ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 6 ನೆಯ ಕಂತು – ವಸಿಷ್ಟ ಮುನಿಯ ಆಶ್ರಮಕ್ಕೆ ಬಂದ ಹರಿಶ್ಚಂದ್ರ

– ಸಿ.ಪಿ.ನಾಗರಾಜ.

*** ವಸಿಷ್ಟ ಮುನಿಯ ಆಶ್ರಮಕ್ಕೆ ಬಂದ ಹರಿಶ್ಚಂದ್ರ ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಮೃಗಯಾ ಪ್ರಸಂಗ’ ಮೂರನೆಯ ಅಧ್ಯಾಯದ 25 ರಿಂದ 39 ರ ವರೆಗಿನ 15 ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು:

ಹರಿಶ್ಚಂದ್ರ: ಅಯೋಧ್ಯೆಯ ರಾಜ.
ವಸಿಷ್ಠ: ಒಬ್ಬ ಮುನಿ.
ಪರಾಶರ: ವಸಿಷ್ಠ ಮುನಿಯ ಮೊಮ್ಮಗ
ಬೇಡ ಪಡೆಯ ಒಡೆಯರು.

*** ವಸಿಷ್ಠ ಮುನಿಯ ಆಶ್ರಮಕ್ಕೆ ಬಂದ ಹರಿಶ್ಚಂದ್ರ ***

ಬೇಡಪಡೆ: ಉರಿ ಶೈತ್ಯವಾದಂತೆ; ವಿಷ ಅಮೃತವಾದಂತೆ; ತರಣಿ ತಂಪಾದಂತೆ ನೃಪನ ಬೇಂಟೆಯ ಬಿನದದ ಉರವಣೆಯನ್ ಒದವಿಸುವ ಹರಿವೈರಿ ಕರಿವೈರಿ ಹರಿಣವೈರಿಗಳು ಮೃಗವ ಹರಿದಟ್ಟಿ ಪಿಡಿದು ಅಡಸಿ ಮೋದಿ ಮುರಿಯದೆ ನಿಂದು ಮರವಟ್ಟ ಕಾರಣವನ್ ಅರುಪಬೇಕು.

(ಎಂದು ಅಂತು ಆ ಬೇಡರು ಎಯ್ದಿ ಸರಸಿರುಹಸಖಕುಲ ಹರಿಶ್ಚಂದ್ರ ಭೂಪಂಗೆ ಪೇಳ್ದರ್.)

ಹರಿಶ್ಚಂದ್ರ: ಇಂದು ಈ ಕಾನನಮ್ ಚಿತ್ರತರವಾದುದು. ಮಹಾಕ್ಷೇತ್ರದ ಒಳಗಣದಾಗದೆ ಇರದು.

(ಎನುತ ಭೂಪತಿ ಬರೆ, ಮುಂದೆ ಚಿತ್ರಕಾಯಾಜಿನದ ಸುಲಿಪಲ್ಲ ಭಸ್ಮದ ಜಟಾಭರದ ಮುನಿನಾಥನು ಮಿತ್ರರೊಡಗೂಡಿ ಮಿತ್ರ ಪ್ರಕಾಶಮ್ ಲೋಕಮಿತ್ರನ್ ಆತ್ಮಪವಿತ್ರ ಚರಿತವಾಕ್ಯನ್ ಮರುತ ಮಿತ್ರಕಾರ್ಯದ ಪರಿಕರಂಗಳ ಸವಕಟ್ಟುತಿರಲು ಕಂಡನು. ಹೆಂದದ ಆನಂದದಿಮ್ ಬಂದು ವಂದಿಸಿ ಮುಂದೆ ನಿಂದು.)

ಹರಿಶ್ಚಂದ್ರ: ಇಂದು ಎಮ್ಮ ಮೃಗವು ಎಂದಿನ ಅಂದದಿಂದ ಮುದದಿಂದ ಮೃಗವೃಂದೊಳಗೆ ಒಂದುವಮ್ ಕೊಂದಿಕ್ಕದೆ ಇರ್ದುದಕೆ ಕಾರಣವನು ತಂದೆ ಕುಂದದೆ ಕರುಣಿಸು.

(ಎಂದು ವಂದಿಸಿ ಭೂಪಕಂದರ್ಪನ್ ಇನಕುಲ ಹರಿಶ್ಚಂದ್ರ ಭೂನಾಥನ್ ಎಂದಡೆ, ಆ ಮುನಿನಾಥನ್ ಅಂದು ಮಾರುತ್ತರಮ್ ಕುಡಲೆಂದು ತರಿಸಂದನು.)

ಪರಾಶರ: ನೆರೆದ ವೇದಂಗಳ ಉಗ್ಗಡ; ಉಪನಿಷತ್ತುಗಳ ಗರವಟಿಗೆ; ಅಣಿಮಾದಿಗಳ ಬೊಬ್ಬೆ; ಧರ್ಮದ ಅಬ್ಬರ;
ಘನ ಜ್ಞಾನ ಪ್ರಭಾ ದೀಪ್ತಿಗಳು; ಹರಿ ಬ್ರಹ್ಮಾದಿ ಸುರರ ಕಾಹು; ಪುರುಷಾರ್ಥ
ನಾಲ್ಕರೊಳು ಸಲುಗೆ; ಪುಣ್ಯದ ಮಂದೆ;
ಸಿರಿ ಸರಸ್ವತಿಯರ ಎಡೆಯಾಟ ಎಸೆದಿರೆ ಜಗದ್ಗುರು ವಿರೂಪಾಕ್ಷನ್ ಇಲ್ಲಿಯೆ ಸುಖದೊಳಿಪ್ಪ ಪಂಪಾಕ್ಷೇತ್ರವಿದು.
ಬಿಡದೆ ಒಮ್ಮೆ ಕಂಡ
ಜೀವರ ಭವವ್ರಜದ ಬೆಂಬಡಿಗೆ; ಪಾತಕಕೋಟಿಯಾ ಕತ್ತಿ; ದುಷ್ಕರ್ಮದ ಎಡೆಗೊರಳ ಕತ್ತರಿ;
ಸಮಸ್ತರೋಗಂಗಳ ಎಡೆಗೆ ಒಡ್ಡಿದ ಅಲಗು; ಜ್ಞಾನದ
ನಡುದಲೆಯ ಗರಗಸಮ್; ಮಲೆವ ಮಾಯೆಯ ಬಸುರನ್ ಒಡೆಹೊಯ್ವ ಶೂಲ;
ಇನ್ನುಳಿದ ದುರಿತವನ್ ಉರುಹಿ ಸುಡುವ ಕಿಚ್ಚು ಎಂದೆನಿಪ ತುಂಗಭದ್ರಾನದಿಯನ್
ಅವನೀಶ ನೋಡು.

ಹರಿಶ್ಚಂದ್ರ: ನುಡಿದು ಎನ್ನ ಸಂಶಯದ ಸಾಲ ಸವರಿದೆ. ನಿನ್ನ ಪಡೆದ ಪುಣ್ಯಾಧಿಕನ ಹೆಸರಾವುದಯ್ಯ. ನೀ ನುಡಿ.

ಪರಾಶರ: ಎರಡನೆಯ ಪುರವೈರಿಯೆನಿಪ ವಾಸಿಷ್ಠ ಮುನಿಪನ ಮೊಮ್ಮನು. ಬಿಡೆ ಪರಾಶರನು ನಾನ್.

(ಎನೆ…ಹೆಚ್ಚಿ ಹಿಗ್ಗಿ…)

ಹರಿಶ್ಚಂದ್ರ: ನಡೆ ನಡೆ ತಂದೆ… ಮದ್ಗುರುಗಳ ಅಡಿಗಳ ಎಡೆಗೆ…

(ಎಂದು ಅವನಿಪವರೇಣ್ಯನು ಬಳಿವಿಡಿದು ನಡೆತಂದು ಮುಂದೆ ಮುನಿವರೇಣ್ಯನನ್ ಕಂಡನು. ತಿಳಿಗೊಳನ ಬಳಸಿ ನಳನಳಸಿ ಬೆಳೆದ ಎಳಮಾವುಗಳ ತಳದ ಮಲ್ಲಿಕಾ ಮಂಟಪದ ತಣ್ಣೆಳಲ ತೆಳುಗಾಳಿಯೊಳು ಪುಣ್ಯವಪ್ಪ ಪುಳಿನ ಸ್ಥಳದ ಮೇಲೆ ಅಶೋಕೆಯ ತರುವಿನ ತಳಿರ ತೊಂಗಲ ಗದ್ದುಗೆಯೊಳ್ ಓಲಗಮ್ ಕೊಟ್ಟು ಬಳಸಿ ಹಿಂದೆ ಎಡಬಲದೊಳಿಪ್ಪ ಮುನಿಗಳ ಕೂಸ ನಲವಿನಿಮ್ ನುಡಿವ ಪಶುಪತಿಯಂತಿರ್ದ ಮುನಿನಾಥ ಕಣ್ಗೆ ಎಸೆದಿರ್ದನು. ನೀತಿ ಬಲಿದುದೊ…ಶಾಂತಿ ರೂಪಾಯ್ತೊ…ಸದ್ಗುಣ ವ್ರಾತವೇ ಮುನಿಯಾಯ್ತೊ…ಮುಕ್ತಿ ಜಡೆವೊತ್ತುದೋ…ಭೂತ ದಯೆ ವಲ್ಕಲಾಂಚಲವಾಂತುದೋ…ಪುಣ್ಯವೆಳಸಿ ಭಸಿತವನಿಟ್ಟುದೋ… ನೂತನ ಶ್ರುತ್ಯರ್ಥ ನುಡಿಗಲಿತುದೋ…ಘನ ಸ್ವಾತಂತ್ರ್ಯವೃತ್ತಿ ಗೋಚರಿಸಲ್ ಎಳಸಿತೊ ಎಂಬ ಚಾತುರ್ಯದಿಂದ ಇರ್ದ ಮುನಿನಾಥನನ್ ಕಂಡು ಹರುಷದಿಮ್ ಭೂನಾಥನು…)

ಹರಿಶ್ಚಂದ್ರ: ಸುರ ನರೋರಗ ನಮಿತ ಚರಣ…ಜಯ ಜಯ ದಯಾಭರಣ…ಜಯ ಜಯ ಕೃಪಾವರಣ…ಜಯ ಜಯ ಶಾಂತಿಕಿರಣ…
ಜಯ ಜಯ ವಿಗತಮರಣ…ಜಯಜಯ ದುರಿತ <ಹರಣ…ಜಯ ಜಯತು ಜಯತು ಗುರುವೆ…ಕುಲ ಗುರುವೆ…ಘನ ಗುರುವೆ…ಪರ ಗುರುವೆ…ಮದ್ಗುರುವೆ…ಸದ್ಗುರುವೆ ಶರಣಾಗು ಶರಣಾಗು.

(ಎಂದು ಆ ಧರಣಿಪತಿ ಮುನಿಯ ಚರಣ ಸರಸಿಜದ ಎಡೆಯೊಳು ನಿಜತನುವನ್ ಹರಹಿದನು. ಬಗೆ ಮೀರಿ ಲೋಚನದೊಳ್ ಒಗೆವ ಸುಖಜಲ…ಮೆಯ್ಯೊಳ್ ಒಗೆವ ಪುಳಕಮ್…ಕೈಯೊಳ್ ಒಗೆವ ಕಂಪನ…ನುಡಿಯೊಳ್ ಒಗೆವ ತೊದಳ್…ಅಮಳ ಕದಪಿನೊಳ್ ಒಗೆವ ಬೆಮರು…ಕಂಠದೊಳ್ ಒಗೆವ ಹೊಸ ಗದ್ಗದ…ಮಿಗೆ ಮೊಗದೊಳ್ ಒಗೆವ ನಸುನಗೆ…ಘನಮನೋಮತಿಯೊಳ್ ಒಗೆವ ಪರವಶವೆರಸಿ ಮೆರೆವ ಭೂರಮಣನನ್ ಮೊಗವೆತ್ತಿ ಕುಳ್ಳಿರಿಸಿ…ಮೆಯ್ದಡವಿ…ಬೋಳೈಸಿ ಮುನಿನಾಥನ್ ಇಂತೆಂದನು.)

ವಸಿಷ್ಠ: ನೀನ್ ಎತ್ತಲ್…ಈ ವಿಪಿನವೆತ್ತಲ್; ಈ ಬನಕೆ ನೀನೇನು ಕಾರಣ ಬಂದೆ. ಎಲೆ ಮಗನೆ ಹೇಳ್.

(ಎನಲು ಭೂನಾಥನ್ ಎಂದ…)

ಹರಿಶ್ಚಂದ್ರ: ಖಗಮೃಗದ ಕಾಟಕ್ಕೆ ಸೈರಿಸಲಾರದೆ ಅವನೀಜನಮ್ ಹಾನಿವೆತ್ತು ಒರಲಿ ಮೊರೆಯಿಡೆ ಕೇಳ್ದು, ಬೇಂಟೆಯ ಸುಮಾನಕ್ಕೆ ಬಂದೆನ್.

(ಎಂದೆನೆ…ತ್ರಿಕಾಲೋಚಿತ ಜ್ಞಾನಿ ಮುನಿಯು ಅರಸನ ಮೇಲೆ ಕೌಶಿಕನ ಕಾಟ ಅಡಿಯಿಟ್ಟ ಅನುವನು ಅರಿದನ್.)

ವಸಿಷ್ಠ: (ತನ್ನಲ್ಲಿಯೇ ಚಿಂತಿಸತೊಡಗುತ್ತಾನೆ.)

ವಿಷಮ ವಿಶ್ವಾಮಿತ್ರಮುನಿ ಮುನಿದು ತಪ್ಪ ಸಾಧಿಸುವ…ನೀನ್ ಅರಿದಿರ್ ಎಂದು ಅರುಪಬೇಕು. ಅರಿಪಿದಡೆ ಪಿಸುಣತ್ವ. ಅರುಪದಿರ್ದಡೆ ನೃಪನ ಕೇಡನ್ ಆನ್ ಓತು <ಉಪೇಕ್ಷಿದಾತನು. ಗಸಣಿಯಾಯ್ತು. ಏಗೆಯ್ವೆನ್.

(ಎಂದು ಮನದೊಳಗೆ ಚಿಂತಿಸಿ, ಮತ್ತೆ ತನ್ನಲ್ಲಿಯೇ ತೀರ್ಮಾನಿಸುತ್ತಾನೆ.)

ವಸಿಷ್ಠ: ಮನೆಗೆ ಬಂದ ಶಿಷ್ಯನನು ಬೋಧಿಸಲು ಕುಂದು ಎಸೆಯದಿರದು. ಆನ್ ಪೇಳದಂತೆ ಪೇಳ್ದಪೆನ್.

(ಎಂದು ಆ ಮುನಿನಾಥನು ನೆನೆದನ್.)

ವಸಿಷ್ಠ: (ಹರಿಶ್ಚಂದ್ರನನ್ನು ಉದ್ದೇಶಿಸಿ…)

ಎನ್ನನ್ ಒಲುವೊಡೆ…ಕುಲಾಚಾರಮಮ್ ಬಿಡದಿರ್ಪಡೆ…ಉನ್ನತಿಕೆ ಬೇಹಡೆ…ಉತ್ತಮ ಕೀರ್ತಿ ಕೆಡದಿಹಡೆ… ನನ್ನಿ ಉಳಿವಡೆ…ಮಗನೆ, ವಿಶ್ವಾಮಿತ್ರನಾಶ್ರಮಕ್ಕೆ <ಮರೆದು ಹೋಗದಿರು. ಗನ್ನದಿಮ್ ಮರಹಿಕ್ಕಿ ಕೊಂಡೊಯ್ದು, ಬಳಿಕ ಮುನಿ ಬನ್ನ ಬಡಿಸಿಯೆ ಕಾಡಿದಪನ್. ಅರಿದಿರು.

(ಎಂದು ಪೇಳ್ದು…)

ವಸಿಷ್ಠ: ಇನ್ನೊಂದು ಚೋದ್ಯಮಮ್ ನೋಡು ಬಾ.

(ಎಂದು ವಿರೂಪಾಕ್ಷನೆಡೆಗೆ ತಂದನು. ನೋಡಿ ಪರಮಾನಂದ ಮೂಡಿ, ಮನದೊಳು ಸಂತಸದೊಳ್ ಓಲಾಡಿ, ಪುಳಕ ಸ್ವೇದ ತೊದಳು ಕಂಪನ ಮರವೆಗೂಡಿ, ತನುವಿನ ಎಚ್ಚರಿಂದ ಉಬ್ಬಿ ಹಾರೈಸಿ, ಹರುಷದ ಸುಖದಲಿ ಹಾಡಿ, ನಾನಾ ಸ್ನಪನ ಯಕ್ಷ ಕರ್ದಮ ಪುಷ್ಪ ಗಾಡಿ ಪಡೆಯಲು, ಹರಿಶ್ಚಂದ್ರ ನೃಪನು ಜೋಡಿಯಿಮ್ ಪಂಪಾಂಬಿಕಾಪತಿಯ ಮಹಾರುದ್ರಾಭಿಷೇಚನದ ಪೂಜೆಮಾಡಿದ.)

ಹರಿಶ್ಚಂದ್ರ: ಇಂದು ಆನು ಕೃತಕೃತ್ಯನಾದೆನ್. ಇಂದು ಎನ್ನಯ ಜನ್ಮ ಸಾಫಲ್ಯವಾಯ್ತ. ಅಖಿಳ ಜಗದ ಅಳಲುರಿಯ ನಂದಿಸುವ ಪಾರದಿಯೆ ಸಂಸಾರ ವಾರಿಧಿಯನ್ ಉತ್ತರಿಪ ಗುರುಪದವನು ತಂದು ತೋರಿತ್ತಲಾ. ಶ್ರೀಗುರು ವಿರೂಪಾಕ್ಷ ತಂದೆಯನ್ ಕಾಣಿಸಿತು. ನಾಡ ಗಾದೆಯ ಬಿಟ್ಟಿಯಿಂದ ಕಟಕವ ಕಂಡೆನ್ ಎಂಬುದು ಎನಗಾಯ್ತು.

(ಎನುತ್ತೆ ಭೂನಾಥನು ಎರಗಿದನ್.)

ತಿರುಳು: ವಸಿಶ್ಟ ಮುನಿಯ ಆಶ್ರಮಕ್ಕೆ ಬಂದ ಹರಿಶ್ಚಂದ್ರ

ಉರಿ ಶೈತ್ಯವಾದಂತೆ=ಬಿಸಿಯು ತಣ್ಣಗಾದಂತೆ;

ವಿಷ ಅಮೃತವಾದಂತೆ=ಜೀವಿಗಳ ಸಾವಿಗೆ ಕಾರಣವಾಗುವ ವಿಶವೇ ಜೀವವನ್ನು ಉಳಿಸುವ ಅಮ್ರುತವಾದಂತೆ;

 ತರಣಿ ತಂಪಾದಂತೆ=ಸೂರ್‍ಯನ ಬಿಸಿಕಿರಣಗಳು ತಣ್ಣನೆಯ ಕಿರಣಗಳಾದಂತೆ;

 ನೃಪನ ಬೇಂಟೆಯ ಬಿನದದ ಉರವಣೆಯನ್ ಒದವಿಸುವ=ರಾಜ ಹರಿಶ್ಚಂದ್ರನ ಬೇಟೆಯಾಟದ ವಿನೋದಕ್ಕೆ ಒತ್ತಾಸೆಯಾಗಿ ಉದ್ರೇಕ, ಉತ್ಸಾಹ ಮತ್ತು ಉಲ್ಲಾಸದ ಸಡಗರವನ್ನು ತಂದುಕೊಡುವ;

ಹರಿವೈರಿ=ಸಿಂಹವನ್ನು ಕೊಲ್ಲುವ ಶಕ್ತಿಯುಳ್ಳ ‘ ಶರಬ ’ ಎಂಬ ಹೆಸರಿನ ಕಾಡುಪ್ರಾಣಿ. ಈ ಬಗೆಯ ಪ್ರಾಣಿಯನ್ನು ಪುರಾಣದ ಕತೆಗಳಲ್ಲಿ ಕಲ್ಪಿಸಿಕೊಳ್ಳಲಾಗಿದೆ;

ಕರಿವೈರಿ=ಆನೆಯನ್ನು ಕೊಲ್ಲುವ ಶಕ್ತಿಯುಳ್ಳ ಸಿಂಹ;

ಹರಿಣವೈರಿ=ಜಿಂಕೆಯನ್ನು ಕೊಲ್ಲುವ ಶಕ್ತಿಯುಳ್ಳ ಹುಲಿ;

 ಹರಿವೈರಿ…ಕರಿವೈರಿ…ಹರಿಣವೈರಿಗಳು=ಶರಬ, ಸಿಂಹ ಮತ್ತು ಹುಲಿಗಳು;

ಮೃಗವ ಹರಿದಟ್ಟಿ ಪಿಡಿದು ಅಡಸಿ ಮೋದಿ ಮುರಿಯದೆ=ಕಾಡಿನಲ್ಲಿರುವ ಪ್ರಾಣಿಪಕ್ಶಿಗಳತ್ತ ನುಗ್ಗಿ, ಅಟ್ಟಿಸಿಕೊಂಡು ಹೋಗಿ, ಮೇಲೆ ಎರಗಿ ಹೊಡೆದು ಕೊಲ್ಲದೆ;

ನಿಂದು ಮರವಟ್ಟ ಕಾರಣವನ್ ಅರುಪಬೇಕು=ಅತ್ತಿತ್ತ ಚಲಿಸದೆ ಸುಮ್ಮನೆ ನಿಂತುಕೊಂಡಿರಲು ಕಾರಣವೇನು ಎಂಬುದನ್ನು ತಿಳಿಸಬೇಕು;

ಎಂದು ಅಂತು ಆ ಬೇಡರು ಎಯ್ದಿ ಸರಸಿರುಹಸಖಕುಲ ಹರಿಶ್ಚಂದ್ರ ಭೂಪಂಗೆ ಪೇಳ್ದರ್=ಎಂದು ಆ ರೀತಿಯಲ್ಲಿ ಬೇಡ ಪಡೆಯವರು ತಮಗೆ ಉಂಟಾದ ಅಚ್ಚರಿ ಮತ್ತು ಆತಂಕವನ್ನು ಸೂರ್‍ಯವಂಶದ ರಾಜ ಹರಿಶ್ಚಂದ್ರನ ಬಳಿಗೆ ಬಂದು ಹೇಳಿಕೊಂಡರು;

ಬೇಡರು ಬೇಟೆಯಾಡುವಾಗ ಕಾಡಿನ ಮರಗಿಡಬಳ್ಳಿಪೊದೆಗಳಲ್ಲಿ, ನೆಲದೊಳಗಿನ ಬಿಲಗಳಲ್ಲಿ ಮತ್ತು ಬಂಡೆಯ ಗವಿಗಳಲ್ಲಿ ಅಡಗಿಕೊಂಡಿರುವ ಪ್ರಾಣಿಪಕ್ಶಿಗಳನ್ನು ಗುರುತಿಸಲು, ಅಡಗುತಾಣದಿಂದ ಅವನ್ನು ಹೊರಬರುವಂತೆ ಮಾಡಲು ಮತ್ತು ಅವನ್ನು ಬೆನ್ನಟ್ಟಿ ಹಿಡಿಯಲು ನಾಯಿಗಳನ್ನು ಪಳಗಿಸಿ ಬೇಟೆನಾಯಿಗಳನ್ನಾಗಿ ಬಳಸುತ್ತಿದ್ದರು. ಇದೇ ರೀತಿ ಕಾಡಿನಲ್ಲಿದ್ದ ಹುಲಿ, ಸಿಂಹ. ಶರಬಗಳನ್ನು ಸೆರೆಹಿಡಿದು ತಂದು, ಪಳಗಿಸಿದ ನಂತರ ಈ ಕ್ರೂರಪ್ರಾಣಿಗಳನ್ನೇ ಕಾಡಿನ ಪ್ರಾಣಿಗಳನ್ನು ಬೇಟೆಯಾಡಲು ಬಳಸುತ್ತಿದ್ದರು ಎಂಬ ಒಂದು ವಿವರಣೆಯಿದೆ. ಇದಕ್ಕೆ ಉದಾಹರಣೆಯಾಗಿ ಕಾಡಾನೆಗಳನ್ನು ಹಿಡಿದುತಂದು ಪಳಗಿಸಿ, ಅನಂತರ ಪಳಗಿಸಿದ ಆನೆಗಳನ್ನು ಬಿಟ್ಟು ಕಾಡಾನೆಗಳನ್ನು ಹಿಡಿಯುವುದನ್ನು ಈಗಲೂ ನಾವು ಕಾಣುತ್ತಿದ್ದೇವೆ;

ಇಂದು ಈ ಕಾನನಮ್ ಚಿತ್ರತರವಾದುದು=ಇಂದು ಈ ಕಾಡಿನಲ್ಲಿ ನಾವು ಕಾಣುತ್ತಿರುವ ನೋಟವೆಲ್ಲವೂ ಅಚ್ಚರಿಯನ್ನುಂಟುಮಾಡುತ್ತಿದೆ. ಮುನ್ನುಗ್ಗಿ ಬೇಟೆಯಾಡುತ್ತಿದ್ದ ಬೇಡ ಪಡೆಯ ಪಳಗಿದ ಶರಬ, ಸಿಂಹ, ಹುಲಿಗಳೆಲ್ಲವೂ ಬೇಟೆಯ ಕಸುವನ್ನೇ ಕಳೆದುಕೊಂಡಂತೆ…ಪ್ರಾಣಿಪಕ್ಶಿಗಳನ್ನು ಕೊಲ್ಲಬೇಕೆಂಬ ಉದ್ದೇಶವನ್ನೇ ಮರೆತಂತೆ ಸುಮ್ಮನೆ ನಿಂತುಬಿಟ್ಟಿವೆ.

ಮಹಾಕ್ಷೇತ್ರದ ಒಳಗಣದಾಗದೆ ಇರದು ಎನುತ ಭೂಪತಿ ಬರೆ=ಹುಟ್ಟಿನಿಂದಲೇ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುವ ಬೇಡಪಡೆಯ ಹುಲಿ ಸಿಂಹ ಶರಬಗಳು ಕ್ರೂರತನವನ್ನು ಮರೆತು, ಇತರ ಪ್ರಾಣಿಗಳ ಬಗ್ಗೆ ಕರುಣೆಯಿಂದ ಇರಬೇಕಾದರೆ, ಕಾಡಿನ ಈ ಪ್ರದೇಶವು ಸಜ್ಜನರ ನೆಲೆಯಾಗಿರಬೇಕು. ಇಲ್ಲದಿದ್ದರೆ ಕ್ರೂರಪ್ರಾಣಿಗಳಲ್ಲಿ ಇಂತಹ ಸಾದುತನ ಬರುತ್ತಿರಲಿಲ್ಲ ಎಂದು ರಾಜ ಹರಿಶ್ಚಂದ್ರನು ಕಾಡಿನ ಆ ನೆಲದ ಗುಣವನ್ನು ಕೊಂಡಾಡುತ್ತ ಬರುತ್ತಿರಲು;

ಚಿತ್ರಕಾಯ+ಅಜಿನ; ಚಿತ್ರಕಾಯ=ಹುಲಿ; ಅಜಿನ=ಚರ್‍ಮ;

ಮುಂದೆ ಚಿತ್ರಕಾಯಾಜಿನದ ಸುಲಿಪಲ್ಲ ಭಸ್ಮದ ಜಟಾಭರದ ಮುನಿನಾಥನು ಮಿತ್ರರೊಡಗೂಡಿ= ಹುಲಿಯ ಚರ್‍ಮವನ್ನು ಉಟ್ಟಿರುವ, ಚೊಕ್ಕಟವಾದ ಹಲ್ಲುಗಳನ್ನುಳ್ಳ, ವಿಬೂತಿಯನ್ನು ಬಳಿದುಕೊಂಡಿರುವ, ಜಟೆಯನ್ನು ಎತ್ತಿಕಟ್ಟಿರುವ ಮುನಿಯೊಬ್ಬನು ತನ್ನ ಗೆಳೆಯರ ಜತೆಗೂಡಿ;

 ಮಿತ್ರ ಪ್ರಕಾಶನ್=ಸೂರ್‍ಯನಂತೆ ಬೆಳಗುತ್ತಿರುವ; ಲೋಕಮಿತ್ರನ್=ಲೋಕದ ಸಕಲ ಕ್ರಿಯೆಗಳಿಗೂ ನೆರವಾಗುವ; ಆತ್ಮಪವಿತ್ರ ಚರಿತವಾಕ್ಯನ್=ಒಳ್ಳೆಯ ಮನಸ್ಸಿನ ಹಾಗೂ ನಡೆನುಡಿಯ; ಮರುತ ಮಿತ್ರ=ಅಗ್ನಿದೇವ. ವಾಯುದೇವನ ಗೆಳೆಯನಾದ ಅಗ್ನಿದೇವ;

ಮರುತ ಮಿತ್ರ ಕಾರ್ಯ=ಯಾಗದ ಕುಂಡದಲ್ಲಿ ಬೆಂಕಿಯನ್ನು ಉರಿಸುವ ಆಚರಣೆ;

ಮಿತ್ರ ಪ್ರಕಾಶಮ್ ಲೋಕಮಿತ್ರನ್ ಆತ್ಮಪವಿತ್ರ ಚರಿತವಾಕ್ಯನ್ ಮರುತ ಮಿತ್ರ ಕಾರ್ಯದ ಪರಿಕರಂಗಳ ಸವಕಟ್ಟುತಿರಲು ಕಂಡನು=ಲೋಕವನ್ನು ಬೆಳಗುವ ಮತ್ತು ಲೋಕದ ಸಕಲ ಕ್ರಿಯೆಗೆ ಕಾರಣನಾಗಿರುವ ಸೂರ್‍ಯನಂತೆ ಪ್ರಕಾಶಿಸುವ ಮತ್ತು ಒಳ್ಳೆಯ ಮನಸ್ಸಿನ ನಡೆನುಡಿಯ ದೇವತೆಯಾದ ಅಗ್ನಿದೇವನನ್ನು ಪೂಜಿಸಲು ಯಾಗಕ್ಕೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸುತ್ತಿರುವ ಮುನಿಯನ್ನು ರಾಜ ಹರಿಶ್ಚಂದ್ರನು ಕಂಡನು;

ಹೆಂದದ ಆನಂದದಿಮ್ ಬಂದು ವಂದಿಸಿ ಮುಂದೆ ನಿಂದು=ಯಾಗದ ಅಗ್ನಿಕುಂಡಕ್ಕೆ ಬೇಕಾದ ಸಾಮಗ್ರಿಗಳನ್ನು ಕಲೆಹಾಕುತ್ತಿರುವ ಮುನಿಯನ್ನು ಹರಿಶ್ಚಂದ್ರನು ಕಂಡು ಹೆಚ್ಚಿದ ಆನಂದದಿಂದ ಮುನಿಗೆ ನಮಸ್ಕರಿಸಿ, ಆತನ ಮುಂದೆ ನಿಂತುಕೊಂಡು;

 ತಂದೆ, ಇಂದು ಎಮ್ಮ ಮೃಗವು ಎಂದಿನ ಅಂದದಿಂದ ಮುದದಿಂದ ಮೃಗವೃಂದೊಳಗೆ ಒಂದುವಮ್ ಕೊಂದಿಕ್ಕದೆ ಇರ್ದುದಕೆ ಕಾರಣವನು ಕುಂದದೆ ಕರುಣಿಸು ಎಂದು ವಂದಿಸಿ ಭೂಪಕಂದರ್ಪನ್ ಇನಕುಲ ಹರಿಶ್ಚಂದ್ರ ಭೂನಾಥನ್ ಎಂದಡೆ=ತಂದೆ, ಇಂದು ನಾವು ಬೇಟೆಯಾಡಲೆಂದು ಕರೆತಂದಿರುವ ಪಳಗಿದ ಹುಲಿ ಸಿಂಹ ಶಬರ ಪ್ರಾಣಿಗಳು ಎಂದಿನ ರೀತಿಯಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗಿ , ಪ್ರಾಣಿಗಳ ಗುಂಪಿನಲ್ಲಿ ಒಂದು ಪ್ರಾಣಿಯನ್ನಾದರೂ ಕೊಲ್ಲದೆ, ಸುಮ್ಮನಿರುವುದಕ್ಕೆ ಕಾರಣವೇನೆಂಬುದನ್ನು ಮರೆಮಾಚದೆ ನಮಗೆ ತಿಳಿಸಿರಿ ಎಂದು ಕಯ್ ಮುಗಿಯುತ್ತ ಕಾಮದೇವನಂತೆ ಸುಂದರನಾಗಿರುವ ಸೂರ್‍ಯವಂಶದ ರಾಜನಾದ ಹರಿಶ್ಚಂದ್ರನು ಆ ಮುನಿಯನ್ನು ಕೇಳಿಕೊಂಡಾಗ;

ಅಂದು ಆ ಮುನಿನಾಥನ್ ಮಾರುತ್ತರಮ್ ಕುಡಲೆಂದು ತರಿಸಂದನು=ಆಗ ಆ ಮುನಿಯು ರಾಜನ ಕೋರಿಕೆಯನ್ನು ಮನ್ನಿಸಿ, ಅವನಿಗೆ ಉತ್ತರವನ್ನು ಕೊಡಲು ನಿಶ್ಚಿಯಿಸಿದನು;

ನೆರೆದ ವೇದಂಗಳ ಉಗ್ಗಡ=ಆಶ್ರಮದಲ್ಲಿನ ವಟುಗಳು ಜತೆಗೂಡಿ ಉಚ್ಚರಿಸುತ್ತಿರುವ ವೇದ ಶ್ಲೋಕಗಳ ಎತ್ತರದ ದನಿ ;

 ಉಪನಿಷತ್ತುಗಳ ಗರವಟಿಗೆ=ಉಪನಿಶತ್ತುಗಳಲ್ಲಿನ ವಿಚಾರಗಳ ದೊಡ್ಡ ಮಟ್ಟದ ಚರ್‍ಚೆಯ ಸದ್ದು;

ಅಣಿಮ+ಆದಿಗಳ; ಅಣಿಮಾ=ಮುನಿಗಳು ತಮ್ಮ ತಪೋಸಾದನೆಯಿಂದ ಪಡೆಯುವ ಎಂಟು ಸಿದ್ದಿಗಳಲ್ಲಿ ಒಂದು ಬಗೆಯದು;

ಅಣಿಮಾದಿಗಳ ಬೊಬ್ಬೆ=ಮುನಿಗಳು ತಾವು ಪಡೆದ ಸಿದ್ದಿಗಳ ಮಹತ್ವವನ್ನು ಕುರಿತು ಗಟ್ಟಿಯಾದ ದನಿಯಲ್ಲಿ ಹೇಳಿಕೊಳ್ಳುತ್ತಿರುವುದು;

 ಧರ್ಮದ ಅಬ್ಬರ=ಒಳ್ಳೆಯ ನಡೆನುಡಿಯಿಂದ ಕೂಡಿದ ದರ್‍ಮದ ಸಂಗತಿಗಳನ್ನು ಕುರಿತ ದೊಡ್ಡ ಮಟ್ಟದ ಮಾತುಕತೆ;

 ಘನ ಜ್ಞಾನ ಪ್ರಭಾ ದೀಪ್ತಿಗಳು=ಒಳ್ಳೆಯ ಅರಿವನ್ನು ಬೆಳಗುವ ನಂದಾದೀಪಗಳು;

ಹರಿ ಬ್ರಹ್ಮಾದಿ ಸುರರ ಕಾಹು=ವಿಶ್ಣು, ಬ್ರಹ್ಮ ಮೊದಲಾದ ದೇವತೆಗಳ ಕಾವಲು;

 ಪುರುಷಾರ್ಥ ನಾಲ್ಕರೊಳು ಸಲುಗೆ=ಮಾನವ ಸಮುದಾಯದ ಒಲವು ನಲಿವು ನೆಮ್ಮದಿಗೆ ಬೇಕಾದ ‘ದರ್‍ಮ-ಅರ್‍ತ-ಕಾಮ-ಮೋಕ್ಶ’ ಗಳೆಂಬ ನಾಲ್ಕು ಸಂಗತಿಗಳ ಒಡನಾಟ;

ಪುಣ್ಯದ ಮಂದೆ=ಸಕಲರಿಗೂ ಮಂಗಳವನ್ನುಂಟು ಮಾಡುವ ಪುಣ್ಯಗಳು ಒಂದೆಡೆ ಗುಂಪುಗೂಡಿರುವ ನೆಲೆ;

ಸಿರಿ ಸರಸ್ವತಿಯರ ಎಡೆಯಾಟ ಎಸೆದಿರೆ=ಸಂಪತ್ತಿನ ದೇವತೆಯಾದ ಲಕ್ಶ್ಮಿ ಮತ್ತು ವಿದ್ಯೆಯ ದೇವತೆಯಾದ ಸರಸ್ವತಿಯರ ಸಂಚಾರದಿಂದ ಕಂಗೊಳಿಸುತ್ತಿರಲು;

ಜಗದ್ಗುರು ವಿರೂಪಾಕ್ಷನ್ ಇಲ್ಲಿಯೆ ಸುಖದೊಳಿಪ್ಪ ಪಂಪಾಕ್ಷೇತ್ರವಿದು=ಜಗತ್ತಿನ ಗುರುವಾದ ವಿರೂಪಾಕ್ಶನು ಈ ಎಡೆಯಲ್ಲಿಯೇ ಆನಂದದಿಂದ ಇರುವ ಪಂಪಾಕ್ಶೇತ್ರವಿದು;

ಬಿಡದೆ ಒಮ್ಮೆ ಕಂಡ ಜೀವರ=ಜೀವನದಲ್ಲಿ ಒಮ್ಮೆಯಾದರೂ ಪಂಪಾಕ್ಶೇತ್ರಕ್ಕೆ ಬಂದು ವಿರೂಪಾಕ್ಶ ದೇವರನ್ನು ನೋಡಿದ ವ್ಯಕ್ತಿಗಳ;

ಭವವ್ರಜದ ಬೆಂಬಡಿಗೆ=ಹುಟ್ಟು ಸಾವಿನ ಗುಂಪನ್ನು ಬಡಿದು ಹಾಕುವ ದೊಣ್ಣೆ. ಅಂದರೆ ಹುಟ್ಟು ಸಾವಿನ ಸರಣಿಯಿಂದ ಪಾರಾಗಿ ಜೀವಿಗಳು ಮುಕ್ತಿಯನ್ನು ಪಡೆಯುತ್ತಾರೆ;

ಪಾತಕ ಕೋಟಿಯಾ ಕತ್ತಿ=ಜನರ ಪಾಪರಾಶಿಯನ್ನು ಕತ್ತರಿಸಿಹಾಕುವ ಕತ್ತಿ;

ದುಷ್ಕರ್ಮದ ಎಡೆಗೊರಳ ಕತ್ತರಿ=ಕೆಟ್ಟ ಕೆಲಸದ ಕೊರಳಿನ ನಡುಬಾಗವನ್ನು ಇಕ್ಕಳದಂತೆ ಹಿಡಿಯುವ ಕತ್ತರಿ. ಅಂದರೆ ಜನರಿಗೆ ಕೆಟ್ಟ ಕಾರ್‍ಯವನ್ನು ಮಾಡುವುದಕ್ಕೆ ಅವಕಾಶವನ್ನು ನೀಡುವುದಿಲ್ಲ;

ಸಮಸ್ತ ರೋಗಂಗಳ ಎಡೆಗೆ ಒಡ್ಡಿದ ಅಲಗು=ಜನರಿಗೆ ಯಾವುದೇ ಬಗೆಯ ರೋಗಗಳು ಬಾರದಂತೆ ತಡೆದು ನಿಲ್ಲಿಸುವ ಹರಿತವಾದ ಆಯುದ;

ಅಜ್ಞಾನದ ನಡುದಲೆಯ ಗರಗಸಮ್=ಜನಮನದಲ್ಲಿರುವ ತಿಳಿಗೇಡಿತನವನ್ನು ಇಬ್ಬಾಗವಾಗಿ ಕುಯ್ದುಹಾಕುವ ಗರಗಸ;

ಮಲೆವ ಮಾಯೆಯ ಬಸುರನ್ ಒಡೆಹೊಯ್ವ ಶೂಲ=ಜೀವನದಲ್ಲಿ ಎದುರಾಗುವ ಎಲ್ಲ ಬಗೆಯ ಮೋಹದ ಬಸುರನ್ನು ಒಡೆದು ಹಾಕುವ ಶೂಲ; ಅಂದರೆ ಜನರನ್ನು ಯಾವುದೇ ಬಗೆಯ ದುರಾಶೆಯ ಸೆಳೆತಕ್ಕೆ ಬಲಿಯಾಗದಂತೆ ಕಾಪಾಡುವ ಶೂಲ;

ಇನ್ನುಳಿದ ದುರಿತವನ್ ಉರುಹಿ ಸುಡುವ ಕಿಚ್ಚು=ಮಾನವರ ಜೀವನದಲ್ಲಿ ಕಾಡುವಂತಹ ಯಾವುದೇ ಬಗೆಯ ಪಾಪವನ್ನು ಸುಟ್ಟು ಬೂದಿ ಮಾಡುವ ಬೆಂಕಿ;

ಎಂದೆನಿಪ ತುಂಗಭದ್ರಾನದಿಯನ್ ಅವನೀಶ ನೋಡು ಎಂದನು=ಎಂದು ಹೆಸರನ್ನು ಪಡೆದಿರುವ ತುಂಗಬದ್ರಾ ನದಿಯನ್ನು ರಾಜನೇ ನೋಡು ಎಂದು ಆ ಮುನಿಯು ಕಾಡಿನ ನಡುವೆ ಇದ್ದ ಆ ಎಡೆಯ ಮಹತ್ವವನ್ನು ವಿವರವಾಗಿ ಹೇಳಿದನು;

ನುಡಿದು ಎನ್ನ ಸಂಶಯದ ಸಾಲ ಸವರಿದೆ=ಈ ಹೊಸ ಪ್ರಾಂತ್ಯದ ಬಗ್ಗೆ ನನಗಿದ್ದ ಕುತೂಹಲ, ಅನುಮಾನ ಮತ್ತು ಆತಂಕವನ್ನು ಪರಿಹರಿಸಿ, ನಿಜ ಸಂಗತಿಯನ್ನು ತಿಳಿಸಿದಿರಿ;

ನಿನ್ನ ಪಡೆದ ಪುಣ್ಯಾಧಿಕನ ಹೆಸರಾವುದಯ್ಯ. ನೀ ನುಡಿ ಎಂದಡೆ=ನಿಮ್ಮ ತಂದೆಯವರ ಹೆಸರೇನು ಎಂಬುದನ್ನು ತಿಳಿಸಿರಿ ಎಂದು ರಾಜ ಹರಿಶ್ಚಂದ್ರನು ಕೇಳಿದಾಗ;

ಪುರವೈರಿ+ಎನಿಪ; ಪುರವೈರಿ=ಶಿವ; ಬಿಡೆ=ನಿಜವಾಗಿ/ಸ್ಪಶ್ಟವಾಗಿ;

ಎರಡನೆಯ ಪುರವೈರಿಯೆನಿಪ ವಾಸಿಷ್ಠ ಮುನಿಪನ ಮೊಮ್ಮನು. ಬಿಡೆ ಪರಾಶರನು ನಾನ್ ಎನೆ=ಎರಡನೆಯ ಶಿವನೆಂದು ಕೀರ್‍ತಿವಂತನಾಗಿರುವ ವಾಸಿಷ್ಟ ಮುನಿಯ ಮೊಮ್ಮಗನು ನಾನು. ನನ್ನ ಹೆಸರು ಪರಾಶರ ಎಂದು ವಾಸ್ತವವನ್ನು ನುಡಿಯಲು;

ಹೆಚ್ಚಿ ಹಿಗ್ಗಿ ನಡೆ ನಡೆ ತಂದೆ… ಮದ್ಗುರುಗಳ ಅಡಿಗಳ ಎಡೆಗೆ ಎಂದು=ತನ್ನ ಮೆಚ್ಚಿನ ಗುರುಗಳಾದ ವಸಿಷ್ಟ ಮುನಿಯ ಮೊಮ್ಮಗನೇ ಈತನೆಂದು ತಿಳಿದ ನಂತರ ಹರಿಶ್ಚಂದ್ರನು ಆನಂದವು ಇಮ್ಮಡಿಗೊಂಡು, ನಡೆ ನಡೆ ತಂದೆ…ನನ್ನ ಗುರುಗಳ ಪಾದದೆಡೆಗೆ ನನ್ನನ್ನು ಕರೆದುಕೊಂಡು ಎನ್ನುತ್ತ;

ಅವನಿಪವರೇಣ್ಯನು ಬಳಿವಿಡಿದು ನಡೆತಂದು ಮುಂದೆ ಮುನಿವರೇಣ್ಯನನ್ ಕಂಡನು=ರಾಜರಲ್ಲಿಯೇ ಅತ್ಯುತ್ತಮನೆನಿಸಿದ ಹರಿಶ್ಚಂದ್ರನು ಪರಾಶರ ಮುನಿಯ ಜತೆಯಲ್ಲಿ ನಡೆತಂದು, ಮುಂದೆ ವಸಿಷ್ಟ ಮುನಿಯನ್ನು ಕಂಡನು;

 ತಿಳಿಗೊಳನ ಬಳಸಿ ನಳನಳಸಿ ಬೆಳೆದ ಎಳಮಾವುಗಳ ತಳದ ಮಲ್ಲಿಕಾ ಮಂಟಪದ ತಣ್ಣೆಳಲ ತೆಳುಗಾಳಿಯೊಳು=ತಿಳಿಯಾದ ನೀರಿನಿಂದ ಕೂಡಿರುವ ಕೊಳದ ಸುತ್ತಲೂ ಹಬ್ಬಿ, ಕೋಮಲವಾಗಿ ಬೆಳೆದು, ಚಿಗುರೆಲೆಗಳಿಂದ ಕಂಗೊಳಿಸುತ್ತಿರುವ ಮಾವಿನ ಮರಗಳ ಕೆಳಗೆ, ಮಲ್ಲಿಗೆಯ ಹೂಬಳ್ಳಿಯಿಂದ ಹೆಣೆದುಕೊಂಡಿರುವ ಮಂಟಪದ ತಂಪಾದ ನೆಳಲಿನ ತೆಳುಗಾಳಿಯಲ್ಲಿ;

ಪುಣ್ಯವಪ್ಪ ಪುಳಿನ ಸ್ಥಳದ ಮೇಲೆ=ಒಳ್ಳೆಯ ಮರಳಿನ ದಂಡೆಯ ಮೇಲೆ;

ಅಶೋಕೆಯ ತರುವಿನ ತಳಿರ ತೊಂಗಲ ಗದ್ದುಗೆಯೊಳ್ ಓಲಗಮ್ ಕೊಟ್ಟು=ಅಶೋಕ ಮರದ ಚಿಗುರಿನ ಗೊಂಚಲುಗಳಿಂದ ಕೂಡಿರುವ ಗದ್ದುಗೆಯಲ್ಲಿ ಕುಳಿತು, ಆಶ್ರಮದ ಮುನಿಗಳ ಸಂಗಡ ಮಾತುಕತೆಯಾಡುತ್ತಿರುವ;

ಬಳಸಿ ಹಿಂದೆ ಎಡಬಲದೊಳಿಪ್ಪ ಮುನಿಗಳ ಕೂಸ ನಲವಿನಿಮ್ ನುಡಿವ=ತನ್ನ ಸುತ್ತಲೂ ನೆರೆದು, ಎಡಬಲದಲ್ಲಿರುವ ಆಶ್ರಮದ ವಟುಗಳನ್ನು ಪ್ರೀತಿಯಿಂದ ಮಾತನಾಡಿಸುತ್ತ;

ಪಶುಪತಿಯಂತಿರ್ದ ಮುನಿನಾಥ ಕಣ್ಗೆ ಎಸೆದಿರ್ದನು=ಹರಿಶ್ಚಂದ್ರನ ಕಣ್ಣುಗಳಿಗೆ ವಸಿಷ್ಟ ಮುನಿಯು ಶಿವನಂತೆ ಕಂಗೊಳಿಸಿದನು;

ನೀತಿ ಬಲಿದುದೊ=ನೀತಿಯೇ ದೊಡ್ಡದಾಗಿ ಬೆಳೆದು ವಸಿಷ್ಟ ಮುನಿಯ ರೂಪವನ್ನು ತಳೆಯಿತೊ;

ಶಾಂತಿ ರೂಪಾಯ್ತೊ=ಶಾಂತಿಯೇ ಮಯ್ ಪಡೆದು ವಸಿಷ್ಟ ಮುನಿಯ ರೂಪವನ್ನು ತಳೆಯಿತೊ;

ಸದ್ಗುಣ ವ್ರಾತವೇ ಮುನಿಯಾಯ್ತೊ=ಒಳ್ಳೆಯ ನಡೆನುಡಿಗಳ ಸಮೂಹವೇ ವಸಿಷ್ಟ ಮುನಿ ರೂಪವನ್ನು ತಳೆಯಿತೊ;

ಮುಕ್ತಿ ಜಡೆವೊತ್ತುದೋ=ಹುಟ್ಟು ಸಾವಿನ ಸರಣಿಯಿಂದ ಹೊರಬಂದ ಮುಕ್ತಿಯೇ ವಸಿಷ್ಟ ಮುನಿಯ ತಲೆಯಲ್ಲಿ ಎತ್ತಿಕಟ್ಟಿರುವ ಮುಡಿಯಾಯಿತೋ;

ಭೂತ ದಯೆ ವಲ್ಕಲಾಂಚಲವಾಂತುದೋ=ಲೋಕದ ಸಕಲ ಜೀವಿಗಳ ಬಗೆಗಿನ ಕರುಣೆಯೇ ಮುನಿಯು ಉಟ್ಟಿರುವ ನಾರುಮಡಿಯ ಸೆರಗಾಯಿತೋ;

ಪುಣ್ಯವೆಳಸಿ ಭಸಿತವನಿಟ್ಟುದೋ=ಪುಣ್ಯವು ಬಯಸಿ ವಿಬೂತಿಯ ರೂಪದಲ್ಲಿ ವಸಿಷ್ಟ ಮುನಿಯ ಹಣೆಯಲ್ಲಿ ಕಂಗೊಳಿಸುತ್ತಿದೆಯೋ; ಶ್ರುತಿ+ಅರ್ಥ; ಶ್ರುತಿ=ವೇದ; ಶ್ರುತ್ಯರ್ಥ=ವೇದದಲ್ಲಿನ ತಿರುಳು;

ನೂತನ ಶ್ರುತ್ಯರ್ಥ ನುಡಿಗಲಿತುದೋ=ಹೊಸಬಗೆಯಲ್ಲಿ ವೇದದ ತಿರುಳನ್ನು ಒಳಗೊಂಡ ನುಡಿಯು ವಸಿಷ್ಟ ಮುನಿಯಿಂದ ಹೊರಹೊಮ್ಮುತ್ತಿದೆಯೋ;

ಘನ ಸ್ವಾತಂತ್ರ್ಯವೃತ್ತಿ ಗೋಚರಿಸಲ್ ಎಳಸಿತೊ ಎಂಬ ಚಾತುರ್ಯದಿಂದ ಇರ್ದ ಮುನಿನಾಥನನ್ ಕಂಡು=ಯಾವ ಇಲ್ಲವೇ ಯಾರ ಅಂಕೆಶಂಕೆಗಳಿಗೆ ಒಳಗಾಗದ ಸ್ವತಂತ್ರವಾದ ನಡೆನುಡಿಗಳು ಮುನಿಯ ರೂಪದಲ್ಲಿ ಕಂಡುಬರುತ್ತಿವೆಯೋ ಎಂಬ ಹಾಗೆ ಮನೋಹರವಾದ ಸದ್ಗುಣಗಳಿಂದ ಕೂಡಿದ್ದ ಮುನಿಗಳ ಒಡೆಯನಾದ ವಸಿಷ್ಟನನ್ನು ರಾಜ ಹರಿಶ್ಚಂದ್ರನು ಅಲ್ಲಿ ಕಂಡನು;

 ಹರುಷದಿಮ್ ಭೂನಾಥನು=ವಸಿಷ್ಟ ಮುನಿಯನ್ನು ಕಂಡು ಆನಂದಗೊಂಡ ರಾಜ ಹರಿಶ್ಚಂದ್ರನು ಮುನಿಯ ಗುಣಗಾನ ಮಾಡಲು ತೊಡಗುತ್ತಾನೆ;

ಸುರ ನರೋರಗ ನಮಿತ ಚರಣ=ದೇವಲೋಕದಲ್ಲಿ ದೇವತೆಗಳು…ಬೂಲೋಕದಲ್ಲಿ ಮಾನವರು…ಪಾತಾಳ ಲೋಕದಲ್ಲಿ ಸರ್‍ಪ ಸಂತತಿಯವರು ನಿನ್ನ ಪಾದಗಳಿಗೆ ನಮಿಸುತ್ತಿದ್ದಾರೆ;

ಜಯ ಜಯ ದಯಾಭರಣ=ಸಕಲ ಜೀವಿಗಳ ಬಗ್ಗೆ ಕರುಣಾಶೀಲನಾಗಿರುವ ಮುನಿಗೆ ಜಯವಾಗಲಿ;

ಜಯ ಜಯ ಕೃಪಾವರಣ=ಸಕಲ ಜೀವಿಗಳಿಗೂ ಒಳಿತನ್ನು ಅನುಗ್ರಹಿಸುವ ಮುನಿಗೆ ಜಯವಾಗಲಿ;

ಜಯ ಜಯ ಶಾಂತಿಕಿರಣ=ಸಕಲ ಜೀವಗಳ ಮನದಲ್ಲಿ ಒಲವು ನಲಿವು ನೆಮ್ಮದಿಯಿಂದ ಕೂಡಿದ ಶಾಂತಿಯ ಒಳಮಿಡಿತಗಳನ್ನು ಮೂಡಿಸುವ ಮುನಿಗೆ ಜಯವಾಗಲಿ;

ಜಯ ಜಯ ವಿಗತಮರಣ=ಮರಣದಿಂದ ದೂರಸರಿದಿರುವ ಅಂದರೆ ಹುಟ್ಟುಸಾವುಗಳ ಸರಣಿಯಿಂದ ಬಿಡುಗಡೆಯನ್ನು ಪಡೆದಿರುವ ಮುನಿಗೆ ಜಯವಾಗಲಿ;

ಜಯಜಯ ದುರಿತ ಹರಣ=ಸಕಲ ಜೀವಿಗಳ ಪಾಪವನ್ನು ನಿವಾರಿಸುವ ಮುನಿಗೆ ಜಯವಾಗಲಿ;

ಜಯ ಜಯತು ಜಯತು ಗುರುವೆ=ಗುರುವಿಗೆ ಜಯವಾಗಲಿ;

 ಕುಲ ಗುರುವೆ=ಸೂರ್ಯವಂಶದ ರಾಜರ ಮನೆತನಕ್ಕೆ ಗುರುವಾದವನೆ;

ಘನ ಗುರುವೆ=ಗುರುಪರಂಪರೆಯಲ್ಲಿಯೇ ದೊಡ್ಡ ಗುರುವಾದವನೆ;

ಪರ ಗುರುವೆ=ಪರಲೋಕದಲ್ಲಿಯೂ ಒಳಿತನ್ನು ಮಾಡುವ ಗುರುವೆ;

ಮದ್ಗುರುವೆ=ನನ್ನ ಮೆಚ್ಚಿನ ಗುರುವೆ;

ಸದ್ಗುರುವೆ=ಒಳ್ಳೆಯ ನಡೆನುಡಿಯುಳ್ಳ ಗುರುವೇ;

ಶರಣಾಗು ಶರಣಾಗು ಎಂದು=ನಿನ್ನ ಆಶ್ರಯವನ್ನು ಪಡೆದು ನಿನಗೆ ತಲೆಬಾಗಿ ನಮಿಸುತ್ತಿದ್ದೇನೆ ಎಂದು ಗುಣಗಾನ ಮಾಡುತ್ತ;

ಆ ಧರಣಿಪತಿ ಮುನಿಯ ಚರಣ ಸರಸಿಜದ ಎಡೆಯೊಳು ನಿಜತನುವನ್ ಹರಹಿದನು=ರಾಜ ಹರಿಶ್ಚಂದ್ರನು ವಸಿಷ್ಟ ಮುನಿಯ ಪಾದಕಮಲದ ಮೇಲೆ ತನ್ನ ತಲೆಯನ್ನಿಟ್ಟು, ಮಯ್ಯನ್ನು ನೆಲದ ಮೇಲೆ ಒಡ್ಡಿ. ಸಾಶ್ಟಾಂಗ ನಮಸ್ಕಾರವನ್ನು ಮಾಡಿದನು;

 ಬಗೆ ಮೀರಿ ಲೋಚನದೊಳ್ ಒಗೆವ ಸುಖಜಲ=ಮುನಿಯನ್ನು ಕಂಡ ಆ ಗಳಿಗೆಯಲ್ಲಿ ರಾಜ ಹರಿಶ್ಚಂದ್ರನ ಮನ ತುಂಬಿ ಬಂದು, ಹರಿಶ್ಚಂದ್ರನ ಕಣ್ಣಿನಲ್ಲಿ ಆನಂದದ ನೀರು ಹರಿಯತೊಡಗಿದೆ;

ಮೆಯ್ಯೊಳ್ ಒಗೆವ ಪುಳಕಮ್=ಹರಿಶ್ಚಂದ್ರನ ಇಡೀ ಮಯ್ ರೋಮಾಂಚನಗೊಂಡಿದೆ;

ಕೈಯೊಳ್ ಒಗೆವ ಕಂಪನ=ಬಕ್ತಿಬಾವದ ಹೆಚ್ಚಳದಿಂದ ಹರಿಶ್ಚಂದ್ರನ ಕಯ್ಗಳು ನಡುಗುತ್ತಿವೆ;

ನುಡಿಯೊಳ್ ಒಗೆವ ತೊದಳ್=ಬಾವೋದ್ರೇಕಕ್ಕೆ ಒಳಗಾಗಿರುವ ಹರಿಶ್ಚಂದ್ರನು ಆಡುತ್ತಿರುವ ನುಡಿಗಳು ತೊದಲುತ್ತಿವೆ;

ಅಮಳ ಕದಪಿನೊಳ್ ಒಗೆವ ಬೆಮರು=ಹರಿಶ್ಚಂದ್ರನ ಸುಂದರವಾದ ಕೆನ್ನೆಯಲ್ಲಿ ಬೆವರ ಹನಿಗಳು ಮೂಡಿಬರುತ್ತಿವೆ;

ಕಂಠದೊಳ್ ಒಗೆವ ಹೊಸ ಗದ್ಗದ=ಮುನಿಯನ್ನು ಕಂಡು ಮಯ್ ಮನದಲ್ಲಿ ಉಂಟಾದ ಆನಂದದ ಒಳಮಿಡಿತಗಳಿಂದ ಹರಿಶ್ಚಂದ್ರನ ಕೊರಳಿನಲ್ಲಿ ಹೊಸಬಗೆಯ ಕಂಪನ ಉಂಟಾಗುತ್ತಿದೆ;

ಮೊಗದೊಳ್ ಮಿಗೆ ಒಗೆವ ನಸುನಗೆ=ಹರಿಶ್ಚಂದ್ರನ ಮೊಗದ ತುಂಬಾ ಮುಗುಳ್ನಗೆಯು ಹೊರಹೊಮ್ಮುತ್ತಿದೆ;

ಘನಮನೋಮತಿಯೊಳ್ ಒಗೆವ=ದೊಡ್ಡ ಮನಸ್ಸಿನಿಂದ ಹೊರಹೊಮ್ಮುತ್ತಿರುವ ;

ಪರವಶವೆರಸಿ ಮೆರೆವ ಭೂರಮಣನನ್ ಮೊಗವೆತ್ತಿ ಕುಳ್ಳಿರಿಸಿ…ಮೆಯ್ದಡವಿ…ಬೋಳೈಸಿ ಮುನಿನಾಥನ್ ಇಂತೆಂದನು=ತನ್ನನ್ನು ತಾನು ಮರೆತು, ಗುರುವಾದ ತನ್ನಲ್ಲಿಯೇ ಸಂಪೂರ್ಣವಾಗಿ ಬೆರತುಹೋದಂತೆ ತನ್ನ ಪಾದಗಳ ಮೇಲೆ ತಲೆಯೊಡ್ಡಿರುವ ಹರಿಶ್ಚಂದ್ರನ ಮೊಗವನ್ನು ಮೇಲಕ್ಕೆತ್ತಿ, ಅವನನ್ನು ತನ್ನ ಬಳಿ ಕುಳ್ಳಿರಿಸಿಕೊಂಡು, ಅವನ ಮಯ್ಯನ್ನು ಪ್ರೀತಿಯಿಂದ ನೇವರಿಸುತ್ತ, ಬಕ್ತಿಯ ಉದ್ವೇಗದಿಂದ ಕೂಡಿರುವ ಹರಿಶ್ಚಂದ್ರನ ಮಯ್ ಮನವನ್ನು ಸಾಂತ್ವನಗೊಳಿಸಿ ವಸಿಷ್ಟ ಮುನಿಯು ಈ ರೀತಿ ಹೇಳತೊಡಗಿದನು;

ನೀನ್ ಎತ್ತಲ್…ಈ ವಿಪಿನವೆತ್ತಲ್… ಈ ಬನಕೆ ನೀನೇನು ಕಾರಣ ಬಂದೆ. ಎಲೆ ಮಗನೆ ಹೇಳ್…ಎನಲು =ದಟ್ಟವಾದ ಕಾಡಿನ ನಡುವೆ ಹರಿಶ್ಚಂದ್ರನನ್ನು ನೋಡಿ ಅಚ್ಚರಿಗೊಂಡ ವಸಿಷ್ಟ ಮುನಿಯು “ ನಾಡನ್ನಾಳುವ ದೊರೆಯಾದ ನೀನೆಲ್ಲಿ…ಪ್ರಾಣಿಪಕ್ಶಿಗಳಿಂದ ತುಂಬಿರುವ ಈ ಕಾಡೆಲ್ಲಿ. ನೀನು ಇಂತಹ ದಟ್ಟವಾದ ಕಾಡಿಗೆ ಯಾವ ಕಾರಣಕ್ಕಾಗಿ ಬಂದೆ. ಎಲೆ ಮಗನೆ ಹೇಳು” ಎಂದು ಆತಂಕದಿಂದ ಕೇಳುತ್ತಾರೆ;

ಭೂನಾಥನ್ ಎಂದ=ಆಗ ರಾಜ ಹರಿಶ್ಚಂದ್ರನು ಈ ರೀತಿ ಉತ್ತರಿಸುತ್ತಾನೆ;

ಖಗಮೃಗದ ಕಾಟಕ್ಕೆ ಸೈರಿಸಲಾರದೆ ಅವನೀಜನಮ್ ಹಾನಿವೆತ್ತು ಒರಲಿ ಮೊರೆಯಿಡೆ ಕೇಳ್ದು, ಬೇಂಟೆಯ ಸುಮಾನಕ್ಕೆ ಬಂದೆನ್ ಎಂದೆನೆ=ಕಾಡಿನ ಪಕ್ಶಿ ಪ್ರಾಣಿಗಳ ಕಾಟವನ್ನು ತಡೆಯಲಾರದೆ ಆಪತ್ತಿಗೆ ಒಳಗಾದ ನನ್ನ ನಾಡಿನ ಪ್ರಜೆಗಳು “ ಈ ಸಂಕಟದಿಂದ ತಮ್ಮ ಜೀವವನ್ನು ಉಳಿಸಬೇಕೆಂದು ” ಕೂಗಿಕೊಳ್ಳುತ್ತ ನನ್ನ ಬಳಿ ಬಂದು ಮೊರೆಯಿಡಲು, ಅವರ ಮೊರೆಯನ್ನು ಆಲಿಸಿ, ಪ್ರಜೆಗಳನ್ನು ಕಾಪಾಡಿದಂತೆಯೂ ಆಗುತ್ತದೆ…ಬೇಟೆಯ ಕ್ರೀಡೆಯಿಂದ ನನ್ನ ಮಯ್ ಮನಕ್ಕೆ ಆನಂದವೂ ಉಂಟಾಗುತ್ತದೆ ಎಂಬ ಉದ್ದೇಶದಿಂದ ಈ ಕಾಡಿನತ್ತ ಬಂದೆನು ಎಂದು ಹೇಳಲು;

ತ್ರಿಕಾಲೋಚಿತ ಜ್ಞಾನಿ ಮುನಿಯು=ಜಗತ್ತಿನಲ್ಲಿ ಹಿಂದೆ ನಡೆದ – ಇಂದು ನಡೆಯುತ್ತಿರುವ – ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಗತಿಗಳೆಲ್ಲವನ್ನೂ ಅರಿಯಬಲ್ಲ ಶಕ್ತಿಯುಳ್ಳ ವಸಿಷ್ಟ ಮುನಿಯು;

ಅರಸನ ಮೇಲೆ ಕೌಶಿಕನ ಕಾಟ ಅಡಿಯಿಟ್ಟ ಅನುವನು ಅರಿದನ್=ರಾಜ ಹರಿಶ್ಚಂದ್ರನ ಜೀವನದಲ್ಲಿ ವಿಶ್ವಾಮಿತ್ರನ ಕಾಟ ಶುರುವಾಗಿರುವ ರೀತಿಯನ್ನು ಬೇಟೆಯ ಪ್ರಸಂಗದಲ್ಲಿ ಗುರುತಿಸಿದನು. ಮುಂದಿನ ದಿನಗಳಲ್ಲಿ ತನ್ನ ಮೆಚ್ಚಿನ ವ್ಯಕ್ತಿಯಾದ ರಾಜ ಹರಿಶ್ಚಂದ್ರನಿಗೆ ವಿಶ್ವಾಮಿತ್ರನಿಂದ ಎಂತಹ ಕೆಡುಕಾಗುವುದೋ ಎಂಬ ಆತಂಕಕ್ಕೆ ಒಳಗಾದ ವಸಿಷ್ಟ ಮುನಿಯು ತನ್ನಲ್ಲಿಯೇ ಈ ರೀತಿ ಆಲೋಚಿಸತೊಡಗುತ್ತಾರೆ;

ವಿಷಮ ವಿಶ್ವಾಮಿತ್ರಮುನಿ ಮುನಿದು ತಪ್ಪ ಸಾಧಿಸುವ=ಕೆಡುಕನೂ ಕ್ರೂರಿಯೂ ಆದ ವಿಶ್ವಾಮಿತ್ರ ಮುನಿಯು ದೇವೇಂದ್ರನ ಒಡ್ಡೋಲಗದಲ್ಲಿ ನನ್ನೊಡನೆ “ ನಿನ್ನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇನೆ ” ಎಂದು ಪಣಕಟ್ಟಿರುವುದರಿಂದ, ಈಗ ನಿನ್ನ ಬಗ್ಗೆ ಕುಪಿತನಾಗಿ, ನಿನ್ನಲ್ಲಿ ಒಂದಲ್ಲ ಒಂದು ತಪ್ಪನ್ನು ಹುಡುಕಿ ತೋರಿಸಲು ಪ್ರಯತ್ನಿಸುತ್ತಾನೆ;

ನೀನ್ ಅರಿದಿರ್ ಎಂದು ಅರುಪಬೇಕು=ಆದ್ದರಿಂದ ನೀನು ಎಚ್ಚರಿಕೆಯಿಂದಿರು ಎಂದು ಹರಿಶ್ಚಂದ್ರನಿಗೆ ಹೇಳಬೇಕು;

ಅರಿಪಿದಡೆ ಪಿಸುಣತ್ವ=ಈಗ ನಾನು ಆ ರೀತಿ ಹೇಳಿದರೆ, ಅದು ವಿಶ್ವಾಮಿತ್ರನ ಬಗ್ಗೆ ನಾನು ಚಾಡಿ ಹೇಳಿದಂತಾಗುತ್ತದೆ;

ಅರುಪದಿರ್ದಡೆ=ಹರಿಶ್ಚಂದ್ರನಿಗೆ ಈ ಸಂಗತಿಯನ್ನು ತಿಳಿಸದೆ ಸುಮ್ಮನಿದ್ದರೆ;

ನೃಪನ ಕೇಡನ್ ಆನ್ ಓತು ಉಪೇಕ್ಷಿಸಿದಾತನು=ರಾಜನಿಗೆ ವಿಶ್ವಾಮಿತ್ರ ಮುನಿಯಿಂದ ಉಂಟಾಗಲಿರುವ ಕೇಡನ್ನು ನಾನು ತಿಳಿದಿದ್ದರೂ, ರಾಜನಿಗೆ ಬರಲಿರುವ ದೊಡ್ಡ ಆಪತ್ತನ್ನು ಕಡೆಗಣಿಸಿದಂತಾಗುತ್ತದೆ;

ಗಸಣಿಯಾಯ್ತು…ಏಗೆಯ್ವೆನ್ ಎಂದು ಮನದೊಳಗೆ ಚಿಂತಿಸಿ=ತುಂಬಾ ಇಕ್ಕಟ್ಟಿಗೆ ಸಿಲುಕಿದೆನು. ಈಗ ನಾನೇನು ಮಾಡಲಿ ಎಂದು ವಸಿಷ್ಟ ಮುನಿಯು ಇಬ್ಬಗೆಯ ತೊಳಲಾಟಕ್ಕೆ ಒಳಗಾಗಿ ಮನದಲ್ಲಿ ಪರಿತಪಿಸುತ್ತ ;

ಮತ್ತೆ ತನ್ನಲ್ಲಿಯೇ ತೀರ್ಮಾನಿಸುತ್ತಾನೆ=ಮತ್ತೆ ತನ್ನ ಮನದಲ್ಲಿಯೇ ಒಂದು ತೀರ್‍ಮಾನವನ್ನು ಕಯ್ಗೊಳ್ಳುತ್ತಾನೆ;

ಮನೆಗೆ ಬಂದ ಶಿಷ್ಯನನು ಬೋಧಿಸಲು ಕುಂದು ಎಸೆಯದಿರದು=ಮನೆಗೆ ಬಂದ ಶಿಶ್ಯನಿಗೆ ತಿಳುವಳಿಕೆಯನ್ನು ಹೇಳುವುದರಲ್ಲಿ ಯಾವ ತಪ್ಪು ಕಂಡುಬರುವುದಿಲ್ಲ. ಅದು ಸಹಜವಾಗಿ ಗುರುವಾದವನು ಶಿಶ್ಯನಿಗೆ ಹೇಳಲೇಬೇಕಾದ ತಿಳುವಳಿಕೆಯ ನುಡಿಗಳಾಗಿರುತ್ತವೆ;

ಆನ್ ಪೇಳದಂತೆ ಪೇಳ್ದಪೆನ್ ಎಂದು ಆ ಮುನಿನಾಥನು ನೆನೆದನ್=ವಿಶ್ವಾಮಿತ್ರನ ಕೇಡಿನ ಒಳಸಂಚನ್ನು ನೇರವಾಗಿ ಹೇಳದಿದ್ದರೂ, ವಿಶ್ವಾಮಿತ್ರನ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಹೇಳುತ್ತೇನೆ ಎಂದು ವಸಿಷ್ಟ ಮುನಿಯು ನಿಶ್ಚಯಿಸಿಕೊಂಡನು;

ಹರಿಶ್ಚಂದ್ರನನ್ನು ಉದ್ದೇಶಿಸಿ=ಈಗ ಹರಿಶ್ಚಂದ್ರನನ್ನು ಕುರಿತು ನುಡಿಯತೊಡಗುತ್ತಾನೆ;

ಎನ್ನನ್ ಒಲುವೊಡೆ=ನನ್ನನ್ನು ಪ್ರೀತಿಸುವೆಯಾದರೆ;

ಕುಲಾಚಾರಮಮ್ ಬಿಡದಿರ್ಪಡೆ=ಸೂರ್ಯಕುಲದ ರಾಜರ ಸಂಪ್ರದಾಯದ ಆಚಾರವಿಚಾರಗಳನ್ನು ಬಿಡದೆ, ನಿಯಮಿತವಾಗಿ ನಡೆಸಿಕೊಂಡು ಬರುತ್ತಿದ್ದರೆ;

ಉನ್ನತಿಕೆ ಬೇಹಡೆ=ವ್ಯಕ್ತಿತ್ವದ ಹಿರಿಮೆಯನ್ನು ಬಯಸುವೆಯಾದರೆ;

ಉತ್ತಮ ಕೀರ್ತಿ ಕೆಡದಿಹಡೆ=ಸೂರ್ಯವಂಶದ ರಾಜಮನೆತನಕ್ಕೆ ಬಂದಿರುವ ಉತ್ತಮವಾದ ಕೀರ್‍ತಿಯು ಕೆಡದಂತಿರಬೇಕಾದರೆ;

ನನ್ನಿ ಉಳಿವಡೆ=ಸತ್ಯ ಉಳಿಯುವಂತಾಗಬೇಕಾದರೆ;

ಮಗನೆ, ವಿಶ್ವಾಮಿತ್ರನಾಶ್ರಮಕ್ಕೆ ಮರೆದು ಹೋಗದಿರು=ಮಗನೆ, ವಿಶ್ವಾಮಿತ್ರ ಮುನಿಯ ಆಶ್ರಮದ ಕಡೆಗೆ ಮರೆತಾದರೂ ಹೋಗಬೇಡ; ಯಾವ ಕಾರಣದಿಂದಲೂ ಅತ್ತ ತಲೆಹಾಕಬೇಡ;

ಗನ್ನದಿಮ್ ಮರಹಿಕ್ಕಿ ಕೊಂಡೊಯ್ದು=ವಿಶ್ವಾಮಿತ್ರನು ಕಪಟತನದಿಂದ ನಿನಗೆ ಮರವು ಉಂಟಾಗುವಂತೆ ಮಾಡಿ ಇಲ್ಲವೇ ಮರುಳುಮಾಡಿ ತನ್ನ ಆಶ್ರಮದತ್ತ ಕರೆದುಕೊಂಡುಹೋಗಿ;

ಬಳಿಕ ಮುನಿ ಬನ್ನ ಬಡಿಸಿಯೆ ಕಾಡಿದಪನ್=ಅನಂತರ ವಿಶ್ವಾಮಿತ್ರ ಮುನಿಯು ನಿನ್ನನ್ನು ಅಪಮಾನಕ್ಕೆ ಗುರಿಮಾಡಿ, ಅನೇಕ ಬಗೆಯ ಸಂಕಟವನ್ನು ತಂದೊಡ್ಡಿ ಪೀಡಿಸುತ್ತಾನೆ;

ಅರಿದಿರು ಎಂದು ಪೇಳ್ದು=ವಿಶ್ವಾಮಿತ್ರ ಮುನಿಯಿಂದ ನಿನಗೆ ಕೇಡು ಉಂಟಾಗಲಿದೆ ಎಂಬುದನ್ನು ಅರಿತುಕೊಂಡು, ಅಂತಹ ಕೇಡಿಗೆ ಬಲಿಯಾಗದಂತೆ ಮುನ್ನೆಚ್ಚರಿಕೆಯಿಂದ ಇರು ಎಂದು ವಸಿಷ್ಟ ಮುನಿಯು ರಾಜ ಹರಿಶ್ಚಂದ್ರನಿಗೆ ಹಿತವನ್ನು ನುಡಿದು;

ಇನ್ನೊಂದು ಚೋದ್ಯಮಮ್ ನೋಡು ಬಾ ಎಂದು ವಿರೂಪಾಕ್ಷನೆಡೆಗೆ ತಂದನು=ಇನ್ನೊಂದು ಅಚ್ಚರಿಯನ್ನು ನೋಡು ಬಾ ಎಂದು ಪಂಪಾಕ್ಶೇತ್ರದಲ್ಲಿದ್ದ ವಿರೂಪಾಕ್ಶ ದೇವಾಲಯಕ್ಕೆ ಹರಿಶ್ಚಂದ್ರನನ್ನು ಕರೆದುಕೊಂಡು ಬಂದನು;

 ನೋಡಿ ಪರಮಾನಂದ ಮೂಡಿ=ಹಂಪೆಯ ವಿರೂಪಾಕ್ಶ ದೇವರನ್ನು ನೋಡಿ ಮನದಲ್ಲಿ ಪರಮಾನಂದ ಮೂಡಿ;

ಮನದೊಳು ಸಂತಸದೊಳ್ ಓಲಾಡಿ=ಮನದಲ್ಲಿ ಅಪಾರವಾದ ಆನಂದದಿಂದ ಓಲಾಡುತ್ತ;

ಪುಳಕ ಸ್ವೇದ ತೊದಳು ಕಂಪನ ಮರವೆಗೂಡಿ=ಬಕ್ತಿಯ ತನ್ಮಯತೆಯಲ್ಲಿ ಹರಿಶ್ಚಂದ್ರನು ರೋಮಾಂಚಿತನಾಗಿ ಬೆವರುತ್ತ , ಮಾತಿನಲ್ಲಿ ತೊದಲು ಮತ್ತು ಮಯ್ಯಲ್ಲಿ ನಡುಕವುಂಟಾಗಲು, ಕೆಲ ಗಳಿಗೆ ಮಯ್ ಮರೆತವನಾಗಿದ್ದು;

ತನುವಿನ ಎಚ್ಚರಿಂದ ಉಬ್ಬಿ ಹಾರೈಸಿ=ಮರು ಗಳಿಗೆಯಲ್ಲಿಯೇ ಎಚ್ಚರಗೊಂಡು ಆನಂದದಿಂದ ಹಿಗ್ಗುತ್ತ, ಸಕಲರಿಗೂ ಒಳಿತನ್ನು ಬಯಸುತ್ತ;

ಹರುಷದ ಸುಖದಲಿ ಹಾಡಿ=ಅತ್ಯಾನಂದದಿಂದ ವಿರೂಪಾಕ್ಶನ ಮಹಿಮೆಯನ್ನು ಕೊಂಡಾಡುತ್ತ; ಸ್ನಪನ=ದೇವರ ವಿಗ್ರಹದ ಮೇಲೆ ನೀರು, ಹಾಲು , ಜೇನುತುಪ್ಪ ಮುಂತಾದ ದ್ರವಗಳನ್ನು ಎರೆಯುವ ಆಚರಣೆ/ಅಬಿಶೇಕ; ಯಕ್ಷಕರ್ದಮ=ಕರ್‍ಪೂರ, ಕಸ್ತೂರಿ ಮುಂತಾದ ಸುವಾಸನೆಯ ವಸ್ತುಗಳನ್ನು ಅರೆದು ತಯಾರಿಸಿದ ಲೇಪನ; ಗಾಡಿ=ಚೆಲುವು/ಸೊಬಗು/ಅಂದ;

ನಾನಾ ಸ್ನಪನ ಯಕ್ಷ ಕರ್ದಮ ಪುಷ್ಪ ಗಾಡಿ ಪಡೆಯಲು=ವಿರೂಪಾಕ್ಶ ದೇವರ ವಿಗ್ರಹಕ್ಕೆ ಬಹುಬಗೆಯಲ್ಲಿ ಮಾಡಿದ್ದ ಅಬಿಶೇಕ, ಗಂದಾಕ್ಶತೆಯ ಲೇಪನ , ಹೂವಿನ ಅಲಂಕಾರಗಳಿಂದ ದೇವರ ವಿಗ್ರಹವು ಚೆಲುವಿನಿಂದ ಕಂಗೊಳಿಸುತ್ತಿರಲು;

ಹರಿಶ್ಚಂದ್ರ ನೃಪನು ಜೋಡಿಯಿಮ್ ಪಂಪಾಂಬಿಕಾಪತಿಯ ಮಹಾರುದ್ರಾಭಿಷೇಚನದ ಪೂಜೆಮಾಡಿದ=ಹರಿಶ್ಚಂದ್ರ ರಾಜನು ತನ್ನ ಹೆಂಡತಿ ಚಂದ್ರಮತಿಯ ಜತೆಗೂಡಿ ಪಂಪಾಂಬಿಕಾಪತಿಯಾದ ವಿರೂಪಾಕ್ಶನಿಗೆ ಮಹಾರುದ್ರಾಬಿಶೇಕದ ಪೂಜೆಯನ್ನು ಮಾಡಿದನು;

ಇಂದು ಆನು ಕೃತಕೃತ್ಯನಾದೆನ್=ಇಂದು ನಾನು ಜೀವನದಲ್ಲಿ ದೊಡ್ಡ ಯಶಸ್ಸನ್ನು ಪಡೆದೆನು;

ಇಂದು ಎನ್ನಯ ಜನ್ಮ ಸಾಫಲ್ಯವಾಯ್ತು=ಇಂದು ನಾನು ಹುಟ್ಟಿದ್ದು ಸಾರ್ತಕವಾಯಿತು; ಪಾರದಿ=ಬೇಟೆ;

ಅಖಿಳ ಜಗದ ಅಳಲುರಿಯ ನಂದಿಸುವ ಪಾರದಿಯೆ=ಸಮಸ್ತ ಜಗತ್ತಿನ ಸಂಕಟದ ಬೆಂಕಿಯನ್ನು ನಂದಿಸುವ ಬೇಟೆಯ ಕ್ರೀಡೆಯೇ, ಅಂದರೆ ನನ್ನ ಪ್ರಜಾಸಮುದಾಯಕ್ಕೆ ಕಾಡಿನ ಪ್ರಾಣಿ ಪಕ್ಶಿಗಳಿಂದ ಉಂಟಾಗಿದ್ದ ಆಪತ್ತನ್ನು ಹೋಗಲಾಡಿಸಲೆಂದು ಬಂದ ಬೇಟೆಯೇ; ವಾರಿಧಿ=ಸಾಗರ/ಸಮುದ್ರ;

ಸಂಸಾರ ವಾರಿಧಿಯನ್ ಉತ್ತರಿಪ ಗುರುಪದವನು ತಂದು ತೋರಿತ್ತಲಾ=ಸಂಸಾರ ಸಾಗರವನ್ನು ದಾಟುವ ಒಳ್ಳೆಯ ಹಾದಿಯನ್ನು ತಂದು ತೋರಿಸಿತಲ್ಲವೇ;

ಶ್ರೀಗುರು ವಿರೂಪಾಕ್ಷ ತಂದೆಯನ್ ಕಾಣಿಸಿತು=ಶ್ರೀಗುರು ವಿರೂಪಾಕ್ಶ ತಂದೆಯನ್ನು ಕಾಣುವುದಕ್ಕೆ ನೆರವಾಯಿತು;

“ಬಿಟ್ಟಿಯಿಂದ ಕಟಕವ ಕಂಡೆನ್” ಎಂಬುದು ಜನಸಮುದಾಯದಲ್ಲಿ ಮಾತುಕತೆಯಲ್ಲಿ ಅಂದು ಬಳಕೆಯಲ್ಲಿದ್ದ ಒಂದು ಗಾದೆ. ಈ ಗಾದೆಯ ತಿರುಳು ಏನೆಂದರೆ “ ಯಾವುದೇ ಸಾಹಸ, ಪ್ರಯತ್ನ ಇಲ್ಲವೇ ತೊಂದರೆಯಿಲ್ಲದೆ ಬಹು ಸಲೀಸಾಗಿ ರಾಜದಾನಿಯನ್ನು ನೋಡುವ ಅವಕಾಶ ದೊರೆಯಿತು.” ಅಂದರೆ ಅನಾಯಾಸವಾಗಿ ಒಳ್ಳೆಯದನ್ನು ಕಾಣುವ ಮತ್ತು ಪಡೆಯುವ ಬಾಗ್ಯ ಕೂಡಿಬಂದಿತು;

ನಾಡ ಗಾದೆಯ ಬಿಟ್ಟಿಯಿಂದ ಕಟಕವ ಕಂಡೆನ್ ಎಂಬುದು ಎನಗಾಯ್ತು ಎನುತ್ತೆ ಭೂನಾಥನು ಎರಗಿದನ್=ನಾಡಿನ ಜನರಾಡುವ ಗಾದೆ ಮಾತಿನಂತೆ ‘ ಬಿಟ್ಟಿಯಿಂದ ರಾಜದಾನಿಯನ್ನು ನೋಡಿದೆನು’ ಎಂಬುದು ನನ್ನ ಪಾಲಿಗೆ ಇಂದು ನಿಜವಾಯಿತು. ವಿರೂಪಾಕ್ಶ ದೇವರನ್ನು ಕಣ್ತುಂಬ ನೋಡುವ ಬಾಗ್ಯ ನನಗೆ ಅನಾಯಾಸವಾಗಿ ದೊರೆಯಿತು ಎಂದು ಹೇಳಿಕೊಳ್ಳುತ್ತ, ಹರಿಶ್ಚಂದ್ರನು ವಿರೂಪಾಕ್ಶ ದೇವರಿಗೆ ನಮಿಸಿದನು.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *