ರವೀಂದ್ರನಾತ ಟ್ಯಾಗೋರರ ಕವನಗಳು ಓದು – 11 ನೆಯ ಕಂತು

– ಸಿ.ಪಿ.ನಾಗರಾಜ.

ತರ್ಕ ತುಂಬಿದ ಮನಸು ಎರಡು ಅಲಗಿನ ಕತ್ತಿ
ಅದನು ಹಿಡಿದಿಹ ಕೈಯು ರಕ್ತಸಿಕ್ತ
ತರ್ಕವೇ ಸರ್ವಸ್ವವೆಂಬುದನು ಮರೆತಾಗ
ತರ್ಕಕೆಟುಕದ ಪ್ರೀತಿ ನಿನಗೆ ವ್ಯಕ್ತ.

“ಇತರರು ಹೇಳುತ್ತಿರುವುದೆಲ್ಲವೂ ತಪ್ಪು. ನಾನು ಹೇಳುತ್ತಿರುವುದೇ ಸರಿ.” ಎಂಬ ನಿಲುವನ್ನು ಹೊಂದಿರುವ ವ್ಯಕ್ತಿಯ ಮನಸ್ಸು ಕ್ರೂರವಾಗಿರುತ್ತದೆ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

‘ಮನಸ್ಸು ಕ್ರೂರವಾಗಿರುವುದು’ ಎಂದರೆ ಇತರರನ್ನು ವಂಚಿಸುವ, ಸುಲಿಗೆ ಮಾಡುವ, ಸಾವು ನೋವಿಗೆ ಗುರಿಮಾಡುವ ಕೆಟ್ಟ ಉದ್ದೇಶಗಳಿಂದ ಕೂಡಿರುವ ಮನಸ್ಸು;

ತರ್ಕ=ಚರ್‍ಚೆ/ವಾದ; ತುಂಬು=ಹೆಚ್ಚಾಗಿರುವುದು/ಬಹಳವಾಗಿರುವುದು;

ತರ್ಕ ತುಂಬಿದ ಮನಸು=ತನ್ನ ನಿಲುವೇ ಸರಿ/ತನ್ನ ವಿಚಾರಗಳೇ ಸಮಂಜಸ/ಬೇರೆಯವರ ವಿಚಾರಗಳೆಲ್ಲವೂ ಪೊಳ್ಳು ಎಂಬ ಒಳಮಿಡಿತಗಳಿಂದ ಕೂಡಿರುವ ಮನಸ್ಸು;

ಅಲಗು=ಲೋಹದಿಂದ ಮಾಡಿರುವ ಚಾಕು, ಕತ್ತಿ ಮುಂತಾದ ಹತಾರಗಳ ಹರಿತವಾದ ಅಂಚು; ಕತ್ತಿ=ಉದ್ದನೆಯ ಹರಿತವಾದ ಅಂಚು ಮತ್ತು ಮೊನೆಯುಳ್ಳ ಹತಾರ;

ಎರಡು ಅಲಗಿನ ಕತ್ತಿ=ಉದ್ದನೆಯ ಕತ್ತಿಯ ಎರಡು ಪಕ್ಕದ ಅಂಚುಗಳು ಹರಿತವಾಗಿರುತ್ತವೆ. ಇದರಿಂದಾಗಿ ಯಾವ ಕಡೆಯಿಂದ ಬೇಕಾದರೂ ಕತ್ತಿಯನ್ನು ಬೀಸಿ ಎದುರಾಳಿಯನ್ನು ಗಾಸಿಗೊಳಿಸಬಹುದು; ಹಿಡಿದು+ಇಹ; ಇಹ=ಇರುವ; ರಕ್ತ=ನೆತ್ತರು; ಸಿಕ್ತ=ಒದ್ದೆಯಾಗಿರುವುದು; ರಕ್ತಸಿಕ್ತ=ರಕ್ತ ಮೆತ್ತಿಕೊಂಡಿರುವುದು/ಬಳಿದುಕೊಂಡಿರುವುದು;

ತರ್ಕ ತುಂಬಿದ ಮನಸು ಎರಡು ಅಲಗಿನ ಕತ್ತಿ… ಅದನು ಹಿಡಿದಿಹ ಕೈಯು ರಕ್ತಸಿಕ್ತ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. “ತನ್ನ ಜಾತಿಯೇ / ತನ್ನ ದರ್‍ಮವೇ / ತನ್ನ ದೇವರೇ ದೊಡ್ಡದು” ಎಂದು ವಾದ ಮಾಡುವ ವ್ಯಕ್ತಿಯ ಮನಸ್ಸು, ತನ್ನದಲ್ಲದ ಜಾತಿಯ/ದರ್‍ಮದ/ದೇವರನ್ನು ಪೂಜಿಸುವ ಜನರ ಬಗ್ಗೆ ತೀವ್ರವಾದ ತಿರಸ್ಕಾರ ಮತ್ತು ಹಗೆತನವನ್ನು ಹೊಂದಿರುತ್ತದೆ. ಇದಕ್ಕೆ ಮೂಲ ಕಾರಣವೇನೆಂದರೆ “ಬೂಮಿಯ ಒಡೆತನ, ಒಡವೆ ವಸ್ತು ಮತ್ತು ಆಡಳಿತದ ಗದ್ದುಗೆಯು ತಮ್ಮ ತಮ್ಮ ಜಾತಿ/ದರ್‍ಮದವರಿಗೆ ಮಾತ್ರ ದೊರೆಯಬೇಕು ಹಾಗೂ ತಮ್ಮವರಲ್ಲಿಯೇ ಉಳಿಯಬೇಕು” ಎಂಬ ಉದ್ದೇಶ.

ಈ ಉದ್ದೇಶವನ್ನು ಈಡೇರಿಸಿಕೊಳ್ಳಲು ಜಾತಿ/ದರ್‍ಮ/ದೇವರನ್ನು ಹತಾರಗಳನ್ನಾಗಿ ಬಳಸುತ್ತಾರೆ. ಆದ್ದರಿಂದಲೇ ಹಿಂದಿನ ಕಾಲದಿಂದಲೂ ಇಂದಿನವರೆಗೂ ಜಾತಿ/ದರ್‍ಮ/ದೇವರ ಹೆಸರಿನಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಕಲಹಗಳಲ್ಲಿ ಹರಿಯುತ್ತಿರುವ ಮಾನವ ರಕ್ತದ ಪ್ರಮಾಣ, ರಾಜ್ಯದ ಪ್ರಾಂತ್ಯ ವಿಸ್ತರಣೆಗಾಗಿ ರಾಜರ ನಡುವೆ ನಡೆದ ಕಾಳೆಗಗಳಲ್ಲಿ ಹರಿದ ರಕ್ತದ ಪ್ರಮಾಣಕ್ಕಿಂತ ಹೆಚ್ಚಾಗಿದೆ.

ಯಾವುದೇ ಒಂದು ಜಾತಿ/ದರ್‍ಮ/ದೇವರ ಬಗ್ಗೆ ಯಾರಾದರೂ ತುಸು ಟೀಕೆಯನ್ನು ಮಾಡಿದರೆ “ಅವರ ನಾಲಗೆಯನ್ನು /ಕಯ್ ಕಾಲುಗಳನ್ನು/ತಲೆಯನ್ನು ಕತ್ತರಿಸಿದವರಿಗೆ ಕೋಟಿಗಟ್ಟಲೆ ರೂಪಾಯಿಗಳ ಬಹುಮಾನವನ್ನು ನೀಡುತ್ತೇವೆ ” ಎಂದು ಪ್ರಕಟಣೆಯನ್ನು ನೀಡುವ ಮತ್ತು ಜಾತಿ/ದರ್‍ಮ/ದೇವರ ಹೆಸರಿನಲ್ಲಿ ಸುಳ್ಳು ಆರೋಪಗಳನ್ನು ಮಾಡಿ, ಅನ್ಯ ಪಂಗಡದ ಜನರನ್ನು ಕೊಲ್ಲುವವರನ್ನು ದೊಡ್ಡ ವೀರರೆಂದು ಕೊಂಡಾಡುವ ವಿದ್ಯಮಾನಗಳು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಕಂಡುಬರುತ್ತಿವೆ.

ಜಗತ್ತಿನಲ್ಲಿರುವ ದರ್‍ಮಗಳೆಲ್ಲವೂ ಪ್ರೀತಿ ಮತ್ತು ಕರುಣೆಯನ್ನು ನುಡಿಗಳ ರೂಪದಲ್ಲಿ ಹೇಳಿದರೂ, ನಿತ್ಯ ಜೀವನದ ವ್ಯವಹಾರಗಳಲ್ಲಿ ಮತ್ತೊಂದು ದರ್‍ಮದ ನಾಶಕ್ಕಾಗಿಯೇ ಪಣತೊಟ್ಟಿರುತ್ತವೆ. ಆದ್ದರಿಂದಲೇ ಚರಿತ್ರೆಯ ಬೇರೆ ಬೇರೆ ಕಾಲಮಾನಗಳಲ್ಲಿ ಒಂದು ದರ್‍ಮದ ದೇವ ಮಂದಿರಗಳನ್ನು ಮತ್ತೊಂದು ದರ್‍ಮದವರು ಕೆಡಹುವ ಮತ್ತು ಅದೇ ಜಾಗದಲ್ಲಿ ತಮ್ಮ ದೇವ ಮಂದಿರಗಳನ್ನು ಕಟ್ಟುವ ಹಗೆತನದ ಕ್ರಿಯೆಗಳು ಕಂಡುಬರುತ್ತಿವೆ.

ಜಾತಿ/ದರ್‍ಮ/ದೇವರ ನೆಲೆಯಲ್ಲಿ ಕೋಟಿಗಟ್ಟಲೆ ಶ್ರೀಸಾಮಾನ್ಯರು ತಮ್ಮ ಪಾಡಿಗೆ ತಾವು ಎಲ್ಲರೊಡನೆ ಹೊಂದಿಕೊಂಡು ಒಲವು ನಲಿವು ನೆಮ್ಮದಿಯಿಂದ ಬಾಳುತ್ತಿರುತ್ತಾರೆ. ಆದರೆ ಜಾತಿ/ದರ್‍ಮ/ದೇವರ ಹೆಸರಿನಲ್ಲಿ ಒಕ್ಕೂಟಗಳನ್ನು ಕಟ್ಟಿಕೊಂಡು ವ್ಯವಹರಿಸುವ ಕೆಲವೇ ವ್ಯಕ್ತಿಗಳ ಮನಸ್ಸು ವಂಚನೆ, ಸುಲಿಗೆ ಮತ್ತು ಕ್ರೂರತನದ ನಡೆನುಡಿಗಳಿಂದ ಕೂಡಿರುತ್ತದೆ. ಇಂತಹ ಒಕ್ಕೂಟಗಳಲ್ಲಿರುವ ವ್ಯಕ್ತಿಗಳಲ್ಲಿ ಅಕ್ಕರದ ವಿದ್ಯೆ ಮತ್ತು ಸಿರಿವಂತಿಕೆಯು ಹೆಚ್ಚಾದಂತೆಲ್ಲಾ ಕ್ರೂರತನದ ನಡೆನುಡಿಗಳು ಇನ್ನು ಹೆಚ್ಚಾಗಿ , ಮಾನವ ಸಮುದಾಯ ನಿರಂತರವಾದ ಸಾವು ನೋವಿಗೆ ಗುರಿಯಾಗಿ ನರಳುತ್ತಿದೆ;

ಸರ್ವಸ್ವ+ಎಂಬುದನು; ಸರ್ವಸ್ವ=ಎಲ್ಲ/ಸಮಸ್ತ; ತರ್ಕವೇ ಸರ್ವಸ್ವ=ನನ್ನ ಜಾತಿ/ನನ್ನ ದರ್‍ಮ/ನನ್ನ ದೇವರೇ ದೊಡ್ಡದು ಎಂಬ ಮೋಹ/ಅಹಂಕಾರ; ಎಂಬುದನು=ಎನ್ನುವುದನ್ನು; ಮರೆ=ಕಡೆಗಣಿಸು/ತಿರಸ್ಕರಿಸು; ತರ್ಕಕೆ+ಎಟುಕದ; ಎಟುಕು=ಸಿಗುವುದು/ದೊರೆಯುವುದು; ಪ್ರೀತಿ=ಒಲವು/ಅನುರಾಗ/ಅಕ್ಕರೆ;

ತರ್ಕಕೆ ಎಟುಕದ ಪ್ರೀತಿ=ಪ್ರೀತಿ ಎಂಬುದಕ್ಕೆ ಜಾತಿ/ದರ್‍ಮ/ದೇವರ ನಂಟು ಇರುವುದಿಲ್ಲ. ವ್ಯಕ್ತಿಯು ತಾನು ಪ್ರೀತಿಸುವ ವ್ಯಕ್ತಿಯನ್ನು ಜಾತಿ/ದರ್‍ಮ/ದೇವರ ಹಿನ್ನೆಲೆಯಲ್ಲಿ ಗುರುತಿಸದೆ, ತನ್ನಂತೆಯೇ ಒಂದು ಮಾನವ ಜೀವಿಯೆಂದು ಸರಿಸಮಾನವಾದ ನೆಲೆಯಲ್ಲಿ ಕಾಣುತ್ತಾನೆ. ಪ್ರೀತಿ ಎನ್ನುವುದು ವ್ಯಕ್ತಿಗಳ ಮನಸ್ಸನ್ನು ಒಂದುಗೂಡಿಸುವ ಮತ್ತು ಎಲ್ಲರ ಒಳಿತಿಗಾಗಿ ಒಲವು, ಕರುಣೆ ಮತ್ತು ಗೆಳೆತನದಿಂದ ನಂಟನ್ನು ಬೆಳೆಸುವ ನಡೆನುಡಿಯಾಗಿರುತ್ತದೆ; ವ್ಯಕ್ತ=ಚೆನ್ನಾಗಿ ಕಾಣುತ್ತದೆ/ಗೋಚರಿಸುತ್ತದೆ;

ತರ್ಕವೇ ಸರ್ವಸ್ವವೆಂಬುದನು ಮರೆತಾಗ… ತರ್ಕಕೆಟುಕದ ಪ್ರೀತಿ ನಿನಗೆ ವ್ಯಕ್ತ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ವ್ಯಕ್ತಿಯು ತನ್ನ ಜಾತಿ/ದರ್‍ಮ/ದೇವರ ಬಗೆಗಿನ ಮೋಹ ಇಲ್ಲವೇ ಅಹಂಕಾರವನ್ನು ಬಿಟ್ಟರೆ, ಆಗ ಎಲ್ಲರೊಡನೆ ಪ್ರೀತಿಯಿಂದ ನಡೆದುಕೊಳ್ಳಬೇಕೆಂಬ ಅರಿವನ್ನು ಪಡೆಯುತ್ತಾನೆ. ಇಂತಹ ಅರಿವು ಮೂಡುತ್ತಿದ್ದಂತೆಯೇ ಸಹಮಾನವರ ಜತೆಯಲ್ಲಿ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳುವಂತಹ ಒಳ್ಳೆಯ ನಡೆನುಡಿಗಳನ್ನು ವ್ಯಕ್ತಿಯು ಪ್ರಯತ್ನಪೂರ್‍ವಕವಾಗಿ ರೂಪಿಸಿಕೊಳ್ಳಲು ತೊಡಗುತ್ತಾನೆ;

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks