ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 16ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 16: ಅಣ್ಣ ಧರ್ಮರಾಯನಿಗೆ ಭೀಮಸೇನನ ಸವಾಲು ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ ( ಕಾವ್ಯ ಭಾಗ ಮತ್ತು ಟಿಪ್ಪಣಿಗಳು ) ಈ ಹೊತ್ತಗೆಯ ‘ಭೀಮಸೇನಾಡಂಬರಮ್ ’ ಎಂಬ ಹೆಸರಿನ 7ನೆಯ ಅಧ್ಯಾಯದ 8ನೆಯ ಪದ್ಯದಿಂದ 11ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ಧರ್ಮರಾಯ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.

*** ಅಣ್ಣ ಧರ್ಮರಾಯನಿಗೆ ಭೀಮಸೇನನ ಸವಾಲು ***

ಅಂತು ಪಂಚಭೂತ ಸಾಕ್ಷಿಯೊಳೆ ಪೂಣ್ದು ನುಡಿದು, ಕುರುಕುಲಪ್ರಧಾನ ಶತ್ರುವೆನಿಸಿದ ಸಾಹಸಭೀಮನ್ ಅಜಾತಶತ್ರುಗೆ ಸಾಷ್ಟಾಂಗ ನಮಸ್ಕಾರಮ್ ಗೆಯ್ದು, ಇಂತೆಂದನ್.

ಭೀಮ: ಮುಕ್ತಕೇಶಿ ದ್ರೌಪದಿ ಎನಿತುಮ್ ನಮೆವಳ್… ತತ್ ದುಃಖಮಮ್ ಕಂಡು ಕಂಡು ಆನುಮ್ ಎನ್ನ ಅನುಜರುಮ್ ಎನಿತುಮ್ ಸೈರಿಪೆವು… ಪಾಂಚಾಳಿಯನ್ ನೋಡಿ ನೀನ್ ಮನದೊಳ್ ನೋವುದುಮಿಲ್ಲ…ನಿಷ್ಕರುಣಿಯಯ್… ನರೇಂದ್ರ, ನೀನ್ ಇಂತಿರು… ಅನ್ನೆಗಮ್ ಆನ್ ಮುನಿಸಮ್ ತೀರ್ಚೆ, ವೈರಿ ತರುವಮ್ ನಿರ್ಮೂಲನಮ್ ಮಾಡುವೆನ್….ಧಾತ್ರೀನಾಥ, ಇಂದಿನ ಒಂದೆವಸಮ್ ಆನುಮ್ ವಿಧೇಯನಲ್ಲನ್… ನೀನುಮ್ ಗುರುವಲ್ಲಮ್… ಪರಿಯ ಬಿಡ… ಕುರುಸೂನುವನ್ ಇಕ್ಕಿ ಮೆಟ್ಟಿ ಡೊಕ್ಕರಿಸಿದಪೆನ್…. ಅಂದು ಅನಲಜೆಯನ್ ಎನ್ನಯ ಮುಂದೆ ಮುಂದಲೆಯಮ್ ಪಿಡಿದು ಎಳೆದು ಪರಿಭವಿಸಿಯೆ ಸೊರ್ಕಿದವನನ್… ದಳ್ಳ್ ಎಂದು ಉರಿದು ಕೊಂದೆನ್…ಇನ್ ಕುರುಪತಿಯನ್ ಕೊಲಲ್ ತಡೆದಪೆನೇ.

(ಎಂದು ಕುರುಕುಲಾಂತಕನ್ ಮಾಮಸಕಮ್ ಮಸಗಿ ಕುರುಕುಲಪ್ರಳಯ ಕಾಲದಂಡಮ್
ಎನಿಪ ನಿಜ ವಿಜಯ ಗದಾದಂಡಮನ್ ಎತ್ತಿಕೊಂಡು…. ಕುರುಕುಲ ಕದಳೀ ಕಾನನ
ಕರಿಕಳಭನ್… ಶತ್ರುಶಲಭಸಂಪಾತನ ವಿಸ್ಫುರಿತ ಪ್ರದೀಪನ್… ಪವನಸುತನ್ ಆ
ಕುರುಧರೆಯೊಳ್ ಕುರುಪತಿಯನ್ ಅರಸಿದನ್…)

ಪದ ವಿಂಗಡಣೆ ಮತ್ತು ತಿರುಳು: ಅಣ್ಣ ದರ‍್ಮರಾಯನಿಗೆ ಬೀಮಸೇನನ ಸವಾಲು

ಪಂಚಭೂತ=ಬೂಮಿ-ಆಕಾಶ-ಬೆಂಕಿ-ನೀರು-ಗಾಳಿ ಎಂಬ ಅಯ್ದು ಬಗೆಯ ಮೂಲವಸ್ತುಗಳು;

ಅಂತು ಪಂಚಭೂತ ಸಾಕ್ಷಿಯೊಳೆ ಪೂಣ್ದು ನುಡಿದು= ಆ ರೀತಿ ಬೀಮಸೇನನು ಪಂಚಬೂತಗಳನ್ನೇ ಸಾಕ್ಶಿಯಾಗಿಟ್ಟುಕೊಂಡು ದುರ‍್ಯೋದನನ ಕುರುವಂಶವನ್ನೇ ಬುಡಸಮೇತ ನಾಶಮಾಡುವ ಪ್ರತಿಜ್ನೆಯ ನುಡಿಗಳನ್ನಾಡಿ;

ಅಜಾತಶತ್ರು= ಶತ್ರುಗಳೇ ಇಲ್ಲದವನು/ದರ‍್ಮರಾಯ; ಕುರುಕುಲಪ್ರಧಾನ ಶತ್ರು+ಎನಿಸಿದ;

ಕುರುಕುಲಪ್ರಧಾನ ಶತ್ರು= ಕುರುಕುಲಕ್ಕೆ ಮುಕ್ಯನಾದ ಶತ್ರು/ಬೀಮ; ಕುರುಕುಲಪ್ರದಾನ ಶತ್ರುವೆನಿಸಿದ ಸಾಹಸಬೀಮನ್ ಅಜಾತಶತ್ರುಗೆ ಸಾಶ್ಟಾಂಗ ನಮಸ್ಕಾರಮ್ ಗೆಯ್ದು, ಇಂತೆಂದನ್=ಬೀಮಸೇನನು ದರ‍್ಮರಾಯನಿಗೆ ಅಡ್ಡಬಿದ್ದು ನಮಸ್ಕರಿಸಿ ಈ ರೀತಿ ಹೇಳಿದನು;

ಮುಕ್ತ=ಬಿಚ್ಚಿದ; ಕೇಶ=ತಲೆಗೂದಲು;

ಮುಕ್ತಕೇಶಿ ದ್ರೌಪದಿ=ಬಿಚ್ಚಿದ ಮುಡಿಯ ದ್ರೌಪದಿ; ಹದಿಮೂರು ವರುಶಗಳ ಹಿಂದೆ ದ್ರುತರಾಶ್ಟ್ರನ ರಾಜಸಬೆಯಲ್ಲಿ ದರ‍್ಮರಾಯನು ದುರ‍್ಯೋದನನ ಸಂಗಡ ಆಡಿದ ಪಗಡೆಯಾಟದ ಜೂಜಿನಲ್ಲಿ ರಾಜ್ಯ ಸಂಪತ್ತನ್ನು ಕಳೆದುಕೊಂಡ ನಂತರ, ತನ್ನನ್ನು ಒಳಗೊಂಡಂತೆ ನಾಲ್ಕು ಮಂದಿ ತಮ್ಮಂದಿರನ್ನು ಮತ್ತು ದ್ರೌಪದಿಯನ್ನು ಪಣವಾಗಿ ಒಡ್ಡಿ ಸೋತಿದ್ದನು. ಆಗ ದುರ‍್ಯೋದನನ ಆಣತಿಯಂತೆ ದುಶ್ಶಾಸನನು ರಾಜಸಬೆಗೆ ರಾಣಿವಾಸದಲ್ಲಿದ್ದ ದ್ರೌಪದಿಯ ಮುಡಿಯನ್ನು ಹಿಡಿದು ಎಳೆತಂದು, ಸೀರೆಯನ್ನು ಸುಲಿದು ಅಪಮಾನ ಮಾಡಿದ್ದನು. ಆಗ ದ್ರೌಪದಿಯು ತುಂಬಿದ ಸಬೆಯಲ್ಲಿ “ ನನ್ನ ಮುಡಿಯನ್ನೆಳೆದು ಅಪಮಾನಗೊಳಿಸಿರುವ ದುಶ್ಶಾಸನನ ಕರುಳನ್ನು ಬಗೆದು ಹೊರಚೆಲ್ಲಿದ ನೆತ್ತರಿನಿಂದ ಬಿಚ್ಚಿಹೋಗಿರುವ ಈ ಮುಡಿಯನ್ನು ಮತ್ತೆ ಕಟ್ಟುತ್ತೇನೆ. ಅಲ್ಲಿಯ ತನಕ ಬಿಚ್ಚಿದ ಮುಡಿಯಲ್ಲಿಯೇ ಇರುತ್ತೇನೆ ” ಎಂದು ಪಣತೊಡುತ್ತಾಳೆ;

ಎನಿತುಮ್=ಎಶ್ಟೊಂದು/ಬಹಳವಾಗಿ; ನಮೆ=ನರಳು/ದುಕ್ಕಿಸು/ಸೊರಗು;

ಮುಕ್ತಕೇಶಿ ದ್ರೌಪದಿ ಎನಿತುಮ್ ನಮೆವಳ್= ಬಿಚ್ಚಿದ ಮುಡಿಯುಳ್ಳ ದ್ರೌಪದಿಯು ಎಶ್ಟೊಂದು ಬಗೆಗಳಲ್ಲಿ ಕೊರಗುತ್ತಿದ್ದಾಳೆ; ರಾಜಸಬೆಯಲ್ಲಿ ದುರುಳರಾದ ದುರ‍್ಯೋದನ ಮತ್ತು ದುಶ್ಶಾಸನನಿಂದ ಮೊದಲು ಅಪಮಾನಕ್ಕೆ ಗುರಿಯಾದಳು. ವನವಾಸದಲ್ಲಿದ್ದಾಗ ದುರ‍್ಯೋದನನ ತಂಗಿ ದುಶ್ಶಲೆಯ ಗಂಡನಾದ ಜಯದ್ರತನಿಂದ ಅಪಹರಣಕ್ಕೊಳಗಾಗಿ ನೋವನ್ನುಂಡಳು. ವಿರಾಟನಗರದಲ್ಲಿ ಅಜ್ನಾತವಾಸದಲ್ಲಿದ್ದಾಗ ಕಾಮಿಯಾದ ಕೀಚಕನ ಹಲ್ಲೆಗೆ ಗುರಿಯಾಗಿ ನರಳಿದಳು;

ಆನುಮ್=ನಾನು; ಅನುಜ=ತಮ್ಮ;

ತತ್ ದುಃಖಮಮ್ ಕಂಡು… ಕಂಡು… ಆನುಮ್ ಎನ್ನ ಅನುಜರುಮ್ ಎನಿತುಮ್ ಸೈರಿಪೆವು= ದ್ರೌಪದಿಯು ಪಡುತ್ತಿರುವ ಈ ಗೋಳನ್ನು ನೋಡಿ…ನೋಡಿ… ದ್ರೌಪದಿಗೆ ಆಗಿರುವ ಅಪಮಾನಕ್ಕೆ ಕಾರಣರಾದವರನ್ನು ಸದೆಬಡಿದು ಕೊಲ್ಲದೆ, ನಾನು ಮತ್ತು ನನ್ನ ತಮ್ಮಂದಿರು ಇನ್ನೆಶ್ಟು ಕಾಲ ಸಹಿಸಿಕೊಂಡು ಸುಮ್ಮನಿರಬೇಕು;

ಪಾಂಚಾಳಿ+ಅನ್; ಪಾಂಚಾಳಿ=ಪಾಂಚಾಳ ದೇಶದ ರಾಜನಾದ ದ್ರುಪದನ ಮಗಳು ದ್ರೌಪದಿ;

ಪಾಂಚಾಳಿಯನ್ ನೋಡಿ ನೀನ್ ಮನದೊಳ್ ನೋವುದುಮಿಲ್ಲ… ನಿಷ್ಕರುಣಿಯಯ್= ಅಪಾರವಾದ ಅಪಮಾನ ಮತ್ತು ಸಂಕಟದಿಂದ ನರಳುತ್ತಿರುವ ಪಾಂಚಾಲಿಯನ್ನು ನೋಡುತ್ತಿದ್ದರೂ ನೀನು ಮನದಲ್ಲಿ ತುಸುವಾದರೂ ಅವಳ ಸ್ತಿತಿಯ ಬಗ್ಗೆ ಸಂಕಟಪಡುವುದಿಲ್ಲ… ಹೆಣ್ಣಿನ ಮಯ್ ಮನದ ನೋವನ್ನು ತಿಳಿಯಲಾರದ… ಕರುಣೆಯಿಲ್ಲದ ಕಲ್ಲುಮನದವನು;

ನರೇಂದ್ರ=ರಾಜ/ದರ‍್ಮರಾಯ;

ನರೇಂದ್ರ, ನೀನ್ ಇಂತಿರು= ದರ‍್ಮರಾಯನೇ, ನೀನು ನಿನ್ನ ಪಾಡಿಗೆ ಇದೇ ರೀತಿ ದ್ರೌಪದಿಯ ಬಗ್ಗೆ ಯಾವುದೇ ಕಳವಳ ಇಲ್ಲವೇ ಆತಂಕವಿಲ್ಲದೇ ತೆಪ್ಪಗೆ ಇರು;

ಅನ್ನೆಗಮ್= ಅಶ್ಟರಲ್ಲಿ/ಆ ಸಮಯದಲ್ಲಿ; ಮುನಿಸು=ಸೇಡು/ಹಗೆತನ;

ಅನ್ನೆಗಮ್  ಆನ್  ಮುನಿಸಮ್  ತೀರ್ಚೆ=ಅಶ್ಟರಲ್ಲಿ ನಾನು ಸೇಡನ್ನು ತೀರಿಸಲೆಂದು;

ತರು+ಅಮ್; ತರು=ಮರ;

ವೈರಿ ತರುವಮ್ ನಿರ್ಮೂಲನಮ್ ಮಾಡುವೆನ್= ಹಗೆಯ ವಂಶದ ಮರವನ್ನು ಬುಡಸಮೇತ ಕಿತ್ತು ಬಿಸುಡುವೆನು;

ಧಾತ್ರೀ=ಬೂಮಿ; ಧಾತ್ರೀನಾಥ=ರಾಜ; ವಿಧೇಯ= ಇತರರ ಆಣತಿಯಂತೆ ನಡೆದುಕೊಳ್ಳುವವನು; ಗುರು=ಹಿರಿಯ/ಪೂಜ್ಯ;

ಧಾತ್ರೀನಾಥ, ಇಂದಿನ ಒಂದೆವಸಮ್ ಆನುಮ್ ವಿಧೇಯನಲ್ಲನ್… ನೀನುಮ್ ಗುರುವಲ್ಲಮ್= ರಾಜನೇ, ಇಂದಿನ ಒಂದು ದಿನ ನಾನು ಅಣ್ಣನಾದ ನಿನ್ನ ಆಣತಿಯಂತೆ ತಲೆಬಾಗಿ ನಡೆಯುವುದಿಲ್ಲ… ಅಂತೆಯೇ ಈ ಒಂದು ದಿನ ನೀನು ನನಗೆ ಆಣತಿಯನ್ನು ಮಾಡುವ ಹಿರಿಯಣ್ಣನೂ ಅಲ್ಲ. ನಾನು ವಿನಯದಿಂದ ನಡೆದುಕೊಳ್ಳುವ ತಮ್ಮನೂ ಅಲ್ಲ;

ಪರಿಯ ಬಿಡ= ನನ್ನ ಇಚ್ಚೆಗೆ ತಕ್ಕಂತೆ ನಡೆಯಲು ನನ್ನನ್ನು ಬಿಟ್ಟುಬಿಡು. ನಿನ್ನ ಯಾವುದೇ ಮಾತುಗಳಿಂದ ನನ್ನನ್ನು ಕಟ್ಟಿಹಾಕಬೇಡ;

ಸೂನು=ಮಗ; ಕುರುಸೂನು=ಕುರುಕುಲದ ಮಗ/ದುರ್ಯೋದನ; ಇಕ್ಕು=ಬಡಿ/ಕೊಲ್ಲು ; ಮೆಟ್ಟು=ಕಾಲಿನಿಂದ ತುಳಿ/ಪಾದದಿಂದ ಒದೆ; ಡೊಕ್ಕರಿಸು=ಗುದ್ದು/ಹೊಡೆ/ಹಿಸುಕು/ಉಸಿರನ್ನು ನಿಲ್ಲಿಸು;

ಕುರುಸೂನುವನ್ ಇಕ್ಕಿ ಮೆಟ್ಟಿ ಡೊಕ್ಕರಿಸಿದಪೆನ್= ದುರ‍್ಯೋದನನನ್ನು ಬಡಿದು, ಕಾಲಿನಿಂದ ತುಳಿದು, ಗುದ್ದಿ ಗುದ್ದಿ ಜೀವಹಿಂಡುತ್ತೇನೆ;

ಅನಲಜೆ= ಅಗ್ನಿಪುತ್ರಿಯಾದ ದ್ರೌಪದಿ;

ಪಾಂಚಾಲ ದೇಶದ ರಾಜನಾದ ದ್ರುಪದನು ಯಾಗವನ್ನು ಮಾಡಿ “ ತನಗೆ ಅಪಮಾನ ಮಾಡಿದ್ದ ದ್ರೋಣನನ್ನು ಕೊಲ್ಲುವ ಒಬ್ಬ ಮಗನನ್ನು ಮತ್ತು ತನ್ನನ್ನು ಸೋಲಿಸಿ ಸೆರೆಹಿಡಿದು ಗುರು ಕಾಣಿಕೆಯಾಗಿ ದ್ರೋಣರಿಗೆ ಒಪ್ಪಿಸಿದ್ದ ಪರಾಕ್ರಮಿಯಾದ ಅರ‍್ಜುನನನ್ನು ಅಳಿಯನನ್ನಾಗಿ ಪಡೆಯುವುದಕ್ಕಾಗಿ ಒಬ್ಬ ಮಗಳನ್ನು ಕರುಣಿಸು ” ಎಂದು ದೇವತೆಗಳನ್ನು ಕೋರಿಕೊಂಡಾಗ, ಯಾಗಕುಂಡದ ಬೆಂಕಿಯಿಂದ ಈ ಇಬ್ಬರು ಮಕ್ಕಳು ಮೂಡಿಬಂದಿದ್ದರು. ಆದ್ದರಿಂದಲೇ ದ್ರೌಪದಿಗೆ ಅಗ್ನಿಪುತ್ರಿ ಎಂಬ ಹೆಸರು ಬಂದಿದೆ. ಪ್ರಾಚೀನ ಪುರಾಣಗಳಲ್ಲಿ ಮತ್ತು ಮಹಾಕಾವ್ಯಗಳಲ್ಲಿ ಇಂತಹ ರೂಪಕಗಳ ಮೂಲಕ ಕೆಲವು ವ್ಯಕ್ತಿಗಳ ಹುಟ್ಟಿನ ಹಿನ್ನೆಲೆಯನ್ನು ನಿರೂಪಿಸಲಾಗಿದೆ;

ಪರಿಭವಿಸು=ಅತಿಕ್ರಮಿಸು/ಮೀರು; ಸೊರ್ಕು=ಸೊಕ್ಕು/ಗರ್ವ; ಉರಿ=ಬೆಂಕಿಯ ನಾಲಗೆ/ಕೆರಳು;

ಅಂದು ಅನಲಜೆಯನ್ ಎನ್ನಯ ಮುಂದೆ ಮುಂದಲೆಯಮ್ ಪಿಡಿದು ಎಳೆದು ಪರಿಭವಿಸಿಯೆ ಸೊರ್ಕಿದವನನ್… ದಳ್ಳ್ ಎಂದು ಉರಿದು ಕೊಂದೆನ್= ಅಂದು ದ್ರೌಪದಿಯನ್ನು ನನ್ನ ಮುಂದೆಯೇ ರಾಜಸಬೆಗೆ ಮುಂದಲೆಯನ್ನು ಹಿಡಿದು ಎಳೆತಂದು ಅಪಮಾನಪಡಿಸಿ ಸೊಕ್ಕಿನಿಂದ ಮೆರೆದಿದ್ದ ದುರ‍್ಯೋದನನ ತಮ್ಮನಾದ ದುಶ್ಶಾಸನನನ್ನು ‘ದಳ್ಳ್’ ಎಂದು ಉರಿದೆದ್ದ ಕೋಪಜ್ವಾಲೆಯಿಂದ ಕೊಂದೆನು;

ಕುರುಪತಿ=ದುರ್ಯೋದನ; ಕುರುಕುಲ+ಅಂತಕನ್; ಅಂತಕ=ಯಮ; ಕುರುಕುಲಾಂತಕ=ಬೀಮ; ಮಾಮಸಕ=ಮಹಾ+ಮಸಕ; ಮಸಕ=ಅಬ್ಬರ; ಮಸಗು= ಹೊರಹೊಮ್ಮು/ ಕೆರಳು;

ಇನ್ ಕುರುಪತಿಯನ್ ಕೊಲಲ್ ತಡೆದಪೆನೇ ಎಂದು ಕುರುಕುಲಾಂತಕನ್ ಮಾಮಸಕಮ್ ಮಸಗಿ= ಇನ್ನು ಕುರುಕುಲದ ಒಡೆಯನಾದ ದುರ‍್ಯೋದನನನ್ನು ಕೊಲ್ಲುವುದಕ್ಕೆ ತಡಮಾಡುತ್ತೇನೆಯೇ ಎಂದು ಕುರುಕುಲಕ್ಕೆ ಯಮನಾಗಿರುವ ಬೀಮನು ಅಬ್ಬರದಿಂದ ಕೆರಳಿದವನಾಗಿ;

ಕಾಲದಂಡ=ಯಮನ ಬಳಿಯಿರುವ ಆಯುದ/ಜೀವಿಗಳ ಪ್ರಾಣವನ್ನು ಸೆಳೆದೊಯ್ಯುವ ಆಯುದ; ಕುರುಕುಲಪ್ರಳಯ ಕಾಲದಂಡಮ್ ಎನಿಪ=ಕುರುಕುಲವನ್ನು ನಾಶಮಾಡುವ ಯಮದಂಡ ಎನಿಸುವ; ನಿಜ ವಿಜಯ ಗದಾದಂಡಮನ್ ಎತ್ತಿಕೊಂಡು=ತನ್ನ ವಿಜಯದ ಗದಾದಂಡವನ್ನು ಎತ್ತಿಕೊಂಡು; ಕದಳೀ=ಬಾಳೆ ಗಿಡ; ಕರಿ=ಆನೆ; ಕಳಭ=ಮರಿ;

ಕುರುಕುಲ ಕದಳೀ ಕಾನನ ಕರಿಕಳಭನ್= ಕುರುಕುಲವೆಂಬ ಬಾಳೆಯ ತೋಟವನ್ನು ನುಗ್ಗಿನುರಿಮಾಡುವ ಆನೆಯ ಮರಿಯಂತಹವನು/ಬೀಮ;

ಶಲಭ=ಹುಳು/ದೀಪದ ಹುಳು/ಮಿಡತೆ/ಪತಂಗ; ಸಂಪಾತನ=ಕೆಳಗೆ ಬೀಳುವಿಕೆ/ಪತನ/ಡಿಕ್ಕಿ; ವಿಸ್ಫುರಿತ=ಹೆಚ್ಚಾದ /ಬೆಳಗುತ್ತಿರುವ; ಪ್ರದೀಪ=ದೀವಿಗೆ/ದೀಪ; ಶತ್ರುಶಲಭಸಂಪಾತನ ವಿಸ್ಫುರಿತ ಪ್ರದೀಪನ್= ಹಗೆಗಳೆಂಬ ಹುಳುಗಳು ಸುಟ್ಟು ಕೆಳಗೆ ಬೀಳುವಂತೆ ಬೆಳಗುತ್ತಿರುವ ದೀಪವಾಗಿರುವವನು; ಪವನ=ವಾಯುದೇವ; ಪವನಸುತ=ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು/ಬೀಮ;

ಪವನಸುತನ್ ಆ ಕುರುಧರೆಯೊಳ್ ಕುರುಪತಿಯನ್ ಅರಸಿದನ್= ಬೀಮನು ಆ ಕುರುಬೂಮಿಯ ಕುರುಕ್ಶೇತ್ರ ರಣರಂಗದಲ್ಲಿ ಕುರುಪತಿಯಾದ ದುರ‍್ಯೋದನನನ್ನು ಹುಡುಕಲೆಂದು ಹೊರಟನು; ದುರ‍್ಯೋದನನು ತಾನು ಆಳ್ವಿಕೆಯನ್ನು ಮಾಡುತ್ತಿದ್ದ ರಾಜ್ಯದಲ್ಲಿಯೇ ತಲೆಮರೆಸಿಕೊಳ್ಳಬೇಕಾದ ದುರಂತದ ಸನ್ನಿವೇಶಕ್ಕೆ ಗುರಿಯಾಗಿದ್ದಾನೆ;

(ಚಿತ್ರ ಸೆಲೆ: jainheritagecentres.com)

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *