ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 22ನೆಯ ಕಂತು: ಚಂದ್ರಮತಿ ಸಂಕಟ

ಸಿ.ಪಿ.ನಾಗರಾಜ.

*** ಪ್ರಸಂಗ – 22: ಚಂದ್ರಮತಿ ಸಂಕಟ ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಲೋಹಿತಾಶ್ವನ ಮರಣ, ಚಂದ್ರಮತಿಯ ದುಃಖ’ ಎಂಬ ಎಂಟನೆಯ ಅದ್ಯಾಯದ 16 ರಿಂದ 24 ನೆಯ ಪದ್ಯದ ವರೆಗಿನ ಒಂಬತ್ತು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರ:

ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ. ಲೋಹಿತಾಶ್ವನ ತಾಯಿ. ಈಗ ಕಾಶಿ ನಗರದಲ್ಲಿರುವ ಬ್ರಾಹ್ಮಣನೊಬ್ಬನ ಮನೆಯ ದಾಸಿಯಾಗಿದ್ದಾಳೆ.

*** ಪ್ರಸಂಗ – 22: ಚಂದ್ರಮತಿಯ ಸಂಕಟ ***

ದಟ್ಟೈಸಿ ಮಡಲಿರಿವ ಕಾಳದೊಳು ನಡುವಿರುಳು ನಟ್ಟ ಮುಳ್ಳುಗಳನ್; ಎಡಹಿದ ಕಲ್ಲ; ಹಾಯ್ದ ಮರಮುಟ್ಟನ್; ಏರಿದ ದಡನನ್; ಇಳಿದ ಕುಳಿಯಮ್; ಬಿದ್ದ ದರಿಗಳಮ್; ಹಿಡಿದ ಗಿಡುವ; ಬಿಟ್ಟ ತಲೆಯಮ್; ಬಿಚ್ಚಿದ ಉಡಿಗೆಯಮ್ ಮರೆದು, ಗೋಳಿಟ್ಟು… ಬಾಯ್ವಿಟ್ಟು… ಮೊರೆಯಿಡುತ ನಡೆತಂದು, ಹುಲುವಟ್ಟೆಯೊಳು ಬೆಳೆದ ಹೆಮ್ಮರನ ಮಲಗಿಸಿ ನಿಂದ ಹುಳ್ಳಿಹೊರೆಯಮ್ ಕಂಡಳು.

ಚಂದ್ರಮತಿ: ಈ ಎಡೆಯೊಳ್ ಇನ್ನಿರದೆ ಮಾಣನ್.

(ಎನುತಮ್ ಬಂದು ಕರೆದಳು…)

ಚಂದ್ರಮತಿ: ಮಗನೆ ಮಗನೇ… ಹರಿಶ್ಚಂದ್ರ ರಾಯನ ಕುಮಾರ… ಪೇಳ್, ಆವ ಠಾವು ಒಳಕೊಂಡುದಯ್ಯ. ನೀನ್ ಎಲ್ಲಿರ್ದಪೆ… ಕಂದಾ, ಓ ಎಂಬುದೇನು… ಬಾಯ ಬಿಡದೆ ಇತ್ತ ಬಾ ಎಂಬುದೇನು… ತಂದೇ, ಎನ್ನನ್ ಒಲ್ಲದಡೆ ಸಾಯೆಂಬುದೇನು… ಉಸುರದಿರಲೇಕೆ… ತರುಣ.

(ಎಂದು ಹಂಬಲಿಸುತ ಒರಲಿದಳು. ವಿಷದ ಹೊಗೆಯೊಯ್ದು ಹಸುರಾದ ಮೈ; ಮೀರಿ ನೊರೆ ಒಸರ್ವ ಗಲ್ಲಮ್; ಕಂದಿದ ಉಗುರ್ಗಳ್; ಅರೆ ತೆರೆದು ಅಗುರ್ವಿಸುವ ಕಣ್;

ಹರಿದು ಹುಲುಹಿಡಿದ ಹರಹಿದ ಕೈಗಳ್; ಉಂಬ ಹೊತ್ತು ಉಣ ಹಡೆಯದೆ ಹಸಿದು ಬೆನ್ಗೆ ಅಡರ್ದ ಬಸುರ್; ಅಕಟಕಟ… ಮಡಿದ ಗೋಣ್; ಹುತ್ತಿನ ಮೊದಲೊಳು ದೆಸೆಗೆ ಉರುಳಿ ಹುಡಿಹೊಕ್ಕು ಬರತ ಬಾಯ್ ಬೆರಸಂದು ಬಸವಳಿದ ನಿಜಸುತನ ಹರಿಶ್ಚಂದ್ರನ ಅರಸಿ ಕಂಡಳು. ಕಂಡ ಕಾಣ್ಕೆಯೊಳು… ಶಿವಶಿವ… ನಿಂದ ನಿಲವಿನಲಿ ದಿಂಡುಗೆಡೆದಳು… ಮೇಲೆ ಹೊರಳಿದಳು… ಬಿಗಿಯಪ್ಪಿಕೊಂಡು ಹೊಟ್ಟೆಯನು ಹೊಸೆಹೊಸೆದು… ಮೋರೆಯ ಮೇಲೆ ಮೋರೆಯಿಟ್ಟು ಓವದೆ ಒರಲಿ ಮುಂಡಾಡಿ ಮುದ್ದುಗೆಯ್ದು… ಓರಂತೆ ಕರೆದು ಕರೆದು… ಅಂಡಲೆದು… ಲಲ್ಲೆಗರೆದು… ಅತ್ತತ್ತು ಬಲವಳಿದು ಬೆಂಡಾಗಿ… ಜೀವವು ಇಕ್ಕೆ ಎಂಬ ಆಸೆಯಿಮ್ ಲಲನೆ ತೇಂಕು ತಾಣಂಗಳಮ್ ಬಗೆದಳು… ಮೂಗಿನೊಳ್ ಉಸುರನ್… ಅಳ್ಳೆಯೊಳು ಹೊಯ್ಲನ್… ಉಗುರೊಳು ರಜವನ್… ಎದೆಯೊಳ್ ಅಲ್ಲಾಟಮಮ್… ಕೈಯ ಮೊದಲೊಳು ಮಿಡುಕನ್… ಅಂಗದೊಳು ನೋವನ್… ಅಕ್ಷಿಯೊಳು ಬೆಳ್ಪಮ್… ಭಾಳದೊಳು ಬೆಮರನು… ಲಲಿತ ಕಂಠದೊಳ್ ಉಲುಕನ್… ಅಂಘ್ರಿಯೊಳು ಬಿಸಿಯನ್… ಅಂಗುಳಿಗಳೊಳು ಚಿಟುಕನ್… ಉಂಗುಟದೊಳ್ ಅರುಣಾಂಬುವಮ್… ನಾಲಗೆಯೊಳ್ ಇಂಪ… ರೋಮದಲಿ ಬಲ್ಪನ್… ಸಲೆ ಆರಯ್ದು ಕಾಣದೆ ನೊಂದಳು.)

ಚಂದ್ರಮತಿ: ಹಡೆದ ಒಡಲು ಹುಡಿಯಾಯ್ತು ಮಗನೆ… ಮಗನು ಉಂಟೆಂದು ಕಡಗಿ ಹೆಚ್ಚುವ ಮನಮ್ ಹೊತ್ತಿ ಹೊಗೆಯಿತ್ತು… ಬಿಡದೆ ಅಡರಿ ನಿಟ್ಟಿಸಿ ನಲಿವ ದಿಟ್ಟಿ ಕೆಟ್ಟುವು… ಸೋಂಕಿ ಪುಳಕಿಸುವ ಕರಣಂಗಳು ಕಡಿವಡೆದುವು… ಒಸೆದು ಹೆಸರ್ಗೊಳುತಿಪ್ಪ ನಾಲಗೆಯ ಕುಡಿ ಮುರುಟಿತು… ಎಲೆ ಕಂದ ಒಮ್ಮೊಮ್ಮೆ ನುಡಿಯನ್ ಆಲಿಪ ಕಿವಿಯ ಹಡಿಗೆತ್ತುದು.

(ಎಂದೆನುತ್ತ ಇಂದುಮುಖಿ ಮರುಗಿ ಬಾಯ್ವಿಟ್ಟಳಂದು.)

ಚಂದ್ರಮತಿ: ಸಿರಿ ಹೋದ ಮರುಕವನು… ನೆಲೆಗೆಟ್ಟ ಚಿಂತೆಯನು… ಪರದೇಶಮಮ್ ಹೊಕ್ಕ ನಾಚಿಕೆಯನ್… ಅರಿಯದ ಅನ್ಯರ ಮನೆಯ ತೊತ್ತಾದ ಭಂಗವನು… ನಿಮ್ಮಯ್ಯಗೆ ಅಜ್ಞಾತವಾದ ಅಳಲನು… ನೆರೆದು ಮನೆಯವರ್ ಎಯ್ದೆ ಕರಕರಿಪ ದುಃಖವನು… ತರಳ, ನಿನ್ನನ್ ನೋಡಿ ಮರೆದು, ಪರಿಣಾಮವಮ್ ಧರಿಸುತಿಪ್ಪ ಎನ್ನ ಗೋಣಮ್ ಕೊಯ್ದೆ… ಇನ್ನಾರ ನೋಡಿ ಮರೆದಪೆನ್. ಹರಿಶ್ಚಂದ್ರ ಭೂಪತಿ ಅತಿಲಜ್ಜೆಗೆಟ್ಟು… ಅನ್ಯರ ಆಳಾಗಿ… ಹಸಿವು ನಿದ್ದೆಯಮ್ ತೊರೆದು ಧಾವತಿಗೊಂಡು ದುಡಿದು… ಧನವನ್ ಆರ್ಜಿಸಿ… ನಮ್ಮ ಬಿಡಿಸುವ ಆರ್ತದ ಮೋಹದಿಮ್ ಬಂದು… ಸುತನ ಕರೆಯೆಂದಡೆ… ಏನೆಂಬೆನ್… ಆವುದ ತೋರಿ ಪತಿಯ ಮರುಕವನು ಮರೆಯಿಸುವೆನ್… ಎನ್ನ ಕಂದ ಉಗ್ರ ಅಹಿಗೆ ಆಹುತಿಯಾದನ್ ಎಂದು ಪೇಳ್ವೆನೆ…

(ಎಂದು ಇಂದುಮುಖಿ ಬಾಯ್ವಿಟ್ಟಳು.)

ಚಂದ್ರಮುಖಿ: ಏವೆನ್… ಏವೆನ್… ಎಲೆ ಮಗನೇ ಮಗನೇ… ಸಾವೇಕಾಯಿತ್ತು ಎಲೆ ಚೆನ್ನಿಗನೇ… ಇರಿದೆಯಲಾ ಎನ್ನನು ಸುಕುಮಾರಾ… ಕೊರೆದೆಯಲಾ ಕೊರಳನು ಜಿತಮಾರಾ… ಎತ್ತಣ ಬರಸಿಡಿಲ್ ಎರಗಿತೊ ನಿನ್ನ… ಹುತ್ತಿನ ಹತ್ತಿರೆ ಒರಗಿದೆ ಚೆನ್ನ… ಹಾವು ಹಿಡಿಯೆ ಹಾ ಎಂದು ಒರಲಿದೆಯಾ… ಸಾವಾಗ ಅವ್ವಾ ಎಂದ ಅಳಲಿದೆಯಾ…

ರನ್ನದ ಕನ್ನಡಿ ಸಿಡಿದುದೊ ದೇವಾ… ಹೊನ್ನ ಕಳಸ ಕಡೆದು ಒಡೆದುದೊ ದೇವಾ… ಎನ್ನ ಕಡವರಮ್ ಸೂರೆಹೋಯಿತೋ… ಹೊನ್ನ ಪ್ರತಿಮೆಯ ಅಸು ಹಾರಿಹೋಯಿತೋ… ಇನವಂಶದ ಲತೆ ಕುಡಿ ಮುರುಟಿತ್ತೋ… ಜನಪನಿಟ್ಟ ಸುರತರು ಮುರಿಯಿತ್ತೋ… ಕಾಲ, ಕರುಣವಿಲ್ಲದೆ ನೀನ್ ಒಯ್ದೆ…ಬಾಲನನ್ ಅಗಲಿಸಿ ಕೊರಳಮ್ ಕೊಯ್ದೆ;

ಆರ ಸಿರಿಯನ್ ಎಳೆತಂದನೊ ಮುನ್ನ… ಆರ್ ಅಳಲಲು ಸೆಳೆಕೊಂಡೆನೊ ಹೊನ್ನ… ಅಲ್ಲದಡೆ ಈ ಅಳಲಪ್ಪುದೆ ನನಗೆ… ಇಲ್ಲಿ ವೃಥಾ ಸಾವಪ್ಪುದೆ ನಿನಗೆ… ಹೆತ್ತ ಹೊಟ್ಟೆ ಉರಿಯುತ್ತಿದೆ ಮಗನೆ… ಎತ್ತಿದ ತೋಳನು ಕೆತ್ತಿದೆ ಮಗನೆ… ಹಾಡುವ ಬಾಯಲಿ ಮಣ್ಣನು ಹೊಯ್ದೆ… ನೋಡುವ ಕಣ್ಣಲಿ ಸುಣ್ಣವ ಹೊಯ್ದೆ… ಪಾಪಿಯೆನ್ನ ನೀನೊಮ್ಮೆಗೆ ನೋಡಾ… ಕೋಪವನ್ ಉಳಿದು ಒಯ್ಯನೆ ಮಾತಾಡಾ… ನುಡಿದಡೆ ಪಾಪವೆ ಹೆತ್ತವರೊಡನೆ… ಕಡುಮುಳಿಸೇ ಮಗನೇ ಎನ್ನೊಡನೆ…

ಬಾರೈ ಬಹಳ ಸಿರಿಯ ಸಿಂಗಾರ… ಬಾರೈ ಸುಜನಜನಕ್ಕೆ ಆಧಾರ… ಏಳ್, ಎನ್ನ ಆನಂದಾಮೃತ ಶರಧಿ… ಏಳ್, ಅಖಿಳ ಗುಣಾರ್ಣವ ಕಳಾನಿಧಿ…

ಹಲ್ಲಣಿಸಿದ ವಾರುವವಿದೆ ಮಗನೆ… ಮಲ್ಲಾಮಲ್ಲಿಯ ರಥವಿದೆ ಮಗನೆ… ಗಜಘಟೆಗಳು ಹಲ್ಲಣಿಸಿವೆ ಮಗನೆ… ನಿಜಪರಿವಾರಕೆ ಬೆಸಗೊಡು ಮಗನೆ… ನೆತ್ತರ ಕಡಲೊಳಗೆ ಇಭಕುಲ ಬೀಳೆ… ಮೊತ್ತದ ತುರಂಗಗಳು ಬೆಂಡೇಳೆ… ಮಣಿಮಕುಟದ ಭಟರ ಅಟ್ಟೆಗಳಾಡೆ… ಮಣಿದು ಭೂತಸಂಕುಳ ಕುಣಿದಾಡೆ… ಮಾರಿ ಮೃತ್ಯುಗಳಿಗೆ ಓಕರೆ ಹುಟ್ಟೆ… ಕ್ರೂರ ಜವಂಗೆ ಅತಿಭೀಕರ ಹುಟ್ಟೆ… ರಿಪುಬಲವಮ್ ಕೊಂದು ಅಳಿದಡೆ ತಪ್ಪೆ… ತಪನ ಕುಲದ ವಿಜಯಶ್ರೀ ಒಪ್ಪೆ… ಧರೆಯನಾಳ್ವ ಸಿರಿಯಮ್ ಕಳೆದು, ಇಂದು ಉರಗನ ವಿಷದ ಅಗ್ನಿಯೊಳ್ ಉರೆ ಬೆಂದು, ಅಡವಿಯೊಳ್ ಈ ಪರಿ ಕೆಡೆವರೆ ವೀರ…

ಪೊಡವಿಯ ಒಡೆಯನ ಅಗ್ಗದ ಸುಕುಮಾರ… ಏನ ಮಾಳ್ಪೆ… ನಾ ಮಾಡಿರ್ದುದನು ತಾನ್ ಉಂಬುದು ವಿಧಿ ಮಾಡಿದ ಹದನು… ಕರುಣಿಸಿ ಕಾಯೈ ಗೌರೀರಮಣ… ನರಕಿಯ ನೋಡು ಎಲೆ ಅಗಜಾರಮಣ… ಕರುಣಿಸು ಪಾಪಿಯ ಪಂಪಾಪತಿಯೆ… ಕರುಣಿಸು ಅನಾಥೆಗೆ ಕಾಶೀಪತಿಯೆ… ಇನ್ನು ಇನಿತರಿಂದ ಮೇಲೆ ಎಮ್ಮ ಒಡೆಯನ್ ಅರಸಿ ಬಂದು ಎನ್ನನ್ ಒಯ್ದಡೆ ಬಳಿಕ ಸುಡಹಡೆಯೆನ್.

(ಎಂಬುದನು ತನ್ನಲ್ಲಿ ತಾನೆ ತಿಳಿದು ಎದ್ದು , ಪುತ್ರನ ಶವವ ಹೊತ್ತು ದೆಸೆದೆಸೆಗೆ ತಿರುಗಿ, ಮುನ್ನ ಎಲ್ಲರನ್ ಸುಡುವ ಠಾವು ಆವುದೆಂದು ನೋಳ್ಪನ್ನೆಗಮ್… ಹಲವು ಕೆಲವು ಉರಿಯ ಬೆಳಗಮ್ ಕಂಡು, ನನ್ನಿಕಾರನ್ ಕಾವ ಕಾಡತ್ತ ನಡೆವಾಗ ಬಟ್ಟೆಯೊಳ್ ಅದ ಏನ್ ಪೊಗಳ್ವೆನು.)

ತಿರುಳು: ಚಂದ್ರಮತಿಯ ಸಂಕಟ

ದಟ್ಟೈಸಿ ಮಡಲಿರಿವ ಕಾಳದೊಳು ನಡುವಿರುಳು=ದಟ್ಟವಾಗಿ ಹಬ್ಬಿರುವ ಕತ್ತಲೆಯಿಂದ ತುಂಬಿದ ನಡುರಾತ್ರಿಯಲ್ಲಿ ಕಾಡಿನಲ್ಲಿ ಚಂದ್ರಮತಿಯು ಒಬ್ಬಳೇ ನಡೆದು ಬರುತ್ತಿರುವಾಗ; ನಟ್ಟ ಮುಳ್ಳುಗಳನ್=ಕಾಲಿಗೆ ಚುಚ್ಚಿಕೊಂಡ ಮುಳ್ಳುಗಳನ್ನು; ಎಡಹಿದ ಕಲ್ಲ=ಮುಗ್ಗರಿಸಿ ಬೀಳುವಂತೆ ತಾಕಿದ ಕಲ್ಲುಗಳನ್ನು; ಹಾಯ್ದ ಮರಮುಟ್ಟನ್=ಅಡ್ಡಲಾಗಿದ್ದ ಮರಗಿಡಗಳನ್ನು; ಏರಿದ ದಡನನ್=ಹತ್ತಿದ ದಿಣ್ಣೆಯನ್ನು; ಇಳಿದ ಕುಳಿಯಮ್=ಇಳಿದ ಹಳ್ಳವನ್ನು; ಬಿದ್ದ ದರಿಗಳಮ್=ತಿಳಿಯದೆ ಬಿದ್ದ ಕೊಳ್ಳಗಳನ್ನು; ಹಿಡಿದ ಗಿಡುವ=ಉಟ್ಟ ಬಟ್ಟೆಯು ಸಿಕ್ಕಿಕೊಂಡ ಮುಳ್ಳಿನ ಗಿಡವನ್ನು; ಬಿಟ್ಟ ತಲೆಯಮ್=ಕೂದಲು ಕೆದರಿದ ತಲೆಯನ್ನು; ಬಿಚ್ಚಿದ ಉಡಿಗೆಯಮ್ ಮರೆದು=ಮುಳ್ಳಿನ ಕೊಂಬೆರೆಂಬೆಗೆ ಸಿಕ್ಕಿ ಹರಿದು ಹೋಗಿ ಸಡಿಲಗೊಂಡ ಉಡುಗೆಯ ಮೇಲೆ ಪರಿವೆಯೇ ಇಲ್ಲದೆ; ಗೋಳಿಟ್ಟು ಬಾಯ್ವಿಟ್ಟು ಮೊರೆಯಿಡುತ ನಡೆತಂದು=ಕಗ್ಗತ್ತಲ ರಾತ್ರಿಯಲ್ಲಿ ಕಾಡಿನ ಹಾದಿಯಲ್ಲಿ ಬರುತ್ತಿರುವಾಗ ಉಂಟಾದ ಯಾವೊಂದು ಅಡೆತಡೆಗಳನ್ನಾಗಲಿ ಇಲ್ಲವೇ ನೋವನ್ನಾಗಲಿ ಲೆಕ್ಕಿಸದೆ ಚಂದ್ರಮತಿಯು ಪುತ್ರಶೋಕದಿಂದ ಗೋಳಿಡುತ್ತ, ಸಂಕಟದಿಂದ ಬಾಯ್ ಬಾಯ್ ಬಿಡುತ್ತ, ಕಂದನಿಗೆ ಏನೂ ಆಗದಿರಲೆಂದು ದೇವರಲ್ಲಿ ಮೊರೆಯಿಡುತ್ತ ಮುಂದೆ ಮುಂದೆ ಬಂದಳು;

ಹುಲುವಟ್ಟೆಯೊಳು ಬೆಳೆದ ಹೆಮ್ಮರನ ಮಲಗಿಸಿ ನಿಂದ ಹುಳ್ಳಿಹೊರೆಯಮ್ ಕಂಡಳು=ಕಾಡಿನ ಕಾಲುದಾರಿಯೊಂದರಲ್ಲಿ ಬೆಳೆದಿದ್ದ ದೊಡ್ಡ ಮರವೊಂದಕ್ಕೆ ಒರಗಿಸಿ ನಿಲ್ಲಿಸಿದ್ದ ಸಣ್ಣ ಕಟ್ಟಿಗೆಗಳ ಹೊರೆಯನ್ನು ನೋಡಿದಳು; ಈ ಎಡೆಯೊಳ್ ಇನ್ನಿರದೆ ಮಾಣನ್ ಎನುತಮ್ ಬಂದು ತಾಯಿ ಕರೆದಳು=ಈ ಜಾಗದಲ್ಲಿಯೇ ಲೋಹಿತಾಶ್ವನು ಇದ್ದೇ ಇರುತ್ತಾನೆ ಎಂದು ತನಗೆ ತಾನೆ ಹೇಳಿಕೊಂಡು, ಕಟ್ಟಿಗೆ ಹೊರೆಯ ಬಳಿಗೆ ಬಂದು ಮಗನನ್ನು ಕರೆಯತೊಡಗಿದಳು; ಮಗನೆ ಮಗನೇ… ಹರಿಶ್ಚಂದ್ರ ರಾಯನ ಕುಮಾರ… ಪೇಳ್, ಆವ ಠಾವು ಒಳಕೊಂಡುದಯ್ಯ=ಮಗನೇ… ಹರಿಶ್ಚಂದ್ರ ರಾಜನ ಮಗನೇ… ಹೇಳು… ಯಾವ ಜಾಗದಲ್ಲಿ ನೀನು ಸೇರಿಕೊಂಡಿರುವೆ; ನೀನ್ ಎಲ್ಲಿರ್ದಪೆ… ಕಂದಾ=ನೀನು ಈಗ ಎಲ್ಲಿ ಇದ್ದೀಯೆ… ಕಂದಾ;

ಓ ಎಂಬುದೇನು=ನನ್ನ ಕರೆಗೆ ‘ಓ‘ ಎಂದು ಹೇಳುತ್ತಿರುವುದೇನು; ಬಾಯ ಬಿಡದೆ ಇತ್ತ ಬಾ ಎಂಬುದೇನು=ಬಾಯನ್ನು ತೆರೆಯದೆ “ಈ ಕಡೆಗೆ ಬಾ” ಎಂದು ಕರೆಯುತ್ತಿರುವುದೇನು;

ತಂದೇ, ಎನ್ನನ್ ಒಲ್ಲದಡೆ ಸಾಯೆಂಬುದೇನು=ನನ್ನನ್ನು ಬಯಸದಿದ್ದರೆ “ಸಾಯಿ” ಎಂದು ಹೇಳುತ್ತಿರುವುದೇನು;

ಓ ಎಂಬುದೇನು. 2. ಬಾಯ ಬಿಡದೆ ಇತ್ತ ಬಾ ಎಂಬುದೇನು. 3. ತಂದೇ, ಎನ್ನನ್ ಒಲ್ಲದಡೆ ಸಾಯೆಂಬುದೇನು—ಈ ಮೂರು ವಾಕ್ಯಗಳು ಚಂದ್ರಮತಿಯು ಮಗನ ಸಾವಿನ ಸಂಕಟವನ್ನು ತಡೆಯಲಾರದೆ, ದಿಕ್ಕುತೋಚದಂತಾಗಿ ಮನಸ್ಸಿನ ಮೇಲೆ ಹತೋಟಿಯನ್ನು ಕಳೆದುಕೊಂಡು, ಒಂದೆರಡು ಗಳಿಗೆ ಪರಸ್ಪರ ಸಂಬಂದವಿಲ್ಲದ ಮಾತುಗಳನ್ನಾಡುತ್ತಿರುವುದನ್ನು ಸೂಚಿಸುತ್ತಿವೆ; ಉಸುರದೆ ಇರಲೇಕೆ… ತರುಣ ಎಂದು ಹಂಬಲಿಸುತ ಒರಲಿದಳು=ನಾನು ಇಶ್ಟೆಲ್ಲಾ ಕೂಗಿ ಕರೆಯುತ್ತಿದ್ದರೂ ನೀನು ಮಾತನಾಡದೆ ಇರುವುದೇಕೆ ಮಗನೇ ಎಂದು ದೊಡ್ಡ ದನಿಯಲ್ಲಿ ಅರಚುತ್ತ ರೋದಿಸತೊಡಗಿದಳು; ವಿಷದ ಹೊಗೆಯೊಯ್ದು ಹಸುರಾದ ಮೈ=ಹಾವಿನ ವಿಶವು ದೇಹದ ನರನಾಡಿಗಳಲ್ಲಿ ಹರಡಿಕೊಂಡು ಹಸುರು ಬಣ್ಣವನ್ನು ತಳೆದಿರುವ ದೇಹ; ಮೀರಿ ನೊರೆ ಒಸರ್ವ ಗಲ್ಲಮ್=ಬಾಯಿಂದ ಉಕ್ಕಿಬಂದ ನೊರೆಯು ಸುರಿಯುತ್ತಿರುವ ಗಲ್ಲ; ಕಂದಿದ ಉಗುರ್ಗಳ್=ಜೀವಕಳೆಯನ್ನು ಕಳೆದುಕೊಂಡ ಉಗುರುಗಳು; ಅರೆ ತೆರೆದು ಅಗುರ್ವಿಸುವ ಕಣ್=ಅರ್ದ ತೆರೆದು ದಿಗಿಲು ಹುಟ್ಟಿಸುವಂತೆ ಕಾಣುವ ಕಣ್ಣುಗಳು;

ಹರಿದು ಹುಲುಹಿಡಿದ ಹರಹಿದ ಕೈಗಳ್=ಕಿತ್ತಿರುವ ಹುಲ್ಲನ್ನು ಹಿಡಿದುಕೊಂಡು ಮುಂದಕ್ಕೆ ಒಡ್ಡಿರುವ ಕಯ್ಗಳು; ಉಂಬ ಹೊತ್ತು ಉಣ ಹಡೆಯದೆ ಹಸಿದು ಬೆನ್ಗೆ ಅಡರ್ದ ಬಸುರ್=ಉಣ್ಣುವ ಸಮಯದಲ್ಲಿ ಉಣಿಸು ತಿನಸು ದೊರೆಯದೆ ಹಸಿದು, ಬೆನ್ನಿಗೆ ಕಚ್ಚಿಕೊಂಡಿರುವ ಹೊಟ್ಟೆ; ಅಕಟಕಟ… ಮಡಿದ ಗೋಣ್= ಅಯ್ಯಯ್ಯೋ… ಜೋತುಬಿದ್ದ ಕೊರಳು; ಹುತ್ತಿನ ಮೊದಲೊಳು ದೆಸೆಗೆ ಉರುಳಿ=ಹುತ್ತದ ಬುಡದಲ್ಲಿ ಒಂದು ಕಡೆಗೆ ಉರುಳಿಬಿದ್ದು; ಹುಡಿಹೊಕ್ಕು ಬರತ ಬಾಯ್ ಬೆರಸಂದು=ಮಣ್ಣಿನ ದೂಳು ತುಂಬಿಕೊಂಡು ಒಣಗಿದ ಬಾಯಿಯಿಂದ ಕೂಡಿ; ಬಸವಳಿದ ನಿಜಸುತನ ಹರಿಶ್ಚಂದ್ರನ ಅರಸಿ ಕಂಡಳು=ಜೀವಕಳೆದುಕೊಂಡಿರುವ ತನ್ನ ಮಗನನ್ನು ಚಂದ್ರಮತಿಯು ನೋಡಿದಳು; ಕಂಡ ಕಾಣ್ಕೆಯೊಳು=ಮಗನನ್ನು ನೋಡನೋಡುತ್ತಿದ್ದಂತೆಯೇ; ಶಿವಶಿವ… ನಿಂದ ನಿಲವಿನಲಿ ದಿಂಡುಗೆಡೆದಳು=ಶಿವ ಶಿವ… ನಿಂತುಕೊಂಡಿದ್ದ ನೆಲೆಯಿಂದಲೇ ದೊಪ್ ಎಂದು ಕೆಳಕ್ಕೆ ಬಿದ್ದಳು;

ಮೇಲೆ ಹೊರಳಿದಳು=ಮಗನ ದೇಹದ ಮೇಲೆ ಉರುಳಾಡಿದಳು; ಬಿಗಿಯಪ್ಪಿಕೊಂಡು ಹೊಟ್ಟೆಯನು ಹೊಸೆಹೊಸೆದು=ಮಗನ ದೇಹವನ್ನು ಬಿಗಿಯಾಗಿ ತಬ್ಬಿಕೊಂಡು, ಹೊಟ್ಟೆಯ ಮೇಲೆ ಕಯ್ಯಿಟ್ಟು ಮತ್ತೆ ಮತ್ತೆ ಸವರುತ್ತ; ಮೋರೆಯ ಮೇಲೆ ಮೋರೆಯಿಟ್ಟು=ಅವನ ಮೊಗದ ಮೇಲೆ ತನ್ನ ಮೊಗವನ್ನಿಟ್ಟು; ಓವದೆ ಒರಲಿ=ಸಂಕಟವನ್ನು ತಡೆಯಲಾರದೆ ಅರಚುತ್ತ; ಮುಂಡಾಡಿ ಮುದ್ದುಗೆಯ್ದು=ಮುತ್ತಿಟ್ಟು ಮುದ್ದುಮಾಡಿ; ಓರಂತೆ ಕರೆದು ಕರೆದು=ಒಂದೇ ಸಮನೆ ಮಗನ ಹೆಸರನ್ನು ಕರೆಯುತ್ತ; ಅಂಡಲೆದು… ಲಲ್ಲೆಗರೆದು… ಅತ್ತತ್ತು… ಬಲವಳಿದು ಬೆಂಡಾಗಿ=ಮಗನ ಸುತ್ತಲೂ ತಿರುಗುತ್ತ… ಮತ್ತೆ ಮತ್ತೆ ಮುದ್ದಾಡುತ್ತ… ಅತ್ತು ಅತ್ತು ದೇಹದ ಬಲವು ಉಡುಗಿ ನಿತ್ರಾಣಗೊಂಡು; ಜೀವವು ಇಕ್ಕೆ ಎಂಬ ಆಸೆಯಿಮ್=ಲೋಹಿತಾಶ್ವನು ಜೀವಂತವಾಗಿರಬಹುದೆಂಬ ಆಸೆಯಿಂದ; ಲಲನೆ ತೇಂಕು ತಾಣಂಗಳಮ್ ಬಗೆದಳು=ಚಂದ್ರಮತಿಯು ಲೋಹಿತಾಶ್ವನ ಮಯ್ಯಲ್ಲಿ ಉಸಿರಾಟದ ಕ್ರಿಯೆಯನ್ನು ಸೂಚಿಸುವ ಅಂಗಾಂಗಗಳನ್ನು ಗಮನಿಸತೊಡಗಿದಳು; ಮೂಗಿನೊಳ್ ಉಸುರನ್= ಮೂಗಿನಲ್ಲಿ ಉಸಿರಾಡುವಿಕೆಯನ್ನು;

ಅಳ್ಳೆಯೊಳು ಹೊಯ್ಲನ್=ಎರಡು ಪಕ್ಕೆಗಳ ಮಿಡಿತವನ್ನು; ಉಗುರೊಳು ರಜವನ್=ಉಗುರಿನಲ್ಲಿ ಮೆತ್ತಿಕೊಂಡಿರುವ ಮಣ್ಣಿನ ಕಣಗಳನ್ನು; ಎದೆಯೊಳ್ ಅಲ್ಲಾಟಮಮ್=ಎದೆಯ ಬಡಿತದ ಏರಿಳಿತವನ್ನು; ಕೈಯ ಮೊದಲೊಳು ಮಿಡುಕನ್=ಕಯ್ಯಿನ ಮಣಿಕಟ್ಟಿನ ಎಡೆಯಲ್ಲಿ ರಕ್ತ ಸಂಚಾರದ ನಾಡಿಯ ಮಿಡಿತವನ್ನು; ಅಂಗದೊಳು ನೋವನ್=ದೇಹದಲ್ಲಿ ಉಂಟಾಗಿರುವ ಗಾಯಗಳ ನೋವನ್ನು; ಅಕ್ಷಿಯೊಳು ಬೆಳ್ಪಮ್=ಕಣ್ಣಿನಲ್ಲಿ ಹೊಳಪನ್ನು; ಭಾಳದೊಳು ಬೆಮರನು=ಹಣೆಯಲ್ಲಿ ಬೆವರನ್ನು; ಲಲಿತ ಕಂಠದೊಳ್ ಉಲುಕನ್= ಕೋಮಲವಾದ ಗಂಟಲಿನ ಬಾಗದ ಉಬ್ಬುತಗ್ಗಿನ ಅಲುಗುವಿಕೆಯನ್ನು; ಅಂಘ್ರಿಯೊಳು ಬಿಸಿಯನ್=ಪಾದದಲ್ಲಿನ ಬಿಸಿಯನ್ನು; ಅಂಗುಳಿಗಳೊಳು ಚಿಟುಕನ್=ಕಯ್ ಬೆರಳುಗಳ ನಟಿಕೆಯನ್ನು; ಉಂಗುಟದೊಳ್ ಅರುಣಾಂಬುವಮ್=ಕಯ್ ಮತ್ತು ಕಾಲಿನ ಹೆಬ್ಬೆರಳುಗಳಲ್ಲಿ ರಕ್ತದ ಕೆಂಪನ್ನು;

ನಾಲಗೆಯೊಳ್ ಇಂಪನ್=ನಾಲಗೆಯಲ್ಲಿ ರುಚಿಯನ್ನು; ರೋಮದಲಿ ಬಲ್ಪನ್=ರೋಮಗಳ ಬಿಗುಹನ್ನು; ಸಲೆ ಆರಯ್ದು ಕಾಣದೆ ನೊಂದಳು=ಒಂದೇ ಸಮನೆ ನೋಡಿ ತಡಕಾಡಿ, ಯಾವೊಂದು ಅಂಗದಲ್ಲಿಯೂ ಜೀವಕಳೆಯನ್ನು ಕಾಣದೆ ತೀವ್ರವಾದ ಸಂಕಟಕ್ಕೆ ಒಳಗಾದಳು; ಹಡೆದ ಒಡಲು ಹುಡಿಯಾಯ್ತು ಮಗನೆ=ಹೆತ್ತ ಒಡಲು ಮಣ್ಣಾಯಿತು ಮಗನೆ; ಮಗನು ಉಂಟೆಂದು ಕಡಗಿ ಹೆಚ್ಚುವ ಮನಮ್ ಹೊತ್ತಿ ಹೊಗೆಯಿತ್ತು=ಮಗನು ಇದ್ದಾನೆಂದು ಉತ್ಸಾಹದಿಂದ ಬೀಗುತ್ತಿದ್ದ ಮನದಲ್ಲಿ ಸಂಕಟದ ಬೆಂಕಿ ಹೊತ್ತಿಕೊಂಡು ಹೊಗೆಯಾಡುತ್ತಿದೆ; ಬಿಡದೆ ಅಡರಿ ನಿಟ್ಟಿಸಿ ನಲಿವ ದಿಟ್ಟಿ ಕೆಟ್ಟುವು=ಸದಾಕಾಲ ನಿನ್ನತ್ತಲೇ ನೋಡುತ್ತ ಹಿಗ್ಗಿನಿಂದ ನಲಿಯುತ್ತಿದ್ದ ನನ್ನ ಕಣ್ಣುಗಳು ಕುರುಡಾದವು; ಸೋಂಕಿ ಪುಳಕಿಸುವ ಕರಣಂಗಳು ಕಡಿವಡೆದುವು=ನಿನ್ನನ್ನು ತಬ್ಬಿಕೊಂಡು ರೋಮಾಂಚನಗೊಳ್ಳುತ್ತಿದ್ದ ಪಂಚೇಂದ್ರಿಯಗಳು ತುಂಡುತುಂಡಾದವು/ಪಂಚೇಂದ್ರಿಯಗಳ ಶಕ್ತಿಯೇ ಉಡುಗಿಹೋಯಿತು:

ಒಸೆದು ಹೆಸರ್ಗೊಳುತಿಪ್ಪ ನಾಲಗೆಯ ಕುಡಿ ಮುರುಟಿತು=ಒಲವು ನಲಿವಿನಿಂದ ನಿನ್ನ ಹೆಸರನ್ನು ಕರೆಯುತ್ತಿದ್ದ ನಾಲಗೆಯು ಕುಡಿಯು ಸೊಟ್ಟಗಾಯಿತು; ಎಲೆ ಕಂದ ಒಮ್ಮೊಮ್ಮೆ ನುಡಿಯನ್ ಆಲಿಪ ಕಿವಿಯ ಹಡಿಗೆತ್ತುದು ಎಂದೆನುತ್ತ ಇಂದುಮುಖಿ ಮರುಗಿ ಬಾಯ್ವಿಟ್ಟಳಂದು=ಎಲೆ ಕಂದ… ಆಗಾಗ್ಗೆ ನೀನಾಡುವ ಮಾತುಗಳನ್ನು ಪ್ರೀತಿಯಿಂದ ಕೇಳುತ್ತಿದ್ದ ಕಿವಿಯ ದ್ವಾರವು ಮುಚ್ಚಿಹೋಯಿತು ಎಂದು ಚಂದ್ರಮತಿಯು ಕೊರಗುತ್ತ ಸಂಕಟದಿಂದ ರೋದಿಸುತ್ತಿದ್ದಳು; ಸಿರಿ ಹೋದ ಮರುಕವನು=ರಾಜ್ಯದ ಒಡೆತನ ಮತ್ತು ಸಂಪತ್ತನ್ನು ಕಳೆದುಕೊಂಡ ದುಗುಡವನ್ನು; ನೆಲೆಗೆಟ್ಟ ಚಿಂತೆಯನು=ಹುಟ್ಟಿ ಬೆಳೆದು ಬಾಳುತ್ತಿದ್ದ ತಾಯಿನಾಡನ್ನು ತೊರೆದು ಬಂದ ಚಿಂತೆಯನ್ನು;

ಪರದೇಶಮಮ್ ಹೊಕ್ಕ ನಾಚಿಕೆಯನ್= ಮತ್ತೊಂದು ನಾಡಿಗೆ ಗತಿಗೇಡಿಗಳಾಗಿ ಬಂದ ನಾಚಿಕೆಯನ್ನು; ಅರಿಯದ ಅನ್ಯರ ಮನೆಯ ತೊತ್ತಾದ ಭಂಗವನು=ಯಾರೆಂದು ಗೊತ್ತಿಲ್ಲದ ಬೇರೆಯವರ ಮನೆಯ ದಾಸರಾದ ಅಪಮಾನವನ್ನು; ನಿಮ್ಮಯ್ಯಗೆ ಅಜ್ಞಾತವಾದ ಅಳಲನು=ನಿಮ್ಮ ಅಪ್ಪನು ಯಾವ ಕಡೆಯಲ್ಲಿದ್ದಾನೆಯೋ…ಏನಾಗಿರುವನೋ ಎಂಬುದನ್ನು ತಿಳಿಯದ ಸಂಕಟವನ್ನು; ನೆರೆದು ಮನೆಯವರ್ ಎಯ್ದೆ ಕರಕರಿಪ ದುಃಖವನು=ಒಡೆಯನ ಮನೆಯವರೆಲ್ಲರೂ ಜತೆಗೂಡಿ ಕೊಡುತ್ತಿದ್ದ ಕ್ರೂರವಾದ ಹಿಂಸೆಯ ಸಂಕಟವನ್ನು; ತರಳ, ನಿನ್ನನ್ ನೋಡಿ ಮರೆದು ಪರಿಣಾಮವಮ್ ಧರಿಸುತಿಪ್ಪ ಎನ್ನ ಗೋಣಮ್ ಕೊಯ್ದೆ=ಮಗನೇ, ನಿನ್ನ ಮೊಗವನ್ನು ನೋಡುತ್ತ, ಎಲ್ಲ ಬಗೆಯ ಸಂಕಟವನ್ನು ಮರೆತು, ತಾಳ್ಮೆಯಿಂದ ನೋವೆಲ್ಲವನ್ನೂ ಉಣ್ಣುತ್ತಿದ್ದ ನನ್ನ ಕೊರಳನ್ನು ಕತ್ತರಿಸಿದೆ; ಇನ್ನಾರ ನೋಡಿ ಮರೆದಪೆನ್=ಇನ್ನು ಯಾರನ್ನು ನೋಡಿ ನನ್ನ ಸಂಕಟವನ್ನೆಲ್ಲಾ ಮರೆಯಲಿ;

ಹರಿಶ್ಚಂದ್ರ ಭೂಪತಿ ಅತಿಲಜ್ಜೆಗೆಟ್ಟು, ಅನ್ಯರ ಆಳಾಗಿ ಹಸಿವು ನಿದ್ದೆಯಮ್ ತೊರೆದು ಧಾವತಿಗೊಂಡು ದುಡಿದು ಧನವನ್ ಆರ್ಜಿಸಿ ನಮ್ಮ ಬಿಡಿಸುವ ಆರ್ತದ ಮೋಹದಿಮ್ ಬಂದು ಸುತನ ಕರೆಯೆಂದಡೆ… ಏನೆಂಬೆನ್=ಹರಿಶ್ಚಂದ್ರ ಮಹಾರಾಜನು ನಾಚಿಕೆಯನ್ನು ಬಿಟ್ಟು ಕಂಡವರ ಮನೆಯ ಆಳಾಗಿ, ಹಸಿವು ನಿದ್ರೆಯನ್ನು ಲೆಕ್ಕಿಸದೆ ಪರಿಶ್ರಮದಿಂದ ದುಡಿಮೆಯನ್ನು ಮಾಡಿ, ಹಣವನ್ನು ಸಂಪಾದಿಸಿ, ನಮ್ಮನ್ನು ದಾಸ್ಯದಿಂದ ಬಿಡಿಸುವ ಬಯಕೆಯ ಮೋಹದಿಂದ ಬಂದು, ಮಗನನ್ನು ಕರೆ ಎಂದಡೆ ಏನೆಂದು ಹೇಳಲಿ; ಆವುದ ತೋರಿ ಪತಿಯ ಮರುಕವನು ಮರೆಯಿಸುವೆನ್=ಯಾವುದನ್ನು ತೋರಿ ಹರಿಶ್ಚಂದ್ರನ ಸಂಕಟವನ್ನು ಹೋಗಲಾಡಿಸುವೆನು; ಎನ್ನ ಕಂದ ಉಗ್ರ ಅಹಿಗೆ ಆಹುತಿಯಾದನ್ ಎಂದು ಪೇಳ್ವೆನೆ ಎಂದು ಇಂದುಮುಖಿ ಬಾಯ್ವಿಟ್ಟಳು=ನನ್ನ ಮಗ ಬಯಂಕರವಾದ ಹಾವು ಕಚ್ಚಿ ಸಾವನ್ನಪ್ಪಿದನು ಎಂದ ಹೇಳಲೇ ಎಂದು ಚಂದ್ರಮತಿಯು ಸಂಕಟದಿಂದ ಪರಿತಪಿಸಿದಳು;

ಏವೆನ್… ಏವೆನ್… ಎಲೆ ಮಗನೇ ಮಗನೇ=ಈಗ ನಾನೇನು ಮಾಡಲಿ… ಏನು ಮಾಡಲಿ… ಎಲೆ ಮಗನೇ… ಮಗನೇ; ಸಾವೇಕಾಯಿತ್ತು ಎಲೆ ಚೆನ್ನಿಗನೇ=ನಿನಗೆ ಸಾವು ಏಕೆ ಬಂದಿತು… ಎಲೆ ಸುಂದರಾಂಗನೇ; ಇರಿದೆಯಲಾ ಎನ್ನನು ಸುಕುಮಾರ=ನನ್ನನ್ನು ಕೊಂದುಬಿಟ್ಟೆಯಲ್ಲಾ ಸುಕುಮಾರ; ಕೊರೆದೆಯಲಾ ಕೊರಳನು ಜಿತಮಾರಾ=ಕೊರಳನ್ನು ಕತ್ತರಿಸಿದೆಯಲ್ಲಾ ಶಿವನೇ; ಎತ್ತಣ ಬರಸಿಡಿಲ್ ಎರಗಿತೊ ನಿನ್ನ=ನಿನ್ನ ಮೇಲೆ ಯಾವ ಕಡೆಯಿಂದ ಬಂದ ಬರಸಿಡಿಲು ಬಡಿಯಿತೊ; ಹುತ್ತಿನ ಹತ್ತಿರೆ ಒರಗಿದೆ ಚೆನ್ನ=ಹುತ್ತದ ಹತ್ತಿರದಲ್ಲಿ ಮಲಗಿರುವೆ ಚೆನ್ನ; ಹಾವು ಹಿಡಿಯೆ ಹಾ ಎಂದು ಒರಲಿದೆಯಾ=ಹಾವು ಕಚ್ಚಿದಾಗ ‘ ಹಾ ’ ಎಂದು ಕೂಗಿಕೊಂಡೆಯಾ; ಸಾವಾಗ ಅವ್ವಾ ಎಂದ ಅಳಲಿದೆಯಾ=ಸಾಯುವ ಗಳಿಗೆಯಲ್ಲಿ “ ಅವ್ವಾ ” ಎಂದು ಅರಚುತ್ತ ಸಂಕಟಪಟ್ಟೆಯಾ; ರನ್ನದ ಕನ್ನಡಿ ಸಿಡಿದುದೊ ದೇವಾ=ನನ್ನ ಪಾಲಿನ ರತ್ನದ ಕನ್ನಡಿ ಒಡೆದು ಚೂರುಚೂರಾಯಿತೊ ದೇವಾ;

ಹೊನ್ನ ಕಳಸ ಕಡೆದು ಒಡೆದುದೊ ದೇವಾ=ಬಂಗಾರದ ಕಳಸ ಕಳಚಿಕೊಂಡು ಮುರಿದುಹೋಯಿತೊ ದೇವಾ; ಎನ್ನ ಕಡವರಮ್ ಸೂರೆಹೋಯಿತೋ=ನನ್ನ ಬಳಿಯಿದ್ದ ಸಿರಿಸಂಪದವೆಲ್ಲಾ ಲೂಟಿಯಾಯಿತೋ; ಹೊನ್ನ ಪ್ರತಿಮೆಯ ಅಸು ಹಾರಿಹೋಯಿತೋ=ಚಿನ್ನದ ಪ್ರತಿಮೆಯ ತೇಜಸ್ಸು ಇನ್ನಿಲ್ಲವಾಯಿತೋ; ಇನವಂಶದ ಲತೆ ಕುಡಿ ಮುರುಟಿತ್ತೋ=ಸೂರ್ಯವಂಶದ ಬಳ್ಳಿಯ ಚಿಗುರು ಬಾಡಿಹೋಯಿತಲ್ಲಾ; ಜನಪನಿಟ್ಟ ಸುರತರು ಮುರಿಯಿತ್ತೋ=ರಾಜನು ನೆಟ್ಟು ಬೆಳೆಸಿದ ಕಲ್ಪವೃಕ್ಶ ಮುರಿದುಬಿದ್ದಿತ್ತೋ; ಕಾಲ, ಕರುಣವಿಲ್ಲದೆ ನೀನ್ ಒಯ್ದೆ=ಯಮದೇವನೇ, ಕರುಣೆಯಿಲ್ಲದೆ ನೀನು ನನ್ನ ಮಗನನ್ನು ಸಾವಿನ ಮನೆಗೆ ಸಾಗಿಸಿದೆ; ಬಾಲನನ್ ಅಗಲಿಸಿ ಕೊರಳಮ್ ಕೊಯ್ದೆ=ಮಗನನ್ನು ನಮ್ಮಿಂದ ದೂರ ಮಾಡಿ ನಮ್ಮ ಕೊರಳನ್ನು ಕತ್ತರಿಸಿದೆ; ಆರ ಸಿರಿಯನ್ ಎಳೆತಂದನೊ ಮುನ್ನ=ಈ ಮೊದಲು ನನ್ನ ಹಿಂದಿನ ಹುಟ್ಟುಗಳಲ್ಲಿ ಯಾರ ಸಂಪತ್ತನ್ನು ಅಪಹರಿಸಿದ್ದೆನೊ; ಆರ್ ಅಳಲಲು ಸೆಳೆಕೊಂಡೆನೊ ಹೊನ್ನ=ಯಾರನ್ನು ಸಂಕಟಕ್ಕೆ ಗುರಿಮಾಡಿ ಅವರ ಹೊನ್ನನ್ನು ಕಿತ್ತುಕೊಂಡಿದ್ದೆನೊ;

ಅಲ್ಲದಡೆ ಈ ಅಳಲಪ್ಪುದೆ ನನಗೆ=ಅಂತಹ ಪಾಪಗಳನ್ನು ಹಿಂದಿನ ಜನ್ಮಗಳಲ್ಲಿ ನಾನು ಮಾಡದಿದ್ದರೆ, ಈ ಜನ್ಮದಲ್ಲಿ ಇಂತಹ ಸಂಕಟ ನನಗೆ ಬರುತ್ತಿತ್ತೆ; ಇಲ್ಲಿ ವೃಥಾ ಸಾವಪ್ಪುದೆ ನಿನಗೆ=ಇಲ್ಲಿ ನಿನಗೆ ವಿನಾಕಾರಣ ಸಾವು ಬರುತ್ತಿತ್ತೆ. ಅಂದರೆ ಹೆತ್ತ ತಾಯಿಯಾದ ನನ್ನ ಪಾಪದ ಕಾರಣದಿಂದಾಗಿ ನಿನಗೆ ಅಕಾಲಿಕ ಸಾವು ಬಂದಿದೆ ಎಂದು, ಲೋಹಿತಾಶ್ವನ ಮರಣಕ್ಕೆ ತಾನೇ ಹೊಣೆಗಾರಳು ಎನ್ನುವಂತೆ ಚಂದ್ರಮತಿಯು ಸಂಕಟಪಡುತ್ತಿದ್ದಾಳೆ; ಹೆತ್ತ ಹೊಟ್ಟೆ ಉರಿಯುತ್ತಿದೆ ಮಗನೆ=ಹೆತ್ತ ತಾಯಿಯ ಹೊಟ್ಟೆಯು ಸಂಕಟದ ಬೆಂಕಿಯಿಂದ ಉರಿಯುತ್ತಿದೆ ಮಗನೆ; ಎತ್ತಿದ ತೋಳನು ಕೆತ್ತಿದೆ ಮಗನೆ=ನಿನ್ನನ್ನು ಸಾಕಿ ಸಲಹಿ ಎತ್ತಿ ಆಡಿಸಿದ ತಾಯಿಯ ತೋಳನ್ನು ಕತ್ತರಿಸಿದೆ ಮಗನೆ; ಹಾಡುವ ಬಾಯಲಿ ಮಣ್ಣನು ಹೊಯ್ದೆ=ಜೋಗುಳವನ್ನು ಹಾಡುವ ಬಾಯಲ್ಲಿ ಮಣ್ಣನ್ನು ಹಾಕಿದೆ; ನೋಡುವ ಕಣ್ಣಲಿ ಸುಣ್ಣವ ಹೊಯ್ದೆ=ನಿನ್ನನ್ನು ನೋಡಿ ಹಿಗ್ಗುವ ಕಣ್ಣುಗಳಿಗೆ ಸುಣ್ಣವನ್ನು ಸುರಿದೆ; ಪಾಪಿಯೆನ್ನ ನೀನೊಮ್ಮೆಗೆ ನೋಡಾ=ಪಾಪಿಯಾದ ನನ್ನನ್ನು ನೀನು ಒಮ್ಮೆ ನೋಡಾ;

ಕೋಪವನ್ ಉಳಿದು ಒಯ್ಯನೆ ಮಾತಾಡಾ=ನನ್ನ ಮೇಲಣ ಕೋಪವನ್ನು ಮರೆತು ಕೂಡಲೇ ಮಾತಾಡು; ನುಡಿದಡೆ ಪಾಪವೆ ಹೆತ್ತವರೊಡನೆ=ಹೆತ್ತ ತಾಯಿತಂದೆಯ ಜತೆಯಲ್ಲಿ ಮಾತನಾಡಿದರೆ ಪಾಪ ಬರುವುದೆ; ಕಡುಮುಳಿಸೇ ಮಗನೇ ಎನ್ನೊಡನೆ=ಮಗನೇ, ನನ್ನೊಡನೆ ತುಂಬಾ ಕೋಪವೇ ನಿನಗೆ; ಬಾರೈ ಬಹಳ ಸಿರಿಯ ಸಿಂಗಾರ=ಬಹು ದೊಡ್ಡ ಸಿರಿಯ ಚೆಲುವನೇ… ನನ್ನ ಬಳಿಗೆ ಬಾ; ಬಾರೈ ಸುಜನಜನಕ್ಕೆ ಆಧಾರ=ಒಳ್ಳೆಯ ಜನಕ್ಕೆ ಆಶ್ರಯವನ್ನು ನೀಡಿದವನೆ… ನನ್ನ ಬಳಿಗೆ ಬಾ; ಏಳ್, ಎನ್ನ ಆನಂದಾಮೃತ ಶರಧಿ=ನನ್ನ ಪಾಲಿನ ಆನಂದದ ಅಮ್ರುತ ಸಾಗರವೇ ಮೇಲೇಳು; ಏಳ್, ಅಖಿಳ ಗುಣಾರ್ಣವ ಕಳಾನಿಧಿ=ಸಮಸ್ತ ಸದ್ಗುಣಗಳ ಸಾಗರದಂತಿರುವ ಕಲಾವಂತನೇ ಮೇಲೇಳು; ಹಲ್ಲಣಿಸಿದ ವಾರುವವಿದೆ ಮಗನೆ=ರಣರಂಗದಲ್ಲಿ ಹಗೆಗಳನ್ನು ಸದೆಬಡಿಯಲು ಜೀನು ಕಡಿವಾಣಗಳನ್ನು ತೊಡಿಸಿ ಸಿದ್ದವಾಗಿರುವ ಕುದುರೆಯಿದೆ ಮಗನೆ; ಮಲ್ಲಾಮಲ್ಲಿಯ ರಥವಿದೆ ಮಗನೆ=ಹಗೆಗಳನ್ನು ಎದುರಿಸಿ ಹೋರಾಡಲು ತೇರು ಸಿದ್ದವಾಗಿದೆ ಮಗನೆ;

ಗಜಘಟೆಗಳು ಹಲ್ಲಣಿಸಿವೆ ಮಗನೆ=ಆನೆಗಳ ಗುಂಪು ಸಜ್ಜಾಗಿವೆ ಮಗನೆ; ನಿಜಪರಿವಾರಕೆ ಬೆಸಗೊಡು ಮಗನೆ=ನಿನ್ನ ಸೇನೆಯ ಚತುರಂಗ ಬಲಕ್ಕೆ ಆಜ್ನೆಯನ್ನು ಮಾಡು ಮಗನೆ; ನೆತ್ತರ ಕಡಲೊಳಗೆ ಇಭಕುಲ ಬೀಳೆ=ಹಗೆಗಳ ಆನೆಗಳ ಸೇನೆಯು ರಕ್ತದ ಕಡಲಿನಲ್ಲಿ ಬೀಳಲು; ಮೊತ್ತದ ತುರಂಗಗಳು ಬೆಂಡೇಳೆ=ಹಗೆಗಳ ಕುದುರೆಗಳ ಸೇನೆಯು ನಿತ್ರಾಣಗೊಂಡು ಕುಸಿದು ಬೀಳಲು; ಮಣಿಮಕುಟದ ಭಟರ ಅಟ್ಟೆಗಳಾಡೆ=ರತ್ನದ ಕಿರೀಟವನ್ನು ತೊಟ್ಟಿದ್ದ ಹಗೆಯ ಕಾದಾಳುಗಳ ರುಂಡವಿಲ್ಲದ ಮುಂಡಗಳು ರಣರಂಗದಲ್ಲಿ ಚೆಲ್ಲಾಡಲು; ಮಣಿದು ಭೂತಸಂಕುಳ ಕುಣಿದಾಡೆ=ರಣರಂಗದಲ್ಲಿ ಮಡಿದ ಕಾದಾಳುಗಳ ರಕ್ತ ಮಾಂಸ ಮೂಳೆಗಳನ್ನು ಹೊಟ್ಟೆಬಿರಿಯುವಂತೆ ತಿನ್ನಬಹುದು ಎಂಬ ಹಿಗ್ಗಿನಿಂದ ದೆವ್ವಗಳು ನಿನಗೆ ತಲೆಬಾಗಿ ಕುಣಿದಾಡಲು; ಮಾರಿ ಮೃತ್ಯುಗಳಿಗೆ ಓಕರೆ ಹುಟ್ಟೆ=ನಿನ್ನ ಪರಾಕ್ರಮದ ಹೋರಾಟದಿಂದ ರಣರಂಗದಲ್ಲಿ ಉಂಟಾಗುತ್ತಿರುವ ದೊಡ್ಡ ಪ್ರಮಾಣದ ಸಾವುನೋವನ್ನು ಅರಗಿಸಿಕೊಳ್ಳಲಾರದೆ ಸಾವಿನ ದೇವತೆಗಳಾದ ಮಾರಿ ಮತ್ತು ಯಮದೇವನೇ ವಾಂತಿ ಮಾಡಿಕೊಳ್ಳುವಂತಾಗಲು;

ಕ್ರೂರ ಜವಂಗೆ ಅತಿಭೀಕರ ಹುಟ್ಟೆ=ಕ್ರೂರಿಯಾದ ಯಮನಿಗೆ ಅತಿಹೆದರಿಕೆಯು ಉಂಟಾಗಲು; ತಪನ ಕುಲದ ವಿಜಯಶ್ರೀ ಒಪ್ಪೆ=ರವಿ ಕುಲದ ವಿಜಯಲಕ್ಶ್ಮಿಯು ಒಪ್ಪುವಂತೆ; ರಿಪುಬಲವಮ್ ಕೊಂದು ಅಳಿದಡೆ ತಪ್ಪೆ=ಈ ರೀತಿ ಹಗೆಯ ಅತಿದೊಡ್ಡ ಚತುರಂಗ ಬಲವನ್ನು ಕೊಂದು, ರಣರಂಗದಲ್ಲಿ ನೀನು ವೀರಮರಣವನ್ನು ಅಪ್ಪಿದರೆ ಅದು ತಪ್ಪಲ್ಲ; ಧರೆಯನಾಳ್ವ ಸಿರಿಯಮ್ ಕಳೆದು=ಬೂಮಂಡಲವನ್ನು ಆಳುವ ಸಂಪತ್ತನ್ನು ಕಳೆದುಕೊಂಡು; ಇಂದು ಉರಗನ ವಿಷದ ಅಗ್ನಿಯೊಳ್ ಉರೆ ಬೆಂದು=ಇಂದು ಹಾವಿನ ವಿಶದ ಬೆಂಕಿಯಲ್ಲಿ ಬಹಳವಾಗಿ ಬೆಂದು; ಅಡವಿಯೊಳ್ ಈ ಪರಿ ಕೆಡೆವರೆ ವೀರ=ಕಾಡಿನಲ್ಲಿ ಈ ರೀತಿ ಸತ್ತುಬೀಳುವುದೇ ವೀರ; ಅಂದರೆ ಈ ರೀತಿ ಹಾವು ಕಚ್ಚಿ ಸಾಯುವ ಬದಲು ವೀರಕುಮಾರನಾದ ನೀನು ರಣರಂಗದಲ್ಲಿ ಹೋರಾಡುತ್ತ ವೀರಮರಣವನ್ನು ಹೊಂದಬೇಕಿತ್ತು; ಪೊಡವಿಯ ಒಡೆಯನ ಅಗ್ಗದ ಸುಕುಮಾರ= ಬೂಮಂಡಲದ ಒಡೆಯನಾದ ಹರಿಶ್ಚಂದ್ರನ ಉತ್ತಮನಾದ ಪುತ್ರನೇ; ಏನ ಮಾಳ್ಪೆ=ನಾನೇನು ಮಾಡಲಿ;

ನಾ ಮಾಡಿರ್ದುದನು ತಾನ್ ಉಂಬುದು ವಿಧಿ ಮಾಡಿದ ಹದನು=ಪ್ರತಿಯೊಬ್ಬ ವ್ಯಕ್ತಿಯು ಹಿಂದಿನ ಜನ್ಮಗಳಲ್ಲಿ ತಾನು ಮಾಡಿದ ಪಾಪಪುಣ್ಯಗಳಿಗೆ ತಕ್ಕಂತೆ ಈ ಜನ್ಮದಲ್ಲಿ ಒಳಿತುಕೆಡುಕನ್ನು ಅನುಬವಿಸಬೇಕೆಂಬುದು ವಿದಿ ಮಾಡಿದ ಕಟ್ಟಲೆ ಎಂದು ಚಂದ್ರಮತಿಯು ತನ್ನನ್ನು ತಾನೇ ಸಮಾದಾನಪಡಿಸಿಕೊಳ್ಳುತ್ತಿದ್ದಾಳೆ; ಕರುಣಿಸಿ ಕಾಯೈ ಗೌರೀರಮಣ= ಕರುಣೆಯನ್ನು ನೀಡಿ ಕಾಪಾಡು ಶಿವನೇ; ನರಕಿಯ ನೋಡು ಎಲೆ ಅಗಜಾರಮಣ=ನನ್ನಂತಹ ಪಾಪಿಯತ್ತ ನೋಡು ಎಲೆ ಶಿವನೇ; ಕರುಣಿಸು ಪಾಪಿಯ ಪಂಪಾಪತಿಯೆ=ಪಾಪಿಯಾದ ನನ್ನ ಮೇಲೆ ಕರುಣೆಯನ್ನು ತೋರಿಸು ಪಂಪಾಪತಿಯಾದ ವಿರೂಪಾಕ್ಶದೇವನೇ; ಕರುಣಿಸು ಅನಾಥೆಗೆ ಕಾಶೀಪತಿಯೆ=ಗತಿಗೇಡಿಯಾದ ನನಗೆ ಕರುಣೆಯನ್ನು ತೋರಿಸು ಕಾಶೀಪತಿಯಾದ ವಿಶ್ವನಾತನೇ;

ಇನ್ನು ಇನಿತರಿಂದ ಮೇಲೆ ಎಮ್ಮ ಒಡೆಯನ್ ಅರಸಿ ಬಂದು ಎನ್ನನ್ ಒಯ್ದಡೆ ಬಳಿಕ ಸುಡಹಡೆಯೆನ್ ಎಂಬುದನು ತನ್ನಲ್ಲಿ ತಾನೆ ತಿಳಿದು ಎದ್ದು=ನಾನು ಮನೆಯಿಂದ ಬಂದು ಬಹಳ ಹೊತ್ತಾಗಿರುವುದರಿಂದ, ಇನ್ನು ನಮ್ಮ ಒಡೆಯನಾದ ಆ ಬ್ರಾಹ್ಮಣನು ನನ್ನನ್ನು ಹುಡುಕಿಕೊಂಡು ಬಂದು, ನನ್ನನ್ನು ಎಳೆದುಕೊಂಡುಹೋದರೆ, ಅನಂತರ ನನ್ನ ಮಗನ ಹೆಣವನ್ನು ಸುಡಲಾಗುವುದಿಲ್ಲ ಎಂಬ ವಾಸ್ತವವನ್ನು ತನ್ನಲ್ಲಿ ತಾನೇ ತಿಳಿದುಕೊಂಡು ಚಂದ್ರಮತಿಯು ಮೇಲೆದ್ದು; ಪುತ್ರನ ಶವವ ಹೊತ್ತು ದೆಸೆದೆಸೆಗೆ ತಿರುಗಿ=ಮಗನ ಹೆಣವನ್ನು ಹೊತ್ತುಕೊಂಡು, ಎಲ್ಲ ಕಡೆಗೂ ಸುತ್ತಲೂ ನೋಡಿ;

ಮುನ್ನ ಎಲ್ಲರನ್ ಸುಡುವ ಠಾವು ಆವುದೆಂದು ನೋಳ್ಪನ್ನೆಗಮ್=ಈ ಮೊದಲು ಸತ್ತವರೆಲ್ಲರನ್ನೂ ಸುಡುವ ಜಾಗ ಯಾವುದೆಂದು ಹುಡುಕುತ್ತಿರುವಾಗ; ಹಲವು ಕೆಲವು ಉರಿಯ ಬೆಳಗಮ್ ಕಂಡು=ಒಂದು ಕಡೆಯಲ್ಲಿ ದಗದಗನೆ ಉರಿಯುತ್ತಿರುವ ಬೆಂಕಿಯ ಬೆಳಕಿನ ಹಲವು ಚಿತೆಗಳನ್ನು ನೋಡಿ; ನನ್ನಿಕಾರನ್ ಕಾವ ಕಾಡತ್ತ ನಡೆವಾಗ ಬಟ್ಟೆಯೊಳ್ ಅದ ಏನ್ ಪೊಗಳ್ವೆನು=ಸತ್ಯವಂತನಾದ ಹರಿಶ್ಚಂದ್ರನು ಕಾಯುತ್ತಿದ್ದ ಸುಡುಗಾಡಿನತ್ತ ಚಂದ್ರಮತಿಯು ಮಗನ ಹೆಣವನ್ನು ಹೊತ್ತುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಆದುದನ್ನು ಏನೆಂದು ವಿವರಿಸಲಿ ಎಂದು ಕವಿಯು ಉದ್ಗರಿಸುತ್ತಿದ್ದಾನೆ;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *