸುತ ಹರೆಯ ಮೊಳಗಿಸುತ, ಮೆರೆಯುತ್ತ ಹೋಗು, ಏಳ್.
(ಎಂದು ಕಳುಪೆ, ಎಲ್ಲವ ಮಾಡುತ ಪೊರಮಟ್ಟನ್.)
ತಿರುಳು: ಸುಡುಗಾಡಿನ ಕಾವಲುಗಾರನಾಗಿ ಹರಿಶ್ಚಂದ್ರ
ಸುಡುಗಾಡು=ಹೆಣಗಳನ್ನು ಸುಡುವ ಜಾಗ/ಮಸಣ:
ಹಲವು ಎಲುವಿನ ಎಕ್ಕೆಗಳ ಬಿಗಿದು ಬೀವಮ್ ನೆಯ್ದ ನುಲಿಯ ಮಂಚದ ಮೇಲೆ=ಹಲವು ಪ್ರಾಣಿಗಳ ಮೂಳೆಗಳನ್ನು ಮಂಚದ ಚವುಕಟ್ಟಿಗೆ ಜೋಡಿಸಿ, ನರಗಳನ್ನು ಹಗ್ಗಮಾಡಿಕೊಂಡು ಹೆಣೆದ ಮಂಚದ ಮೇಲೆ;
ಹಂದೊಗಲ ಹಾಸಿನೊಳು=ಹಸಿಯ ತೊಗಲಿನ ಹಾಸುಗೆಯಲ್ಲಿ ಒರಗಿ ಕುಳಿತುಕೊಂಡು;
ಹೊಲೆಯನ್ ಓಲಗವಿತ್ತು=ಹೊಲೆಯನಾದ ವೀರಬಾಹುಕನು ತನ್ನ ಮನೆಯಲ್ಲಿ ಸಹಚರರೊಡನೆ ಮಾತನಾಡುತ್ತ;
ನರಕಪಾಲದೊಳು ತೀವಿದ ಹಸಿಯ ಗೋಮಾಂಸವ ಮೆಲುತ=ಮಾನವನ ತಲೆಬುರುಡೆಯಲ್ಲಿ ತುಂಬಿರುವ ಹಸಿಯ ಗೋಮಾಂಸವನ್ನು ತಿನ್ನುತ್ತ;
ಮದ್ಯವನ್ ಈಂಟುತಿರ್ಪ ಪತಿಯನ್ ಕಂಡು ನೆಲದಲ್ಲಿ ಕುಳ್ಳಿರ್ದ ರವಿಕುಲನ ಹೆಗಲ ಮೇಲೆ=ಹೆಂಡವನ್ನು ಕುಡಿಯುತ್ತಿರುವ ತನ್ನ ಒಡೆಯನಾದ ವೀರಬಾಹುಕನನ್ನು ಹರಿಶ್ಚಂದ್ರನು ಕಂಡು, ಅವನ ಬಳಿಬಂದು, ನೆಲದ ಮೇಲೆ ಕುಳಿತುಕೊಂಡನು. ತನ್ನ ಕಾಲ ಬಳಿ ಕುಳಿತ ಹರಿಶ್ಚಂದ್ರನ ಹೆಗಲ ಮೇಲೆ;
ಎಲೆಲೆ ಕಾಲನ್ ನೀಡಿದನು=ಅಬ್ಬಬ್ಬಾ… ವೀರಬಾಹುಕನು ಕಾಲನ್ನು ಹಾಕಿದನು;
ಕಾಲನ್ ಒಂದೆರಡು ಕುಲಗಿರಿಯ ಭಾರವೆನಲು=ಕಾಲಿನ ತೂಕವು ಒಂದೆರಡು ದೊಡ್ಡ ಪರ್ವತಗಳ ಹೊರೆಯೆನ್ನುವಂತಿತ್ತು;
ಏಳ್ ಅಬುಧಿ ಕಡೆಯಾದ ಸರ್ವರಾಜ್ಯಶ್ರೀಯ ಮೇಳದೊಳು ವೀರಸಿರಿಯಮ್ ವಿಜಯಸಿರಿಗಳಮ್ ತಾಳಲಾಪ ಅದಟುಳ್ಳ ಭುಜವು ಅನಾಮಿಕನ ಪದಭಾರಕ್ಕೆ ಬಸವಳಿವುದೇ=ಏಳು ಸಮುದ್ರಗಳಿಂದ ಸುತ್ತುವರಿದ ಸಕಲ ರಾಜ್ಯಸಂಪತ್ತಿನ ಕೂಟದಲ್ಲಿ ಪರಾಕ್ರಮದ ಸಂಪತ್ತನ್ನು ಮತ್ತು ವಿಜಯದ ಸಂಪತ್ತಿನ ಜವಾಬ್ದಾರಿಯನ್ನು ಹೊರುವ ಶೂರತನವುಳ್ಳ ಹರಿಶ್ಚಂದ್ರನು ಬುಜವು ಚಂಡಾಲನಾದ ವೀರಬಾಹುಕನ ಕಾಲಿನ ಬಾರಕ್ಕೆ ಆಯಾಸಗೊಳ್ಳುವುದೇ;
ಕಾಳೆಗದೊಳ್ ಅರಿನೃಪರ ಖಂಡಮಮ್ ರುಧಿರಮಮ್ ಕಾಳಿಜವನ್ ಅಡಗನ್ ಒಳ್ಗರುಳ ಹಿಣಿಲಮ್ ಹೊರುವ ಬಾಳ ಪಡೆದಿಪ್ಪನ್=ರಣರಂಗದಲ್ಲಿ ಶತ್ರುರಾಜರ ಮಾಂಸಕಂಡವನ್ನು, ರಕ್ತವನ್ನು, ಪಿತ್ತಜನಕಾಂಗವನ್ನು , ಮಾಂಸವನ್ನು, ಕರುಳಿನ ಗೊಂಚಲನ್ನು ಕಿತ್ತೆಸೆಯುವ ಕತ್ತಿಯನ್ನು ಪಡೆದಿರುವ ಶೂರನಾದ ಹರಿಶ್ಚಂದ್ರನು;
ಈ ಹೇಯಕ್ಕೆ ಹೇಸುವನೆ ಎನಿಸಿ ಲೆಕ್ಕಿಸದೆ ಇರ್ದನು=ವೀರಬಾಹುಕನ ಕೀಳಾದ ವರ್ತನೆಗೆ ಹಿಂಜರಿಯುತ್ತೇನೆಯೇ ಎನ್ನುವಂತೆ ಹರಿಶ್ಚಂದ್ರನು ಇದನ್ನು ತನಗೆ ಆಗುತ್ತಿರುವ ಅಪಮಾನವೆಂದು ತಿಳಿಯದೆ ಸಹಿಸಿಕೊಂಡನು;
ಎಲವೊ, ನೀ ದಿಟ ರಾಯನಾದಡೆ ಅಳುಕದೆ ಬಂದು ನೆಲದಲ್ಲಿ ಕುಳ್ಳಿರ್ಪೆ=ಎಲವೊ… ನೀನು ನಿಜಕ್ಕೂ ರಾಜನೇ ಆಗಿದ್ದರೆ, ಈ ರೀತಿ ಹಿಂಜರಿಯದೆ ಬಂದು ನೆಲದಲ್ಲಿ ಕುಳಿತಿರುವೆ;
ಸತ್ಕುಲಜನಾದಡಮ್ ಹೊಲೆಯನಾದ ಎನ್ನ ಕಾಲಮ್ ಹೊರುವೆ=ಮೇಲು ಕುಲದಲ್ಲಿ ಹುಟ್ಟಿದವನಾಗಿದ್ದರೂ ಹೊಲೆಯನಾದ ನನ್ನ ಕಾಲನ್ನು ಹೊರುತ್ತಿರುವೆ;
ಮುನಿಮತೋಚಿತ ಶಿವಾರ್ಚಕನಾದಡೆ ಹೊಲಸಿನ ಅಟ್ಟುಳಿಗೆ ಕೊಕ್ಕರಿಸದಿಹೆ=ಮುನಿಗಳ ಆಶಯಕ್ಕೆ ತಕ್ಕ ಶಿವ ಪೂಜಕನಾಗಿದ್ದರೆ , ಹಸಿಯ ಗೋಮಾಂಸವನ್ನು ತಿನ್ನುತ್ತ, ಹೆಂಡವನ್ನು ಕುಡಿಯುತ್ತ ನಾನು ಕೊಡುತ್ತಿರುವ ಹಿಂಸೆಗೆ ತುಸುವಾದರೂ ಅಸಹ್ಯಪಟ್ಟುಕೊಳ್ಳದೆ ಸುಮ್ಮನಿರುವೆ;
ರಾಜ್ಯಸಿರಿ ತೊಲಗಿದಡೆ ಪೂರ್ವಗುಣ ಅಳಿವುದೇ=ರಾಜ್ಯದ ಸಂಪತ್ತು ಹೋದಮಾತ್ರಕ್ಕೆ ರಾಜತನದ ನಡೆನುಡಿಗಳು ನಾಶವಾಗುತ್ತವೆಯೇ;
ಭೂಪಾಲನಲ್ಲ… ಮುನ್ನ ಭವಿನಿಲಯದೊಳು ತಲೆಮುಟ್ಟಿ ದುಡಿದ ಗಾವದಿಯೈಸೆ=ನೀನು ರಾಜನಾಗಿರಲಿಲ್ಲ… ಈ ಮೊದಲು ಸಿರಿವಂತನ ಮನೆಯಲ್ಲಿ ಮಯ್ ಬಗ್ಗಿಸಿ ತಲೆ ತಗ್ಗಿಸಿ ಜೀತದಾಳಾಗಿ ದುಡಿಯುತ್ತಿದ್ದ ತಿಳಿಗೇಡಿಯಲ್ಲವೇ ಎಂದು ವೀರಬಾಹುಕನು ಹರಿಶ್ಚಂದ್ರನನ್ನು ಹಂಗಿಸಿದನು;
ಹಸುವನ್ ಅಳಿ=ಹಸುವನ್ನು ಕೊಲ್ಲು;
ಹಾರುವನನ್ ಇರಿ=ಬ್ರಾಹ್ಮಣನನ್ನು ಹೊಡಿ;
ಮಾತೆಪಿತರ ಬಾಧಿಸು=ತಾಯಿತಂದೆಯರನ್ನು ಪೀಡಿಸು;
ಸುತನ ತಿವಿ=ಮಗನನ್ನು ಗುದ್ದು;
ಸತಿಯ ಕೊಲು=ಹೆಂಡತಿಯನ್ನು ಕೊಲ್ಲು;
ಮಾರಿಗೆ ಒರೆಗಟ್ಟು=ಒಲಿದವರಿಗೆ ಒಳಿತನ್ನು ಮಾಡುವ, ಮುನಿದವರಿಗೆ ಕೆಡುಕನ್ನು ಮಾಡುವ ಮಾರಿ ದೇವತೆಗೆ ಎದುರುಬೀಳು;
ವಿಷವ ಕುಡಿ=ನಂಜನ್ನು ಕುಡಿ;
ಹಾವ ಹಿಡಿ=ಹಾವನ್ನು ಹಿಡಿ;
ಹುಲಿಗೆ ಮಲೆ=ಹುಲಿಯೊಡನೆ ಕಾದಾಡು;
ದಳ್ಳುರಿಯೊಳ್ ಅಡಗು ಹೋಗು ಎಂದು ಒಡೆಯನು ಬೆಸಸಿದಡೆ=ದಗದಗನೆ ಉರಿಯುತ್ತಿರುವ ಬೆಂಕಿಯಲ್ಲಿ ಬೀಳು ಹೋಗು ಎಂದು ಒಡೆಯನಾದ ನೀನು ಆಜ್ನಾಪಿಸದರೆ;
ನಾನ್ ಆರೆನ್ ಎನಬಾರದು ಎಂಬಾಗಳ್=ನಿನ್ನ ತೊತ್ತಾದ ನಾನು “ನನ್ನಿಂದ ಆ ಕೆಲಸ ಆಗದು” ಎನ್ನಬಾರದು ಎಂಬ ಒಪ್ಪಂದವಿರುವಾಗ;
ಅಸವಸದೊಳ್ ಇವಕೆ ಅಲಸಿ ಸೆಡೆದೆನಾದಡೆ=ನೀನು ಹೇಳಿದ್ದನ್ನು ಮಾಡಲು ಹಿಂದೆಮುಂದೆ ನೋಡಿ ಅಂದರೆ ಮಾಡಲೋ ಬೇಡವೋ ಎಂದು ತೊಳಲಾಡಿ, ನೀನು ಹೇಳಿದ ಕೆಲಸಕ್ಕೆ ಸೋಮಾರಿಯಾಗಿ ಹಿಂಜರಿದವನಾದರೆ;
ಕೊಟ್ಟ ಬೆಸನ ನಡಸುವೆನ್ ಎಂಬ ನುಡಿ ಸಡಿಲವಾಗದೇ ಹೇಳ್=ನೀನು ಕೊಟ್ಟ ಕೆಲಸವನ್ನು ಮಾಡುತ್ತೇನೆ ಎಂದು ನಾನು ಕೊಟ್ಟಿರುವ ಮಾತಿಗೆ ತಪ್ಪಿನಡೆದಂತಾಗುವುದಿಲ್ಲವೇ… ನೀನೇ ಹೇಳು;
ಏನನ್ ಆನ್ ಬೆಸನ್ ಇತ್ತೊಡೆ, ನೀನ್ ಅದ ಬಿಡದೆ ನಡಸುವಾ=ನಾನು ಯಾವುದೇ ಕೆಲಸವನ್ನು ಹೇಳಿದರೂ, ಅದನ್ನು ಇಲ್ಲ ಎನ್ನದೆ ನೀನು ಮಾಡುವೆಯಾ;
ನಡಸದಿರ್ದಡೆ ನೀನು ಕೊಟ್ಟ ಒಡವೆ ದಾನವೇ=ನೀನು ಹೇಳಿದ ಕೆಲಸವನ್ನು ನಾನು ಮಾಡದಿದ್ದರೆ, ನೀನು ನನಗಾಗಿ ಕೊಟ್ಟಿರುವ ಸಂಪತ್ತು ದಾನವೇ;
ಬಗೆಯೆ ಕರಿ ಹೂಳುವನಿತು ಅರ್ಥಮನ್ ಕೊಂಡು, ಮಾಡದೆ ಮಾಣ್ದಡೆ=ಹಾಗೆ ನೋಡಿದರೆ ಒಂದು ಆನೆಯನ್ನು ಮುಚ್ಚುವಶ್ಟು ಅಪಾರವಾದ ಸಂಪತ್ತನ್ನು ನಿನ್ನಿಂದ ಪಡೆದು, ನೀನು ಹೇಳಿದ ಕೆಲಸವನ್ನು ಮಾಡದಿದ್ದರೆ;
ಈ ನೆಲಮ್ ಹೊರುವುದೇ=ಈ ಜಗತ್ತು ನನ್ನನ್ನು ಹೊರುವುದೇ. ಇದೊಂದು ನುಡಿಗಟ್ಟು. ಈ ಜಗತ್ತಿನಲ್ಲಿ ಯಾವುದೇ ವ್ಯಕ್ತಿಯು ಒಳ್ಳೆಯ ನಡೆನುಡಿಯಿಂದ ಬಾಳದಿದ್ದರೆ, ಅವನು ಬೂಮಿಗೆ ಹೊರೆಯಾಗುತ್ತಾನೆ ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ನಾನಿತ್ತ ನಂಬುಗೆಗೆ ಹಾನಿಯಾಗದೆ ಹೋಹುದೇ= “ಯಾವ ಹೊತ್ತು ಯಾವ ಕೆಲಸವನ್ನು ಹೇಳಿದರೂ, ನನ್ನಿಂದಾಗುವುದಿಲ್ಲ ಎಂದು ಹೇಳದೆ ಮಾಡುತ್ತೇನೆ” ಎಂದು ನಾನು ಕೊಟ್ಟಿರುವ ಮಾತಿಗೆ ಹಾನಿಯುಂಟಾಗುವುದಿಲ್ಲವೇ;
ಸುಡುಗಾಡನ್ ಆನಂದದಿಮ್ ಕಾದುಕೊಂಡಿರುತಿರು ಎಂದು ಬೆಸಸಿದನು=ಕಾಶಿ ನಗರದಲ್ಲಿರುವ ಸುಡುಗಾಡಿನ ಕಾವಲುಗಾರನಾಗಿ ಜವಾಬ್ದಾರಿಯನ್ನು ಹೊತ್ತುಕೊಂಡು, ಆನಂದದಿಂದ ಅಲ್ಲಿನ ಕೆಲಸವನ್ನು ಮಾಡುತ್ತಿರು ಎಂದು ವೀರಬಾಹುಕನು ಹರಿಶ್ಚಂದ್ರನಿಗೆ ಆಜ್ನಾಪಿಸಿದನು;
ಮನದ ಅನುವರಿಯಲು=ಮಸಣದ ಕಾವಲುಗಾರನಾಗಿ ತಾನು ಮಾಡಬೇಕಾದ ಕೆಲಸಗಳೇನು ಎಂಬುದನ್ನು ವೀರಬಾಹುಕನಿಂದ ತಿಳಿದುಕೊಳ್ಳಲೆಂದು;
ಸುಡುಗಾಡ ಕಾಹವು ಎಂದೆ ಏನ್ ಅದರ ಪಂಥಮಮ್ ನುಡಿದು ಪೇಳ್=ಮಸಣವನ್ನು ಕಾಯಬೇಕು ಎಂದು ನುಡಿದೆ. ಅಲ್ಲಿ ನಾನು ಮಾಡಬೇಕಾದ ಕೆಲಸಗಳೇನು ಎಂಬುದನ್ನು ವಿವರವಾಗಿ ಹೇಳು; ಹಾಗ=ಕಾಶಿನಗರದಲ್ಲಿ ಚಲಾವಣೆಯಲ್ಲಿದ್ದ ಒಂದು ನಾಣ್ಯದ ಹೆಸರು;
ಸುಡುವ ನೆಲದೆರೆಯ ಹಾಗ… ಹೆಣದ ಉಡಿಗೆಯಮ್ ತಂದು ಎನಗೆ ಕೊಡುವುದು=ಹೆಣವನ್ನು ಸುಡಲು ಬಳಸುವ ಮಸಣದ ನೆಲಕ್ಕೆ ತೆರಿಗೆಯಾಗಿ ತೆಗೆದುಕೊಳ್ಳುವ ನಾಣ್ಯ ಮತ್ತು ಹೆಣದ ಮಯ್ ಮೇಲಿನ ಬಟ್ಟೆಯನ್ನು ನನಗೆ ತಂದು ಕೊಡುವುದು;
ಆ ತಲೆಯಕ್ಕಿಯಮ್ ನಿನ್ನ ಸಂಬಳಕ್ಕೆ ಪಡಿಯಾಗಿ ಕೊಂಡುಂಬದು=ಹೆಣದ ತಲೆಯ ಬಾಗದಲ್ಲಿ ಇಡುವ ಅಕ್ಕಿಯನ್ನು ನಿನ್ನ ಸಂಬಳಕ್ಕೆ ದಾನ್ಯವಾಗಿ ಪಡೆದುಕೊಂಡು, ಊಟ ಮಾಡುವುದು;
ಅಳುಪದಿರು… ಹುಸಿಯದಿರು… ಬಿಡದಿರು ಎಂದು=ಇದಕ್ಕಿಂತ ಹೆಚ್ಚಿನದನ್ನು ಬಯಸಬೇಡ… ಸುಳ್ಳನ್ನಾಡಬೇಡ… ಜವಾಬ್ದಾರಿಯನ್ನು ಮರೆಯದಿರು ಎಂದು ಹೇಳಿ;
ವನಧಿ ಮುದ್ರಿತಧರಾಪತಿಗೆ ಉಡುಗೊರೆಯ ವೀಳೆಯದ ಕೂಡೆ ತಾ ಹಿಡಿದ ಸಂಬಳಿಗೋಲ ಮುದ್ರೆಗೊಟ್ಟನ್=ಕಡಲು ಸುತ್ತುವರಿದಿದ್ದ ಬೂಮಂಡಲಕ್ಕೆ ಈ ಮೊದಲು ಒಡೆಯನಾಗಿದ್ದ ಹರಿಶ್ಚಂದ್ರನಿಗೆ ವೀರಬಾಹುಕನು ಎಲೆ ಅಡಕೆ ಸುಣ್ಣ ಮೊದಲಾದುವುಗಳಿಂದ ಕೂಡಿದ್ದ ತಾಂಬೂಲದ ಜತೆಗೆ, ತನ್ನ ಕಯ್ಯಲ್ಲಿದ್ದ ಸಂಬಳಿ ಕೋಲನ್ನು ಸುಡುಗಾಡಿನ ಕಾವಲಿನ ಅದಿಕಾರದ ಗುರುತಾಗಿ ಕೊಟ್ಟನು;
ಪುರದೊಳಗೆ ಎಯ್ದೆ ಜನವರಿಯೆ ಹೆಸರ ಹೇಳುತ್ತ, ಸಾರುತ್ತ, ಮೈಗುರುಹ ತೋರಿಸುತ ಹರೆಯ ಮೊಳಗಿಸುತ, ಮೆರೆಯುತ್ತ ಹೋಗು, ಏಳ್ ಎಂದು ಕಳುಪೆ= ಕಾಶಿ ನಗರದ ಜನರೆಲ್ಲರೂ ಹೊಸದಾಗಿ ನೇಮಕಗೊಂಡಿರುವ ಸುಡುಗಾಡಿನ ಕಾವಲುಗಾರನು ಯಾರೆಂಬುದನ್ನು ತಿಳಿಯುವಂತೆ ಪುರದ ಬೀದಿ ಬೀದಿಗಳಲ್ಲಿ ನಿನ್ನ ಹೆಸರನ್ನು ಹೇಳುತ್ತ, ನೀನು ವಹಿಸಿಕೊಂಡಿರುವ ಸುಡುಗಾಡಿನ ಕಾವಲುಗಾರನ ಹುದ್ದೆಯನ್ನು ಜೋರಾಗಿ ಹೇಳುತ್ತ, ನಿನ್ನ ಮಯ್ ಗುರುತನ್ನು ತೋರಿಸುತ್ತ , ತಮಟೆಯನ್ನು ಬಡಿಯುತ್ತ… ಎಲ್ಲರ ಕಣ್ಣಿಗೂ ಎದ್ದು ಕಾಣುವಂತೆ ಪುರದೊಳಗೆ ಒಂದು ಸುತ್ತು ಬಂದು, ಅನಂತರ ಸುಡುಗಾಡಿಗೆ ಹೋಗು ಎಂದು ಕಳುಹಿಸಲು;
ಎಲ್ಲವ ಮಾಡುತ ಪೊರಮಟ್ಟನ್=ವೀರಬಾಹುಕನು ಹೇಳಿದಂತೆ ಎಲ್ಲವನ್ನೂ ಮಾಡಲೆಂದು ಹರಿಶ್ಚಂದ್ರನು ವೀರಬಾಹುಕನ ಮನೆಯಿಂದ ಹೊರಟನು.
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು