ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 27ನೆಯ ಕಂತು

– ಸಿ.ಪಿ.ನಾಗರಾಜ.

*** ದುರ‍್ಯೋದನನ ಕಟ್ಟಕಡೆಯ ಆಸೆ ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನಾವಸಾನಂ’ ಎಂಬ ಹೆಸರಿನ 9 ನೆಯ ಅದ್ಯಾಯದ 9ನೆಯ ಗದ್ಯದಿಂದ 19ನೆಯ ಪದ್ಯ ಮತ್ತು ಗದ್ಯವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಯ ಹಿರಿಯ ಮಗ. ಹಸ್ತಿನಾವತಿಯ ರಾಜ.
ಅಶ್ವತ್ಥಾಮ: ದ್ರೋಣಾಚಾರ‍್ಯರ ಮಗ. ದುರ್‍ಯೋದನನ ಸೇನಾಬಲದಲ್ಲಿ ಪ್ರಮುಕನಾದ ವೀರ.
ಲಕ್ಷ್ಮಿ: ರಾಜ್ಯದ ಗದ್ದುಗೆ ಮತ್ತು ಸಂಪತ್ತಿನ ದೇವತೆ.
ಭೂದೇವಿ: ರಾಜನ ಆಳ್ವಿಕೆಗೆ ಒಳಪಟ್ಟ ಪ್ರಾಂತ್ಯದ ದೇವತೆ.

ದುರ್ಯೋಧನನ ಕಟ್ಟಕಡೆಯ ಆಸೆ

ಭೀಮಸೇನನ ಗದಾಘಾತದೊಳ್ ಊರುಭಂಗಮುಮ್… ಪದಾಘಾತದೊಳ್ ಮಕುಟಭಂಗಮುಮ್ ಆಗಿ… ಸುರುಳ್ದು ತೆರಳ್ದು ಸುಯೋಧನನಿರೆ… .ಕುರುರಾಜನ್ ತೊಡೆವೇನೆಗೆ ನರಳನೆ… ಕುರುವಾದ ತೊಡೆಯ ಬೇನೆಗೆ ಕಂಡರ್ ನರಳ್ವಂತೆ ಅರಸನ್ ನರಳದೆ… ವಿರೋಧಿಯಿಂದಾದ ಮಾನಹಾನಿಗೆ ನೊಂದನ್… ಅಂತಿರ್ದ ಕುರುನಂದನನನ್ ಗುರುನಂದನನ್ ನೋಡಿ…

ಅಶ್ವತ್ಥಾಮ: ಕುಳಿಕನ ಪಲ್ಗಳಮ್ ಮುರಿಯೆ ಮೋದಿದರ್ ಆರ್… ಸಿಂಹಮಮ್ ಪಿಡಿದೊತ್ತಿ ಮುಳಿಯಿಸಿ ದಾಡೆಯಮ್ ಪಿಡಿದು ಕಿಳ್ತವರ್ ಆರ್… ಮದಹಸ್ತಿಯಮ್

 ನೆರಂಗೊಳೆ ನೆಲಕಿಕ್ಕಿ ಕೋಡೆರಡುಮನ್ ಕುಸಿಯೊತ್ತಿದರ್ ಆರ್… ಸುರಾದ್ರಿ ನಿಶ್ಚಲ ನಿಬಿಡ ಊರು ಮಂಡಲಮನ್ ಆರ್ ಉಡಿದರ್. ಫಣಿರಾಜಕೇತನ, ಹಾ… ಕುರುವಂಶ ಮಹಾ ಕಮಲಾಕರ ಕಲಹಂಸ… ಹಾ… ಸಮುದ್ರಾಂತ ಧರಿತ್ರೀಕಾಂತ… ಹಾ… ಫಣೀಂದ್ರ ಪತಾಕಾ… ವಿಧಿವಶದೆ ನಿನಗಮ್ ಈ ಪರಿಯಾಯ್ತೇ.

(ಎಂದು ಗುರುನಂದನನ್ ವಿಪ್ರಳಾಪಮ್ ಗೆಯ್ದು… ತನ್ನ ಮೇಲುದರ ಸೆರಂಗಿಂದೆ ಆತನ ತಲೆಯ ಮೇಲೆ ಕೆದರಿರ್ದ ಭೀಮಸೇನನ ಚರಣರಜಮಮ್ ತೊಡೆದು ಕಳೆದು… ಮನದೊಳ್ ಕಟ್ಟುಕಡೆದು.)

ಅಶ್ವತ್ಥಾಮ: ಕುರುರಾಜಾ, ಎನ್ನನ್ ವಂಚಿಸಿ ಬಂದುದರಿನ್ ನಿನಗೆ ಇನಿತಾಯ್ತು ಅವಸ್ಥೆ. ನೀನ್ ಇನ್ನುಮ್ ಪ್ರತಿಕಾರಮನ್ ಅರಿಪೆ… ಎನ್ನನ್ ನೋಡು … ಎನ್ನ  ಶಕ್ತಿಯನ್… ಭಕ್ತಿಯುಮನ್.

(ಎಂದು ನುಡಿದ ಭಾರದ್ವಾಜ ತನೂಜನ ನುಡಿಗೆ ರಾಜರಾಜನ್ ಅವಧಾರಿಸಿ… )

ದುರ್ಯೋಧನ: ಹತದೇಹ… ಹತಭುಜದ್ವಯ… ಹತೋರು… ಹತಜೀವ… ಹತಕಿರೀಟಮ್… ಹತಹೃತ್ ಪ್ರತೀಕಾರಮ್ ಎಂಬುದುಂಟೇ… ತಾನ್ ಗತಿಯಮ್  ಸಾಧಿಸುವುದಲ್ತೆ ಪ್ರತೀಕಾರಮ್… ಅರಿ ಚರಣ ಪಾಂಸು ಶರೀರಮಮ್ ಪತ್ತಿರೆ ವಸ್ತ್ರಾಂಚಲದಿಮ್ ತೊಡೆದು ಕಳೆದೆ… ಗುರುನಂದನ, ನೀನ್  ಎನ್ನ ಪರಿಭವ ಪಾಂಸುವನ್ ಅದೆಂತು ಕಳೆದಪೆಯೋ ಪೇಳ್.

(ಎಂದು ಪರಮನಿರ್ವೇಗ ಪರಾಯಣನಾಗಿ ನುಡಿದು..)

ದುರ್ಯೋಧನ: (ತನ್ನ ಮನದಲ್ಲಿ)

 ಹರಿಯ ಅನುಬಲದಿಮ್ ಪಾಂಡವರ್ ಗೆಲಲ್ ಅರಿಯರ್. ಅಶ್ವತ್ಥಾಮನ್ ಈಶ್ವರಾಂಗನ್ ಪರಬಲಕೆ ಅಜೇಯನ್.

(ಎಂದು ಅಂತರಮನ್ ನೃಪನ್ ಅಂತರಂಗದೊಳ್ ಚಿಂತಿಸಿದನ್.)

ದುರ್ಯೋಧನ: ಇದುವಮ್ ನೋಡುವೆನ್ … ಇನ್ನುಮ್ ಎನ್ನ ಒಡಲೊಳ್ ಎನ್ನ ಈ ಪ್ರಾಣಮ್ ಉಳ್ಳನ್ನಮ್ ಓವದೆ… ಕೌಂತೇಯರನ್ ಇಕ್ಕಿ ಪಂದಲೆಗಳಮ್  ತಂದು ಎನ್ನ ಮುಂದಿಕ್ಕು. ಕೂರದ ದಾಯಾದರ ಮಿಕ್ಕ ಪಂದಲೆಗಳಮ್ ಕಣ್ಣಾರೆ ಕಂಡು… ಎನ್ನ ಚಿತ್ತದೊಳ್ ಒಂದುಮ್ ತೊದಳಿಲ್ಲದೆ  ಎನ್ನ ಅಸುಗಣಕ್ಕೆ ಉತ್ಕ್ರಾಂತಿಯಮ್ ಮಾಡುವೆನ್.

(ಎಂಬುದುಮ್ )

ಅಶ್ವತ್ಥಾಮ: ಅದಾವ ಗಹನಮ್ ಅಂತೆ ಗೆಯ್ವೆನ್.

(ಎಂದು ಪೂಣ್ದು… ಮಹೀಕಾಂತೆಯುಮನ್ ಶ್ರೀಕಾಂತೆಯುಮನ್ ಕಣ್ಗಿಡೆ ಜಡಿಯೆ..ಉರಗೇಂದ್ರ ಫಣಾಮಣಿ ನೂಪುರಮಣಿ ಜಲರಾಶಿ  ರತ್ನಮೇಖಲೆ ಎನಿಪ ಆ ಕುರುಧರೆ ಆ ಗುರುಸೂನುಗೆ ಅಳ್ಕಿ… ನಿಜರೂಪದೆ ಬಂದು… ಇರದೆ… )

ಭೂದೇವಿ: ಬೆಸನ್ ಏನ್.

 (ಎಂದಳ್.)

ಅಶ್ವತ್ಥಾಮ: ಆನ್ ಬರ್ಪಿನಮ್ ಕುರುವಂಶ ಉರ್ವೀಪತಿಗೆ … ಒರ್ವಳ್ ಕೊಡೆವಿಡಿವುದು… ಮತ್ತೊರ್ವಳ್ ಚಾಮರಮನ್ ಇಕ್ಕುತಿರ್ಪುದು… ಇರ್ವರುಮ್ ಇಂತು ಇರ್ಪುದು.

(ಎಂದನ್ ಅಶ್ವತ್ಥಾಮನ್. ಅಂತು ಅವರಮ್ ನಿಯೋಜಿಸಿ ನೇಸರ್ ಪಡುವಿನಮ್ ಇರ್ದು… ನಿಜಪತಿಯನ್ ಬೀಳ್ಕೊಂಡು)

ಪದ ವಿಂಗಡಣೆ ಮತ್ತು ತಿರುಳು: ದುರ್‍ಯೋದನನ ಕಟ್ಟಕಡೆಯ ಆಸೆ

ಗದಾ+ಆಘಾತದ+ಒಳ್; ಆಘಾತ=ಹೊಡೆತ/ಪೆಟ್ಟು; ಊರು=ತೊಡೆ; ಭಂಗ=ಮುರಿಯುವಿಕೆ;

ಭೀಮಸೇನನ ಗದಾಘಾತದೊಳ್ ಊರುಭಂಗಮುಮ್=ಬೀಮಸೇನನ ಗದೆಯ ಹೊಡೆತದಿಂದ ತೊಡೆ ಮುರಿದು;

ಪದ+ಆಘಾತದ+ಒಳ್; ಪದ=ಪಾದ; ಮಕುಟ=ಕಿರೀಟ;

ಪದಾಘಾತದೊಳ್ ಮಕುಟಭಂಗಮುಮ್ ಆಗಿ=ಬೀಮಸೇನನ ಪಾದದ ಒದೆತದಿಂದ ಕಿರೀಟ ತುಂಡುತುಂಡಾಗಿ;

ಸುರುಳ್=ಕೆಡೆ/ಬೀಳು; ತೆರಳ್=ಮುದುಡು/ಮುರುಟಿಕೊಳ್ಳು;

ಸುರುಳ್ದು ತೆರಳ್ದು ಸುಯೋಧನನಿರೆ=ದುರ್‍ಯೋದನನು ನೆಲದ ಮೇಲೆ ಉರುಳಿ, ಮುದುಡಿಕೊಂಡು ಬಿದ್ದಿರಲು;

ತೊಡೆ+ಬೇನೆಗೆ; ಬೇನೆ=ನೋವು/ಯಾತನೆ;

ಕುರುರಾಜನ್ ತೊಡೆವೇನೆಗೆ ನರಳನೆ=ಕುರುರಾಜನು ತೊಡೆಮುರಿತದಿಂದ ಉಂಟಾಗಿರುವ ಯಾತನೆಗಾಗಿ ನರಳುತ್ತಿರುವನೇ… ಇಲ್ಲ;

ಕುರು+ಆದ; ಕುರು=ಗಾಯ; ಕಂಡರ್=ಇತರರು;

ಕುರುವಾದ ತೊಡೆಯ ಬೇನೆಗೆ ಕಂಡರ್ ನರಳ್ವಂತೆ ಅರಸನ್ ನರಳದೆ … ವಿರೋಧಿಯಿಂದಾದ ಮಾನಹಾನಿಗೆ ನೊಂದನ್=ಗಾಯಗೊಂಡ ತೊಡೆಯ ಯಾತನೆಗೆ ಇತರರು ನರಳುವಂತೆ ದುರ್‍ಯೋದನನು ನರಳದೆ, ಹಗೆಯಾದ ಬೀಮಸೇನನಿಂದ ಉಂಟಾದ ಮಾನಹಾನಿಗೆ ನೊಂದನು;

ಅಂತು+ಇರ್ದ; ನಂದನ=ಮಗ; ಕುರುನಂದನ=ದುರ್ಯೋದನ; ಗುರುನಂದನ=ಅಶ್ವತ್ತಾಮ;

ಅಂತಿರ್ದ ಕುರುನಂದನನನ್ ಗುರುನಂದನನ್ ನೋಡಿ=ಆ ರೀತಿ ವೈಶಂಪಾಯನ ಸರೋವರದ ತೀರದ ರಣರಂಗದಲ್ಲಿ ತೊಡೆಮುರಿದು ನೆಲದ ಮೇಲೆ ಉರುಳಿಬಿದ್ದು, ದೇಹದ ಯಾತನೆಗಿಂತ ಹೆಚ್ಚಾಗಿ ಮಾನಸಿಕವಾಗಿ ಗಾಸಿಗೊಂಡು ನರಳುತ್ತಿರುವ ದುರ್‍ಯೋದನನನ್ನು ಅಶ್ವತ್ತಾಮನು ನೋಡಿ;

ಕುಳಿಕ=ವಿಶದ ಹಾವು; ಪಲ್+ಗಳ್+ಅಮ್; ಪಲ್=ಹಲ್ಲು; ಮೋದು=ಹೊಡೆ/ ಅಪ್ಪಳಿಸು;

ಕುಳಿಕನ ಪಲ್ಗಳಮ್ ಮುರಿಯೆ ಮೋದಿದರ್ ಆರ್=ವಿಶದ ಹಾವಿನ ಹಲ್ಲುಗಳು ಮುರಿದುಹೋಗುವಂತೆ ಹೊಡೆದವರು ಯಾರು;

ಪಿಡಿದು+ಒತ್ತಿ; ದಾಡೆ=ಹಲ್ಲು; ಮುಳಿಯಿಸು=ಕೆರಳಿಸು/ರೊಚ್ಚಿಗೆಬ್ಬಿಸು;

ಸಿಂಹಮಮ್ ಪಿಡಿದೊತ್ತಿ ಮುಳಿಯಿಸಿ ದಾಡೆಯಮ್ ಪಿಡಿದು ಕಿಳ್ತವರ್ ಆರ್=ಸಿಂಹವನ್ನು ಹಿಡಿದು ಅದುಮಿಕೊಂಡು ಕೆರಳಿಸಿ, ಅದರ ಹಲ್ಲುಗಳನ್ನು ಹಿಡಿದು ಕಿತ್ತವರು ಯಾರು;

ಹಸ್ತಿ=ಆನೆ; ಮದಹಸ್ತಿ=ಸೊಕ್ಕಿದ ಆನೆ; ನೆರಂಗೊಳ್=ಮರ್ಮಸ್ತಾನಕ್ಕೆ ಪೆಟ್ಟು ಬೀಳುವಂತೆ; ಕೋಡು+ಎರಡುಮನ್; ಕೋಡು=ಕೊಂಬು/ಆನೆಯ ದಂತ; ಕುಸಿ+ಒತ್ತಿದರ್; ಕುಸಿ=ಬಾಗಿಸು/ಕುಗ್ಗು;

 ಮದಹಸ್ತಿಯಮ್ ನೆರಂಗೊಳೆ ನೆಲಕಿಕ್ಕಿ ಕೋಡೆರಡುಮನ್ ಕುಸಿಯೊತ್ತಿದರ್ ಆರ್=ಸೊಕ್ಕಿದ ಆನೆಯನ್ನು ಮರ್ಮಸ್ತಾನಕ್ಕೆ ಪೆಟ್ಟು ಬೀಳುವಂತೆ ಹೊಡೆದು, ನೆಲದ ಮೇಲೆ ಕೆಡವಿಕೊಂಡು, ಅದರ ಎರಡು ದಂತಗಳನ್ನು ಬಗ್ಗುವಂತೆ ಒತ್ತಿದವರು ಯಾರು;

ಫಣಿ=ಹಾವು; ಫಣಿರಾಜ=ಹಾವುಗಳ ಒಡೆಯ ಆದಿಶೇಶ; ಕೇತನ=ಬಾವುಟ; ಫಣಿರಾಜಕೇತನ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗುಳ್ಳವನು/ದುರ್‍ಯೋದನ; ಸುರ+ಅದ್ರಿ; ಸುರ=ದೇವತೆ; ಅದ್ರಿ=ಬೆಟ್ಟ/ಪರ್‍ವತ; ಸುರಾದ್ರಿ=ಮೇರು ಪರ್‍ವತ; ನಿಶ್ಚಲ=ಅಲುಗಾಡದೆ ಇರುವುದು; ನಿಬಿಡ=ದಟ್ಟವಾದುದು; ಊರು=ತೊಡೆ; ಮಂಡಲ=ದೇಹದ ಒಂದು ಅಂಗ; ಉಡಿ=ಮುರಿ/ಮುರಿದು ಹಾಕು;

ಫಣಿರಾಜಕೇತನಾ, ಸುರಾದ್ರಿ ನಿಶ್ಚಲ ನಿಬಿಡ ಊರು ಮಂಡಲಮನ್ ಆರ್ ಉಡಿದರ್=ಪಣಿರಾಜಕೇತನಾ, ಮೇರು ಪರ್‍ವತದಂತೆ ಅಚಲವಾಗಿಯೂ ದೊಡ್ಡದಾಗಿಯೂ ಇದ್ದ ನಿನ್ನ ತೊಡೆಗಳನ್ನು ಯಾರು ಮುರಿದರು;

ಕಮಲ+ಆಕರ; ಆಕರ=ಹುಟ್ಟುವ ಜಾಗ; ಕಮಲಾಕರ=ಕಮಲಗಳು ಹುಟ್ಟುವ ಜಾಗ/ಸರೋವರ; ಕಲಹಂಸ=ಬೂದು ಬಣ್ಣದ ರೆಕ್ಕೆಗಳಿರುವ ಹಂಸವೆಂಬ ಹಕ್ಕಿ; ಸಮುದ್ರ+ಅಂತ; ಅಂತ=ಕೊನೆ; ಧರಿತ್ರೀ=ಬೂಮಿ; ಕಾಂತ=ಒಡೆಯ; ಫಣೀಂದ್ರ=ಆದಿಶೇಶ; ವಿದಿ ವಶ=ಹಣೆ ಬರಹದ ಕಾರಣದಿಂದಾಗಿ; ಮಗುವೊಂದು ಹುಟ್ಟಿದಾಗಲೇ ಅದರ ಜೀವನದಲ್ಲಿ ಏನೇನಾಗಬೇಕು ಎಂಬುದನ್ನು ಹಣೆಯಲ್ಲಿ ಬರೆದಿರುತ್ತದೆ ಎಂಬ ನಂಬಿಕೆಯು ಜನಮನದಲ್ಲಿದೆ. ಇದನ್ನು ವಿದಿ ಬರಹ/ಹಣೆ ಬರಹ ಎನ್ನುತ್ತಾರೆ; ವಿಪ್ರಲಾಪ=ಗೋಳಾಡುವುದು/ಅಳುವುದು;

 ಹಾ… ಕುರುವಂಶ ಮಹಾ ಕಮಲಾಕರ ಕಲಹಂಸ… ಹಾ… ಸಮುದ್ರಾಂತ ಧರಿತ್ರೀಕಾಂತ… ಹಾ… ಫಣೀಂದ್ರ ಪತಾಕಾ… ವಿಧಿವಶದೆ ನಿನಗಮ್ ಈ ಪರಿಯಾಯ್ತೇ ಎಂದು ಗುರುನಂದನನ್ ವಿಪ್ರಳಾಪಮ್ ಗೆಯ್ದು=ಅಯ್ಯೋ… ಕುರುವಂಶವೆಂಬ ದೊಡ್ಡ ಸರೋವರದಲ್ಲಿ ಕಲಹಂಸನಂತೆ ವಿಹರಿಸುತ್ತಿದ್ದವನೇ… .ಸಮುದ್ರದ ಕೊನೆಯವರೆಗೆ ಹಬ್ಬಿರುವ ಬೂಮಂಡಲಕ್ಕೆ ಒಡೆಯನಾದವನೇ… .ಅಯ್ಯೋ… .ಆದಿಶೇಶನ ಚಿತ್ರವನ್ನು ಬಾವುಟವನ್ನಾಗಿ ಉಳ್ಳ ರಾಜನೇ… ಕೆಟ್ಟ ಹಣೆಬರಹದ ಕಾರಣದಿಂದಾಗಿ… ನಿನ್ನಂತಹ ಮಹಾ ವ್ಯಕ್ತಿಗೂ ಇಂತಹ ದುರಂತದ ಗತಿ ಬಂದಿತೇ ಎಂದು ಅಶ್ವತ್ತಾಮನು ಗೋಳಾಡುತ್ತ;

ಮೇಲುದ=ಮಯ್ ಮೇಲೆ ಹೊದ್ದುಕೊಳ್ಳುವ ಬಟ್ಟೆ/ಶಲ್ಯ/ಉತ್ತರೀಯ ; ಸೆರಗು=ಅಂಚು/ತುದಿ; ಕೆದರಿ+ಇರ್ದ; ಕೆದರು=ಹರಡು ; ಚರಣ=ಪಾದ; ರಜ=ದೂಳು; ತೊಡೆ=ಒರೆಸು; ಕಟ್ಟುಕಡೆ=ಅತಿಯಾಗಿ ಸಂಕಟಪಡು;

ತನ್ನ ಮೇಲುದರ ಸೆರಂಗಿಂದೆ ಆತನ ತಲೆಯ ಮೇಲೆ ಕೆದರಿರ್ದ ಭೀಮಸೇನನ ಚರಣರಜಮಮ್ ತೊಡೆದು ಕಳೆದು, ಮನದೊಳ್ ಕಟ್ಟುಕಡೆದು=ಅಶ್ವತ್ತಾಮನು ತನ್ನ ಶಲ್ಯದ ಅಂಚಿನಿಂದ ದುರ್‍ಯೋದನನ ತಲೆಯ ಮೇಲೆ ಮೆತ್ತಿಕೊಂಡಿದ್ದ ಬೀಮಸೇನನ ಕಾಲಿನ ದೂಳನ್ನು ಒರೆಸಿ ತೆಗೆದು , ಮನದಲ್ಲಿ ಅತಿಹೆಚ್ಚಿನ ಸಂಕಟದಿಂದ ಮರುಗುತ್ತ;

ವಂಚಿಸು=ಮರೆಮಾಚು/ಮುಚ್ಚು/ಅಡಗಿಸು;

ಕುರುರಾಜಾ, ಎನ್ನನ್ ವಂಚಿಸಿ ಬಂದುದರಿನ್ ನಿನಗೆ ಇನಿತಾಯ್ತು ಅವಸ್ಥೆ=ಕುರುರಾಜಾ, ನನಗೆ ತಿಳಿಸದೆ ಬಂದುದರಿಂದ ನಿನಗೆ ಈ ರೀತಿಯ ದುರಂತವುಂಟಾಯಿತು;

ಪ್ರತಿಕಾರಮ್+ಅನ್; ಪ್ರತಿಕಾರ=ಸೇಡಿಗೆ ಸೇಡು/ಮುಯ್ಯಿಗೆ ಮುಯ್ಯಿ; ಅರಿಪು=ತಿಳಿಸು/ಬಿನ್ನವಿಸು/ಅರಿಕೆ ಮಾಡಿಕೊಳ್ಳು;

ನೀನ್ ಇನ್ನುಮ್ ಪ್ರತಿಕಾರಮನ್ ಅರಿಪೆ=ನೀನು ಈಗಲೂ ಆ ಪಾಂಡವರ ಮೇಲೆ ಸೇಡನ್ನು ತೀರಿಸಿಕೊಳ್ಳಬೇಕೆಂದು ಹಂಬಲಿಸುತ್ತಿರುವೆಯಾದರೆ, ಅದನ್ನು ನನಗೆ ತಿಳಿಸು;

ಭಕ್ತಿ+ಉಮ್+ಅನ್; ಭಕ್ತಿ=ದೇವರು, ಗುರುಹಿರಿಯರು ಮತ್ತು ತಂದೆತಾಯಿಯರಲ್ಲಿ ತೋರುವ ನಂಬಿಕೆ/ವಿಶ್ವಾಸ;

ಎನ್ನನ್ ನೋಡು… ಎನ್ನ ಶಕ್ತಿಯನ್ ಭಕ್ತಿಯುಮನ್ =ನನ್ನನ್ನು ನೋಡು. ನನ್ನ ಮೂಲಕ ಆ ಸೇಡನ್ನು ತೀರಿಸಿಕೊ. ನನ್ನ ಶಕ್ತಿಯನ್ನು ಮತ್ತು ನಾನು ನಿನ್ನಲ್ಲಿ ಇಟ್ಟಿರುವ ವಿಶ್ವಾಸವನ್ನು ನೋಡು;

ಭಾರದ್ವಾಜ=ದ್ರೋಣ; ತನೂಜ=ಮಗ; ಅವಧಾರಿಸು=ಮನಸ್ಸಿಟ್ಟು ಕೇಳು;

ಎಂದು ನುಡಿದ ಭಾರದ್ವಾಜ ತನೂಜನ ನುಡಿಗೆ ರಾಜರಾಜನ್ ಅವಧಾರಿಸಿ=ಎಂದು ನುಡಿದ ಅಶ್ವತ್ತಾಮನ ಮಾತನ್ನು ದುರ್‍ಯೋದನನು ಮನಗೊಟ್ಟು ಕೇಳಿಸಿಕೊಂಡು ಈ ರೀತಿ ನುಡಿಯತೊಡಗುತ್ತಾನೆ;

ಹತ=ಹೊಡೆದ/ ಗಾಯಗೊಳಿಸಿದ/ಮುರಿದ/ಚಿದ್ರಗೊಂಡ/ತೊಂದರೆಗೊಳಗಾದ; ಹೃತ್=ಮನಸ್ಸು/ಹೃದಯ;

ಹತದೇಹ… ಹತಭುಜದ್ವಯ… ಹತೋರು… ಹತಜೀವ… ಹತಕಿರೀಟಮ್… ಹತಹೃತ್ ಪ್ರತೀಕಾರಮ್ ಎಂಬುದುಂಟೇ=ಗಾಯಗೊಂಡ ದೇಹ… ಮುರಿದಿರುವ ಎರಡು ತೋಳುಗಳು… ತುಂಡಾಗಿರುವ ತೊಡೆಗಳು… ಸಂಕಟದಿಂದ ಪರಿತಪಿಸುತ್ತಿರುವ ಜೀವ … ಚೂರುಚೂರಾಗಿರುವ ಕಿರೀಟ… ಗಾಸಿಗೊಂಡಿರುವ ಮನಸ್ಸಿನ ನನ್ನ ಪಾಲಿಗೆ ಪ್ರತೀಕಾರ ಎನ್ನುವುದಾದರೂ ಇದೆಯೇ;

ತಾನ್ ಗತಿಯಮ್ ಸಾಧಿಸುವುದಲ್ತೆ ಪ್ರತೀಕಾರಮ್=ಇನ್ನೇನಿದ್ದರೂ ಸತ್ತು ಸದ್ಗತಿಯನ್ನು ಪಡೆಯುವುದಲ್ಲವೇ ನಾನು ಮಾಡಬೇಕಾಗಿರುವ ಕೆಲಸ;

ಅರಿ=ಶತ್ರು/ಹಗೆ; ಚರಣ=ಪಾದ; ಪಾಂಸು= ದೂಳು/ಮಣ್ಣಿನ ಹುಡಿ; ಪತ್ತು=ಅಂಟಿಕೊಂಡಿರು/ಮೆತ್ತು; ವಸ್ತ್ರ+ಅಂಚಲದ+ಇಮ್; ವಸ್ತ್ರ=ಬಟ್ಟೆ; ಅಂಚಲ=ತುದಿ/ಸೆರಗು; ತೊಡೆ=ಒರಸು; ಕಳೆ=ನಿವಾರಿಸು;

ಗುರುನಂದನ, ಅರಿ ಚರಣ ಪಾಂಸು ಶರೀರಮಮ್ ಪತ್ತಿರೆ ವಸ್ತ್ರಾಂಚಲದಿಮ್ ತೊಡೆದು ಕಳೆದೆ=ಅಶ್ವತ್ತಾಮನೇ, ಹಗೆಯಾದ ಬೀಮನ ಪಾದದ ದೂಳು ನನ್ನ ದೇಹಕ್ಕೆ ಮೆತ್ತಿಕೊಂಡಿರಲು, ಅದನ್ನು ನಿನ್ನ ಶಲ್ಯದ ಸೆರಗಿನಿಂದ ಒರೆಸಿ ಹೋಗಲಾಡಿಸಿದೆ;

ಪರಿಭವ=ಸೋಲು/ಅಪಮಾನ; ಪರಮ=ಬಹಳ/ಅತಿ ಹೆಚ್ಚಿನ; ನಿರ್ವೇಗ=ವಿರಕ್ತಿ/ಯಾವದೇ ಆಸೆಗಳಿಲ್ಲದಿರುವುದು; ಪರಾಯಣನ್+ಆಗಿ; ಪರಾಯಣ=ಹೆಚ್ಚಿನ ಆಸಕ್ತಿಯುಳ್ಳವನು/ಗಮನವುಳ್ಳವನು;

ನೀನ್ ಎನ್ನ ಪರಿಭವ ಪಾಂಸುವನ್ ಅದೆಂತು ಕಳೆದಪೆಯೋ ಪೇಳ್ ಎಂದು ಪರಮನಿರ್ವೇಗ ಪರಾಯಣನಾಗಿ ನುಡಿದು=ಹಗೆಯಿಂದ ಉಂಟಾಗಿರುವ ಅಪಮಾನ ಮತ್ತು ಸೋಲಿನ ದೂಳನ್ನು ಅಂದರೆ ಕೆಟ್ಟ ಹೆಸರನ್ನು ಅದು ಹೇಗೆ ಹೋಗಲಾಡಿಸುತ್ತೀಯೇ ಹೇಳು ಎಂದು ದುರ್‍ಯೋದನನು ಬಹಳ ವಿರಕ್ತಿಯಲ್ಲಿ ಮುಳುಗಿದವನಾಗಿ ನುಡಿದು, ಮತ್ತೆ ತನ್ನ ಮನದಲ್ಲಿ ಈ ರೀತಿ ಆಲೋಚಿಸುತ್ತಾನೆ;

ಹರಿ=ಕ್ರಿಶ್ಣ; ಅನುಬಲ=ಒತ್ತಾಸೆ/ಬೆಂಬಲ/ಸಹಾಯ; ಅರಿದು=ಅಸಾದ್ಯವಾದ;

ಹರಿಯ ಅನುಬಲದಿಮ್ ಪಾಂಡವರ್ ಗೆಲಲ್ ಅರಿಯರ್=ಕ್ರಿಶ್ಣನ ಬೆಂಬಲವುಳ್ಳ ಪಾಂಡವರನ್ನು ಗೆಲ್ಲುವುದಕ್ಕೆ ಯಾರಿಂದಲೂ ಆಗುವುದಿಲ್ಲ;

ಈಶ್ವರ+ಅಂಗನ್;

ಅಶ್ವತ್ಥಾಮನ್ ಈಶ್ವರಾಂಗನ್=ಅಶ್ವತ್ತಾಮನಾದರೋ ಈಶ್ವರನ ರುದ್ರಾವತಾರದ ಅಂಶವನ್ನುಳ್ಳವನು; ಈ ಬಗೆಯ ದಂತಕತೆಯೊಂದು ಅಶ್ವತ್ತಾಮನ ಹುಟ್ಟಿನ ಹಿನ್ನೆಲೆಯಲ್ಲಿದೆ;

ಅಂತರ=ವ್ಯತ್ಯಾಸ; ಪರಬಲ=ಶತ್ರುಸೇನೆ; ಅಜೇಯನ್=ಸೋಲದವನು; ಅಂತರ=ವ್ಯತ್ಯಾಸ;

ಪರಬಲಕೆ ಅಜೇಯನ್ ಎಂದು ಅಂತರಮನ್ ನೃಪನ್ ಅಂತರಂಗದೊಳ್ ಚಿಂತಿಸಿದನ್=ಶತ್ರುಸೇನೆಯಿಂದ ರುದ್ರನ ಅಂಶವನ್ನೊಳಗೊಂಡ ಅಶ್ವತ್ತಾಮನನ್ನು ಸೋಲಿಸಲಾಗದು ಎಂದು ತನ್ನ ಕಡೆಯ ಇನ್ನಿತರ ಕಾದಾಳುಗಳಿಗೂ ಮತ್ತು ಅಶ್ವತ್ಥಾಮನಿಗೂ ಶಕ್ತಿಯಲ್ಲಿರುವ ವ್ಯತ್ಯಾಸವನ್ನು ದುರ್‍ಯೋದನನು ತನ್ನ ಮನದೊಳಗೆ ಚಿಂತಿಸಿದನು. ಈಗ ಮತ್ತೆ ಅಶ್ವತ್ತಾಮನನ್ನು ಕುರಿತು ದುರ್‍ಯೋದನನು ಈ ರೀತಿ ನುಡಿಯತೊಡಗುತ್ತಾನೆ;

ಇದುವಮ್ ನೋಡುವೆನ್=ಪಾಂಡವರ ನಾಶಕ್ಕಾಗಿ ನೀನು ಮಾಡುವ ಹೋರಾಟವನ್ನು ನೋಡಿಯೇ ಬಿಡುತ್ತೇನೆ;

ಒಡಲ=ದೇಹ/ಶರೀರ; ಕೌಂತೇಯರು=ಕುಂತಿಯ ಮಕ್ಕಳು; ಪಂದಲೆ=ರಕ್ತ ಬಸಿಯುತ್ತಿರುವ ತಲೆ/ಆಗ ತಾನೇ ಕತ್ತರಿಸಿದ ತಲೆಯಿಂದ ರಕ್ತ ತೊಟ್ಟಿಕ್ಕುತ್ತಿರುವುದು; ಓವು=ಕರುಣೆ/ದಯೆ;

ಇನ್ನುಮ್ ಎನ್ನ ಒಡಲೊಳ್ ಎನ್ನ ಈ ಪ್ರಾಣಮ್ ಉಳ್ಳನ್ನಮ್ ಕೌಂತೇಯರನ್ ಓವದೆ ಇಕ್ಕಿ ಪಂದಲೆಗಳಮ್ ತಂದು ಎನ್ನ ಮುಂದಿಕ್ಕು=ಇನ್ನು ನನ್ನ ಒಡಲಿನಲ್ಲಿ ಜೀವ ಇರುವುದರ ಒಳಗೆ ಕುಂತಿಯ ಮಕ್ಕಳನ್ನು ಕರುಣೆಯಿಲ್ಲದೆ ಕೊಂದು, ನೆತ್ತರು ತೊಟ್ಟಿಕ್ಕುತ್ತಿರುವ ಹಸಿತಲೆಗಳನ್ನು ತಂದು ನನ್ನ ಮುಂದಿಡು;

ಕೂರದ=ಹಗೆಗಳಾದ; ಮಿಗು=ಉಳಿದ/ಸೋಲಿಸು;

ಕೂರದ ದಾಯಾದರ ಮಿಕ್ಕ ಪಂದಲೆಗಳಮ್ ಕಣ್ಣಾರೆ ಕಂಡು=ಹಗೆಗಳಾದ ದಾಯಾದಿಗಳ ನೆತ್ತರು ಸೋರುತ್ತಿರುವ ತಲೆಗಳನ್ನು ಕಣ್ಣಾರೆ ನೋಡಿ;

ಚಿತ್ತ=ಮನಸ್ಸು; ತೊದಳ್+ಇಲ್ಲದೆ; ತೊದಳ್=ಶಂಕೆ/ಸಂಶಯ; ತೊದಳಿಲ್ಲದೆ=ನಿಶ್ಚಿಂತೆಯಿಂದ; ಅಸು=ಜೀವ/ಪ್ರಾಣ/ಉಸಿರು; ಗಣ=ಗುಂಪು; ಅಸುಗಣ=ಜೀವಂತವಾದ ಶರೀರದಲ್ಲಿ ಅಯ್ದು ಬಗೆಗಳಲ್ಲಿ ಗಾಳಿಯ ಸಂಚಾರವಿರುತ್ತದೆ; ಉತ್ಕ್ರಾಂತಿ=ಬಿಟ್ಟುಹೋಗುವಿಕೆ/ಹೊರಟುಹೋಗುವಿಕೆ;

ಎನ್ನ ಚಿತ್ತದೊಳ್ ಒಂದುಮ್ ತೊದಳಿಲ್ಲದೆ ಎನ್ನ ಅಸುಗಣಕ್ಕೆ ಉತ್ಕ್ರಾಂತಿಯಮ್ ಮಾಡುವೆನ್ ಎಂಬುದುಮ್=ನನ್ನ ಮನದಲ್ಲಿ ಯಾವುದೇ ಒಂದು ನೋವಿಲ್ಲದೆ ನಿಶ್ಚಿಂತೆಯಿಂದ ನನ್ನ ಜೀವವನ್ನು ಬಿಡುತ್ತೇನೆ ಎಂದು ದುರ್‍ಯೋದನನು ತನ್ನ ಜೀವನದ ಕಟ್ಟಕಡೆಯ ಆಸೆಯನ್ನು ಹೇಳಿಕೊಳ್ಳಲು;

ಅದು+ಆವ; ಆವ=ಯಾವ; ಗಹನ=ದೊಡ್ಡದಾದ/ಅಸಾದ್ಯವಾದ; ಪೂಣ್=ಮಾತು ಕೊಡು/ವಚನ ಕೊಡು;

ಅದಾವ ಗಹನಮ್ ಅಂತೆ ಗೆಯ್ವೆನ್ ಎಂದು ಪೂಣ್ದು=ಅದಾವ ದೊಡ್ಡ ಸಂಗತಿ. ಒಡೆಯನಾದ ನೀನು ಹೇಳಿದಂತೆ ಮಾಡುತ್ತೇನೆ ಎಂದು ಮಾತು ಕೊಟ್ಟು;

ಮಹೀಕಾಂತೆ=ಬೂದೇವಿ; ಶ್ರೀಕಾಂತೆ=ಲಕ್ಶಿ ದೇವಿ/ಶ್ರೀದೇವಿ; ಕಣ್+ಕಿಡೆ; ಕಣ್ಗಿಡು=ಕಂಗೆಡು/ಕಕ್ಕಾಬಿಕ್ಕಿಯಾಗು/ ಗಾಬರಿಯಾಗು; ಜಡಿ=ಗದರಿಸು/ಬೆದರಿಸು;

ಮಹೀಕಾಂತೆಯುಮನ್ ಶ್ರೀಕಾಂತೆಯುಮನ್ ಕಣ್ಗಿಡೆ ಜಡಿಯೆ=ಬೂದೇವಿ ಮತ್ತು ಶ್ರೀದೇವಿಯರನ್ನು ಕಂಗೆಡುವಂತೆ ಗದರಿಸಿ;

ಉರಗ+ಇಂದ್ರ; ಉರಗ=ಹಾವು; ಇಂದ್ರ=ಒಡೆಯ; ಉರಗೇಂದ್ರ=ಹಾವುಗಳ ಒಡೆಯನಾದ ಆದಿಶೇಶ; ಫಣಾಮಣಿ=ಹಣೆಯಲ್ಲಿರುವ ರತ್ನ; ನೂಪುರ=ಕಾಲಂದುಗೆ; ನೂಪುರಮಣಿ=ಕಾಲಂದುಗೆಯ ರತ್ನ; ಜಲರಾಶಿ=ಸಮುದ್ರ; ಮೇಖಲೆ=ಡಾಬು; ಕುರುಧರೆ=ಕುರುವಂಶಕ್ಕೆ ಸೇರಿದ ಬೂದೇವಿ; ಗುರುಸೂನು=ಗುರುಪುತ್ರನಾದ ಅಶ್ವತ್ತಾಮ; ಅಳ್ಕು=ಹೆದರು;

ಉರಗೇಂದ್ರ ಫಣಾಮಣಿ ನೂಪುರಮಣಿ ಜಲರಾಶಿ ರತ್ನಮೇಖಲೆ ಎನಿಪ ಆ ಕುರುಧರೆ ಆ ಗುರುಸೂನುಗೆ ಅಳ್ಕಿ… ನಿಜರೂಪದೆ ಬಂದು… ಇರದೆ=ಆದಿಶೇಶನ ಹಣೆಯ ರತ್ನವನ್ನೇ ತನ್ನ ಕಾಲಂದುಗೆಯ ರತ್ನದ ಒಡವೆಯಾಗಿ ಮತ್ತು ಕಡಲನ್ನೇ ರತ್ನದ ಡಾಬನ್ನಾಗಿ ತೊಟ್ಟಿರುವ ಆ ಕುರುನಾಡಿನ ಬೂದೇವಿಯು ತನ್ನ ಮುಂದೆ ಅಬ್ಬರಿಸುತ್ತಿರುವ ಅಶ್ವತ್ತಾಮನಿಗೆ ಹೆದರಿ, ದೇವತೆಯ ರೂಪದಲ್ಲಿ ಅವನ ಮುಂದೆ ಬಂದು, ಸುಮ್ಮನೆ ನಿಲ್ಲದೆ ಆತನನ್ನು ಕೇಳುತ್ತಾಳೆ;

ಬೆಸನ್ ಏನ್ ಎಂದಳ್=ನನ್ನಿಂದಾಗಬೇಕಾದ ಕೆಲಸವೇನು ಎಂದು ಕೇಳಿದಳು;

ಆನ್ ಬರ್ಪಿನಮ್ ಕುರುವಂಶ ಉರ್ವೀಪತಿಗೆ… ಒರ್ವಳ್ ಕೊಡೆವಿಡಿವುದು… ಮತ್ತೊರ್ವಳ್ ಚಾಮರಮನ್ ಇಕ್ಕುತಿರ್ಪುದು… ಇರ್ವರುಮ್ ಇಂತು ಇರ್ಪುದು ಎಂದನ್ ಅಶ್ವತ್ಥಾಮನ್=ಆಗ ಅಶ್ವತ್ತಾಮನು ಬೂದೇವಿ ಮತ್ತು ಶ್ರೀದೇವಿಗೆ ಈ ರೀತಿ ಆದೇಶಿಸುತ್ತಾನೆ . “ನಾನು ಹಿಂತಿರುಗಿ ಬರುವ ತನಕ ಕುರುರಾಜನಾದ ದುರ್‍ಯೋದನನಿಗೆ ನಿಮ್ಮಿಬ್ಬರಲ್ಲಿ ಒಬ್ಬಳು ಬೆಳ್ಗೊಡೆಯನ್ನು ಹಿಡಿದುಕೊಂಡಿರುವುದು… ಮತ್ತೊಬ್ಬಳು ಚಾಮರವನ್ನು ಬೀಸುತ್ತಿರುವುದು… ಇಬ್ಬರೂ ನಾನು ಹೇಳಿದಂತೆ ನಡೆದುಕೊಳ್ಳುವುದು.”

ನಿಯೋಜಿಸು=ನೇಮಿಸು; ನೇಸರ್=ಸೂರ್‍ಯ; ಪಡು=ಪಶ್ಚಿಮ ದಿಕ್ಕು; ನಿಜಪತಿ=ತನ್ನ ಒಡೆಯನಾದ ದುರ್‍ಯೋದನ;

ಅಂತು ಅವರಮ್ ನಿಯೋಜಿಸಿ ನೇಸರ್ ಪಡುವಿನಮ್ ಇರ್ದು ನಿಜಪತಿಯನ್ ಬೀಳ್ಕೊಂಡು=ಅಶ್ವತ್ತಾಮನು ಆ ರೀತಿ ಅವರಿಬ್ಬರನ್ನು ನೇಮಿಸಿ, ಸೂರ್‍ಯನು ಪಶ್ಚಿಮದ ದಿಕ್ಕಿನಲ್ಲಿ ಮರೆಯಾಗುವ ತನಕ ದುರ್‍ಯೋದನನ ಬಳಿಯಲ್ಲಿದ್ದು, ಅನಂತರ ದುರ್‍ಯೋದನನಿಂದ ಬೀಳ್ಕೊಂಡು… ಹಸ್ತಿನಾವತಿಯತ್ತ ನಡೆದನು;

(ಚಿತ್ರಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *