ಕುಮಾರವ್ಯಾಸ ಬಾರತ ಓದು-ಆದಿಪರ‍್ವ- ಪಾಂಡುರಾಜನ ಸಾವು – ನೋಟ 12

ಪಾಂಡುರಾಜನ ಸಾವು
( ಆದಿಪರ್ವ: ಅಯ್ದನೆಯ ಸಂದಿ : ಪದ್ಯ 1 ರಿಂದ 25 )
ಪಾತ್ರಗಳು:
ಪಾಂಡುರಾಜ: ಹಸ್ತಿನಾವತಿಯ ರಾಜನಾಗಿದ್ದವನು. ಈಗ ರಾಜ್ಯವನ್ನು ತೊರೆದು ತನ್ನ ಹೆಂಡತಿಯರಾದ ಕುಂತಿ ಮತ್ತು ಮಾದ್ರಿಯರೊಡನೆ ಶತಶ್ರುಂಗ ಪರ‍್ವತ ಪ್ರಾಂತ್ಯದ
ಮುನಿಗಳ ಆಶ್ರಮವಾಸಿಯಾಗಿದ್ದಾನೆ.
ಕುಂತಿ: ಪಾಂಡುರಾಜನ ಮೊದಲನೆಯ ಹೆಂಡತಿ.
ಮಾದ್ರಿ: ಪಾಂಡುರಾಜನ ಎರಡನೆಯ ಹೆಂಡತಿ.
ಪಾಂಡು ನಂದನರು: ದರ‍್ಮರಾಯ/ಬೀಮ/ಅರ‍್ಜುನ/ನಕುಲ/ಸಹದೇವ
*** ಪಾಂಡುರಾಜನ ಸಾವು ***
ಕೇಳು ಜನಮೇಜಯ ಧರಿತ್ರೀಪಾಲ, ಶತಶೃಂಗಾದ್ರಿಯಲಿ ತನ್ನ ವೀರಕುಮಾರಕರು ಸಹಿತ ಭೂಪಾಲನಿರ್ದನು… ವ್ಯಾಳ ವನಗಜ ಸಿಂಹ ವೃಕ ಶಾರ್ದೂಲ ಭಯವನು ಪರಿಹರಿಸಿ; ಪಾವನ ತಪೋವನವ ಮುನಿಪಾಳಿಗೆ ಆಶ್ರಯವೆನಿಸಿದನು. ಆ ಸಮಸ್ತ ಮುನೀಂದ್ರರೊಡನೆ ಅಭ್ಯಾಸ… ಆ ದಿವ್ಯಾಶ್ರಮದ ಸಹವಾಸ… ಆ ತಪ.. ಆ ಕುಮಾರ ಪರಾಕ್ರಮ ಆಲೋಕ… ಆ ಸಮಂಜಸ ಸತಿಯರಿಬ್ಬರ ಉಪಾಸನೆಗಳು… ಆ ವಿಭವಕೆ ಇಭಪುರಿಯಾ ಸಮಸ್ತ ಐಶ್ವರ್ಯವದು ಭೂಪತಿಗೆ ತೃಣವಾಯ್ತು.
ಪಾಂಡುರಾಜ: ( ತನ್ನ ಮನದಲ್ಲಿ ) ವಿಪಿನದಲಿ ಸುತ ವಿನೋದದ ಸಿರಿಗೆ ಅಮರಾವತಿಯ ಸಿರಿ ತೊತ್ತೆಂದು..
ವಿಮಲವ್ರತ ತಪೋಲಕ್ಷ್ಮಿಗೆ ವಿಲಾಸಿನಿ ಮುಕ್ತಿವಧುವೆಂದು… ಯತಿ ಪದಾಂಬುಜ ನಿತ್ಯಸೇವಾ ಸತಿಗೆ
ಜಗತ್ರಯಾದಿ ಸ್ಥಿತಿ ಪದವಿ ದಾಸಿ…
( ಎಂದು ಕಲಿಪಾಂಡು ಉಬ್ಬಿದನು… ಧರಣೀಶ್ವರನ ಹಿರಿಯ ಮಗಂಗೆ ವರುಷ
ಹದಿನಾರಾಯ್ತು… ಭೀಮಗೆ ವರುಷ ಹದಿನೈದು…ಅರ್ಜುನಗೆ ಹದಿನಾಲ್ಕು…
ಕಿರಿಯರಿಬ್ಬರಿಗೆ ಹದಿಮೂರು… ಅನಿಬರು ಆ ಮುನಿವರರಿನ್ ಅಧ್ಯಯನಾದಿ
ವಿದ್ಯಾನಿರತರಾದರು…
ಒಂದು ವಸಂತಮಯ ಸಮಯ ಬಂದುದು… ಅಗ್ಗದ ತಂಪು ತೆಗೆದುದು… ನದಿ
ಸರಸಿಗಳ ತಡಿಯಲಿ ಹೆಜ್ಜೆಯಾದುದು… ಹಾವಸೆ ಹರಿದುದು… ಹಗಲು
ಹಿಮಜಲವ ಓಕರಿಸಿದುದು… ದೂರಕೆ ನೆಳಲುಗಳು ಸೊಗಸಿದವು… ಸೆಗಳಿಕೆಗಳು
ಏರಿದವು… ಜನ ನಿಕರ ತಂಗಾಳಿಗೆ ವಿಹಾರಿಸಿ ಕೂಡೆ ಮೈಯ ತೆತ್ತುದು…
ಕುಸುಮಮಯ ಸಮಯ… ಯೋಗಿಗೆ ಎತ್ತಿದ ಖಡುಗ ಧಾರೆ… ವಿಯೋಗಿಗೆ ಎತ್ತಿದ
ಸಬಳ…ಅಖಿಳ ರಾಗಿಗಳ ಹೆಡತಲೆಯ ದಡಿ… ನೈಷ್ಠಿಕರಿಗೆ ಅಲಗಣಸು… ಆಗಮಿಕರ
ಎದೆ ಶೂಲ… ಗರ್ವಿತ ರಾಗಿಗಳ ಗಳಗಾಳ… ಭೋಗಿಗಳ ಕುಲದೈವವು ವೆಗ್ಗಳ ಎಸೆದುದು.
ಮೊರೆವ ತುಂಬಿಯ ಗಾಯಕರ…ನಯಸರದ ಕೋಕಿಲ ಪಾಠಕರ…
ಬಂಧುರದ ಗಿಳಿಗಳ ಪಂಡಿತರ…ಮಾಮರದ ಕರಿಘಟೆಯ…ಅರಳಿದ ಅಂಬುಜ
ಸತ್ತಿಗೆಯ… ಮಂಜರಿಯ ಕುಸುಮದ ಚಾಮರದ ಚಾತುರ ವಸಂತನೃಪಾಲ
ಪಾಂಡುವಿನ ಮೇಲೆ ನಡೆದನು…
ಫಲಿತ ಚೂತದ ಬಿಣ್ಪುಗಳ…ನೆರೆ ತಳಿತ ಅಶೋಕೆಯ ಕೆಂಪುಗಳ…ಪರಿ ದಲಿತ
ಕಮಲದ ಕಂಪುಗಳ.. .ಬನಬನದ ಗುಂಪುಗಳ…ಎಳಲತೆಯ ನುಣ್ಪುಗಳ…ನವ
ಪರಿಮಳದ ಪವನನ ಸೊಂಪುಗಳ ವೆಗ್ಗಳಿಕೆ ಝಳಪಿಸಿ ಹೊಯ್ದು… ಜನದ ಕಣ್ಮನವ
ಸೆಳೆದುದು… ಮಧುಮಾಸ ಪಸರಿಸಿತು…
ಕೂಡೆ ತುಂಬಿಗಳು ಕುಸುಮ ರಸದ ಉಬ್ಬರದ ತೊರೆಯನು ತಾವರೆ ಎಸಳ
ದೋಣಿಯ ಮೇಲೆ ಹಾಯ್ದವು…ಕೊಂಚೆಗಳು ಹಗಲೆಸೆವ ದಂಪತಿವಕ್ಕಿ
ಸಾರಸ… ರಾಜಹಂಸಗಳು ಒಸರ್ವ ಮಕರಂದದ ತುಷಾರದ ಕೆಸರೊಳದ್ದವು…
ಬಹಳ ಪರಿಮಳದ ಒಗುಮಿಗೆಯ ತಂಗಾಳಿ ಜಗವ ಹೊರೆದುದು… ವಿರಹಿಗಳು
ವನ ವೀಧಿಗಳ ವಳಯವ ಹೊಕ್ಕು ಮರಳಿದುದಿಲ್ಲ… ವಿಗಡ ಮುನಿ ಜನವು
ಹೊಗುವ ಕಾಮನ ದಳದ ಚೂಣಿಯ ಸೊಗಸು ಹೊಯ್ದರೆ ಕೈದುವಿಕ್ಕಿತು… ಏನನು
ಎಂಬೆನು ನೃಪತಿ ಕೇಳೆಂದ.
ಆ ವಸಂತದೊಳು ಒಮ್ಮೆ ಮಾದ್ರೀದೇವಿ… ವನದೊಳಗೆ ಹೂವಿನಲಿ ಸರ್ವಾಂಗ
ಶೃಂಗಾರದ ವಿಲಾಸದಲಿ ಆಡುತಿರ್ದಳು… ಅಲ್ಲಿಯೇ ತಿರುಗಾಡುತ್ತಿದ್ದ
ಪಾಂಡುರಾಜನು ಮಾದ್ರಿಯನ್ನು ನೋಡಿ..)
ಪಾಂಡುರಾಜ: ಅವಳ್ ಇವಳ್… ಊರ್ವಶಿಯೊ… ರಂಭೆಯೊ…ದೇವವಧುಗಳ ಸುಳಿವೊ ತಾನ್ ಎನಲು…ಆವ ಚೆಲುವಿಕೆ ಶಿವಶಿವಾ…
( ಎಂದು ಅರಸ ಬೆರಗಾದ… ಕಾಮನ ಶರ ನಿಕರ ಲಾಗು ವೇಗವದು ಎಂತುಟೋ…
ತೆಗೆ… ಹೂಗಣೆಗಳು ಐದಲ್ಲ… ರೋಮಗಳು ಎಂಟು ಕೋಟಿಯಲಿ ಕಣೆಗಳು
ತಾಗಿದವು… ತೂಗಿ ನೆಟ್ಟವು. ಪ್ರಜ್ಞಾಸಾಗರಂಗಳು ಮಧ್ಯಕಟಿ ಜಾನ್ವಂಘ್ರಿ ಮಿತವಾಯ್ತು
ಎಂಬವೊಲು… ಆ ಗರುವನು ಅಳುಕಿದನು… ಹಿಂದೆಲ್ಲವನು ಮರೆದು… ಕುಂತಿಯನು
ಅರಿಯಲೀಯದೆ… ಮೆಲ್ಲಮೆಲ್ಲನೆ… ಎಳಲತೆ ತುರುಗಿದ ವನದೊಳು ಆಡುವ ವಧುವ
ಸಾರಿದನು… ಸೆರಗ ಹಿಡಿದರೆ…)
ಮಾದ್ರಿ: ಬೇಡ…ಬೇಡ…
( ಎಂದು ಚರಣದಲಿ ಎರಗಿದಳು… ತರುಣಿಯ ತುರುಬ ಹಿಡಿದೆತ್ತಿದನು… ಹೆಣಗಿದರು… ಒಡನೆ ಝೋಂಪಿಸಿದ.)
ಮಾದ್ರಿ: ಕೊಂದೆಲಾ ಕಡುಪಾಪಿ… ಹಿಂದೆ ಮಾಡಿದ ಕೃತ್ಯವನು ಮರೆದಾ… ಮುನಿಯೆಂದ ನುಡಿ ಹೊಳ್ಳಹುದೆ… ಸುಡು… ದುರ್ವಿಷಯಕೆ ಎಳಸಿದಲಾ… ನಿನ್ನ ಅರಿವು ಬೆಂದುದೇ… ಇಂದು ಧೈರ್ಯವನು ನೀಗಿದೆ… ಅಕಟ… ನಿನ್ನಯ ನಂದನರಿಗೆ ಆರುಂಟು…
( ಎನುತ ಲತಾಂಗಿ ಹೆಣಗಿದಳು… ಶಂಬರಾರಿಯ ಸಬಳವಲ್ಲಾ… ಬಯಲ ಅರಿತಗಿರಿತದ
ಡೊಂಬಿನ ಆಗಮ ನೀತಿಗೀತಿಯ ಕೊಂಬುದೆ… ಬೇಗೆ ಮೂಡಿದುದು… ಬೆಂಬಿಡದೆ
ಮರಳಿದೊಡೆ ಮರುಮೊನೆ ಕೊಂಬುದು ಎಂಬವೊಲು…ಅವನಿಪತಿಯು ಅಬಲೆಯನು
ಒತ್ತಂಬರದಿ ಹಿಡಿದು ಕಳವಳಿಸಿ ಕೂಡಿದನು… ಆ ಸುಖದ ಝೋಂಪಿನಲಿ ಮೈಮರೆದು
ವದನ ಓಸರಿಸಿದುದು… ಕಂಗಳು ಪೈಸರಿಸಿದವು… ತೆಕ್ಕೆ ಸಡಲಿತು… ದೇಹ ಬಾರಿಸಿತು…
ನಿಟ್ಟುಸುರು ಸೂಸಿದುದು… ರಾಣೀವಾಸದ ಉರದಲಿ ಕದಪನಿಟ್ಟು ಮಹೀಶನು ಒರಗಿದ
ಹದನ ಕಾಂತೆ ಭೀತಿಯಲಿ ಕಂಡಳು )
ಮಾದ್ರಿ: ಅಕಟ…ಪಾಂಡು ಮಹೀಶ, ವಿಷಕನ್ಯೆಯನು ಎನ್ನನು ಮುಟ್ಟಿದೈ… ಬೇಡ… ಕೆಡಿಸದಿರು ಎನ್ನೆನ್ನೇ… ಹದನ ತಾನರಿಯೆನೇ… ಪ್ರಕಟ ಕುರುಕುಲ ತಿಲಕರು ಈ ಬಾಲಕರನು ಆರಿಗೆ ಕೊಟ್ಟೆ… ಅಕಟ… ತನ್ನೊಡನೆ ಮುನಿದೈ ಮಾತಾನಾಡು.
( ಎಂದು ಒರಲಿದಳು ಮಾದ್ರಿ… ಸ್ವಲ್ಪ ದೂರದಲ್ಲಿದ್ದ ಕುಂತಿಯು ಈ ಆಕ್ರಂದನ ದನಿಯನ್ನು ಕೇಳಿ… )
ಕುಂತಿ: ಏನಿದು… ಎತ್ತಣ ರಭಸ… ಮಾದ್ರೀ ಮಾನಿನಿಯೊ… ಹಾ ರಾಯನು ಆವ ಎಡೆ… ಅಂಗಸ್ಫುರಿತ ಶಕುನದಲಿ ಅರಿವೆನು… ಹಾನಿ ಹಿರಿದುಂಟು…ಏನು ಮಾರಿಯೊ… ಶಿವಶಿವಾ.
( ಎನುತ ಆ ನಿತಂಬಿನಿ ಕಾನನದೊಳು ಅಕ್ಕೆಯ ಸರದ ಬಳಿವಿಡಿದು…ಗಾಢ ಗತಿಯಲಿ ಐತಂದಳು… ಅವರಿಬ್ಬರನು ಕಂಡಳು… ಮೂರ್ಛೆಯಲಿ ಧೊಪ್ಪನೆ ದಿಂಡುಗೆಡೆದಳು… ಎಚ್ಚರು ಮರೆಗೊಂಡುದು… ಮಾದ್ರಿ ಮಿಗೆ ಹಲುಬಿದಳು…ಐವರು ಪಾಂಡುನಂದನರು ಗೋಳಿಡುತ ಚಂಡಿಕೆಗಳು ಅಲ್ಲಾಡೆ ಹರಿದರು…ಈತನ ಕಂಡು… )
ಪಾಂಡು ನಂದನರು: ಹಾ…
( ಎಂದು ಒರಲಿ… ಅವನಿಪನ ಮೇಲೆ ಹೊರಳಿದರು.)
ಬೊಪ್ಪ… ದೇಶಿಗರಾದೆವೈ…ನಮ್ಮ ಭಾಗ್ಯವನು ವಿಧಿ ತಪ್ಪಿಸಿತಲಾ…
ಪೂರ್ವಕಾಲದಲಿ ಎಮ್ಮನು ನೀನಾರಿಗೆ ಒಪ್ಪಿಸಿದೆ… ನಿನಗೆ ಮುಪ್ಪಿನಲಿ ಈ
ಅವಸ್ಥೆಯಿದು ಒಪ್ಪುದೇ…ಹೇರಡವಿಯಲಿ ಮಲಗಿಪ್ಪುದು ಏಕೆ…
( ಎಂದು ಒರಲಿ… ಆ ಕುಮಾರಕರು ಮರುಗಿದರು…ಕೇಳಿ, ಮುನಿವ್ರಜ
ಹರಿತಂದುದು…ಕುಮಾರಕರ ಸಂತೈಸಿಯೆ ಏಳಿಗೆಯ ಕಡು ಶೋಕರಸದ
ಛಡಾಳವನು ನಿಲಿಸಿದರು…ಆ ಕುಂತಿ ಮೂರ್ಛಾ ವ್ಯಾಳವಿಷ ಪರಿಹರಿಸಿ ಆಲಿಸಿದಳು.)
ಕುಂತಿ: ಇಂದು ತನ್ನನು ಬಿಸುಟೈ…
( ಎನುತ ಧರಣೀಪಾಲಕನ ನೋಡಿದಳು.)
ಕುಂತಿ: ಅರಸ, ತನಗೆ ಅರುಹದೆ ಸುರಸ್ತ್ರೀಯರಿಗೆ ಹರಿದೈ… ನಿನ್ನ ವಧುಗಳ ತುರುಬ
ಕೊಯ್ಸುವೆನು… ತನಗೆ ಅವರ ತೊತ್ತಿರ ಮಾಡುವೆನು.
( ಎಂದು ಗೋಳಾಡುತ್ತಿರುವ ಕುಂತಿಯು ಈಗ ಮಾದ್ರಿಯನ್ನು ಕುರಿತು…)
ಕುಂತಿ: ಅರಸಿ, ನೀನು ಈ ಮಕ್ಕಳನು ಸಂವರಿಸಿಕೊಂಡು ಇಹುದು.
( ಎಂದು ಮಾದ್ರಿಯ ಕರವ ಹಿಡಿದರೆ…ಕಾಂತೆ ಕುಂತಿಗೆ ವಿನಯದಲಿ ಎಂದಳು. )
ಮಾದ್ರಿ: ಅಕ್ಕ, ಮರುಳೆಲೌ ನೀವು… ನಿಮ್ಮೈವರು ಕುಮಾರರು ನಿಮ್ಮ ಕೈಯೆಡೆ…ನನ್ನ ತೋಳಿನಲಿ
ಧರಣಿಪತಿ ನಿಡು ನಿದ್ರೆಗೈದನು… ಸುರವಧುಗಳೊಡನೆ ಇರಲಿ… ನಿನ್ನಯ ಹರಿಬವು
ಎನ್ನದು… ನೋಡು, ತನ್ನಯ ಪರಿಯನು… ಈತನ ನಿನಗೆ ಕೊಡೆನು.
( ಎಂದು ಅಂಘ್ರಿಗೆ ಎರಗಿದಳು… ಮುನಿಗಳು ಈಕೆಯ ತಿಳುಹಿ… ಮಾದ್ರಿಗೆ ಜನಪತಿಯ
ಸಹಗಮನದಲಿ ಮತವೆನಿಸಿ… ಮುನಿಗಳೇ ಶವಸಂಸ್ಕಾರವನು ವೈದಿಕ ವಿಧಾನದಲಿ
ಮಾಡಿದರು… ಮಾದ್ರೀ ವನಿತೆ ಧರ್ಮಜನ ಕರೆದು… ತನ್ನ ಕುಮಾರರಿಬ್ಬರನ್ನು… )
ಮಾದ್ರಿ: ತನುಜ ನೀ ಸಲಹು.
( ಎಂದು ಕೊಟ್ಟಳು…ಪತಿಯ ಸಹಗಮನದಲಿ ಮಾದ್ರೀ ಸತಿ ಶರೀರವ ಬಿಟ್ಟಳು…ಈ ಕುಂತಿ
ಐವರು ಸುತರು ಸಹಿತ ಮಿಂದು… ಅಖಿಳ ಮುನಿ ಸಂತತಿಗಳನು ಮುಂದಿಟ್ಟು
ಪರೇತಕೃತ್ಯವನು ಶ್ರುತಿ ವಿಧಾನದೊಳು ಮಾಡಿಸಿ… ಆ ಶತಶೃಂಗ ಶೈಲದಲಿ ಸುತರ
ಪಾಲಿಸುತಿರ್ದಳು.)
ಪದ ವಿಂಗಡಣೆ ಮತ್ತು ತಿರುಳು:
ಕೇಳು ಜನಮೇಜಯ ಧರಿತೀಪಾಲ= ಕೇಳು ಜನಮೇಜಯ ರಾಜ. ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ವ್ಯಾಸರು ಬರೆದ ಮಹಾಬಾರತದ ಕತೆಯನ್ನು ಮತ್ತೊಮ್ಮೆ ಹೇಳುತ್ತಿದ್ದಾನೆ; ಶತ+ಶೃಂಗ+ಅದ್ರಿಯಲಿ; ಶತಶೃಂಗ= ನೂರಾರು ಬೆಟ್ಟಗುಡ್ಡಗಳಿಂದ ಕೂಡಿದ ಅರಣ್ಯಪ್ರಾಂತ್ಯದ ಹೆಸರು ; ಅದ್ರಿ= ಪರ‍್ವತ ; ವ್ಯಾಳ= ಹಾವು ; ವೃಕ= ತೋಳ ; ಶಾರ್ದೂಲ= ಹುಲಿ; ಮುನಿಪ+ಆಳಿಗೆ; ಆಳಿ/ಆಲಿ= ಸಮೂಹ/ಗುಂಪು ; ಆಲೋಕ= ನೋಡುವುದು ;
ಸಮಂಜಸ= ಅನುರೂಪ; ಉಪಾಸನೆ= ಪೂಜೆ/ಉಪಚಾರ; ವಿಭವ= ಸಿರಿ/ಸಂಪತ್ತು/ಹಿರಿಮೆ/ಸೊಗಸು ; ಇಭ= ಆನೆ; ಇಭಪುರಿ= ಹಸ್ತಿನಾವತಿ; ವಿಪಿನ= ಕಾಡು/ಅರಣ್ಯ ; ತೊತ್ತು= ದಾಸ/ದಾಸಿ; ಪದ+ಅಂಬುಜ; ಪದ= ಪಾದ ; ಅಂಬುಜ= ತಾವರೆ ; ವಸಂತ ಸಮಯ= ನಿಸರ‍್ಗದಲ್ಲಿ ವರುಶವೊಂದರಲ್ಲಿ ಎರಡು ತಿಂಗಳಿಗೊಮ್ಮೆ ಕಂಡುಬರುವ ಆರು “ ವಸಂತ—ಗ್ರೀಶ್ಮ—ವರ‍್ಶ—ಶರತ್—ಹೇಮಂತ—ಶಿಶಿರ “ ಎಂಬ ಆರು ಬಗೆಯ ರುತುಗಳಲ್ಲಿ ಒಂದು; ಮಾರ್ಚಿ ತಿಂಗಳಿನ ಮೂರನೆಯ ವಾರದಿಂದ ಮೇ ತಿಂಗಳಿನ ಮೂರನೆಯ ವಾರದವರೆಗಿನ ಸಮಯ; ಅಗ್ಗದ ತಂಪು
ತೆಗೆದುದು= ಅಲ್ಪಸ್ವಲ್ಪ ಪ್ರಮಾಣದಲ್ಲಿದ್ದ ಚಳಿಯು ಅಡಗಿತು; ಸರಸಿ= ಕೊಳ/ಸರೋವರ; ತಡಿ= ದಂಡೆ/ತೀರ; ಹಾವಸೆ= ಪಾಚಿ; ಹಿಮ= ಮಂಜು; ಹಿಮಜಲ= ಮಂಜುಗೆಡ್ಡೆ; ಓಕರಿಸು= ಹೊರಸೂಸು/ಹೊರಚೆಲ್ಲು; ಸೆಗಳಿಕೆ= ಕಾವು/ತಾಪ; ನಿಕರ= ಸಮೂಹ/ಗುಂಪು; ವಿಹಾರಿಸು= ಸುತ್ತಾಡುವುದು/ತಿರುಗಾಡುವುದು; ಯೋಗಿ= ಮನೋಸಂಯಮಿ; ಕುಸುಮಮಯ ಸಮಯ= ವಸಂತಕಾಲದಲ್ಲಿ ನಿಸರ‍್ಗದಲ್ಲಿ ಉಂಟಾದ ಚೆಲುವಿನಿಂದ ವ್ಯಕ್ತಿಗಳ ಮೇಲೆ ಉಂಟಾದ ಪರಿಣಾಮಗಳನ್ನು ಇನ್ನು ಮುಂದಿನ ನುಡಿಗಟ್ಟುಗಳು ಬಣ್ಣಿಸುತ್ತಿವೆ;
ಖಡುಗ ಧಾರೆ= ಕತ್ತಿಯ ಹರಿತವಾದ ಬಾಯಿ/ಅಲಗು; ವಿಯೋಗಿ= ಪ್ರೀತಿಪಾತ್ರರಿಂದ ದೂರವಿರುವ ವ್ಯಕ್ತಿ; ಸಬಳ= ಈಟಿ; ರಾಗಿ= ಪ್ರೇಮಿ; ಹೆಡತಲೆ= ಹಿಂದಲೆ; ದಡಿ= ಉದ್ದನೆಯ ದಪ್ಪನಾದ ಕೋಲು; ನೈಷ್ಠಿಕರು= ಬ್ರಹ್ಮಚರ‍್ಯ ವ್ರತವನ್ನು ಪಾಲಿಸುತ್ತಿರುವವರು; ಅಲಗಣಸು= ಕತ್ತಿಯ ಹೊಡೆತ; ಆಗಮಿಕರು= ದರ‍್ಮಶಾಸ್ತ್ರವನ್ನು ಓದಿಕೊಂಡಿರುವವರು; ಶೂಲ= ಚೂಪಾದ ಮೊನೆಯುಳ್ಳ ಹತಾರ/ಈಟಿ; ಗಳ= ಕೊರಳು/ಕುತ್ತಿಗೆ; ಗಾಳ= ಮೀನು ಹಿಡಿಯಲು ಬಳಸುವ ಕೊಕ್ಕೆ;
ವೆಗ್ಗಳ= ಹೇರಳ/ಹೆಚ್ಚಿನ/ಅತಿಯಾಗಿ; ಭೋಗಿ= ಒಲವು ನಲಿವು ನೆಮ್ಮದಿಯನ್ನು ಹೊಂದಿರುವ ವ್ಯಕ್ತಿ; ಎಸೆದುದು= ಕಂಗೊಳಿಸಿತು;
ಸರ=ದನಿ; ನಯಸರ= ಇಂಪಾದ ದನಿ; ಕೋಕಿಲ= ಕೋಗಿಲೆ; ಪಾಠಕರು= ಓದುವವರು/ವಾಚಕರು; ಬಂಧುರ= ಸುಂದರವಾದುದು/ ಚೆಲುವಾದುದು; ಕರಿಘಟೆ= ಆನೆಗಳ ಗುಂಪು; ಅಂಬುಜ=ತಾವರೆ; ಸತ್ತಿಗೆ= ಕೊಡೆ; ಮಂಜರಿ= ಗೊಂಚಲು; ಚಾಮರ= ಚಮರೀ ಪ್ರಾಣಿಯ ಕೂದಲಿನಿಂದ ಮಾಡಿದ ದೊಡ್ಡ ಆಕಾರದ ಬೀಸಣಿಗೆ; ಚಾತುರ= ಚತುರನಾದ/ಜಾಣ್ಮೆಯ; ವಸಂತನೃಪಾಲ= ವಸಂತರಾಜ;
ಫಲಿತ=ಹಣ್ಣುಗಳುಳ್ಳ; ಚೂತ= ಮಾವಿನ ಮರ; ಬಿಣ್ಪು= ತೂಕ/ಹೆಚ್ಚಳ; ನೆರೆ= ಸಂಪೂರ್ಣವಾಗಿ; ತಳಿತ= ಹರಡು/ಕೆದರು; ಪರಿದಲಿತ= ಅರಳಿದ; ಪವನ=ಗಾಳಿ; ಸೊಂಪು= ಚೆಲುವು/ಸೊಗಸು; ; ವೆಗ್ಗಳಿಕೆ= ಹೆಚ್ಚಳ; ಝಳಪಿಸು= ಬೀಸು; ಮಧುಮಾಸ= ವಸಂತಕಾಲ; ಪಸರಿಸಿತು= ಹಬ್ಬಿತು; ಉಬ್ಬರ= ಉಕ್ಕಿ ಹರಿಯುವಿಕೆ; ಕೊಂಚೆ= ಒಂದು ಬಗೆಯ ಹಕ್ಕಿ; ಎಸೆ= ಕಂಗೊಳಿಸು; ದಂಪತಿ+ಪಕ್ಕಿ; ದಂಪತಿವಕ್ಕಿ= ಚಕ್ರವಾಕ ಎಂಬ ಹೆಸರಿನ ಜೋಡಿ ಹಕ್ಕಿ. ಹಗಲಿನಲ್ಲಿ ಜತೆಯಾಗಿದ್ದು, ಇರುಳು ಕವಿಯುತ್ತಿದ್ದಂತೆಯೇ ಬೇರೆ ಬೇರೆಯಾಗುತ್ತವೆ ಎಂಬ ದಂತಕತೆ ಈ ಜೋಡಿಹಕ್ಕಿಗಳ ಬಗ್ಗೆ ಇದೆ; ಸಾರಸ= ನೀರಹಕ್ಕಿ/ಕೊಕ್ಕರೆ;
ಒಸರ್= ಜಿನುಗು/ಸೋರು; ತುಷಾರ= ಹಿಮ/ತುಂತುರು ಹನಿ; ಒಗುಮಿಗೆ= ಹೆಚ್ಚಳ/ಹೆಚ್ಚಾಗಿ ; ಹೊರೆ= ಕೂಡು/ಸೇರು; ವಿರಹಿ= ಪ್ರಿಯೆ ಇಲ್ಲವೇ ಪ್ರಿಯನನ್ನು ಅಗಲಿರುವ ವ್ಯಕ್ತಿ; ವೀಧಿ= ದಾರಿ/ಮಾರ‍್ಗ; ವಿಗಡ= ವ್ಯಾಕುಲಗೊಳ್ಳುವುದು; ಹೊಗು= ಒಳನುಗ್ಗು; ಚೂಣಿ= ಮುಂದಿನ ಸಾಲು; ಹೊಯ್ದರೆ= ; ಕೈದು+ಇಕ್ಕಿತು; ಕೈದು= ಆಯುದ/ಹತಾರ; ವಿಲಾಸ= ಒಯ್ಯಾರ/ಉಲ್ಲಾಸ; ದೇವವಧು= ದೇವಲೋಕದ ಹೆಣ್ಣು; ಶರ=ಬಾಣ; ನಿಕರ= ಸಮೂಹ/ಗುಂಪು; ಕಾಮನ ಶರನಿಕರ= ಮದನನ ಹೂಬಾಣಗಳ ಸಮೂಹ; ಲಾಗು= ತೀವ್ರತೆ/ಗುರಿ; ಪ್ರಜ್ಞಾ=ತಿಳುವಳಿಕೆ/ಅರಿವು; ಪ್ರಜ್ಞಾಸಾಗರ= ಅರಿವಿನ ನೆಲೆ;
ಕಟಿ= ಸೊಂಟ/ನಿತಂಬ; ಜಾನು+ಅಂಘ್ರಿ; ಜಾನು= ಮಂಡಿ/ಮೊಳಕಾಲು; ಅಂಘ್ರಿ= ಪಾದ; ಮಿತ= ನಿಯಂತ್ರಣಕ್ಕೆ ಒಳಗಾಗುವುದು/ಸೀಮಿತಗೊಳ್ಳುವುದು; ಎಂಬವೊಲು= ಎನ್ನುವಂತೆ; ಅಳುಕು= ಹೆದರು/ಹಿಂಜರಿ; ಅರಿಯಲ್+ಈಯದೆ; ಅರಿಯಲ್= ತಿಳಿಯಲು; ಈಯದೆ= ಅವಕಾಶ ಕೊಡದೆ; ತುರುಗು= ಒತ್ತೊತ್ತಾಗಿ ಹಬ್ಬಿರುವ; ಸಾರು= ಬಳಿಗೆ ಬರುವುದು/ಹತ್ತಿರಕ್ಕೆ ಬರುವುದು; ಚರಣ= ಪಾದ; ಎರಗು= ಮೇಲೆ ಬೀಳು/ನಮಸ್ಕರಿಸು; ತುರುಬು= ತಲೆಯ ಕೂದಲಿನ ಗಂಟು/ಮುಡಿ; ಹೆಣಗು= ಹೋರಾಡು/ಸೆಣಸು; ಝೋಂಪಿಸು= ಜೋಲು/ನಡುಗು/ಎಚ್ಚರ ತಪ್ಪು;
ಹೊಳ್ಳು+ಅಹುದೆ; ಹೊಳ್ಳು= ಸುಳ್ಳು/ಹುಸಿ; ದುರ್ವಿಷಯ= ಕೆಟ್ಟ ಸಂಗತಿ; ಎಳಸು= ಬಯಸು; ಶಂಬರಾರಿ= ಶಂಬರನೆಂಬ ರಕ್ಕಸನನ್ನು ಕೊಂದ ಮದನ/ಕಾಮದೇವ; ಸಬಳ= ಈಟಿ; ಡೊಂಬು= ಮಹಿಮೆ; ಆಗಮ= ದೇವಪೂಜೆಯ ಆಚರಣೆಯನ್ನು ತಿಳಿಸುವ ಶಾಸ್ತ್ರ/ಅರಿವು; ಕೊಂಬುದೇ= ಸ್ವೀಕರಿಸುವುದೇ; ಬೇಗೆ= ಕಿಚ್ಚು/ಬೆಂಕಿ; ಮರುಮೊನೆ ಕೊಂಬುದು= ಮತ್ತಶ್ಟು ಚುರುಕಾಗುವುದು/ಹೆಚ್ಚಾಗುವುದು;
ಒತ್ತಂಬರ= ಆತುರ/ರಬಸ; ವದನ= ಮೊಗ; ಓಸರಿಸು= ಓರೆಯಾಗು/ಪಕ್ಕಕ್ಕೆ ವಾಲುವುದು; ಪೈಸರಿಸು= ಕುಗ್ಗು/ಕೆಳಕ್ಕೆ ಸರಿ; ತೆಕ್ಕೆ= ಆಲಿಂಗನ/ಅಪ್ಪುಗೆ; ದೇಹ ಬಾರಿಸಿತು= ದೇಹ ಕುಸಿಯಿತ; ಸೂಸು= ಹೊರಹೊಮ್ಮು; ಉರ= ಎದೆ; ಕದಪನ್+ಇಟ್ಟು; ಕದಪು= ಗಲ್ಲ; ಹದನ= ರೀತಿ/ಸ್ತಿತಿ/ಅವಸ್ತೆ; ವಿಷಕನ್ನಿಕೆ= ತನ್ನೊಡನೆ ಕಾಮದ ನಂಟನ್ನು ಪಡೆದವರನ್ನು ಸಾವಿಗೆ ಗುರಿಮಾಡುವ ಹೆಣ್ಣು. ಚಿಕ್ಕಂದಿನಿಂದಲೂ ಸ್ವಲ್ಪ ಸ್ವಲ್ಪ ವಿಶವನ್ನೂಡಿ ಹೆಣ್ಣನ್ನು ಬೆಳೆಸಿ, ಹಗೆಯನ್ನು ಕೊಲ್ಲಲು ಅವಳನ್ನು ಹಗೆಯ ಬಳಿಗೆ ಕಳುಹಿಸುತ್ತಿದ್ದರು ಎಂಬ ದಂತಕತೆಯಿದೆ ;
ಎನ್ನೆನೇ= ಹೇಳಲಿಲ್ಲವೇ; ತಾನ್+ಅರಿಯೆನೇ; ತಾನರಿಯೆನೇ= ತನಗೆ ಗೊತ್ತಿಲ್ಲವೇ; ಪ್ರಕಟ= ಕೀರ‍್ತಿಶಾಲಿ; ತಿಲಕರು= ಉತ್ತಮರಾದವರು; ಒರಲು= ಸಂಕಟಪಡು/ರೋದಿಸು; ಅಂಗಸ್ಫುರಿತ ಶಕುನ= ದೇಹದಲ್ಲಿ ಕೆಲವೊಮ್ಮೆ ಉಂಟಾಗುವ ಕಣ್ಣಿನ ರೆಪ್ಪೆಗಳ ಅದುರುವಿಕೆ, ಕಯ್ ಕಾಲಗಳ ಎಡಗುವಿಕೆ ಮತ್ತಿತರ ಆಗುವಿಕೆಗಳು ವ್ಯಕ್ತಿಯ ಜೀವನದಲ್ಲಿ ಉಂಟಾಗುವ ಒಳಿತು ಕೆಡುಕಿನ ಮುನ್ಸೂಚನೆಗಳೆಂಬ ನಂಬಿಕೆಯು ಜನಮನದಲ್ಲಿದೆ; ನಿತಂಬಿನಿ= ಹೆಂಗಸು; ಅಕ್ಕೆ= ಅಳುವಿಕೆ; ಸರ= ದನಿ ; ಬಳಿವಿಡಿದು= ಅನುಸರಿಸಿ/ಹಿಂಬಾಲಿಸು ;
ಗಾಢ= ವೇಗವಾದ ನಡಗೆ; ದಿಂಡುಗೆಡೆ= ಕುಸಿದುಬೀಳು/ಉರುಳಿಬೀಳು ; ಚಂಡಿಕೆ= ಜುಟ್ಟು; ಬೊಪ್ಪ= ತಂದೆ/ಅಪ್ಪ ; ದೇಶಿಗರ್+ಆದೆವೈ; ದೇಶಿಗ= ತಬ್ಬಲಿ/ಗತಿಯಿಲ್ಲದವನು; ಹೇರಡವಿ= ದೊಡ್ಡ ಕಾಡು; ವ್ರಜ= ಸಮೂಹ/ಗುಂಪು; ಛಡಾಳ= ಹೆಚ್ಚಳ; ವ್ಯಾಳ= ಹಾವು; ತುರುಬು= ತಲೆಗೂದಲಿನ ಮುಡಿ; ತೊತ್ತು= ದಾಸಿ; ಸಂವರಿಸು= ಕಾಪಾಡು/ಸಲಹು ; ಮರುಳು= ಹುಚ್ಚು/ತಿಳಿಗೇಡಿತನ ; ಕೈಯೆಡೆ= ಒಂದು ವಸ್ತು/ಆಸ್ತಿ/ವ್ಯಕ್ತಿಯನ್ನು ನಾವು ನಂಬಿರುವ ವ್ಯಕ್ತಿಯ ಪಾಲಿಗೆ ಒಪ್ಪಿಸಿ, ಅದನ್ನು/ಅವರನ್ನು ಕಾಪಾಡುವ ಜವಾಬ್ದಾರಿಯನ್ನು ಅವರ ಪಾಲಿಗೆ ವಹಿಸುವುದು; ನಿಡು= ಉದ್ದವಾದುದು ; ಸುರವಧುಗಳ್+ಒಡನೆ; ಸುರವಧು= ದೇವಲೋಕದ ಹೆಣ್ಣು; ಹರಿಬ= ಕೆಲಸ/ಹೊಣೆಗಾರಿಕೆ; ಪರಿ= ರೀತಿ; ಮತ+ಎನಿಸಿ; ಮತ= ಆಶಯ/ಆಲೋಚನೆ/ವಿಚಾರ; ತನುಜ= ಮಗ; ಸಹಗಮನ= ಸತ್ತ ಗಂಡನ ಚಿತೆಯನ್ನೇರಿ ಹೆಂಡತಿಯು ಪ್ರಾಣವನ್ನು ಬಿಡುವುದು; ಪರೇತ=ಹೆಣ; ಪರೇತಕೃತ್ಯ= ವ್ಯಕ್ತಿಯು ಸತ್ತ ನಂತರ ಅವನ/ಅವಳ ದೇಹವನ್ನು ಸಂಪ್ರದಾಯಕ್ಕೆ ಅನುಗುಣವಾಗಿ ಆಚರಣೆಗಳನ್ನು ಮಾಡಿ ಹೂಳುವುದು ಇಲ್ಲವೇ ಸುಡುವುದು. ಅನಂತರ ಮೂರು/ಏಳು/ಹನ್ನೊಂದು ದಿನಗಳಲ್ಲಿ ಪೂಜೆಯನ್ನು ಮಾಡುವುದು; ಶ್ರುತಿ ವಿಧಾನ= ವೇದಗಳ ಮೂಲದ ಶ್ರುತಿ ಎಂಬ ಹೊತ್ತಗೆಯಲ್ಲಿ ಹೇಳಿರುವ ರೀತಿಯಲ್ಲಿ “ಸತ್ತ ವ್ಯಕ್ತಿಗೆ ಮಾಡಬೇಕಾದ ಅಂತಿಮ ಆಚರಣೆಗಳು ”
ಹೊಸಗನ್ನಡ ಗದ್ಯರೂಪ
ಕೇಳು ಜನಮೇಜಯ ರಾಜನೇ, ಶತಶ್ರುಂಗ ಪರ‍್ವತದಲ್ಲಿ ತನ್ನ ಅಯ್ದು ಮಂದಿ ವೀರ ಪುತ್ರರ ಜೊತೆಯಲ್ಲಿ ಪಾಂಡುರಾಜನಿದ್ದನು. ಅಲ್ಲಿದ್ದ ಮುನಿಗಳಿಗೆ ಹಾವು, ಕಾಡಾನೆ, ಸಿಂಹ, ತೋಳ, ಹುಲಿಗಳಿಂದ ಉಂಟಾಗುವ ಹೆದರಿಕೆಯನ್ನು ಪರಿಹರಿಸಿ, ಪಾವನ ತಪೋವನಕ್ಕೆ ಆಶ್ರಯದಾತ ಎನಿಸಿದ್ದನು.
ಆಶ್ರಮದ ಮುನಿಗಳೆಲ್ಲರೊಡನೆ ವೇದಗಳ ನಿತ್ಯ ಪಾರಾಯಣ ಆ ದಿವ್ಯಾಶ್ರಮದ ಸಹವಾಸ… ಜಪತಪ… ಆ ಕುಮಾರರ ಪರಾಕ್ರಮದ ನೋಟ, ಆ ಅನುರೂಪ ಸತಿಯರಾದ ಕುಂತಿ ಮಾದ್ರಿಯರ ಪೂಜೆಯ ಆಚರಣೆ- ಆ ಬಗೆಯ ಒಲವು ನಲಿವು ನೆಮ್ಮದಿಯಿಂದ ಕೂಡಿರುವ ಆಶ್ರಮ ಜೀವನಕ್ಕೆ ಹೋಲಿಸಿದರೆ, ಹಸ್ತಿನಾವತಿಯ ಆ ಸಮಸ್ತ ಸಿರಿಸಂಪತ್ತು ಪಾಂಡುವಿನ ಪಾಲಿಗೆ ಹುಲ್ಲುಕಡ್ಡಿಗೆ ಸಮ ಎನಿಸಿತು.
ಪಾಂಡುರಾಜನು ತನ್ನ ಮನದಲ್ಲಿ ಹೀಗೆಂದುಕೊಂಡನು. “ಮಕ್ಕಳ ವಿನೋದದ ಸಂಪತ್ತಿಗೆ ದೇವಲೋಕದಲ್ಲಿರುವ ಅಮರಾವತಿಯ ಸಂಪತ್ತು ದಾಸಿಗೆ ಸಮವೆಂದು… ಒಳ್ಳೆಯ ಮನಸ್ಸಿನಿಂದ ಮಾಡುತ್ತಿರುವ ವ್ರತದ ತಪಸ್ಸೆಂಬ ಲಕ್ಶ್ಮಿಗೆ ಮೋಕ್ಶವೆಂಬ ಹೆಣ್ಣು ವಿಲಾಸಿನಿಯೆಂದು… ಮುನಿಗಳ ಪಾದಕಮಲಗಳಿಗೆ ಮಾಡುತ್ತಿರುವ ಸೇವೆಗೆ ಮೂರು ಲೋಕಗಳ ಸಾಮ್ರಾಜ್ಯ ಪದವಿಯು ದಾಸಿಯೆಂದು” ತಿಳಿದನು. ಹೀಗೆ ಬಾವಿಸಿರುವ ವೀರನಾದ ಪಾಂಡು ಕಾಡಿನಲ್ಲಿ ಹಿಗ್ಗಿನಿಂದ ಇದ್ದನು.
ದರ‍್ಮರಾಯನಿಗೆ ಹದಿನಾರು ವರುಶ ಆಯಿತು; ಬೀಮನಿಗೆ ವರುಶ ಹದಿನೈದು ತುಂಬಿತು; ಅರ‍್ಜುನನಿಗೆ ಹದಿನಾಲ್ಕು ವರುಶ; ಕಿರಿಯರಾದ ನಕುಲ ಸಹದೇವ ಹದಿಮೂರು ತುಂಬಿತು. ಅವರೆಲ್ಲರೂ ಮುನಿವರರ ಬಳಿ ಓದು ಬರಹ ಮೊದಲಾದ ವಿದ್ಯೆಯನ್ನು ಕಲಿಯುವುದರಲ್ಲಿ ನಿರತರಾದರು. ಆಗ ಒಂದು ವಸಂತ ಕಾಲ ಬಂದಿತು. ಈ ಮೊದಲ ದಿನಗಳಲ್ಲಿ ಕೊರೆಯುತ್ತಿದ್ದ ಚಳಿಯು ಕಡಿಮೆಯಾಯಿತು…ಜನಗಳ ತಿರುಗಾಟದಿಂದ ನದಿಗಳ ಮತ್ತು ಸರೋವರಗಳ ದಡದಲ್ಲಿ ಹೆಜ್ಜೆಗಳು ಮೂಡಿದವು…ಪಾಚಿ ಇಲ್ಲವಾಯಿತು…ಹೆಪ್ಪುಗಟ್ಟಿದ್ದ ಹಿಮದ ಗೆಡ್ಡೆಗಳು ಹಗಲಿನಲ್ಲಿ ಕರಗಿ ನೀರಾಗಿ ಹರಿದವು…ಮರಗಿಡಗಳ ನೆರಳು ಸೊಗಸಾಗಿ ಕಂಗೊಳಿಸಿದವು… ಸೆಕೆಯು ಹೆಚ್ಚಾಗತೊಡಗಿತು…ಜನರು ತಂಗಾಳಿಗೆ ಮಯ್ಯೊಡ್ಡಿ ವಿಹರಿಸತೊಡಗಿದರು.
( ಆ ವಸಂತಕಾಲದ ಬರುವಿಕೆಯು ಜನರ ಮಯ್ ಮನದ ಮೇಲೆ ಒಂದೊಂದು ಬಗೆಯ ಪರಿಣಾಮವನ್ನು ಬೀರುತ್ತ ಚಂಚಲತೆಯನ್ನು, ಅಗಲಿಕೆಯ ಸಂಕಟವನ್ನು ಮತ್ತು ಬಹುಬಗೆಯ ಒಳಮಿಡಿತಗಳನ್ನು ಕೆರಳಿಸುವುದನ್ನು ರೂಪಕಗಳ ಮೂಲಕ ಬಣ್ಣಿಸಲಾಗಿದೆ.)
ತಪದಲ್ಲಿ ತೊಡಗಿದ್ದ ಯೋಗಿಯ ಮೇಲೆ ಎತ್ತಿದ ಕತ್ತಿ. ವಿರಹಿಯ ಮೇಲೆ ಎತ್ತಿದ್ದ ಈಟಿ… ಸಂನ್ಯಾಸಿಗಳ ಹಿಂದಲೆಯ ಮೇಲಿನ ದಡಿ…ಬ್ರಹ್ಮಚಾರಿಗಳಿಗೆ ಕತ್ತಿಯ ಹೊಡೆತ… ವೇದಶಾಸ್ತ್ರಗಳನ್ನು ಬಲ್ಲವರ ಎದೆಗೆ ಶೂಲ… ಸೊಕ್ಕಿನಿಂದ ಮೆರೆಯುತ್ತಿರುವ ಪ್ರೇಮಿಗಳ ಕೊರಳಿಗೆ ಚುಚ್ಚಿದ ಕೊಕ್ಕೆ… ಅತಿಯಾದ ಮೋಜಿನಾಟವನ್ನು ಬಯಸುವವರಿಗೆ ಕುಲದೇವತೆಯಾಗಿ ವಸಂತಕಾಲ ಬಂದಿತು. ಜೇಂಕರಿಸುವ ತುಂಬಿಗಳೇ ಹಾಡುಗಾರರು. ಇಂಪಾದ ದನಿಯ ಕೋಗಿಲೆಗಳೇ ಹೊಗಳುಬಟ್ಟರು. ಚೆಂದದ ಗಿಳಿಗಳೇ ಪಂಡಿತರು. ಮಾಮರಗಳೇ ಆನೆಗಳ ಹಿಂಡು…ಅರಳಿದ ತಾವರೆಯ ಹೂಗಳೇ ಚಾಮರಗಳು. ಹೂಗೊಂಚಲ ಚಾಮರದ ಚತುರನಾದ ವಸಂತರಾಜನು ಪಾಂಡುವಿನ ಮಯ್ ಮನದ ಮೇಲೆ ದಾಳಿಯಿಟ್ಟನು. ಅಂದರೆ ಪಾಂಡುವಿನ ಮಯ್ ಮನದಲ್ಲಿ ಕಾಮದ ಒಳಮಿಡಿತಗಳನ್ನು ಉದ್ರೇಕಿಸಿದನು.
ಹಣ್ಣು ಬಿಟ್ಟ ಮಾವಿನ ಮರಗಳ ಸೊಗಸು. ಚೆನ್ನಾಗಿ ಚಿಗುರಿದ ಅಶೋಕದ ಕೆಂಪು…ಚೆನ್ನಾಗಿ ಅರಳಿದ ಕಮಲದ ಸುವಾಸನೆ… ಬಹುಬಗೆಯ ತೋಟಗಳ ಗುಂಪು. ಎಳೆಯ ಬಳ್ಳಿಯ ಚೆಲುವು. ಹೊಸ ಪರಿಮಳವನ್ನು ಹೊತ್ತ ಗಾಳಿಯ ಸೊಂಪು—ಇವುಗಳ ಹೆಚ್ಚಳ ಜನರ ಕಣ್ಮನಗಳನ್ನು ಸೆಳೆಯುತ್ತಿತ್ತು.
ವಸಂತ ಕಾಲ ವಿಸ್ತರಿಸಿತು. ಕೂಡಲೇ ದುಂಬಿಗಳು ಹೂವಿನ ರಸ ಹೆಚ್ಚಾದ ನದಿ ಪ್ರವಾಹವನ್ನು ತಾವರೆಯ ದಳದ ದೋಣಿಯ ಮೇಲೇರಿ ದಾಟಿದವು. ಕ್ರೌಂಚ ಹಕ್ಕಿಗಳು. ಹಗಲು ಸಮಯದಲ್ಲಿ ಕಂಗೊಳಿಸುವ ಚಕ್ರವಾಕ ಹಕ್ಕಿಗಳು. ಹಂಸೆಗಳು, ಅರಸಂಚೆಗಳು ಒಸರುವ ಮಕರಂದದ ತಂಪಾದ ಕೆಸರಿನಲ್ಲಿ ಮುಳುಗಿದವು. ಬಹಳ ಸುವಾಸನೆಯ ಅತಿಶಯವಾದ ತಂಪಾದ ಗಾಳಿ ಜಗತ್ತನ್ನು ಆವರಿಸಿತು…ಈ ಗಾಳಿ ಸುಳಿದ ಉದ್ಯಾನಗಳನ್ನು ಹೊಕ್ಕ ವಿರಹಿಗಳು ಹಿಂದಿರುಗಲಿಲ್ಲ. ಒಳ ನುಗ್ಗುವ ಕಾಮದೇವನ ಸೇನೆಯ ಮುಂಚೂಣಿಯ ದಳಗಳು ಮೇಲೆರಗಲು. ಉಗ್ರ ಮುನಿಜನ ತಮ್ಮ ಕಯ್ಯಲ್ಲಿದ್ದ ಹತಾರಗಳನ್ನು ಕೆಳಗೆ ಹಾಕಿದರು. ಏನೆಂದು ಹೇಳಲಿ. ಕೇಳು ಎಂದು ಜನಮೇಜರಾಜನಿಗೆ ವೈಶಂಪಾಯನ ಮುನಿಯು ಹೇಳಿದನು.
ಆ ವಸಂತಕಾಲದ ಸಮಯದಲ್ಲಿ ಒಮ್ಮೆ ಮಾದ್ರೀ ದೇವಿ ವನದಲ್ಲಿ ಸರ‍್ವಾಂಗ ಸಿಂಗಾರ ಮಾಡಿಕೊಂಡು ಒಯ್ಯಾರದಿಂದ ಓಡಾಡುತ್ತಿದ್ದಳು. ಅವಳನ್ನು ನೋಡಿದ ಪಾಂಡುವು “ಯಾರಿವಳು… ಊರ‍್ವಶಿಯೊ… ರಂಬೆಯೊ… ದೇವಕನ್ಯೆಯರು ಇಲ್ಲಿ ಬಂದು ಸುಳಿಯುತ್ತಿದ್ದಾರೆಯೊ ಏನೋ ಎನ್ನುವಶ್ಟು ಚೆಲುವು… ಶಿವ ಶಿವಾ” ಎಂದುಕೊಂಡು ಬೆರಗಾದನು.
ಕಾಮದೇವನ ಹೂಬಾಣ ಸಮೂಹದ ವೇಗದ ಕುಶಲತೆಯು ಅದೆಶ್ಟೋ… ಅವುಗಳು ಪಾಂಡುವನ್ನು ತಾಗಿದವು. ಅಯ್ದು ಹೂಬಾಣಗಳಲ್ಲ. ಎಂಟು ಕೋಟಿ ರೋಮ ಕೂಪಗಳಲ್ಲಿ ಬಾಣಗಳು ನಾಟಿದವೋ ಅನ್ನುವಂತೆ, ವೀರನಾದ ಆ ಪಾಂಡು ಅಳುಕಿದನು. ಅವನ ವಿವೇಕವು ನಡುಮಟ್ಟಕ್ಕೆ, ಮೊಳಕಾಲಿನವರೆಗೆ ಕಡೆಗೆ ಹೆಜ್ಜೆ ಮುಳುಗುವಶ್ಟಕ್ಕೆ ಸೀಮಿತವಾಯ್ತು. ಎಂದರೆ ಪಾಂಡುವು ವಿವೇಕವನ್ನು ಕಳೆದುಕೊಂಡನು. ಅವನು ಹಿಂದಿನದೆಲ್ಲವನ್ನೂ ಮರೆತು, ಕುಂತಿಗೆ ಗೊತ್ತಾಗದಂತೆ ಎಳೆಯ ಬಳ್ಳಿಗಳು ತುಂಬಿರುವ ವನದಲ್ಲಿ ಅಡ್ಡಾಡುತ್ತಿರುವ ಮಾದ್ರಿಯನ್ನು ಸಮೀಪಿಸಿ ಅವಳ ಸೆರಗನ್ನು ಹಿಡಿದನು. “ ಬೇಡ…ಬೇಡ ” ಎಂದು ಮಾದ್ರಿ ಪಾಂಡುವಿನ ಪಾದಗಳಿಗೆ ಬಿದ್ದಳು. ಆ ತರುಣಿಯ ತಲೆಗೂದಲನ್ನು ಹಿಡಿದು ಎತ್ತಿದನು. ಆಕೆ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯಾಸಪಡುತ್ತಿರುವಾಗಲೇ ವಿವೇಕವನ್ನು ಕಳೆದುಕೊಂಡನು.
“ ಕೊಂದೆಯಲ್ಲಾ ಕಡುಪಾಪೀ… ಹಿಂದೆ ಮಾಡಿದ ಕೆಲಸವನ್ನು ಮರೆತೆಯಾ… ಮುನಿಯಾಡಿದ ನುಡಿ ಸುಳ್ಳಾಗುತ್ತದೆಯೇ!. ಕೆಟ್ಟ ಕಾಮನೆಗೆ ಬಯಸಿದೆಯಲ್ಲ… ಸುಡು… ನಿನ್ನ ತಿಳುವಳಿಕೆ ಬೆಂದು ಹೋಯಿತೇ…ಅಚಲವಾಗಿದ್ದ ಮನೋಬಲವನ್ನು ಇಂದು ಕಳೆದುಕೊಂಡೆಯಲ್ಲಾ… ಅಯ್ಯೋ… ನಿನ್ನಯ ಮಕ್ಕಳಿಗೆ ಯಾರಿದ್ದಾರೆ” ಎಂದು ನುಡಿಯುತ್ತ… ಪಾಂಡುವಿನ ಹಿಡಿತದಿಂದ ಬಿಡಿಸಿಕೊಳ್ಳಲು ಮಾದ್ರಿ ಪ್ರಯತ್ನಿಸಿದಳು. ಕಾಮದಿಂದ ಕುರುಡಾಗಿ ಮನಸ್ಸು ಶೂನ್ಯವಾಗಿರುವಾಗ ವಿವೇಕವಿರುತ್ತದೆಯೇ… ನೀತಿಗೀತಿಯನ್ನು ಲೆಕ್ಕಿಸುತ್ತದೆಯೆ… ಮನ್ಮತನ ಈಟಿಯಲ್ಲವೇ ಅದು. ಪಾಂಡುವಿನ ಮೈಯಲ್ಲಿ ಆಳವಾಗಿ ಚುಚ್ಚಿಕೊಂಡು ಕಾಮೋದ್ರೇಕದ ಬೇಗೆ ಮೂಡಿತು. ಅದು ಬಿಟ್ಟರೂ ಬಿಡದೇ ಹಿಂಬಾಲಿಸಿ ಬೆನ್ನಟ್ಟುವಂತೆ ಪಾಂಡುರಾಜನು ಬಲಾತ್ಕಾರದಿಂದ ಮಾದ್ರಿಯನ್ನು ಹಿಡಿದು ಕಾಮದ ತೀವ್ರತೆಯಿಂದ ತಳಮಳಿಸುತ್ತ ಅವಳನ್ನು ಕೂಡಿದನು. ಈ ಸುಕದ ಮಂಪರಿನಲ್ಲಿ ಪಾಂಡುವು ತನ್ನನ್ನೇ ತಾನು ಮರೆತನು. ಮೊಗ ಒಂದೆಡೆಗೆ ವಾಲಿತು.ಕಣ್ಣುಗಳು ಕೆಳಗಾದವು. ಮಾದ್ರಿಯನ್ನು ತಬ್ಬಿಹಿಡಿದಿದ್ದ ಆಲಿಂಗನ ಸಡಿಲಿಸಿತು. ದೇಹ ಜಡವಾಗತೊಡಗಿತು… ನಿಟ್ಟುಸಿರು ಸೂಸಿತು. ಪಾಂಡುರಾಜನು ಮಡದಿಯ ಎದೆಯ ಮೇಲೆ ಕೆನ್ನೆಯನ್ನಿಟ್ಟು ಹಾಗೆಯೇ ಒರಗಿದನು. ಅರಸನ ಸ್ತಿತಿಯನ್ನು ಮಾದ್ರಿಯು ಹೆದರಿಕೆಯಿಂದ ನೋಡಿದಳು.
“ ಅಯ್ಯೋ ಪಾಂಡುರಾಜನೇ ವಿಶಕನ್ನಿಕೆಯಾದ ನನ್ನನ್ನು ಮುಟ್ಟಿದೆಯಲ್ಲಾ…ಬೇಡ…ಅಯ್ಯೋ ಕೆಡಿಸಬೇಡ ಎಂದು ತಡೆಯಲಿಲ್ಲವೆ ನಾನು…ಪರಿಣಾಮ ಏನೆಂದು ತಿಳಿಯದವಳೇ ನಾನು. ಕುರುಕುಲ ತಿಲಕರಾದ ಈ ಬಾಲಕರನ್ನು ತಬ್ಬಲಿಗಳನ್ನಾಗಿ ಮಾಡಿದೆಯಲ್ಲ. ಅಯ್ಯೋ… ನನ್ನೊಡನೆ ಕೋಪಿಸಿಕೊಂಡೆಯಾ ಮಾತಾಡು ” ಎಂದು ಮಾದ್ರಿ ಒರಲಿದಳು.
ಅಳುವಿನ ದನಿಯನ್ನು ಅನುಸರಿಸಿ ಕುಂತಿ “ ಏನಿದು… ಎಲ್ಲಿಯ ಕೂಗು… ಮಾದ್ರಿಯದೊ… ಹಾ… ಪಾಂಡು ಯಾವ ಕಡೆಯಲ್ಲಿದ್ದಾನೆ… ಹಾನಿಯು ದೊಡ್ಡದೇ ಇರಬೇಕು… ನನ್ನ ಮಯ್ಯಿನ ಅಂಗಗಳು ಅದುರುತ್ತಿವೆ… ಈ ಶಕುನದಿಂದ ದೊಡ್ಡ ಕೆಡಕು ಉಂಟಾಗುವಂತೆ ಕಾಣುತ್ತಿದೆ. ಏನು ಮಾರಿಯೋ ಶಿವಶಿವಾ” ಎನ್ನುತ್ತಾ ಕುಂತಿಯು ದನಿಯ ಜಾಡನ್ನು ಹಿಡಿದು ವೇಗದಲ್ಲಿ ಕಾಡಿನಲ್ಲಿ ಬಂದಳು.
ಕುಂತಿಯು ಪಾಂಡು ಮಾದ್ರಿಯರಿಬ್ಬರನ್ನೂ ನೋಡಿದಳು. ದೊಪ್ಪೆಂದು ಕೆಳಗೆ ಉರುಳಿದಳು. ಎಚ್ಚರ ತಪ್ಪಿ ಮೂರ‍್ಚೆ ಹೋದಳು. ಮಾದ್ರಿಯು ಈಗ ಮತ್ತೂ ಹೆಚ್ಚಾಗಿ ಪ್ರಲಾಪಿಸತೊಡಗಿದಳು. ಓಡುತ್ತ ಬರುವ ವೇಗಕ್ಕೆ ತಲೆಯ ಜುಟ್ಟು ಅಲ್ಲಾಡುತ್ತಿರಲು ಅಯ್ದು ಮಂದಿ ಪಾಂಡು ನಂದನರು ಅಲ್ಲಿಗೆ ಬಂದರು. ಜಡವಾಗಿ ಬಿದ್ದಿರುವ ಪಾಂಡುರಾಜನನ್ನು ನೋಡಿ… ಹಾ… ಎಂದು ಕೂಗಿ ಪಾಂಡುವಿನ ಮೇಲೆ ಬಿದ್ದು ಹೊರಳಾಡಿದರು.
“ ಅಪ್ಪಾ… ನಾವು ಪರದೇಶಿಗಳಾದೆವಲ್ಲವೇ… ವಿದಿ ನಮ್ಮ ಬಾಗ್ಯವನ್ನು ತಪ್ಪಿಸಿತಲ್ಲಾ…ನಮ್ಮನ್ನು ನೀನು ಈಗ ಯಾರಿಗೆ ಒಪ್ಪಿಸಿದೆ…ಮುದಿತನದಲ್ಲಿ ನಿನಗೆ ಈ ಅವಸ್ತೆ ಒಪ್ಪುತ್ತದೆಯೇ…ಈ ದೊಡ್ಡ ಕಾಡಿನಲ್ಲಿ ಏತಕ್ಕೆ ಮಲಗಿದ್ದೀಯೇ” ಎಂದು ಆ ಮಕ್ಕಳು ಗೋಳಾಡಿದರು. ಈ ಗೋಳಿನ ದನಿಯನ್ನು ಕೇಳಿ ಮುನಿಗಳು ಬಂದರು. ಕುಮಾರಕರನ್ನು ಸಮಾದಾನ ಮಾಡಿ, ಅವರ ಕಡುಸಂಕಟವನ್ನು ತಡೆದು ನಿಲ್ಲಿಸಿದರು. ಅಶ್ಟರಲ್ಲಿ ಮೂರ‍್ಚೆಯೆಂಬ ಹಾವಿನ ನಂಜನ್ನು ಪರಿಹರಿಸಿಕೊಂಡು ಎಚ್ಚೆತ್ತ ಕುಂತಿ ಅದೆಲ್ಲವನ್ನೂ ಕೇಳಿ “ನನ್ನನ್ನು ತೊರೆದು ಹೊರಟುಹೋದೆಯ ” ಎಂದು ಪಾಂಡುರಾಜನನ್ನು ನೋಡಿದಳು.
“ಅರಸಾ… ನನಗೆ ತಿಳಿಸದೆಯೇ ದೇವಲೋಕದ ಹೆಣ್ಣುಗಳ ಬಳಿಗೆ ಓಡಿದೆಯಾ… ಆ ದೇವಕನ್ನೆಯರ ಮುಡಿಯನ್ನು ಕತ್ತರಿಸುವೆನು. ಅವರನ್ನು ನನಗೆ ದಾಸಿಯರಾಗುವಂತೆ ಮಾಡುವೆನು” ಎಂದು ಕುಂತಿಯು ನಿಶ್ಚಯಿಸಿ “ಅರಸೀ, ನೀನು ಈ ಮಕ್ಕಳನ್ನು ಕಾಪಾಡಿಕೊಂಡಿರು” ಎಂದು ಮಾದ್ರಿಯ ಕಯ್ ಹಿಡಿದುಕೊಳ್ಳಲು, ಮಾದ್ರಿ ವಿನಯದಿಂದ ಕುಂತಿಗೆ ಹೀಗೆ ಹೇಳಿದಳು.
“ ಅಕ್ಕಾ… ನಿನಗೆ ಹುಚ್ಚೆ… ನಿಮ್ಮ ಐವರು ನಿನ್ನ ಆಶ್ರಯದಲ್ಲಿರಬೇಕು…ಮಹಾರಾಜನು ನನ್ನ ತೋಳಿನಲ್ಲಿ ಮರಣ ಹೊಂದಿದನು. ಅವನು ದೇವಕನ್ನೆಯರೊಡನೆ ಇರಲಿ. ನಿನ್ನ ಹೊಣೆಗಾರಿಕೆಯು ನನ್ನದು. ಪಾಂಡುವಿನೊಡನೆ ನಾನು ಸಹಗಮನವನ್ನು ಮಾಡುತ್ತೇನೆ… ನನ್ನ ರೀತಿಯನ್ನು ನೋಡು. ಈತನನ್ನು ನಿನಗೆ ಕೊಡುವುದಿಲ್ಲ” ಎಂದು ನುಡಿಯುತ್ತ ಮಾದ್ರಿಯು ಕುಂತಿಯ ಪಾದಕ್ಕೆ ಎರಗಿದಳು. ಮುನಿಗಳು ಕುಂತಿಗೆ ತಿಳಿಯ ಹೇಳಿ, ಮಾದ್ರಿಗೆ ಪಾಂಡು ಮಹಾರಾಜನೊಂದಿಗೆ ಸಹಗಮನಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿ, ವೇದಗಳಲ್ಲಿ ಹೇಳಿರುವ ರೀತಿಯ ಆಚರಣೆಗಳಿಂದ ಮಹಾರಾಜನ ಶವಸಂಸ್ಕಾರಕ್ಕೆ ಸಿದ್ದತೆಯನ್ನು ಮಾಡಿದರು. ಮಾದ್ರಿಯು ದರ‍್ಮರಾಜನನ್ನು ಹತ್ತಿರ ಕರೆದು, “ಮಗನೇ ನನ್ನ ಈ ಇಬ್ಬರು ಮಕ್ಕಳನ್ನು ಕಾಪಾಡು” ಎಂದು ಅವನಿಗೆ ಒಪ್ಪಿಸಿದಳು. ಆಮೇಲೆ ಪತಿಯೊಡನೆ ಸಹಗಮನ ಮಾಡಿ ಮಾದ್ರೀ ಸತಿ ಶರೀರವನ್ನು ಬಿಟ್ಟಳು. ಸುತರೊಡನೆ ಕುಂತಿ ಮಿಂದು, ಮುನಿ ಸಮೂಹವನ್ನು ಮುಂದಿಟ್ಟುಕೊಂಡು, ವೇದದಲ್ಲಿನ ಸಂಪ್ರದಾಯದ ಆಚರಣೆಯಂತೆ ಪಾಂಡು ಮಹಾರಾಜನಿಗೆ ಉತ್ತರಕ್ರಿಯೆಗಳನ್ನು ಮಾಡಿಸಿ, ಶತಶ್ರುಂಗ ಪರ‍್ವತದಲ್ಲಿ ಮಕ್ಕಳನ್ನು ಸಾಕಿ ಸಲಹುತ್ತಿದ್ದಳು.
(ಚಿತ್ರ ಸೆಲೆ: quoracdn.net)

ಇತ್ತೀಚಿನ ಅನಿಸಿಕೆಗಳು