ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 17 ನೆಯ ಕಂತು – ಹರಿಶ್ಚಂದ್ರನ ಮಾರಾಟ
– ಸಿ.ಪಿ.ನಾಗರಾಜ.
*** ಪ್ರಸಂಗ-17: ಹರಿಶ್ಚಂದ್ರನ ಮಾರಾಟ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ಪತ್ನೀ ಪುತ್ರ ವಿಕ್ರಯ—ಆತ್ಮ ವಿಕ್ರಯ’ ಎಂಬ ಏಳನೆಯ ಅಧ್ಯಾಯದ 29 ರಿಂದ 41 ಪದ್ಯದ ವರೆಗಿನ 13 ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು
ಹರಿಶ್ಚಂದ್ರ: ಅಯೋದ್ಯಾಪುರವನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜಸಂಪತ್ತನ್ನು ನೀಡಿ, ಈಗ ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ.
ವಿಶ್ವಾಮಿತ್ರ: ಒಬ್ಬ ಮುನಿ.
ವೀರಬಾಹುಕ: ಕಾಶಿನಗರದ ಮಸಣದ ಒಡೆಯ.
ಹಡಪಿಗ: ವೀರಬಾಹುಕನ ದಾಸ.
ನಕ್ಷತ್ರಕ: ವಿಶ್ವಾಮಿತ್ರ ಮುನಿಯ ಆಪ್ತ ಶಿಶ್ಯ. ಹರಿಶ್ಚಂದ್ರನಿಂದ ಬರಬೇಕಾದ ಸಂಪತ್ತನ್ನು ವಸೂಲು ಮಾಡಲೆಂದು ನೇಮಕಗೊಂಡಿರುವ ತೆರಕಾರ.
*** ಪ್ರಸಂಗ-17: ಹರಿಶ್ಚಂದ್ರನ ಮಾರಾಟ ***
ಹರಿಶ್ಚಂದ್ರ: ಖಗವಂಶದ ಇಕ್ಷ್ವಾಕು ಭೂವರನ ಪೀಳಿಗೆಯೊಳ್ ಒಗೆದ ತ್ರಿಶಂಕು ವಸುಧಾಧಿ ನಾಯಕನ ಹೆಮ್ಮಗ ಹರಿಶ್ಚಂದ್ರನನ್ ಮಾರುಗೊಂಡು ಓಲೈಸಿಕೊಂಬರಿಲ್ಲಾ…
(ಎನುತ್ತ… ಬಗೆಬಗೆದು ಪುರದ ಕೇರಿಯ ಮನೆಯೊಳ್… ಅಡ್ಡ ಬೀದಿಗಳ… ಬೀದಿಯ ನಿಂದ ನೆರವಿಗಳ ಜನಮುಮನ್ ಮಿಗೆ ಕೇಳಿಸುತ್ತ… ಮಧ್ಯಾಹ್ನ ಮೊದಲಾಗಿ… ಕಡೆ ಹಗಲ ತನಕ ತೊಳಲಿದನು. ಆಗ ವಿಶ್ವಾಮಿತ್ರ ಮುನಿಯು ತನ್ನಲ್ಲಿಯೇ ಈ ರೀತಿ ಅಂದುಕೊಳ್ಳತೊಡಗುತ್ತಾನೆ.
ವಿಶ್ವಾಮಿತ್ರ: ಮಡದಿಯರನ್ ಇರಿಸಿಕೋ ಎಂದು ನಾನ್ ಬೇಡಿಕೊಂಡಡೆ, ಮೀರಿ ಹೊಲತಿಯರನ್ ಒಲ್ಲೆನ್ ಎಂಬ ಅಣ್ಣನನ್ ಕಡೆಗೆ ಅನಾಮಿಕನ ಕಿಂಕರನಾಗಿ ಸುಡುಗಾಡ ಕಾವಂತೆ ಮಾಳ್ಪೆನ್.
(ಎಂದು… ಕಡುಮೂರ್ಖ ಕೌಶಿಕನ್ ಕಾಲನನ್ ಕರೆದು…)
ವಿಶ್ವಾಮಿತ್ರ: ನೀನ್ ಬಿಡದೆ ಅನಾಮಿಕನಾಗಿ ಧನವನಿತ್ತು ಅರಸನನ್ ಮುನ್ನೊಂದು ತಿಂಗಳ್ ತಡೆ.
(ಎಂದು ಎನೆ ಕಳುಹೆ… ಬಂದು, ಆ ಹೊತ್ತ ಹಾರಿರ್ದನು. ಕಾರೊಡಲು, ಕೆಂಗಣ್ಣು, ಕುಡಿದು ಕೊಬ್ಬಿದ ಬಸುರು, ಕೆದರಿದ ತಲೆಯನ್ ಅಡಸಿ ಸುತ್ತಿದ ಮುಪ್ಪುರಿಯ ಬಾರಿ ಕಡ್ಡಣಿಗೆಯ, ಪಿಡಿದ ಸಂಬಳಿಗೋಲು, ದಡದಡಿಸಿ ತರಹರಿಸುವ ಅಡಿಯ, ಬಿಡದೆ ಢರನೆ ತೇಗಿ, ನೆರವಿಯನ್ ಬಯ್ವ ಬಿರುನುಡಿಯ ಕಲಿ ವೀರಬಾಹುಕ ಬರುತ್ತಮ್…)
ವೀರ ಬಾಹುಕ: ಮಾರುವಡೆ ನಾನ್ ಕೊಂಡು ಹೊಂಗೊಡುವೆ.
(ಎಂದು ತನ್ನ ಹಡಪಿಗನಿಂದ ಕೇಳಿಸಿದನು.)
ಹಡಪಿಗ: ಕೊಡುವಾತನ್ ಆರು?… ಬೆಲೆ ಏನು?… ಮಾರಿಸಿಕೊಂಬ ಪೊಡವೀಶನ್ ಎಂಬನ್ ಆರೋ?… ವೀರಬಾಹು ಕೇಳ್ದಡೆ ಈಗಳ್ ಕೊಂಬನ್.
(ಎಂದು ಎನೆ , ನೃಪನ್ ಬೆರಗಾಗಿ…)
ಹರಿಶ್ಚಂದ್ರ: ಸೂರ್ಯವಂಶದಲಿ ಹುಟ್ಟಿ, ಮೃಡಮೂರ್ತಿ ವಾಸಿಷ್ಠಮುನಿಯ ಕಾರುಣ್ಯಮನ್ ಪಡೆದ ಎನ್ನನ್… ಈ ಹೊಲೆಯ ಮಾರುಗೊಂಡಪೆನೆ ಎಂದು ನುಡಿವ ಬಲುಹಮ್ ನೋಡು ನೋಡು…
(ಎಂದು ಕಡುಮುಳಿದು ಅವನೀಶನು ಕೋಪಿಸಿದನ್.)
ಹರಿಶ್ಚಂದ್ರ: ನಡುಗದೆ, ಅಂಜದೆ, ಹೆದರದೆ, ಓಸರಿಸದೆ, ಅಕಟಕಟ… ಕಡೆಯ ಹೊಲೆಯನ್ ಮೇರೆದಪ್ಪಿ ಬಂದು, ಎನ್ನ ತನ್ನೊಡೆಯಂಗೆ ಈಗಳ್ ದಾಸನಾಗು ಎಂದೆಂಬುದು… ಇದು ಕಾಲಗುಣವೋ… ಎನ್ನನು ಎಡೆಗೊಂಡ ಕರ್ಮಫಲವೋ. ಕಡೆಗೆ ಮೆಣಸು ಹುಳಿತಡೆ ಜೋಳದಿಮ್ ಕುಂದೆ. ನೋಡು ನೋಡು…
(ಎಂದು ಅವನಿಪನ್ ಘುಡುಘುಡಿಸಿ ಕೋಪಾಟೋಪದಿಮ್ ಅನಾಮಿಕನನು ಜರೆದು ಝಂಕಿಸಿದನ್. ಕೇಳಿ… ಬಂದು; ಹರಿಶ್ಚಂದ್ರನ ಆಡಿದ ಮಾತನ್ನು ವೀರಬಾಹುಕ ಕೇಳಿ, ಹರಿಶ್ಚಂದ್ರನ ಬಳಿಗೆ ಬಂದು…)
ವೀರಬಾಹುಕ: ಆರ ಜರೆದಪೆ?
ಹರಿಶ್ಚಂದ್ರ: ನಿನ್ನ ಹಡಪಾಳಿಯನ್.
ವೀರಬಾಹುಕ: ಅದೇಕೆ?
ಹರಿಶ್ಚಂದ್ರ: ಎನ್ನನ್ ಅರಿದರಿದು… ಅನಾಮಿಕಂಗೆ ಆಳಾದಪಾ ಎಂದು ನುಡಿದನ್. ಕೀಳು ಮೇಲಮ್ ನೋಡದೆ ಇಂತು ಎನಬಹುದೆ?
ವೀರಬಾಹುಕ: ಕೀಳಾರು… ಮೇಲಾರು… ಹದುಳವಿಪ್ಪ ಆನು ಚಾಂಡಾಳನೋ… ಹುಸಿಯ ಹೊಲೆಯಮ್ ಹೊರುವ ನೀನು ಚಾಂಡಾಳನೋ… ಹೇಳ್.
ಹರಿಶ್ಚಂದ್ರ: ಆನ್ ಈಗ ಹುಸಿದುದೇನ್?
ವೀರಬಾಹುಕ: ಹೊನ್ನುಳ್ಳ ಧನಿಕರ್ ಆರಾದೊಡಮ್ ಕೊಂಬವರ್ ಬನ್ನಿ. ಎನ್ನನ್ ಮಾರುಗುಡುವೆನ್ ಎಂದೆನೆ… ದಿಟಮ್ ನನ್ನಿಯುಳ್ಳವನೆಂದು ಬಗೆದು ಬೇಡಿದೆನ್. ಉತ್ತಮ ದ್ವಿಜರು
ಕೊಂಬುದೆಂದು ಮುನ್ನ ನೀನಾಡಿತುಂಟೇ. ಹೇಳು ಭೂಪಾಲ, ನಿನ್ನ ನುಡಿ ನಿನಗೆ ಹಗೆಯಾಯ್ತು. ಕಂಡುದನಲ್ಲದೆ ಎನ್ನೆ. ಹೊಲೆಹುಸಿಯ ಹೊರುವವನ್ ನೀ ಹೊಲೆಯನಲ್ಲದೆ ಬಳಿಕ್ಕ ಆರ್.
(ಎಂದನು.)
ಹರಿಶ್ಚಂದ್ರ: (ತನ್ನಲ್ಲಿಯೇ) ವಿತ್ತವುಳ್ಳವರ್ಗಳ್ ಎನ್ನನ್ ಕೊಂಬುದೆಂದು ನುಡಿಯಿತ್ತು ದಿಟವು. ಇನ್ನು ನಾನ್ ಒಗಡಿಸಿದೆನಾದಡೆ ಅನಿಮಿತ್ತ ಹುಸಿ ಬಂದಪುದು. ಅವಧಿಗೆಟ್ಟಡೆ ಹಿಂದೆ ಮುನಿಗೆ ನಾನ್ ದಾನವಾಗಿ ಇತ್ತ ರಾಜ್ಯಮ್ ನಿರರ್ಥಮ್ ಪೋಗಿ, ಮೇಲೆ ಹುಸಿ ಹೊತ್ತಪ್ಪದು. ಅದರಿಂದ ಮುನ್ನವೆ ಅನಾಮಿಕನ ಚಿತ್ತವಮ್ ಪಡೆವೆನ್.
(ಎಂದು ಓತು ಅವನೀಶನು ವೀರಬಾಹುಕನನ್ ಕರೆದನ್.)
ವೀರಬಾಹುಕ: ಮತ್ತೇಕೆ ಹುಸಿಯ ಹೊಲೆಹೊರೆಕಾರ ಕರೆದೆ.
ಹರಿಶ್ಚಂದ್ರ: ತೆತ್ತ ಸಾಲದ ಭರದೊಳ್ ಅರಿಯದೆ ಆಡಿದ ನುಡಿಗೆ ಹೊತ್ತ ಹುಸಿ ಅಳಿಯಬೇಕು.
ವೀರಬಾಹುಕ: ನಿನ್ನ ಕುಲವಳಿದಲ್ಲದೆ ಅಳಿಯದು.
ಹರಿಶ್ಚಂದ್ರ: ಇನ್ನು ಚಿತ್ತೈಸಿ ಕೇಳ್, ನಾಡ ಮದ್ದಮ್ ತಿಂದು ಕುತ್ತ ಕೆಡದಿರಬಹುದೆ… ಸಾಲವಳಿಯಲು ಧನವನಿತ್ತು ರಕ್ಷಿಸು ಸಾಕು. ರವಿಕುಲಕೆ ಕುಂದು ಇಂದು ಬಂದಡಮ್ ಬರಲಿ.
ವೀರಬಾಹುಕ: ಸಾಲವೇನು… ನೂರಾರು ಸಾವಿರವೆ?
ಹರಿಶ್ಚಂದ್ರ: ಕರಿಯನ್ ಏರಿ… ಕವಡೆ ಮೇಲಕ್ಕೆ ಮಿಡಿದಡೆ… ಬಿಡೆ ಹಬ್ಬಿ ಹಾರಿದ ಅನಿತು ಉದ್ದಕ್ಕೆ ಹೊಸ ಹೊನ್ನ ರಾಶಿಯನ್ ಸುರಿದು ಈಯಬೇಹುದು.
ವೀರಬಾಹುಕ: ಏರಿದ ಅರ್ಥವನ್ ಈವೆ. ನೀನ್ ಮಾಳ್ಪುದೇನ್?… ಆಡಿ ತೋರು.
ಹರಿಶ್ಚಂದ್ರ: ಆವ ಹೊತ್ತು… ಆವ ಕೆಲಸವನ್ ಈಯಲ್ ಆರೆನ್ ಎನ್ನದೆ ಮಾಳ್ಪೆನ್.
(ಅಂತು ಆ ಧನಿಕನು ಒಡವೆಯನ್ ಈವೆನ್ ಎಂದನ್.)
ವೀರಬಾಹುಕ: ನುಡಿದ ಒಡವೆಯಮ್ ಕೊಡುವೆನ್.
ಹರಿಶ್ಚಂದ್ರ: ನುಡಿದ ಅಂದದಿನ್ ನಡೆವೆನ್.
(ಎಂದು ಒಬ್ಬರು ಒಬ್ಬರಿಗೆ ನಂಬುಗೆಯಿತ್ತು , ವೀರಬಾಹು ಒಡೆಯನಾದನ್; ಇನಕುಲ ಹರಿಶ್ಚಂದ್ರನೃಪನು ಆಳಾದನ್. ಹಸ್ತಿಯಮ್ ಪಿಡಿದು… ಕವಡೆಯ ಮಿಡಿದು… ನಡೆ ನೋಡಿ ತಂದು… ಹೆಡಗೆ ಹೆಡಗೆಗಳೊಳ್ ಅಡಿಗಡಿಗೆ ಅಡಕಿ… ಎಡೆವಿಡದೆ ಅರ್ಥವನು ಸುರಿದನ್. ಕೌಶಿಕಮುನಿಯ ತೆರಕಾರ ತಲೆದೂಗಲು…)
ಹರಿಶ್ಚಂದ್ರ: ಮುನಿಪ ಚಿತ್ತೈಸು, ಇತ್ತ ಅವಧಿಗೆ ಇನ್ನೆರಡು ಗಳಿಗೆ ಹೊತ್ತಿದೆ. ವಸ್ತುವಿದೆ… ಸಂದುದೇ. ನುಡಿದು ಹುಸಿಯಿತ್ತಿಲ್ಲಲೇ. ತಂದೆ, ಆಯಸಮ್ ಪಡಿಸಿದೆನು. ತಡೆದೆನ್. ನಾನು ಅಳಲಿಸಿದೆ. ಅತ್ಯಂತ ಮೂಢನ್. ಎನ್ನ ಅವಗುಣವನ್ ಉಳಿದು ತಮ್ಮ ಉತ್ತಮಿಕೆಯನ್ ಮೆರೆದು ಕರುಣಿಸುವುದು. ಎಮ್ಮ ಹೆತ್ತಯ್ಯ ಕೌಶಿಕಂಗೆ ಓವಿ ಬಿನ್ನೈಸು.
(ಎಂದು ಭೂಭುಜನ್ ಕೈಮುಗಿದನು.)
ನಕ್ಷತ್ರಕ: ಇನ್ನೇಕೆ ನುಡಿದು ಎನ್ನ ನಾಚಿಸುವೆ ಭೂಪಾಲ. ನಿನ್ನಂತೆ ಸತ್ಯರ್… ಉತ್ತಮರ್… ಅಧಿಕ ಧೀವಶಿಗಳ್ … ಉನ್ನತ ಶಿವೈಕ್ಯರ್ ಇಳೆಯೊಳಗಿಲ್ಲ. ನಿನ್ನಿಷ್ಟ ಸಿದ್ಧಿ ಕೈಸಾರಲಿ.
(ಎಂದು ತನ್ನ ಮನವುಕ್ಕಿ ಹಾರೈಸಿ, ಹರುಷದಿ ಹರಸಿ, ಹೊನ್ನನ್ ಅಡಕಲು ಅತ್ತಲ್ ಹೋದನ್. ಅಮರರು ಮರುಗಲು, ಇತ್ತಲು ನನ್ನಿಕಾರನ್ ಪತಿಯ ಹಿಂದೆ ನಡೆದು ಹೊಲಗೇರಿಗೆ ಎಯ್ತಂದನ್.
ತಿರುಳು: ಹರಿಶ್ಚಂದ್ರನ ಮಾರಾಟ
ಖಗವಂಶದ ಇಕ್ಷ್ವಾಕು ಭೂವರನ ಪೀಳಿಗೆಯೊಳ್ ಒಗೆದ ತ್ರಿಶಂಕು ವಸುಧಾಧಿ ನಾಯಕನ ಹೆಮ್ಮಗ ಹರಿಶ್ಚಂದ್ರನನ್ ಮಾರುಗೊಂಡು ಓಲೈಸಿಕೊಂಬರಿಲ್ಲಾ ಎನ್ನುತ್ತ=ಸೂರ್‍ಯವಂಶದ ಮೊದಲ ರಾಜನಾದ ಇಕ್ಶ್ವಾಕುವಿನ ಮನೆತನದಲ್ಲಿ ಹುಟ್ಟಿದ; ಪ್ರಪಂಚಕ್ಕೆ ಉತ್ತಮ ಒಡೆಯನೆಂದು ಹೆಸರಾಂತ ತ್ರಿಶಂಕುವಿನ ಹಿರಿಯ ಮಗನಾದ ಹರಿಶ್ಚಂದ್ರನನ್ನು ಕೊಂಡುಕೊಂಡು ಸೇವೆಮಾಡಿಸಿಕೊಳ್ಳುವವರು ಯಾರಾದರೂ ಇರುವಿರಾ ಎಂದು ದೊಡ್ಡ ದನಿಯಲ್ಲಿ ಕೂಗಿ ಹೇಳುತ್ತ;
ಬಗೆಬಗೆದು ಪುರದ ಕೇರಿಯ ಮನೆಯೊಳ್=ಬೇರೆ ಬೇರೆ ದಿಕ್ಕುಗಳಲ್ಲಿದ್ದ ಕಾಶಿ ನಗರದ ಬೀದಿಯ ಮನೆಗಳ ಮುಂದೆ ನಡೆದುಬಂದು;
ಅಡ್ಡ ಬೀದಿಗಳ… ಬೀದಿಯ ನಿಂದ ನೆರವಿಗಳ ಜನಮುಮನ್ ಮಿಗೆ ಕೇಳಿಸುತ್ತ=ಚಿಕ್ಕ ಚಿಕ್ಕ ಸಂದಿಗೊಂದಿಗಳಲ್ಲಿ ಮತ್ತು ದೊಡ್ಡ ದೊಡ್ಡ ಬೀದಿಗಳಲ್ಲಿ ಗುಂಪುಗುಂಪಾಗಿ ನಿಂತಿದ್ದ ಜನರಿಗೆ ಚೆನ್ನಾಗಿ ಕೇಳಿಸುವಂತೆ ಕೂಗಿ ಕೂಗಿ ಹೇಳುತ್ತ;
ಮಧ್ಯಾಹ್ನ ಮೊದಲಾಗಿ… ಕಡೆ ಹಗಲ ತನಕ ತೊಳಲಿದನು=ಅಂದು ಮದ್ಯಾಹ್ನದಿಂದ ಮೊದಲುಗೊಂಡು ಸಂಜೆಯವರೆಗೂ ಕಾಶಿ ನಗರದ ಎಲ್ಲೆಡೆಯಲ್ಲಿಯೂ ಹರಿಶ್ಚಂದ್ರನು ಒಂದೇ ಸಮನೆ ತಿರುಗಿದನು;
ಮಡದಿಯರನ್ ಇರಿಸಿಕೋ ಎಂದು ನಾನ್ ಬೇಡಿಕೊಂಡಡೆ=ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಮದುವೆಯಾಗು ಎಂದು ನಾನು ಇನ್ನಿಲ್ಲದಂತೆ ಕೇಳಿಕೊಂಡರೆ;
ಮೀರಿ ಹೊಲತಿಯರನ್ ಒಲ್ಲೆನ್ ಎಂಬ ಅಣ್ಣನನ್=ನನ್ನ ಮಾತನ್ನು ಲೆಕ್ಕಿಸದೆ ಹೊಲತಿಯರನ್ನು ಮದುವೆಯಾಗುವುದಿಲ್ಲ ಎಂಬ ಈ ಅಣ್ಣನನ್ನು; ಈ ಸನ್ನಿವೇಶದಲ್ಲಿ ‘ಅಣ್ಣ’ ಎಂಬ ಪದ ಹರಿಶ್ಚಂದ್ರನನ್ನು ಅಣಕಿಸುವ ತಿರುಳಿನಲ್ಲಿ ಬಳಕೆಗೊಂಡಿದೆ;
ಕಡೆಗೆ ಅನಾಮಿಕನ ಕಿಂಕರನಾಗಿ ಸುಡುಗಾಡ ಕಾವಂತೆ ಮಾಳ್ಪೆನ್ ಎಂದು=ಹರಿಶ್ಚಂದ್ರನು ಬೇರೆ ದಾರಿಯೇ ಇಲ್ಲದೆ ಚಂಡಾಲನ ದಾಸನಾಗಿ ಹೆಣಗಳನ್ನು ಸುಡುವ ಮಸಣವನ್ನು ಕಾಯುವಂತೆ ಮಾಡುತ್ತೇನೆ ಎಂದು ವಿಶ್ವಾಮಿತ್ರನು ಮತ್ತೊಂದು ಸಂಚನ್ನು ಹೂಡಲು ನಿಶ್ಚಯಿಸಿಕೊಂಡು;
ಕಡುಮೂರ್ಖ ಕೌಶಿಕನ್ ಕಾಲನನ್ ಕರೆದು=ತಿಳಿಗೇಡಿಯಾದ ವಿಶ್ವಾಮಿತ್ರನು ಸಾವಿನ ದೇವತೆಯಾದ ಯಮನನ್ನು ಕರೆದು;
ನೀನ್ ಬಿಡದೆ ಅನಾಮಿಕನಾಗಿ ಧನವನಿತ್ತು ಅರಸನನ್ ಮುನ್ನೊಂದು ತಿಂಗಳ್ ತಡೆ ಎಂದು ಎನೆ ಕಳುಹೆ=ನೀನು ಈ ಕೂಡಲೇ ಚಂಡಾಲನ ವೇಶವನ್ನು ತೊಟ್ಟು, ಕಾಶಿ ನಗರಕ್ಕೆ ಹೋಗಿ, ತನ್ನನ್ನು ಮಾರಾಟಕ್ಕೆ ಇಟ್ಟುಕೊಂಡಿರುವ ಹರಿಶ್ಚಂದ್ರನಿಗೆ ಹಣವನ್ನು ಕೊಟ್ಟು ಕೊಂಡುಕೊಂಡು, ಮುಂದಿನ ಒಂದು ತಿಂಗಳು ನಿನ್ನ ಬಳಿ ಇಟ್ಟುಕೊಂಡಿರು ಎಂದು ಹೇಳಿ ಕಳುಹಿಸಲು;
ಬಂದು, ಆ ಹೊತ್ತ ಹಾರಿರ್ದನು=ಯಮನು ಕಾಶಿ ನಗರಕ್ಕೆ ವೀರಬಾಹುಕನೆಂಬ ಹೆಸರಿನ ಚಂಡಾಲನ ವೇಶದಲ್ಲಿ ಬಂದು, ಹರಿಶ್ಚಂದ್ರನನ್ನು ತನ್ನ ದಾಸನಾಗಿ ಕೊಂಡುಕೊಳ್ಳಲು ಸಿದ್ದನಾದನು; ದೇವಲೋಕದ ಯಮನು ಕಾಶಿ ನಗರದಲ್ಲಿ ಚಂಡಾಲನ ಉಡುಗೆತೊಡುಗೆಯಲ್ಲಿ ಕಾಣಿಸಿಕೊಂಡ ಬಗೆಯನ್ನು ಕವಿಯು ಚಿತ್ರಿಸಿದ್ದಾನೆ;
ಕಾರೊಡಲು=ಕಪ್ಪನೆಯ ಮಯ್;
ಕೆಂಗಣ್ಣು=ಕೆಂಪನೆಯ ಕಣ್ಣು;
ಕುಡಿದು ಕೊಬ್ಬಿದ ಬಸುರು=ಮಾದಕ ಪಾನೀಯವನ್ನು ಕುಡಿಕುಡಿದ ಉಬ್ಬಿರುವ ಹೊಟ್ಟೆ;
ಕೆದರಿದ ತಲೆಯನ್ ಅಡಸಿ ಸುತ್ತಿದ ಮುಪ್ಪುರಿಯ ಬಾರಿ ಕಡ್ಡಣಿಗೆಯ=ಕೆದರಿದ ತಲೆಗೂದಲನ್ನು ಬಿಗಿಯಾಗಿ ಒತ್ತಿಹಿಡಿದು ಮೂರು ಎಳೆಗಳಿಂದ ಹೆಣೆದಿರುವ ತೊಗಲಿನ ಪಟ್ಟಿಯಿಂದ ಕೂಡಿರುವ ಜಡೆ; ಸಂಬಳಿ+ಕೋಲು=ಸಂಬಳಿಗೋಲು; ಸಂಬಳಿ=ಹೊಲೆಯ;
ಸಂಬಳಿಗೋಲು=ಜನವಸತಿಯಿರುವ ಊರಿನ ಬೀದಿಗಳಲ್ಲಿ ಹೊಲೆಯನು/ಚಂಡಾಲನು ಬರುವಾಗ, ತನ್ನ ಬರುವಿಕೆಯನ್ನು ಜನರಿಗೆ ಹೇಳಿ, ಜನರು ಪಕ್ಕಕ್ಕೆ ಸರಿಯುವಂತೆ ಸೂಚಿಸಲೆಂದು ನೆಲದ ಮೇಲೆ ಕುಟ್ಟಲು ಬಳಸುತ್ತಿದ್ದ ದೊಣ್ಣೆ;
ಪಿಡಿದ ಸಂಬಳಿಗೋಲು=ಕಯ್ಯಲ್ಲಿ ಹಿಡಿದಿರುವ ಸಂಬಳಿಗೋಲು;
ದಡದಡಿಸಿ ತರಹರಿಸುವ ಅಡಿಯ=ಸಡಗರದಿಂದ ಬಿರುಸಾಗಿ ಇಡುತ್ತಿರುವ ದೊಡ್ಡ ಹೆಜ್ಜೆಯ;
ಬಿಡದೆ ಢರನೆ ತೇಗಿ=ನಡುನಡುವೆ ಡರ್ರನೆ ತೇಗುತ್ತ;
ನೆರವಿಯನ್ ಬಯ್ವ ಬಿರುನುಡಿಯ ಕಲಿ ವೀರಬಾಹುಕ ಬರುತ್ತಮ್=ಸುತ್ತಮುತ್ತ ಇದ್ದ ತನ್ನ ದಾಸರನ್ನು ಗದರಿಸಿ ನಿಂದಿಸುವ ಒರಟು ನುಡಿಯನ್ನಾಡುತ್ತ ಕಲಿ ವೀರಬಾಹುಕನು ಕಾಶಿನಗರದ ಬೀದಿಯಲ್ಲಿ ಬರುತ್ತ;
ಹಡಪಿಗ=ಎಲೆ ಅಡಕೆಯ ಚೀಲವನ್ನು ಹಿಡಿದುಕೊಂಡು ತನ್ನ ಒಡೆಯನು ಕೇಳಿದಾಗಲೆಲ್ಲಾ ತಾಂಬೂಲವನ್ನು ಕೊಡುವ ಸೇವಕ;
ಮಾರುವಡೆ ನಾನ್ ಕೊಂಡು ಹೊಂಗೊಡುವೆ ಎಂದು ತನ್ನ ಹಡಪಿಗನಿಂದ ಕೇಳಿಸಿದನು=ತನ್ನನ್ನು ತಾನು ಮಾರಾಟಮಾಡಿಕೊಳ್ಳುವುದಾದರೆ ನಾನು ಹಣಕೊಟ್ಟು ತೆಗೆದುಕೊಳ್ಳುತ್ತೇನೆ ಎಂದು ಹರಿಶ್ಚಂದ್ರನಿಗೆ ಹೇಳುವಂತೆ ತನ್ನ ಹಡಪಿಗನಿಗೆ ವೀರಬಾಹುಕನು ಆಜ್ನಾಪಿಸಿದನು;
ಕೊಡುವಾತನ್ ಆರು?… ಬೆಲೆ ಏನು?… ಮಾರಿಸಿಕೊಂಬ ಪೊಡವೀಶನ್ ಎಂಬನ್ ಆರೋ?…ವೀರಬಾಹು ಕೇಳ್ದಡೆ ಈಗಳ್ ಕೊಂಬನ್ ಎಂದು ಎನೆ=ಹಡಪಿಗನು ಹರಿಶ್ಚಂದ್ರನ ಬಳಿಗೆ ಬಂದು “ಮಾರಾಟಮಾಡುತ್ತಿರುವ ವ್ಯಕ್ತಿ ಯಾರು… ಬೆಲೆ ಏನು… ಮಾರಿಕೊಳ್ಳುತ್ತಿರುವ ರಾಜನೆಂಬುವನು ಯಾರು ಎನ್ನುವ ವಿವರಗಳೆಲ್ಲವೂ ತಿಳಿದರೆ ನಮ್ಮ ದಣಿಯಾದ ವೀರಬಾಹುಕನು ಈಗಲೇ ಕೊಂಡುಕೊಳ್ಳುತ್ತಾನೆ” ಎಂದು ಹೇಳಲು;
ನೃಪನ್ ಬೆರಗಾಗಿ=ಹರಿಶ್ಚಂದ್ರನು ಅಚ್ಚರಿಗೊಂಡು;
ಸೂರ್ಯವಂಶದಲಿ ಹುಟ್ಟಿ, ಮೃಡಮೂರ್ತಿ ವಾಸಿಷ್ಠಮುನಿಯ ಕಾರುಣ್ಯಮನ್ ಪಡೆದ ಎನ್ನನ್… ಈ ಹೊಲೆಯ ಮಾರುಗೊಂಡಪೆನೆ ಎಂದು ನುಡಿವ ಬಲುಹಮ್ ನೋಡು ನೋಡು… ಎಂದು ಕಡುಮುಳಿದು ಅವನೀಶನು ಕೋಪಿಸಿದನ್=ಸೂರ್‍ಯವಂಶದಲ್ಲಿ ಹುಟ್ಟಿ, ಶಿವನಿಗೆ ಸಮಾನವಾದ ಮಹಿಮೆಯನ್ನು ಹೊಂದಿರುವ ವಾಸಿಶ್ಟ ಮುನಿಯ ಅನುಗ್ರಹವನ್ನು ಪಡೆದು ಬೆಳೆದಿರುವ ನನ್ನನ್ನು… ಈ ಹೊಲೆಯ ಕೊಂಡುಕೊಳ್ಳಲು ಸಿದ್ದನಾಗಿದ್ದಾನೆ ಎಂದು ನುಡಿಯುತ್ತಿರುವ ಸೊಕ್ಕನ್ನು ನೋಡು ನೋಡು ಎಂದು ಹರಿಶ್ಚಂದ್ರನು ಬಹಳವಾಗಿ ಕೆರಳಿ ಕೋಪಗೊಂಡನು;
ನಡುಗದೆ, ಅಂಜದೆ, ಹೆದರದೆ, ಓಸರಿಸದೆ=ನಡುಗದೆ, ಹಿಂಜರಿಯದೆ, ಹೆದರದೆ, ಹಿಮ್ಮೆಟ್ಟದೆ;
ಅಕಟಕಟ… ಕಡೆಯ ಹೊಲೆಯನ್ ಮೇರೆದಪ್ಪಿ ಬಂದು, ಎನ್ನ ತನ್ನೊಡೆಯಂಗೆ ಈಗಳ್ ದಾಸನಾಗು ಎಂದೆಂಬುದು=ಅಯ್ಯಯ್ಯೋ… ಕೀಳಾದ ಹೊಲೆಯನು ತನ್ನ ಎಲ್ಲೆಯನ್ನು ಮೀರಿ ಬಂದು, ನನ್ನನ್ನು ತನ್ನ ಒಡೆಯನಿಗೆ ಈಗ ದಾಸನಾಗು ಎಂದು ಹೇಳುತ್ತಿರುವುದು; ಮೇಲು ಕುಲದ ಕ್ಶತ್ರಿಯನಾದ ತನ್ನನ್ನು ಕೀಳು ಕುಲದ ಚಂಡಾಲನಾದ/ಹೊಲೆಯನಾದ ವ್ಯಕ್ತಿಯೊಬ್ಬ ಬಂದು, ಈ ರೀತಿ ಚಂಡಾಲನಿಗೆ/ಹೊಲೆಯನಿಗೆ ದಾಸನಾಗು ಎಂದು ಹೇಳುತ್ತಿರುವುದು; ಹರಿಶ್ಚಂದ್ರನ ಮಯ್ ಮನದಲ್ಲಿ “ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ” ಎಂಬ ವರ್‍ಣವ್ಯವಸ್ತೆಯ ಮೇಲು ಕೀಳಿನ ತಾರತಮ್ಯವು ಬೇರೂರಿದೆ. ಕುಲದ ಹೆಮ್ಮೆ ಅವನನ್ನು ಎಡೆಬಿಡದೆ ಕಾಡುತ್ತಿದೆ. ಪ್ರಾಚೀನ ಇಂಡಿಯಾದ ಸಾಮಾಜಿಕ ವ್ಯವಸ್ತೆಯಲ್ಲಿ ‘ಚಂಡಾಲ’ ಸಮುದಾಯವನ್ನು ಊರ ಹೊರಗೆ ದೂಡಲಾಗಿತ್ತು;
ಇದು ಕಾಲಗುಣವೋ… ಎನ್ನನು ಎಡೆಗೊಂಡ ಕರ್ಮಫಲವೋ=ಇದು ಬದಲಾದ ಕಾಲದ ನಡೆನುಡಿಯೋ ಇಲ್ಲವೇ ನನ್ನನ್ನು ಬೆನ್ನಟ್ಟಿದ ಕಳೆದ ಜನ್ಮದ ಪಾಪದ ಪಲವೋ;
ಕಡೆಗೆ ಮೆಣಸು ಹುಳಿತಡೆ ಜೋಳದಿಮ್ ಕುಂದೆ=ಏನೇ ಆಗಲಿ ಮೆಣಸು ಹುಳು ಬಿದ್ದು ಹಾಳಾದರೂ ಜೋಳಕ್ಕಿಂತ ಕಡಿಮೆಯಲ್ಲ. ಇದೊಂದು ಗಾದೆ ಮಾತು. ಈ ಸನ್ನಿವೇಶದಲ್ಲಿ ಮೇಲು ಕುಲದವನಾದ ಹರಿಶ್ಚಂದ್ರನಾದ ನಾನು, ನನ್ನೆಲ್ಲಾ ರಾಜ್ಯಸಂಪತ್ತು ಮತ್ತು ಅದಿಕಾರವನ್ನು ಕಳೆದುಕೊಂಡಿದ್ದರೂ, ಕೀಳು ಕುಲದ ಚಂಡಾಲ/ಹೊಲೆಯನಿಗಿಂತ ಎಂದೆಂದಿಗೂ ಮೇಲಾಗಿರುವ ವ್ಯಕ್ತಿ ಎಂಬ ರೂಪಕದ ತಿರುಳಿನಲ್ಲಿ ಬಳಕೆಗೊಂಡಿದೆ; ಹರಿಶ್ಚಂದ್ರನ ಮಯ್ ಮನದಲ್ಲಿ ತನ್ನ ಕುಲದ ಬಗ್ಗೆ ಹೆಮ್ಮೆ ಮತ್ತು ಚಂಡಾಲ ಕುಲದ ಬಗ್ಗೆ ತಿರಸ್ಕಾರದ ಬಾವನೆಯು ಆಳವಾಗಿ ಬೇರೂರಿದೆ;
ನೋಡು ನೋಡು… ಎಂದು ಅವನಿಪನ್ ಘುಡುಘುಡಿಸಿ ಕೋಪಾಟೋಪದಿಮ್ ಅನಾಮಿಕನನು ಜರೆದು ಝಂಕಿಸಿದನ್=ನೋಡು… ನೋಡು… ಈ ಹೊಲೆಯನ ಸೊಕ್ಕಿನ ವರ್‍ತನೆಯನ್ನು ಎಂದು ಹರಿಶ್ಚಂದ್ರನು ಅಬ್ಬರಿಸುತ್ತ, ಕೋಪೋದ್ರೇಕದಿಂದ ಹಡಪಿಗನನ್ನು ಬಯ್ದು ಗದರಿಸಿದನು;
ಕೇಳಿ… ಬಂದು=ಹಡಪಿಗನನ್ನು ನಿಂದಿಸಿ ಆಡಿದ ಮಾತುಗಳನ್ನು ಕೇಳಿದ ವೀರಬಾಹುಕನು ಹರಿಶ್ಚಂದ್ರನ ಬಳಿಗೆ ಬಂದು;
ಆರ ಜರೆದಪೆ=ಯಾರನ್ನು ಬಯ್ಯುತ್ತಿರುವೆ;
ನಿನ್ನ ಹಡಪಾಳಿಯನ್=ನಿನ್ನ ಹಡಪಿಗನನ್ನು;
ಅದೇಕೆ=ಏತಕ್ಕೆ ಬಯ್ಯುತ್ತಿರುವೆ;
ಎನ್ನನ್ ಅರಿದರಿದು… ಅನಾಮಿಕಂಗೆ ಆಳಾದಪಾ ಎಂದು ನುಡಿದನ್. ಕೀಳು ಮೇಲಮ್ ನೋಡದೆ ಇಂತು ಎನಬಹುದೆ=ನಾನು ಯಾರೆಂಬುದು ಚೆನ್ನಾಗಿ ತಿಳಿದಿದ್ದರೂ, ಚಂಡಾಲನಿಗೆ/ಹೊಲೆಯನಿಗೆ ದಾಸನಾಗುವೆಯಾ ಎಂದು ಕೇಳಿದನು. ವ್ಯಕ್ತಿಯ ಕುಲದ ಕೀಳು ಮೇಲನ್ನು ಗಮನಿಸದೆ, ಈ ರೀತಿ ಮಾತನಾಡಬಹುದೆ;
ಕೀಳಾರು… ಮೇಲಾರು=ಮಾನವರಲ್ಲಿ ಕೀಳು ಯಾರು… ಮೇಲು ಯಾರು;
ಹದುಳವಿಪ್ಪ ಆನು ಚಾಂಡಾಳನೋ… ಹುಸಿಯ ಹೊಲೆಯಮ್ ಹೊರುವ ನೀನು ಚಾಂಡಾಳನೋ… ಹೇಳ್=ದಿಟದ ನುಡಿಯನ್ನಾಡುತ್ತಿರುವ ನಾನು ಚಾಂಡಾಲನೋ… ಸುಳ್ಳಿನ ಕೆಟ್ಟ ನಡೆನುಡಿಯನ್ನು ಹೊಂದಿರುವ ನೀನು ಚಾಂಡಾಳನೋ ಹೇಳು;
ಆನ್ ಈಗ ಹುಸಿದುದೇನ್=ನಾನು ಈಗ ಯಾವ ಸುಳ್ಳನ್ನಾಡಿದೆ;
ಹೊನ್ನುಳ್ಳ ಧನಿಕರ್ ಆರಾದೊಡಮ್ ಕೊಂಬವರ್ ಬನ್ನಿ. ಎನ್ನನ್ ಮಾರುಗುಡುವೆನ್ ಎಂದೆನೆ… ದಿಟಮ್ ನನ್ನಿಯುಳ್ಳವನೆಂದು ಬಗೆದು ಬೇಡಿದೆನ್=ಹಣವುಳ್ಳ ಸಿರಿವಂತರು ಯಾರಾದರೂ ಕೊಂಡುಕೊಳ್ಳುವವರು ಇದ್ದರೆ ಬನ್ನಿ. ನನ್ನನ್ನು ನಾನು ಮಾರಿಕೊಳ್ಳುತ್ತಿದ್ದೇನೆ ಎಂದು ನೀನು ಕೂಗಿ ಹೇಳಲು, ಇವನಾರೋ ನಿಜವಾಗಿಯೂ ಸತ್ಯವಂತನೆಂದು ತಿಳಿದು, ಕೊಂಡುಕೊಳ್ಳಲು ಹಡಪಿಗನಿಂದ ಹೇಳಿ ಕಳುಹಿಸಿದೆನು;
ಉತ್ತಮ ದ್ವಿಜರು ಕೊಂಬುದೆಂದು ಮುನ್ನ ನೀನಾಡಿತುಂಟೇ=ಉತ್ತಮ ಕುಲದ ಬ್ರಾಹ್ಮಣರು ಮಾತ್ರ ಕೊಂಡುಕೊಳ್ಳುವುದು ಎಂದು ಈ ಮೊದಲು ನೀನು ಹೇಳಿದ್ದುಂಟೆ;
ಹೇಳು ಭೂಪಾಲ, ನಿನ್ನ ನುಡಿ ನಿನಗೆ ಹಗೆಯಾಯ್ತು=ಮಾತಾಡು ಹರಿಶ್ಚಂದ್ರ… ನಿನ್ನ ಆಡಿದ ಮಾತುಗಳೇ ನಿನಗೆ ಹಗೆಯಾಯಿತು. ಮಾತಿಗೆ ತಪ್ಪಿ ನಡೆಯುತ್ತಿರುವ ಸುಳ್ಳುಗಾರನು ನೀನು;
ಕಂಡುದನಲ್ಲದೆ ಎನ್ನೆ=ನಾನು ನೀನಾಡಿದ ಮಾತಿನಂತೆ ನಡೆದುಕೊಂಡೆನೇ ಹೊರತು, ಬೇರೆ ಯಾವ ಸುಳ್ಳು ನನ್ನ ಬಾಯಿಂದ ಬಂದಿಲ್ಲ;
ಹೊಲೆಹುಸಿಯ ಹೊರುವವನ್ ನೀ ಹೊಲೆಯನಲ್ಲದೆ ಬಳಿಕ್ಕ ಆರ್ ಎಂದನು=ಕುಲದ ಮದದಿಂದ ಸುಳ್ಳನ್ನಾಡಿದ ನೀನು ಹೊಲೆಯನಲ್ಲದೆ, ಬಳಿಕ್ಕ ಇನ್ನಾರು ಹೊಲೆಯರು ಎಂದು ವೀರಬಾಹುಕನು ಹರಿಶ್ಚಂದ್ರನ ಮಾತಿನಲ್ಲಿದ್ದ ತಪ್ಪನ್ನು ಎತ್ತಿ ತೋರಿಸಿದನು;
ವಿತ್ತವುಳ್ಳವರ್ಗಳ್ ಎನ್ನನ್ ಕೊಂಬುದೆಂದು ನುಡಿಯಿತ್ತು ದಿಟವು=ಹಣವುಳ್ಳವರು ನನ್ನನ್ನು ಕೊಂಡುಕೊಳ್ಳುವುದೆಂದು ನಾನು ಹೇಳಿದ್ದು ನಿಜ;
ಇನ್ನು ನಾನ್ ಒಗಡಿಸಿದೆನಾದಡೆ ಅನಿಮಿತ್ತ ಹುಸಿ ಬಂದಪುದು=ಹಾಗೆ ಹೇಳಿದ ನಾನು ಈಗ ಕೊಳ್ಳುವವನು ಚಂಡಾಲನೆಂದು ಅಸಹ್ಯಪಟ್ಟುಕೊಂಡರೆ, ವಿನಾಕಾರಣ ಸುಳ್ಳನ್ನು ಹೇಳಿದ ಅಪವಾದಕ್ಕೆ ನಾನು ಗುರಿಯಾಗುತ್ತೇನೆ;
ಅವಧಿಗೆಟ್ಟಡೆ ಹಿಂದೆ ಮುನಿಗೆ ನಾನ್ ದಾನವಾಗಿ ಇತ್ತ ರಾಜ್ಯಮ್ ನಿರರ್ಥಮ್ ಪೋಗಿ, ಮೇಲೆ ಹುಸಿ ಹೊತ್ತಪ್ಪದು=ಕೊಟ್ಟಿರುವ ಅವದಿಯೊಳಗೆ ಸಂಪತ್ತನ್ನು ಕೊಡದಿದ್ದರೆ, ಈ ಹಿಂದೆ ವಿಶ್ವಾಮಿತ್ರ ಮುನಿಗೆ ರಾಜ್ಯವನ್ನು ದಾನವಾಗಿ ಕೊಟ್ಟ ನನ್ನ ಹೆಸರಿಗೂ ಕಳಂಕಬಂದು, ಅದರ ಜತೆಗೆ ಸುಳ್ಳುಗಾರನೆಂಬ ಕೆಟ್ಟ ಹೆಸರು ಬರುವುದು;
ಅದರಿಂದ ಮುನ್ನವೆ ಅನಾಮಿಕನ ಚಿತ್ತವಮ್ ಪಡೆವೆನ್ ಎಂದು ಓತು ಅವನೀಶನು ವೀರಬಾಹುಕನನ್ ಕರೆದನ್=ಸುಳ್ಳುಗಾರನೆಂಬ ಅಪವಾದ ಬರುವುದಕ್ಕೆ ಮೊದಲೇ ಚಂಡಾಲನ ಮನಸ್ಸನ್ನು ಗೆಲ್ಲುವೆನು ಎಂದು ನಿಶ್ಚಯಿಸಿಕೊಂಡು, ಹರಿಶ್ಚಂದ್ರನು ವೀರಬಾಹುಕನನ್ನು ತನ್ನ ಬಳಿಗೆ ಕರೆದನು;
ಹುಸಿಯ ಹೊಲೆಹೊರೆಕಾರ ಮತ್ತೇಕೆ ಕರೆದೆ=ಸುಳ್ಳಿನ ಕೆಟ್ಟ ನಡೆನುಡಿಯವನೇ ಮತ್ತೇಕೆ ನನ್ನನ್ನು ಕರೆಯುತ್ತಿರುವೆ;
ತೆತ್ತ ಸಾಲದ ಭರದೊಳ್ ಅರಿಯದೆ ಆಡಿದ ನುಡಿಗೆ ಹೊತ್ತ ಹುಸಿ ಅಳಿಯಬೇಕು=ಕೊಡಬೇಕಾಗಿದ್ದ ಸಾಲದ ಹೊರೆಯನ್ನು ತಡೆಯಲಾರದ ಸಂಕಟದಲ್ಲಿ ಏನನ್ನೂ ಆಡಬೇಕು ಎಂಬುದನ್ನು ತಿಳಿಯದೆ ನಾನು ಆಡಿದ ಮಾತುಗಳಿಗೆ ಅಂಟಿಕೊಂಡಿರುವ ಸುಳ್ಳು ನಾಶವಾಗಬೇಕು;
ನಿನ್ನ ಕುಲವಳಿದಲ್ಲದೆ ಅಳಿಯದು=ನಿನ್ನ ಕುಲದ ಮೇಲರಿಮೆಯು ನಿನ್ನ ಮಯ್ ಮನದಿಂದ ತೊಲಗಿದಲ್ಲದೆ, ನಿನ್ನ ನಡೆನುಡಿಯಲ್ಲಿರುವ ಸುಳ್ಳು ನಾಶವಾಗುವುದಿಲ್ಲ;
ಇನ್ನು ಚಿತ್ತೈಸಿ ಕೇಳ್=ವೀರಬಾಹುಕನೇ, ಈಗ ನಾನು ಆಡುವ ಮಾತುಗಳನ್ನು ಮನಗೊಟ್ಟು ಕೇಳು;
ನಾಡ ಮದ್ದು=ಗಿಡಮರಬಳ್ಳಿಗಳ ಎಲೆ, ತೊಗಟೆ ಮತ್ತು ಬೇರುಗಳನ್ನು ಅರೆದು ಮಾಡಿರುವ ನಾಟಿ ಔಷದ; ಮದ್ದು=ರೋಗವನ್ನು ಗುಣಪಡಿಸುವಂತಹ ವಸ್ತು/ಔಷಧ; ಕುತ್ತ=ರೋಗ/ಬೇನೆ;
ನಾಡ ಮದ್ದಮ್ ತಿಂದು ಕುತ್ತ ಕೆಡದಿರಬಹುದೆ=ನಾಡ ಮದ್ದನ್ನು ಸೇವಿಸಿದರೆ, ಎಂತಹ ರೋಗವಾದರೂ ಗುಣವಾಗದೆ ಇರುವುದೇ; ಇದು ಒಂದು ನಾಣ್ಣುಡಿ. ಜನರ ಅನುಬವದಿಂದ ತಯಾರಿಸಿದ ಮದ್ದನ್ನು ಸೇವಿಸಿದಾಗ ರೋಗ ಕಂಡಿತವಾಗಿಯೂ ಗುಣವಾಗುವಂತೆಯೇ , ವ್ಯಕ್ತಿಯು ತನ್ನ ತಪ್ಪನ್ನು ಅರಿತು, ಅದನ್ನು ಸರಿಪಡಿಸಿಕೊಂಡು ಬಾಳುವಂತಾದಾಗ, ಆತ ಒಳ್ಳೆಯ ವ್ಯಕ್ತಿಯಾಗುತ್ತಾನೆ ಎಂಬ ರೂಪಕದ ತಿರುಳಿನಲ್ಲಿ ಬಳಕೆಗೊಂಡಿದೆ;
ಸಾಲವಳಿಯಲು ಧನವನಿತ್ತು ರಕ್ಷಿಸು ಸಾಕು=ಸಾಲವನ್ನು ತೀರಿಸಲು ಹಣವನ್ನು ಕೊಟ್ಟು ನನ್ನನ್ನು ಕಾಪಾಡು. ಅದೊಂದನ್ನು ಮಾತ್ರ ನಿನ್ನಿಂದ ಬಯಸುತ್ತಿರುವೆ;
ರವಿಕುಲಕೆ ಕುಂದು ಇಂದು ಬಂದಡಮ್ ಬರಲಿ=ಸೂರ್‍ಯವಂಶಕ್ಕೆ ಕಳಂಕ ಇಂದು ನನ್ನಿಂದ ಬಂದರೂ ಬರಲಿ. ಈಗಲೂ ಹರಿಶ್ಚಂದ್ರನ ಮಯ್ ಮನದಲ್ಲಿ ಕುಲದ ಮೇಲರಿಮೆಯು ತುಸುವಾದರೂ ಕಡಿಮೆಯಾಗಿಲ್ಲ; ಸುಳ್ಳನ್ನಾಡಬಾರದೆಂಬ ಎಚ್ಚರದ ಜತೆಜತೆಗೆ “ಕುಲದಲ್ಲಿ ನಾನು ಮೇಲು, ಚಂಡಾಲ ಕೀಳು” ಎಂಬ ಇಂಡಿಯಾ ದೇಶದ ಸಾಮಾಜಿಕ ಜೀವನವನ್ನು ನಿಯಂತ್ರಿಸುತ್ತಿರುವ ವರ್‍ಣವ್ಯವಸ್ತೆಯ ತಾರತಮ್ಯ ಹರಿಶ್ಚಂದ್ರನ ವ್ಯಕ್ತಿತ್ವದಲ್ಲಿ ರಕ್ತಗತವಾಗಿದೆ;
ಸಾಲವೇನು… ನೂರಾರು ಸಾವಿರವೆ=ತೀರಿಸಬೇಕಾದ ಸಾಲ ಮೊತ್ತವೇನು… ನೂರಾರು ಸಾವಿರವೇ;
ಕರಿಯನ್ ಏರಿ, ಕವಡೆ ಮೇಲಕ್ಕೆ ಮಿಡಿದಡೆ, ಬಿಡೆ ಹಬ್ಬಿ ಹಾರಿದ ಅನಿತು ಉದ್ದಕ್ಕೆ ಹೊಸ ಹೊನ್ನ ರಾಶಿಯನ್ ಸುರಿದು ಈಯಬೇಹುದು=ಆನೆಯ ಮೇಲೆ ಹತ್ತಿ ನಿಂತು, ಕವಡೆಯೊಂದನ್ನು ಮೇಲಕ್ಕೆ ಚಿಮ್ಮುವಂತೆ ಎಸೆದರೆ, ಆಗ ಅದು ಏರಿದ ಎತ್ತರದಶ್ಟು ಉದ್ದಕ್ಕೆ ಹೊಸ ಹೊನ್ನ ರಾಶಿಯನ್ನು ಸುರಿದು ಕೊಡಬೇಕು;
ಏರಿದ ಅರ್ಥವನ್ ಈವೆ. ನೀನ್ ಮಾಳ್ಪುದೇನ್?… ಆಡಿ ತೋರು=ನಿನ್ನ ಬೇಡಿಕೆಯಂತೆ ಕವಡೆಯು ಏರಿದ ಎತ್ತರದಶ್ಟು ಸಂಪತ್ತನ್ನು ಕೊಟ್ಟು ನಿನ್ನನ್ನು ಕೊಂಡುಕೊಳ್ಳುತ್ತೇನೆ. ನನ್ನ ದಾಸನಾಗಿ ಬರುವ ನೀನು ಏನು ಕೆಲಸಮಾಡಬಲ್ಲೆ ಎಂಬುದನ್ನು ನೀನೇ ಹೇಳು;
ಆವ ಹೊತ್ತು… ಆವ ಕೆಲಸವನ್ ಈಯಲ್ ಆರೆನ್ ಎನ್ನದೆ ಮಾಳ್ಪೆನ್=ಯಾವ ಸಮಯದಲ್ಲಾದರೂ ನೀನು ಯಾವ ಕೆಲಸವನ್ನು ಹೇಳಿದರೂ, ಆಗುವುದಿಲ್ಲ ಎಂದು ನುಡಿಯದೆ, ಅದನ್ನು ಮಾಡುತ್ತೇನೆ;
ಅಂತು ಆ ಧನಿಕನು ಒಡವೆಯನ್ ಈವೆನ್ ಎಂದನ್=ಈ ಮಾತುಕತೆಯ ನಂತರ ಆ ವೀರಬಾಹುಕನು ಸಂಪತ್ತನ್ನು ಕೊಡುತ್ತೇನೆ ಎಂದು ನುಡಿದನು;
ನುಡಿದ ಒಡವೆಯಮ್ ಕೊಡುವೆನ್=ನೀನು ಕೇಳಿದಶ್ಟು ಸಂಪತ್ತನ್ನು ಕೊಡುತ್ತೇನೆ;
ನುಡಿದ ಅಂದದಿನ್ ನಡೆವೆನ್ ಎಂದು ಒಬ್ಬರು ಒಬ್ಬರಿಗೆ ನಂಬುಗೆಯಿತ್ತು=ನಾನು ಮಾತು ಕೊಟ್ಟಿರುವ ರೀತಿಯಲ್ಲಿ ನಿನ್ನ ಸೇವೆಯನ್ನು ಮಾಡುತ್ತೇನೆ ಎಂದು ಒಬ್ಬರಿಗೆ ಒಬ್ಬರು ಒಪ್ಪಂದ ಮಾಡಿಕೊಂಡ ನಂತರ;
ವೀರಬಾಹು ಒಡೆಯನಾದನ್… ಇನಕುಲ ಹರಿಶ್ಚಂದ್ರನೃಪನು ಆಳಾದನ್=ಚಂಡಾಲ ಕುಲದ ವೀರಬಾಹು ಒಡೆಯನಾದನು… ಸೂರ್‍ಯಕುಲದ ಹರಿಶ್ಚಂದ್ರನು ದಾಸನಾದನು;
ಹಸ್ತಿಯಮ್ ಪಿಡಿದು… ಕವಡೆಯ ಮಿಡಿದು… ನಡೆ ನೋಡಿ… ಹೆಡಗೆ ಹೆಡಗೆಗಳೊಳ್ ಅರ್ಥವನು ಅಡಿಗಡಿಗೆ ತಂದು ಅಡಕಿ… ಎಡೆವಿಡದೆ ಸುರಿದನ್=ಆನೆಯೊಂದನ್ನು ಹಿಡಿದು ತಂದು, ಒಬ್ಬ ವ್ಯಕ್ತಿಯು ಅದರ ಮೇಲೆ ನಿಂತುಕೊಂಡು ಕವಡೆಯನ್ನು ಮಿಡಿದನು, ಅದು ಹಾರಿ ಹೋದ ಎತ್ತರವನ್ನು ಗಮನಿಸಿ ನೋಡಿ… ಬಿದಿರಿನ ಬುಟ್ಟಿಗಳಲ್ಲಿ ಹೊನ್ನನ್ನು ಮತ್ತೆ ಮತ್ತೆ ತುಂಬಿಕೊಂಡು ತಂದು ರಾಶಿ ಹಾಕಿ… ಒಂದೇ ಸಮನೆ ಸುರಿದನು;
ಕೌಶಿಕಮುನಿಯ ತೆರಕಾರ ತಲೆದೂಗಲು=ಇದನ್ನು ಕಂಡು ವಿಶ್ವಾಮಿತ್ರನ ತೆರಕಾರನಾದ ನಕ್ಶತ್ರಕನು ತಲೆಯನ್ನು ತೂಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಲು;
ಮುನಿಪ ಚಿತ್ತೈಸು, ಇತ್ತ ಅವಧಿಗೆ ಇನ್ನೆರಡು ಗಳಿಗೆ ಹೊತ್ತಿದೆ. ವಸ್ತುವಿದೆ… ಸಂದುದೇ. ನುಡಿದು ಹುಸಿಯಿತ್ತಿಲ್ಲಲೇ. ತಂದೆ, ಆಯಸಮ್ ಪಡಿಸಿದೆನು. ತಡೆದೆನ್. ನಾನು ಅಳಲಿಸಿದೆ. ಅತ್ಯಂತ ಮೂಢನ್. ಎನ್ನ ಅವಗುಣವನ್ ಉಳಿದು ತಮ್ಮ ಉತ್ತಮಿಕೆಯನ್ ಮೆರೆದು ಕರುಣಿಸುವುದು. ಎಮ್ಮ ಹೆತ್ತಯ್ಯ ಕೌಶಿಕಂಗೆ ಓವಿ ಬಿನ್ನೈಸು ಎಂದು ಭೂಭುಜನ್ ಕೈಮುಗಿದನು=ಮುನಿಯೇ ಕೇಳು, ಕೊಟ್ಟಿದ್ದ ಅವದಿಗೆ ಇನ್ನು ಎರಡು ಗಳಿಗೆ ಸಮಯವಿದೆ. ಇಲ್ಲಿ ನಾನು ವಿಶ್ವಾಮಿತ್ರನಿಗೆ ಕೊಡಬೇಕಾಗಿದ್ದ ಹೊನ್ನ ರಾಶಿಯಿದೆ. ಇದು ನಿನಗೆ ಸಂದಾಯವಾಯಿತಲ್ಲವೇ. ನಾನು ಕೊಟ್ಟ ಮಾತಿಗೆ ತಪ್ಪಿ ನಡೆದು ಸುಳ್ಳನ್ನಾಡಲಿಲ್ಲವಲ್ಲವೇ. ತಂದೆ, ನಿನ್ನನ್ನು ಅಯೋದ್ಯೆಯಿಂದ ಕಾಶಿ ನಗರದ ವರೆಗೆ ಕರೆತಂದು ಆಯಾಸ ಪಡಿಸಿ, ಸಂಕಟಕ್ಕೆ ಗುರಿಮಾಡಿದೆನು. ನಾನು ಬಹಳ ತಿಳಿಗೇಡಿ. ನನ್ನ ಕೆಟ್ಟಗುಣವನ್ನು ಮರೆತು, ತಮ್ಮ ಒಳ್ಳೆಯತನವನ್ನು ತೋರಿಸಿ, ನನ್ನನ್ನು ಕರುಣೆಯಿಂದ ಮನ್ನಿಸಿರಿ. ನಮ್ಮ ತಂದೆಯ ಸಮಾನರಾದ ವಿಶ್ವಾಮಿತ್ರರಿಗೆ ಇದೆಲ್ಲವನ್ನೂ ಪ್ರೀತಿಯಿಂದ ಅರಿಕೆಮಾಡಿಕೊಳ್ಳುವುದು ಎಂದು ಹರಿಶ್ಚಂದ್ರನು ನಕ್ಶತ್ರಕನಿಗೆ ಕಯ್ ಮುಗಿದನು;
ಭೂಪಾಲ, ಇನ್ನೇಕೆ ನುಡಿದು ಎನ್ನ ನಾಚಿಸುವೆ=ಹರಿಶ್ಚಂದ್ರನೇ… ಸಾಲವನ್ನು ತೀರಿಸಿದ ನಂತರವೂ ಏಕೆ ಈ ರೀತಿ ನುಡಿದು ನಾನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುತ್ತಿರುವೆ;
ನಿನ್ನಂತೆ ಸತ್ಯರ್… ಉತ್ತಮರ್… ಅಧಿಕ ಧೀವಶಿಗಳ್ … ಉನ್ನತ ಶಿವೈಕ್ಯರ್ ಇಳೆಯೊಳಗಿಲ್ಲ=ನಿನ್ನಂತಹ ಸತ್ಯವಂತರು, ಉತ್ತಮ ವ್ಯಕ್ತಿಗಳು, ಹೆಚ್ಚಿನ ಮನೋಶಕ್ತಿ ಮತ್ತು ಕೆಚ್ಚು ಉಳ್ಳವರು ಬೂಮಂಡಲದಲ್ಲಿಲ್ಲ;
ನಿನ್ನಿಷ್ಟ ಸಿದ್ಧಿ ಕೈಸಾರಲಿ ಎಂದು ತನ್ನ ಮನವುಕ್ಕಿ ಹಾರೈಸಿ, ಹರುಷದಿ ಹರಸಿ, ಹೊನ್ನನ್ ಅಡಕಲು ಅತ್ತಲ್ ಹೋದನ್=ಜೀವನದಲ್ಲಿ ನಿನ್ನ ಬಯಕೆಗಳೆಲ್ಲವೂ ಈಡೇರಿ, ನಿನಗೆ ಒಳ್ಳೆಯದಾಗಲಿ ಎಂದು ಮನತುಂಬಿ ಒಳಿತನ್ನು ಕೋರಿ, ಆನಂದದಿಂದ ಹರಸಿ, ಹೊನ್ನನ್ನು ಸಾಗಿಸಲು ಅಯೋದ್ಯೆಯತ್ತ ನಡೆದನು;
ಅಮರರು ಮರುಗಲು=ದೇವತೆಗಳು ಹರಿಶ್ಚಂದ್ರನ ಜೀವನದಲ್ಲಿ ನಡೆಯುತ್ತಿರುವ ಪ್ರಸಂಗಗಳನ್ನು ಕಂಡು ಮರುಗುತ್ತಿರಲು;
ಇತ್ತಲು ನನ್ನಿಕಾರನ್ ಪತಿಯ ಹಿಂದೆ ನಡೆದು ಹೊಲಗೇರಿಗೆ ಎಯ್ತಂದನ್=ಈ ಕಡೆ ಸತ್ಯವಂತನಾದ ಹರಿಶ್ಚಂದ್ರನು ಒಡೆಯನಾದ ವೀರಬಾಹುಕನ ಹಿಂಬಾಲಿಸಿಕೊಂಡು ಹೊಲಗೇರಿಗೆ ಬಂದನು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು