ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 3: ಸಂಜಯನು ಭೀಮಾರ್ಜುನರ ಪರಾಕ್ರಮವನ್ನು ಹೊಗಳುವುದು ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಸಂಜಯ ವಚನಮ್ ’ ಎಂಬ ಹೆಸರಿನ 3 ನೆಯ ಅಧ್ಯಾಯದ 9 ನೆಯ ಪದ್ಯದಿಂದ 22 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು

*** ಸಂಜಯನು ಭೀಮಾರ್ಜುನರ ಪರಾಕ್ರಮವನ್ನು ಹೊಗಳುವುದು ***

ಅರಸನ್ ಅವರ್ಗೆ ವಿರಸಮಾಗಿ ಪರುಷಮ್ ನುಡಿಯೆ…ಸಂಜಯನ್ ತನ್ನ ಅಂತರ್ಗತದೊಳ್…

ಸಂಜಯ: ಅಕಾರ್ಯಂಗೆ ಅಹಿಕೇತನಂಗೆ ಕಾರ್ಯಸಖನ್ ಶಕುನಿ ಗಡಮ್…ಶೌರ್ಯಸಖನ್ ಸೂತಜನ್ ಗಡಮ್… ವಿಧಿವಿಳಸನದಿಮ್ ಭೀಷ್ಮ ಶರಾಚಾರ್ಯರ ನುಡಿ ಕೈಪೆ ಗಡಮ್… ಗುರು ಕವಚಮ್…ಕರ್ಣನ್ ಬಾಹು ರಕ್ಕೆ…ಸುರಸಿಂಧುನಂದನನ್ ಸೀಸಕಮಾಗಿರೆ… ಮೆಯ್ಗೆ ಮುಳಿಯಲ್ ಅರಿಯದೆ… ಭೀಮನ್ ಕುರುರಾಜನ ತೊಡೆಯನ್ ಉಡಿವೆನ್ ಎಂದನ್.

(ಎಂದು ಸಂಜಯನ್ ಕುರುರಾಜನನ್ ನೋಡಿ…)

ಸಂಜಯ: ಭುವನಕ್ಕೆ ಆರಾಧ್ಯನೆಂಬ ಈ ನೆಗಳ್ದ ಬಿರುದಿನ ಅಂಕಕ್ಕೆ ತಕ್ಕ ಅಂದದಿಮ್… ಮುನ್ ಭಾರ್ಗವನೊಳ್ ದಿವ್ಯಾಸ್ತ್ರಮಮ್ ಪಡೆದು ನೆಗಳ್ದ ಶೌರ್ಯಕ್ಕೆ ತಕ್ಕ ಅಂದದಿಮ್ … ಪಾಂಡವರುಮ್ ಕೌರವ್ಯರುಮ್ ಕೈಮುಗಿಯೆ… ನೆಗಳ್ದ ಪೆಂಪಿಂಗೆ ತಕ್ಕ ಅಂದದಿಮ್… ಬಿಲ್ಲೊವಜನ್ ಗಾಂಡೀವಿಯೊಳ್ ಕಾದಿದನ್ … ಅವರ ಶರಾಸಾರಮಮ್ ನೀನೇ ಕಂಡೈ. ಇದು ದಲ್ ಗಂಗಾತ್ಮಜನ್ಮಕ್ಕೆ ಅನುಗುಣಮ್… ಇದು ರಾಜಪ್ರಸಾದಕ್ಕೆ ಪೋ ತಕ್ಕುದು… ಇದು ಈ ದೋರ್ದಂಡ ಕಂಡೂಯನಕೆ ಸದೃಶಮ್… ಭೀಷ್ಮನಾಮಕ್ಕೆ ಇದು ಸಮುಚಿತಮ್ ಎಂಬಂತೆ… ಸಂಗ್ರಾಮರಂಗ ಉನ್ಮದರೆಲ್ಲರ್ ನೋಡೆ… ಅದಟನ್ ಸಿಂಧುಪುತ್ರನ್ ಕದನದೊಳ್ ಪೆಂಪಮ್ ತೋರಿದನ್.

ಕಳಶ ನದೀಜರ್ ಭಕ್ತಿಗೆ ಇದು ಕಳಶಾರೋಹಣಮ್ ಎನಿಸಿ ನೆರಪಿದರ್… ಕಾದಿ ಗೆಲಲ್ ಅವರ ಒಂದು ಅಳವಲ್ತು… ಆರ ಅಳವಲ್ತು… ಅರ್ಜುನನ ಶೌರ್ಯಮಮ್ ನೀನ್ ಅರಿಯಾ… ನೃಪ, ನಿನ್ನನ್ ಪಿಡಿದು ಉಯ್ಯೆ… ಭಾನುಮತಿಯನ್ ಸಂತೈಸಿ… ಗಾಂಡೀವಿ ಚಿತ್ರಾಂಗದಂಗೆ ಉಪಯೋಗಾಸ್ತ್ರಮನ್ ಎಚ್ಚು… ಕೂಡೆ ನಭದಿಮ್ ತರ್ಪಾಗಳ್… ಈ ಕೃಪನ್… ಈ ಸೈಂಧವನ್… ಈ ಸರಿತ್ ತನಯನ್… ಈ ರಾಧೇಯನ್… ಈ ಮದ್ರಭೂಮಿಪನ್… ಈ ಕುಂಭಜನ್… ಈ ಕುರುಪ್ರಭವರ್… ಅಂದು ಏನ್ ಹಮ್ಮದಮ್ ಪೋದರೇ… ಕಲಿ ಪನ್ನೊಂದಕ್ಷೋಹಿಣಿ ಬಲವೆಲ್ಲಮನ್ ಒಂದೆ ರಥದೊಳ್ ಒರ್ವನೆ ಗೆಲ್ದನ್… ಗೋಗ್ರಹಣದ ಕಲಹದೊಳ್ ಅರಿಯನ್ ಗೆಲಲ್ ವಿಜಯನ್ ಏಕಾಂಗವಿಜಯನಾದನ್.

ಉರಿ ಕೊಳೆ… ಕೋಳ್ಮಿಗಮ್ ಕೊಳೆ… ವಿಷಾಹಿಕುಲಮ್ ಕೊಳೆ… ಶತ್ರುಭೂಮಿಯೊಳ್… ಗಿರಿಗಹನಂಗಳೊಳ್… ವಿಷಮ ರಾಕ್ಷಸ ಸಂಕುಲದೊಳ್… ವರಾಹ ಸಿಂಧುರ ಖರ ಶಯ್ಯೆಯೊಳ್… ವಿಪುಳ ಭೀಕರದೊಳ್… ವೃಕೋದರನ್ ನಿಜ ಬಾಹು ವಜ್ರಪಂಜರದೊಳ ಗಿಟ್ಟು ಸಹೋದರರಮ್ ರಕ್ಷಿಸಿದನಲ್ತೆ… ಬಕನನ್… ಹಿಡಿಂಬನನ್… ಕೀಚಕನನ್ … ಕಿಮ್ಮೀರನನ್… ಜಟಾಸುರನನ್ ಕೊಂದ ಕಲಿ… ಜರಾಸಂಧನನ್ ಇಕ್ಕಿ ಕೊಂದ ಬಲ್ಲಾಳ್… ಮರುತ್ ಸುತನ್ ಕೇವಳನೇ…

(ಎಂದು ಸಂಜಯನ್ ಸಾಹಸಭೀಮನ ಸಾಹಸಂಗಳನ್ ಅಭಿವರ್ಣಿಸಿ…)

ನೆಗಳ್ದ ಆ ಭಾರತಮಲ್ಲ ಶಕ್ರಸುತ ಬಾಣಾಘಾತದಿಮ್… ಭೀಮ ಭೀಮಗದಾದಂಡ ವಿಘಾತದಿಮ್… ಕುರುನೃಪ ಆನೀಕಮ್ ಪಡಲ್ವಟ್ಟು ಜೀರಗೆಯೊಕ್ಕಲ್ಗೆ ಎಣೆಯಾಗಿ… ಆ ಕುರುಕ್ಷೇತ್ರದೊಳ್ ಎತ್ತಮ್… ಬಿಳ್ದ ಭಟರಿಮ್… ಬಿಳ್ದ ಅಶ್ವದಿಮ್… ಬಿಳ್ದ ದಂತಿಗಳಿಂದಮ್… ಜವನ್ ಉಂಡು ಕಾರಿದವೊಲ್ ಆಯ್ತು. ಪವನಸುತನ್ ಗದೆಗೊಳೆ… ಗಾಂಡಿವಿ ಬಿಲ್ಗೊಳೆ… ಕಯ್ದುಗೊಳ್ವ ಮಾರ್ಕೊಳ್ವ ಅದಟರ್ ಭುವನದೊಳಿಲ್ಲ… ಕೌರವರಾಜಾ, ಅವರ್ಗಳ ಬಾಹು ವಿಕ್ರಮಮ್ ನಿನಗೆ ಪೊಸತೆ… ಜವನ ಮುಳಿಸೆ ಅವನ ಮುಳಿಸೆನೆ… ಜವನೇ ಬರ್ಚಿದವೊಲ್ ಇಂತು ಕುರುದರಿ ತರಿದನ್… ಜವನನ್

ಮುಳಿಯಿಸಿ… ಸುಭಟರ ಜವನನ್ ಮುಳಿಯಿಸಿ ಬರ್ದುಂಕುವನ್ನರುಮ್ ಒಳರೇ. ಪ್ರಿಯವಾಕ್ಸಹಿತಮ್ ದಾನಮ್… ಅಗರ್ವಮ್ ಜ್ಞಾನಮ್… ಕ್ಷಮಾನ್ವಿತಮ್ ಶೌರ್ಯಮ್ ಎನಿಪ್ಪ ಈ ನುಡಿಯನೆ ಧರ್ಮಜನಾ ದಾನಮ್ ಜ್ಞಾನಮ್ ಕ್ಷಮಾಗುಣಮ್ ನುಡಿಯಿಸಿದುದು… ಅಮಳ್ಗಳ್ ವಿನಯದೆ ವಿಕ್ರಮದ ಅಮಳ್ಗಳ್… ಅವರ್ ಮುಳಿಯೆ ಗಂಡರಿಲ್ಲ… ಕುರುಕುಲಾಂಬರ ಭಾನು, ಅವರ ಪರಾಕ್ರಮಮಮ್ ನೀನ್ ಅರಿದು ಇರ್ದುಮ್… ಸಮರದೊಳ್ ಇಳಿಸುವುದೆ…

(ಎಂದು ನುಡಿದ ಸಂಜಯನ ನುಡಿಗೆ ಫಣಿರಾಜ ಕೇತನನ್ ಸಿಡಿಲ್ದು…)

ತಿರುಳು: ಸಂಜಯನು ಬೀಮಾರ‍್ಜುನರ ಪರಾಕ್ರಮವನ್ನು ಹೊಗಳುವುದು

ಅರಸನ್ ಅವರ್ಗೆ ವಿರಸಮಾಗಿ ಪರುಷಮ್ ನುಡಿಯೆ=ದುರ್‍ಯೋದನನು ಅಶ್ವತ್ತಾಮ ಮತ್ತು ದ್ರೋಣರ ಬಗ್ಗೆ ತುಂಬಾ ಕಟುವಾಗಿ ಗಡುಸಾದ ನುಡಿಗಳ ಮೂಲಕ ತೆಗಳುವದನ್ನು ಕೇಳಿ;

ಸಂಜಯನ್ ತನ್ನ ಅಂತರ್ಗತದೊಳ್=ಸಂಜಯನು ತನ್ನ ಮನದಲ್ಲಿಯೇ ಈ ರೀತಿ ಅಂದುಕೊಂಡನು;

ಅಕಾರ್ಯಂಗೆ=ಯಾರು ಏನೇ ಹೇಳಿದರೂ ಕೇಳದೆ ತನ್ನ ಇಚ್ಚೆಗೆ ಬಂದುದನ್ನೇ ಮಾಡುವಂತಹ ವ್ಯಕ್ತಿಗೆ / ಹಿಡಿದ ಹಟವನ್ನು ಕೊನೆತನಕ ಬಿಡದವನಿಗೆ; ಅಹಿಕೇತನ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗುಳ್ಳ ದುರ್‍ಯೋದನ;

ಅಕಾರ್ಯಂಗೆ ಅಹಿಕೇತನಂಗೆ=ಕೆಟ್ಟ ಹಟಸಾದನೆಯಲ್ಲಿಯೇ ತೊಡಗಿರುವ ದುರ್‍ಯೋದನನಿಗೆ;

ಗಡ=ಆನಂದ/ಮೆಚ್ಚುಗೆ/ಅಚ್ಚರಿ/ಹಾಸ್ಯ/ಸಂಕಟ ಮುಂತಾದ ಒಳಮಿಡಿತಗಳನ್ನು ಹೊರಹಾಕುವಾಗ ಉಚ್ಚರಿಸುವ ಪದ;

ಕಾರ್ಯಸಖನ್ ಶಕುನಿ ಗಡಮ್=ದುರ್‍ಯೋದನನು ಮಾಡುವ ಎಲ್ಲ ಕೆಟ್ಟ ಕೆಲಸಗಳಿಗೂ ಶಕುನಿ ಸಂಗಡಿಗನಲ್ಲವೇ;

ಶೌರ್ಯಸಖನ್ ಸೂತಜನ್ ಗಡಮ್=ಸಾಹಸದ ಹೋರಾಟದ ಕೆಲಸಗಳಿಗೆ ಸೂತಪುತ್ರನಾದ ಕರ್‍ಣ ಸಂಗಡಿಗನಲ್ಲವೇ;

ವಿಧಿವಿಳಸನದಿಮ್=ವಿದಿ ವಿಲಾಸದಿಂದ ಅಂದರೆ ದುರ್‍ಯೋದನನ ಹಣೆಯಲ್ಲಿ ಬರೆದಿರುವುದೇ ಒಳಿತನ್ನು ದೂರತಳ್ಳಿ, ಕೆಟ್ಟದ್ದನ್ನು ಬರಸೆಳೆದು ಅಪ್ಪಿಕೊಳ್ಳುವಂತಹ ನಡೆನುಡಿ;

ಕೈಪೆ=ಕಹಿರುಚಿ/ಅಪ್ರಿಯ;

ಭೀಷ್ಮ ಶರಾಚಾರ್ಯರ ನುಡಿ ಕೈಪೆ ಗಡಮ್=ಬೀಶ್ಮ ಮತ್ತು ದ್ರೋಣರ ಮಾತುಗಳು ಕಹಿಯಲ್ಲವೇ; ಅಂದರೆ ಈ ಗುರು ಹಿರಿಯರ ಹಿತನುಡಿಗೆ ದುರ್‍ಯೋದನನು ಯಾವುದೇ ಮನ್ನಣೆಯನ್ನು ನೀಡುವುದಿಲ್ಲ/ಕಿವಿಗೊಡುವುದಿಲ್ಲ; ಸದಾಕಾಲ ಪಾಂಡವರಿಗೆ ಕೇಡನ್ನು ಬಗೆಯುವ ಒಳಸಂಚುಗಳನ್ನು ರೂಪಿಸುವ ಶಕುನಿ ಮತ್ತು ಅರ್‍ಜುನನ ಬಗ್ಗೆ ಹಗೆತನದ ನುಡಿಗಳನ್ನಾಡುವ ಕರ್‍ಣನ ಮಾತುಗಳು ದುರ್‍ಯೋದನನಿಗೆ ಪ್ರಿಯವಾಗುವಂತೆ ಬೀಶ್ಮ ದ್ರೋಣರ ಹಿತನುಡಿಗಳು ಪ್ರಿಯವಾಗುವುದಿಲ್ಲ;

ದುರ್‍ಯೋದನನ ದೇಹವನ್ನು ಕಾಪಾಡುವ ಸಾದನಗಳನ್ನು ರೂಪಕದ ನುಡಿಯಲ್ಲಿ ಸಂಜಯನು ತನ್ನಲ್ಲಿಯೇ ಹೇಳಿಕೊಳ್ಳತೊಡಗುತ್ತಾನೆ;

ಗುರು ಕವಚಮ್=ಗುರು ದ್ರೋಣನು ಉಕ್ಕಿನ ಅಂಗಿ;

ಕರ್ಣನ್ ಬಾಹು ರಕ್ಕೆ=ಕರ್‍ಣನು ತೋಳಿಗೆ ತೊಡುವ ಕವಚ;

ಸುರಸಿಂಧುನಂದನನ್ ಸೀಸಕಮಾಗಿರೆ=ಬೀಶ್ಮನು ತಲೆಗೆ ತೊಡುವ ಲೋಹದ ಟೊಪ್ಪಿಗೆ;

ಮೆಯ್ಗೆ ಮುಳಿಯಲ್ ಅರಿಯದೆ=ದುರ್‍ಯೋದನನ ತಲೆಯನ್ನು, ಎದೆಯನ್ನು ಮತ್ತು ತೋಳುಗಳನ್ನು ಕಾಪಾಡುವ ಸಾದನಗಳಂತೆ ದ್ರೋಣ—ಕರ್‍ಣ—ಬೀಶ್ಮರು ಇರುವಾಗ, ದುರ್‍ಯೋದನನ್ನು ಕೊಲ್ಲಲು ಅವನ ಮಯ್ ಮೇಲಣ ಬಾಗಕ್ಕೆ ಹೊಡೆಯಲಾಗದೆ;

ಭೀಮನ್ ಕುರುರಾಜನ ತೊಡೆಯನ್ ಉಡಿವೆನ್ ಎಂದನ್ ಎಂದು ಸಂಜಯನ್= ಬೀಮನು ಕುರುರಾಜನಾದ ದುರ್‍ಯೋದನನ ತೊಡೆಯನ್ನು ಮುರಿಯುತ್ತೇನೆ ಎಂದು ಪ್ರತಿಜ್ನೆ ಮಾಡಿದ್ದಾನೆ ಎಂದು ಸಂಜಯನು ತನ್ನ ಮನದಲ್ಲಿಯೇ ಅಂದುಕೊಳ್ಳುತ್ತ;

ಕುರುರಾಜನನ್ ನೋಡಿ=ಈಗ ಸಂಜಯನು ದುರ್‍ಯೋದನನ್ನು ನೋಡುತ್ತ ಗುರು ದ್ರೋಣ ಮತ್ತು ಕುರುಕುಲ ಪಿತಾಮಹ ಬೀಶ್ಮರ ಪರಾಕ್ರಮ ಮತ್ತು ಹಿರಿಮೆಯನ್ನು ಕೊಂಡಾಡತೊಡುಗುತ್ತಾನೆ;

ಭುವನಕ್ಕೆ ಆರಾಧ್ಯನೆಂಬ ಈ ನೆಗಳ್ದ ಬಿರುದಿನ ಅಂಕಕ್ಕೆ ತಕ್ಕ ಅಂದದಿಮ್= ‘ಲೋಕಕ್ಕೆ ಗುರು’ ಎಂಬ ಬಿರುದನ್ನು ಪಡೆದು ಹೆಸರಿಗೆ ತಕ್ಕ ರೀತಿಯಲ್ಲಿ;

ಮುನ್ ಭಾರ್ಗವನೊಳ್ ದಿವ್ಯಾಸ್ತ್ರಮಮ್ ಪಡೆದು ನೆಗಳ್ದ ಶೌರ್ಯಕ್ಕೆ ತಕ್ಕ ಅಂದದಿಮ್=ಈ ಮೊದಲು ಪರಶುರಾಮನಿಂದ ದಿವ್ಯವಾದ ಆಯುದವನ್ನು ಪಡೆದು, ಹೆಸರಾಂತ ಪರಾಕ್ರಮಕ್ಕೆ ತಕ್ಕ ರೀತಿಯಲ್ಲಿ;

ಪಾಂಡವರುಮ್ ಕೌರವ್ಯರುಮ್ ಕೈಮುಗಿಯೆ=ಪಾಂಡವರು ಮತ್ತು ಕೌರವರು ಕಯ್ ಮುಗಿದು ಅಂದರೆ ವಿನಯಶೀಲರಾಗಿ ದ್ರೋಣರಿಂದ ಅಸ್ತ್ರವಿದ್ಯೆಯನ್ನು ಕಲಿಯಲು;

ಬಿಲ್+ಒವಜನ್; ಒವಜ=ಗುರು; ಬಿಲ್ಲೊವಜನ್=ಬಿಲ್ ವಿದ್ಯೆಯನ್ನು ಹೇಳಿಕೊಡುವ ಗುರು/ದ್ರೋಣ;

ನೆಗಳ್ದ ಪೆಂಪಿಂಗೆ ತಕ್ಕ ಅಂದದಿಮ್… ಬಿಲ್ಲೊವಜನ್ ಗಾಂಡೀವಿಯೊಳ್ ಕಾದಿದನ್ =ತಾನು ಪಡೆದ ಕೀರ್‍ತಿಯ ಮಹಿಮೆಗೆ ತಕ್ಕ ರೀತಿಯಲ್ಲಿ ದ್ರೋಣನು ಅರ್‍ಜುನನೊಡನೆ ಹೋರಾಡಿದನು;

ಶರಾಸರ=ಬಾಣಗಳ ಸುರಿಮಳೆ/ಒಂದೇ ಸಮನೆ ಬಾಣಗಳನ್ನು ಪ್ರಯೋಗಿಸುವುದು;

ಅವರ ಶರಾಸಾರಮಮ್ ನೀನೇ ಕಂಡೈ=ದ್ರೋಣರ ಬಾಣಗಳ ಸುರಿಮಳೆಯನ್ನು ನೀನೇ ರಣರಂಗದಲ್ಲಿ ಕಣ್ಣಾರ ಕಂಡಿರುವೆ;

ಇದು ದಲ್ ಗಂಗಾತ್ಮಜನ್ಮಕ್ಕೆ ಅನುಗುಣಮ್=ಬೀಶ್ಮನು ಗಂಗೆಯ ಮಗನಾದುದಕ್ಕೆ ಇದು ಯೋಗ್ಯವಾದುದು; ಅಂದರೆ ಬೀಶ್ಮನು ಕುರುಕ್ಶೇತ್ರ ರಣರಂಗದಲ್ಲಿ ವೀರೋಚಿತವಾಗಿ ಹೋರಾಡಿ, ಈಗ ತನ್ನಿಚ್ಚೆಯಂತೆ ಶರಮಂಚದ ಮೇಲೆ ಮಲಗಿದ್ದಾನೆ;

ಪೋ … ಇದು ರಾಜಪ್ರಸಾದಕ್ಕೆ ತಕ್ಕುದು=ಏನೆಂದು ತಿಳಿದಿರುವೆ… ಇದು ರಾಜನ ಮೆಚ್ಚುಗೆಗೆ ಪಾತ್ರವಾದುದು;

ದೋರ್ದಂಡ=ಶಕ್ತಿಯುತವಾದ ತೋಳುಗಳು;

ಕಂಡೂಯನ=ನವೆ/ತುರಿಕೆ;

ದೋರ್ದಂಡ ಕಂಡೂಯನ=ಇದೊಂದು ನುಡಿಗಟ್ಟು. “ತೋಳಿನ ತೀಟೆಯನ್ನು ತೀರಿಸಿಕೊಳ್ಳುವುದು” ಎಂದರೆ ಎದುರಾಳಿಯ ಜತೆ ಹೋರಾಡುವಾಗ ತೋಳ್ಬಲವನ್ನು ಪ್ರಯೋಗಿಸಿ, ಹಗೆಯನ್ನು ಸದೆಬಡಿದು ತೋಳ್ಬಲವನ್ನು ಮೆರೆಸುವುದು;

ಇದು ಈ ದೋರ್ದಂಡ ಕಂಡೂಯನಕೆ ಸದೃಶಮ್=ರಣರಂಗದಲ್ಲಿ ಹಗೆಗಳಾದ ಪಾಂಡವರ ಬಲವನ್ನು ಸದೆಬಡಿದ ಬೀಶ್ಮನ ತೋಳ್ಬಲದ ಶಕ್ತಿಗೆ ಇದು ಸಂಕೇತವಾಗಿದೆ;

ಭೀಷ್ಮನಾಮ=ಶಂತನು ಮತ್ತು ಗಂಗಾದೇವಿಯ ಮಗನಾದ ಬೀಶ್ಮರ ಮೊದಲ ಹೆಸರು ಗಾಂಗೇಯ. ತಂದೆಯಾದ ಶಂತನು ರಾಜನು ಸತ್ಯವತಿಯೆಂಬ ಹೆಣ್ಣನ್ನು ಮದುವೆಯಾಗಲು ಬಯಸಿದಾಗ, ಆಕೆಯ ತಂದೆಯು “ತನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಗನಿಗೆ ಪಟ್ಟಕಟ್ಟುವುದಾದರೆ, ಮಗಳನ್ನು ಕೊಡುತ್ತೇನೆ” ಎಂಬ ಕರಾರರನ್ನು ಹಾಕಿದ್ದರಿಂದ, ತಂದೆಯ ಬಯಕೆಯನ್ನು ಈಡೇರಿಸುವುದಕ್ಕಾಗಿ ಗಾಂಗೇಯನು “ತನಗೆ ರಾಜ್ಯದ ಪಟ್ಟವೂ ಬೇಡ. ತಾನೂ ಮದುವೆಯನ್ನೇ ಆಗುವುದಿಲ್ಲ” ಎಂದು ಪ್ರತಿಜ್ನೆಯನ್ನು ಮಾಡಿ, ಸತ್ಯವತಿ ಮತ್ತು ಶಂತನು ಅವರ ಮದುವೆಯನ್ನು ಮಾಡಿಸುತ್ತಾನೆ. ಮಹತ್ತರವಾದ ಪ್ರತಿಜ್ನೆಯನ್ನು ಮಾಡಿದ ಗಾಂಗೇಯನಿಗೆ ಅಂದಿನಿಂದ ಬೀಶ್ಮನೆಂಬ ಹೆಸರು ಬರುತ್ತದೆ. ಭೀಷ್ಮ=ಬಯಂಕರವಾದುದು;

ಭೀಷ್ಮನಾಮಕ್ಕೆ ಇದು ಸಮುಚಿತಮ್ ಎಂಬಂತೆ=ಅಚಲವಾದ ಪ್ರತಿಜ್ನೆಯನ್ನು ಮಾಡಿದವನು ಎಂಬ ಹೆಸರಿಗೆ ಇದು ಯೋಗ್ಯವಾದುದು ಎನ್ನುವಂತೆ;

ಸಂಗ್ರಾಮರಂಗ ಉನ್ಮದರೆಲ್ಲರ್ ನೋಡೆ=ರಣರಂಗದಲ್ಲಿ ನೆರೆದಿದ್ದ ಕೌರವ ಮತ್ತು ಪಾಂಡವ ಪಡೆಗಳಲ್ಲಿ ಬುಜಬಲದ ಸೊಕ್ಕಿನಿಂದ ಮೆರೆಯುತ್ತಿರುವ ವೀರರೆಲ್ಲರೂ ನೋಡುತ್ತಿರಲು;

ಅದಟನ್ ಸಿಂಧುಪುತ್ರನ್ ಕದನದೊಳ್ ಪೆಂಪಮ್ ತೋರಿದನ್=ಶೂರನಾದ ಬೀಶ್ಮನು ರಣರಂಗದಲ್ಲಿ ತನ್ನ ಕೀರ್‍ತಿಯನ್ನು ತೋರಿದನು;

ಕಳಶ ನದೀಜರ್ ಇದು ಭಕ್ತಿಗೆ ಕಳಶಾರೋಹಣಮ್ ಎನಿಸಿ ನೆರಪಿದರ್=ದ್ರೋಣ ಮತ್ತು ಬೀಶ್ಮರು ಸ್ವಾಮಿಬಕ್ತಿಗೆ ಕಳಶವಿಟ್ಟರು ಎನ್ನುವಂತೆ ಕುರುಕ್ಶೇತ್ರ ರಣರಂಗದಲ್ಲಿ ಹೋರಾಡಿದರು; ಅಳವು=ಶಕ್ತಿ;

ಕಾದಿ ಗೆಲಲ್ ಅವರ ಒಂದು ಅಳವಲ್ತು=ಪಾಂಡವರ ಎದುರಾಗಿ ಹೋರಾಡಿ ಗೆಲ್ಲುವುದು ಅವರ ಕಯ್ಯಲ್ಲಿಲ್ಲ. ಅಂದರೆ ಅವರ ಶಕ್ತಿಗೆ ಅದು ಮಿಗಿಲಾದುದ್ದು;

ಆರ ಅಳವಲ್ತು=ಯಾರಿಗೂ ಪಾಂಡವರನ್ನು ಸೋಲಿಸುವ ಶಕ್ತಿಯಿಲ್ಲ;

ಅರ್‍ಜುನನ ಶೌರ್ಯಮಮ್ ನೀನ್ ಅರಿಯಾ=ಅರ್‍ಜುನನ ಪರಾಕ್ರಮ ಎಂತಹುದು ಎಂಬುದು ನಿನಗೆ ಗೊತ್ತಲ್ಲವೇ;

ನೃಪ, ನಿನ್ನನ್ ಪಿಡಿದು ಉಯ್ಯೆ=ದುರ್‍ಯೋದನನೇ, ನಿನ್ನನ್ನು ಚಿತ್ರಾಂಗದನೆಂಬ ಗಂದರ್‍ವನು ಹಿಡಿದುಕೊಂಡು, ಗಗನದಲ್ಲಿರುವ ತನ್ನ ಲೋಕಕ್ಕೆ ಎಳೆದೊಯ್ಯುತ್ತಿದ್ದಾಗ; ಪಾಂಡವರು ಹನ್ನೆರಡು ವರುಶ ವನವಾಸದಲ್ಲಿದ್ದಾಗ, ಅವರಿಗೆ ತನ್ನ ರಾಜತನದ ಸಿರಿವಂತಿಕೆಯನ್ನು ತೋರಿಸಿ, ಅವರನ್ನು ಅಪಮಾನಪಡಿಸಬೇಕೆಂದು ದುರ್‍ಯೋದನನು ತನ್ನ ಮಡದಿ ಮಕ್ಕಳು, ತಮ್ಮಂದಿರು ಮತ್ತು ಬಂದುಬಾಂದವರೊಡನೆ ಪಾಂಡವರಿದ್ದ ಕಾಡಿಗೆ ಹೋದಾಗ, ಚಿತ್ರಾಂಗದನೆಂಬ ಗಂದರ್‍ವನ ಉದ್ಯಾನವನ್ನು ಹೊಕ್ಕು ಹಾಳುಮಾಡುತ್ತಿದ್ದುದರಿಂದ ಸೆರೆಯಾಗುತ್ತಾನೆ;

ಭಾನುಮತಿಯನ್ ಸಂತೈಸಿ=ಸಂಕಟದಿಂದ ಪರಿತಪಿಸುತ್ತಿದ್ದ ನಿನ್ನ ಹೆಂಡತಿ ಬಾನುಮತಿಯನ್ನು ಸಮಾದಾನ ಮಾಡಿ;

ಗಾಂಡೀವಿ ಚಿತ್ರಾಂಗದಂಗೆ ಉಪಯೋಗಾಸ್ತ್ರಮನ್ ಎಚ್ಚು=ಅರ್‍ಜುನನು ಚಿತ್ರಾಂಗದನ ಮೇಲೆ ಉಪಯೋಗಾಸ್ತ್ರವನ್ನು ಪ್ರಯೋಗಿಸಿ, ಅವನನ್ನು ಸೋಲಿಸಿ, ಅವನಿಂದ ನಿನ್ನನ್ನು ಬಿಡುಗಡೆಗೊಳಿಸಿ;

ಕೂಡೆ ನಭದಿಮ್ ತರ್ಪಾಗಳ್=ಕೂಡಲೇ ಗಗನದಿಂದ ನಿನ್ನನ್ನು ಕರೆತರುವಾಗ;

ಕುರುಪ್ರಭವರ್=ಕುರುವಂಶದಲ್ಲಿ ಹುಟ್ಟಿದವರು/ದುರ್‍ಯೋದನನ ನೂರು ಮಂದಿ ತಮ್ಮಂದಿರು;

ಹಮ್ಮದ=ಮೂರ್ಚೆ/ಪ್ರಜ್ನೆ ತಪ್ಪುವಿಕೆ;

ಈ ಕೃಪನ್… ಈ ಸೈಂಧವನ್… ಈ ಸರಿತ್ ತನಯನ್… ಈ ರಾಧೇಯನ್… ಈ ಮದ್ರಭೂಮಪನ್… ಈ ಕುಂಭಜನ್… ಈ ಕುರುಪ್ರಭವರ್… ಅಂದು ಏನ್ ಹಮ್ಮದಮ್ ಪೋದರೇ=ನಿನ್ನ ಗುರುವಾದ ಕೃಪ… ನಿನ್ನ ಬಾವಮಯ್ದುನನಾದ ಸೈಂದವ… ನಿನ್ನ ತಾತನಾದ ಬೀಶ್ಮ… ನಿನ್ನ ಗೆಳೆಯನಾದ ಕರ್‍ಣಮದ್ರದೇಶದ ಒಡೆಯನಾದ ಶಲ್ಯ..ನಿನ್ನ ಗುರುವಾದ ದ್ರೋಣ… ನಿನ್ನ ಒಡಹುಟ್ಟಿದ ತಮ್ಮಂದಿರು… ಚಿತ್ರಾಂಗದನು ನಿನ್ನನ್ನು ಸೆರೆಹಿಡಿದು ಒಯ್ಯುತ್ತಿದ್ದಾಗ ಅರ್‍ಜುನನು ವೀರಾವೇಶದಿಂದ ಹೋರಾಡಿ ನಿನ್ನನ್ನು ಸೆರೆಯಿಂದ ಬಿಡಿಸಿ ಕರೆತರುತ್ತಿದ್ದಾಗ… ಏನು ಪ್ರಜ್ನೆ ತಪ್ಪಿ ಬಿದ್ದಿದ್ದರೆ; ಅಂದರೆ ಗಂದರ್‍ವನಿಂದ ಸೆರೆಯಾಗಿದ್ದ ನಿನ್ನನ್ನು ಬಿಡಿಸಿಕೊಂಡು ಬರುವ ಶಕ್ತಿಯಾಗಲಿ ಇಲ್ಲವೇ ಪರಾಕ್ರಮವಾಗಲಿ ನಿನ್ನ ಕಡೆಯಲ್ಲಿ ಯಾರೊಬ್ಬರಿಗೂ ಇರಲಿಲ್ಲ;

ಅಕ್ಷೋಹಿಣಿ=21,870 ಆನೆ – 21,870 ತೇರು – 65,610 ಕುದುರೆ – 1,09,350 ಕಾಲಾಳು ಇರುವ ಸೇನಾಬಲವನ್ನು ಒಂದು ಅಕ್ಶೋಹಿಣಿ ಎಂದು ಕರೆಯುತ್ತಾರೆ;

ಕಲಿ ಪನ್ನೊಂದಕ್ಷೋಹಿಣಿ ಬಲವೆಲ್ಲಮನೊಂದೆ ರಥದೊಳೊರ್ವನೆ ಗೆಲ್ದನ್=ಶೂರನಾದ ಅರ್‍ಜುನನು ನಿನ್ನ ಕಡೆಯ ಹನ್ನೊಂದು ಅಕ್ಶೋಹಿಣಿ ಸೇನೆಯೆಲ್ಲವನ್ನು ತೇರಿನಲ್ಲಿ ಬಂದು ಒಬ್ಬನೇ ಗೆದ್ದನು;

ವಿಜಯ=ಅರ್‍ಜುನ;

ಗೋಗ್ರಹಣದ ಕಲಹದೊಳ್ ಅರಿಯನ್ ಗೆಲಲ್ ವಿಜಯನ್ ಏಕಾಂಗವಿಜಯನಾದನ್ = ಅಂದು ವಿರಾಟನಗರಿಯ ಹೊರವಲಯದಲ್ಲಿ ನಡೆದ ಗೋಗ್ರಹಣದ ಕಾಳೆಗದಲ್ಲಿ ಶತ್ರುವಾದ ನಿನ್ನ ಪಡೆಯ ಎದುರಾಗಿ ಅರ್‍ಜುನನು ಏಕಾಂಗಿಯಾಗಿಯೇ ಹೋರಾಡಿ ವಿಜಯಶಾಲಿಯಾದನು;

ಉರಿ ಕೊಳೆ=ಅರಗಿನ ಮನೆಯಲ್ಲಿ ಬೆಂಕಿಬಿದ್ದಾಗ;

ಕೋಳ್ಮಿಗಮ್ ಕೊಳೆ= ಹನ್ನೆರಡು ವರುಶದ ಅರಣ್ಯವಾಸದಲ್ಲಿ ಕಾಡು ಪ್ರಾಣಿಗಳು ದಾಳಿಯಿಟ್ಟಾಗ;

ವಿಷಾಹಿಕುಲಮ್ ಕೊಳೆ=ವಿಶದ ಹಾವುಗಳು ಕಚ್ಚಲು ಬಂದಾಗ;

ಶತ್ರುಭೂಮಿಯೊಳ್=ಹಗೆಗಳಿಂದ ಆಕ್ರಮಣಕ್ಕೆ ಗುರಿಯಾದಾಗ;

ಗಿರಿಗಹನಂಗಳೊಳ್=ಬೆಟ್ಟ ಗುಡ್ಡ ಕಾಡುಗಳಲ್ಲಿ ಸಂಚರಿಸುವಾಗ;

ವಿಷಮ ರಾಕ್ಷಸ ಸಂಕುಲದೊಳ್=ಬಯಂಕರರಾದ ರಕ್ಕಸರ ಗುಂಪಿನಲ್ಲಿ ಸಿಕ್ಕಿಬಿದ್ದಾಗ;

ವರಾಹ ಸಿಂಧುರ ಖರ ಶಯ್ಯೆಯೊಳ್=ಹಂದಿ ಆನೆಗಳು ಹೆಚ್ಚಾಗಿರುವ ಬಯಂಕರವಾದ ನೆಲೆಗಳಲ್ಲಿ;

ವಿಪುಳ ಭೀಕರದೊಳ್=ಈ ರೀತಿ ಆಪತ್ತಿನ ಅನೇಕ ಸನ್ನಿವೇಶಗಳಲ್ಲಿ;

ವೃಕೋದರ=ಬೀಮ;

ವೃಕೋದರನ್ ನಿಜ ಬಾಹು ವಜ್ರಪಂಜರದೊಳಗಿಟ್ಟು ಸಹೋದರರಮ್ ರಕ್ಷಿಸಿದನಲ್ತೆ=ಬೀಮನು ತನ್ನ ಬಾಹುಗಳೆಂಬ ವಜ್ರಪಂಜರದೊಳಗಿಟ್ಟುಕೊಂಡು ಸೋದರರನ್ನು ಕಾಪಾಡಿದನಲ್ಲವೇ;

ಬಕನನ್… ಹಿಡಿಂಬನನ್… ಕೀಚಕನನ್… ಕಿಮ್ಮೀರನನ್… ಜಟಾಸುರನನ್ ಕೊಂದ ಕಲಿ=ಬಲಶಾಲಿಗಳಾಗಿದ್ದ ಬಕಾಸುರನನ್ನು… ಹಿಡಿಂಬನನ್ನು… ಕೀಚಕನನ್ನು… ಕಿಮ್ಮೀರನನ್ನು… ಜಟಾಸುರನ್ನು ಕೊಂದ ಮಹಾಶೂರ ಬೀಮ;

ಜರಾಸಂಧನನ್ ಇಕ್ಕಿ ಕೊಂದ ಬಲ್ಲಾಳ್ … ಮರುತ್ ಸುತನ್ ಕೇವಳನೇ ಎಂದು ಸಂಜಯನ್ ಸಾಹಸಭೀಮನ ಸಾಹಸಂಗಳನ್ ಅಭಿವರ್ಣಿಸಿ=ಜರಾಸಂದನನ್ನು ಇಬ್ಬಾಗವಾಗಿ ಸೀಳಿ ಕೊಂದ ಮಹಾಶಕ್ತಿವಂತನಾದ ವಾಯುಪುತ್ರನಾದ ಬೀಮನು ಸಾಮಾನ್ಯನೇ ಎಂದು ಸಂಜಯನು… ಸಾಹಸಬೀಮನ ಪರಾಕ್ರಮದ ಪ್ರಸಂಗಗಳನ್ನು ಚೆನ್ನಾಗಿ ಬಣ್ಣಿಸಿ ಹೇಳಿ;

ಶಕ್ರಸುತ=ದೇವೇಂದ್ರನ ಅಂಶದಿಂದ ಹುಟ್ಟಿರುವ ಅರ್‍ಜುನ;

ನೆಗಳ್ದ ಆ ಭಾರತಮಲ್ಲ ಶಕ್ರಸುತ ಬಾಣಾಘಾತದಿಮ್=ಕೀರ್‍ತಿವಂತನಾದ ಆ ಬಾರತಮಲ್ಲ ಅರ್‍ಜುನನ ಬಾಣಗಳ ಪೆಟ್ಟಿನಿಂದ;

ಭೀಮ ಭೀಮಗದಾದಂಡ ವಿಘಾತದಿಮ್=ಬೀಮನ ಬಯಂಕರವಾದ ಗದಾದಂಡದ ದೊಡ್ಡ ಹೊಡೆತದಿಂದ;

ಕುರುನೃಪ ಆನೀಕಮ್ ಪಡಲ್ವಟ್ಟು=ಕುರುರಾಜನ ಸೇನೆಯು ಚೆಲ್ಲಾಪಿಲ್ಲಿಗೊಂಡು;

ರಗೆಯೊಕ್ಕಲ್ಗೆ ಎಣೆಯಾಗಿ=ಜೀರಗೆಯ ಪಯಿರುಗಳನ್ನು ಒಕ್ಕಣೆ ಮಾಡುವಾಗ ಜೀರಗೆಯ ಸಣ್ಣಸಣ್ಣ ಕಾಳುಗಳು ಎಲ್ಲೆಡೆಯಲ್ಲಿಯೂ ಚದುರಿಕೊಂಡು ಬೀಳುವಂತೆ;

ಕುರುಕ್ಷೇತ್ರದೊಳ್ ಎತ್ತಮ್=ಕುರುಕ್ಶೇತ್ರ ರಣರಂಗದ ಎಲ್ಲೆಡೆಗಳಲ್ಲಿಯೂ;

ಬಿಳ್ದ ಭಟರಿಮ್=ಸಾವು ನೋವಿಗೆ ಗುರಿಯಾಗಿ ಬಿದ್ದಿರುವ ಬಟರಿಂದ;

ಬಿಳ್ದ ಅಶ್ವದಿಮ್=ಉರುಳಿ ಬಿದ್ದಿರುವ ಕುದುರೆಗಳಿಂದ;

ಬಿಳ್ದ ದಂತಿಗಳಿಂದಮ್=ಕೆಡೆದು ಬಿದ್ದಿರುವ ಆನೆಗಳಿಂದ;

ಜವನ್ ಉಂಡು ಕಾರಿದವೊಲ್ ಆಯ್ತು=ಯಮನು ಉಂಡು ಅರಗಿಸಿಕೊಳ್ಳಲಾಗದೆ ಕಕ್ಕಿಕೊಂಡಂತಾಗಿದೆ; ಸಾವಿನ ದೇವತೆಯಾದ ಯಮನು ಅಗಣಿತ ಸಂಕೆಯ ಜೀವರಾಶಿಗಳನ್ನು ಬಲಿತೆಗೆದುಕೊಂಡಿದ್ದಾನೆ ಎಂಬ ರೂಪಕದ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;

ಪವನಸುತನ್ ಗದೆಗೊಳೆ=ವಾಯುಪುತ್ರನಾದ ಬೀಮನು ಗದೆಯನ್ನು ಕಯ್ಗೆ ಎತ್ತಿಕೊಂಡರೆ; ಗದೆಯನ್ನು ಹಿಡಿದು ಯುದ್ದಕ್ಕೆ ಸಿದ್ದನಾದರೆ;

ಗಾಂಡಿವಿ ಬಿಲ್ಗೊಳೆ=ಅರ್‍ಜುನನು ಬಿಲ್ಲನ್ನು ಹಿಡಿದು ಯುದ್ದಕ್ಕೆ ಸಿದ್ದನಾದರೆ;

ಕಯ್ದುಗೊಳ್ವ ಮಾರ್ಕೊಳ್ವ ಅದಟರ್ ಭುವನದೊಳಿಲ್ಲ=ಬೀಮಾರ್‍ಜುನರೊಡನೆ ಯುದ್ದಮಾಡಲೆಂದು ಆಯುದವನ್ನು ಹಿಡಿದು ಸಿದ್ದರಾಗುವ… ಅವರನ್ನು ಎದುರಿಸುವ ಶೂರರು ಈ ಜಗತ್ತಿನಲ್ಲಿಲ್ಲ;

ಕೌರವರಾಜಾ, ಅವರ್ಗಳ ಬಾಹು ವಿಕ್ರಮಮ್ ನಿನಗೆ ಪೊಸತೆ=ದುರ್‍ಯೋದನಾ, ಬೀಮಾರ್‍ಜುನರ ಬಾಹುಬಲದ ಪರಾಕ್ರಮವು ನಿನಗೆ ಹೊಸತೇನು;

ಜವನ ಮುಳಿಸೇ ಅವನ ಮುಳಿಸೆನೆ=ಯಮನ ಕೋಪೋದ್ರೇಕವೇ ಬೀಮನ ಕೋಪೋದ್ರೇಕ ಎನ್ನುವಂತೆ;

ಬರ್ಚು=ನಾಶಮಾಡು/ಶಕ್ತಿಗುಂದಿಸು; ಕುರಿ+ತರಿ=ಕುರಿದರಿ; ಕುರಿದರಿ=ಕುರಿಯನ್ನು ಕತ್ತರಿಸು;

ಜವನೇ ಬರ್ಚಿದವೊಲ್ ಇಂತು ಕುರಿದರಿ ತರಿದನ್=ಯಮನೇ ಜೀವಿಗಳನ್ನು ನಾಶಮಾಡುವಂತೆ ನಿನ್ನ ಸೇನೆಗೆ ಯಮರೂಪಿಯಾದ ಬೀಮನು ಮಾರಿಗುಡಿಯ ಮುಂದೆ ಕುರಿಗಳನ್ನು ಕತ್ತರಿಸಿ ಬಲಿಕೊಡುವಂತೆ ಕುರುಕ್ಶೇತ್ರ ರಣರಂಗದಲ್ಲಿ ನಿನ್ನ ಪಡೆಯನ್ನು ಬಲಿಗೊಟ್ಟನು;

ಜವನನ್ ಮುಳಿಯಿಸಿ… ಸುಭಟರ ಜವನನ್ ಮುಳಿಯಿಸಿ ಬರ್ದುಂಕುವನ್ನರುಮ್ ಒಳರೇ=ಸಾವಿನ ದೇವತೆಯಾದ ಯಮನನ್ನು ಕೆಣಕಿ ಕೋಪೋದ್ರೇಕಗೊಳಿಸಿದ ಹಾಗೆ… ಶತ್ರುಸೇನೆಯ ವೀರರಿಗೆ ಯಮನಾಗಿರುವ ಬೀಮನನ್ನು ಕೆಣಕಿ ಕೋಪೋದ್ರೇಕಗೊಳಿಸಿ ಬದುಕುವಂತಹವರು ಇದ್ದಾರೆಯೇ; ಇದುವರೆಗೆ ಬೀಮಾರ್‍ಜುನ ಸಾಹಸವನ್ನು ಹೊಗಳುತ್ತಿದ್ದ ಸಂಜಯನು ಇದೀಗ ದರ್‍ಮರಾಯನ ಸದ್ಗುಣವನ್ನು ಕೊಂಡಾಡತೊಡಗುತ್ತಾನೆ.

ಪ್ರಿಯವಾಕ್ಸಹಿತಮ್ ದಾನಮ್=ಒಳ್ಳೆಯ ಮಾತುಗಳನ್ನಾಡುತ್ತ ಮಾಡುವ ದಾನ;

ಅಗರ್ವಮ್ ಜ್ಞಾನಮ್=ಅಹಂಕಾರವಿಲ್ಲದ ವಿನಯದ ನಡೆನುಡಿಯಿಂದ ಕೂಡಿದ ಅರಿವು;

ಕ್ಷಮಾನ್ವಿತಮ್ ಶೌರ್ಯಮ್ ಎನಿಪ್ಪ=ಹಗೆಯ ತಪ್ಪನ್ನು ಮನ್ನಿಸಿ, ಹಗೆಗೆ ಅರಿವನ್ನು ಮೂಡಿಸಿ, ಹಗೆಯು ಒಳ್ಳೆಯ ರೀತಿಯಲ್ಲಿ ಬದುಕಲು ಅವಕಾಶವನ್ನು ಕೊಡುವ ಕರುಣೆಯ ನಡೆನುಡಿಯೇ ಶೂರತನವೆನ್ನುವ ;

ಈ ನುಡಿಯನೆ=ಇಂತಹ ಮಾತುಗಳನ್ನೇ;

ಧರ್ಮಜನಾ ದಾನಮ್ ಜ್ಞಾನಮ್ ಕ್ಷಮಾಗುಣಮ್ ನುಡಿಯಿಸಿದುದು=ದರ್‍ಮರಾಯನ ದಾನ, ಜ್ನಾನ ಮತ್ತು ಕ್ಶಮೆಯ ನಡೆನುಡಿಯು ನನ್ನಿಂದ ಆಡಿಸಿತು; ಸಂಜಯನು ಈಗ ನಕುಲ ಸಹದೇವರನ್ನು ಗುಣಗಾನ ಮಾಡತೊಡಗುತ್ತಾನೆ;

ಅಮಳ್=ಅವಳಿ/ಜೋಡಿ; ಅಮಳ್ಗಳ್=ಅವಳಿ ಮಕ್ಕಳಾದ ನಕುಲ ಸಹದೇವ;

ಅಮಳ್ಗಳ್ ವಿನಯದೆ ವಿಕ್ರಮದ ಅಮಳ್ಗಳ್=ಪಾಂಡುರಾಜ ಮತ್ತು ಮಾದ್ರಿಯ ಅವಳಿ ಮಕ್ಕಳಾದ ನಕುಲ ಸಹದೇವರು ವಿನಯವಂತಿಕೆಯ ಮತ್ತು ಪರಾಕ್ರಮವೆಂಬ ಎರಡು ಗುಣವನ್ನು ಹೊಂದಿದ್ದಾರೆ;

ಅವರ್ ಮುಳಿಯೆ ಗಂಡರಿಲ್ಲ=ನಕುಲ ಸಹದೇವರು ಕೋಪೋದ್ರೇಕಗೊಂಡು ಎದುರಾದರೆ ಅವರನ್ನು ಸೋಲಿಸುವ ಶೂರರೇ ಜಗತ್ತಿನಲ್ಲಿಲ್ಲ;

ಕುರುಕುಲಾಂಬರ ಭಾನು=ಕುರುಕುಲವೆಂಬ ಆಕಾಶದಲ್ಲಿ ಸೂರ್‍ಯನಂತೆ ಕಂಗೊಳಿಸುತ್ತಿರುವ ದುರ್‍ಯೋದನ;

ಇಳಿಸು=ಹೀಯಾಳಿಸು/ತೆಗಳು/ಕಡೆಗಣಿಸು;

ಕುರುಕುಲಾಂಬರ ಭಾನು, ಅವರ ಪರಾಕ್ರಮಮಮ್ ನೀನ್ ಅರಿದು ಇರ್ದುಮ್=ದುರ್‍ಯೋದನನೇ, ಹಿರಿಯರಾದ ಬೀಶ್ಮರು, ಗುರುಗಳಾದ ದ್ರೋಣರು ಮತ್ತು ಪಾಂಡವರು ಅಯ್ದು ಮಂದಿಯೂ ಮಹಾಶೂರರೆಂಬುದನ್ನು ನೀನು ತಿಳಿದಿದ್ದರೂ;

ಸಮರದೊಳ್ ಇಳಿಸುವುದೆ ಎಂದು ನುಡಿದ ಸಂಜಯನ ನುಡಿಗೆ =ಕುರುಕ್ಶೇತ್ರ ರಣರಂಗದಲ್ಲಿ ಅವರೆಲ್ಲರ ಶಕ್ತಿ ಮತ್ತು ಪರಾಕ್ರಮವನ್ನು ಕಡೆಗಣಿಸಿ ತೆಗಳುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ ಸಂಜಯನ ಮಾತಿಗೆ;

ಫಣಿರಾಜ ಕೇತನನ್ ಸಿಡಿಲ್ದು=ದುರ್‍ಯೋದನನ್ನು ಆಕ್ರೋಶದಿಂದ ಕೆರಳಿ ಕೋಪಗೊಂಡು;

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *