ಕುಮಾರವ್ಯಾಸ ಬಾರತ ಓದು-ಆದಿ ಪರ‍್ವ-ಬಕಾಸುರನ ಕೊಲೆ ಪ್ರಸಂಗ-ನೋಟ-24
ಪ್ರಸಂಗ-24
ಬಕಾಸುರನ ಕೊಲೆ
(ಆದಿ ಪರ‍್ವ: ಹತ್ತನೆಯ ಸಂದಿ: ಪದ್ಯ 1 ರಿಂದ 40)
ಪಾತ್ರಗಳು:
ಕುಂತಿ: ಪಾಂಡವರ ತಾಯಿ.
ಬ್ರಾಹ್ಮಣ: ಏಕಚಕ್ರ ನಗರದ ನಿವಾಸಿ
ಬೀಮ: ಪಾಂಡುರಾಜ ಮತ್ತು ಕುಂತಿಯ ಮಗ
ಬಕಾಸುರ: ಏಕಚಕ್ರ ನಗರದ ಬಳಿಯ ಕಾಡಿನಲ್ಲಿದ್ದ ರಾಕ್ಶಸ ಬುಡಕಟ್ಟಿನ ವ್ಯಕ್ತಿ
ಪುರಜನ: ಏಕಚಕ್ರ ನಗರದ ನಿವಾಸಿಗಳು
*** ಬಕಾಸುರನ ಕೊಲೆ ***
ಕೇಳು ಜನಮೇಜಯ ಮಹೀಪತಿ, ಶಾಲಿಹೋತ್ರಾಶ್ರಮವನು ಅನಿಬರು ಬೀಳುಕೊಂಡರು…ಮತ್ತೆ ಬಾದರಾಯಣನ ಕಂಡರು…ನಿಮಗೇ ಏಕಚಕ್ರ ವಿಶಾಲಪುರದೊಳಗೆ ಆರು ತಿಂಗಳು ಕಾಲ ಸವೆಯಲಿ…ಬಳಿಕ ಬಳಸುವಿರಿ ಉತ್ತರೋತ್ತರವ ಎಂದು ಮುನಿ ತಿರುಗಿದನು.
ಕುಂತೀನಂದನರು ಸುಕ್ಷಾತ್ರ ತೇಜೋವೃಂದವನು…ವಿಮಲ ಬ್ರಹ್ಮ ರಶ್ಮಿಯಲಿ… ಅಂದವೇರಿದ ಗಡ್ಡ ದರ್ಭೆಗಳಿಂದ…ನೆರಿಯುಡಿಗೆಗಳ ನಾಟಕದಿಂದ ಮುಸುಕಿದರು… ಅವನಿಪತಿ ಕೇಳು., ಮಟ್ಟಿಯ ಧಟ್ಟು ನೊಸಲಲಿ ದೇಶಿ ಪರಿ ಮೆರೆಯೆ…ಏಕಚಕ್ರವನು ಇವರು ಹೊಕ್ಕರು…ವಿಪ್ರನೊಬ್ಬನ ಭವನದಲಿ ಬೀಡಾರವನು ಮಾಡಿದರು…ಇವರು ವಿನಯದಲಿ ಯಾಚಕ ವಿಷಯದ ಆತಿಥ್ಯವನು ಕೈಕೊಂಡು…ಅಲ್ಲಿ ಕತಿಪಯ ದಿವಸವನು ನೂಕಿದರು.
ಭಿಕ್ಷಾ ವಿಹಿತ ವೃತ್ತಿಯಲಿ ತಂದ ಭಿಕ್ಷಾ ಅಶನವನು…ಐವರು ನಂದನರು ತಾಯಿಗೆ ನಿವೇದಿಸಲು…ಇಂದುಮುಖಿ ಸಾನಂದದಲಿ ಭಾಗದ್ವಯವ ಮಾಡಿ…ಒಂದು ಭಾಗ ವೃಕೋದರಂಗೆ…ಉಳಿದೊಂದು ಭಾಗವ ತಾನು ನಾಲ್ವರು ನಂದನರು ವಿನಿಯೋಗಿಸುವರು…ಅವನೀಶ ಕೇಳೆಂದ.
ಸಿರಿಯ ಹೇಳ್ವರೆ…ಹಸ್ತಿನಾಪುರದ ಅರಸುಗಳ ಸಂತಾನ…ಶೌರ‍್ಯದ ಪರಿಯ ನೋಳ್ವರೆ… ಶಕ್ರ ಸೂರ್ಯರ ತೇಜಕೆ ಉರೆ ಮಿಗಿಲು…ತಿರಿದ ಕೂಳನು ತಾಯಿ ಹಸುಗೆಯಲಿ ಎರಡು ಭಾಗವ ಮಾಡಿ ಮಕ್ಕಳ ಹೊರೆದಳು…ಇನ್ನುಳಿದವರ ಪಾಡೇನು ಅರಸ ಕೇಳೆಂದ.
ಉದಯವಾಗದ ಮುನ್ನ ಸುಬ್ರಾಹ್ಮ್ಯದ ಮುಹೂರ್ತದಲಿ ಎದ್ದು…ಜನನಿಯ ಪದಯುಗಕ್ಕೆ ಅಭಿನಮಿಸಿ…ಸಂಧ್ಯಾಮಠಕೆ ನಡೆತಂದು…ವಿದಿತ ಸಂಧ್ಯೋಪಾಸ್ಥೆ ಜಪ ನಿಯಮದ ಪುರಾಣಶ್ರವಣ…ಮಧ್ಯಾಹ್ನದಲಿ ಭಿಕ್ಷಾಟನಗಳು…ಇವರಿಗೆ ನಿತ್ಯ ವಿಧಿಯೆಂದ… ಭೋಜನೋತ್ತರ ವೇಳೆಯಲಿ ನೃಪರಾಜ ವಾರ್ತಾಕಥನದಿಂದ…ಮಹಾಜನಂಗಳೊಳು ನಿಜವಿನೋದದಲಿ ಆಡುತಿರ್ದರು…ಆ ರಾಜತನವನು ಮರೆದರು…ದ್ವಿಜರಾಜ ತೇಜದಿ ಮೆರೆದರು…ಆ ನರರಾಜ ರಾಜರ ನೀತಿಯಿದು…ಭೂಪಾಲ ಕೇಳೆಂದ.
ಇರಲಿರಲು ಮಾಸಾಂತರದಲಿ…ಸಾಯಂಕಾಲ ಸಮಯದಲಿ…ಆ ನೆರೆಮನೆಯ ಶೋಕಾರ್ತರವದ ಅಬ್ಬರವ ಕೇಳಿದು ಕುಂತಿ…ಭರದಿನೈತಂದು…
ಕುಂತಿ: ಅಕಟ, ಭೂಸುರ ವರ…ನಿರೋಧವು ಇದೇನು…ದುಃಖೋತ್ಕರುಷವು ಆಕಸ್ಮಿಕವದು
(ಎಂದಳು ಕುಂತಿ ವಿನಯದಲಿ…)
ಬ್ರಾಹ್ಮಣ: ನಾಳೆ ವೈವಾಹೋತ್ಸವದ ದೆಖ್ಖಾಳ…ಇದು ಮೊದಲು ಈ ವಸಂತದ ಬಾಲಿಕೆಯರ ಓಕುಳಿಯ ಮಳೆಯಲಿ ಸಿಡಿಲು ಸುಳಿದುದು.
(ಎನೆ..)
ಕುಂತಿ: ಹೇಳಿರೇ ನಿಮಗಾದ ಅವಸ್ಥೆಯ ಕೇಳಲಾಗದೆ….
(ಎನಲು…ದ್ವಿಜನು)
ಬ್ರಾಹ್ಮಣ: ಇದ ಕೇಳಿ ಫಲವೇನವ್ವ?
(ಎಂದನು ಸುಯ್ದು ದುಗುಡದಲಿ)
ಕುಂತಿ: ತನ್ನ ಅನಿಷ್ಟವನು ಆಳಿಗೊಳ್ಳದ ಸುಜನ ನಿಕರಕೆ ಹೇಳ ಬೇಹುದು…ದೀನರಹ ವಿಪ್ರೇಂದ್ರ ಉಪಹತಿಯ ಕೇಳಬೇಹುದು…ಹೇಳು ನೀನು ಎಲೆ ವಿಪ್ರ…ತಾನು ಇದ ಕೇಳಿ ದುಃಖಿತೆಯಾಗಲಾಗದೆ ಹೇಳ್…ನ ದುಃಖಂ
ಪಂಚಭಿಸ್ಸಹವೆನ್ನದೇ ವಚನ.
ಬ್ರಾಹ್ಮಣ: ತಾಯೆ ಕೇಳು, ಈ ವಿಪ್ರಪುರದೊಳಗೆ ಎನಗೆ ಆಯವುಂಟು ಎಂದು ರಕ್ಕಸ ನಾಯಿ…ಊರ ಹೊರಗಣ ಶೈಲಶಿಖರದಲಿ ನೆಲಸಿಹನು…ಮನೆಮನೆಗೆ ಆಯಿದೊಬ್ಬನ… ಮೇಲಾಯಿ ಮಹಿಷದ್ವಯ
ಸಹಿತ…ನಿರ್ದಾಯದಲಿ ಹನ್ನೆರಡು ಕಂಡುಗದ ಅಕ್ಕಿಯೋಗರವ… ಇನಿತುವನು ಮನೆಮನೆಗೆ ಬಾರಿಯ
ದಿನಕೆ ತೆತ್ತಡೆ ತುಷ್ಟನು…ಇಲ್ಲದ ದಿನಕೆ ಊರನು ನುಂಗುವನು…ತಾಯೆ, ಈ ಪರಿ ಹಲವು ಕಾಲದಲಿ…
ಎನಗೆ ನಾಳಿನ ದಿನದ ಬಾರಿ ಎನಗೆ ಬಂದುದು…ಇದಕ್ಕೆ ತನ್ನಯ ತನುಜ ತಾನು ಉಳಿದಂತೆ ತನಗೆ
ಮಾನಿಸರಿಲ್ಲ…ಮಗನನು ಈವೆನೆ…ಪೌರಲೌಕಿಕವು ಅಗಡಹುದು…ಐಹಿಕದಲ್ಲಿ ಅಪಖ್ಯಾತಿ ತನ್ನನು
ತಗೆಹುದು…ಬಳಿಕ ಈ ಸಂತತಿಚ್ಛೇದ…ಬಗೆಯದೆ ಎನ್ನೊಡಲ ಅಸುರ ಘಾತಿಗೆ ಮಿಗೆ ವಿಭಾಡಿಸಿ ಕೊಡುವೆನು.
(ಎಂದೆನೆ…ಕುಂತೀದೇವಿ ನಗುತ ನುಡಿದಳು…ವಿಪ್ರ ಕೇಳೆಂದು)
ಕುಂತಿ: ಐಸಲೇ…ನಿಮಗಾದ ಗಸಣಿಯಿದು ಏಸರ ಆಪತ್ತು…ಅಂಜಬೇಡ, ಮಹಾಸುರನ ಬಾಣಸದ ಬೀಯಕೆ ಎಮಗೆ
ರಪಣವುಂಟು…ಏಸು ಕಂಡುಗದ ಅಕ್ಕಿಯೋಗರವೈಸ ನೀನು ಅಳವಡಿಸು…ಮೇಲುಂಟು ಏಸು ಸಾಧನವು ಅನಿತುವನು ತೆಗೆಸು.
(ಎಂದಳಾ ಕುಂತಿ..)
ಕುಂತಿ: ನಿಮ್ಮೂರೊಳಗೆ ತಿರುಗಿ ಕೂಳನು ತಿರಿದು ಸಲಹುವೆನು…ಎನ್ನ ಮಕ್ಕಳು ಧರೆಯನು ಆಳುವ ಸತ್ತ್ವ
ಸಹಸಿಗಳಿದ್ದು ಫಲವೇನು…ಹೊರೆಯಲು ಅರಿಯೆನು…ಹಿರಿಯನು ಎರಡೆಂಟರಿಯನು… ಅದರೊಳಗೆ ಒಬ್ಬನ
ಉದರಕೆ ಕೂಳನು ನೆರಹಲಾರೆನು. ( ಎಂದಳು ಕುಂತಿ ನಸುನಗುತ)
ಮಗನನು ಸಾಕಲಾರೆನು…ಆತನ ನಿಮ್ಮ ಅಸುರನ ಊಟಕೆ ನೂಕುವೆನು…ತನಗೆ ಉಳಿದವರು ಸಾಕು.
( ಎನಲು…ದ್ವಿಜನು ಅದಕೆ ಬೆರಗಾಗಿ)
ಬ್ರಾಹ್ಮಣ: ಮಗನನು ಸಾಕಲಾರದೆ ಉರಿಯಲಿ ನೂಕಿದವರುಂಟೇ..ಮಹಾಸತಿಯ ಆಕೆವಾಳತನಕ್ಕೆ ನಮಿಸಿದೆನು.
( ಎನುತ ಕೈಮುಗಿದ.)
ಕುಂತಿ: ಮರುಳಲಾ ಬ್ರಾಹ್ಮಣ…ತನ್ನ ನುಡಿ ವೃಥಾ ವಿಸ್ತರಣ ವಾಕ್ಯವೆ… ಬಂಡಿಯಲಿ ಸಂವರಿಸು… ಭಕ್ಷ್ಯವ ಅಡಸು…
ಸೂಪ ದಂಶಕವ ತರಿಸು…ತುಪ್ಪದ ಕೊಡನನು ಹರವಿಗಳ ಪಾಲ್ಮೊಸರನು ಒದವಿಸು.
(ಎನೆ…ಭೂಸುರನು ತಾಯೆ ಬೇಡ ಎನುತ…ಕುಂತಿಗೆ ಕೈಯ್ಯ ಮುಗಿದನು.)
ಬ್ರಾಹ್ಮಣ: ಭಾವಿಸಲು ವಸ್ತೂತ್ಕರದೊಳಗೆ ಎರವು ಮುಯಿಮುಟ್ಟುಂಟು… ಮಾರಿಯ ನಾಲಿಗೆಯ ಸವಿಗೆ ಮಕ್ಕಳ
ನೆರವ ಕೊಟ್ಟವರುಂಟೆ…ನೆರವಿ ನಗದೇ…ಕೇಳು, ನಮ್ಮನು ಇಹಪರ ಎರಡರಲಿ ಕಷ್ಟವು ಅಹುದು…ತಾಯಿ
ನೀ ಗರುವೆ ಅಹುದೌ…ದಿಟ ಮನುಜೆಯಲ್ಲ.
ಕುಂತಿ: ದಧೀಚಿ ಲೋಗರ ಹಾನಿಯನು ಏನನು ಇತ್ತು ಕಾಯಿದನು…ಶಿಬಿ ತಾನು ಏನನು ಇತ್ತನು..
ಜೀಮೂತವಾಹನನು ಏನ ಮಾಡಿದನೆಂದು ನೀನು ಕೇಳಿದೈ…ಇದನು ಏನುವನು ಕೇಳ್ದರಿಯಲಾ…
ಮತ್ಸೂನುವನು ನಿನ್ನ ಅವಸರಕೆ ಕೊಳ್ಳು… ಭೂಸುರ ಕೇಳು, ಆವನ ಅರ್ಥ ಪರಾರ್ಥದಲಿ ಸಂಜೀವನಿಯನು
ಐದಿತು.. ಆವನ ಅಸು ಪರಾರ್ಥದೊಳು ನಿರ್ವಾಣಮಾದುದು…ಇವರಿಬ್ಬರೇ ಲೋಕ ಮೂರರಲಿ…ಆ ವಿರಿಂಚಿ
ಪುರಂದರಾದಿಯ ದೇವತತಿಗೆ ಸಂಭಾವನೀಯರು.
(ಎಂದಳು ಆ ಕುಂತಿ…ಭೂಸುರನ ಚಿತ್ತವ ಬಲುಹಿನಲಿ ತಿಳುಹಿ ಮನೆಗೆ ಬಂದಳು… ಭೀಮನ
ಕೆಲಕೆ ಕರೆದಳು…ಹೇರಾಳದ ಔತಣವ ಹೇಳಿದಳು…ಭೀಮ ಮುದದಲಿ ಉಲಿದು ಬಾಹು
ಅಪ್ಪಳಿಸಿದನು…ಯಮನಂದನಾದಿಗಳು ದೈತ್ಯಜಯ ಸಂಶಯದ ಭೇದದಲಿ ಅಳಲಿ ನುಡಿದರು.)
ಭೀಮ: ನೀವು ಮರುಳುಗಳು.
(ಎಂದು ಕಲಿಭೀಮನು ಅವರ ಚಪ್ಪರಿಸಿದನು…ಆ ನಡುವಿರುಳು ವಿಪ್ರಭವನದ ಪಾಕಮಯ ರಭಸ ತೊಡಗಿತು.)
ಭೀಮ: ತಾಯಿ ಎನ್ನನು ಹೊರೆದಳು…ಪಾರಣೆಯ ಹೊತ್ತಿನೊಳು ಕುಂತಿಯ ಹರಸುವೆನು…ನಾಳಿನೊಳು ಆನು ಅರಸು.
(ಎನುತ ಕಲಿಭೀಮ ಹಿಗ್ಗಿದನು…ಪರಿಪರಿಯ ಬಹುಭಕ್ಷ್ಯ ಪಾಕದ ಪರಿಮಳದ ಶಾಕಾದಿಗಳ ವೊಗ್ಗರಣೆಗಳ
ಸೌರಭಕೆ…ಪವನಜನ ನಿದ್ರೆ ತಿಳಿದುದು…ಪೂರ್ವ ಶೈಲದ ಶಿರದ ಬಳಿಯಲಿ ತರಣಿ ಸುಳಿದನು…ಭೀಮ
ಕುಂತಿಯ ಕರೆದು ಆ ಮಹೀಸುರ ಗೃಹಕೆ ವಹಿಲದಲಿ ಕಳುಹಿದನು.)
ಬ್ರಾಹ್ಮಣ: ಏನು ಬಂದಿರಿ ತಾಯೆ ಚಾಪಳವು ಏನು ?
ಕುಂತಿ: ಭಾನು ಉದಿಸಿದನು… ಏನು ಜಂಜಡ ಬೇಡ… ತೆಗೆ ಬಂಡಿಯನು ಹೂಡು…ಭಕ್ಷ್ಯವ ಕುನಿಕಿಲಲಿ ಹಿಡಿಸು.
(ಎನಲು…ಸೂನು ಸಹಿತ ಘನ ಸುಮ್ಮಾನದಲಿ…ಸಾಧನ ಸಮಗ್ರವ ಭಾರಿಯ ಬಂಡಿ ಜವ ಜಡಿಯೆ
ಅಡಕಿದನು…ನಳನಳಿಪ ಬಹುವಿಧದ ಭಕ್ಷ್ಯಾವಳಿಯ ಹೆಡೆಗೆಗಳ ಓರಣಿಸಿ ಮಂಡಳಿಸಿ…ಕೂಡಿದ ಹಾಲು
ತುಪ್ಪದ ಹಲವು ಹರವಿಗಳ ಬಳಸಿ…ಮುಚ್ಚಿದ ವಿವಿಧ ಶಾಕಾವಳಿಯ ಬೋನದ ಬಿಗಿದ…ಕುನಿಕಿಲ
ಕಳವೆಯಕ್ಕಿಯ ಕೂಳ ರಾಶಿಯ ಬಂಡಿ ಜೋಡಿಸಿತು…ಮರಳಿ ಬಂದಳು ಕುಂತಿ…ಭೀಮನ ಕರೆದಳು.)
ಕುಂತಿ: ಏಳೈ ಪಾರಣೆಗೆ ಕಾತರಿಸದಿರು…ಖಳನೊಡನೆ ಸತ್ವದ ಅನುವರಿದು ಸದೆವುದು…ಬರವ ಬರಿದೇ ಬೀಯ
ಮಾಡದಿರು…ಉರುವಣೆಯನು ಅರಿದು ಆನುವುದು… ದೈತ್ಯನನು ಸಂಹರಿಸು.
(ಎಂದು ತಾಯ್ ನಂದನನ ಹರಸಿದಳು…ಬೆರಳ ದರ್ಭೆಯ ಹರಿದು ಧೌತಾಂಬರವನು ಬಿಗಿದು
ಉಟ್ಟನು…ಕುಂತಿಯ ಚರಣ ರಜವನು ಕೊಂಡು…ಧರ್ಮಜನ ಅಂಘ್ರಿಗೆ ಅಭಿನಮಿಸಿ…ಹರುಷ ಮಿಗೆ
ಹರಿತಂದು ಬಂಡಿಯ ಶಿರದ ಹಲಗೆಯನು ಅಡರಿದನು…ಬಲು ಹುರಿಯ ಹಗ್ಗವ ಹಿಡಿದು ಹೂಡಿದ ಎತ್ತುಗಳ ಜಡಿದನು.)
ಪುರಜನ: ಪುರದೊಳಗೆ ಭಿಕ್ಷಾನ್ನದಿಂದ ಐವರು ಮಹಾಪಂಡಿತರು ನಿರ್ಧನ ಪುರುಷರು… ಅವರೊಳಗೆ ಒಬ್ಬನನು…
ನಮ್ಮೂರ ದಾನವನ ಪರಿವಿಡಿಯ ಭೋಜನಕೆ…ತತ್ ಭೂಸುರನ ತಾಯಿ ಕೊಟ್ಟಳು…ಗಡ…ಏನಚ್ಚರಿ.
(ಎನುತ ನೋಟಕರ ನೆರವಿ ಪವನಜನ ಮುತ್ತಿತು…ಪೌರಜನವು ಐತರಲು…ಬಂಡಿಯನು ಊರ ಹೊರವಂಡಿಸಿದನು.)
ಭೀಮ: ಎಲ್ಲರು ದೂರದಲ್ಲಿರಿ…ದೈತ್ಯನಲಿ ಸಾವವನೆ ತಾ…ಸಾಕು…ಸಾರಿ ನೀವು
(ಎಂದೆನುತ…ರಣಧೀರ ಮಾರುತಿ ಹೂಡಿದ ಹೋರಿಗಳ ಹೊಯ್ದು…ಅಬ್ಬರಿಸಿ ಅಸುರನ ಇದ್ದ ಎಡೆಗೆ…
ಮಿಕ್ಕು ಹರಿಸಿದನು…ಎಡೆಯಲೇ ಭಕ್ಷ್ಯಾದಿಗಳ ಬರಿ ಹೆಡೆಗೆ ಉಳಿದವು…ಕೂಳೊಳು ಅರ್ಧವ ಹೊಡೆದು…
ಹಾಲು ತುಪ್ಪದ ಹರವಿಯ ಓಜೆಯಲಿ ಕುಡಿದು…ಪಕ್ಕಲೆ ನೀರನು ಒಯ್ಯನೆ ಸುರಿದನು…ನಡೆಸಿ ತಂದನು…
ದನುಜನ ಕಂಡು…)
ಭೀಮ: ಎಲವೋ ಕುನ್ನಿ ಕೂಳಿದೆ ತಿನ್ನು ಬಾರ…
(ಎನುತ ನುಡಿದನು…ಇವನ ಉದ್ದಂಡತನವ ಕಂಡು…ಖಳ ಬೆರಗಾದನು.)
ಬಕಾಸುರ: ಅಚ್ಚರಿಯಲಾ…ತನ್ನೊಡನೆ ತೊಡಕುವರೆ ಹರಿ ಖಂಡಪರಶುಗಳು ಅಳುಕುವರು…ಬಂಡಿ ತುಂಬಿದ
ಕೂಳನು…ಇವನು ಇಂದು ಉಂಡು ಬದುಕಲಿ…ಇವ ಸಹಿತ ಊರ ಪಾರ್ವರ ಹಿಂಡುವೆನು.
(ಎನುತ ಅಮರಾರಿ ಹಲು ಮೊರೆದನು…ಮತ್ತೆ ಮಾರುತಿ ಶೇಷಾನ್ನದಲಿ ತುತ್ತುಗಳ ತೋರುತ
ತೂಗುತ್ತ…ಅವನನು ಬೆರಳಲಿ ಏಡಿಸುತ…ಬಾಯೊಳು ಮೆತ್ತಿಕೊಂಡನು.)
ಬಕಾಸುರ: ಇತ್ತಲು ಎನ್ನಯ ಹಸಿವು ಹೆಚ್ಚಿದೆ…ತುತ್ತು ಒಳಗೆ ಹೊಗದು…ಇವನ ತೊಡಗಲದು ಎತ್ತಲು… ಅಕಟಾ ವಿಧಿ.
(ಎನುತ ಮುರಿದು ಅಮರಾರಿ ಎದ್ದನು…ಎರಡು ಕೈಯನು ಬಲಿದು ಮುಷ್ಟಿಯೊಳು ಖಳ ಬೆನ್ನನು
ಎರಗಿದನು…ಇತ್ತಲು ಭೀಮ ಬಲು ತುತ್ತುಗಳ ತೋಟಿಯಲಿ ಏನೆಂದು ಅರಿಯನು…ಮರನ ಮುರಿದು
ಎರಗಿದರೆ ಪುನರಪಿ ಮುರಿದು ನೋಡಿದು…)
ಭೀಮ: ಅರೆಗೆಲಸ ಪೂರೈಸಲು ಬಹೆನು…ನಿಲ್ಲು.
(ಎಂದನು ನಗುತ ಕಲಿಭೀಮ…ಅರಸ ಕೇಳೈ ನಿಮ್ಮ ಭೀಮನ ಪರಿಯನು…ಈ ಪರಿ ಬಂಡಿ ತುಂಬಿದ
ಸರಕನೆಲ್ಲವ ತನ್ನ ಜಠರದಲಿ ಸಂತವಿಟ್ಟನು…ವರ ಸಮಾಧಾನದಲಿ ಕೈದೊಳೆದು…ಉರವಣಿಪ
ತೇಗಿನ ತರಂಗದ ಪರಬಲಾಂತಕನು ಎದ್ದು ನಿಂದನು ಸಿಂಹನಾದದಲಿ…)
ಭೀಮ: ಸಮಚಿತ್ತದಲಿ ಉಂಡೆವೈ…ಎಡೆಯಲಿ ನೀವ್ ಘಾಯಗಳನು ಕೊಂಡಿರೈ…ನಾವು ಸಹಿತ ಈ ಊರ ಹಾರುವರ
ಹಿಂಡುವಿರಲೈ…ಹಲ ಕಾಲಕೆ ಉಂಡೆವೈ…ಖಂಡಪರಶುವಿನ ಆಣೆ …ಇಂದಿನಲಿ ಉಂಡದು ಊಟ ಕಣಾ…ನಿಧಾನವು…
(ಎನುತ ಭೀಮ ಮದವೇರಿದನು…ಖಾತಿಗೊಳ್ಳದೆ ಮುನ್ನ ಪವನಜನು ತನ್ನ ಹೊಯ್ಗುಳನು ಓತು
ಕೊಟ್ಟನು…ಈತನು ಮುಳಿದು…ಬಳಿಕ ಆತನು ಇವನ ಏನ ಮಾಡುವನೊ…ಈತನು ಗಜರಿ ಎದ್ದನು…
ಆತನು ಇದಿರಾದನು…ಬಳಿಕಿನೊಳು ಸುರಾರಿಯ ವಾತಜನ ಹೋರಟೆಗೆ ವಾಸುಕಿಯ ಕೊರಳು
ಅಳುಕಿದುದು…ಒಬ್ಬರನು ಒಬ್ಬರು ಹಿಡಿದರು…ಉರದಲಿ ಹೊಡೆದು ಹಿಂಗಿದರು…ಉಲಿದು ಹೆಮ್ಮರನು
ಉಡಿಯೆ ಹೊಯ್ದಾಡಿದರು…ತೋಳು ಬಲುಹಿನಲಿ ತಿವಿದರು…ಅವನು ಕಲಿ ಭೀಮನ ಕೊಡಹಿದನು…
ಉಗ್ಗಡದ ಸತ್ವದಿ ಉಂಡ ಕೂಳಿನ ಕಡುಹ ತೋರ ಎಂದು ಒರಲಿ ಅನಿಲ ನಂದನನ ತುಡುಕಿದನು…
ಕಲಿಭೀಮನು ಸಿಕ್ಕಿದನು ಎನೆ ಕೈಯಿಕ್ಕಿ ಮೈಯನು ಕೊಟ್ಟನು…ಅಸುರನ ಹೊಕ್ಕು ತಿರುಗಿ ತಿವಿದನು…
ಬದಿಯೆಲು ನುಗ್ಗು ನುಸಿಯಾಗೆ…ಬಿಕ್ಕುಳಿಯ ತಾಳಿಗೆಯ ಮೂಗಿನೊಳು ಒಕ್ಕು ರುಧಿರದ ಧಾರೆ ಬಿಗಿದು
ಉರೆ ಡೊಕ್ಕರಿಸಲು…ಅಸುರನ ತನುವ ನಿಮಿಷದಲಿ ಅಸು ನೀಗಿತು… ಧನುಜನ ಕೊಂದು…ಹೆಣನ
ಬಂಡಿಯ ಹಿಂದೆ ಬಂಧಿಸಿ…ಪುರದ ಬಾಹೆಗೆ ತಂದು ಬಿಟ್ಟನು…ತನತನಗೆ ಜನಜಾಲ ಜೋಡಿಯಲಿ
ಬಂದು ಹೆಣನ ಕಂಡುದು ನೆರದ ಪೌರಜನ).
ಪುರಜನ: ಭೂಸುರರು ಇಂದು ಧನ್ಯರು…ವಿಪ್ರಜಾತಿಗೆ ಸಂದುದು ಇನ್ನು ಅಗ್ಗಳಿಕೆ…ಈ ಅಮಾನುಷ ಶಕ್ತಿಯು ಅಮರರ
ರಾಯಗೆ ಅಳವಲ್ಲ…ವಿಪ್ರ ನಿಕಾಯಕೆ ಇದು ಸಾಮಾನ್ಯವೇ… ನಮ್ಮ ಅಗ್ರಹಾರದಲಿ ಇವರು ಕಾಯಿದವರು…
ಪದ್ಮಜ ಸೋಮಧರ ನಾರಾಯಣರು ವಿಪುಲ ಶ್ರೇಯ ಕೊಡಲಿ.
( ಎಂದು ಭೂಸುರ ವ್ರಾತ ಹರಸಿತು.)
ಹೊಸಗನ್ನಡ ಗದ್ಯ
ಜನಮೇಜಯ ಮಹಾರಾಜನೇ ಕೇಳು, ಶಾಲಿಹೋತ್ರ ಮುನಿಯ ಆಶ್ರಮದಿಂದ ಕುಂತಿಯೊಡನೆ ಪಾಂಡವರು ಬೀಳ್ಕೊಂಡು ಮುನ್ನಡೆದು, ಮತ್ತೆ ವ್ಯಾಸನನ್ನು ಕಂಡರು. “ನೀವು ಏಕಚಕ್ರನಗರದಲ್ಲಿ ಆರು ತಿಂಗಳು ಕಾಲ ಕಳೆಯಿರಿ. ಬಳಿಕ ಒಳ್ಳೆಯದಾಗುತ್ತದೆ” ಎಂದು ಹೇಳಿ, ವ್ಯಾಸಮುನಿಯು ಹಿಂದಿರುಗಿದನು.
ಪಾಂಡವರು ತಮ್ಮ ಕ್ಶತ್ರಿಯ ಉಡುಗೆ ತೊಡುಗೆಗಳನ್ನು ತ್ಯಜಿಸಿ. ಬ್ರಾಹ್ಮಣ ವರ‍್ಣದವರಂತೆ ಉಡುಗೆ ತೊಡುಗೆಯನ್ನು ತೊಟ್ಟರು. ಅಂದವಾಗಿ ಕಾಣುವ ಗಡ್ಡ, ದರ‍್ಬೆ, ನಿರಿಗೆಯ ಉಡುಗೆ, ಹಣೆಯ ಮೇಲೆ ವಿಬೂತಿಯನ್ನು ಲೇಪಿಸಿಕೊಂಡು ಬ್ರಾಹ್ಮಣ ವೇಶದಲ್ಲಿ ಏಕಚಕ್ರ ನಗರವನ್ನು ಹೊಕ್ಕರು.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಬೀಡಾರವನ್ನು ಮಾಡಿದರು. ಆ ನಗರದಲ್ಲಿ ಮನೆಮನೆಗಳಲ್ಲಿ ಬಿಕ್ಕೆಯನ್ನು ಬೇಡುವ ಯಾಚಕ ಕಸುಬನ್ನು ಕಯ್ಗೊಂಡು, ಅಲ್ಲಿ ಕೆಲವು ದಿವಸಗಳನ್ನು ಕಳೆದರು. ಅಯ್ದು ಮಂದಿ ಮಕ್ಕಳು ತಾವು ಬೇಡಿ ತಂದ ಆಹಾರವನ್ನು ತಾಯಿ ಕುಂತಿಯ ಕಯ್ಗೆ ಕೊಟ್ಟರೆ, ಕುಂತಿಯು ಆನಂದದಿಂದ ಅದನ್ನು ಎರಡು ಬಾಗ ಮಾಡಿ, ಒಂದು ಬಾಗವನ್ನು ಬೀಮನಿಗೆ ನೀಡಿ, ಉಳಿದೊಂದು ಬಾಗವನ್ನು ಕುಂತಿ ಮತ್ತು ನಾಲ್ವರು ಮಕ್ಕಳು ಉಣ್ಣುತ್ತಿದ್ದರು.
ಸಂಪತ್ತಿನ ಬಗ್ಗೆ ಹೇಳುವುದಾದರೆ ಹಸ್ತಿನಪುರದ ಅರಸುಗಳ ಸಂತತಿ…ಪರಾಕ್ರಮದ ತೇಜಸ್ಸನ್ನು ನೋಡುವುದಾದರೆ ಇಂದ್ರ, ಸೂರ‍್ಯರ ತೇಜಸ್ಸಿಗೂ ಮಿಗಿಲಾದುದು…ಅಂತಹ ಪಾಂಡವರು ಈಗ ಏಕಚಕ್ರ ನಗರದಲ್ಲಿ ಬೇಡಿ ತಂದ ಅನ್ನವನ್ನು, ತಾಯಿ ಕುಂತಿಯು ಎರಡು ಬಾಗ ಮಾಡಿ ಮಕ್ಕಳನ್ನು ಸಲಹುತ್ತಿದ್ದಾಳೆ ಎಂದ ಮೇಲೆ ಇನ್ನು ಉಳಿದವರ ಪಾಡೇನು ಎಂದು ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ಮಹಾಬಾರತದ ಕತೆಯನ್ನು ಹೇಳುತ್ತಿದ್ದಾನೆ.
ಸೂರ‍್ಯೋದಯವಾಗುವುದಕ್ಕೆ ಮೊದಲೇ ಪ್ರಶಾಂತ ಬ್ರಾಹ್ಮೀ ಮುಹೂರ‍್ತದಲ್ಲಿ ಎದ್ದು, ತಾಯಿಯ ಪಾದಗಳಿಗೆ ನಮಸ್ಕರಿಸಿ, ಸಂದ್ಯಾವಿದಿಗಳನ್ನು ಮಾಡಲು ಗೊತ್ತುಪಡಿಸಿದ್ದ ಜಾಗಕ್ಕೆ ನಡೆಯುತ್ತಿದ್ದರು. ಅಲ್ಲಿ ತ್ರಿಕಾಲಗಳಲ್ಲಿ ಮಾಡುವ ಜಪಗಳನ್ನು ನಡೆಸಿ, ಪುರಾಣಶ್ರವಣ ಮಾಡುತ್ತಿದ್ದರು. ಮದ್ಯಾಹ್ನದಲ್ಲಿ ಬಿಕ್ಕೆಬೇಡುವುದಕ್ಕೆ ಹೊರಡುವರು. ಇದು ಪಾಂಡವರಿಗೆ ನಿತ್ಯ ನಿಯಮವಾಗಿತ್ತು.
ಊಟವಾದ ಮೇಲೆ ವೇದವಿದರಾದ ಬ್ರಾಹ್ಮಣರ ಜತೆಗೂಡಿ ರಾಜರಿಗೆ ಸಂಬಂದಿಸಿದ ವಿಚಾರಗಳನ್ನು ಮಾತನಾಡುತ್ತ ಆನಂದದಿಂದ ಕಾಲ ಕಳೆಯುತ್ತಿದ್ದರು. ಈ ರೀತಿ ತಮ್ಮ ರಾಜತನವನ್ನು ಮರೆತಿದ್ದರು. ಬ್ರಾಹ್ಮಣರ ತೇಜಸ್ಸಿನಿಂದ ಕಂಗೊಳಿಸಿದರು. ಆ ಪಾಂಡವರ ದಿನಚರಿಯ ನಡವಳಿಕೆ ಹೀಗಿತ್ತು ಎಂದು ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ಹೇಳುತ್ತಿದ್ದಾನೆ.
ಹೀಗೆಯೇ ಇರುವಲ್ಲಿ…ಕೆಲವು ತಿಂಗಳು ಕಳೆದ ಮೇಲೆ, ಆ ಪಕ್ಕದ ಮನೆಯಲ್ಲಿ ಸಾಯಂಕಾಲದ ಸಮಯದಲ್ಲಿ ಸಂಕಟದ ನೋವಿನ ದನಿಯನ್ನು ಕೇಳಿದ ಕುಂತಿ, ಕೂಡಲೇ ವೇಗವಾಗಿ ಅಲ್ಲಿಗೆ ಹೋದಳು. ಮನೆಯ ಯಜಮಾನನನ್ನು ಕಂಡು ವಿನಯದಿಂದ “ಬ್ರಾಹ್ಮಣೋತ್ತಮನೇ, ಈ ನಿನ್ನ ಸಂಕಟವೇನು…ಇದ್ದಕ್ಕಿದ್ದಂತೆ ಉಂಟಾಗಿರುವ ಅತಿಯಾದ ಸಂಕಟಕ್ಕೆ ಕಾರಣವೇನು” ಎಂದು ಕೇಳಿದಳು.
“ನಾಳೆ ವಿವಾಹೋತ್ಸವದ ಸಂಬ್ರಮವಿರುವಾಗ ಇಂದು ಬಾಲಿಕೆಯರ ಓಕುಳಿಯಾಟದ ಮಳೆಯಲ್ಲಿ ಸಿಡಿಲೆರಗಿದಂತಾಗಿದೆ” ಎಂದನು ಆ ಬ್ರಾಹ್ಮಣ…..
“ಹೇಳಿ ಸ್ವಾಮಿ, ನಿಮಗೆ ಆದ ತೊಂದರೆಯೇನು?…ಅದನ್ನು ನಾನು ಕೇಳಬಾರದೇ?” ಎಂದು ಕುಂತಿ ಕೇಳಲು, ಆ ಬ್ರಾಹ್ಮಣನು ಇದನ್ನು ಕೇಳಿ ಪಲವೇನು ತಾಯಿ ಎಂದು ಸಂಕಟದಿಂದ ನಿಟ್ಟುಸಿರಿಟ್ಟನು.
ಕುಂತಿ ಸುಮ್ಮನಾಗದೆ ತನಗೆ ಆದ ಸಂಕಟವನ್ನು ಕಡೆಗಣಿಸಿದ ಸಜ್ಜನರ ಸಮೂಹದ ಬಳಿ ಹೇಳಿಕೊಳ್ಳಬೇಕು. ಸಂಕಟಕ್ಕೆ ಒಳಗಾದ ಬ್ರಾಹ್ಮಣರ ತೊಂದರೆಯನ್ನು ಕೇಳಬೇಕು. ಅಯ್ಯಾ ಬ್ರಾಹ್ಮಣ ಹೇಳು ಹೇಳು. ಇದನ್ನು ಕೇಳಿ ನಾನು ನಿನ್ನ ಸಂಕಟದಲ್ಲಿ ಬಾಗಿಯಾಗಬಾರದೇನು? ಅಯ್ದು ಮಂದಿಯೊಡನೆ ಹೇಳಿಕೊಂಡ ಸಂಕಟ…ಸಂಕಟವಾಗಿ ಉಳಿಯುವುದಿಲ್ಲ ಎಂಬ ಮಾತಿಲ್ಲವೇ ಎಂದು ಒತ್ತಾಯ ಮಾಡಿ ಕೇಳಿದಳು.
ಆ ಬ್ರಾಹ್ಮಣನು ಹೀಗೆ ಹೇಳಿದನು…“ತಾಯೇ ಕೇಳು. ಈ ಬ್ರಾಹ್ಮಣರ ಊರಿನಲ್ಲಿ ತನಗೆ ಆಹಾರ ಸಿಗುತ್ತದೆಯೆಂದು ಒಬ್ಬ ರಕ್ಕಸ ನಾಯಿ ಊರ ಹೊರಗೆ ಇರುವ ಬೆಟ್ಟದ ಮೇಲೆ ನೆಲಸಿದ್ದಾನೆ. ಪ್ರತಿದಿನವೂ ಅವನಿಗೆ ಮನೆ ಮನೆಯಲ್ಲಿ ಒಬ್ಬನನ್ನು ಆರಿಸಿ, ಅವನ ಜೊತೆಗೆ ಎರಡು ಕೋಣಗಳು ಸಹಿತ ಹನ್ನೆರಡು ಕಂಡುಗ ಅಕ್ಕಿಯ ಅನ್ನವನ್ನು ಕಳುಹಿಸಬೇಕು. ಇದೆಲ್ಲವನ್ನು ಮನೆಮನೆಗೆ ಸರದಿಯಂತೆ ಕೊಟ್ಟರೆ ನೆಮ್ಮದಿಯಿಂದ ಸುಮ್ಮನಿರುತ್ತಾನೆ. ಕೊಡದೆ ಹೋದ ದಿನದಂದು ಊರನ್ನೇ ನುಂಗುತ್ತಾನೆ. ಈ ರೀತಿ ಹಲವು ಕಾಲದಿಂದ ನಡೆದು ಬಂದಿದೆ. ತಾಯೇ, ನಾಳೆಯ ದಿನದ ಸರದಿ ನನಗೆ ಬಂದಿದೆ. ನಮ್ಮ ಮನೆಯಲ್ಲಿ ನನ್ನ ಮಗನೊಬ್ಬ…ನಾನೊಬ್ಬ ಮಾತ್ರ ಇದ್ದೇವೆ. ಮಗನನ್ನು ಕೊಡೋಣವೆಂದರೆ ಮೋಕ್ಶಕ್ಕೆ ಹಾನಿಯಾಗುತ್ತದೆ. ಈ ಲೋಕದಲ್ಲಿ ಕೆಟ್ಟ ಹೆಸರು ನನಗೆ ಬರುವುದು. ಅದಲ್ಲದೆ ಈ ನನ್ನ ವಂಶ ನಿಂತು ಹೋಗುವುದು. ಆದ್ದರಿಂದ ಬೇರೆ ಏನನ್ನು ವಿಚಾರ ಮಾಡದೆ, ಈ ನನ್ನ ಒಡಲನ್ನು ರಕ್ಕಸನಿಗೆ ಬಲಿ ಕೊಡುತ್ತೇನೆ” ಎಂದು ಹೇಳಲು…ಕುಂತೀದೇವಿ ನಗುತ್ತ ಬ್ರಾಹ್ಮಣನೇ ಕೇಳು ಎಂದು ನುಡಿದಳು.
“ಅಶ್ಟೇ ಅಲ್ಲವೇ !…ನಿಮಗೆ ಉಂಟಾದ ಕೇಡು ಅದೆಂತಹ ಆಪತ್ತು? … ಹೆದರಬೇಡ…ಆ ದೊಡ್ಡ ರಕ್ಕಸನಿಗೆ ಕೊಡಬೇಕಾದ ಬಲಿಗೆ ನನ್ನಲ್ಲಿ ಸಾದನವುಂಟು. ಎಶ್ಟು ಕಂಡುಗದ ಅಕ್ಕಿಯ ಅನ್ನವಾಗಬೇಕೋ ಅಶ್ಟನ್ನೂ ನೀನು ಅಣಿ ಮಾಡು. ಇದರ ಮೇಲೆ ಇನ್ನೇನು ಸಾಮಗ್ರಿಗಳು ಬೇಕೋ ಅವನ್ನೆಲ್ಲಾ ತೆಗೆದಿಡು” ಎಂದಳು ಆ ಕುಂತಿ.
ಕುಂತಿಯು ಮಾತನ್ನು ಮುಂದುವರಿಸಿ…“ನಿಮ್ಮ ಊರಿನಲ್ಲಿ ಅಲೆದಾಡಿ, ಅನ್ನವನ್ನು ಬೇಡಿ ತಂದು ನನ್ನ ಮಕ್ಕಳನ್ನು ಸಾಕುತ್ತಿದ್ದೇನೆ..ನನ್ನ ಮಕ್ಕಳು ಬೂಮಿಯನ್ನು ಆಳುವ ಶಕ್ತಿಯನ್ನು ಹೊಂದಿ ಸಾಹಸಿಗಳಾಗಿದ್ದರೂ ಪ್ರಯೋಜನವೇನು ?…ಅವರನ್ನು ಸಾಕುವುದಕ್ಕೆ ನನ್ನಿಂದ ಆಗುತ್ತಿಲ್ಲ…ದೊಡ್ಡವನು ಕಪಟತನ ಕುತಂತ್ರವನ್ನು ಅರಿತವನಲ್ಲ. ಉಳಿದವರಲ್ಲಿ ಒಬ್ಬನ ಹೊಟ್ಟೆ ತುಂಬವಶ್ಟು ಅನ್ನವನ್ನು ಹೊಂದಿಸಲಾರೆನು” ಎಂದು ನಸುನಗುತ್ತ ಕುಂತಿ ಹೇಳಿದಳು.
“ಆ ಒಬ್ಬ ದೊಡ್ಡಹೊಟ್ಟೆಯ ಮಗನನ್ನು ಸಾಕಲಾರೆನು. ಆತನನ್ನು ನಿಮ್ಮ ರಕ್ಕಸನ ಊಟಕ್ಕೆ ನೂಕುತ್ತೇನೆ. ನನಗೆ ಉಳಿದ ನಾಲ್ವರು ಸಾಕು” ಎಂದಳು. ಅದನ್ನು ಕೇಳಿ ಆ ಬ್ರಾಹ್ಮಣನು ಅಚ್ಚರಿಗೊಂಡು ಹೆತ್ತ ಮಗನನ್ನು ಸಾಕಲಾರದೆ ಬೆಂಕಿಯಲ್ಲಿ ಉಂಟೆ? ಮಹಾಸತಿಯ ದಿಟ್ಟತನಕ್ಕೆ ನಮಿಸುತ್ತೇನೆ ಎನ್ನುತ್ತ ಕೈಮುಗಿದನು.
“ಬ್ರಾಹ್ಮಣ…ನನ್ನ ಮಾತು ನಿನ್ನ ತಲೆಗೆ ಹೋಗುತ್ತಿಲ್ಲ…ನಾನು ಸುಮ್ಮನೆ ಹೇಳಲಿಲ್ಲ. ಬಂಡಿಯನ್ನು ಸಿದ್ದಪಡಿಸಿ ಅನ್ನ ಆಹಾರಗಳನ್ನು ತುಂಬು. ಅನ್ನದೊಡನೆ ನೆಂಚಿಕೊಳ್ಳಲು ಬಳಸುವ ವ್ಯಂಜನಗಳನ್ನು ಮತ್ತು ಉಪ್ಪಿನಕಾಯಿಯನ್ನು ತರಿಸು…ತುಪ್ಪದ ಕೊಡಗಳನ್ನು ಮತ್ತು ಹಾಲು ಮೊಸರುಗಳನ್ನು ತುಂಬಿದ ಪಾತ್ರೆಗಳನ್ನು ಒದಗಿಸು” ಎಂದು ನುಡಿಯಲು…ತಾಯೇ ಬೇಡ ಎನುತ್ತ ಬ್ರಾಹ್ಮಣನು ಕೈಮುಗಿದನು.
ವಸ್ತುಗಳನ್ನು ಬೇಡಿ ಪಡೆಯುವುದುಂಟು…ಇಲ್ಲವೆ ತೆಗೆದುಕೊಂಡ ವಸ್ತುಗಳಿಗೆ ಪ್ರತಿಯಾಗಿ ಕೊಡುವುದುಂಟು…ಸಾವಿನ ದೇವತೆಯಾದ ಮಾರಿಯ ನಾಲಿಗೆಯ ರುಚಿಗಾಗಿ ಮಕ್ಕಳನ್ನು ಬಲಿಕೊಟ್ಟವರುಂಟೆ…ಜನರು ಇದನ್ನು ನೋಡಿ ಇಲ್ಲವೇ ಕೇಳಿ ನಗುವುದಿಲ್ಲವೇ? ಕೇಳು, ಇದು ನಮ್ಮನ್ನು ಇಹ ಪರ ಎರಡರಲ್ಲೂ ಕಶ್ಟಕ್ಕೆ ತಳ್ಳುವುದು. ತಾಯಿ, ನೀನು ಪೂಜ್ಯಳಾಗಿರುವೆ… ನಿಜಕ್ಕೂ ನೀನು ಮಾನವಳಲ್ಲ ಎಂದನು.
ಆಗ ಕುಂತಿಯು ಮತ್ತೆ ಮಾತನಾಡತೊಡಗುತ್ತಾಳೆ. “ಬ್ರಾಹ್ಮಣನೇ ಕೇಳು, ಏನನ್ನು ಕೊಟ್ಟು ದದೀಚಿ ರಿಸಿಯು ಲೋಕದ ಜನರನ್ನು ತೊಂದರೆಯಿಂದ ಕಾಪಾಡಿದನು…ಶಿಬಿ ಚಕ್ರವರ‍್ತಿಯು ತಾನೇನು ಕೊಟ್ಟನು…ಜೀಮೂತವಾಹನನು ಏನು ಮಾಡಿದನೆಂದು ಕೇಳಿ ಬಲ್ಲೆಯಾ…ನೀನು ಇದು ಯಾವುದನ್ನೂ ಕೇಳಿ ತಿಳಿದಿಲ್ಲವೇ…ನನ್ನ ಮಗನನ್ನು ನಿನ್ನ ಈ ಆಪತ್ತಿನ ಕಾಲದಲ್ಲಿ ಬಳಸಿಕೊ…ಯಾವನ ಸಂಪತ್ತು ಪರರ ಒಳಿತಿಗಾಗಿ ಸತ್ತವರನ್ನು ಬದುಕಿಸುವ ಸಂಜೀವಿನಿಯಂತೆ ನೆರವಾಗುತ್ತದೆಯೋ…ಯಾರ ಪ್ರಾಣವು ಅನ್ಯರನ್ನು ಉಳಿಸುವುದಕ್ಕಾಗಿ ಸಲ್ಲುತ್ತದೆಯೋ-ಇಂತಹ ಇವರಿಬ್ಬರೇ ಮೂರು ಲೋಕಗಳಲ್ಲಿ ಆ ಬ್ರಹ್ಮ, ಇಂದ್ರಾದಿ ದೇವತೆಗಳ ಸಮೂಹದಿಂದ ಮಾನ್ಯರಾಗುತ್ತಾರೆ” ಎಂದು ನುಡಿದು ಕುಂತಿಯು ಆ ಬ್ರಾಹ್ಮಣನನ್ನು ಒಪ್ಪಿಸಿ, ತನ್ನ ಮನೆಗೆ ಹಿಂತಿರುಗಿ ಬಂದಳು.
ಬೀಮನನ್ನು ಪಕ್ಕಕ್ಕೆ ಕರೆದಳು. ಅವನಿಗೆ ದೊಡ್ಡ ಪ್ರಮಾಣದ ರುಚಿಕರ ಊಟದ ಸಿಗುವುದರ ಬಗ್ಗೆ ಹೇಳಿದಳು. ಬೀಮನು ಆನಂದದಿಂದ ಅಬ್ಬರಿಸುತ್ತ ತನ್ನ ಬುಜವನ್ನು ತಟ್ಟಿಕೊಂಡನು. ಯಮನಂದನಾದಿಗಳು ರಕ್ಕಸನನ್ನು ಜಯಿಸುವ ವಿಚಾರದಲ್ಲಿ ತಮ್ಮ ಸಂಶಯವನ್ನು ವ್ಯಕ್ತಪಡಿಸಿದರು.
ಬೀಮನು ದರ‍್ಮರಾಯಾದಿಗಳನ್ನು ನೀವು ತಲೆಕೆಟ್ಟವರು. ನಿಮಗಿದು ತಿಳಿಯುವುದಿಲ್ಲ ಎಂದು ಅವರನ್ನು ಮೂದಲಿಸಿದನು. ಆ ನಡು ಇರುಳಿನಲ್ಲಿ ಬ್ರಾಹ್ಮಣನ ಮನೆಯಲ್ಲಿ ಅಡುಗೆಯ ಸಿದ್ದತೆಯು ಜೋರಾಗಿ ಶುರುವಾಯಿತು. ತಾಯಿ ನನ್ನನ್ನು ಕಾಪಾಡಿದಳು. ನಾಳೆ ಊಟ ಮಾಡುವ ಸಮಯದಲ್ಲಿ ನಾನು ಅವಳನ್ನು ನೆನೆದುಕೊಂಡು ಆಕೆಗೆ ಒಳಿತನ್ನು ಬಯಸುವೆನು. ನಾಳೆ ನಾನೇ ರಾಜ ಎನುತ್ತ ಬೀಮ ಹಿಗ್ಗಿದನು.
ಬಗೆಬಗೆಯ ಉಣಿಸು ತಿನಸುಗಳ ಅಡುಗೆಯ ಗಮಲು…ಕಾಯಿಪಲ್ಲೆಗಳಿಗೆ ಹಾಕಿದ ಒಗ್ಗರಣೆಗಳ ಕಂಪು ಬೀಮನನ್ನು ನಿದ್ರೆಯಿಂದ ಎಚ್ಚರಗೊಳ್ಳುವಂತೆ ಮಾಡಿತು. ಮೂಡಣ ದಿಕ್ಕಿನಲ್ಲಿ ರವಿಯು ಮೂಡಿದನು. ಬೀಮನು ಕುಂತಿಯನ್ನು ಕರೆದು, ಆ ಬ್ರಾಹ್ಮಣನ ಮನೆಗೆ ಬೇಗ ಕಳುಹಿಸಿದನು.
ಕುಂತಿ ಬಂದದ್ದನ್ನು ಕಂಡು ಆ ಬ್ರಾಹ್ಮಣನು “ಏನು ಬಂದಿರಿ ತಾಯೇ…ಏನು ಅವಸರ ಎಂದು ಕೇಳಲು, ಕುಂತಿಯು ಬೆಳಗಾಯಿತು ಹೊತ್ತು ಹುಟ್ಟಿತು ಏನು ಗೊಂದಲ ಬೇಡ ಬಂಡಿಯನು ಹೂಡು ಉಣಿಸು ತಿನಿಸುಗಳನ್ನು ಪಾತ್ರೆಗಳಲ್ಲಿ ತುಂಬಿಸು” ಎಂದು ಹೇಳಲು, ಕೂಡಲೇ ಆ ಬ್ರಾಹ್ಮಣನು ತನ್ನ ಮಗನ ಜತೆಗೂಡಿ ಮಾಡಿದ್ದ ಅಡುಗೆಯ ಎಲ್ಲಾ ಬಗೆಯ ಉಣಿಸು ತಿನಸುಗಳನ್ನು ದೊಡ್ಡ ಬಂಡಿಯೊಂದರಲ್ಲಿ ಅಡುಕಡುಕಿ ತುಂಬಿದನು. ರುಚಿಕರವಾದ ಬಹುಬಗೆಯ ಉಣಿಸು ತಿನಸುಗಳ ಬುಟ್ಟಿಗಳು ಸಾಲು ಸಾಲಾಗಿ ಬಂಡಿಯ ತುಂಬ ಜೋಡಿಸಲ್ಪಟ್ಟವು. ಹಾಲು ತುಪ್ಪ ತುಂಬಿದ ಹಲವು ಮಡಕೆಗಳು, ಆ ಪಾತ್ರೆಗಳ ಸುತ್ತ ಮುಚ್ಚಳ ಹಾಕಿ ಮುಚ್ಚಿದ ಬಹುಬಗೆಯ ತರಕಾರಿಗಳ ಆಹಾರದ ಪಾತ್ರೆಗಳು, ಚೀಲಗಳಲ್ಲಿ ತುಂಬಿದ ಅನ್ನದ ರಾಶಿ – ಇವುಗಳಿಂದ ತುಂಬಿದ ಬಂಡಿ ಹೊರಡಲು ಸಿದ್ದವಾಗಿ ನಿಂತಿತು.
ಕುಂತಿಯು ಮನೆಗೆ ಹಿಂದಿರುಗಿ ಬಂದು. ಬೀಮನನ್ನು ಕರೆದು “ಬೀಮಾ, ಎದ್ದೇಳು. ಉಣ್ಣಲು ಆತುರಪಡಬೇಡ…ರಕ್ಕಸನ ಶಕ್ತಿಯು ಎಶ್ಟು ಎಂಬುದನ್ನು ಅರಿತುಕೊಂಡು, ಆ ಕೇಡಿಗನನ್ನು ಸದೆಬಡಿದು ಕೊಲ್ಲುವುದು…ಈಗ ಕಯ್ಗೊಂಡ ಕೆಲಸವನ್ನು ಹಗುರವೆಂದು ತಿಳಿಯಬೇಡ…ರಕ್ಕಸನ ಬಲವನ್ನು ಸರಿಯಾಗಿ ತಿಳಿದುಕೊಂಡು ಎದುರಿಸಿ, ಅವನನ್ನು ಸಂಹರಿಸು” ಎಂದು ಮಗನನ್ನು ಹರಸಿದಳು.
ಬೀಮನು ಬೆರಳಲ್ಲಿ ತೊಟ್ಟಿದ್ದ ದರ‍್ಬೆಯನ್ನು ಕಿತ್ತು ಎಸೆದು, ಮಡಿ ಮಾಡಿದ ಬಿಳಿಯ ಬಟ್ಟೆಯನ್ನು ಬಿಗಿಯಾಗಿ ಉಟ್ಟು ಕೊಂಡನು. ಕುಂತಿಯ ಪಾದದೂಳನ್ನು ಹಣೆಯಲ್ಲಿ ಇಟ್ಟುಕೊಂಡು, ದರ‍್ಮರಾಯನ ಪಾದಗಳಿಗೆ ನಮಿಸಿ, ತುಂಬಾ ಹಿಗ್ಗಿನಿಂದ ಓಡಿ ಬಂದು ಗಾಡಿ ಹೊಡೆಯುವವನು ಕುಳಿತುಕೊಳ್ಳುವ ಹಲಗೆಯನ್ನು ಹತ್ತಿ ಕುಳಿತನು. ಹಗ್ಗವನ್ನು ಹಿಡಿದೆಳೆದು ಹೂಡಿದ ಎತ್ತುಗಳನ್ನು ಮುಂದೆ ನಡೆಸಿದನು.
ಈ ಸುದ್ದಿ ಊರಿನಲ್ಲಿ ಹರಡಿತು. “ಈ ಪಟ್ಟಣದಲ್ಲಿ ಅಯ್ದು ಮಂದಿ ಬಡವರಾದ ಮಹಾಪಂಡಿತರು ಬಿಕ್ಕೆಬೇಡಿ ಜೀವಿಸುತ್ತಿದ್ದಾರೆ. ಅವರೊಳಗೆ ಒಬ್ಬನನ್ನು ಆ ಬ್ರಾಹ್ಮಣರ ತಾಯಿ ನಮ್ಮ ಊರಿನ ರಕ್ಕಸನ ಸರದಿಯೂಟಕ್ಕೆ ಕೊಟ್ಟಳು…ಕಂಡೆಯಾ…ಇದು ಎಂತಹ ಅಚ್ಚರಿ” ಎನ್ನುತ್ತ ಪುರಜನರ ಗುಂಪು ಬೀಮನನ್ನು ಸುತ್ತಿಕೊಂಡಿತು.
ಪುರಜನರು ಗುಂಪುಗೂಡಿ ಬಂದು ಸೇರಲು ಬೀಮನು ಬಂಡಿಯನ್ನು ಊರ ಹೊರಕ್ಕೆ ಹೊರಡಿಸಿ, ಅವರಿಗೆ “ನೀವೆಲ್ಲಾ ದೂರದಲ್ಲಿರಿ, ದೈತ್ಯನಿಂದ ನಾನು ಸಾಯುತ್ತೇನೆಯೇ..ಸಾಕು..ನೀವು ಹಿಂತಿರುಗಿ ಹೋಗಿ” ಎಂದು ಹೇಳಿದನು. ಬಳಿಕ ಹೂಡಿದ ಹೋರಿಗಳನ್ನು ಮುಂದಕ್ಕೆ ಹೊಡೆದು ಅಬ್ಬರಿಸಿ, ರಕ್ಕಸನಿದ್ದ ಕಡೆಗೆ ಬಂಡಿಯನ್ನು ವೇಗವಾಗಿ ಹೊಡೆದುಕೊಂಡು ಹೊರಟನು.
ದಾರಿಯಲ್ಲೇ ಉಣಿಸು ತಿನಸುಗಳೆಲ್ಲವನ್ನು ಬೀಮನು ತಿಂದು ಬರಿ ಬುಟ್ಟಿಗಳು ಉಳಿದವು. ಅನ್ನದಲ್ಲಿ ಅರೆಪಾಲನ್ನು ಮುಗಿಸಿ ಬಿಟ್ಟನು. ಸಾಲಾಗಿದ್ದ ಮಡಕೆಗಳಲ್ಲಿದ್ದ ಹಾಲು ತುಪ್ಪಗಳನ್ನು ಸುರಿದು ಕೊಂಡನು. ನೀರಿನ ಚೀಲದಿಂದ ನೀರನ್ನು ಕುಡಿದು ಬಂಡಿಯನ್ನು ಮೆಲ್ಲನೆ ನಡೆಸಿಕೊಂಡು ರಕ್ಕಸನಿದ್ದ ಬಳಿಗೆ ತಂದನು. ಅವನನ್ನು ಕೂಗಿ “ಎಲವೋ ಕುನ್ನಿ ಅನ್ನವಿದೆ…ತಿನ್ನು ಬಾ” ಎಂದು ಕರೆದನು.
ಬೀಮನ ಉದ್ದಂಡತನವನ್ನು ಕಂಡು ಬಕಾಸುರನು ಅಚ್ಚರಿಗೊಂಡನು. “ಇದು ನಿಜಕ್ಕೂ ನನಗೆ ಅಚ್ಚರಿಯನ್ನುಂಟುಮಾಡುತ್ತಿದೆ. ನನ್ನೊಡನೆ ಸೆಣಸುವುದಕ್ಕೆ ಹರಿ ಹರರೂ ಹಿಂಜರಿಯುತ್ತಾರೆ. ಬಂಡಿ ತುಂಬಿದ ಅನ್ನವನ್ನು ಇವನು ಈ ದಿನ ಉಂಡು ಬದುಕಲಿ. ಇವನ ಸಹಿತವಾಗಿ ಊರಿನ ಬ್ರಾಹ್ಮಣರನ್ನೆಲ್ಲಾ ಕೊಲ್ಲುತ್ತೇನೆ” ಎಂದು ಕೋಪೋದ್ರೇಕದಿಂದ ರಕ್ಕಸನು ಹಲ್ಲು ಕಡಿದನು.
ಈ ಕಡೆ ಬಕಾಸುರನು ರೇಗುತ್ತಿದ್ದರೆ ಆ ಕಡೆ ಬೀಮನು ಉಳಿದಿದ್ದ ಅನ್ನವನ್ನು ತೋರಿಸುತ್ತ…ತುತ್ತುಗಳನ್ನು ಮಾಡಿ ತೂಗುತ್ತ, ರಕ್ಕಸನತ್ತ ಬೆರಳು ತೋರಿಸಿ ಅಣಕಿಸುತ್ತ…ಅನ್ನವನ್ನು ಬಾಯಲ್ಲಿ ಮೆತ್ತಿಕೊಂಡನು. ಬಕಾಸುರನು ತನ್ನ ಮನಸ್ಸಿನಲ್ಲಿ “ಈ ಕಡೆ ನನಗೆ ಹಸಿವು ಹೆಚ್ಚಾಗುತ್ತಿದೆ. ತುತ್ತು ಸಿಗುತ್ತಿಲ್ಲ. ಇವನೊಡನೆ ಹೋರಾಡುವುದು ಹೇಗೆ…ಅಯ್ಯೋ…ವಿದಿಯೇ” ಎಂದುಕೊಂಡು ಇವನತ್ತ ತಿರುಗಿ…ಹತ್ತಿರ ಬಂದು… ರಕ್ಕಸ ಹೋರಾಡುವುದಕ್ಕೆ ಅಣಿಯಾದನು.
ರಕ್ಕಸನು ತನ್ನ ಎರಡೂ ಕೈಗಳನ್ನು ಸೇರಿಸಿ ಮುಶ್ಟಿಯಿಂದ ಬೀಮನ ಬೆನ್ನ ಮೇಲೆ ಗುದ್ದಿದನು. ತುತ್ತುಗಳನ್ನು ನುಂಗುವುದರಲ್ಲಿ ಮಗ್ನನಾಗಿದ್ದ ಬೀಮನಿಗೆ ರಕ್ಕಸನು ಹೊಡೆದಿದ್ದು ಅರಿವಿಗೆ ಬರಲಿಲ್ಲ. ರಕ್ಕಸನು ಮರವನ್ನು ಮುರಿದುಕೊಂಡು ಬಂದು ಮತ್ತೆ ಮೇಲೆರಗಿದರೆ, ಬೀಮನು ಹಿಂದಿರುಗಿ ನೋಡಿ ನಗುತ್ತಾ “ಉಳಿದಿರುವ ಅರ‍್ದಕೆಲಸ ಮುಗಿಯಲಿ…ಬರುತ್ತೇನೆ…ತಾಳು” ಎಂದನು.
ಜನಮೇಜಯ ಮಹಾರಾಜನೇ ಕೇಳು ನಿಮ್ಮ ಬೀಮನ ಉಂಡು ಹೋರಾಡಿದ ಬಗೆಯನ್ನು ಕೇಳು ಎಂದು ವೈಶಂಪಾಯನ ಮುನಿಯು ಬಕಾಸುರ ಮತ್ತು ಬೀಮನ ಕಾಳೆಗವನ್ನು ಬಣ್ಣಿಸತೊಡಗಿದನು. ಬೀಮನು ತುಂಬಿದ ಬಂಡಿಯಲ್ಲಿದ್ದ ಆಹಾರವನ್ನೆಲ್ಲ ತನ್ನ ಹೊಟ್ಟೆಯಲ್ಲಿ ತುಂಬಿಸಿಕೊಂಡು ಬಹಳ ಸಮಾದಾನದಿಂದ ಕೈತೊಳೆದುಕೊಂಡನು. ತೇಗಿನ ಅಲೆಗಳು ಉಕ್ಕುಕ್ಕಿ ಬರತೊಡಗಿದವು. ತೇಗುತ್ತಲೇ ಶತ್ರು ಸೈನ್ಯಕ್ಕೆ ಯಮನೋಪಾದಿಯಲ್ಲಿರುವ ಬೀಮನು ಎದ್ದು ನಿಂತು ಸಿಂಹನಾದ ಮಾಡಿದನು.
ಬಕಾಸುರನತ್ತ ತಿರುಗಿ ನೋಡುತ್ತ “ನಾವು ನೆಮ್ಮದಿಯಾಗಿ ಊಟಮಾಡಿದೆವು…ಹಲವು ಕಾಲದ ನಂತರ ಇಂದಿನಂತ ಊಟ ಮಾಡಿದ್ದೇನೆ! ಶಿವನಾಣೆಯಾಗಿಯೂ ಇವತ್ತು ಮಾಡಿದ ಊಟ ನಿಜವಾದ ಊಟ ಕಂಡಿರಾ…ಈ ನಡುವೆ ನೀವು ಹೊಡೆದು ಅಯಾಸಗೊಂಡಿರಿ…ನಮ್ಮ ಸಹಿತವಾಗಿ ಈ ಊರ ಬ್ರಾಹ್ಮಣರನ್ನು ನೀವು ಹಿಂಡುತ್ತೀರಾ” ಎಂದು ನುಡಿಯುತ್ತ ಬೀಮನು ರಕ್ಕಸನೊಡನೆ ಹೋರಾಡಲು ಉತ್ಸಾಹದಿಂದ ಮೇಲೆದ್ದನು.
ಕೋಪಗೊಳ್ಳದೆ ನಗುನಗುತ್ತ ಬೀಮನು ಬಕನಿಗೆ ದೊಡ್ಡ ಹೊಡೆತವನ್ನು ಕೊಟ್ಟನು. ಇವನು ಕೋಪಗೊಂಡರೆ ಬಳಿಕ ಏನು ಮಾಡುತ್ತಾನೋ …ಅನಂತರ ಬೀಮನು ಅಬ್ಬರಿಸಿ ಎದ್ದು ನಿಂತನು. ಬಕನು ಎದುರಾದನು…ಬೀಮ ಬಕಾಸುರರ ಕಾಳಗಕ್ಕೆ ವಾಸುಕಿಯ ಕೊರಳು ಕುಸಿದಂತಾಯಿತು.
ಒಬ್ಬರನ್ನೊಬ್ಬರು ಹಿಡಿದರು…ಎದೆ ಎದೆಗೆ ಹೊಡೆದುಕೊಂಡು ಹಿಂದೆ ಸರಿದರು….ಗಟ್ಟಿಯಾಗಿ ಅಬ್ಬರಿಸುತ್ತ ಹೆಮ್ಮರ ಮುರಿಯುವಂತೆ ಹೊಯ್ದಾಡಿದರು…ತೋಳ್ಬಲದಿಂದ ಒಬ್ಬರನ್ನೊಬ್ಬರು ತಿವಿದರು…ಬಕಾಸುರನು ಕಲಿ ಬೀಮನನ್ನು ಜಾಡಿಸಿದನು. ಮತ್ತೆ ಮುನ್ನುಗ್ಗಿ “ಅತಿಯಾದ ಬಯಕೆಯಿಂದ ಉಂಡ ಕೂಳಿನ ಶಕ್ತಿಯನ್ನು ತೋರು” ಎಂದು ಕೂಗುತ್ತ, ಬೀಮನನ್ನು ಹಿಡಿದುಕೊಂಡನು
ಕಲಿ ಬೀಮನು ಸಿಕ್ಕಿಬಿದ್ದೆನು ಎನ್ನುವಂತೆ ಕೈಯಿಕ್ಕಿ ಶರೀರವನ್ನು ಅವನಿಗೆ ಕೊಟ್ಟನು. ಹಾಗೆ ಮಾಡಿ ಹೊಕ್ಕು ಅಸುರನನ್ನು ತಿವಿದನು. ಆ ತಿವಿತಕ್ಕೆ ರಕ್ಕಸನ ಪಕ್ಕೆಯ ಮೂಳೆ ಮುರಿದು ಪುಡಿಪುಡಿ ಯಾಯ್ತು. ನಾಲಗೆ ಬಿಗಿದು ಬಿಕ್ಕಳಿಕೆ ಮೊದಲಾಯ್ತು. ಮೂಗಿನಲ್ಲಿ ನೆತ್ತರ ಕೋಡಿ ಹರಿಯತೊಡಗಿತು. ದೇಹ ಉಸಿರಾಡದಂತಾಗಿ, ಆ ರಕ್ಕಸನ ಪ್ರಾಣ ನಿಮಿಶ ಮಾತ್ರದಲ್ಲಿ ಅವನ ದೇಹವನ್ನು ಬಿಟ್ಟು ಹೊರಟುಹೋಯಿತು.
ರಕ್ಕಸನನ್ನು ಕೊಂದು ಅವನ ಹೆಣವನ್ನು ಬಂಡಿಯ ಹಿಂದಕ್ಕೆ ಕಟ್ಟಿ ಊರಿನ ಹೊರ ಪ್ರದೇಶಕ್ಕೆ ತಂದು ಬಿಟ್ಟನು. ಜನರ ಸಮೂಹ ತಮತಮಗೆ ಆನಂದದಿಂದ ಬಂದು ಆ ಹೆಣವನ್ನು ನೋಡಿತು. “ಈ ದಿನ ಬ್ರಾಹ್ಮಣರು ದನ್ಯರು … ಇನ್ನು ಬ್ರಾಹ್ಮಣ ಜಾತಿಗೆ ದೊಡ್ಡ ಅಗ್ಗಳಿಕೆ ಸಲ್ಲುತ್ತದೆ” ಎಂದು ಸೇರಿದ ಪುರಜನರು ಮಾತನಾಡಿಕೊಂಡರು.
“ಈ ಅತಿಮಾನವ ಶಕ್ತಿ ದೇವೇಂದ್ರನಿಗೂ ಸಾದ್ಯವಿಲ್ಲ..ಹೀಗಿರುವಲ್ಲಿ ಬ್ರಾಹ್ಮಣರಿಗೆ ಇದು ಸಾಮಾನ್ಯವೇ…ನಮ್ಮ ಅಗ್ರಹಾರವನ್ನು ಇವರು ಕಾಪಾಡಿದರು. ಇವರಿಗೆ ಬ್ರಹ್ಮ ವಿಶ್ಣು ಮಹೇಶ್ವರರು ಬಹಳ ಶ್ರೇಯಸ್ಸನ್ನು ಕೊಡಲಿ” ಎಂದು ಬ್ರಾಹ್ಮಣರ ಸಮೂಹ ಹರಸಿತು.
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು