ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 25ನೆಯ ಕಂತು: ವಿಶ್ವೇಶ್ವರ ಸಾಕ್ಶಾತ್ಕಾರ
– ಸಿ.ಪಿ.ನಾಗರಾಜ.
*** ಪ್ರಸಂಗ-25: ವಿಶ್ವೇಶ್ವರ ಸಾಕ್ಷಾತ್ಕಾರ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ವಿಶ್ವೇಶ್ವರ ಸಾಕ್ಷಾತ್ಕಾರ’ ಎಂಬ ಎಂಟನೆಯ ಅದ್ಯಾಯದ 1 ರಿಂದ 23 ನೆಯ ಪದ್ಯದವರೆಗಿನ ಇಪ್ಪತ್ಮೂರು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ಹರಿಶ್ಚಂದ್ರ: ಅಯೋದ್ಯಾಪುರವನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜಸಂಪತ್ತನ್ನು ನೀಡಿ, ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ. ಈಗ ವೀರಬಾಹುಕನ ದಾಸನಾಗಿ ಕಾಶಿ ನಗರದ ಸುಡುಗಾಡಿನ ಕಾವಲುಗಾರನಾಗಿದ್ದಾನೆ.
ದೇವತೆಗಳು: ದೇವಲೋಕದಲ್ಲಿ ನೆಲೆಸಿರುವವರು.
ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ. ಲೋಹಿತಾಶ್ವನ ತಾಯಿ.
ವಿಶ್ವಾಮಿತ್ರ: ಒಬ್ಬ ಮುನಿ.
ಕಾಶಿ ವಿಶ್ವನಾಥ: ಕಾಶಿ ನಗರದ ದೇವರು.
ವಸಿಷ್ಠ: ಒಬ್ಬ ಮುನಿ.
*** ವಿಶ್ವೇಶ್ವರ ಸಾಕ್ಷಾತ್ಕಾರ ***
“ಇಂದು ಎನ್ನ ಕುಲಜನ್ ಎನಿಸುವ ಹರಿಶ್ಚಂದ್ರನನ್ ಹೆಂದದ ಚತುರ್ದಶ ಜಗಂಗಳ್ ಅರಿವಂತು ಮೆರೆವ ಸಂಭ್ರಮದ ಸಡಗರವ ನೋಳ್ಪೆನ್” ಎಂದು ತರುಣೇಂದುಧರನಹ ವಿಶ್ವಪತಿ… ಅಪವಿತ್ರ ತಿಮಿರಪಟಲ ಅಮಿತ್ರನು ಎಂದು ಎನಿಪನ್… ಅಂಬುಜಮಿತ್ರನ್ ಕುಂದದ ಉದ್ದವನ್ ಏರಿ ನಿಂದಿರ್ದನೋ ಎನಿಪ್ಪ ಅಂದದಿಂದ ಉದಯಗಿರಿ ಶಿಖರಕ್ಕೆ ರಾಗದಿಮ್ ಬಂದನ್. ಹೆಡಗಯ್ಯ ಬಿಗಿದ ನೇಣಮ್ ಕೊಯ್ದು ಬಿಸುಟು, ನಿಡುದಡದಲ್ಲಿ ಮೂಡ ಮುಂತಾಗಿ ಕುಳ್ಳಿರಿಸಿ, ಹಿಂದಡದಲ್ಲಿ ಕುಸಿದು ನೀಡಡಿಯಿಟ್ಟು ನಿಂದು, ಖಡ್ಗವ ಸೆಳೆದು ಜಡಿದು ನೋಡಿ, ಹೆಡತಲೆಗೆ ಮೋಹಿ ಕೈಯೆತ್ತಿ…
ಹರಿಶ್ಚಂದ್ರ: ಕಂಧರ ಹರಿಯೆ ಹೊಡೆಯಲ್ ಅನುವಾದೆನ್… ಅನುವಾದೆನ್… ಅನುವಾಗು… ಆಗು. ಮಡದಿ, ನೆನೆ ನಿನ್ನ ದೈವವನು ಬಿಡದೆ… ಎನ್ನೊಡೆಯನನ್ ಹರಸು… ಹರಸು.
ದೇವತೆಗಳು: ಆ ಹೊಯ್ದನ್… ಆ ಹೊಯ್ದನ್… ಎಲೆಲೆ… ಶಿವಶಿವ… ಅಷ್ಟದೇಹಿ… ನೀನೇ ಶರಣು… ಅಬಲೆಯನು ರಕ್ಷಿಸು. ದುರ್ಮೋಹಿ ಪಾಪಿ ವಿಶ್ವಾಮಿತ್ರ ಇನ್ನಾದಡಮ್ ಸತಿಯ ಕೊಲೆಯಮ್ ನಿಲಿಸಲು ಹೋಹುದೇನ್.
(ಎಂದು ಓವಿ ಬೇಡಿಕೊಳುತಮ್ ಸುರವ್ಯೂಹಮ್ ಅಂಬರದಲ್ಲಿ ಹೂಮಳೆಗಳಮ್ ಪಿಡಿದು ಮೋಹರಮ್ ಪೆತ್ತು ನೋಡುತ್ತಿರಲು…)
ಚಂದ್ರಮತಿ: ಹರಕೆಗಳನ್ ಅವಧರಿಸು.
(ಎಂದಳು. ಬಲಿದ ಪದ್ಮಾಸನಮ್… ಮುಗಿದ ಅಕ್ಷಿ… ಮುಚ್ಚಿದ ಅಂಜಲಿ ಬೆರಸಿ… ಗುರುವಸಿಷ್ಠಂಗೆ ಎರಗಿ… ಶಿವನ ನಿರ್ಮಲರೂಪ ನೆನೆದು… ಮೇಲಮ್ ತಿರುಗಿ ನೋಡಿ…)
ಚಂದ್ರಮತಿ: ಭೂ… ಚಂದ್ರ… ಅರ್ಕ… ತಾರ… ಅಂಬರಮ್ ಕಲಿ ಹರಿಶ್ಚಂದ್ರರಾಯನ್ ಸತ್ಯವೆರಸಿ ಬಾಳಲಿ… ಮಗನ್ ಮುಕ್ತನಾಗಲಿ… ಮಂತ್ರಿ ನೆನೆದುದಾಗಲಿ… ರಾಜ್ಯದ ಒಡೆಯ ವಿಶ್ವಾಮಿತ್ರ ನಿತ್ಯನಾಗಲಿ… ಹರಕೆ… ಹೊಡೆ.
(ಎಂದಳು. ಹರಕೆಯಮ್ ಕೇಳಿ… ಹವ್ವನೆ ಹಾರಿ… ಬೆರಗಾಗಿ ಮರವಟ್ಟು ನಿಂದು…)
ಹರಿಶ್ಚಂದ್ರ: ಭಾಪುರೆ… ವಿಧಿಯ ಮುಳಿಸೆ. ಹೋದ ಇರುಳ್ ಎನ್ನ ಸುತನ ದುರ್ಮರಣಮಮ್ ತೋರಿ, ಕೈಯೊಡನೆ ಮತ್ತೆ ಈಗಳ್ ಎನ್ನ ವರಸತಿಯ ತಲೆಯನ್ ಆನ್ ಎನ್ನ ಕೈಯಾರೆ ಪಿಡಿದು ಅರಿವಂತೆ ಮಾಡಿದೆ. ಇದಕ್ಕೆ ನಾನ್ ಇನಿತು ಹೇವರಿಸುವವನಲ್ಲ. ಪತಿಯಾಜ್ಞೆ ಉಳಿದಡೆ ಸಾಕು.
(ಎನುತ್ತ ಕೊಲಲ್ ಅನುವಾದನು. ಮನದ ಶಂಕೆಯನ್ ಅಳಿದು… ಹೊಡೆಯಲ್ ಅನುವಾದ ಭೂಪನ ಭಾವಮನ್ ವಿಶ್ವಾಮಿತ್ರನು ಕಂಡು… ಅಂಬರದೊಳಿದ್ದು…)
ವಿಶ್ವಾಮಿತ್ರ: ಕೇಳ್, ಹೊಡೆಯಬೇಡ… ಎನ್ನ ನಂದನೆಯರನ್ ಮದುವೆಯಾದಡೆ… ಸತ್ತ ಮಗನನ್ ಎತ್ತುವೆನ್…ಇವಳ ತಲೆ ಕಾವೆನು… ಕೊಂಡ ಧನಮಮ್ ವಿನಯದಿಮ್ ಕೊಟ್ಟು, ನಿನ್ನ ಬಂಧನಮೋಕ್ಷಮಮ್ ಮಾಡಿ… ರಾಜ್ಯಮಮ್ ಪೊಗಿಸಿ… ಮುನ್ನಿನ ಪರಿಯಲಿ ಇರಿಸುವೆನ್.
(ಎಂದನ್. ತಿರುಗಿ ಮೇಲಮ್ ನೋಡಿ ಕಂಡು…)
ಹರಿಶ್ಚಂದ್ರ: ಇದೇನ್ ಮುನಿ… ನಿಮ್ಮ ಹಿರಿಯತನಕೆ ಈ ಮಾತು ಯೋಗ್ಯವೇ… ಕೇಳ್, ಎನ್ನ ಸಿರಿಪೋದಡೇನು… ರಾಜ್ಯಮ್ ಪೋದಡೇನು… ನಾನ್ ಆರ ಸಾರಿ ಇರ್ದಡೇನು… ವರಪುತ್ರನ ಅಸುವಳಿದು ಪೋದಡೇನ್… ನಾನ್ ಎನ್ನ ತರುಣಿಯನ್ ಕೊಂದಡೇನ್ ಕುಂದೆ… ಸತ್ಯವನು ಬಿಟ್ಟಿರನ್ ಎನಿಸಿದಡೆ ಸಾಕು.
(ಎಂದು ಎತ್ತಿ ಹಿಡಿದ ಖಡ್ಗವ ಜಡಿಯುತ ಇಂತು ಎಂದನು.)
ಹರಿಶ್ಚಂದ್ರ: ಇನ್ನೆಗಮ್ ಆನ್ ಇಂದು ತನಕಮ್ ಎನ್ನ ದುಷ್ಕರ್ಮವಶದಿಂದಾದ ಕರ್ಮವೆಂದು ಬಗೆದೆನ್… ಕಡೆಗೆ ನಿನ್ನ ಗೊಡ್ಡಾಟವೇ… ಹೊಲೆಯನಾದವನ್, ಇನ್ನು ಸತಿಗಿತಿಯ ಕೊಲೆಗೆ ಹೇಸಿ ಬೆನ್ನೀವೆನೇ… ಇದಮ್ ತೋರಿ ಸಿಕ್ಕಿಸಬಂದ ಗನ್ನಗತಕಕ್ಕೆ ಸೆಡೆವೆನೆ. ಸಡಿಫಡ.
(ಎನುತ ಆರ್ದು ನನ್ನಿಕಾರನ್… ಎಲೆಲೆ… ಶಿವಶಿವ…ಮಹಾದೇವ… ವಧುವನ್ ಹೊಡೆದನ್… ಹೊಡೆದನು… ಹೊಡೆದ ಕಡುಗದ ಬಾಯಕಡೆಯ ಹೊಡೆಗಳನ್ ಆಂತು, ಮಡದಿಯ ಎಡೆಗೊರಳ ನಡುವೆ ಅಡಸಿ ಕೆಂಜಡೆಯ… ಶಶಿಕಳೆಯ… ಸುರನದಿಯ… ಬಿಸಿಗಣ್ಣ… ಫಣಿಕುಂಡಲದ… ಪಂಚಮುಖದ… ಎಡದ ಗಿರಿಜೆಯ… ತಳಿತ ದಶಭುಜದ… ಪುಲಿ ತೊಗಲಿನ ಉಡಿಗೆಯ… ಮಹಾವಿಷ್ಣುನಯನವೇರಿಸಿದ… ಮೆಲ್ಲಡಿಯ ಕಾಶೀರಮಣ ವಿಶ್ವನಾಥನ್ ಮೂಡಿದನು. ಸುರರ ನೆರವಿ ಜಯಜಯ ಎನುತಿರೆ… ಅಪ್ರತಿಮದೇವಾಧಿದೇವ ಪಂಪಾವಿರೂಪಾಕ್ಷನೆಡೆಗೆ ಮುರಹರನ್ ಬಂದನ್; ಅಬ್ಜಾಸನನ್ ಬಂದನ್; ಅಮರರ ವರನ್ ಬಂದನ್; ಅಗಜಾಪಿತನ್ ಬಂದನ್; ಈಶ್ವರಸುತನ್ ಬಂದನ್; ಈರಾರು ರವಿಗಳು ಬಂದರ್; ಇಕ್ಷು ಕೋದಂಡ ಬಂದ; ಸುರುಚಿರ ನವಗ್ರಹಂಗಳು ಬಂದರ್; ಎಯ್ದುವ ಅವಸರದೊಳ್ ಅವರ್ ಇವರ್ ಎನ್ನಲೇಕೆ… ಇನ್ನು ಸರ್ವದೇವರು ಬಂದರ್; ಕುಡಿದ ಔಷಧಮ್ ಬಾಯ್ಗೆ ನಿಗ್ರಹಮ್ ಮಾಡಿ, ತಾಳ್ದ ಒಡಲಿಂಗೆ ಸುಖವನ್ ಈವಂತೆ… ಲೋಕದ ಕಣ್ಗೆ ಕಡುಮುಳಿದರಂತೆ ತೋರಿಸಿ… ಸತ್ಯಶುದ್ಧವಪ್ಪನ್ನೆಗಮ್ ಕಾಡಿ ನೋಡಿ… ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ ಮೃಡನನ್ ಎಳತಂದಿತ್ತು… ಮೂಜಗದ ಕಡೆಗೆ ಕೀರ್ತಿಯಮ್ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ ವಸಿಷ್ಠ ಸಹಿತ ಬಂದನು. ಆಗ ಹರಿಶ್ಚಂದ್ರನು ಹಿಂದಿನದೆಲ್ಲವನ್ನು ನೆನದು..)
ಹರಿಶ್ಚಂದ್ರ: ಚಾಂಡಾಲ ಕಿಂಕರನಾಗಿ… ಹೊಲೆವೇಷವನು ಹೊತ್ತು… ಸುಡುಗಾಡ ಕಾದ ಶವಶಿರದ ಅಕ್ಕಿಯನು ಹೇಸದೆ ಉಂಡು ಜೀವಿಸುವ… ವರಪುತ್ರನ್ ಅಳಿದುದನು ಕಣ್ಣಾರೆ ಕಂಡು… ಘನಪತಿವ್ರತೆಯಪ್ಪ ನಿಜಸತಿಯ ಕೊಂದ ನೀಚನು ಮೂರ್ಖನ್ ಆನ್. ಎನ್ನ ಠಾವಿಂಗೆ ಇದೇಕೆ ಪಾವನಮೂರ್ತಿ ನೀವು ಬಿಜಯಮ್ ಗೆಯ್ದಿರಿ.
(ಎಂದು ಅಭವನ ಅಂಘ್ರಿಯಲಿ ಸೈಗೆಡೆದನು.)
ಕಾಶಿ ವಿಶ್ವನಾಥ: ಅಂಜಬೇಡ. ಏಳು ಭೂರಮಣ. ಘನ ಸತ್ಯವೇ ಜೀವ ಎಂದಿರ್ದ ನಿನ್ನ ಹೊಲೆಯನ ಸೇವೆ ಗುರುಸೇವೆ… ಹೊತ್ತ ಹೊಲೆವೇಷ ಪಾವನ ಪುಣ್ಯ ವೇಷ… ಸುಡಗಾಡ ರಕ್ಷಿಸುವ ಇರವು ತಾ ಯಜ್ಞರಕ್ಷೆಯ ಇರವು… ಅನುದಿನಮ್ ಭುಂಜಿಸಿದ ಶವದ ಶಿರದ ಅಕ್ಕಿಯಲ್ಲದಪೇಯ ಚಾಂದ್ರಾಯಣಮ್… ಪುತ್ರನ ಅಳಿವು ಜನ್ಮ ನಿಕಾಯ ಅಳಿವು… ಅಂಗನಾ ಹನನ ಮಾಯಾ ಹನನ…
(ಎಂದು ಅಭವ ಪರಸುತ್ತ, ಕಣ್ಣಾಲಿ ಜಲವಮ್ ತೊಡೆದು ಸಂತೈಸಿ… ಭಸಿತಮಮ್ ಭಾಳದೊಳಗಿಟ್ಟು ತೆಗೆದಪ್ಪಿ… ಕೌಶಿಕನ ಕರೆದು…)
ಕಾಶಿ ವಿಶ್ವನಾಥ: ಎಲೆ ಮುನಿಪ, ಸುಕುಮಾರನ ತೋಳ ಹಿಡಿದೆತ್ತಿ ತಾ ಬೇಗ.
(ಎಂದು ಎನಲ್ಕೆ, ಮುನಿಪಾಳಕನ್ ವಿಷವೇರಿ ಸತ್ತ ಅರಸುಪುತ್ರನನ್…)
ವಿಶ್ವಾಮಿತ್ರ: ಏಳೇಳು ಲೋಹಿತಾಶ್ವಾಂಕ.
(ಎನೆ… ಬೆಬ್ಬಳಿಸುತ ಎದ್ದನ್. ಏನ್ ಬಣ್ಣಿಸುವೆನು.)
ಕಾಶಿ ವಿಶ್ವನಾಥ: ಅತಿ ಹುಸಿವ ಯತಿ ಹೊಲೆಯ… ಹುಸಿಯದಿಹ ಹೊಲೆಯನ್ ಉನ್ನತ ಯತಿವರನು… ಹುಸಿದು ಮಾಡುವ ಮಹಾಯಜ್ಞ ಶತವು ಎಯ್ದೆ ಪಂಚಪಾತಕ… ಸತ್ಯ ಬೆರಸಿದ ನ್ಯಾಯವದು ಲಿಂಗಾರ್ಚನೆ… ಶ್ರುತಿಮತವಿದು ಎನ್ನಾಜ್ಞೆ… ನಿನ್ನಂತೆ ಸತ್ಯರ್ ಈ ಕ್ಷಿತಿಯೊಳ್ ಇನ್ನಾರುಂಟು ಹೇಳ್.
(ಎಂದು ಪಾರ್ವತೀಪತಿ ಹರಿಶ್ಚಂದ್ರನನ್ ತಲೆದಡವಿ ಬೋಳೈಸಿ ಕೌಶಿಕಂಗೆ ಇಂತು ಎಂದನು.)
ಕಾಶಿ ವಿಶ್ವನಾಥ: ವಿಶ್ವಾಮಿತ್ರ, ನುಡಿಯೊಳ್ ಅನೃತಮ್ ತೋರದಂತೆ ನಿನ್ನಲೆಗೆ ನಿಂದಡೆ, ಮೆಚ್ಚಿ ಮೇಲೇನ ಕೊಡುವೆನೆಂದು ಎಂದೆ… ಅದ ಬೇಗದಿಂದ ಕೊಡು.
ವಿಶ್ವಾಮಿತ್ರ: (ಶಿವನ ಮುಂದೆ ತನ್ನ ಸೋಲನ್ನು ಒಪ್ಪಿಕೊಳ್ಳುತ್ತ) ಆನ್ ಐವತ್ತು ಕೋಟಿ ವರುಷ ಬಿಡದೆ ಮಾಡಿದ ತಪಃಫಲದೊಳ್ ಅರ್ಧವನ್ ಆಂತೆ.
(ಈಗ ಹರಿಶ್ಚಂದ್ರನನ್ನು ಕುರಿತು)
ಕಡುಮುಳಿದು ಕಾಡಿ ನೋಡಿದೆನು… ಮೆಚ್ಚಿದೆನ್… ಇನ್ನು ಹಿಡಿ.
(ಎಂದು ಉಸಿರ್ದು… ಮುನಿಗಳ ದೇವನು ಅರಸಂಗೆ ಫಲವೆಲ್ಲವಮ್ ಕೊಟ್ಟನ್.)
ವಿಶ್ವಾಮಿತ್ರ: ಪೊಡವಿಯ ಒಡೆತನದ ಪಟ್ಟವನ್ ಅಯೋಧ್ಯಾಪುರದ ನಡುವೆ ಕಟ್ಟುವೆನ್… ಏಳು ನಡೆ ರಥವನ್ ಏರು.
(ಎಂದು ಕೌಶಿಕನ್ ಮೃಡ ಸಮಕ್ಷದೊಳು ಎನಲು…)
ಹರಿಶ್ಚಂದ್ರ: ಕಡೆತನಕ ಮುನ್ ಜೀವತವ ಕೊಂಡೆನು. ಒಡೆಯನುಳ್ಳವನ್ ಆನು… ಬರಬಾರದಯ್ಯ…
ನಿಮ್ಮಡಿಗಳಿಗೆ ದಾನವಾಗಿತ್ತ ವಸುಮತಿಯತ್ತಲ್ ಅಡಿಯನ್ ಇಡುವವನಲ್ಲ. ಇದನ್ ಬೆಸಸಬೇಡಿ.
(ಎಂದು ಭೂನಾಥ ಕೈಮುಗಿದನು.)
ವಿಶ್ವಾಮಿತ್ರ: ಎಲೆ ಜನಪ, ಆನ್ ಏಕೆ… ರಾಜ್ಯವೇಕೆ… ಸತ್ಯಸಂಧಾನಮಮ್ ನೋಡಲೆಂದು ಉಳ್ಳುದೆಲ್ಲವ ಕೊಂಡಡೆ… ಏನ್ ಎಂಬನೋ ಎಂದು ಕಾಡಿ ನೋಡಿದೆನೈಸೆ… ಸರ್ವರಾಜ್ಯಮ್ ನಿನ್ನದು. ಕೀನಾಶನನ್ ಕರೆದು ವೀರಬಾಹುಕನಾಗಿ ಭೂನಾಥನನ್ ನಿಲಿಸಿ, ಬೇಡಿದ ಅರ್ಥವ ಕೊಟ್ಟು, ನೀನೆ ತರುಬು ಎಂದು ಕಳುಹಿದೆನೈಸೆ. ಕೃತಕವಲ್ಲ.
(ಎಂದು ನಂಬುಗೆಯಿತ್ತನು.)
ವಸಿಷ್ಠ: ಪೊಡವಿಪನ ವಾಕ್ಯದೊಳು ಹುಸಿಯ ನೀನ್ ಪಿಡಿದೆಯಾದಡೆ… ನಾನು ಮುನಿತನವನ್ ಉಳಿದು… ನರಶಿರದ ಓಡ ಹಿಡಿದು, ಮದ್ಯಪಿಯಾಗಿ ತೆಂಕಮುಖವಹೆನ್ ಎಂದು ದೇವಸಭೆಯೊಳಗೆ ನಾನು ನುಡಿದು ಭಾಷೆಯನಿತ್ತೆ. ನೀನ್ ಎನ್ನ ಭಾಷೆಯಮ್ ನಡಸಿ ರಕ್ಷಿಸಿದೆ. ಸತ್ಯವ ಮೆರೆದೆ.
(ಎಂದು ವಾಸಿಷ್ಠನ್ ತಲೆದಡವಿ ಈಶನ ಸಮಕ್ಷದೊಳು ಅವನಿಪತಿಗೆ ತನ್ನನ್ ಕೊಟ್ಟನ್.)
ಕಾಶಿ ವಿಶ್ವನಾಥ: ಕರುಣದಿಮ್ ಧರ್ಮ ಅರ್ಥ ಕಾಮ ಮೋಕ್ಷಂಗಳಮ್ ಸುರಿದು, ನಿನ್ನಯ ಪುಣ್ಯಕಥೆ ಸರ್ವಲೋಕದೊಳಗೆ ಇರಲಿ. ಅಭವನಿಮ್ ಬೇಕಾದ ವರವ ನೀನ್ ಬೇಡು ಭೂಪಾಲ.
ಹರಿಶ್ಚಂದ್ರ: ಹರೆಯದ ಈ ಕಾಶಿಯೊಳು ನಿನ್ನ ಮಂದಿರದ ಮೇಲೆರಡು ಯೋಜನದೊಳ್ ಎನ್ನಯ ಕೀರ್ತಿಪುರ ಹೇಮ ವಿರಚಿತದೊಳ್ ಇರಬೇಹುದು.
(ಎಂದು ಬೇಡಿದಡೆ, ಅಂದು ಅಗಜೇಶನು ಅದಮ್ ಕೊಟ್ಟನ್. ಹರನ ಸಭೆಯೊಳಗೆ… ಮುರಹರನ ಸಭೆಯೊಳಗೆ… ವಾಗ್ವರನ ಸಭೆಯೊಳಗೆ… ಪವಿಧರನ ಸಭೆಯೊಳಗೆ… ದಿನಕರನ ಸಭೆಯೊಳಗೆ… ಭಾಸುರಶಿಖಿಯ ಸಭೆಯೊಳಗೆ… ಶಶಿಯೊಂದು ಸಭೆಯ ನಡುವೆ… ಪರಮ ಮುನಿಸಭೆಯೊಳಗೆ… ವರನೃಪರ ಸಭೆಯೊಳಗೆ ಧರಣಿಪನ ಕಥನವೇ ಕಥನ; ಮಾತೇ ಮಾತು; ಪರವಿಲ್ಲ… ಬೇರೆ ಅನ್ಯವಾರ್ತೆಗಳು ಹುಗಲಿಲ್ಲ ಎಂಬಾಗಳ್ ಏನ್ ಪೊಗಳ್ವೆನು. ಧರೆಯೊಳು ಹರಿಶ್ಚಂದ್ರ ಚಾರಿತ್ರಮಮ್ ಕೇಳ್ದ ನರರ್ ಏಳು ಜನ್ಮದಿಮ್ ಮಾಡಿರ್ದ ಪಾತಕವು ತರಣಿ ಉದಯದ ಮುಂದೆ ನಿಂದ ತಿಮಿರದ ತೆರದೆ ಹರೆಯುತಿಹುದು. ಏಕೆಂದಡೆ ಹರನೆಂಬುದೇ ಸತ್ಯ… ಸತ್ಯವೆಂಬುದು ಹರನು… ಎರಡಿಲ್ಲವೆಂದು ಶ್ರುತಿ ಸಾರುತಿರಲು, ಅರರೆ… ಆ ವಾಕ್ಯವ ನಿರುತವ ಮಾಡಿ ಮೂಜಗಕೆ ತೋರಿದ ಹರಿಶ್ಚಂದ್ರ ಕಥೆ ಕೇಳ್ದಡೆ… ಅನೃತವರಿಯದ ಹೊಲೆಯನನ್ ನೆನೆಯೆ ಪುಣ್ಯವೆಂದು ಎನೆ ಸೂರ್ಯಕುಲಜ… ಕಲಿ… ದಾನಿ… ಸತ್ಯನ್… ವಸಿಷ್ಠನ ಶಿಷ್ಯನ್… ಅಧಿಕ ಶೈವನ್ ಕಾಶಿಯೊಳ್ ಮೆರೆದ ವೇದಪ್ರಮಾಣ ಪುರುಷ ಘನನೃಪ ಹರಿಶ್ಚಂದ್ರನ್ ಎಂದಡೆ, ಮಹಾಲಿಂಗಭಕ್ತರ ಭಕ್ತನು ಕವಿ ರಾಘವಾಂಕನ್ ಆತನ ಪೊಗಳ್ದು… ಕಾವ್ಯಮುಖದಿಮ್ ಜನ ಬದುಕಬೇಕೆಂದು ಅನಪೇಕ್ಷೆಯಿಂದ ಪೇಳ್ದನ್.)
ತಿರುಳು: ವಿಶ್ವೇಶ್ವರ ಸಾಕ್ಶಾತ್ಕಾರ
ವಿಶ್ವೇಶ್ವರ=ಕಾಶಿ ವಿಶ್ವನಾತ ದೇವರು; ಸಾಕ್ಷಾತ್ಕಾರ=ಕಣ್ಣಿಗೆ ಕಾಣಿಸುವುದು/ಗೋಚರಿಸುವುದು; ಕುಲಜ=ಕುಲದಲ್ಲಿ ಹುಟ್ಟಿರುವವನು/ವಂಶಕ್ಕೆ ಸೇರಿದವನು; ಹೆಂದು=ಕುಗ್ಗು/ಕುಂದು; ತರುಣೇಂದುಧರನ್=ಎಳೆಯ ಚಂದಿರನನ್ನು ಮುಡಿಯಲ್ಲಿ ಮುಡಿದವನು; “ತರುಣೇಂದುಧರನಹ ವಿಶ್ವಪತಿ ಇಂದು ಎನ್ನ ಕುಲಜನ್ ಎನಿಸುವ ಹರಿಶ್ಚಂದ್ರನನ್ ಹೆಂದದ ಚತುರ್ದಶ ಜಗಂಗಳ್ ಅರಿವಂತು ಮೆರೆವ ಸಂಭ್ರಮದ ಸಡಗರವ ನೋಳ್ಪೆನ್” ಎಂದು = “ಎಳೆಯ ಚಂದಿರನನ್ನು ಮುಡಿಯಲ್ಲಿ ಮುಡಿದಿರುವ ಕಾಶಿ ವಿಶ್ವನಾತನು ಈ ದಿನ ನನ್ನ ಕುಲದವನಾದ ಹರಿಶ್ಚಂದ್ರನನ್ನು ಬ್ರಹ್ಮಾಂಡದಲ್ಲಿ ಶಾಶ್ವತವಾಗಿರುವ ಹದಿನಾಲ್ಕು ಲೋಕಗಳು ತಿಳಿಯುವಂತೆ ಮೆರೆಸುವ ಸಂಬ್ರಮದ ಸಡಗರವನ್ನು ನೋಡುತ್ತೇನೆ” ಎಂದುಕೊಂಡು ; ಅಪವಿತ್ರ ತಿಮಿರಪಟಲ ಅಮಿತ್ರನು ಎಂದು ಎನಿಪನ್ ಅಂಬುಜಮಿತ್ರನ್=ಕವಿದಿರುವ ಕತ್ತಲೆಗೆ ಹಗೆಯೆನಿಸಿರುವ ಸೂರ್ಯನು; ಕುಂದದ ಉದ್ದವನ್ ಏರಿ ನಿಂದಿರ್ದನೋ ಎನಿಪ್ಪ ಅಂದದಿಂದ=ಎಂದೆಂದಿಗೂ ಕುಗ್ಗದೆ ಎತ್ತರವಾಗಿ ಉದ್ದಕ್ಕೆ ಹಬ್ಬಿದ್ದ ಬೆಟ್ಟವನ್ನು ಹತ್ತಿ ನಿಂತಿದ್ದಾನೆಯೋ ಎನ್ನಿಸುವ ರೀತಿಯಲ್ಲಿ;
ಉದಯಗಿರಿ ಶಿಖರಕ್ಕೆ ರಾಗದಿಮ್ ಬಂದನ್=ಉದಯಗಿರಿಯ ತುತ್ತತುದಿಗೆ ಒಲವಿನಿಂದ ಬಂದನು; ಸೂರ್ಯೋದಯವನ್ನು ಒಂದು ರೂಪಕವಾಗಿ ಕವಿಯು ಚಿತ್ರಿಸುತ್ತ, ಇಂದು ಹರಿಶ್ಚಂದ್ರನ ಜೀವನಲ್ಲಿ ಒಳಿತನ್ನುಂಟುಮಾಡುವ ಬಹು ದೊಡ್ಡ ಪ್ರಸಂಗವೊಂದು ನಡೆಯುತ್ತದೆ ಎಂಬುದನ್ನು ಸೂಚಿಸುತ್ತಿದ್ದಾನೆ; ಹೆಡಗಯ್ಯ ಬಿಗಿದ ನೇಣಮ್ ಕೊಯ್ದು ಬಿಸುಟು=ಬಲಿಕೊಡುವ ಕಟ್ಟೆಯ ಬಳಿಗೆ ಚಂದ್ರಮತಿಯನ್ನು ಕರೆತಂದ ಹರಿಶ್ಚಂದ್ರನು ಆಕೆಯ ಬೆನ್ನ ಹಿಂದೆ ಸೇರಿಸಿ ಬಿಗಿದಿದ್ದ ಕಯ್ಗಳ ಹಗ್ಗವನ್ನು ಕೊಯ್ದು ಬಿಸಾಡಿ; ನಿಡುದಡದಲ್ಲಿ ಮೂಡ ಮುಂತಾಗಿ ಕುಳ್ಳಿರಿಸಿ=ಎತ್ತರದ ದಿಣ್ಣೆಯ ಮೇಲೆ ಮೂಡಲು ದಿಕ್ಕಿಗೆ ಎದುರಾಗಿ ಕುಳ್ಳಿರಿಸಿ; ಹಿಂದಡದಲ್ಲಿ ಕುಸಿದು ನೀಡಡಿಯಿಟ್ಟು ನಿಂದು=ದಿಣ್ಣೆಯ ಹಿಂದೆ ಹರಿಶ್ಚಂದ್ರನು ತಾನು ತುಸು ಬಗ್ಗಿ… ತನ್ನ ಒಂದು ಪಾದವನ್ನು ಮುಂದಕ್ಕೆ ಇಟ್ಟು ನಿಂತುಕೊಂಡು; ಖಡ್ಗವ ಸೆಳೆದು ಜಡಿದು ನೋಡಿ=ಕತ್ತಿಯನ್ನು ಒರೆಯಿಂದ ಹೊರಸೆಳೆದು ಒಮ್ಮೆ ಜಳಪಿಸಿ ನೋಡಿ; ಹೆಡತಲೆಗೆ ಮೋಹಿ ಕೈಯೆತ್ತಿ=ಚಂದ್ರಮತಿಯ ಹಿಂಬದಿಯ ತಲೆಗೆ ಗುರಿಯಿಡುವಂತೆ ಒಮ್ಮೆ ಕತ್ತಿಯನ್ನು ಅವಳ ಕುತ್ತಿಗೆಯ ಮೇಲಿಟ್ಟು, ಈಗ ಕತ್ತಿಯನ್ನು ಮೇಲೆತ್ತಿ;
ಕಂಧರ ಹರಿಯೆ ಹೊಡೆಯಲ್ ಅನುವಾದೆನ್… ಅನುವಾದೆನ್… ಅನುವಾಗು… ಆಗು=ಕೊರಳು ಕತ್ತರಿಸಿ ಬೀಳುವಂತೆ ಹೊಡೆಯಲು ಸಿದ್ದನಾಗಿದ್ದೇನೆ… ಸಿದ್ದನಾಗಿದ್ದೇನೆ… ಜೀವವನ್ನು ಬಿಡಲು ಸಿದ್ದಳಾಗು… ಆಗು; ಮಡದಿ, ನಿನ್ನ ದೈವವನು ಬಿಡದೆ ನೆನೆ=ಎಲೆ ಹೆಂಗಸೇ… ನಿನ್ನ ದೇವರನ್ನು ಮರೆಯದೆ ನೆನೆದುಕೊ; ಎನ್ನೊಡೆಯನನ್ ಹರಸು… ಹರಸು=ನನ್ನ ಒಡೆಯನಾದ ವೀರಬಾಹುಕನಿಗೆ ಒಳಿತಾಗಲೆಂದು ಹಾರಯಿಸು; ಅಷ್ಟದೇಹಿ=ಶಿವ/ಕಾಶಿ ವಿಶ್ವನಾತ; ಆ ಹೊಯ್ದನ್… ಆ ಹೊಯ್ದನ್… ಎಲೆಲೆ… ಶಿವಶಿವ… ಅಷ್ಟದೇಹಿ… ನೀನೇ ಶರಣು… ಅಬಲೆಯನು ರಕ್ಷಿಸು=ಅದೋ ನೋಡಿ ಹೊಡೆದನು… ಅದೋ ನೋಡಿ ಹೊಡೆದನು… ಎಲೆಲೆ ಶಿವಶಿವ… ಶಿವನೇ ನೀನೇ ಗತಿ. ಚಂದ್ರಮತಿಯನ್ನು ಕಾಪಾಡು; ದುರ್ಮೋಹಿ ಪಾಪಿ ವಿಶ್ವಾಮಿತ್ರ ಇನ್ನಾದಡಮ್ ಸತಿಯ ಕೊಲೆಯಮ್ ನಿಲಿಸಲು ಹೋಹುದೇನ್ ಎಂದು=ಕೆಟ್ಟ ಹಟಸಾದನೆಯಲ್ಲಿ ತೊಡಗಿರುವ ಪಾಪಿ ವಿಶ್ವಾಮಿತ್ರನು ಈಗಲಾದರೂ ಚಂದ್ರಮತಿಯ ಕೊಲೆಯನ್ನು ನಿಲ್ಲಿಸಲು ಹೋಗುವನೇನು ಎಂದು ಹಂಬಲಿಸುತ್ತ; ಓವಿ ಬೇಡಿಕೊಳುತಮ್=ಚಂದ್ರಮತಿಯನ್ನು ಕಾಪಾಡುವಂತೆ ಶಿವನನ್ನು ಪ್ರೀತಿಯಿಂದ ಬೇಡಿಕೊಳ್ಳುತ್ತ; ಹೂಮಳೆ=ಮಳೆಯ ನೀರು ಸುರಿಯುವಂತೆ ಹೂವುಗಳನ್ನು ಮೇಲಿನಿಂದ ಸುರಿಸುವುದು/ಎರಚುವುದು;
ಸುರವ್ಯೂಹಮ್ ಅಂಬರದಲ್ಲಿ ಹೂಮಳೆಗಳಮ್ ಪಿಡಿದು ಮೋಹರಮ್ ಪೆತ್ತು ನೋಡುತ್ತಿರಲು=ದೇವತೆಗಳ ಗುಂಪು ಆಕಾಶದಲ್ಲಿ ಹೂಮಳೆಯನ್ನು ಸುರಿಸಲೆಂದು ಗುಂಪುಗುಂಪಾಗಿ ನೆರೆದು ಸುಡುಗಾಡಿನಲ್ಲಿ ನಡೆಯುತ್ತಿರುವ ಪ್ರಸಂಗವನ್ನು ನೋಡುತ್ತಿರಲು; ಹರಕೆಗಳನ್ ಅವಧರಿಸು ಎಂದಳು=ನಾನು ದೇವರಲ್ಲಿ ಕೇಳಿಕೊಳ್ಳುವ ಬಯಕೆಗಳನ್ನು ಕೇಳು ಎಂದಳು; ಪದ್ಮಾಸನ=ಯೋಗವನ್ನು ಮಾಡುವಾಗ ಕುಳಿತುಕೊಳ್ಳುವ ಒಂದು ಬಗೆ; ಬಲಿದ ಪದ್ಮಾಸನಮ್=ಯೋಗವನ್ನು ಮಾಡುವಾಗ ತಳೆಯುವ ಮನೋಬಲ; ಈಗ ಚಂದ್ರಮತಿಯು ಯೋಗಾಸನವನ್ನು ಹಾಕಲು ಆಗುವುದಿಲ್ಲ. ಏಕೆಂದರೆ ಈಗಾಗಲೇ ಅವಳ ಕೊರಳು ಬಲಿಪೀಟದಲ್ಲಿದೆ; ಮುಗಿದ ಅಕ್ಷಿ=ಮುಚ್ಚಿರುವ ಕಣ್ಣುಗಳು; ಮುಚ್ಚಿದ ಅಂಜಲಿ ಬೆರಸಿ=ಕಯ್ಗಳೆರಡನ್ನು ಜೋಡಿಸಿ; ಗುರುವಸಿಷ್ಠಂಗೆ ಎರಗಿ=ಗುರು ವಸಿಷ್ಟ ರಿಸಿಗೆ ಮನದಲ್ಲಿಯೇ ನಮಿಸಿ;
ಶಿವನ ನಿರ್ಮಲರೂಪ ನೆನೆದು=ಶಿವನ ಪವಿತ್ರವಾದ ರೂಪವನ್ನು ನೆನೆದುಕೊಳ್ಳುತ್ತ; ಮೇಲಮ್ ತಿರುಗಿ ನೋಡಿ=ಆಕಾಶದ ಕಡೆಗೆ ಮೊಗವೆತ್ತಿ ನೋಡುತ್ತ; ಭೂ ಚಂದ್ರ ಅರ್ಕ ತಾರಂಬರಮ್ ಕಲಿ ಹರಿಶ್ಚಂದ್ರರಾಯನ್ ಸತ್ಯವೆರಸಿ ಬಾಳಲಿ… ಮಗನ್ ಮುಕ್ತನಾಗಲಿ… ಮಂತ್ರಿ ನೆನದುದಾಗಲಿ… ರಾಜ್ಯದ ಒಡೆಯ ವಿಶ್ವಾಮಿತ್ರ ನಿತ್ಯನಾಗಲಿ… ಹರಕೆ… ಹೊಡೆ ಎಂದಳು=ಬೂಮಿ ಚಂದ್ರ ಸೂರ್ಯ ನಕ್ಶತ್ರ ಮಂಡಲದಿಂದ ಕೂಡಿರುವ ಆಕಾಶವಿರುವ ತನಕ ಶೂರನಾದ ಹರಿಶ್ಚಂದ್ರ ರಾಜನು ಸತ್ಯದ ನಡೆನುಡಿಯಿಂದ ಕೂಡಿ ಬಾಳಲಿ… ಮಗ ಲೋಹಿತಾಶ್ವನು ಜೀತದ ಸೆರೆಯಿಂದ ಬಿಡುಗಡೆಯನ್ನು ಹೊಂದಲಿ… ಮಂತ್ರಿಯು ರಾಜನ ಮತ್ತು ರಾಜ್ಯದ ಹಿತಕ್ಕಾಗಿ ನೆನೆದುದೆಲ್ಲವೂ ನೆರವೇರಲಿ… ರಾಜ್ಯದ ಒಡೆಯನಾದ ವಿಶ್ವಾಮಿತ್ರನು ಚಿರಂಜೀವಿಯಾಗಿರಲಿ… ದೇವರಲ್ಲಿ ಇದೇ ನನ್ನ ಕೋರಿಕೆ… ಕೊರಳನ್ನು ಕತ್ತರಿಸು ಎಂದಳು; ಹರಕೆಯಮ್ ಕೇಳಿ… ಹವ್ವನೆ ಹಾರಿ… ಬೆರಗಾಗಿ ಮರವಟ್ಟು ನಿಂದು=ಆ ಹೆಂಗಸಿನ ಹರಕೆಯನ್ನು ಕೇಳಿ… ಹರಿಶ್ಚಂದ್ರನು ಬೆಚ್ಚಿಬಿದ್ದು… ಅಚ್ಚರಿಗೊಂಡು ನಿಶ್ಚಲನಾಗಿ ನಿಂತುಕೊಂಡು; ಭಾಪುರೆ=ವ್ಯಕ್ತಿಯ ಮನಸ್ಸು ಅಚ್ಚರಿ ಇಲ್ಲವೇ ಗಾಸಿಗೊಂಡಾಗ ಬಾಯಿಂದ ಹೊರಬೀಳುವ ಉದ್ಗಾರದ ನುಡಿ; ವಿಧಿ=ಇದೊಂದು ನಂಬಿಕೆ. ಹುಟ್ಟಿದಾಗಲೇ ವ್ಯಕ್ತಿಯ ಜೀವನದಲ್ಲಿ ಏನೇನು ಆಗಬೇಕು ಎಂಬುದನ್ನು ದೇವರು ನಿರ್ದರಿಸಿರುತ್ತಾನೆ. ದೇವರ ನಿರ್ದಾರದಂತೆಯೇ ಒಳಿತು ಕೆಡುಕುಗಳೆಲ್ಲವೂ ವ್ಯಕ್ತಿಗೆ ಉಂಟಾಗುತ್ತವೆ. ಅದನ್ನು ತಪ್ಪಿಸಲು ಇಲ್ಲವೇ ತಿದ್ದಲು ಯಾರಿಂದಲೂ ಆಗುವುದಿಲ್ಲವೆಂಬ ಪರಂಪರಾಗತವಾದ ನಂಬಿಕೆಯು ಜನಮನದಲ್ಲಿ ನೆಲೆಯೂರಿದೆ;
ಭಾಪುರೆ… ವಿಧಿಯ ಮುಳಿಸೆ=ತೀವ್ರವಾದ ಮಾನಸಿಕ ಗಾಸಿಗೆ ಒಳಗಾದ ಹರಿಶ್ಚಂದ್ರನು ತನಗೆ ಎದುರಾಗಿ ವಿದಿಯು ಹೂಡುತ್ತಿರುವ ಸಂಚುಗಳನ್ನು ನೋಡಿ “ಬಾಪುರೆ..ವಿದಿಯ ಕೋಪವೇ” ಎಂದು ಸಂಕಟ ಮತ್ತು ವ್ಯಂಗ್ಯದಿಂದ ನುಡಿಯುತ್ತಾನೆ; ಹೋದ ಇರುಳ್ ಎನ್ನ ಸುತನ ದುರ್ಮರಣಮಮ್ ತೋರಿ=ಕಳೆದ ರಾತ್ರಿ ನನ್ನ ಮಗನ ದುರಂತ ಮರಣವನ್ನು ತೋರಿ; ಕೈಯೊಡನೆ ಮತ್ತೆ ಈಗಳ್ ಎನ್ನ ವರಸತಿಯ ತಲೆಯನ್ ಆನ್ ಎನ್ನ ಕೈಯಾರೆ ಪಿಡಿದು ಅರಿವಂತೆ ಮಾಡಿದೆ=ಅದರ ಜತೆಜತೆಗೆ ಮತ್ತೆ ಈಗ ನನ್ನ ಹೆಂಡತಿಯ ತಲೆಯನ್ನು ನಾನೇ ನನ್ನ ಕಯ್ಯಾರೆ ಹಿಡಿದು ಕತ್ತರಿಸುವಂತಹ ಪ್ರಸಂಗವನ್ನು ತಂದೊಡ್ಡಿರುವೆ; ಇದಕ್ಕೆ ನಾನ್ ಇನಿತು ಹೇವರಿಸುವವನಲ್ಲ=ಈ ಕಗ್ಗೊಲೆಯನ್ನು ಮಾಡುವುದಕ್ಕೆ ನಾನು ತುಸುವೂ ಹಿಂಜರಿಯುವವನಲ್ಲ; ಪತಿಯಾಜ್ಞೆ ಉಳಿದಡೆ ಸಾಕು ಎನುತ್ತ ಕೊಲಲ್ ಅನುವಾದನು= “ಈ ಹೆಂಗಸಿನ ತಲೆಯನ್ನು ಕತ್ತರಿಸು” ಎಂದು ಹೇಳಿರುವ ನನ್ನ ಒಡೆಯನಾದ ವೀರಬಾಹುಕನ ಆಜ್ನೆ ನೆರವೇರಿದರೆ ಸಾಕು ಎನ್ನುತ್ತ ಕೊಲ್ಲಲು ಸಿದ್ದನಾದನು; ಮನದ ಶಂಕೆಯನ್ ಅಳಿದು=ಹರಿಶ್ಚಂದ್ರನು ತನ್ನ ಮನದಲ್ಲಿ ಉಂಟಾದ ತೊಳಲಾಟವನ್ನು ಹತ್ತಿಕ್ಕಿಕೊಂಡು;
ಹೊಡೆಯಲ್ ಅನುವಾದ ಭೂಪನ ಭಾವಮನ್ ವಿಶ್ವಾಮಿತ್ರನು ಕಂಡು=ಕೊಲ್ಲಲು ಸಿದ್ದನಾದ ಹರಿಶ್ಚಂದ್ರನ ಅಚಲವಾದ ನಿಲುವನ್ನು ವಿಶ್ವಾಮಿತ್ರನು ನೋಡಿ; ಅಂಬರದೊಳಿದ್ದು=ಆಕಾಶದ ಪ್ರಾಂತ್ಯದಲ್ಲಿ ನಿಂತುಕೊಂಡು; ಕೇಳ್, ಹೊಡೆಯಬೇಡ… ಎನ್ನ ನಂದನೆಯರನ್ ಮದುವೆಯಾದಡೆ… ಸತ್ತ ಮಗನನ್ ಎತ್ತುವೆನ್…ಇವಳ ತಲೆಗಾವೆನು… ಕೊಂಡ ಧನಮಮ್ ವಿನಯದಿಮ್ ಕೊಟ್ಟು, ನಿನ್ನ ಬಂಧನಮೋಕ್ಷಮಮ್ ಮಾಡಿ… ರಾಜ್ಯಮಮ್ ಪೊಗಿಸಿ… ಮುನ್ನಿನ ಪರಿಯಲಿ ಇರಿಸುವೆನ್ ಎಂದನ್= “ಎಲೆ ಹರಿಶ್ಚಂದ್ರನೇ, ನನ್ನ ಮಾತನ್ನು ಕೇಳು… ಕೊಲ್ಲಬೇಡ… ನನ್ನ ಹೆಣ್ಣುಮಕ್ಕಳನ್ನು ಮದುವೆಯಾದರೆ… ಸತ್ತಿರುವ ನಿನ್ನ ಮಗನನ್ನು ಬದುಕಿಸುತ್ತೇನೆ… ನಿನ್ನ ಹೆಂಡತಿಯ ಜೀವವನ್ನು ಉಳಿಸುತ್ತೇನೆ… ನಿನ್ನಿಂದ ವಶಪಡಿಸಿಕೊಂಡಿರುವ ಸಂಪತ್ತೆಲ್ಲವನ್ನೂ ಉದಾರತೆಯಿಂದ ನಿನಗೆ ಕೊಟ್ಟು… ವೀರಬಾಹುಕನ ದಾಸ್ಯದಿಂದ ನಿನ್ನನ್ನು ಬಿಡುಗಡೆ ಮಾಡಿಸಿ… ಅಯೋದ್ಯೆಗೆ ಕರೆದೊಯ್ದು ಪಟ್ಟವನ್ನು ಕಟ್ಟಿ ಮೊದಲಿನಂತೆಯೇ ನಿನ್ನನ್ನು ರಾಜನನ್ನಾಗಿ ಇರಿಸುತ್ತೇನೆ” ಎಂದನು; ತಿರುಗಿ ಮೇಲಮ್ ನೋಡಿ ಕಂಡು=ಹರಿಶ್ಚಂದ್ರನು ತಲೆಯೆತ್ತಿ ಮೇಲೆ ನೋಡಿ ವಿಶ್ವಾಮಿತ್ರನನ್ನು ಕಂಡು;
ಇದೇನ್ ಮುನಿ… ನಿಮ್ಮ ಹಿರಿಯತನಕೆ ಈ ಮಾತು ಯೋಗ್ಯವೇ=ಇದೇನು ಮುನಿಯೇ… ಇಂತಹ ಮಾತುಗಳನ್ನಾಡುತ್ತಿರುವೆ… ನಿಮ್ಮ ಹಿರಿಯತನಕ್ಕೆ ಈ ಮಾತು ಯೋಗ್ಯವೇ… ಇಂತಹ ಮಾತುಗಳು ನಿಮ್ಮ ಬಾಯಿಂದ ಬರಬಾರದು; ಕೇಳ್, ಎನ್ನ ಸಿರಿಪೋದಡೇನು… ರಾಜ್ಯಮ್ ಪೋದಡೇನು… ನಾನ್ ಆರ ಸಾರಿ ಇರ್ದಡೇನು… ವರಪುತ್ರನ ಅಸುವಳಿದು ಪೋದಡೇನ್… ನಾನ್ ಎನ್ನ ತರುಣಿಯನ್ ಕೊಂದಡೇನ್ ಕುಂದೆ=ಕೇಳು… ನನ್ನ ಸಂಪತ್ತು ಹೋದರೇನು… ರಾಜ್ಯ ಹೋದರೇನು… ನಾನು ಯಾರ ಬಳಿ ಇದ್ದರೇನು… ನನ್ನ ಪ್ರೀತಿಯ ಮಗನ ಜೀವ ಹೋಗಿದ್ದರೇನು… ನಾನು ನನ್ನ ಹೆಂಡತಿಯನ್ನು ಕೊಂದರೆ, ಅದು ನನ್ನಿಂದಾದ ತಪ್ಪಾಗುವುದಿಲ್ಲ; ಸತ್ಯವನು ಬಿಟ್ಟಿರನ್ ಎನಿಸಿದಡೆ ಸಾಕು ಎಂದು= “ಹರಿಶ್ಚಂದ್ರನು ಸತ್ಯವನ್ನು ಬಿಟ್ಟು ಬಾಳುವುದಿಲ್ಲ” ಎಂದು ಜನರಿಂದ ಹೇಳಿಸಿಕೊಂಡು ಬಾಳಿದರೆ ಅದೇ ಸಾಕು ಎಂದು ನುಡಿದು; ಎತ್ತಿ ಹಿಡಿದ ಖಡ್ಗವ ಜಡಿಯುತ ಇಂತು ಎಂದನು=ಚಂದ್ರಮತಿಯ ಕೊರಳನ್ನು ಕತ್ತರಿಸಲು ಸಿದ್ದವಾಗಿದ್ದ ಕತ್ತಿಯನ್ನು ಜಳಪಿಸುತ್ತ ಈ ರೀತಿ ನುಡಿದನು; ಇನ್ನೆಗಮ್ ಆನ್ ಇಂದು ತನಕಮ್ ಎನ್ನ ದುಷ್ಕರ್ಮವಶದಿಂದಾದ ಕರ್ಮವೆಂದು ಬಗೆದೆನ್= ಇಲ್ಲಿಯವರೆಗೂ ನಾನು ಇಂದಿನ ತನಕ ನನ್ನ ಜೀವನದಲ್ಲಿ ಉಂಟಾಗುತ್ತಿದ್ದ ಎಲ್ಲ ಕಶ್ಟನಶ್ಟಗಳೆಲ್ಲವೂ ನಾನು ಮಾಡಿದ ಕೆಟ್ಟಕೆಲಸಗಳ ಪರಿಣಾಮವೆಂದು ತಿಳಿದಿದ್ದೆನು;
ಕಡೆಗೆ ನಿನ್ನ ಗೊಡ್ಡಾಟವೇ= ಇದೆಲ್ಲವೂ ನಿನ್ನ ಹಟಸಾದನೆಗಾಗಿ ನೀನು ಹೂಡುತ್ತಿರುವ ಸಂಚು ಮತ್ತು ಕೊಡುತ್ತಿರುವ ಕಾಟ ಎಂಬುದು ಈಗ ಮನವರಿಕೆಯಾಯಿತು; ಹೊಲೆಯನಾದವನ್, ಇನ್ನು ಸತಿಗಿತಿಯ ಕೊಲೆಗೆ ಹೇಸಿ ಬೆನ್ನೀವೆನೇ=ಹೊಲೆಯನಾಗಿರುವ ನಾನು ಇನ್ನು ನನ್ನ ಹೆಂಡತಿಯ ಕೊಲೆಗೆ ಅಸಹ್ಯಪಟ್ಟುಕೊಂಡು ಹಿಂಜರಿಯುತ್ತೇನೆಯೇ; ಸಡಿಫಡ=ತಿರಸ್ಕಾರ ಇಲ್ಲವೇ ಕೋಪವನ್ನು ಸೂಚಿಸುವ ಪದ. ಚೀ… ತೂ… ಎಂಬ ತಿರುಳನ್ನು ಉಳ್ಳ ಪದ; ಸೆಡೆ=ಹೆದರು/ನಡುಗು/ಕುಗ್ಗು; ಇದಮ್ ತೋರಿ ಸಿಕ್ಕಿಸಬಂದ ಗನ್ನಗತಕಕ್ಕೆ ಸೆಡೆವೆನೆ. ಸಡಿಫಡ ಎನುತ ಆರ್ದು=ಹೆಂಡತಿ ಮತ್ತು ಮಗನ ಜೀವದ ಉಳಿವು ಹಾಗೂ ರಾಜ್ಯದ ಸಂಪತ್ತಿನ ಆಸೆಯನ್ನು ನನ್ನ ಮುಂದೆ ಒಡ್ಡಿ, ನನ್ನನ್ನು ಸುಳ್ಳಿನ ಬಲೆಯಲ್ಲಿ ಸಿಲುಕಿಸಲು ನೀನು ಮಾಡುತ್ತಿರುವ ವಂಚನೆಗೆ ಹೆದರುತ್ತೇನೆಯೇ… ಸಡಿಪಡ ಎನ್ನುತ್ತ ಅಬ್ಬರಿಸಿ; ಎಲೆಲೆ… ಶಿವಶಿವ… ಮಹಾದೇವ… ನನ್ನಿಕಾರನ್ ವಧುವನ್… ಹೊಡೆದನ್… ಹೊಡೆದನು=ಎಲೆಲೆ… ಶಿವಶಿವ… ಮಹಾದೇವ… ಸತ್ಯವಂತನಾದ ಹರಿಶ್ಚಂದ್ರನು ಕತ್ತಿಯಿಂದ ಚಂದ್ರಮತಿಯ ಕೊರಳು ಕತ್ತರಿಸಿ ಬೀಳುವಂತೆ ಹೊಡೆದನು;
ಮಡದಿಯ ಎಡೆಗೊರಳ ನಡುವೆ ಅಡಸಿ ಹೊಡೆದ ಕಡುಗದ ಬಾಯಕಡೆಯ ಹೊಡೆಗಳನ್ ಆಂತು= ಚಂದ್ರಮತಿಯ ಕೊರಳು ತುಂಡಾಗಿ ಬೀಳುವಂತೆ ಕೊರಳಿನ ಜಾಗದ ನಡುವೆ ಮೇಲಿನಿಂದ ಹೊಡೆದ ಕತ್ತಿಯ ಅಲಗಿನ ಹೊಡೆತವನ್ನು ದೇವರಾದ ಕಾಶಿಪತಿಯು ತಡೆಹಿಡಿದು; ಕೆಂಜಡೆಯ=ಕೆಂಪಾದ ಜಡೆಯ; ಶಶಿಕಳೆಯ=ಚಂದ್ರಕಾಂತಿಯ; ಸುರನದಿಯ=ಗಂಗಾ ನದಿಯ; ಬಿಸಿಗಣ್ಣ=ಬೆಂಕಿಯನ್ನು ಕಾರುವ ಕಣ್ಣಿನ; ಫಣಿಕುಂಡಲದ=ಹಾವನ್ನು ಕೊರಳಿನಲ್ಲಿ ಒಡವೆಯಾಗಿ ಹಾಕಿಕೊಂಡಿರುವ; ಪಂಚಮುಖದ=ಅಯ್ದು ಮೊಗಗಳನ್ನುಳ್ಳ; ಎಡದ ಗಿರಿಜೆಯ=ಎಡದ ಕಡೆಗೆ ಗಿರಿಜೆಯಿರುವ ; ತಳಿತ ದಶಭುಜದ=ಹರಡಿಕೊಂಡ ಹತ್ತುಬುಜಗಳ; ಪುಲಿದೊಗಲಿನ ಉಡಿಗೆಯ=ಹುಲಿಯ ತೊಗಲಿನ ಉಡುಗೆಯ; ಮಹಾವಿಷ್ಣುನಯನವೇರಿಸಿದ=ಮಹಾವಿಶ್ಣುವಿನ ಕಣ್ಣುಗಳನ್ನು ಹೊಂದಿರುವ; ಮೆಲ್ಲಡಿಯ ಕಾಶೀರಮಣ ವಿಶ್ವನಾಥನ್ ಮೂಡಿದನು=ಮ್ರುದುವಾದ ಪಾದಗಳನ್ನುಳ್ಳ ಕಾಶಿನಗರದ ಒಡೆಯನಾದ ವಿಶ್ವನಾತನು ಕತ್ತಿಯಂಚಿನ ಎಡೆಯಲ್ಲಿ ಮೂಡಿಬಂದು ಚಂದ್ರಮತಿಯನ್ನು ಉಳಿಸಿದನು; ಸುರರ ನೆರವಿ ಜಯಜಯ ಎನುತಿರೆ=ದೇವತೆಗಳ ಸಮೂಹ ಜಯ ಜಯ ಎನ್ನುತ್ತಿರಲು;
ಅಪ್ರತಿಮದೇವಾಧಿದೇವ ಪಂಪಾವಿರೂಪಾಕ್ಷನೆಡೆಗೆ=ಜಗತ್ತಿನಲ್ಲಿಯೇ ಎಲ್ಲರಿಗಿಂತ ಮಿಗಿಲಾದ ಮಹಾದೇವ ಪಂಪಾವಿರೂಪಾಕ್ಶನಿರುವ ಜಾಗಕ್ಕೆ; ಉತ್ತರ ಇಂಡಿಯಾದ ಕಾಶಿನಗರದಲ್ಲಿರುವ ವಿಶ್ವನಾತ ಮತ್ತು ದಕ್ಶಿಣ ಇಂಡಿಯಾದಲ್ಲಿರುವ ಪಂಪಾಕ್ಶ್ರೇತ್ರದಲ್ಲಿರುವ ವಿರೂಪಾಕ್ಶ ದೇವರು ಬೇರೆ ಬೇರೆಯಲ್ಲ. ಶಿವನಿಗೆ ಇರುವ ಎರಡು ಹೆಸರುಗಳು; ಮುರಹರನ್ ಬಂದನ್=ಮುರನೆಂಬ ರಕ್ಕಸನನ್ನು ಕೊಂದ ವಿಶ್ಣು ಬಂದನು; ಅಬ್ಜಾಸನನ್ ಬಂದನ್=ತಾವರೆಯ ಹೂವನ್ನು ಪೀಟವನ್ನಾಗುಳ್ಳ ಬ್ರಹ್ಮ ಬಂದನು; ಅಮರರ ವರನ್ ಬಂದನ್=ದೇವತೆಗಳ ಒಡೆಯನಾದ ದೇವೇಂದ್ರ ಬಂದನು; ಅಗಜಾಪಿತನ್ ಬಂದನ್=ಪಾರ್‍ವತಿಯ ತಂದೆಯಾದ ಪರ್ವತರಾಜ ಬಂದನು; ಈಶ್ವರಸುತನ್ ಬಂದನ್=ಈಶ್ವರನ ಮಗನಾದ ಶಣ್ಮುಕ ಸ್ವಾಮಿ ಬಂದನು;ಈರಾರು ರವಿಗಳು ಬಂದರ್=ಹನ್ನೆರಡು ಮಂದಿ ಸೂರ್‍ಯರು ಬಂದರು; ಇಕ್ಷು ಕೋದಂಡ ಬಂದ=ಕಬ್ಬನ್ನು ಬಿಲ್ಲನ್ನಾಗಿ ಹೊಂದಿರುವ ಮನ್ಮತ ಬಂದನು; ಸುರುಚಿರ ನವಗ್ರಹಂಗಳು ಬಂದರ್= ಪ್ರಕಾಶಮಾನವಾದ ತೇಜಸ್ಸಿನಿಂದ ಬೆಳಗುವ ಒಂಬತ್ತು ಗ್ರಹಗಳಾದ ಸೂರ್‍ಯ/ಸೋಮ/ಮಂಗಳ/ಬುದ/ಗುರು/ಶುಕ್ರ/ಶನಿ/ರಾಹು/ಕೇತು ಬಂದರು; ಎಯ್ದುವ ಅವಸರದೊಳ್ ಅವರ್ ಇವರ್ ಎನ್ನಲೇಕೆ=ಕಾಶಿನಗರದ ಸುಡುಗಾಡಿನ ನೆಲೆಗೆ ಬರುತ್ತಿರುವ ಸಮಯದಲ್ಲಿ ಅವರು ಬಂದರು… ಇವರು ಬಂದರು ಎನ್ನುವುದೇಕೆ; ಔಷಧ=ರೋಗವನ್ನು ಗುಣಪಡಿಸುವ ಮದ್ದು;
ಇನ್ನು ಸರ್ವದೇವರು ಬಂದರ್=ಇರುವ ಎಲ್ಲಾ ದೇವರು ಬಂದರು; ಕುಡಿದ ಔಷಧಮ್ ಬಾಯ್ಗೆ ನಿಗ್ರಹಮ್ ಮಾಡಿ, ತಾಳ್ದ ಒಡಲಿಂಗೆ ಸುಖವನ್ ಈವಂತೆ=ಬೇನೆ ಬಂದಾಗ ಕುಡಿದ ಮದ್ದು ನಾಲಿಗೆಗೆ ಕಹಿಯನ್ನುಂಟುಮಾಡಿದರೂ, ಒಳಸೇರಿದ ನಂತರ ದೇಹದಲ್ಲಿನ ರೋಗವನ್ನು ಗುಣಪಡಿಸಿ ವ್ಯಕ್ತಿಗೆ ಒಳಿತನ್ನುಂಟುಮಾಡುವಂತೆ; ಲೋಕದ ಕಣ್ಗೆ ಕಡುಮುಳಿದರಂತೆ ತೋರಿಸಿ=ಲೋಕದಲ್ಲಿ ಜನರ ಕಣ್ಣಿಗೆ ಬಹಳ ಕೋಪಿಸಿಕೊಂಡು ಜಿದ್ದಾಜಿದ್ದಿ ಹೋರಾಟ ಮಾಡುವವರಂತೆ ಕಾಣಿಸಿಕೊಂಡು;ಸತ್ಯಶುದ್ಧವಪ್ಪನ್ನೆಗಮ್… ಕಾಡಿ… ನೋಡಿ=ಸತ್ಯದ ನಡೆನುಡಿಯು ಪರಿಪೂರ್‍ಣವಾಗಿ ಕಂಡುಬರುವ ತನಕ ಬಹುಬಗೆಯ ಕಾಟಗಳನ್ನು ಕೊಟ್ಟು, ಪರೀಕ್ಶಿಸಿ ನೋಡಿ; ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ ಮೃಡನನ್ ಎಳತಂದಿತ್ತು=ಕೊನೆಯಲ್ಲಿ ಹರಿಶ್ಚಂದ್ರರಾಜನ ಬಳಿಗೆ ದೇವಗಣಗಳ ಜತೆಗೂಡಿ ಶಿವನನ್ನು ಕರೆತಂದು ಕಾಣಿಸಿ; ಮೂಜಗದ ಕಡೆಗೆ ಕೀರ್ತಿಯಮ್ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ ವಸಿಷ್ಠ ಸಹಿತ ಬಂದನು=ಮೂರು ಜಗದ ಉದ್ದಗಲದಲ್ಲಿಯೂ ಹರಿಶ್ಚಂದ್ರನು ಸತ್ಯವಂತನೆಂಬ ಕೀರ್‍ತಿಯು ಹರಡುವಂತೆ ಮಾಡಿದ ಉತ್ತಮ ಮುನಿಯಾದ ವಿಶ್ವಾಮಿತ್ರನು ವಸಿಷ್ಟ ರಿಸಿಗಳ ಜತೆಗೂಡಿ ಸುಡುಗಾಡಿಗೆ ಬಂದನು;
ಆಗ ಹರಿಶ್ಚಂದ್ರನು ಹಿಂದಿನದೆಲ್ಲವನ್ನು ನೆನದು= ಆಗ ಹರಿಶ್ಚಂದ್ರನು… ತನ್ನ ಕಣ್ಣ ಮುಂದೆ ಕಾಶಿ ವಿಶ್ವನಾತ… ತನ್ನ ಸುತ್ತಲೂ ದೇವಾದಿದೇವತೆಗಳೆಲ್ಲರೂ… ವಿಶ್ವಾಮಿತ್ರ ಮುನಿ ಮತ್ತು ಗುರು ವಸಿಷ್ಟರು ಬಂದು ನೆರೆದಿರುವುದನ್ನು ನೋಡಿ, ಈ ಹಿಂದೆ ನಡೆದ ಪ್ರಸಂಗಗಳೆಲ್ಲವನ್ನೂ ನೆನಪಿಸಿಕೊಂಡು; ಚಾಂಡಾಲ ಕಿಂಕರನಾಗಿ, ಹೊಲೆವೇಷವನು ಹೊತ್ತು, ಸುಡುಗಾಡ ಕಾದ ಶವಶಿರದ ಅಕ್ಕಿಯನು ಹೇಸದೆ ಉಂಡು ಜೀವಿಸುವ, ವರಪುತ್ರನ್ ಅಳಿದುದನು ಕಣ್ಣಾರೆ ಕಂಡು, ಘನಪತಿವ್ರತೆಯಪ್ಪ ನಿಜಸತಿಯ ಕೊಂದ ನೀಚನು ಮೂರ್ಖನ್ ಆನ್. ಎನ್ನ ಠಾವಿಂಗೆ ಇದೇಕೆ ಪಾವನಮೂರ್ತಿ ನೀವು ಬಿಜಯಮ್ ಗೆಯ್ದಿರಿ ಎಂದು ಅಭವನ ಅಂಘ್ರಿಯಲಿ ಸೈಗೆಡೆದನು= ಹರಿಶ್ಚಂದ್ರನು ತನ್ನನ್ನು ತಾನು ಹೀಗಳೆದುಕೊಳ್ಳುತ್ತ “ಚಂಡಾಲನ ದಾಸನಾಗಿ… ಹೊಲೆಯನ ಉಡುಗೆ ತೊಡುಗೆಯನ್ನು ತೊಟ್ಟು, ಸುಡುಗಾಡನ್ನು ಕಾಯುತ್ತ… ಹೆಣದ ತಲೆಯ ಅಕ್ಕಿಯನ್ನು ಅಸಹ್ಯಪಟ್ಟುಕೊಳ್ಳದೆ ಉಂಡು ಜೀವಿಸುತ್ತ… ಉತ್ತಮನಾದ ಮಗನು ಸಾವನ್ನಪ್ಪಿದ್ದನ್ನು ಕಣ್ಣಾರೆ ಕಂಡು… ಮಹಾಪತಿವ್ರತೆಯಾದ ಹೆಂಡತಿಯನ್ನು ಕೊಂದ ನೀಚನೂ ತಿಳಿಗೇಡಿಯೂ ನಾನಾಗಿದ್ದೇನೆ. ನನ್ನಂತಹ ಕೀಳು ವ್ಯಕ್ತಿಯಿರುವ ಕಡೆಗೆ ಇದೇಕೆ ಪವಿತ್ರರೂಪಿಯಾದ ನೀವು ಬಂದಿರಿ” ಎಂದು ನುಡಿದು ದೇವರಾದ ವಿಶ್ವನಾತನ ಪಾದದ ಮೇಲೆ ದಿಂಡುರುಳುತ್ತಾನೆ; ಹರಿಶ್ಚಂದ್ರನು ತನ್ನನ್ನು ತಾನು ಹೀಗಳೆದುಕೊಂಡು ಮಯ್ ಮನದಲ್ಲಿ ಕುಗ್ಗಿಹೋಗಿರುವುದನ್ನು ಗುರುತಿಸಿದ ಕಾಶಿಪತಿಯು ಹರಿಶ್ಚಂದ್ರನ ಮನದಲ್ಲಿ ಕವಿದಿದ್ದ ಕೀಳರಿಮೆಯನ್ನು ಹೋಗಲಾಡಿಸುವಂತೆ ಕೆಲವು ಸಂಗತಿಗಳನ್ನು ಹರಿಶ್ಚಂದ್ರನಿಗೆ ಮನದಟ್ಟು ಮಾಡುತ್ತಾನೆ;
ಅಂಜಬೇಡ. ಏಳು ಭೂರಮಣ=ತನ್ನ ಪಾದಗಳ ಮೇಲೆ ದಿಂಡುರುಳಿದ್ದ ಹರಿಶ್ಚಂದ್ರನನ್ನು ಕಾಶಿಪತಿಯು ಮೇಲೆತ್ತುತ್ತ “ಹೆದರಬೇಡ… ಮೇಲೇಳು ಹರಿಶ್ಚಂದ್ರ”; ಘನ ಸತ್ಯವೇ ಜೀವ ಎಂದಿರ್ದ ನಿನ್ನ ಹೊಲೆಯನ ಸೇವೆ ಗುರುಸೇವೆ=ದೊಡ್ಡದಾಗಿರುವ ಸತ್ಯವನ್ನೇ ನಿನ್ನ ಜೀವವೆಂದು ತಿಳಿದು ಸುಡುಗಾಡನ್ನು ಕಾಯುತ್ತಿರುವ ನಿನ್ನ ಹೊಲೆಯನ ಸೇವೆಯೇ ಗುರುಸೇವೆ; ಹೊತ್ತ ಹೊಲೆವೇಷ ಪಾವನ ಪುಣ್ಯ ವೇಷ=ನೀನು ತೊಟ್ಟಿರುವ ಹೊಲೆಯನ ಉಡುಗೆ ತೊಡುಗೆಯೇ ಪವಿತ್ರವಾದ ಪುಣ್ಯದ ವೇಶ; ಸುಡಗಾಡ ರಕ್ಷಿಸುವ ಇರವು ತಾ ಯಜ್ಞರಕ್ಷೆಯ ಇರವು=ಸುಡುಗಾಡನ್ನು ಕಾಯುತ್ತಿರುವ ನಿನ್ನ ಕೆಲಸವು ಯಾಗವನ್ನು ಕಾಪಾಡುತ್ತಿರುವ ಕಾಯಕಕ್ಕೆ ಸಮನಾಗಿದೆ; ಅಪೇಯ=ಕುಡಿಯಬಾರದ; ಚಾಂದ್ರಾಯಣ=ಇದೊಂದು ವ್ರತ/ನೋಂಪಿ/ಆಚರಣೆ. ಹುಣ್ಣಿಮೆಯ ದಿನಗಳಲ್ಲಿ ಚಂದ್ರನ ಬೆಳವಣಿಗೆಗೆ ತಕ್ಕಂತೆ ದಿನಕ್ಕೆ ಒಂದೊಂದು ತುತ್ತು ಅನ್ನವನ್ನು ಹೆಚ್ಚಿಸುತ್ತ ಉಣ್ಣುವುದು. ಅಮವಾಸ್ಯೆಯ ದಿನಗಳಲ್ಲಿ ಚಂದ್ರನ ಕುಗ್ಗುವಿಕೆಗೆ ತಕ್ಕಂತೆ ದಿನಕ್ಕೆ ಒಂದೊಂದು ತುತ್ತು ಅನ್ನವನ್ನು ಕಡಿಮೆಯಾಗು ಉಣ್ಣುವುದು; ಅಪೇಯ ಚಾಂದ್ರಾಯಣ=ಹುಣ್ಣಿಮೆ ಮತ್ತು ಅಮವಾಸ್ಯೆಯ ಕಾಲದಲ್ಲಿ ನಿಯಮಕ್ಕೆ ತಕ್ಕಂತೆ ಊಟಮಾಡುವ ಮೂಲಕ ಆಚರಿಸುವ ದೇವತಾ ಆಚರಣೆ;
ಅನುದಿನಮ್ ಭುಂಜಿಸಿದ ಶವದ ಶಿರದ ಅಕ್ಕಿಯಲ್ಲ. ಅದು ಅಪೇಯ ಚಾಂದ್ರಾಯಣಮ್= ಪ್ರತಿದಿನವೂ ನೀನು ಊಟ ಮಾಡಿದುದು ಶವಶಿರದ ಅಕ್ಕಿಯಲ್ಲ. ಅದು ಚಂದ್ರಾಯಣವೆಂಬ ಒಂದು ವ್ರತ; ಪುತ್ರನ ಅಳಿವು ಜನ್ಮ ನಿಕಾಯದ ಅಳಿವು=ನಿನ್ನ ಮಗನ ಸಾವು ಮತ್ತೆ ಮತ್ತೆ ಹುಟ್ಟು ಸಾವಿನ ಸುಳಿಯಿಂದ ನೀನು ಪಾರಾಗಿರುವುದನ್ನು ಸೂಚಿಸುತ್ತದೆ; ಅಂಗನಾ ಹನನ ಮಾಯಾ ಹನನ ಎಂದು ಅಭವ ಪರಸುತ್ತ=ಚಂದ್ರಮತಿಯನ್ನು ಕೊಲ್ಲಲು ನೀನು ಕತ್ತಿಯಿಂದ ಹೊಡೆದದ್ದು, ನಿನ್ನೊಳಗಿನ ಮೋಹವನ್ನು ನಾಶಗೊಳಿಸಿದಂತಾಗಿದೆ ಎಂದು ಕಾಶಿಪತಿಯು ಹರಿಶ್ಚಂದ್ರನನ್ನು ಹರಸುತ್ತ; ಕಣ್ಣಾಲಿ ಜಲವಮ್ ತೊಡೆದು ಸಂತೈಸಿ=ಹರಿಶ್ಚಂದ್ರನ ಕಣ್ಣೀರನ್ನು ಒರೆಸಿ ಸಮಾದಾನಪಡಿಸುತ್ತ; ಭಸಿತಮಮ್ ಭಾಳದೊಳಗಿಟ್ಟು ತೆಗೆದಪ್ಪಿ=ವಿಬೂತಿಯನ್ನು ಹರಿಶ್ಚಂದ್ರನ ಹಣೆಗೆ ಬಳಿದು, ಅವನನ್ನು ತಬ್ಬಿಕೊಂಡು; ಕೌಶಿಕನ ಕರೆದು=ವಿಶ್ವಾಮಿತ್ರನನ್ನು ತನ್ನ ಮುಂದಕ್ಕೆ ಕರೆದು ಕಾಶಿಪತಿಯು ಈ ರೀತಿ ಹೇಳುತ್ತಾನೆ; ಎಲೆ ಮುನಿಪ, ಸುಕುಮಾರನ ತೋಳ ಹಿಡಿದೆತ್ತಿ ತಾ ಬೇಗ ಎಂದು ಎನಲ್ಕೆ=ವಿಶ್ವಾಮಿತ್ರ ಮುನಿಯೇ , ಲೋಹಿತಾಶ್ವನ ತೋಳನ್ನು ಹಿಡಿದೆತ್ತಿ ಕರೆದುಕೊಂಡು ಬೇಗ ಬಾ ಎಂದು ಹೇಳಲು;
ಮುನಿಪಾಳಕನ್ ವಿಷವೇರಿ ಸತ್ತ ಅರಸುಪುತ್ರನನ್ “ಏಳೇಳು ಲೋಹಿತಾಶ್ವಾಂಕ” ಎನೆ ಬೆಬ್ಬಳಿಸುತ ಎದ್ದನ್. ಏನ್ ಬಣ್ಣಿಸುವೆನು=ಮುನಿಗಳ ಒಡೆಯನಂತಿರುವ ವಿಶ್ವಾಮಿತ್ರನು ಹಾವು ಕಚ್ಚಿ ವಿಶವೇರಿ ಸತ್ತಿದ್ದ ಲೋಹಿತಾಶ್ವನ ಹೆಣದ ಬಳಿಗೆ ಬಂದು “ಎದ್ದೇಳು ಕೀರ್‍ತಿವಂತನಾದ ಲೋಹಿತಾಶ್ವ” ಎನ್ನಲು, ಬೆರಗುಗೊಳಿಸುವಂತೆ ಮೇಲೆದ್ದನು; ಅದನ್ನು ಏನೆಂದು ತಾನೆ ಬಣ್ಣಿಸಲಿ ಎಂದು ಕವಿಯು ಉದ್ಗರಿಸಿದ್ದಾನೆ; ಈಗ ಮತ್ತೆ ಕಾಶಿಪತಿಯು “ಯಾರು ಯತಿ… ಯಾರು ಹೊಲೆಯ” ಎಂಬುದನ್ನು ಒಕ್ಕಣೆಮಾಡಲು ತೊಡಗುತ್ತಾನೆ;
ಹುಸಿ=ಸುಳ್ಳು; ಅತಿ ಹುಸಿವ ಯತಿ ಹೊಲೆಯ= ಅತಿಯಾಗಿ ಸುಳ್ಳಾಡುವ ಯತಿಯು ಹೊಲೆಯ; ಹುಸಿಯದಿಹ ಹೊಲೆಯನ್ ಉನ್ನತ ಯತಿವರನು=ಸುಳ್ಳನ್ನಾಡದ ಹೊಲೆಯನು ಉತ್ತಮನಾದ ಯತಿ; ಪಂಚಪಾತಕ=ಅಯ್ದು ಬಗೆಯ ಕೆಟ್ಟ ಕೆಲಸಗಳು. 1. ಬ್ರಾಹ್ಮಣನನ್ನು ಕೊಲ್ಲುವುದು. 2.ಹೆಂಡ ಕುಡಿಯುವುದು. 3. ಚಿನ್ನವನ್ನು ಕದಿಯುವುದು. 4. ಗುರುವಿನ ಹೆಂಡತಿಯನ್ನು ಕೂಡುವುದು. 5. ಈ ನಾಲ್ಕು ಬಗೆಯ ಕೆಟ್ಟ ಕೆಲಸವನ್ನು ಮಾಡಿದವರ ಜತೆಗೂಡುವುದು;
ಹುಸಿದು ಮಾಡುವ ಮಹಾಯಜ್ಞ ಶತವು ಎಯ್ದೆ ಪಂಚಪಾತಕ=ಸುಳ್ಳನ್ನಾಡಿ ಮಾಡುವ ನೂರು ಯಾಗಗಳು ಎಲ್ಲ ರೀತಿಯಿಂದಲೂ ಅಯ್ದು ಬಗೆಯ ಪಾಪಗಳಿಗೆ ಸಮ; ಸತ್ಯ ಬೆರಸಿದ ನ್ಯಾಯವದು ಲಿಂಗಾರ್ಚನೆ=ಸತ್ಯದಿಂದ ಕೂಡಿದ ನ್ಯಾಯವೇ ಲಿಂಗಕ್ಕೆ ಮಾಡುವ ಪೂಜೆ; ಶ್ರುತಿಮತವಿದು..ಎನ್ನಾಜ್ಞೆ=ಇದು ವೇದಗಳಲ್ಲಿ ಹೇಳಿರುವ ವಿಚಾರ. ಇದರಂತೆಯೇ ಎಲ್ಲರೂ ಬಾಳಬೇಕೆಂಬುದು ನನ್ನ ಆಜ್ನೆ; ನಿನ್ನಂತೆ ಸತ್ಯರ್ ಈ ಕ್ಷಿತಿಯೊಳ್ ಇನ್ನಾರುಂಟು ಹೇಳ್ ಎಂದು ಪಾರ್ವತೀಪತಿ ಹರಿಶ್ಚಂದ್ರನನ್ ತಲೆದಡವಿ ಬೋಳೈಸಿ ಕೌಶಿಕಂಗೆ ಇಂತು ಎಂದನು=ನಿನ್ನ ಹಾಗೆ ಸತ್ಯವಂತರು ಈ ಬೂಮಂಡಲದಲ್ಲಿ ಇನ್ನಾರಿದ್ದಾರೆ ಹೇಳು ಎಂದು ಪಾರ್‍ವತಿಯ ಗಂಡನಾದ ವಿಶ್ವನಾತನು ಹರಿಶ್ಚಂದ್ರನ ತಲೆಯನ್ನು ನೇವರಿಸಿ ಸಂತಯಿಸಿ, ವಿಶ್ವಾಮಿತ್ರನನ್ನು ಕುರಿತ ಮತ್ತೆ ಈ ರೀತಿ ಹೇಳಿದನು; ನಿನ್ನ+ಅಲೆ; ಅಲೆ=ಹಿಂಸೆ/ಕಾಟ/ತೊಂದರೆ; ವಿಶ್ವಾಮಿತ್ರ, ನುಡಿಯೊಳ್ ಅನೃತಮ್ ತೋರದಂತೆ ನಿನ್ನಲೆಗೆ ನಿಂದಡೆ, ಮೆಚ್ಚಿ ಮೇಲೇನ ಕೊಡುವೆನೆಂದು ಎಂದೆ… ಅದ ಬೇಗದಿಂದ ಕೊಡು=ವಿಶ್ವಾಮಿತ್ರ,ಅಂದು ದೇವೇಂದ್ರನ ಒಡ್ಡೋಲಗದಲ್ಲಿ ನಿನಗೂ ವಸಿಷ್ಟ ಮುನಿಗೂ ಹರಿಶ್ಚಂದ್ರನ ವಿಚಾರದಲ್ಲಿ ವಾಗ್ವಾದ ನಡೆದಾಗ “ಹರಿಶ್ಚಂದ್ರನು ಆಡುವ ಮಾತಿನಲ್ಲಿ ಸುಳ್ಳು ಕಂಡುಬರದಂತೆ ನಿನ್ನ ಕಾಟಕ್ಕೆ ಮಣಿಯದೆ ಸತ್ಯವಂತನಾಗಿಯೇ ಉಳಿದುಕೊಂಡರೆ, ಮೆಚ್ಚಿ ಏನನ್ನು ಕೊಡುವೆನು” ಎಂದು ಹೇಳಿದ್ದೆ… ಹರಿಶ್ಚಂದ್ರನಿಗೆ ಅದನ್ನು ಬೇಗ ಕೊಡು; ಆನ್ ಐವತ್ತು ಕೋಟಿ ವರುಷ ಬಿಡದೆ ಮಾಡಿದ ತಪಃಫಲದೊಳ್ ಅರ್ಧವನ್ ಆಂತೆ=ಕಾಶಿಪತಿಯೇ, ನಾನು ಅಯ್ವತ್ತು ಕೋಟಿ ವರುಶದಲ್ಲಿ ನಿರಂತರವಾಗಿ ಮಾಡಿದ ತಪಸ್ಸಿನ ಪಲದಲ್ಲಿ ಅರ್‍ದವನ್ನು ನಾನಿಟ್ಟುಕೊಂಡು, ಇನ್ನುಳಿದ ಅರ್‍ದವನ್ನು ಹರಿಶ್ಚಂದ್ರನಿಗೆ ಕೊಡುತ್ತಿದ್ದೇನೆ;
ಕಡುಮುಳಿದು ಕಾಡಿ ನೋಡಿದೆನು… ಮೆಚ್ಚಿದೆನ್… ಇನ್ನು ಹಿಡಿ ಎಂದು ಉಸಿರ್ದು… ಮುನಿಗಳ ದೇವನು ಅರಸಂಗೆ ಫಲವೆಲ್ಲವಮ್ ಕೊಟ್ಟನ್=ಹರಿಶ್ಚಂದ್ರನ ಬಳಿಗೆ ಬಂದು “ನಿನ್ನ ಬಗ್ಗೆ ಬಹಳ ಕೋಪಿಸಿಕೊಂಡು ನಿನ್ನನ್ನು ನಾನಾ ಬಗೆಗಳಲ್ಲಿ ಕಾಡಿ ನೋಡಿದೆನು… ನೀನು ಯಾವುದಕ್ಕೂ ಅಂಜದೆ ಅಳುಕದೆ ಸುಳ್ಳನ್ನಾಡದೆ ಸತ್ಯವಂತನಾಗಿಯೇ ಬಾಳಿದೆ. ನಿನ್ನ ಸತ್ಯದ ನಡೆನುಡಿಯನ್ನು ಮೆಚ್ಚಿದ್ದೇನೆ, ಇನ್ನು ತೆಗೆದುಕೊ” ಎಂದು ಹೇಳಿ ಮುನಿಗಳ ಒಡೆಯನಾದ ವಿಶ್ವಾಮಿತ್ರನು ಹರಿಶ್ಚಂದ್ರನಿಗೆ ತನ್ನ ತಪಸ್ಸಿನ ಅರ್‍ದ ಪಲವನ್ನು ಕೊಟ್ಟನು; ಮತ್ತೆ ತನ್ನ ಮಾತನ್ನು ಮುಂದುವರಿಸಿ ಹರಿಶ್ಚಂದ್ರನಿಗೆ ಈ ರೀತಿ ಹೇಳುತ್ತಾನೆ; ಪೊಡವಿಯ ಒಡೆತನದ ಪಟ್ಟವನ್ ಅಯೋಧ್ಯಾಪುರದ ನಡುವೆ ಕಟ್ಟುವೆನ್… ಏಳು ನಡೆ ರಥವನ್ ಏರು ಎಂದು ಕೌಶಿಕನ್ ಮೃಡ ಸಮಕ್ಷದೊಳು ಎನಲು= “ಬೂಮಂಡಲದ ಒಡೆತನದ ರಾಜಪಟ್ಟವನ್ನು ಅಯೋದ್ಯಾಪುರದ ಜನರ ಮುಂದೆ ಕಟ್ಟುವೆನು. ಎದ್ದೇಳು… ನಡೆ… ತೇರನ್ನು ಹತ್ತು” ಎಂದು ವಿಶ್ವಾಮಿತ್ರ ಮುನಿಯು ಶಿವನ ಮುಂದೆ ನುಡಿಯಲು;
ಕಡೆತನಕ ಮುನ್ ಜೀವತವ ಕೊಂಡೆನು. ಒಡೆಯನುಳ್ಳವನ್ ಆನು… ಬರಬಾರದಯ್ಯ… ನಿಮ್ಮಡಿಗಳಿಗೆ ದಾನವಾಗಿತ್ತ ವಸುಮತಿಯತ್ತಲ್ ಅಡಿಯನ್ ಇಡುವವನಲ್ಲ. ಇದನ್ ಬೆಸಸಬೇಡಿ ಎಂದು ಭೂನಾಥ ಕೈಮುಗಿದನು= “ನನ್ನ ಜೀವಿತದ ಕೊನೆತನಕ ದಾಸನಾಗಿ ಸೇವೆಯನ್ನು ಮಾಡುತ್ತೇನೆಂದು ಹೇಳಿ ವೀರಬಾಹುಕನಿಗೆ ನನ್ನನ್ನು ಮಾರಿಕೊಂಡಿದ್ದೇನೆ. ವೀರಬಾಹುಕನನ್ನು ಒಡೆಯನನ್ನಾಗಿ ಉಳ್ಳವನು ನಾನು. ದಾಸನಾಗಿರುವ ನಾನು ಬರಬಾರದಯ್ಯ. ಇದು ಮಾತ್ರವಲ್ಲದ ನಿಮಗೆ ದಾನವಾಗಿ ಕೊಟ್ಟಿರುವ ಬೂಮಂಡಲದ ಕಡೆಗೆ ಮತ್ತೆ ಹೆಜ್ಜೆಯನ್ನು ಇಡುವವನಲ್ಲ. ರಾಜ್ಯಕ್ಕೆ ಒಡೆಯನಾಗು ಎಂಬುದನ್ನು ಮಾತ್ರ ಆಜ್ನಾಪಿಸಬೇಡಿ” ಎಂದು ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ಕಯ್ ಮುಗಿದನು; ಎಲೆ ಜನಪ, ಆನ್ ಏಕೆ… ರಾಜ್ಯವೇಕೆ=ಹರಿಶ್ಚಂದ್ರನೇ… ನಾನೇಕೆ… ರಾಜ್ಯವೇಕೆ. ಮುನಿಯಾಗಿರುವ ನನಗೂ ರಾಜ್ಯಕ್ಕೂ ಏನು ನಂಟು; ಸತ್ಯಸಂಧಾನಮಮ್ ನೋಡಲೆಂದು ಉಳ್ಳುದೆಲ್ಲವ ಕೊಂಡಡೆ… ಏನ್ ಎಂಬನೋ ಎಂದು ಕಾಡಿ ನೋಡಿದೆನೈಸೆ=ನಿನ್ನ ನಡೆನುಡಿಯಲ್ಲಿ ಸತ್ಯದ ಆಚರಣೆಯನ್ನು ಒರೆಹಚ್ಚಿ ನೋಡಲೆಂದು… ರಾಜ್ಯದ ಒಡೆತನವನ್ನು ಮತ್ತು ಸಂಪತ್ತನ್ನು ವಶಪಡಿಸಿಕೊಂಡರೆ ಏನನ್ನು ಮಾಡುತ್ತಾನೆಯೋ ಎಂದು ಅನೇಕ ಅಡೆತಡೆಗಳನ್ನು ಒಡ್ಡಿದೆನೆ ಹೊರತು ಮತ್ತೇನಲ್ಲ;
ಸರ್ವರಾಜ್ಯಮ್ ನಿನ್ನದು=ಇಡೀ ರಾಜ್ಯವೆಲ್ಲವೂ ಎಂದೆಂದಿಗೂ ನಿನ್ನದು; ಕೀನಾಶನನ್ ಕರೆದು ವೀರಬಾಹುಕನಾಗಿ ಭೂನಾಥನನ್ ನಿಲಿಸಿ, ಬೇಡಿದ ಅರ್ಥವ ಕೊಟ್ಟು, ನೀನೆ ತರುಬು ಎಂದು ಕಳುಹಿದೆನೈಸೆ. ಕೃತಕವಲ್ಲ ಎಂದು ನಂಬುಗೆಯಿತ್ತನು= “ಕಾಶಿನಗರದಲ್ಲಿ ನಿನ್ನನ್ನು ನೀನೇ ಮಾರಾಟಕ್ಕಿಟ್ಟುಕೊಂಡು ಬೀದಿಬೀದಿಗಳಲ್ಲಿ ನಿರಾಶೆಯಿಂದ ಅಲೆಯುತ್ತಿದ್ದಾಗ, ದೇವತೆಯಾದ ಯಮನನ್ನು ಕರೆದು ವೀರಬಾಹುಕನಾಗಿ ಹೋಗಿ ಹರಿಶ್ಚಂದ್ರನನ್ನು ಕೊಂಡುಕೊಂಡು, ಅವನು ಕೇಳಿದಶ್ಟು ಸಂಪತ್ತನ್ನು ಕೊಟ್ಟು, ನಿನ್ನ ಬಳಿ ಇಟ್ಟುಕೊ ಎಂದು ನಾನೇ ಯಮನನ್ನು ಕಳುಹಿಸದೆನಲ್ಲವೇ. ಈ ನನ್ನ ಮಾತು ಸುಳ್ಳಲ್ಲ” ಎಂದು ವಿಶ್ವಾಮಿತ್ರನು ವಿಶ್ವಾಸದಿಂದ ನುಡಿದನು; ಪೊಡವಿಪನ ವಾಕ್ಯದೊಳು ಹುಸಿಯ ನೀನ್ ಪಿಡಿದೆಯಾದಡೆ… ನಾನು ಮುನಿತನವನ್ ಉಳಿದು… ನರಶಿರದ ಓಡ ಹಿಡಿದು ಮದ್ಯಪಿಯಾಗಿ ತೆಂಕಮುಖವಹೆನ್ ಎಂದು ದೇವಸಭೆಯೊಳಗೆ ನಾನು ನುಡಿದು ಭಾಷೆಯನಿತ್ತೆ= ಈಗ ವಸಿಶ್ಟ ಮುನಿಯು ಮಾತನಾಡತೊಡಗುತ್ತಾನೆ. “ವಿಶ್ವಾಮಿತ್ರ ಮುನಿಯೇ, ರಾಜ ಹರಿಶ್ಚಂದ್ರನ ಮಾತಿನಲ್ಲಿ ಸುಳ್ಳನ್ನು ನೀನು ಕಂಡುಹಿಡಿದರೆ, ನಾನು ಮುನಿತನವನ್ನು ಬಿಟ್ಟು, ಮಾನವನ ತಲೆಬುರುಡೆಯಲ್ಲಿ ಮದ್ಯವನ್ನು ತುಂಬಿಕೊಂಡು ಕುಡುಕನಾಗಿ ದಕ್ಶಿಣ ದಿಕ್ಕಿಗೆ ಮೊಗಮಾಡಿ ಹೋಗುತ್ತೇನೆ ಎಂದು ದೇವೇಂದ್ರನ ಒಡ್ಡೋಲಗದಲ್ಲಿ ನಾನು ನುಡಿದು ನಿನಗೆ ಮಾತು ಕೊಟ್ಟಿದ್ದೆ” ಎಂದು ವಸಿಷ್ಟ ಮುನಿಯು ನುಡಿದು… ಹರಿಶ್ಚಂದ್ರನ ಬಳಿಗೆ ಬಂದು;
ನೀನ್ ಎನ್ನ ಭಾಷೆಯಮ್ ನಡಸಿ ರಕ್ಷಿಸಿದೆ. ಸತ್ಯವ ಮೆರೆದೆ ಎಂದು ವಾಸಿಷ್ಠನ್ ತಲೆದಡವಿ ಈಶನ ಸಮಕ್ಷದೊಳು ಅವನಿಪತಿಗೆ ತನ್ನನ್ ಕೊಟ್ಟನ್= ಎಲೆ ಹರಿಶ್ಚಂದ್ರ, ನೀನು ನನ್ನ ಮಾತಿನಂತೆ ನಡೆದುಕೊಂಡು ನನ್ನನ್ನು ಕಾಪಾಡಿದೆ. ಸತ್ಯವನ್ನು ಮೆರೆದೆ ಎಂದು ವಸಿಷ್ಟನು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ, ಹರಿಶ್ಚಂದ್ರನ ತಲೆಯನ್ನು ಪ್ರೀತಿಯಿಂದ ನೇವರಿಸಿ, ಕಾಶಿನಾತನ ಮುಂದುಗಡೆ ಹರಿಶ್ಚಂದ್ರನಿಗೆ ತನ್ನನ್ನೇ ಕೊಟ್ಟನು. ಅಂದರೆ ಗುರು ವಸಿಷ್ಟನ ಅನುಗ್ರಹಕ್ಕೆ ಹರಿಶ್ಚಂದ್ರನು ಸಂಪೂರ್‍ಣವಾಗಿ ಪಾತ್ರನಾದನು; ಕರುಣದಿಮ್ ಧರ್ಮ ಅರ್ಥ ಕಾಮ ಮೋಕ್ಷಂಗಳಮ್ ಸುರಿದು, ನಿನ್ನಯ ಪುಣ್ಯಕಥೆ ಸರ್ವಲೋಕದೊಳಗೆ ಇರಲಿ=ಕರುಣೆಯ ನಡೆನುಡಿಗಳಿಂದ ದರ್ಮ, ಸಂಪತ್ತು, ಕಾಮ ಮತ್ತು ಮೋಕ್ಶವನ್ನು ಪಡೆದು ಬಾಳುವ ರೀತಿನೀತಿಗಳನ್ನು ಜನರಿಗೆ ತಿಳಿಸುತ್ತ ನಿನ್ನ ಪುಣ್ಯಕತೆಯು ಸರ್ವಲೋಕದಲ್ಲಿಯೂ ಇರಲಿ; ಅಭವನಿಮ್ ಬೇಕಾದ ವರವ ನೀನ್ ಬೇಡು ಭೂಪಾಲ=ನನ್ನಿಂದ ನಿನಗೆ ಬೇಕಾದ ವರವನ್ನು ಬೇಡು ಎಂದು ಕಾಶಿ ವಿಶ್ವನಾತನು ಹರಿಶ್ಚಂದ್ರನಿಗೆ ಹೇಳುತ್ತಾನೆ; ಹರೆಯದ ಈ ಕಾಶಿಯೊಳು ನಿನ್ನ ಮಂದಿರದ ಮೇಲೆರಡು ಯೋಜನದೊಳ್ ಎನ್ನಯ ಕೀರ್ತಿಪುರ ಹೇಮ ವಿರಚಿತದೊಳ್ ಇರಬೇಹುದು ಎಂದು ಬೇಡಿದಡೆ=ವಿಸ್ತಾರವಾದ ಈ ಕಾಶಿಯಲ್ಲಿ ನಿನ್ನ ಮಂದಿರದಿಂದ ಎರಡು ಯೋಜನ ದೂರದಲ್ಲಿ ನನ್ನ ಹೆಸರಿನ ಕೀರ್‍ತಿಪುರವು ಚಿನ್ನದಿಂದ ನಿರ್‍ಮಾಣಗೊಂಡು ಇರಬೇಕು ಎಂದು ಹರಿಶ್ಚಂದ್ರನು ಕಾಶಿ ವಿಶ್ವನಾತನನ್ನು ಬೇಡಿಕೊಳ್ಳಲು;
ಅಂದು ಅಗಜೇಶನು ಅದಮ್ ಕೊಟ್ಟನ್=ಅಂದು ಕಾಶಿಪತಿಯು ಹರಿಶ್ಚಂದ್ರನ ಬೇಡಿಕೆಯನ್ನು ಈಡೇರಿಸಿದನು; ಹರನ ಸಭೆಯೊಳಗೆ=ಶಿವನ ಓಲಗದಲ್ಲಿ; ಮುರಹರನ ಸಭೆಯೊಳಗೆ= ವಿಶ್ಣುವಿನ ಓಲಗದಲ್ಲಿ; ವಾಗ್ವರನ ಸಭೆಯೊಳಗೆ=ಬ್ರಹ್ಮನ ಓಲಗದಲ್ಲಿ; ಪವಿಧರನ ಸಭೆಯೊಳಗೆ=ದೇವೇಂದ್ರನ ಓಲಗದಲ್ಲಿ; ದಿನಕರನ ಸಭೆಯೊಳಗೆ=ಸೂರ್‍ಯನ ಓಲಗದಲ್ಲಿ; ಭಾಸುರಶಿಖಿಯ ಸಭೆಯೊಳಗೆ=ಹೊಳೆಯುತ್ತಿರುವ ಅಗ್ನಿದೇವನ ಓಲಗದೊಳಗೆ; ಶಶಿಯೊಂದು ಸಭೆಯ ನಡುವೆ=ಚಂದ್ರನ ಒಂದು ಓಲಗದಲ್ಲಿ; ಪರಮ ಮುನಿಸಭೆಯೊಳಗೆ=ಒಳ್ಳೆಯವರಾದ ಮುನಿಗಳ ಓಲಗದಲ್ಲಿ; ವರನೃಪರ ಸಭೆಯೊಳಗೆ= ಉತ್ತಮರಾದ ರಾಜರ ಓಲಗದಲ್ಲಿ; ಧರಣಿಪನ ಕಥನವೇ ಕಥನ; ಮಾತೇ ಮಾತು=ಹರಿಶ್ಚಂದ್ರನು ಸತ್ಯದ ಉಳಿವಿಗಾಗಿ ಪಟ್ಟ ಸಂಕಟ ಮತ್ತು ತಳೆದ ಕೆಚ್ಚೆದೆಯ ನಡೆನುಡಿಗಳ ಕತೆಯೇ ಕೇಳಿಬರುತ್ತಿದೆ; ಎಲ್ಲಿಹೋದರೂ ಹರಿಶ್ಚಂದ್ರನಿಗೆ ಸಂಬಂದಿಸಿದ ಮಾತೇ ಕೇಳಿಬರುತ್ತಿವೆ; ಪರವಿಲ್ಲ=ಬೇರೆ ಮಾತುಗಳೇ ಇಲ್ಲ;
ಬೇರೆ ಅನ್ಯವಾರ್ತೆಗಳು ಹುಗಲಿಲ್ಲ ಎಂಬಾಗಳ್… ಏನ್ ಪೊಗಳ್ವೆನ್=ಇತರ ಸುದ್ದಿಗಳನ್ನು ಆಡಲು ಅವಕಾಶವೇ ಇಲ್ಲ ಎನ್ನುವಂತಿರುವುದನ್ನು ಏನೆಂದು ತಾನೇ ಕೊಂಡಾಡಲಿ ಎಂದು ಕವಿಯ ಅಚ್ಚರಿಯಿಂದ ಉದ್ಗರಿಸಿದ್ದಾನೆ; ಧರೆಯೊಳು ಹರಿಶ್ಚಂದ್ರ ಚಾರಿತ್ರಮಮ್ ಕೇಳ್ದ ನರರ್ ಏಳು ಜನ್ಮದಿಮ್ ಮಾಡಿರ್ದ ಪಾತಕವು ತರಣಿ ಉದಯದ ಮುಂದೆ ನಿಂದ ತಿಮಿರದ ತೆರದೆ ಹರೆಯುತಿಹುದು=ಬೂಮಂಡಲದಲ್ಲಿ ಹರಿಶ್ಚಂದ್ರನ ಸತ್ಯದ ನಡೆನುಡಿಯನ್ನು ಕೇಳುವ ಮಾನವರು ಹಿಂದಿನ ತಮ್ಮ ಏಳು ಜನ್ಮಗಳಲ್ಲಿ ಮಾಡಿದ್ದ ಪಾಪವೆಲ್ಲವೂ ಸೂರ್ಯನ ಬೆಳಕಿನ ಕಿರಣಗಳು ಹರಡುತ್ತಿದ್ದಂತೆಯೇ ಲಯಗೊಳ್ಳುವ ಕತ್ತಲೆಯಂತೆ ಇಲ್ಲವಾಗುತ್ತದೆ; ಏಕೆಂದಡೆ ಹರನೆಂಬುದೇ ಸತ್ಯ… ಸತ್ಯವೆಂಬುದು ಹರನು. ಎರಡಿಲ್ಲವೆಂದು ಶ್ರುತಿ ಸಾರುತಿರಲು=ಏಕೆಂದರೆ ಹರನೆಂಬುದೇ ಸತ್ಯ… ಸತ್ಯವೆಂಬುದೇ ಹರನು. ಸತ್ಯದ ನಡೆನುಡಿ ಬೇರೆಯಲ್ಲ… ಹರ ಬೇರೆಯಲ್ಲವೆಂದು ವೇದಗಳು ಸಾರುತ್ತಿರಲು;
ಅರರೆ… ಆ ವಾಕ್ಯವ ನಿರುತವ ಮಾಡಿ ಮೂಜಗಕೆ ತೋರಿದ ಹರಿಶ್ಚಂದ್ರ ಕಥೆ ಕೇಳ್ದಡೆ=ಅಬ್ಬಬ್ಬಾ… ಆ ಮಾತನ್ನು ನಿಜವನ್ನಾಗಿ ಮಾಡಿ ಮೂರು ಜಗತ್ತಿಗೆ ತೋರಿದ ಹರಿಶ್ಚಂದ್ರ ಕತೆಯನ್ನು ಕೇಳಿದರೆ; ಅನೃತವರಿಯದ ಹೊಲೆಯನನ್ ನೆನೆಯೆ ಪುಣ್ಯವೆಂದು ಎನೆ=ಸುಳ್ಳನ್ನಾಡದ ಹೊಲೆಯನನ್ನು ನೆನೆದರೆ ಪುಣ್ಯವೆಂದು ಎನ್ನಲು; ಸೂರ್ಯಕುಲಜ… ಕಲಿ… ದಾನಿ… ಸತ್ಯನ್… ವಸಿಷ್ಠನ ಶಿಷ್ಯನ್… ಅಧಿಕ ಶೈವನ್ ಕಾಶಿಯೊಳ್ ಮೆರೆದ ವೇದಪ್ರಮಾಣ ಪುರುಷ ಘನನೃಪ ಹರಿಶ್ಚಂದ್ರನ್ ಎಂದಡೆ=ಸೂರ್‍ಯವಂಶದಲ್ಲಿ ಹುಟ್ಟಿದವನು, ಕಲಿಯೂ, ದಾನಿಯೂ, ಸತ್ಯವಂತನೂ, ವಸಿಷ್ಟನ ಶಿಶ್ಯನೂ… ಹೆಚ್ಚಿನ ಶೈವನೂ, ಕಾಶಿಯಲ್ಲಿ ಹೆಸರನ್ನು ಪಡೆದವನು, ವೇದದಲ್ಲಿ ಹೇಳಿರುವಂತೆ ಬಾಳುತ್ತಿರುವ ವ್ಯಕ್ತಿಯೂ, ದೊಡ್ಡರಾಜನಾಗಿರುವ ಹರಿಶ್ಚಂದ್ರನನ್ನು ನೆನೆದರೆ ಇನ್ನು ಹೆಚ್ಚಿನ ಪುಣ್ಯವು ದೊರೆಯುತ್ತದೆ; ಮಹಾಲಿಂಗಭಕ್ತರ ಭಕ್ತನು ಕವಿ ರಾಘವಾಂಕನ್ ಆತನ ಪೊಗಳ್ದು… ಕಾವ್ಯಮುಖದಿಮ್ ಜನ ಬದುಕಬೇಕೆಂದು ಅನಪೇಕ್ಷೆಯಿಂದ ಪೇಳ್ದನ್=ಮಹಾಲಿಂಗವನ್ನು ಪೂಜಿಸುವವರನ್ನು ಒಲಿದಿರುವ ಮತ್ತು ಮೆಚ್ಚುವ ಕವಿ ರಾಗವಾಂಕನು ಹರಿಶ್ಚಂದ್ರನನ್ನು ಗುಣಗಾನ ಮಾಡಿ, ಕಾವ್ಯದ ಮೂಲಕ ಜನ ಬದುಕಬೇಕೆಂದು ಯಾವುದೇ ಬಯಕೆಯಿಲ್ಲದೆ ಅಂದರೆ ಸಂಪತ್ತು, ಕೀರ್‍ತಿ ಇಲ್ಲವೇ ಗದ್ದುಗೆಯನ್ನು ಪಡೆಯಬೇಕೆಂಬ ಇಚ್ಚೆಯಿಲ್ಲದೆ ಹರಿಶ್ಚಂದ್ರ ಕಾವ್ಯವನ್ನು ಹೇಳಿದನು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು