ಕುಮಾರವ್ಯಾಸ ಬಾರತ ಓದು-ಆದಿಪರ‍್ವ- ದುರ‍್ಯೋದನನ ಒಳಸಂಚು-ನೋಟ-19
ಪ್ರಸಂಗ-19
ದುರ‍್ಯೋದನನ ಒಳಸಂಚು
(ಆದಿಪರ‍್ವ: ಎಂಟನೆಯ ಸಂದಿ: ಪದ್ಯ 56 ರಿಂದ 65)
ಪಾತ್ರಗಳು:
ದ್ರುತರಾಶ್ಟ್ರ: ಹಸ್ತಿನಾವತಿಯ ರಾಜ
ದುರ‍್ಯೋದನ: ಹಸ್ತಿನಾವತಿಯ ರಾಜನಾದ ದ್ರುತರಾಶ್ಟ್ರ ಮತ್ತು ಗಾಂದಾರಿಯ ಮಗ
*** ದುರ್ಯೋಧನನ ಒಳಸಂಚು ***
ಕಳಿಂಗಾದಿಗಳು ತಂತಮ್ಮ ಅನುಮತವ ಹೇಳಿದರು… ಕೌರವ ಜನಪನು ಅವರಿಗೆ ಮನದೊಳಗೆ ಕೇಡ ನಿಶ್ಚೈಸಿದನು…ಜನಕನಲ್ಲಿಗೆ ನಡುವಿರುಳು ಬಂದು… ಅನುನಯದೊಳು ಈ ಮಾತ ತೆಗೆದು…
ವೃಕೋದರನ ಊಳಿಗವನು…ಅರ್ಜುನನ ಸಾಹಸವ ಎಂದನು.
ದುರ್ಯೋಧನ: ಅರಸ, ಅರಿಗಳ ಉದ್ಭವವು ಇನ್ನು ಗಂಟಲನು ಅರಿವುದು…ಎಮ್ಮನು ನೂರು
ಮಕ್ಕಳನು ಬರಿದೇ ಹಡೆದು ತಾಯ ಜವ್ವನವ ಕೆಡಿಸಿದೆ….ಭೀಮಾರ್ಜುನರು
ಹಸ್ತಿನಪುರದೊಳು ಇರಲಿ…ಎಮ್ಮಿನಿಬರನು ದೇಶಾಂತರಕೆ ನೇಮಿಸು…ಜೀಯ,
ಭೀಮನೊಡನೆ ನೂಕದು.
ಧೃತರಾಷ್ಟ್ರ: ಅಕಟ…ಮಗನೇ, ಧರ್ಮಸುತ ಬಾಧಕನೆ…ಭೀಮಾರ್ಜುನರ ಮತಿ ಕಂಟಕದೊಳು
ಎರಗದು…ಧರ್ಮನಂದನನ ಮೀರಿ ನಡೆಯರು…ಪಾಂಡುವೇ ಸಕಲ ರಾಜ್ಯಕೆ
ಪಾಲಕನು…ತನ್ನೊಳು ತಪ್ಪಿದನೆ…ವಿಕಳ ಮತಿಗಳ ಮಾತನು ಬಿಡು.
( ಎಂದನು ಮಗಗೆ ಧೃತರಾಷ್ಟ್ರ .)
ದುರ್ಯೋಧನ: ಬೊಪ್ಪ ಬಿನ್ನಹವು…ಅವರ ಜನಕನು ನಿಮಗೆ ತಪ್ಪಿ ನಡೆಯನು…ನೀವು ಇನ್ನು ಆ
ಪಾಂಡುಸುತರಿಗೆ ರಾಜ್ಯ ವೈಭವವ ಒಪ್ಪಿಸುವುದು…ಧರ್ಮಜನ ತರುವಾಯ ಇಳೆ
ಅಪ್ಪುದು…ಆ ವಿಧಿಯಲ್ಲಿ ಸಂತತಿ ಅಪ್ಪುದು ತಪ್ಪದು…ಅವರಿಗೆ ನೆಲವಿದು
ಸಲಲಿ…ಹೊಲ್ಲೆಹೆ ಏನು…ಜನಪ, ನಿಮ್ಮ ತಮ್ಮನ ತನುಜರೊಡನೆಯೆ ಸುಖದಲಿ
ರಾಜ್ಯ ಮಾಡುವುದು ಅನುನಯವಲಾ… ನಮ್ಮ ನೂರ್ವರನು ಬೀಳುಕೊಡುವುದು…
ಓಲೈಸಿ ಕೊಂಬರೆ ಜನಪರುಂಟು…ತನಗಿರದೆ ಖಂಡೆಯದ ಸಿರಿ…ಇನ್ನೇನು…ಕರೆ
ಜನನಿಯನು ಬೀಳ್ಕೊಂಬೆವು.
( ಎಂದು ನಿಂದಿರ್ದ…)
ಧೃತರಾಷ್ಟ್ರ: ಎಲೆ ಮಗನೆ, ಎನ್ನಾಣೆ ಬಾ ಕುರುಕುಲತಿಲಕ…ನೀ ಹೋಗಲು ಎನ್ನೊಡಲು
ಉಳಿವುದೇ…ಮರಿಯಾನೆ ಬಾರೈ…ಕಂದ ಬಾ ಎಂದು ಸೆಳೆದು ಬಿಗಿಯಪ್ಪಿದನು…
ಕಂಬನಿ ತುಳುಕಿದನು…ಹೇಳು…ಇನ್ನು ಮೇಲಣ ಬಳಕೆಯನು…ರಿಪುರಾಜ ಕಾರ್ಯಕೆ
ಬುದ್ಧಿಯೇನು.
ದುರ್ಯೋಧನ: ನೀರ…ವಿಷ…ಇಕ್ಕಿದೆವು…ಕಿಚ್ಚಿನ ಭಾರವಣೆ ಏನಹುದೊ…ಪುಣ್ಯವ ಹೋರಿಸುವ
ಒದಗಿದರೆ ನಮ್ಮ ಹಗೆ ಹೋಗಲಿ… ವೈರಿಗಳ ವಿಸ್ತಾರ ಹರಿದು ಓರಣಿಸಿತೈ…ಜೀಯ,
ಜೂಜಿನ ಬಾರುಗುತ್ತಿದು ಮೆರೆಯಲಿ…ನಿಮ್ಮ ಚಿತ್ತಕೆ ಬಹಡೆ ಮಾಡುವೆವು.
ಧೃತರಾಷ್ಟ್ರ: ವೈರಿ ಘಟಕುಲಕೆ ಆವಿಗೆಯನು ಆವ ತೆರದಲಿ ಇಡಿಸುವಿರಿ…ನಿಮ್ಮೊಳಗೆ ಆವು
ಹೊರಗೇ…ಮಗನೆ ನಿಮ್ಮ ವೈಭವಕೆ ಸೊಗಸು ಎನೆ ಮಿಗೆ ಸಂಭಾವಿಸುವುದು…ಸಾವರು
ಆವ ಅಂದದಲಿ..ಆ ತೆರನ ನೀ ಹೇಳು…ಆವು ಸೊಗಸುವೆವು.
(ಎಂದು ನುಡಿದನು ಮಗಗೆ ಧೃತರಾಷ್ಟ್ರ.)
ದುರ್ಯೋಧನ: ಪಾಂಡು ಕುಮಾರಕರ ಕರೆಸಿ ನೀ ಧರೆಯ ಹಸುಗೆಯ ಮಾಡಿಕೊಡು…ಸಹ ದಾಯಾದ
ವಿಷಯದಲಿ ಅವರಿಗೆ ವಾರಣಾವತಿ ಪುರದೊಳಗೆ ಇರವನು ಪರುಠವಿಸಿ…ಕರಿ
ತುರುಗ ಭಂಡಾರವನು ಕೊಡು…ಬಳಿಕ ತಾನು ಲಾಕ್ಷಾಭವನ ರಚನೆಯಲಿ ಉರುಹಿ
ಸುಡುವೆನು.
ಧೃತರಾಷ್ಟ್ರ: ಅಹುದು…ಮಗನೇ ಮಂತ್ರವಿದು ಮತವಹುದು…ನಮಗೆ ಈ ಭೀಷ್ಮ ವಿದುರರು
ಕುಹಕಿಗಳು…ಕೃತಭಿನ್ನವಾದರೆ ಮೇಲೆ ಭಾರವದು…ಗಹನ ಗತಿಯಲಿ ಗೂಢತರ
ಸನ್ನಿಹಿತ ಕರ್ಮಕಲಾಪದಲಿ ರಿಪು ದಹನ ಸಿದ್ಧಿಯ ನೆನೆವುದು.
( ಎಂದನು ಮಗಗೆ ಧೃತರಾಷ್ಟ್ರ.)
ಹೊಸಗನ್ನಡ ಗದ್ಯ ರೂಪ
“ಪಾಂಡವರನ್ನು ಅರಗಿನಮನೆಯ ಬೆಂಕಿಯಲ್ಲಿ ಸುಟ್ಟು ಕೊಲ್ಲುವ ಸಂಚನ್ನು ಹೂಡುತ್ತೇನೆ” ಎಂದು ದುರ‍್ಯೋದನನು ಹೇಳಿದ ಮಾತಿಗೆ ಶಕುನಿ ಮೊದಲಾದವರು ತಮ್ಮ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ದುರ‍್ಯೋದನನು ತನ್ನ ಮನಸ್ಸಿನಲ್ಲಿಯೇ ಪಾಂಡವರಿಗೆ ಕೆಡುಕನ್ನು ನಿಶ್ಚಯಿಸಿಕೊಂಡು, ಆ ದಿನ ನಡುರಾತ್ರಿ ತಂದೆಯಲ್ಲಿಗೆ ಬಂದು, ಪ್ರೀತಿಯಿಂದ ಒಂದು ಮಾತನ್ನು ಆರಂಬಿಸಿದನು. ಬೀಮನ ಕೆಲಸವನ್ನು , ಅರ‍್ಜುನನ ಸಾಹಸವನ್ನು ವಿವರಿಸಿದನು.
“ದಿನೇ ದಿನೇ ಹಗೆಗಳ ಏಳಿಗೆಯಾಗುತ್ತಿದೆ. ಅದರಿಂದ ನಮ್ಮ ಪ್ರಾಣ ಹೋಗುವಂತಾಗಿದೆ. ಮಹಾರಾಜಾ, ನನ್ನನ್ನು ಒಳಗೊಂಡಂತೆ ನೂರು ಮಕ್ಕಳನ್ನು ಬರಿದೆ ಪಡೆದು, ತಾಯಿಯ ಹರೆಯವನ್ನು ಕೆಡಿಸಿದೆ. ಬೀಮಾರ‍್ಜುನರು ಹಸ್ತಿನಪುರದಲ್ಲಿರಲಿ. ನಿನ್ನ ಮಕ್ಕಳಾದ ನಮ್ಮೆಲ್ಲರನ್ನು ಬೇರೆ ದೇಶಕ್ಕೆ ಹೋಗುವುದಕ್ಕೆ ಅಪ್ಪಣೆ ಮಾಡು. ನಮಗೆ ಬೀಮನೊಡನೆ ಹೊಂದಿಕೊಂಡು ಬಾಳುವುದಕ್ಕೆ ಆಗುವುದಿಲ್ಲ” ಎಂದನು.
“ಅಯ್ಯೋ…ಮಗನೇ…ದರ‍್ಮರಾಯನು ತೊಂದರೆ ಕೊಡುವಂತಹ ವ್ಯಕ್ತಿಯೇ…ಬೀಮಾರ‍್ಜುನರ ಬುದ್ದಿ ಕೇಡಿನಲ್ಲಿ ತೊಡಗುವುದಿಲ್ಲ…ಅವರು ಅಣ್ಣನಾದ ದರ‍್ಮರಾಯನು ಹಾಕಿದ ಗೆರೆಯನ್ನು ದಾಟಿ ನಡೆಯುವುದಿಲ್ಲ…ಈ ಮೊದಲು ನನ್ನ ತಮ್ಮನಾದ ಪಾಂಡುವೇ ಸಕಲ ರಾಜ್ಯವನ್ನು ಕಾಪಾಡುತ್ತಿದ್ದನಲ್ಲವೇ…ಎಂದಾದರೂ ತಪ್ಪಿ ನಡೆದಿದ್ದನೇ…ಕೆಟ್ಟದ್ದನ್ನು ಕಲ್ಪಿಸಿಕೊಂಡು ಹೇಳುವವರ ಮಾತಿಗೆ ಕಿವಿಗೊಡಬೇಡ” ಎಂದು ಮಗನಿಗೆ ದ್ರುತರಾಶ್ಟ್ರನು ಹಿತ ನುಡಿದನು.
ಆಗ ದುರ‍್ಯೋದನನು ದ್ರುತರಾಶ್ಟ್ರನ ಹಿತನುಡಿಗಳಿಗೆ ಎದುರಾಗಿ “ಅಪ್ಪ, ನಿಮ್ಮಲ್ಲಿ ಒಂದು ಬಿನ್ನಹ. ಅವರ ಅಪ್ಪನಾದ ಪಾಂಡು ನಿಮಗೆ ಕೇಡನ್ನು ಬಗೆಯಲಿಲ್ಲ. ನೀವು ಇನ್ನು ಮೇಲೆ ಆ ಪಾಂಡುವಿನ ಮಕ್ಕಳಾದ ಪಾಂಡವರಿಗೆ ರಾಜ್ಯದ ಸಿರಿಸಂಪದವನ್ನು ಒಪ್ಪಿಸುವುದು. ದರ‍್ಮರಾಯನ ನಂತರ ರಾಜ್ಯವು ಪಾಂಡವರ ಮಕ್ಕಳಿಗೆ ಸೇರುವುದು. ಆ ರಾಜ ಪರಂಪರೆಯಲ್ಲಿ ಅವರ ವಂಶದವರಿಗೆ ರಾಜ್ಯದ ಸಿರಿಸಂಪದ ತಪ್ಪದೇ ಅವರ ಪಾಲಿಗೆ ಮುಂದುವರಿಯುತ್ತದೆ. ಅವರಿಗೆ ಈ ರಾಜ್ಯದ ನೆಲವು ದೊರೆಯಲಿ. ಅದರಲ್ಲಿ ತಪ್ಪೇನು. ತಂದೆಯೇ, ನಿಮ್ಮ ತಮ್ಮನ ಮಕ್ಕಳ ಜತೆಗೂಡಿ ಸುಕದಿಂದ ರಾಜ್ಯದ ಆಡಳಿತವನ್ನು ಮುಂದುವರಿಸುವುದು ನಿನಗೆ ಸೂಕ್ತವಾದ ನಡೆಯಲ್ಲವೇ…ನಿನ್ನ ಮಕ್ಕಳಾದ ನೂರು ಮಂದಿಯನ್ನು ಬೀಳ್ಕೊಡುವುದು…ನಾವು ಸೇವೆಯನ್ನು ಮಾಡುವುದಕ್ಕೆ ಬೇರೆ ರಾಜರಿದ್ದಾರೆ…ನನಗಿರುವ ಈ ಕತ್ತಿಯ ಸಿರಿಯೇ ಸಾಕು. ನನ್ನ ತೋಳ್ಬಲದಿಂದಲೇ ಬದುಕಬಲ್ಲೆ…ಇನ್ನೇನು…ತಾಯಿ ಗಾಂದಾರಿಯನ್ನು ಕರೆ…ನಿನ್ನ ಮಕ್ಕಳಾದ ನಾವು ನೂರು ಮಂದಿಯೂ ನಿಮ್ಮಿಂದ ದೂರಸರಿಯುತ್ತೇವೆ.” ಎಂದು ನುಡಿದು ಎದ್ದು ನಿಂತನು.
ದುರ‍್ಯೋದನನು ನುಡಿಗಳನ್ನು ಕೇಳಿ ತತ್ತರಿಸಿಹೋದ ದ್ರುತರಾಶ್ಟ್ರನು “ಎಲೆ ಮಗನೆ, ನನ್ನಾಣೆ ಬಾ ಕುರುಕುಲತಿಲಕ…ನೀನು ಹೋದರೆ ನನ್ನ ಒಡಲು ಜೀವಂತವಾಗಿ ಉಳಿಯುತ್ತಿದೆಯೇ… ಮರಿಯಾನೆಯೇ ಬಾ…ಕಂದ ಬಾ“ ಎಂದು ದುರ‍್ಯೋದನನನ್ನು ತನ್ನತ್ತ ಎಳೆದುಕೊಂಡು ಬಿಗಿಯಾಗಿ ಅಪ್ಪಿಕೊಂಡನು…
ಕಣ್ಣೀರನ್ನು ಕರೆಯುತ್ತ-
“ಹೇಳು, ಇನ್ನು ಮುಂದೆ ಪಾಂಡವರಿಗೆ ಏನನ್ನು ಮಾಡಬೇಕೆಂದಿರುವೆ,,.ಶತ್ರುರಾಜರ ನಾಶಕ್ಕೆ ಯಾವ ರೀತಿ ಆಲೋಚಿಸಿದ್ದೀಯೆ” .
ಆಗ ದುರ‍್ಯೋದನನು ತನ್ನ ಮನದ ಸಂಚನ್ನು ವಿವರವಾಗಿ ದ್ರುತರಾಶ್ಟ್ರನ ಮುಂದೆ ಹೇಳತೊಡಗುತ್ತಾನೆ.
“ಬೀಮನನ್ನು ನಾಶಪಡಿಸಲೆಂದು ಅವನನ್ನು ನದಿಯ ಮಡುವಿನಲ್ಲಿ ಮುಳುಗಿಸಿದೆವು…ವಿಶದ ಲಡ್ಡುಗೆಗಳನ್ನು ತಿನ್ನಿಸಿದೆವು. ಆದರೆ ಅದರಿಂದ ಅವನು ಸಾಯಲಿಲ್ಲ. ಈಗ ಅವರೆಲ್ಲರನ್ನೂ ಬೆಂಕಿಯಲ್ಲಿ ಸುಟ್ಟು ನಾಶಮಾಡಬೇಕೆಂಬ ಸಂಚನ್ನು ಹೂಡಿದ್ದೇನೆ. ನಮ್ಮ ಪುಣ್ಯ ಹೇಗಿದೆಯೋ ನೋಡೋಣ…ನಮ್ಮ ಸಂಚು ಈಡೇರಿ…ನಮ್ಮ ಹಗೆಗಳು ನಾಶವಾಗಲಿ…ಹಗೆಗಳ ಪರಾಕ್ರಮ ದಿನೇ ದಿನೇ ದೊಡ್ಡದಾಗಿ ಹರಡುತ್ತಿದೆ. ಜೀಯ, ಇದು ಜೂಜಿನಲ್ಲಿ ಪಣವೊಡ್ಡಿದಂತಿದೆ…ಏನು ಬೇಕಾದರೂ ಆಗಬಹುದು…ಗೆಲ್ಲಬಹುದು ಇಲ್ಲವೇ ಸೋಲಬಹುದು…ಬೆಂಕಿಯಿಟ್ಟು ಹಗೆಗಳನ್ನು ನಾಶಪಡಿಸಬೇಕೆಂಬ ಕೆಲಸ ನಿಮ್ಮ ಮನಸ್ಸಿಗೆ ಒಪ್ಪಿಗೆಯಾದರೆ, ಇದನ್ನು ಮಾಡುವೆವು” ಎಂದು ದುರ‍್ಯೋದನನು ನುಡಿದನು.
ಆಗ ದ್ರುತರಾಶ್ಟ್ರನು ಕುತೂಹಲದಿಂದ “ನೀವು ಯಾವ ರೀತಿಯಲ್ಲಿ ಹಗೆಗಳೆಂಬ ಮಡಕೆಗಳನ್ನು ಸುಡಲು ಆವಿಗೆಯನ್ನು ಹಾಕುವಿರಿ…ನಿಮ್ಮಲ್ಲಿ ನಾವು ಬೇರೆಯೇ…ನಿಮ್ಮಂತೆಯೇ ನಾವು ಹಗೆಯ ನಾಶವನ್ನೇ ಕುರಿತು ಚಿಂತಿಸುತ್ತಿದ್ದೇವೆ. ಮಗನೇ, ಇದರಿಂದ ನಿನಗೆ ರಾಜ್ಯದ ಸಿರಿಸಂಪದ ದೊರೆಯುತ್ತದೆ ಎನ್ನುವುದಾದರೆ ಮುನ್ನುಗ್ಗಿ ಮಾಡುವುದು…ಪಾಂಡವರು ಯಾವ ರೀತಿಯಲ್ಲಿ ಸಾಯುತ್ತಾರೆ…ಆ ಬಗೆಯನ್ನು ನೀನು ಹೇಳು…ನಮಗೆ ಆನಂದವಾಗುತ್ತದೆ” ಎಂದು ಹೇಳಿದನು.
ಆಗ ದುರ‍್ಯೋದನನು, ಹಸ್ತಿನಾವತಿಯ ರಾಜನಾದ ದ್ರುತರಾಶ್ಟ್ರನು ಈ ಸಂಚಿನಲ್ಲಿ ಮಾಡಬೇಕಾದ ಕೆಲಸವನ್ನು ಹೇಳತೊಡಗಿದನು. “ಪಾಂಡವರನ್ನು ಕರೆಸಿ, ಈ ರಾಜ್ಯವನ್ನು ಪಾಲು ಮಾಡಿ, ಅವರನ್ನು ಅದಕ್ಕೆ ಒಡೆಯರನ್ನಾಗಿ ಮಾಡು. ದಾಯಾದಿಗಳಾದ ಅವರಿಗೆ ವಾರಣಾವತಿಯ ಪಟ್ಟಣದಲ್ಲಿ ನೆಲೆಸುವಂತೆ ಗೊತ್ತುಪಡಿಸಿ…ಆನೆ, ಕುದುರೆ ಪದಾತಿ ಸೇನೆಯೊಡನೆ ಬೊಕ್ಕಸದಿಂದ ಒಡವೆ ವಸ್ತುಗಳನ್ನು ನೀಡು. ಅವರು ಅಲ್ಲಿ ಹೋಗಿ ನೆಲೆಸಿದ ನಂತರ, ತಾನು ಅವರನ್ನು ಅರಗಿನಮನೆಯಲ್ಲಿ ಸುಡುವೆನು” ಎಂದು ದುರ‍್ಯೋದನನು ಹೇಳಿದನು
ಮಗನ ಮಾತಿನಿಂದ ಆನಂದಗೊಂಡು ದ್ರುತರಾಶ್ಟ್ರನು-
“ಅಹುದು ಮಗನೇ, ನಿನ್ನ ಆಲೋಚನೆಯು ನನಗೆ ಒಪ್ಪಿಗೆಯಾಗಿದೆ. ನಮ್ಮ ಪಾಲಿಗೆ ಆ ಬೀಶ್ಮ ಮತ್ತು ವಿದುರರು ಒಳ್ಳೆಯವರಲ್ಲ. ನಮ್ಮ ಈ ಕೆಲಸ ಈಡೇರದಿದ್ದರೆ, ಮುಂದೆ ಬಹಳ ತೊಂದರೆಯಾಗುತ್ತದೆ. ಗುಟ್ಟಾದ ರೀತಿಯಲ್ಲಿ ಹಗೆಗಳನ್ನು ಸುಟ್ಟು ನಾಶಪಡಿಸುವುದನ್ನು ಬಹು ಎಚ್ಚರದಿಂದ ಮಾಡಿ ಯಶಸ್ಸನ್ನು ಪಡೆಯುವುದು” ಎಂದು ದ್ರುತರಾಶ್ಟ್ರನು ದುರ‍್ಯೋದನನಿಗೆ ಆದೇಶವನ್ನು ನೀಡಿದನು.
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು