ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 17ನೆಯ ಕಂತು
– ಸಿ.ಪಿ.ನಾಗರಾಜ.
ಪ್ರಸಂಗ – 17: ಭೀಮಸೇನನ ಅಬ್ಬರ… ಗಾಂಧಾರಿಯ ಮೊರೆ
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಮಸೇನಾಡಂಬರಮ್’ ಎಂಬ ಹೆಸರಿನ 7 ನೆಯ ಅದ್ಯಾಯದ 12 ನೆಯ ಪದ್ಯದಿಂದ 18 ನೆಯ ಗದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ಗಾಂಧಾರಿ: ದ್ರುತರಾಶ್ಟ್ರ ಮಹಾರಾಜನ ಹೆಂಡತಿ. ಈ ದಂಪತಿಗೆ ದುರ‍್ಯೋದನನನ್ನು ಮೊದಲುಗೊಂಡು ನೂರು ಮಂದಿ ಗಂಡು ಮಕ್ಕಳು ಮತ್ತು ದುಶ್ಶಲೆ ಎಂಬ ಮಗಳು ಇದ್ದಳು.
*** ಪ್ರಸಂಗ – 17: ಭೀಮಸೇನನ ಅಬ್ಬರ… ಗಾಂಧಾರಿಯ ಮೊರೆ ***
ಗುರು ಲಕ್ಷ್ಯಸಿದ್ಧಿಯಿಲ್ಲ ಎನೆ… ಮಾಣ್ದಿರದೆ… ಮರುಜ್ಜವದಿಂದಮ್ ಪರಿವ ಅಂಬಮ್ ಪರಿದು ಪಿಡಿದು ತರ್ಪಂತಿರೆ…ಆಗಳ್ ಮರುತ್ಸುತನ್ ಇದಿರುಮ್ ಬಳಿಯುಮ್ ಪರಿದನ್. ಅಂತು ಇದಿರುಮ್ ಬಳಿಯಮ್ ಪಾಸುಮ್ ಪೊಕ್ಕುಮ್…ದುಗುಣಮುಮ್…ತಿಗುಣಮುಮ್… ಅಡ್ಡಮುಮ್…ತಿಗಟಮುಮ್ ಪರಿದು…ವೈಯಾಕರಣನಂತೆ ಶಬ್ದಮನ್ ಆಲಿಸಿಯುಮ್; ಬೇಂಟೆಕಾರನಂತೆ ಅಡಿವಜ್ಜೆಯನ್ ಅರಸಿಯುಮ್; ಗರುಡನಂತೆ ಪಾವಿನ ಪಳವಿಗೆಯನ್ ಆರಯ್ದು ನೋಡಿಯುಮ್; ವೈದ್ಯನಂತೆ ಅಹಿತಗದಾನ್ವೇಷಣಮ್ ಗೆಯ್ದು ನೋಡಿಯುಮ್; ಮುನ್ನಮ್ ಪರಶುರಾಮನ್ ಇರ್ಪತ್ತೊಂದು ಸೂಳ್ ವರೆಗಮ್ ಈ ನೆಲದೊಳ್ ಉಳ್ಳ ಅರಸು ಮಕ್ಕಳ್ ಎಲ್ಲರುಮನ್ ಪಿಳ್ಳೆ ಪೆಸರಿಲ್ಲದಂತು ಕೊಂದು…ತನ್ನ ತಾಯ್ಗೆ ನೀರ್ ಇಳಿಯಲುಮ್…ತಂದೆಗೆ ನೀರ್ ಕುಡಲುಮ್ ಎಂದು…ಅವಂದಿರ ನೊರೆ ನೆತ್ತರೊಳ್ ತೀವಿ ಮಾಡಿದ ಸ್ಯಮಂತ ಪಂಚಕಗಳೆಂಬ ಪೆಸರ ಪೆರ್ಮಡುಗಳೊಳಗೆ ಮೂಡಿ ಮುಳ್ಕಾಡಿ ನೋಡಿಯುಮ್; ನಾಲ್ವತ್ತೆಣ್ಗಾವುದ ಪರಿಪ್ರಮಾಣ ಕುರುಕ್ಷೇತ್ರದೊಳ್ ಎಲ್ಲಿಯುಮ್ ದುರ್ಯೋಧನನ್ ಅರಸಿ ಕಾಣದೆ ವಿಸ್ಮಯಮ್ ಪಟ್ಟು , ಅವನ ಬಿಟ್ಟ ಬೀಡಿಂಗೆ ನಿಟ್ಟುರಿಗೊಂಡು…
ಭೀಮ: ಜತುಗೃಹದೊಳ್ ಸುಡಲ್ ಬಗೆದನ್ ಎಲ್ಲಿದನ್… ವಿಷಾನ್ನಮಮ್ ಇಕ್ಕಿ ಮರುತ್ ಸುತನನ್ ಉಪಾಯದಿಮ್ ಕೊಲಲ್ ಒಡರ್ಚಿದನ್ ಎಲ್ಲಿದನ್…ಆ ದುರೋದರ ವ್ಯತಿಕರದೊಳ್ ಪರಾಭವಿಸಿ ಕೃಷ್ಣೆಯನ್ ಉಯ್ದ ಅಪರಾಧಿ ಎಲ್ಲಿದನ್…ಕೃತಕ ಸಭಾ ಪ್ರವೇಶಕರನ್ ಎಲ್ಲಿದನ್…ಎಲ್ಲಿದನೋ ಸುಯೋಧನನ್…ಭರತ ಕುಲೇಂದು ಕಲಂಕನ್ ಭರತಾನ್ವಯ ರಾಜಭವನ ರಾಜಕಪೋತಮ್ ಕುರುಕೇತು ಎಲ್ಲಿದನ್…ತತ್ ಕುರುಕುಲ ಲಯಕೇತು ಭೀಮಸೇನನ್ ಬಂದನ್.
(ಎಂದು ಸಿಂಹಗರ್ಜನೆಯಿಮ್ ಗರ್ಜಿಸಿ, ಕುರುರಾಜದ್ವಾರ ಉಪಾಂತಮನ್ ಎಯ್ದೆ ವಂದಾಗಳ್…)
ಗಾಂಧಾರಿ: ದೆಸೆಯಮ್ ತೆಕ್ಕನೆ ತೀವಿ…ಗಗನಮ್ ಪರ್ಬಿ ಕೂಡಿಟ್ಟವೊಲ್ ನೀಳ್ದು ಅಗುರ್ವಿಸೆ… ಬಾಹುಭ್ರಮಿತ ಅಭ್ರ ವಿಭ್ರಮ ಗದನ್ ಕೌರವ್ಯರಮ್ ತಿಂದ ರಕ್ಕಸನೋ…ಭೀಮನೊ… ಈತನ್ ಆವನ್…
( ಎನುತುಮ್, ಪಾಂಡವಬಲ ಪ್ರಾಕಾರನ ಆಕಾರಮಮ್ ಬರೆ ಕಂಡು , ಗಾಂಧಾರಿ ಬಳ್ಕುತ್ತೆ ಬೆಕ್ಕಸಮುತ್ತಳ್. ಅಂತು ಕಂಡು ಬಿಲ್ಲುಮ್ ಬೆರಗುಮಾಗಿ..)
ಗಾಂಧಾರಿ: ಎನ್ನ ಆತ್ಮಜರನ್ ನೂರ್ವರುಮನ್ ನುಂಗಿದ ತೆರದೆ ಪನ್ನಗಕೇತನನುಮನ್ ನುಂಗೆ ಇಂತು ಭರದಿಮ್ ಬಂದನ್…ಅನ್ನೆಯಮಾಯ್ತು.
(ಎಂದು ಪಿರಿದುಮ್ ಉಮ್ಮಳಿಸುತ್ತುಮ್ ಎಂಬನ್ನೆಗಮ್…ಭೀಮನ್ ವಿಜೃಂಭಿಸಿ ಕಯ್ಪೆಸರದಿಮ್ ಗುರುಜನಕ್ಕೆ ಸಮುಚಿತ ಆಚಾರಮಮ್ ಮರೆದು ಭೀಮನಾದಮಮ್ ನೆಗಳ್ಚಿ..)
ಭೀಮ: ಧೃತರಾಷ್ಟ್ರ ಕ್ಷಿತಿಪಾಲ ಕೇಳ್…ಜನನಿ ಗಾಂಧಾರಿ ಕೇಳ್…ಭವತ್ ಸುತರಮ್ ನೂರ್ವರುಮಮ್ ಗದಾಪ್ರಹತಿಯಿಮ್ ಕೊಂದೆನ್…ದುಶ್ಶಾಸನ ಉರಃಸ್ಥಳ ಕ್ಷತಜ ಅಸೃಗ್ಜಲಸೇಕದಿಮ್ ಕೋಪಾಗ್ನಿಯಮ್ ತಣಿಪಿದೆನ್…ಉದ್ಧತನನ್ ಕೋಪಕೃತ ಅಪರಾಧಶತನನ್ ಪಿಂಗಾಕ್ಷನನ್ ನುಂಗಲ್ಕೆ ಬಂದೆನ್.
(ಎಂಬುದುಮ್ ಗಾಂಧಾರಿ ಜರಾಸಂಧಾರಿಗೆ ಬದ್ಧಾಂಜಲಿಯಾಗಿ…)
ಗಾಂಧಾರಿ: ಅನಿಬರ್ ತನಯರ ದುಃಖಮನ್ ಅನುಭವಿಸಿಯುಮ್…ಅಣಮೆ…ಎಮ್ಮ ಅಸುಗಳ್ ಪೋಗವು. ಭೀಮ, ನೀನ್ ಇನಿತನ್ ಎಮಗೆ ಒಳ್ಳಿಕೆಯ್. ಮುನ್ನ ಎಮ್ಮಮ್ ನುಂಗು. ಎಮ್ಮ ಸುತನನ್ ಬಳಿಯಮ್.
(ಎಂಬುದುಮ್….ಅನ್ನೆಗಮ್ ಇತ್ತ ವಿಂದ್ಯಕನೆಂಬ ಕಿರಾತ ದೂತನ್ ತ್ವರಿತಗತಿಯಿಮ್ ಬಂದು ದೂರಪ್ರಣತನಾಗಿ…)
ವಿಂದ್ಯಕ: ದೇವಾ, ದುರ್ಯೋಧನನನ್ ಕುರುಕ್ಷೇತ್ರದೊಳ್ ಎಲ್ಲಿಯುಮ್ ಅರಸಿಯುಮ್ ಕಾಣದೆ ಮಧ್ಯಂದಿನ ಸಮಯದೊಳ್ ತಪನ ತಾಪದಿಮ್ ತೃಷ್ಣಾಭಿಭೂತನಾಗಿ ಸಕಲಜನ ಆಪ್ಯಾಯಕಾರಿಯಪ್ಪ ವೈಶಂಪಾಯನ ಸರೋವರಕ್ಕೆ ನೀರ್ಗುಡಿಯೆ ಪೋಗಿ ಹಲ ಕುಲಿಶ ಕಮಲ ಶಂಖ ಚಕ್ರ ಲಾಂಛನಮಪ್ಪ ಅಡಿವಜ್ಜೆಯಮ್ ಕೊಳದ ತಡಿಯೊಳ್ ಕಂಡೆನ್. ಅಲ್ಲಿ ಪೊರಮಟ್ಟ ಪಜ್ಜೆಯಲ್ಲದೆ ಪೊಕ್ಕ ಪಜ್ಜೆಯಮ್ ಕಾಣೆನ್.
(ಎನೆ ಪವನತನಯನ್ ಅವನನ್ ಒಡಗೊಂಡು ಬಂದು…)
ಪದ ವಿಂಗಡಣೆ ಮತ್ತು ತಿರುಳು: ಬೀಮಸೇನನ ಅಬ್ಬರ… ಗಾಂದಾರಿಯ ಮೊರೆ
ಲಕ್ಷ್ಯ=ಗುರಿ; ಮಾಣ್ದು+ಇರದೆ; ಮಾಣ್=ಸುಮ್ಮನಾಗು; ಮರುತ್+ಜವದಿಂದಮ್; ಮರುತ್=ಗಾಳಿ/ವಾಯು; ಜವ=ವೇಗ; ಪರಿ=ಚಲಿಸು/ಸಾಗು; ಅಂಬು=ಬಾಣ ತರ್ಪಂತೆ+ಇರೆ;
ಗುರು ಲಕ್ಷ್ಯ ಸಿದ್ಧಿಯಿಲ್ಲ ಎನೆ… ಮಾಣ್ದಿರದೆ… ಮರುಜ್ಜವದಿಂದಮ್ ಪರಿವ ಅಂಬಮ್ ಪರಿದು ಪಿಡಿದು ತರ್ಪಂತಿರೆ=ಗುರು ದ್ರೋಣಾಚಾರ್‍ಯರ ಬಳಿಯಲ್ಲಿ ಬೀಮನು ಬಿಲ್ ವಿದ್ಯೆಯನ್ನು ಕಲಿಯುವಾಗ ನಡೆದಿದ್ದ ಪ್ರಸಂಗವೊಂದನ್ನು ಇಲ್ಲಿ ಉಪಮೆಯನ್ನಾಗಿ ಬಳಸಲಾಗಿದೆ. ಒಂದು ಗುರಿಯತ್ತ ಬಾಣವನ್ನು ಬಿಡಲು ಗುರು ದ್ರೋಣಾಚಾರ್‍ಯರ ಸೂಚಿಸಿದಾಗ, ಬೀಮನು ಬಾಣವನ್ನು ಪ್ರಯೋಗಿಸುತ್ತಾನೆ. ಅದನ್ನು ಗಮನಿಸಿದ ದ್ರೋಣಾಚಾರ್‍ಯರು “ಬೀಮ… ನಿನ್ನ ಗುರಿ ತಪ್ಪಾಗಿದೆ. ಬಾಣ ಗುರಿಯತ್ತ ಹೋಗುತ್ತಿಲ್ಲ” ಎನ್ನಲು, ಸುಮ್ಮನಿರದೆ ಮರುಗಳಿಗೆಯಲ್ಲಿಯೇ ಬೀಮನು ವಾಯುವೇಗದಿಂದ ಮುನ್ನುಗ್ಗಿ, ತಾನು ಬಿಟ್ಟ ಬಾಣವು ತಪ್ಪು ಗುರಿಯನ್ನು ಮುಟ್ಟುವ ಮುನ್ನವೇ ಮಾರ್‍ಗದ ನಡುವೆಯೇ ಹಿಡಿದು ತಂದಿದ್ದನು. ವಾಯುಪುತ್ರನಾದ ಬೀಮನು ವಾಯುವೇಗದಿಂದ ಸಂಚರಿಸುವಂತಹ ಕಸುವು ಮತ್ತು ಕುಶಲತೆಯನ್ನು ಹೊಂದಿದ್ದನು ಎಂಬುದನ್ನು ಈ ಪ್ರಸಂಗವು ಸೂಚಿಸುತ್ತದೆ;
ಆಗಳ್ ಮರುತ್ಸುತನ್ ಇದಿರುಮ್ ಬಳಿಯುಮ್ ಪರಿದನ್=ಕಾಣೆಯಾಗಿರುವ ದುರ್‍ಯೋದನನನ್ನು ಹುಡುಕುತ್ತಿರುವ ಸನ್ನಿವೇಶದಲ್ಲಿ ವಾಯುಪುತ್ರನಾದ ಬೀಮನು ಕುರುಕ್ಶೇತ್ರ ರಣರಂಗದ ಅತ್ತ… ಇತ್ತ… ಎಲ್ಲೆಡೆಯಲ್ಲಿಯೂ ವಾಯುವೇಗದಿಂದ ಅಲೆಯತೊಡಗಿದನು;
ಅಂತು=ಆ ರೀತಿ; ಇದಿರುಮ್=ಮುಂದುಗಡೆ; ಬಳಿಯಮ್=ಹತ್ತಿರದಲ್ಲಿ; ಪಾಸಮು ಪೊಕ್ಕುಮ್=ಉದ್ದಗಲದಲ್ಲಿ; ದುಗುಣ=ಎರಡು ಸಲ; ತಿಗುಣ=ಮೂರು ಸಲ; ತಿಗಟ=ಮುಂದೆ ಮತ್ತು ಹಿಂದೆ; ; ಪರಿದು=ಅಡ್ಡಾಡಿ;
ಅಂತು ಇದಿರುಮ್ ಬಳಿಯಮ್… ಪಾಸುಮ್ ಪೊಕ್ಕುಮ್… ದುಗುಣಮುಮ್… ತಿಗುಣಮುಮ್… ಅಡ್ಡಮುಮ್… ತಿಗಟಮುಮ್ ಪರಿದು=ಬೀಮನು ವಾಯುವೇಗದಿಂದ ಕುರುಕ್ಶೇತ್ರ ರಣರಂಗದ ಉದ್ದಗಲದಲ್ಲಿ ಮುಂದೆ-ಹಿಂದೆ; ಹತ್ತಿರದಲ್ಲಿ-ದೂರದಲ್ಲಿ; ತ್ರಿಕೋನಕಾರವಾಗಿ ಒಂದಲ್ಲ… ಎರಡಲ್ಲ… ಮೂರು ಸಲ ಅಡ್ಡಾಡತೊಡಗಿದನು;
ಆಲಿಸು=ಕೇಳು;
ವೈಯಾಕರಣನಂತೆ ಶಬ್ದಮನ್ ಆಲಿಸಿಯುಮ್=ಪ್ರತಿಯೊಂದು ಶಬ್ದಗಳ ರೂಪ ಮತ್ತು ತಿರುಳನ್ನು ಗಮನಿಸುವ ವ್ಯಾಕರಣಕಾರನಂತೆ ರಣರಂಗದಲ್ಲಿ ಕೇಳಿಬರುತ್ತಿರುವ ಶಬ್ದವನ್ನು ಕಿವಿಗೊಟ್ಟು ಕೇಳುತ್ತ;
ಅಡಿ+ಪಜ್ಜೆ; ಅಡಿವಜ್ಜೆ=ಅಂಗಾಲು;
ಬೇಂಟೆಕಾರನಂತೆ ಅಡಿವಜ್ಜೆಯನ್ ಅರಸಿಯುಮ್=ಪ್ರಾಣಿಗಳ ಹೆಜ್ಜೆಗುರುತುಗಳ ಮೂಲಕ, ಅವುಗಳ ಅಡಗು ತಾಣವನ್ನು ಹುಡುಕುವ ಬೇಟೆಕಾರನಂತೆ ರಣರಂಗದ ನೆತ್ತರ ಕೆಸರಿನಲ್ಲಿ ಅಚ್ಚೊತ್ತಿದಂತಿರುವ ಕಾದಾಳುಗಳ ಹೆಜ್ಜೆಗುರುತುಗಳಲ್ಲಿ ದುರ್‍ಯೋದನನ ಹೆಜ್ಜೆ ಗುರುತುಗಳನ್ನು ಹುಡುಕುತ್ತ;
ಪಾವು=ಹಾವು; ಪಳವಿಗೆ+ಅನ್; ಪಳವಿಗೆ=ಬಾವುಟ; ಆರಯ್=ಹುಡುಕು/ಪತ್ತೆ ಹಚ್ಚು
ಗರುಡನಂತೆ ಪಾವಿನ ಪಳವಿಗೆಯನ್ ಆರಯ್ದು ನೋಡಿಯುಮ್=ಗಗನದಲ್ಲಿ ಹಾರಾಡುವ ಗರುಡ ಪಕ್ಶಿಯು ನೆಲದಲ್ಲಿ ಹರಿದಾಡುವ ಹಾವಿನ ಚಹರೆಯನ್ನು ಹುಡುಕಿ ನೋಡುವಂತೆ ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗಿ ಹೊಂದಿದ್ದ ದುರ್‍ಯೋದನನನ್ನು ಹುಡುಕುತ್ತ;
ಅಹಿತ+ಗದ+ಅನ್ವೇಷಣಮ್; ಅಹಿತ=ಕೇಡು/ಹಾನಿ; ಗದ=ರೋಗ; ಅನ್ವೇಷಣ=ಹುಡುಕುವುದು;
ವೈದ್ಯನಂತೆ ಅಹಿತಗದಾನ್ವೇಷಣಮ್ ಗೆಯ್ದು ನೋಡಿಯುಮ್=ದೇಹಕ್ಕೆ ಸಾವು ನೋವನ್ನುಂಟುಮಾಡುವ ರೋಗದ ಚಿಹ್ನೆಗಳನ್ನು ಹುಡುಕಿ ನೋಡುವ ವೈದ್ಯನಂತೆ ರಣರಂಗದಲ್ಲಿ ಆಯುದಗಳ ಪೆಟ್ಟಿನಿಂದ ಗಾಯಗೊಂಡು ನರಳುತ್ತ ಬಿದ್ದಿರುವ ಕಾದಾಳುಗಳ ನಡುವೆ ದುರ್‍ಯೋದನನನ್ನು ಹುಡುಕುತ್ತ;
ಸೂಳ್=ಸರದಿ/ಸಮಯ; ಪಿಳ್ಳೆಪೆಸರಿಲ್ಲದಂತೆ=ಕುಲದ ಹೆಸರನ್ನು ಹೇಳಲು ಒಂದು ಮಗುವಾದರೂ ಜೀವಂತವಾಗಿ ಉಳಿಯದಂತೆ, ಅಂದರೆ ಕುಲವೆಲ್ಲವೂ ಸಂಪೂರ್‍ಣವಾಗಿ ನಾಶವಾಗುವಂತೆ;
ಮುನ್ನಮ್ ಪರಶುರಾಮನ್ ಇರ್ಪತ್ತೊಂದು ಸೂಳ್ ವರೆಗಮ್ ಈ ನೆಲದೊಳ್ ಉಳ್ಳ ಅರಸು ಮಕ್ಕಳ್ ಎಲ್ಲರುಮನ್ ಪಿಳ್ಳೆ ಪೆಸರಿಲ್ಲದಂತು ಕೊಂದು=ಈ ಹಿಂದೆ ಪರಶುರಾಮನೆಂಬ ರಿಸಿಯು ಇಪ್ಪತ್ತೊಂದು ಸಲ ದಂಡೆತ್ತಿಹೋಗಿ, ಈ ಬೂಮಂಡಲದಲ್ಲಿರುವ ಅರಸು ಮಕ್ಕಳೆಲ್ಲರನ್ನೂ ಕ್ಶತ್ರಿಯ ಕುಲದ ಹೆಸರನ್ನು ಹೇಳಲು ಒಬ್ಬರನ್ನು ಉಳಿಸದಂತೆ ಕೊಂದು;
ನೀರಿಳಿಯಲ್+ಉಮ್; ನೀರಿಳಿ=ಸ್ನಾನಮಾಡು;
ತನ್ನ ತಾಯ್ಗೆ ನೀರಿಳಿಯಲುಮ್=ಪರಶುರಾಮನು ತನ್ನ ತಾಯಿಯಾದ ರೇಣುಕಾದೇವಿಯು ಸ್ನಾನಮಾಡಲೆಂದು;
ನೀರ್ಕುಡಲ್+ಉಮ್; ನೀರ್ಕುಡು=ನೀರ್+ಕುಡು=ಪೂಜೆಯ ಸಮಯದಲ್ಲಿ ಮಂತ್ರಗಳನ್ನು ಉಚ್ಚರಿಸುತ್ತ ಬೊಗಸೆ ಕಯ್ಗಳಿಂದ ನೀರನ್ನು ನೀಡುವುದು;
ತಂದೆಗೆ ನೀರ್ ಕುಡಲುಮ್ ಎಂದು=ಪರಶುರಾಮನು ತನ್ನ ತಂದೆಯಾದ ಜಮದಗ್ನಿಯು ನೀರಿನ ತರ್‍ಪಣವನ್ನು ಕೊಡಲೆಂದು;
ಅವಂದಿರ=ಅರಸು ಮಕ್ಕಳ; ನೆತ್ತರು=ರಕ್ತ; ತೀವಿ=ತುಂಬಿ; ಪೆರ್ಮಡುಗಳ್+ಒಳಗೆ; ಪೆರ್ಮಡು=ಆಳವಾದ ನೀರಿನ ತಾಣ; ಮೂಡಿ=ಹೊಕ್ಕು/ಪ್ರವೇಶಿಸಿ; ಮುಳ್ಕಾಡಿ=ನೀರಿನಲ್ಲಿ ಮುಳುಗಿ ಈಜಾಡಿ;
ಅವಂದಿರ ನೊರೆ ನೆತ್ತರೊಳ್ ತೀವಿ ಮಾಡಿದ ಸ್ಯಮಂತ ಪಂಚಕಗಳೆಂಬ ಪೆಸರ ಪೆರ್ಮಡುಗಳೊಳಗೆ ಮೂಡಿ ಮುಳ್ಕಾಡಿ ನೋಡಿಯುಮ್=ಅರಸು ಮಕ್ಕಳನ್ನು ಕೊಂದಾಗ ಹರಿದ ನೊರೆ ತುಂಬಿದ ನೆತ್ತರನ್ನೇ ತುಂಬಿಸಿ ಮಾಡಿದ ಸ್ಯಮಂತಪಂಚಕಗಳೆಂಬ ಹೆಸರಿನ ನೀರಿನ ತಾಣಗಳನ್ನು ಹೊಕ್ಕು, ಆ ಅಯ್ದು ಮಡುಗಳಲ್ಲಿಯೂ ಈಜಾಡಿ ನೋಡಿ;
ಗಾವುದ=ಎರಡು ಹರಿದಾರಿ/ಸುಮಾರು ಆರು ಮಯ್ಲಿ; ಹಿಂದಿನ ಕಾಲದಲ್ಲಿ ದಾರಿಯ ದೂರವನ್ನು ತಿಳಿಸುವ ಪದ;ಪರಿಪ್ರಮಾಣ=ಸುತ್ತಳತೆ;
ನಾಲ್ವತ್ತೆಣ್ಗಾವುದ ಪರಿಪ್ರಮಾಣ ಕುರುಕ್ಷೇತ್ರದೊಳ್ ಎಲ್ಲಿಯುಮ್ ದುರ್ಯೋಧನನ್ ಅರಸಿ ಕಾಣದೆ ವಿಸ್ಮಯಮ್ ಪಟ್ಟು=ನಲವತ್ತೆಂಟು ಗಾವುದದ ಸುತ್ತಳತೆಯಲ್ಲಿರುವ ಕುರುಕ್ಶೇತ್ರ ರಣರಂಗದ ಎಲ್ಲೆಡೆಯಲ್ಲಿಯೂ ದುರ್‍ಯೋದನನನ್ನು ಹುಡುಕಿ ಕಾಣದೆ ಅಚ್ಚರಿಗೊಂಡು;
ಬೀಡು=ಬಿಡಾರ ಹೂಡಿರುವ ತಾಣ; ಬಿಟ್ಟ ಬೀಡು=ಸೇನಾ ಶಿಬಿರ; ನಿಟ್ಟು=ದಿಕ್ಕು; ನಿಟ್ಟುರಿಗೊಂಡು=ದಿಕ್ಕಿನತ್ತ ಬಂದು;
ಅವನ ಬಿಟ್ಟ ಬೀಡಿಂಗೆ ನಿಟ್ಟುರಿಗೊಂಡು=ಈಗ ಬೀಮಸೇನನು ಕುರುಕ್ಶೇತ್ರ ರಣರಂಗದಲ್ಲಿ ದುರ್‍ಯೋದನನ ಸೇನಾಶಿಬಿರವಿದ್ದ ದಿಕ್ಕಿನ ಕಡೆಗೆ ಬರುತ್ತ;
ಜತುಗೃಹದ+ಒಳ್; ಜತುಗೃಹ=ಅರಗಿನ ಮನೆ;
ಜತುಗೃಹದೊಳ್ ಸುಡಲ್ ಬಗೆದನ್ ಎಲ್ಲಿದನ್=ಅಂದು ಅರಗಿನ ಮನೆಯ ಬೆಂಕಿಯಲ್ಲಿ ಪಾಂಡವರಾದ ನಮ್ಮೆಲ್ಲರನ್ನೂ ಸುಡಲು ಸಂಚು ಹೂಡಿದ್ದ ಆ ದುರ್‍ಯೋದನನು ಈಗ ಎಲ್ಲಿದ್ದಾನೆ;
ವಿಷ+ಅನ್ನಮ್+ಅಮ್; ಮರುತ್=ವಾಯುದೇವ; ಒಡರ್ಚು=ಪ್ರಯತ್ನಿಸು;
ವಿಷಾನ್ನಮಮ್ ಇಕ್ಕಿ ಮರುತ್ ಸುತನನ್ ಉಪಾಯದಿಮ್ ಕೊಲಲ್ ಒಡರ್ಚಿದನ್ ಎಲ್ಲಿದನ್=ಅಂದು ವಿಶದ ಲಡ್ಡುಗೆಯನ್ನು ತಿನ್ನಿಸಿ ವಾಯುದೇವನ ಮಗನಾದ ನನ್ನನ್ನು ಉಪಾಯದಿಂದ ಕೊಲ್ಲಲು ಪ್ರಯತ್ನಿಸಿದ ಆ ದುರ್‍ಯೋದನನು ಈಗ ಎಲ್ಲಿದ್ದಾನೆ;
ದುರೋದರ=ಜೂಜು/ದ್ಯೂತ; ವ್ಯತಿಕರ=ಪ್ರಸಂಗ; ಪರಾಭವ=ಸೋಲು; ಕೃಷ್ಣೆ+ಅನ್; ಕೃಷ್ಣೆ=ದ್ರೌಪದಿ; ಉಯ್=ಸಾಗಿಸು;
ಆ ದುರೋದರ ವ್ಯತಿಕರದೊಳ್ ಪರಾಭವಿಸಿ ಕೃಷ್ಣೆಯನ್ ಉಯ್ದ ಅಪರಾಧಿ ಎಲ್ಲಿದನ್=ಅಂದು ರಾಜಸಬೆಯಲ್ಲಿ ನಡೆದ ದ್ಯೂತದ ಪ್ರಸಂಗದಲ್ಲಿ ದರ್‍ಮರಾಯನನ್ನು ಸೋಲಿಸಿ, ರಾಜಸಬೆಗೆ ತನ್ನ ತಮ್ಮ ದುಶ್ಶಾಸನನ ಮೂಲಕ ದ್ರೌಪದಿಯನ್ನು ಮುಡಿ ಹಿಡಿದು ಎಳೆದು ತರಿಸಿ, ದ್ರೌಪದಿಯ ಸೀರೆಯನ್ನು ಸುಲಿಸಿ ಅಪಮಾನ ಮಾಡಿದ ಆ ಅಪರಾದಿ ದುರ್‍ಯೋದನನು ಈಗ ಎಲ್ಲಿದ್ದಾನೆ;
ಕೃತಕ=ಕಪಟತನ/ಮೋಸ; ಕೃತಕ ಸಭೆ=ದುರ್‍ಯೋದನನು ಹಸ್ತಿನಾವತಿಯ ತನ್ನ ಅರಮನೆಯಲ್ಲಿ ಹೊಸದಾಗಿ ನಿರ್‍ಮಿಸಿದ್ದ ಸಬಾಬವನ. ಪಾಂಡವರನ್ನು ದ್ಯೂತಕ್ಕೆ ಕರೆದು ಮೋಸದಾಟದಿಂದ ಅವರ ಸಮಸ್ತ ಸಂಪತ್ತನ್ನು ಈ ಸಬಾಬವನದಲ್ಲಿಯೇ ದುರ್‍ಯೋದನನು ವಶಪಡಿಸಿಕೊಳ್ಳುತ್ತಾನೆ; ಪ್ರವೇಶಕರನ್=ಪಾಂಡವರನ್ನು ಬರುವಂತೆ ಆಹ್ವಾನಿಸಿದವನು/ದುರ್‍ಯೋದನ;
ಕೃತಕ ಸಭಾ ಪ್ರವೇಶಕರನ್ ಎಲ್ಲಿದನ್=ಇಂದ್ರಪ್ರಸ್ತ ನಗರದಲ್ಲಿ ಪಾಂಡವರಿಗಾಗಿ ಮಯನೆಂಬ ಶಿಲ್ಪಿಯು ನಿರ್‍ಮಿಸಿಕೊಟ್ಟಿರುವ ರೀತಿಯಲ್ಲಿಯೇ ತಾನೂ ಕೂಡ ಹೊಸಬಗೆಯಲ್ಲಿ ಸಬಾಬವನವನ್ನು ಕಟ್ಟಿಸಿರುವುದಾಗಿ ತಿಳಿಸಿ, ಅದನ್ನು ನೋಡಿ ಹೋಗಬೇಕೆಂದು ಪಾಂಡವರನ್ನು ಹಸ್ತಿನಾವತಿಗೆ ದುರ್‍ಯೋದನನು ಆಹ್ವಾನಿಸಿದ ಸಂದರ್‍ಬದಲ್ಲಿಯೇ ವಿನೋದದ ನೆಪದಲ್ಲಿ ದ್ಯೂತವನ್ನು ಏರ್‍ಪಡಿಸಿ, ದರ್‍ಮರಾಯನನ್ನು ಕಪಟ ದ್ಯೂತದಲ್ಲಿ ಸೋಲಿಸಿ, ಪಾಂಡವರ ರಾಜಸಂಪತ್ತೆಲ್ಲವನ್ನು ದೋಚಿ, ದ್ರೌಪದಿಯನ್ನು ಒಳಗೊಂಡಂತೆ ಪಾಂಡವರನ್ನು ಗೆದ್ದು, ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಾನೆ. ಅಂದು ಇಂತಹ ವಂಚನೆಯನ್ನು ಮಾಡಿದ ದುರ್‍ಯೋದನನು ಈಗ ಎಲ್ಲಿದ್ದಾನೆ;
ಎಲ್ಲಿದನೋ ಸುಯೋಧನನ್=ಒಂದಲ್ಲ… ಎರಡಲ್ಲ… ಅನೇಕ ಬಗೆಯ ವಂಚನೆಗಳನ್ನು ಮಾಡಿರುವ ಆ ದುರ್‍ಯೋದನನು ಈಗ ಎಲ್ಲಿದ್ದಾನೆ;
ಕುಲ+ಇಂದು; ಇಂದು=ಚಂದ್ರ; ಭರತಕುಲೇಂದು ಕಲಂಕನ್=ಬರತಕುಲ ಚಂದ್ರನಿಗೆ ಕಳಂಕ ತಂದವನು; ಭರತ+ಅನ್ವಯ; ಅನ್ವಯ=ವಂಶ; ಕಪೋತ=ಪಾರಿವಾಳ;
ಭರತಾನ್ವಯ ರಾಜಭವನ ರಾಜಕಪೋತಮ್=ಬರತ ವಂಶದ ರಾಜಮಂದಿರದಲ್ಲಿ ನೆಲೆಸಿರುವ ಪಾರಿವಾಳ/ಬರತವಂಶಕ್ಕೆ ಅನಿಶ್ಟವಾಗಿರುವವನು; ಜಗತ್ತಿನ ಕೆಲವು ದೇಶಗಳಲ್ಲಿ ಆಯಾಯ ಜನಸಮುದಾಯದ ಸಂಸ್ಕ್ರುತಿ ಮತ್ತು ನಂಬಿಕೆಗಳಿಗೆ ಅನುಸಾರವಾಗಿ ಕೆಲವು ಬಗೆಯ ಪ್ರಾಣಿಪಕ್ಶಿಗಳು ಒಳಿತು ಇಲ್ಲವೇ ಕೆಡುಕಿನ ಸಂಕೇತಗಳಾಗಿರುತ್ತವೆ. ಹಸ್ತಿನಾವತಿಯ ಪ್ರದೇಶದಲ್ಲಿ ಅಂದಿನ ಕಾಲದಲ್ಲಿ ‘ಪಾರಿವಾಳ’ ಹಕ್ಕಿಯು ಅಶುಬದ ಇಲ್ಲವೇ ಕೆಡುಕಿನ ಸಂಕೇತವಾಗಿತ್ತು;
ಕೇತು=ಕೇಡಿನ ಸಂಕೇತವೆಂದು ಬಾವಿಸಿರುವ ಒಂದು ಬಗೆಯ ಆಕಾಶಕಾಯ/ದೂಮಕೇತು;
ಕುರುಕೇತು ಎಲ್ಲಿದನ್=ಕುರುಕುಲದ ನಾಶಕ್ಕೆ ಕಾರಣನಾಗಿರುವ ಅನಿಶ್ಟದ ವ್ಯಕ್ತಿ ದುರ್‍ಯೋದನನು ಈಗ ಎಲ್ಲಿದ್ದಾನೆ;
ಲಯಕೇತು=ಎಲ್ಲವನ್ನು ಸಂಪೂರ್‍ಣವಾಗಿ ನಾಶಮಾಡುವವನು; ಸಿಂಹಗರ್ಜನೆ=ದೊಡ್ಡದನಿಯಿಂದ ಅಬ್ಬರಿಸುವುದು;
ತತ್ ಕುರುಕುಲ ಲಯಕೇತು ಭೀಮಸೇನನ್ ಬಂದನ್ ಎಂದು ಸಿಂಹಗರ್ಜನೆಯಿಮ್ ಗರ್ಜಿಸಿ=ಆ ಕುರುವಂಶವನ್ನೇ ಸಂಪೂರ್‍ಣವಾಗಿ ನಾಶಮಾಡುವ ಈ ಬೀಮಸೇನನು ಬಂದಿದ್ದಾನೆ ಎಂದು ಸಿಂಹಗರ್‍ಜನೆಯಿಂದ ಅಬ್ಬರಿಸಿ;
ದ್ವಾರ=ಬಾಗಿಲು; ಉಪಾಂತ=ಹತ್ತಿರ/ಸಮೀಪ;
ಕುರುರಾಜದ್ವಾರ ಉಪಾಂತಮನ್ ಎಯ್ದೆ ವಂದಾಗಳ್=ಕುರುರಾಜನ ಸೇನಾಶಿಬರದ ಬಾಗಿಲಿನ ಬಳಿಗೆ ಬೀಮಸೇನನು ಬಂದಾಗ;
ದೆಸೆ+ಅಮ್; ದೆಸೆ=ದಿಕ್ಕು; ತೆಕ್ಕನೆ=ಅತಿಶಯವಾಗಿ/ವ್ಯಾಪಕವಾಗಿ; ತೀವಿ=ಆವರಿಸಿಕೊಂಡು;
ದೆಸೆಯಮ್ ತೆಕ್ಕನೆ ತೀವಿ=ದಿಕ್ಕುಗಳನ್ನು ಅತಿಶಯವಾಗಿ ಆವರಿಸಿಕೊಂಡು/ದಿಕ್ಕಿನ ಎಲ್ಲ ಕಡೆಗಳಲ್ಲೂ ಕಾಣಿಸಿಕೊಂಡು;
ಪರ್ಬು=ಹರಡು; ನೀಳ್ದು=ಉದ್ದವಾಗಿ ಚಾಚಿಕೊಂಡು; ಅಗುರ್ವು=ಉಗ್ರತೆ/ಬಯಂಕರ;
ಗಗನಮ್ ಪರ್ಬಿ ಕೂಡಿಟ್ಟವೊಲ್ ನೀಳ್ದು ಅಗುರ್ವಿಸೆ=ಆಕಾಶದ ಉದ್ದಕ್ಕೂ ಚಾಚಿಕೊಂಡು ಒಂದೆಡೆ ಸೇರಿದಂತೆ ಬಯಂಕರವಾಗಿ;
ಬಾಹು=ತೋಳು; ಭ್ರಮಿತ=ಉನ್ಮಾದ; ಅಭ್ರ=ಆಕಾಶ; ವಿಭ್ರಮ=ಅಂದ/ಬೆಡಗು; ಗದನ್=ಗದೆಯನ್ನು ಹಿಡಿದವನು;
ಬಾಹುಭ್ರಮಿತ ಅಭ್ರ ವಿಭ್ರಮ ಗದನ್=ತನ್ನ ತೋಳುಗಳಿಂದ ಆಕಾಶವನ್ನೇ ತಿರುಗಿಸುತ್ತಿರುವನೋ ಎಂಬಂತೆ ಬ್ರಮೆಗೊಳಿಸುವ ಗದೆಯುಳ್ಳವನು. ಬೀಮಸೇನನು ದುರ್‍ಯೋದನನನ್ನು ಕಾಣದ ಆತಂಕ ಮತ್ತು ಕಣ್ಣಿಗೆ ಬಿದ್ದ ಕೂಡಲೇ ಕೊಲ್ಲುವ ಆಕ್ರೋಶದಲ್ಲಿ ಗದೆಯನ್ನು ತಿರುಗಿಸುತ್ತಿರಲು, ಆ ಒಂದೇ ಗದೆಯು ಎಲ್ಲ ದಿಕ್ಕುಗಳಲ್ಲಿಯೂ ಮತ್ತು ಆಕಾಶದ ಎಲ್ಲೆಡೆಯಲ್ಲಿಯೂ ಕಾಣಿಸಿಕೊಂಡು,ಇಡೀ ನಿಸರ್‍ಗವನ್ನೇ ತಿರುಗಿಸುತ್ತಿರುವಂತೆ ಬಯಂಕರವಾಗಿತ್ತು;
ಕೌರವ್ಯರಮ್ ತಿಂದ ರಕ್ಕಸನೋ… ಭೀಮನೊ… ಈತನ್ ಆವನ್ ಎನುತುಮ್=ಉಗ್ರತೆಯಿಂದ ಗದೆಯನ್ನು ಬೀಸುತ್ತ ತಾವಿದ್ದ ಸೇನಾಶಿಬಿರದ ಬಳಿಬಂದ ಬೀಮನನ್ನು ನೋಡಿದ ದುರ್‍ಯೋದನನ ತಾಯಿಯಾದ ಗಾಂದಾರಿಯು “ಕುರುವಂಶದ ಮಕ್ಕಳನ್ನು ತಿಂದ ರಕ್ಕಸನೋ… ಬೀಮನೋ… ಇವನಾರು” ಎಂದು ಆತಂಕಗೊಂಡು;
ಪ್ರಾಕಾರ=ಸುತ್ತು ಗೋಡೆ/ಕೋಟೆ;
ಪಾಂಡವಬಲ ಪ್ರಾಕಾರನ ಆಕಾರಮಮ್ ಬರೆ ಕಂಡು=ಪಾಂಡವ ಸೇನೆಯನ್ನು ಕಾಪಾಡುವ ಕೋಟೆಯಂತಿರುವ ಬೀಮಸೇನನು ಶಿಬಿರದ ಬಳಿಗೆ ಬರುತ್ತಿರುವುದನ್ನು ಕಂಡು;
ಬಳ್ಕು=ಹೆದರಿಕೆಯಿಂದ ನಡುಗು; ಬೆಕ್ಕಸ=ಬೆರಗು/ವಿಸ್ಮಯ; ಬೆಕ್ಕಸಮುತ್ತಳ್=ದೇಹವು ಸೆಟೆದುಕೊಂಡು ಗಾಸಿಗೊಂಡಳು;
ಗಾಂಧಾರಿ ಬಳ್ಕುತ್ತೆ ಬೆಕ್ಕಸಮುತ್ತಳ್=ಗಾಂದಾರಿಯು ಹೆದರಿಕೆಯ ನಡುಗುತ್ತ, ದೇಹವು ಸೆಟೆದುಕೊಂಡು ಗಾಸಿಗೊಂಡಳು;
ಬಿಲ್ಲುಮ್ ಬೆರಗು=ತೀವ್ರವಾದ ಹೆದರಿಕೆಯಿಂದ ಗಾಸಿಗೊಂಡು;
ಅಂತು ಕಂಡು ಬಿಲ್ಲುಮ್ ಬೆರಗುಮಾಗಿ=ಆ ರೀತಿ ಇದ್ದಕ್ಕಿದ್ದಂತೆಯೇ ದುರ್‍ಯೋದನನ ಸೇನಾಶಿಬಿರದ ಬಳಿಗೆ ಬಂದ ಬೀಮನನ್ನು ಕಂಡು ಅಚ್ಚರಿಗೊಂಡು, ಹೆದರಿಕೆಯಿಂದ ನಡುಗುತ್ತ, ಮಾನಸಿಕವಾಗಿ ಗಾಸಿಗೊಂಡು ಗಾಂದಾರಿಯು ಈ ರೀತಿ ನುಡಿಯತೊಡಗುತ್ತಾಳೆ;
ಆತ್ಮಜರ್=ಮಕ್ಕಳು; ಪನ್ನಗಕೇತನ=ದುರ್‍ಯೋದನ; ಭರ=ಉದ್ರೇಕ/ಆವೇಶ/ವೇಗ;
ಎನ್ನ ಆತ್ಮಜರನ್ ನೂರ್ವರುಮನ್ ನುಂಗಿದ ತೆರದೆ ಪನ್ನಗಕೇತನನುಮನ್ ನುಂಗೆ ಇಂತು ಭರದಿಮ್ ಬಂದನ್=ನನ್ನ ನೂರು ಮಂದಿ ಮಕ್ಕಳನ್ನು ಕೊಂದ ರೀತಿಯಲ್ಲಿಯೇ ದುರ್‍ಯೋದನನನ್ನು ಕೊಲ್ಲಲು ಈ ರೀತಿ ಆವೇಶದಿಂದ ಬಂದಿದ್ದಾನೆ;
ಉಮ್ಮಳಿಸು=ಚಿಂತಿಸು/ಸಂಕಟಪಡು/ದುಕ್ಕಿಸು;
ಅನ್ನೆಯಮಾಯ್ತು ಎಂದು ಪಿರಿದುಮ್ ಉಮ್ಮಳಿಸುತ್ತುಮ್ ಎಂಬನ್ನೆಗಮ್=ಅನ್ಯಾಯವಾಯ್ತು ಎಂದು ನುಡಿಯುತ್ತ ಗಾಂದಾರಿಯು ಬಹಳವಾಗಿ ಸಂಕಟಪಡುತ್ತಿರುವಶ್ಟರಲ್ಲಿ;
ಭೀಮನ್ ವಿಜೃಂಭಿಸಿ=ಬೀಮನು ಅಟ್ಟಹಾಸದಿಂದ ಮೆರೆಯುತ್ತ;
ಸಮುಚಿತ=ಯೋಗ್ಯವಾದುದು/ಉತ್ತಮವಾದುದು;
ಗುರುಜನಕ್ಕೆ ಸಮುಚಿತ ಆಚಾರಮಮ್ ಮರೆದು=ಗುರುಹಿರಿಯರಿಗೆ ತೋರಿಸಬೇಕಾದ ಮರ್‍ಯಾದೆಯ ನಡೆನುಡಿಯನ್ನು ಮರೆತು;
ಕಯ್ಪೆ=ಕಹಿ; ಸರ=ದನಿ; ಕಯ್ಪೆಸರ=ಮನನೋಯಿಸುವಂತಹ ದನಿಯಲ್ಲಿ/ಕಟೋರವಾದ ದನಿಯಲ್ಲಿ;
ಕಯ್ಪೆಸರದಿಮ್ ಭೀಮನಾದಮಮ್ ನೆಗಳ್ಚಿ=ಮನನೋಯಿಸುವಂತಹ ದನಿಯಲ್ಲಿ ಬಯಂಕರವಾಗಿ ಅಬ್ಬರಿಸಿ;
ಧೃತರಾಷ್ಟ್ರ ಕ್ಷಿತಿಪಾಲ ಕೇಳ್=ದ್ರುತರಾಶ್ಟ್ರ ಮಹಾರಾಜನೇ ಕೇಳು;
ಜನನಿ ಗಾಂಧಾರಿ ಕೇಳ್=ತಾಯಿ ಗಾಂದಾರಿಯೇ ಕೇಳು;
ಭವತ್=ನಿಮ್ಮ; ಪ್ರಹತಿ=ಪೆಟ್ಟು/ಹೊಡೆತ;
ಭವತ್ ಸುತರಮ್ ನೂರ್ವರುಮಮ್ ಗದಾಪ್ರಹತಿಯಿಮ್ ಕೊಂದೆನ್=ನಿಮ್ಮ ಮಕ್ಕಳಾದ ನೂರು ಮಂದಿಯನ್ನು ಈ ನನ್ನ ಗದೆಯ ಹೊಡೆತದಿಂದ ಕೊಂದೆನು;
ಉರಃಸ್ಥಳ= ಎದೆಯ ಬಾಗ; ಕ್ಷತ=ಗಾಯ; ಕ್ಷತಜ=ಗಾಯದಿಂದ ಚಿಮ್ಮಿದ; ಅಸೃಗ್ಜಲ=ರಕ್ತ/ನೆತ್ತರು; ಸೇಕ=ಚಿಮುಸುವಿಕೆ/ಸಿಂಪಡಿಸುವಿಕೆ; ತಣಿಪು=ನಂದಿಸು/ಆರಿಸು;
ದುಶ್ಶಾಸನ ಉರಃಸ್ಥಳ ಕ್ಷತಜ ಅಸೃಗ್ಜಲಸೇಕದಿಮ್ ಕೋಪಾಗ್ನಿಯಮ್ ತಣಿಪಿದೆನ್=ದುಶ್ಶಾಸನನ ಎದೆಯನ್ನು ಬಗೆದಾಗ, ಅವನ ಎದೆಯಿಂದ ಚಿಮ್ಮಿದ ನೆತ್ತರಿನ ಸಿಂಪಡಿಸುವಿಕೆಯಿಂದ ನನ್ನ ಕೋಪವೆಂಬ ಬೆಂಕಿಯನ್ನು ಆರಿಸಿಕೊಂಡೆನು;
ಉದ್ಧತ=ಸೊಕ್ಕಿದ/ಕೊಬ್ಬಿದ; ಕೋಪಕೃತ=ಕೋಪಾವೇಶದಿಂದ; ಶತ=ನೂರು; ಪಿಂಗಾಕ್ಷ=ಕಂದು ಬಣ್ಣದ ಕಣ್ಣುಳ್ಳವನು/ದುರ್‍ಯೋದನ;
ಉದ್ಧತನನ್ ಕೋಪಕೃತ ಅಪರಾಧಶತನನ್ ಪಿಂಗಾಕ್ಷನನ್ ನುಂಗಲ್ಕೆ ಬಂದೆನ್ ಎಂಬುದುಮ್=ಸೊಕ್ಕಿನವನು… ಕೋಪಾವೇಶದಿಂದ ನೂರಾರು ತಪ್ಪುಗಳನ್ನು ಮಾಡಿದವನು ಆದ ದುರ್‍ಯೋದನನನ್ನು ಕೊಲ್ಲಲೆಂದೇ ಬಂದೆನು ಎಂದು ನುಡಿಯಲು;
ಜರಾಸಂಧ+ಅರಿ; ಅರಿ=ಶತ್ರು; ಬದ್ಧಾಂಜಲಿ=ಕಯ್ಗಳನ್ನು ಜೋಡಿಸಿಕೊಳ್ಳುವುದು; ಜರಾಸಂಧಾರಿ=ಜರಾಸಂದನನ್ನು ಕೊಂದವನು/ಬೀಮ;
ಗಾಂಧಾರಿ ಜರಾಸಂಧಾರಿಗೆ ಬದ್ಧಾಂಜಲಿಯಾಗಿ=ಗಾಂದಾರಿಯು ಬೀಮನಿಗೆ ಕಯ್ ಮುಗಿಯುತ್ತ;
ಅನಿಬರ್=ಅಶ್ಟೊಂದು ಮಂದಿ; ತನಯರ್=ಮಕ್ಕಳು; ಅಣಮ್=ಸ್ವಲ್ಪ/ತುಸು; ಅಸು=ಪ್ರಾಣ/ಜೀವ;
ಅನಿಬರ್ ತನಯರ ದುಃಖಮನ್ ಅನುಭವಿಸಿಯುಮ್… ಅಣಮೆ… ಎಮ್ಮ ಅಸುಗಳ್ ಪೋಗವು=ಅಶ್ಟೊಂದು ಮಂದಿ ಮಕ್ಕಳನ್ನು ಕಳೆದುಕೊಂಡು… ಹೆತ್ತಕರುಳಿನ ಸಂಕಟದಲ್ಲಿ ಬೇಯುತ್ತಿದ್ದರೂ… ತುಸುವಾದರೂ… ನಮ್ಮ ಜೀವ ಹೋಗಲಿಲ್ಲ.
ಭೀಮ, ನೀನ್ ಇನಿತನ್ ಎಮಗೆ ಒಳ್ಳಿಕೆಯ್=ಬೀಮ, ನೀನು ಇಶ್ಟನ್ನಾದರೂ ನಮಗೆ ಒಳ್ಳೆಯದನ್ನು ಮಾಡು;
ಮುನ್ನ ಎಮ್ಮಮ್ ನುಂಗು… ಎಮ್ಮ ಸುತನನ್ ಬಳಿಯಮ್ ಎಂಬುದುಮ್=ಮೊದಲು ನಮ್ಮನ್ನು ಕೊಲ್ಲು. ನಮ್ಮ ಮಗನನ್ನು ಅನಂತರ ಕೊಲ್ಲು ಎಂದು ತಾಯಿಯಾದ ಗಾಂದಾರಿಯು ಮೊರೆಯಿಡಲು;
ಅನ್ನೆಗಮ್=ಅಶ್ಟರಲ್ಲಿ; ಇತ್ತ=ಈ ಕಡೆ; ಕಿರಾತ=ಬೇಡ; ಪ್ರಣತ=ನಮಸ್ಕರಿಸುವುದು;
ಅನ್ನೆಗಮ್ ಇತ್ತ ವಿಂದ್ಯಕನೆಂಬ ಕಿರಾತ ದೂತನ್ ತ್ವರಿತಗತಿಯಿಮ್ ಬಂದು ದೂರಪ್ರಣತನಾಗಿ=ಅಶ್ಟರಲ್ಲಿ ಈ ಕಡೆಯಿಂದ ಬೇಡಪಡೆಯ ವಿಂದ್ಯಕನೆಂಬ ದೂತನೊಬ್ಬ ವೇಗವಾಗಿ ಬಂದು, ದೂರದಿಂದಲೇ ಬೀಮನಿಗೆ ನಮಸ್ಕರಿಸಿ ನಿಂದು;
ಮಧ್ಯಂದಿನ ಸಮಯ=ಮದ್ಯಾಹ್ನ ಸಮಯದಲ್ಲಿ; ತಪನ=ಸೂರ್‍ಯ; ತಾಪ=ಬಿಸಿ/ಜಳ; ತೃಷ್ಣ+ಅಭಿಭೂತನ್+ಆಗಿ; ತೃಷ್ಣ=ಬಾಯಾರಿಕೆ; ಅಭಿಭೂತ=ಒಳಗಾಗು; ಸಕಲಜನ=ಜನರೆಲ್ಲರ; ಆಪ್ಯಾಯಕಾರಿ+ಅಪ್ಪ; ಆಪ್ಯಾಯಕಾರಿ=ಹಿತವನ್ನುಂಟುಮಾಡುವ;
ದೇವಾ, ದುರ್ಯೋಧನನನ್ ಕುರುಕ್ಷೇತ್ರದೊಳ್ ಎಲ್ಲಿಯುಮ್ ಅರಸಿಯುಮ್ ಕಾಣದೆ… ಮಧ್ಯಂದಿನ ಸಮಯದೊಳ್ ತಪನ ತಾಪದಿಮ್ ತೃಷ್ಣಾಭಿಭೂತನಾಗಿ ಸಕಲ ಜನ ಆಪ್ಯಾಯಕಾರಿಯಪ್ಪ ವೈಶಂಪಾಯನ ಸರೋವರಕ್ಕೆ ನೀರ್ಗುಡಿಯೆ ಪೋಗಿ=ದೇವಾ, ದುರ್‍ಯೋದನನನ್ನು ಕುರುಕ್ಶೇತ್ರ ರಣರಂಗದ ಎಲ್ಲೆಡೆಯಲ್ಲಿಯೂ ಹುಡುಕಿದರೂ ಕಾಣದೆ, ಮದ್ಯಾಹ್ನದ ಸಮಯದಲ್ಲಿ ಸೂರ್‍ಯನ ಬಿಸಿಲ ತಾಪದಿಂದ ಬಾಯಾರಿಕೆಯುಂಟಾಗಿ, ಜನರೆಲ್ಲರಿಗೂ ಹಿತಕಾರಿಯಾಗಿರುವ ವೈಶಂಪಾಯನ ಸರೋವರಕ್ಕೆ ನೀರನ್ನು ಕುಡಿಯಲೆಂದು ಹೋದಾಗ;
ಹಲ=ನೇಗಿಲು; ಕುಲಿಶ=ವಜ್ರಾಯುದ; ಲಾಂಛನಮ್+ಅಪ್ಪ; ಲಾಂಛನ=ಗುರುತು; ಅಪ್ಪ=ಆಗಿರುವ; ಅಡಿ+ಪಜ್ಜೆ=ಅಡಿವಜ್ಜೆ; ಅಡಿವಜ್ಜೆ=ಅಂಗಾಲು;
ಹಲ ಕುಲಿಶ ಕಮಲ ಶಂಖ ಚಕ್ರ ಲಾಂಚನಮಪ್ಪ ಅಡಿವಜ್ಜೆಯಮ್ ಕೊಳದ ತಡಿಯೊಳ್ ಕಂಡೆನ್=ನೇಗಿಲು-ವಜ್ರಾಯುದ-ಕಮಲ-ಶಂಕ-ಚಕ್ರಗಳ ಗುರುತುಳ್ಳ ಪಾದದ ಹೆಜ್ಜೆಗಳನ್ನು ಕೊಳದ ದಡದಲ್ಲಿ ಕಂಡೆನು; ಚಕ್ರವರ್‍ತಯಾದ ವ್ಯಕ್ತಿಯ ಪಾದದಲ್ಲಿ ಈ ಬಗೆಯ ವಸ್ತುಗಳ ರೇಕೆಗಳು ಇರುತ್ತವೆ ಎನ್ನುವುದು ಜನಮನದ ಒಂದು ನಂಬಿಕೆಯಾಗಿದೆ;
ಪೊರಮಟ್ಟ ಪಜ್ಜೆ=ಕೊಳದಿಂದ ಹೊರಕ್ಕೆ ಬಂದ ಹೆಜ್ಜೆ ಗುರುತುಗಳು; ಪೊಕ್ಕ ಪಜ್ಜೆ=ಕೊಳದ ಒಳಕ್ಕೆ ಹೋದ ಹೆಜ್ಜೆ ಗುರುತುಗಳು
ಅಲ್ಲಿ ಪೊರಮಟ್ಟ ಪಜ್ಜೆಯಲ್ಲದೆ… ಪೊಕ್ಕ ಪಜ್ಜೆಯಮ್ ಕಾಣೆನ್ ಎನೆ=ಸರೋವರದ ತೀರದಲ್ಲಿ ಒದ್ದೆಯಾಗಿರುವ ಮರಳುಮಿಶ್ರಿತ ಮಣ್ಣಿನ ನೆಲದ ಮೇಲೆ ಕೊಳದಿಂದ ಹೊರಕ್ಕೆ ಬಂದ ಹೆಜ್ಜೆಗಳ ಗುರುತು ಕಾಣಿಸಿತೇ ಹೊರತು ಕೊಳದ ಒಳಕ್ಕೆ ಹೋದ ಹೆಜ್ಜೆಗಳ ಗುರುತು ನನಗೆ ಕಾಣಲಿಲ್ಲ ಎಂದು ಹೇಳಲು;
ಪವನತನಯನ್ ಅವನನ್ ಒಡಗೊಂಡು ಬಂದು=ವಾಯುಪುತ್ರನಾದ ಬೀಮನು ಅವನನ್ನು ಜತೆಯಲ್ಲಿ ಕರೆದುಕೊಂಡು ಅಲ್ಲಿಂದ ಸರೋವರದತ್ತ ನಡೆದನು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು