ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 19ನೆಯ ಕಂತು: ಸುಡುಗಾಡಿನ ಕಾಯಕದಲ್ಲಿ ಹರಿಶ್ಚಂದ್ರ

 – ಸಿ.ಪಿ.ನಾಗರಾಜ.

ಪ್ರಸಂಗ-19: ಸುಡುಗಾಡಿನ ಕಾಯಕದಲ್ಲಿ ಹರಿಶ್ಚಂದ್ರ

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರಕಾವ್ಯ ಸಂಗ್ರಹ. ಈಹೊತ್ತಗೆಯ ‘ಪತ್ನೀ ಪುತ್ರ ವಿಕ್ರಯ—ಆತ್ಮ ವಿಕ್ರಯ’ ಎಂಬ ಏಳನೆಯ ಅದ್ಯಾಯದ 48 ರಿಂದ 53 ನೆಯ ಪದ್ಯದ ವರೆಗಿನ ಆರು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು:

ಹರಿಶ್ಚಂದ್ರ: ಅಯೋಧ್ಯಾಪುರವನ್ನು ರಾಜದಾನಿಯನ್ನಾಗಿ ಮಾಡಿಕೊಂಡುಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜಸಂಪತ್ತನ್ನು ನೀಡಿ, ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ. ಈಗ ವೀರಬಾಹುಕನ ದಾಸನಾಗಿದ್ದಾನೆ.
ಜನಗಳು: ಸುಡುಗಾಡಿನಲ್ಲಿ ಹೆಣಗಳನ್ನು ಒಪ್ಪಮಾಡಲೆಂದು/ಸಂಸ್ಕಾರ ಮಾಡಲೆಂದು ಬಂದಿರುವ ಜನಗಳು.

*** ಪ್ರಸಂಗ-19: ಸುಡುಗಾಡಿನಕಾಯಕದಲ್ಲಿಹರಿಶ್ಚಂದ್ರ ***

ನಸುಕುಸಿದದೇಹ… ಕಂಕರಿಗೋಲನ್ಇರಿದು ಕೈವಿಡದೆಬಾರಿಸುತ ಸತ್ಯಸಂಪನ್ನನು…

ಹರಿಶ್ಚಂದ್ರ: ಸಂಬಳಿ… ಸಂಬಳಿ…

(ಎಂದೆಂದುಕೊಸರುತಿಹ ಬಾಯ್ವೆರಸಿಬೀದಿ ಬೀದಿಯೊಳು ಸುಳಿದನ್.)

ಹರಿಶ್ಚಂದ್ರ: ಚಾವಡಿಹೆಣನನೆಲದೆರೆಯಹಾಗ… ಶವದಉಡಿಗೆ… ಸುಡುಗಾಡಿನ ಅಧಿಕಾರ ಮುದ್ರೆ… ಕಟ್ಟಾಣೆ… ಹೆಣನ ತಲೆಯಕ್ಕಿ ಎನಗಾಯ್ತು. ಎನ್ನ ಮರಹಿಕ್ಕಿ ರಾತ್ರಿಯೊಳು

ಸುಟ್ಟಿರಾದಡೆ… ತೆರೆಯನು ಕೊಡದಿರ್ದಡೆ… ಎನ್ನಾಣೆ… ಪತಿ ವೀರಬಾಹುವಿನ ಮಡದಿಯರಕಾಲಾಣೆ… ಮೀರಿದಡೆ ಕೆಡಹಿ ತಡೆಗಡಿವನ್.

(ಎಂದು ಊರೊಳಗೆ ಸಾರುತ್ತ… ತೋರುತ್ತ… ರುದ್ರಭೂಮಿಗೆ ನಡೆದನು. ಕಂಗೆಭಯವೆನೆ ಬೇವ ಹೆಣನ ಹಿಂಡುಗಳ; ಮೂಗಿಂಗೆ ಹಗೆಯೆನೆ ಕವಿವಕರ್ಬೊಗೆಯ;

ಕೌರ ಕರ್ಣಂಗಳಿಗೆ ಅಮಂಗಲ ಧ್ವನಿಗಳನ್ನೆರಪುವ ಅಬಲೆಯರ ಮಲ್ಲಾಮಲ್ಲಿ; ಹಿಂಗದೆ ಒತ್ತೊತ್ತೆಯಿಮ್ ಮೆಯ್ಯನ್ ಒತ್ತುವ ಜನದ ಜಂಗುಳಿಯ;

ಕಾಲೂರಲ್ ಅರಿದು ಎನಿಸಿ ನೆರೆದ ಹಲವಂಗದ ಅಸ್ಥಿಗಳನ್ಆಯುತ್ತ ಅವನೀಶನುಆ ಸುಡುಗಾಡನ್ ಹೊಕ್ಕನ್… ನಡೆದು ಹರಿಹರಿದು… )

ಹರಿಶ್ಚಂದ್ರ:ಎಲವೊ… ಸುಡದಿರು ಸುಡದಿರ್… ಸುಟ್ಟಡೆ, ನಿಮಗೆ ವೀರಬಾಹುಕನಾಣೆ.

(ಎಂದು ಭೂಪಾಲನು ಜಡಿಜಡಿದು ನೆಲದೆರೆಯ ಹಾಗವನ್, ಉಟ್ಟ ಕಪ್ಪಡಂಗಳನು,ತಲೆಯಕ್ಕಿಗಳನು ಸುಡುಗಾಡೊಳ್ ಅಲ್ಲಲ್ಲಿಗೆ ಎಯ್ದಿ, ಬೇಡುವ ಭರದೊಳ್ ಎಡಹುತ್ತ,

ತಾಗುತ್ತಲ್,ಎಲುಗಳಮ್ಮೆಟ್ಟಿ, ತನ್ನಡಿಗಳ್ ಅಳುಕಿತ್ತನ್ಅರಿಯದೆ ಹಾಸುಹೊಕ್ಕುಹರಿದಾಡಿದನ್. ಮತ್ತಾಗ ವಸುಧಾಧೀಶನು ಸುಡುಗಾಡ ನಟ್ಟನಡುವಣ ದಡದ

ತುತ್ತತುದಿಯೊಳುವಿಮಾನದ ಮರಂಗಳನು, ಕಡೆ ಹೊತ್ತಿ ಉರಿಕರಿಯಾದ ಕರಿಕೊಳ್ಳಿಗಳನ್ ಅರಸಿತಂದು,ಸಿದ್ದಿಗೆಯ ನುಲಿಯ ಒತ್ತಿ ಬಿಗಿಬಿಗಿದು ಹಂಜರಿಸಿ,

ತವಗವನ್ ಇಕ್ಕಿ, ಮತ್ತೆ ಮೇಲೊಂದು ತಲೆಗುಡಿಸಲಮ್ಕಟ್ಟಿ, ಇರುಳು ಹಗಲೆನ್ನದೆ ಒಡೆಯನ್ ಬೆಸಸಿದಂತೆ ಕಾಯುತ್ತಿರ್ದನ್. ವರ ವಾರಣಾಸಿ ಮಧ್ಯವೆ

ಲಾಳದೇಶ; ಅಚ್ಚರಿಯಕಾಶೀಪುರವು ಅಯೋಧ್ಯೆ; ಶ್ಮಶಾನಧರೆಯು ಅರಮನೆ; ಪ್ರೇತಗಾಹಿನ ತವಗ ಮಣಿಪೀಠ; ಪರಿಣಾಮವೆ ಆರೋಗಣೆ; ಪರಮಧೃತಿ

ಚತುರಂಗಸೇನೆ; ಸಂಬಳಿಗೋಲುಕರವಾಳು; ಸತ್ಯ ಭಂಡಾರ; ಪತಿಯಾಜ್ಞೆ ಭಾಸುರತರ ಕ್ಷತ್ರಧರ್ಮಂಗಳೆಂದೇಹರಿಶ್ಚಂದ್ರನು ಕಾಣುತಿರ್ದನು.

ತಿರುಳು: ಸುಡುಗಾಡಿನಕಾಯಕದಲ್ಲಿ ಹರಿಶ್ಚಂದ್ರ

ನಸುಕುಸಿದದೇಹ=ತುಸು ಆಯಾಸಗೊಂಡಿರುವ ಮಯ್. ಕೆಲವೇ ಗಂಟೆಗಳಲ್ಲಿ ತನ್ನ ಹೆಂಡತಿ, ಮಗ ಮತ್ತು ತಾನು ಮಾರಾಟಗೊಂಡ ಸನ್ನಿವೇಶಗಳಲ್ಲಿ ಹರಿಶ್ಚಂದ್ರನ ಮಯ್ ಮನ ಗಾಸಿಗೊಂಡು, ಅವನ ದೇಹದ ಕಸುವು ತುಸು ಉಡುಗಿದೆ;

ಕಂಕರಿ+ಕೋಲ್+ಅನ್; ಕಂಕರಿಗೋಲು=ಹೊಲೆಯನಾದವನ ಕಯ್ಯಲ್ಲಿರುವ ಕೋಲು. ಇದನ್ನು ನೋಡಿ ಮೇಲುಕುಲದವರು ಇವನು ಹೊಲೆಯನೆಂದು ತಿಳಿದು, ದೂರಸರಿಯುತ್ತಿದ್ದರು;

ಕಂಕರಿಗೋಲನ್ಇರಿದು ಕೈವಿಡದೆ ಬಾರಿಸುತ=ಕಂಕರಿ ಕೋಲನ್ನು ಬೀದಿಯಲ್ಲಿನ ನೆಲದ ಮೇಲೆ ಒಂದೇ ಸಮನೆ ಕುಟ್ಟುತ್ತ;

ಸಂಬಳಿ=“ನಾನು ಹೊಲೆಯ. ದಾರಿ ಬಿಡಿ” ಎಂದು ಮೇಲುಕುಲದವರಿಗೆ ಸೂಚನೆಯನ್ನು ಕೊಡುವ ಪದ;

ಸತ್ಯಸಂಪನ್ನನು ಸಂಬಳಿ… ಸಂಬಳಿ… ಎಂದೆಂದುಕೊಸರುತಿಹಬಾಯ್ವೆರಸಿಬೀದಿಬೀದಿಯೊಳು ಸುಳಿದನ್=ಸತ್ಯವಂತನಾದ ಹರಿಶ್ಚಂದ್ರನು “ಸಂಬಳಿ… ಸಂಬಳಿ” ಎಂದು ಎತ್ತರದ ದನಿಯಲ್ಲಿ ಕೂಗಿ ಹೇಳುತ್ತ ಕಾಶಿ ನಗರದ ಬೀದಿ ಬೀದಿಗಳಲ್ಲಿ ಜನಗಳ ಕಣ್ಣಿಗೆ ಕಾಣಿಸಿಕೊಂಡನು;

ಚಾವಡಿಹೆಣನನೆಲದೆರೆಯಹಾಗ… ಶವದಉಡಿಗೆ=ಹೆಣವನ್ನು ಸುಡುವ ನೆಲದ ತೆರಿಗೆಯಾಗಿ ಕೊಡಬೇಕಾದ ನಾಣ್ಯ ಮತ್ತು ಹೆಣದ ಮಯ್ ಮೇಲಣ ಬಟ್ಟೆಯು ನನ್ನ ಒಡೆಯನಾದ ವೀರಬಾಹುಕನಿಗೆ ಸಲ್ಲುತ್ತವೆ;

ಸುಡುಗಾಡಿನಅಧಿಕಾರಮುದ್ರೆ… ಕಟ್ಟಾಣೆ=ಸುಡುಗಾಡಿನ ಅದಿಕಾರದ ಈ ಸಂಬಳಿಗೋಲನ್ನು ಹಿಡಿದು ಹೇಳುತ್ತಿದ್ದೇನೆ. ಇದು ಕಾಶಿನಗರದ ಯಾವೊಬ್ಬ ಪ್ರಜೆಯೂ ಮೀರಬಾರದವೀರಬಾಹುಕನ ಆಜ್ನೆ;

ಹೆಣನತಲೆಯಕ್ಕಿ ಎನಗಾಯ್ತು=ಹೆಣದ ತಲೆಯ ಬಳಿ ಇಟ್ಟಿರುವ ಅಕ್ಕಿ ನನ್ನ ಪಾಲಿಗೆ ಬರುತ್ತದೆ;

ಎನ್ನಮರಹಿಕ್ಕಿ ರಾತ್ರಿಯೊಳುಸುಟ್ಟಿರಾದಡೆ=ನನ್ನ ಕಣ್ಣು ತಪ್ಪಿಸಿ ರಾತ್ರಿಯ ವೇಳೆ ಹೆಣವನ್ನು ಸುಟ್ಟಿರಾದರೆ;

ತೆರೆಯನುಕೊಡದಿರ್ದಡೆ=ತೆರಿಗೆಯನ್ನು ಕೊಡದಿದ್ದರೆ;

ಎನ್ನಾಣೆ… ಪತಿ ವೀರಬಾಹುವಿನಮಡದಿಯರಕಾಲಾಣೆ=ನನ್ನಾಣೆ… ನನ್ನ ಒಡೆಯನಾದ ವೀರಬಾಹುಕನ ಹೆಂಡತಿಯರ ಪಾದದಾಣೆ;

ಮೀರಿದಡೆಕೆಡಹಿತಡೆಗಡಿವನ್ ಎಂದುಊರೊಳಗೆಸಾರುತ್ತ… ತೋರುತ್ತ… ರುದ್ರಭೂಮಿಗೆನಡೆದನು=ಯಾರಾದರೂ ಹೆಣವನ್ನು ಸುಡುಗಾಡಿಗೆ ತಂದಾಗ, ಈ ಕಟ್ಟುಪಾಡುಗಳನ್ನು ಮೀರಿದರೆ, ಅವರನ್ನು ಕೆಳಕ್ಕೆ ಬೀಳಿಸಿ ಅಡ್ಡಗಟ್ಟಿ ತಡೆಯುತ್ತೇನೆ ಎಂದು ಕಾಶಿನಗರದಲ್ಲಿ ಸಾರುತ್ತ, ತನ್ನ ಅದಿಕಾರದ ಗುರುತನ್ನು ತೋರಿಸುತ್ತ, ಸುಡುಗಾಡಿಗೆ ಬಂದನು;

ಸುಡುಗಾಡಿನ ಉದ್ದಗಲದಲ್ಲಿ ಕಂಡುಬರುತ್ತಿರುವ ನೋಟಗಳನ್ನು ಇನ್ನು ಮುಂದಿನ ನುಡಿಗಳಲ್ಲಿ ಚಿತ್ರಿಸಲಾಗಿದೆ;

ಕಂಗೆಭಯವೆನೆ ಬೇವ ಹೆಣನಹಿಂಡುಗಳ=ಸುಡುಗಾಡಿನ ಉದ್ದಗಲದಲ್ಲಿನೋಡುವ ಕಣ್ಣುಗಳಿಗೆ ಹೆದರಿಕೆಯನ್ನುಂಟುಮಾಡುವಂತೆ ಉರಿಯುತ್ತಿರುವ ಚಿತೆಗಳಲ್ಲಿ ಬೇಯುತ್ತಿರುವ ಹೆಣಗಳ;

ಮೂಗಿಂಗೆಹಗೆಯೆನೆ ಕವಿವಕರ್ಬೊಗೆಯ ಕೌರ=ಮೂಗಿಗೆ ಹಗೆಯೆನ್ನುವಂತೆ ಅಂದರೆ ಉಸಿರು ಕಟ್ಟುವಂತೆ ಆವರಿಸುತ್ತಿರುವ ಕಪ್ಪನೆಯ ಹೊಗೆಯೊಡನೆ ಬೆರೆತಿರುವ ಹೆಣಗಳ ಸುಟ್ಟವಾಸನೆಯ ಕಮರು;

ಕರ್ಣಂಗಳಿಗೆಅಮಂಗಲಧ್ವನಿಗಳನ್ನೆರಪುವಅಬಲೆಯರ ಮಲ್ಲಾಮಲ್ಲಿ=ಕಿವಿಗಳಿಗೆ ಸಂಕಟದ ದನಿಗಳನ್ನು ಆಲಿಸುವಂತೆ ಮಾಡುತ್ತಿರುವ ಹೆಂಗಸರ ಗೋಳಾಟ;

ಹಿಂಗದೆಒತ್ತೊತ್ತೆಯಿಮ್ಮೆಯ್ಯನ್ಒತ್ತುವಜನದ ಜಂಗುಳಿಯ=ಹಿಂದಕ್ಕೆ ಸರಿಯದೆ ಗುಂಪುಗುಂಪಾಗಿ ಒಬ್ಬರು ಮತ್ತೊಬ್ಬರನ್ನು ಒತ್ತರಿಸಿಕೊಂಡು ನುಗ್ಗುತ್ತಿರುವ ಜನರ ಗುಂಪಿನ;

ಕಾಲೂರಲ್ ಅರಿದು ಎನಿಸಿ=ಸುಡುಗಾಡಿನಲ್ಲಿ ನೆರೆದಿರುವ ಜನಗಳ ಗುಂಪಿನನಡುವೆ ಹರಿಶ್ಚಂದ್ರನು ಕಾಲಿಡಲು ಜಾಗವಿಲ್ಲದೆ;

ನೆರೆದ ಹಲವಂಗದಅಸ್ಥಿಗಳನ್ಆಯುತ್ತಅವನೀಶನು ಆ ಸುಡುಗಾಡನ್ಹೊಕ್ಕನ್ =ಹರಿಶ್ಚಂದ್ರನು ನೆಲದ ಮೇಲೆ ಹರಡಿಕೊಂಡಿದ್ದ ಹಲವು ದೇಹಗಳ ಮೂಳೆಗಳನ್ನು ಆಯ್ದು, ತಾನು ಹೋಗಲು ದಾರಿಯನ್ನು ಮಾಡಿಕೊಳ್ಳುತ್ತ, ಸುಡುಗಾಡಿನ ಒಳಕ್ಕೆ ಬಂದನು;

ನಡೆದು ಹರಿಹರಿದು=ಸುಡುಗಾಡಿನ ಎಲ್ಲೆಡೆಯಲ್ಲಿಯೂ ಬಿರುಸಾಗಿ ಓಡಾಡುತ್ತ;

ಎಲವೊ… ಸುಡದಿರುಸುಡದಿರ್… ಸುಟ್ಟಡೆ, ನಿಮಗೆವೀರಬಾಹುಕನಾಣೆ ಎಂದುಭೂಪಾಲನುಜಡಿಜಡಿದು=ಎಲವೊ… ಸುಡಬೇಡಿ… ಸುಡಬೇಡಿ… ತೆರಿಗೆಯನ್ನು ಕೊಡದೆ ನೀವು ಸುಟ್ಟರೆ ನಿಮಗೆ ವೀರಬಾಹುಕನ ಆಜ್ನೆಯಂತೆ ಹೆಣವನ್ನು ಸುಡುವುದಕ್ಕೆ ನಾನು ಬಿಡುವುದಿಲ್ಲ ಎಂದು ಅಬ್ಬರಿಸಿ ಗದರಿಸುತ್ತ;

ನೆಲದೆರೆಯ ಹಾಗವನ್=ಸುಡುಗಾಡಿನ ನೆಲದ ತೆರಿಗೆಯ ನಾಣ್ಯವನ್ನು;

ಉಟ್ಟಕಪ್ಪಡಂಗಳನು= ಹೆಣಕ್ಕೆ ತೊಡಿಸಿದ್ದ ಬಟ್ಟೆಗಳನ್ನು;

ತಲೆಯಕ್ಕಿಗಳನು=ಹೆಣದ ತಲೆಯ ಬಳಿ ಇಟ್ಟಿದ್ದ ಅಕ್ಕಿಯನ್ನು;

ಸುಡುಗಾಡೊಳ್ಅಲ್ಲಲ್ಲಿಗೆಎಯ್ದಿ, ಬೇಡುವ ಭರದೊಳ್=ಸುಡುಗಾಡಿನಲ್ಲಿ ಎಲ್ಲೆಡೆಯಲ್ಲಿಯೂ ನುಗ್ಗಿ ಹೋಗಿ, ತೆರಿಗೆಯ ನಾಣ್ಯ ಮತ್ತು ವಸ್ತುಗಳನ್ನು ಕೇಳಿ ಪಡೆಯುವ ಆತುರದಲ್ಲಿ;

ಎಡಹುತ್ತ . ತಾಗುತ್ತಲ್,ಎಲುಗಳಮ್ಮೆಟ್ಟಿ, ತನ್ನಡಿಗಳ್ಅಳುಕಿತ್ತನ್ಅರಿಯದೆಹಾಸುಹೊಕ್ಕುಹರಿದಾಡಿದನ್=ಎಡವಿ ಬೀಳುತ್ತ… ಅಲ್ಲಲ್ಲಿ ಬಿದ್ದಿದ್ದ ಮೂಳೆಗಳ ಮೇಲೆ ಕಾಲಿಟ್ಟಾಗ ಮೊನಚಾದ ಕೆಲವು ಮೂಳೆಗಳು ಪಾದಕ್ಕೆ ಚುಚ್ಚಿಕೊಂಡು ಉಂಟಾದ ನೋವನ್ನು ಲೆಕ್ಕಿಸದೆ, ಸುಡುಗಾಡಿನ ಉದ್ದಗಲದಲ್ಲಿ ಒಂದೇ ಸಮನೆ ಸುತ್ತಾಡಿದನು;

ಮತ್ತಾಗ ವಸುಧಾಧೀಶನು=ಈ ರೀತಿ ವೀರಬಾಹುಕನ ಆಜ್ನೆಯಂತೆ ಸುಡುಗಾಡಿಗೆ ಹೆಣಗಳನ್ನು ಒಪ್ಪಮಾಡಲೆಂದು ತಂದಿದ್ದವರಿಂದ ತೆರಿಗೆಯನ್ನು ವಸೂಲು ಮಾಡಿದ ನಂತರ ಹರಿಶ್ಚಂದ್ರನು ಈಗ ತನ್ನ ವಾಸಕ್ಕೆ ಒಂದು ಗುಡಿಸಲನ್ನು ಕಟ್ಟಿಕೊಳ್ಳಲು ತೊಡಗುತ್ತಾನೆ;

ಸುಡುಗಾಡ ನಟ್ಟನಡುವಣ ದಡದ ತುತ್ತತುದಿಯೊಳು=ಸುಡುಗಾಡಿನ ನಟ್ಟನಡುವೆಯಿದ್ದಎತ್ತರದ ದಿಣ್ಣೆಯ ಮೇಲೆ; ವಿಮಾನ=ಹೆಣವನ್ನು ಸಾಗಿಸುವ ಚಟ್ಟ;

ವಿಮಾನದಮರಂಗಳನು=ಹೆಣವನ್ನು ಹೊತ್ತುತಂದ ಚಟ್ಟಕ್ಕೆ ಕಟ್ಟಿದ್ದ ಮರದ ತುಂಡುಗಳನ್ನು;

ಕಡೆಹೊತ್ತಿಉರಿಕರಿಯಾದಕರಿಕೊಳ್ಳಿಗಳನ್ಅರಸಿತಂದು=ಒಂದು ಕಡೆ ಉರಿದು ಕರಿಕಲಾಗಿ ಅರೆಬೆಂದು ಉಳಿದಿದ್ದ ಸವುದೆಯ ತುಂಡುಗಳನ್ನು ಹುಡುಕಿ ತಂದು; ಸಿದ್ದಿಗೆ=ಹೆಣವನ್ನು ಹೊತ್ತುಕೊಂಡು ಬರಲು ಕಟ್ಟಿರುವ ಚಟ್ಟ;

ಸಿದ್ದಿಗೆಯನುಲಿಯಒತ್ತಿಬಿಗಿಬಿಗಿದುಹಂಜರಿಸಿ=ಚಟ್ಟವನ್ನು ಕಟ್ಟಲು ಬಳಸಿದ್ದ ಹಗ್ಗವನ್ನು ತಂದು, ಅದನ್ನು ಮರದ ತುಂಡುಗಳಿಗೆ ಒತ್ತಿ ಬಿಗಿಬಿಗಿದು ತಡಿಕೆಯನ್ನು ಬಿಗಿದು;

ತವಗವನ್ಇಕ್ಕಿ=ಜಗಲಿಯನ್ನುಕಟ್ಟಿ;

ಮತ್ತೆಮೇಲೊಂದುತಲೆಗುಡಿಸಲಮ್ಕಟ್ಟಿ=ಮತ್ತೆ ಅದರ ಮೇಲೊಂದು ವಾಸಿಸಲು ಅನುಕೂಲವಾಗುವಂತೆಗುಡಿಸಲನ್ನು ಕಟ್ಟಿ;

ಇರುಳುಹಗಲೆನ್ನದೆಒಡೆಯನ್ಬೆಸಸಿದಂತೆಕಾಯುತ್ತಿರ್ದನ್=ರಾತ್ರಿ ಹಗಲು ಎನ್ನದೆ ಒಡೆಯನಾದ ವೀರಬಾಹುಕನ ಆಜ್ನೆಯಂತೆ ಹರಿಶ್ಚಂದ್ರನು ಸುಡುಗಾಡನ್ನು ಕಾಯುತ್ತಿದ್ದನು; ಹರಿಶ್ಚಂದ್ರನು ಕಾಶಿ ನಗರದಲ್ಲಿವಾಸಿಸುತ್ತ, ತನ್ನ ಹಿಂದಿನ ರಾಜ ಸಂಪತ್ತೆಲ್ಲವನ್ನೂ ಸುಡುಗಾಡಿನ ಬದುಕಿನಲ್ಲಿಯೇ ಕಾಣುತ್ತಿದ್ದಾನೆ;

ವರ ವಾರಣಾಸಿಮಧ್ಯವೆಲಾಳದೇಶ=ಉತ್ತಮವಾದ ವಾರಣಾಸಿಯ ನಡುವೆಯಿದ್ದ ಸುಡುಗಾಡೇಲಾಳದೇಶ;

ಅಚ್ಚರಿಯಕಾಶೀಪುರವುಅಯೋಧ್ಯೆ=ಅಂದಚೆಂದದಿಂದ ಕೂಡಿ ನೋಡುವ ಕಣ್ಮನಗಳಿಗೆ ಅಚ್ಚರಿಯನ್ನುಂಟುಮಾಡುವ ಕಾಶಿ ಪುರವೇ ರಾಜದಾನಿಯಾದ ಅಯೋದ್ಯೆ;

ಶ್ಮಶಾನಧರೆಯುಅರಮನೆ=ಸುಡುಗಾಡಿನ ನೆಲವೇ ಅರಮನೆಯ ಬೀಡು;

ಪ್ರೇತಗಾಹಿನತವಗ ಮಣಿಪೀಠ=ಸುಡುಗಾಡಿನ ಕಾವಲಿಗೆಂದು ಕಟ್ಟಿಕೊಂಡಿರುವ ಜಗಲಿಯೇ ರತ್ನ ವಜ್ರಗಳಿಂದ ಕೂಡಿರುವ ಸಿಂಹಾಸನ;

ಪರಿಣಾಮವೆ ಆರೋಗಣೆ=ಸುಡುಗಾಡಿನಲ್ಲಿ ತನ್ಮಯತೆಯಿಂದ ಮಾಡುತ್ತಿರುವ ಕೆಲಸಗಳೇ ಒಳ್ಳೆಯ ಊಟ;

ಪರಮಧೃತಿ ಚತುರಂಗಸೇನೆ=ಆಪತ್ತಿಗೆ ಮತ್ತು ಅಪಮಾನಕ್ಕೆ ಅಂಜದ ಕೆಚ್ಚಿನ ನಡೆನುಡಿಯೇ ಚತುರಂಗ ಸೇನೆ;

ಸಂಬಳಿಗೋಲು ಕರವಾಳು=ಕಯ್ಯಲ್ಲಿ ಹಿಡಿದಿರುವ ಸಂಬಳಿಗೋಲೇ ಕತ್ತಿ;

ಸತ್ಯ ಭಂಡಾರ=ಸತ್ಯದ ವ್ಯಕ್ತಿತ್ವವೇ ಒಡವೆವಸ್ತುಗಳಿಂದ ತುಂಬಿರುವ ಬೊಕ್ಕಸ;

ಪತಿಯಾಜ್ಞೆ ಭಾಸುರತರ ಕ್ಷತ್ರಧರ್ಮಂಗಳೆಂದೇ ಹರಿಶ್ಚಂದ್ರನು ಕಾಣುತಿರ್ದನು=ಒಡೆಯನಾದ ವೀರಬಾಹುಕನ ಆಜ್ನೆಯನ್ನು ಚೆನ್ನಾಗಿ ಪಾಲಿಸುತ್ತಿರುವುದೇ ತೇಜಸ್ಸಿನಿಂದ ಕಂಗೊಳಿಸುವ ಕ್ಶತ್ರಿಯ ದರ್‍ಮದ ಪರಿಪಾಲನೆಯೆಂದು ಹರಿಶ್ಚಂದ್ರನು ಸುಡುಗಾಡಿನ ಬದುಕಿನಲ್ಲಿಯೇ ರಾಜತನದ ಸಿರಿಸಂಪದವೆಲ್ಲವನ್ನೂ ಕಾಣುತ್ತಿದ್ದನು;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *