ಕುಮಾರವ್ಯಾಸ ಬಾರತ ಓದು-ಆದಿ ಪರ‍್ವ-ಹತಾಶೆಗೊಂಡವರ ಹೋರಾಟ-ನೋಟ-29
ಪ್ರಸಂಗ-29
ಹತಾಶೆಗೊಂಡವರ ಹೋರಾಟ
(ಆದಿ ಪರ‍್ವ: ಹದಿನೈದನೆಯ ಸಂದಿ: ಪದ್ಯ 37-52)
ಪಾತ್ರಗಳು:
ದುರ‍್ಯೋದನ: ಗಾಂದಾರಿ ಮತ್ತು ದ್ರುತರಾಶ್ಟ್ರನ ಮಗ. ಹಸ್ತಿನಾವತಿಯ ಯುವರಾಜ.
ಬೀಮ: ಕುಂತಿ ಮತ್ತು ಪಾಂಡುರಾಜನ ಮಗ.
ಅರ‍್ಜುನ: ಕುಂತಿ ಮತ್ತು ಪಾಂಡುರಾಜನ ಮಗ.
ಕರ‍್ಣ: ಕುಂತಿ ಮತ್ತು ಸೂರ‍್ಯದೇವನ ಮಗ. ಅಂಗರಾಜ್ಯದ ಒಡೆಯ.
ರಾಜ ಪರಿವಾರ: ದುರ‍್ಯೋದನನ ಕಡೆಯ ರಾಜರ ಗುಂಪು.
ದ್ರುಪದ ರಾಜನ ಪರಿವಾರದವರ ಗುಂಪು.
*** ಹತಾಶೆಗೊಂಡವರ ಹೋರಾಟ ***
ಜನಪ ಕೇಳೈ, ಯುವತಿಯೊಡನೆ ಅರ್ಜುನನ ರಾಜಮಂದಿರಕೆ ತಂದರು…ಅಭ್ರದೊಳು ಅಮರಪತಿ ಸಹಿತ…ಅನಿಮಿಷಾವಳಿ ಹರಿದುದು…ಅಸೂಯದ ಮನದ…ದುಗುಡದ ಮುಖದ…ವಿನತ ಮಕುಟದ…ಕೈಯ ಗಲ್ಲದ…ಕನಲಿಕೆಯ ಕೊನರುಗಳ ಕೌರವರಾಯ ಖತಿಗೊಂಡ.
ದುರ್ಯೋಧನ: ಏನು ಹದ…ಪಾಂಚಾಲ ಮಾಡಿದ ಮಾನಭಂಗವ ಕಂಡಿರೇ…ಕಾನೀನ…ಶಕುನಿ… ಜಯದ್ರಥ…ಅಶ್ವತ್ಥಾಮ ಮೊದಲಾದ ಮಾನನಿಧಿಗಳು ಕಂಡಿರೇ…ಮದದಾನೆಗಳು, ನೀವ್ ಕಂಡಿರೇ…ಹದನು ಏನು.
( ಎನುತ…ಕುರುರಾಯ ತನ್ನವರ ಮೂದಲಿಸಿದನು.)
ದುರ್ಯೋಧನ: ಹಳೆಯ ಹುಲು ಧನುವಿದನು…ಹಾರುವ ಸೆಳೆದ ಗಡ…ಕೌಳಿಕದ ಯಂತ್ರವ ಗೆಲಿದ ಗಡ…ಮಹೀಶ್ವರರ ಗರುವಾಯಿ ಕೆಡಿಸಿದ ಗಡ… ನಳಿನಮುಖಿ ತಿರುಕುಳಿಯ ಕೊರಳಲಿ ದಂಡೆಯನು ಹಾಯ್ಕಿದಳು ಗಡ…ನೀವು ಒಲಿದು ಮದುವೆಯ ಮಾಡಿ.
(ಎಂದನು…ಭೂಮಿಪರ ಬೈದು.)
ದುರ್ಯೋಧನ: ನೆರೆದ ಧರಣೀ ಮಂಡಲೇಶ್ವರರು…ನೀವ್ ಭಂಡರೋ…ಅಕಟ…ನಿಮ್ಮಯ ಹೆಂಡಿರನು ಹಾರುವನ ಹೆಂಡತಿಗೆ…ಬಳುವಳಿಯ ಕೊಡಿ… ಗಂಡುಗಲಿಗಳ ನಿಮ್ಮನು…ಅನಿಬರ ಕಂಡು ಉಪೇಕ್ಷಿಸಿ…ಯಾಚಕನ ಕೈಕೊಂಡಳು…ಇದಕೆ ಏನುಂಟು…ನಿಮಗೆ ಮನದಲಿ ವಾಸಿ.
ರಾಜ ಪರಿವಾರ-1: ವಾಸಿಗಳನು ಅರಸುವಡೆ…ದ್ರುಪದನ ಮೀಸಲು ಅಡಗನು…ಹದ್ದು ಕಾಗೆಗೆ ಸೂಸಿ…ವಿಪ್ರನ ಬಡಿದು ಬಿಡುವುದು…ಮತ್ತೆ ತಿರಿದು ಉಣಲಿ…ಆ ಸರೋಜಾನನೆಯ…ನಮ್ಮ ವಿಲಾಸಿನಿಯ ವೀಧಿಯಲಿ ಕೂಡುವದೈಸಲೇ.
(ಎನುತ ನೃಪ ನಿಕರ ಒಡನೊಡನೆ ಗರ್ಜಿಸಿತು.)
ರಾಜ ಪರಿವಾರ-2: ಏಳಿ…ಲಗ್ಗೆ ಹತ್ತಲಿ… ಹಿರಿಯ ಅಗಳಿನ ಅಗಲವ ಪದಹತ ಧೂಳಿಯಲಿ ಹೂಳಿ ಕಳೆಯಲಿ… ತೆನೆಯ ಸರಿಸದಲಿ ಹರಿದು ಹತ್ತಲಿ…ಕೋಲು ಗುಂಡಿನ ಹತಿಗೆ ಹುರಿಯೊಡೆದು ಆಳ ಹೊಯ್ ಹೊಯ್..
(ಎನುತ ಸಕಲ ನೃಪಾಳಿ ಗರ್ಜಿಸಿ…ಪಾಂಚಾಲ ಪಟ್ಟಣವ ಮುತ್ತಿದುದು…ಕೂಡೆ ಗಜಬಜವಾಯ್ತು…ನಾಡ ಗಾವಳಿ ಹರಿದುದು… ವಿಪ್ರಸಭೆ ತೆಗೆದು ಓಡಿತು…ಈ ಪಾಂಡವರು ಕುಲಾಲಭವನದಲಿ ಬಂದು ನೋಡುತಿರ್ದರು…ಲಗ್ಗೆ ಅಬ್ಬರವು ದಿಗಂತವನು ಈಡಿರಿದುದು…ಕೈಮಾಡಿ ಕೋಟೆಯನು ಇಳಿದು ಆಳುವೇರಿಯಲಿ ಬೆರಸಿದರು…ಹೊಗುವ ಚೂಣಿಯ ಹಲ್ಲಣಿಸಿದರು…ಸರಿಸಕೆ ಅಡರುವ ಬಿಲ್ಲ ಬಿರುದರ ಸಾಲ ಸಬಳಿಗರು ಮೆಟ್ಟಿ ತಿವಿದರು…ಝಲ್ಲರಿಯ ಝಾಡಿಗಳ ವಾದ್ಯದ ಘಲ್ಲಣೆಯ ದಳ ನೆರೆದುದು…ಪಾಂಚಾಲ ನಾಯಕರು ಅಲ್ಲಿಯದಲ್ಲಿ ಮುತ್ತಿಗೆ ತೆಗೆಸಿದರು…ಚೂಣಿ ಮುರಿದು ಐತರಲು…ಕುರುಪತಿಯ ಬಹ ಕ್ಷೋಣಿಯಲಿ ಕರ್ಣ ಮೊದಲಾಗಿ ಥಟ್ಟಿನ ಹೂಣಿಗರು ಹುರಿಗೊಂಡು ಕವಿದರು…ಸಾಣೆ ಅಲಗಿನ ಸರಿಗೆ ಪರಬಲವು…ಅಡಿ ಮಿಡುಕದ ಆಣೆಯಿಟ್ಟವೊಲು…ಕ್ಷೀಣ ಬಲ ದ್ರುಪದ ಪರಿವಾರ…ಓಸರಿಸಿ ತೆಗೆದುದು.)
ದುರ್ಯೋಧನನ ಸೇನೆ: ಮೊದಲ ಲಗ್ಗೆಯ ಧೂಳಿಯೇ… ದ್ರೌಪದಿಯ ಬೈತಲೆಗೆ…ಅಮಲ ಸಿಂಧೂರದ ಸುವಿಸ್ತರವಾಗದಿರ್ದಡೆ…ರಾಯನಾಣೆ.
(ಎನುತ ಮದಮುಖರು ಮುಂಕೊಂಡು…ದುರ್ಗವ ಬೆದರಿಸಿತು…ಬೇರೇನು…ದ್ರುಪದನ ಸದನ ಸೀಮೆಯ ಬೆರಸಿ… ರಾಜಬೀದಿಯಲಿ ಹೊಯ್ದರು.)
ದ್ರುಪದನ ಕಡೆಯವರು: (ಅರ್ಜುನನಲ್ಲಿ ಮೊರೆಯಿಡುತ್ತಾರೆ.) ಏಳು ಮನ್ನೆಯ, ಗಂಡನಾಗು…ನೃಪಾಲ ಮದುವೆಯ ಮನೆಗೆ…ರಾಯರ ಧಾಳಿ ಬಿದ್ದಿನವಾಯ್ತು…ನಡೆ…ಬೀಯಗರ ಸಂತೈಸು ಏಳು.
(ಎನಲು ಅರ್ಜುನ ಕಳಕಳವನು ಕೇಳಿದನು.)
ಅರ್ಜುನ: ಹೊದೆ ಅಂಬುಗಳ ತರ ಹೇಳು.
( ಎನುತ…ಭಟರ ಮುಂಗುಡಿಯ ಕವಿದು…ಎಚ್ಚು ಮುರಿದನು…ಅದು ಬಳಿಕ…ಕಲ್ಪಾಂತ ಮೇಘದ ಮೊದಲ ಮಳೆ ಎನೆ…ಅಂಬಿನ ಹೊದರು ಕವಿದುದು…ರಾಯದಳ ರೌಕುಳದ ರಕ್ತದಲಿ ಹುದುಗಿತು…ಕರ್ಣಾದಿಗಳು ನೆರೆ ಬೆದರಿದರು…ಕೆದರಿದರು…ಮತ್ತೊಂದು ದೆಸೆಯಲಿ ಭೀಮ…ಭಾರಿಯ ಮರನ ಕೊಂಬಿನಲಿ ಸದೆದು ಹೊಕ್ಕನು…ಮಾದ್ರೇಶ ಪವನಜನ ಉರುಬೆಯನು ತರುಬಿದನು.)
ಕರ್ಣ: ಫಲುಗುಣನ ಬಾಣವ ಮುರಿ.
(ಎನುತ ರಾಧೇಯ ಸಿಂಹನಾದದಲಿ ನಿಂದನು.)
ಭೀಮ: ಕರುಬರೋ…ಘನ ಯಂತ್ರಭೇದಿಯನು ಅರಿದು ಕಾಡುವ ಕುರುಡರೋ…ನೀವು ಇರಿತಕೆ ಅಂಘೈಸಿದಿರಿ.
(ಎನುತ ಕೈಕೊಂಡನಾ ಭೀಮ…ಪವಮಾನಸುತನು ತುರಗ..ರಥ..ಸಾರಥಿಗಳನು ಹೊಯ್ದು ಒರಸಿದನು…ಉಬ್ಬರದ ಭಯದಲಿ ಶಲ್ಯ ಹಿನ್ನೆಲೆಗೆ ಹಿಮ್ಮೆಟ್ಟಿದನು…ಕಲಿ ಕರ್ಣನು ನರನ ಶರಹತಿಗೆ ಅಳುಕಿ…)
ಕರ್ಣ: ವಿಪ್ರರು ಅವದಿರು…ನಮ್ಮ ವಿಗ್ರಹಕೆ ಸರಿಯೆ.
(ಎಂದು ಖಾತಿಯಲಿ ಮೋರೆಯ ಮುರುಹಿದನು.)
ಕರ್ಣ: ಅರಸ,ಕೇಳು…ದ್ರುಪದನ ಕಪಾಲದಲಿ ಮಾನಚ್ಯುತಿ ಇರಲಿ…ಮಹೀಸುರವರರೊಡನೆ ಖತಿಯೇಕೆ…ನಡೆ…ಹಸ್ತಿನಾಪುರಕೆ ತೆಗೆವುದು…ನೃಪವರ್ಗವನು ನೆರಹುವುದು… ಬಂದು ದ್ರುಪದನ ಲಲಾಟದ ಬರಹವನು ಒರಸುವುದು.
(ಎಂದು ಕರ್ಣ…ಕುರುಪತಿಗೆ ನುಡಿದನು.)
ದುರ್ಯೋಧನ: ಅಹುದು…ಕರ್ಣನ ಮಾತು…ಈ ಹೊತ್ತಿನಲಿ ರಣ ವಿಹಿತವಲ್ಲ… ಬಹಳ ಬಲವು ತೆಗೆಯಲಿ…ಔಕಿದಡೆ… ತಮಗೆ ವಿಪ್ರ ವಧೆ ತಪ್ಪದು…ಈಸರಲಿ ಮಹಿಮೆ ಮೀಸಲು ಹೋಗದು…ಅಹಿತ ದರ್ಪವ ಮುಂದೆ ನೋಡಲುಬಹುದು.
(ಎನುತ ಕುರುಪತಿ ಹಸ್ತಿನಾಪುರಿಗೆ ತಿರುಗಿದನು.)
ಹೊಸಗನ್ನಡ ಗದ್ಯ
ಜನಮೇಜಯ ರಾಜನೇ ಕೇಳು, ದ್ರೌಪದಿಯೊಡನೆ ಅರ‍್ಜುನನನ್ನು ಅರಮನೆಗೆ ಕರೆತಂದರು. ಆಕಾಶದಲ್ಲಿ ನೆರೆದ ದೇವತೆಗಳ ಸಮೂಹ…ದೇವೇಂದ್ರ ಸಹಿತವಾಗಿ ಸ್ವಯಂವರ ಮಂಟಪದಿಂದ ತೆರಳಿತು…ಇತ್ತ ಸ್ವಯಂವರ ಮಂಟಪದಲ್ಲಿದ್ದ ದುರ‍್ಯೋದನನ ಮನದಲ್ಲಿ ಅಸೂಯೆಯೂ… ಮೊಗದಲ್ಲಿ ಚಿಂತೆಯೂ ಕವಿಯುತ್ತಿರಲು…ಕಿರೀಟ ತೊಟ್ಟಿರುವ ತಲೆಯನ್ನು ಬಾಗಿಸಿ…ಹಸ್ತದ ಮೇಲೆ ಗಲ್ಲವನ್ನೊರಗಿಸಿ ಕುಳಿತಿದ್ದವನು…ಮರುಗಳಿಗೆಯಲ್ಲಿಯೇ ತುಂಬಾ ಕೋಪಗೊಂಡು ತನ್ನ ಸಂಗಡಿಗರನ್ನು ಹೀಯಾಳಿಸತೊಡಗಿದನು.
“ಇದೇನು ರೀತಿ…ದ್ರುಪದನು ರಾಜರಿಗೆ ಮಾಡಿದ ಅವಮಾನವನ್ನು ಕಂಡಿರಾ…ಕರ‍್ಣ..ಶಕುನಿ..ಜಯದ್ರತ..ಅಶ್ವತ್ತಾಮ ಮೊದಲಾದ ಮಾನವಂತರು ನೋಡಿದಿರಾ…ಮದದಾನೆಗಳು ಎನ್ನಿಸಿದ ನೀವು ಕಂಡಿರಾ…ನಿಮ್ಮ ನಿಲವು ಏನು” ಎಂದು ದುರ‍್ಯೋದನನು ತನ್ನವರನ್ನು ಮೂದಲಿಸಿದನು.
“ಇದೊಂದು ಹಳೆಯ ಸಾಮಾನ್ಯವಾದ ಬಿಲ್ಲು…ಇದರ ಹೆದೆಯನ್ನು ಬ್ರಾಹ್ಮಣನು ಏರಿಸಿದನಲ್ಲವೇ…ಕಪಟದ ಯಂತ್ರವನ್ನು ಗೆದ್ದನಲ್ಲವೇ…ಗೆದ್ದು ರಾಜರ ಹಿರಿಮೆಯನ್ನು ಹಾಳು ಮಾಡಿದನಲ್ಲವೇ…ದ್ರೌಪದಿಯು ತಿರುಪೆಯವನ ಕೊರಳಲ್ಲಿ ಮಾಲೆಯನ್ನು ಹಾಕಿದಳಲ್ಲವೇ…ಇನ್ನು ನೀವು ಹೋಗಿ ಒಲವು ನಲಿವಿನಿಂದ ಮದುವೆ ಮಾಡಿ” ಎಂದು ರಾಜರನ್ನು ನಿಂದಿಸಿದನು.
“ಇಲ್ಲಿ ಸೇರಿರುವ ದೊರೆಗಳಾದ ನೀವೆಲ್ಲ ಲಜ್ಜೆಗೇಡಿಗಳು…ನಿಮ್ಮ ಹೆಂಡತಿಯರನ್ನು…ಬ್ರಾಹ್ಮಣನ ಹೆಂಡತಿ ದ್ರೌಪದಿಗೆ ಉಡುಗೊರೆಯಾಗಿ ಕೊಡಿ…ಗಂಡುಗಲಿಗಳಾದ ನಿಮ್ಮೆಲ್ಲರನ್ನು ಕಂಡು…ಯಾರನ್ನೂ ಒಪ್ಪದೆ ಕಡೆಗಾಣಿಸಿ…ದಾನಕ್ಕೆ ಕಯ್ಯೊಡ್ಡುವನನ್ನು ಕಯ್ ಹಿಡಿದಳು…ಇದೆಲ್ಲವನ್ನು ಕಂಡು…ನಿಮ್ಮ ಮನದಲ್ಲಿ ಏನನ್ನಿಸುತ್ತಿದೆ…ಹೇಳಿರಿ”ಎಂದು ಎಲ್ಲ ರಾಜರನ್ನು ದುರ‍್ಯೋದನನು ಕೇಳಿದನು.
“ನಮ್ಮ ಪ್ರತಿಕ್ರಿಯೆಯನ್ನು ಕೇಳುವುದಾದರೆ…ಕೊಬ್ಬಿರುವ ದ್ರುಪದನ ಮಾಂಸವನ್ನು…ಹದ್ದು ಕಾಗೆಗಳಿಗೆ ಚೆಲ್ಲಿ…ಆ ಬ್ರಾಹ್ಮಣನನ್ನು ಬಡಿದು…ಬಿಡುವುದು…ಮತ್ತೆ ತಿರಿದು ತಿನ್ನಲಿ…ಆ ದ್ರೌಪದಿಯನ್ನು ತಂದು…ನಮ್ಮ ದಾಸಿಯರ ಗುಂಪಿನಲ್ಲಿ ಸೇರಿಸುವುದಲ್ಲವೇ” ಎನ್ನುತ್ತ ರಾಜರಲ್ಲಿ ಕೆಲವರು ಅಬ್ಬರಿಸಿದರು.
“ಎದ್ದೇಳಿ…ಲಗ್ಗೆ ಹಾಕೋಣ…ಅಗಲವಾಗಿರುವ ದೊಡ್ಡ ಕೋಟೆಯ ಕಂದಕ…ನಮ್ಮ ಸೇನೆಯ ಕಾಲ್ದುಳಿತದ ದೂಳಿನಿಂದ ಮುಚ್ಚಿ ಹೋಗಲಿ…ನಮ್ಮ ಸೇನಾ ಪಡೆಗಳು ನುಗ್ಗಿ…ಕೋಟೆ ಕೊತ್ತಳವನ್ನು ಹತ್ತಲಿ…ಬಾಣಗಳ ಗುಂಡೇಟಿಗೆ ಚೆಲ್ಲಾಪಿಲ್ಲಿಯಾಗುವ ದ್ರುಪದನ ಕಡೆಯವರನ್ನು ಹೊಡೆಯಿರಿ ಹೊಡೆಯಿರಿ” ಎನ್ನುತ್ತ ಎಲ್ಲ ರಾಜರು ಗರ‍್ಜಿಸುತ್ತ ಪಾಂಚಾಲ ಪಟ್ಟಣವನ್ನು ಮುತ್ತಿದರು.
ಆ ಕೂಡಲೇ ಸ್ವಯಂವರ ಮಂಟಪದಲ್ಲಿ ಗದ್ದಲವಾಯ್ತು…ನಾಡಿನ ಜನರ ಗುಂಪು ಚೆದರಿತು…ಬ್ರಾಹ್ಮಣರು ಹೊರಕ್ಕೆ ಓಡಿದರು…ಪಾಂಡವರು ಕುಂಬಾರನ ಮನೆಗೆ ಬಂದು…ಇದನ್ನೆಲ್ಲ ನೋಡುತ್ತಿದ್ದರು…ದುರ‍್ಯೋದನನ ಸಂಗಡಿಗ ರಾಜರ ಸೇನಾ ಪಡೆಗಳ ಮುತ್ತಿಗೆಯ ಅಬ್ಬರ ದಿಗಂತವನ್ನು ವ್ಯಾಪಿಸಿತು…ಮುತ್ತಿಗೆ ಹಾಕಿದ ವೀರರು ಕೈಮಾಡಿ ಕೋಟೆಯನ್ನು ಇಳಿದು…ಕೋಟೆಯ ಗೋಡೆಯನ್ನು ಸೇರಿದರು.
ಇದನ್ನು ನೋಡಿ ತಿಳಿದ ದ್ರುಪದನ ಸೇನಾನಿಗಳು ಕಾಳೆಗಕ್ಕೆ ಸಿದ್ದವಾದರು. ಪಟ್ಟಣವನ್ನು ಪ್ರವೇಶಿಸುತ್ತಿರುವ…ಮುಂಚೂಣಿಯ ಶತ್ರು ಸೇನೆಯನ್ನು…ಚೆದರಿ ಹೋಗುವಂತೆ ಹೊಡೆದರು…ಹತ್ತಿರಕ್ಕೆ ಬಂದು ಆಕ್ರಮಿಸುವ ಬಿಲ್ಗಾರರನ್ನು…ಸಾಲುಗಟ್ಟಿ ಈಟಿಯನ್ನು ಹಿಡಿದುಕೊಂಡು ನಿಂತು…ಮೆಟ್ಟಿ ತಿವಿದರು. ರಣವಾದ್ಯಗಳ ಬಯಂಕರ ಶಬ್ದದೊಡನೆ…ದ್ರುಪದನ ಸೇನೆ ದುರ‍್ಯೋದನನ ಸೇನಾಬಲವನ್ನು ಅಡ್ಡಗಟ್ಟಿತು…ಪಾಂಚಾಲ ನಾಯಕರು ಅಲ್ಲಲ್ಲಿಯೇ ಮುತ್ತಿಗೆಯನ್ನು ನಿಲ್ಲಿಸಿದರು.
ಮುಂಚೂಣಿಯ ಸೇನೆಯು ಹಿಮ್ಮೆಟ್ಟಿ ಹಿಂತಿರುಗಿ ಬರುತ್ತಿರಲು…ದುರ‍್ಯೋದನನ ಪಡೆಯಲ್ಲಿ ಕರ‍್ಣನೇ ಮೊದಲಾದ ವೀರರು ಉತ್ಸಾಹಗೊಂಡು…ದೊಡ್ಡ ಸೇನಾಬಲದೊಡನೆ ಮುತ್ತಿದರು. ದುರ‍್ಯೋದನನ ಸೇನೆಯ…ಸಾಣೆ ಹಿಡಿದು ಹರಿತಗೊಳಿಸಿದ ಆಯುದದ ಅಂಚಿನ ಹತ್ತಿರಕ್ಕೂ ಹೆಜ್ಜೆ ಹಾಕುವುದಿಲ್ಲ ಎಂದು ಆಣೆಯಿಟ್ಟವರಂತೆ ದ್ರುಪದನ ಸೇನೆ ಹಿಮ್ಮೆಟ್ಟಿತು.
“ಮೊದಲ ಮುತ್ತಿಗೆಯ ದೂಳಿಯೇ…ದ್ರೌಪದಿಯ ಬಯ್ತಲೆಗೆ…ಪವಿತ್ರವಾದ ಕೇಸರಿಯ ಬಣ್ಣದ ಸಿಂದೂರದಂತೆ ಚೆನ್ನಾಗಿ ಬಳಿದುಕೊಳ್ಳದಿದ್ದರೆ…ದುರ‍್ಯೋದನನ ಮೇಲೆ ಆಣೆ” ಎನುತ್ತ ಸೊಕ್ಕಿನಿಂದ ಮೆರೆಯುತ್ತಿರುವ ಸೇನೆಯು…ಮುಂದೆ ಮುಂದೆ ನುಗ್ಗಿ ದ್ರುಪದನ ಪಡೆಯನ್ನು ಹೆದರಿಸಿತು…ದ್ರುಪದನ ಅರಮನೆಯನ್ನು ಸುತ್ತುವರಿದು…ರಾಜಬೀದಿಯಲ್ಲಿ ಹೊಡೆದಾಡತೊಡಗಿದರು.
ದ್ರುಪದನ ಕಡೆಯವರು ಮದುಮಗನಾದ ಅರ‍್ಜುನನಲ್ಲಿ …“ಏಳು ಮನ್ನೆಯ…ಗಂಡನಾಗು…ದ್ರುಪದ ಮಹಾರಾಜನ ಮದುವೆಯ ಮನೆಗೆ ರಾಜರ ಮುತ್ತಿಗೆಯು ಬೋಜನಕ್ಕಾಗಿ ಬಂದಿದೆ…ನಡೆ ಬೀಗರನ್ನು ಉಪಚರಿಸು… ಏಳು” ಎಂದು ಮೊರೆಯಿಡುತ್ತಿರಲು… ಅರ‍್ಜುನನು ಈ ಕೋಲಾಹಲವನ್ನು ಕೇಳಿದನು…ಬತ್ತಳಿಕೆಯಲ್ಲಿರುವ ಬಾಣಗಳನ್ನು ತರಹೇಳು” ಎಂದು ತರಿಸಿಕೊಂಡು…ಬಾಣಪ್ರಯೋಗ ಮಾಡಿ…ಮುತ್ತಿ ಮುನ್ನುಗ್ಗುತ್ತಿದ್ದ ದುರ‍್ಯೋದನನ ಸೇನೆಯನ್ನು ಸದೆಬಡಿದು ಮುರಿದನು.
ಪ್ರಳಯಕಾಲದ ಮೋಡದಿಂದ ಸುರಿದ ಮೊದಲ ಮಳೆಯೆನ್ನುವಂತೆ…ಅರ‍್ಜುನನು ಬಿಟ್ಟ ಬಾಣದ ರಾಶಿ…ದುರ‍್ಯೋದನನ ಪಡೆಯನ್ನು ನೆತ್ತರಿನ ಕೋಡಿಯಲ್ಲಿ ಮುಳುಗಿಸಿತು. ಕರ‍್ಣಾದಿಗಳು ಬೆದರಿದರು…ಕೆದರಿದರು…ಮತ್ತೊಂದು ಕಡೆಯಲ್ಲಿ ಬೀಮನು ದೊಡ್ಡ ಮರದ ಕೊಂಬೆಯೊಂದರಿಂದ ದುರ‍್ಯೋದನನ ಪಡೆಯನ್ನು ಬಡಿಯುತ್ತ…ಕಾಳೆಗದ ಕಣವನ್ನು ಹೊಕ್ಕನು.
ಆಗ ಮದ್ರ ದೇಶದ ದೊರೆಯಾದ ಶಲ್ಯನು ಮುಂದೆ ಬಂದು…ಮುನ್ನುಗ್ಗುತ್ತಿದ್ದ ಬೀಮನನ್ನು ಅಡ್ಡಗಟ್ಟಿದನು…ಕರ‍್ಣನು ಸಿಂಹನಾದ ಮಾಡುತ್ತ “ಅರ‍್ಜುನನ ಬಾಣವನ್ನು ಕತ್ತರಿಸುತ್ತೇನೆ” ಎನ್ನುತ್ತ ಎದುರಿಗೆ ನಿಂತನು…“ನೀವು ಹೊಟ್ಟೆಕಿಚ್ಚಿನವರೋ…ಆ ದೊಡ್ಡ ಯಂತ್ರವನ್ನು ಬೇದಿಸಿದಾತನನ್ನು ತಿಳಿದೂ…ಪೀಡಿಸುವ ಕುರುಡರೋ…ನೀವು ಹೊಡೆತವನ್ನು ತಿನ್ನಲೆಂದೇ ಬಯಸಿ ಬಂದಿರಿ” ಎನ್ನುತ್ತ ಬೀಮನು ಹೋರಾಟವನ್ನು ಮುಂದುವರಿಸಿದನು
ಶಲ್ಯನ ಕುದುರೆ, ತೇರು ಸಾರತಿಯನ್ನು…ಬೀಮನು ಹೊಡೆದು ಒರಸಿ ಹಾಕಿದನು…ವಿಪರೀತ ಅಂಜಿಕೆಯಿಂದ ಶಲ್ಯನು ಹಿಂದಕ್ಕೆ ಸರಿದನು…ಅರ‍್ಜುನನ ಬಾಣದ ಹೊಡೆತಕ್ಕೆ ಹೆದರಿದ ಕರ‍್ಣನು “ಅವರು ಬ್ರಾಹ್ಮಣರು…ನಮ್ಮೊಡನೆ ಕಾಳೆಗಕ್ಕೆ ಸಮವೇ” ಎಂದು ಗೊಣಗುತ್ತ ಹೋರಾಟದಿಂದ ಹಿಮ್ಮೆಟ್ಟಿದನು.
“ಅರಸಾ, ನಡೆ…ಹೋಗೋಣ…ನಮಗೆ ಅವಮಾನ ಮಾಡಿರುವುದು ದ್ರುಪದನ ತಲೆಯ ಮೇಲೆ ಇರಲಿ…ಬ್ರಾಹ್ಮಣರ ಮೇಲೆ ನಾವೇಕೆ ಕೋಪಮಾಡಿಕೊಳ್ಳುವುದು…ಹಸ್ತಿನಾಪುರಕ್ಕೆ ಹೋಗೋಣ… ರಾಜರನ್ನು ಸೇರಿಸೋಣ…ಆಮೇಲೆ ಬಂದು ದ್ರುಪದನ ಹಣೆಬರಹವನ್ನು ಒರಸಿ ಹಾಕೋಣ…ಈಗ ನನ್ನ ಮಾತನ್ನು ಕೇಳು” ಎಂದು ಕರ‍್ಣನು ದುರ‍್ಯೋದನನಿಗೆ ಸಲಹೆ ಮಾಡಿದನು.
“ಅಹುದು ಕರ್ಣನ ಮಾತು ಸರಿ…ಈ ಸಮಯದಲ್ಲಿ ಕಾಳೆಗ ಸರಿಯಲ್ಲ…ನಮ್ಮ ಸೇನಾ ಪಡೆ ಹಿಂತೆಗೆಯಲಿ…ನುಗ್ಗಿ ಹೊಡೆದರೆ…ನಮಗೆ ಬ್ರಾಹ್ಮಣರನ್ನು ಕೊಂದ ಪಾಪ ತಪ್ಪುವುದಿಲ್ಲ…ಹಿಮ್ಮೆಟ್ಟಿದ ಮಾತ್ರಕ್ಕೆ…ನಮ್ಮ ಹಿರಿಮೆಗೆ ಕಳಂಕ ತಟ್ಟುವುದಿಲ್ಲ… ಶತ್ರುವಿನ ಸೊಕ್ಕನ್ನು ಮುಂದೆ ನೋಡಿಕೊಳ್ಳಬಹುದು” ಎಂದು ಹೇಳುತ್ತಾ ದುರ‍್ಯೋದನನು ಹಸ್ತಿನಾವತಿಯತ್ತ ಹೊರಟನು..
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು