ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 1ನೆಯ ಕಂತು
– ಸಿ.ಪಿ.ನಾಗರಾಜ.
ಕವಿ ಪರಿಚಯ:
ಹೆಸರು: ರನ್ನ
ಕಾಲ: ಕ್ರಿ.ಶ.949
ಹುಟ್ಟಿದ ಊರು: ಮುದೋಳ/ಮುದವೊಳಲು, (ಬಾಗಲಕೋಟೆ ಜಿಲ್ಲೆ)
ತಾಯಿ: ಅಬ್ಬಲಬ್ಬೆ
ತಂದೆ: ಜಿನವಲ್ಲಬ
ಗುರು: ಅಜಿತಸೇನಾಚಾರ್ಯ
ಪೋಷಕರು: ಚಾವುಂಡರಾಯ, ಅತ್ತಿಮಬ್ಬೆ
ಆಶ್ರಯ: ಚಾಳುಕ್ಯ ಚಕ್ರವರ್ತಿ ಸತ್ಯಾಶ್ರಯನ ಒಡ್ಡೋಲಗದಲ್ಲಿ ಕವಿ
ರಚಿಸಿದ ಕಾವ್ಯಗಳು: 1. ಗದಾಯುದ್ಧ / ಸಾಹಸ ಭೀಮ ವಿಜಯ 2. ಅಜಿತನಾಥ ಪುರಾಣ
ರಚಿಸಿದ ಶಬ್ದಕೋಶ: ರನ್ನ ಕಂದ
*** ಪ್ರಸಂಗ – 1: ಭೀಮಸೇನನ ಪ್ರತಿಜ್ಞೆ ***
(ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಮಸೇನ ಪ್ರತಿಜ್ಞೆ’ ಎಂಬ ಹೆಸರಿನ ಎರಡನೆಯ ಅದ್ಯಾಯದ 22 ಪದ್ಯಮತ್ತು ಗದ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.)
ಪಾತ್ರಗಳು:
ದ್ರೌಪದಿ: ದ್ರುಪದ ರಾಜನ ಮಗಳು. ಪಾಂಡವರ ಹೆಂಡತಿ.
ಭೀಮ: ಕುಂತಿ ಮತ್ತು ಪಾಂಡುರಾಜನ ಮಗ. ದರ್ಮರಾಯ ಈತನ ಅಣ್ಣ. ಅರ್ಜುನ—ನಕುಲ-ಸಹದೇವ ಈತನ ತಮ್ಮಂದಿರು.
ವಿದೂಷಕ: ಬೀಮನ ಆಪ್ತ ಸಚಿವ ಮತ್ತು ವಿನೋದಗಾರ
ತಿರುಳು: ಭೀಮಸೇನನ ಪ್ರತಿಜ್ಞೆ
*** ಪ್ರಸಂಗ – 1: ಭೀಮಸೇನನ ಪ್ರತಿಜ್ಞೆ ***
ಆ ಪ್ರಸ್ತಾವದೊಳ್ ಯಜ್ಞವೇದೀಸಂಭವೆಯುಮ್… ಯಾಜ್ಞಸೇನಿಯುಮ್… ದ್ರುಪದ ರಾಜೋಪವನ ಜಯ ವೈಜಯಂತಿಯುಮ್ ಎನಿಸಿದ ಪಾಂಚಾಲರಾಜ ತನೂಜೆ ಅನವರತ ಬಾಷ್ಪವಾರಿ ಧಾರಾಪೂರ ಪರಿವಾರಿತ ಪಲ್ಲವನೇತ್ರೆಯುಮ್… ಅಸಹ್ಯಪರಿಭವಾನಲ ದಂದಹ್ಯಮಾನಗಾತ್ರೆಯುಮಾಗಿ… ದೃಷ್ಟಾದೃಷ್ಟಪರಂಪರೆಯೆಂಬ ವೃದ್ಧ ಕಂಚುಕಿಯುಮ್… ಬುದ್ಧಿಮತಿಯೆಂಬ ಮೇಳದ ಕೆಳದಿಯುಮ್ ಬೆರಸು… ದೇವಾಸುರ ಯುದ್ಧಕ್ಕೆ ಕರಗಮ್ ಪೊತ್ತಳ್ ಎಂಬಂತೆ ಪವಮಾನ ತನುಜನಲ್ಲಿಗೆ ಬಂದು..
ದ್ರೌಪದಿ: ದನುಜವಿರೋಧಿ ಮಾಡಿದೊಡಮ್ ಆಗದ ಸಂಧಿಯೊಳೇನೊ… ನಿನ್ನ ಸೈಪಿನೊಳ್ ಅರಿಸೇನೆ ಅವಶಿಷ್ಟ ನಿರ್ಧನ ಸುಯೋಧನಮಾಯ್ತು. ಇಂದು ಸಿಂಧುನಂದನ ಧೃತರಾಷ್ಟ್ರರಿರ್ದು ಒರೆಯೆ… ನಮ್ಮ ಅರಸನ್ ಮರಳ್ದು ಇಂಬುಕೆಯ್ಗುಮೆಂದು ಎನಗೆ ಅನುಶಯಮಾದುದು. ಕೌರವಾಂತಕಾ, ಸಂಶಯಮಮ್ ಕಳೆ… ಖಳ ದುಶ್ಶಾಸನ ವಕ್ಷಸ್ಸ್ಥಳೋಚ್ಚಲತ್ ಕೃಷ್ಣ ರಕ್ತ ಜಲದಿಮ್ ಕೋಪಾನಳನಮ್ ಮಳ್ಗಿಸಿ… ನೀನುಮ್ ಗಳಾ… ಗಳಿತ ಕೋಪನಿರ್ಪ ತೆರದಿಂದೆ ಇರ್ದಯ್. ಅಹಿತರೊಳ್ ಸಮವಾಯಮ್ ಸಂಧಿ ಮಾಡಿ ಯಮಸೂನು ಪೇಳೆ… ನಿಮಗೆ ದಲ್ ವನವಾಸವೆ ಶರಣ್… ಅಂದು ಅಗ್ನಿಮುಖದೆ ಪುಟ್ಟಿದುದರಿಂದೆ ಎನಗಮ್ ಅಗ್ನಿಮುಖಮ್ ಶರಣ್.
(ಎಂದು ನೊಂದು ನುಡಿಯೆ, ಮರುನ್ನಂದನನ್ ದರಹಸಿತ ವದನಾರವಿಂದನಾಗಿ ತನ್ನ ಅಂತರ್ಗತದೊಳ್…)
ಭೀಮಸೇನ: ಕುರುರಾಜಾನುಜ ಭೀಕರ ಕರವಿಲುಳಿತ ನೀಲಕಬರಿಭರಮಮ್ ಪಿಡಿದುಮ್ ಪರಿಭವಿಸಲ್… ಕೃಷ್ಣೆಗೆ ಮಿಗೆ ಕೋಪಮಮ್ ಮನಸ್ತಾಪಮುಮಮ್ ದೊರೆಕೊಳಿಸದೆ.
(ಎಂದು ಉಪಲಕ್ಷಿಸಿ…)
ಯಮಪುತ್ರನ್ ಜೂದಿಮ್ ಧಾತ್ರಿಯುಮನ್… ಈ ಹುತಾಶನ ಪುತ್ರಿಯುಮನ್… ಬರಿದೆ ಸೋಲ್ತನಲ್ಲನ್… ರಿಪುಗೆ ಕ್ಷತ್ರಿಯ ತೇಜಮುಮಮ್ ಅಂದೆ ಸೋಲ್ತನಾಗಲೆವೇಡಾ.
(ಎಂದು ಅನಿಲಸುತನ್ ನಿಜಾಗ್ರಜಂಗೆ ಮುಳಿದು…)
ದ್ರೌಪದಿಯನ್ ಪರಿಭವಿಸುವಲ್ಲಿ ಪವನಸೂನುಗಮ್ ಪಾರ್ಥಂಗಮ್ ನೋಡುತ್ತಿರಲಕ್ಕುಮೆ… ಪರವಶದೊಳಿರ್ದರೋ ಮೇಣ್ ಪರಾರ್ಜಿತ ಪ್ರಾಣರಾದರೋ…
(ಎಂದು ತನಗಮ್ ಅರ್ಜುನಂಗಮ್ ಒಡನೆ ಮುಳಿದು…)
ಅಂದು ಅಣ್ಣನ ಸೂನೃತವಚನಮ್ ಎಂಬ ಮಂತ್ರಾಕ್ಷರದಿಮ್… ನರನುಮ್ ಆನುಮ್ ವಿನಯಮನೆ ಬಗೆದು, ವಿಕ್ರಮಮನೆ ಬಗೆಯೆವೆ… ಎನಗಮ್ ಸಮ್ಮೋಹನಮ್ ಆದುದಕ್ಕುಮ್.
(ಎಂದು ಪಶ್ಚಾತ್ತಾಪಮ್ ಗೆಯ್ದು, ಕುರುಕುಲ ವಿಳಯಜ್ವಾಲೆ… ಸುಯೋಧನ ಪ್ರಳಯಕಾಲೆ… ಪಾಂಚಾಲಿಯ ವದನಮಮ್ ನೋಡಿ…)
ಭೀಮಸೇನ:(ಈಗ ದ್ರೌಪದಿಯನ್ನು ಉದ್ದೇಶಿಸಿ ಮಾತನಾಡತೊಡಗುತ್ತಾನೆ.)
ನಳಿನಾನನೆ, ನಿನ್ನ ಆನನದಿಮ್ ನಯನವಾರಿ ಗಳಿಯಿಸುತಿರೆ… ಕಬರಿಭರಮ್ ಗಳಿಯಿಸುತಿರೆ… ನೀನಿರೆ… ಕುರುಕುಳಾಂತಕನ್ ಈ ಭೀಮನ್ ಗಳಿತಕೋಪನೇ. ಸತ್ಯಪ್ರತಿಜ್ಞನ್ ಎನೆ… ಕುರುಪತ್ಯೂರು ಕಿರೀಟ ಭಂಗಮಮ್ ಪಡೆದು… ಜಗತ್ ಸ್ತುತ್ಯ ಕೃತಕೃತ್ಯನ್ ಎನಿಸದೆ… ಸತ್ಯಾಶ್ರಯ ಪೆಸರ್ಗೆ ಮುಯ್ಯನಾಂಪನೆ ಭೀಮನ್. ನೀನ್ ಅಗ್ನಿಪುತ್ರಿಯಯ್… ಪವಮಾನ ತನೂಭವನೆನ್… ಆನ್ ಅಣಮ್ ಕೂಡಿರೆ… ಅರಿನೃಪರೊಳ್ ಸಂಧಾನಮ್ ಎಂತು; ಅನಲ ಅನಿಲ ಸಂಯೋಗಮ್ ಉರಿಪದಿರ್ಕುಮೆ ಪಗೆಯಮ್. ಪರಾಭವಜ್ವಲನ ಧೂಮಕೃಷ್ಣಮ್ ಕೃಷ್ಣೇ… ಪರಮೇಶ್ವರಿ… ಕುರುಕುಲಜೀವಾಕರ್ಷಣ ಪರಿಣತಮ್… ಇದು ಕಾಳಹಸ್ತಮಲ್ಲದೆ ಕೇಶಹಸ್ತಮಕ್ಕುಮೆ. ಕುರುನಂದನರಮ್ ಕೊಂದೆನ್. ಕುರುಶಾಬಾನುಜನ ನೆತ್ತರಮ್ ಕುಡಿದೆನ್. ಪೂಣ್ದ ಎರಡಮ್ ತೀರ್ಚಿದೆನ್. ಇರ್ದಪುವು ಎರಡುಮಮ್ . ಅವಮ್ ತೀರ್ಚಿ… ಪಗೆಯಮ್ ತೀರ್ಚದಿರ್ಪೆನೆ. ಊರುಗಳನ್ ಉಡಿವೆನ್. ಕೌರಪಪರಿವೃಢನ ಮಕುಟಮಮ್ ಒದೆವೆನ್. ವೇಣೀಸಂಹಾರಮ್ ಮಾಡುವೆನ್. ಅದರಿಮ್ ಭಾರಮದು ಇನಿತಲ್ಲದು ಎನ್ನ ಪರಿಭವಭಾವಮ್. ಕುರುಕುಲಶೋಣಿತ ಪಾದಪದ್ಮತಳಮ್ ವೃಕೋದರನ್ ತಳೋದರಿಗೆ ಕಚಬಂಧ ಬಂಧುರತೆಯನ್ ಆಗಿಪನ್.ಆತನ ಪೂಣ್ದ ಪೂಣ್ಕೆ ಶಿಲಾತಳಾಕ್ಷರಮ್ ಎನಿಸಿರ್ಪ ಜನೋಕ್ತಿಯಮ್ ಪುಸಿ ಮಾಳ್ಪೆನೇ. ಅರನ ಮಗನ್ ಪ್ರಾರ್ಥಿಸೆ… ಬಾಂದೊರೆಯ ಮಗನ್ ಮಾಡೆ ಸಂಧಿಯಾದಪುದು ಎನುತುಮ್ ಮರುಗದಿರ್… ಅಣ್ಣನ ಮಾತನ್ ಪೆರಗಿಕ್ಕುವೆನ್… ಅಜ್ಜನಿರ್ದು ಮಾಣ್ಬೊಡಮ್ ಈಯೆನ್.
(ಎಂದು ಕೌರವ್ಯ ಕುಲಕಾಲಾನಲನುಮ್… ಕುರುರಾಜ ನಿರ್ವ್ಯಾಜ ನಿಬಿಡ ಊರುಧ್ವಯಭಂಗ ಪ್ರತಿಜ್ಞಾಭಾರನುಮ್… ಫಣಿಪತಿಕೇತನ ಧೂಮಕೇತುವುಮ್… ಪಾಂಡವಬಲ ಪ್ರಾಕಾರನುಮ್… ಏಕಾಂಗವೀರನುಮ್… ಜರಾಸಂಧಸಂಧಿಬಂಧ ವಿಘಟನನುಮ್… ಇರಿವ ಬೆಡಂಗನುಮ್… ಅಕಲಂಕಚರಿತನುಮ್… ಅಮ್ಮನ ಗಂಧವಾರಣನುಮ್… ಸಾಹಸಾಂಕನುಮ್ ಎನಿಸಿದ ಭೀಮಸೇನನ್ ಅಂತು ಆರೂಢಕೋಪನುಮ್ ಪ್ರತಿಜ್ಞಾರೂಢನುಮ್ ಆಗೆ…)
ದ್ರೌಪದಿ: ಸಮದೇಭಕುಂಭಭೇದನ ಸಮಯೋಗ್ರನಖಂಗೆ ಹರಿಗೆ ಮೃಗರಿಪು ಪೆಸರ್ ಉತ್ತಮಿಕೆಯೆ… ನಿನಗೆ ಜರಾಸಂಧಮಥನ ಕುರುವೈರಿ ಪೆಸರ್ ಅದೇನ್ ಉನ್ನತಿಯೇ. ಇರಿವಬೆಡಂಗ… ದೇವ ಪರಮೇಶ್ವರ… ಸಾಹಸಭೀಮ… ನಿನ್ನೊಳ್ ಆರ್ ಇರಿದು ಬರ್ದುಂಕುವರ್… ಯುದ್ಧದೊಳ್ ನಿಜಭುಜ ಉಗ್ರಗದಾಪರಿಘ ಪ್ರಹಾರದಿಮ್ ಪರಿವರಿಯಾಗಿ… ಪುಣ್ಣುವೆಣನಾಗಿ… ಮರುಳ್ಗೆ ಉಣಿಸಾಗಿ… ಕುರಿದರಿಯಾಗಿ ಬಿಳ್ದ ಅರಿಬಲಂಗಳೆ ಪೇಳವೆ ನಿನ್ನ ಬೀರಮಮ್.
(ಎಂದು ಅನಲನಂದನೆ ಅನಿಲನಂದನನನ್ ಪೊಗಳ್ದು…)
ಇರಿವ ಬೆಡಂಗಾ, ಒಡಲ್… ಒಡಮೆ ಎಂಬ ಇವೆರಡುಮ್ ಕೆಡಲಿರ್ಪುವು… ಕೆಡದ ಕಸವರಮ್ ಜಸಮ್… ಅದರಿಮ್ ಕೆಡುವ ಒಡಲ್ ಒಡಮೆಯನ್ ಎಂದುಮ್ ಕೆಡದ ಒಡಮೆಗೆ ಮಾರುಗುಡುವುದು. ಮಣಿ ಕನಕಮ್ ವಸ್ತು ವಿಭೂಷಣಂಗಳಮ್ ಕೊಟ್ಟು ಪೆಂಡಿರ್ ಒಲ್ವರೆ. ಗಂಡರ್ ಗುಣಮನೆ ಮೆರೆವುದು. ಇರಿವ ಬೆಡಂಗಾ… ನಿನ್ನಂತೆ ಶಸ್ತ್ರವ್ರಣಮಮ್ ಮೆರೆವುದು. (ಎಂದು ಮೂದಲಿಸಿ ನುಡಿಯೆ, ಭೀಮಸೇನನ ಅನುಮತದೊಳ್… ನರ್ಮ ಸಚಿವನುಮ್… ಪರಿಹಾಸಕ ಶೀಲನುಮ್ ಎನಿಸಿದ ವಿದೂಷಕನ್ ಎಂದನ್…)
ವಿದೂಷಕ: ಇನ್ನೆಲ್ಲಿಯ ಧೃತರಾಷ್ಟ್ರನ್… ಎತ್ತಣ ಗಾಂಗೇಯನ್… ಎಲ್ಲಿಯ ಸಂಧಿ ಕಾರ್ಯಮ್… ದುಶ್ಶಾಸನಾದಿಗಳಪ್ಪ ನೂರ್ವರ್ ಕೌರವರುಮನ್ ಅಗುರ್ವಾಗೆ ಕೊಂದಿಕ್ಕಿದನ್… ಇನ್ನೊರ್ಬನ್ ಉಳಿದನ್… ದುರ್ಯೋಧನನನ್ ಕೊಲ್ವುದುಮ್… ಗೆಲ್ವುದುಮ್… ನಮ್ಮ ಅರಸಂಗೆ ಆವುದು ಗಹನಮ್… ಅದರ್ಕೆ ಚಿಂತಿಸದಿರಿಮ್.
(ಎಂದು ಪಾಂಚಾಲರಾಜ ತನೂಜೆಯ ಮೊಗಮಮ್ ನೋಡಿ…)
ವಿದೂಷಕ: ಕುರುಕುಲಮಮ್ ನುಂಗಿದಯ್… ಕುರುಪತಿಯುಮನ್… ಇನ್ನರೆಬರುಮಮ್ ನುಂಗಲಿರ್ಪೆ… ಇನ್ನೆರಡನೆಯ ಹಿಡಿಂಬಿಯನ್ ರಕ್ಕಸಿಯನ್ ನಿನ್ನನ್… ಎಮ್ಮರಸನ್ ಎಲ್ಲಿ ತಂದನೊ .
(ಎಂದು ವಿದೂಷಕನ್ ಅಳುತ್ತುಮ್ ಬಂದ ತನ್ನನ್… ನಗುತ್ತುಮ್ ಪೋಪಂತೆ ಸಂತೋಷಮ್ ಮಾಡಿಸಿದುದರ್ಕೆ ಒಡಂಬಟ್ಟು… ಚಾರುಹಾಸಿನಿ ನಿಜನಿವಾಸಕ್ಕೆ ಪೋದಳ್.)
ತಿರುಳು: ಬೀಮಸೇನನ ಪ್ರತಿಜ್ನೆ
ಪ್ರಸ್ತಾವ=ಸಮಯ/ಸನ್ನಿವೇಶ/ಸಂದರ್ಬ;
ಆ ಪ್ರಸ್ತಾವದೊಳ್=ಹಸ್ತಿನಾವತಿಯ ಬಳಿಯ ಕುರುಕ್ಶೇತ್ರ ರಣರಂಗದಲ್ಲಿ ಪಾಂಡವರು ಮತ್ತು ಕೌರವರ ನಡುವೆ ನಡೆಯುತ್ತಿದ್ದ ಯುದ್ದದ ಹದಿನೆಂಟನೆಯ ದಿನದಂದು ಕೌರವ ಪಡೆಯ ಸೇನಾದಿಪತಿಯಾಗಿದ್ದ ಶಲ್ಯನು ಸಾವನಪ್ಪಿದ್ದಾನೆ. ಇದಕ್ಕೂ ಮೊದಲು ಕೌರವರ ಪಡೆಯ ಸೇನಾದಿಪತಿಗಳಾಗಿ ಬೀಶ್ಮ, ದ್ರೋಣಾಚಾರ್ಯ, ಕರ್ಣ ಹೋರಾಡಿ ಸಾವನ್ನಪ್ಪಿದ್ದಾರೆ. ತನ್ನ ತಮ್ಮಂದಿರನ್ನು ಮತ್ತು ಮಕ್ಕಳೆಲ್ಲರನ್ನೂ ಕಳೆದುಕೊಂಡಿರುವ ದುರ್ಯೋದನ ಮಾತ್ರ ಜೀವಂತವಾಗಿ ಉಳಿದಿರುವ ಸಂದರ್ಬದಲ್ಲಿ;
ಯಜ್ಞವೇದೀಸಂಭವೆಯುಮ್=ಯಾಗದ ಬೆಂಕಿಯ ಕುಂಡದಲ್ಲಿ ಹುಟ್ಟಿದವಳಾದ ದ್ರೌಪದಿ; ದ್ರೋಣನಿಂದ ಅಪಮಾನಗೊಂಡಿದ್ದ ದ್ರುಪದನು ಯಾಗವನ್ನು ಮಾಡಿ, ದ್ರೋಣನನ್ನು ಕೊಲ್ಲುವ ಶಕ್ತಿಯುಳ್ಳ ಮಗನನ್ನು ಮತ್ತು ಮಹಾ ವೀರನಾದ ಅರ್ಜುನನನ್ನು ಅಳಿಯನನ್ನಾಗಿ ಪಡೆಯಲು ಒಬ್ಬ ಮಗಳನ್ನು ಯಾಗದ ಕುಂಡದಲ್ಲಿ ಪಡೆದಿದ್ದನು. ಕಾವ್ಯಲೋಕದಲ್ಲಿ ಈ ರೀತಿ ಕವಿಕಲ್ಪಿತ ಸಂಗತಿಗಳು ರೂಪಕದ ತಿರುಳಿನಲ್ಲಿ ಚಿತ್ರಣಗೊಂಡಿರುತ್ತವೆ;
ಯಾಜ್ಞಸೇನಿಯುಮ್=ಯಜ್ಞಸೇನನೆಂದು ಹೆಸರನ್ನು ಪಡೆದಿದ್ದ ದ್ರುಪದರಾಜನ ಮಗಳಾದ ದ್ರೌಪದಿ;
ದ್ರುಪದ ರಾಜೋಪವನ ಜಯ ವೈಜಯಂತಿಯುಮ್ ಎನಿಸಿದ=ದ್ರುಪದ ರಾಜನ ಉದ್ಯಾನವನದ ವಿಜಯದ ಪತಾಕೆಯೆಂದು ಹೆಸರಾಂತ ದ್ರೌಪದಿ;
ಪಾಂಚಾಲರಾಜ ತನೂಜೆ=ಪಾಂಚಾಲ ದೇಶದ ರಾಜನಾದ ದ್ರುಪದನ ಮಗಳಾದ ದ್ರೌಪದಿ:
ಅನವರತ ಧಾರಾಪೂರ ಪರಿವಾರಿತ ಬಾಷ್ಪವಾರಿ ಪಲ್ಲವನೇತ್ರೆಯುಮ್=ಅತ್ತು… ಅತ್ತು… ಒಂದೇ ಸಮನೆ ಸುರಿಯುತ್ತಿರುವ ಕಣ್ಣೀರಿನಿಂದಾಗಿ ಕೆಂಪಗಾಗಿರುವ ಕಣ್ಣುಳ್ಳವಳು; ಅಸಹ್ಯಪರಿಭವಾನಲ ದಂದಹ್ಯಮಾನಗಾತ್ರೆಯುಮಾಗಿ=ಮಯ್ ಮನದಲ್ಲಿ ತಡೆಯಲಾಗದಂತಹ ಅಪಮಾನದ ಬೆಂಕಿಯಲ್ಲಿ ಬೇಯುತ್ತಿರುವವಳಾಗಿ; ಕಂಚುಕಿ=ರಾಣಿವಾಸದ ಪಾರುಪತ್ಯಗಾರ/ಮೇಲ್ವಿಚಾರಕ; ಮೇಳದ ಕೆಳದಿ=ನಾಟ್ಯ ಸಂಗೀತಗಳಲ್ಲಿ ಗೆಳತಿ/ಸಕಿ;
ದೃಷ್ಟಾದೃಷ್ಟಪರಂಪರೆಯೆಂಬ ವೃದ್ಧ ಕಂಚುಕಿಯುಮ್ ಬುದ್ಧಿಮತಿಯೆಂಬ ಮೇಳದ ಕೆಳದಿಯುಮ್ ಬೆರಸು=ದ್ರುಶ್ಟಾದ್ರುಶ್ಟಪರಂಪರೆಯೆಂಬ ಹೆಸರಿನ ಹಿರಿಯನಾದ ಕಂಚುಕಿ ಮತ್ತು ಬುದ್ದಿಮತಿಯೆಂಬ ಹೆಸರಿನ ಕಲಾವಿದೆಯಾದ ಸಕಿಯ ಜತೆಗೂಡಿ; ಕರಗ=ನೀರು ತುಂಬಿದ ಕಳಶ/ಕೊಡ;
ದೇವಾಸುರ ಯುದ್ಧಕ್ಕೆ ಕರಗಮ್ ಪೊತ್ತಳ್ ಎಂಬಂತೆ ಪವಮಾನ ತನುಜನಲ್ಲಿಗೆ ಬಂದು=ದೇವತೆಗಳ ಮತ್ತು ರಕ್ಕಸರ ಕಾಳೆಗಕ್ಕೆ ಕರಗವನ್ನು ಹೊತ್ತು ಬಂದಳು ಎಂಬಂತೆ ವಾಯುದೇವನ ಮಗನಾದ ಬೀಮನ ಬಳಿಗೆ ಬಂದು;
ದನುಜವಿರೋಧಿ=ರಕ್ಕಸರ ಶತ್ರುವಾದ ಕ್ರಿಶ್ಣ;
ದನುಜವಿರೋಧಿ ಮಾಡಿದೊಡಮ್ ಆಗದ ಸಂಧಿಯೊಳೇನೊ=ಕ್ರಿಶ್ಣನು ಕುರುಕ್ಶೇತ್ರ ಯುದ್ದವನ್ನು ನಿಲ್ಲಿಸಲು ಮಾಡಿದ ಸಂದಾನವು ಕಯ್ಗೂಡದೆ ಒಳ್ಳೆಯದೇ ಆಯಿತು;
ನಿನ್ನ ಸೈಪಿನೊಳ್ ಅರಿಸೇನೆ ಅವಶಿಷ್ಟ ನಿರ್ಧನ ಸುಯೋಧನಮಾಯ್ತು=ನೀನು ಮಾಡಿದ ಪುಣ್ಯದಿಂದ ಅಂದರೆ ನಿನ್ನ ಕೆಚ್ಚೆದೆಯ ಹೋರಾಟದಿಂದಾಗಿ ಶತ್ರುವಿನ ಸೇನೆಯಲ್ಲಿ ದುರ್ಯೋದನನ್ನು ಬಿಟ್ಟು ಉಳಿದವರೆಲ್ಲರೂ ಹತರಾದರು;
ಇಂದು ಸಿಂಧುನಂದನ ಧೃತರಾಷ್ಟ್ರರಿರ್ದು ಒರೆಯೆ ನಮ್ಮ ಅರಸನ್ ಮರಳ್ದು ಇಂಬುಕೆಯ್ಗುಮ್ ಎಂದು ಎನಗೆ ಅನುಶಯಮಾದುದು=ಈಗ ನನಗೆ ಆ ಗಂಗಾಪುತ್ರನಾದ ಬೀಶ್ಮ ಮತ್ತು ದ್ರುತರಾಶ್ಟ್ರರು ದುರ್ಯೋದನನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮತ್ತೆ ಸಂದಾನದ ಮಾತನ್ನಾಡಿದರೆ, ನಮ್ಮ ಒಡೆಯನಾದ ದರ್ಮರಾಯನು ಸಂದಿಯನ್ನು ಮಾಡಿಕೊಳ್ಳಲು ಒಪ್ಪಿಕೊಳ್ಳುವನು ಎಂಬ ಆತಂಕ ನನ್ನನ್ನು ಕಾಡುತ್ತಿದೆ; ಅಂತಕ=ಯಮ; ಕೌರವಾಂತಕ=ದುರ್ಯೋದನನ ಪಾಲಿಗೆ ಯಮನಂತಿರುವ ಬೀಮ;
ಕೌರವಾಂತಕಾ, ಸಂಶಯಮಮ್ ಕಳೆ=ಬೀಮನೇ, ನನ್ನ ಮನದ ಸಂಶಯವನ್ನು ಹೋಗಲಾಡಿಸು;
ಖಳ ದುಶ್ಶಾಸನ ವಕ್ಷಸ್ಸ್ಥಳೋಚ್ಚಲತ್ ಕೃಷ್ಣ ರಕ್ತ ಜಲದಿಮ್ ಕೋಪಾನಳನಮ್ ಮಳ್ಗಿಸಿ=ದುರುಳ ದುಶ್ಶಾಸನನ ಎದೆಯಿಂದ ಚಿಮ್ಮಿದ ಕಪ್ಪನೆಯ ರಕ್ತಪಾನದಿಂದ ನಿನ್ನ ಕೋಪವೆಲ್ಲವನ್ನೂ ನೀಗಿಕೊಂಡು; ಹೆಪ್ಪುಗಟ್ಟಿದ ರಕ್ತದ ಬಣ್ಣವು ಕಪ್ಪಗಿರುತ್ತದೆ;
ನೀನುಮ್ ಗಳಾ=ನೀನು ಕೂಡಾ;
ಗಳಿತ ಕೋಪನ್ ಇರ್ಪ ತೆರದಿಂದೆ ಇರ್ದಯ್=ಕೋಪವೆಲ್ಲಾ ತಣ್ಣಗಾದವನಂತೆ ಇದ್ದೀಯೆ;
ಅಹಿತರೊಳ್ ಸಮವಾಯಮ್ ಸಂಧಿ ಮಾಡಿ ಯಮಸೂನು ಪೇಳೆ=ಶತ್ರುಗಳಾದ ಕೌರವರೊಡನೆ ಹೊಂದಿಕೊಂಡು ಸಂದಿಯನ್ನು ಮಾಡಿಕೊಳ್ಳುವಂತೆ ದರ್ಮರಾಯನು ಹೇಳಿದರೆ;
ನಿಮಗೆ ದಲ್ ವನವಾಸವೆ ಶರಣ್=ಪಾಂಡವರಾದ ನಿಮಗೆ ನಿಶ್ಚಿತವಾಗಿಯೂ ವನವಾಸವೇ ಗತಿ;
ಅಂದು ಅಗ್ನಿಮುಖದೆ ಪುಟ್ಟಿದುದರಿಂದೆ ಎನಗಮ್ ಅಗ್ನಿಮುಖಮ್ ಶರಣ್ ಎಂದು ನೊಂದು ನುಡಿಯೆ=ಅಂದು ನಾನು ಯಾಗದ ಬೆಂಕಿಯ ಕುಂಡದಲ್ಲಿ ಹುಟ್ಟಿದುದರಿಂದ ನನಗೆ ಬೆಂಕಿಕುಂಡವೇ ಗತಿ ಎಂದು ನೊಂದು ನುಡಿಯಲು; ಅಂದರೆ ನಿಮಗೆ ವನವಾಸ; ನನಗೆ ಸಾವು ಕಟ್ಟಿಟ್ಟ ಬುತ್ತಿ;
ಮರುನ್ನಂದನನ್ ದರಹಸಿತ ವದನಾರವಿಂದನಾಗಿ ತನ್ನ ಅಂತರ್ಗತದೊಳ್=ವಾಯುಪುತ್ರನಾದ ಬೀಮನು ಮುಗುಳುನಗೆಯ ಮೊಗದಿಂದ ತನ್ನ ಮನದಲ್ಲಿ ಈ ರೀತಿ ಆಲೋಚಿಸತೊಡಗುತ್ತಾನೆ. ಇಲ್ಲಿ ಬೀಮನ ಮೊಗದಲ್ಲಿ ಮುಗುಳುನಗೆಯು ಹೊರಹೊಮ್ಮುತ್ತಿರುವುದು ಆನಂದದಿಂದಲ್ಲ, ದ್ರೌಪದಿಯು ಪಡುತ್ತಿರುವ ಸಂಕಟ ಮತ್ತು ಆತಂಕವನ್ನು ಕಂಡು ಮನನೊಂದ ವಿಶಾದದ ನಗೆಯಾಗಿ ಮೂಡಿಬಂದಿದೆ; ಕುರುರಾಜ+ಅನುಜ; ಅನುಜ=ತಮ್ಮ; ಕುರುರಾಜಾನುಜ=ದುರ್ಯೋದನನ ತಮ್ಮನಾದ ದುಶ್ಶಾಸನ;
ಕುರುರಾಜಾನುಜ ಭೀಕರ ಕರ ವಿಲುಳಿತ ನೀಲಕಬರಿಭರಮಮ್ ಪಿಡಿದುಮ್ ಪರಿಭವಿಸಲ್=ದುಶ್ಶಾಸನನು ತನ್ನ ಬಯಂಕರವಾದ ಕಯ್ಗಳಿಂದ ದ್ರೌಪದಿಯ ಕಡುಕಪ್ಪು ಬಣ್ಣದ ತಲೆಗೂದಲಿನ ಮುಡಿಯನ್ನು ಹಿಡಿದು ತಿರುಚಿ ಎಳೆದಾಡಿ ಅಪಮಾನವನ್ನುಂಟುಮಾಡಲು; ಕೃಷ್ಣೆಗೆ ಮಿಗೆ ಕೋಪಮಮ್ ಮನಸ್ತಾಪಮುಮಮ್. ದೊರೆಕೊಳಿಸದೆ ಎಂದು ಉಪಲಕ್ಷಿಸಿ=ದ್ರೌಪದಿಗೆ ಅತಿಹೆಚ್ಚಿನ ಕೋಪ ಮತ್ತು ಮನದ ಬೇಗುದಿಯು ಉಂಟಾಗುವುದು ಸಹಜವಲ್ಲವೇ ಎಂಬುದನ್ನು ಗಮನಿಸಿ; ಈಗ ಬೀಮನು ತನ್ನ ಮನದಲ್ಲಿ ಅಂದು ದುರ್ಯೋದನನ ಅರಮನೆಯಲ್ಲಿ ದರ್ಮರಾಯನು ಜೂಜಾಟದಲ್ಲಿ ಸೋತಾಗ ನಡೆದ ಪ್ರಸಂಗವನ್ನು ನೆನೆದುಕೊಂಡು ಸಂಕಟ, ಆಕ್ರೋಶ ಮತ್ತು ಸೇಡಿನ ಒಳಮಿಡಿತಗಳಿಂದ ಕುದಿಯತೊಡಗುತ್ತಾನೆ;
ಯಮಪುತ್ರನ್ ಜೂದಿಮ್ ಧಾತ್ರಿಯುಮನ್… ಈ ಹುತಾಶನ ಪುತ್ರಿಯುಮಮ್ ಬರಿದೆ ಸೋಲ್ತನಲ್ಲನ್= ದರ್ಮರಾಯನು ಜೂಜಿನಲ್ಲಿ ರಾಜ್ಯವನ್ನು ಮತ್ತು ಈ ಅಗ್ನಿಪುತ್ರಿಯಾದ ದ್ರೌಪದಿಯನ್ನು ಮಾತ್ರ ಸೋಲಲಿಲ್ಲ.
ರಿಪುಗೆ ಕ್ಷತ್ರಿಯ ತೇಜಮುಮಮ್ ಅಂದೆ ಸೋಲ್ತನಾಗಲೆವೇಡಾ ಎಂದು ಅನಿಲಸುತನ್ ನಿಜಾಗ್ರಜಂಗೆ ಮುಳಿದು=ಹಗೆಗೆ ಜೂಜಿನಲ್ಲಿ ವೀರತನಕ್ಕೆ ಸಂಕೇತವಾದ ಕ್ಶತ್ರಿಯ ತೇಜಸ್ಸನ್ನೂ ಅಂದು ಸೋತನಲ್ಲವೇ ಎಂದು ಬೀಮನು ತನ್ನ ಅಣ್ಣನ ಬಗ್ಗೆ ಕೋಪಿಸಿಕೊಂಡು;
ದ್ರೌಪದಿಯನ್ ಪರಿಭವಿಸುವಲ್ಲಿ ಪವನಸೂನುಗಮ್ ಪಾರ್ಥಂಗಮ್ ನೋಡುತ್ತಿರಲಕ್ಕುಮೆ= ರಾಜಸಬೆಯಲ್ಲಿ ಎಲ್ಲರ ಮುಂದೆ ದ್ರೌಪದಿಯನ್ನು ದುಶ್ಶಾಸನನು ಅಪಮಾನಪಡಿಸುತ್ತಿರುವಾಗ ಬೀಮನೂ ಅರ್ಜುನನೂ ಸುಮ್ಮನೆ ನೋಡುತ್ತಿರಲು ಆಗುತ್ತಿತ್ತೆ. ಈ ರೀತಿ ನಾವಿಬ್ಬರೂ ಸುಮ್ಮನೆ ಕುಳಿತಿರಲು ಏನೋ ದೊಡ್ಡದೊಂದು ಕಾರಣವಿರಬೇಕು;
ಪರವಶದೊಳಿರ್ದರೋ ಮೇಣ್ ಪರಾರ್ಜಿತ ಪ್ರಾಣರಾದರೋ ಎಂದು ತನಗಮ್ ಅರ್ಜುನಂಗಮ್ ಒಡನೆ ಮುಳಿದು=ಅಂದು ನಾವಿಬ್ಬರೂ ಮಯ್ ಮರೆತಿದ್ದೆವೋ ಇಲ್ಲವೇ ನಮ್ಮಿಬ್ಬರ ಪ್ರಾಣ ಬೇರೆಯವರ ವಶದಲ್ಲಿತ್ತೋ ಎಂದು ದ್ರೌಪದಿಯ ಮಾನವನ್ನು ಕಾಪಾಡುವುದಕ್ಕೆ ಮುಂದಾಗದ ತನ್ನ ಮತ್ತು ಅರ್ಜುನನ ಬಗ್ಗೆ ಮರುಗಳಿಗೆಯಲ್ಲಿಯೇ ಕೋಪಿಸಿಕೊಂಡು;
ಅಂದು ಅಣ್ಣನ ಸೂನೃತವಚನಮ್ ಎಂಬ ಮಂತ್ರಾಕ್ಷರದಿಮ್= ಅಂದು ಜೂಜಿನಲ್ಲಿ ಅಣ್ಣನು ಆಡಿದ ಮಾತಿಗೆ ತಪ್ಪಿ ನಡೆಯಬಾರದೆಂಬ ಮಂತ್ರಾಕ್ಶರದ ಮೋಡಿಗೆ ಒಳಗಾಗಿ; ನರನುಮ್ ಆನುಮ್ ವಿನಯಮನೆ ಬಗೆದು ವಿಕ್ರಮಮನೆ ಬಗೆಯೆವೆ= ಅರ್ಜುನನು ಮತ್ತು ನಾನು ಅಣ್ಣನ ಮಾತಿಗೆ ತಲೆಬಾಗಿ ನಡೆಯುವ ವಿನಯವನ್ನೇ ದೊಡ್ಡದೆಂದು ತಿಳಿದು, ಪರಾಕ್ರಮದಿಂದ ಹೋರಾಡಿ ದ್ರೌಪದಿಯ ಮಾನವನ್ನು ಕಾಪಾಡುವುದು ದೊಡ್ಡದೆಂದು ತಿಳಿಯಲಿಲ್ಲ;
ಎನಗಮ್ ಸಮ್ಮೋಹನಮ್ ಆದುದಕ್ಕುಮ್ ಎಂದು ಪಶ್ಚಾತ್ತಾಪಮ್ ಗೆಯ್ದು= ನನ್ನ ತಾಯಿ, ಅಣ್ಣತಮ್ಮಂದಿರು ಮತ್ತು ಹೆಂಡತಿಯಾದ ದ್ರೌಪದಿಗೆ ಏನಾದರೂ ಆಪತ್ತು ಬಂದಾಗ ಮುನ್ನುಗ್ಗಿ ತಡೆದು ಹೋರಾಡುತ್ತಿದ್ದ ನನಗೂ ಅಂದು ಮಂಕು ಕವಿದಂತಾಯಿತು ಎಂದು ದ್ರೌಪದಿಯನ್ನು ಕಾಪಾಡದೆ ಇದ್ದುದಕ್ಕಾಗಿ ಪಶ್ಚಾತ್ತಾಪಪಟ್ಟು;
ಕುರುಕುಲ ವಿಳಯಜ್ವಾಲೆ… ಸುಯೋಧನ ಪ್ರಳಯಕಾಲೆ… ಪಾಂಚಾಲಿಯ ವದನಮಮ್ ನೋಡಿ=ಕುರುವಂಶಕ್ಕೆ ಪ್ರಳಯದ ಬೆಂಕಿಯಾಗಿರುವ… ಸುಯೋದನನ ಪಾಲಿಗೆ ಯಮರೂಪಿಯಾಗಿರುವ ದ್ರೌಪದಿಯ ಮೊಗವನ್ನು ನೋಡಿ;
ನಳಿನಾನನೆ, ನಿನ್ನ ಆನನದಿಮ್ ನಯನ ವಾರಿ ಗಳಿಯಿಸುತಿರೆ… ಕಬರಿಭರಮ್ ಗಳಿಯಿಸುತಿರೆ=ಎಲೈ ದ್ರೌಪದಿಯೇ, ನಿನ್ನ ಮೊಗದಿಂದ ಕಣ್ಣೀರು ಸುರಿಯುತ್ತಿರಲು… ನಿನ್ನ ಮುಡಿ ನೇತಾಡುತ್ತಿರಲು;
ನೀನಿರೆ=ಸಂಕಟ ಮತ್ತು ಅಪಮಾನದ ಬೇಗೆಯಲ್ಲಿ ನೀನು ಬೇಯುತ್ತಿರುವಾಗ;
ಕುರುಕುಳಾಂತಕನ್ ಈ ಭೀಮನ್ ಗಳಿತಕೋಪನೇ=ಕುರುಕುಲಕ್ಕೆ ಯಮನಾದ ಈ ಬೀಮನು ಕೋಪವಿಲ್ಲದ ಶಾಂತಮೂರ್ತಿಯೇ;
ಸತ್ಯಪ್ರತಿಜ್ಞನ್ ಎನೆ ಕುರುಪತ್ಯೂರು ಕಿರೀಟ ಭಂಗಮಮ್ ಪಡೆದು ಜಗತ್ ಸ್ತುತ್ಯ ಕೃತಕೃತ್ಯನ್ ಎನಿಸದೆ ಸತ್ಯಾಶ್ರಯ ಪೆಸರ್ಗೆ ಮುಯ್ಯನಾಂಪನೆ ಭೀಮನ್=ನುಡಿದಂತೆ ನಡೆಯುವವನು ಎಂದು ಹೆಸರಾಂತ ಈ ಬೀಮನು ಕುರುಪತಿಯಾದ ದುರ್ಯೋದನನ ಕಿರೀಟವನ್ನು ಪುಡಿಗಟ್ಟಿ, ಜಗತ್ತು ಮೆಚ್ಚುವಂತಹ ಕಾರ್ಯವನ್ನು ಮಾಡಿದವನು ಎಂದು ಹೊಗಳಿಸಿಕೊಳ್ಳದೆ ಸತ್ಯಾಶ್ರಯವೆಂಬ ಹೆಸರಿಗೆ ಪಾತ್ರನಾಗುತ್ತಾನೆಯೇ;
ನೀನ್ ಅಗ್ನಿಪುತ್ರಿಯಯ್… ಪವಮಾನ ತನೂಭವನೆನ್=ನೀನು ಅಗ್ನಿದೇವನ ಮಗಳಾಗಿರುವೆ… ನಾನು ವಾಯುದೇವನ ಮಗನಾಗಿರುವೆ; ಆನ್ ಅಣಮ್ ಕೂಡೆ… ಅರಿನೃಪರೊಳ್ ಸಂಧಾನಮ್ ಎಂತು=ನಾನು ಅತಿಶಯವಾಗಿ ನಿನ್ನೊಡನೆ ಕೂಡಿರಲು… ಶತ್ರುರಾಜರೊಡನೆ ಸಂದಿಯು ಹೇಗೆ ತಾನೆ ಆಗುತ್ತದೆ;
ಅನಲ ಅನಿಲ ಸಂಯೋಗಮ್ ಪಗೆಯಮ್ ಉರಿಪದಿರ್ಕುಮೆ=ಬೆಂಕಿ ಮತ್ತು ಗಾಳಿಯ ಕೂಡುವಿಕೆಯು ಹಗೆಯನ್ನು ಸುಡದಿರುವುದೇ;
ಪರಾಭವಜ್ವಲನ ಧೂಮಕೃಷ್ಣಮ್ ಕೃಷ್ಣೇ=ಅವಮಾನವೆಂಬ ಉರಿಯ ಹೊಗೆಯಿಂದ ಕಪ್ಪಾದ ಮುಡಿಯುಳ್ಳ ದ್ರೌಪದಿಯೇ; ಪರಮೇಶ್ವರಿ, ಕುರುಕುಲಜೀವಾಕರ್ಷಣ ಪರಿಣತಮ್= ಪರಮೇಶ್ವರಿ, ಈ ನಿನ್ನ ಮುಡಿಯು ಕುರುಕುಲದವರ ಜೀವಗಳನ್ನು ಸೆಳೆಯುವುದರಲ್ಲಿ ಪರಿಣತಿಯನ್ನು ಹೊಂದಿದೆ;
ಇದು ಕಾಳಹಸ್ತಮಲ್ಲದೆ ಕೇಶಹಸ್ತಮಕ್ಕುಮೆ=ಇದು ದುರ್ಯೋದನಾದಿಗಳಿಗೆ ಯಮಪಾಶವಲ್ಲದೆ ಕೇಶಪಾಶವಲ್ಲ;
ಕುರುನಂದನರಮ್ ಕೊಂದೆನ್=ಕುರುವಂಶದ ಮಕ್ಕಳನ್ನು ಕೊಂದೆನು;
ಕುರುಶಾಬಾನುಜನ ನೆತ್ತರಮ್ ಕುಡಿದೆನ್=ದುರ್ಯೋದನನ ತಮ್ಮನಾದ ದುಶ್ಶಾಸನನ ನೆತ್ತರನ್ನು ಕುಡಿದೆನು;
ಪೂಣ್ದ ಎರಡಮ್ ತೀರ್ಚಿದೆನ್=ನಾನು ಮಾಡಿದ್ದ ಪ್ರತಿಜ್ನೆಗಳಲ್ಲಿ ಎರಡನ್ನು ಈಡೇರಿಸಿದ್ದೇನೆ;
ಇರ್ದಪುವು ಎರಡುಮಮ್=ಇನ್ನೆರಡು ಪ್ರತಿಜ್ನೆಗಳು ಉಳಿದುಕೊಂಡಿವೆ;
ಅವಮ್ ತೀರ್ಚಿ ಪಗೆಯಮ್ ತೀರ್ಚದಿರ್ಪೆನೆ=ಅವನ್ನು ಕಯ್ಗೊಂಡು ಹಗೆಯನ್ನು ನಾಶಮಾಡದೆ ಇರುತ್ತೇನೆಯೇ;
ಊರುಗಳನ್ ಉಡಿವೆನ್= ದುರ್ಯೋದನನ ತೊಡೆಗಳನ್ನು ಮುರಿಯುತ್ತೇನೆ;
ಕೌರವ ಪರಿವೃಢನ ಮಕುಟಮಮ್ ಒದೆವೆನ್=ಕೌರವ ಚಕ್ರವರ್ತಿಯ ಕಿರೀಟವನ್ನು ಒದ್ದು ಪುಡಿಮಾಡುವೆನು; ವೇಣೀಸಂಹಾರ=ಜಡೆಯನ್ನು ಒಟ್ಟುಗೂಡಿಸಿ ಕಟ್ಟುವುದು/ಜಡೆಯನ್ನು ಹೆಣೆಯುವುದು;
ವೇಣೀಸಂಹಾರಮ್ ಮಾಡುವೆನ್=ಬಿಚ್ಚಿರುವ ನಿನ್ನ ಮುಡಿಯನ್ನು ಹೆಣೆದು ಕಟ್ಟುವೆನು;
ಅದರಿಮ್ ಭಾರಮದು ಇನಿತಲ್ಲದು ಎನ್ನ ಪರಿಭವಭಾವಮ್=ಆದ್ದರಿಂದ ಹಗೆಯನ್ನು ಸದೆಬಡಿದು ಸೋಲಿಸುವ ಜವಾಬ್ದಾರಿಯು ದೊಡ್ಡದೇನಲ್ಲ; ತಳೋದರಿ=ತೆಳ್ಳನೆಯ ಸೊಂಟವನ್ನುಳ್ಳ ಹೆಣ್ಣು/ಸುಂದರಿ/ದ್ರೌಪದಿ;
ಕುರುಕುಲಶೋಣಿತ ಪಾದಪದ್ಮತಳಮ್ ವೃಕೋದರನ್ ತಳೋದರಿಗೆ ಕಚಬಂಧ ಬಂಧುರತೆಯನ್ ಆಗಿಪನ್=ಕುರುಕುಲದ ರಕ್ತದಿಂದ ತೊಯ್ದು ಕೆಂಪಾಗಿರುವ ಪಾದಗಳನ್ನುಳ್ಳ ಈ ಬೀಮನು ದ್ರೌಪದಿಗೆ ಮುಡಿಕಟ್ಟುವ ಮನೋಹರವಾದ ಕಾರ್ಯವನ್ನು ನೆರವೇರಿಸುತ್ತಾನೆ;
ಆತನ ಪೂಣ್ದ ಪೂಣ್ಕೆ ಶಿಲಾತಳಾಕ್ಷರಮ್ ಎನಿಸಿರ್ಪ ಜನೋಕ್ತಿಯಮ್ ಪುಸಿ ಮಾಳ್ಪೆನೇ=ಆ ಬೀಮನು ಮಾಡಿದ ಪ್ರತಿಜ್ನೆ ಎಂದರೆ “ಅದು ಶಿಲೆಯ ಮೇಲೆ ಕೆತ್ತಿದ ಅಕ್ಕರ / ಶಾಸನ ಬರಹ ” ಎಂದೆನ್ನುವ ಜನರ ಮಾತನ್ನು ಸುಳ್ಳನ್ನಾಗಿಸುತ್ತೇನೆಯೇ; ಅರ=ಯಮದರ್ಮ; ಅರನ ಮಗ=ಯಮನೆಂಬ ದೇವತೆಯ ಅನುಗ್ರಹದಿಂದ ಹುಟ್ಟಿದ ದರ್ಮರಾಯ; ಬಾನ್+ತೊರೆ; ಬಾನ್=ಆಕಾಶ; ತೊರೆ=ನದಿ; ಬಾಂದೊರೆ=ಗಂಗಾ ನದಿ; ಬಾಂದೊರೆಯ ಮಗ=ಗಂಗಾದೇವಿಯ ಮಗ ಬೀಶ್ಮ;
ಅರನ ಮಗನ್ ಪ್ರಾರ್ಥಿಸೆ… ಬಾಂದೊರೆಯ ಮಗನ್ ಮಾಡೆ ಸಂಧಿಯಾದಪುದು ಎನುತುಮ್ ಮರುಗದಿರ್=ದರ್ಮರಾಯನು ಕೋರಿಕೊಂಡರೆ ಇಲ್ಲವೇ ಬೀಶ್ಮನು ಸೂಚಿಸಿದರೆ ದುರ್ಯೋದನನೊಡನೆ ಸಂದಿಯಾಗಿ, ಕುರುಕ್ಶೇತ್ರ ಯುದ್ದ ನಿಲ್ಲುವುದೆಂದು ಕೊರಗಬೇಡ;
ಅಣ್ಣನ ಮಾತನ್ ಪೆರಗಿಕ್ಕುವೆನ್=ಅಣ್ಣನ ಮಾತನ್ನು ನಾನು ಲೆಕ್ಕಿಸಿದೆ ತಳ್ಳಿಹಾಕುತ್ತೇನೆ;
ಅಜ್ಜನಿರ್ದು ಮಾಣ್ಬೊಡಮ್ ಈಯೆನ್ ಎಂದು=ಅಜ್ಜನಾದ ಬೀಶ್ಮನೇ ಆಸಕ್ತಿಯನ್ನು ವಹಿಸಿ ಯುದ್ದವನ್ನು ನಿಲ್ಲಿಸಿ ಸಂದಾನದ ಪ್ರಸ್ತಾಪವನ್ನು ಮಾಡಿದರೂ, ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ ಎಂದು; ಕಾಲ+ಅನಲನ್+ಉಮ್; ಕಾಲಾನಲ=ಪ್ರಳಯಕಾಲದ ಬೆಂಕಿ;
ಕೌರವ್ಯ ಕುಲಕಾಲಾನಲನುಮ್=ಕುರುಕುಲಕ್ಕೆ ಪ್ರಳಯಕಾಲದ ಬೆಂಕಿಯಾದವನು; ನಿರ್ವ್ಯಾಜ=ಸಹಜವಾದ; ನಿಬಿಡ=ದಟ್ಟವಾದ/ಒತ್ತಾದ;
ಕುರುರಾಜ ನಿರ್ವ್ಯಾಜ ನಿಬಿಡ ಊರುಧ್ವಯಭಂಗ ಪ್ರತಿಜ್ಞಾಭಾರನುಮ್=ಕುರುರಾಜನ ಗಟ್ಟಿಮುಟ್ಟಾಗಿರುವ ಎರಡು ತೊಡೆಗಳನ್ನು ಮುರಿಯುತ್ತೇನೆ ಎಂಬ ಪ್ರತಿಜ್ನೆಯನ್ನು ಹೊತ್ತಿರುವವನು;
ಫಣಿಪತಿಕೇತನ ಧೂಮಕೇತುವುಮ್=ಹಾವುಗಳ ಒಡೆಯನಾದ ಆದಿಶೇಶನ ಲಾಂಚನವುಳ್ಳ ದುರ್ಯೋದನನ ಪಾಲಿಗೆ ಕೇಡನ್ನು ತರುವ ದೂಮಕೇತುವಾದವನು;
ಪಾಂಡವಬಲ ಪ್ರಾಕಾರನುಮ್=ಪಾಂಡವರ ಪಡೆಯನ್ನು ಕಾಪಾಡುವ ಕೋಟೆಯಾದವನು;
ಏಕಾಂಗವೀರನುಮ್=ಒಬ್ಬನೇ ಹೋರಾಡಿ ಗೆಲ್ಲಬಲ್ಲ ಶೂರನಾದವನು;
ಜರಾಸಂಧಸಂಧಿಬಂಧ ವಿಘಟನನುಮ್=ಜರಾಸಂದನೆಂಬ ರಾಜನ ದೇಹವನ್ನು ಇಬ್ಬಾಗವಾಗಿ ಹೋಳು ಮಾಡಿದವನು; ರನ್ನ ಕವಿಗೆ ಆಶ್ರಯದಾತನಾಗಿದ್ದ ಚಾಳುಕ್ಯ ವಂಶದ ಸತ್ಯಾಶ್ರಯ ಚಕ್ರವರ್ತಿಗೆ ಇದ್ದ “ಇರಿವ ಬೆಡಂಗ—ಅಕಳಂಕ ಚರಿತ—ಅಮ್ಮನ ಗಂದವಾರಣ—ಸಾಹಸಾಂಕ” ಎಂಬ ಬಿರುದುಗಳನ್ನು ಬೀಮಸೇನನ ವ್ಯಕ್ತಿತ್ವವನ್ನು ಬಣ್ಣಿಸುವಾಗ ಜತೆಗೂಡಿಸಿದ್ದಾನೆ. ಏಕೆಂದರೆ ಸತ್ಯಾಶ್ರಯ ಚಕ್ರವರ್ತಿಯನ್ನು ಬೀಮನ ಪಾತ್ರದೊಡನೆ ಕವಿ ರನ್ನನು ಸಮೀಕರಿಸಿದ್ದಾನೆ;
ಇರಿವ ಬೆಡಂಗನುಮ್=ಯುದ್ದ ಮಾಡುವುದರಲ್ಲಿ ನಿಪುಣ; ಅಕಲಂಕಚರಿತನುಮ್=ಕಳಂಕರಹಿತವಾದ ನಡೆನುಡಿಯುಳ್ಳವನು/ಸದ್ಗುಣವಂತ; ಅಮ್ಮ=ತಂದೆ; ಗಂಧವಾರಣ=ಮದವೇರಿದ ಆನೆ;
ಅಮ್ಮನ ಗಂಧವಾರಣನುಮ್=ತಂದೆಯ ಮದವೇರಿದ ಆನೆ; ಇದು ಸತ್ಯಾಶ್ರಯನಿದ್ದ ಬಿರುದುಗಳಲ್ಲಿ ಒಂದು. ತನ್ನ ತಂದೆಯ ಕಾರ್ಯಗಳಲ್ಲಿ ಮದ್ದಾನೆಯಂತೆ ಮುನ್ನುಗ್ಗುವವನು ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ; ಸಾಹಸ+ಅಂಕ; ಅಂಕ=ವೀರ/ಜಟ್ಟಿ;
ಸಾಹಸಾಂಕನುಮ್ ಎನಿಸಿದ ಭೀಮಸೇನನ್=ಸಾಹಸವೀರನೆಂದು ಹೆಸರಾಂತ ಬೀಮಸೇನನು;
ಅಂತು ಆರೂಢಕೋಪನುಮ್ ಪ್ರತಿಜ್ಞಾರೂಢನುಮ್ ಆಗೆ=ಆ ರೀತಿ ಮಹಾಕೋಪವೇಶದಿಂದ ತನ್ನ ಪ್ರತಿಜ್ನೆಯನ್ನು ಈಡೇರಿಸಲು ಸಿದ್ದನಾದಾಗಲು; ಸಮದ+ಇಭ+ಕುಂಭ+ಭೇದನ; ಸಮದ=ಮದಿಸಿದ; ಇಭ=ಆನೆ; ಕುಂಭ=ಆನೆಯ ತಲೆಯ ಮೇಲೆ ಗುಂಡಾಗಿ ಉಬ್ಬಿರುವ ಬಾಗ/ನೆತ್ತಿ; ಭೇದನ=ಸೀಳುವುದು; ಸಮಯ+ಉಗ್ರ+ನಖ; ಉಗ್ರ=ಬಯಂಕರವಾದ; ನಖ=ಪಂಜ/ಉಗುರು; ಹರಿ=ಸಿಂಹ; ಮೃಗ=ಜಿಂಕೆ; ರಿಪು=ಶತ್ರು;
ಸಮದೇಭಕುಂಭಭೇದನ ಸಮಯೋಗ್ರನಖಂಗೆ ಹರಿಗೆ ಮೃಗರಿಪು ಪೆಸರ್ ಉತ್ತಮಿಕೆಯೆ=ಮದವೇರಿದ ಆನೆಯ ಕುಂಬವನ್ನೇ ಸೀಳುವ ಅಂಕುಶದಂತಹ ಹರಿತವಾದ ಪಂಜಗಳುಳ್ಳ ಸಿಂಹಕ್ಕೆ ‘ಜಿಂಕೆಯ ಶತ್ರು’ ಎಂಬ ಹೆಸರು ಸರಿಹೊಂದುವುದೇ;
ಜರಾಸಂಧಮಥನ ನಿನಗೆ ಕುರುವೈರಿ ಪೆಸರ್ ಅದೇನ್ ಉನ್ನತಿಯೇ=ಜರಾಸಂದನನ್ನೇ ಸೀಳಿ ಕೊಂದಿರುವ ನಿನಗೆ ‘ಕುರುವಂಶದ ಶತ್ರು’ ಎಂಬ ಹೆಸರು ಅದೇನು ಬಹುದೊಡ್ಡದೇ;
ಇರಿವಬೆಡಂಗ ದೇವ ಪರಮೇಶ್ವರ ಸಾಹಸಭೀಮ ನಿನ್ನೊಳ್ ಆರ್ ಇರಿದು ಬರ್ದುಂಕುವರ್=ಇರಿವಬೆಡಂಗ… ದೇವ ಪರಮೇಶ್ವರ… ಸಾಹಸ ಬೀಮ… ನಿನ್ನೊಡನೆ ಹೋರಾಡಿ ಯಾರು ತಾನೆ ಬದುಕಬಲ್ಲರು;
ಯುದ್ಧದೊಳ್ ನಿಜಭುಜ ಉಗ್ರಗದಾಪರಿಘ ಪ್ರಹಾರದಿಮ್=ಯುದ್ದದಲ್ಲಿ ನಿನ್ನ ಬುಜದ ಮೇಲಣ ಬಯಂಕರವಾದ ಗದಾಪರಿಗದ ಹೊಡೆತದಿಂದ; ಪರಿವರಿಯಾಗಿ=ಕತ್ತರಿಸಿ ತುಂಡುತುಂಡಾಗಿ;
ಪುಣ್ಣುವೆಣನಾಗಿ=ಗಾಯಗಳಿಂದ ಗಾಸಿಗೊಂಡ ಹೆಣವಾಗಿ;
ಮರುಳ್ಗೆ ಉಣಿಸಾಗಿ=ಪಿಶಾಚಿಗಳಿಗೆ ಉಣಿಸಾಗಿ;
ಕುರಿದರಿಯಾಗಿ ಬಿಳ್ದ ಅರಿಬಲಂಗಳೆ ಪೇಳವೆ ನಿನ್ನ ಬೀರಮಮ್ ಎಂದು ಅನಲನಂದನೆ ಅನಿಲನಂದನನನ್ ಪೊಗಳ್ದು=ಬಲಿಗಂಬದ ಬಳಿ ಕತ್ತರಿಸಿ ಬಿದ್ದ ಕುರಿಗಳ ರಾಶಿಯಂತೆ ಯುದ್ದರಂಗದಲ್ಲಿ ತುಂಡುತುಂಡಾಗಿ ಬಿದ್ದಿರುವ ಹಗೆಯ ಪಡೆಗಳೇ ಹೇಳುತ್ತಿಲ್ಲವೇ ನಿನ್ನ ಪರಾಕ್ರಮದ ಮಹಿಮೆಯನ್ನು ಎಂದು ಅಗ್ನಿಪುತ್ರಿಯಾದ ದ್ರೌಪದಿಯು ವಾಯುಪುತ್ರನಾದ ಬೀಮನನ್ನು ಹೊಗಳಿ;
ಒಡಲ್ ಒಡಮೆ ಎಂಬ ಇವೆರಡುಮ್ ಕೆಡಲಿರ್ಪುವು=ಮಾನವರ ದೇಹ ಮತ್ತು ಮಾನವರ ಬಳಿ ಇರುವ ಸಂಪತ್ತು ಎಂಬ ಇವೆರಡು ಒಂದಲ್ಲ ಒಂದು ದಿನ ಇಲ್ಲವಾಗುತ್ತವೆ;
ಕೆಡದ ಕಸವರಮ್ ಜಸಮ್=ಎಂದೆಂದಿಗೂ ನಾಶವಾಗದ ಸಂಪತ್ತೆಂದರೆ ಒಳ್ಳೆಯ ನಡೆನುಡಿಯಿಂದ ಬರುವ ಕೀರ್ತಿ;
ಅದರಿಮ್ ಇರಿವ ಬೆಡಂಗಾ… ಕೆಡುವ ಒಡಲ್ ಒಡಮೆಯನ್ ಎಂದುಮ್ ಕೆಡದ ಒಡಮೆಗೆ ಮಾರುಗುಡುವುದು=ಆದ್ದರಿಂದ ಮಹಾಶೂರನಾದ ಬೀಮನೇ… ಕೆಡುವ ದೇಹ ಮತ್ತು ಸಂಪತ್ತನ್ನು ಎಂದೆಂದಿಗೂ ಕೆಡದ ಸಂಪತ್ತಿಗಾಗಿ ಅರ್ಪಿಸುವುದು. ಅಂದರೆ ಈ ದೇಹ ಮತ್ತು ಸಂಪತ್ತನ್ನು ಒಳ್ಳೆಯ ಕೆಲಸಕ್ಕಾಗಿಯೇ ಮುಡಿಪಾಗಿಡಬೇಕು;
ಮಣಿ ಕನಕಮ್ ವಸ್ತು ವಿಭೂಷಣಂಗಳಮ್ ಕೊಟ್ಟು ಪೆಂಡಿರ್ ಒಲ್ವರೆ=ರತ್ನ ವಜ್ರ ವೈಡೂರ್ಯ ಮುತ್ತು ಚಿನ್ನದಿಂದ ಮಾಡಿದ ಒಡವೆಗಳನ್ನು ಕೊಟ್ಟರೆ ಹೆಣ್ಣುಗಳು ಒಲಿಯುತ್ತಾರೆಯೇ;
ಗಂಡರ್ ಗುಣಮನೆ ಮೆರೆವುದು=ಶೂರರಾದ ಗಂಡಸರು ತಮ್ಮ ಸಾಹಸ ಪರಾಕ್ರಮ ಸಜ್ಜನಿಕೆಯ ಗುಣದಿಂದ ಮೆರೆದು ಹೆಣ್ಣನ್ನು ಒಲಿಸಿಕೊಳ್ಳಬೇಕು;
ಇರಿವಬೆಡಂಗಾ, ನಿನ್ನಂತೆ ಶಸ್ತ್ರವ್ರಣಮಮ್ ಮೆರೆವುದು ಎಂದು ಮೂದಲಿಸಿ ನುಡಿಯೆ= ಇರಿವ ಬೆಡಂಗಾ, ನಿನ್ನಂತೆ ಕಾಳೆಗದ ಕಣದಲ್ಲಿ ಹೋರಾಡಿ ಶಸ್ತ್ರಗಳಿಂದ ಆದ ಗಾಯಗಳನ್ನು ಮೆರೆಯಬೇಕು ಎಂದು ಬೀಮನ ಮಯ್ ಮನದಲ್ಲಿ ಆಕ್ರೋಶದ, ಸೇಡಿನ ಮತ್ತು ಮೆಚ್ಚುಗೆಯ ಒಳಮಿಡಿತಗಳು ಕೆರಳುವಂತೆ ದ್ರೌಪದಿಯು ಮಾತನಾಡಲು;
ಭೀಮಸೇನನ ಅನುಮತದೊಳ್ ನರ್ಮ ಸಚಿವನುಮ್ ಪರಿಹಾಸಕ ಶೀಲನುಮ್ ಎನಿಸಿದ ವಿದೂಷಕನ್ ಎಂದನ್=ಬೀಮಸೇನನಿಗೆ ಪ್ರಿಯನಾದ, ಆಪ್ತ ಸಚಿವನಾದ ಮತ್ತು ವಿನೋದದ ಮಾತುಕತೆಯಲ್ಲಿ ನಿಪುಣನೆಂದ ಹೆಸರಾಂತ ವಿದೂಷಕನು ಬೀಮಸೇನನ ಪರಾಕ್ರಮವನ್ನು ಬಣ್ಣಿಸತೊಡಗಿದನು;
ಇನ್ನೆಲ್ಲಿಯ ಧೃತರಾಷ್ಟ್ರನ್… ಎತ್ತಣ ಗಾಂಗೇಯನ್… ಎಲ್ಲಿಯ ಸಂಧಿ ಕಾರ್ಯಮ್=ಇನ್ನೆಲ್ಲಿಯ ದ್ರುತರಾಶ್ಟ್ರ… ಎತ್ತಣ ಗಾಂಗೇಯ… ಎಲ್ಲಿಯ ಸಂದಿ ಕಾರ್ಯ; ಬೀಮನು ಸಂದಾನವನ್ನು ನಿರಾಕರಿಸಿ, ದ್ರೌಪದಿಯ ಅಪಮಾನಕ್ಕೆ ತಕ್ಕ ಪ್ರತೀಕಾರವನ್ನು ಮಾಡುವ ತನ್ನ ಪ್ರತಿಜ್ನೆಯನ್ನು ಕಯ್ಗೊಂಡಿರುವುದರಿಂದ ದ್ರುತರಾಶ್ಟ್ರನ ಮೊರೆಗಾಗಲಿ, ಗಾಂಗೇಯನ ಹಿತನುಡಿಗಾಗಲಿ… ಸಂದಾನಕ್ಕಾಗಲಿ ಅವಕಾಶವಿಲ್ಲ;
ದುಶ್ಶಾಸನಾದಿಗಳಪ್ಪ ನೂರ್ವರ್ ಕೌರವರುಮನ್ ಅಗುರ್ವಾಗೆ ಕೊಂದಿಕ್ಕಿದನ್=ದುಶ್ಶಾಸನನನ್ನು ಮೊದಲುಗೊಂಡು ನೂರು ಮಂದಿ ಕೌರವರನ್ನು ಬಯಂಕರವಾದ ರೀತಿಯಲ್ಲಿ ಬೀಮಸೇನನು ಕೊಂದಿದ್ದಾನೆ;
ಇನ್ನೊರ್ಬನ್ ಉಳಿದನ್=ಇನ್ನೊಬ್ಬ ಮಾತ್ರ ಜೀವಂತವಾಗಿ ಉಳಿದಿದ್ದಾನೆ;
ದುರ್ಯೋಧನನನ್ ಕೊಲ್ವುದುಮ್… ಗೆಲ್ವುದುಮ್ ನಮ್ಮ ಅರಸಂಗೆ ಆವುದು ಗಹನಮ್. ಅದರ್ಕೆ ಚಿಂತಿಸದಿರಿಮ್ ಎಂದು=ದುರ್ಯೋದನನನ್ನು ಕೊಲ್ಲುವುದಾಗಲಿ ಇಲ್ಲವೇ ಗೆಲ್ಲುವುದಾಗಲಿ ನಮ್ಮ ಅರಸನಾದ ಬೀಮಸೇನನಿಗೆ ಯಾವ ದೊಡ್ಡ ಸಂಗತಿ. ಅದಕ್ಕಾಗಿ ಚಿಂತಿಸಬೇಡಿ ಎಂದು ದ್ರೌಪದಿಯು ಸಮಾದಾನಗೊಳ್ಳುವಂತೆ ನುಡಿದು;
ಪಾಂಚಾಲರಾಜ ತನೂಜೆಯ ಮೊಗಮಮ್ ನೋಡಿ= ಪಾಂಚಾಲರಾಜನ ಮಗಳಾದ ದ್ರೌಪದಿಯ ಮೊಗವನ್ನು ನೋಡುತ್ತ;
ಕುರುಕುಲಮಮ್ ನುಂಗಿದಯ್=ಕುರುಕುಲದ ಸಂತಾನವೆಲ್ಲವನ್ನೂ ಬಲಿತೆಗೆದುಕೊಂಡೆ;
ಕುರುಪತಿಯುಮನ್… ಇನ್ನರೆಬರುಮಮ್ ನುಂಗಲಿರ್ಪೆ=ದುರ್ಯೋದನನನ್ನು ಮತ್ತು ಕುರುಕುಲದಲ್ಲಿ ಇನ್ನೂ ಅಳಿಯದೆ ಉಳಿದವರನ್ನು ನುಂಗಲಿರುವೆ;
ಇನ್ನೆರಡನೆಯ ಹಿಡಿಂಬಿಯನ್ ರಕ್ಕಸಿಯನ್ ನಿನ್ನನ್ನು ಎಮ್ಮರಸನ್ ಎಲ್ಲಿ ತಂದನೊ ಎಂದು ವಿದೂಷಕನ್=ಎರಡನೆಯ ಹಿಡಿಂಬಿಯೂ ರಕ್ಕಸಿಯೂ ಆದ ನಿನ್ನನ್ನು ನಮ್ಮ ಅರಸನು ಎಲ್ಲಿ ಹಿಡಿದು ಕರೆತಂದೆನೋ ಎಂದು ವಿದೂಶಕನು ಆಡಿದ ವಿನೋದಪೂರ್ಣವಾದ ನುಡಿಗಳನ್ನು ಕೇಳಿ;
ಅಳುತ್ತುಮ್ ಬಂದ ತನ್ನನ್… ನಗುತ್ತುಮ್ ಪೋಪಂತೆ ಸಂತೋಷಮ್ ಮಾಡಿಸಿದುದರ್ಕೆ ಒಡಂಬಟ್ಟು… ಚಾರುಹಾಸಿನಿ ನಿಜನಿವಾಸಕ್ಕೆ ಪೋದಳ್=ಅಳುತ್ತ ಬಂದ ತನ್ನನ್ನು… ನಗುತ್ತ ಹೋಗುವಂತೆ ಆನಂದಪಡಿಸುವಂತಹ ನುಡಿಗಳನ್ನಾಡಿದ್ದಕ್ಕೆ ಮೆಚ್ಚುಗೆಯನ್ನು ಸೂಸುತ್ತ… ನಗುಮೊಗದಿಂದ ದ್ರೌಪದಿಯು ತನ್ನ ರಾಣಿವಾಸಕ್ಕೆ ಹೋದಳು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು