ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 29ನೆಯ ಕಂತು

– ಸಿ.ಪಿ.ನಾಗರಾಜ.

*** ಬೀಮಸೇನನ ಪಟ್ಟಾಬಿಶೇಕ ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಮಸೇನ ಪಟ್ಟಬಂಧಂ’ ಎಂಬ ಹೆಸರಿನ 10ನೆಯ ಅದ್ಯಾಯದ 1ನೆಯ ಪದ್ಯದಿಂದ 15ನೆಯ ಪದ್ಯವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ಕ್ರಿಶ್ಣ: ದೇವಕಿ ಮತ್ತು ವಸುದೇವ ದಂಪತಿಯ ಮಗ. ದ್ವಾರಾವತಿ ಪಟ್ಟಣದ ಒಡೆಯ. ಪಾಂಡವರ ಹಿತಚಿಂತಕ.
ಬಾನುಮತಿ: ದುರ‍್ಯೋದನನ ಮೊದಲನೆಯ ಹೆಂಡತಿ.
ಚಂದ್ರಮತಿ: ದುರ‍್ಯೋದನನ ಎರಡನೆಯ ಹೆಂಡತಿ.
ಗಾಂದಾರಿ: ದ್ರುತರಾಶ್ಟ್ರನ ಹೆಂಡತಿ. ದುರ‍್ಯೋದನನ ತಾಯಿ.
ದ್ರುತರಾಶ್ಟ್ರ: ಕುರುವಂಶದ ರಾಜ. ದುರ‍್ಯೋದನನ ತಂದೆ.
ಬೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ದರ‍್ಮರಾಯ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ಕುಂತಿ: ಪಾಂಡುರಾಜನ ಹೆಂಡತಿ. ಕರ‍್ಣ-ದರ‍್ಮರಾಯ-ಬೀಮ-ಅರ‍್ಜುನರ ತಾಯಿ.
ಕರ‍್ಣ: ಸೂರ‍್ಯದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು. ರಾದೆ ಎಂಬುವಳು ಕರ‍್ಣನ ಸಾಕುತಾಯಿ.

*** ಭೀಮಸೇನನ ಪಟ್ಟಾಭಿಷೇಕ ***

ಜಯಲಕ್ಷ್ಮೀಪ್ರಿಯನೊಳ್ ಪರಾಕ್ರಮಕೃತಾಲಂಕಾರನೊಳ್ ಸತ್ಯವಾದಿಯೊಳ್ ಅರ್ಥಿಪ್ರಿಯನೊಳ್ ಧರಾಪ್ರಣಯಿಯೊಳ್ ನಿರ್ದ್ವೇಷಿಯೊಳ್ ಪಂಡಿತಾಶ್ರಯನೊಳ್ ರಾಜಿತರಾಜಚಿಹ್ನಸಹಿತಮ್ ಶ್ರೀಕಾಂತೆಯುಮ್ ಭೂಮಿದೇವಿಯುಮ್ ಅತ್ಯುತ್ಸವದಿಂದೆ ಚಾಳುಕ್ಯಕಂದರ್ಪನೊಳ್ ಬಂದು ನೆರೆದರ್. ಶ್ರೀಗೆ ಜಯಶ್ರೀಗೆ ವಚಃಶ್ರೀಗೆ ಮನೋರಮಣನ್ ಎನಿಸಿ… ಸಕಲ ಧರಿತ್ರೀ ಭಾಗದೆ… ದಿಗ್ಭಾಗದೊಳ್ ಕೀರ್ತಿ ಎಸೆಯಲ್ಕೆ… ಸಾಹಸಭೀಮನ್ ನೆಗಳ್ದಿರ್ದನ್. ಆಗಳ್ ಮುರಾಂತಕನ್ ಸಾಹಸಭೀಮನ ಸಾಹಸಕ್ಕೆ ಮೆಚ್ಚಿ, ಧರ್ಮನಂದನಾದಿಗಳ ಮೊಗಮಮ್ ನೋಡಿ…

ಕೃಷ್ಣ: ಪರಸೈನ್ಯಭೈರವನ್ ಕುರುಧರೆಯಮ್ ನಿಜೋಗ್ರ ಗದೆಯ ಏರ್ಗಳಿನ್ ಉಳ್ತು… ಸಮಸ್ತ ವೈರಿಭೂಪರ ರುಧಿರಾಂಬುವಿಂದೆ ಬೆದೆಮಾಡಿಯೆ… ಘಟ್ಟಿತ ಕುಂಭಿ ಮುಕ್ತ ಭಾಸುರ ನವಮೌಕ್ತಿಕ ಪ್ರಸರ ಬೀಜಮನ್ ಓಳಿಯೆ ಸೂಸಿ… ತಾರ ಭೂಧರ ಸಿತಕೀರ್ತಿಯೆಂಬ ಬೆಳಸಮ್ ಬೆಳೆದನ್.

(ಎಂದು ಪೊಗಳ್ದು, ಮುರಾಂತಕನ್ ಕುರುಕುಲಾಂತಕನ ಮೊಗಮಮ್ ನೋಡಿ…)

ಕೃಷ್ಣ: ಮುನಿಯಿಸಿದ ಅರಾತಿಯನ್ ಕೊಲ್ವೆನೆಂದು ಪೂಣ್ದಂತೆ… ಪೂಣ್ಕೆ ತಪ್ಪದೆ ಕೊಲಲುಮ್… ಗೆಲ್ವೆನ್ ಎಂದು ನುಡಿದಂತೆ ಗೆಲಲುಮ್… ಇರಿವಬೆಡಂಗಾ, ನಿನಗಲ್ಲದೆ ತೀರ್ಗುಮೆ… ಪೆರರ ಆಳ… ಪೆರರ ಕುದುರೆಯ… ಪೆರರ ಆನೆಯ… ಪೆರರ ರಥದ… ಪೆರ್ವಲದಿಂದಮ್ ಪೆರರ್ ಇರಿವರ್… ಇರಿವಬೆಡಂಗಾ, ನಿನ್ನ ತೆರದಿನ್ ಏಕಾಂಗದಿನ್ ಇರಿವವರ್ ಆರ್.

(ಎಂದು ನಾರಾಯಣನ್ ಚಾಳುಕ್ಯ ನಾರಾಯಣನನ್ ವರ್ಣಿಸುತಿರ್ಪಿನಮ್… ಆ ಪ್ರಸ್ತಾವದೊಳ್ ದುರ್ಯೋಧನನ ಜನನೀ ಜನಕರಪ್ಪ ಗಾಂಧಾರಿಯುಮ್ ಧೃತರಾಷ್ಟ್ರನುಮ್ ಬರೆ, ಆತನ ಮಹಾದೇವಿಯರಪ್ಪ ಭಾನುಮತಿಯುಮ್ ಚಂದ್ರಮತಿಯುಮ್ ಮೊದಲಾದ ಶುದ್ಧಾಂತ ನಿತಂಬಿನೀ ಜನಂಗಳುಮ್ ತಂತಮ್ಮ ಜೀವಿತೇಶ್ವರರಮ್ ಸಂಗ್ರಾಮಭೂಮಿಯೊಳ್ ಅರಸುತ್ತುಮ್ ಬಂದು ಕಾಣದೆ ಗಾಂಧಾರೀ ಧೃತರಾಷ್ಟ್ರರ ಕಾಲ ಮೇಲೆ ಕವಿದು ಬಿಳ್ದು…)

ದುರ್ಯೋಧನನ ಪತ್ನಿಯರು: ಕುರುಮಹೀಪತಿ, ಎಲ್ಲಿದನ್ ಎಲ್ಲಿದನ್… ಮಹೀವಲ್ಲಭನ್, ಎಲ್ಲಿದನ್ ಎಲ್ಲಿದನ್… ಇಂದುವಂಶ ತಿಲಕಾಹ್ವಯನ್ ಎಲ್ಲಿದನ್ ಎಲ್ಲಿದನ್… ಲಸತ್ ಪಲ್ಲವ ಕೀರ್ತಿ ಚಾರುತರ ಮೂರ್ತಿ ಫಣೀಂದ್ರ ಪತಾಕನ್ ಎಲ್ಲಿ ತಾನ್ ಎಲ್ಲಿದನ್ ಎಲ್ಲಿದನ್… ಗಡ… ಮನಃಪ್ರಿಯನ್ ಸುಯೋಧನನ್ ಎಲ್ಲಿದನೋ…

(ಎಂದು ಕರುಣಾಕ್ರಂದನಮ್ ಗೆಯ್ವುದುಮ್, ಆಗಳ್ ಅದಮ್ ಕಂಡು ಧರ್ಮನಂದನನ್ ಧೃತರಾಷ್ಟ್ರಂಗಮ್ ಗಾಂಧಾರಿಗಮ್ ಎರಗಿ ಪೊಡೆವಟ್ಟು..)

ಧರ್ಮರಾಯ: ಅಯ್ಯ, ಎಮಗೆ ಬಾಡಮ್ ಅಯ್ದನ್ ಈಯದೆ… ಸಂಧಿಯನ್ ಒಲ್ಲದೆ… ನಿಮ್ಮ ಗಾಂಗೇಯರ ಮಾತು ಕೇಳದೆ ಕುರುರಾಜನ್ ಅಳಿದನ್. ಅದರ್ಕೆ ದುಃಖದಿಮ್ ಬಾಯಳಿಯಲ್ಕೆವೇಡ. ನಿಮಗೆ ಆನ್ ಮಗನಲ್ಲನೆ. ಇನ್ ಎಮಗೆ ಅಮೋಘಮ್ … ಪಾಂಡು ಮಹೀಪತಿಯಿಂದಮ್ ಅಗ್ಗಳಮ್… ನೀಮೆ ತಂದೆಯುಮ್ ತಾಯುಮ್ . ನಿಮಗೆ ಅಯ್ವರ್ ಬೆಸಕಯ್ವೆಮ್ … ಕ್ರಮದೆ ಎಮ್ಮಿನ್ ಕೂಡಿಕೊಂಡು ಪೂರ್ವಕ್ರಮದಿಂದೆ ನೆಲನಮ್ ಆಳ್ವುದು… ಅಂಧನೃಪಾಲಾ. ಎಮ್ಮನ್ ನೋಡಿ ನಿಮ್ಮ ಸುತರನ್ ಇನ್ ಮರೆವುದು.

(ಎಂದು ಧರ್ಮನಂದನನ್ ನುಡಿಯೆ ಧೃತರಾಷ್ಟ್ರನ್ ಅವಧಾರಿಸಿ..)

ಧೃತರಾಷ್ಟ್ರ: ಯಮನಂದನ, ಎಮಗೆ ಇನ್ನುಮ್ ಮಾನಸವಾಳ ಮೋಹಮಿಲ್ಲ. ಇಂದು ನಿನ್ನನ್ ಇನಿತಮ್ ಬೇಳ್ಪೆನ್… ಅಸುವೊಸರ್ದ ಅರಸು ಮಕ್ಕಳಮ್… ಈಗಳ್ ಅವರ ವನಿತೆಯರ್ಗೆ ಕುಡುವುದು.

(ಎನೆ)

ಧರ್ಮರಾಯ: ಇದಾವ ಗಹನಮ್… ಅವರ್ಗಳ್ಗಮ್ ಸಂಸ್ಕಾರ ವಿಧಿಯಮ್ ಮಾಳ್ಪೆನ್.

(ಎಂದಾಗಳ್ … ಕುಂತಿ ತನ್ನ ಚೊಚ್ಚಿಲ ಮಗನನ್ ದಿನೇಶಸುತನ್ ಅಂಗಮಹಿತಳಾಧಿಪ ರಾಧಾತನಯನ ಕಳೇಬರಮನ್ ಭೋಂಕನೆ ಕಂಡಳ್ . ತನುಶೋಕಾನಳನ್ ಅಳುರಲ್… ಅಂತು ಕರ್ಣನ ಕಳೇಬರಮನ್ ತಳ್ಕೈಸಿ ಪಳಯಿಸುವ ನಿಜ ಜನನಿಯಮ್ ಧರ್ಮನಂದನನ್…)

ಧರ್ಮರಾಯ: ಇವನಾರ್ಗೆ.

(ಎಂದು ಬೆಸಗೊಳ್ವುದುಮ್…)

ಕುಂತಿ: ವನಜಾತಪ್ರಿಯಬಂಧುಗೆ ಅಂಗಪತಿಯನ್… ಧರ್ಮಂಗೆ ನಿನ್ನನ್… ಹುತಾಶನಮಿತ್ರಂಗೆ ಬಕಾರಿಯನ್… ಕುಲಿಶಿಗಮ್ ಗಾಂಡೀವಿಯನ್ ಪೆತ್ತೆನ್… ಈ ದಿನಕೃತ್ ನಂದನನ್ ಎನ್ನ ಚೊಚ್ಚಿಲ ಮಗನ್… ಕರ್ಣನ್ ನಿಮ್ಮ ಅಗ್ರಜನ್ … ಆನ್ ಇನಿತಮ್ ನಿಮ್ಮಯ ಮೋಹದಿಂದೆ ಉಸಿರದಿರ್ದೆನ್… ಕೊಂದೆನಯ್ ಧರ್ಮಜಾ.

(ಎಂಬುದುಮ್ ಮಕ್ಕಳ್ ಅತ್ಯಂತ ದುಃಖಿತರಾಗಿ..)

ಪಾಂಡವರು: ಕರಮ್ ಇಂತು ಒಂದು ಅವಿವೇಕಮಮ್ ನೆಗಳ್ದಿರ್… ಅಂದೇಕೆ ಇಂತುಟಮ್ ಪೇಳದಿರ್ದಿರೊ. ಮುನ್ ಪೇಳ್ದೊಡೆ… ಇದೇಕೆ ಕೂಡಿದಪುದು. ಎಮ್ಮ ಅಣ್ಣಂಗೆ ಉರ್ವರೆಯಮ್ ಕೊಟ್ಟು… ಅವನ್ ಆಳ್ದನ್ ಆಗೆ… ಬಳಿಕ ಆವು ಆಳಾಗಿ ಸೌದರ್ಯದಿಂದೆ ಇರೆವೇ. ಪೊಲ್ಲದು ಗೆಯ್ದಿರಿ.

(ಎಂದು ಕುಂತೀಸುತರ್ ಕುಂತಿಯನ್ ಜಡಿದರು … …ಕ್ರಿಶ್ಣನು ಅವರೆಲ್ಲರನ್ನೂ ಸಮಾದಾನ ಪಡಿಸುತ್ತಾನೆ.)

ಕೃಷ್ಣ: ಕ್ಷತ್ರಿಯ ಧರ್ಮಮ್ ಇಂತುಟೆ ವಲಮ್… ಮನಃಕ್ಷತಮ್ ಪಡಲ್ವೇಡಿಮ್… ಸಂಸಾರ ಸ್ವರೂಪಮನ್ ಅರಿದು ಸೈರಿಸುವುದು.

(ಎಂದು ಅವರಮ್ ವಿಗತ ಶೋಕರ್ ಮಾಡೆ… ದುರ್ಯೋಧನ ಪ್ರಭೃತಿಗಳ ಪೆಣಂಗಳನ್ ಒಂದೆಡೆಯೊಳ್ ಇಟ್ಟು, ದ್ವಿಜರಿಮ್ ಸಂಸ್ಕಾರ ಕರ್ಮಮನ್ ನಿರ್ವರ್ತಿಸಿ… ಕರ್ಣನ ಕಳೇಬರಮನ್ ಬ್ರಾಹ್ಮಣರಿಮ್ ತಾವೆ ಸಂಸ್ಕಾರಮಮ್ ಮಾಡಿ… ಸಮಸ್ತರ್ಗಮ್ ಜಲದಾನ ಕ್ರಿಯೆಗಳಮ್ ನಿರ್ವರ್ತಿಸಿ… ತದನಂತರ ಕೊಂತಿಯುಮ್ ಗಾಂಧಾರಿಯುಮ್ ಧೃತರಾಷ್ಟ್ರನುಮ್ ಕುರು ನರೇಂದ್ರನ ಅರಸಿಯರ್ ಮೊದಲಾಗೆ ಎಲ್ಲರುಮ್ ಅನಶನ ದೀಕ್ಷೆಯಮ್ ಕೈಕೊಂಡು… ಉತ್ತಮ ಮೋಕ್ಷಮಮ್ ತಾಳ್ದಿದರ್… ಇತ್ತಲ್ ಧರ್ಮನಂದನನ್ ಮುಕುಂದಂಗೆ ಕಯ್ಯಮ್ ಮುಗಿದು…)

ಧರ್ಮರಾಯ: ಇನಿತೊಂದು ಉಗ್ರ ಸಮಸ್ತ ಭಾರತ ಮಹಾಭಾರಾತಿಯುದ್ಧಮ್… ಮುಕುಂದ, ನಿಜಾನುಗ್ರಹದಿಂದಮಾಯ್ತು… ಪಾರ್ಥನ್ ಕಿರಿಯನ್… ಎನಗೆ ಮಹೀ ಮೋಹಮಿಲ್ಲ… ಈ ಭೀಮಂಗೆ ನೀನ್ ಪಟ್ಟಬಂಧಮನ್ ಮಾಳ್ಪುದು… ಈತನ್ ಕುರುಯುದ್ಧ ಲಬ್ಧ ಜಯನ್… ಅದರ್ಕೆ ಹಸ್ತಿನಪುರ ಪ್ರಸ್ಥಾನಮಮ್ ಮಾಡುವಮ್.

(ಎಂಬುದುಮ್, ಭೀಮಂಗೆ ಪಟ್ಟಬಂಧಮನ್ ಮಾಳ್ಪುದೆಂದು ವಾಸುದೇವನ್ ಮುಂತಾಗಿ… ಸಹದೇವನ್ ನಿರೂಪಿಸಿದ ಶುಭ ಮುಹೂರ್ತದೊಳ್ ಹಸ್ತಿನಪುರಮನ್ ಪೊಕ್ಕು… .. ತಾಟಿತ ಮಹಾಭೇರೀರವಮ್ ದೆಸೆಯಮ್ ತೆಕ್ಕನೆ ತೀವೆ… ವಿಪ್ರರ್ ಎಣ್ದೆಸೆಯೊಳ್ ವೇದ ನಿನಾದದಿಮ್ ಪರಸೆ… ಪಂಕೇಜಾಕ್ಷಿಯರ್ ಕೂಡಿ ಸಂತಸದಿಮ್ ಸೇಸೆಯನಿಕ್ಕೆ… ಪಾಂಡವಬಲ ಪ್ರಾಕಾರ ವೀರಂಗೆ ಸಾಹಸ ಭೀಮಂಗೆ ಮನೋಮುದಮ್ ಬೆರಸು ಕೃಷ್ಣನ್ ಪಟ್ಟಮಮ್ ಕಟ್ಟಿದನ್. ಶ್ರೀಯಮ್ ಕುರುಭೂಭೃದ್ಬಲ ತೋಯಧಿಯೊಳ್ ಭುಜಮಂದರದಿಮ್ ಕಡೆದು ಪಡೆದು ದಾಯಾದಮಲ್ಲನ್ ಎನಿಸಿದ ಅಜೇಯನ್ ಭುಜಬಲ ವಿಭಾಸಿ ಸಾಹಸ ಭೀಮನ್.)

ಪದ ವಿಂಗಡಣೆ ಮತ್ತು ತಿರುಳು: ಬೀಮಸೇನನ ಪಟ್ಟಾಬಿಶೇಕ

ಜಯಲಕ್ಷ್ಮೀ+ಪ್ರಿಯನ್+ಒಳ್; ಲಕ್ಷ್ಮಿ=ಸಂಪತ್ತು ಮತ್ತು ಅದಿಕಾರದ ಗದ್ದುಗೆಯ ದೇವತೆ; ಪ್ರಿಯ=ಗಂಡ; ಜಯಲಕ್ಷ್ಮಿಪ್ರಿಯ=ಬೀಮಸೇನ;

ಜಯಲಕ್ಷ್ಮೀಪ್ರಿಯನೊಳ್=ಜಯಲಕ್ಶ್ಮಿಪ್ರಿಯನಾದ ಬೀಮಸೇನನಲ್ಲಿ

ಪರಾಕ್ರಮ+ ಕೃತ+ ಅಲಂಕಾರನ್+ ಒಳ್; ಕೃತ=ಮಾಡಿದ; ಅಲಂಕಾರನ್=ಸಿಂಗಾರಗೊಂಡವನು;

ಪರಾಕ್ರಮಕೃತಾಲಂಕಾರನೊಳ್=ಪರಾಕ್ರಮವನ್ನೇ ಅಲಂಕಾರದ ಒಡವೆಯನ್ನಾಗಿ ತೊಟ್ಟಿರುವ ಬೀಮಸೇನನಲ್ಲಿ;

ಸತ್ಯವಾದಿಯೊಳ್=ಸತ್ಯದ ನಡೆನುಡಿಯುಳ್ಳವನಾದ ಬೀಮಸೇನನಲ್ಲಿ;

ಅರ್ಥಿ=ಬೇಡುವವನು; ಅರ್ಥಿಪ್ರಿಯ=ಬೇಡುವವರ ಪಾಲಿಗೆ ಮೆಚ್ಚಿನವನು;

ಅರ್ಥಿಪ್ರಿಯನೊಳ್=ಬೇಡಿದವರ ಬಯಕೆಗಳನ್ನು ಈಡೇರಿಸುವ ವ್ಯಕ್ತಿಯಾದ ಬೀಮಸೇನನನಲ್ಲಿ;

ಧರಾ=ಬೂಮಂಡಲ; ಪ್ರಣಯಿ=ಅನುರಾಗ/ಪ್ರೀತಿ;

ಧರಾಪ್ರಣಯಿಯೊಳ್=ಬೂಮಂಡಲದ ನಲ್ಲನಾದ ಬೀಮಸೇನನಲ್ಲಿ;

ನಿರ್ದ್ವೇಷಿಯೊಳ್=ಹಗೆಗಳೇ ಇಲ್ಲದವನಾದ ಬೀಮಸೇನನಲ್ಲಿ;

ಪಂಡಿತಾಶ್ರಯನೊಳ್=ಪಂಡಿತರಿಗೆ ಮನ್ನಣೆಯನ್ನಿತ್ತು ಆಶ್ರಯವನ್ನು ನೀಡಿರುವ ಬೀಮಸೇನನಲ್ಲಿ;

ರಾಜಿತ=ಹೊಳೆಯುವ/ಕಂಗೊಳಿಸುವ; ರಾಜಚಿಹ್ನ=ರಾಜತ್ವದ ಗುರುತು; ರಾಜಲಾಂಚನಗಳಾದ ಬೆಳ್ಗೊಡೆ ಮತ್ತು ಚಾಮರಗಳು;

ರಾಜಿತರಾಜಚಿಹ್ನಸಹಿತಮ್=ಹೊಳೆಯುತ್ತಿರುವ ರಾಜಲಾಂಚನಗಳಾದ ಬೆಳ್ಗೊಡೆ ಮತ್ತು ಚಾಮರಗಳ ಜತೆಗೂಡಿ;

ಕಂದರ್ಪ=ಮನ್ಮತ/ಮದನ; ಚಾಳುಕ್ಯಕಂದರ್ಪ=ಚಾಳುಕ್ಯ ರಾಜಮನೆತನದಲ್ಲಿ ಮನ್ಮತನಂತೆ ರೂಪವುಳ್ಳವನು ಸತ್ಯಾಶ್ರಯ; ಚಾಳುಕ್ಯವಂಶದ ಸತ್ಯಾಶ್ರಯಚಕ್ರವರ‍್ತಿಗಿದ್ದ ಬಿರುದು; ರನ್ನ ಕವಿಯು ತನ್ನ ಗದಾಯುದ್ದ ಕಾವ್ಯದಲ್ಲಿ ಬೀಮಸೇನನನ್ನು ಸತ್ಯಾಶ್ರಯ ಚಕ್ರವರ‍್ತಿಯ ಹೆಸರಿನೊಂದಿಗೆ ಸಮೀಕರಿಸಿದ್ದಾನೆ;

ಶ್ರೀಕಾಂತೆಯುಮ್ ಭೂಮಿದೇವಿಯುಮ್ ಅತ್ಯುತ್ಸವದಿಂದೆ ಚಾಳುಕ್ಯಕಂದರ್ಪನೊಳ್ ಬಂದು ನೆರೆದರ್=ಶ್ರೀದೇವಿಯೂ ಬೂದೇವಿಯು ಹೆಚ್ಚಿನ ಸಡಗರದಿಂದ ಚಾಳುಕ್ಯ ಕಂದರ‍್ಪನೆಂದು ಹೆಸರಾಂತ ಬೀಮಸೇನನಲ್ಲಿ ಬಂದು ಸೇರಿದರು;

ಶ್ರೀ=ಎಲ್ಲಾ ಬಗೆಯ ಸಂಪತ್ತು ಮತ್ತು ಅದಿಕಾರಕ್ಕೆ ಒಡತಿಯಾದ ಲಕ್ಶ್ಮಿ ಎಂಬ ದೇವತೆ; ವಚನ=ನುಡಿ/ಮಾತು; ಮನೋರಮಣ=ಪ್ರಿಯಕರ/ಮನದೊಡೆಯ;

ಶ್ರೀಗೆ ಜಯಶ್ರೀಗೆ ವಚಃಶ್ರೀಗೆ ಮನೋರಮಣನ್ ಎನಿಸಿ=ಲಕ್ಶ್ಮಿಗೆ… ಜಯಲಕ್ಶ್ಮಿಗೆ… ವಚನಲಕ್ಶ್ಮಿಗೆ ಮನದೊಡೆಯನೆಂದು ಹೆಸರನ್ನು ಪಡೆದು;

ಎಸೆ=ಕಂಗೊಳಿಸು/ಒಪ್ಪು; ನೆಗಳ್ದು+ಇರ್ದನ್; ನೆಗಳ್=ಹೆಸರುವಾಸಿ/ಕೀರ‍್ತಿ/ಪ್ರಸಿದ್ದಿ;

ಸಕಲ ಧರಿತ್ರೀ ಭಾಗದೆ… ದಿಗ್ಭಾಗದೊಳ್ ಕೀರ್ತಿ ಎಸೆಯಲ್ಕೆ ಸಾಹಸಭೀಮನ್ ನೆಗಳ್ದಿರ್ದನ್=ಇಡೀ ಜಗತ್ತಿನ ಎಲ್ಲ ಕಡೆಯ ದಿಕ್ಕುಗಳಲ್ಲಿಯೂ ಕೀರ‍್ತಿಯು ಹಬ್ಬಿ ಕಂಗೊಳಿಸುತ್ತಿರಲು ಸಾಹಸ ಬೀಮನು ಹೆಸರುವಾಸಿಯಾಗಿದ್ದನು;

ಮುರ=ಒಬ್ಬ ರಕ್ಕಸನ ಹೆಸರು; ಅಂತಕ=ಯಮ; ಮುರಾಂತಕ=ಮುರನೆಂಬ ರಕ್ಕಸನನ್ನು ಕೊಂದವನು/ಕ್ರಿಶ್ಣ;

ಆಗಳ್ ಮುರಾಂತಕನ್ ಸಾಹಸಭೀಮನ ಸಾಹಸಕ್ಕೆ ಮೆಚ್ಚಿ=ಬೀಮನು ದುರ‍್ಯೋದನನನ್ನು ಕೊಂದು ತನ್ನೆಲ್ಲಾ ಪ್ರತಿಜ್ನೆಗಳನ್ನು ಈಡೇರಿಸಿಕೊಂಡಿರುವ ಸಮಯದಲ್ಲಿ ಕ್ರಿಶ್ಣನು ಸಾಹಸ ಬೀಮನ ಪರಾಕ್ರಮವನ್ನು ಮೆಚ್ಚಿಕೊಂಡು;

ಧರ್ಮನಂದನಾದಿಗಳ ಮೊಗಮಮ್ ನೋಡಿ=ಕ್ರಿಶ್ಣನು ದರ‍್ಮರಾಯ ಮತ್ತು ಇನ್ನಿತರರ ಮೊಗವನ್ನು ನೋಡುತ್ತ ನುಡಿಯತೊಡಗುತ್ತಾನೆ; ಈಗ ಕ್ರಿಶ್ಣನು ಸಾಹಸ ಬೀಮನು ಮಾಡಿದ ಹೋರಾಟ ಮತ್ತು ಅದರಿಂದ ಉಂಟಾದ ಪರಿಣಾಮವನ್ನು ಕುರಿತು ‘ಬೇಸಾಯದ ರೂಪಕ’ದ ಮೂಲಕ ಹೊಗಳತೊಡಗಿದ್ದಾನೆ. ನೆಲವನ್ನು ನೇಗಿಲಿನಿಂದ ಉತ್ತು, ಬೀಜವನ್ನು ಬಿತ್ತಿ, ಹುಲುಸಾದ ಬೆಳೆಯನ್ನು ತೆಗೆಯುವ ಬೇಸಾಯಗಾರನಂತೆ ಪರಾಕ್ರಮಶಾಲಿಯಾದ ಬೀಮಸೇನನು ಶತ್ರುವಾದ ದುರ್‍ಯೋದನನ ಸಾಮ್ರಾಜ್ಯವನ್ನು ತನ್ನ ಗದೆಯೆಂಬ ನೇಗಿಲಿನಿಂದ ಉತ್ತು, ಕುರುಬಲದ ರಾಜರನ್ನು ಕೊಂದು, ಅವರ ರಕ್ತಕೋಡಿಯಿಂದಲೇ ನೆಲವನ್ನು ಹದಗೊಳಿಸಿ, ಮದಿಸಿದ ಆನೆಗಳ ಕುಂಭಸ್ತಲವನ್ನು ಬಡಿದು ಹೊರಚೆಲ್ಲಿದ ಹೊಸಮುತ್ತುಗಳನ್ನೇ ಬಿತ್ತನೆಯ ಬೀಜಗಳಾಗಿ ಸಾಲಾರಂಬ ಮಾಡಿ, ಹುಲುಸಾದ ಬೆಳೆಯನ್ನು ಪಡೆಯುವಂತೆ ನಿರ‍್ಮಲವಾದ ಕೀರ‍್ತಿಯನ್ನು ಪಡೆದನು;

ಪರಸೈನ್ಯ=ಶತ್ರುವಿನ ಸೇನೆ; ಭೈರವ=ಶಿವ/ರುದ್ರರೂಪವನ್ನು ತಳೆದಾಗ ಕಂಡುಬರುವ ಶಿವನ ರೂಪ; ಪರಸೈನ್ಯಭೈರವ=ಚಾಳುಕ್ಯ ಚಕ್ರವರ‍್ತಿ ಸತ್ಯಾಶ್ರಯನಿಗಿದ್ದ ಬಿರುದು/ಬೀಮಸೇನ; ಕುರುಧರೆಯಮ್=ಕುರುಬೂಮಿಯನ್ನು; ನಿಜ+ಉಗ್ರ+ಗದೆ; ಏರ್=ನೆಲವನ್ನು ಉಳುವುದಕ್ಕೆ ಬಳಸುವ ನೇಗಿಲು; ಉಳ್ತು=ಉತ್ತು;

ಪರಸೈನ್ಯಭೈರವನ್ ಕುರುಧರೆಯಮ್ ನಿಜೋಗ್ರಗದೆಯ ಏರ್ಗಳಿನ್ ಉಳ್ತು=ಶತ್ರುಸೇನೆಗೆ ಬೈರವನು ಎನಿಸಿದ ಬೀಮಸೇನನು ಕುರುಬೂಮಿಯನ್ನು ತನ್ನ ಬಯಂಕರವಾದ ಗದೆಯೆಂಬ ನೇಗಿಲಿನಿಂದ ಉತ್ತು;

ಸಮಸ್ತ=ಎಲ್ಲ/ಸಕಲ; ಭೂಪ=ರಾಜ; ವೈರಿಭೂಪರು=ಶತ್ರುಸೇನಾಬಲದಲ್ಲಿದ್ದ ರಾಜರು; ರುಧಿರ+ಅಂಬು+ಇಂದೆ; ರುಧಿರ=ಕೆಂಪುಬಣ್ಣ/ನೆತ್ತರು/ರಕ್ತ; ಅಂಬು=ನೀರು; ರುಧಿರಾಂಬು=ಕೆಂಪುಬಣ್ಣದಲ್ಲಿರುವ ನೆತ್ತರು; ಬೆದೆ=ಉಳುಮೆ ಮಾಡಿರುವ ಬೂಮಿಯಲ್ಲಿ ಬೀಜವನ್ನು ಬಿತ್ತುವುದಕ್ಕೆ ಇಲ್ಲವೇ ಪಯಿರನ್ನು ನೆಡುವುದಕ್ಕೆ ಹದವಾದ ಕಾಲ;

ಸಮಸ್ತ ವೈರಿಭೂಪರ ರುಧಿರಾಂಬುವಿಂದೆ ಬೆದೆಮಾಡಿಯೆ=ಶತ್ರುವಾದ ದುರ್‍ಯೋದನನ ಸೇನಾಬಲದಲ್ಲಿದ್ದ ರಾಜರೆಲ್ಲರ ರಕ್ತಕೋಡಿಯಿಂದಲೇ ಕುರಬೂಮಿಯನ್ನು ಹದಗೊಳಿಸಿ;

ಘಟ್ಟಿತ=ಹೊಡೆದ/ಕುಟ್ಟಿದ; ಕುಂಭಿ=ಆನೆ; ಘಟ್ಟಿತ ಕುಂಭಿ=ಆನೆಗಳ ತಲೆಗಳನ್ನು ಸೀಳಿ; ಮುಕ್ತ=ಬಿಡುಗಡೆ ಹೊಂದಿದ/ಬಿಚ್ಚಿದ; ಭಾಸುರ=ಹೊಳೆಯುವ; ನವ=ಹೊಸ; ಮೌಕ್ತಿಕ=ಮುತ್ತು; ಮುಕ್ತ ಭಾಸುರ ನವಮೌಕ್ತಿಕ=ಹೊರಚೆಲ್ಲಿದ ಹೊಳೆಯುವ ಹೊಸಮುತ್ತುಗಳು; ಆನೆಯ ತಲೆಯ ಮೇಲೆ ಉಬ್ಬಿರುವ ಜಾಗವನ್ನು ‘ಕುಂಭಸ್ಥಲ’ ಎನ್ನುತ್ತಾರೆ. ಈ ಜಾಗದಲ್ಲಿ ಮುತ್ತುಗಳು ಇರುತ್ತವೆ ಎಂಬ ದಂತಕತೆಯು ಜನಮನದಲ್ಲಿದೆ; ಪ್ರಸರ=ಹರಡುವುದು; ಓಳಿ=ಕ್ರಮ/ಓರಣ; ಸೂಸಿ=ಚೆಲ್ಲಿ;

ಘಟ್ಟಿತ ಕುಂಭಿ ಮುಕ್ತ ಭಾಸುರ ನವಮೌಕ್ತಿಕ ಪ್ರಸರ ಬೀಜಮನ್ ಓಳಿಯೆ ಸೂಸಿ=ಆನೆಯ ಕುಂಭಸ್ತಲವನ್ನು ಸೀಳಿದಾಗ ಹೊರಬಿದ್ದ ಹೊಸಮುತ್ತುಗಳನ್ನೇ ಬೀಜಗಳನ್ನಾಗಿ ಮಾಡಿಕೊಂಡು ಶತ್ರುವಿನ ಬೂಮಿಯಲ್ಲಿ ಸಾಲು ಸಾಲಾಗಿ ಬಿತ್ತಿ;

ತಾರ=ಬೆಳ್ಳಿ; ಭೂಧರ=ಬೆಟ್ಟ; ಸಿತ=ಬಿಳಿಯ ಬಣ್ಣ; ಸಿತಕೀರ್ತಿ=ಒಳ್ಳೆಯ ಯಶಸ್ಸು;

ತಾರ ಭೂಧರ ಸಿತಕೀರ್ತಿಯೆಂಬ ಬೆಳಸಮ್ ಬೆಳೆದನ್ ಎಂದು ಪೊಗಳ್ದು=ಕಪ್ಪುಕಲೆಯಿಲ್ಲದ ಬೆಳ್ಳಿಬೆಟ್ಟದಂತೆ ನಿರ‍್ಮಲವಾದ ಯಶಸ್ಸೆಂಬ ಬೆಳೆಯನ್ನು ಬೆಳೆದನು ಎಂದು ಬೀಮಸೇನನನ್ನು ಕ್ರಿಶ್ಣನು ಹಾಡಿಹೊಗಳಿ; ಮುರಾಂತಕ=ಕ್ರಿಶ್ಣ; ಕುರುಕುಲಾಂತಕ=ಬೀಮಸೇನ;

ಮುರಾಂತಕನ್ ಕುರುಕುಲಾಂತಕನ ಮೊಗಮಮ್ ನೋಡಿ=ಕ್ರಿಶ್ಣನು ಬೀಮಸೇನನ ಮೊಗವನ್ನು ನೋಡಿ;

ಮುನಿಯಿಸಿದ=ಕೋಪೋದ್ರೇಕ ಉಂಟಾಗುವಂತೆ ಕೆರಳಿಸಿದ; ಅರಾತಿ+ಅನ್; ಅರಾತಿ=ಶತ್ರು/ಹಗೆ; ಪೂಣ್=ಪ್ರತಿಜ್ನೆ/ಆಣೆ ಮಾಡು/ ಶಪತ ತೊಡು; ತೀರ್=ಸಾದ್ಯವಾಗು/ಈಡೇರಿಸು;

ಮುನಿಯಿಸಿದ ಅರಾತಿಯನ್ ಕೊಲ್ವೆನೆಂದು ಪೂಣ್ದಂತೆ ಪೂಣ್ಕೆ ತಪ್ಪದೆ ಕೊಲಲುಮ್… ಗೆಲ್ವೆನ್ ಎಂದು ನುಡಿದಂತೆ ಗೆಲಲುಮ್… ಇರಿವಬೆಡಂಗಾ, ನಿನಗಲ್ಲದೆ ತೀರ್ಗುಮೆ=ಕೇಡನ್ನು ಬಗೆದು ಕೆರಳಿಸಿದ ಹಗೆಯನ್ನು ಕೊಲ್ಲುತ್ತೇನೆ ಎಂದು ಪ್ರತಿಜ್ನೆಯನ್ನು ತೊಟ್ಟಂತೆಯೇ, ತೊಟ್ಟ ಪ್ರತಿಜ್ನೆಗೆ ತಪ್ಪಿನಡೆಯದೆ ಹಗೆಯನ್ನು ಕೊಲ್ಲಲು… ಗೆದ್ದೇ ಗೆಲ್ಲುತ್ತೇನೆ ಎಂದು ನುಡಿದಂತೆ ಗೆಲವನ್ನು ಪಡೆಯಲು… ಇರಿವಬೆಡಂಗಾ… ನಿನಗಲ್ಲದೆ ಬೇರೆಯವರಿಂದ ಆಗುತ್ತದೆಯೇ;

ಪೆರರ್=ಬೇರೆಯವರು/ಇತರರು; ಆಳ್=ಹೋರಾಡುವ ವ್ಯಕ್ತಿ; ಪೆರ್ವಲದ+ಇಂದಮ್; ಪಿರಿದು+ಬಲ=ಪೆರ್ವಲ; ಪೆರ್ವಲ=ದೊಡ್ಡ ಸೇನೆ;

ಪೆರರ ಆಳ… ಪೆರರ ಕುದುರೆಯ… ಪೆರರ ಆನೆಯ… ಪೆರರ ರಥದ… ಪೆರ್ವಲದಿಂದಮ್ ಪೆರರ್ ಇರಿವರ್=ಇತರ ರಾಜರ ಸೇನಾಬಲದಲ್ಲಿರುವ ಕಾದಾಳುಗಳ… ಕುದುರೆಯನ್ನೇರಿ ಯುದ್ದ ಮಾಡುವ ವೀರರ… ಆನೆಯನ್ನೇರಿ ಯುದ್ದ ಮಾಡುವ ವೀರರಿಂದ ಕೂಡಿದ ದೊಡ್ಡ ಸೇನಾಬಲದಿಂದ ಯುದ್ದರಂಗದಲ್ಲಿ ಶತ್ರುಗಳನ್ನು ಕೊಂದು ಬೇರೆಯ ರಾಜರು ಜಯವನ್ನು ಪಡೆಯುತ್ತಾರೆ;

ಏಕಾಂಗದಿನ್=ಒಬ್ಬಂಟಿಯಾಗಿ;

ಇರಿವಬೆಡಂಗಾ, ನಿನ್ನ ತೆರದಿನ್ ಏಕಾಂಗದಿನ್ ಇರಿವವರ್ ಆರ್=ಇರಿವಬೆಡಂಗನೇ, ಬೇರೆಯ ರಾಜರ ಸೇನಾಬಲದ ನೆರವನ್ನು ಪಡೆಯದೇ, ನಿನ್ನ ರೀತಿಯಲ್ಲಿ ಒಬ್ಬಂಟಿಯಾಗಿಯೇ ಹೋರಾಡಿ ಶತ್ರುವನ್ನು ಕೊಲ್ಲುವವರು ಈ ಜಗತ್ತಿನಲ್ಲಿ ಯಾರು ತಾನೇ ಇದ್ದಾರೆ;

ಚಾಳುಕ್ಯನಾರಾಯಣ=ಚಾಳುಕ್ಯ ವಂಶದ ಚಕ್ರವರ‍್ತಿಯಾದ ಸತ್ಯಾಶ್ರಯನಿಗಿದ್ದ ಬಿರುದು. ಇದು ಬೀಮಸೇನನಿಗೆ ಅನ್ವಯವಾಗುತ್ತದೆ. ಏಕೆಂದರೆ ರನ್ನ ಕವಿಯು ‘ಗದಾಯುದ್ದ’ ಕಾವ್ಯದಲ್ಲಿ ಬೀಮಸೇನನ ವ್ಯಕ್ತಿತ್ವವನ್ನು ಸತ್ಯಾಶ್ರಯ ಚಕ್ರವರ‍್ತಿಯೊಡನೆ ಸಮೀಕರಿಸಿದ್ದಾನೆ;

ಎಂದು ನಾರಾಯಣನ್ ಚಾಳುಕ್ಯನಾರಾಯಣನನ್ ವರ್ಣಿಸುತಿರ್ಪಿನಮ್=ಎಂದು ಕ್ರಿಶ್ಣನು ಬೀಮಸೇನನ ಪರಾಕ್ರಮವನ್ನು ಬಣ್ಣಿಸುತ್ತಿರುವಾಗ;

ಆ ಪ್ರಸ್ತಾವದೊಳ್ ದುರ್ಯೋಧನನ ಜನನೀ ಜನಕರಪ್ಪ ಗಾಂಧಾರಿಯುಮ್ ಧೃತರಾಷ್ಟ್ರನುಮ್ ಬರೆ=ಆ ಸಮಯದಲ್ಲಿ ದುರ್‍ಯೋದನನ ತಾಯಿತಂದೆಯರಾದ ಗಾಂದಾರಿ ಮತ್ತು ದ್ರುತರಾಶ್ಟ್ರರು ಅಲ್ಲಿಗೆ ಬರಲು;

ಆತನ=ದುರ್‍ಯೋದನನ; ಮಹಾದೇವಿಯರ್+ಅಪ್ಪ; ಮಹಾದೇವಿ=ಪಟ್ಟದ ರಾಣಿ/ಮಹಾರಾಣಿ; ಶುದ್ಧಾಂತ=ರಾಣಿವಾಸ; ನಿತಂಬಿನೀ ಜನ=ಹೆಂಗಸರು; ಜೀವಿತೇಶ್ವರ=ಗಂಡ/ಪತಿ;

ಆತನ ಮಹಾದೇವಿಯರಪ್ಪ ಭಾನುಮತಿಯುಮ್ ಚಂದ್ರಮತಿಯುಮ್ ಮೊದಲಾದ ಶುದ್ಧಾಂತ ನಿತಂಬಿನೀ ಜನಂಗಳುಮ್ ತಂತಮ್ಮ ಜೀವಿತೇಶ್ವರರಮ್ ಸಂಗ್ರಾಮಭೂಮಿಯೊಳ್ ಅರಸುತ್ತುಮ್ ಬಂದು ಕಾಣದೆ=ದುರ್‍ಯೋದನನ ಪಟ್ಟದ ರಾಣಿಯಾದ ಭಾನುಮತಿ, ಮತ್ತೊಬ್ಬ ಹೆಂಡತಿ ಚಂದ್ರಮತಿ ಮತ್ತು ಇನ್ನಿತರ ರಾಣಿವಾಸದ ಹೆಂಗಸರು ತಮ್ಮ ತಮ್ಮ ಗಂಡಂದಿರನ್ನು ಕುರುಕ್ಶೇತ್ರ ರಣರಂಗದಲ್ಲಿ ಹುಡುಕುತ್ತ ಬಂದು, ಎಲ್ಲಿಯೂ ತಮ್ಮ ಗಂಡಂದಿರನ್ನು ಕಾಣದೆ;

ಗಾಂಧಾರೀ ಧೃತರಾಷ್ಟ್ರರ ಕಾಲ ಮೇಲೆ ಕವಿದು ಬಿಳ್ದು=ಗಾಂದಾರಿ ದ್ರುತರಾಶ್ಟ್ರರ ಪಾದಗಳ ಮೇಲೆ ಉರುಳಿ ದೊಪ್ಪನೆ ಬಿದ್ದು;

ಮಹೀ=ಭೂಮಿ; ಮಹೀಪತಿ=ರಾಜ; ವಲ್ಲಭ=ಪತಿ/ಒಡೆಯ;

ಕುರುಮಹೀಪತಿ, ಎಲ್ಲಿದನ್ ಎಲ್ಲಿದನ್=ಕುರುಪತಿಯಾದ ದುರ‍್ಯೋದನನು ಎಲ್ಲಿದ್ದಾನೆ… ಎಲ್ಲಿದ್ದಾನೆ;

ಮಹೀವಲ್ಲಭನ್, ಎಲ್ಲಿದನ್ ಎಲ್ಲಿದನ್=ಬೂಮಂಡಲದ ಒಡೆಯನಾದ ದುರ‍್ಯೋದನನು ಎಲ್ಲಿದ್ದಾನೆ… ಎಲ್ಲಿದ್ದಾನೆ;

ಇಂದು=ಚಂದ್ರ; ತಿಲಕ+ಆಹ್ವಯನ್; ತಿಲಕ=ಹಣೆಗೆ ಇಟ್ಟುಕೊಳ್ಳುವ ಬೊಟ್ಟು/ಉತ್ತಮ ವ್ಯಕ್ತಿ; ಆಹ್ವಯ=ಹೆಸರು;

ಇಂದುವಂಶ ತಿಲಕಾಹ್ವಯನ್ ಎಲ್ಲಿದನ್ ಎಲ್ಲಿದನ್=ಚಂದ್ರವಂಶದ ತಿಲಕನೆಂದು ಹೆಸರನ್ನು ಪಡೆದಿದ್ದ ದುರ‍್ಯೋದನನು ಎಲ್ಲಿದ್ದಾನೆ… ಎಲ್ಲಿದ್ದಾನೆ; ಲಸತ್=ಹೊಳೆಯುವ/ಪ್ರಕಾಶಿಸುವ; ಪಲ್ಲವ=ಚಿಗುರು;

ಲಸತ್ ಪಲ್ಲವ ಕೀರ್ತಿ=ಹೊಳೆಯುತ್ತಿರುವ ಚಿಗುರಿನಂತೆ ಕೀರ್‍ತಿಯುಳ್ಳವನು;

ಚಾರುತರ=ಹೆಚ್ಚು ಚೆಲುವಾದ/ಅತಿ ಸುಂದರವಾದ;

ಚಾರುತರ ಮೂರ್ತಿ=ಅತಿ ಸುಂದರವಾದ ರೂಪುಳ್ಳವನು; ಫಣಿ+ಇಂದ್ರ; ಫಣಿ=ಹಾವು; ಇಂದ್ರ=ಒಡೆಯ; ಫಣೀಂದ್ರ=ಹಾವುಗಳ ಒಡೆಯನಾದ ಆದಿಶೇಶ; ಪತಾಕೆ=ಬಾವುಟ; ಫಣೀಂದ್ರಪತಾಕ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ಲಾಂಚನವಾಗುಳ್ಳವನು/ದುರ‍್ಯೋದನ;

ಫಣೀಂದ್ರ ಪತಾಕನ್ ಎಲ್ಲಿ ತಾನ್ ಎಲ್ಲಿದನ್ ಎಲ್ಲಿದನ್=ದುರ‍್ಯೋದನನು ಎಲ್ಲಿದ್ದಾನೆ… ಅವನು ಎಲ್ಲಿದ್ದಾನೆ… ಎಲ್ಲಿದ್ದಾನೆ; ಗಡ=ಕಂಡೆಯಾ/ನೋಡಿದೆಯಾ; ಕರುಣ+ಆಕ್ರಂದನಮ್; ಆಕ್ರಂದನ=ಜೋರಾಗಿ ಅಳುವುದು;

ಗಡ… ಮನಃಪ್ರಿಯನ್ ಸುಯೋಧನನ್ ಎಲ್ಲಿದನೋ… ಎಂದು ಕರುಣಾಕ್ರಂದನಮ್ ಗೆಯ್ವುದುಮ್=ಕಂಡಿರಾ… ನಮ್ಮ ಮನದನ್ನನಾದ ದುರ‍್ಯೋದನನು ಎಲ್ಲಿದ್ದಾನೆ ಎಂದು ಕರುಣೆ ಉಕ್ಕುವಂತೆ ಗಟ್ಟಿಯಾದ ದನಿಯಲ್ಲಿ ಅರಚುತ್ತ ಗೋಳಾಡುತ್ತಿರಲು;

ಆಗಳ್ ಅದಮ್ ಕಂಡು ಧರ್ಮನಂದನನ್ ಧೃತರಾಷ್ಟ್ರಂಗಮ್ ಗಾಂಧಾರಿಗಮ್ ಎರಗಿ ಪೊಡೆವಟ್ಟು=ಆಗದುರ್‍ಯೋದನನ ರಾಣಿವಾಸದ ಹೆಂಗಸರು ತೀವ್ರವಾಗಿ ಗೋಳಾಡುತ್ತಿರುವುದನ್ನು ಕಂಡ ದರ್‍ಮರಾಯನು ದ್ರುತರಾಶ್ಟ್ರ ಮತ್ತು ಗಾಂದಾರಿಯ ಬಳಿಗೆ ಬಂದು ತಲೆಬಾಗಿ ನಮಸ್ಕರಿಸಿ, ದೊಡ್ಡಪ್ಪನಾದ ದ್ರುತರಾಶ್ಟ್ರನನ್ನು ಕುರಿತು ಈ ರೀತಿ ನುಡಿಯತೊಡಗುತ್ತಾನೆ;

ಅಯ್ಯ=ತಂದೆ/ಅಪ್ಪ; ಬಾಡ=ಊರು;

ಅಯ್ಯ, ಎಮಗೆ ಬಾಡಮ್ ಅಯ್ದನ್ ಈಯದೆ… ಸಂಧಿಯನ್ ಒಲ್ಲದೆ… ನಿಮ್ಮ ಗಾಂಗೇಯರ ಮಾತು ಕೇಳದೆ ಕುರುರಾಜನ್ ಅಳಿದನ್=ಅಯ್ಯ, ಪಾಂಡುವಿನ ಅಯ್ದು ಮಂದಿ ಮಕ್ಕಳಾದ ನಮಗೆ ಅಯ್ದು ಊರುಗಳನ್ನು ಕೊಡದೆ… ಕ್ರಿಶ್ಣನು ಮಾಡಲು ಯತ್ನಿಸಿದ ಸಂದಿಯನ್ನು ನಿರಾಕರಿಸಿ… ಕುರುಕುಲದ ಹಿರಿಯರಾದ ಗಾಂಗೇಯರ ಹಿತನುಡಿಗಳನ್ನು ಕೇಳದೆ ದುರ‍್ಯೋದನನು ಸಾವನ್ನಪ್ಪಿದನು;

ಬಾಯಳಿಯಲ್+ಬೇಡ; ಬಾಯಳಿ=ಗೋಳಾಡು/ಸಂಕಟಪಡು;

ಅದರ್ಕೆ ದುಃಖದಿಮ್ ಬಾಯಳಿಯಲ್ಕೆವೇಡ=ದುರ‍್ಯೋದನನ ಸಾವಿಗಾಗಿ ಸಂಕಟದಿಂದ ಗೋಳಾಡಬೇಡಿರಿ;

ನಿಮಗೆ ಆನ್ ಮಗನಲ್ಲನೆ=ನಿಮಗೆ ನಾನು ಮಗನಲ್ಲವೇ;

ಅಮೋಘ=ಅತಿಶಯವಾಗಿ; ಅಗ್ಗಳ=ಹಿರಿಮೆ/ಹೆಚ್ಚುಗಾರಿಕೆ;

ಇನ್ ಎಮಗೆ ಅಮೋಘಮ್ ಪಾಂಡುಮಹೀಪತಿಯಿಂದಮ್ ಅಗ್ಗಳಮ್… ನೀಮೆ ತಂದೆಯುಮ್ ತಾಯುಮ್=ಇನ್ನು ಮುಂದೆ ನಮಗೆ ಎಲ್ಲಕ್ಕಿಂತ ಮಿಗಿಲಾಗಿ… ನಮ್ಮ ತಂದೆ ಪಾಂಡುರಾಜನಿಗಿಂತಲೂ ಹಿರಿಮೆಯುಳ್ಳವರಾಗಿ ನೀವೇ ತಂದೆಯೂ ತಾಯಿಯೂ ಆಗಿರುತ್ತೀರಿ;

ಬೆಸಕೆಯ್=ಹೇಳಿದ ಕೆಲಸವನ್ನು ಮಾಡು;

ನಿಮಗೆ ಅಯ್ವರ್ ಬೆಸಕೆಯ್ವೆಮ್=ಪಾಂಡವರಾದ ನಾವು ಅಯ್ದು ಮಂದಿಯು ನಿಮ್ಮ ಸೇವೆಯನ್ನು ಮಾಡಿಕೊಂಡಿರುತ್ತೇವೆ;

ಕ್ರಮ=ಪರಂಪರೆ/ಪದ್ದತಿ; ಎಮ್ಮಿನ್=ನಮ್ಮನ್ನು;

ಕ್ರಮದೆ ಎಮ್ಮಿನ್ ಕೂಡಿಕೊಂಡು ಪೂರ್ವಕ್ರಮದಿಂದೆ ನೆಲನಮ್ ಳ್ವುದು=ಕುರುವಂಶದ ಪರಂಪರೆಯಂತೆ ನಮ್ಮನ್ನು ನಿಮ್ಮ ಜತೆ ಸೇರಿಸಿಕೊಂಡು… ಹಿಂದಿನಿಂದ ನಡೆದುಬಂದ ರೀತಿಯಲ್ಲಿಯೇ ರಾಜ್ಯವನ್ನು ನೀವೇ ಆಳುವುದು;

ಅಂಧ=ಕುರುಡ; ನೃಪಾಲ=ರಾಜ; ಅಂಧನೃಪಾಲ=ರಾಜ ದ್ರುತರಾಶ್ಟ್ರನು ಹುಟ್ಟು ಕುರುಡನಾಗಿದ್ದನು;

ಅಂಧನೃಪಾಲಾ, ಎಮ್ಮನ್ ನೋಡಿ ಇನ್ ನಿಮ್ಮ ಸುತರನ್ ಮರೆವುದು ಎಂದು ಧರ್ಮನಂದನನ್ ನುಡಿಯೆ=ತಂದೆಯೇ, ನಮ್ಮನ್ನು ನೋಡಿ, ಇನ್ನು ಮುಂದೆ ನಿಮ್ಮ ಮಕ್ಕಳ ಬಗೆಗಿನ ಸಂಕಟವನ್ನು ಮರೆಯುವುದು ಎಂದು ದರ್‍ಮರಾಯನು ಬೇಡಿಕೊಳ್ಳಲು; ಅವಧಾರಿಸು=ಮನಸ್ಸಿಗೆ ತಂದುಕೊಂಡು/ಕೇಳು;

ಧೃತರಾಷ್ಟ್ರನ್ ಅವಧಾರಿಸಿ=ದ್ರುತರಾಶ್ಟ್ರನು ದರ್‍ಮರಾಯನುಮಾತುಗಳನ್ನು ಮನಸ್ಸಿಗೆ ತಂದುಕೊಂಡು;

ಮಾನಸ+ಬಾಳ್; ಮಾನಸ=ಮಾನವ; ಯಮನಂದನ=ಯಮ ದೇವತೆಯ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು/ದರ್‍ಮರಾಯ; ಮಾನಸವಾಳ್=ಲೋಕದಲ್ಲಿ ಹಣ,ಒಡವೆ,ವಸ್ತು, ಅದಿಕಾರವನ್ನು ಸಂಪಾದಿಸಿ ಒಲವು ನಲಿವು ನೆಮ್ಮದಿಯಿಂದ ಮಾನವ ಬಾಳನ್ನು ನಡೆಸುವುದು; ಮೋಹಮ್+ಇಲ್ಲ; ಮೋಹ=ಪ್ರೀತಿ;

 ಯಮನಂದನ, ಎಮಗೆ ಇನ್ನುಮ್ ಮಾನಸವಾಳ ಮೋಹಮಿಲ್ಲ=ದರ್‍ಮರಾಯನೇ, ನಮಗೆ ಇನ್ನೂ ಹೆಚ್ಚು ಕಾಲ ಈ ಜಗತ್ತಿನಲ್ಲಿ ಮಾನವ ಬದುಕನ್ನು ನಡೆಸಬೇಕೆಂಬ ಆಸೆಯಿಲ್ಲ;

ಇನಿತು=ಇಷ್ಟು; ಬೇಳ್ಪೆನ್=ಬೇಡುತ್ತೇನೆ;

ಇಂದು ನಿನ್ನನ್ ಇನಿತಮ್ ಬೇಳ್ಪೆನ್=ಇಂದು ನಿನ್ನನ್ನು ಇಷ್ಟು ಮಾತ್ರ ಬೇಡಿಕೊಳ್ಳುತ್ತೇನೆ;

ಅಸು+ಒಸರ್+ದ; ಅಸು=ಪ್ರಾಣ; ಒಸರ್=ಜಿನುಗು/ಸೋರು/ತೊಟ್ಟಿಕ್ಕು; ವನಿತೆ=ಹೆಂಗಸು/ಹೆಂಡತಿ;

ಅಸುವೊಸರ್ದ ಅರಸು ಮಕ್ಕಳಮ್ ಈಗಳ್ ಅವರ ವನಿತೆಯರ್ಗೆ ಕುಡುವುದು ಎನೆ=ಕುರುಕ್ಶೇತ್ರ ರಣರಂಗದಲ್ಲಿ ಹೋರಾಡಿ ಸಾವನ್ನಪ್ಪಿರುವ ಅರಸು ಮಕ್ಕಳ ಹೆಣಗಳನ್ನು ಈಗ ಅವರವರ ಹೆಂಗಸರಿಗೆ ಕೊಡುವುದು ಎನ್ನಲು;

ಗಹನ=ದೊಡ್ಡ ಸಂಗತಿ/ವಿಚಾರ; ಸಂಸ್ಕಾರ ವಿಧಿ=ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಹೆಣಗಳನ್ನು ಹೂಳುವ ಇಲ್ಲವೇ ಸುಡುವ ಕ್ರಿಯೆ ಮತ್ತು ನಂತರದ ಆಚರಣೆಗಳು;

ಇದಾವ ಗಹನಮ್. ಅವರ್ಗಳ್ಗಮ್ ಸಂಸ್ಕಾರ ವಿಧಿಯಮ್ ಮಾಳ್ಪೆನ್ ಎಂದಾಗಳ್=ಇದು ಯಾವ ದೊಡ್ಡ ಸಂಗತಿ ಎಂದು ನನ್ನನ್ನು ಕೇಳಿಕೊಳ್ಳುತ್ತಿರುವಿರಿ. ರಣರಂಗದಲ್ಲಿ ಸಾವನ್ನಪ್ಪಿದವರೆಲ್ಲರ ಅವರು ಕುರುವಂಶದವರಾಗಿರಲಿ ಇಲ್ಲವೇ ಯಾರೇ ಆಗಿರಲಿ ಅವರೆಲ್ಲರ ಸಂಸ್ಕಾರ ಕ್ರಿಯೆಗಳನ್ನು ಮಾಡುತ್ತೇನೆ ಎಂದು ದರ್‍ಮರಾಯನು ದ್ರುತರಾಶ್ಟ್ರನಿಗೆ ಹೇಳುತ್ತಿರುವಾಗ;

ಚೊಚ್ಚಿಲು=ಮೊದಲನೆಯ ಬಸಿರು; ಚೊಚ್ಚಿಲ ಮಗ=ಮೊದಲನೆಯ ಮಗ; ದಿನೇಶ=ಸೂರ್‍ಯ; ಸುತ=ಮಗ; ದಿನೇಶಸುತ=ಸೂರ್‍ಯ ದೇವತೆಯ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದ ಮಗ/ಕರ್‍ಣ; ಅಂಗ+ಮಹಿತಳ+ಅಧಿಪ; ಮಹಿತಳ=ಬೂಪ್ರದೇಶ/ಪ್ರಾಂತ್ಯ; ಅಧಿಪ=ಒಡೆಯ/ರಾಜ; ರಾಧಾತನಯ=ರಾದೆಯ ಮಗ; ರಾದೆ ಎನ್ನುವವಳು ಕರ್‍ಣನ ಸಾಕು ತಾಯಿ; ಕುಂತಿಯು ಪಾಂಡುರಾಜನನ್ನು ಮದುವೆಯಾಗುವುದಕ್ಕೆ ಮುನ್ನವೇ ವಿಶ್ವಾಮಿತ್ರ ಮುನಿಯು ಕೊಟ್ಟಿದ್ದ ವರಗಳು ದಿಟವೋ ಸಟೆಯೋ ಎಂಬುದನ್ನು ಒರೆಹಚ್ಚಿ ನೋಡಲೆಂದು ಸೂರ್‍ಯದೇವನನ್ನು ಕರೆದಾಗ, ಸೂರ್‍ಯನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಗಂಡು ಮಗು ಹುಟ್ಟುತ್ತದೆ. ಲೋಕಾಪವಾದಕ್ಕೆ ಹೆದರಿ ಕುಂತಿಯು ಮಗುವನ್ನು ತೊಟ್ಟಿಲಲ್ಲಿಟ್ಟು ಗಂಗಾ ನದಿಯಲ್ಲಿ ಬಿಡುತ್ತಾಳೆ. ನದಿಯ ದಂಡೆಯಲ್ಲಿದ್ದ ಬೆಸ್ತನೊಬ್ಬನು ಮಗುವನ್ನು ಕಂಡು ಮೋಹಗೊಂಡು, ಮನೆಗೆ ಕೊಂಡೊಯ್ದು ತನ್ನ ಹೆಂಡತಿ ರಾದೆಗೆ ಕೊಡುತ್ತಾನೆ. ಈ ಗಂಡ ಹೆಂಡತಿಯು ಆ ಮಗುವಿನ ಸಾಕು ತಾಯಿತಂದೆಯಾಗಿ ಬೆಳಸುತ್ತಾರೆ. ಈ ಮಗುವೇ ಮುಂದೆ ಕರ್‍ಣನೆಂಬ ಹೆಸರಿನಲ್ಲಿ ಕೀರ್ತಿವಂತನಾಗುತ್ತಾನೆ; ಕಳೇಬರ=ಹೆಣ; ಭೋಂಕನೆ=ಇದ್ದಕ್ಕಿದ್ದಂತೆಯೇ;

ಕುಂತಿ ತನ್ನ ಚೊಚ್ಚಿಲ ಮಗನನ್ ದಿನೇಶಸುತನ್ ಅಂಗಮಹಿತಳಾಧಿಪ ರಾಧಾತನಯನ ಕಳೆಬರಮನ್ ಭೋಂಕನೆ ಕಂಡಳ್=ಕುಂತಿಯು ತನ್ನ ಚೊಚ್ಚಿಲ ಮಗನೂ ಸೂರ‍್ಯಪುತ್ರನೂ ಅಂಗರಾಜ್ಯದ ಒಡೆಯನೂ ರಾದೆಯ ಮಗನೂ ಆದ ಕರ‍್ಣನ ಹೆಣವನ್ನು ಆ ರಣರಂಗದ ಎಡೆಯೊಂದರಲ್ಲಿ ಬೋಂಕನೆ ಕಂಡಳು;

ತನು+ಶೋಕ+ಅನಳನ್; ತನು=ದೇಹ; ಅನಳ/ಲ=ಬೆಂಕಿ; ಅಳುರು=ಆವರಿಸು/ಸುಡು;

ತನು ಶೋಕಾನಳನ್ ಅಳುರಲ್=ಕುಂತಿಯ ಮಯ್ ಮನದಲ್ಲಿ ಸಂಕಟದ ಬೆಂಕಿಯು ಸುಡುತ್ತಿರಲು; ತಳ್ಕೈಸು=ತಬ್ಬು/ಅಪ್ಪು; ಪಳಯಿಸು=ಗೋಳಾಡು/ಪ್ರಲಾಪಿಸು; ನಿಜ=ತನ್ನ;

ಅಂತು ಕರ್ಣನ ಕಳೇಬರಮನ್ ತಳ್ಕೈಸಿ ಪಳಯಿಸುವ ನಿಜ ಜನನಿಯಮ್ ಧರ್ಮನಂದನನ್=ಆ ರೀತಿ ಕರ‍್ಣನ ಹೆಣವನ್ನು ತಬ್ಬಿಕೊಂಡು ಗೋಳಾಡುತ್ತಿರುವ ತನ್ನ ತಾಯಿ ಕುಂತಿಯನ್ನು ನೋಡಿ ಗಾಸಿಗೊಂಡ ದರ‍್ಮರಾಯನು; ಇವನ್+ಆರ್ಗೆ; ಆರ್=ಯಾರು; ಬೆಸಗೊಳ್=ಕೇಳು/ವಿಚಾರಿಸು;

ಇವನಾರ್ಗೆ ಎಂದು ಬೆಸಗೊಳ್ವುದುಮ್=ಇವನು ಯಾರ ಮಗ ಎಂದು ತಾಯಿ ಕುಂತಿಯನ್ನು ದರ‍್ಮರಾಯನು ಕೇಳಲು;

ವನ+ಜಾತ+ಪ್ರಿಯ+ಬಂಧುಗೆ; ವನ=ನೀರು; ಜಾತ=ಹುಟ್ಟಿದ್ದು; ವನಜಾತ=ತಾವರೆ; ವನಜಾತಪ್ರಿಯಬಂಧು=ಸೂರ್‍ಯ; ಅಂಗಪತಿ=ಅಂಗದೇಶದ ರಾಜನಾದ ಕರ್‍ಣ; ಧರ್ಮ=ಯಮನೆಂಬ ದೇವತೆ; ಹುತಾಶನ=ಅಗ್ನಿ ಎಂಬ ದೇವತೆ; ಹುತಾಶನಮಿತ್ರ=ವಾಯು ಎಂಬ ದೇವತೆ; ಬಕಾರಿ=ಬಕನೆಂಬ ರಕ್ಕಸನಿಗೆ ಶತ್ರುವಾದವನು/ಭೀಮ; ಕುಲಿಶಿ=ವಜ್ರಾಯುದ; ಕುಲಿಶಿಗ=ವಜ್ರಾಯುದವನ್ನುಳ್ಳ ದೇವೇಂದ್ರ; ಗಾಂಡೀವಿ=ಗಾಂಡೀವವೆಂಬ ಬಿಲ್ಲನ್ನುಳ್ಳವನು/ಅರ‍್ಜುನ;

ವನಜಾತಪ್ರಿಯಬಂಧುಗೆ ಅಂಗಪತಿಯನ್… ಧರ್ಮಂಗೆ ನಿನ್ನನ್… ಹುತಾಶನಮಿತ್ರಂಗೆ ಬಕಾರಿಯನ್… ಕುಲಿಶಿಗಮ್ ಗಾಂಡೀವಿಯನ್ ಪೆತ್ತೆನ್=ಸೂರ‍್ಯದೇವನಿಗೆ ಕರ‍್ಣನನ್ನು… ಯಮದೇವನಿಂದ ನಿನ್ನನ್ನು… ವಾಯುದೇವನಿಂದ ಬೀಮನನ್ನು… ದೇವೇಂದ್ರನಿಂದ ಅರ‍್ಜುನನನ್ನು ಹೆತ್ತೆನು;

ದಿನಕೃತ್=ಸೂರ‍್ಯದೇವ; ಅಗ್ರಜ=ಅಣ್ಣ;

ಈ ದಿನಕೃತ್ ನಂದನನ್ ಎನ್ನ ಚೊಚ್ಚಿಲ ಮಗನ್. ಕರ್ಣನ್ ನಿಮ್ಮ ಅಗ್ರಜನ್=ಈ ಕರ‍್ಣನು ನನ್ನ ಚೊಚ್ಚಿಲ ಮಗ. ಕರ‍್ಣ ನಿಮ್ಮ ಅಣ್ಣ;

ಆನ್=ನಾನು; ಇನಿತಮ್=ಇದೆಲ್ಲವನ್ನು; ಮೋಹ=ಅಕ್ಕರೆ/ಪ್ರೀತಿ; ಉಸಿರದೆ+ಇರ್ದೆನ್; ಉಸಿರು=ಹೇಳು;

ಆನ್ ಇನಿತಮ್ ನಿಮ್ಮಯ ಮೋಹದಿಂದೆ ಉಸಿರದಿರ್ದೆನ್=ನಾನು ಇದೆಲ್ಲವನ್ನೂ ನಿಮ್ಮಗಳ ಮೋಹದಿಂದೆ ಇದುವರೆಗೂ ಹೇಳದೆ ಇದ್ದೆನು;

ಧರ್ಮಜಾ… ಕೊಂದೆನಯ್ ಎಂಬುದುಮ್=ದರ‍್ಮರಾಯನೇ… ನನ್ನ ಚೊಚ್ಚಿಲ ಮಗನನ್ನು ನಾನೇ ಕೊಂದೆ ಎಂದು ಕುಂತಿಯು ಗೋಳಾಡುತ್ತ

ಹೇಳಲು;

ಮಕ್ಕಳ್ ಅತ್ಯಂತ ದುಃಖಿತರಾಗಿ=ಕರ‍್ಣನು ತಮ್ಮೆಲ್ಲರ ಅಣ್ಣನೆಂಬ ಸುದ್ದಿಯನ್ನು ಕೇಳಿ ಪಾಂಡವರು ಅತ್ಯಂತ ಸಂಕಟಕ್ಕೆ ಒಳಗಾಗಿ;

ಕರಮ್=ಹೆಚ್ಚಾಗಿ/ಬಹಳವಾಗಿ; ನೆಗಳ್=ಮಾಡು;

ಕರಮ್ ಇಂತು ಒಂದು ಅವಿವೇಕಮಮ್ ನೆಗಳ್ದಿರ್=ಎಲ್ಲಕ್ಕಿಂತ ಮಿಗಿಲಾಗಿ ಈ ರೀತಿಯ ವಿವೇಕವಿಲ್ಲದ ಕೆಲಸವನ್ನು ಮಾಡಿದಿರಿ;

ಅಂದೇಕೆ ಇಂತುಟಮ್ ಪೇಳದಿರ್ದಿರೊ=ಮೊದಲೇ ಏಕೆ ಈ ಸಂಗತಿಯನ್ನು ನಮಗೆ ಹೇಳದೆ ಸುಮ್ಮನಿದ್ದಿರಿ;

ಮುನ್ ಪೇಳ್ದೊಡೆ ಇದೇಕೆ ಕೂಡಿದಪುದು=ನೀವು ಮೊದಲೇ ಈ ಸಂಗತಿಯನ್ನು ಹೇಳಿದ್ದರೆ, ಕುರುಕ್ಶೇತ್ರ ರಣರಂಗದಲ್ಲಿ ಇಂತಹ ದುರಂತವೇ ನಡೆಯುತ್ತಿರಲಿಲ್ಲ;

ಉರ್ವರೆ=ಬೂಮಿ; ಸೌದರ್ಯ=ಅಣ್ಣತಮ್ಮಂದಿರ ಪ್ರೀತಿ;

ಎಮ್ಮ ಅಣ್ಣಂಗೆ ಉರ್ವರೆಯಮ್ ಕೊಟ್ಟು ಅವನ್ ಆಳ್ದನ್ ಆಗೆ ಬಳಿಕ ಆವು ಆಳಾಗಿ ಸೌದರ್ಯದಿಂದೆ ಇರೆವೇ=ನಮ್ಮ ಅಣ್ಣನಾದ ಕರ‍್ಣನಿಗೆ ಬೂಮಂಡಲವನ್ನು ಕೊಟ್ಟು, ಅವನು ರಾಜನಾಗಿ ಆಳುತ್ತಿರಲು, ಬಳಿಕ ನಾವು ಅವನ ಸೇವೆಯನ್ನು ಮಾಡುತ್ತ ಅಣ್ಣತಮ್ಮಂದಿರು ಪ್ರೀತಿಯಿಂದ ಜತೆಗೂಡಿ ಬಾಳುತ್ತಿರಲಿಲ್ಲವೇ; ಪೊಲ್ಲದು=ಸರಿಯಲ್ಲದುದು/ಅಹಿತವಾದುದು; ಜಡಿ=ಗದರಿಸು;

ಪೊಲ್ಲದು ಗೆಯ್ದಿರಿ ಎಂದು ಕುಂತೀಸುತರ್ ಕೊಂತಿಯನ್ ಜಡಿದರು=ಹಿತವಲ್ಲದ್ದನ್ನು ಮಾಡಿದಿರಿ ಎಂದು ಪಾಂಡುವರು ಕುಂತಿಯನ್ನು ಗದರಿಸಿದರು;

ಎಂಬುದುಮ್ ನಾರಾಯಣನ್=ತಾಯಿ ಕುಂತಿದೇವಿಯನ್ನು ಮಕ್ಕಳು ಈ ರೀತಿ ಗದರಿಸುತ್ತಿರುವುದನ್ನು ನೋಡಿದ ಕ್ರಿಶ್ಣನು ಅವರೆಲ್ಲರನ್ನೂ ಸಮಾದಾನಪಡಿಸುವಂತಹ ಮಾತುಗಳನ್ನಾಡಲು ತೊಡಗುತ್ತಾನೆ; ವಲಮ್=ದಿಟವಾಗಿ/ನಿಶ್ಚಯವಾಗಿ;

ಕ್ಷತ್ರಿಯ ಧರ್ಮಮ್ ಇಂತುಟೆ ವಲಮ್=ಕ್ಶತ್ರಿಯ ದರ‍್ಮ ಇರುವುದೇ ಈ ರೀತಿಯಾಗಿ; ಈ ದರ‍್ಮದಲ್ಲಿ ಹುಟ್ಟಿಬೆಳೆದವರು ದಾಯಾದಿಗಳಾಗಿ ಕಾಳೆಗದಲ್ಲಿ ತೊಡಗಿ ಸಾವುನೋವುಗಳಿಗೆ ಕಾರಣರಾಗುತ್ತಿರುತ್ತಾರೆ. ಇಂತಹ ದುರಂತ ಕ್ಶತ್ರಿಯರಲ್ಲಿ ನಡೆಯುತ್ತಲೇ ಇರುತ್ತದೆ;

ತ=ಪೆಟ್ಟು/ಗಾಯ; ಮನಃಕ್ಷತ=ಮನಸ್ಸಿಗೆ ಬಿದ್ದ ಪೆಟ್ಟು/ಮಾನಸಿಕವಾಗಿ ಉಂಟಾದ ನೋವು;

ಮನಃಕ್ಷತಮ್ ಪಡಲ್ವೇಡಿಮ್=ಮಾನಸಿಕವಾಗಿ ಗಾಸಿಗೊಳ್ಳಬೇಡಿ; ಸಂಸಾರ=ಲೋಕದಲ್ಲಿ ಮಾನವ ಜೀವಿಯ ಬದುಕು; ಸಂಸಾರ ಸ್ವರೂಪ=ಮಾನವ ಜೀವಿಯ ಬದುಕಿನಲ್ಲಿ ಉಂಟಾಗುವ ಒಳಿತು ಕೆಡುಕು/ಸಾವುನೋವಿನ ಪ್ರಸಂಗಗಳು; ಸೈರಿಸು=ತಾಳು/ಸಹಿಸು; ವಿಗತ=ಇಲ್ಲದಿರುವ; ವಿಗತ ಶೋಕರ್=ಸಂಕಟವಿಲ್ಲದವರು;

ಸಂಸಾರ ಸ್ವರೂಪಮನ್ ಅರಿದು ಸೈರಿಸುವುದು ಎಂದು ಅವರಮ್ ವಿಗತ ಶೋಕರ್ ಮಾಡೆ=ಮಾನವ ಜೀವನದಲ್ಲಿ ಒಳಿತು ಕೆಡುಕು/ಸಾವು ನೋವು ಎಂಬುವು ಇದ್ದೇ ಇರುತ್ತವೆ ಎಂಬ ವಾಸ್ತವವನ್ನು ಅರಿತು ತಾಳ್ಮೆಯಿಂದ ಬಾಳುವುದು ಒಳ್ಳೆಯದು ಎಂದು ಕ್ರಿಶ್ಣನು ನುಡಿದು, ಅವರೆಲ್ಲರ ಮನದ ಸಂಕಟವನ್ನು ಪರಿಹರಿಸಲು; ಪ್ರಭೃತಿಗಳ=ಮೊದಲಾದವರ; ದ್ವಿಜ=ಬ್ರಾಹ್ಮಣ; ನಿರ್ವತಿಸು=ಮಾಡು/ನೆರವೇರಿಸು;

ದುರ್ಯೋಧನ ಪ್ರಭೃತಿಗಳ ಪೆಣಂಗಳನ್ ಒಂದೆಡೆಯೊಳ್ ಇಟ್ಟು, ದ್ವಿಜರಿಮ್ ಸಂಸ್ಕಾರ ಕರ್ಮಮನ್ ನಿರ್ವರ್ತಿಸಿ=ದುರ‍್ಯೋದನನನ್ನು ಮೊದಲುಗೊಂಡು ರಣರಂಗದಲ್ಲಿ ಸತ್ತಬಿದ್ದಿದ್ದವರ ಹೆಣಗಳನ್ನು ಒಂದು ಎಡೆಯಲ್ಲಿ ಇಟ್ಟು, ಬ್ರಾಹ್ಮಣರಿಂದ ಉತ್ತರಕ್ರಿಯೆಗಳನ್ನು ನೆರವೇರಿಸಿ;

ಕರ್ಣನ ಕಳೇಬರಮನ್ ಬ್ರಾಹ್ಮಣರಿಮ್ ತಾವೆ ಸಂಸ್ಕಾರಮಮ್ ಮಾಡಿ=ಕರ‍್ಣನ ಶವಕ್ಕೆ ಬ್ರಾಹ್ಮಣರ ಜತೆಗೆ ಪಾಂಡವರು ತಾವು ಸೇರಿಕೊಂಡು ಉತ್ತರಕ್ರಿಯೆಯನ್ನು ಮಾಡಿ;

ಸಮಸ್ತರ್ಗಮ್ ಜಲದಾನ ಕ್ರಿಯೆಗಳಮ್ ನಿರ್ವರ್ತಿಸಿ=ಹೆಣಗಳನ್ನು ಒಪ್ಪಮಾಡಿದ ನಂತರ ಎಲ್ಲರಿಗೂ ನೀರನ್ನು ತರ‍್ಪಣವಾಗಿ ಬಿಡುವ ಆಚರಣೆಗಳನ್ನು ಮಾಡಿ;

ಅನಶನ=ಉಪವಾಸ/ ಆಹಾರವನ್ನು ಸೇವಿಸದಿರುವುದು; ದೀಕ್ಷೆ=ನೋಂಪಿ/ ವ್ರತ; ತಾಳ್ದು+ಇಮ್; ಇಮ್=ಮತ್ತೆ/ಇಲ್ಲಿಂದ ಮುಂದೆ; ತಾಳ್ದು=ಹೊಂದು/ಪಡೆ;

ತದನಂತರ ಕೊಂತಿಯುಮ್ ಗಾಂಧಾರಿಯುಮ್ ಧೃತರಾಷ್ಟ್ರನುಮ್ ಕುರು ನರೇಂದ್ರನ ಅರಸಿಯರ್ ಮೊದಲಾಗೆ ಎಲ್ಲರುಮ್ ಅನಶನ ದೀಕ್ಷೆಯಮ್ ಕೈಕೊಂಡು ಉತ್ತಮ ಮೋಕ್ಷಮಮ್ ತಾಳ್ದಿದರ್=ಉತ್ತರಕ್ರಿಯಾದಿಗಳು ಮುಗಿದ ನಂತರ ಕುಂತಿ, ಗಾಂದಾರಿ, ದ್ರುತರಾಶ್ಟ್ರ ಮತ್ತು ಕುರುರಾಜನ ಅರಸಿಯರು ಮೊದಲುಗೊಂಡು ರಾಣಿವಾಸದವರೆಲ್ಲರೂ ಉಪವಾಸ ವ್ರತವನ್ನು ಸ್ವೀಕರಿಸಿ ಉತ್ತಮವಾದ ಮೋಕ್ಶವನ್ನು ಹೊಂದಿದರು;

ಇತ್ತಲ್ ಧರ್ಮನಂದನನ್ ಮುಕುಂದಂಗೆ ಕಯ್ಯಮ್ ಮುಗಿದು=ಈ ಕಡೆ ದರ‍್ಮರಾಯನು ಕ್ರಿಶ್ಣನಿಗೆ ಕಯ್ಯನ್ನು ಮುಗಿದು;

ಇನಿತು+ಒಂದು; ಇನಿತು=ಇಷ್ಟು; ಉಗ್ರ=ಬಯಂಕರ; ಸಮಸ್ತ=ಸಕಲ/ಎಲ್ಲವನ್ನೂ ಒಳಗೊಂಡ; ಮಹಾಭಾರ+ಅತಿ+ಯುದ್ಧಮ್; ಭಾರ=ಕಶ್ಟಕರವಾದುದು; ಅರಾತಿ=ಹಗೆ/ಶತ್ರು;

ಇನಿತೊಂದು ಉಗ್ರ ಸಮಸ್ತ ಭಾರತ ಮಹಾಭಾರಾತಿಯುದ್ಧಮ್=ಸಮಸ್ತ ಬಾರತದ ರಾಜರ ಸೇನಾಬಲಗಳನ್ನು ಒಳಗೊಂಡು ಅತಿದೊಡ್ಡ ಹಗೆಯೊಡನೆ ಇಷ್ಟೊಂದು ಬಯಂಕರವಾಗಿ ನಡೆದ ಮಹಾಯುದ್ದವು;

ನಿಜ+ಅನುಗ್ರಹದ+ಇಂದಮ್+ಆಯ್ತು; ನಿಜ=ನಿನ್ನ; ಅನುಗ್ರಹ=ಕರುಣೆ/ದಯೆ;

ಮುಕುಂದ, ನಿಜಾನುಗ್ರಹದಿಂದಮಾಯ್ತು=ಕೃಷ್ಣನೇ, ನಿನ್ನ ದಯೆಯಿಂದ ಜಯದಲ್ಲಿ ಮುಕ್ತಾಯಗೊಂಡಿತು;

ಪಾರ್ಥನ್ ಕಿರಿಯನ್=ಅರ್‍ಜುನನು ಚಿಕ್ಕವನು;

ಮಹೀ=ಬೂಮಿ;

ಎನಗೆ ಮಹೀ ಮೋಹಮಿಲ್ಲ=ನನಗೆ ರಾಜನಾಗಿ ರಾಜ್ಯವನ್ನು ಆಳಬೇಕೆಂಬ ಮೋಹವಿಲ್ಲ;

ಪಟ್ಟಬಂಧಮ್+ಅನ್; ಪಟ್ಟಬಂಧ=ಶಾಸ್ತ್ರೋಕ್ತವಾದ ಆಚರಣೆಗಳಿಂದ ವ್ಯಕ್ತಿಯೊಬ್ಬನಿಗೆ ರಾಜಪದವಿಯನ್ನು ನೀಡುವುದು/ಕಿರೀಟವನ್ನು ತೊಡಿಸಿ ಸಿಂಹಾಸನದ ಮೇಲೆ ರಾಜನನ್ನಾಗಿ ಕುಳ್ಳಿರಿಸುವ ಆಚರಣೆ;

ಈ ಭೀಮಂಗೆ ನೀನ್ ಪಟ್ಟಬಂಧಮನ್ ಮಾಳ್ಪುದು=ಈ ಬೀಮನಿಗೆ ನೀನು ಪಟ್ಟವನ್ನು ಕಟ್ಟಿ ಅವನನ್ನು ರಾಜನನ್ನಾಗಿ ಮಾಡುವುದು; ಲಬ್ಧ=ದೊರಕಿದ/ ಪ್ರಾಪ್ತವಾದ;

ಈತನ್ ಕುರುಯುದ್ಧ ಲಬ್ಧ ಜಯನ್=ಈತನು ಕುರುಕ್ಶೇತ್ರ ಯುದ್ದದಲ್ಲಿ ಜಯಶಾಲಿಯಾಗಿದ್ದಾನೆ; ಪ್ರಸ್ಥಾನಮ್+ಅಮ್; ಪ್ರಸ್ಥಾನ=ಪ್ರಯಾಣ;

ಅದರ್ಕೆ ಹಸ್ತಿನಪುರ ಪ್ರಸ್ಥಾನಮಮ್ ಮಾಡುವಮ್ ಎಂಬುದುಮ್=ಅದಕ್ಕಾಗಿ ಹಸ್ತಿನಪುರದತ್ತ ಪ್ರಯಾಣವನ್ನು ಮಾಡೋಣ ಎಂದು ನುಡಿಯಲು;

ಮುಂತಾಗಿ=ಮುಂದೆ ಬಂದು ನಿಂತು/ಮುಂದಾಳತ್ವವನ್ನು ವಹಿಸಿಕೊಂಡು;

ಭೀಮಂಗೆ ಪಟ್ಟಬಂಧಮನ್ ಮಾಳ್ಪುದೆಂದು ವಾಸುದೇವನ್ ಮುಂತಾಗಿ=ಬೀಮನಿಗೆ ಪಟ್ಟಕಟ್ಟುವ ಮಹೋತ್ಸವವನ್ನು ಮಾಡಬೇಕೆಂದು ಕ್ರಿಶ್ಣನೇ ಮುಂದಾಳತ್ವವನ್ನು ವಹಿಸಿಕೊಂಡು;

ನಿರೂಪಿಸು=ಅಣಿಗೊಳಿಸು/ಸಿದ್ದಗೊಳಿಸು/ಗೊತ್ತುಪಡಿಸಿದ;

ಸಹದೇವನ್ ನಿರೂಪಿಸಿದ ಶುಭ ಮುಹೂರ್ತದೊಳ್ ಹಸ್ತಿನಪುರಮನ್ ಪೊಕ್ಕು=ಸಹದೇವನು ಗೊತ್ತುಪಡಿಸಿದ ಒಳ್ಳೆಯ ಕಾಲದಲ್ಲಿ ಹಸ್ತಿನಪುರವನ್ನು ಹೊಕ್ಕು;

ತಾಟಿಸು=ಹೊಡೆ/ಬಡಿ; ಮಹಾ+ಭೇರಿ+ರವಮ್; ಮಹಾ=ದೊಡ್ಡ; ಭೇರಿ=ದುಂದುಬಿ/ಒಂದು ಬಗೆಯ ಚರ್‍ಮವಾದ್ಯ/ನಗಾರಿ; ರವ=ದನಿ/ಶಬ್ದ; ದೆಸೆ=ದಿಕ್ಕು; ತೆಕ್ಕನೆ=ಕೂಡಲೇ/ಅತಿಶಯವಾಗಿ/ಹೆಚ್ಚಾಗಿ; ತೀವು=ಹರಡು/ ವ್ಯಾಪಿಸು;

ತಾಟಿತ ಮಹಾಭೇರೀರವಮ್ ದೆಸೆಯಮ್ ತೆಕ್ಕನೆ ತೀವೆ=ಬಡಿಯುತ್ತಿರುವ ದೊಡ್ಡ ದೊಡ್ಡ ನಗಾರಿಗಳಿಂದ ಹೊರಹೊಮ್ಮುತ್ತಿರುವ ದನಿಯು ದಿಕ್ಕುಗಳೆಲ್ಲಕ್ಕೂ ಹೆಚ್ಚಾಗಿ ಹಬ್ಬುತ್ತಿರಲು;

ವಿಪ್ರ=ಬ್ರಾಹ್ಮಣ; ಎಂಟು+ದೆಸೆ+ಒಳ್; ಎಣ್ದೆಸೆ=ಎಂಟು ದಿಕ್ಕು; ವೇದ+ನಿನಾದದ+ಇಮ್; ನಿನಾದ=ದನಿ/ಶಬ್ದ; ಪರಸು=ಒಳ್ಳೆಯದನ್ನು ಹಾರಯಿಸು;

ವಿಪ್ರರ್ ಎಣ್ದೆಸೆಯೊಳ್ ವೇದನಿನಾದದಿಮ್ ಪರಸೆ=ಬ್ರಾಹ್ಮಣರು ಎತ್ತರದ ದನಿಯಲ್ಲಿ ಉಚ್ಚರಿಸುತ್ತಿರುವ ವೇದದ ಮಂತ್ರಗಳು ಎಂಟು ದಿಕ್ಕುಗಳಲ್ಲಿಯೂ ಒಳಿತನ್ನು ಹಾರೈಸುತ್ತಿರಲು;

ಪಂಕೇಜ+ಅಕ್ಷಿ+ಅರ್; ಪಂಕೇಜ=ತಾವರೆ; ಅಕ್ಷಿ=ಕಣ್ಣು; ಸೇಸೆ+ಅನ್+ಇಕ್ಕೆ; ಸೇಸೆ=ಅರಿಸಿನ ಇಲ್ಲವೇ ಕುಂಕುಮವನ್ನು ಬಳಿದಿರುವ ಅಕ್ಕಿಯ ಕಾಳುಗಳು. ಇದನ್ನು ಮಂಗಳಕರವಾದ ಪೂಜೆಯ ಆಚರಣೆಗಳಲ್ಲಿ ಬಳಸುತ್ತಾರೆ;

ಪಂಕೇಜಾಕ್ಷಿಯರ್ ಕೂಡಿ ಸಂತಸದಿಮ್ ಸೇಸೆಯನಿಕ್ಕೆ=ತಾವರೆಗಣ್ಣಿನ ಹೆಂಗಸರು ಜತೆಗೂಡಿ ಆನಂದದಿಂದ ಮಂಗಳಕರವಾದ ಅಕ್ಶತೆಯ ಕಾಳುಗಳನ್ನು ಎರಚುತ್ತಿರಲು; ಪ್ರಾಕಾರ=ಸುತ್ತಲೂ ಕಟ್ಟಿರುವ ಗೋಡೆ; ಮುದ=ಹಿಗ್ಗು;

ಪಾಂಡವಬಲ ಪ್ರಾಕಾರ ವೀರಂಗೆ… ಸಾಹಸ ಭೀಮಂಗೆ ಮನೋಮುದಮ್ ಬೆರಸು ಕೃಷ್ಣನ್ ಪಟ್ಟಮಮ್ ಕಟ್ಟಿದನ್=ಪಾಂಡವಬಲವನ್ನು ಸುತ್ತುವರಿದು ಕಾಪಾಡುವ ವೀರನಿಗೆ… ಸಾಹಸ ಬೀಮನಿಗೆ ಕ್ರಿಶ್ಣನು ಮನದ ಹಿಗ್ಗಿನಿಂದ ಕೂಡಿ ಪಟ್ಟವನ್ನು ಕಟ್ಟಿದನು;

ಶ್ರೀ+ಅಮ್; ಶ್ರೀ=ಸಂಪತ್ತು ಮತ್ತು ರಾಜ್ಯದ ಗದ್ದುಗೆಯ ದೇವತೆಯಾದ ಲಕ್ಶ್ಮಿ ; ಕುರು+ಭೂಭೃತ್+ಬಲ; ಭೂಭೃತ್=ರಾಜ ; ಬಲ=ಸೇನೆ ; ತೋಯಧಿ+ಒಳ್; ತೋಯಧಿ=ಕಡಲು/ ಸಾಗರ; ಮಂದರ=ಒಂದು ಪರ್‍ವತದ ಹೆಸರು ; ಕಡೆದು=ಮಂತುಗೋಲಿನಿಂದ ಹೊಸೆಯುವುದು/ಕಲಕುವುದು;

ಕುರುಭೂಭೃದ್ಬಲ ತೋಯಧಿಯೊಳ್ ಭುಜಮಂದರದಿಮ್ ಕಡೆದು ಶ್ರೀಯಮ್ ಪಡೆದು=ಕುರುರಾಜನ ಸೇನಾಸಾಗರವನ್ನು ತನ್ನ ಬಾಹುವೆಂಬ ಮಂದರ ಪರ್‍ವತದಿಂದ ಕಡೆದು ಸಂಪತ್ತು ಮತ್ತು ಅದಿಕಾರದ ಗದ್ದುಗೆಯ ದೇವತೆಯಾದ ಲಕ್ಶ್ಮಿಯನ್ನು ಪಡೆದುಕೊಂಡು;

ದಾಯಾದಿ=ಆಸ್ತಿಯಲ್ಲಿ ಪಾಲುದಾರರಾದ ಕುಟುಂಬ ವರ್‍ಗದವರು; ದಾಯಾದಮಲ್ಲ=ದಾಯಾದಿಗಳಿಗೆ ಜಟ್ಟಿಯಂತಿರುವವನು/ದಾಯಾದಿಗಳನ್ನು ಸದೆಬಡಿಯಬಲ್ಲ ಜಟ್ಟಿ ; ಅಜೇಯ=ಸೋಲಿಲ್ಲದವನು ; ವಿಭಾಸಿ=ಕಾಂತಿಯಿಂದ ಕಂಗೊಳಿಸುವವನು;

ದಾಯಾದಮಲ್ಲನ್ ಎನಿಸಿದ ಅಜೇಯನ್ ಭುಜಬಲ ವಿಭಾಸಿ ಸಾಹಸಭೀಮನ್=ದಾಯಾದಿಗಳನ್ನು ಸದೆಬಡಿದ ಜಟ್ಟಿ ಎನಿಸಿದ… ಸೋಲರಿಯದ ಸಾಹಸಿಯಾದ ಬೀಮಸೇನನು ತೋಳ್ಬಲದ ತೇಜಸ್ಸಿನಿಂದ ಕಂಗೊಳಿಸುತ್ತಿದ್ದನು;

(ಚಿತ್ರಸೆಲೆ:jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *