ಕವಿತೆ: ಮಾಟಗಾತಿ
– ಬಸವರಾಜ್ ಕಂಟಿ.
ಮಾಟಗಾತಿ ನನ್ನ ಮಗಳು, ಮಾಯದ
ವಿದ್ಯೆಯ ಹುಟ್ಟಿನಿಂದಲೇ ಪಡೆದವಳು
ನಟಿಸಿ ನಟಿಸಿ ಅಳುವ ನುಡಿಯಲಿ
ಮೋಡಿಯ ಮಂತ್ರ ಹಾಕುವಳು.
ಅವಳ ಮೊಗವೇ ಇಂದ್ರಜಾಲ
ಕಣ್ಣವು ಮಿನುಗುವ ಲಾಂದ್ರ
ನೋಟವೊಂದು ಸಾಕು ಸೆಳೆಯಲು
ಅಪ್ಪಿ ಮುತ್ತಿಡುವುದನಿವಾರ‍್ಯ
ತನ್ನಿಶ್ಟದ ಆಟ ಆಡಿಸುವಳು
ನಾವೆಲ್ಲಾ ಸೂತ್ರದ ಬೊಂಬೆಗಳು
ಹೊತ್ತು ಹರಿಸಿ, ಹಸಿವ ಮರೆಸಿ, ತನ್ನ
ಮಾಯಾಲೋಕದಲ್ಲಿ ಸೆರೆಹಿಡಿವಳು
ಎತ್ತಿ ತೋಳಲ್ಲಿ ಬಳಸಿದೊಡನೆ
ಬುದ್ದಿ ಬ್ರಮಣೆ ಮಾಡುವಳು
ಜಗದ ಹಂಗು ಬಿಡಿಸಿ ನನ್ನ
ವಿದೇಯ ಮಗುವಂತಾಗಿಸುವಳು
ಮೋಡಿಯ ಬಿಡಿಸಿ ಹರಸಾಹಸದಿಂದ
ಮಂಕುಕವಿದರಿವಿಗೆ ಕೇಳಿಕೊಳುವೆ
ಅವಳು ಮಗುವೋ ನಾನು ಮಗುವೋ
ನಾನು ಅಪ್ಪನೋ ನನಗವಳು ತಾಯಿಯೋ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು