ಕುಮಾರವ್ಯಾಸ ಬಾರತ ಓದು-ಆದಿಪರ್ವ-ಅರಗಿನ ಮನೆಯನ್ನು ಕಟ್ಟುವುದು-ನೋಟ-20
ಪ್ರಸಂಗ-20
ಅರಗಿನ ಮನೆಯನ್ನು ಕಟ್ಟುವುದು
( ಆದಿಪರ್ವ: ಎಂಟನೆಯ ಸಂದಿ: ಪದ್ಯ 66 ರಿಂದ 70 )
ದುರ್ಯೋದನ: ಹಸ್ತಿನಾವತಿಯ ರಾಜನಾದ ದ್ರುತರಾಶ್ಟ್ರ ಮತ್ತು ಗಾಂದಾರಿಯ ಮಗ
ಪುರೋಚನ: ದುರ್ಯೋದನನ ಆಪ್ತ ಮಂತ್ರಿ.
*** ಅರಗಿನ ಮನೆಯನ್ನು ಕಟ್ಟುವುದು ***
ಜನಕನನು ಬೀಳ್ಕೊಂಡು ಕೌರವ ಜನಪ…ತನ್ನ ಅರಮನೆಯ ಸಚಿವರೊಳು ಅನುಪಮಿತ ವಿಶ್ವಾಸ ಸೂಚಕನನು ಪುರೋಚನನ ನೆನೆದ…ರೌರವ ರಾಜಕಾರ್ಯದ ಘನವನ ಅರುಹಿ…ಸಮಗ್ರ ಧನ ಸಾಧನವ ಜೋಡಿಸಿಕೊಟ್ಟು…ಅವನ ಗುಪ್ತದಲಿ ಕಳುಹಿದನು.
ಆ ಪುರೋಚನನು ಎಂಬುವನು ಬಲು ಪಾಪಕರ್ಮನು…ಕುರುಪತಿಗೆ ಬಳಿಕ…ಆ ಪುರಾಂತರದಿಂದ ವಾರಣಾವತಿಗೆ ಬಂದನು…ಆ ಪುರದ ಜನವು ಅರಿಯದಂತಿರೆ…ಕಾಪುರುಷನು ನಸುದೀಪ ತಾಗಿದೊಡೆ ಏಕರೂಪಹ ರಾಜಭವನವನು ಅಳವಡಿಸಿದನು…ಕೇಡಿಗನು ಹಗಲು ತೀರಲು…ತಳಿತ ಕೈ ದೀವಿಗೆಯ ಹಂತಿಯ ಬೆಡಗಿನಲಿ…ರಾಶಿಗ್ರಹ ಬಲದ ಆಯವ್ಯಯದ ತಾರಾದಿಗಳ ವಿಪರೀತ ಯೋಗದಲಿ…ನಿಗಮ ಸಂಸ್ಥಿತ ವಾಸ್ತುರಚನಾದಿಗಳನು…ಕೃತ್ರಿಮ ರಚನೆಯಲಿ ಅರಮನೆಯ ಮಾಡಿಸಿದನು…ಭಿತ್ತಿಗಳ ಅರಗಿನಲಿ…ನೆಲೆಯುಪ್ಪರಿಗೆಗಳನು ನವ ಸಜ್ಜರಸ ಗುಡ ಮಿಶ್ರದಲಿ… ಕವಾಟ ಸ್ತಂಭ ವೇದಿಗಳ ಅವರಲಿ ವಿರಚಿಸಿದ…ನವ ಸೌಧ ಭದ್ರಾಸ್ತರಣ ನಂದ್ಯಾವರ್ತದಲಿ ಪರಿಪರಿಯ ಬಿನ್ನಾಣದೊಳು ಅರಗಿನ ಮನೆಯ ಮಾಡಿಸಿದ.
ಹಿರಿಯ ಭವನದ ಸುತ್ತುವಳಯದ ಮುರುಹಿನಲಿ…ಮನೆಮನೆಗಳಾ ಮಂದಿರ ನಿಕಾಯಕೆ ಒಂದು ಬಾಗಿಲು…ಆ ದ್ವಾರದೇಶದಲಿ ತನ್ನದು ಇರವು…ಬಾಗಿಲಿಕ್ಕಿದು ಹೊರಗೆ ಮುದ್ರಿಸಿ…ಕಿಚ್ಚ ಚುಚ್ಚುವ
ಪರುಠವಣೆಯಲಿ…ಖಳ ಪುರೋಚನನು ಅಂದು ನಿರ್ಮಿಸಿದ.
ಹೊಸಗನ್ನಡ ಗದ್ಯರೂಪ
ದ್ರತರಾಶ್ಟ್ರನನ್ನು ಬೀಳ್ಕೊಂಡು ದುರ್ಯೋದನನು ತನ್ನ ಅರಮನೆಯ ಮಂತ್ರಿಗಳಲ್ಲಿ ಆಪ್ತನಾಗಿದ್ದ ಪುರೋಚನ ಎಂಬುವನನ್ನು ನೆನೆಪಿಸಿಕೊಂಡು ಕರೆಸಿದನು. ತಾನು ಅಲೋಚಿಸಿರುವ ಅತಿಶಯವಾದ ರಾಜಕಾರ್ಯದ ಮಹತ್ವವನ್ನು ತಿಳಿಸಿ, ಆ ಕೆಲಸಕ್ಕೆ ಅಗತ್ಯವಾದ ಹಣಕಾಸನ್ನು ಸಂಪೂರ್ಣವಾಗಿ ಜೋಡಿಸಿಕೊಟ್ಟು ಅವನನ್ನು ಗುಟ್ಟಾಗಿ ವಾರಣಾವತಿ ನಗರಕ್ಕೆ ಕಳುಹಿಸಿದನು.
ಆ ಪುರೋಚನನು ಬಲು ದೊಡ್ಡ ಕೇಡಿ. ಕುರುಪತಿಯ ಆದೇಶದ ಪ್ರಕಾರ ಹಸ್ತಿನಾಪುರದಿಂದ ವಾರಣಾವತಿಗೆ ಬಂದನು. ಆ ಪಟ್ಟಣದ ಜನರಿಗೆ ತಿಳಿಯದಂತೆ, ಸ್ವಲ್ಪ ದೀಪ ತಾಕಿದರೂ ಸುಟ್ಟು ಬೂದಿಯಾಗುವಂತಹ ರಾಜಬವನವನ್ನು ಕಟ್ಟಿಸಲು ತೊಡಗಿದನು. ಹಗಲು ಮುಗಿದ ಮೇಲೆ ರಾತ್ರಿಯ ಕತ್ತಲೆಯಲ್ಲಿ ಸಾಲು ಕೈದೀಪಗಳ ಬೆಳಕಿನಲ್ಲಿ ಕೇಡಿಗನಾದ ಪುರೋಚನನು ಮೋಸದ ರಚನೆಯಲ್ಲಿ ಅರಮನೆಯನ್ನು ನಿರ್ಮಾಣ ಮಾಡಿಸಿದನು. ಶಾಸ್ತ್ರಾನುಸಾರವಾದ ವಾಸ್ತು ರಚನಾದಿಗಳನ್ನೂ, ತಾರಾಬಲ, ರಾಶಿಗ್ರಹಬಲಾದಿಗಳನ್ನೂ ನೋಡಿ ಕೆಟ್ಟ ಯೋಗದಲ್ಲಿ ಕಟ್ಟಡವನ್ನು ಪ್ರಾರಂಬಿಸಿದನು..
ಗೋಡೆಗಳನ್ನು ಅರಗಿನಲ್ಲಿ…ಮೇಲುಮಾಳಿಗೆಯ ಮನೆಯನ್ನು ಹೊಸದಾದ ರಾಳ ಮತ್ತು ಬೆಲ್ಲದ ಮಿಶ್ರಣದಲ್ಲಿ… ಬಾಗಿಲು, ಕಂಬ, ವೇದಿಕೆಗಳನ್ನು ಆ ವಸ್ತುಗಳಿಂದಲೇ ನಿರ್ಮಿಸಿದನು…ಹೊಸ ಅರಮನೆಯ ನೆಲೆಗಟ್ಟನ್ನು ಮತ್ತು ಅದಕ್ಕೆ ಅನುಗುಣವಾಗಿ ಮಂಡಲಾಕಾರದ ಕೊಟಡಿಗಳನ್ನು ರಚಿಸಿ, ಬಗೆಯ ಬಿನ್ನಾಣದಿಂದ ಕಂಗೊಳಿಸುವಂತೆ ಅರಗಿನ ಮನೆಯನ್ನು ಮಾಡಿಸಿದನು.
ಆ ದೊಡ್ಡ ಬವನದ ಸುತ್ತಮುತ್ತಲೂ ಮೂಲೆಗಳಲ್ಲಿ ಹಲವು ಮನೆಗಳನ್ನು…ಆ ಮನೆಗಳ ಸಮೂಹಕ್ಕೆ ಒಂದೇ ಬಾಗಿಲನ್ನು ಇಡಿಸಿ, ಹೊರಗಿನ ಆ ಮಹಾದ್ವಾರದ ಪ್ರದೇಶದಲ್ಲಿ ತನ್ನ ವಾಸದ ಮನೆಯನ್ನು ನಿರ್ಮಿಸಿ, ತಾನು ಇಚ್ಚಿಸಿದಾಗ ಬಾಗಿಲು ಹಾಕಿ…ಹೊರಗೆ ಬೀಗಮುದ್ರೆ ಮಾಡಿ…ಬೆಂಕಿಯಿಂದ ಸುಡುವ ಸಿದ್ದತೆಯಲ್ಲಿ …ನೀಚನಾದ ಪುರೋಚನನು ಅರಗಿನ ಮನೆಯನ್ನು ಕಟ್ಟಿಸಿದನು.
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು