ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 9ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 9: ದ್ರೋಣಾಚಾರ‍್ಯರಿಗೆ ನಮನ ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನ ವಿಲಾಪಮ್’ ಎಂಬ ಹೆಸರಿನ 5ನೆಯ ಅದ್ಯಾಯದ 10 ನೆಯ ಪದ್ಯದಿಂದ 13 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು..

*** ಪ್ರಸಂಗ – 9: ದ್ರೋಣಾಚಾರ್ಯರಿಗೆ ನಮನ ***

ಅಂತು ಬಹುಳ ಪ್ರತ್ಯವಾಯ ಪ್ರದೇಶಗಳನ್ ಎಂತಾನುಮ್ ಕಳೆದು ಪೋಗೆವೋಗೆ…

ಸಂಜಯ: ಆ ದ್ರೌಪದೀದ್ರೋಹನನ್ ಭವತ್ ಅನುಜನನ್ ಭೀಮನ್ ಮುನಿದು ಎಯ್ತಂದು ಇಲ್ಲಿ ಕೊಂದನ್.

(ಎನಲ್ಕೆ… )

ದುರ್ಯೋಧನ: ಆನ್ ಪರಿಭವಮನ್ ಅದನ್ ಕೇಳಲಾರೆನ್. ಮುಂದೆ ಮುಂದೆ…

(ಎಂದು ಬಾಷ್ಪಾಂಬು ನಿಮಗ್ನನ್ ಭಗ್ನಚಿತ್ತನ್ ತಲೆಯನೆರಗಿ…)

ದುರ್ಯೋಧನ: ಬಿಲ್ಲೋಜನ್ ಎಲ್ಲಿರ್ದನ್… ಭೀಷ್ಮನ್ ಎಲ್ಲಿರ್ದನೊ… ನೋಡುವೆನ್ ತೋರ್.

(ಎನೆ ಕುರುಕುಲನನ್ ಸಂಜಯನ್ ಕೊಂಡುಪೋದನ್… ಅಂತು ಪೋಗೆ… .ಸಂಜಯ ಶಿರಸ್ಕಂಧ ಅವಲಂಬನ್ ಕುರುಪ್ರಭು ಇಭಶೈಲಂಗಳಮ್ ಏರಿಯೇರಿ… ರುಧಿರಸ್ರೋತಂಗಳಮ್ ದಾಂಟಿ ದಾಂಟಿ… ಇಭದೋಃ ನೀಲಲತಾ ಪ್ರತಾನ ವಿಪಿನವ್ರಾತಂಗಳೊಳ್ ಸಿಲ್ಕಿ ಸಿಲ್ಕಿ… ಭರಂಗೆಯ್ದು ಉರದೆ ಎಯ್ದಿ… ಶರಜಾಲ ಜರ್ಜರಿತಗಾತ್ರತ್ರಾಣನನ್ ದ್ರೋಣನನ್ ಕಂಡನ್… ಅಂತು ಎನಿಸಿರ್ದ ನಿಸರ್ಗದುಷ್ಟ ಧೃಷ್ಟದ್ಯುಮ್ನ ಕಚನಿಗ್ರಹಕರ ವಿಲುಳಿತ ಮೌಳಿಯಾಗಿರ್ದ ಭಾರಧ್ವಾಜನ ಇರವಮ್ ರಾಜರಾಜನ್ ನೋಡಿ… )

ದುರ್ಯೋಧನ: ಕುಂಭಸಂಭವಾ, ಅರಿಯೆಮೆ ಬಿಲ್ಲ ಬಿನ್ನಣಕೆ ಗಾಂಡಿವಿಯಲ್ತು ಪಿನಾಕಪಾಣಿಯುಮ್ ನಿಮ್ಮೊಡನೆ ಇದಿರ್ಚಿ ಕಾದಿ ಗೆಲಲ್ಕೆ ನೆರೆಯನ್ … ಅದು ನಿಮ್ಮ ಉಪೇಕ್ಷೆಯೆಂದು ಅರಿಯೆನ್… ಇದು ಎನ್ನ ಕರ್ಮವಶಮ್ ಎಂದು ಅರಿಯೆನ್… ನಿಮಗಿಂತು ಸಾವುಮ್ ಏತೆರದಿಮ್ ಅಕಾರಣಮ್ ನೆರೆಯೆ ಸಂಭವಿಸಿರ್ದುದೊ…

(ಎಂದು ದುಃಖಮ್ ಗೆಯ್ದು…)

ದುರ್ಯೋಧನ: ಅನ್ಯಸೈನ್ಯದ ಒಡಲೊಳ್ ಶರಸಂಧಾನಮನ್ … ತನ್ನ ಶಿಷ್ಯರ ಮೆಯ್ಯೊಳ್ ಬಿಲ್ಬಲ್ಮೆಯಮ್… ನಿಖಿಲ ದಿಕ್ಚಕ್ರಂಗಳೊಳ್ ನಿಜಕೀರ್ತಿಯಮ್ … ಹರಪಾದಾಂಬುಯುಗ್ಮದೊಳ್ ಚಿತ್ತಮನ್ ನಿರಿಸಿದನ್… ಚಾಪಾಗಮಾಚಾರ್ಯರೊಳ್ ದ್ರೋಣಂಗೆ ದೊರೆ ಆರ್ ಎಂಬಿನಮ್ ಅಣ್ಮಿ ಸತ್ತ ಅಳವು ಇದೇನ್ ಮೆಯ್ವೆತ್ತುದೋ…

(ಎಂದು ಕುಂಭಸಂಭವನನ್ ತ್ರಿಃಪ್ರದಕ್ಷಿಣಮ್ ಗೆಯ್ದು ಬರುತ್ತಮ್…)

ತಿರುಳು: ದ್ರೋಣಾಚಾರ‍್ಯರಿಗೆ ನಮನ

ಅಂತು=ಕುರುಕ್ಶೇತ್ರ ಯುದ್ದ ಬೂಮಿಯಲ್ಲಿ ಆ ರೀತಿ ಸಂಜಯನೊಡನೆ ನಡೆದು ಬರುತ್ತಿರುವ ದುರ್‍ಯೋದನನು;

ಪ್ರತ್ಯವಾಯ=ಅಡ್ಡಿ/ತಡೆ;

ಬಹುಳ ಪ್ರತ್ಯವಾಯ ಪ್ರದೇಶಗಳನ್ ಎಂತಾನುಮ್ ಕಳೆದು ಪೋಗೆವೋಗೆ=ಆನೆ, ಕುದುರೆ ಮತ್ತು ಮಾನವ ಹೆಣಗಳ ನಡುವೆ ಹೆಜ್ಜೆಗಳನ್ನಿಡಲು ಬಹಳ ಅಡೆತಡೆಯಾಗಿದ್ದ ಪ್ರದೇಶಗಳನ್ನು ಹೇಗೋ ಕಶ್ಟಪಟ್ಟುಕೊಂಡು ದಾಟಿಕೊಂಡು, ಶರಮಂಚದ ಮೇಲೆ ಮಲಗಿರುವ ಬೀಶ್ಮರ ಬಳಿಗೆ ಬರುತ್ತಿರಲು;

ದ್ರೌಪದೀದ್ರೋಹನ್=ಜೂಜಿನ ಪ್ರಸಂಗದಲ್ಲಿ ದ್ರೌಪದಿಯ ಮುಡಿಯನ್ನೆಳೆದು, ಸೀರೆಯನ್ನು ಸುಲಿದು ಅಪಮಾನ ಪಡಿಸಿದ್ದ ವ್ಯಕ್ತಿಯಾದ ದುಶ್ಶಾಸನ;

ಆ ದ್ರೌಪದೀದ್ರೋಹನನ್ ಭವತ್ ಅನುಜನನ್ ಭೀಮನ್ ಮುನಿದು ಎಯ್ತಂದು ಇಲ್ಲಿ ಕೊಂದನ್ ಎನಲ್ಕೆ=ದ್ರೌಪದಿಗೆ ಅಪಮಾನ ಮಾಡಿದ ಆ ನಿನ್ನ ತಮ್ಮನಾದ ದುಶ್ಶಾಸನನನ್ನು ಬೀಮನು ಆಕ್ರೋಶಗೊಂಡು ಮುನ್ನುಗ್ಗಿ ಬಂದು ಈ ಎಡೆಯಲ್ಲಿಯೇ ಕೊಂದನು ಎಂದು ಸಂಜಯನು ಹೇಳಲು;

ಆನ್ ಪರಿಭವಮನ್ ಅದನ್ ಕೇಳಲಾರೆನ್. ಮುಂದೆ ಮುಂದೆ ಎಂದು=ನಾನು ಆ ಸೋಲಿನ ಕಹಿ ಪ್ರಸಂಗವನ್ನು ಕೇಳಲಾರೆನು. ಮುಂದೆ ಮುಂದೆ ನಡೆ ಎಂದು ನುಡಿದ ದುರ್‍ಯೋದನನು;

ಬಾಷ್ಪಾಂಬು ನಿಮಗ್ನನ್ ಭಗ್ನಚಿತ್ತನ್ ತಲೆಯನೆರಗಿ= ಕಣ್ಣೀರನಲ್ಲಿಯೇ ಮುಳುಗಿಹೋಗಿರುವ ಅಂದರೆ ತೀವ್ರವಾದ ಶೋಕದಿಂದ ಕುಗ್ಗಿಹೋಗಿರುವ ದುರ್‍ಯೋದನನು ಹತಾಶೆಯಿಂದ ತಲೆಯನ್ನು ತಗ್ಗಿಸಿ;

ಬಿಲ್+ಓಜ=ಬಿಲ್ಲಿನ ವಿದ್ಯೆಯನ್ನು ಕಲಿಸುವ ಗುರುವಾದ ದ್ರೋಣ;

ಬಿಲ್ಲೋಜನ್ ಎಲ್ಲಿರ್ದನ್… ಭೀಷ್ಮನ್ ಎಲ್ಲಿರ್ದನೊ… ನೋಡುವೆನ್ ತೋರ್ ಎನೆ=ದ್ರೋಣನು ಎಲ್ಲಿದ್ದಾನೆ… ಬೀಶ್ಮನು ಎಲ್ಲಿದ್ದಾನೆ… ಅವರನ್ನು ನೋಡಬೇಕು. ಅವರು ಇರುವ ಜಾಗವನ್ನು ತೋರು ಎಂದು ನುಡಿಯಲು;

ಕುರುಕುಲನನ್ ಸಂಜಯನ್ ಕೊಂಡುಪೋದನ್=ಕುರುಕುಲದ ರಾಜನಾದ ದುರ್‍ಯೋದನನ್ನು ಸಂಜಯನು ಕರೆದುಕೊಂಡು ಹೋದನು;

ಅಂತು ಪೋಗೆ=ಆ ರೀತಿ ಹೋಗುತ್ತಿರಲು;

ಶಿರಸ್ಕಂಧ+ಅವಲಂಬನ್; ಶಿರಸ್ಕಂಧ=ಹೆಗಲು;

ಸಂಜಯ ಶಿರಸ್ಕಂಧಾವಲಂಬನ್ ಕುರುಪ್ರಭು=ತೀವ್ರವಾದ ಸಂಕಟದಿಂದ ಬಳಲುತ್ತಿರುವ ದುರ್‍ಯೋದನನು ಸಂಜಯನ ಹೆಗಲನ್ನು ಆಶ್ರಯಿಸಿ ಹಿಡಿದುಕೊಂಡು;

ಇಭ=ಆನೆ;

ಇಭಶೈಲಂಗಳಮ್ ಏರಿಯೇರಿ=ಬೆಟ್ಟಗಳಂತೆ ಬಿದ್ದಿರುವ ಆನೆಗಳ ಹೆಣಗಳನ್ನು ಹತ್ತಿಳಿದು ಹತ್ತಿ;

ರುಧಿರ=ನೆತ್ತರು/ರಕ್ತ; ಸ್ರೋತ=ಪ್ರವಾಹ;

ರುಧಿರಸ್ರೋತಂಗಳಮ್ ದಾಂಟಿ ದಾಂಟಿ=ನೆತ್ತರಿನ ಹೊಳೆಯನ್ನು ದಾಟಿಕೊಂಡು ಹೋಗುತ್ತ;

ಇಭದೋಃ=ಆನೆಯ ಸೊಂಡಿಲುಗಳು; ಪ್ರತಾನ=ಗುಂಪು/ಸಮೂಹ; ವಿಪಿನ=ಕಾಡು; ವ್ರಾತ=ಗುಂಪು;

ಇಭದೋಃ ನೀಲಲತಾಪ್ರತಾನ ವಿಪಿನವ್ರಾತಂಗಳೊಳ್ ಸಿಲ್ಕಿ ಸಿಲ್ಕಿ=ಆನೆಯ ಸೊಂಡಿಲುಗಳೆಂಬ ಕಡುನೀಲಿಬಣ್ಣದ ಬಳ್ಳಿಗಳ ಕಾಡಿನಲ್ಲಿ ಸಿಕ್ಕಿ ತೊಡರಿಕೊಂಡು;

ಭರಂಗೆಯ್ದು ಉರದೆ ಎಯ್ದಿ=ತವಕದಿಂದ ಅದನ್ನು ಬಿಡಿಸಿಕೊಂಡು ಅಡೆತಡೆಗಳನ್ನು ಲೆಕ್ಕಿಸದೆ ಮುನ್ನಡೆದು;

ಶರಜಾಲ ಜರ್ಜರಿತಗಾತ್ರತ್ರಾಣನನ್ ದ್ರೋಣನನ್ ಕಂಡನ್=ಬಾಣಗಳ ಮೊನೆಯ ಬಲೆಯಲ್ಲಿ ಸಿಲುಕಿ ಚಿದ್ರಚಿದ್ರವಾಗಿದ್ದ ದೇಹದ ದ್ರೋಣನನ್ನು ಕಂಡನು;

ಅಂತು ಎನಿಸಿರ್ದ=ಹಾಗೆ ಬಿದ್ದಿದ್ದ;

ಕಚ=ತಲೆಗೂದಲು; ನಿಗ್ರಹ=ಹತೋಟಿ; ಕರ=ಹಸ್ತ/ಕಯ್; ವಿಲುಳಿತ=ತಿರುಚಿದ/ನುಲಿದ; ಮೌಳಿ+ಆಗಿರ್ದ; ಮೌಳಿ=ತಲೆ; ಭಾರದ್ವಾಜ=ಭರದ್ವಾಜನ ಮಗ ದ್ರೋಣ;

ನಿಸರ್ಗದುಷ್ಟ ಧೃಷ್ಟದ್ಯುಮ್ನ ಕಚನಿಗ್ರಹಕರ ವಿಲುಳಿತ ಮೌಳಿಯಾಗಿರ್ದ ಭಾರದ್ವಾಜನ ಇರವಮ್ ರಾಜರಾಜನ್ ನೋಡಿ=ಮೊದಲಿನಿಂದಲೂ ಕ್ರೂರಿಯಾಗಿದ್ದ ದ್ರುಶ್ಟದ್ಯುಮ್ನನು ದ್ರೋಣರನ್ನು ಕೊಲ್ಲುವಾಗ ಅವರ ತಲೆಗೂದಲನ್ನು ಬಿಗಿಹಿಡಿದು ಎಳೆದು ಹಿಡಿದಿದ್ದರಿಂದ ತಿರುಚಿದಂತಾಗಿದ್ದ ತಲೆಯ ದ್ರೋಣರ ಸ್ತಿತಿಯನ್ನು ದುರ್‍ಯೋದನನು ನೋಡಿ;

ಕುಂಭಸಂಭವ=ದ್ರೋಣ; ಅರಿಯೆಮೆ=ನಮಗೆ ಗೊತ್ತಿಲ್ಲವೇ; ಗಾಂಡಿವಿ=ಅರ್‍ಜುನ; ಪಿನಾಕಪಾಣಿ=ಪಿನಾಕವೆಂಬ ಆಯುದವನ್ನುಳ್ಳವನು/ಈಶ್ವರ;

ಕುಂಭಸಂಭವಾ, ಅರಿಯೆಮೆ=ಗುರುಗಳಾದ ದ್ರೋಣರೇ, ನಮಗೆ ನಿಮ್ಮ ಶಕ್ತಿ ಮತ್ತು ಪರಾಕ್ರಮ ಏನೆಂಬುದು ಗೊತ್ತಿಲ್ಲವೇ. ಅಂದರೆ ನೀವು ಮಹಾ ಬಲಶಾಲಿಗಳು;

ಬಿಲ್ಲ ಬಿನ್ನಣಕೆ ಗಾಂಡಿವಿಯಲ್ತು ಪಿನಾಕಪಾಣಿಯುಮ್ ನಿಮ್ಮೊಡನೆ ಇದಿರ್ಚಿ ಕಾದಿ ಗೆಲಲ್ಕೆ ನೆರೆಯನ್=ನಿಮ್ಮ ಬಿಲ್ಲುಗಾರಿಕೆಯ ನಿಪುಣತೆಯ ಮುಂದೆ ಅರ್‍ಜುನನಲ್ಲ… ದೇವರಾದ ಆ ಈಶ್ವರನೂ ಕೂಡ ನಿಮ್ಮನ್ನು ಎದುರಿಸಿ ಹೋರಾಡಿ ಗೆಲ್ಲಲಾರನು;

ಅದು ನಿಮ್ಮ ಉಪೇಕ್ಷೆಯೆಂದು ಅರಿಯೆನ್=ಕುರುಕ್ಶೇತ್ರ ರಣರಂಗದಲ್ಲಿ ಅಂದು ನೀವು ಹಗೆಗಳಾದ ಪಾಂಡವರೊಡನೆ ಯುದ್ದ ಮಾಡದೆ ಬಿಲ್ಲುಬಾಣಗಳನ್ನು ಕೆಳಕ್ಕಿಟ್ಟು ಸಾವಿಗೆ ಗುರಿಯಾದುದನ್ನು ನಾನು… ನೀವು ನನ್ನನ್ನು ಕಡೆಗಣಿಸಿದಿರಿ ಎಂದು ತಿಳಿಯಲಾರೆನು;

ಇದು ಎನ್ನ ಕರ್ಮವಶಮ್ ಎಂದು ಅರಿಯೆನ್=ನೀವು ಆಯುದಗಳನ್ನು ತ್ಯಜಿಸಿದ್ದು ನನ್ನ ಕರ್‍ಮದ ಪಲವೆಂದು ತಿಳಿಯಲಾರೆನು;

ನಿಮಗಿಂತು ಸಾವುಮ್ ಏತೆರದಿಮ್ ಅಕಾರಣಮ್ ನೆರೆಯೆ ಸಂಭವಿಸಿರ್ದುದೊ ಎಂದು ದುಃಖಮ್ ಗೆಯ್ದು=ನಿಮಗೆ ಈ ರೀತಿಯಾದ ಸಾವು ಯಾವ ರೀತಿಯಲ್ಲಿ ಉಂಟಾಯಿತೊ ಎಂಬ ಸರಿಯಾದ ಕಾರಣವೇ ನನಗೆ ತಿಳಿಯುತ್ತಿಲ್ಲವೆಂದು ಸಂಕಟಪಡುತ್ತ;

ಅನ್ಯಸೈನ್ಯದ ಒಡಲೊಳ್ ಶರಸಂಧಾನಮನ್= ಗುರು ದ್ರೋಣನು ಹಗೆಯ ಸೇನೆಯ ಶತ್ರುಗಳ ದೇಹದಲ್ಲಿ ಬಾಣಗಳನ್ನು ನಾಟಿಸಿದನು;

ತನ್ನ ಶಿಷ್ಯರ ಮೆಯ್ಯೊಳ್ ಬಿಲ್ಬಲ್ಮೆಯಮ್=ತನ್ನ ಶಿಶ್ಯರ ಮಯ್ ಮನದಲ್ಲಿ ಬಿಲ್ ವಿದ್ಯೆಯನ್ನು ನೆಲೆಗೊಳಿಸಿದನು;

ನಿಖಿಲ ದಿಕ್ಚಕ್ರಂಗಳೊಳ್ ನಿಜಕೀರ್ತಿಯಮ್=ಇಡೀ ಜಗತ್ತಿನ ಎಲ್ಲೆಡೆಯಲ್ಲಿಯಲ್ಲಿಯೂ ಮಹಾಗುರುವೆಂಬ ತನ್ನ ಹೆಸರನ್ನು ಬೆಳಗಿದನು;

ಹರಪಾದಾಂಬುಯುಗ್ಮದೊಳ್ ಚಿತ್ತಮನ್ ನಿರಿಸಿದನ್=ಶಿವನ ಪಾದಕಮಲಗಳಲ್ಲಿ ತನ್ನ ಮನಸ್ಸನ್ನು ನೆಲೆಗೊಳಿಸಿದನು;

ಚಾಪ+ಆಗಮ+ಆಚಾರ್ಯರೊಳ್; ಚಾಪ=ಬಿಲ್ಲು; ಆಗಮ=ವಿದ್ಯೆ;

ಚಾಪಾಗಮಾಚಾರ್ಯರೊಳ್ ದ್ರೋಣಂಗೆ ದೊರೆ ಆರ್ ಎಂಬಿನಮ್=ಬಿಲ್ ವಿದ್ಯೆಯನ್ನು ಕಲಿಸುವ ಗುರುಗಳಲ್ಲಿ ದ್ರೋಣನಿಗೆ ಸಮಾನರಾದವರು ಯಾರಿದ್ದಾರೆ ಎನ್ನುವಂತೆ;

ಅಣ್ಮಿ ಸತ್ತ ಅಳವು ಇದೇನ್ ಮೆಯ್ವೆತ್ತುದೋ ಎಂದು =ರಣರಂಗದಲ್ಲಿ ಹೋರಾಡಿ ಸಾವನ್ನಪ್ಪಿದ ಶಕ್ತಿಯು ಇದಾವ ಬಗೆಯಲ್ಲಿ ರೂಪುಗೊಂಡಿತೊ ಎಂದು ಗುರು ದ್ರೋಣರ ವ್ಯಕ್ತಿತ್ವದ ಬಗ್ಗೆ ಅಚ್ಚರಿಯನ್ನು ಮತ್ತು ಮೆಚ್ಚುಗೆಯನ್ನು ದುರ್‍ಯೋದನನು ವ್ಯಕ್ತಪಡಿಸುತ್ತ;

ಕುಂಭಸಂಭವನನ್ ತ್ರಿಃಪ್ರದಕ್ಷಿಣಮ್ ಗೆಯ್ದು ಬರುತ್ತಮ್=ದ್ರೋಣರ ಹೆಣದ ಸುತ್ತ ಮೂರು ಸುತ್ತು ಹಾಕಿ ಬಂದು, ರಣರಂಗದಲ್ಲಿ ಬಿದ್ದಿದ್ದ ಹೆಣಗಳ ರಾಶಿಯ ನಡುವೆ ನಡೆಯತೊಡಗುತ್ತಾನೆ;

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *