ಕುಮಾರವ್ಯಾಸ ಬಾರತ ಓದು-ಆದಿ ಪರ‍್ವ-ಹಿಡಿಂಬಿಯ ಪ್ರಸಂಗ-23
ಪ್ರಸಂಗ-23
ಹಿಡಿಂಬಿಯ ಪ್ರಸಂಗ
(ಆದಿ ಪರ‍್ವ: ಎಂಟನೆಯ ಸಂದಿ: 92, 93, 94 ಪದ್ಯಗಳು ಮತ್ತು ಒಂಬತ್ತನೆಯ ಸಂದಿ: ಪದ್ಯ 1 ರಿಂದ 25)
ಪಾತ್ರಗಳು:
ಪಾಂಡವರು: ದರ‍್ಮರಾಯ-ಬೀಮ-ಅರ‍್ಜುನ-ನಕುಲ-ಸಹದೇವ.
ಕುಂತಿ: ಪಾಂಡವರ ತಾಯಿ.
ಹಿಡಿಂಬ: ಕಾಡಿನಲ್ಲಿದ್ದ ರಕ್ಕಸ ಬುಡಕಟ್ಟಿನ ವ್ಯಕ್ತಿ.
ಹಿಡಿಂಬಿ: ಹಿಡಿಂಬನ ತಂಗಿ.
ವ್ಯಾಸ: ಪರಾಶರ ಮುನಿ ಮತ್ತು ಮತ್ಸ್ಯಗಂದಿಯ ಮಗ
*** ಹಿಡಿಂಬೆಯ ಪ್ರಸಂಗ ***
ಇತ್ತಲು ಇಂದುಕುಲಸಂಭವರ ವಿಧಿಯನು ಮತ್ತೆ ಕೇಳೆಂದ…ಬಿಲಮುಖದೊಳು ಉತ್ತರಿಸಿ… ಬಲುಗತ್ತಲೆಯೊಳು…ಅಡವಿಯ ಮಾರ್ಗದಲಿ…ಕಲು ಮುಳುಗಳೊಳು…ಕಾಪಥಕೆ ಕೋಮಲ ಚರಣಗಳ ಕೊಡುತ ತೊಳಲಿದರು…ಬೆಳಗಾಗೆ ಹಳ್ಳಿಯ ಬಳಿಯ ಹೊದ್ದದೆ…ಹಳುವವನು ಹಾಯ್ದು ಹೊಕ್ಕರು. ಬೆಳಗು ಅಡಗೆ…ಹಲವು ಯೋಜನವ ನಡೆದರು…ಗಂಗೆಯನು ದಾಟಿದರು.
ಪಾಂಡವರು: ರಾಯನ ಮಾಟದಲಿ ಹಲು ಮುರಿದುದೇ…ನಮ್ಮಾಟಕೆ ಇದು ಹಿರಿದಲ್ಲಲಾ.
(ಎನುತ ಐವರು…ಅಡಿಗಡಿಗೆ ಕೋಟಲೆಯ ಕೊಲ್ಲಣಿಗೆಯಲಿ ಮೈನೋಟಕೆ ಅಲಸದೆ…ಬಿಸಿಲಲಿ ಇವರು
ಮಹಾಟವಿಯ ಮಧ್ಯವನು ಹೊಕ್ಕರು…ಕೇಳು ಜನಮೇಜಯ ಧರಿತ್ರೀಪಾಲ, ಯಮನಂದನನ ಪಾರ್ಥನ
ಕಾಲೊಡೆದು ಬಸಿವ ಅರುಣಜಲದಲಿ ಬಟ್ಟೆ ಕೆಸರಾಯ್ತು…ಮೇಲೆ ಯಮಳರ ಕುಂತಿಯರನು
ಏವೇಳುವೆನು…)
ನಕುಲ/ಸಹದೇವ/ಕುಂತಿ: ಬೇಗದಲಿ ಕುರು ಭೂಪಾಲ ಹಿಡಿಯಲಿ ಕೊಲಲಿ.
(ಎನುತ ಅಡವಿಯಲಿ ಕುಳ್ಳಿರ್ದರು.)
ಕುಂತಿ: ಉರಿಯ ಮನೆಯಲಿ ಸಾಯಲೀಯದೆ ಸೆರಗ ಹಿಡಿದು ಎಳತಂದು ಕೊರಳನು ಕೊಯ್ದನು…ಅಕಟಾ, ಭೀಮನೇ ಹಗೆ.
(ಎಂದಳಾ ಕುಂತಿ.)
ನಕುಲ/ಸಹದೇವ: ಅರಸ ಹಿಡಿಯಲಿ… ದಾನವರು ನಿಂದಿರಿಕೆಯಲಿ ನುಂಗಲಿ… ಧರೆಯೊಳು ಆವು ಕೃತಾರ್ಥರು.
(ಎಂದು ಮಾದ್ರೀಕುಮಾರಕರು ಒದರಿದರು.)
ಭೀಮ: ಹೋ…ಹೋ…ಸಾಕು ಸಾಕು…ಆನಿರಲು ಹೆಕ್ಕಳವೇಕೆ.
(ಎನುತ ಭೀಮನು ಒಡೆಹಾಯ್ದು ಒದೆದು…ಕಲು ಮರನ ನೂಕಿ… ಹೆಗಲೆರಡರಲಿ ಕುಂತಿಯ
ಧರ್ಮನಂದನನ ಹೊತ್ತನು….ಎಡದಲಿ ಆ ಕಿರೀಟಿಯನು…ಬಲದ ಬದಿಯೊಳಗೆ ಆ ಮಾದ್ರೀ ಕುಮಾರರ
ಔಕಿ ನಡೆದನು…ಈ ಪರಿ ಹೇರಡವಿಯಲಿ ಹಲವು ಯೋಜನದಿಂದ ಬಂದನು….ಬಳಲಿದೆನು ಎಂದನೇ…
ನೀರಡಿಸಿದನೆ… ಮೇಣ್… ನಿದ್ರೆಗೆ ಎಳಸಿದನೆ…ತಂದು ಕಾನನ ಮಧ್ಯದಲಿ ತರುವೃಂದದ ಅಡಿಯೊಳಗೆ
ಇಳುಹಿ… ಬಳಿಕ ಅರವಿಂದದ ಎಲೆಯಲಿ ನೀರ ತಂದು…ಮಹೀಶರಿಗೆ ಎರೆದನು…ತಳಿರ ತರಿದು
ಒಟ್ಟಿದನು…ತನು ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ…ತರುವಿನ ನೆಳಲೊಳಗೆ
ವಿಶ್ರಮಿಸಿದರು…ಝಳಕೆ ಕಂದಿದ ಮೈಯ… ಬಾಡಿದ ಲಲಿತವದನದ… ಮಾಸಿ ಕೆದರಿದ ತಲೆಯೊಳಿರೆ…
ತನ್ನೈವರನು ಕಂಡು ಭೀಮ ಅಳಲಿದನು.)
ಭೀಮ: ತಾಯೆ, ನೀ ದಿಟ ನಾಗ ನಗರಿಯ ರಾಯನ ಅರಸಿಯೆ…ನಿನ್ನ ಮಕ್ಕಳು ರಾಯರ ಎದೆದಲ್ಲಣರೆ… ಭಾರಿಯ
ಬಾಹುವಿಕ್ರಮರೆ…ಈ ಅವಸ್ಥೆಗೆ ಸೋಮವಂಶದ ರಾಯತನವು ಎಂತಹುದು…ಹೇಳೌ ತಾಯೆ ಹೇಳು…ಎನ್ನಾಣೆ ಹೇಳು.
(ಎಂದು ಭೀಮ ಅಳಲಿದನು…ಜನನಿಯ ಅಂಘ್ರಿಯನು ಒತ್ತಿ…ಯಮನಂದನನ ಚರಣವ ಮುರಿದು… ಬಳಿಕ
ಅರ್ಜುನನ ಯಮಳರ ಪದವನು ಎಚ್ಚರದಂತೆ ಹಿಡಿಕಿಸುತ…ಅನಿಬರ ಇರವನು ನೋಡಿ…ಪೂರ್ವವ ನೆನೆದು
ಬಿರಿಬಿರಿದು ಅಳುತ…ಘನ ಕಾನನದ ಮಧ್ಯದಲಿ ಈತನಿದ್ದನು ಹಿರಿದು ಚಿಂತಿಸುತ. ಬಲು ನಿದ್ರೆ
ಔಕುವುದು…ಕಣ್ಣೆವೆಗಳಲಿ ನಿದ್ರೆಯ ನೂಕುವನು…ನಸು ತೂಕಡಿಕೆ ತೋರಿದೊಡೆ ಕೈಯೊಡನೆ
ಸೋಕುವುದು…ಮೈಗೆದರುವನು… ಮೈಮರವೆ ಮರವೆಯನು ಓಕರಿಸುವುದು…ಬಳಿಕ ಕಲಿಭೀಮ ಚಿತ್ತವೃತ್ತಿ
ನಿರಾಕುಲ ಅಂತಃಕರಣನಾದನು.)
ಭೀಮ: ಎನ್ನ ಮರವೆಯಲಿ ವ್ಯಾಳ ಗಜ ಭೂದಾರ ವೃಕ ಶಾರ್ದೂಲ ಸಿಂಹಾದಿಗಳ ಭಯ ಆಕೀಳ ದೈತ್ಯಪ್ರಕರ ಭಯವಹುದು.
(ಧರಣಿಪತಿ ಕೇಳು…ವಿಶಾಲ ಮತಿಯು ನಿದ್ರಾವ್ಯಾಳ ವಿಷವನು ಮೊಗೆದು ಸೂಸಿ… ಅವಧಾನದಲಿ
ಐವರನು ಕಾದಿರ್ದನು….ಅದನು ಇನ್ನು ಹೇಳಲೇನು…ಇವರಿಗೆ ಒಂದು ಮಾರಿಯ ಮುರಿವನು…ತತ್
ವನಾಂತರದ ಅರಸು ದೈತ್ಯ ಹಿಡಿಂಬನೆಂಬವನು…ಅತುಲ ಭುಜಬಲನು.)
ಹಿಡಿಂಬ: (ತನ್ನಲ್ಲಿಯೇ)
ಮುರಿಮುರಿದು ಮೇಗಾಳಿಯಲಿ ಮೂಗರಳಿ ಮಾನವ ಗಂಧವಿದು ಗೋಚರಿಸಿತು… ಎತ್ತಣದೋ ಮಹಾದೇವ.
(ಎನುತ ಬೆರಗಾದ…ತನ್ನ ತಂಗಿ ಹಿಡಿಂಬೆಯನ್ನು ಕರೆದು…)
ತಾಯೆ ಬಾರೌ ತಂಗಿ…ಗಂಧದ ವಾಯುವಿದೆ ಹೊಣೆಗಾರನಾಗಿ…ಮನುಜ ಮಾಂಸದಲಿ ನವಾಯ
ಭೋಜನವಿಂದು ದೊರಕಿತು…ಸಾಯಲು ಅವದಿರ ಬಡಿದು ತಾ…ತಮಗೆ ಆಯವಿದು ಕೃತಪುಣ್ಯಫಲವು
(ಎನೆ…ಹಸಾದ ಎನುತ ಮಾಯಗಾತಿ ಹಿಡಿಂಬಿ ಗಮಿಸಿದಳು …ಅವಳು ಅತಿ ರೌದ್ರರೂಪಿನೊಳು
ಬಂದಳು…ದೂರದಲಿ ಹರಿ ನಂದನನ ಸುಳಿದಲೆಯ…ಕೆಮ್ಮೀಸೆಗಳ…ಕರ್ಕಶದ ಕೆಂದಳದ ಕೇಸರಿಯ
ಕಂಗಳ…ಕುಂದ ರದನ ಛವಿಯಲಿರೆ ಕಂಡಳು…ಅಂದು ಆ ಖಳನ ಅನುಜೆ ಸೋತಳು…
ಭೀಮಸೇನಂಗೆ ಮನಸಂದಳು.)
ಹಿಡಿಂಬಿ: (ತನ್ನಲ್ಲಿಯೇ)
ಇವನ ರಮಣನ ಮಾಡಿಕೊಂಡು ವಿಪಿನಾಂತರಕೆ ಓಡುವೆನು…ಅವನು ಮುನಿದು ಮರದಡಿಯಲ್ಲಿ ಮಲಗಿದರ
ಇವದಿರು ಐವರ ತಿನಲಿ…ಇವನು ತನ್ನಯ ರೌದ್ರಮಯ ರೂಪವನು ಕಂಡರೆ ಹೆದರುವನಲಾ…ಯುವತಿ ಅಹೆನು.
(ಎಂದು ಅಸುರೆ ದಿವ್ಯರೂಪಿನಲಿ ಸುಳಿದಳು…ಹೊಳೆವ ಕಂಗಳ ಕಾಂತಿ ಮರಗತ್ತಲೆಯ ಮೊತ್ತವ
ಬಿಗಿಯೆ…. ಕುಚದ ಭಾರಕೆ ನಡು ಬಳುಕೆ …ಬಿಡದೆ ಒಲೆದು ಮೇಲುದು ತಳಿಯೆ… ಸುಳಿಗುರುಳು
ಒಲೆಯಲು… ಮೈ ಪರಿಮಳಕೆ ತೂಳುವ ತುಂಬಿಗಳ ತನುಲತೆಯ ಚೆಲುವಿಕೆಯ ಆ ಲಲನೆ ಕಲಿಭೀಮನ
ಇದಿರಿನಲಿ ಸುಳಿದಳು…ಭೀಮ ನೋಡನು…ನುಡಿಸನು… ತಾಮರಸಮುಖಿ ಒಯ್ಯನೆ ಹೊದ್ದಿದಳು.)
ಹಿಡಿಂಬಿ: ನಿಸ್ಸೀಮನೈ…ನೀನಾರು…ಮಲಗಿದ ಮರ್ತ್ಯರು ಇವರಾರು…ಈ ಮಹಾರಣ್ಯದಲಿ ಕೋಮಲರಿಗೆ ಬರವಿದು ಕಾಮಿತವೆ.
(ಎನೆ…ನಿಷ್ಕಾಮ ಮನದಲಿ ಸತಿಯ ನುಡಿಸಿದನು.)
ಭೀಮ: ಆರು ನೀನು?
ಹಿಡಿಂಬಿ: ವನ ಹಿಡಿಂಬನದು…ತಾನು ಆ ಹಿಡಿಂಬಕನ ಅನುಜೆ ಹಿಡಿಂಬಿ… ಈ ಕಾನನವಿದು ಎಮ್ಮಾಶ್ರಮವು. ದಿವಿಜ…
ಮನುಜರಿಗೆ ಅಗಮ್ಯವು…ನಿನಗೆ ಕಾಮಿಸಿ ಬಂದೆನು…ಅಣ್ಣನು ಮುನಿದೊಡೆ ಅವದಿರ ತಿನಲಿ…ನೀನು ಏಳು…
ಎನಗೆ ವಲ್ಲಭನಾಗು ಹಿಮಾಚಲಕೆ ಕೊಂಡೊಯ್ವೆನು.
ಭೀಮ: ನಿನ್ನನು ಒಲ್ಲೆನು…ಮುನಿದೆಯಾದಡೆ ನಿನ್ನ ದೈತ್ಯನ ಕೊಂಡು ಬಾ ಹೋಗು… ನೀನು ಎನ್ನ ಬಲುಹನು ನೋಡು.
(ಎನಲು, ಅಸುರೆ ವಿನಯದಲಿ…)
ಹಿಡಿಂಬಿ: ಮುನ್ನಲೇ ಮನುಮಥನ ಶರದಲಿ ಖಿನ್ನೆಯಾಗಿಹೆ…ಮರೆಯ ಹೊಕ್ಕೆನು…ತನ್ನನು ಈಪರಿ ಮುರಿದು ನುಡಿವರೆ.
(ಎಂದಳು ಇಂದುಮುಖಿ…ಅನುಜೆ ತಳುವಿದಳು ಎಂದು ರೋಷಸ್ತನಿತ ಗದ್ಗದ ಕಂಠನು
ಮಹೀಮಂಡಲವನು ಒದೆದು ಎದ್ದನು….ಉಗ್ರ ಅಂಬಕನ ಡೊಂಬಿನಲಿ ಅನಿಲಸುತನ ಇದಿರೆದ್ದನು.)
ಭೀಮ: ದನುಜೆ…ಈತನೆ ನಿನ್ನವನು…ಆಯ್ತು ತಪ್ಪೇನು.
(ಎನುತೆ ಹಳಚಿದೊಡೆ…ಆ ಹಿಡಿಂಬಕ ಜಡಿದು ಬೊಬ್ಬಿರಿದ.)
ಭೀಮ: ಒರಲಬೇಡವೊ ಕುನ್ನಿ…ಎಲವೊ, ಮೆಲ್ಲನೆ ತರುಬಿ ಕಾದುವುದು… ಮೈಮರೆದು ಒರಗಿದವರು
ಏಳ್ವರು ಕಣಾ…ಸತ್ತಂತೆ ಸಾರು.
(ಎನುತ ಆ ಭೀಮ ತರುಬಿ ಹಿಡಿದು ಬೆನ್ನಿನೊಳು ಎರಗಿದನು… ಹೆಮ್ಮರಕೆ ಹಾಯಿದು ಮುರಿದು
ಹೊಯ್ದು…ಹಿಡಿಂಬ ಅನಿಲ ನಂದನನ ಕೊಡಹಿದನು…ಎದ್ದು ತಿವಿದನು…ಈತನ ಮುಷ್ಟಿ ಖಳನ
ಬದಿಯೊಳಗೆ ಅದ್ದುದು…ಒಡನೆ ಎದ್ದು ನಿಮಿಷಕೆ ಸಂತವಿಸಿ…ಮುರಿದು ಹೆಮ್ಮರನ ಕೊಂಬಿನಲಿ ಗೆದ್ದೆ ಇದ ಕೊಳ್ಳ್ ಎನುತ ಖಳನು ಉಬ್ಬೆದ್ದು ಹೊಯ್ದರೆ…
ಕಲಿ ಹಿಡಿಂಬಕನ ಮರ ಸಹಿತ ಹಿಡಿದು ಉದ್ದಿ ನೆಲದೊಳಗೆ ಒರಸಿ ಕೊಂದನು.
ಕಳಕಳದೊಳು ಇವರು ಎದ್ದು…)
ಧರ್ಮರಾಯ: ಇವನು ಅತಿಬಳ…ಮಹಾದೇವ, ಎಮ್ಮನು ಎಬ್ಬಿಸಿ ಬಳಿಕ ಕಾದದೆ…ತಮ್ಮ ಕೆಡಿಸಲು ಕಾಕ
ಬಳಸಿದೆಲ…ಬಳಲಿದ ಎಮ್ಮನು ಹೊತ್ತು ತೊಳಲಿದ ಬಳಲಿಕೆಯಲಿ ಈ ಕೇಡು ಲೇಸಾಯ್ತು…ಉಳಿದೆ ಪುಣ್ಯವಿದು.
(ಎಂದರಾ ಯಮನಂದನಾದಿಗಳು…ಖಳ ಮಡಿಯಲು…ಅವನ ಅನುಜೆ ಭೀಮನನು ಒಲಿಸಲು
ಅರಿಯದೆ…ಕುಂತಿಗೆ ತನ್ನ ಪೂರ್ವಾಪರದ ಸಂಗತಿಯ ಎಲ್ಲವ ತಿಳುಹಿ ನುಡಿದಳು. ಅವಳು
ಹಲವು ಪರಿಯಲಿ ಇವರನು ಅಂಡಲೆದು ಭೀಮಗೆ ಹೇಳಿಸಿದಳು… ಆ ಫಲುಗುಣನ
ಕೈಯಿಂದ…ಧರ್ಮಜನಿಂದ ನುಡಿಸಿದಳು. ಆರು ನುಡಿಯಲು…)
ಭೀಮ: ಸರ್ವಥಾ ಖಳನಾರಿಯನು ಕೈಕೊಳ್ಳೆನು.
(ಎಂದೇ ವೀರ ಬಲಿದನು… ಬಳಿಕ ವೇದವ್ಯಾಸ ಮುನಿ ಬಂದು ಸಾರನಯದಲಿ ತೋರಿ ತಿಳುಹಿ…)
ವ್ಯಾಸ: ಕುಮಾರ ಸಂಭವದ ಅವಧಿ.
(ಎಂದು ಮುನಿ ಆ ನಾರಿಯನು ಭೀಮಸೇನಂಗೆ ಗಂಟಿಕ್ಕಿದನು…ಎಲ್ಲಿ ಉಪವನ ವರ ಸರೋವರ…ಎಲ್ಲಿ
ಕೇಳೀ ಶೈಲ ಹಿಮಗೃಹ…ಎಲ್ಲಿ ರಮ್ಯೋದ್ಯಾನ… ಎಲ್ಲಿ ವಿಹಾರ ವನಭೂಮಿ…ಅಲ್ಲಿಗಲ್ಲಿಗೆ ಹರಿದು ಮಾರುತಿ
ವಲ್ಲಭೆಯ ರಮಿಸಿದನು…ಚೌಪಟ ಮಲ್ಲ ಕಲಿ ಘಟೋತ್ಕಚನು ಆ ಹಿಡಿಂಬಿಯಲಿ ಜನಿಸಿದ.. ನುಡಿದ ಸಮಯಕೆ
ತನ್ನ ರಮಣಿಯನು ಒಡಬಡಿಸಿ…ಹೈಡಿಂಬ ರಾಜ್ಯದ ವೊಡೆತನವ ನೆರೆ ಮಾಡಿ…ಆ ಘಟೋತ್ಕಚನ
ನಿಲಿಸಿದನು. ನಡೆದು ಬಂದರು… ಶಾಲಿಹೋತ್ರನ ನಡುವೆ ಕಂಡು ಉಪಚರಿಸಿ ಕೊಂಡರು…ಅನಿಬರು
ವಿಪ್ರವೇಷದಲಿ ಪಡುವಲ ಅಭಿಮುಖರಾದರು)
ಹೊಸಗನ್ನಡ ಗದ್ಯ
ಜನಮೇಜಯ ರಾಜನೇ, ಪಾಂಡವರಿಗೆ ಬಂದ ಆಪತ್ತನ್ನು ಮತ್ತೆ ಕೇಳುವನಾಗು….
ಪಾಂಡವರು ಅರಗಿನ ಮನೆಯ ಸುರಂಗದ ಮೂಲಕ ತಪ್ಪಿಸಿಕೊಂಡು ಬಂದು, ದಟ್ಟವಾದ ಕತ್ತಲೆಯಲ್ಲಿ ಕಾಡಿನ ಕಲ್ಲುಮುಳ್ಳುಗಳಿಂದ ತುಂಬಿದ ಹಾದಿಯಲ್ಲಿ, ತಮ್ಮ ಕೋಮಲವಾದ ಹೆಜ್ಜೆಗಳನ್ನಿಡುತ್ತ ತೊಳಲಾಡಿದರು. ಬೆಳಗಾಗಲು ಹಳ್ಳಿಯ ಹತ್ತಿರಕ್ಕೆ ಹೋಗದೆ, ಕಾಡನ್ನು ಹೊಕ್ಕು, ಬೆಳಕು ಅಡಗಿದ ಮೇಲೆ ಮುಂದುವರಿದು ಹಲವು ಯೋಜನಗಳ ದೂರ ನಡೆದರು.
ಹೀಗೆ ಮುಂದುವರೆಯುತ್ತ ಗಂಗಾನದಿಯನ್ನು ದಾಟಿದರು. ಕೌರವನ ಮಾಟದಿಂದ ನಮಗೇನು ಹಲ್ಲು ಮುರಿಯಿತೇ?… ನಾವು ಆಡಿದ ಆಟಕ್ಕಿಂತ ಅವರ ಆಟ ದೊಡ್ಡದೇನಲ್ಲ. ಅಂದರೆ ಅವನು ನಮ್ಮನ್ನು ಕೊಲ್ಲಲು ಸಂಚು ಹೂಡಿದರೆ, ನಾವು ಅವನ ಸಂಚನ್ನೇ ನಾಶಮಾಡಿದೆವು ಎನ್ನುತ್ತಾ, ತೊಂದರೆಗಳ ದಟ್ಟಣೆಯಲ್ಲಿ ಹಿಂಜರಿಯದೆ, ಬಿಸಿಲಿನಲ್ಲಿ ಕಾಡಿನ ನಡುವೆ ಬಂದು ಹೊಕ್ಕರು.
ಬೆಟ್ಟಗುಡ್ಡಗಳಿಂದ ಕೂಡಿದ ಕಾಡಿನ ಹಾದಿಯಲ್ಲಿ ನಡೆನಡೆದು ದರ‍್ಮರಾಯ ಮತ್ತು ಅರ‍್ಜುನನ ಪಾದಗಳು ಬಿರಿದು ಸುರಿಯುತ್ತಿರುವ ನೆತ್ತರಿನಲ್ಲಿ ದಾರಿಯು ಕೆಸರಾಯಿತು. ನಕುಲ, ಸಹದೇವ ಮತ್ತು ಕುಂತಿಯರ ಪಾಡನ್ನು ಏನೆಂದು ಹೇಳಲಿ…ಅವರು ನಡೆಯಲಾರದೆ “ದುರ‍್ಯೋದನನು ನಮ್ಮನ್ನು ಹಿಡಿದು ಕೊಂದುಬಿಡಲಿ” ಎನ್ನುತ್ತ, ಕಾಡಿನಲ್ಲಿ ಕುಳಿತುಬಿಟ್ಟರು. “ಅಯ್ಯೋ…ಉರಿಯುತ್ತಿರುವ ಅರಗಿನ ಮನೆಯಲ್ಲಿ ಬೀಮನು ನಮ್ಮನ್ನು ಸಾಯುವುದಕ್ಕೆ ಬಿಡದೆ, ಸೆರಗನ್ನು ಹಿಡಿದು ಎಳೆತಂದು, ಕೊರಳನ್ನು ಕೊಯ್ದನು…ಅಯ್ಯೋ…ಬೀಮನೇ ನಮಗೆ ಹಗೆ” ಎಂದು ಕುಂತಿ ಗೋಳಿಟ್ಟಳು. “ಅರಸನಾದ ದುರ‍್ಯೋದನನು ನಮ್ಮನ್ನು ಹಿಡಿಯಲಿ ಇಲ್ಲವೇ ರಕ್ಕಸರು ನಾವು ನಿಂತಿರುವಾಗಲೇ ನುಂಗಿಹಾಕಲಿ. ಆಗ ನಾವು ಪುಣ್ಯಶಾಲಿಗಳಾಗುತ್ತೇವೆ” ಎಂದು ಕಾಡಿನಲ್ಲಿ ನಡೆದುಬರುತ್ತಿರುವಾಗ ಆದ ಸಂಕಟವನ್ನು ತಡೆದುಕೊಳ್ಳಲಾರದೆ ಗಟ್ಟಿಯಾದ ದನಿಯಲ್ಲಿ ಅರಚಿದರು.
“ಹೋ ಹೋ ಸಾಕು ಸಾಕು. ನಾನಿರುವಾಗ ನೀವೇಕೆ ಅತಿಯಾಗಿ ಅಂಜುವಿರಿ” ಎಂದು ಅಕ್ಕಪಕ್ಕದಲ್ಲಿದ್ದ ಮುಳ್ಳುಕಲ್ಲು ಮರಗಿಡಗಳ ಅಡೆತಡೆಗಳೆಲ್ಲವನ್ನೂ ಪಕ್ಕಕ್ಕೆ ಸರಿಸಿ, ತನ್ನೆರಡು ಹೆಗಲುಗಳ ಮೇಲೆ ಕುಂತಿ ಮತ್ತು ದರ‍್ಮರಾಯನನ್ನು ಹೊತ್ತುಕೊಂಡು, ತೋಳಿನ ಎಡಬದಿಯಲ್ಲಿ ಅರ‍್ಜುನನ್ನು, ಬಲಬದಿಯಲ್ಲಿ ನಕುಲ ಸಹದೇವರನ್ನು ಇರುಕಿಸಿಕೊಂಡು ಕಾಡಿನ ಹಾದಿಯಲ್ಲಿ ಸಾಗತೊಡಗಿದನು.
ದಟ್ಟವಾದ ಕಾಡಿನಲ್ಲಿ ಹೀಗೆ ತಾಯಿ ಮತ್ತು ಅಣ್ಣತಮ್ಮಂದಿರನ್ನು ಹಲವು ಯೋಜನಗಳ ದೂರದಿಂದ ಹೊತ್ತು ತರುತ್ತಿರುವ ಬೀಮನು “ತಾನು ಬಳಲಿದೆನು ಎಂದನೇ…ಬಾಯಾರಿದೆನು ಎಂದನೇ…ನಿದ್ರೆ ಕವಿಯುತ್ತಿದೆ ಎಂದನೇ…”..ಏನೊಂದನ್ನು ನುಡಿಯದೆ ಪರಿಶ್ರಮದಿಂದ ಅವರೆಲ್ಲರನ್ನೂ ಹೊತ್ತುತಂದು, ಕಾಡಿನ ನಡುವೆಯಿದ್ದ ಮರವೊಂದರ ಬುಡದ ಬಳಿ ಇಳುಹಿ, ಬಳಿಕ ತಾವರೆಯ ಎಲೆಯಿಂದ ನೀರನ್ನು ತಂದು ಅವರೆಲ್ಲರಿಗೂ ನೀಡಿದನು.
ಅನಂತರ ಮರದ ಎಲೆಗಳನ್ನು ತರಿದು ತಂದು ರಾಶಿ ಹಾಕಿದನು.ಅವರೆಲ್ಲರೂ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದರು. ಎಲ್ಲರೂ ದೇಹದ ಆಯಾಸದಿಂದ ಮರದ ನೆರಳಿನಲ್ಲಿ ಗಾಡವಾದ ನಿದ್ರೆಯಲ್ಲಿ ಮುಳುಗಿದರು. ಬಿಸಿಲಿನ ಜಳಕ್ಕೆ ಬಾಡಿದ ಮಯ್, ಕಳೆಗುಂದಿದ ಸುಂದರವಾದ ಮೊಗ, ಕೆದರಿದ ತಲೆಗೂದಲಿನಿಂದ ಕೂಡಿದ ಅವರನ್ನು ನೋಡಿ, ಬೀಮನು ಸಂಕಟದಿಂದ ಪರಿತಪಿಸತೊಡಗಿದನು.
“ತಾಯಿಯೇ, ನೀನು ನಿಜವಾಗಿಯೂ ಹಸ್ತಿನಾಪುರದ ರಾಜನ ಅರಸಿಯೇ…ನಿನ್ನ ಮಕ್ಕಳು ಹಗೆಗಳಾದ ರಾಜರ ಎದೆಯನ್ನು ನಡುಗಿಸಬಲ್ಲವರೇ…ದೊಡ್ಡ ಬಾಹುಬಲವುಳ್ಳ ಪರಾಕ್ರಮಿಗಳೇ…ಇಂತಹ ದುರಂತ ಸೋಮವಂಶಕ್ಕೆ ಒಪ್ಪುವುದೇ…ಹೇಳು ತಾಯೇ ಹೇಳು…ನನ್ನಾಣೆ ಹೇಳು” ಎಂದು ಅಳಲಿದನು.
ತಾಯಿಯ ಪಾದಗಳನ್ನು ಒತ್ತಿ, ದರ‍್ಮರಾಯನ ಅಡ್ಡವಾಗಿದ್ದ ಪಾದಗಳನ್ನು ಸರಿಯಾಗಿ ತಿರುಗಿಸಿದನು. ನಂತರ ಪಕ್ಕಕ್ಕೆ ತಿರುಗಿ ಅರ‍್ಜುನ ಹಾಗೂ ನಕುಲ ಸಹದೇವರ ಪಾದಗಳನ್ನು ಮೆದುವಾಗಿ ಹಿಸುಕುತ್ತ, ಅವರೆಲ್ಲರಿಗೂ ಬಂದೊದಗಿರುವ ಹೀನ ಸ್ತಿತಿಯನ್ನು ಕಂಡು, ಹಿಂದಿನದೆಲ್ಲವನ್ನೂ ನೆನೆಸಿಕೊಂಡು ಬಿಕ್ಕಿಬಿಕ್ಕಿ ಅಳುತ್ತ, ಕಾಡಿನ ನಡುವೆ ಬೀಮನು ಬಹಳವಾಗಿ ಚಿಂತಿಸತೊಡಗಿದನು.
ಬೀಮನಿಗೆ ಬಹಳ ನಿದ್ರೆ ಬರುತ್ತಿದ್ದರೂ, ನಿದ್ರೆಯನ್ನು ಕಣ್ಣಿನ ರೆಪ್ಪೆಗಳಿಂದ ದೂಡುತ್ತಿದ್ದ…ಸ್ವಲ್ಪ ತೂಕಡಿಕೆ ಬಂದರೆ, ಕಯ್ಯಿಂದ ಮೊಗವನ್ನು ಮುಟ್ಟಿಕೊಂಡು ಮಯ್ಯನ್ನು ಒದರುವನು…ಮಯ್ ಮರೆವು ಉಂಟಾದರೆ ಕೂಡಲೇ ಮನಸ್ಸನ್ನು ಎಚ್ಚರಗೊಳಿಸಿಕೊಳ್ಳುವನು…ಈ ಬಗೆಯಲ್ಲಿ ಬೀಮನು ಅರೆಗಳಿಗೆಯೂ ಮಯ್ ಮನ ಮುದುಡದಂತೆ ಎಚ್ಚರವಾಗಿದ್ದನು.
“ಈಗ ನಾನು ನಿದ್ರೆಗೆ ಒಳಗಾದರೆ, ಇವರಿಗೆ ಹಾವು, ಆನೆ, ಕಾಡುಹಂದಿ, ತೋಳ, ಹುಲಿ, ಸಿಂಹ ಮೊದಲಾದವುಗಳಿಂದ ಅಪಾಯ ಮತ್ತು ಆ ಕ್ರೂರಿಗಳಾದ ರಕ್ಕಸರಿಂದ ಕೇಡುಂಟಾಗುವುದು” ಎಂದು ಯೋಚಿಸಿದ ಬೀಮನು ನಿದ್ರೆಯೆಂಬ ಹಾವನ್ನು ಹೊರತಳ್ಳಿ ಅತಿ ಎಚ್ಚರದಿಂದ ಅವರೆಲ್ಲರನ್ನೂ ಕಾಯುತ್ತಿದ್ದನು. ಕೇಳು ಜನಮೇಜಯ ರಾಜ, ಆ ಸಮಯದಲ್ಲಿ ಅವರಿಗೆ ಬಂದ ಆಪತ್ತೊಂದನ್ನು ಏನೆಂದು ಹೇಳಲಿ..
ಹಿಡಿಂಬನೆಂಬ ರಕ್ಕಸನು ಆ ಕಾಡಿನ ರಾಜ. ಅವನು ಬಹು ದೊಡ್ಡ ಪರಾಕ್ರಮಿ. ಅವನಿದ್ದ ಎಡೆಯ ಮೇಲುಗಡೆಯ ದಿಕ್ಕಿನಿಂದ ಮತ್ತೆ ಮತ್ತೆ ಬೀಸಿಬರುತ್ತಿರುವ ಗಾಳಿಯು ಹೊತ್ತು ತಂದ ಮಾನವರ ವಾಸನೆಯಿಂದ ಹಿಡಿಂಬನ ಮೂಗು ಅರಳಿತು. ಆಗ ಹಿಡಿಂಬನು ತನ್ನಲ್ಲಿಯೇ ಈ ರೀತಿ ಅಂದುಕೊಳ್ಳುತ್ತಾನೆ. “ಎತ್ತಣದೋ ಮಹಾದೇವ…ಮಾನವರ ವಾಸನೆಯು ಗೋಚರಿಸುತ್ತಿದೆ” ಎಂದು ಅಚ್ಚರಿಗೊಂಡು, ತನ್ನ ತಂಗಿ ಹಿಡಿಂಬಿಯನ್ನು ಕರೆದು “ತಾಯೇ, ಬಾರಮ್ಮ ತಂಗಿ…ಕಂಪನ್ನು ಹೊತ್ತು ತರುತ್ತಿರುವ ಗಾಳಿಯಲ್ಲಿ ಮಾನವರ ವಾಸನೆಯಿದೆ. ಹೊಸದಾದ ಊಟವಿಂದು ನಮಗೆ ದೊರೆಯಿತು…ಅವರನ್ನು ಸಾಯುವಂತೆ ಸದೆಬಡಿದು ತಾ…ನಮ್ಮ ಪುಣ್ಯಪಲದಿಂದ ಇಂದು ಒಳ್ಳೆಯ ಊಟ ದೊರೆಯಿತು” ಎಂದು ನುಡಿಯಲು, ಹಿಡಿಂಬಿಯು ಅಣ್ಣನ ಮಾತನ್ನೇ ಅಪ್ಪಣೆಯೆಂದು ಸ್ವೀಕರಿಸಿ, ಮಾನವರ ವಾಸನೆ ಬಂದ ದಿಕ್ಕಿನತ್ತ ನಡೆದಳು.
ಅತಿ ಬಯಂಕರವಾದ ರೂಪವನ್ನುಳ್ಳ ಹಿಡಿಂಬಿಯು ಪಾಂಡವರಿದ್ದ ಕಡೆಗೆ ಬಂದಳು. ದೂರದಿಂದಲೇ ಬೀಮನ ಗುಂಗುರುಕೂದಲಿನ ತಲೆಯನ್ನು, ಕೆಂಪನೆಯ ಬಣ್ಣದ ಮೀಸೆಯನ್ನು, ಬಿರುಸಾದ ಕಯ್ಗಳನ್ನು, ಕೆಂಗಣ್ಣುಗಳನ್ನು, ಮಲ್ಲಿಗೆಯ ಹೂವಿನಂತೆ ಬೆಳ್ಳಗಿರುವ ಹಲ್ಲುಗಳ ಕಾಂತಿಯನ್ನು ಕಂಡಳು. ನೋಡನೋಡುತ್ತಿದ್ದಂತೆಯೇ ಆ ರಕ್ಕಸನ ತಂಗಿ ಹಿಡಿಂಬಿಯು ಬೀಮನ ಮೇಲೆ ಮೋಹಗೊಂಡಳು.
ಆ ರಕ್ಕಸನ ತಂಗಿ ಹಿಡಿಂಬಿ ಬೀಮಸೇನನಿಗೆ ಮರುಳಾದಳು. “ಇವನನ್ನು ರಮಣನನ್ನಾಗಿ ಮಾಡಿಕೊಂಡು, ಈ ಕಾಡಿನಿಂದ ದೂರ ಓಡುತ್ತೇನೆ. ನನ್ನ ಅಣ್ಣ ಹಿಡಿಂಬನು ಕೋಪಗೊಂಡು, ಮರದ ಕೆಳಗೆ ಮಲಗಿರುವ ಈ ಅಯ್ದು ಮಂದಿಯನ್ನು ತಿನ್ನಲಿ. ಇವನು ನನ್ನನ್ನು ಬಯಂಕರವಾದ ರೂಪಿನಲ್ಲಿ ನೋಡಿದರೆ ಹೆದರಿಕೊಳ್ಳುತ್ತಾನೆ. ಆದ್ದರಿಂದ ಯುವತಿಯ ರೂಪವನ್ನು ತಳೆಯುವೆನು” ಎಂದು ತನ್ನಲ್ಲಿಯೇ ನಿಶ್ಚಯಿಸಿಕೊಂಡು, ಹಿಡಿಂಬಿಯು ಮನಮೋಹಕ ಸುಂದರಿಯ ರೂಪಿನಲ್ಲಿ ಬೀಮನ ಮುಂದೆ ಕಾಣಿಸಿಕೊಂಡಳು.
ಹೊಳೆಯುವ ಅವಳ ಕಣ್ಣುಗಳ ಕಾಂತಿಯು ಕಾಡಿನ ಕತ್ತಲೆಯನ್ನು ಹೋಗಲಾಡಿಸಿತು…ಅವಳ ಮಯ್ಯಿನ ಕಂಪಿಗೆ ದುಂಬಿಗಳು ಮುತ್ತಿಕೊಂಡವು…ಅವಳ ಬಳ್ಳಿಯಂತಹ ದೇಹವು ಮೊಲೆಗಳ ಬಾರಕ್ಕೆ ಬಳುಕುತ್ತಿತ್ತು…ಸೆರಗು ಜಾರುತ್ತಿರಲು…ಮುಂಗುರುಳು ಅಲುಗಾಡುತ್ತಿರಲು, ಹಿಡಿಂಬಿಯು ಬೀಮನ ಮುಂದೆ ಸುಳಿದಾಡಿದಳು.
ಆದರೆ ಬೀಮನು ಅವಳತ್ತ ನೋಡಲೂ ಇಲ್ಲ…ಮಾತನಾಡಿಸಲೂ ಇಲ್ಲ. ಹಿಡಿಂಬಿಯು ಅವನ ಬಳಿಗೆ ಹೋಗಿ, ತಾನೇ ಮಾತನಾಡಿಸಿದಳು. “ಮಹಾಬಲನಂತೆ ಕಾಣುತ್ತಿರುವ ನೀನು ಯಾರು?…ಮಲಗಿ ನಿದ್ರಿಸುತ್ತಿರುವ ಈ ಮಾನವರು ಯಾರು? ಕೋಮಲಕಾಯದ ಮಾನವರು ಇಂತಹ ದೊಡ್ಡ ಕಾಡಿಗೆ ಬರಬಹುದೇ?” ಎಂದಾಗ, ಬೀಮನು ಅವಳ ಬಗ್ಗೆ ಯಾವುದೇ ಕಾಮನೆಯಿಲ್ಲದೆ “ನೀನು ಯಾರು?” ಎಂದಾಗ, ಹಿಡಿಂಬಿಯು “ಈ ಕಾಡಿನ ರಾಜ ಹಿಡಿಂಬನೆಂಬ ರಕ್ಕಸ. ನಾನು ಅವನ ತಂಗಿ. ಈ ಕಾಡು ನಮ್ಮ ಒಡೆತನದಲ್ಲಿದೆ. ಮಾನವರಾಗಲಿ ಇಲ್ಲವೇ ದೇವತೆಗಳಾಗಲಿ ಇಲ್ಲಿಗೆ ಬರಲಾಗದು. ನಿನ್ನನ್ನು ಕಾಮಿಸಿ ಬಂದೆನು. ನನ್ನ ಅಣ್ಣನು ಕೋಪಿಸಿಕೊಂಡರೆ, ಅಲ್ಲಿ ಮಲಗಿರುವವರನ್ನು ತಿನ್ನಲಿ. ನೀನು ಮೇಲೇಳು…ನನಗೆ ಗಂಡನಾಗು…ನಿನ್ನನ್ನು ಹಿಮಾಚಲಕ್ಕೆ ಕರೆದೊಯ್ಯುತ್ತೇನೆ.” ಎಂದು ನುಡಿಯಲು, ಬೀಮಸೇನನು “ನಿನ್ನನ್ನು ಒಲ್ಲೆನು. ಕೋಪಿಸಿಕೊಂಡರೆ ಹೋಗಿ ನಿನ್ನ ಅಣ್ಣನಾದ ರಕ್ಕಸನನ್ನು ಕರೆದುಕೊಂಡು ಬಂದು, ನನ್ನ ಶಕ್ತಿ ಏನೆಂಬುದನ್ನು ನೋಡು” ಎಂದು ಆಕೆಯ ಕೋರಿಕೆಯನ್ನು ತಿರಸ್ಕರಿಸಿದಾಗ, ಹಿಡಿಂಬಿಯು ಅತ್ಯಂತ ವಿನಯದಿಂದ “ಈಗಾಗಲೇ ನಾನು ಕಾಮನ ಬಾಣದಿಂದ ಗಾಸಿಗೊಂಡಿದ್ದೇನೆ. ನಿನ್ನನ್ನೇ ಮರೆಹೊಕ್ಕಿದ್ದೇನೆ. ಹೀಗಿರುವಾಗ ಈ ರೀತಿ ಮನಸ್ಸನ್ನು ಗಾಸಿಗೊಳಿಸುವಂತೆ ನುಡಿಯಬಹುದೇ” ಎಂದು ಬೀಮನನ್ನು ಪ್ರಶ್ನಿಸುತ್ತಾಳೆ.
ತನ್ನ ತಂಗಿ ಬರುವುದು ತಡವಾಯಿತೆಂದು ಹಿಡಿಂಬನು ಕೋಪೋದ್ರೇಕದಿಂದ ಅಬ್ಬರಿಸುತ್ತ, ನೆಲವನ್ನು ಒದೆದು ಪಾಂಡವರು ಇದ್ದ ಎಡೆಗೆ ಬಂದನು. ಹಿಡಿಂಬನನ್ನು ನೋಡಿ ಬೀಮಸೇನನು ಮುನಿದ ಮುಕ್ಕಣ್ಣನ ರೀತಿಯಲ್ಲಿ ಇದಿರೆದ್ದು ಬಂದನು. “ರಕ್ಕಸಿಯೇ, ಈತನೇ ನಿನ್ನ ಅಣ್ಣನೇನು…ಆಯ್ತು ತಪ್ಪೇನು” ಎನ್ನುತ್ತ ಮೇಲೆ ಬಿದ್ದು ಹೊಡೆದಾಗ,
ಆ ಹಿಡಿಂಬನು ಅಬ್ಬರಿಸಿ ಬೊಬ್ಬಿಟ್ಟನು. “ಜೋರಾಗಿ ಕೂಗಬೇಡವೋ ನಾಯಿ. ದನಿ ಮಾಡದೆ ಎದುರಿಸಿ ಕಾದಾಡುವುದು. ಮಯ್ ಮರೆತು ಮಲಗಿರುವವರ ನಿದ್ದೆ ಹಾಳಾಗುತ್ತದೆ. ಸತ್ತಂತೆ ಅತ್ತ ಹೋಗು” ಎಂದು ಬೀಮನು ನುಡಿಯುತ್ತ, ಹಿಡಿಂಬನ ಬೆನ್ನ ಮೇಲೆ ದೊಡ್ಡ ಹೊಡೆತವನ್ನು ಹೊಡೆದನು. ಹಿಡಿಂಬನು ಒಂದು ದೊಡ್ಡ ಮರವನ್ನು ಕಿತ್ತುಕೊಂಡು ಬಂದು, ಅದರಿಂದಲೇ ಬೀಮನನ್ನು ಹೊಡೆದು ಕೆಳಕ್ಕೆ ಉರುಳಿಸಿದ.
ಕೆಳಕ್ಕೆ ಉರುಳಿದ ಬೀಮಸೇನನು ಒಡನೆ ಮೇಲೆದ್ದು, ಹಿಡಿಂಬನನ್ನು ಮುಶ್ಟಿಯಿಂದ ಹೊಡೆದನು. ಆ ಹೊಡೆತಕ್ಕೆ ಬೀಮಸೇನನ ಮುಶ್ಟಿಯು ಹಿಡಿಂಬನ ಪಕ್ಕೆಯೊಳಗೆ ನಾಟಿಕೊಂಡಿತು. ಹಿಡಿಂಬನು ಆ ಹೊಡೆತವನ್ನು ತಡೆದುಕೊಂಡು, ಕೂಡಲೇ ತಿರುಗೆ ಎದ್ದು, ಮರದ ದೊಡ್ಡ ಕೊಂಬೆಯೊಂದನ್ನು ಮುರಿದು ತಂದು “ಗೆದ್ದೆ..ಈ ಹೊಡೆತವನ್ನು ಕೊಳ್ಳ್” ಎಂದು ಅಬ್ಬರಿಸುತ್ತ ಬೀಮಸೇನನ್ನು ಹೊಡೆಯಲು ಹೋದಾಗ, ಕಲಿ ಬೀಮನು ಮರದ ಕೊಂಬೆಯ ಸಮೇತ ಹಿಡಿಂಬನನ್ನು ಹಿಡಿದು ನೆಲಕ್ಕೆ ಹಾಕಿ ಹೊಸಕಿ ಕೊಂದನು.
ಬೀಮ ಹಿಡಿಂಬರ ಹೊಡೆದಾಟದ ಅಬ್ಬರದ ದನಿಗೆ ಮಲಗಿದ್ದ ಪಾಂಡವರು ಎಚ್ಚರಗೊಂಡು “ಇವನು ಅತಿಬಲ…ಮಹಾದೇವ…ನಮ್ಮನ್ನು ಎಬ್ಬಿಸಿ, ಅನಂತರ ಅವನೊಡನೆ ಹೋರಾಡದೆ, ನಮ್ಮೆಲ್ಲರ ದುರಂತಕ್ಕೆ ಕಾರಣವಾಗುವ ತಪ್ಪುದಾರಿಯನ್ನು ಹಿಡಿದೆಯಲ್ಲಾ…ನಮ್ಮೆಲ್ಲರನ್ನು ಹೊತ್ತು ತಂದ ದಣಿವಿನ ಜತೆಗೆ ಈ ಆಪತ್ತು ಬೇರೆ ಬಂದಿತಲ್ಲಾ…ಒಳ್ಳೆಯದಾಯಿತು. ಪುಣ್ಯವಶದಿಂದ ನೀನು ಉಳಿದುಕೊಂಡೆ” ಎಂದರು ಬೀಮನ ಅಣ್ಣತಮ್ಮಂದಿರು.
ಅಣ್ಣ ಹಿಡಿಂಬನು ಮಡಿದ ನಂತರ, ಹಿಡಿಂಬೆಯು ಬೀಮನನ್ನು ಒಲಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯದೆ, ಕುಂತಿಯೊಡನೆ ತಾನು ರಕ್ಕಸ ಬುಡಕಟ್ಟಿಗೆ ಸೇರಿದ ಕಾಡಿನ ಹೆಣ್ಣುಮಗಳು ಎಂಬುದೆಲ್ಲವನ್ನೂ ಹೇಳಿಕೊಂಡು, ಬೀಮನನ್ನು ಗಂಡನನ್ನಾಗಿ ಪಡೆಯಬೇಕೆಂಬ ತನ್ನ ಆಸೆಯನ್ನು ತೋಡಿಕೊಂಡಳು. ಹಿಡಿಂಬಿಯು ಬೀಮನ ಅಣ್ಣತಮ್ಮಂದಿರೆಲ್ಲರೊಡನೆ ತನ್ನ ಮನದ ಒಲವನ್ನು ಹೇಳಿಕೊಂಡು, ಅವರೆಲ್ಲರಿಂದಲೂ ಬೀಮನಿಗೆ ಹೇಳಿಸಿದಳು. ಯಾರು ಎಶ್ಟೇ ಹೇಳಿದರೂ ಬೀಮನು “ಯಾವುದೇ ಕಾರಣದಿಂದಲೂ ನಾನು ಕೆಟ್ಟಹೆಂಗಸನ್ನು ಕಯ್ ಹಿಡಿಯುವುದಿಲ್ಲ” ಎಂದೇ ಹಟಹಿಡಿದನು. ಅನಂತರ ವೇದವ್ಯಾಸ ಮುನಿಯು ಅಲ್ಲಿಗೆ ಬಂದು, ಹಿತನುಡಿಗಳ ಮೂಲಕ ಬೀಮನಿಗೆ ತಿಳಿಯಹೇಳಿ, “ನಿನಗೆ ಮಗನು ಹುಟ್ಟುವ ಕಾಲ ಬಂದಿದೆ” ಎಂದು ಬೀಮನನ್ನು ಒಪ್ಪಿಸಿ, ಹಿಡಿಂಬಿಯೊಡನೆ ಮದುವೆಯನ್ನು ಮಾಡಿಸಿದನು.
ಉಪವನಗಳು, ತಿಳಿನೀರಿನ ಸರೋವರಗಳು, ಆಟದ ಬೆಟ್ಟಗುಡ್ಡಗಳು, ತಂಪನ್ನೆರೆಯುವ ಮನೆಗಳು, ಮನಮೋಹಕವಾದ ಉದ್ಯಾನಗಳು, ವಿಹರಿಸಲು ಉತ್ತಮವಾದ ಕಾಡಿನ ತಾಣಗಳು…ಎಲ್ಲೆಲ್ಲಿ ಇವೆಯೋ…ಅಲ್ಲೆಲ್ಲಾ ಬೀಮಸೇನನು ಅವಳೊಡನೆ ವಿಹರಿಸುತ್ತ ರಮಿಸಿದನು.
ಪರಾಕ್ರಮಿಯಾದ ಕಲಿ ಗಟೋತ್ಕಚನು ಹಿಡಂಬಿಯ ಹೊಟ್ಟೆಯಲ್ಲಿ ಹುಟ್ಟಿದನು. ಈ ಹಿಂದೆ ವ್ಯಾಸರು ಗೊತ್ತು ಮಾಡಿದ ಸಮಯವನ್ನು ಬೀಮಸೇನನು ಹಿಡಂಬಿಗೆ ನೆನಪಿಸಿ, ಅವಳನ್ನು ಒಪ್ಪಿಸಿ, ಹಿಡಿಂಬನ ರಾಜ್ಯದ ಒಡೆತನವನ್ನು ಗಟೋತ್ಕಚನಿಗೆ ಕಟ್ಟಿದನು. ಹಿಡಿಂಬ ವನದಿಂದ ಪಾಂಡವರು ಹೊರಟು ಕಾಡಿನಲ್ಲಿ ಬರುತ್ತ ಶಾಲಿಹೋತ್ರ ಮುನಿಯನ್ನು ಕಂಡು ಉಪಚರಿಸಿಕೊಂಡರು. ಪಾಂಡವರು ತಮ್ಮ ತಾಯಿ ಕುಂತಿಯೊಡನೆ ಬ್ರಾಹ್ಮಣರಂತೆ ಉಡುಗೆತೊಡುಗೆಯನ್ನು ತೊಟ್ಟು ಪಶ್ಚಿಮ ದಿಕ್ಕಿನ ಕಡೆ ಸಾಗತೊಡಗಿದರು.
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು