ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 10ನೆಯ ಕಂತು
– ಸಿ.ಪಿ.ನಾಗರಾಜ.
*** ಅಬಿಮನ್ಯುವಿನ ವೀರಮರಣಕ್ಕೆ ಮೆಚ್ಚುಗೆ… ಲಕ್ಶಣ ಕುಮಾರನ ಸಾವಿಗೆ ಕಂಬನಿ ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನ ವಿಲಾಪಮ್’ ಎಂಬ ಹೆಸರಿನ 5 ನೆಯ ಅದ್ಯಾಯದ 14 ನೆಯ ಪದ್ಯದಿಂದ 19 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು.
ಅಭಿಮನ್ಯು: ಸುಬದ್ರೆ ಮತ್ತು ಅರ್‍ಜುನ ದಂಪತಿಯ ಮಗ.
ಲಕ್ಷಣ ಕುಮಾರ: ಬಾನುಮತಿ ಮತ್ತು ದುರ್‍ಯೋದನ ದಂಪತಿಯ ಮಗ
*** ಪ್ರಸಂಗ-10 : ಅಭಿಮನ್ಯುವಿನ ವೀರಮರಣಕ್ಕೆ ಮೆಚ್ಚುಗೆ… ಲಕ್ಷಣ ಕುಮಾರನ ಸಾವಿಗೆ ಕಂಬನಿ ***
ಆ ದಿಶಾ ಭಾಗದೊಳ್… ಅರೆಮುಗಿದಿರ್ದ ಕಣ್ಮಲರ್… ಅಲರ್ದ ಮೊಗಮ್… ಕಡಿವೋದ ಕಯ್ಯುಮ್… ಆಸುರತರಮಾಗೆ ಕರ್ಚಿದ ಅವುಡುಮ್ ಬೆರಸು… ಅನ್ಯಶರ ಪ್ರಹಾರ ಜರ್ಜರಿತ ಶರೀರನಾಗಿ… ನವಲೋಹಿತ ವಾರ್ಧಿಯೊಳ್ ಅಳ್ದು ಬಿಳ್ದನನ್… ಆಜಿವೀರನನ್ ಅಭಿಮನ್ಯು ಕುಮಾರನನ್ … ಕುರುಪತಿ ನೋಡಿ ಕಂಡನ್. ಅಂತು ಆತನನ್ ಅಹಿಕೇತನನ್ ನೋಡಿ…
ದುರ್ಯೋಧನ: ನರಸುತ, ಗುರು ಪಣ್ಣಿದ ಚಕ್ರವ್ಯೂಹ ರಚನೆ ಪೆರರ್ಗೆ ಪುಗಲ್ ಅರಿದು…
ಇದಮ್ ಪೊಕ್ಕು ರಣಾಜಿರದೊಳ್ ಅರಿನೃಪರನ್ ಇಕ್ಕಿದ… ನಿನ್ನೊರೆಗೆ ದೊರೆಗೆ ಗಂಡರುಮ್ ಒಳರೇ…
ಮೆಯ್ಗಲಿಗಳ್ ಪಲರ್ ಇರ್ದು ಕಾದಿದರ್… ನಿನ್ನ ಒಂದೆ ಮೆಯ್ಯೊಳಮ್ ಪಲರಮ್ ತವೆ ಕೊಂದಯ್…
ನಿನ್ನನ್ ಪೆತ್ತಳ್ ಮೊಲೆವೆತ್ತಳೆ… ವೀರಜನನಿ ಪೆಸರಮ್ ಪೆತ್ತಳ್…
ಅಸಮಬಲ ಭವತ್ ವಿಕ್ರಮಮ್ ಅಸಂಭವಮ್ ಪೆರರ್ಗೆ…
ಅಭಿಮನ್ಯು, ನಿನ್ನನ್ ಆನ್ ಇನಿತಮ್ ಪ್ರಾರ್ಥಿಸುವೆನ್…
ನಿಜಸಾಹಸೈಕದೇಶಾನುಮರಣಮ್ ಎಮಗಕ್ಕೆ ಗಡಾ…(ಎಂದು ಆತ್ಮಗತದೊಳೆ ಬಗೆದು ಅಭಿಮನ್ಯುಗೆ ಕಯ್ಗಳಮ್ ಮುಗಿದು ಬರುತ್ತುಮ್ ತನ್ನ ಮಗನಪ್ಪ ಲಕ್ಷಣ ಕುಮಾರನನ್ ನೆನೆದು ಮನ್ಯೂದ್ಗತಕಂಠನಾಗಿ ತತ್ ಆಸನ್ನಪ್ರದೇಶದೊಳ್ ಕಂಡು…
ಕೌರವ ಕುಲತಿಲಕಂಗೆ ಆ ಕುಮಾರನನ್ ಕಾಣಲೊಡಮ್ ಹಸ್ತಮ್ ಗಳಿತಶರಮಾಯ್ತು…
ಹೃದಯಮ್ ಗಳಿತ ರಣೋತ್ಸಾಹಮಾಯ್ತು… ನಯನಮ್ ಗಳಿತಾಶ್ರುವಾಯ್ತು…
ಅಂತು ಪುತ್ರಸ್ನೇಹಕಾತರ ಹೃದಯನಾಗಿ ಗಾಂಧಾರೀನಂದನನ್ ಭಾನುಮತೀನಂದನನ ವದನಾರವಿಂದಮಮ್ ನೋಡಿ… )ದುರ್ಯೋಧನ: ಜನಕಂಗೆ ತನೂಭವನ್ ಜಲಾಂಜಲಿಯಮ್ ಕುಡುವುದು ಉಚಿತಮ್ ಅದು ಕೆಟ್ಟು ಈಗಳ್ ನಿನಗೆ ಆನ್ ಕುಡುವಂತಾದುದೆ… ತನೂಜ, ನೀನ್ ಕ್ರಮ ವಿಪರ್ಯಯಮ್ ಮಾಡುವುದೇ…
(ಎಂದು ಅಲ್ಲಿ ನಿಲಲಾರದೆ ಆ ಪ್ರದೇಶದಿಮ್ ತಳರ್ದು ಬರೆವರೆ…)
ತಿರುಳು: ಅಬಿಮನ್ಯುವಿನ ವೀರಮರಣಕ್ಕೆ ಮೆಚ್ಚುಗೆ… ಲಕ್ಶಣ ಕುಮಾರನ ಸಾವಿಗೆ ಕಂಬನಿ
ಆ ದಿಶಾ ಭಾಗದೊಳ್=ಆ ದಿಕ್ಕಿನ ಎಡೆಯಲ್ಲಿ; ದ್ರೋಣರ ಹೆಣ ಬಿದ್ದಿದ್ದ ಕಡೆಯಿಂದ ದುರ್‍ಯೋದನನು ಮುಂದೆ ಹೆಜ್ಜೆಗಳನ್ನಿಡುತ್ತಿದ್ದಂತೆಯೇ, ಅದೇ ದಿಕ್ಕಿನ ಜಾಗದಲ್ಲಿ;
ಅರೆ+ಮುಗಿದು+ಇರ್ದ; ಅರೆ=ಅರ್ದ; ಕಣ್+ಮಲರ್; ಮಲರ್=ಹೂವು;
ಅರೆಮುಗಿದಿರ್ದ ಕಣ್ಮಲರ್=ಮೊಗ್ಗಿನಂತೆ ಅರೆ ಮುಚ್ಚಿದ್ದ ಕಣ್ಣುಗಳು; ಅಲರ್=ಅರಳು/ಬಿರಿ;
ಅಲರ್ದ ಮೊಗಮ್=ಅರಳಿದ ಮೊಗ. ಕಾದಾಡಿ ಸಾಯುವಾಗ ಇದ್ದ ವೀರತನದ ಉತ್ಸಾಹವನ್ನೇ ಪ್ರತಿಬಿಂಬಿಸುವಂತೆ ಇದ್ದ ಮೊಗ;
ಕಡಿವೋದ ಕಯ್ಯುಮ್=ತುಂಡಾಗಿದ್ದ ಕಯ್ಗಳು. ಏಕಾಂಗಿಯಾಗಿ ಚಕ್ರವ್ಯೂಹವನ್ನು ಬೇದಿಸಿಕೊಂಡು ಕುರುಸೇನೆಯೊಡನೆ ವೀರಾವೇಶದಿಂದ ಕಾದಾಡುತ್ತಿದ್ದ ಅಬಿಮನ್ಯುವನ್ನು ದುರ್‍ಯೋದನನ ಕಡೆಯ ಕಾದಾಳುಗಳು ಎದುರುಬದುರಾಗಿ ನಿಂತು ಹೋರಾಡಲಾಗದಿದ್ದಾಗ, ಕರ್‍ಣನು ಯುದ್ದದ ನಿಯಮವನ್ನು ಕಡೆಗಣಿಸಿ, ಅಬಿಮನ್ಯುವಿನ ರತದ ಹಿಂಬದಿಗೆ ಹೋಗಿ ಅಬಿಮನ್ಯುವಿನ ಬಿಲ್ಲನ್ನು ಕತ್ತರಿಸಿ, ಅನಂತರ ತೋಳುಗಳನ್ನು ತುಂಡರಿಸಿದ್ದನು;
ಆಸುರ+ತರಮ್+ಆಗೆ; ಆಸುರ=ಬಯಂಕರ; ತರ=ರೀತಿ/ಬಗೆ; ಅವುಡು=ದವಡೆ/ಕೆಳತುಟಿ;
ಆಸುರತರಮಾಗೆ ಕರ್ಚಿದ ಅವುಡುಮ್ ಬೆರಸು=ವೀರಾವೇಶ ಮತ್ತು ಕೋಪೋದ್ರೇಕದಿಂದ ಕಚ್ಚಿದ್ದ ಕೆಳದವಡೆಯಿಂದ ಕೂಡಿ;
ಶರ=ಬಾಣ; ಪ್ರಹಾರ=ಹೊಡೆತ/ಪೆಟ್ಟು;
ಅನ್ಯಶರ ಪ್ರಹಾರ ಜರ್ಜರಿತ ಶರೀರನಾಗಿ=ಹಗೆಗಳಾದ ದುರ್‍ಯೋದನನ ಕಡೆಯ ಕಾದಾಳುಗಳ ಬಾಣಗಳ ಪೆಟ್ಟಿನಿಂದ ಚಿದ್ರಚಿದ್ರವಾದ ಮಯ್ಯುಳ್ಳವನಾಗಿ;
ನವ=ಹೊಸತಾದ; ಲೋಹಿತ=ನೆತ್ತರು/ರಕ್ತ; ವಾರ್ಧಿ=ಕಡಲು; ಅಳ್ದು=ಮುಳುಗಿ;
ನವಲೋಹಿತ ವಾರ್ಧಿಯೊಳ್ ಅಳ್ದು ಬಿಳ್ದನನ್=ಹರಿದು ಹೆಪ್ಪುಗಟ್ಟಿದ್ದ ನೆತ್ತರಿನ ಕಡಲಿನಲ್ಲಿ ಮುಳುಗಿ ಬಿದ್ದಿರುವನನ್ನು;
ಆಜಿ=ಕಾಳೆಗ/ರಣರಂಗ;
ಆಜಿವೀರನನ್ ಅಭಿಮನ್ಯು ಕುಮಾರನನ್=ರಣರಂಗದ ಕಡುಗಲಿಯಾದ ಅಬಿಮನ್ಯು ಕುಮಾರನನ್ನು;
ಕುರುಪತಿ ನೋಡಿ ಕಂಡನ್=ಕುರುಪತಿಯು ನೋಡಿದನು;
ಅಂತು=ಆ ರೀತಿ/ಬಗೆ; ಅಹಿ=ಹಾವು; ಕೇತನ=ಬಾವುಟ; ಅಹಿಕೇತನ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗುಳ್ಳವನು/ ದುರ್‍ಯೋದನ;
ಅಂತು ಆತನನ್ ಅಹಿಕೇತನನ್ ನೋಡಿ=ಆ ರೀತಿ ವೀರಮರಣವನ್ನು ಹೊಂದಿ ರಣರಂಗದಲ್ಲಿ ಬಿದ್ದಿದ್ದ ಅಬಿಮನ್ಯುವನ್ನು ದುರ್‍ಯೋದನನು ನೋಡಿ;
ನರ=ಅರ್‍ಜುನ;ನರಸುತ=ಅರ್‍ಜುನ ಮತ್ತು ಸುಬದ್ರೆಯ ಮಗನಾದ ಅಬಿಮನ್ಯು; ಪಣ್=ರಚಿಸಿದ/ಒಡ್ಡಿದ; ಚಕ್ರವ್ಯೂಹ=ಕಾಳೆಗದ ಕಣದಲ್ಲಿ ಹಗೆಯನ್ನು ಸುತ್ತುವರಿದು ಕೊಲ್ಲಲು ಅನುವಾಗುವಂತೆ ಸೇನೆಯನ್ನು ನಿಲ್ಲಿಸುವುದು;
ನರಸುತ, ಗುರು ಪಣ್ಣಿದ ಚಕ್ರವ್ಯೂಹ ರಚನೆ ಪೆರರ್ಗೆ ಪುಗಲ್ ಅರಿದು=ಅಬಿಮನ್ಯುವೇ… ದ್ರೋಣರು ಒಡ್ಡಿದ ಚಕ್ರವ್ಯೂಹವನ್ನು ಬೇದಿಸಿಕೊಂಡು ಒಳನುಗ್ಗಲು ಬೇರೆಯವರಿಗೆ ಆಗದು;
ಪೊಕ್ಕು=ಹೊಕ್ಕು/ಪ್ರವೇಶಿಸಿ; ರಣಾಜಿರದ+ಒಳ್; ರಣಾಜಿರ=ಕಾಳೆಗದ ಕಣ/ಯುದ್ದರಂಗ; ಅರಿ=ಶತ್ರು; ನಿನ್ನ+ಒರೆಗೆ; ಒರೆ=ಸಮಾನ/ಸಾಟಿ; ದೊರೆ=ಹಿರಿಮೆ/ಯೋಗ್ಯತೆ;
ಇದಮ್ ಪೊಕ್ಕು ರಣಾಜಿರದೊಳ್ ಅರಿನೃಪರನ್ ಇಕ್ಕಿದ… ನಿನ್ನೊರೆಗೆ ದೊರೆಗೆ ಗಂಡರುಮ್ ಒಳರೇ=ಚಕ್ರವ್ಯೂಹದ ಒಳಹೊಕ್ಕು, ರಣರಂಗದಲ್ಲಿ ಶತ್ರುರಾಜರನ್ನು ಸದೆಬಡಿದು ಕೊಂದ ನಿನ್ನ ಸಾಹಸ ಮತ್ತು ಪರಾಕ್ರಮಕ್ಕೆ ಸರಿಸಮಾನವಾದ ಹಿರಿಮೆಯುಳ್ಳ ಶೂರರು ಇದ್ದಾರೆಯೇ; ಜಗತ್ತಿನಲ್ಲಿ ನಿನ್ನಂತಹ ಶೂರ ಮತ್ತೊಬ್ಬನಿಲ್ಲ;
ಮೆಯ್ಗಲಿಗಳ್ ಪಲರ್ ಇರ್ದು ಕಾದಿದರ್=ಶೂರರಾದ ಅನೇಕ ಮಂದಿ ಜತೆಗೂಡಿ ನಿನ್ನೊಡನೆ ಯುದ್ದ ಮಾಡಿದರು;
ತವೆ=ಅತಿಶಯವಾಗಿ/ಹೆಚ್ಚಾಗಿ;
ನಿನ್ನ ಒಂದೆ ಮೆಯ್ಯೊಳಮ್ ಪಲರಮ್ ತವೆ ಕೊಂದಯ್=ಆದರೆ ನೀನಾದರೋ ಒಬ್ಬಂಟಿಯಾಗಿಯೇ ಹೋರಾಡಿ ಹಲವರನ್ನು ಸದೆಬಡಿದು ಅತಿಶಯವಾಗಿ ಕೊಂದೆ;
ಮೊಲೆ+ಪೆತ್ತಳೆ; ಪೆತ್ತ=ಹೊಂದು; ಮೊಲೆವೆತ್ತಳ್=ಹೆಂಗಸು;
ನಿನ್ನನ್ ಪೆತ್ತಳ್ ಮೊಲೆವೆತ್ತಳೆ=ನಿನ್ನನ್ನು ಹಡೆದವಳು ಸಾಮಾನ್ಯಳಾದ ಹೆಂಗಸಲ್ಲ;
ವೀರಜನನಿ ಪೆಸರಮ್ ಪೆತ್ತಳ್=“ವೀರನನ್ನು ಹೆತ್ತವಳು” ಎಂಬ ಹೆಸರನ್ನು ಪಡೆದಳು;
ಅಸಮಬಲ=ಮಹಾ ಬಲವುಳ್ಳವನು; ಭವತ್=ನಿನ್ನ; ವಿಕ್ರಮ=ಶೂರತನ/ಪರಾಕ್ರಮ;
ಅಸಮಬಲ ಭವತ್ ವಿಕ್ರಮಮ್ ಪೆರರ್ಗೆ ಅಸಂಭವಮ್=ಮಹಾಶೂರನಾದ ಅಬಿಮನ್ಯು… ನಿನ್ನ ಸಾಹಸ… ನಿನ್ನ ಕೆಚ್ಚು… ನಿನ್ನ ಕಸುವು ಬೇರೆಯವರಲ್ಲಿ ಇರಲು ಸಾದ್ಯವೇ ಇಲ್ಲ;
ಅಭಿಮನ್ಯು, ನಿನ್ನನ್ ಆನ್ ಇನಿತಮ್ ಪ್ರಾರ್ಥಿಸುವೆನ್=ಅಬಿಮನ್ಯು… ನಿನ್ನಲ್ಲಿ ನಾನು ಇಶ್ಟು ಮಾತ್ರ ಕೇಳಿಕೊಳ್ಳುತ್ತೇನೆ;
ನಿಜ+ಸಾಹಸ+ಏಕದೇಶ+ಅನುಮರಣಮ್; ನಿಜ=ನಿನ್ನ; ಏಕದೇಶ=ಒಂದು ಬಾಗ; ಅನುಮರಣ=ಸಹಗಮನ/ಜತೆಯಲ್ಲಿಯೇ ಸಾಯುವುದು; ಎಮಗೆ+ಅಕ್ಕೆ; ಎಮಗಕ್ಕೆ=ನನಗೆ ದೊರೆಯಲಿ; ಗಡಾ=ಕಂಡೆಯಾ; ಆತ್ಮಗತ=ಮನಸ್ಸಿನಲ್ಲಿ; ಬಗೆ=ಆಲೋಚಿಸು/ಬಾವಿಸು;
ನಿಜಸಾಹಸೈಕದೇಶಾನುಮರಣಮ್ ಎಮಗಕ್ಕೆ ಗಡಾ… ಎಂದು ಆತ್ಮಗತದೊಳೆ ಬಗೆದು=ನಿನ್ನ ಸಾಹಸ ಮತ್ತು ಕೆಚ್ಚಿನ ವೀರಮರಣದಲ್ಲಿ ಒಂದು ಅಂಶದಶ್ಟಾದರೂ ನನಗೂ ದೊರೆಯುವಂತಾಗಲಿ ಕಂಡೆಯಾ ಎಂದು ದುರ್‍ಯೋದನನು ತನ್ನ ಮನದಲ್ಲಿಯೇ ಚಿಂತಿಸುತ್ತ;
ಅಭಿಮನ್ಯುಗೆ ಕಯ್ಗಳಮ್ ಮುಗಿದು ಬರುತ್ತುಮ್=ಅಬಿಮನ್ಯುವಿಗೆ ಕಯ್ಗಳನ್ನು ಮುಗಿಯುತ್ತ ರಣರಂಗದಲ್ಲಿ ಮುಂದೆ ಮುಂದೆ ಬರುತ್ತಿರಲು;
ಮನ್ಯು+ಉದ್ಗತ+ಕಂಠನ್+ಆಗಿ; ಮನ್ಯು=ಸಂಕಟ/ಅಳಲು; ಉದ್ಗತ=ಹೊರಹೊಮ್ಮಿದ;
ತನ್ನ ಮಗನಪ್ಪ ಲಕ್ಷಣ ಕುಮಾರನನ್ ನೆನೆದು ಮನ್ಯೂದ್ಗತಕಂಠನಾಗಿ=ಕದನದಲ್ಲಿ ಸಾವನ್ನಪ್ಪಿರುವ ತನ್ನ ಮಗನಾದ ಲಕ್ಶಣಕುಮಾರನನ್ನು ನೆನೆದು ತೀವ್ರವಾದ ಸಂಕಟ ಒತ್ತರಿಸಿಕೊಂಡು ಬಂದು ಕೊರಳು ಕಟ್ಟಿದಂತಾಗಿ;
ಆಸನ್ನ=ಹತ್ತಿರ/ಸಮೀಪ;
ತತ್ ಆಸನ್ನಪ್ರದೇಶದೊಳ್ ಕಂಡು=ಅಲ್ಲಿಯೇ ಹತ್ತಿರದ ಎಡೆಯಲ್ಲಿ ತನ್ನ ಮಗನ ಹೆಣವನ್ನು ಕಂಡನು;
ಕೌರವ ಕುಲತಿಲಕಂಗೆ ಆ ಕುಮಾರನನ್ ಕಾಣಲೊಡಮ್=ದುರ್‍ಯೋದನನಿಗೆ ತನ್ನ ಮಗನ ಹೆಣವನ್ನು ನೋಡುತ್ತಿದ್ದಂತೆಯೆ;
ಗಳಿತ+ಶರಮ್+ಆಯ್ತು; ಗಳಿತ=ಜಾರಿದ/ಬಿದ್ದುಹೋದ; ಶರ=ಬಾಣ/ಆಯುದ;
ಹಸ್ತಮ್ ಗಳಿತಶರಮಾಯ್ತು=ಕಯ್ಯಲ್ಲಿದ್ದ ಆಯುದ ಕಳಚಿ ಬಿದ್ದಿತು; ರಣ+ಉತ್ಸಾಹಮ್+ಆಯ್ತು;
ಹೃದಯಮ್ ಗಳಿತ ರಣೋತ್ಸಾಹಮಾಯ್ತು=ಪಾಂಡವರೊಡನೆ ಹೋರಾಡಬೇಕೆಂಬ ಚಲದಿಂದ ಕೂಡಿದ್ದ ಮನದಲ್ಲಿ ಈಗ ಕಾದಾಡುವ ಉತ್ಸಾಹವೇ ಅಳಿದುಹೋಯಿತು;
ನಯನ=ಕಣ್ಣು; ಗಳಿತ+ಅಶ್ರು+ಆಯ್ತು; ಅಶ್ರು=ಕಣ್ಣೀರು;
ನಯನಮ್ ಗಳಿತಾಶ್ರುವಾಯ್ತು=ಕಣ್ಣುಗಳಲ್ಲಿ ಒಂದೇ ಸಮನೆ ಕಂಬನಿಯು ಹರಿಯತೊಡಗಿತು; ಗಾಂಧಾರೀನಂದನ=ಗಾಂದಾರಿಯ ಮಗನಾದ ದುರ್ಯೋದನ;
ಭಾನುಮತೀ=ದುರ್‍ಯೋದನನ ಹೆಂಡತಿ; ಭಾನುಮತೀನಂದನ=ಲಕ್ಶಣ ಕುಮಾರ; ವದನ+ಅರವಿಂದಮ್+ಅಮ್; ವದನ=ಮೊಗ; ಅರವಿಂದ=ಕಮಲ;
ಅಂತು ಪುತ್ರಸ್ನೇಹಕಾತರ ಹೃದಯನಾಗಿ ಗಾಂಧಾರೀನಂದನನ್ ಭಾನುಮತೀನಂದನನ ವದನಾರವಿಂದಮಮ್ ನೋಡಿ=ಆ ರೀತಿ ಮಗನ ಬಗ್ಗೆ ಪ್ರೀತಿ ಕರುಣೆಯ ಮನದಿಂದ ಕೂಡಿದ ದುರ್‍ಯೋದನನು ಲಕ್ಶಣಕುಮಾರನ ಕಮಲದಂತಹ ಮೊಗವನ್ನು ನೋಡಿ;
ತನೂಭವ=ಮಗ; ಜನಕ=ತಂದೆ; ಜಲಾಂಜಲಿ=ವ್ಯಕ್ತಿಯು ಸತ್ತಾಗ ದೇಹದ ಮೇಲೆ ಹಸ್ತದಿಂದ ನೀರನ್ನು ಎರೆಯುವ ಆಚರಣೆ;
ಜನಕಂಗೆ ತನೂಭವನ್ ಜಲಾಂಜಲಿಯಮ್ ಕುಡುವುದು ಉಚಿತಮ್=ಸತ್ತ ಅಪ್ಪನಿಗೆ ಮೋಕ್ಶ ಸಿಗಲೆಂದು ಮಗನು ನೀರಿನ ತರ್‍ಪಣವನ್ನು ನೀಡುವುದು ನಡೆದು ಬಂದ ಆಚರಣೆ;
ಅದು ಕೆಟ್ಟು ಈಗಳ್ ನಿನಗೆ ಆನ್ ಕುಡುವಂತಾದುದೆ=ಅದು ತಪ್ಪಿಹೋಗಿ, ಮಗನಾದ ನಿನಗೆ ತಂದೆಯಾದ ನಾನು ತರ್‍ಪಣವನ್ನು ಕೊಡುವಂತಾಯಿತಲ್ಲವೇ;
ಕ್ರಮ+ವಿಪರ್ಯಯ+ಅಮ್; ಕ್ರಮ=ಸರದಿ/ಪಾಳಿ/ನಿಯಮ; ವಿಪರ್ಯಯ=ಬದಲಾವಣೆ/ವ್ಯತ್ಯಾಸ; ತಳರ್=ಹೊರಡು;
ತನೂಜ, ನೀನ್ ಕ್ರಮ ವಿಪರ್ಯಯಮ್ ಮಾಡುವುದೇ… ಎಂದು ಅಲ್ಲಿ ನಿಲಲಾರದೆ ಆ ಪ್ರದೇಶದಿಮ್ ತಳರ್ದು ಬರೆವರೆ=ಮಗನೇ, ಕ್ರಮ ತಪ್ಪಿ ಅಂದರೆ ನನಗೆ ನೀನು ತರ್‍ಪಣವನ್ನು ನೀಡುವ ಬದಲು, ನಿನಗೆ ನಾನು ತರ್ಪಣವನ್ನು ಕೊಡುವಂತೆ ಮಾಡಿದೆಯಲ್ಲ ಎಂದು ದುರ್‍ಯೋದನನು ತೀವ್ರವಾದ ಸಂಕಟದಿಂದ ಬೇಯುತ್ತ, ಅಲ್ಲಿ ನಿಲ್ಲಲಾರದೆ ಆ ಎಡೆಯಿಂದ ಹೊರಟು ಬರುತ್ತಿರಲು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು