ಕುಮಾರವ್ಯಾಸ ಬಾರತ ಓದು: ಆದಿಪರ‍್ವ – ಅರ್‍ಜುನ – ನಕುಲ – ಸಹದೇವ – ಕ್ರಿಶ್ಣ ಜನನ – ನೋಟ – 11

– ಸಿ. ಪಿ. ನಾಗರಾಜ.

ಅರ್ಜುನ – ನಕುಲ – ಸಹದೇವ – ಕೃಷ್ಣ ಜನನ

(ಆದಿಪರ್ವ: ಸಂದಿ-4: ಪದ್ಯ-59 ರಿಂದ 66)

ಪಾತ್ರಗಳು:

ಕುಂತಿ: ಪಾಂಡುರಾಜನ ಮೊದಲನೆಯ ಹೆಂಡತಿ

ಮಾದ್ರಿ: ಪಾಂಡುರಾಜನ ಎರಡನೆಯ ಹೆಂಡತಿ

ದೇವೇಂದ್ರ: ದೇವತೆಗಳ ಒಡೆಯ. ಈತನ ಅನುಗ್ರಹದಿಂದ ಕುಂತಿಯು ಅರ್ಜುನನ್ನು ಮಗನನ್ನಾಗಿ ಪಡೆದಳು.

ಅಶ್ವಿನಿ ದೇವತೆಗಳು: ಇಬ್ಬರು ಸೋದರರು. ಈ ದೇವತೆಗಳ ಅನುಗ್ರಹದಿಂದ ಮಾದ್ರಿಯು ನಕುಲ ಮತ್ತು ಸಹದೇವರನ್ನು ಮಕ್ಕಳಾಗಿ ಪಡೆದಳು.

*** ಅರ್ಜುನ – ನಕುಲ – ಸಹದೇವ – ಕೃಷ್ಣ ಜನನ ***

ಕುಂತಿ: ವಸುಧೆಗೆ ಅತಿ ಬಲನೊಬ್ಬ ಕಂದನ ಬೆಸಲಹೆನು…

(ಎಂದೆನುತ ಆ ಕುಂತಿ… ಸಾರಸ ಲಸಿತ ಕಮಲಾಕರದ ತೀರಕೆ ಬಂದಳು… ಮಿಂದು ಕಡು

ಶುಚಿಯಾಗಿ… ಸುಮನೋವೃಂದದೊಳಗೆ ಮುನೀಂದ್ರನ ಮಂತ್ರ ಶಕ್ತಿಯಲಿ ಆರೈದು

ನೋಡಿ… ಪುರಂದರನ ನೆನೆದಳು… ಅಲ್ಲಿಗೆ ಬಂದನು.)

ದೇವೇಂದ್ರ: ಅರವಿಂದಲೋಚನೆ ಬಯಕೆಯೇನು ಹೇಳು

(ಎನಲು… ಲಜ್ಜಾನುಭಾವದಲಿ… ಪೂರ್ಣೇಂದುಮುಖಿ ತಲೆವಾಗಿದಳು.)

ದೇವೇಂದ್ರ: ನಿನಗೆ ಸುತನನು ಇತ್ತೆನು. ಲೋಕತ್ರಿತಯದಲಿ ಬಲುಗೈ ಕಣಾ… ಪಶುಪತಿಗೆ

ಪುರುಷೋತ್ತಮಗೆ ಸರಿಮಿಗಿಲೆಂಬ ಸಂದೇಹ… ಶತ ಭವಾಂತರ ಪುಣ್ಯತರು ಕಾಮಿತವ

ಫಲಿಸಿತು ಹೋಗು.

(ಎನುತ ಸುರಪತಿ ಲತಾಂಗಿಗೆ ವರವನಿತ್ತು… ಗಗನವನು ಅಡರಿದನು… ನವಮಾಸ

ತೀವಿದವು… ವಿಮಲ ವಿಭಾವಿಸುವಿನ ಉದಯದಲಿ… ತಾರೆ ಉತ್ತರೆ ಫಲುಗುಣಾಹ್ವಯದ

ಶುಭ ಲಗ್ನಾವಲಂಬನ ಜೀವಕೇಂದ್ರ ಸ್ಥಿತಿ… ದಶಾ ದಿಗ್ಭಾವಿತ ಗ್ರಹರಾಶಿಯಿರೆ…

ಗಾಂಡೀವಿ ಜನಿಸಿದನು… ಒಡನೆ ಜನದ ಸುಮ್ಮಾನ ಜನಿಸಿತು… ದೇವ ದುಂದುಭಿ

ಮೊಳಗಿದವು… ಕುಸುಮಾವಳಿಯ ಮಳೆ ಸುರಿದುದು… ಆಡುವ ದೇವ ವಧುಗಳ ಹೊಳೆವ

ಕಂಗಳ ಢಾಳ ಮಿಂಚಿದವು… ಭುವನಾವಳಿಯೊಳು ತೀವಿದ ಉತ್ಸಹವು ಉಬ್ಬರಿಸೆ…

ಇಂದ್ರಾದಿ ನಿಖಿಳ ಸುರಾವಳಿಗಳು ಉರೆ ಕೂಡೆ ಧನಂಜಯನ ಕೊಂಡಾಡಿತು.
ರಣಭಯಂಕರನು ಅರ್ಜುನನು ಧಾರುಣಿಯೊಳು ಉದಿಸುವ

ಮುನ್ನ… ತಿಂಗಳನು ಎಣಿಸಿದರೆ ಆರಾಯ್ತು… ಮಧುರೆಯ ರಾಜಭವನದಲಿ ವರ

ಶ್ರಾವಣ ಬಹುಳದ ಅಷ್ಟಮಿ ಇರುಳು ರೋಹಿಣಿಯಲಿ ದೇವಕಿಯ ಜಠದಲಿ

ಗುಣರಹಿತನು ಅಚ್ಯುತನು ಅವತರಿಸಿದನಲೈ. ಕೇಳು ನೃಪ… ಈತ ನರ

ಋಷಿ…ಆತನು ನಿಖಿಳ ಭುವನ ಖ್ಯಾತ ನಾರಾಯಣನಲೈ… ಕೃಷ್ಣಾವತಾರದಲಿ

ಉರ್ವೀಭಾರ ಸಂಹರಣದ ವಿನೋದದಲಿ… ಭೂತಪತಿ ಮೊದಲಾದ

ದಿವಿಜವ್ರಾತವೇ ನರ ರೂಪದಲಿ ಬಳಿಕ ಸಂಭೂತವಾದುದು.)

ಕುಂತಿ: ತನಗೆ ಮೂವರು ಸುತರು ಸಾಕು.

(ಎಂದು ಈಕೆ ಮಾದ್ರೀ ದೇವಿಗೆ… ಅಗ್ಗದ ಶೋಕಿತೆಗೆ… ಮಂತ್ರೋಪದೇಶ ವಿಧಾನವನು

 ಕಲಿಸಿ…)

ಕುಂತಿ: ನಾಕ ನಿಲಯರ ಒಲಿಸು.

(ಎನಲು… ಆಕೆ ಹರ್ಷದಲಿ ಬಂದು… ಲೋಕ ವಿಶ್ರುತರು ಅಶ್ವಿನೀ ದೇವರನು

ಕೃತನಿಯಮದಲಿ ನೆನೆದಳು… ಮಹೀತಳಕೆ ಅವರಿಬ್ಬರು ಬಂದರು… ಇಂದುವದನೆಗೆ

ಸುತರನು ಇತ್ತರು… ಮಂದಗಮನೆಯ ಕಳುಹಿ… ಗಗನ ಮಂಡಲಕೆ ಹಾಯ್ದರು…

ಅರ್ಜುನನಿಂದ ಬಳಿಕ ಒಂದು ವರುಷಕೆ ಕಿರಿಯರು ಅವತರಿಸಿದರು…

ಮುನಿ ವೃಂದ ಕುಮಾರಕರ ನೆರೆ ಪತಿಕರಿಸಿ ಕೊಂಡಾಡಿತು.)

ಪದ ವಿಂಗಡಣೆ ಮತ್ತು ತಿರುಳು

ವಸುಧೆ=ಬೂಮಿ ; ಬೆಸಲ್+ಅಹೆನು; ಬೆಸಲು=ಹಡೆಯುವಿಕೆ/ಹೆರುವಿಕೆ ; ಎಂದು+ಎನುತ; ಸಾರಸ=ಕೊಕ್ಕರೆ/ಹಂಸ ಮುಂತಾದ ನೀರಹಕ್ಕಿಗಳು ; ಲಸಿತ=ಕಂಗೊಳಿಸು ; ಕಮಲಾಕರ=ಕೊಳ; ಮಿಂದು=ಸ್ನಾನ ಮಾಡಿ; ಕಡು=ಬಹಳ/ತುಂಬಾ; ಕಡುಶುಚಿ=ತುಂಬಾ ಮಡಿ; ಸುಮನೋವೃಂದದ+ಒಳಗೆ; ಸುಮನೋವೃಂದ=ಮನದಲ್ಲಿ ಒಳ್ಳೆಯ ಬಯಕೆ ಮತ್ತು ಆಲೋಚನೆ ; ಆರೈದು=ಯೋಚಿಸುವುದು ; ಪುರಂದರ=ದೇವೇಂದ್ರ;

ಅಲ್ಲಿಗೆ ಬಂದನು=ಕುಂತಿಯ ಕರೆಗೆ ದೇವತೆಯಾದ ದೇವೇಂದ್ರ ಓಗೊಟ್ಟು ಕೂಡಲೇ ಅಲ್ಲಿಗೆ ಬಂದನು: ಅರವಿಂದ+ಲೋಚನೆ; ಅರವಿಂದ=ತಾವರೆಯ ಹೂವು ; ಲೋಚನ=ಕಣ್ಣು ; ಅರವಿಂದಲೋಚನೆ=ತಾವರೆಹೂವಿನಂತೆ ವಿಶಾಲವಾದ ಕಣ್ಣುಳ್ಳವಳು/ಕುಂತಿ; ಲಜ್ಜಾ+ಅನುಭಾವದಲಿ; ಲಜ್ಜಾ=ನಾಚಿಕೆ; ಅನುಭಾವ=ಮನಸ್ಸಿನಲ್ಲಿ ಮಿಡಿಯುವ ಬಾವನೆ; ಪೂರ್ಣ+ಇಂದುಮುಖಿ; ಇಂದು=ಚಂದ್ರ; ಪೂರ್ಣೇಂದುಮುಖಿ=ಹುಣ್ಣಿಮೆಯ ಚಂದಿರನಂತೆ ಮೊಗವುಳ್ಳವಳು/ಕುಂತಿ; ಸುತ=ಮಗ; ಪಶುಪತಿ=ಶಿವ;

ಪುರುಷೋತ್ತಮ=ವಿಶ್ಣು; ಸರಿಮಿಗಿಲೆಂಬ ಸಂದೇಹ=ಸಮಾನನೋ ಇಲ್ಲವೇ ಹೆಚ್ಚೋ ಎಂದು ಹೇಳಲಾಗದು; ಶತ=ನೂರು ; ಭವ+ಅಂತರ; ಭವ=ಹುಟ್ಟು/ಜನ್ಮ ; ಭವಾಂತರ=ಅನೇಕ ಜನ್ಮಗಳನ್ನು ಹೊಂದುವುದು; ತರು=ಮರ; ಕಾಮಿತ=ಬಯಸಿದ್ದನ್ನು/ ಆಸೆಪಟ್ಟಿದ್ದನ್ನು; ಫಲಿಸಿತು=ಪಲವನ್ನು ನೀಡಿತು; ಸುರಪತಿ=ದೇವೇಂದ್ರ; ಲತಾಂಗಿ=ಬಳ್ಳಿಯಂತೆ ಬಳುಕುವ ದೇಹವುಳ್ಳವಳು/ಕುಂತಿ; ಅಡರು=ಏರು; ನವಮಾಸ ತೀವಿದವು=ಒಂಬತ್ತು ತಿಂಗಳುಗಳು ತುಂಬಿದವು;

ವಿಮಲ=ಪರಿಶುದ್ದ ; ವಿಭಾವಿಸು=ಸೂರ್ಯ ; ತಾರೆ=ನಕ್ಶತ್ರ ; ಫಲುಗಣ+ಆಹ್ವಯದ; ಉತ್ತರೆ=ಒಂದು ನಕ್ಶತ್ರ ; ಫಲುಗುಣ=ಒಂದು ನಕ್ಶತ್ರ; ಆಹ್ವಯ=ಹೆಸರು ; ಲಗ್ನ+ಅವಲಂಬನ; ಲಗ್ನ=ಒಳ್ಳೆಯ ಗಳಿಗೆ; ಅವಲಂಬನ=ಆಸರೆ/ಕೂಡಿದ; ದಶಾ=ಹತ್ತು; ದಿಕ್+ಭಾವಿತ; ಸುಮ್ಮಾನ=ಹಿಗ್ಗು;

ದುಂದುಭಿ=ನಗಾರಿ/ಒಂದು ಬಗೆಯ ಚರ್ಮವಾದ್ಯ; ದೇವದುಂದುಭಿ=ದೇವಲೋಕದ ನಗಾರಿ; ಮೊಳಗು=ವಾದ್ಯಗಳಿಂದ ಹೊರಡುವ ದನಿ; ಕುಸುಮ+ಅವಳಿ; ಕುಸುಮ=ಹೂವು; ಆವಳಿ= ರಾಶಿ/ ಸಾಲು/ಗುಂಪು; ಢಾಳ=ಅಂದ/ಚೆಂದ; ಭುವನ+ಆವಳಿ; ಭುವನ=ಲೋಕ/ಜಗತ್ತು; ಭುವನಾವಳಿ=ದೇವಲೋಕ-ಬೂಲೋಕ-ಪಾತಾಳಲೋಕ ಎಂಬ ಮೂರು ಲೋಕಗಳಿವೆ ಎಂಬ ಕಲ್ಪನೆ ಜನಮನದಲ್ಲಿದೆ;

ತೀವು=ತುಂಬು; ಉತ್ಸವ=ಸಡಗರ; ಉಬ್ಬರಿಸು=ಅತಿಶಯವಾಗುವುದು/ ಎದ್ದುಕಾಣುವುದು; ನಿಖಿಳ=ಎಲ್ಲ/ಸಮಸ್ತ; ಸುರ+ಆವಳಿ; ಸುರ=ದೇವತೆ; ಉರೆ=ಅತಿಶಯವಾಗಿ; ಧಾರುಣಿ=ಬೂಮಿ; ಅಷ್ಟಮಿ=ಎಂಟನೆಯ ದಿನ; ಇರುಳು=ರಾತ್ರಿ; ರೋಹಿಣಿ=ಒಂದು ನಕ್ಶತ್ರ; ಅಚ್ಯುತ=ಕ್ರಿಶ್ಣ; ಕೃಷ್ಣ+ಅವತಾರದಲಿ; ದೇವರಾದ ವಿಶ್ಣು ಬೂಲೋಕದಲ್ಲಿ ಹತ್ತು ಅವತಾರಗಳನ್ನು ತಳೆದು ಬಂದಿದ್ದಾನೆ. ಅದರಲ್ಲಿ ಕ್ರಿಶ್ಣನ ಅವತಾರ ಒಂದು ಎಂಬ ಕಲ್ಪನೆಯು ಜನಮನದಲ್ಲಿದೆ;

ಉರ್ವೀ=ಬೂಮಿ; ಸಂಹರಣ=ಕುಗ್ಗಿಸುವುದು; ವಿನೋದ=ಆಟ; ಉರ್ವೀಭಾರ ಸಂಹರಣದ ವಿನೋದ=ಬೂಮಿಯ ಹೊರೆಯನ್ನು ತಗ್ಗಿಸಲೆಂಬ ಉದ್ದೇಶ; ಭೂತಪತಿ=ಶಿವ; ದಿವಿಜ=ದೇವತೆ; ವ್ರಾತ=ಸಮೂಹ; ಸಂಭೂತ=ಒಡಗೊಂಡ;

ಕುಂತಿಗೆ ದೂರ್‍ವಾಸ ಮುನಿಗಳು ಕೊಟ್ಟಿದ್ದ ಐದು ಮಂತ್ರಗಳಲ್ಲಿ ಕುಂತಿಯು ನಾಲ್ಕನ್ನು ಉಪಯೋಗಿಸಿಕೊಂಡು ಕರ್‍ಣ – ದರ್‍ಮರಾಯ – ಬೀಮ – ಅರ್‍ಜುನರನ್ನು ಪಡೆದಿದ್ದಾಳೆ. ಇದೀಗ ಕುಂತಿಯು ದೊಡ್ಡ ಮನಸ್ಸನ್ನು ಮಾಡಿ, ತನ್ನ ಓರಗಿತ್ತಿಯಾದ ಮಾದ್ರಿಗೆ ಉಳಿದಿರುವ ಇನ್ನೊಂದು ಮಂತ್ರವನ್ನು ಉಪದೇಶಿಸಲು ನಿಶ್ಚಯಿಸುತ್ತಾಳೆ;

ಅಗ್ಗ=ಹೆಚ್ಚಾದ; ನಾಕ=ಸ್ವರ್ಗ; ನಾಕ ನಿಲಯರು=ಸ್ವರ್ಗಲೋಕದಲ್ಲಿರುವ ದೇವತೆಗಳು; ಒಲಿಸು= ಮೆಚ್ಚಿಸು/ಬಯಸು/ಒಪ್ಪಿಸು; ವಿಶ್ರುತ=ಕೀರ್ತಿವಂತ/ಪ್ರಸಿದ್ದನಾದವನು; ಕೃತನಿಯಮ=ಸಂಪದ್ರಾಯದಲ್ಲಿ ಹೇಳಿರುವ ನಿಯಮ; ಇಂದು=ಚಂದ್ರ; ಇಂದುವದನೆ=ಚಂದಿರನಂತೆ ಕಾಂತಿಯುಳ್ಳ ಮೊಗದವಳು/ಮಾದ್ರಿ; ಮಂದಗಮನೆ=ನಿದಾನವಾಗಿ ನಡೆಯುವವಳು/ಮಾದ್ರಿ; ವೃಂದ=ಸಮೂಹ/ಗುಂಪು; ನೆರೆ=ಅತಿಶಯ/ಹೆಚ್ಚಾಗಿ; ಪತಿಕರಿಸು=ಆದರಿಸು/ಸತ್ಕರಿಸು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *