ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 2ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 2: ದುರ್ಯೋಧನನು ಅಶ್ವತ್ಥಾಮ ಮತ್ತು ದ್ರೋಣರನ್ನು ತೆಗಳುವುದು ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಸಂಜಯ ವಚನಮ್’ ಎಂಬ ಹೆಸರಿನ 3ನೆಯ ಅದ್ಯಾಯದ 1ನೆಯ ಪದ್ಯದಿಂದ 8ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು.
*** ಪ್ರಸಂಗ – 2: ದುರ್ಯೋಧನನು ಅಶ್ವತ್ಥಾಮ ಮತ್ತು ದ್ರೋಣರನ್ನು ತೆಗಳುವುದು ***
ಅನ್ನೆಗಮ್ ಇತ್ತ ಕುರುಕುಲಪಿತಾಮಹನುಮ್ ಆಹವಭೀಷ್ಮನುಮ್ ಎನಿಸಿದ ಭೀಷ್ಮನ ಶರಶಯನದೊಳಮ್… ಬಿಲ್ಲ ಜಾಣಮ್ ದ್ರೋಣನ ಅಳಿವಿನೊಳಮ್… ತನ್ನ ಮಯ್ದುನಮ್ ಜಯದ್ರಥನ ವಿಪತ್ತಿನೊಳಮ್… ತನ್ನ ಅಣುಗದಮ್ಮನ್ ದುಶ್ಶಾಸನನ ಪಂಚತ್ವ ಪ್ರಪಂಚದೊಳಮ್… ತನ್ನ ಅಣುಗಾಳಪ್ಪ ಕರ್ಣನ ಸಾವಿನೊಳಮ್… ತನ್ನ ಮಾವನಪ್ಪ ಶಲ್ಯನ ಸಂಹರಣದೊಳಮ್… ಕುರುಕುಲ ಚೂಡಾಮಣಿಯುಮ್… ಪನ್ನಗಪತಾಕನುಮ್… ಕನಕಲತಾಲಾಂಛಿತ ಉತ್ತುಂಗ ಘನಗದಾಯುಧನುಮ್… ದಿವ್ಯಮುನಿವರ ಅಪರಾಧನುಮ್… ಸಕಲ ಲಕ್ಷ್ಮೀನಿವಾಸನುಮ್… ಸಮರಧೈರ್ಯನುಮ್… ಮಹಾಶೌರ್ಯನುಮ್… ರಾಧೇಯ ನಿಜ ಸಹಾಯನುಮ್… ಛಲದಂಕಮಲ್ಲನುಮ್… ಸಕಲಭೋಗಲಕ್ಷ್ಮೀಪತಿಯುಮ್… ಅಭಿಮಾನಧನನುಮ್ ಎನಿಸಿದ ಸುಯೋಧನನ್ ಚಿಂತಾಕ್ರಾಂತನಾಗಿ…
ದುರ್ಯೋಧನ: ಅಸುಹೃತ್ಸೇನೆಗೆ ಸಾಲ್ವನ್ ಒರ್ವನೆ ಗಡಮ್… ರುದ್ರಾವತಾರನ್ ಗಡಮ್… ನೊಸಲೊಳ್ ಕಣ್ ಗಡಮ್ ಎಂದು ನಚ್ಚಿ ಪೊರೆದೆನ್.
ತಾನಕ್ಕೆ…ತಮ್ಮಮ್ಮನಕ್ಕೆ… ಅಂಬಮ್ ತಿರುವಾಯ್ಗೆ ತಂದು ಇಸಲ್ ಅರಿವರೇ… ತಾಮ್ ಇರ್ವರುಮ್ ಕಯ್ದುವಮ್ ಬಿಸುಟರ್. ದ್ರೌಣಿಯುಮ್
ದ್ರೋಣನುಮ್ ಜೋಳದ ಪಾಳಿಯಮ್ ಬಗೆದರಿಲ್ಲಾ.
ಪದುಳಮ್ ಕುಳ್ಳಿರ್ದು… ಎಮಗೆ ಆಯದ ಮಾತಮ್ ತಗುಳೆ ಗಳಪಿ ಪೋದನ್. ಬಿಲ್ಲೋಜನ್ ಸಂದಿರ್ದ ಅದಟರೊಳ್ ಇರಿದು ಅರಿಯನ್…
ತಪ್ಪದೆ ಕಮ್ಮರಿಯೋಜನ್ ಎನಿಸಿದನ್. ಈಯಲ್… ಇರಿಯಲ್… ಶರಣ್ಬುಗೆ ಕಾಯಲ್… ಕ್ಷತ್ರಿಯರೆ ಬಲ್ಲರ್; ಬ್ರಾಹ್ಮಣರ್ ಅಬ್ರಣ್ಯಮ್… ಭೋ
ಎನಲುಮ್… ಅವಿಧಾ ಎನಲುಮ್ ಬಲ್ಲರ್; ಅವರ್ ಇರಿಯಲ್ ಎತ್ತ ಅರಿವರ್.
ಓಜಮ್ ಗಡ… ಚಿಃ ಭಾರದ್ವಾಜಮ್ ಗಡ… ಪಾಂಡುತನೂಜರ ಪಕ್ಕದೊಳೆ ಪಾಳಿಗಿಡೆ ನೆಗಳ್ದುದರಿಮ್… ಬಿಲ್ಲ ಬಲ್ಮೆಯುಮ್…
ಕುಲಮುಮ್… ನಿರ್ವ್ಯಾಜಮ್ ಮಸುಳ್ದುವು. ತಪನಸುತಮ್ ಬೇರೆ… ಆನ್ ಬೇರೆ… ಪೊಲ್ಲದಮ್ ನುಡಿದನ್. ಆವಗಮ್ ರಕ್ಷಿಪ
ಕಯ್ದುವನ್ ಬಿಸುಟನ್ … ಬಗೆದು ನೋಳ್ಪೊಡೆ ಎಮಗೆ ಆ ಅಶ್ವತ್ಥಾಮನ್ ಮರೆಯ ಪಾಂಡವಮ್.
ಗೆಲಲಾರ್ಪೊಡೆ ಇರಿದು ಗೆಲ್ವುದು… ಗೆಲಲಾರದೊಡೆ ಅಣ್ಮಿ ಸಾವುದು… ಆಳ್ಗೆ ಇನಿತೆ ಗುಣಮ್. ಗೆಲಲುಮ್… ಸಾಯಲುಮ್ ಆರದೆ
ತೊಲಗಿದಡೆ… ಮೆಯ್ಯಮ್ ನೆಗಳ್ತೆ ತೊಲಗದಿರ್ಕುಮೆ… ಕರವಾಳಮ್ ಮಸೆವ ಅಂದದೆ ಮರವಾಳಮ್ ಮಸೆಯೆ ಕೂರಿತಕ್ಕುಮೆ; ಕಲಿಯಮ್
ಪೊರೆದೊಡೆ ಸಂಗರದೆಡೆಯೊಳ್ ಕೂರ್ಪಮ್ ತೋರ್ಪಂತಿರೆ… ಪಂದೆ ಪತಿಗೆ ತೋರ್ಕುಮೆ .
ತುರುಗೋಳೊಳ್… ಪೆಣ್ಬುಯ್ಯಲೊಳ್… ಎರೆವೆಸದೊಳ್… ನಂಟನ ಎಡರೊಳ್… ಊರ ಅಳಿವಿನೊಳಮ್ ತರಿಸಂದು ಗಂಡುತನಮನೆ
ನೆರಪದವನ್ ಗಂಡನಲ್ಲನ್… ಎಂತುಮ್ ಷಂಡಮ್.
(ಎಂದು ಅರಸನ್ ಅವರ್ಗೆ ವಿರಸಮಾಗಿ ಪರುಷಮ್ ನುಡಿಯೆ… ಸಂಜಯನ್ ತನ್ನ ಅಂತರ್ಗತದೊಳ್…)
ತಿರುಳು: ದುರ‍್ಯೋದನನು ಅಶ್ವತ್ತಾಮ ಮತ್ತು ದ್ರೋಣರನ್ನು ತೆಗಳುವುದು
ಅನ್ನೆಗಮ್=ಅದೇ ಸಮಯದಲ್ಲಿ;
ಅನ್ನೆಗಮ್=ಕುರುಕ್ಶ್ರೇತ್ರ ರಣರಂಗದ ಪಾಂಡವರ ಕಡೆಯ ಶಿಬಿರದಲ್ಲಿ ಬೀಮನು ಪ್ರತಿಜ್ನಾಬದ್ದನಾಗಿ ಆಡಿದ ಮಾತುಗಳನ್ನು ಕೇಳಿ, ದ್ರೌಪದಿಯು ಸಮಾದಾನಗೊಂಡು ರಾಣಿವಾಸಕ್ಕೆ ಹಿಂತಿರುಗಿರುತ್ತಿರುವ ಸಮಯದಲ್ಲಿ;
ಇತ್ತ=ಈ ಕಡೆ; ಕುರುಕ್ಶ್ರೇತ್ರ ರಣರಂಗದಲ್ಲಿ ಕೌರವರ ಕಡೆಯ ಸೇನಾನಿಗಳ ಸಾವುನೋವನ್ನು ಮತ್ತು ಶಿಬಿರದಲ್ಲಿ ದುರ್‍ಯೋದನನ ಮಾನಸಿಕ ತುಮುಲ ಹೇಗಿತ್ತು ಎಂಬುದನ್ನು ಕವಿಯು ನಿರೂಪಿಸುತ್ತಿದ್ದಾನೆ;
ಕುರುಕುಲಪಿತಾಮಹನುಮ್ ಆಹವಭೀಷ್ಮನುಮ್ ಎನಿಸಿದ ಭೀಷ್ಮನ ಶರಶಯನದೊಳಮ್=ಕುರುವಂಶದ ಪಿತಾಮಹನೂ ರಣಬಯಂಕರನೂ ಎಂದು ಹೆಸರಾಂತ ಬೀಶ್ಮನು ಕುರುಕ್ಶ್ರೇತ್ರ ರಣರಂಗದಲ್ಲಿ ಬಾಣಗಳ ಮಂಚದ ಮೇಲೆ ಜೀವಂತವಾಗಿಯೇ ಮಲಗಿರಲು; ಬೀಶ್ಮನು ಇಚ್ಚಾಮರಣಿಯಾದುದರಿಂದ ಅರ್‍ಜುನನ ಬಾಣಗಳ ಪೆಟ್ಟಿನಿಂದ ಗಾಸಿಗೊಂಡಿದ್ದರೂ, ಉತ್ತರಾಯಣ ಪುಣ್ಯಕಾಲದ ವರೆಗೆ ಬದುಕಿರಲು ನಿಶ್ಚಯಿಸಿದ್ದಾನೆ ಎಂಬ ನಂಬಿಕೆಯು ಕಾವ್ಯಲೋಕದ ಜನಮನದಲ್ಲಿದೆ;
ಬಿಲ್ಲ ಜಾಣಮ್ ದ್ರೋಣನ ಅಳಿವಿನೊಳಮ್=ಬಿಲ್ ವಿದ್ಯೆಯಲ್ಲಿ ಪರಿಣತನಾದ ದ್ರೋಣನು ಸಾವನ್ನಪ್ಪಿರಲು;
ತನ್ನ ಮಯ್ದುನಮ್ ಜಯದ್ರಥನ ವಿಪತ್ತಿನೊಳಮ್=ತನ್ನ ತಂಗಿ ದುಶ್ಶಲೆಯ ಗಂಡನಾಗಿದ್ದ ಜಯದ್ರತನಿಗೆ ಒದಗಿಬಂದ ಕೇಡಿನಿಂದ… ಅಬಿಮನ್ಯುವಿನ ಸಾವಿಗೆ ಕಾರಣನಾಗಿದ್ದ ಜಯದ್ರತನನ್ನು ಅರ್‍ಜುನನು ಕೊಂದಿದ್ದಾನೆ;
ಪಂಚತ್ವ=ಸಾವು/ಮರಣ;
ತನ್ನ ಅಣುಗದಮ್ಮನ್ ದುಶ್ಶಾಸನನ ಪಂಚತ್ವ ಪ್ರಪಂಚದೊಳಮ್=ತಮ್ಮ ಪ್ರೀತಿಯ ತಮ್ಮನಾದ ದುಶ್ಶಾಸನನು ಸಾವಿನ ಲೋಕವನ್ನು ಸೇರಿದ್ದರಿಂದ;
ತನ್ನ ಅಣುಗಾಳಪ್ಪ ಕರ್ಣನ ಸಾವಿನೊಳಮ್=ತನ್ನ ಅಚ್ಚುಮೆಚ್ಚಿನ ವ್ಯಕ್ತಿಯಾದ ಕರ್‍ಣನು ಸಾವನ್ನಪ್ಪಿರಲು;
ತನ್ನ ಮಾವನಪ್ಪ ಶಲ್ಯನ ಸಂಹರಣದೊಳಮ್=ತನ್ನ ಮಾವನಾದ ಶಲ್ಯನ ಕೊಲೆಯಾಗಿರಲು;
ಚೂಡಾಮಣಿ=ತಲೆಯಲ್ಲಿ ತೊಡುವ ರತ್ನದ ಒಡವೆ/ಉತ್ತಮ ವ್ಯಕ್ತಿ;
ಕುರುಕುಲ ಚೂಡಾಮಣಿಯುಮ್=ಕುರುವಂಶದ ಚೂಡಾಮಣಿಯಾದ ದುರ್‍ಯೋದನನು;
ಪನ್ನಗಪತಾಕನುಮ್= ಬಾವುಟದಲ್ಲಿ ಹಾವಿನ ಚಿತ್ರವನ್ನು ರಾಜಲಾಂಚನವಾಗುಳ್ಳ ದುರ್‍ಯೋದನನು;
ಕನಕಲತಾಲಾಂಛಿತ ಉತ್ತುಂಗ ಘನ ಗದಾಯುಧನುಮ್=ಚಿನ್ನದ ಬಳ್ಳಿಯ ಕೆತ್ತನೆಯ ಚಿತ್ರದ ಲಾಂಚನವುಳ್ಳ ಉತ್ತಮವಾದ ಮತ್ತು ದೊಡ್ಡದಾದ ಗದೆಯನ್ನು ಆಯುದವಾಗುಳ್ಳವನು;
ದಿವ್ಯಮುನಿವರ ಅಪರಾಧನುಮ್=ಉತ್ತಮರಾದ ಮುನಿಯ ಜತೆಯಲ್ಲಿ ಕೆಟ್ಟದ್ದಾಗಿ ನಡೆದುಕೊಂಡು ಅಪರಾದಿಯಾಗಿರುವ ದುರ್‍ಯೋದನನು; ಅರಣ್ಯವಾಸದಲ್ಲಿದ್ದ ಪಾಂಡವರ ಸಂಕಟವನ್ನು ಕಂಡಿದ್ದ ಮೈತ್ರೇಯನೆಂಬ ಮುನಿಯು ಹಸ್ತಿನಾವತಿಗೆ ಬಂದು, ಪಾಂಡವರೊಡನೆ ಹಗೆತನವನ್ನು ತೊರೆದು ಶಾಂತಿಯಿಂದ ಇರಬೇಕೆಂದು ದುರ್‍ಯೋದನನಿಗೆ ತಿಳುವಳಿಕೆಯನ್ನು ಹೇಳಿದಾಗ, ದುರ್‍ಯೋದನನು ಏನೂ ಮಾತನಾಡದೆ ಹುಸಿನಗೆ ನಕ್ಕು, ತನ್ನ ತೊಡೆಯನ್ನು ತಟ್ಟಿಕೊಂಡು, ಅಹಂಕಾರದಿಂದ ಮುನಿಯ ಮಾತನ್ನು ಕಡೆಗಣಿಸುತ್ತಾನೆ. ಆಗ ಮೈತ್ರೇಯ ಮುನಿಯು ಕೋಪದಿಂದ ಕೆರಳಿ “ಕಾಳೆಗದಲ್ಲಿ ಬೀಮನ ಗದೆಯ ಪೆಟ್ಟಿನಿಂದ ನಿನ್ನ ತೊಡೆಯು ಮುರಿಯಲಿ” ಎಂದು ಶಾಪವನ್ನು ನೀಡುತ್ತಾನೆ;
ಸಕಲ ಲಕ್ಷ್ಮೀನಿವಾಸನುಮ್=ಎಲ್ಲಾ ಬಗೆಯ ಸಂಪತ್ತಿಗೆ ನೆಲೆಯಾಗುಳ್ಳವನು;
ಸಮರಧೈರ್ಯನುಮ್=ಕಾಳೆಗದಲ್ಲಿ ಕೆಚ್ಚೆದೆಯಿಂದ ಹೋರಾಡುವವನು;
ಮಹಾಶೌರ್ಯನುಮ್=ಮಹಾಶೂರನು;
ರಾಧೇಯ ನಿಜ ಸಹಾಯನುಮ್=ಕರ್‍ಣನಿಗೆ ಬಹಳ ಆತ್ಮೀಯನಾದವನು;
ಛಲದಂಕಮಲ್ಲನುಮ್=ಹಿಡಿದ ಪಟ್ಟನ್ನು ಬಿಡದ ಹಟಗಾರನೂ;
ಸಕಲಭೋಗಲಕ್ಷ್ಮೀಪತಿಯುಮ್=ಎಲ್ಲಾ ಬಗೆಯ ಬೋಗಗಳಿಗೆ ಒಡೆಯನಾದವನು;
ಅಭಿಮಾನಧನನುಮ್ ಎನಿಸಿದ ಸುಯೋಧನನ್ ಚಿಂತಾಕ್ರಾಂತನಾಗಿ=ತನ್ನ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯಿಂದ ತಲೆಯೆತ್ತಿ ಬಾಳುವವನು ಎಂದು ಹೆಸರಾಂತ ದುರ್‍ಯೋದನನು ಈಗ ಚಿಂತೆಯಿಂದ ಕೂಡಿದವನಾಗಿ, ತನ್ನ ಜತೆಯಲ್ಲಿದ್ದ ಸಂಜಯನೊಡನೆ ಅಶ್ವತ್ತಾಮ ಮತ್ತು ದ್ರೋಣರನ್ನು ಕುರಿತು ಈ ರೀತಿ ಪ್ರಸ್ತಾಪಿಸತೊಡಗುತ್ತಾನೆ; ಅಸುಹೃತ್+ಸೇನೆಗೆ; ಅಸುಹೃತ್=ಶತ್ರು/ಹಗೆ; ಗಡಮ್/ಗಡ=ಆನಂದ/ಮೆಚ್ಚುಗೆ/ಅಚ್ಚರಿ/ಮೂದಲಿಕೆ/ಹಾಸ್ಯ/ನಿಶ್ಚಯ/ಸಂಕಟ ಮುಂತಾದ ಒಳಮಿಡಿತಗಳನ್ನು ಸೂಚಿಸುವಾಗ ಬಳಸುವ ಪದ;
ಅಸುಹೃತ್ಸೇನೆಗೆ ಒರ್ವನೆ ಸಾಲ್ವನ್ ಗಡಮ್=ಹಗೆಯ ಸೇನೆಯನ್ನು ಸದೆಬಡೆದು ಗೆಲ್ಲುವುದಕ್ಕೆ ಒಬ್ಬನೇ ಸಾಕಾಗುತ್ತಾನಲ್ಲವೇ ಎಂಬ ನಿಶ್ಚಯದಿಂದ;
ರುದ್ರಾವತಾರನ್ ಗಡಮ್=ಶಿವನ ಅಂಶದಿಂದ ಹುಟ್ಟಿದವನಲ್ಲವೇ ಎಂಬ ನಂಬಿಕೆಯಿಂದ; ನೊಸಲ್+ಒಳ್; ನೊಸಲ್=ಹಣೆ;
ನೊಸಲೊಳ್ ಕಣ್ ಗಡಮ್ ಎಂದು ನಚ್ಚಿ ಪೊರೆದೆನ್=ಹಣೆಯಲ್ಲಿ ಕಣ್ಣುಳ್ಳವನಲ್ಲವೇ ಎಂದುಕೊಂಡು ನಂಬಿ ಸಾಕಿಸಲಹಿದೆನು; ಅಶ್ವತ್ತಾಮನು ಶಿವನ ಅವತಾರ ಇಲ್ಲವೇ ಶಿವನ ಅಂಶದಿಂದ ಹುಟ್ಟಿದವನು ಎಂಬ ಪುರಾಣ ಕಲ್ಪಿತ ಬಾವನೆಯು ಜನಮನದಲ್ಲಿ ನೆಲೆಸಿತ್ತು; ತಮ್ಮ+ಅಮ್ಮನ್+ಅಕ್ಕೆ; ಅಮ್ಮ=ತಂದೆ/ಅಪ್ಪ; ಅಕ್ಕೆ=ಆಗಲಿ; ತಿರುವಾಯ್=ಬಾಣವನ್ನು ಹೂಡಲು ನೆರವಾಗಲೆಂದು ಬಿಲ್ಲಿಗೆ ಬಿಗಿದು ಕಟ್ಟಿರುವ ಹಗ್ಗ; ಇಸು=ಬಾಣವನ್ನು ಪ್ರಯೋಗಮಾಡು;
ತಾನಕ್ಕೆ…ತಮ್ಮಮ್ಮನಕ್ಕೆ… ಅಂಬಮ್ ತಿರುವಾಯ್ಗೆ ತಂದು ಇಸಲ್ ಅರಿವರೇ=ಅಶ್ವತ್ತಾಮನಾಗಲಿ ಇಲ್ಲವೇ ಅವನ ಅಪ್ಪ ದ್ರೋಣನಾಗಲಿ… ಕುರುಕ್ಶ್ರೇತ್ರ ರಣರಂಗದಲ್ಲಿ ಬಿಲ್ಲಿನ ಹೆದೆಗೆ ಬಾಣವನ್ನು ಹೂಡಿ, ಹಗೆಯ ಮೇಲೆ ಬಿಡಲು ಅರಿತಿದ್ದಾರೆಯೇ;
ತಾಮ್ ಇರ್ವರುಮ್ ಕಯ್ದುವಮ್ ಬಿಸುಟರ್=ಅಪ್ಪ ಮಗ ಇಬ್ಬರೂ ಕಾಳೆಗದ ಕಣದಲ್ಲಿಯೇ ಆಯುದಗಳನ್ನು ತೊರೆದರು; 1. ಯುದ್ದ ನಡೆಯುತ್ತಿರುವಾಗ ಕೌರವರ ಪಡೆಯಲ್ಲಿದ್ದ ಅಶ್ವತ್ತಾಮ ಎಂಬ ಹೆಸರಿನ ಆನೆಯು ಸಾವನ್ನಪ್ಪದ್ದನ್ನು ದರ್‍ಮರಾಯನು ದ್ರೋಣಾಚಾರ್‍ಯರಿಗೆ ಕೇಳಿಸುವಂತೆ “ಅಶ್ವತ್ತಾಮ ಹತಹ” ಎಂದು ಕಿರುಚುತ್ತಾನೆ. ಇದನ್ನು ಕೇಳಿದ ಕೂಡಲೇ ದ್ರೋಣಾಚಾರ್‍ಯರು ತಮ್ಮ ಮಗ ಅಶ್ವತ್ತಾಮನೇ ಸತ್ತನೆಂದು ತಿಳಿದು, ಪುತ್ರಶೋಕದಿಂದ ಪರಿತಪಿಸುತ್ತ, ಬಿಲ್ಲುಬಾಣಗಳನ್ನು ಕೆಳಕ್ಕಿಡುತ್ತಾರೆ. ಅನಂತರ ದ್ರುಪದನ ಮಗನಾ ದೃಶ್ಟದ್ಯುಮ್ನನಿಂದ ಹತರಾಗುತ್ತಾರೆ. 2. ದುರ್‍ಯೋದನನಿಗೆ ಆಪ್ತನಾಗಿದ್ದ ಕರ್‍ಣನ ಮೇಲೆ ಆಗಾಗ್ಗೆ ತನ್ನ ಅಸೂಯೆಯನ್ನು ಪ್ರಕಟಿಸುತ್ತಿದ್ದ ಅಶ್ವತ್ತಾಮನು ಕುರುಕ್ಶೇತ್ರ ಯುದ್ದದ ಸಂದರ್‍ಬದಲ್ಲಿ ಕೆಲವೊಮ್ಮೆ ಹೋರಾಡದೆ ಆಯುದವನ್ನು ತ್ಯಜಿಸಿ ಸುಮ್ಮನಿರುತ್ತಿದ್ದ; ಹೀಗೆ ಅಪ್ಪ ಮಕ್ಕಳಿಬ್ಬರೂ ಯುದ್ದದ ಸಂದರ್‍ಬದಲ್ಲಿ ಅಯುದವನ್ನು ತ್ಯಜಿಸಿದ್ದರು; ಅದನ್ನು ಕುರಿತು ದುರ್‍ಯೋದನನು ಈ ರೀತಿ ತೆಗಳುತ್ತಿದ್ದಾನೆ; ದ್ರೌಣಿ=ದ್ರೋಣನ ಮಗ ಅಶ್ವತ್ತಾಮ; ಜೋಳದ ಪಾಳಿ=ಅನ್ನದ ರುಣ/ಅನ್ನವಿಟ್ಟು ಸಾಕಿಸಲಹಿದವರ ರುಣ ತೀರಿಸುವುದಕ್ಕಾಗಿ ತನುಮನವನ್ನು ಅರ್‍ಪಿಸಿಕೊಂಡು ಸೇವೆಯನ್ನು ಮಾಡುವುದು;
ದ್ರೌಣಿಯುಮ್ ದ್ರೋಣನುಮ್ ಜೋಳದ ಪಾಳಿಯಮ್ ಬಗೆದರಿಲ್ಲಾ=ಅಶ್ವತ್ತಾಮ ಮತ್ತು ದ್ರೋಣರಿಬ್ಬರೂ ಒಡೆಯನ ಅನ್ನದ ರುಣವನ್ನು ತೀರಿಸಬೇಕು ಎಂಬ ಉದ್ದೇಶವನ್ನೇ ಹೊಂದಿರಲಿಲ್ಲ; ಬಿಲ್+ಓಜ; ಓಜ=ಗುರು;
ಬಿಲ್ಲೋಜನ್ ಪದುಳಮ್ ಕುಳ್ಳಿರ್ದು=ಬಿಲ್ ವಿದ್ಯೆಯ ಗುರುವಾದ ದ್ರೋಣನು ಕುರುಕ್ಶ್ರೇತ್ರ ಕಾಳೆಗ ಆರಂಬಗೊಂಡ ದಿನದಿಂದಲೂ ಯಾವ ಆತಂಕವೂ ಇಲ್ಲದೆ ನೆಮ್ಮದಿಯಾಗಿದ್ದು; ಆಯ=ಪರಾಕ್ರಮ/ಕಲಿತನ/ಶೂರತನ; ತಗುಳ್=ಮೆಚ್ಚು;
ಎಮಗೆ ಆಯದ ಮಾತಮ್ ತಗುಳೆ ಗಳಪಿ ಪೋದನ್=ನಮಗೆ ಪರಾಕ್ರಮದ ಮಾತುಗಳನ್ನು ಮೆಚ್ಚುಗೆಯಾಗುವಂತೆ ಹರಟುತ್ತಿದ್ದು, ಕಾಳೆಗದ ಕಣದಲ್ಲಿ ಮಾತ್ರ ಯಾವ ಹೋರಾಟವನ್ನು ಮಾಡದೆ ಸಾವನ್ನಪ್ಪಿದನು;
ಸಂದಿರ್ದ ಅದಟರೊಳ್ ಇರಿದು ಅರಿಯನ್=ಕಾಳೆಗದ ಕಣದಲ್ಲಿ ಎದುರಾದ ಹೆಸರಾಂತ ಪರಾಕ್ರಮಿಗಳೊಡನೆ ವೀರಾವೇಶದಿಂದ ಹೋರಾಡಿ ಕೊಲ್ಲುವುದನ್ನು ತಿಳಿಯನು; ಕಮ್ಮರಿ+ಓಜ; ಕಮ್ಮರ=ಕಮ್ಮಾರ/ಕಬ್ಬಿಣದ ಕೆಲಸವನ್ನು ಮಾಡುವವನು; ಕಮ್ಮರಿಯೋಜ=ಕಬ್ಬಿಣದ ಹತಾರಗಳನ್ನು ತಯಾರುಮಾಡುವುದನ್ನು ಹೇಳಿಕೊಡುವ ಗುರು;
ತಪ್ಪದೆ ಬಿಲ್ಲೋಜನ್ ಕಮ್ಮರಿಯೋಜನ್ ಎನಿಸಿದನ್=ಎಲ್ಲ ರೀತಿಯಿಂದಲೂ ಬಿಲ್ಲೋಜನಾದ ದ್ರೋಣನು ಕುರುಕ್ಶೇತ್ರದ ರಣರಂಗದಲ್ಲಿ ಆಯುದವನ್ನು ಹಿಡಿದು ಹೋರಾಡುವ ಪರಾಕ್ರಮಿಯಾಗದೆ, ಆಯುದವನ್ನು ತಯಾರುಮಾಡುವುದನ್ನು ಹೇಳಿಕೊಡುವ ಕಮ್ಮಾರನಾದನು; ‘ಬಿಲ್ಲೋಜ’ ಮತ್ತು ‘ಕಮ್ಮರಿಯೋಜ’ ಎಂಬ ಪದಗಳು ಮೇಲು ಕೀಳನ್ನು ಸೂಚಿಸುವ ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ; ರಾಜಕುಮಾರರಿಗೆ ಬಿಲ್ಲಿನ ವಿದ್ಯೆಯನ್ನು ಕಲಿಸುವ ಬಿಲ್ಲೋಜ ಕಸುಬಿಗೆ ಸಮಾಜದಲ್ಲಿ ಇದ್ದ ಹೆಚ್ಚಿನ ಅಂತಸ್ತು, ಕುಲುಮೆಯಲ್ಲಿ ಕಬ್ಬಿಣದ ಹತಾರಗಳನ್ನು ಮಾಡುವುದನ್ನು ಹೇಳಿಕೊಡುವ ಕಮ್ಮರಿಯೋಜ ಕಸುಬಿಗೆ ಇರಲಿಲ್ಲ. ಏಕೆಂದರೆ ಇಂಡಿಯಾ ದೇಶದ ಸಾಮಾಜಿಕ ವ್ಯವಸ್ತೆಯಲ್ಲಿ ವರ್‍ಣಗಳಲ್ಲಿ ಮತ್ತು ಜಾತಿಗಳಲ್ಲಿ ಮೇಲು ಕೀಳಿನ ಹಂತಗಳು ಇರುವಂತೆಯೇ ಕಸುಬಿನಲ್ಲಿಯೂ ಮೇಲು ಕೀಳಿನ ಹಂತಗಳಿವೆ;
ಈಯಲ್… ಇರಿಯಲ್… ಶರಣ್ಬುಗೆ ಕಾಯಲ್ ಕ್ಷತ್ರಿಯರೆ ಬಲ್ಲರ್=ದಾನವನ್ನು ಮಾಡಲು… ಕೊಲ್ಲಲು… ಶರಣು ಬಂದವರನ್ನು ಕಾಪಾಡಲು ಕ್ಶ್ರತ್ರಿಯರು ಶಕ್ತರಾಗಿದ್ದಾರೆ;
ಅಬ್ರಣ್ಯಮ್=ಕಾಳೆಗವೆಂಬುದು ಬ್ರಾಹ್ಮಣರಿಗೆ ಸರಿಹೊಂದುವುದಿಲ್ಲ;
ಭೋ ಎನಲುಮ್=ಸ್ವಾಮಿ ಎಂದು ಅರಚಿಕೊಳ್ಳಲು;
ಅವಿಧಾ ಎನಲುಮ್ ಬ್ರಾಹ್ಮಣರ್ ಬಲ್ಲರ್=ನಮ್ಮನ್ನು ಕಾಪಾಡಿ… ಕಾಪಾಡಿ ಎಂದು ಮೊರೆಯಿಡುವುದನ್ನು ಬ್ರಾಹ್ಮಣರು ಚೆನ್ನಾಗಿ ಬಲ್ಲರು;
ಅವರ್ ಇರಿಯಲ್ ಎತ್ತ ಅರಿವರ್=ಬ್ರಾಹ್ಮಣರು ರಣರಂಗದಲ್ಲಿ ಹೋರಾಡುವುದನ್ನು ಹೇಗೆ ತಾನೆ ತಿಳಿಯುವರು; ಅಂದರೆ ಬ್ರಾಹ್ಮಣರ ವ್ಯಕ್ತಿತ್ವದಲ್ಲಿ ಹೋರಾಟದ ಕೆಚ್ಚು ಸಹಜವಾಗಿಯೇ ನೆಲೆಗೊಂಡಿಲ್ಲ;
ಓಜಮ್ ಗಡ=ಈ ದ್ರೋಣನು ಗುರುವಂತೆ ಕಂಡೆಯಾ;
ಭರದ್ವಾಜ=ದ್ರೋಣರ ತಂದೆ. ಹೆಸರಾಂತ ಮುನಿ. ವ್ಯಾಕರಣ, ಅರ್‍ತಶಾಸ್ತ್ರ ಮತ್ತು ಆರೋಗ್ಯಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದವರು;
ಚಿಃ… ಭಾರದ್ವಾಜಮ್ ಗಡ=ಚೀ… ಈ ದ್ರೋಣನು ಬರದ್ವಾಜನ ಮಗನಂತೆ;
ಪಾಂಡುತನೂಜರ ಪಕ್ಕದೊಳೆ ಪಾಳಿಗಿಡೆ ನೆಗಳ್ದುದರಿಮ್=ಮಾನಸಿಕವಾಗಿ ಪಾಂಡವರ ಪಕ್ಶಪಾತಿಯಾಗಿ ನಡೆದುಕೊಂಡುದರಿಂದ; ಬಹಿರಂಗದಲ್ಲಿ ದ್ರೋಣನು ನನ್ನ ಆಶ್ರಯದಲ್ಲಿದ್ದರೂ, ಅವನ ಅಂತರಂಗದಲ್ಲಿ ಪಾಂಡವರ ಬಗ್ಗೆ ಹೆಚ್ಚಿನ ಒಲವಿತ್ತು;
ಬಿಲ್ಲ ಬಲ್ಮೆಯುಮ್ ಕುಲಮುಮ್ ನಿರ್ವ್ಯಾಜಮ್ ಮಸುಳ್ದುವು=ದ್ರೋಣನ ಬಿಲ್ಲಿನ ಶಕ್ತಿಯೂ ಬ್ರಾಹ್ಮಣಿಕೆಯೂ ವಿನಾಕಾರಣವಾಗಿ ಮಂಕಾದವು; ಅಂದರೆ ಒಡೆಯನಾದ ನನ್ನ ಹಿತಕ್ಕಾಗಿ ಅವರು ಬಾಳದೇ ಹೋದುದರಿಂದ ಅವರ ಬಿಲ್ವಿದ್ಯೆಯ ಶಕ್ತಿಗೂ, ಅವರ ಮೇಲು ಜಾತಿಯ ವ್ಯಕ್ತಿತ್ವಕ್ಕೂ ಕಳಂಕ ತಟ್ಟಿತು; ಈಗ ದುರ್‍ಯೋದನನು ಅಶ್ವತ್ತಾಮನನ್ನು ತೆಗಳಲು ತೊಡಗುತ್ತಾನೆ;
ತಪನಸುತಮ್ ಬೇರೆ… ಆನ್ ಬೇರೆ=ಸೂರ್‍ಯಪುತ್ರನಾದ ಕರ್‍ಣ ಬೇರೆ, ನಾನು ಬೇರೆಯಲ್ಲ; ಅಂದರೆ ನಾವಿಬ್ಬರೂ ಸರಿಸಮಾನವಾದ ಅಂತಸ್ತನ್ನುಳ್ಳವರು; ಕರ್‍ಣ ಮತ್ತು ನಾನು “ಎರಡು ದೇಹ… ಒಂದೇ ಜೀವ” ಎಂಬಂತೆ ಗೆಳೆಯರಾಗಿದ್ದೆವು. ನಮ್ಮಿಬ್ಬರ ನಡುವೆ ಯಾವುದೇ ಮೇಲುಕೀಳೆಂಬುದು ಇರಲಿಲ್ಲ;
ಪೊಲ್ಲದಮ್ ನುಡಿದನ್=ಅಶ್ವತ್ತಾಮನು ಅಂದು ಕರ್‍ಣನ ಬಗ್ಗೆ ಕೆಟ್ಟ ಮಾತುಗಳನ್ನಾಡಿದನು; ಸೇನಾದಿಪತಿಯಾಗಿದ್ದ ದ್ರೋಣರ ಸಾವಿನ ನಂತರ ಅಶ್ವತ್ತಾಮನಿಗೆ ಸೇನಾದಿಪಟ್ಟವನ್ನು ಕಟ್ಟುವಂತೆ ಕ್ರುಪಾಚಾರ್‍ಯನು ಸೂಚಿಸಿದಾಗ, ದುರ್‍ಯೋದನನು ಗುರುಗಳ ಸಲಹೆಯನ್ನು ನಿರಾಕರಿಸಿ, “ದ್ರೋಣರ ಬಳಿಕ ಕರ್‍ಣನಿಗೆ ಸೇನಾದಿಪತಿ ಪಟ್ಟವನ್ನು ಕಟ್ಟುತ್ತೇನೆ” ಎಂದು ಹೇಳಿದಾಗ, ಅಶ್ವತ್ತಾಮನು ಆಕ್ರೋಶ ಮತ್ತು ಹತಾಶೆಯಿಂದ ಕರ್‍ಣನ ಕುಲದ ಬಗ್ಗೆ ಕೀಳುನುಡಿಯನ್ನಾಡಿ, ಕರ್‍ಣನು ಜೀವಂತವಾಗಿರುವ ತನಕ ತಾನು ಯುದ್ದ ಮಾಡುವುದಿಲ್ಲವೆಂದು ಆಯುದವನ್ನು ತ್ಯಜಿಸುವ ಮಾತನಾಡಿದ್ದನು;
ಆವಗಮ್ ರಕ್ಷಿಪ ಕಯ್ದುವನ್ ಬಿಸುಟನ್ =ಯಾವಾಗಲೂ ಒಂದಲ್ಲ ಒಂದು ನೆಪವನ್ನೊಡ್ಡಿ ಆಯುದವನ್ನು ಬಿಸಾಡಿ, ಕುರುಕ್ಶೇತ್ರ ರಣರಂಗದಲ್ಲಿ ಹೋರಾಡದೆ ಸುಮ್ಮನಿದ್ದನು;
ಬಗೆದು ನೋಳ್ಪೊಡೆ ಎಮಗೆ ಆ ಅಶ್ವತ್ಥಾಮನ್ ಮರೆಯ ಪಾಂಡವಮ್=ಸರಿಯಾಗಿ ಗಮನಿಸಿ ನೋಡಿದರೆ ನಮ್ಮ ಪಾಲಿಗೆ ಆ ಅಶ್ವತ್ತಾಮನು ಮಾರುವೇಶದ ಪಾಂಡವನೇ ಆಗಿದ್ದಾನೆ;
ಗೆಲಲಾರ್ಪೊಡೆ ಇರಿದು ಗೆಲ್ವುದು=ಗೆಲ್ಲುವ ಶಕ್ತಿಯಿದ್ದರೆ… ಹಗೆಯ ಎದುರು ಹೋರಾಡಿ ಗೆಲ್ಲುವುದು;
ಗೆಲಲಾರದೊಡೆ ಅಣ್ಮಿ ಸಾವುದು=ಗೆಲ್ಲುವುದಕ್ಕೆ ಆಗದಿದ್ದರೆ… ಜೀವವಿರುವ ತನಕ ಕೆಚ್ಚಿನಿಂದ ಹೋರಾಡಿ ವೀರಮರಣವನ್ನಪ್ಪುವುದು;
ಆಳ್ಗೆ ಇನಿತೆ ಗುಣಮ್=ಯೋದನ ವ್ಯಕ್ತಿತ್ವವೇ ಇದಾಗಿರುತ್ತದೆ;
ಗೆಲಲುಮ್… ಸಾಯಲುಮ್ ಆರದೆ ತೊಲಗಿದಡೆ ಮೆಯ್ಯಮ್ ನೆಗಳ್ತೆ ತೊಲಗದಿರ್ಕುಮೆ=ಇತ್ತ ಗೆಲ್ಲಲಾರದೆ… ಅತ್ತ ಸಾಯಲಾರದೆ ಹಿಮ್ಮೆಟ್ಟಿದರೆ ಯೋದನೆಂಬ ಹೆಸರಿಗೆ ಕಳಂಕ ತಟ್ಟುವುದಿಲ್ಲವೇ;
ಕರವಾಳಮ್ ಮಸೆವ ಅಂದದೆ ಮರವಾಳಮ್ ಮಸೆಯೆ ಕೂರಿತಕ್ಕುಮೆ=ಲೋಹದಿಂದ ಮಾಡಿರುವ ಕತ್ತಿಯನ್ನು ಹರಿತಗೊಳಿಸಲೆಂದು ಒರೆಗಲ್ಲಿನ ಮೇಲೆ ಉಜ್ಜುವ ಹಾಗೆ ಮರದಿಂದ ಮಾಡಿರುವ ಕತ್ತಿಯನ್ನು ಉಜ್ಜಿದರೆ ಹರಿತಗೊಳ್ಳುವುದೇ. ಲೋಹದ ಕತ್ತಿ ಉಜ್ಜಿದಂತೆಲ್ಲಾ ಹರಿತಗೊಳ್ಳುತ್ತದೆ, ಮರದ ಕತ್ತಿ ಉಜ್ಜಿದಂತೆಲ್ಲಾ ಸಮೆಯುತ್ತದೆ;
ಕಲಿಯಮ್ ಪೊರೆದೊಡೆ ಸಂಗರದೆಡೆಯೊಳ್ ಕೂರ್ಪಮ್ ತೋರ್ಪಂತಿರೆ… ಪಂದೆ ಪತಿಗೆ ತೋರ್ಕುಮೆ=ಕೆಚ್ಚೆದೆಯುಳ್ಳ ಶೂರನನ್ನು ಸಾಕಿ ಸಲಹಿ ಕಾಪಾಡಿದರೆ, ಆತನು ರಣರಂಗದ ಮುಂಚೂಣಿಯಲ್ಲಿ ಪರಾಕ್ರಮವನ್ನು ತೋರಿಸುವಂತೆ, ಹೇಡಿಯಾದವನು ತನ್ನ ಒಡೆಯನನ್ನು ಕಾಪಾಡಲು ಪರಾಕ್ರಮದಿಂದ ಹೋರಾಡುತ್ತಾನೆಯೇ;
ತುರುಗೋಳೊಳ್=ಹಗೆಗಳು ದನಗಳನ್ನು ಕದ್ದು ಒಯ್ಯುವಾಗ;
ಪೆಣ್ಬುಯ್ಯಲೊಳ್=ಕಾಮುಕರಿಂದ ಅಪಹರಣಕ್ಕೊಳಗಾದ ಹೆಣ್ಣಿನ ಆಕ್ರಂದನ ದನಿಯನ್ನು ಕೇಳಿದಾಗ;
ಎರೆವೆಸದೊಳ್=ರಾಜನ ಸೇವೆಯಲ್ಲಿ ತೊಡಗಿದಾಗ;
ನಂಟನ ಎಡರೊಳ್=ನಂಟನಿಗೆ ಆಪತ್ತು ಬಂದಾಗ;
ಊರ ಅಳಿವಿನೊಳಮ್=ಶತ್ರುಗಳಿಂದ ಊರಿನ ಸಂಪತ್ತು ಸೂರೆಯಾಗುವಾಗ; ಗಂಡ=ಶೂರ; ಷಂಡ=ಹೇಡಿ;
ತರಿಸಂದು ಗಂಡುತನಮನೆ ನೆರಪದವನ್ ಗಂಡನಲ್ಲನ್= ಕೆಚ್ಚೆದೆಯಿಂದ ಹೋರಾಡಲು ನಿಶ್ಚಯಿಸಿ ಪರಾಕ್ರಮವನ್ನು ತೋರದವನು ಅಂದರೆ ಸಾವು ನೋವನ್ನು ಲೆಕ್ಕಿಸದೆ ಹೋರಾಡದವನು ಶೂರನಲ್ಲ;
ಎಂತುಮ್ ಷಂಡಮ್ ಎಂದು ಅರಸನ್ ಅವರ್ಗೆ ವಿರಸಮಾಗಿ ಪರುಷಮ್ ನುಡಿಯೆ=ಎಲ್ಲ ರೀತಿಯಿಂದಲೂ ಹೇಡಿ ಎಂದು ದುರ್‍ಯೋದನನು ದ್ರೋಣ ಮತ್ತು ಅಶ್ವತ್ತಾಮರ ವಿರುದ್ದವಾಗಿ ಗಡುಸಾಗಿ ಮಾತನಾಡಲು;
ಸಂಜಯನ್ ತನ್ನ ಅಂತರ್ಗತದೊಳ್=ಸಂಜಯನು ತನ್ನ ಮನದೊಳಗೆ;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು