ಕುಮಾರವ್ಯಾಸ ಬಾರತ ಓದು: ಆದಿಪರ್ವ – ಮತ್ಸ್ಯಗಂದಿ ಪ್ರಸಂಗ – ನೋಟ – 1
ಮತ್ಸ್ಯಗಂದಿ ಪ್ರಸಂಗ
(ಆದಿ ಪರ್ವ: ಎರಡನೆಯ ಸಂಧಿ: ಪದ್ಯ:23 ರಿಂದ 29)
ಪಾತ್ರಗಳು
ಪರಾಶರ: ಒಬ್ಬ ಮುನಿ. ಬ್ರಹ್ಮದೇವನ ಮೊಮ್ಮಗ.
ಮತ್ಸ್ಯಗಂದಿ: ಬೆಸ್ತರ ಒಡೆಯನ ಸಾಕು ಮಗಳು.ಈಕೆಗೆ ಯೋಜನಗಂದಿ ಮತ್ತು ಸತ್ಯವತಿ ಎಂಬ ಮತ್ತೆರಡು ಹೆಸರುಗಳು ಇದ್ದವು.
ವೇದವ್ಯಾಸ: ಮತ್ಸ್ಯಗಂದಿ ಮತ್ತು ಪರಾಶರ ಮುನಿಯ ಮಗ.
ಶಂತನು: ಹಸ್ತಿನಾವತಿಯಲ್ಲಿ ನೆಲೆಸಿದ್ದ ಕುರುವಂಶದ ರಾಜ. ಗಂಗಾದೇವಿ ಮತ್ತು ಯೋಜನಗಂದಿ ಎಂಬುವರು ಈತನ ಇಬ್ಬರು ಹೆಂಡತಿಯರು.
ದೀವರ: ಯಮುನಾ ನದಿ ತೀರದಲ್ಲಿ ನೆಲೆಸಿದ್ದ ಬೆಸ್ತರ ಸಮುದಾಯದ ಒಡೆಯ. ಮತ್ಸ್ಯಗಂದಿಯ ಸಾಕು ತಂದೆ.
ಬೀಶ್ಮ: ಶಂತನು ಮತ್ತು ಗಂಗಾದೇವಿಯ ಮಗ
ಮತ್ಸ್ಯಗಂಧಿ ಪ್ರಸಂಗ
ಮತ್ಸ್ಯದ ಬಸುರಲಿ ಉದಿಸಿದ ನಳಿನಲೋಚನೆ ಮತ್ಸ್ಯಗಂಧಿನಿ ಬೆಳೆವುತಿರ್ದಳು. ಪರಾಶರ ವ್ರತಿಯ ಸಂಗವಾಯ್ತು. ಬಳಿಕ ಯೋಜನಗಂಧಿಯಲ್ಲಿಂದ ಅಭ್ರಶ್ಯಾಮನ್ ಉರು ಪಿಂಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ ಇಳಿದನು.
ವೇದವ್ಯಾಸ: ವಿಪತ್ತಿನೊಳು ನೆನೆ.
(ಎಂದು ತಾಯನು ತನುಜ ಬೀಳ್ಕೊಂಡನು. ಪರಾಶರ ಮುನಿ ಆ ಸತಿಗೆ ಪುನಃ ಕನ್ಯತ್ವವನು ಕರುಣಿಸಿದನು. ವಿನುತ ಯಮುನಾ ತೀರದಲಿ ಬೇಂಟೆಯಾಡುತ ಜನಪ ಶಂತನು ಪರಿಮಳದ ಬಳಿವಿಡಿದು ಬಂದು, ಈ ಮಾನಿನಿಯ ಕಂಡನು. ಮದನನ ಎಸುಗೆಯಲಿ ಮರುಳುಗೊಂಡನು. ತರುಣಿಯನು ಕಂಡು… )
ಶಂತನು: ಆರು ನೀನು?
(ಎಂದು ಅರಸ ಬೆಸಗೊಳುತ… ಎಸೆವ ಕಾಮನ ಶರಕೆ ಮೈಯೊಡ್ಡಿ…)
ಶಂತನು: ಅರಮನೆಗೆ ನಡೆ.
(ಎನಲು)
ಯೋಜನಗಂಧಿ: ತಂದೆಯ ಪರಮ ವಚನವು ಅಲಂಘ್ಯ.
(ಎನೆ… ಕಾತರಿಸಿ ಭಗ್ನ ಮನೋರಥನು ಮಂದಿರಕೆ ಮರಳಿದನು… ವಿರಹದ ಆವುಗೆ ಕಿಚ್ಚು ಭೂಮೀಶ್ವರನ ಮುಸುಕಿತು… ಅರಸ, ಬಲಿದ ಅವಸ್ಥೆಯನು ಬಣ್ಣಿಸಲು ಅರಿಯೆನು… “ಏಳೆಂಟೊಂಬತ್ತರ ಬಳಿಯ ಮರಣವು ಈತಂಗೆ” ಎಂಬ ಜನರ ಉಬ್ಬರದ ಗುಜುಗುಜು ಪರಿದು, ಭೀಷ್ಮ ವಹಿಲದಲಿ ಯಮುನಾ ವರನದಿಯ ತೀರಕ್ಕೆ ಬಂದನು. ಧೀವರನನ್ ಕರೆಸಿದನು.)
ಭೀಷ್ಮ: ನಿನ್ನ ಮಗಳು ಅಯ್ಯಂಗೆ ಅರಸಿಯಾಗಲಿ.
(ಎನಲು)
ಧೀವರ: ಅರಸಿಯಾದರೆ… ಮಗಳ ಮಕ್ಕಳು ರಾಜ್ಯವಾಳುವರೆ… ಬರಿ ಅರಸುತನ ನಮಗೇಕೆ?… ಇದನು ನೀ ಅರಿದು ಸಲಿಸುವುದು.
( ಎನಲು… ಧೀವರನ ಮಾತಿಂಗೆ… ಈತನು ಎಂದನು.)
ಭೀಷ್ಮ: ಆದರೆ… ಇಲ್ಲಿಮ್ ಮೇಲೆ ನಾರಿಯರಾದವರು ಭಾಗೀರಥಿಗೆ ಸರಿ… ನಿನ್ನಯ ಮಗಳ ಮಕ್ಕಳಿಗೆ ಮೇದಿನಿಯ ಸಲಿಸುವೆನು… ಈ ದಿವಿಜರು ಈ ಹರಿಹರ ಬ್ರಹ್ಮಾದಿ ದೇವರು ಸಾಕ್ಷಿ…
(ಎಂದು ಆ ದಯಾಂಬುಧಿ ನಗುತ… )
ಹೋಗು… ನಿನ್ನಯ ಮಗಳ ಕರೆಸು.
(ಎಂದ. ದಂಡಿಗೆಯ ತರಿಸಿದನು. ನೆಲನ ದಂಡಿಯ ಚರರ ಉಗ್ಗಡಣೆಯಲಿ ಸರಸಿರುಮುಖಿಯನು ತಂದು ಪಿತಗೆ ಮದುವೆಯ ಉರವಣಿಸಿ ಮಾಡಿದನು. ಮಗ ನುಡಿದ ಭಾಷೆಯನು ಅರಸ ಕೇಳಿದು ಬಳಿಕ, ಭೀಷ್ಮಗೆ ವರವನು ಇತ್ತನು.)
ಶಂತನು: ಮರಣವದು ನಿನ್ನಿಚ್ಛೆ ಹೋಗು.
(ಎಂದ.)
ಪದ ವಿಂಗಡಣೆ ಮತ್ತು ತಿರುಳು
ಮತ್ಸ್ಯ=ಮೀನು; ಬಸುರು=ಹೊಟ್ಟೆ; ಉದಿಸು=ಹುಟ್ಟು; ನಳಿನ=ತಾವರೆ; ಲೋಚನ=ಕಣ್ಣು; ಮತ್ಸ್ಯಗಂಧಿನಿ=ಉಪರಿಚರವಸು ಎಂಬ ರಾಜ ಮತ್ತು ಬೆಸ್ತ ಸಮುದಾಯದ ಒಂದು ಹೆಣ್ಣಿನ ಕಾಮದ ನಂಟಿನಿಂದ ಹುಟ್ಟಿದವಳು. ಬೆಸ್ತ ಸಮುದಾಯದ ದೀವರನ ಸಾಕು ಮಗಳು;
ಮತ್ಸ್ಯದ ಬಸುರಲಿ ಉದಿಸಿದ ನಳಿನಲೋಚನೆ ಮತ್ಸ್ಯಗಂಧಿನಿ ಬೆಳೆವುತಿರ್ದಳು=ಬೆಸ್ತರ ಸಮುದಾಯದಲ್ಲಿ ಹುಟ್ಟಿದ ತಾವರೆಗಣ್ಣಿನ ಮತ್ಸ್ಯಗಂದಿನಿಯು ಪ್ರಾಯಕ್ಕೆ ಅಡಿಯಿಡುತ್ತಿದ್ದಳು;
ಪರಾಶರವ್ರತಿಯ ಸಂಗವಾಯ್ತು=ಪರಾಶರನೆಂಬ ಒಬ್ಬ ಮುನಿಯೊಡನೆ ಮತ್ಸ್ಯಗಂದಿಯು ಕಾಮದ ನಂಟನ್ನು ಹೊಂದಿದಳು; ಯೋಜನಗಂಧಿ=ಮತ್ಸ್ಯಗಂದಿಯು ಪರಾಶರ ಮುನಿಯೊಡನೆ ಕಾಮದ ನಂಟನ್ನು ಹೊಂದಿದ ಮೇಲೆ ಆಕೆಗೆ ಯೋಜನಗಂದಿ ಎಂಬ ಹೆಸರು ಬಂದಿತು. ‘ಗಂಧ’ ಎಂದರೆ ಕಂಪು/ಪರಿಮಳ/ವಾಸನೆ. ಮೀನುಗಾರರ ಸಮುದಾಯದಲ್ಲಿ ಹುಟ್ಟಿ ಬೆಳೆದಿದ್ದ ಈಕೆಯ ದೇಹದ ವಾಸನೆಯು ಮೀನಿನ ಜಿಡ್ಡಿನಿಂದ ಕೂಡಿತ್ತು. ಆದ್ದರಿಂದ ಈಕೆಯು ಮತ್ಸ್ಯಗಂದಿ ಎನಿಸಿದ್ದಳು. ಇದೀಗ ಪರಾಶರ ಮುನಿಯ ಕೂಡುವಿಕೆಯಿಂದಾಗಿ ಈಕೆಯ ದೇಹವು ಸುವಾಸನೆಯನ್ನು ಪಡೆಯಿತು ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ಈಕೆಗೆ ಯೋಜನಗಂದಿ ಎಂಬ ಹೆಸರು ಬಂದಿದೆ. ‘ಯೋಜನ’ ಎಂಬ ಪದ ಹಲವು ಮೈಲಿಗಳ ದೂರವನ್ನು ಸೂಚಿಸುತ್ತದೆ. ಈಕೆಯು ಇದ್ದ ಜಾಗದ ಸುತ್ತಮುತ್ತ ಹಲವಾರು ಮೈಲಿಗಳ ವರೆಗೆ ಸುವಾಸನೆಯು ಹರಡುತ್ತಿತ್ತು ಎಂಬ ಕಲ್ಪನೆಯಿದೆ;
ಅಭ್ರ=ಮೋಡ; ಶ್ಯಾಮ=ಕಪ್ಪು ಬಣ್ಣ/ಕಡು ನೀಲಿ ಬಣ್ಣ; ಉರು=ಉತ್ತಮವಾದ/ಒಳ್ಳೆಯ; ಪಿಂಗಳ=ಹೊಂಬಣ್ಣ/ಹಳದಿ ಬಣ್ಣ; ಜಟಾಪರಿಬದ್ಧ=ಜಟೆಯಿಂದ ಕೂಡಿದ; ಇಳಿದನು=ಹುಟ್ಟಿದನು;
ಬಳಿಕ ಯೋಜನಗಂಧಿಯಲ್ಲಿಂದ ಅಭ್ರಶ್ಯಾಮನ್ ಉರು ಪಿಂಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ ಇಳಿದನು=ಪರಾಶರ ಮುನಿಯೊಡನೆ ಯೋಜನಗಂದಿಯು ಕಾಮದ ನಂಟನ್ನು ಪಡೆದ ನಂತರ, ಆಕೆಯ ಹೊಟ್ಟೆಯಿಂದ ಮೋಡದಂತೆ ಕಪ್ಪಾದ ಮಯ್ ಬಣ್ಣವುಳ್ಳ ಹೊನ್ನಿನ ಬಣ್ಣದ ಜಟೆಯನ್ನುಳ್ಳ ವೇದವ್ಯಾಸ ಮುನಿಯು ಹುಟ್ಟಿದನು;
ತನುಜ=ಮಗ;
ವಿಪತ್ತಿನೊಳು ನೆನೆ ಎಂದು ತಾಯನು ತನುಜ ಬೀಳ್ಕೊಂಡನು=“ಜೀವನದಲ್ಲಿ ಆಪತ್ತು ಬಂದಾಗ ನನ್ನನ್ನು ನೆನೆದರೆ… ಬಂದು ನೆರವನ್ನು ನೀಡುತ್ತೇನೆ” ಎಂದು ಮಗನಾದ ವೇದವ್ಯಾಸನು ತಾಯಿಗೆ ವಾಗ್ದಾನವನ್ನು ಮಾಡಿ ತಂದೆಯೊಡನೆ ಹೊರಟನು;
ಕನ್ಯತ್ವ=ಕಾಮದ ನಂಟನ್ನು ಪಡೆಯುವುದಕ್ಕೆ ಮೊದಲು ಇರುವ ಹೆಣ್ಣಿನ ದೇಹದ ಸ್ತಿತಿ;
ಪರಾಶರ ಮುನಿ ಆ ಸತಿಗೆ ಪುನಃ ಕನ್ಯತ್ವವನು ಕರುಣಿಸಿದನು=ಪರಾಶರ ಮುನಿಯು ಆ ಹೆಣ್ಣಿಗೆ ಮತ್ತೆ ಕನ್ಯತ್ವವನ್ನು ನೀಡಿದನು.
ವಿನುತ=ಹೆಸರಾಂತ/ಚೆಲುವಾದ; ಜನಪ=ರಾಜ; ಬಳಿವಿಡಿದು=ಅನುಸರಿಸಿಕೊಂಡು/ಹಿಂಬಾಲಿಸಿಕೊಂಡು; ಮಾನಿನಿ=ಹೆಂಗಸು;
ವಿನುತ ಯಮುನಾ ತೀರದಲಿ ಬೇಂಟೆಯಾಡುತ ಜನಪ ಶಂತನು ಪರಿಮಳದ ಬಳಿವಿಡಿದು ಬಂದು ಈ ಮಾನಿನಿಯ ಕಂಡನು=ಹೆಸರಾಂತ ಯುಮುನಾ ನದಿಯ ತೀರದಲ್ಲಿ ಬೇಟೆಯಾಡುತ್ತ ಬರುತ್ತಿದ್ದ ಶಂತನು ರಾಜನ ಮೂಗಿಗೆ ಸುವಾಸನೆಯು ತಟ್ಟುತ್ತದೆ. ಸುವಾಸನೆಯು ಬಂದ ದಿಕ್ಕಿನಲ್ಲಿಯೇ ನಡೆದುಬಂದ ರಾಜ ಶಂತನು ಈ ಯೋಜನಗಂದಿಯನ್ನು ಕಾಣುತ್ತಾನೆ;
ಮದನ=ಹೆಣ್ಣು ಗಂಡಿನ ಮಯ್ ಮನದಲ್ಲಿ ಕಾಮ ಮತ್ತು ಪ್ರೇಮದ ಒಳಮಿಡಿತಗಳನ್ನು ಉಂಟುಮಾಡುವ ದೇವತೆ. ಈತನಿಗೆ ‘ಮನ್ಮತ’ ಎಂಬ ಮತ್ತೊಂದು ಹೆಸರಿದೆ. ಈತನು ತನ್ನ ಬಳಿಯಿರುವ ಹೂ ಬಾಣಗಳನ್ನು ಹೆಣ್ಣು ಗಂಡಿನ ಎದೆಗೆ ಬಿಟ್ಟು, ಅವರ ಮಯ್ ಮನದಲ್ಲಿ ಕಾಮೋದ್ರೇಕದ ಒಳಮಿಡಿತಗಳನ್ನು ಕೆರಳಿಸುತ್ತಾನೆ ಎಂಬ ಕಲ್ಪನೆ ಜನಮನದಲ್ಲಿದೆ; ಎಸುಗೆ=ಬಾಣವನ್ನು ಬಿಡುವುದು; ಮರುಳು=ಮೋಹ/ಹುಚ್ಚು;
ಮದನನ ಎಸುಗೆಯಲಿ ಮರುಳುಗೊಂಡನು=ಯೋಜನಗಂದಿಯನ್ನು ನೋಡನೋಡುತ್ತಿದ್ದಂತೆಯೇ ಶಂತನು ರಾಜನ ಮಯ್ ಮನಸ್ಸು ಕಾಮದ ಒಳಮಿಡಿತಗಳಿಗೆ ಪಕ್ಕಾಗಿ, ಅವಳಲ್ಲಿ ಮೋಹಗೊಂಡನು;
ತರುಣಿಯನು ಕಂಡು=ಅವಳ ಬಳಿಸಾರಿ ಬಂದು, ಅವಳನ್ನೇ ನೋಡುತ್ತ;
ಬೆಸಗೊಳ್=ಕೇಳು/ ವಿಚಾರಿಸು; ಎಸೆ=ಬಾಣವನ್ನು ಬಿಡು; ಶರ=ಬಾಣ;
ಆರು ನೀನು ಎಂದು ಅರಸ ಬೆಸಗೊಳುತ, ಎಸೆವ ಕಾಮನ ಶರಕೆ ಮೈಯೊಡ್ಡಿ=ಯಾರು ನೀನು… ಎಂದು ಅರಸನು ಆಕೆಯನ್ನು ವಿಚಾರಿಸುತ್ತ, ಮದನನು ಬಿಟ್ಟ ಹೂಬಾಣಗಳಿಗೆ ಮಯ್ ಮನವನ್ನು ಒಡ್ಡಿ, ತೀವ್ರವಾದ ಕಾಮನೆಗೆ ಒಳಗಾಗಿ;
ಅರಮನೆಗೆ ನಡೆ ಎನಲು=ಅರಮನೆಗೆ ಹೋಗೋಣ ಬಾ ಎಂದು ಕರೆಯಲು;
ಪರಮ=ಹೆಚ್ಚಾದ/ ಅತಿಶಯವಾದ; ವಚನ=ಮಾತು; ಅಲಂಘ್ಯ=ಮೀರಲಾಗದ /ದಾಟಲಾಗದ;
ತಂದೆಯ ಪರಮ ವಚನವು ಅಲಂಘ್ಯ ಎನೆ=ತಂದೆಯ ಮಾತನ್ನು ಮೀರಲಾಗದು / ತಂದೆಯ ಮಾತಿಲ್ಲದೆ ನಾನು ಏನನ್ನೂ ಮಾಡುವುದಿಲ್ಲವೆಂದು ಯೋಜನಗಂದಿಯು ನುಡಿಯಲು;
ಕಾತರ=ಕಳವಳ/ಉದ್ವಿಗ್ನತೆ; ಭಗ್ನ=ಎದೆಗುಂದಿದ/ನಿರಾಶೆಗೊಂಡ; ಮನೋರಥ=ಮನಸ್ಸಿನ ಬಯಕೆ;
ಕಾತರಿಸಿ ಭಗ್ನ ಮನೋರಥನು ಮಂದಿರಕೆ ಮರಳಿದನು=ಯೋಜನಗಂದಿಯ ಮಾತಿನಿಂದ ಉದ್ವಿಗ್ನತೆಗೆ ಒಳಗಾಗಿ ನಿರಾಶೆಗೊಂಡ ಮನದ ರಾಜ ಶಂತನು ತನ್ನ ಅರಮನೆಗೆ ಹಿಂತಿರುಗಿದನು;
ವಿರಹ=ಅಗಲಿಕೆ; ಆವುಗೆ=ಕುಂಬಾರನು ಹಸಿಯಾದ ಮಣ್ಣಿನಿಂದ ತಯಾರಿಸಿದ ಮಡಕೆ ಕುಡಿಕೆಗಳನ್ನು ಸುಡುವ ಒಲೆ; ಈ ಒಲೆಯ ಬೆಂಕಿಯು ಒಳಗೊಳಗೆ ಉರಿಯುತ್ತದೆ. ಹೊರನೋಟಕ್ಕೆ ಬೆಂಕಿಯ ಜ್ವಾಲೆಗಳು ಕಾಣುವುದಿಲ್ಲ; ಕಿಚ್ಚು=ಬೆಂಕಿ;
ವಿರಹದ ಆವುಗೆ ಕಿಚ್ಚು ಭೂಮೀಶ್ವರನ ಮುಸುಕಿತು=ಅಗಲಿಕೆಯ ತಾಪದ ಬೆಂಕಿ ರಾಜನ ಮಯ್ ಮನವನ್ನೆಲ್ಲಾ ಆವರಿಸಿಕೊಂಡು ಸುಡಲುತೊಡಗಿತು;
ಬಲಿದ=ಹೆಚ್ಚಾದ;
ಅರಸ, ಬಲಿದ ಅವಸ್ಥೆಯನು ಬಣ್ಣಿಸಲು ಅರಿಯೆನು=ಜನಮೇಜಯ ರಾಜನೇ, ಶಂತನು ರಾಜನಿಗೆ ಉಂಟಾದ ಕಾಮ ಪರಿತಾಪದ ತೀವ್ರತೆಯನ್ನು ಹೇಗೆ ವಿವರಿಸಬೇಕೆಂಬುದೇ ನನಗೆ ತಿಳಿಯುತ್ತಿಲ್ಲವೆಂದು ವೈಶಂಪಾಯನ ಮುನಿಯು ನುಡಿಯುತ್ತಾನೆ; ವೈಶಂಪಾಯನ ಮುನಿಯು ವ್ಯಾಸ ರಚಿತ ಮಹಾಬಾರತದ ಕತೆಯನ್ನು ಮತ್ತೊಮ್ಮೆ ಜನಮೇಜಯ ರಾಜನಿಗೆ ಹೇಳುತ್ತಿದ್ದಾನೆ;
ಏಳೆಂಟೊಂಬತ್ತರ ಬಳಿಯ ಮರಣ=ಇದೊಂದು ನುಡಿಗಟ್ಟು. ಏಳೆಂಟು ಒಂಬತ್ತು ಹಂತಗಳಲ್ಲಿ ನರಳಿ ನರಳಿ ಹತ್ತನೆಯ ಹಂತದದಲ್ಲಿ ಆರೋಗ್ಯ ಹದಗೆಟ್ಟು ಸಾವನ್ನಪ್ಪುವುದು;
ಉಬ್ಬರ=ಹೆಚ್ಚಾದ; ಗುಜುಗುಜು=ಜನರು ತಮ್ಮತಮ್ಮಲ್ಲಿಯೇ ಪಿಸುದನಿಯಲ್ಲಿ ಆಡಿಕೊಳ್ಳುವ ಮಾತು; ಪರಿದು=ಒಬ್ಬರಿಂದ ಮತ್ತೊಬ್ಬರಿಗೆ ಹೋಗಿ;
“ಏಳೆಂಟೊಂಬತ್ತರ ಬಳಿಯ ಮರಣವು ಈತಂಗೆ” ಎಂಬ ಜನರ ಉಬ್ಬರದ ಗುಜುಗುಜು ಪರಿದು=ಶಂತನು ರಾಜನು ಕಾಮದ ಬೇಗೆಯಲ್ಲಿ ಬೆಂದು… ನರಳಿ ನರಳಿ ಕಟ್ಟಕಡೆಗೆ ಮರಣಹೊಂದುತ್ತಾನೆ ಎಂದು ಪುರಜನರು ತಮ್ಮತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿರುವ ಸುದ್ದಿಯು ಒಂದೆಡೆಯಿಂದ ಮತ್ತೊಂದೆಡೆಗೆ ಹಬ್ಬುತ್ತ, ಶಂತನು ರಾಜನ ಮಗನಾದ ಯುವರಾಜ ಬೀಶ್ಮನ ಕಿವಿಗೂ ಬಿತ್ತು;
ವಹಿಲ=ಬೇಗ;
ಭೀಷ್ಮ ವಹಿಲದಲಿ ಯಮುನಾ ವರನದಿಯ ತೀರಕ್ಕೆ ಬಂದನು=ಬೀಶ್ಮನು ಬಹು ಬೇಗ ಯಮುನಾ ನದಿಯ ತೀರದಲ್ಲಿದ್ದ ಯೋಜನಗಂದಿಯ ಬೀಡಿಗೆ ಬಂದನು;
ಧೀವರ=ಬೆಸ್ತ/ಮೀನುಗಾರ;
ಧೀವರನನ್ ಕರೆಸಿದನು=ಯೋಜನಗಂದಿಯ ಸಾಕುತಂದೆಯಾದ ಬೆಸ್ತನನ್ನು ತನ್ನ ಬಳಿಗೆ ಕರೆಸಿಕೊಂಡನು;
ನಿನ್ನ ಮಗಳು ಅಯ್ಯಂಗೆ ಅರಸಿಯಾಗಲಿ ಎನಲು=ನಿನ್ನ ಮಗಳು ನನ್ನ ಅಪ್ಪನಿಗೆ ರಾಣಿಯಾಗಲಿ ಎಂದು ಬೀಶ್ಮನು ನುಡಿಯಲು;
ಅರಿದು=ತಿಳಿದುಕೊಂಡು; ಸಲಿಸುವುದು=ಈಡೇರಿಸುವುದು;
ಅರಸಿಯಾದರೆ… ಮಗಳ ಮಕ್ಕಳು ರಾಜ್ಯವಾಳುವರೆ… ಬರಿ ಅರಸುತನ ನಮಗೇಕೆ?. ಇದನು ನೀ ಅರಿದು ಸಲಿಸುವುದು ಎನಲು=ಶಂತನು ರಾಜನನ್ನು ನನ್ನ ಮಗಳು ಯೋಜನಗಂದಿಯು ಮದುವೆಯಾಗಿ ರಾಣಿಯಾದರೆ, ನನ್ನ ಮಗಳ ಮಕ್ಕಳು ರಾಜ್ಯವಾಳುತ್ತಾರೆಯೇ… ಹೆಸರಿಗೆ ಮಾತ್ರ ರಾಜಮನೆತನದವರು ಎಂಬುದು ನಮಗೇಕೆ… ಇದನ್ನು ನೀನು ತಿಳಿದುಕೊಂಡು, ನನ್ನ ಮಗಳ ಮಕ್ಕಳಿಗೆ ರಾಜ್ಯದ ಒಡೆತನ ದೊರೆಯುವಂತೆ ಮಾಡುವುದಾದರೆ ನನ್ನ ಮಗಳನ್ನು ಕೊಡುತ್ತೇನೆ ಎಂಬ ಕರಾರರನ್ನು ದೀವರನು ಬೀಶ್ಮನಿಗೆ ಹಾಕಲು;
ಧೀವರನ ಮಾತಿಂಗೆ ಈತನು ಎಂದನು=ಯೋಜನಗಂದಿಯ ತಂದೆಯ ಮಾತಿಗೆ ಬೀಶ್ಮನು ಈ ರೀತಿ ನುಡಿದನು;
ಭಾಗೀರಥಿ=ಗಂಗೆ. ಗಂಗಾದೇವಿಯು ಬೀಶ್ಮನ ತಾಯಿ;
ಆದರೆ … ಇಲ್ಲಿಮ್ ಮೇಲೆ ನಾರಿಯರಾದವರು ಭಾಗೀರಥಿಗೆ ಸರಿ=ನೀನು ಅಂತಹ ಬೇಡಿಕೆಯನ್ನು ಮಂಡಿಸುವೆಯಾದರೆ, ಇಲ್ಲಿಂದ ಮುಂದೆ ಈ ಜಗತ್ತಿನಲ್ಲಿರುವ ಹೆಂಗಸರೆಲ್ಲರೂ ನನ್ನ ಪಾಲಿಗೆ ನನ್ನ ತಾಯಿ ಗಂಗಾದೇವಿಗೆ ಸಮಾನರು. ನಾನು ಯಾವುದೇ ಹೆಣ್ಣನ್ನು ಮದುವೆಯಾಗುವುದಿಲ್ಲ. ಯುವರಾಜನಾಗಿರುವ ನನ್ನ ಸಂತಾನ ಮುಂದುವರಿಯುವುದಿಲ್ಲ;
ಮೇದಿನಿ=ರಾಜ್ಯ/ದೇಶ/ಬೂಮಿ;
ನಿನ್ನಯ ಮಗಳ ಮಕ್ಕಳಿಗೆ ಮೇದಿನಿಯ ಸಲಿಸುವೆನು=ನಿನ್ನ ಮಗಳ ಮಕ್ಕಳಿಗೆ ರಾಜ್ಯದ ಒಡೆತನದ ಹಕ್ಕನ್ನು ಬಿಟ್ಟುಕೊಟ್ಟಿದ್ದೇನೆ;
ದಿವಿಜ=ದೇವತೆ; ದಯಾಂಬುಧಿ=ಕರುಣೆಗೆ ಸಾಗರದಂತಿರುವ ಬೀಶ್ಮ;
ಈ ದಿವಿಜರು ಈ ಹರಿಹರ ಬ್ರಹ್ಮಾದಿ ದೇವರು ಸಾಕ್ಷಿ… ಎಂದು ಆ ದಯಾಂಬುಧಿ ನಗುತ=ಈ ನನ್ನ ಮಾತುಗಳಿಗೆ ದೇವತೆಗಳು, ಈ ಹರಿ ಹರ ಬ್ರಹ್ಮರನ್ನು ಮೊದಲುಗೊಂಡು ಎಲ್ಲಾ ದೇವರುಗಳೇ ಸಾಕ್ಶಿ ಎಂದು ಆ ಕರುಣಾಸಾಗರನಾದ ಬೀಶ್ಮನು ನಗುನಗುತ್ತ ನುಡಿದು;
ಹೋಗು… ನಿನ್ನಯ ಮಗಳ ಕರಸು ಎಂದ=ಹೋಗು… ಈ ಕೂಡಲೇ ನಿನ್ನ ಮಗಳನ್ನು ಕರೆದುಕೊಂಡು ಬಾ ಎಂದು ನುಡಿದನು;
ದಂಡಿಗೆ=ಪಲ್ಲಕ್ಕಿ; ದಂಡಿಯ ಚರರು=ಪಲ್ಲಕ್ಕಿಯನ್ನು ಹೊರುವ ಸೇವಕರು; ಉಗ್ಗಡಣೆ=ಗಟ್ಟಿಯಾದ ದನಿಯಲ್ಲಿ ರಾಜನ ಮತ್ತು ರಾಜ ಮನೆತನದ ಬಿರುದುಗಳನ್ನು ಎತ್ತರದ ದನಿಯಲ್ಲಿ ಕೂಗಿ ಹೇಳುವುದು; ಸರಸಿರುಹ+ಮುಖಿ; ಸರಸಿರುಹ=ತಾವರೆ/ಸರೋವರದಲ್ಲಿ ಹುಟ್ಟಿರುವುದು; ಉರವಣಿಸು=ಸಡಗರ/ಉತ್ಸಾಹ;
ದಂಡಿಗೆಯ ತರಿಸಿದನು=ಬೀಶ್ಮನು ಪಲ್ಲಕ್ಕಿಯನ್ನು ತರಿಸಿದನು;
ನೆಲನ ದಂಡಿಯ ಚರರ ಉಗ್ಗಡಣೆಯಲಿ ಸರಸಿರುಹಮುಖಿಯನು ತಂದು ಪಿತಗೆ ಮದುವೆಯ ಉರವಣಿಸಿ ಮಾಡಿದನು=ಯೋಜನಗಂದಿಯು ಏರಿ ಕುಳಿತ ಪಲ್ಲಕ್ಕಿಯನ್ನು ಹೊತ್ತ ಸೇವಕರು ರಾಜನ ಬಿರುದಾವಳಿಗಳನ್ನು ದೊಡ್ಡ ದನಿಯಲ್ಲಿ ಕೂಗಿ ಹೇಳುತ್ತಿರಲು, ತಾವರೆಮೊಗದ ಯೋಜನಗಂದಿಯನ್ನು ಬೀಷ್ಮನು ಕರೆತಂದು, ತನ್ನ ತಂದೆ ಶಂತನು ರಾಜನಿಗೆ ಸಡಗರದಿಂದ ಮದುವೆಯನ್ನು ಮಾಡಿದನು;
ಮಗ ನುಡಿದ ಭಾಷೆಯನು ಅರಸ ಕೇಳಿದು ಬಳಿಕ, ಭೀಷ್ಮಗೆ ವರವನು ಇತ್ತನು=“ಇನ್ನು ಮುಂದೆ ಲೋಕದ ಹೆಣ್ಣುಗಳೆಲ್ಲರೂ ತನ್ನ ತಾಯಿ ಗಂಗಾದೇವಿಗೆ ಸಮಾನ. ರಾಜ್ಯದ ಒಡೆತನ ನನ್ನ ತಾಯಿ ಸ್ವರೂಪಳಾದ ಯೋಜನಗಂದಿಯ ಮಕ್ಕಳಿಗೆ ಸಲ್ಲುತ್ತದೆ” ಎಂದು ಮಗನು ಮಾಡಿರುವ ಪ್ರತಿಜ್ನೆಯ ನುಡಿಗಳನ್ನು ಕೇಳಿದ ಬಳಿಕ, ತಂದೆಯಾದ ರಾಜ ಶಂತನು ಬೀಶ್ಮನಿಗೆ ವರವನ್ನು ನೀಡಿದನು;
ಮರಣವದು ನಿನ್ನಿಚ್ಛೆ ಹೋಗು ಎಂದ=“ನೀನು ಇಚ್ಚಾಮರಣಿಯಾಗು” ಎಂಬ ವರವನ್ನು ಕೊಟ್ಟು ಆಶೀರ್ವದಿಸಿದನು; ‘ಇಚ್ಚಾಮರಣಿ’ ಎಂದರೆ ವ್ಯಕ್ತಿಯು ತಾನಾಗಿ ಬಯಸಿದಾಗ ಮಾತ್ರ ಸಾವು ಬರುವುದು;
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು