ಕುಮಾರವ್ಯಾಸ ಬಾರತ ಓದು: ಆದಿಪರ‍್ವ – ದರ‍್ಮರಾಯನ ಜನನ – ನೋಟ – 8

– ಸಿ. ಪಿ. ನಾಗರಾಜ.

(ಆದಿಪರ್ವ: ಸಂದಿ-4: ಪದ್ಯ-36 ರಿಂದ 40)

*** ದರ‍್ಮರಾಯನ ಜನನ ***

ಪಾತ್ರಗಳು

ಕುಂತಿ: ಪಾಂಡುರಾಜನ ಮೊದಲನೆಯ ಹೆಂಡತಿ.
ಯಮ: ದೇವಲೋಕದಲ್ಲಿರುವ ದೇವತೆ.

*** ಧರ್ಮರಾಯನ ಜನನ ***

ತರುಣಿ ಪಾಂಡುವಿನ ಆಜ್ಞೆಯನು ನಿಜ ಶಿರದೊಳು ಆಂತು… ಸಮಸ್ತ ಮುನಿ ಮುಖ್ಯರಿಗೆ ವಂದಿಸಿ… ಹರಿ ಹರ ಬ್ರಹ್ಮಾದಿಗಳಿಗೆ ಎರಗಿ… ರಸಿಯಲಿ ಮಿಂದಳು… ಮುನೀಂದ್ರನ ಪರಮ ಮಂತ್ರಾಕ್ಷರವ ತಾನು ಉಚ್ಚರಿಸಿ ಯಮನನು ನೆನೆದಳು… ಆ ಕ್ಷಣ ಆತನು ಐತಂದ… ಸತಿಯ ಸಮ್ಮುಖನಾಗಿ ವೈವಸ್ವತನು ನುಡಿದನು…

ಯಮ: ಇದೇಕೆ ನಮ್ಮನು ಕ್ಷಿತಿಗೆ ಬರಿಸಿದೆ?

(ಎನಲು, ಲಜ್ಜಾ ಅವನತಮುಖಿಯಾಗಿ… )

ಕುಂತಿ: ಸುತನ ಕರುಣಿಪುದು.

(ಎನಲು, ಭಯ ಪರಿ ವಿತತ ವಿಮಲಸ್ವೇದಜಲ ಕಂಪಿತೆಯ ಮುಟ್ಟಿ… )

ಯಮ: ತಥಾಸ್ತು…

(ಎನುತ ಕೃತಾಂತ ಬೀಳ್ಕೊಂಡ. ಧಾರುಣೀ ಪತಿ ಕೇಳು, ಕುಂತೀ ನಾರಿಗೆ ಗರ್ಭ ಆದುದು… ಹರುಷದ ಭಾರದಲಿ ಸತಿ ತಗ್ಗಿದಳು… ನವ ಪೂರ್ಣಮಾಸದಲಿ ಚಾರುತರ ನಕ್ಷತ್ರ, ಶುಭ ದಿನ ವಾರ ಲಗ್ನದೊಳು… ಇಂದುಕುಲ ವಿಸ್ತಾರಕನು ಸುಕುಮಾರನು

ಧರಣಿಯಲಿ ಅವತರಿಸಿದನು… ಅಖಿಲ ದೆಸೆ ನಿರ್ಮಲಿನವಾಯ್ತು… ದುಷ್ಕರ್ಮ ತತಿ ಬೆಚ್ಚಿದುದು… ಸಾಕ್ಷಾತ್ ಧರ್ಮವೇ ಧರಣಿಯಲಿ ನೃಪ ರೂಪಾಗಿ ಜನಿಸಿತಲ.. ದುರ್ಮಹೀಶರ ಹೊತ್ತ ಭಾರದ ಕರ್ಮ ವೇದನೆ ಧಾತ್ರಿಗೆ ಇಳಿದುದು… “ಧರ್ಮವು ಇನ್ನು ಎಮಗೆ ಅಹುದು” ಎನುತ ಮುನಿ ನಿಕರ ಹೆಚ್ಚಿದುದು… ಧರಣಿಪತಿ ಧರ್ಮಜನ ಮುಖ ಸಂದರುಶನವ ಮಾಡಿದನು… ಹೆಚ್ಚಿದ ಹರುಷ ಭಾರಕೆ ಚಿತ್ತ ತಗ್ಗಿತು… ಗಜಪುರದೊಳು ಪುತ್ರೋತ್ಸವದ ನುಡಿ ಅಡಿಗಡಿಗೆ ಹರಿದು ಅಬ್ಬರವಾಯ್ತು… ಪಾಂಡುವಿನ ಅರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ ಮುಗ್ಗಿತು.

ಪದ ವಿಂಗಡಣೆ ಮತ್ತು ತಿರುಳು

ನಿಜ=ತನ್ನ; ಶಿರ=ತಲೆ; ಆಂತು=ತಳೆದು/ಕಯ್ಕೊಳ್ಳು; ಹರಿ=ವಿಶ್ಣು; ಹರ=ಶಿವ; ಬ್ರಹ್ಮ+ಆದಿಗಳಿಗೆ; ಆದಿಗಳಿಗೆ=ಮೊದಲಾದವರಿಗೆ; ಎರಗು=ನಮಸ್ಕರಿಸು; ಸರಸಿ=ಕೊಳ; ಮೀ/ಮೀಯು-ಸ್ನಾನ ಮಾಡು; ಮುನಿ+ಇಂದ್ರ; ಇಂದ್ರ=ಒಡೆಯ/ಉತ್ತಮನಾದವನು; ಮುನೀಂದ್ರ=ಮುನಿಗಳಲ್ಲಿ ಉತ್ತಮನಾದ ದೂರ್ವಾಸ; ಪರಮ=ಅತಿಶಯವಾದ/ಅತ್ಯುತ್ತಮವಾದ; ಐತರು=ಸಮೀಪಿಸುವುದು/ಆಗಮಿಸುವುದು;

ವೈವಸ್ವತ=ಯಮ; ಕ್ಷಿತಿ=ಬೂಮಿ; ಅವನತ=ಬಾಗಿದ/ಬಗ್ಗಿದ; ಅವನತಮುಖಿ=ತಲೆಯನ್ನು ತಗ್ಗಿಸಿ/ಮೊಗವನ್ನು ಕೆಳಗೆ ಮಾಡಿಕೊಂಡು; ಸುತ=ಮಗ; ಕರುಣಿಸು=ಅನುಗ್ರಹಿಸು; ಪರಿ=ಸ್ತಿತಿ/ಪಾಡು; ವಿತತ=ಹರಡಿಕೊಂಡಿರುವ; ವಿಮಲ=ಪರಿಶುದ್ದವಾದ; ಸ್ವೇದ=ಬೆವರು; ಸ್ವೇದಜಲ=ಬೆವರ ಹನಿ; ಕೃತಾಂತ=ಯಮದೇವ;

ತಥಾಸ್ತು=ಅಂತೆಯೇ ಆಗಲಿ/ ನಿನ್ನ ಕೋರಿಕೆಯು ಈಡೇರಲಿ; ಧಾರುಣೀ ಪತಿ ಕೇಳು=ಜನಮೇಜಯ ರಾಜನೇ ಕೇಳು. ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ವ್ಯಾಸರು ರಚಿಸಿದ ಮಹಾಬಾರತದ ಕತೆಯನ್ನು ಮತ್ತೊಮ್ಮೆ ಹೇಳುತ್ತಿದ್ದಾನೆ; ಗರ್ಭ ಆದುದು=ಬಸುರಿಯಾದಳು; ನವ=ಒಂಬತ್ತು; ಮಾಸ=ತಿಂಗಳು; ಚಾರುತರ=ಉತ್ತಮವಾದ; ಲಗ್ನ=ಕಾಲ/ಗಳಿಗೆ; ಇಂದು=ಚಂದ್ರ; ಇಂದುಕುಲ=ಚಂದ್ರವಂಶ: ವಿಸ್ತಾರಕನು=ವಂಶವನ್ನು ಬೆಳೆಸುವವನು/ಮುಂದುವರಿಸುವವನು; ಧರಣಿ=ಬೂಮಿ;

ಅಖಿಲ=ಎಲ್ಲ/ಸಮಸ್ತ; ದೆಸೆ=ದಿಕ್ಕು; ನಿರ್ಮಲಿನ=ಶುಚಿಯಾಗುವುದು; ದುಷ್ಕರ್ಮ=ಕೆಟ್ಟ ಕೆಲಸ; ತತಿ=ಗುಂಪು/ಸಮೂಹ; ದುರ್ಮಹೀಶರು=ಕೆಟ್ಟ ನಡೆನುಡಿಯ ರಾಜರು; ಧಾತ್ರಿ=ಬೂಮಿ; ನಿಕರ= ಗುಂಪು/ ಸಮೂಹ; ಧರಣಿಪತಿ=ಬೂಮಿಯ ಒಡೆಯ/ಪಾಂಡು ರಾಜ; ಧರ್ಮಜ=ಯಮನ ಅನುಗ್ರಹದಿಂದ ಹುಟ್ಟಿದ ಮಗು ದರ್ಮರಾಯ; ಚಿತ್ತ=ಮನಸ್ಸು; ತಗ್ಗು=ಶಾಂತವಾಗು; ಗಜಪುರ=ಹಸ್ತಿನಾವತಿ; ಅಬ್ಬರ=ಜೋರಾದ ದನಿ/ಸಡಗರದ ದನಿ; ಮುಗ್ಗಿತು=ಆವರಿಸಿತು/ಹರಡಿತು;

ಹೊಸಗನ್ನಡ ಗದ್ಯರೂಪ

ಕುಂತಿಯು ಪಾಂಡುವಿನ ಅನುಮತಿಯನ್ನು ತನ್ನ ತಲೆಯಲ್ಲಿ ಹೊತ್ತು… ಅಂದರೆ… ದೂರ‍್ವಾಸ ಮುನಿಯು ಹೇಳಿಕೊಟ್ಟಿರುವ ಮಂತ್ರಗಳನ್ನು ಉಚ್ಚರಿಸಿ, ದೇವತೆಗಳನ್ನು ಒಲಿಸಿಕೊಂಡು ಮಕ್ಕಳನ್ನು ಪಡೆಯುವುದಕ್ಕೆ ಪಾಂಡುರಾಜನು ನೀಡಿದ ಅನುಮತಿಯನ್ನು ಆಚರಣೆಗೆ ತರಲು ಮನಸ್ಸು ಮಾಡಿ… ಆಶ್ರಮದಲ್ಲಿದ್ದ ಎಲ್ಲ ಮುನಿ ಮುಕ್ಯರಿಗೆ ನಮಸ್ಕರಿಸಿ… ಹರಿ ಹರ ಬ್ರಹ್ಮ ಮೊದಲಾದ ದೇವತೆಗಳಿಗೆ ವಂದಿಸಿ… ಕೊಳದಲ್ಲಿ ಸ್ನಾನವನ್ನು ಮಾಡಿದಳು;

ದೂರ‍್ವಾಸ ಮುನಿಯು ಹೇಳಿಕೊಟ್ಟಿದ್ದ ಉತ್ತಮವಾದ ಮಂತ್ರಾಕ್ಶರವನ್ನು ಕುಂತಿಯು ಉಚ್ಚರಿಸಿ, ಯಮದೇವನನ್ನು ನೆನೆದುಕೊಂಡಳು… ಮರುಗಳಿಗೆಯಲ್ಲಿಯೇ ಕುಂತಿಯ ಮುಂದೆ ಬಂದು ನಿಂತ ಯಮನು ಈ ರೀತಿ ನುಡಿದನು… “ಇದೇಕೆ ನಮ್ಮನ್ನು ಬೂಮಿಗೆ ಬರಿಸಿದೆ” ಎಂದು ಕೇಳಲು… ಕುಂತಿಯು ನಾಚಿಕೆಯಿಂದ ತಲೆಯನ್ನು ಬಗ್ಗಿಸಿ ನೆಲವನ್ನು ನೋಡುತ್ತ “ಮಗನನ್ನು ನೀಡಬೇಕು ಎಂದು ಕೋರಿದಳು… ಮಾನಸಿಕ ಒತ್ತಡದಿಂದಾಗಿ ಮೊಗದ ತುಂಬಾ ಹರಡಿಕೊಂಡಿರುವ ಬೆವರಹನಿಗಳಿಂದ ಕೂಡಿ ನಡುಗುತ್ತಿರುವ ಕುಂತಿಯನ್ನು ಯಮನು ಮುಟ್ಟಿ “ನಿನ್ನ ಕೋರಿಕೆಯು ಈಡೇರಲಿ” ಎಂದು ಅನುಗ್ರಹವನ್ನು ಮಾಡಿ ಆಶ್ರಮದಿಂದ ತೆರಳಿದನು.

ಜನಮೇಜಯ ರಾಜನೇ ಕೇಳು… ಕುಂತಿಯು ಬಸುರಿಯಾದಳು… ಆನಂದದ ಹೆಚ್ಚಳದಲ್ಲಿ ಕುಂತಿಯು ಬಾಗಿದಳು… ಒಂಬತ್ತು ತಿಂಗಳುಗಳು ಮುಗಿಯುತ್ತಿದ್ದಂತೆಯೇ ಒಳ್ಳೆಯ ನಕ್ಶತ್ರ, ಒಳ್ಳೆಯ ದಿನ, ಒಳ್ಳೆಯ ವಾರದ , ಒಳ್ಳೆಯ ಗಳಿಗೆಯಲ್ಲಿ ಚಂದ್ರವಂಶವನ್ನು ಬೆಳಸುವವನಾದ ಸುಂದರಾಂಗನಾದ ಮಗನು ಬೂಮಿಯಲ್ಲಿ ಹುಟ್ಟಿದನು… ಕುಂತಿಗೆ ಮಗನು ಹುಟ್ಟಿದ ಗಳಿಗೆಯಲ್ಲಿ ಕಂಡುಬಂದ ನೋಟಗಳನ್ನು ಅತಿಶಯವಾದ ನುಡಿಗಳಿಂದ ಬಣ್ಣಿಸಲಾಗಿದೆ… ಎಲ್ಲಾ ದಿಕ್ಕುಗಳು ಶುಚಿಯಾದವು… ಕೆಟ್ಟ ಕೆಲಸವನ್ನು ಮಾಡುವವರ ಗುಂಪು ಬೆಚ್ಚಿಬಿದ್ದಿತು… ಕಣ್ಣಿಗೆ ಕಾಣಿಸುವಂತೆ ನೇರವಾಗಿ ದರ‍್ಮವೇ ಬೂಮಿಯಲ್ಲಿ ರಾಜಕುಮಾರನ ರೂಪಿನಲ್ಲಿ ಹುಟ್ಟಿದೆಯಲ್ಲವೇ ಎನ್ನುವಂತಿತ್ತು… “ಕೆಟ್ಟ ನಡೆನುಡಿಯ ರಾಜರ ಪಾಪಕಾರ್ಯದ ಹೊರೆಯು ಬೂಮಿಯನ್ನು ವ್ಯಾಪಿಸಿತ್ತು. ಇನ್ನು ಮುಂದೆ ಅದನ್ನು ತೊಲಗಿಸುವಂತೆ ದರ‍್ಮವು ನಮಗೆ ದೊರೆಯುತ್ತಿದೆ” ಎಂದು ಹೇಳುತ್ತ ಮುನಿಗಳ ಸಮೂಹವು ಆನಂದಪಟ್ಟಿತು; ಪಾಂಡುರಾಜನು ಯಮದೇವನ ಅನುಗ್ರಹದಿಂದ ಹುಟ್ಟಿದ ಮಗುವಿನ ಮೊಗವನ್ನು ನೋಡಿದನು; ಮಕ್ಕಳಿಲ್ಲವೆಂಬ ಚಿಂತೆ ಕಡಿಮೆಯಾಗಿ ಮನದಲ್ಲಿ ಆನಂದ ತುಂಬಿತು; ಹಸ್ತಿನಾಪುರದಲ್ಲಿ ಪುತ್ರೋತ್ಸವದ ಮಾತು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ದೊಡ್ಡ ಸಡಗರವಾಯಿತು; ಪಾಂಡುವಿನ ರಾಣಿ ಕುಂತಿಯಲ್ಲಿ ಮಗು ಹುಟ್ಟಿತೆಂಬ ಸುದ್ದಿಯು ಜನರೆಲ್ಲರ ನಡುವೆ ಹಬ್ಬಿತು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *