ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 8ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 8: ಮರುಳುಗಳು ದುರ್‍ಯೋದನನ್ನು ಕೆಣಕಿ ಕಾಡುವುದು ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನ ವಿಲಾಪಮ್ ’ ಎಂಬ ಹೆಸರಿನ 5 ನೆಯ ಅದ್ಯಾಯದ 1 ನೆಯ ಪದ್ಯದಿಂದ 9 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು..
ಮರುಳುಗಳು: ಮರುಳು=ದೆವ್ವ/ಪಿಶಾಚಿ; ದೆವ್ವಗಳು ದುರ‍್ಯೋದನನನ್ನು ಕೆರಳಿ ಕಾಡುವ ಈ ಪ್ರಸಂಗವು ಒಂದು ಕವಿ ಕಲ್ಪಿತವಾದ ರೂಪಕ ಪ್ರಸಂಗ. ಚಕ್ರವರ‍್ತಿಯಾದ ದುರ‍್ಯೋದನನು ದಾಯಾದಿ ಮತ್ಸರದ ಕಾರಣದಿಂದಾಗಿ ಮಾಡಿದ ಯುದ್ದದಿಂದ ತಮ್ಮಂದಿರನ್ನು ಮತ್ತು ಮಕ್ಕಳನ್ನು ಕಳೆದುಕೊಂಡು, ಲೋಕದ ತಿರಸ್ಕಾರಕ್ಕೆ ಹೇಗೆ ಗುರಿಯಾಗಿದ್ದಾನೆ ಎಂಬುದನ್ನು ದೆವ್ವಗಳ ಅಣಕದ ಮಾತುಗಳಿಂದ ಚಿತ್ರಿಸಲಾಗಿದೆ;
*** ಪ್ರಸಂಗ – 8: ಮರುಳುಗಳು ದುರ್ಯೋಧನನನ್ನು ಕೆಣಕಿ ಕಾಡುವುದು ***
ಸಂಗ್ರಾಮ ಭೂಮಿಯೊಳಗನೆ ಬರ್ಪಲ್ಲಿ… ನೆತ್ತರ ಕಡಲೊಳಗೆ ಉಡಿದಿರ್ದ ಕಯ್ದು ಅಡಿಗಡಿಗೆ ತಳಮನ್ ಉರ್ಚುತ್ತಿರೆ… ಕಾಲಿಡಲ್ ಎಡೆವಡೆಯದೆ ಕುರುಪತಿ ದಡಿಗ ಪೆಣಂಗಳನೆ ಮೆಟ್ಟಿ ನಡೆಯುತ್ತಿರ್ದನ್… ಹಲ ಚಕ್ರ ಅಂಕುಶಮ್ ಹಲಚಕ್ರಾಂಕುಶ ರೇಖಾ ವಿಲಸಿತ ಪದತಳಕೆ ಪುನರುಕ್ತೆಯಮ್ ಮಾಡೆ… ಆ ಕುರುಕುಲಜನ್ ಕುಸಿಕುಸಿದು ಮೆಲ್ಲಮೆಲ್ಲನೆ ನಡೆದನ್… ಆಗಳ್ ಅದಮ್ ಸಂಜಯನ್ ಕಂಡು ಮನ್ಯೂದ್ಗತಕಂಠನುಮಾಗಿ…
ಸಂಜಯ: ನಿಮ್ಮಯ ಮೆಲ್ಲಡಿ … ವಿನುತ ವಿರೋಧಿ ಮಂಡಳಿಕ ಮೌಳಿ ವಿರಾಜಿತ ಪಾದಪೀಠ ಕಾಂಚನ ಕಮಳಾಯಮಾನಮ್ … ಇವು ಭಿಂಡಿವಾಳದ ಅಂಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳ್ ಉರ್ಚೆ ಸಂಯುಗ ಅವನಿತಳದೊಳ್ ವಿಧಾತ್ರವಶದಿಮ್
ನಿಮಗಮ್ ನಡೆವಂತುಟಾದುದೇ…
(ಎಂದು ಗಳಗಳನೆ ಕಣ್ಣೀರಮ್ ನೆರಪುವ ಸಂಜಯನನ್ ಅಭಿಮಾನಧನನ್ ಮಾಣಿಸಿ…)
ದುರ್ಯೋಧನ: ವಜ್ರಮನನಪ್ಪ ಎನ್ನನ್… ತನುಜಾನುಜರ ವಿಯೋಗದ ಮನಃಕ್ಷತಮ್ ನೋಯಿಸಲ್ಕೆ
ನೆರೆಯದೆ… ಸಮರ ಅವನಿಜಾತಮ್ ಚರಣಕ್ಷತಮ್ ಇನಿಸುಮ್ ನೋಯಿಕುಮೆ.
(ಎಂದು ಕುರುಕುಲಾವಷ್ಟಂಭನ್ ಕಾರ್ಯಾವಷ್ಟಂಭನಾಗಿ ಬರುತ್ತಮ್… .ಮೊನೆಯೊಳ್ ಇದಿರ್ಚಿ ಸತ್ತ ಭಟನನ್… ಗಜದಂತದೊಳ್ ಅಣ್ಮಿ ಸತ್ತ ಬೀರನನ್… ರಣದೊಳ್ ಅದಟಿಮ್ ಸಹಸ್ರಭಟರಮ್ ಪೆಣೆದಿಕ್ಕಿ ಸತ್ತ ಗಂಡನನ್… ಅರಸುತ್ತೆ ಬರ್ಪ ಸುರಸುಂದರಿಯರ್ಕಳನ್ ಆ ಪರಾಕ್ರಮನಿಕೇತನನ್ ಫಣಿರಾಜಕೇತನನ್ ಈಕ್ಷಿಸುತ್ತುಮ್ ಒಯ್ಯನೆ ನಡೆದನ್ ಅಂತು ಬರೆವರೆ…)
ಮರುಳ್-1: ಗುರುವಿನ ನೆತ್ತರಮ್ ಕುಡಿವೆನಪ್ಪೊಡೆ, ಅವನ್ ದ್ವಿಜವಂಶಜನ್… ನಿಜಾವರಜನ ನೆತ್ತರಮ್ ಕುಡಿವನಪ್ಪೊಡೆ, ಭೀಮನೆ ಎಯ್ದೆ ಪೀರ್ದನ್ … ಭೀಷ್ಮರ ಬಿಸಿನೆತ್ತರಮ್ ಕುಡಿವೊಡೆ, ಇನ್ನುಮ್ ಒಳನ್… ಕುರುರಾಜ, ನಿನ್ನ ನೆತ್ತರ ಸವಿನೋಳ್ಪಡೆ , ಆನ್ ಬಯಸಿ ಬಂದಪೆನ್.
(ಎಂದುದು ಅದೊಂದು ಪುಲ್ಮರುಳ್… ಅದಮ್ ಕೇಳುತ್ತುಮ್ ಬರೆವರೆ… .ಕದನದೊಳ್ ಉಣ್ಮಿದ ಉಳ್ಮಿದುಳ ಕರ್ದಮದೊಳ್ ಜಗುಳ್ದು ಅಂಘ್ರಿ ಜಾರಿ ಪೋಪುದುಮ್… ಒಡನಿರ್ದ ಸಂಜಯನ್ ಇಳೇಶ್ವರನನ್ ಪಿಡಿದು…)
ಸಂಜಯ: ಊರುಭಂಗಮಾಗದೆ ವಲಮ್.
(ಎಂದೊಡೆ…)
ದುರ್ಯೋಧನ: ಆಗದು.
(ಎನೆ ಪುಲ್ಮರುಳ್ ಒಂದೆಡೆವೋಗಿ…)
ಮರುಳ್-1: ಭೀಮಕೋಪದೆ ನಿನಗೆ ಊರುಭಂಗ ಭಯಮಾಗದೆ ಪೋಕುಮೆ ಕೌರವೇಶ್ವರಾ…
(ಎಂದ ಮರುಳ ಮಾತು ತನಗೆ ಕರ್ಣಕಠೋರಮಾಗೆ… ತನಗೆ ಮುನ್ನಮ್ ಮೈತ್ರೇಯರ್ ಕೊಟ್ಟ ಊರುಭಂಗ ಶಾಪಮಮ್ ನೆನೆನೆನೆದು ಮನದೊಳ್
ಕಟ್ಟುಕಡೆದು ತಾನ್ ಮಹಾಸತ್ತ್ವನ್ ಅಪ್ಪುದರಿಂದಮ್ ಒಂದುಮನ್ ಬಗೆಯದೆ…)
ದುರ್ಯೋಧನ: ಮರುಳ ಮಾತಿನೊಳ್ ಪುರುಳೇನ್…
(ಎಂದು ಅರಸನ್ ಪೋಗೆವೋಗೆ…)
ಮರುಳ್-1: ಅರಗಿನ ಮಾಡದೊಳ್ … ವಿಷದ ಲಡ್ಡುಗೆಯೊಳ್ ಕೊಲಲೊಡ್ಡಿ … ಬದ್ಧಮತ್ಸರದೊಳೆ ವೈರಮಮ್ ಪದೆದು… ಭೀಮನನ್ ಇನ್ ಇನಿತರ್ಕೆ ತಂದ… ನೀನ್ ಮರುಳಯೊ … ಫಣಿರಾಜಕೇತನಾ, ಭೂತಕೋಟಿವೆರಸು ಆಹವರಂಗದೊಳ್ ಆಡುತಿರ್ಪ ತಾನ್ ಮರುಳನೊ… ಇರ್ವರ ಮರುಳ್ತನಮಮ್ ನೋಳ್ಪಮ್ … ನುಡಿಯದೆ ಪೋಗಲೀಯೆನ್ … ಪೋದೊಡೆ… ಧೂರ್ಜಟಿಯಾಣೆ… ಮೀರಿ ಪೋದಡೆ ಕಲಿಭೀಮನಾಣೆ.
(ಎನೆ, ಧೂರ್ಜಟಿಯಾಣೆಗೆ ನಿಂದು… ಭೀಮನೆಂದೊಡೆ ಮುಳಿದಟ್ಟಿ ಕುಟ್ಟಲ್ ಅರಸಮ್ ಗದೆಗೊಂಡಡೆ… ಭೂತಕೋಟಿಯುಮ್ ಬಡಿಗೊಳೆ… ಸಂಜಯನ್ ನಯದೆ ಬಗ್ಗಿಸಿದನ್ ಫಣಿರಾಜಕೇತುವನ್… ..ಅಂತು ಬಹುಳ ಪ್ರತ್ಯವಾಯ ಪ್ರದೇಶಗಳನ್ ಎಂತಾನುಮ್ ಕಳೆದು ಪೋಗೆವೋಗೆ…)
ತಿರುಳು: ಮರುಳುಗಳು ದುರ್‍ಯೋದನನ್ನು ಕೆಣಕಿ ಕಾಡುವುದು
ಸಂಗ್ರಾಮ ಭೂಮಿಯೊಳಗನೆ ಬರ್ಪಲ್ಲಿ=ತಂದೆ ತಾಯಿಯ ಕೋರಿಕೆಯಂತೆ ದುರ್ಯೋದನನು ಸಂಜಯನ ಒಡಗೂಡಿ ಕುರುಕ್ಶೇತ್ರದ ಸಂಗ್ರಾಮ ಬೂಮಿಯಲ್ಲಿ ಶರಮಂಚದ ಮೇಲೆ ಮಲಗಿರುವ ಬೀಶ್ಮರ ಬಳಿಗೆ ಬರುತ್ತಿರುವಾಗ;
ನೆತ್ತರು=ರಕ್ತ; ಉಡಿದು+ಇರ್ದ; ಉಡಿ=ತುಂಡಾಗು; ಕಯ್ದು=ಕತ್ತಿ/ಬರ್ಜಿ/ಬಾಣ ಮುಂತಾದ ಲೋಹದ ಆಯುದಗಳು;
ನೆತ್ತರ ಕಡಲೊಳಗೆ ಉಡಿದಿರ್ದ ಕಯ್ದು=ರಕ್ತದ ಕಡಲಿನಲ್ಲಿ ತುಂಡುತುಂಡಾಗಿ ಮುರಿದುಬಿದ್ದಿರುವ ಆಯುದಗಳ ಮೊನಚಾದ ತುದಿಯು;
ಅಡಿಗಡಿಗೆ ತಳಮನ್ ಉರ್ಚುತ್ತಿರೆ=ಹೆಜ್ಜೆಹೆಜ್ಜೆಗೂ ಅಂಗಾಲುಗಳಿಗೆ ಚುಚ್ಚುತ್ತಿರಲು;
ಕಾಲಿಡಲ್ ಎಡೆವಡೆಯದೆ ಕುರುಪತಿ ದಡಿಗ ಪೆಣಂಗಳನೆ ಮೆಟ್ಟಿ ನಡೆಯುತ್ತಿರ್ದನ್=ಕುರುಕ್ಶೇತ್ರದ ರಣರಂಗದ ಎಲ್ಲೆಡೆಯಲ್ಲಿಯೂ ಹರಿದು ಹೆಪ್ಪುಗಟ್ಟಿರುವ ನೆತ್ತರಿನ ಕೆಸರಿನಲ್ಲಿ ತುಂಡುತುಂಡಾಗಿ ಮುರಿದು ಬಿದ್ದಿರುವ ಆಯುದಗಳ ರಾಶಿಯಲ್ಲಿ… .ಹೆಜ್ಜೆಯಿಡಲು ಎಡೆಯಿಲ್ಲದೆ ದುರ್‍ಯೋದನನು ದೊಡ್ಡಗಾತ್ರದ ಹೆಣಗಳನ್ನೇ ತುಳಿದುಕೊಂಡು ನಡೆಯುತ್ತಿದ್ದನು;
ಹಲ=ನೇಗಿಲು/ನೇಗಿಲಿನ ಆಕಾರದಲ್ಲಿರುವ ಒಂದು ಆಯುದ; ಚಕ್ರ+ಅಂಕುಶಮ್; ಅಂಕುಶ=ಮೊನಚಾದ ತುದಿಯುಳ್ಳ ಸಲಾಕೆ; ರೇಖಾ=ಗೆರೆ/ಗೀಟು; ವಿಲಸಿತ=ಹೆಸರಾಂತ; ಪದತಳ=ಅಂಗಾಲು/ಪಾದದ ಕೆಳಬಾಗ; ಪುನರುಕ್ತತೆ=ಮತ್ತೊಮ್ಮೆ ಕಂಡುಬರುವುದು;
ಹಲ ಚಕ್ರ ಅಂಕುಶಮ್ ಹಲಚಕ್ರಾಂಕುಶರೇಖಾ ವಿಲಸಿತ ಪದತಳಕೆ ಪುನರುಕ್ತತೆಯಮ್ ಮಾಡೆ=ಕುರುಕ್ಶೇತ್ರದ ರಣರಂಗದಲ್ಲಿ ನೆತ್ತರ ಕೆಸರಿನೊಳಗೆ ಬಿದ್ದಿದ್ದ ಹಲ, ಚಕ್ರ, ಅಂಕುಶಗಳೆಂಬ ಆಯುದಗಳು ದುರ್‍ಯೋದನನ ಅಂಗಾಲಿಗೆ ಮತ್ತೆ ಮತ್ತೆ ಚುಚ್ಚಿಕೊಂಡಿದ್ದರಿಂದ, ಈ ಮೊದಲೇ ದುರ್‍ಯೋದನನ ಅಂಗಾಲಿನಲ್ಲಿದ್ದ ಹಲ, ಚಕ್ರ, ಅಂಕುಶದ ಗೆರೆಗಳ ಮೇಲೆ ಮತ್ತೊಮ್ಮೆ ಒತ್ತಿ ಅದೇ ಗುರುತನ್ನು ಮಾಡಿದ ಹಾಗಾಯಿತು; ಚಕ್ರವರ್‍ತಿಯಾದವನ ಅಂಗಾಲಿನಲ್ಲಿ ಹಲ-ಚಕ್ರ-ಅಂಕುಶವೆಂಬ ಆಯುದಗಳ ಆಕಾರದ ರೇಕೆಯು ಹುಟ್ಟಿನಿಂದಲೇ ಬಂದಿರುತ್ತದೆ ಎಂಬುದು ಜನಮನದಲ್ಲಿರುವ ಒಂದು ಕಲ್ಪನೆ;
ಆ ಕುರುಕುಲಜನ್ ಕುಸಿಕುಸಿದು ಮೆಲ್ಲಮೆಲ್ಲನೆ ನಡೆದನ್=ದುರ್‍ಯೋದನನು ಆಯುದಗಳ ಮೊನೆಯ ಚುಚ್ಚುವಿಕೆಯಿಂದ ಗಾಸಿಗೊಂಡು… ಮೆಲ್ಲಮೆಲ್ಲನೆ ಎಚ್ಚರಿಕೆಯಿಂದ ಹೆಜ್ಜೆಯಿಡತೊಡಗಿದನು;
ಮನ್ಯು+ಉದ್ಗತ+ಕಂಠನುಮ್+ಆಗಿ; ಮನ್ಯು=ಅಳಲು/ಸಂಕಟ; ಉದ್ಗತ=ಹೊರಹೊಮ್ಮಿದ;
ಆಗಳ್ ಅದಮ್ ಸಂಜಯನ್ ಕಂಡು ಮನ್ಯೂದ್ಗತಕಂಠನುಮಾಗಿ=ಆಗ ರಾಜನಾದ ದುರ್‍ಯೋದನನಿಗೆ ಬಂದ ನೋವನ್ನು ನೋಡಿದ ಸಂಜಯನಿಗೆ ಸಂಕಟದ ತೀವ್ರತೆಯಿಂದ ಕೊರಳು ಕಟ್ಟಿದಂತಾಗಿ;
ವಿನುತ=ಹೆಸರಾಂತ; ವಿರೋಧಿ ಮಂಡಳಿಕ=ಶತ್ರುಗಳಾದ ಸಾಮಂತ; ಮೌಳಿ=ಕಿರೀಟ; ವಿರಾಜಿತ=ಕಂಗೊಳಿಸುವ/ಕಾಂತಿಯಿಂದ ಕೂಡಿದ; ಪಾದಪೀಠ=ಕಾಲುಗಳನ್ನು ಇಡುವುದಕ್ಕಾಗಿ ಮಾಡಿದ ಮಣೆ/ಕಾಲುಮಣೆ; ಕಾಂಚನ=ಚಿನ್ನ;
ನಿಮ್ಮಯ ಮೆಲ್ಲಡಿ ವಿನುತ ವಿರೋಧಿ ಮಂಡಳಿಕ ಮೌಳಿ ವಿರಾಜಿತ ಪಾದಪೀಠ ಕಾಂಚನ ಕಮಳಾಯಮಾನಮ್=ನೀವು ಸಿಂಹಾಸನದಲ್ಲಿ ಕುಳಿತಿರುವಾಗ… ಹೆಸರಾಂತ ಹಗೆಗಳಾದ ಸಾಮಂತರು ನಿಮ್ಮಯ ಕೋಮಲವಾದ ಪಾದಗಳಿಗೆ ತಲೆಬಾಗಿ ನಮಿಸುತ್ತಿರುವಾಗ, ನಿಮ್ಮ ಪಾದಕಮಲಗಳಿದ್ದ ಪೀಟವು ಚಿನ್ನದ ಕಾಂತಿಯಿಂದ ಬೆಳಗುತ್ತಿತ್ತು;
ಭಿಂಡಿವಾಳ=ಬರ್ಜಿ; ಅಂಬು=ಬಾಣ; ಕರವಾಳ=ಕತ್ತಿ; ಕಕ್ಕಡೆ=ಈಟಿ; ಕೊಂತ=ಬರ್‍ಜಿ; ಧಾರೆ=ಆಯುದಗಳ ಹರಿತವಾದ ಅಂಚು/ಮೊನೆ; ಉರ್ಚು=ಚುಚ್ಚು/ನಾಟು;
ಇವು ಭಿಂಡಿವಾಳದ ಅಂಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳ್ ಉರ್ಚೆ= ಬಿಂಡಿವಾಳ, ಬಾಣ, ಕತ್ತಿ. ಕಕ್ಕಡೆ, ಕೊಂತ ಮುಂತಾದ ಆಯುದಗಳ ಹರಿತವಾದ ಮೊನೆಯು ನಿಮ್ಮ ಪಾದಗಳಿಗೆ ಚುಚ್ಚಲು;
ಸಂಯುಗ=ಕಾಳೆಗ/ಯುದ್ದ; ವಿಧಾತ್ರ=ಬ್ರಹ್ಮ; ವಿಧಾತ್ರವಶ=ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ಒಳಿತು ಕೆಡುಕುಗಳನ್ನು ಹುಟ್ಟುವಾಗಲೇ ಬ್ರಹ್ಮನು ಬರೆದಿಟ್ಟಿರುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿದೆ;
ಸಂಯುಗ ಅವನಿತಳದೊಳ್ ವಿಧಾತ್ರವಶದಿಮ್ ನಿಮಗಮ್ ನಡೆವಂತುಟಾದುದೇ… ಎಂದು ಗಳಗಳನೆ ಕಣ್ಣೀರಮ್ ನೆರಪುವ ಸಂಜಯನನ್=ಕಾಳೆಗದ ನೆಲದಲ್ಲಿ ಬ್ರಹ್ಮನ ಬರಹದಂತೆ ನಿಮಗೂ ನಡೆದುಕೊಂಡು ಹೋಗುವಂತಾಯಿತೆ… ಅಂದರೆ ರಾಜಪರಿವಾರದಿಂದ ಕೂಡಿ… ಬೆಳ್ಗೊಡೆಗಳಿಂದ ಸುತ್ತುವರಿದು… ತೇರಿನಲ್ಲಿ ಬರಬೇಕಾಗಿದ್ದ ರಾಜನಾದ ನೀವು ಗತಿಗೇಡಿಯಂತೆ ಬರಿಗಾಲಲ್ಲಿ ನಡೆಯುವಂತಹ ಹೀನಸ್ತಿತಿಯು ಬಂದೊದಗಿತೆ ಎಂದು ಒಂದೇ ಸಮನೆ ಕಣ್ಣೀರನ್ನು ಸುರಿಸುತ್ತಿರುವ ಸಂಜಯನನ್ನು;
ಅಭಿಮಾನಧನನ್ ಮಾಣಿಸಿ= ದುರ್‍ಯೋದನನು ಸಂಕಟದಿಂದ ಅಳದಂತೆ ತಡೆದು;
ವಜ್ರಮನನ್+ಅಪ್ಪ; ವಜ್ರಮನ=ಗಟ್ಟಿಯಾದ ಮನಸ್ಸು/ಎಂತಹ ಕಶ್ಟನಶ್ಟಗಳಿಗೂ ಜಗ್ಗದ ಕುಗ್ಗದ ಮನಸ್ಸಿನ ಕಸುವು; ತನುಜ+ಅನುಜ; ತನುಜ=ಮಗ; ಅನುಜ=ತಮ್ಮ; ಮನಃಕ್ಷತ=ಮನಸ್ಸಿಗೆ ಬಿದ್ದ ಪೆಟ್ಟು;
ವಜ್ರಮನನಪ್ಪ ಎನ್ನನ್=ಗಟ್ಟಿಯಾದ ಮನಸ್ಸುಳ್ಳ ನನ್ನನ್ನು;
ತನುಜಾನುಜರ ವಿಯೋಗದ ಮನಃಕ್ಷತಮ್=ಮಕ್ಕಳ ಮತ್ತು ತಮ್ಮಂದಿರ ಸಾವಿನಿಂದ ಉಂಟಾದ ಮಾನಸಿಕ ಪೆಟ್ಟು;
ನೋಯಿಸಲ್ಕೆ ನೆರೆಯದೆ= ನೋಯಿಸಲಿಲ್ಲವೆಂದ ಮೇಲೆ;
ಸಮರಾವನಿಜಾತಮ್ ಚರಣಕ್ಷತಮ್ ಇನಿಸುಮ್ ನೋಯಿಕುಮೆ=ರಣರಂಗದ ನೆಲದಲ್ಲಿ ಬಿದ್ದಿರುವ ಆಯುದಗಳ ಮೊನೆಯ ಚುಚ್ಚುವಿಕೆಯು ನನ್ನ ಪಾದಗಳನ್ನು ಸ್ವಲ್ಪವಾದರೂ ನೋಯಿಸುತ್ತವೆಯೇ; ಅಂದರೆ ನನ್ನ ಮಕ್ಕಳು ಮತ್ತು ನನ್ನ ತಮ್ಮಂದಿರ ಸಾವಿನ ಸಂಕಟದ ಮುಂದೆ… ಈ ನೋವು ಏನೇನು ಅಲ್ಲ;
ಅವಷ್ಟಂಭ=ಆಶ್ರಯ/ಆಲಂಬನ;
ಎಂದು ಕುರುಕುಲಾವಷ್ಟಂಭನ್ ಕಾರ್ಯಾವಷ್ಟಂಭನಾಗಿ ಬರುತ್ತಮ್=ಎಂದು ನುಡಿದ ದುರ್‍ಯೋದನನು ತಾನು ಕಯ್ಗೊಂಡ ಕಾರ್‍ಯವನ್ನು ಈಡೇರಿಸುವ ಉದ್ದೇಶದಿಂದ, ಅಂದರೆ ಬೀಶ್ಮರನ್ನು ಕಂಡು, ಅವರ ಸಲಹೆಯಂತೆ ನಡೆದುಕೊಳ್ಳಲು ಮುಂದೆ ಮುಂದೆ ನಡೆಯುತ್ತ;
ಮೊನೆಯೊಳ್ ಇದಿರ್ಚಿ ಸತ್ತ ಭಟನನ್=ಕಾಳೆಗದ ಮುಂಚೂಣಿಯಲ್ಲಿ ಹಗೆಯನ್ನು ಎದುರಿಸಿ ಸಾವನ್ನಪ್ಪಿದ ಕಾದಾಳುವನ್ನು;
ಗಜದಂತದೊಳ್ ಅಣ್ಮಿ ಸತ್ತ ಬೀರನನ್=ಆನೆಯ ದಂತವನ್ನು ಹಿಡಿದೆಳೆದು ನುಲಿದು ಮುರಿಯುವಾಗ ಹೋರಾಡಿ ಸತ್ತ ವೀರನನ್ನು;
ರಣದೊಳ್ ಅದಟಿಮ್ ಸಹಸ್ರಭಟರಮ್ ಪೆಣೆದಿಕ್ಕಿ ಸತ್ತ ಗಂಡನನ್ ಅರಸುತ್ತೆ ಬರ್ಪ ಸುರಸುಂದರಿಯರ್ಕಳನ್ =ಕಾಳೆಗದ ಕಣದಲ್ಲಿ ಪರಾಕ್ರಮದಿಂದ ಸಾವಿರಾರು ಕಾದಾಳುಗಳನ್ನು ಸುತ್ತುವರಿದು ಒಗ್ಗೂಡಿಸಿ ಕೊಲ್ಲುವಾಗ ಹೋರಾಡಿ ಸತ್ತ ಶೂರನನ್ನು ಹುಡುಕುತ್ತ ಬರುತ್ತಿರುವ ದೇವಲೋಕದ ಸುಂದರಿಯರನ್ನು; ಕಾಳೆಗದ ಕಣದಲ್ಲಿ ವೀರತನದಿಂದ ಹೋರಾಡಿ ಸತ್ತ ಕಾದಾಳುಗಳನ್ನು ದೇವಲೋಕದ ಸುಂದರಿಯರು ರಣರಂಗಕ್ಕೆ ಬಂದು, ಒಲವು ನಲಿವು ನೆಮ್ಮದಿಯ ತಾಣವಾದ ಸ್ವರ್‍ಗಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆಯು ಜನಮನದಲ್ಲಿದೆ;
ಆ ಪರಾಕ್ರಮನಿಕೇತನನ್ ಫಣಿರಾಜಕೇತನನ್ ಈಕ್ಷಿಸುತ್ತುಮ್… ಒಯ್ಯನೆ ನಡೆದನ್=ಪರಾಕ್ರಮಕ್ಕೆ ನೆಲೆಯಾಗಿರುವ ದುರ್‍ಯೋದನನು ಅದೆಲ್ಲವನ್ನೂ ನೋಡುತ್ತ… ಮೆಲ್ಲನೆ ನಡೆದನು;
ಅಂತು ಬರೆವರೆ=ಆ ರೀತಿ ದುರ್‍ಯೋದನನು ಹೆಣಗಳ ಬಣಬೆ ನಡುವೆ ರಣರಂಗದಲ್ಲಿ ನಡೆದು ಬರುತ್ತಿರಲು;
ಪುಲ್ಮರುಳ್=ಪುಲ್+ಮರುಳ್; ಪುಲು=ಅತ್ಯಂತ ಕೀಳಾದ; ಮರುಳ್=ಪಿಶಾಚಿ/ದೆವ್ವ; ದೆವ್ವ=ತುಂಬು ಜೀವನವನ್ನು ನಡೆಸಲಾಗದೆ, ನಾನಾ ಬಗೆಯ ಅವಗಡಗಳಿಂದ ಹರೆಯದಲ್ಲಿಯೇ ಸಾವನ್ನಪ್ಪುವ ವ್ಯಕ್ತಿಗಳು ದೆವ್ವಗಳಾಗಿ ರೂಪುಗೊಳ್ಳುತ್ತಾರೆ. ದೆವ್ವಗಳು ತಮ್ಮ ಮಾನವ ಜೀವಿತ ಕಾಲದಲ್ಲಿ ಈಡೇರಿಸಿಕೊಳ್ಳಲಾಗದ ಬಯಕೆಗಳೆಲ್ಲವನ್ನೂ ಈಗ ಈಡೇರಿಸಿಕೊಳ್ಳುತ್ತವೆ ಎಂಬ ನಂಬಿಕೆಯು ಜನಮನದಲ್ಲಿದೆ; ಅಂತಹ ಮರುಳುಗಳು/ದೆವ್ವಗಳು ಈಗ ಕುರುಕ್ಶೇತ್ರ ರಣರಂಗದಲ್ಲಿ ಸಾವನ್ನಪ್ಪಿರುವ ಆನೆ, ಕುದುರೆ ಮತ್ತು ಕಾದಾಳುಗಳ ರಕ್ತವನ್ನು ಕುಡಿದು, ಮಾಂಸವನ್ನು ತಿನ್ನುತ್ತಿವೆ. ಈ ರೀತಿ ರಕ್ತಮಾಂಸದ ಸೇವನೆಯಲ್ಲಿ ತೊಡಗಿದ್ದ ಮರುಳುಗಳಲ್ಲಿ ಕೆಲವು ಮರುಳುಗಳು ದುರ್‍ಯೋದನನ್ನು ನೋಡಿ, ಅವನನ್ನು ಕೆಣಕಿ ಕಾಡತೊಡಗುತ್ತವೆ; ನೆತ್ತರು=ರಕ್ತ;
ಗುರುವಿನ ನೆತ್ತರಮ್ ಕುಡಿವೆನಪ್ಪೊಡೆ ಅವನ್ ದ್ವಿಜವಂಶಜನ್=ಗುರು ದ್ರೋಣರ ನೆತ್ತರನ್ನು ಕುಡಿಯೋಣವೆಂದರೆ, ಅವನು ಬ್ರಾಹ್ಮಣ ಕುಲದವನು;
ನಿಜ+ಅವರಜನ; ನಿಜ=ನಿನ್ನ; ಅವರಜ=ತಮ್ಮ;
ನಿಜಾವರಜನ ನೆತ್ತರಮ್ ಕುಡಿವನಪ್ಪೊಡೆ ಭೀಮನೆ ಎಯ್ದೆ ಪೀರ್ದನ್=ನಿನ್ನ ತಮ್ಮ ದುಶ್ಶಾಸನನ ನೆತ್ತರನ್ನು ಕುಡಿಯೋಣವೆಂದರೆ… ಬೀಮನೇ ಒಂದು ಹನಿಯನ್ನು ಬಿಡದಂತೆ ಎಲ್ಲವನ್ನೂ ಕುಡಿದಿದ್ದಾನೆ;
ಭೀಷ್ಮರ ಬಿಸಿನೆತ್ತರಮ್ ಕುಡಿವೊಡೆ ಇನ್ನುಮ್ ಒಳನ್=ಬೀಶ್ಮರ ಬಿಸಿನೆತ್ತರನ್ನು ಕುಡಿಯೋಣವೆಂದರೆ, ಆತ ಇನ್ನು ಜೀವಂತವಾಗಿದ್ದಾನೆ; ಇಚ್ಚಾಮರಣಿಯಾದ ಬೀಶ್ಮನು ಉತ್ತರಾಯಣ ಪುಣ್ಯ ಕಾಲದಲ್ಲಿ ಪ್ರಾಣವನ್ನು ಬಿಡಲೆಂದು ಕಾಲವನ್ನು ಕಾಯುತ್ತ, ರಣರಂಗದಲ್ಲಿ ಶರಮಂಚದ ಮೇಲೆ ಮಲಗಿದ್ದಾರೆ;
ಕುರುರಾಜ, ನಿನ್ನ ನೆತ್ತರ ಸವಿನೋಳ್ಪೊಡೆ ಆನ್ ಬಯಸಿ ಬಂದಪೆನ್ ಎಂದುದು ಅದೊಂದು ಪುಲ್ಮರುಳ್= ಕುರುರಾಜನೇ, ನಿನ್ನ ನೆತ್ತರಿನ ರುಚಿನೋಡೋಣವೆಂದು ನಾನು ಆಸೆಯಿಂದ ಬಂದಿದ್ದೇನೆ ಎಂದು ರಣರಂಗದಲ್ಲಿದ್ದ ಒಂದು ಮರುಳು ದುರ್‍ಯೋದನನ್ನು ಕೆಣಕಿ ನುಡಿಯಿತು;
ಅದಮ್ ಕೇಳುತ್ತುಮ್ ಬರೆವರೆ=ಮರುಳಿನ ಅಣಕದ ನುಡಿಯನ್ನು ಕೇಳುತ್ತ, ದುರ್‍ಯೋದನನು ಮುಂದೆ ಮುಂದೆ ಅಡಿಗಳನ್ನಿಟ್ಟು ಸಾಗುತ್ತಿರಲು;
ಉಣ್ಮು=ಹೊರಚೆಲ್ಲು; ಉಳ್+ಮಿದುಳ್=ಒಳಮಿದುಳು; ಕರ್ದಮ=ಕೆಸರು; ಜಗುಳ್=ಜಾರಿಕೊಳ್ಳು/ಜಾರಿ/ಬೀಳು;
ಕದನದೊಳ್ ಉಣ್ಮಿದ ಉಳ್ಮಿದುಳ ಕರ್ದಮದೊಳ್ ಜಗುಳ್ದು ಅಂಘ್ರಿ ಜಾರಿ ಪೋಪುದುಮ್= ರಣರಂಗದಲ್ಲಿ ಹೋರಾಡಿ ಸಾವನ್ನಪ್ಪಿದ್ದ ಕಾದಾಳುಗಳ ತಲೆಯೊಡೆದು ಹೊರಚೆಲ್ಲಿದ್ದ ಒಳಮಿದುಳಿನ ಲೋಳೆಯ ಕೆಸರಿನಲ್ಲಿ ಕಾಲಿಟ್ಟ ದುರ್‍ಯೋದನನ ಪಾದಗಳು ಜಾರಿ… ಮುಗ್ಗರಿಸಿ ಬೀಳುವಂತಾಗಲು;
ಒಡನಿರ್ದ ಸಂಜಯನ್ ಇಳೇಶ್ವರನನ್ ಪಿಡಿದು=ಜತೆಯಲ್ಲಿದ್ದ ಸಂಜಯನು ದುರ್‍ಯೋದನನ್ನು ಬೀಳದಂತೆ ಹಿಡಿದುಕೊಂಡು;
ಊರು=ತೊಡೆ; ಭಂಗ=ಮುರಿಯುವಿಕೆ; ವಲಮ್= ದಿಟವಾಗಿ/ನಿಶ್ಚಯವಾಗಿ/ಕಂಡಿತವಾಗಿ;
ಊರುಭಂಗಮಾಗದೆ ವಲಮ್ ಎಂದೊಡೆ=ಕಾಲು ಜಾರಿದಾಗ ನೀನು ನೆಲದ ಮೇಲೆ ಬಿದ್ದಿದ್ದರೆ ಕಂಡಿತವಾಗಿಯೂ ತೊಡೆ ಮುರಿದುಹೋಗುತ್ತಿತ್ತು ಎಂದು ಹೇಳಲು;
ಆಗದು ಎನೆ=ತೊಡೆ ಮುರಿಯುತ್ತಿರಲಿಲ್ಲ ಎಂದು ದುರ್‍ಯೋದನನು ನುಡಿಯಲು;
ಪುಲ್ಮರುಳ್=ಸಾಮಾನ್ಯವಾದ ದೆವ್ವ;
ಪುಲ್ಮರುಳ್ ಒಂದೆಡೆವೋಗಿ=ಒಂದು ಮರುಳು ಮರುಗಳಿಗೆಯಲ್ಲಿಯೇ ದುರ್‍ಯೋದನನಿದ್ದ ಎಡೆಗೆ ಹೋಗಿ, ಅವನನ್ನು ಹಂಗಿಸುತ್ತ;
ಕೌರವೇಶ್ವರಾ, ಭೀಮಕೋಪದೆ ನಿನಗೆ ಊರುಭಂಗ ಭಯಮಾಗದೆ ಪೋಕುಮೆ ಎಂದ ಮರುಳ ಮಾತು ತನಗೆ ಕರ್ಣಕಠೋರಮಾಗೆ=ಕುರುಪತಿಯೇ, “ರಕ್ತಮಾಂಸದ ಕೆಸರಿನಲ್ಲಿ ಜಾರಿಬಿದ್ದು ಈಗ ತೊಡೆ ಮುರಿಯದಿದ್ದರೂ, ಬೀಮನ ಕೋಪದಿಂದ ಮುಂದೆ ನನ್ನ ತೊಡೆಮುರಿಯದೇ ಇರುತ್ತದೆಯೇ” ಎಂಬ ಹೆದರಿಕೆಯು ನಿನಗೆ ಆಗದಿರುವುದೇ ಎಂದ ಮರುಳಿನ ಮಾತು ದುರ್‍ಯೋದನನಿಗೆ ಕೇಳಲು ಕ್ರೂರವಾಗಿರಲು;
ಕಟ್ಟುಕಡೆ=ಅತಿಯಾಗಿ ಸಂಕಟಪಡು/ಬಹಳವಾಗಿ ಮರುಗು;
ತನಗೆ ಮುನ್ನಮ್ ಮೈತ್ರೇಯರ್ ಕೊಟ್ಟ ಊರುಭಂಗ ಶಾಪಮಮ್ ನೆನೆನೆನೆದು ಮನದೊಳ್ ಕಟ್ಟುಕಡೆದು=ತನಗೆ ಈ ಮೊದಲು ಮೈತ್ರೇಯ ಮುನಿಯು “ನಿನ್ನ ತೊಡೆಯು ಬೀಮನ ಗದೆಯಿಂದ ಮುರಿಯಲಿ” ಎಂದು ಕೊಟ್ಟಿರುವ ಶಾಪವನ್ನು ಮತ್ತೆ ಮತ್ತೆ ನೆನಪಿಸಿಕೊಂಡು, ಮನದಲ್ಲಿ ಅತಿಯಾದ ಸಂಕಟವುಂಟಾಗಿ; ಪಾಂಡವರು ಜೂಜಿನ ಕಾರಣದಿಂದಾಗಿ ಹನ್ನೆರಡು ವರುಶ ವನವಾಸ ಮತ್ತು ಒಂದು ವರುಶ ಅಜ್ನಾತವಾಸದ ಕಟ್ಟುಪಾಡಿಗೆ ಒಳಗಾಗಿ, ಕಾಡಿನಲ್ಲಿ ಪಡುತ್ತಿದ್ದ ಕಶ್ಟವನ್ನು ನೋಡಿ ಕನಿಕರಗೊಂಡಿದ್ದ ಮೈತ್ರೇಯ ಮುನಿಯು ಒಮ್ಮೆ ಹಸ್ತಿನಾವತಿಗೆ ಬಂದು, ದುರ್‍ಯೋದನನಿಗೆ ಪಾಂಡವರ ಬಗೆಗಿನ ಹಗೆತನವನ್ನು ತೊರೆದು, ಅವರನ್ನು ಕಾಡಿನಿಂದ ಕರೆಸಿಕೊಂಡು, ಹೊಂದಿಕೊಂಡು ಜತೆಯಲ್ಲಿ ಬಾಳು ಎಂದಾಗ, ಮುನಿಯ ಮಾತನ್ನು ಕಡೆಗಣಿಸಿ, ಅಹಂಕಾರದಿಂದ ತನ್ನ ಬಲವನ್ನು ಮೆರೆಯುವಂತೆ ತೊಡೆಯನ್ನು ತಟ್ಟಿದನು. ಆಗ ಮೈತ್ರೇಯ ಮುನಿಯು ಕೋಪದಿಂದ “ನಿನ್ನ ತೊಡೆಯು ಬೀಮನ ಗದೆಯಿಂದಲೇ ಮುರಿಯಲಿ” ಎಂಬ ಶಾಪವನ್ನು ದುರ್‍ಯೋದನನಿಗೆ ಹಾಕಿದ್ದರು;
ತಾನ್ ಮಹಾಸತ್ತ್ವನ್ ಅಪ್ಪುದರಿಂದಮ್ ಒಂದುಮನ್ ಬಗೆಯದೆ=ತಾನು ಮಹಾಬಲಶಾಲಿಯಾದುದರಿಂದ ಯಾವುದೇ ಹೆದರಿಕೆ ಇಲ್ಲವೇ ಹಿಂಜರಿಕೆಗೆ ಒಳಗಾಗದೆ;
ಮರುಳ ಮಾತಿನೊಳ್ ಪುರುಳೇನ್… ಎಂದು ಅರಸನ್ ಪೋಗೆವೋಗೆ=ಮರುಳಿನ ಮಾತಿನಲ್ಲಿ ಹುರುಳೇನಿದೆ ಎಂದು ದುರ್‍ಯೋದನನು ಮುಂದೆ ಮುಂದೆ ನಡೆಯುತ್ತಿರಲು;
ಅರಗಿನ ಮಾಡದೊಳ್=ಅರಗಿನ ಉಪ್ಪರಿಗೆಯ ಮನೆಯಲ್ಲಿ ಪಾಂಡವರನ್ನು ಜೀವಂತವಾಗಿ ಸುಡಲೆಂದು;
ವಿಷದ ಲಡ್ಡುಗೆಯೊಳ್ ಕೊಲಲೊಡ್ಡಿ=ಬೀಮನಿಗೆ ವಿಶದ ಲಾಡುಗಳನ್ನು ತಿನ್ನಿಸಿ ಕೊಲ್ಲಲು ಸಂಚನ್ನು ಹೂಡಿ;
ಪದೆ=ಹೆಚ್ಚಾಗುವಂತೆ ಮಾಡು/ಬೆಳೆಸು;
ಬದ್ಧಮತ್ಸರದೊಳೆ ವೈರಮಮ್ ಪದೆದು=ತೀವ್ರವಾದ ಹೊಟ್ಟಿಕಿಚ್ಚಿನಿಂದ ಪಾಂಡವರೊಡನೆ ಹಗೆತನ ಹೆಚ್ಚಾಗುವಂತೆ ಮಾಡಿ;
ಮರುಳ್=ದೆವ್ವ/ಹುಚ್ಚು/ತಿಳಿಗೇಡಿ; ಭೀಮನನ್ ಇನ್ ಇನಿತರ್ಕೆ ತಂದ ನೀನ್ ಮರುಳಯೊ=ಬೀಮನನ್ನು ಈಗ ಇಂತಹ ತೀವ್ರವಾದ ಹಗೆತನದ ಮತ್ತು ಸೇಡಿನ ಹೋರಾಟಕ್ಕೆ ಎಳೆತಂದ ನೀನು ತಿಳಿಗೇಡಿಯೋ;
ಭೂತ=ದೆವ್ವ/ಪಿಶಾಚಿ;
ಫಣಿರಾಜಕೇತನಾ, ಭೂತಕೋಟಿವೆರಸು ಆಹವರಂಗದೊಳ್ ಆಡುತಿರ್ಪ ತಾನ್ ಮರುಳನೊ… ಇರ್ವರ ಮರುಳ್ತನಮಮ್ ನೋಳ್ಪಮ್ ಎನೆ=ದುರ್‍ಯೋದನನೇ, ಕೋಟ್ಯಂತರ ದೆವ್ವಗಳ ಜತೆಗೂಡಿ ರಣರಂಗದಲ್ಲಿ ಸತ್ತು ಬಿದ್ದಿರುವ ಆನೆ ಕುದುರೆ ಕಾದಾಳುಗಳ ನೆತ್ತರನ್ನು ಕುಡಿದು, ಮಾಂಸವನ್ನು ತಿಂದು ಉಲ್ಲಾಸದಿಂದ ವಿಹರಿಸುತ್ತಿರುವ ನಾನು ತಿಳಿಗೇಡಿಯೋ… ಇಲ್ಲವೇ… ಇಶ್ಟೊಂದು ಜೀವಿಗಳ ಕೊಲೆಗೆ ಕಾರಣನಾಗಿರುವ ನೀನು ತಿಳಿಗೇಡಿಯೋ… ನಮ್ಮಿಬ್ಬರಲ್ಲಿ ಯಾರ ತಿಳಿಗೇಡಿತನದಿಂದ ಇಂತಹ ದುರಂತ ಉಂಟಾಗಿದೆ ಎಂಬುದನ್ನು ನೋಡೋಣ ಎಂದು ದುರ್‍ಯೋದನನ್ನು ಹಂಗಿಸಲು;
ನುಡಿಯದೆ ಪೋಗಲೀಯೆನ್= ನಾನು ತಿಳಿಗೇಡಿಯೋ… ನೀನು ತಿಳಿಗೇಡಿಯೋ ಎಂಬ ನನ್ನ ಪ್ರಶ್ನೆಗೆ ಉತ್ತರವನ್ನು ಕೊಡದಿದ್ದರೆ, ನಿನ್ನನ್ನು ಮುಂದಕ್ಕೆ ಹೋಗಲು ಬಿಡುವುದಿಲ್ಲ;
ದೂರ್ಜಟಿ=ಶಿವ;
ಪೋದೊಡೆ ಧೂರ್ಜಟಿಯಾಣೆ=ಹೋದರೆ ಶಿವನಾಣೆ;
ಮೀರಿ ಪೋದಡೆ ಕಲಿಭೀಮನಾಣೆ ಎನೆ=ನನ್ನ ಮಾತನ್ನು ಕಡೆಗಣಿಸಿ ಹೋದರೆ ಕಲಿ ಬೀಮನಾಣೆ ಎನ್ನಲು;
ಧೂರ್ಜಟಿಯಾಣೆಗೆ ನಿಂದು=ಶಿವನ ಮೇಲೆ ಇಟ್ಟ ಆಣೆಯನ್ನು ಮೀರಲಾರದೆ ಮುಂದಕ್ಕೆ ಹೋಗದೆ ನಿಂತು;
ಭೀಮನೆಂದೊಡೆ ಮುಳಿದಟ್ಟಿ ಕುಟ್ಟಲ್ ಅರಸಮ್ ಗದೆಗೊಂಡಡೆ=ಬೀಮನ ಹೆಸರನ್ನು ಕೇಳಿಯೇ ಆಕ್ರೋಶದಿಂದ ಕೆರಳಿ… ಆ ಮರುಳನ್ನು ಓಡಿಸಿ ಹೊಡೆಯಲೆಂದು ದುರ್‍ಯೋದನನು ಗದೆಯನ್ನು ಮೇಲಕ್ಕೆತ್ತಿದಾಗ;
ಭೂತಕೋಟಿಯುಮ್ ಬಡಿಗೊಳೆ= ಸುತ್ತಲಿದ್ದ ಮರುಳುಗಳೆಲ್ಲವೂ ದೊಣ್ಣೆಯನ್ನು ಹಿಡಿದುಕೊಂಡು ದುರ್‍ಯೋದನನೊಡನೆ ಬಡಿದಾಡಲು ಅಣಿಯಾದಾಗ;
ಸಂಜಯನ್ ಫಣಿರಾಜಕೇತುವನ್ ನಯದೆ ಬಗ್ಗಿಸಿದನ್= ಸಂಜಯನು ದುರ್‍ಯೋದನನ್ನು ಒಳ್ಳೆಯ ಮಾತುಗಳಿಂದ ಅವನ ಆಕ್ರೋಶವನ್ನು ಶಾಂತಗೊಳಿಸಿ, ಮರುಳುಗಳೊಡನೆ ಕಾದಾಡುವುದನ್ನು ತಪ್ಪಿಸಿದನು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು