ಕುಮಾರವ್ಯಾಸ ಬಾರತ ಓದು:ಆದಿಪರ‍್ವ- ದ್ರುತರಾಶ್ಟ್ರ ಪಾಂಡು ವಿದುರ ಜನನ
ದ್ರುತರಾಶ್ಟ್ರ ಪಾಂಡು ವಿದುರ ಜನನ
( ಆದಿ ಪರ್ವ: ಮೂರನೆಯ ಸಂಧಿ: ಪದ್ಯ: 1 ರಿಂದ 10 )
ಪಾತ್ರಗಳು
ಬೀಶ್ಮ: ಶಂತನು ಮತ್ತು ಗಂಗಾದೇವಿಯ ಮಗ ಗಾಂಗೇಯ. ಶಂತನು ಮಹಾರಾಜನ ಹಿರಿಯ ಮಗ. ಈತನು ಸತ್ಯವತಿಯ ತಂದೆಯಾದ ದಾಶರಾಜನಿಗೆ ನೀಡಿದ್ದ ವಾಗ್ದಾನವನ್ನು ಬಿಡದೆ ಪಾಲಿಸಿದ್ದರಿಂದ “ಬೀಶ್ಮ“ ನೆಂಬ ಹಿರಿಮೆಯ ಹೆಸರು ಬಂದಿತ್ತು.
ಯೋಜನಗಂದಿ: ಶಂತನು ಮಹಾರಾಜನ ಹೆಂಡತಿ. ಈಕೆಗೆ ಸತ್ಯವತಿ ಎಂಬ ಮತ್ತೊಂದು ಹೆಸರಿದೆ.
ವಿಚಿತ್ರವೀರ‍್ಯ: ಶಂತನು ಮತ್ತು ಯೋಜನಗಂದಿಯ ಮಗ.
ವ್ಯಾಸ ಮುನಿ: ಪರಾಶರ ಮುನಿ ಮತ್ತು ಮತ್ಸ್ಯಗಂದಿಯ ಮಗ.
ಅಂಬಿಕೆ: ಹಸ್ತಿನಾವತಿಯ ರಾಜನಾಗಿದ್ದ ವಿಚಿತ್ರವೀರ‍್ಯನ ಮೊದಲನೆಯ ಹೆಂಡತಿ. ಕಾಶಿರಾಜನ
ಎರಡನೆಯ ಮಗಳು.
ಅಂಬಾಲಿಕೆ: ಹಸ್ತಿನಾವತಿಯ ರಾಜನಾಗಿದ್ದ ವಿಚಿತ್ರವೀರ‍್ಯನ ಎರಡನೆಯ ಹೆಂಡತಿ. ಕಾಶಿರಾಜನ
ಮೂರನೆಯ ಮಗಳು
ದಾಸಿ: ರಾಣಿವಾಸದಲ್ಲಿ ಅಂಬಿಕೆಯ ದಾಸಿ.
ದ್ರುತರಾಶ್ಟ್ರ ಪಾಂಡು ವಿದುರ ಜನನ
ಅರಸ ಕೇಳೈ, ಕೆಲವು ಕಾಲಾಂತರಕೆ ನಿಮ್ಮ ವಿಚಿತ್ರವೀರ್ಯನು ಅಮರಸ್ತ್ರೀಯರಲಿ ನೆರೆದನು. ಬಳಿಕ ಯೋಜನಗಂಧಿ ಈ ನದೀಸುತನ ಕರೆದು
ನುಡಿದಳು.
ಯೋಜನಗಂಧಿ: ಮಗನೆ, ರಾಜ್ಯವ ಧರಿಸು. ನೀನು ಇನ್ನು ಉತ್ತರದ ಹಿಮಕರ ಕುಲವ ಬೆಳಗು.
(ಎಂದು ಯೋಜನಗಂಧಿ ಬೆಸಸಿದಳು.)
ಭೀಷ್ಮ: ತಾಯೆ… “ರಾಜ್ಯಸ್ತ್ರೀಯಳ್ ನಿಮ್ಮೋಪಾದಿ” ಎಂದ ಆ ನುಡಿಯೊಳಗೆ ಗಾಂಗೇಯ ಮುಳುಗನೆ. ಭೀಷ್ಮ ವಚನಕೆ ಬೇರೆ ಮೊಳೆಯುಂಟೆ. ಕಾಯದ ಅಲ್ಪ ಸುಖಕ್ಕೆ ಘನ ನಿಶ್ರೇಯಸವ ಕೆಡಿಸುವೆನೆ. ಯೆಲವದ ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲ.
(ಎಂದ. ಯೋಜನಗಂಧಿ ಮರುಗಿ ಚಿಂತೆಯ ಸೆರೆಗೆ ಸಿಲುಕಿದಳು. ಒಂದು ರಾತ್ರಿಯೊಳು
ಪೂರ್ವಸೂಚಿತ ಪುತ್ರಭಾಷಿತವ ಅರಿದು ನೆನೆದಳು.)
ಯೋಜನಗಂಧಿ: ( ತನ್ನಲ್ಲಿಯೇ) ಮುರಿದ ಭರತ ಅನ್ವಯದ ಬೆಸುಗೆಯ ತೆರನು ತೋರಿತೆ.. ಪುಣ್ಯ
(ಎನುತ.)
ಯೋಜನಗಂಧಿ: ಮಗನೆ, ವೇದವ್ಯಾಸ ಬಹುದು.
(ಎಂದು ಎಚ್ಚರಿತು ನುಡಿದಳು ಕೆಂಜೆಡೆಯ… ಮೊನೆ ಮುಂಜೆರಗಿನ ಕೃಷ್ಣಾಜಿನದ ಉಡಿಗೆಯ… ಬಲಾಹಕ ಪುಂಜಕಾಂತಿಯ… ಪಿಂಗತರಮುಖ ಕೇಶದ… ಉನ್ನತಿಯ ಕಂಜನಾಭನ ಮೂರ್ತಿ. ಶೋಭಾರಂಜಿತನು… ಜನದುರಿತ ದಶಮದ ಭಂಜಕನು ವ್ಯಾಸಮುನಿರಾಯ ತಾಯ್ಗೆ ಎರಗಿ ನುಡಿದನು.)
ವ್ಯಾಸ: ನೆನೆದಿರೇನೌ ತಾಯೆ. ಕೃತ್ಯವನು ಎನಗೆ ಬೆಸಸು.
ಯೋಜನಗಂಧಿ: ಮಗನೆ, ಭಾರತ ವಿನುತಕುಲ ಜಲರಾಶಿ ವಿಚಿತ್ರನಲಿ ಎಡೆವರಿತುದು. ತನುಜ, ನೀನೇ ಬಲ್ಲೆ.
ವ್ಯಾಸ: ಕೇಳ್ ಜನನಿ, ನಿಮ್ಮಡಿಯಾಜ್ಞೆಯಲಿ ವೈಚಿತ್ರವೀರ್ಯ ಕ್ಷೇತ್ರದಲಿ ಸುತರ ಸಂಜನಿಪುವೆನು.
( ಎಂದು. ಬಳಿಕ ಏಕಾಂತ ಭವನದೊಳು ಅಂದು ಮುನಿ ಇರಲು… ಅರವಿಂದಮುಖಿ ಅಂಬಿಕೆಯನು ಮುನಿಯ ಪೊರೆಗಾಗಿ ಸೊಸೆಯನು ಅಟ್ಟಿದಳು… ಬಂದು ಮುನಿಪನ ದಿವ್ಯರೂಪವನು ಇಂದುಮುಖಿ ಕಂಡು…ಭಯದಿಂದ ಅಕ್ಷಿಗಳ ಮುಚ್ಚಿದಳು…ಆಕೆ ತಿರುಗಿದಳು… ಬಳಿಕಲು ಅಂಬಾಲಿಕೆಯನು ಅಲ್ಲಿಗೆ ಕಳುಹಲು… ಮುನಿಯ ರೌದ್ರಾಕಾರ ದರ್ಶನದಿ ಆಕೆಗೆ ಮುಖದಲಿ ಬಿಳುಪು ಮಸಗಿತು… ಲಲನೆ ಮರಳಿದಳು… ಒಬ್ಬ ಸತಿಯನು ಕಳುಹಲು…ಆ ವಧು ಚಪಲ ದೃಷ್ಟಿಯೊಳ್ ಅಳುಕದೆ ಈಕ್ಷಿಸಲು…ಅನಿಬರಿಗೆ ಗರ್ಭಾದಾನವು ಆಯ್ತು… ಮುನಿಪತಿ ಬಂದು ತಾಯ್ಗೆ ಕೈಮುಗಿದು ಎಂದನು.)
ವ್ಯಾಸ: ಅಂಬಿಕೆಯಲಿ ಜನಿಸುವ ನಂದನನು ಜಾತ್ಯಂಧನು… ಅಂಬಾಲಿಕೆಗೆ ಪಾಂಡುಮಯ… ಬಂದ ಬಳಿಕಿನ ಚಪಲೆಗೆ ಅತಿಬಲನು… ತನಗೆ ನೇಮವೆ.
(ಎಂದು ಹೇಳಿದು, ಬಾದರಾಯಣನು ತನ್ನ ಆಶ್ರಮಕೆ ಸರಿದನು. ನವಮಾಸ ತುಂಬಿದುದು. ಅಂಬಿಕೆಯ ಬಸುರಿನಲಿ ಸೂನು ಗತಾಂಬಕನು ಜನಿಸಿದನು. ಅಂಬಾಲಿಕೆಗೆ ಪಾಂಡುಮಯ ಮಗನಾದನ್. ಕುಮಾರೋದ್ಭವದ ವಿಭವದಲಿ ಪರಿತೋಷ ಚುಂಬಿಸಿತು. ನವ ಪುಳಕಾಂಬುಗಳು ಜನಜನಿತ ಉತ್ಸವವನು… ಅದನು ಏನೆಂಬೆನು…ಗಂಗಾಜಾತ ಜಾತಕರ್ಮಾದಿಯನು ಪಾರ್ಥೀವ ಜಾತಿ ವಿಧಿವಿಹಿತದಲಿ ಮಾಡಿಸಿ, ನಿಖಿಳ ಯಾಚಕರ ತುಷ್ಟಿಪಡಿಸಿದ. ಈತನೇ ಧೃತರಾಷ್ಟ್ರ… ಎರಡನೆಯಾತ ಪಾಂಡು… ವಿಲಾಸಿನೀ ಸಂಭೂತನೀತನು ವಿದುರನು ಎಂದು ಅವರಿಗೆ ಅಭಿದಾನ ಆಯ್ತು.)
ಪದ ವಿಂಗಡಣೆ ಮತ್ತು ತಿರುಳು
ಕಾಲಾಂತರ= ಕೆಲವು ವರುಶಗಳ ನಂತರದಲ್ಲಿ; ಅಮರಸ್ತ್ರೀಯರಲ್ಲಿ ನೆರೆಯುವುದು=ದೇವಲೋಕದ ಹೆಣ್ಣುಗಳೊಡನೆ ಸೇರುವುದು. ಸಾವನ್ನಪ್ಪುವುದು ಎಂಬ ತಿರುಳಿನ ನುಡಿಗಟ್ಟು. ಅರಸ ಕೇಳೈ, ಕೆಲವು ಕಾಲಾಂತರಕೆ ನಿಮ್ಮ ವಿಚಿತ್ರವೀರ್ಯನು ಅಮರಸ್ತ್ರೀಯರಲಿ ನೆರೆದನು=ಜನಮೇಜಯನೇ ಕೇಳು , ಕೆಲವು ವರುಶಗಳ ನಂತರ ನಿಮ್ಮ ಕುಲದ ವಿಚಿತ್ರವೀರ‍್ಯನು ಸಾವನ್ನಪ್ಪಿದನು;
ನದೀಸುತ= ಗಂಗಾದೇವಿಯ ಮಗನಾದ ಬೀಶ್ಮ;
ಬಳಿಕ ಯೋಜನಗಂಧಿ ಈ ನದೀಸುತನ ಕರೆದು ನುಡಿದಳು= ಕೆಲವು ದಿನಗಳ ನಂತರ ಯೋಜನಗಂದಿಯು ಬೀಶ್ಮನನ್ನು ಕರೆದು ಈ ರೀತಿ ಹೇಳಿದಳು;
ಧರಿಸು= ಹೊಂದು/ಪಡೆ;
ಉತ್ತರ= ಮುಂದಿನದು;
ಹಿಮಕರಕುಲ= ಚಂದ್ರವಂಶ;
ಬೆಸಸು= ಆಜ್ನಾಪಿಸು/ಅಪ್ಪಣೆಮಾಡು;
ಮಗನೆ, ರಾಜ್ಯವ ಧರಿಸು. ನೀನು ಇನ್ನು ಉತ್ತರದ ಹಿಮಕರಕುಲವ ಬೆಳಗು ಎಂದು ಯೋಜನಗಂಧಿ ಬೆಸಸಿದಳು= ಮಗನೆ, ರಾಜ್ಯದ ಪಟ್ಟವನ್ನು ಹೊಂದು. ನೀನು ಇನ್ನು ಮುಂದೆ ಚಂದ್ರವಂಶವನ್ನು ಬೆಳಗು ಎಂದು ಆಜ್ನಾಪಿಸಿದಳು;
ನಿಮ್ಮ+ಉಪಾದಿ; ಉಪಾದಿ= ಸಮಾನ;
ಮುಳುಗು= ಮಗ್ನವಾಗು;
ತಾಯೆ… “ರಾಜ್ಯಸ್ತ್ರೀಯಳ್ ನಿಮ್ಮೋಪಾದಿ” ಎಂದ ಆ ನುಡಿಯೊಳಗೆ ಗಾಂಗೇಯ ಮುಳುಗನೆ= ತಾಯೆ, “ಈ ರಾಜ್ಯವೆಂಬ ಹೆಣ್ಣು ತಾಯಿಯಾದ ನಿಮಗೆ ಸಮಾನ” ಎಂದು ನಾನು ಅಂದು ಆಡಿರುವ ನುಡಿಗೆ ಬದ್ದನಾಗಿದ್ದೇನೆ;
ಮೊಳೆ= ಚಿಗುರು;
ಭೀಷ್ಮವಚನಕೆ ಬೇರೆ ಮೊಳೆಯುಂಟೆ= ಬೀಶ್ಮನ ಮಾತುಗಳಿಗೆ ಬೇರೆ ಕವಲುಗಳಿಲ್ಲ. ಅಂದರೆ ತಾನು ಆಡಿದ ಮಾತಿಗೆ ತಪ್ಪಿನಡೆಯುವವನಲ್ಲ; ಕಾಯ=ದೇಹ;
ಅಲ್ಪ= ಚಿಕ್ಕದು/ಸಣ್ಣದು;
ಘನ= ದೊಡ್ಡದು;
ನಿಶ್ರೇಯಸ್ಸು= ಮುಕ್ತಿ/ಮೋಕ್ಶ;
ಕಾಯದ ಅಲ್ಪ ಸುಖಕ್ಕೆ ಘನ ನಿಶ್ರೇಯಸವ ಕೆಡಿಸುವೆನೆ= ಈ ದೇಹದ ಸಣ್ಣ ಸುಕಕ್ಕಾಗಿ ದೊಡ್ಡ ಮುಕ್ತಿಯನ್ನು ಹಾಳುಮಾಡಿಕೊಳ್ಳುತ್ತೇನೆಯೇ;
ಕಲ್ಪವೃಕ್ಷ= ದೇವಲೋಕದಲ್ಲಿರುವ ಒಂದು ಮರ. ಬಯಸಿದ್ದೆಲ್ಲವನ್ನೂ ಈ ಮರ ನೀಡುತ್ತದೆ ಎಂಬ ದಂತಕತೆಯಿದೆ;
ಯೆಲವದ ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲ ಎಂದ= ಸಾಮಾನ್ಯವಾದ ಯೆಲವದ ಕಾಯಿಗಾಗಿ ಕಲ್ಪವ್ರುಕ್ಶವನ್ನು ಕಡಿಯುವವನಲ್ಲ ಎಂದು ಬೀಶ್ಮನು ಚಿಕ್ಕಮ್ಮ ಯೋಜನಗಂದಿಯು ನೀಡಲು ಬಂದ ರಾಜ್ಯಪಟ್ಟವನ್ನು ನಿರಾಕರಿಸಿದ;
ಯೋಜನಗಂಧಿ ಮರುಗಿ ಚಿಂತೆಯ ಸೆರೆಗೆ ಸಿಲುಕಿದಳು= ಬೀಶ್ಮನ ನಿರಾಕರಣೆಯ ಮಾತುಗಳನ್ನು ಕೇಳಿ ಯೋಜನಗಂದಿಯು ತನ್ನ ಇಬ್ಬರು ಗಂಡು ಮಕ್ಕಳ ಸಾವಿನಿಂದಾಗಿ ರಾಜ್ಯದ ಪಟ್ಟಕ್ಕೆ ಯಾರೂ ಗತಿಯಿಲ್ಲದಂತಾಗಿರುವ ಸಂಕಟಕ್ಕೆ ಗುರಿಯಾಗಿ ನರಳತೊಡಗಿದಳು;
ಪೂರ್ವಸೂಚಿತ= ಹಿಂದೆ ಹೇಳಿದ್ದ;
ಭಾಷಿತ=ಮಾತು;
ಒಂದು ರಾತ್ರಿಯೊಳು ಪೂರ್ವಸೂಚಿತ ಪುತ್ರಭಾಷಿತವ ಅರಿದು ನೆನೆದಳು= ಒಂದು ರಾತ್ರಿಯ ವೇಳೆಯಲ್ಲಿ ಯೋಜನಗಂದಿಯು ಅದೇ ಚಿಂತೆಯಲ್ಲಿ ಬೇಯುತ್ತಿದ್ದಾಗ, ಈ ಹಿಂದೆ ತನ್ನ ಮಗನಾದ ವೇದವ್ಯಾಸನು “ತಾಯೆ, ವಿಪತ್ತು ಬಂದಾಗ ನನ್ನನ್ನು ನೆನೆಯುವುದು” ಎಂದು ಹೇಳಿದ್ದ ಮಾತುಗಳು ನೆನಪಾದವು;
ಮುರಿ= ತುಂಡಾಗು/ಕಡಿದುಹೋಗು;
ಅನ್ವಯ= ವಂಶ/ಕುಲ;
ಬೆಸುಗೆ= ಜೋಡಣೆ/ಕೂಡಿಸುವುದು;
ತೆರ= ರೀತಿ;
ಮುರಿದ ಭರತ ಅನ್ವಯದ ಬೆಸುಗೆಯ ತೆರನು ತೋರಿತೆ… ಪುಣ್ಯ ಎನುತ= ಬರತ ವಂಶದ ಮಕ್ಕಳಿಲ್ಲದೆ ಕಡಿದುಹೋಗುತ್ತಿದ್ದ ರಾಜ್ಯದ ಪಟ್ಟವನ್ನು ಮತ್ತೆ ಜೋಡಿಸಿ ಮುಂದುವರಿಸುವಂತಹ ದಾರಿಯು ತೋರಿತಲ್ಲ… ಇದು ನನ್ನ ಪಾಲಿನ ಪುಣ್ಯವೆಂದು ಅಂದುಕೊಳ್ಳುತ್ತ;
ಮಗನೆ, ವೇದವ್ಯಾಸ ಬಹುದು ಎಂದು ಎಚ್ಚರಿತು ನುಡಿದಳು= ಮಗನೆ, ವೇದವ್ಯಾಸ ಬರುವುದು ಎಂದು ಗಟ್ಟಿಯಾದ ದನಿಯಲ್ಲಿ ನುಡಿದಳು;
ಕೆಂಜೆಡೆ= ಕೆಂಪಾದ ಜಡೆ;
ಕೃಷ್ಣಾಜಿನ= ಕಪ್ಪು ಬಣ್ಣದ ಜಿಂಕೆಯ ತೊಗಲು;
ಮೊನೆ= ತುದಿ/ಅಂಚು; ಮುಂದಿನ+ಸೆರಗು;
ಉಡಿಗೆ= ಬಟ್ಟೆ;
ಬಲಾಹಕ= ಮೋಡ;
ಪುಂಜ= ಗುಂಪು/ಸಮೂಹ;
ಪಿಂಗ= ಕಂದು ಬಣ್ಣ;
ಮುಖಕೇಶ= ಗಡ್ಡ;
ಕಂಜನಾಭ= ವಿಶ್ಣು;
ಶೋಭಾರಂಜಿತ= ಮನೋಹರವಾದ ಚೆಲುವಿನಿಂದ ಕಂಗೊಳಿಸುತ್ತಿರುವವನು;
ಕೆಂಜೆಡೆಯ, ಮೊನೆ ಮುಂಜೆರಗಿನ ಕೃಷ್ಣಾಜಿನದ ಉಡಿಗೆಯ, ಬಲಾಹಕ ಪುಂಜಕಾಂತಿಯ, ಪಿಂಗತರ ಮುಖಕೇಶದ, ಉನ್ನತಿಯ ಕಂಜನಾಭನ ಮೂರ್ತಿ, ಶೋಭಾರಂಜಿತನು= ಕೆಂಪಾದ ಜಡೆಯ, ಮೇಲಿನ ತುದಿಯಲ್ಲಿ ಸೆರಗನ್ನುಳ್ಳ ಜಿಂಕೆಯ ತೊಗಲಿನ ಉಡಿಗೆಯ, ಕಡುನೀಲಿ ಕಪ್ಪುಬಣ್ಣದ ಮೋಡಗಳ ಕಾಂತಿಯಿಂದ ಕೂಡಿರುವ, ಕಂದುಬಣ್ಣದ ಗಡ್ಡದ, ಹಿರಿಮೆಯುಳ್ಳ ವಿಶ್ಣುವಿನ ರೂಪನಿಂದ ಕೂಡಿ ಮನೋಹರವಾದ ಚೆಲುವಿನಿಂದ ಕಂಗೊಳಿಸುತ್ತಿರುವವನು;
ದುರಿತ= ಪಾಪ;
ದಶಮ= ಹತ್ತು;
ಭಂಜಕನು= ನಾಶಪಡಿಸುವವನು;
ಎರಗು= ನಮಸ್ಕರಿಸು;
ಜನದುರಿತ ದಶಮದ ಭಂಜಕನು ವ್ಯಾಸಮು ನಿರಾಯ ತಾಯ್ಗೆ ಎರಗಿ ನುಡಿದನು= ಜನಗಳ ಪಾಪರಾಶಿಯನ್ನು ಹೋಗಲಾಡಿಸುವ ವ್ಯಾಸ ಮುನಿರಾಯನು ತಾಯಿಗೆ ನಮಸ್ಕಾರವನ್ನು ಮಾಡಿ, ಈ ರೀತಿ ನುಡಿದನು;
ನೆನೆದಿರೇನೌ ತಾಯೆ… ಕೃತ್ಯವನು ಎನಗೆ ಬೆಸಸು= ನೆನೆಸಿಕೊಂಡಿರಾ ತಾಯಿ. ಯಾವ ಕೆಲಸವನ್ನು ಮಾಡಬೇಕೆಂದು ನನಗೆ ಆಜ್ನಾಪಿಸಿ;
ವಿನುತ= ಹೆಸರುವಾಸಿಯಾದ;
ಜಲರಾಶಿ= ಕಡಲು/ಸಾಗರ;
ವಿಚಿತ್ರನಲಿ= ವಿಚಿತ್ರವೀರ್ಯನ ಸಾವಿನಿಂದಾಗಿ;
ಎಡೆ+ಪರಿತುದು; ಎಡೆ= ನಡುವೆ;
ಪರಿ= ಇಲ್ಲವಾಗು;
ಎಡೆವರಿತುದು= ನಡುವೆ ಬತ್ತಿಹೋಯಿತು:
ಮಗನೆ, ಭಾರತ ವಿನುತಕುಲ ಜಲರಾಶಿ ವಿಚಿತ್ರನಲಿ ಎಡೆವರಿತುದು. ತನುಜ, ನೀನೇ ಬಲ್ಲೆ= ಮಗನೆ, ವಿಚಿತ್ರವೀರ್ಯನ ಸಾವಿನಿಂದಾಗಿ ಬಾರತ ವಂಶವೆಂಬ ಕಡಲು ಬತ್ತಿಹೋಗಿದೆ. ಮಗನೇ, ಇದಕ್ಕೆ ಪರಿಹಾರವೇನು ಎಂಬುದನ್ನು ನೀನೇ ಬಲ್ಲವನಾಗಿದ್ದೀಯೆ;
ನಿಮ್ಮ+ಅಡಿ+ಆಜ್ಞೆಯಲಿ; ಅಡಿ= ಪಾದ;
ಕ್ಷೇತ್ರ= ನೆಲೆ;
ಸಂಜಿನಿಸು= ಉಂಟಾಗು/ಹುಟ್ಟು;
ಕೇಳ್ ಜನನಿ, ನಿಮ್ಮಡಿಯಾಜ್ಞೆಯಲಿ ವೈಚಿತ್ರವೀರ್ಯ ಕ್ಷೇತ್ರದಲಿ ಸುತರ ಸಂಜನಿಪುವೆನು ಎಂದು= ಕೇಳು ತಾಯಿ, ನಿಮ್ಮ ಅಪ್ಪಣೆಯಂತೆಯೇ ವಿಚಿತ್ರವೀರ್ಯನ ಜಾಗದಲ್ಲಿ ನಾನು ಇದ್ದು, ಮಕ್ಕಳನ್ನು ಹುಟ್ಟಿಸುವೆನು ಎಂದು ನುಡಿದು; ಮಹಾಬಾರತದ ಕಾಲದಲ್ಲಿ ‘ನಿಯೋಗ’ ಎಂಬ ಒಂದು ಪದ್ದತಿಯಿತ್ತು. ಮಕ್ಕಳಿಲ್ಲದ ಕುಟುಂಬದಲ್ಲಿ ಗಂಡ ಸತ್ತಾಗ, ಅವನ ಹೆಂಡತಿಯು ಗುರುಹಿರಿಯರ ಅನುಮತಿಯನ್ನು ಪಡೆದು ಗಂಡನ ಸೋದರರೊಡನೆ ಇಲ್ಲವೇ ಯಾವುದೇ ಗಂಡಿನೊಡನೆ ದೇಹದ ನಂಟನ್ನು ಪಡೆದು ಮಗುವನ್ನು ಪಡೆಯಲು ಅವಕಾಶವಿತ್ತು; ಅದರಂತೆ ಈಗ ವಿಚಿತ್ರವೀರ್ಯನ ಇಬ್ಬರು ಹೆಂಡತಿಯರೊಡನೆ ವೇದವ್ಯಾಸ ಮುನಿಯು ದೇಹದ ನಂಟನ್ನು ಪಡೆದು, ಮಕ್ಕಳ ಹುಟ್ಟಿಗೆ ಕಾರಣನಾಗುತ್ತಿದ್ದಾನೆ;
ಬಳಿಕ ಏಕಾಂತ ಭವನದೊಳು ಅಂದು ಮುನಿ ಇರಲು= ಅನಂತರ ಅರಮನೆಯ ಪ್ರತ್ಯೇಕವಾದ ಕೊಟಡಿಯೊಂದರಲ್ಲಿ ಮುನಿಯು ಒಬ್ಬನೇ ಇರಲು;
ಅರವಿಂದಮುಖಿ= ತಾವರೆಮೊಗದ ಯೋಜನಗಂದಿ;
ಪೊರೆ= ನಂಟು/ಸಂಬಂದ;
ಅರವಿಂದಮುಖಿ ಅಂಬಿಕೆಯನು ಮುನಿಯ ಪೊರೆಗಾಗಿ ಸೊಸೆಯನು ಅಟ್ಟಿದಳು= ಯೋಜನಗಂದಿಯು ಮೊದಲ ಸೊಸೆ ಅಂಬಿಕೆಯನ್ನು ಮುನಿಯೊಡನೆ ದೇಹದ ನಂಟನ್ನು ಪಡೆಯುವುದಕ್ಕಾಗಿ ಒತ್ತಾಯಪೂರ್ವಕವಾಗಿಯೇ ಕಳುಹಿಸಿದಳು;
ಇಂದುಮುಖಿ= ಚಂದಿರನ ಮೊಗದವಳು/ಅಂಬಿಕೆ;
ದಿವ್ಯ= ಅದ್ಬುತ/ ಅಚ್ಚರಿಯನ್ನುಂಟುಮಾಡುವ;
ಅಕ್ಷಿ= ಕಣ್ಣು;
ಬಂದು ಮುನಿಪನ ದಿವ್ಯರೂಪವನು ಇಂದುಮುಖಿ ಕಂಡು, ಭಯದಿಂದ ಅಕ್ಷಿಗಳ ಮುಚ್ಚಿದಳು= ವೇದವ್ಯಾಸನಿದ್ದ ಕೊಟಡಿಗೆ ಬಂದ ಅಂಬಿಕೆಯು ಮುನಿಯ ದಿವ್ಯರೂಪವನ್ನು ನೋಡನೋಡುತ್ತಿದ್ದಂತೆಯೇ ಹೆದರಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಂಡಳು;
ಆಕೆ ತಿರುಗಿದಳು= ವೇದವ್ಯಾಸನೊಡನೆ ದೇಹದ ನಂಟನ್ನು ಪಡೆದು ರಾಣಿವಾಸಕ್ಕೆ ಹಿಂತಿರುಗಿದಳು;
ರೌದ್ರ+ಆಕಾರ; ರುದ್ರ= ಬಯಂಕರವಾದ;
ಆಕಾರ=ರೂಪ; ಮಸಗು= ಹೊರಹೊಮ್ಮು/ಪ್ರಕಟವಾಗು;
ಬಳಿಕಲು ಅಂಬಾಲಿಕೆಯನು ಅಲ್ಲಿಗೆ ಕಳುಹಲು, ಮುನಿಯ ರೌದ್ರಾಕಾರ ದರ್ಶನದಿ ಆಕೆಗೆ ಮುಖದಲಿ ಬಿಳುಪು ಮಸಗಿತು= ಅನಂತರ ಯೋಜನಗಂದಿಯು ತನ್ನ ಎರಡನೆಯ ಸೊಸೆ ಅಂಬಾಲಿಕೆಯನ್ನು ವೇದವ್ಯಾಸನೊಡನೆ ದೇಹ ನಂಟನ್ನು ಪಡೆಯುವುದಕ್ಕಾಗಿ ಅಲ್ಲಿಗೆ ಕಳುಹಿಸಲು, ಮುನಿಯ ವಿಲಕ್ಶಣವಾದ ರೂಪವನ್ನು ನೋಡನೋಡುತ್ತಿದ್ದಂತೆಯೇ ಅವಳ ಮೊಗ ಬಿಳುಚಿಕೊಂಡಿತು;
ಲಲನೆ ಮರಳಿದಳು= ವೇದವ್ಯಾಸನೊಡನೆ ದೇಹದ ನಂಟನ್ನು ಪಡೆದು ರಾಣಿವಾಸಕ್ಕೆ ಹಿಂತಿರುಗಿದಳು;
ಸತಿ= ದಾಸಿಯಾಗಿದ್ದ ಒಂದು ಹೆಣ್ಣು;
ಒಬ್ಬ ಸತಿಯನು ಕಳುಹಲು= ಯೋಜನಗಂದಿಯು ತನ್ನ ಹಿರಿಯ ಸೊಸೆಯಾದ ಅಂಬಕೆಯನ್ನು ಮತ್ತೆ ವೇದವ್ಯಾಸನೊಡನೆ ಯಾವುದೇ ಹಿಂಜರಿಕೆಯಿಲ್ಲದೆ ಒಳ್ಳೆಯ ಮನಸ್ಸಿನಿಂದ ದೇಹ ನಂಟನ್ನು ಪಡೆದು ಬರುವಂತೆ ಹೇಳಲು, ಆಕೆಯು ತನ್ನ ಬದಲು ರಾಣಿವಾಸದ ದಾಸಿಯೊಬ್ಬಳನ್ನು ವೇದವ್ಯಾಸನ ಬಳಿಗೆ ಕಳುಹಿಸುತ್ತಾಳೆ;
ವಧು= ಹೆಂಗಸು;
ಚಪಲ ದೃಷ್ಟಿ= ಹೆಚ್ಚಿನ ಬಯಕೆ/ತೀವ್ರವಾದ ಆಸೆ;
ಅಳುಕು= ಹೆದರು/ಹಿಂಜರಿ;
ಈಕ್ಷಿಸು= ನೋಡು;
ಆ ವಧು ಚಪಲ ದೃಷ್ಟಿಯೊಳ್ ಅಳುಕದೆ ಈಕ್ಷಿಸಲು= ಆ ದಾಸಿಯು ಮುನಿಯೊಡನೆ ದೇಹದ ನಂಟನ್ನು ಪಡೆಯುವ ಅವಕಾಶ ದೊರೆತಿದ್ದಕ್ಕಾಗಿ ಹೆಚ್ಚಿನ ಆನಂದದಿಂದ, ತನಗೆ ಇನ್ನು ಮುಂದೆ ಒಳ್ಳೆಯದಾಗುವುದೆಂಬ ಆಸೆಯಿಂದ ಹಿಂಜರಿಯದೆ ವೇದವ್ಯಾಸನನ್ನು ನೋಡಿ, ಅವನೊಡನೆ ಕೂಡಿ ದೇಹದ ನಂಟನ್ನು ಪಡೆಯಲು;
ಅನಿಬರಿಗೆ ಗರ್ಭಾದಾನವು ಆಯ್ತು= ವೇದವ್ಯಾಸನೊಡನೆ ಪಡೆದ ದೇಹದ ನಂಟಿನಿಂದ ಆ ಮೂರು ಮಂದಿ ಹೆಣ್ಣುಗಳಿಗೂ ಗರ್ಬಕಟ್ಟಿತು;
ಮುನಿಪತಿ ಬಂದು ತಾಯ್ಗೆ ಕೈಮುಗಿದು ಎಂದನು= ವೇದವ್ಯಾಸನು ತಾಯಿಯ ಬಳಿಗೆ ಬಂದು ಕಯ್ಗಳನ್ನು ಮುಗಿದು ಈ ರೀತಿ ನುಡಿದನು;
ನಂದನ= ಮಗ;
ಜಾತ್ಯಂಧ= ಹುಟ್ಟುಗುರುಡ/ಹುಟ್ಟಿನಿಂದಲೇ ಕುರುಡ;
ಪಾಂಡು= ಹಳದಿ ಮಿಶ್ರಿತವಾದ ಬಿಳಿಯ ಬಣ್ಣ;
ನೇಮ= ಅಪ್ಪಣೆ;
ಬಾದರಾಯಣ= ವೇದವ್ಯಾಸ;
ಅಂಬಿಕೆಯಲಿ ಜನಿಸುವ ನಂದನನು ಜಾತ್ಯಂಧನು. ಅಂಬಾಲಿಕೆಗೆ ಪಾಂಡುಮಯ. ಬಂದ ಬಳಿಕಿನ ಚಪಲೆಗೆ ಅತಿಬಲನು. ತನಗೆ ನೇಮವೆ. ಎಂದು ಹೇಳಿದು, ಬಾದರಾಯಣನು ತನ್ನ ಆಶ್ರಮಕೆ ಸರಿದನು= ಅಂಬಿಕೆಯಲ್ಲಿ ಹುಟ್ಟುವ ಮಗನು ಹುಟ್ಟುಗುರುಡ; ಅಂಬಾಲಿಕೆಗೆ ಹುಟ್ಟುವ ಮಗನು ಪಾಂಡುರೋಗಿ; ಅನಂತರ ಬಂದ ದಾಸಿಗೆ ಹುಟ್ಟುವ ಮಗನು ಅತಿಬಲಶಾಲಿ. ಇನ್ನು ನಾನು ಹೋಗಲು ಅನುಮತಿಯನ್ನು ನೀಡುವಿರಾ ಎಂದು ಹೇಳಿ, ವೇದವ್ಯಾಸನು ತನ್ನ ಆಶ್ರಮಕ್ಕೆ ಹಿಂತಿರುಗುತ್ತಾನೆ;
ನವಮಾಸ ತುಂಬಿದುದು= ಗರ್ಬಕಟ್ಟಿ ಒಂಬತ್ತು ತಿಂಗಳು ತುಂಬಿದುದು;
ಸೂನು= ಮಗ;
ಗತ+ಅಂಬಕನು; ಗತ= ಕಳೆದ/ಇಲ್ಲದ;
ಅಂಬಕ= ಕಣ್ಣು;
ಗತಾಂಬಕ= ಕುರುಡ;
ಅಂಬಿಕೆಯ ಬಸುರಿನಲಿ ಸೂನು ಗತಾಂಬಕನು ಜನಿಸಿದನು= ಅಂಬಿಕೆಯ ಹೊಟ್ಟೆಯಲ್ಲಿ ಕುರುಡನಾದ ಮಗನು ಹುಟ್ಟಿದನು;
ಅಂಬಾಲಿಕೆಗೆ ಪಾಂಡುಮಯ ಮಗನಾದನ್= ಅಂಬಾಲಿಕೆಗೆ ಹಳದಿ ಬಿಳುಪುಬಣ್ಣದ ತೊಗಲಿನ ದೇಹದ ಮಗ ಹುಟ್ಟಿದನು;
ಕುಮಾರ+ಉದ್ಭವದ; ಉದ್ಭವ= ಹುಟ್ಟು/ಉಂಟಾಗು;
ವಿಭವ= ಸಿರಿ/ ಸೊಗಸು/ ಹಿರಿಮೆ;
ಪರಿತೋಷ= ಹೆಚ್ಚಿನ ಆನಂದ;
ಚುಂಬಿಸು= ಮುತ್ತಿಡು;
ಕುಮಾರೋದ್ಭವದ ವಿಭವದಲಿ ಪರಿತೋಷ ಚುಂಬಿಸಿತು= ಕುಮಾರರ ಹುಟ್ಟಿನ ಸಿರಿಯಿಂದ ಹೆಚ್ಚಿದ ಆನಂದವು ಹಸ್ತಿನಾವತಿಯಲ್ಲಿ ಎಲ್ಲರನ್ನೂ ಉಲ್ಲಾಸಗೊಳಿಸಿತು;
ನವ= ಹೊಸ;
ಪುಳಕ+ಅಂಬುಗಳು; ಪುಳಕ= ರೋಮಾಂಚನ;
ಅಂಬು=ನೀರು;
ಜನಜನಿತ= ಜನರಲ್ಲಿ ಹಬ್ಬಿರುವ ಸಂಗತಿ/ಜನರೆಲ್ಲರಿಗೂ ತಿಳಿದಿರುವ ಸಂಗತಿ;
ನವ ಪುಳಕಾಂಬುಗಳು ಜನಜನಿತ ಉತ್ಸವವನು= ನಾಡಿನ ಜನರೆಲ್ಲರೂ ರೋಮಾಂಚನಗೊಂಡು ಆನಂದ ಮತ್ತು ಸಡಗರದಿಂದ ಪಾಲ್ಗೊಂಡ ಈ ಉತ್ಸವವನ್ನು;
ಅದನು ಏನೆಂಬೆನು= ಅದನ್ನು ಯಾವ ರೀತಿಯಲ್ಲಿ ಬಣ್ಣಿಸಲಿ; ಜನಮೇಜಯ ರಾಜನಿಗೆ ಮಹಾಬಾರತದ ಕತೆಯನ್ನು ಹೇಳುತ್ತಿರುವ ವೈಶಂಪಾಯನ ಮುನಿಯು ಈ ರೀತಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾನೆ;
ಗಂಗಾಜಾತ= ಗಂಗೆಯ ಮಗನಾದ ಬೀಶ್ಮ;
ಜಾತಕರ್ಮ= ಮಗು ಹುಟ್ಟಿದಾಗ ಮಾಡುವ ಆಚರಣೆಗಳು;
ಪಾರ್ಥೀವ= ಕ್ಷತ್ರಿಯ;
ವಿಧಿ= ಶಾಸ್ತ್ರದಲ್ಲಿ ಹೇಳಿರುವ ಸಂಪ್ರದಾಯದ ಆಚರಣೆ;
ವಿಹಿತ= ಸೂಕ್ತವಾದ;
ಗಂಗಾಜಾತ ಜಾತಕರ್ಮಾದಿಯನು ಪಾರ್ಥೀವ ಜಾತಿ ವಿಧಿವಿಹಿತದಲಿ ಮಾಡಿಸಿ= ಬೀಶ್ಮನು ರಾಜಮನೆತನದಲ್ಲಿ ಮಕ್ಕಳು ಹುಟ್ಟಿದಾಗ ಮಾಡಬೇಕಾದ ಆಚರಣೆಗಳೆಲ್ಲವನ್ನೂ ಕ್ಷತ್ರಿಯ ಜಾತಿಯ ಸಂಪ್ರದಾಯಕ್ಕೆ ಅನುಗುಣವಾಗಿ ಮಾಡಿಸಿ;
ನಿಖಿಳ= ಸಮಸ್ತ/ಎಲ್ಲ;
ಯಾಚಕರು= ಬೇಡುವವರು;
ತುಷ್ಟಿ= ಸಮಾದಾನ;
ನಿಖಿಳ ಯಾಚಕರ ತುಷ್ಟಿಪಡಿಸಿದ= ಬೇಡುವವರೆಲ್ಲರ ಅಗತ್ಯಗಳೆಲ್ಲವನ್ನೂ ಪೂರಯಿಸಿ ನೆಮ್ಮದಿಯಿಂದ ಇರುವಂತೆ ಮಾಡಿದನು;
ಈತನೇ ಧೃತರಾಷ್ಟ್ರ= ಅಂಬಿಕೆಯ ಮಗನೇ ದ್ರುತರಾಶ್ಟ್ರ;
ಎರಡನೆಯಾತ ಪಾಂಡು= ಅಂಬಾಲಿಕೆಯ ಮಗನೇ ಪಾಂಡು;
ವಿಲಾಸಿನೀ= ದಾಸಿ;
ಸಂಭೂತನು= ಹುಟ್ಟಿದವನು;
ಅಭಿದಾನ= ಹೆಸರು;
ವಿಲಾಸಿನೀ ಸಂಭೂತನೀತನು ವಿದುರನು= ದಾಸಿಗೆ ಹುಟ್ಟಿದ ಈತನು ವಿದುರ;
ಎಂದು ಅವರಿಗೆ ಅಭಿದಾನ ಆಯ್ತು= ಎಂದು ಆ ಮೂರು ಮಕ್ಕಳಿಗೂ ಹೆಸರನ್ನು ಇಡಲಾಯಿತು;
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು