ಕುಮಾರವ್ಯಾಸ ಬಾರತ ಓದು – ಆದಿಪರ‍್ವ – ದ್ರೋಣನಿಗೆ ದ್ರುಪದನಿಂದ ಅಪಮಾನ – ನೋಟ – 14

– ಸಿ. ಪಿ. ನಾಗರಾಜ.

ದ್ರೋಣನಿಗೆ ದ್ರುಪದನಿಂದ ಅಪಮಾನ

(ಆದಿಪರ್ವ: ಸಂಧಿ: 6 ಪದ್ಯ: 24 ರಿಂದ 36)

ಪಾತ್ರಗಳು:

ಪರಶುರಾಮ: ಜಮದಗ್ನಿ ರಿಸಿ ಮತ್ತು ರೇಣುಕಾ ದೇವಿಯ ಮಗ.

ದ್ರೋಣ: ಭರದ್ವಾಜ ರಿಸಿಯ ಮಗ. ದ್ರೋಣನಿಗೆ ಅಶ್ವತ್ಥಾಮ ಎಂಬ ಹೆಸರಿನ ಮಗನಿದ್ದಾನೆ.

ದ್ರುಪದ: ಪಾಂಚಾಲ ದೇಶದ ಅರಸ. ಛತ್ರಾವತಿ ಪಟ್ಟಣದಲ್ಲಿ ನೆಲೆಸಿದ್ದಾನೆ.

 

*** ದ್ರೋಣನಿಗೆ ದ್ರುಪದನಿಂದ ಅಪಮಾನ ***

ಈ ದ್ರೋಣ ದ್ರುಪದರು ನೃಪವೃಂದ ಸಹಿತ ತಂದೆಯೊಳ್ ಶ್ರಮ ಮಾಡಿದರು. ಆ ದ್ರುಪದಾಖ್ಯನ ಅಯ್ಯನು ದಿವಿಜ ನಗರಿಯಲಿ ನಿಂದನು. ಅಂದು ದ್ರುಪದ ಸಖ್ಯಪ್ರೀತಿಯನು ಸಾನಂದದಲಿ ದ್ರೋಣಂಗೆ ವಿರಚಿಸಿ ಬಂದು, ನಿಜ ರಾಜ್ಯಾಭಿಷೇಕವ ಧರಿಸಿದನು.

ಇತ್ತಲು ಕೆಲವು ದಿವಸಕೆ ಈ ದ್ರೋಣನ ಪಿತನು ಸುರರತ್ತ ಸರಿದನು. ದ್ರೋಣ ತತ್ತಪೋವನದಲ್ಲಿ ವಿಪ್ರಕ್ರಿಯೆಗಳನು ಮಾಡಿ. ಹೊತ್ತ ದಾರಿದ್ರ್ಯದಲಿ ಮನಮರುಗುತ್ತ ತನ್ನ ಮಗ ಸಹಿತ ಅಡವಿಯಲಿ ದೇಶಾಂತರದೊಳಗೆ ತೊಳಲುತ್ತ ಬಂದನು. ಪರುಶುರಾಮ ಆಶ್ರಮಕೆ ಮುನಿಯು ಐತರಲು, ಜಾಮದಗ್ನ್ಯನು ಭಾರದ್ವಾಜನನು ಸತ್ಕರಿಸಿ ಮಧುರ ವಚನದಲಿ ನುಡಿದನು.

ಪರಶುರಾಮ: ದ್ವಿಜರಿಗೆ ಧರೆಯನು ಇತ್ತೆನು.. ಈ ಅವಸರದೊಳು ಆನ್ ನಿರ್ಧನನು.. ನೀನೇ ಪರಮ

ಋಷಿ.. ನಾನು ಆತಿಥ್ಯ ಪೂಜೆಗೆ ಅಭಾಗ್ಯ.. ಧನರಹಿತ.. ನಾ ಹೊತ್ತ ಭಾರಿಯ ಧನುವಿದು 

ಒಂದಿದೆ.. ದಿವ್ಯ ಶರವಿದೆ.. ನೀನು ಮನಕೆ ಬಂದುದ ವರಿಸು.

(ಎನೆ ದ್ರೋಣ ನಸುನಗುತ…)

ದ್ರೋಣ: ಎನಗೆ ನಿಮ್ಮಡಿಗಳ ಕೃಪಾಲೋಕನವಲೇ ಪರಿಯಾಪ್ತಿ.. ಲೋಕದ ಜನ ಮನೋರಂಜನವೆ

ಬೇಹುದು.. ಶರವ ಕೊಡಿ.

ಪರಶುರಾಮ: ಇವು ಮಹಾ ನಿಸ್ಸೀಮತರ ವೈಷ್ಣವವಲೇ…

(ಅವರು ದಿವ್ಯಾಸ್ತ್ರ ನಿವಹವನು ಕೊಟ್ಟರು.. ದ್ರೋಣ ಉಚಿತ ವಿಧಾನದಲಿ ಕೊಂಡನು.)

ದ್ರೋಣ: ಇವು ಮಹಾ ರಣರಂಗದಲಿ ಶಾತ್ರವ ನಿವಾರಣವೈಸಲೆ.. ಎಮ್ಮ ಈ ವ್ಯವಹೃತಿಗೆ ತಾನೇನು

ಉಪಾಯ.

(ಎನುತ್ತ ಚಿಂತಿಸಿದ. ತನ್ನ ಮಗ ಅಶ್ವತ್ಥಾಮನೊಡನೆ ಈ ರೀತಿ ನುಡಿಯುತ್ತಾನೆ.)

ದ್ರೋಣ: ಮಗನೆ ಬಲ್ಲೈ.. ದ್ರುಪದ ಭೂಪತಿ ಮಗುವುತನದಿಂದ ಎಮ್ಮ ಸಖನು.. ನಾವು

ಓಲಗಿಸುವೆವು… ಅಲ್ಲಿ ಮಿತ್ರ ಭಾವದಲಿ ಸಲಹನೆ.. ಪಾಂಚಾಲರಾಯನ ನಗರಿಯನು ನಾವು

ಹೊಗುವ ನಡೆ.

(ಎಂದು ಮುನಿ ಮೌಳಿಗಳ ಮಣಿಯನು ರೇಣುಕಾ ಸುತನ ಬೀಳುಕೊಂಡನು. ಈತನು

ದ್ರುಪದ ರಾಯನ ಮಂದಿರಕೆ ಬಂದನು. ಆ ಬಾಗಿಲವನೊಡನೆ ಎಂದನು.)

ದ್ರೋಣ: ಎಲವೋ, ನಾವು ನಿಮ್ಮ ಅರಸಂಗೆ ಪೂರ್ವದಲಿ ಸಂದ ಮಿತ್ರರು.. ದ್ರೋಣ 

ಮುನಿಪತಿಯೆಂದು ನಮ್ಮ ಅಭಿಧಾನ.. ನೀ ಹೇಳು.

(ಎಂದು ಕಳುಹಲು.. ಬಂದು ಹದನ ಬಿನ್ನಹ ಮಾಡಿದನು.. ಸಿರಿಯ ಮದ.. ಅಧಿಕ

ಪ್ರತಾಪೋತ್ಕರದ ಮದ ಮೊದಲಾದ ಮದ ಸಂಚರಣ ರಜದಲಿ.. ಈತನ ಮನದ ಮಡಿ

ವರ್ಗ ಮಾಸಿತು.)

ದ್ರುಪದ: ತಿರಿವ ಹಾರುವರೊಡನೆ ಭೂಮೀಶ್ವರರಿಗೆ ಎತ್ತಣ ಮೈತ್ರಿ.. ಹೋಗಲಿ.. ಕರೆಯಬೇಡ.

(ಎನೆ, ಬಂದು ಬಾಗಿಲಲಿ ಅವ ನಿವಾರಿಸಿದ.)

ದ್ರೋಣ: ಮರೆದನೇ… ತಪ್ಪೇನು ನಾ ಕಂಡು ಅರುಹಿ ಮರಳುವೆವೈಸಲೆ

(ಎನುತ ಉರುಬಿದರೆ.. ಬಾಗಿಲಲಿ ಕಂಬಿಯನು ಇಕ್ಕಿ ತರುಬಿದರು.. ಒರೆಯನು

ಉಗುಳಿಚಿ ಖಡ್ಗದಲಿ ಇಕ್ಕೆಲದವರನು ಬಿಡದೆ ಅರಿದನು.. ಓಲಗಕೆ ಉರವಣಿಸಿದನು..

ದ್ರುಪದ ಭೂಪತಿಯ ಮುಂದೆ ನಿಂದನು.)

ದ್ರೋಣ: ಏನೆಲವೋ ಪಾಂಚಾಲ, ಚಿಕ್ಕಂದು ಆನು ನೀನು ಒಂದಾಗಿ ತಂದೆಯೊಳು ಏನನು 

ಅರಿದೆವು ಮರೆದು ಕಳೆದಾ.. ಹಾ ಮಹಾದೇವ.. ಏನು ಬಂದಿರಿ ಎಂಬ ಗುಣವಚನ

ಅನುರಾಗವು ಸಾಲದೇ.. ಧನವೇನು ಫಲ ಕಕ್ಕುಲಿತೆ ಎಮಗೆ ಇಲ್ಲ.

ದ್ರುಪದ: ಸೂರಿಗಳಿಗೆ ಅತಿ ಮೂರ್ಖರಿಗೆ.. ಗಂಭೀರರಿಗೆ ಭಂಡರಿಗೆ.. ವೇದಾಚಾರ ಸಂಯುಕ್ತರಿಗೆ 

ಅನಾಚಾರ ಪ್ರಸಕ್ತರಿಗೆ.. ಧೀರರಿಗೆ ಹಂದೆಗಳಿಗೆ ಎತ್ತಣ ಸೇರುವೆಗಳೈ.. ಭೂಪರಿಗೆ ಬಡ

ಹಾರುವರಿಗೆ ಎತ್ತಣದು ಸಖತನವು.

ದ್ರೋಣ: ಎಲವೋ, ನಿನ್ನ ಆಸ್ಥಾನ ಸಹಿತ ಈ ಹೊಳಲ ಸುಡುವೆನು.. ನಿನ್ನ ಸೀಳಿದು ಭೂತಗಣಕೆ 

ಬಲಿಯ ಕೊಡುವೆನು.. ನೀನು ಎನಗೆ ಇದಿರಲ್ಲ.. ಕಲಿತ ವಿದ್ಯದ ಕೋಲ ಮಕ್ಕಳ ಕಳುಹಿ

ಕಟ್ಟಿಸಿ.. ವಾಮ ಪಾದದಿ ತಲೆಯನು ಒದೆವೆನು.. ನೀನು ಮರೆಯದಿರು.

(ಎಂದನಾ ದ್ರೋಣ.. ಎಂದು ಭಾಷೆಯ ಮಾಡಿ.. ತನ್ನಯ ನಂದನನ ಒಡಗೊಂಡು

ಜನಪದ ವೃಂದ ಹಲವನು ಕಳೆದು.. ಹಸ್ತಿನಾಪುರಿಗೆ ಬಂದನು.)

 

ಪದ ವಿಂಗಡಣೆ ಮತ್ತು ತಿರುಳು

ನೃಪ=ರಾಜ; ವೃಂದ=ಗುಂಪು/ಸಮೂಹ; ತಂದೆ+ಒಳ್; ಶ್ರಮ=ಶಸ್ತ್ರಾಬ್ಯಾಸ/ಆಯುದಗಳನ್ನು ಪ್ರಯೋಗಿಸುವ ವಿದ್ಯೆ; ದ್ರುಪದ+ಆಖ್ಯ; ಆಖ್ಯ=ಹೆಸರು; ಅಯ್ಯ=ಅಪ್ಪ; ದ್ರುಪದಾಖ್ಯನ ಅಯ್ಯ=ರಾಜಕುಮಾರನಾದ ದ್ರುಪದನ ತಂದೆ; ದಿವಿಜ=ದೇವತೆ; ದಿವಿಜ ನಗರಿಯಲಿ ನಿಂದನು=ದೇವಲೋಕದ ನಗರವಾದ ಅಮರಾವತಿಯನ್ನು ನೆಲೆನಿಂತನು ಎಂದರೆ ಸಾವನ್ನಪ್ಪಿದನು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಟ್ಟು; ಅಂದು=ಗುರುಕುಲದಿಂದ ದ್ರುಪದನು ಹೊರಟುಬರುವಾಗ; ಸಖ್ಯಪ್ರೀತಿ=ಗೆಳೆತನದ ಪ್ರೀತಿ; ಸಾನಂದ=ಆನಂದ/ಹಿಗ್ಗು; ವಿರಚಿಸಿ=ತೋರಿಸಿ/ವ್ಯಕ್ತಪಡಿಸಿ; ನಿಜ=ತನ್ನ; ರಾಜ್ಯ+ಅಭಿಷೇಕ; ಧರಿಸಿದನು=ಪಡೆದನು/ಹೊಂದಿದನು;

ಇತ್ತಲು=ಈ ಕಡೆ ಗುರುಕುಲದ ಆಶ್ರಮದಲ್ಲಿ; ಪಿತ=ತಂದೆ; ಸುರರ+ಅತ್ತ; ಸುರ=ದೇವತೆ; ಅತ್ತ=ಆ ಕಡೆಗೆ; ಸುರರತ್ತ ಸರಿದನು=ದೇವತೆಗಳ ಕಡೆಗೆ ಹೊರಟನು ಎಂದರೆ ಸಾವನ್ನಪ್ಪಿದನು ಎಂಬ ತಿರುಳಿನಲ್ಲಿ ಬಳಕೆಗೊಂಡಿರುವ ನುಡಿಗಟ್ಟು; ತತ್+ತಪೋವನದಲಿ; ತತ್=ಆ; ವಿಪ್ರ=ಬ್ರಾಹ್ಮಣ; ವಿಪ್ರಕ್ರಿಯೆ=ಬ್ರಾಹ್ಮಣ ಸಮುದಾಯದ ಸಂಪ್ರದಾಯದಂತೆ ವ್ಯಕ್ತಿಯು ಸತ್ತಾಗ ಮಾಡುವಂತಹ ಉತ್ತರಕ್ರಿಯೆಯ ಆಚರಣೆಗಳು;

ಹೊತ್ತ=ಹೊಂದಿದ್ದ; ಅಡವಿ=ಕಾಡು/ಅರಣ್ಯ; ದೇಶಾಂತರ=ನಾನಾ ದೇಶಗಳಲ್ಲಿ; ತೊಳಲು=ಅಲೆದಾಡು; ಜಾಮದಗ್ನ್ಯ=ಜಮದಗ್ನಿ ಎಂಬ ರಿಸಿಯ ಮಗನಾದ ಪರಶುರಾಮ; ಐತರಲು=ಆಗಮಿಸಲು; ಮಧುರ=ಒಳ್ಳೆಯ; ಮಧುರ ವಚನ=ಒಳ್ಳೆಯ ಮಾತು/ನುಡಿ; ದ್ವಿಜ=ಬ್ರಾಹ್ಮಣ; ಧರೆ=ಬೂಮಿ; ಅವಸರ=ಸಮಯ/ವೇಳೆ; ಆ/ಆನ್=ನಾನು;

ನಿರ್ಧನ=ಸಂಪತ್ತು ಇಲ್ಲದವನು/ಹಣ ಒಡವೆ ಆಸ್ತಿ ಇಲ್ಲದವನು; ಆತಿಥ್ಯ ಪೂಜೆ=ಮನೆಗೆ ಬಂದ ನೆಂಟರಿಶ್ಟರಿಗೆ ಮತ್ತು ಗುರುಹಿರಿಯರಿಗೆ ಮಾಡುವ ಉಪಚಾರ/ಸೇವೆ; ಅಭಾಗ್ಯ=ಯಾವುದೇ ಸಂಪತ್ತಿಲ್ಲದವನು/ಅನುಕೂಲವಿಲ್ಲದವನು; ಧನು=ಬಿಲ್ಲು; ದಿವ್ಯ=ಉತ್ತಮವಾದುದು; ಶರ=ಬಾಣ; ವರಿಸು=ಸ್ವೀಕರಿಸು;

ನಿಮ್ಮ+ಅಡಿಗಳ; ಅಡಿ=ಪಾದ; ಕೃಪಾ+ಅವಲೋಕನವಲೇ; ಕೃಪಾ=ದಯೆ/ಕರುಣೆ; ಅವಲೋಕನ=ನೋಟ/ದರ್ಶನ; ಪರಿಯಾಪ್ತಿ=ಸಂಪೂರ್ಣವಾದ ನೆಮ್ಮದಿ/ಸಮಾದಾನ/ತಣಿವು; ಮನೋರಂಜನ=ಮನಸ್ಸನ್ನು ಆನಂದಗೊಳಿಸುವುದು; ಬೇಹುದು=ಬೇಕಾಗಿರುವುದು/ ಅಗತ್ಯವಾಗಿರುವುದು;

ನಿಸ್ಸೀಮ=ಎಲ್ಲೆಯಿಲ್ಲದುದು/ಮಿತಿಯಿಲ್ಲಿದುದು; ನಿಸ್ಸೀಮತರ=ಅಪಾರವಾದ ಶಕ್ತಿಯುಳ್ಳದ್ದು; ವೈಷ್ಣವ=ವಿಶ್ಣುದೇವನ ಹೆಸರನ್ನು ಹೇಳಿ ಪ್ರಯೋಗಿಸುವ ಬಾಣ; ವೈಷ್ಣವವಲೇ=ವಿಶ್ಣು ಪರಮಾತ್ಮನ ಶಕ್ತಿಯನ್ನು ಒಳಗೊಂಡ ಬಾಣವಲ್ಲವೇ; ದಿವ್ಯ+ಅಸ್ತ್ರ; ನಿವಹ=ಗುಂಪು/ಸಮೂಹ; ಶಾತ್ರವ=ಹಗೆಗಳ ಗುಂಪು/ಶತ್ರುಗಳ ಸಮೂಹ; ನಿವಾರಣವೈಸಲೆ=ನಾಶಪಡಿಸುತ್ತವೆಯಲ್ಲವೇ; ವ್ಯವಹೃತಿ= ವ್ಯವಹಾರ/ ಉದ್ಯೋಗ; ಎಮ್ಮ ಈ ವ್ಯವಹೃತಿಗೆ ತಾನೇನು ಉಪಾಯ ಎನುತ್ತ ಚಿಂತಿಸಿದ=ನನ್ನ ಜೀವನವನ್ನು ನಡೆಸುವುದಕ್ಕೆ ಮುಂದಿನ ದಾರಿ ಯಾವುದು ಎಂದು ದ್ರೋಣನು ಚಿಂತಿಸತೊಡಗಿದ;

ಮಗುವುತನದಿಂದ=ಚಿಕ್ಕಂದಿನಿಂದ/ಬಾಲ್ಯ ಕಾಲದಿಂದ; ಸಖ=ಗೆಳೆಯ/ಮಿತ್ರ; ಓಲಗಿಸು=ಒಟ್ಟಿಗೆ ಸೇರು; ಸಲಹು=ಕಾಪಾಡು; ಹೊಗು=ಪ್ರವೇಶಿಸು; ಮೌಳಿ=ಕಿರೀಟ; ಮಣಿ=ರತ್ನ; ಮುನಿ ಮೌಳಿಗಳ ಮಣಿ=ಮುನಿಗಳಲ್ಲಿಯೇ ಉತ್ತಮನಾದವನು ಎಂಬ ತಿರುಳಿನಲ್ಲಿ ಬಳಕೆಯಾಗಿದೆ

ರೇಣುಕಾಸುತ=ರೇಣುಕೆಯ ಮಗನಾದ ಪರಶುರಾಮ;

ಪೂರ್ವದಲಿ=ಚಿಕ್ಕಂದಿನಲ್ಲಿ/ಬಾಲ್ಯದಲ್ಲಿ; ಅಭಿಧಾನ=ಹೆಸರು; ಹದನ=ಸುದ್ದಿ/ಸಮಾಚಾರ; ಬಿನ್ನಹ=ಅರಿಕೆ; ಸಿರಿ=ಸಂಪತ್ತು; ಮದ=ಸೊಕ್ಕು/ಗರ್‍ವ; ಪ್ರತಾಪ+ಉತ್ಕರ; ಪ್ರತಾಪ=ಶಕ್ತಿ/ಪರಾಕ್ರಮ; ಉತ್ಕರ=ರಾಶಿ/ಗುಂಪು; ಸಂಚರಣ=ಸುಳಿದಾಡುವುದು/ಆವರಿಸುವುದು/ತುಂಬಿಕೊಳ್ಳುವುದು; ರಜ=ದೂಳು/ಕಸ; ಮಡಿ=ಶುಚಿ; ಮಡಿವರ್ಗ=ಶುಚಿತನದ ಸಂಗತಿಗಳು; ಮಾಸು=ಕಳೆಗುಂದು/ಮಲಿನವಾಗು;

 

ಹೊಸಗನ್ನಡ ಗದ್ಯರೂಪ

ದ್ರುಪದ ಮತ್ತು ದ್ರೋಣ ಇವರಿಬ್ಬರೂ ಇತರ ರಾಜಕುಮಾರರ ಗುಂಪಿನ ಜತೆಗೂಡಿ ಬರದ್ವಾಜರಲ್ಲಿ ಶಸ್ತ್ರಾಸ್ತ್ರಗಳ ವಿದ್ಯೆಯನ್ನು ಕಲಿಯುತ್ತಿದ್ದರು. ದ್ರುಪದನ ತಂದೆಯು ಸಾವನ್ನಪ್ಪಿದ ಸುದ್ದಿ ಬಂದಿತು. ಆಗ ದ್ರುಪದನು ದ್ರೋಣನೊಡನೆ ತನ್ನ ಗೆಳೆತನದ ಒಲವನ್ನು ಮನತುಂಬಿ ಹೇಳಿಕೊಂಡು, ಗುರುಕುಲದಿಂದ ತನ್ನ ರಾಜದಾನಿಗೆ ಬಂದು ರಾಜ್ಯದ ಗದ್ದುಗೆಯನ್ನೇರಿದನು.

ಕೆಲವು ದಿನಗಳು ಕಳೆಯುತ್ತಿದ್ದಂತೆಯೇ… ಇತ್ತ ಗುರುಕುಲದಲ್ಲಿ ದ್ರೋಣನ ತಂದೆಯಾದ ಬರದ್ವಾಜನು ಮರಣಹೊಂದಿದನು. ದ್ರೋಣನು ಆ ತಪೋವನದಲ್ಲಿ ತಂದೆಯ ಉತ್ತರಕ್ರಿಯಾದಿಗಳನ್ನು ಮಾಡಿ, ಬಡತನದ ಹೊರೆಯನ್ನು ಹೊತ್ತು ಕಂಗಾಲಾಗಿ ಚಿಂತಿಸುತ್ತ, ತನ್ನ ಮಗ ಅಶ್ವತ್ತಾಮನೊಡನೆ ಅನೇಕ ರಾಜ್ಯಗಳಲ್ಲಿ ಅಲೆದಾಡುತ್ತ ಪರಶುರಾಮನ ಆಶ್ರಮಕ್ಕೆ ಬರಲು, ಜಮದಗ್ನಿಯ ಮಗನಾದ ಪರಶುರಾಮನು ದ್ರೋಣನನ್ನು ಉಪಚರಿಸಿ, ಪ್ರೀತಿಯಿಂದ ಒಳ್ಳೆಯ ನುಡಿಗಳನ್ನಾಡತೊಡಗಿದನು.

ಬ್ರಾಹ್ಮಣರಿಗೆ ಬೂಮಿಯನ್ನು ಕೊಟ್ಟೆನು.. ಈ ಸಮಯದಲ್ಲಿ ನನ್ನ ಬಳಿ ಯಾವ ಸಂಪತ್ತೂ ಇಲ್ಲ.. ನೀನು ಉತ್ತಮನಾದ ರಿಸಿ.. ಈಗ ನಾನು ಆಶ್ರಮಕ್ಕೆ ಬಂದವರ ಸತ್ಕಾರವನ್ನು ಮಾಡಲಾಗದ ಬಾಗ್ಯಹೀನ ಹಾಗೂ ಸಂಪತ್ತಿಲ್ಲದವನು.. ಈಗ ನನ್ನ ಬಳಿ ಒಂದು ದೊಡ್ಡ ಬಿಲ್ಲು ಮತ್ತು ದಿವ್ಯವಾದ ಬಾಣಗಳಿವೆ.. ನಿನ್ನ ಮನಸ್ಸು ಬಯಸಿದ್ದನ್ನು ನನ್ನಿಂದ ಪಡೆಯುವನಾಗು” ಎಂದು ಪರಶುರಾಮನು ತನ್ನ ಅಸಹಾಯಕತೆಯನ್ನು ದ್ರೋಣನ ಮುಂದೆ ತೋಡಿಕೊಳ್ಳಲು, ದ್ರೋಣನು ಮುಗುಳ್ನಗುತ್ತ ನನಗೆ ನಿಮ್ಮ ಪಾದಗಳ ದರ್ಶನ ಮತ್ತು ನಿಮ್ಮ ಕರುಣೆಯ ನೋಟವೇ ನೆಮ್ಮದಿಯನ್ನುಂಟುಮಾಡಿದೆ. ಲೋಕದ ಜನರ ಮನವನ್ನು ರಂಜಿಸಿ ಗೆಲ್ಲಬೇಕು. ಆದ್ದರಿಂದ ನನಗೆ ಬಾಣವನ್ನೇ ಕೊಡಿ” ಎಂದನು. ಅಂದರೆ ದ್ರೋಣನು ತಾನು ತನ್ನ ತಂದೆಯಂತೆಯೇ ರಾಜಕುಮಾರರಿಗೆ ಶಸ್ತ್ರಾಸ್ತ್ರಗಳ ವಿದ್ಯೆಯನ್ನು ಹೇಳಿಕೊಡುವ ಗುರುವಿನ ಕಸುಬನ್ನು ಮುಂದುವರಿಸಲು ಬಯಸಿದ್ದಾನೆ. ಆದ್ದರಿಂದಲೇ ಪರಶುರಾಮನಿಂದ ಬಿಲ್ಲು ಬಾಣಗಳನ್ನು ಪಡೆಯಲು ಮನಸ್ಸು ಮಾಡಿದ್ದಾನೆ.

ಪರಶುರಾಮನು ಇವು ಅಪರಿಮಿತವಾದ ಶಕ್ತಿಯುಳ್ಳ ವೈಶ್ಣವ ಬಾಣಗಳಲ್ಲವೇ” ಎಂದು ಆ ಬಾಣಗಳ ಶಕ್ತಿಯನ್ನು ಕೊಂಡಾಡುತ್ತ.. ತಮ್ಮ ಬಳಿಯಿದ್ದ ದಿವ್ಯಾಸ್ತ್ರಗಳೆಲ್ಲವನ್ನೂ ದ್ರೋಣನಿಗೆ ನೀಡಿದನು. ಅವೆಲ್ಲವನ್ನೂ ದ್ರೋಣನು ವಿನಯಪೂರ‍್ವಕವಾಗಿ ಸ್ವೀಕರಿಸಿದ ನಂತರ, ತನ್ನಲ್ಲಿಯೇ ದೊಡ್ಡ ರಣರಂಗದಲ್ಲಿ ಹಗೆಗಳನ್ನು ನಾಶಪಡಿಸುವ ಶಕ್ತಿಯನ್ನು ಇವು ಪಡೆದಿವೆಯಲ್ಲವೇ… ನನ್ನ ಈ ವ್ಯವಹಾರಕ್ಕೆ ಅಂದರೆ ಶಸ್ತ್ರಾಸ್ತ್ರಗಳ ಮೂಲಕವೇ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ನೆಲೆ ಯಾವುದು” ಎಂದು ಚಿಂತಿಸಿದ.

ಮರುಗಳಿಗೆಯಲ್ಲಿಯೇ ತನ್ನ ಮಗ ಅಶ್ವತ್ತಾಮನೊಡನೆ ಮಗನೇ, ನಿನಗೆ ಚೆನ್ನಾಗಿ ಗೊತ್ತಿದೆ.. ದ್ರುಪದ ರಾಜನು ಚಿಕ್ಕಂದಿನಿಂದಲೂ ನನ್ನ ಗೆಳೆಯ.. ನಾವು ಒಟ್ಟಾಗಿ ಕೂಡಿ ವಿದ್ಯೆಯನ್ನು ಕಲಿಯುವಾಗ ಒಡನಾಡಿಗಳಾಗಿದ್ದೆವು.. ಅವನಲ್ಲಿಗೆ ಹೋದರೆ ಗೆಳೆತನದ ಪ್ರೀತಿಯಿಂದ ನಮ್ಮನ್ನು ಕಾಪಾಡುತ್ತಾನಲ್ಲವೇ… ಪಾಂಚಾಲರಾಜನಾದ ದ್ರುಪದನ ನಗರಕ್ಕೆ ನಾವು ಹೋಗೋಣ… ನಡೆ” ಎಂದು ಹೇಳುತ್ತ, ದ್ರೋಣನು ಪರಶುರಾಮನ ಆಶ್ರಮದಿಂದ ಹೊರಟನು.

ದ್ರೋಣನು ಮಗನೊಡನೆ ದ್ರುಪದ ರಾಜನ ಅರಮನೆಗೆ ಬಂದನು. ಅರಮನೆಯ ಬಾಗಿಲವನೊಡನೆ ಈ ರೀತಿ ನುಡಿದನು. ಎಲವೋ, ನಾವು ನಿಮ್ಮ ಅರಸನಿಗೆ ಚಿಕ್ಕಂದಿನಿಂದಲೂ ಆತ್ಮೀಯ ಗೆಳೆಯರು.. ದ್ರೋಣ ಮುನಿಯೆಂದು ನಮ್ಮ ಹೆಸರು.. ನೀನು ಇದನ್ನು ನಿಮ್ಮ ರಾಜನಿಗೆ ಹೇಳು” ಎಂದು ಹೇಳಿ ಕಳುಹಿಸಲು, ಆತನು ದ್ರುಪದನ ಒಡ್ಡೋಲಗಕ್ಕೆ ಬಂದು ಆ ಸುದ್ದಿಯನ್ನು ರಾಜನಲ್ಲಿ ಅರಿಕೆ ಮಾಡಿದನು. ಸಿರಿಯ ಮದ, ಅದಕ್ಕಿಂತ ಮಿಗಲಾಗಿ ಬಾಹುಬಲ ಮತ್ತು ರಾಜಗದ್ದುಗೆಯ ಬಲದ ಮದಗಳನ್ನು ಒಳಗೊಂಡಂತೆ ಇನ್ನೂ ಅನೇಕ ಬಗೆಯ ಮದಗಳಿಂದ ಹರಡಿದ ದೂಳಿನಲ್ಲಿ ದ್ರುಪದನ ಮನದ ಮಡಿವರ್‍ಗ ಕೊಳಕಾಯಿತು. ಅಂದರೆ ದ್ರುಪದನ ಸೊಕ್ಕಿನಿಂದ ತುಂಬಿದ ಮನದಲ್ಲಿ ಗೆಳೆಯನ ಬಗ್ಗೆ ಒಲವು ನಲಿವಿನ ಒಳ್ಳೆಯ ಬಾವನೆಗಳ ಬದಲು.. ತಿರಸ್ಕಾರ ಹಾಗೂ ಕೀಳು ಬಾವನೆಗಳು ಮೂಡಿದವು. ಮದದಿಂದ ತುಂಬಿದ ದ್ರುಪದನು ತಿಳಿಗೇಡಿಯಾಗಿ ಅಹಂಕಾರದಿಂದ ಬಾಗಿಲು ಕಾಯುವ ಸೇವಕನಿಗೆ ಈ ರೀತಿ ಆದೇಶ ನೀಡುತ್ತಾನೆ. ತಿರಿದು ತಿನ್ನುವ ಹಾರುವರೊಡನೆ ರಾಜನಿಗೆ ಎತ್ತಣ ಗೆಳೆತನ.. ಅವನು ಬಂದ ದಾರಿಯಲ್ಲಿಯೇ ಹಿಂತಿರುಗಿ ಹೋಗಲಿ.. ಅವನನ್ನು ಒಡ್ಡೋಲಗದೊಳಕ್ಕೆ ಬಿಡಬೇಡ” ಎನ್ನಲು, ಸೇವಕನು ಬಾಗಿಲ ಬಳಿ ಬಂದು, ದ್ರೋಣನನ್ನು ಒಳಕ್ಕೆ ಬರದಂತೆ ತಡೆಯುತ್ತಾನೆ.

ಆಗ ದ್ರೋಣನು ಮರೆತಿದ್ದಾನೆಯೇ.. ತಪ್ಪೇನು.. ನಾನೇ ನೇರವಾಗಿ ಕಂಡು, ನಮ್ಮಿಬ್ಬರ ಗೆಳೆತನವನ್ನು ನೆನಪಿಸಿ ಹಿಂತಿರುಗುತ್ತೇವೆ” ಎಂದು ಹೇಳುತ್ತ ಒಡ್ಡೋಲಗದೊಳಕ್ಕೆ ಹೋಗಲು ಅಡಿಯಿಟ್ಟಾಗ… ಬಾಗಿಲಿಗೆ ಅಡ್ಡವಾಗಿ ಕಂಬಿಯನ್ನಿಟ್ಟು.. ದ್ರೋಣ ಮತ್ತು ಅಶ್ವತ್ತಾಮ ಒಳಬರದಂತೆ ರಾಜನ ಸೇವಕರು ತಡೆಯುತ್ತಾರೆ… ಕುಪಿತನಾದ ದ್ರೋಣನು ತನ್ನ ಒರೆಯಿಂದ ಕತ್ತಿಯನ್ನು ಹೊರಸೆಳೆದು.. ಇಕ್ಕೆಲದಲ್ಲಿದ್ದ ಸೇವಕರನ್ನು ಸದೆಬಡಿದು.. ರಾಜನ ಓಲಗದೊಳಕ್ಕೆ ರಬಸದಿಂದ ನುಗ್ಗಿ ಬಂದು, ದ್ರುಪದ ರಾಜನ ಮುಂದೆ ನಿಂತುಕೊಂಡು ಏನೆಲವೋ ಪಾಂಚಾಲ, ಚಿಕ್ಕಂದಿನಲ್ಲಿ ನಾನು ನೀನು ಜತೆಯಾಗಿ ನಮ್ಮ ತಂದೆಯಿಂದ ಏನನ್ನು ಕಲಿತೆವು ಎನ್ನುವುದನ್ನು ಮರೆತುಬಿಟ್ಟೆಯಾ… ಹಾ… ಮಹಾದೇವ… ಬಾಲ್ಯಗೆಳೆಯನಾದ ನನ್ನನ್ನು ಕಂಡು… ಏನು ಬಂದಿರಿ ಎಂದು ಒಂದು ಒಳ್ಳೆಯ ಮಾತನ್ನು ಒಲವು ನಲಿವಿನಿಂದ ಆಡಿದರೆ ಸಾಕಲ್ಲವೇ… ಹಣದಿಂದೇನು ಪ್ರಯೋಜನ… ಗೆಳೆತನದಲ್ಲಿ ಪ್ರೀತಿ ದೊಡ್ಡದೇ ಹೊರತು, ಹಣ ದೊಡ್ಡದಲ್ಲ… ನಿನ್ನಿಂದ ಹಣವನ್ನು ಪಡೆಯಬೇಕೆಂಬ ಹಂಬಲವೂ ನನಗಿಲ್ಲ” ಎಂದು ದ್ರೋಣನು ತನ್ನ ಮನದ ನೋವನ್ನು ಹೇಳಿಕೊಂಡನು. ಆಗ ರಾಜತನದ ಸೊಕ್ಕಿನಿಂದ ತಿಳಿಗೇಡಿಯೂ ಅಹಂಕಾರಿಯೂ ಆಗಿದ್ದ ದ್ರುಪದನು ದ್ರೋಣನನ್ನು ಕುರಿತು ಪಂಡಿತರಿಗೆ ಮತ್ತು ಅತಿ ದಡ್ಡರಿಗೆ… ಸಮಾಜದಲ್ಲಿ ಮನ್ನಣೆಯನ್ನು ಪಡೆದವರಿಗೆ ಮತ್ತು ಮಾನಮರ್‍ಯಾದೆಯಿಲ್ಲದ ಕೀಳು ವ್ಯಕ್ತಿಗಳಿಗೆ… ವೇದಗಳ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿರುವ ಸದಾಚಾರ ಸಂಪನ್ನರಿಗೆ ಮತ್ತು ಅನಾಚಾರದ ನಡೆನುಡಿಯಿಂದ ಬಾಳುತ್ತಿರುವವರಿಗೆ… ವೀರರಿಗೆ ಮತ್ತು ಹೇಡಿಗಳಿಗೆ ಯಾವ ರೀತಿಯಲ್ಲಿ ತಾನೇ ಗೆಳೆತನದ ನಂಟು ಉಂಟಾಗುತ್ತದೆ… ಅಂತೆಯೇ ರಾಜನಾದ ನನಗೂ ಮತ್ತು ಬಡ ಹಾರುವನಾದ ನಿನಗೂ ಎತ್ತಣ ಗೆಳತನ” ಎಂದು ಕಟುನುಡಿಗಳನ್ನಾಡಿ ದ್ರೋಣನನ್ನು ಅಪಮಾನಗೊಳಿಸುತ್ತಾನೆ.

ದ್ರುಪದನಾಡಿದ ನುಡಿಗಳಿಂದ ಕನಲಿದ ದ್ರೋಣನು ಎಲವೋ, ನಿನ್ನ ಒಡ್ಡೋಲಗದ ಸಹಿತ ಈ ಪಟ್ಟಣವನ್ನು ಸುಡುತ್ತೇನೆ… ನಿನ್ನನ್ನು ಸೀಳಿ ದೆವ್ವಗಳ ಗುಂಪಿಗೆ ಬಲಿಕೊಡುತ್ತೇನೆ… ನೀನು ನನಗೆ ಯಾವ ರೀತಿಯಿಂದಲೂ ಸಾಟಿಯಲ್ಲ… ನನ್ನಿಂದ ಶಸ್ತ್ರಾಸ್ತ್ರ ವಿದ್ಯೆಯನ್ನು ಕಲಿತ ಮಕ್ಕಳನ್ನು ಕಳುಹಿಸಿ… ಅವರಿಂದಲೇ ನಿನ್ನನ್ನು ಹೆಡೆಮುರಿ ಕಟ್ಟಿಸಿ ಎಳೆತರಿಸಿ… ನನ್ನ ಎಡಗಾಲಿನ ಪಾದದಿಂದ ನಿನ್ನ ತಲೆಯನ್ನು ಒದೆಯುತ್ತೇನೆ… ಈ ನನ್ನ ನುಡಿಗಳನ್ನು ನೀನು ಮರೆಯಬೇಡ” ಎಂದು ಪ್ರತಿಜ್ನೆಯನ್ನು ಮಾಡಿ, ಅಲ್ಲಿಂದ ಹೊರಟು ತನ್ನ ಮಗ ಅಶ್ವತ್ತಾಮನೊಡನೆ ಅನೇಕ ರಾಜ್ಯಗಳಲ್ಲಿ ಸಂಚರಿಸುತ್ತಾ, ದ್ರೋಣನು ಹಸ್ತಿನಾಪುರಕ್ಕೆ ಬಂದನು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *