ವಚನದ ಬಾವಾರ‍್ತ

– .

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ 
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ

ನಾವು ಈ ಮೇಲಿನ ವಚನವನ್ನು ಎರಡು ರೀತಿಯಲ್ಲಿ ವಿಶ್ಲೇಶಿಸಬಹುದು.

ವಿಶ್ಲೇಶಣೆ-೧

ಶತಶತಮಾನಗಳಿಂದ ನಡೆದುಬಂದ ಸಮಾಜದ ಸರ‍್ವತೋಮುಕ ಅಬಿವ್ರುದ್ದಿಗೆ ಕಂಟಕಪ್ರಾಯ ಅಂಶವಾದ ವರ‍್ಗ ಬೇದ, ಜಾತಿ ಬೇದದ ಬಗ್ಗೆ ಮಾನವೀಯ ದ್ರುಶ್ಟಿಕೋನದಿಂದ, ವಿಶಾಲ ಮನೋಬಾವದಿಂದ ನೋಡಿ “ಮನುಶ್ಯ ಕುಲ ತಾನೊಂದೆ ವಲಂ” ಎಂಬ ಕವಿ ಪಂಪನ ನುಡಿಯಂತೆ ಜಾತಿ ಬೇದವಳಿಸಿ ಸಮಾನತೆಯ ಬೀಜ ಬಿತ್ತಿ ಸಮಸಮಾಜ ಕಟ್ಟುವ ಕನಸು ಹೊತ್ತ ಹನ್ನೆರಡನೆಯ ಶತಮಾನದ ದೊಡ್ಡ ಮಾನವತವಾದಿ, ಕ್ರಾಂತಿಕಾರಿ ಬಸವಣ್ಣನವರು ಕೆಳ ವರ‍್ಗದ ಜನರನ್ನು ಕಂಡು ಇವನಾರವ ಇವನಾರವ ಎಂದೆಣಿಸದೆ, ಇವ ನಮ್ಮವ ಎಂದು ತೆರೆದ ಹ್ರುದಯದಿಂದ ಆಲಿಂಗಿಸಿಕೊಳ್ಳಿ, ಇನ್ನೂ ಮುಂದುವರೆದು ಇತರೆ ಜಾತಿಯ ಜನರನ್ನು ನಿಮ್ಮ ಮನೆಯ ಮಗನೆಂದು ಎಣಿಸಿ ನಿಮ್ಮ ಹ್ರುದಯದಲ್ಲಿ ಜಾಗ ಕೊಡಿ ಎಂದಿದ್ದಾರೆ. ಈ ಜಾತಿ, ವರ‍್ಗ ಬೇದವೆಲ್ಲ ಸೂಕ್ಶ್ಮ ವಿಚಾರವಾಗಿದ್ದು, ಇವುಗಳನ್ನು ಕಾನೂನು ಕಟ್ಟಳೆಗಳಿಂದ ಸಂಪೂರ‍್ಣ ತೊಡೆದು ಸಮಸಮಾಜ ಕಟ್ಟುವುದು ಮರುಬೂಮಿಯಲ್ಲಿ ಹಸಿರು ಬೆಳೆಸುವ ದುಸ್ಸಾಹಸದಂತೆ. ಪರಸ್ಪರ ಮನುಶ್ಯರ ಮನದೊಳಗೆ ಬೇದವಳಿದು ಪ್ರೀತಿ ವಿಶ್ವಾಸಗಳು ಅರಳದೆ ಈ ಅಸಮಾನತೆಯನ್ನು ಬೇರು ಸಹಿತ ಕಿತ್ತುಹಾಕುವುದು ಸಾದ್ಯವಿಲ್ಲ ಎಂಬುದೇ ಈ ವಚನದ ಸಾರವಾಗಿದೆ.

ವಿಶ್ಲೇಶಣೆ-೨

ಬಸವಣ್ಣನವರು ಮೂಲತಹ ಮೇಲ್ವರ‍್ಗದವರಾಗಿದ್ದು, ಮಾನವೀಯತೆಯ ಕ್ರಾಂತಿ ಮೊಳಗಿಸಿ, ಜಾತಿಯಿಲ್ಲದ, ವರ‍್ಗವಿಲ್ಲದ ಸಮಸಮಾಜ ಕಟ್ಟುವ ಕನಸು ಹೊತ್ತ ಸಾಮಾಜಿಕ ಪರಿವರ‍್ತನೆಯ ಹರಿಕಾರ. ಸಮಾಜದ ಕೆಳವರ‍್ಗದವರು ಎಂದು ಪ್ರತ್ಯೇಕಿಸಲ್ಪಟ್ಟ ಎಲ್ಲ ಕಾಯಕದ ಜನರ ಮನದಲ್ಲಿ ತಾನು ಮೇಲು ಜಾತಿಯವನು ಎಂಬ ಮೇಲರಿಮೆಯಿಂದ, ಇವರು ಕೆಳಜಾತಿಯವರು ಎಂಬ ಕೀಳರಿಮೆಯಿಂದ ಅವಿಶ್ವಾಸವುಂಟಾಗಬಾರದು ಎಂದೆಣಿಸಿ ತಮ್ಮನ್ನು ತಾವೇ ಸ್ವತಹ ಸಮಾಜದ ಇತರೆ ಜನರಲ್ಲಿ “ನನ್ನನ್ನು ಇವನಾರವ ಇವನಾರವ ಎಂದೆಣಿಸದೆ ಬಸವಣ್ಣ ನಿಮ್ಮವನೆ, ಇವನು ನಿಮ್ಮ ಮನೆಯ ಮಗ ಎಂದೆಣಿಸಿ ಪ್ರೀತಿ ವಿಶ್ವಾಸದಿಂದ ನಿಮ್ಮ ಮನದಲ್ಲಿ ಜಾಗ ನೀಡಿ ಎಂಬ ಅರಿಕೆಯೂ ಕೂಡ ಇದಾಗಿದೆ ಎಂಬುದು ಇದರ ಮತ್ತೊಂದು ವಿಶ್ಲೇಶಣೆಯಾಗಿದೆ.

(ಚಿತ್ರಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *