ಕುಮಾರವ್ಯಾಸ ಬಾರತ ಓದು-ಆದಿಪರ‍್ವ-ದ್ರುತರಾಶ್ಟ್ರನ ನಯವಂಚನೆ-ನೋಟ-21

ಸಿ. ಪಿ. ನಾಗರಾಜ.

ಪ್ರಸಂಗ-21
ದ್ರುತರಾಶ್ಟ್ರನ ನಯವಂಚನೆ
(ಆದಿಪರ‍್ವ: ಎಂಟನೆಯ ಸಂದಿ: ಪದ್ಯ 71ರಿಂದ 81)

ಪಾತ್ರಗಳು:

ದ್ರುತರಾಶ್ಟ್ರ: ಹಸ್ತಿನಾವತಿಯ ರಾಜ
ದರ‍್ಮರಾಯ: ಪಾಂಡು ಮತ್ತು ಕುಂತಿಯ ಮಗ
ಬೀಶ್ಮ: ಶಂತನು ಮತ್ತು ಗಂಗಾದೇವಿಯ ಮಗ
ವಿದುರ: ವ್ಯಾಸ ಮತ್ತು ದಾಸಿಯ ಮಗ
ದ್ರೋಣ: ಕೌರವರು ಮತ್ತು ಪಾಂಡವರು ವಿದ್ಯಾಗುರು
ಪುರಜನ: ಹಸ್ತಿನಾವತಿಯ ಪ್ರಜೆಗಳು

*** ಧೃತರಾಷ್ಟ್ರನ ನಯವಂಚನೆ ***

ಧರಣಿಪತಿ ಕೇಳು, ಇತ್ತ ಹಸ್ತಿನಪುರದೊಳಗೆ ಕುಂತೀ ಕುಮಾರರ ಕರೆಸಿ…ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ ಬೆರಗು ಬಿನ್ನಾಣದಲಿ ಮಕ್ಕಳ ಮರುಳು ಮಾಡಿದನು…ಏನ ಹೇಳುವೆನು…ಉರಿವನೆಯ ಬೀಡಾರದಲಿ ಬಿಡಿಸಲ್ಕೆ ಮನದಂದ.

ಧೃತರಾಷ್ಟ್ರ: ಈ ಕೌರವರು ದುರುಳರು…ನೀವು ಅತಿ ಗರುವರು…ಅವದಿರು ಪಾಪಕರ್ಮರು…ನೀವು
ಪರಮಪುಣ್ಯರು…ತನ್ನವದಿರು ಕುಮಂತ್ರಿಗಳು…ಅರಸ, ನಿನ್ನೊಡನೆ ಎನ್ನ
ಕುನ್ನಿಗಳು…ಎರಳೆ ತೋಳನ…ಸಾದು ಸುಣ್ಣದ ನೆರವಿಗೆ ಅದುವು…ಆ ಬಗೆಯ
ಸೇರುವೆ…
(ಎನುತ ಬಿಸುಸುಯ್ದ…ಮತ್ತೆ ಮಾತನ್ನು ಮುಂದುವರಿಸುತ್ತ…)

ಧೃತರಾಷ್ಟ್ರ: ಮಗನೆ ಕೇಳು, ತಂದೆಯಿಲ್ಲದ ನಿಮಗೆ ಹಿತರು ಆರೆಂದು ಮರುಗುವೆನು…ಎನ್ನ ಮಕ್ಕಳು
ಕೊಂದು ಹಿಂಡೆಯ ಕೂಳನು ಉಂಬರೆ ಹೇಸುವವರಲ್ಲ…ಇಂದು ನಿಮಗೆ ಅವರಿಂದಲು
ಉಪಹತಿ ಬಂದುದಾದರೆ…ತನ್ನ ತಲೆಯಲಿ ಅಕೀರ್ತಿ ಕಿಲ್ಬಿಷ ನಿಂದು ಹೊರುವುದು…
ತಾತ, ನೀವು ಕೆಡುವಿರಿ…ತನಗೆ ಅಖ್ಯಾತಿ… ಕೌರವರು ಎಂಬುವರು
ದುರ್ನೀತಿಕಾರರರು…ಭೀಷ್ಮ ವಿದುರರು ಅವದಿರಿಗೆ ಭೀತರು…ನೀತಿ ಸಮ್ಮತವಾಗಿ
ಚಿತ್ತದೊಳಾತ ಮತವನು ನಮ್ಮೊಳು ಹೇಳಿ…ಭೀತಿ ಬೇಡ.
(ಎಂದು ಅರಸ…ಧರ್ಮಜನ ಕರವ ಹಿಡಿದನು.)

ಧರ್ಮರಾಯ: ಬೇರೆ ಮತವು ಎಮಗೇನು… ನಿಮ್ಮದು ಬೊಪ್ಪನ ಚಾರಿ…ನೀವು ಬೊಪ್ಪನ ನೂರು ಮಡಿ
ಒಳ್ಳಿದರು…ಎಮಗೆ ಬೇರಿನ್ನು ಹಿತರುಂಟೆ. ಬೇರೆ ಇರಿಸಿ…ಕೂಡಿ ಇರಿಸಿ…ನಿಮಗೆಯು
ತೋರಿದುದೆ ಮತ…ನಿಮ್ಮ ನೇಮವ ಮೀರಬಲ್ಲನೆ.
(ಎಂದು ಧರ್ಮಜ…ಅರಸಂಗೆ ನುಡಿದನು. ಎರೆಯ ವಂಕಿಯೊ…ಕಳಿತ
ಮೆಕ್ಕೆಯೊ…ಹುರಿಯ ಬಲೆಯೋ…ರಾಗ ಸನ್ನೆಯೊ…ಸರಿಯ ಗೊರೆಯೋ…ಠಕ್ಕಿನ
ಉಂಡೆಯೊ…ಸವಿಯ ಚಿತ್ರಕವೊ…ಅರಸನ ಅಂಕೆಯ ಮನದ ಬಯಕೆಯ ಹೊರೆಯ
ಬಳಕೆಯನು ಈ ಸಮಂಜಸ ತರದ ಸಾತ್ವಿಕರು ಎತ್ತಬಲ್ಲರು ಭೂಪ ಕೇಳೆಂದ.)

ಧೃತರಾಷ್ಟ್ರ: ಕಂದ, ಮನ ಮುನಿಸಿಲ್ಲಲೇ…ನಾವು ಎಂದ ನುಡಿಗೆ ಒಡಂಬಡುವಿರಾದೊಡೆ…ಮುಂದೆ
ವಾರಣಾವತ ಪುರವಿದೆ…ಇಲ್ಲಿಗೆ ಅರುವತ್ತು ಸಂದ ನಾಡು…ಸಮಸ್ತ ವಸ್ತುಗಳಿಂದ
ಪೂರಿತ ಹಸ್ತಿನಾಪುರದಿಂದ ಮಿಗಿಲು…ಅದು ನಿಮಗೆ ರಾಜಧಾನಿ ಸ್ಥಾನ.
(ಎಂದ)

ಧರ್ಮರಾಯ: ಹೈ…ಹಸಾದ…ಭವತ್ ಕೃಪಾ ಸನ್ನಾಹವೇ ಸಾಮ್ರಾಜ್ಯ…ಆವುದನು ಊಹಿಸಿದೊಡೆ
ಆ ಸ್ಥಿತಿಯೊಳಗೆ ವಿನಯದಲಿ ಅಡಗಿಹೆವು.
(ಎಂದು ಗಾಹುಗತಕವನು ಅರಿಯದೆ… ಇವರು ಉತ್ಸಾಹದಲಿ ಕೈಕೊಂಡು…ಭೀಷ್ಮಗೆ
ಬೇಹ ವಿದುರ ದ್ರೋಣಮುಖ್ಯರಿಗೆ ಹದನ ಅರುಹಿದರು…ಧಾರುಣೀಪತಿ ರತ್ನಮಯ
ಭಂಡಾರ ಸಹಿತ ಗಜ ಅಶ್ವ ರಥ ಪರಿವಾರವನು ಹಸಿಗೆಯನು ಮಾಡಿದನು…ಎರಡು
ಭಾಗವನು ಬಹು ವಿಸ್ತಾರದಲಿ ಓರಣದಲಿ ಅಳವಡಿಸಿ…)

ಧೃತರಾಷ್ಟ್ರ: ಕೌರವರಿಗೆ ಒಂದು..ಇವರಿಗೆ ಒಂದು.
(ಎನಲು)
ಭೀಷ್ಮಾದ್ಯರು: ಅಹುದು.
(ಎನಲು…ಇವರ ಮನ್ನಿಸಿದ…ಇವರು ಶುಭದಿನ ಶುಭ ಮುಹೂರ್ತ ಪ್ರವರದಲಿ
ಹೊರವಂಟರು…ಆ ಜನ ನಿವಹ ಮರುಗಿತು.)

ಪುರಜನ: ಅರಸ, ನಮಗೆ ಅರಣ್ಯವೇ ಗತಿ.
(ಎಂದು ಅವರ ಕಳುಹುತ ಬಂದರು…ಆ ಕೌರವರು ನಿಂದರು…ಭೀಷ್ಮ ಕಲಶೋದ್ಭವರು
ಸುತರಿಗೆ ಬುದ್ಧಿ ಹೇಳಿದು ಪುರಕೆ ಮರಳಿದರು…ವಿದುರನು ಒಡನೆ ಐತರುತ
ಸಂಕೇತದಲಿ ಸೂಚಿಸಿ ಮರಳಿದನು…ನೃಪ ಸುದತಿ ವರ ಗಾಂಧಾರಿ ಮೊದಲಾದ ಅಖಿಳ
ರಾಣಿಯರು ಮುದದ ಮುರುವಿನಲಿ ಇವರ ತೆಗೆದಪ್ಪಿದರು…ಭೂಪತಿ ಸಹಿತ ಕಡು
ಶೋಕದಲಿ ಕಳುಹಿಸಿಕೊಂಡು ಹಸ್ತಿನಾಪುರಕೆ ಬಂದರು.)

ಹೊಸಗನ್ನಡ ಗದ್ಯ ರೂಪ

“ಜನಮೇಜಯ ರಾಜನೇ ಕೇಳು” ಎಂದು ವೈಶಂಪಾಯನ ಮುನಿಯು ಅಂದು ಹಸ್ತಿನಾವತಿಯಲ್ಲಿ ನಡೆದ ಸಂಗತಿಯನ್ನು ಹೇಳಲು ತೊಡಗಿದನು.

ಇತ್ತ ಕಡೆ ದ್ರುತರಾಶ್ಟ್ರನು ಹಸ್ತಿನಾಪುರಕ್ಕೆ ಪಾಂಡವರನ್ನು ಕರೆಸಿಕೊಂಡು, ಬಹಳ ಗುಟ್ಟಾಗಿ ಏಕಾಂತದಲ್ಲಿ ಜಾಣ್ಮೆಯಿಂದ ಅವರನ್ನು ಮರುಳು ಮಾಡಿದನು. ದ್ರುತರಾಶ್ಟ್ರನ ಕಪಟತನವನ್ನು ಏನೆಂದು ಹೇಳುವೆನು…ಪಾಂಡವರನ್ನು ಉರಿಮನೆಯ ಬಿಡಾರದಲ್ಲಿ ನೆಲೆಸುವಂತೆ ಒಲಿಸಿದನು.

ದ್ರುತರಾಶ್ಟ್ರನು ಪಾಂಡವರನ್ನು ಕುರಿತು “ಈ ಕೌರವರು ದುರುಳರು…ನೀವು ಬಹಳ ಉತ್ತಮರು. ಅವರು ಪಾಪಕರ‍್ಮಿಗಳು…ನೀವು ಪರಮ ಪುಣ್ಯವಂತರು…ನನ್ನ ಮಕ್ಕಳು ಕೆಟ್ಟ ಮನಸ್ಸಿನವರು…ದರ‍್ಮರಾಯನೇ, ನಿನ್ನ ಜತೆ ಹೋಲಿಸದರೆ ನನ್ನ ಮಕ್ಕಳು ನಾಯಿಮರಿಗಳು…ಜಿಂಕೆಯು ತೋಳನ ಜತೆ ಒಡನಾಡುವಂತೆ…ಸುವಾಸನೆಯಿಂದ ಕೂಡಿದ ಲೇಪನವನ್ನು ಸುಣ್ಣದೊಂದಿಗೆ ಬೆರೆಸಿದಂತೆ…ನೀವು ಮತ್ತು ಅವರು ಒಂದೆಡೆ ಇರುವುದು ಕೇಡಿಗೆ ಮೂಲವಾಗುತ್ತದೆ” ಎಂದು ನುಡಿಯುತ್ತ ದ್ರುತರಾಶ್ಟ್ರನು ನಿಟ್ಟುಸಿರನ್ನು ಬಿಟ್ಟನು.

“ಮಗನೇ ದರ‍್ಮರಾಯ ಕೇಳು, ತಂದೆಯಿಲ್ಲದ ನಿಮಗೆ ಹಿತರು ಯಾರೆಂದು ಮರುಗುತ್ತಿದ್ದೇನೆ. ನನ್ನ ಮಕ್ಕಳು ನಿಮ್ಮನ್ನು ಕೊಂದು ಹಿಂಡೆಯ ಕೂಳನ್ನು ತಿನ್ನುವುದಕ್ಕೂ ಹೇಸುವವರಲ್ಲ…ಈಗ ನಿಮಗೆ ಅವರಿಂದ ಏನಾದರೂ ಕೇಡಾದರೆ, ಅದರ ಕೆಟ್ಟ ಹೆಸರು ನನ್ನ ತಲೆಗೆ ಬರುತ್ತದೆ. ಅಪ್ಪ ದರ‍್ಮರಾಯ, ನೀವು ನಾಶವಾಗುತ್ತೀರಿ…ನನಗೆ ಕೆಟ್ಟ ಹೆಸರು ಬರುತ್ತದೆ. ಕೌರವರು ಎನ್ನುವ ಇವರು ಬಹಳ ಕೆಟ್ಟ ನಡೆನುಡಿಯುಳ್ಳವರು. ಬೀಶ್ಮ ವಿದುರರಂತಹ ಹಿರಿಯರೇ ಅವರಿಗೆ ಹೆದರುತ್ತಾರೆ. ಇದನ್ನೆಲ್ಲಾ ನೋಡಿರುವ ಮತ್ತು ಕೇಳಿರುವ ನಿಮ್ಮ ಮನಸ್ಸಿಗೆ ಯಾವುದು ನೀತಿ ಸಮ್ಮತವೆಂದು ಅನ್ನಿಸುತ್ತದೆಯೋ, ಅದನ್ನು ನನ್ನೊಡನೆ ಹೇಳಿ…ಹಿಂಜರಿಯಬೇಡಿ” ಎಂದು ಹೇಳುತ್ತ ದ್ರುತರಾಶ್ಟ್ರನು ದರ‍್ಮರಾಯನ ಕಯ್ಗಳನ್ನು ಹಿಡಿದುಕೊಂಡನು.

“ಬೇರೆ ವಿಚಾರ ನಮ್ಮ ಮನದಲ್ಲಿಲ್ಲ. ನೀವು ನಮ್ಮ ತಂದೆಯ ನಡವಳಿಕೆಯನ್ನು ಹೊಂದಿದ್ದೀರಿ. ನೀವು ನಮ್ಮ ತಂದೆಗಿಂತಲೂ ನೂರು ಪಟ್ಟು ಒಳ್ಳೆಯವರು. ನಮಗೆ ನಿಮಗಿಂತಲೂ ಹಿತವಂತರು ಯಾರಿದ್ದಾರೆ. ಕೌರವರು ಮತ್ತು ಪಾಂಡವರಾದ ನಮ್ಮನ್ನು ಬೇರೆ ಇರಿಸಿ ಇಲ್ಲವೇ ಜತೆಯಲ್ಲಿಯೇ ಇರಿಸಿ. ನಿಮಗೆ ಯಾವುದು ಸರಿಯೆಂದು ಕಂಡುಬರುತ್ತದೆಯೋ ಅದು ನಮಗೆ ಒಪ್ಪಿಗೆ. ನಿಮ್ಮ ಕಟ್ಟಳೆಯನ್ನು ಮೀರುತ್ತೇನೆಯೇ” ಎಂದು ದರ‍್ಮರಾಯನು ದ್ರುತರಾಶ್ಟ್ರನಿಗೆ ಹೇಳಿದನು.

ಆ ಸಮಯದಲ್ಲಿ ದ್ರುತರಾಶ್ಟ್ರನ ಮನದ ಕಪಟತನದ ಬಗೆಯನ್ನು ಈ ಮುಂದಿನ ರೂಪಕಗಳು ಚಿತ್ರಿಸುತ್ತಿವೆ. ಮೀನು ಹಿಡಿಯಲು ಎರೆಹುಳುವನ್ನು ಸಿಕ್ಕಿಸಿದ ಗಾಳವೋ…ನಂಜಿನಿಂದ ಕೂಡಿದ ಮೆಕ್ಕೆಯ ಬಳ್ಳಿಯೋ…ಹುರಿಯಿಂದ ಹೊಸೆದ ಬಲೆಯೋ…ಬೇಟೆಯ ಪ್ರಾಣಿಯನ್ನು ಹಿಡಿಯಲು ಮಾಡಿದ ರಾಗದ ಸನ್ನೆಯೋ…ಜಾರುವ ಕೆಸರಿನ ನೆಲೆಯೋ…ನಂಜಿನ ಉಂಡೆಯೋ…ವಶೀಕರಣದ ತಿಲಕವೋ ಎನ್ನುವಂತೆ ನಯವಂಚಕನಾಗಿದ್ದ ದ್ರುತರಾಶ್ಟ್ರನ ಮನದ ಬಯಕೆಯನ್ನು ಒಳ್ಳೆಯತನ ನಡೆನುಡಿಯುಳ್ಳ ಈ ಪಾಂಡವರು ಹೇಗೆ ತಾನೆ ಬಲ್ಲರು ಎಂದು ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ಹೇಳಿದನು.

ದ್ರುತರಾಶ್ಟ್ರನು ದರ‍್ಮರಾಯನ್ನು ಕುರಿತು “ಕಂದ ದರ‍್ಮರಾಯನೇ, ಮನದಲ್ಲಿ ಕೋಪತಾಪವಿಲ್ಲವೇ…ನಾವು ಹೇಳುವ ಮಾತನ್ನು ನೀವು ಒಪ್ಪುವುದಾದರೆ, ನಮ್ಮ ರಾಜ್ಯದಲ್ಲಿ ವಾರಣಾವತಪುರವೆಂಬ ಒಂದು ಪಟ್ಟಣವಿದೆ. ಇಲ್ಲಿಗೆ ಅರವತ್ತು ಹರಿದಾರಿಯ ದೂರದಲ್ಲಿರುವ ಆ ನಾಡು ಸಮಸ್ತ ವಸ್ತುಗಳಿಂದ ಕೂಡಿ ಕೂಡಿ, ಹಸ್ತಿನಾವತಿಯ ಸಿರಿಸಂಪದಕ್ಕಿಂತಲೂ ಮಿಗಿಲಾಗಿದೆ. ಇನ್ನು ಮುಂದೆ ಅದು ನಿಮ್ಮ ರಾಜದಾನಿ” ಎಂದು ನುಡಿದನು.

ದರ‍್ಮರಾಯನು ದ್ರುತರಾಶ್ಟ್ರನ ಕಪಟತನವನ್ನು ಅರಿಯದೆ “ಮಹಾ ಪ್ರಸಾದ. ನಿಮ್ಮ ಅನುಗ್ರಹವೇ ನಮಗೆ ಸಾಮ್ರಾಜ್ಯ.ನೀವು ಹೇಳಿರುವುದನ್ನು ನಾವು ವಿನಯದಿಂದ ತಲೆಬಾಗಿ ಒಪ್ಪಿಕೊಂಡು ನಡೆಯುತ್ತೇವೆ” ಎಂದು ಅವನ ಮಾತನ್ನು ಉತ್ಸಾಹದಲ್ಲಿ ಕಯ್ಗೊಂಡು, ಹಿರಿಯರಾದ ಬೀಶ್ಮರಿಗೆ, ಆತ್ಮೀಯನಾದ ವಿದುರನಿಗೆ, ಗುರುಗಳಾದ ದ್ರೋಣರಿಗೆ ಈ ವಿಚಾರವನ್ನು ತಿಳಿಸಿದರು.

ರಾಜನಾದ ದ್ರುತರಾಶ್ಟ್ರನು ರತ್ನದಿಂದ ಕೂಡಿದ ಸಮಸ್ತ ಒಡವೆ ವಸ್ತುಗಳೊಡನೆ ಆನೆ-ಕುದುರೆ-ತೇರು-ಸೇನಾಬಲವನ್ನು ಅಚ್ಚುಕಟ್ಟಾಗಿ ಎರಡು ಪಾಲು ಮಾಡಿ “ಕೌರವರಿಗೆ ಒಂದು ಪಾಲು…ಪಾಂಡವರಿಗೆ ಒಂದು ಪಾಲು” ಎಂದು ಕಟ್ಟಳೆ ಮಾಡಿದನು. ಬೀಶ್ಮನು ಪಾಲನ್ನು ನೋಡಿ “ಅಹುದು…ಸರಿಯಾಗಿದೆ ” ಎಂದು ಮೆಚ್ಚುಗೆಯನ್ನು ಸೂಚಿಸಿದ.

ಪಾಂಡವರು ಒಳ್ಳೆಯ ದಿನ ಒಳ್ಳೆಯ ಮುಹೂರ‍್ತದಲ್ಲಿ ಹಸ್ತಿನಾವತಿಯಿಂದ ವಾರಣಾವತದ ಕಡೆಗೆ ಹೊರಟರು.ಹಸ್ತಿನಾವತಿಯ ಜನಸಮೂಹ ಮರುಗಿತು. “ದರ‍್ಮರಾಯನೇ, ನಮಗೆ ಇನ್ನು ಅರಣ್ಯವೇ ಗತಿ” ಎಂದು ಕಳವಳಿಸುತ್ತ, ಪಾಂಡವರನ್ನು ಕಳುಹಿಸಲೆಂದು ಜತೆಯಲ್ಲಿಯೇ ಬಂದರು.ಸ್ವಲ್ಪ ದೂರ ಬರುತ್ತಿದ್ದಂತೆಯೇ ಕೌರವರು ನಿಂತುಕೊಂಡರು. ಬೀಶ್ಮ ಮತ್ತು ದ್ರೋಣರು ಪಾಂಡವರಿಗೆ ತಿಳುವಳಿಕೆಯನ್ನು ಹೇಳಿ ಹಸ್ತಿನಾವತಿಗೆ ಹಿಂತಿರುಗಿದರು,

ವಿದುರನು ಇನ್ನು ಸ್ವಲ್ಪ ದೂರ ಅವರೊಡನೆ ಬಂದು, ಮುಂದೆ ಬರಲಿರುವ ಆಪತ್ತಿನ ಬಗ್ಗೆ ಸೂಚನೆಯನ್ನು ನೀಡಿ ಹಿಂತಿರುಗಿದನು. ದ್ರುತರಾಶ್ಟ್ರ ಮತ್ತು ಗಾಂದಾರಿ ಹಾಗೂ ಮತ್ತಿತರ ರಾಣಿವಾಸದವರು ಅಗಲಿಕೆಯ ಸಂಕಟದಲ್ಲಿ ಪಾಂಡವರನ್ನು ಅಪ್ಪಿಕೊಂಡರು. ರಾಜನ ಸಮೇತ ಎಲ್ಲರೂ ಕಡುಶೋಕದಿಂದ ಪಾಂಡವರನ್ನು ವಾರಣಾವತದತ್ತ ಕಳುಹಿಸಿ, ಹಸ್ತಿನಾಪುರಕ್ಕೆ ಬಂದರು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *