ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 21ನೆಯ ಕಂತು: ಲೋಹಿತಾಶ್ವನ ಮರಣದ ಸುದ್ದಿಯಿಂದ ಕಂಗಾಲಾದ ಚಂದ್ರಮತಿ

ಸಿ.ಪಿ.ನಾಗರಾಜ.

*** ಪ್ರಸಂಗ-21: ಲೋಹಿತಾಶ್ವನ ಮರಣದ ಸುದ್ದಿಯಿಂದ ಕಂಗಾಲಾದ ಚಂದ್ರಮತಿ ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಲೋಹಿತಾಶ್ವನ ಮರಣ, ಚಂದ್ರಮತಿಯ ದುಃಖ’ ಎಂಬ ಎಂಟನೆಯ ಅದ್ಯಾಯದ 9 ರಿಂದ 15 ನೆಯ ಪದ್ಯದವರೆಗಿನ ಏಳು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು:

ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ. ಲೋಹಿತಾಶ್ವನ ತಾಯಿ.
ಹುಡುಗ:
ಲೋಹಿತಾಶ್ವನ ಜತೆಗಾರ.
ವಿಪ್ರ:
ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಕೊಂಡುಕೊಂಡು ತನ್ನ ಮನೆಯ ಸೇವಕರನ್ನಾಗಿ ಮಾಡಿಕೊಂಡಿರುವ ಅಗ್ನಿದೇವ. ವಿಶ್ವಾಮಿತ್ರನ ಕೋರಿಕೆಯಂತೆ ದೇವಲೋಕದ ಅಗ್ನಿದೇವನು ಬ್ರಾಹ್ಮಣನ ವೇಶದಲ್ಲಿ ಕಾಶಿನಗರಕ್ಕೆ ಬಂದಿದ್ದಾನೆ;

*** ಪ್ರಸಂಗ-21: ಲೋಹಿತಾಶ್ವನ ಮರಣದ ಸುದ್ದಿಯಿಂದ ಕಂಗಾಲಾದ ಚಂದ್ರಮತಿ ***

ತನಯನ್ ಎಂದುಮ್ ಬಪ್ಪ ಹೊತ್ತಿಂಗೆ ಬಾರದಿರೆ, ಮನನೊಂದು…

ಚಂದ್ರಮತಿ: ಎನ್ನ ಕಂದನ್ ಇದೇಕೆ ತಳುವಿದನ್.

(ಎಂದೆನುತ, ಸುಯ್ಯುತ್ತ, ಮರುಗುತ್ತ, ಬಸುರಮ್ ಹೊಸೆದು, ಕೊನೆವೆರಳ ಮುರಿದುಕೊಳುತ, ತನುವ ಮರೆದು ಅಡಿಗಡಿಗೆ ಹೊರಗನ್ ಆಲಿಸಿ, ಮತ್ತೆ ಮನೆಯೊಡತಿಗೆ ಅಂಜಿ, ಕೆಲಸವನು ಮಾಡುತಿಪ್ಪ ವನಿತೆಗಾದ ಆಪತ್ತನ್ ಆಲಿಸದೆ ಕೆಟ್ಟು ದಟ್ಟಿಸುವರ್. ಅದನ್ ಏನೆಂಬೆನು. ಒಳಗೆ ಉಡಿದ ನಾರಾಚದ ಏರಿನಂದದಿ; ಹೊರಗ ಬಳಸದೆ ಒಳಗೊಳಗೆ ಏಗುವ ಆವಗೆಯ ಶಿಖಿಯಂತೆ; ಕೆಳೆಗೊಂಡ ಹಗೆಗಳ ಒಳಗಣ ಮುಳಿಸಿನ ಅಂದದಿಮ್ ಮನೆಯವರ ಮಾರಿಗಂಜಿ…ಬಳಸಿ ಬಿರಿವ ಎದೆ…ಬಿಕ್ಕುವ ಅಳ್ಳೆ…ಕಣ್ಗಳೊಳ್ ಒರೆವ ಜಲ…ಸೆರೆಗಳ್ ಒಡೆದು ಉಬ್ಬಿ ಬಿಗಿದು ಗಂಟಲಿನ ಮುಕ್ಕುಳಿಸಿದ ಅಕ್ಕೆಗಳ್ ಎಸೆವ ಸತಿಯ ಅಳಲು ಸೀಗೆಯೊಳಗಣ ಬಾಳೆಗೆ ಎಣೆಯಾದುದು.)

ಚಂದ್ರಮತಿ: ಅಡವಿಯೊಳು ಹೊಲಬುಗೆಟ್ಟನೋ…ಗಿಡುವಿನೊಳಗೆ ಹುಲಿ ಹಿಡಿದುದೋ…ಕಳ್ಳರ್ ಒಯ್ದರೊ…ಭೂತ ಸಂಕುಲಮ್ ಹೊಡೆದುವೋ… ನೀರೊಳ್ ಅದ್ದನೋ…ಮರದ ಕೊಂಬೆ ಏರಿ ಬಿದ್ದನೋ…ಫಣಿ ತಿಂದುದೋ…ಕಡು ಹಸಿದು ನಡೆಗೆಟ್ಟು ನಿಂದನೋ…

(ಎಂದು ಇಂತು ಮಡದಿ ಹಲವಮ್ ಹಲಬುತ ಅಂಗಣದೊಳಿರೆ, ಹೊತ್ತಿ ಹೊಡಕರಿಸಿದ ಅಳಲ ಕರ್ಬೊಗೆಯಂತೆ ಕವಿವ ಕತ್ತಲೆಯೊಳಗೆ ನಿಂದಿರ್ದಳು. ಬಂದರಮ್ “ಲೋಹಿತಾಶ್ವಾ” ಎಂದು…ಬಟ್ಟೆಯೊಳು ನಿಂದರಮ್ “ಲೋಹಿತಾಶ್ವಾ” ಎಂದು… ಗಾಳಿ ಗಿರಿಕ್ ಎಂದಡಮ್ “ಲೋಹಿತಾಶ್ವಾ” ಎಂದು…ಕರೆಕರೆದು ಬಿಡೆ ಬೀದಿ ಕರುವಿನಂತೆ ಮಂದಮತಿಯಾಗಿರ್ದ ಚಂದ್ರಮತಿಗೆ ಒಬ್ಬನ್ ಎಯ್ತಂದು…)

ಒಬ್ಬ ಹುಡುಗ: ಇಂದು ಕೂಡೆ ಹೋಗಿರ್ದು ಕಂಡೆನ್… ನಿನ್ನ ಕಂದನ ಒಂದು ಉಗ್ರಫಣಿ ತಿಂದು ಜೀವಮ್ ಕಳೆದನ್.

(ಎಂದು ಹೇಳಿದನ್. ಆಗಳು…)

ಚಂದ್ರಮತಿ: ಅಕ್ಕಟಾ, ಏಕೆ ಕಚ್ಚಿತ್ತು…ಆವ ಕಡೆ…ಆವ ಹೊಲನ್… ಕುಮಾರನ್ ಮಡಿದ ಠಾವು ಎನಿತು ದೂರ.

ಹುಡುಗ: ಈ ಕಡೆಯೊಳ್…ಈ ಹೊಲದೊಳ್…ಈ ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ ನೂಕಿ, ಫಣಿ ಅಗಿಯೆ ಕೆಡೆದನ್. ದೂರವಲ್ಲಲ್ಲ… ಬೇಕಾದಡೆ ಈಗ ಹೋಗು. ಕೇಳ್, ಅಲ್ಲದಿರ್ದಡೆ ಬಳಿಕ ಅನೇಕ ಭಲ್ಲುಕ, ಜಂಬುಕಮ್, ಘೂಕ, ವೃಕಗಳ್ ಎಳೆಯದೆ ಬಿಡವು.

(ಎಂದನು. ನುಡಿಯಲ್ ಅರಿದು ಎನಿಸಿ, ಮೇರೆಯ ಮೀರುವ ಅಳಲನ್ ಅಳವಡಿಸಿ ಬಂದು ಒಡೆಯನ ಅಡಿಗಳ ಮೇಲೆ ಕೆಡೆದು ಬಾಯ್ವಿಡುತ…)

ಚಂದ್ರಮತಿ: ಅರಣ್ಯದೊಳ್ ಎನ್ನ ಮಗನ್ ಉಗ್ರ ಕಾಳೋರಗಮ್ ಕಚ್ಚಿ ಮಡಿದನ್.

(ಎಂದು ನುಡಿಯೆ)

ವಿಪ್ರ: ಲೇಸಾಯ್ತು. ಮಡಿದರೆ ಮಡಿದನ್.

(ಎಂದು ಕೆಡೆ ನುಡಿಯೆ)

ಚಂದ್ರಮತಿ: ಬಂಟರನು ಕೊಟ್ಟು, ಅರಿಸಿಸೈ ತಂದೆ.

ವಿಪ್ರ: ನಡುವಿರುಳು ಬಂಟರುಂಟೇ… ನಿದ್ದೆಗೆಯ್ಯಬೇಕು…ಏಳು…ಕಾಡದಿರ್.

ಚಂದ್ರಮತಿ: ನರಿಗಳ್ ಎಳೆಯದ ಮುನ್ನ ದಹಿಸಬೇಡವೆ ತಂದೆ, ಕರುಣಿಸು.

ವಿಪ್ರ: ದುರ್ಮರಣ ಪಟ್ಟ ಶೂದ್ರನನು ಸಂಸ್ಕರಿಸುವವರ್ ಆವಲ್ಲ.

(ಎಂದು ಎನಲ್ಕೆ…)

ಚಂದ್ರಮತಿ: ಆನಾದಡಮ್ ಹೋಗಿ ಕಂಡು ಮಗನ ಉರಿಗಿತ್ತು ಬಪ್ಪೆನೇ.

ವಿಪ್ರ: ಕೆಲಸಮನ್ ಬಿಟ್ಟು ಹರಿಯದೆ, ಇರ್ದುದನ್ ಎಯ್ದೆ ಗೆಯ್ದು ಹೋಗು.

(ಎನಲು, ಚಚ್ಚರಿದಿ ಮಾಡುವ ಕಜ್ಜವೆಲ್ಲವಮ್ ಮಾಡಿ, ಒಯ್ಯನೆ ಮನೆಯನು ಹೊರವಂಟಳ್.)

ತಿರುಳು: ಲೋಹಿತಾಶ್ವನ ಮರಣದ ಸುದ್ದಿಯಿಂದ ಕಂಗಾಲಾದ ಚಂದ್ರಮತಿ

ತನಯನ್ ಎಂದುಮ್ ಬಪ್ಪ ಹೊತ್ತಿಂಗೆ ಬಾರದಿರೆ ಮನನೊಂದು=ಹುಲ್ಲು ಮತ್ತು ಪುಳ್ಳೆಯನ್ನು ತರಲೆಂದು ಪ್ರತಿ ದಿನ ಕಾಡಿಗೆ ಹೋಗಿ ಬರುತ್ತಿದ್ದ ಲೋಹಿತಾಶ್ವನು ಹಿಂತಿರುಗಿ ಬರುವ ವೇಳೆಯಾಗಿದ್ದರೂ, ಇಂದು ಬಾರದಿರುವುದನ್ನು ಕಂಡು ಚಂದ್ರಮತಿಯು ಮನದಲ್ಲಿ ತುಂಬಾ ಆತಂಕಗೊಂಡು;

ಎನ್ನ ಕಂದನ್ ಇದೇಕೆ ತಳುವಿದನ್ ಎಂದೆನುತ=ನನ್ನ ಕಂದನು ಇದೇಕೆ ತಡಮಾಡಿದನು ಎಂದು ತನಗೆ ತಾನೆ ಹೇಳಿಕೊಳ್ಳುತ್ತ;

ಸುಯ್ಯುತ್ತ, ಮರುಗುತ್ತ, ಬಸುರಮ್ ಹೊಸೆದು, ಕೊನೆವೆರಳ ಮುರಿದುಕೊಳುತ=ಸಂಕಟ ಹೆಚ್ಚಾಗುತ್ತಿರಲು ನಿಟ್ಟುಸಿರನ್ನು ಬಿಡುತ್ತ, ಕೊರಗುತ್ತ, ಹೊಟ್ಟೆಯಲ್ಲಿನ ಉರಿಯನ್ನು ತಡೆಯಲಾರದೆ ಹೊಟ್ಟೆಯನ್ನು ಹಿಸುಕಿಕೊಳ್ಳುತ್ತ, ಉದ್ವೇಗವನ್ನು ಹತ್ತಿಕ್ಕಿಕೊಳ್ಳಲೆಂದು ಕಿರುಬೆರಳನ್ನು ಒತ್ತೊತ್ತಿ ಹಿಡಿದುಕೊಳ್ಳುತ್ತ;

ತನುವ ಮರೆದು ಅಡಿಗಡಿಗೆ ಹೊರಗನ್ ಆಲಿಸಿ=ತನ್ನನ್ನೇ ತಾನು ಮರೆತು, ಪದೇ ಪದೇ ಮನೆಯ ಹೊರಗಡೆಯಿಂದ ಕೇಳಿಬರುವ ಶಬ್ದವನ್ನು ಆಲಿಸುತ್ತ;

ಮತ್ತೆ ಮನೆಯೊಡತಿಗೆ ಅಂಜಿ=ಹೊರಕ್ಕೆ ಹೋಗಲಾಗದೆ ಮನೆಯ ಯಜಮಾನಿಗೆ ಹೆದರಿಕೊಂಡು;

ಕೆಲಸವನು ಮಾಡುತಿಪ್ಪ ವನಿತೆಗಾದ ಆಪತ್ತನ್ ಆಲಿಸದೆ ಕೆಟ್ಟು ದಟ್ಟಿಸುವರ್=ಕೆಲಸವನ್ನು ಮಾಡುತ್ತಿರುವ ಚಂದ್ರಮತಿಗೆ ಬಂದೊದಗಿದ ತೊಂದರೆಯನ್ನು ಬ್ರಾಹ್ಮಣನ ಮನೆಯವರು ಮನಗೊಟ್ಟು ಕೇಳದೆ, ಕೆಟ್ಟ ನುಡಿಗಳನ್ನಾಡಿ ಚಂದ್ರಮತಿಯನ್ನೇ ಗದರಿಸಿ ಮೂದಲಿಸುತ್ತಿರುವರು;

ಅದನ್ ಏನೆಂಬೆನು=ಚಂದ್ರಮತಿಯ ಸಂಕಟವನ್ನು ಮತ್ತು ಮನೆಯೊಡೆಯರ ಕರುಣೆಯಿಲ್ಲದ ಕೆಟ್ಟ ನಡೆನುಡಿಯನ್ನು ಏನೆಂದು ತಾನೆ ವಿವರಿಸಲಿ ಎಂದು ಕವಿಯು ಉದ್ಗರಿಸುತ್ತಿದ್ದಾನೆ; ಈ ಸನ್ನಿವೇಶದಲ್ಲಿ ಚಂದ್ರಮತಿಯ ಮಯ್ ಮನದಲ್ಲಿ ಉಂಟಾದ ಸಂಕಟದ ತೀವ್ರತೆಯನ್ನು ಕವಿಯು ರೂಪಕಗಳ ಮೂಲಕ ಚಿತ್ರಿಸಿದ್ದಾನೆ;

ಒಳಗೆ ಉಡಿದ ನಾರಾಚದ ಏರಿನಂದದಿ=ಹಗೆಯು ಬಿಟ್ಟ ಬಾಣವು ದೇಹದೊಳಗೆ ತುಂಡಾಗಿ ಸೇರಿಕೊಂಡಾಗ ಉಂಟಾದ ಗಾಯದಂತೆ; ಆವಗೆ=ಹಸಿ ಮಣ್ಣಿನಿಂದ ತಯಾರಿಸಿದ ಹೆಂಚು, ಮಡಕೆ ಮುಂತಾದ ಸಾಮಗ್ರಿಗಳನ್ನು ಸುಡುವ ಕುಂಬಾರನ ಒಲೆ;

ಹೊರಗ ಬಳಸದೆ ಒಳಗೊಳಗೆ ಏಗುವ ಆವಗೆಯ ಶಿಖಿಯಂತೆ=ಕುಂಬಾರನ ಆವಗೆಯ ಬೆಂಕಿಯು ಹೊರಕ್ಕೆ ಕಾಣಿಸಿಕೊಳ್ಳದೆ, ಒಳಗೊಳಗೆ ಕವರಿಕೊಂಡು ಉರಿಯುತ್ತಿರುವ ಬೆಂಕಿಯಂತೆ;

ಕೆಳೆಗೊಂಡ ಹಗೆಗಳ ಒಳಗಣ ಮುಳಿಸಿನ ಅಂದದಿಮ್=ಮೇಲುನೋಟಕ್ಕೆ ಗೆಳೆಯರಂತೆ ಕಂಡುಬಂದರೂ ಮನದಲ್ಲಿ ಕೋಪವನ್ನು ಹೊಂದಿರುವ ಹಗೆಗಳಂತೆ;

ಮನೆಯವರ ಮಾರಿಗಂಜಿ=ಬ್ರಾಹ್ಮಣನ ಮನೆಯವರ ಕಿರುಕುಳ ಮತ್ತು ಹಿಂಸೆಗೆ ಹೆದರಿಕೊಂಡು;

ಬಳಸಿ ಬಿರಿವ ಎದೆ=ಒಳಗೊಳಗೆ ಬಿರಿಯುವ ಎದೆ. ಅಂದರೆ ಹೇಳಲಾಗದ ನೋವಿನಿಂದ ಮನಸ್ಸು ಪರಿತಪಿಸುತ್ತಿದೆ;

ಬಿಕ್ಕುವ ಅಳ್ಳೆ=ಸಂಕಟದ ತೀವ್ರತೆಯಿಂದ ಏದುಸಿರು ಬಿಡುವಾಗ ಏರಿಳಿತಕ್ಕೆ ಒಳಗಾಗುವ ಪಕ್ಕೆಗಳು;

ಕಣ್ಗಳೊಳ್ ಒರೆವ ಜಲ=ಕಣ್ಣುಗಳಿಂದ ಒತ್ತಿಬರುತ್ತಿರುವ ನೀರು;

ಗಂಟಲಿನ ಸೆರೆಗಳ್ ಒಡೆದು ಉಬ್ಬಿ ಬಿಗಿದು=ಗಂಟಲಿನ ನರಗಳು ಎದ್ದು ಕಾಣುವಂತೆ ಉಬ್ಬಿ ಬಿಗಿದುಕೊಂಡು;

ಮುಕ್ಕುಳಿಸಿದ ಅಕ್ಕೆಗಳ್ ಎಸೆವ ಸತಿಯ ಅಳಲು=ಹೊರಹೊಮ್ಮಿದ ಮೂಕ ರೋದನದಿಂದ ಪರಿತಪಿಸುತ್ತಿರುವ ಚಂದ್ರಮತಿಯ ಸಂಕಟವು;

ಸೀಗೆಯೊಳಗಣ ಬಾಳೆಗೆ ಎಣೆಯಾದುದು=ಸೀಗೆಯ ಮೆಳೆಯ ಒಳಗೆ ಸಿಲುಕಿರುವ ಬಾಳೆಯ ಗಿಡದಂತಾಯಿತು; ಅಂದರೆ ಸೀಗೆಯ ಮೆಳೆಯ ಮುಳ್ಳುಗಳಿಗೆ ಸಿಲುಕಿದ ಬಾಳೆಯ ಎಲೆಗಳು ಹರಿದುಹೋಗುತ್ತವೆ. ಅಂತೆಯೇ ಬ್ರಾಹ್ಮಣನ ಮನೆಯವರ ಕಿರುಕುಳ ಮತ್ತು ಹಿಂಸೆಯಿಂದ ಚಂದ್ರಮತಿಯು ನಿರಂತರವಾಗಿ ನೋಯುತ್ತಿದ್ದಾಳೆ ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ;

ಅಡವಿಯೊಳು ಹೊಲಬುಗೆಟ್ಟನೋ=ಕಾಡಿಗೆ ಹೋಗಿಬರುವಾಗ ದಾರಿ ತಪ್ಪಿದನೋ;

ಗಿಡುವಿನೊಳಗೆ ಹುಲಿ ಹಿಡಿದುದೋ=ಕಾಡಿನ ಮರಗಿಡಗಳ ಮರೆಯಲ್ಲಿದ್ದ ಹುಲಿಯು ಹಿಡಿಯಿತೋ;

ಕಳ್ಳರ್ ಒಯ್ದರೊ=ಕಳ್ಳರು ಹಿಡಿದುಕೊಂಡು ಹೋದರೋ;

ಭೂತ ಸಂಕುಲಮ್ ಹೊಡೆದುವೋ=ದೆವ್ವಗಳ ಗುಂಪು ಬಲಿತೆಗೆದುಕೊಂಡವೋ;

ನೀರೊಳ್ ಅದ್ದನೋ=ನೀರಿನಲ್ಲಿ ಮುಳುಗಿದನೋ;

ಮರದ ಕೊಂಬೆ ಏರಿ ಬಿದ್ದನೋ=ಮರದ ಕೊಂಬೆಯನ್ನೇರಿ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದನೋ;

ಫಣಿ ತಿಂದುದೋ=ಹಾವು ಕಚ್ಚಿತೋ;

ಕಡುಹಸಿದು ನಡೆಗೆಟ್ಟು ನಿಂದನೋ ಎಂದು ಇಂತು ಮಡದಿ ಹಲವಮ್ ಹಲಬುತ ಅಂಗಣದೊಳಿರೆ=ತುಂಬಾ ಹಸಿದು ಸುಸ್ತಾಗಿ ನಡೆಯಲಾಗದೆ ಎಲ್ಲಿಯಾದರೂ ನಿಂತಿರುವನೋ ಎಂದು ಚಂದ್ರಮತಿಯು ಹಲವು ರೀತಿಗಳಲ್ಲಿ ಲೋಹಿತಾಶ್ವನು ಇನ್ನೂ ಬಾರದಿರುವುದಕ್ಕೆ ಕಾರಣಗಳನ್ನು ಊಹಿಸಿಕೊಂಡು ಕಣ್ಣೀರು ಹಾಕುತ್ತ ಮನೆಯ ಮುಂದಣ ಅಂಗಳದಲ್ಲಿರಲು;

ಹೊತ್ತಿ ಹೊಡಕರಿಸಿದ ಅಳಲ ಕರ್ಬೊಗೆಯಂತೆ ಕವಿವ ಕತ್ತಲೆಯೊಳಗೆ ನಿಂದಿರ್ದಳು=ಬೆಂಕಿಯು ಹತ್ತಿಕೊಂಡು ಜ್ವಾಲೆಗಳು ಉರಿದೆದ್ದಾಗ ಆವರಿಸಿಕೊಳ್ಳುವ ದಟ್ಟನೆಯ ಕಪ್ಪಾದ ಹೊಗೆಯಂತೆ ಸಂಕಟದ ಹೊಗೆಯಲ್ಲಿ ಸಿಲುಕಿದ ಚಂದ್ರಮತಿಯು ಕವಿಯುತ್ತಿರುವ ಕತ್ತಲೆಯೊಳಗೆ ಮನೆಯ ಮುಂದಿನ ದಾರಿಯಲ್ಲಿ ಹೋಗಿಬರುವವರನ್ನು ಗಮನಿಸುತ್ತ ನಿಂತಿದ್ದಳು;

ಬಂದರಮ್ “ಲೋಹಿತಾಶ್ವಾ” ಎಂದು=ದಾರಿಯಲ್ಲಿ ಬರುತ್ತಿರುವವರನ್ನು ಕಂಡು “ಲೋಹಿತಾಶ್ವ” ಎಂದು;

ಬಟ್ಟೆಯೊಳು ನಿಂದರಮ್ “ಲೋಹಿತಾಶ್ವಾ” ಎಂದು=ದಾರಿಯಲ್ಲಿ ನಿಂತವರನ್ನು ನೋಡಿ “ಲೋಹಿತಾಶ್ವ” ಎಂದು;

ಗಾಳಿ ಗಿರಿಕ್ ಎಂದಡಮ್ “ಲೋಹಿತಾಶ್ವಾ” ಎಂದು… ಕರೆಕರೆದು=ಬೀಸುವ ಗಾಳಿ ತುಸು ದನಿಮಾಡಿದರು “ಲೋಹಿತಾಶ್ವ” ಎಂದು ಮಗನ ಹೆಸರನ್ನು ಮತ್ತೆ ಮತ್ತೆ ಕರೆಯುತ್ತ;

ಬಿಡೆ ಬೀದಿ ಕರುವಿನಂತೆ ಮಂದಮತಿಯಾಗಿರ್ದ ಚಂದ್ರಮತಿಗೆ=ಕಟ್ಟದೆ ಬಿಟ್ಟಿರುವ ಬೀದಿಯ ಕರು ತನ್ನಿಚ್ಚೆ ಬಂದ ಕಡೆ ತಿರುಗುವಂತೆ ಸಂಕಟದ ತೀವ್ರತೆಯಿಂದ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿದ್ದ ಚಂದ್ರಮತಿಗೆ;

ಒಬ್ಬನ್ ಎಯ್ತಂದು=ಒಬ್ಬ ಹುಡುಗನು ಚಂದ್ರಮತಿಯ ಬಳಿಗೆ ಬಂದು;

ಇಂದು ಕೂಡೆ ಹೋಗಿರ್ದು ಕಂಡೆನ್=ಇಂದು ಲೋಹಿತಾಶ್ವನೊಡನೆ ನಾನು ಕಾಡಿಗೆ ಹೋಗಿದ್ದು ನೋಡಿದೆನು;

ನಿನ್ನ ಕಂದನ ಒಂದು ಉಗ್ರಫಣಿ ತಿಂದು ಜೀವಮ್ ಕಳೆದನ್ ಎಂದು ಹೇಳಿದನ್=ನಿನ್ನ ಮಗನನ್ನು ಒಂದು ಬಯಂಕರವಾದ ಹಾವು ಕಚ್ಚಿ, ಅವನು ಪ್ರಾಣವನ್ನು ಬಿಟ್ಟನು ಎಂದು ಹೇಳಿದನು;

ಆಗಳು=ಆಗ ಚಂದ್ರಮತಿಯು ಆ ಹುಡುಗನನ್ನು ಕೇಳುತ್ತಾಳೆ;

ಅಕ್ಕಟಾ, ಏಕೆ ಕಚ್ಚಿತ್ತು… ಆವ ಕಡೆ… ಆವ ಹೊಲನ್… ಕುಮಾರನ್ ಮಡಿದ ಠಾವು ಎನಿತು ದೂರ=ಅಯ್ಯೋ… ಹಾವು ಏಕೆ ಕಚ್ಚಿತು… ಯಾವ ಕಡೆ ಕಚ್ಚಿತು… ಕಚ್ಚಿದ ಪ್ರದೇಶ ಯಾವುದು… ನನ್ನ ಮಗನು ಸತ್ತ ಜಾಗವು ಇಲ್ಲಿಂದ ಎಶ್ಟು ದೂರದಲ್ಲಿದೆ;

ಈ ಕಡೆಯೊಳ್… ಈ ಹೊಲದೊಳ್… ಈ ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ ನೂಕಿ, ಫಣಿ ಅಗಿಯೆ ಕೆಡೆದನ್=ಆ ಹುಡುಗನು ಒಂದು ದಿಕ್ಕಿನ ಕಡೆಗೆ ಕಯ್ಯನ್ನು ತೋರಿಸುತ್ತ “ಈ ಕಡೆಯಲ್ಲಿ… ಒಂದು ಹೊಲದಲ್ಲಿ… ಒಂದು ಮರದ ಪಕ್ಕದಲ್ಲಿದ್ದ ಹುತ್ತದ ಮೇಲೆ ಬೆಳೆದಿದ್ದ ಹುಲ್ಲನ್ನು ಕೊಯ್ದಾಗ, ಅವನ ಕಯ್ಯನ್ನು ತಳ್ಳಿ ಹಾವು ಕಚ್ಚಲು ಸತ್ತುಬಿದ್ದನು;

ದೂರವಲ್ಲಲ್ಲ… ಬೇಕಾದಡೆ ಈಗ ಹೋಗು=ಇಲ್ಲಿಂದ ಬಹಳ ದೂರವೇನಲ್ಲ. ಬೇಕಾದರೆ ಈಗಲೇ ಹೋಗು;

ಕೇಳ್, ಅಲ್ಲದಿರ್ದಡೆ ಬಳಿಕ ಅನೇಕ ಭಲ್ಲುಕ, ಜಂಬುಕಮ್, ಘೂಕ, ವೃಕಗಳ್ ಎಳೆಯದೆ ಬಿಡವು ಎಂದನು=ಕೇಳು… ರಾತ್ರಿಯಾಗಿದೆಯೆಂದು ನೀನೇದರೂ ಈಗಲೇ ಹೋಗದಿದ್ದರೆ ಕಾಡಿನಲ್ಲಿರುವ ನಾನಾ ಬಗೆಯ ಪ್ರಾಣಿಗಳಾದ ಕರಡಿ, ನರಿ, ಗೂಬೆ, ತೋಳಗಳು ಹೆಣವನ್ನು ಎಳೆದುಕೊಂಡುಹೋಗಿ ತಿನ್ನದೆ ಇರುವುದಿಲ್ಲ ಎಂದನು;

ನುಡಿಯಲ್ ಅರಿದು ಎನಿಸಿ=ತಾಯಿ ಚಂದ್ರಮತಿಯ ಎದೆಯಲ್ಲಿ ಸಂಕಟ ತುಂಬಿ ಬಂದು ಮಾತನಾಡಲಾಗದೆ;

ಮೇರೆಯ ಮೀರುವ ಅಳಲನ್ ಅಳವಡಿಸಿ ಬಂದು=ಚಂದ್ರಮತಿಯು ಅತಿ ಹೆಚ್ಚಾದ ಸಂಕಟವನ್ನು ಹತ್ತಿಕ್ಕಿಕೊಂಡು ಮನೆಯೊಳಕ್ಕೆ ಬಂದು;

ಒಡೆಯನ ಅಡಿಗಳ ಮೇಲೆ ಕೆಡೆದು ಬಾಯ್ವಿಡುತ=ಒಡೆಯನ ಪಾದಗಳ ಮೇಲೆ ಬಿದ್ದು ಅಂಗಲಾಚಿ ಬೇಡಿಕೊಳ್ಳುತ್ತ;

ಅರಣ್ಯದೊಳ್ ಎನ್ನ ಮಗನ್ ಉಗ್ರ ಕಾಳೋರಗಮ್ ಕಚ್ಚಿ ಮಡಿದನ್ ಎಂದು ನುಡಿಯೆ=ಕಾಡಿನಲ್ಲಿ ನನ್ನ ಮಗನು ಬಯಂಕರವಾದ ಕರಿಯ ಹಾವು ಕಚ್ಚಿ ಮರಣ ಹೊಂದಿದನು ಎಂದು ಹೇಳಲು;

ಲೇಸಾಯ್ತು. ಮಡಿದರೆ ಮಡಿದನ್ ಎಂದು ಕೆಡೆ ನುಡಿಯೆ=ಮನೆಯೊಡೆಯನಾದ ಬ್ರಾಹ್ಮಣನು “ಒಳ್ಳೆಯದಾಯ್ತು. ಸತ್ತರೆ ಸತ್ತ” ಎಂದು ತಾತ್ಸಾರದಿಂದ ಕೆಟ್ಟ ಮಾತನಾಡಲು; ಬಂಟರನು ಕೊಟ್ಟು, ಅರಿಸಿಸೈ ತಂದೆ=ಸೇವಕರನ್ನು ಕಳುಹಿಸಿ, ನನ್ನ ಮಗನು ಎಲ್ಲಿದ್ದಾನೆ ಎಂಬುದನ್ನು ಹುಡುಕಿಸು ತಂದೆ ಎಂದು ಚಂದ್ರಮತಿ ಮೊರೆಯಿಡಲು;

ನಡುವಿರುಳು ಬಂಟರುಂಟೇ… ನಿದ್ದೆಗೆಯ್ಯಬೇಕು=ಈ ನಡುರಾತ್ರಿಯಲ್ಲಿ ಬಂಟರು ಎಲ್ಲಿ ದೊರೆಯುತ್ತಾರೆ… ನಾನು ನಿದ್ದೆ ಮಾಡಬೇಕು;

ಏಳು ಕಾಡದಿರ್=ತನ್ನ ಪಾದ ಬಳಿಯಲ್ಲಿದ್ದ ಚಂದ್ರಮತಿಯನ್ನು “ಮೇಲೇಳು… ಸುಮ್ಮನೆ ನನ್ನನ್ನು ಪೀಡಿಸಬೇಡ” ಎಂದನು;

ನರಿಗಳ್ ಎಳೆಯದ ಮುನ್ನ ದಹಿಸಬೇಡವೆ ತಂದೆ, ಕರುಣಿಸು=ನರಿಗಳು ಬಾಯಿಹಾಕಿ ಎಳೆದು ತಿನ್ನುವುದಕ್ಕೆ ಮೊದಲು, ಹೆಣವನ್ನು ಸುಡಬೇಕಲ್ಲವೇ ತಂದೆ. ಕರುಣೆಯನ್ನು ತೋರು;

ದುರ್ಮರಣವಟ್ಟ ಶೂದ್ರನನು ಸಂಸ್ಕರಿಸುವವರ್ ಆವಲ್ಲ ಎಂದು ಎನಲ್ಕೆ=ಅಕಾಲಿಕವಾಗಿ ಮರಣವನ್ನು ಹೊಂದಿದ ಶೂದ್ರನಿಗೆ ಅಂತ್ಯ ಸಂಸ್ಕಾರವನ್ನು ಮಾಡುವವರು ನಾವಲ್ಲ ಎಂದು ಹೇಳಲು;

ಆನಾದಡಮ್ ಹೋಗಿ ಕಂಡು ಮಗನ ಉರಿಗಿತ್ತು ಬಪ್ಪೆನೇ=ನಾನಾದರೂ ಹೋಗಿ ನೋಡಿ, ಮಗನ ಹೆಣವನ್ನು ಒಪ್ಪಮಾಡಿ, ಬೆಂಕಿಗೆ ಹಾಕಿ ಬರಲೇ;

ಕೆಲಸಮನ್ ಬಿಟ್ಟು ಹರಿಯದೆ, ಇರ್ದುದನ್ ಎಯ್ದೆ ಗೆಯ್ದು ಹೋಗು ಎನಲು=ಉಳಿದಿರುವ ಮನೆಗೆಲಸವನ್ನು ಬಿಟ್ಟು ಹೋಗದೆ, ಇರುವುದನ್ನು ಅಚ್ಚುಕಟ್ಟಾಗಿ ಮಾಡಿ, ಅನಂತರ ಹೋಗು ಎಂದು ಒಪ್ಪಿಗೆಯನ್ನು ನೀಡಲು;

ಚಚ್ಚರಿದಿ ಮಾಡುವ ಕಜ್ಜವೆಲ್ಲವನ್ ಮಾಡಿ=ಬೇಗಬೇಗನೆ ಮಾಡಬೇಕಾದ ಕೆಲಸವೆಲ್ಲವನ್ನು ಮಾಡಿ ಮುಗಿಸಿ;

ಒಯ್ಯನೆ ಮನೆಯನು ಹೊರವಂಟಳ್=ಮರುಗಳಿಗೆಯಲ್ಲಿಯೇ ನೇರವಾಗಿ ಮನೆಯಿಂದ ಕಾಡಿನತ್ತ ನಡೆದಳು;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *