ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 11ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 11: ದುಶ್ಶಾಸನನಿಗೆ ಕಣ್ಣೀರಿನ ತರ್‍ಪಣ ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನ ವಿಲಾಪಮ್’ ಎಂಬ ಹೆಸರಿನ 5 ನೆಯ ಅದ್ಯಾಯದ 20 ನೆಯ ಪದ್ಯದಿಂದ 26 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು.
ದುಶ್ಶಾಸನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಎರಡನೆಯ ಮಗ. ಹಸ್ತಿನಾವತಿಯ ಯುವರಾಜ.
*** ಪ್ರಸಂಗ – 11: ದುಶ್ಶಾಸನನಿಗೆ ಕಣ್ಣೀರಿನ ತರ್ಪಣ ***
ರಣದೊಳ್ ಮಡಿದ ಶಲ್ಯನುಮ್ ಸಿಂಧುರಾಜನುಮನ್ ಶಕುನಿಯುಮನ್ ಮತ್ತೆ ಪಲಂಬರ್ ನೃಪತಿಗಳುಮಮ್ ಕಂಡು ಶೋಕಾಕುಲೀಕೃತಚಿತ್ತನಾಗಿ…)
ದುರ್ಯೋಧನ: ಗುಣಿಗಳ್ ತ್ರಿಲೋಕಚೂಡಾಮಣಿಗಳ್ ಕೈಲಾಸಕಲ್ಪ ಸುಭಟಾಗ್ರಣಿಗಳ್ ಎನ್ನಯ ಕಾರಣದಿಂದೆ ಪೊಣರಲ್ ನೆರೆದು…ಈ ನೃಪಸುತರ್ಕಳ್ ಅಳ್ಕಾಡಿದರೇ.
(ಎಂದು ಪಶ್ಚಾತ್ತಾಪಮ್ ಗೆಯ್ಯೆ ಸಂಜಯನ್ ಸಂತೈಸಿ ಮುಂದೊಯ್ಯೆ… ಭೀಮಸೇನನ ಗದಾಪರಿಘ ಪ್ರಹರಣದಿಮ್ ರುಧಿರ ಪ್ರವಾಹವಶಗತನಾಗಿರ್ದ ಯುವರಾಜನ್ ಇರ್ದ ಎಡೆಯಮ್ ಕುರುರಾಜನ್ ಎಯ್ದೆ ವಂದಾಗಳ್…)
ಸಂಜಯ: ದುಶ್ಶಾಸನನನ್ ಪುಡಿಯೊಳ್ ಪೊರಳ್ಚಿಯುಮ್… ಮೆಯ್ಯ ಅಡಗಮ್ ಕಿರಿಕಿರಿದು ಕೊರೆದು ತಿಂದುಮ್…ನೆತ್ತರನ್ ಗೊಟ್ಟಮ್ ಕುಡಿದುಮ್… ಹಿಡಿಂಬ ರಿಪು ಎಂತುಮ್ ತಣಿದನಿಲ್ಲ.
(ಎಂದು ಸಂಜಯನ್ ಪೇಳೆ… ಕೆಳಗಿವಿಗೇಳ್ದು… ಕಿರಿದೆಡೆಯಮ್ ಪೋಗಿ… ತನ್ನ ತಮ್ಮನ್ ಇರ್ದ ಇರವಮ್ ಕಂಡು ಸೈರಿಸಲಾರದೆ..)
ದುರ್ಯೋಧನ: ನಡು ಉಡಿವನ್ನಮ್ ಏರಿ …ಬರಿಯೆಲ್ವು ಉಡಿವನ್ನೆಗಮ್ ಒತ್ತಿ…ಮಯ್ಯ ಅಡಗು ಅಡಗಾಗೆ ಮೆಟ್ಟಿ… ಮುನ್ ಉರಮನ್ ಇರ್ಬಗಿಯಾಗಿರೆ ಪೋಳ್ದು… ನೆತ್ತರಮ್ ಕುಡಿ ಕುಡಿದು ಆರ್ದ ವೈರಿ ಉಳಿದನ್ನೆಗಮ್…ಎನ್ನ ಅಳಲ್ ಎಂತು ಪೋಕುಮ್.
(ಎಂದು ಅಡಿಗಡಿಗೆ ಅಳ್ತು ತನ್ನ ಅಣುಗು ತಮ್ಮನನ್ ಸುಯೋಧನನ್ ಈಕ್ಷಿಸಿದನ್… ಅಂತು ನಿಂದು ನೋಡಿ ಪಲುಂಬಿ ಪಲವಾಡಿ..)
ದುರ್ಯೋಧನ: ಗಾಂಧಾರೀಜ, ನಿಜ ಜೀವಮ್ ಪರಲೋಕದೊಳ್ …ನಿಜ ಮಹಾಮಾಂಸಮ್ ಪಿಶಾಚಾಸ್ಯದೊಳ್ …ನಿಜ ರಕ್ತಮ್ ರಿಪು ಕುಕ್ಷಿಯೊಳ್…ನಿಜಶಿರಮ್ ನಕ್ತಂಚರೀ ಹಸ್ತದೊಳ್ …ನಿಜ ಕಾಯಮ್ ಕುರುಭೂಮಿಯೊಳ್ ನೆಲಸೆ… ದುರ್ಯೋಧನಾನುಜ, ಭೀಮ ಭೀಮಗದೆಯಿಮ್ ಪಂಚತ್ವಮಮ್ ಪೊರ್ದಿದಯ್…
ದುಶ್ಶಾಸನ, ನಿನ್ನನ್ ಕೊಂದನ್ ಗಡಮ್ ಇನ್ನುಮ್ ಒಳನ್…ಕೊಂದವನನ್ ಇಕ್ಕಿ ಕೊಲ್ಲದೆ ಮಾಣ್ದ ಆನ್ ಗಡ ಇನ್ನುಮ್ ಒಳೆನ್ …ನಿನ್ನಯ ಕೂರ್ಮೆಗಮ್ ಅದು ಎನ್ನ ಸೌಧರ್ಮಿಕೆಗಮ್ ಸಾಲದೆ… ಹಾ ವತ್ಸ ದುಶ್ಸಾಸನಾ…ಆನ್ ಜನನೀ ಸ್ತನ್ಯಮನ್ ಉಂಡೆನ್ ಬಳಿಕೆ ನೀನ್ … ಆನ್ ಸೋಮಾಮೃತಮ್ ದಿವ್ಯಭೋಜನಮ್ ಎಂಬ ಇಂತಿವನ್ ಉಂಡೆನ್ ಬಳಿಕೆ ನೀನ್ …ಬಾಲತ್ವದಿಂದೆ ಎಲ್ಲಿಯುಮ್ ವಿನಯ ಉಲ್ಲಂಘನಮ್ ಆದುದಿಲ್ಲ ಮೊನೆಯೊಳ್ ಮರಣಕ್ಕೆ ಎನ್ನಿಂದೆ ನೀನ್ ಮುಂಚಿದಯ್ …ಇದೊಂದು ಎಡೆಯೊಳಮ್ ಸೂಳ್ ತಡಮಾಯ್ತು.(ಎಂದು ವಿಪ್ರಲಾಪಮ್ ಗೆಯ್ದು…)
ದುರ್ಯೋಧನ: ಅನುಜನ ನೆತ್ತರನ್ ಈಂಟಿದವನನ್ …ಇಂದು ಆ ಪ್ರಾಣಸಹಿತಮ್ ಈಂಟದೆ…ದುರ್ಯೋಧನನೆಂಬ ಪೆಸರ್ಗೆ ಮುಯ್ಯಾಂಪೆನೆ…ದುಶ್ಶಾಸನನ ಬನ್ನಮನ್ ನೀಗುವೆನೆ..
(ಎಂದು ಪಿಂಗಾಕ್ಷನ್ ಕೋಪಾರುಣೀಕೃತನೇತ್ರನಾಗಿ ತನ್ನ ತಮ್ಮನ ಕಳೇಬರಮಮ್ ನೋಡಲಾರದೆ…ಅಲ್ಲಿಮ್ ತಳರ್ದು…
ಪದ ವಿಂಗಡಣೆ ಮತ್ತು ತಿರುಳು: ದುಶ್ಶಾಸನನಿಗೆ ಕಣ್ಣೀರಿನ ತರ್‍ಪಣ
ಸಿಂಧುರಾಜ=ಸಿಂದು ಪ್ರಾಂತ್ಯದ ರಾಜನಾದ ಜಯದ್ರತ; ಪಲಂಬರ್=ಹಲವರು; ನೃಪತಿ=ರಾಜ; ಶೋಕ+ಆಕುಲೀಕೃತ+ಚಿತ್ತನ್+ಆಗಿ; ಆಕುಲೀಕೃತ=ತುಂಬಿದ; ಚಿತ್ತ=ಮನಸ್ಸು;
ರಣದೊಳ್ ಮಡಿದ ಶಲ್ಯನುಮ್ ಸಿಂಧುರಾಜನುಮನ್ ಶಕುನಿಯುಮನ್ ಮತ್ತೆ ಪಲಂಬರ್ ನೃಪತಿಗಳುಮನ್ ಕಂಡು ಶೋಕಾಕುಲೀಕೃತಚಿತ್ತನಾಗಿ=ರಣರಂಗದಲ್ಲಿ ಹೋರಾಡುತ್ತ ಸಾವನ್ನಪ್ಪಿದ ಶಲ್ಯ, ಜಯದ್ರತ, ಶಕುನಿ ಮತ್ತೆ ಇನ್ನಿತರ ರಾಜರ ಹೆಣಗಳನ್ನು ನೋಡುತ್ತಿದ್ದಂತೆಯೇ ದುರ್‍ಯೋದನನ ಮನದಲ್ಲಿ ಸಂಕಟವು ತುಂಬಿಕೊಂಡು;
ಚೂಡಾಮಣಿ=ತಲೆಯಲ್ಲಿ ತೊಡುವ ಒಡವೆ/ಉನ್ನತ ವ್ಯಕ್ತಿ; ಕೈಲಾಸ=ಹಿಮಾಲಯ ಪರ್‍ವತಪ್ರಾಂತ್ಯದಲ್ಲಿರುವ ಎತ್ತರವಾದ ಒಂದು ಬೆಟ್ಟ;
ಕಲ್ಪ=ಸಮಾನರೂಪ; ಕೈಲಾಸಕಲ್ಪ=ಕೈಲಾಸಕ್ಕೆ ಸಮಾನವಾದ; ಸುಭಟ+ಅಗ್ರಣಿ+ಗಳ್; ಅಗ್ರಣಿ=ಮುಂದಾಳು; ‘ತ್ರಿಲೋಕಚೂಡಾಮಣಿ’ ಮತ್ತು ‘ಕೈಲಾಸಕಲ್ಪ ಸುಭಟಾಗ್ರಣಿ’ ಎಂಬ ಪದಗಳು ವ್ಯಕ್ತಿಯ ಶಕ್ತಿ ಮತ್ತು ನಡೆನುಡಿಯನ್ನು ಅತಿಶಯವಾಗಿ ಬಣ್ಣಿಸುವ ಪದಗಳು; ಪೊಣರ್=ಹೋರಾಡು; ನೆರೆದು=ಸೇರಿ/ಕೂಡಿ; ನೃಪಸುತರ್+ಕಳ್;
ಗುಣಿಗಳ್ ತ್ರಿಲೋಕಚೂಡಾಮಣಿಗಳ್ ಕೈಲಾಸಕಲ್ಪ ಸುಭಟಾಗ್ರಣಿಗಳ್ ಎನ್ನಯ ಕಾರಣದಿಂದೆ ಪೊಣರಲ್ ನೆರೆದು=ಗುಣವಂತರೂ ಮೂರು ಲೋಕಗಳಲ್ಲಿಯೂ ಅಪ್ರತಿಮರಾದವರೂ ಕೈಲಾಸ ಪರ್‍ವತದಂತೆ ಉನ್ನತವಾದ ಆಕಾರ ಮತ್ತು ಶಕ್ತಿಯುಳ್ಳ ವೀರರೂ ನನ್ನ ಕಾರಣದಿಂದಾಗಿ ಕುರುಕ್ಶೇತ್ರ ರಣರಂಗದಲ್ಲಿ ಹೋರಾಡಲೆಂದು ಜತೆಗೂಡಿ;
ನೃಪಸುತರ್=ರಾಜಕುಮಾರರು; ಅಳ್ಕು=ನಾಶವಾಗು/ಲಯವಾಗು;
ಈ ನೃಪಸುತರ್ಕಳ್ ಅಳ್ಕಾಡಿದರೇ ಎಂದು ಪಶ್ಚಾತ್ತಾಪಮ್ ಗೆಯ್ಯೆ=ಈ ರಾಜಕುಮಾರರೆಲ್ಲರೂ ಸಾವನ್ನಪ್ಪಿ ನಾಶವಾದರೇ ಎಂದು ದುರ್‍ಯೋದನನು ಪಶ್ಚಾತ್ತಾಪವನ್ನು ಪಡುತ್ತಿರಲು;
ಸಂಜಯನ್ ಸಂತೈಸಿ ಮುಂದೊಯ್ಯೆ=ಸಂಜಯನು ದುರ್‍ಯೋದನನನ್ನು ಸಮಾದಾನ ಪಡಿಸಿ, ಮುಂದೆ ಕರೆದೊಯ್ಯಲು;
ಭೀಮಸೇನನ ಗದಾಪರಿಘ ಪ್ರಹರಣದಿಮ್=ಬೀಮಸೇನನ ಲಾಳವಿಂಡಿಗೆಯೆಂಬ ಆಯುದದಂತೆ ದೊಡ್ಡದಾಗಿದ್ದ ಗದೆಯ ಹೊಡೆತದಿಂದ;
ರುಧಿರ=ರಕ್ತ/ನೆತ್ತರು;
ರುಧಿರ ಪ್ರವಾಹವಶಗತನಾಗಿರ್ದ ಯುವರಾಜನ್ ಇರ್ದ ಎಡೆಯಮ್ ಕುರುರಾಜನ್ ಎಯ್ದೆ ವಂದಾಗಳ್=ಹೆಪ್ಪುಗಟ್ಟಿದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವರಾಜನಾದ ದುಶ್ಶಾಸನನ್ನು ಹತ್ತಿರಕ್ಕೆ ಬಂದಾಗ; ಪುಡಿ=ಮಣ್ಣು; ಪೊರಳ್ಚು=ಉರುಳಿಸು/ಹೊರಳಾಡಿಸು;
ದುಶ್ಶಾಸನನನ್ ಪುಡಿಯೊಳ್ ಪೊರಳ್ಚಿಯುಮ್= ದುಶ್ಶಾಸನನನ್ನು ಮಣ್ಣಿನ ಹುಡಿಯಲ್ಲಿ ಉರುಳಾಡಿಸಿಕೊಂಡು ಕೊಂದು; ಅಡಗು=ಮಾಂಸ; ಕಿರಿಕಿರಿದು ಕೊರೆದು=ಸಣ್ಣ ಸಣ್ಣ ತುಂಡುಗಳನ್ನು ಕತ್ತರಿಸಿ;
ಮೆಯ್ಯ ಅಡಗಮ್ ಕಿರಿಕಿರಿದು ಕೊರೆದು ತಿಂದುಮ್= ಅವನ ಮಯ್ಯಿನ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸಿಕೊಂಡು ತಿಂದು;
ನೆತ್ತರ್=ರಕ್ತ; ಗೊಟ್ಟಮ್+ಕುಡಿ; ಗೊಟ್ಟ=ದನಗಳನ್ನು ದ್ರವರೂಪದ ವಸ್ತುವನ್ನು ಕುಡಿಸಲು ಬಳಸುವ ಬಿದಿರಿನ ಕೊಳವೆ; ಗೊಟ್ಟಮ್ ಕುಡಿ=ಇದೊಂದು ನುಡಿಗಟ್ಟು. ಗಟಗಟನೆ ಕುಡಿ/ಒಂದೇ ಸಮನೆ ಕುಡಿ;
ನೆತ್ತರನ್ ಗೊಟ್ಟಮ್ ಕುಡಿದುಮ್=ದುಶ್ಶಾಸನ ನೆತ್ತರನ್ನು ಗಟಗಟನೆ ಕಂಟಪೂರ್‍ತಿ ಕುಡಿದರೂ;
ಹಿಡಿಂಬ ರಿಪು=ಹಿಡಿಂಬನೆಂಬ ರಕ್ಕಸನ ಶತ್ರುವಾದ ಬೀಮ; ತಣಿ=ತ್ರುಪ್ತಿಹೊಂದು;
ಹಿಡಿಂಬ ರಿಪು ಎಂತುಮ್ ತಣಿದನಿಲ್ಲ ಎಂದು ಸಂಜಯನ್ ಪೇಳೆ=ಬೀಮನು ಯಾವ ರೀತಿಯಿಂದಲೂ ತುಸುವಾದರೂ ತ್ರುಪ್ತಿಯನ್ನು ಹೊಂದಲಿಲ್ಲವೆಂದು ಸಂಜಯನು ನುಡಿಯಲು;
ಕೆಳಗಿವಿ+ಕೇಳ್ದು; ಕೆಳಗಿವಿಗೇಳ್ದು=ಇದೊಂದು ನುಡಿಗಟ್ಟು. ಕೇಳಿದರೂ ಕೇಳಿಸಿಕೊಳ್ಳದಂತೆ/ಕಿವಿಯ ಮೇಲೆ ಹಾಕಿಕೊಳ್ಳದೆ;
ಕೆಳಗಿವಿಗೇಳ್ದು… ಕಿರಿದೆಡೆಯಮ್ ಪೋಗಿ… ತನ್ನ ತಮ್ಮನ್ ಇರ್ದ ಇರವಮ್ ಕಂಡು ಸೈರಿಸಲಾರದೆ=ಸಂಜಯನ ಮಾತುಗಳನ್ನು ಕೇಳಿಯೂ ಕೇಳಿಸಿಕೊಳ್ಳದಂತೆ… ತುಸುದೂರ ಹೋಗಿ… ಅಲ್ಲಿ ತನ್ನ ತಮ್ಮ ದುಶ್ಶಾಸನನು ಇದ್ದ ಬಯಂಕರವಾದ ಸ್ತಿತಿಯನ್ನು ಕಂಡು… ಸಂಕಟವನ್ನು ತಡೆದುಕೊಳ್ಳಲಾಗದೆ;
ಉಡಿವ+ಅನ್ನಮ್; ಉಡಿ=ಮುರಿ;ಅನ್ನಮ್=ವರೆಗೂ; ಏರು=ಪೆಟ್ಟು/ಹೊಡೆತ;
ನಡು ಉಡಿವನ್ನಮ್ ಏರಿ=ಸೊಂಟ ಮುರಿಯುವವರೆಗೂ ಹೊಡೆದು;
ಬರಿಯೆಲ್ವು ಉಡಿವನ್ನೆಗಮ್ ಒತ್ತಿ=ಪಕ್ಕೆಲುಬು ಮುರಿಯುವವರೆಗೂ ಅದುಮಿಹಿಡಿದು;
ಅಡಗು=ಮಾಂಸ;
ಮಯ್ಯ ಅಡಗು ಅಡಗಾಗೆ ಮೆಟ್ಟಿ=ಮಯ್ಯಿನ ಮಾಂಸವು ಮುದ್ದೆಯಾಗುವಂತೆ ತುಳಿದು;
ಉರ=ಎದೆ;
ಮುನ್ ಉರಮನ್ ಇರ್ಬಗಿಯಾಗಿರೆ ಪೋಳ್ದು=ಮುಂದಿನ ಎದೆಯನ್ನು ಎರಡು ಹೋಳುಗಳಾಗಿ ಸೀಳಿ;
ಆರ್=ಗಟ್ಟಿಯಾಗಿ ಕೂಗು/ಅಬ್ಬರಿಸು/ಗರ್‍ಜಿಸು;
ನೆತ್ತರಮ್ ಕುಡಿ ಕುಡಿದು ಆರ್ದ ವೈರಿ ಉಳಿದನ್ನೆಗಮ್ =ರಕ್ತವನ್ನು ಕುಡಿಕುಡಿದು ಅಬ್ಬರಿಸಿದ ಶತ್ರು ಜೀವಂತವಾಗಿರುವವರೆಗೂ;
ಎನ್ನ ಅಳಲ್ ಎಂತು ಪೋಕುಮ್ ಎಂದು ಅಡಿಗಡಿಗೆ ಅಳ್ತು=ನನ್ನ ಸಂಕಟವು ಹೇಗೆ ಹೋಗುತ್ತದೆ ಎಂದು ಒಂದೇ ಸಮನೆ ಕಂಬನಿಗರೆಯುತ್ತ;
ಅಣುಗು=ಪ್ರೀತಿ/ಒಲುಮೆ;
ತನ್ನ ಅಣುಗು ತಮ್ಮನನ್ ಸುಯೋಧನನ್ ಈಕ್ಷಿಸಿದನ್=ತನ್ನ ಪ್ರೀತಿಯ ತಮ್ಮನನ್ನು ಸುಯೋದನನು ನೋಡಿದನು;
ಪಲುಂಬು=ಅಳು/ಗೋಳಾಡು/ರೋದಿಸು; ಪಲವಾಡು=ಬಗೆಬಗೆಯಲ್ಲಿ ಮಾತನಾಡು;
ಅಂತು ನಿಂದು ನೋಡಿ ಪಲುಂಬಿ ಪಲವಾಡಿ=ದುರ್‍ಯೋದನನು ತಮ್ಮನ ಹೆಣದ ಮುಂದೆ ನಿಂತು ಸಂಕಟದಿಂದ ರೋದಿಸುತ್ತ, ತಮ್ಮನ ಸಾವಿನ ಗಳಿಗೆಯಲ್ಲಿ ನಡೆದುದೆಲ್ಲವನ್ನೂ ನೆನೆನೆನೆದು ಪರಿತಪಿಸುತ್ತ ಹಲವು ನುಡಿಗಳನ್ನಾಡತೊಡಗುತ್ತಾನೆ;
ಗಾಂಧಾರೀಜ=ಗಾಂದಾರಿಯ ಮಗ; ನಿಜ=ನಿನ್ನ;
ಗಾಂಧಾರೀಜ, ನಿಜ ಜೀವಮ್ ಪರಲೋಕದೊಳ್=ದುಶ್ಶಾಸನನೇ, ನಿನ್ನ ಜೀವ ಪರಲೋಕದಲ್ಲಿ;
ಪಿಶಾಚ+ಆಸ್ಯದ+ಒಳ್; ಆಸ್ಯ=ಮೊಗ/ಬಾಯಿ;
ನಿಜ ಮಹಾಮಾಂಸಮ್ ಪಿಶಾಚಾಸ್ಯದೊಳ್=ನಿನ್ನ ಮಯ್ಯಿನ ಮಾಂಸವೆಲ್ಲವೂ ದೆವ್ವದ ಬಾಯಲ್ಲಿ;
ಕುಕ್ಷಿ=ಹೊಟ್ಟೆ;
ನಿಜ ರಕ್ತಮ್ ರಿಪು ಕುಕ್ಷಿಯೊಳ್=ನಿನ್ನ ರಕ್ತ ಹಗೆಯಾದ ಬೀಮನ ಹೊಟ್ಟೆಯಲ್ಲಿ;
ನಕ್ತಂಚರೀ=ರಕ್ಕಸಿ/ರಾತ್ರಿಯಲ್ಲಿ ತಿರುಗುವವಳು;
ನಿಜಶಿರಮ್ ನಕ್ತಂಚರೀ ಹಸ್ತದೊಳ್=ನಿನ್ನ ತಲೆಯು ಇರುಳಲ್ಲಿ ಅಲೆಯುವ ರಕ್ಕಸಿಯ ಕಯ್ಯಲ್ಲಿ;
ನಿಜ ಕಾಯಮ್ ಕುರುಭೂಮಿಯೊಳ್ ನೆಲಸೆ=ನಿನ್ನ ದೇಹವು ಕುರುಕ್ಶೇತ್ರದ ರಣರಂಗದಲ್ಲಿ ಬಿದ್ದಿರಲು;
ದುರ್ಯೋಧನ+ ಅನುಜ; ಅನುಜ=ತಮ್ಮ; ಭೀಮಗದೆ=ಬಯಂಕರವಾದ ಗದೆ; ಪಂಚತ್ವ=ಸಾವು/ಮರಣ/ಅಯ್ದು ಬಾಗ;
ದುರ್ಯೋಧನಾನುಜ, ಭೀಮ ಭೀಮಗದೆಯಿಮ್ ಪಂಚತ್ವಮಮ್ ಪೊರ್ದಿದಯ್=ದುಶ್ಶಾಸನನೇ, ನೀನು ಬೀಮನ ಬಯಂಕರವಾದ ಗದೆಯ ಹೊಡೆತದಿಂದ ಮರಣವನ್ನು ಹೊಂದಿದೆ;
ನಿನ್ನ ಜೀವ – ಮಾಂಸ – ರಕ್ತ – ತಲೆ – ದೇಹಗಳು ಹರಿದು ಹಂಚಿಹೋಗಿ ಅಯ್ದು ಎಡೆಗಳಲ್ಲಿ ಸೇರಿಕೊಂಡಿವೆ; ಗಡ=ಕಂಡೆಯಾ/ತಿಳಿದಿರುವೆಯಾ;
ದುಶ್ಶಾಸನ, ನಿನ್ನನ್ ಕೊಂದನ್ ಗಡಮ್ ಇನ್ನುಮ್ ಒಳನ್=ದುಶ್ಶಾಸನನೇ, ಕಂಡೆಯಾ… ನಿನ್ನನ್ನು ಕೊಂದ ಆ ಬೀಮನು ಇನ್ನೂ ಜೀವಂತವಾಗಿದ್ದಾನೆ;
ಮಾಣ್=ಸುಮ್ಮನಿರುವುದು;
ಕೊಂದವನನ್ ಇಕ್ಕಿ ಕೊಲ್ಲದೆ ಮಾಣ್ದ ಆನ್ ಗಡ ಇನ್ನುಮ್ ಒಳೆನ್ =ನಿನ್ನನ್ನು ಕೊಂದವನನ್ನು ಹೊಡೆದು ಕೊಲ್ಲದೆ ಸುಮ್ಮನಿರುವ ನಾನು ಕೂಡ… ಕಂಡೆಯಾ… ಜೀವಂತವಾಗಿದ್ದೇನೆ;
ಕೂರ್ಮೆ=ಪ್ರೀತಿ/ಒಲುಮೆ/ನಲುಮೆ ; ಸೌಧರ್ಮಿಕೆ=ಒಳ್ಳೆಯತನ; ಸಾಲದೆ=ಸಾಕಲ್ಲವೇ;
ನಿನ್ನಯ ಕೂರ್ಮೆಗಮ್ ಅದು ಎನ್ನ ಸೌಧರ್ಮಿಕೆಗಮ್ ಸಾಲದೆ=ನೀನು ನನ್ನಲ್ಲಿಟ್ಟಿದ್ದ ಪ್ರೀತಿಗೂ… ಅದಕ್ಕೆ ಬದಲಾಗಿ ಅಣ್ಣನಾದ ನಾನು ತೋರಿಸುತ್ತಿರುವ ಸೋದರ ಪ್ರೀತಿಯ ಒಳ್ಳೆಯತನಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿದೆಯಾ; ನೀನು ನನಗಾಗಿ ರಣರಂಗದಲ್ಲಿ ಹೋರಾಡಿ ಸಾವನ್ನಪ್ಪಿದೆ. ಆದರೆ ನಾನಾದರೋ ನಿನಗಾಗಿ ಏನನ್ನೂ ಮಾಡದೆ ಸುಮ್ಮನಿದ್ದೇನೆ. ನಿನ್ನ ನನ್ನ ವ್ಯಕ್ತಿತ್ವವನ್ನು ಸೂಚಿಸುವುದಕ್ಕೆ ಇದು ಸಾಕಲ್ಲವೇ. ನೀನು ಸೋದರ ಪ್ರೀತಿಗಾಗಿ ಬಲಿಯಾದೆ. ನಾನು ಸುಮ್ಮನಾಗಿ ಜೀವಗಳ್ಳನಾದೆ; ದುರ್‍ಯೋದನನು “ಎನ್ನ ಸೌಧರ್ಮಿಕೆ – ನನ್ನ ಒಳ್ಳೆಯತನ” ಎಂಬ ಮಾತನ್ನು ತನ್ನನ್ನೇ ತಾನು ಹಂಗಿಸಿಕೊಳ್ಳುತ್ತ/ನಿಂದಿಸಿಕೊಳ್ಳುತ್ತ ನುಡಿದಿದ್ದಾನೆ.
ಹಾ ವತ್ಸ ದುಶ್ಸಾಸನಾ= ಹಾ… ಒಡಹುಟ್ಟಿದ ತಮ್ಮನಾದ ದುಶ್ಶಾಸನನೇ;
ಆನ್=ನಾನು; ಸ್ತನ್ಯ=ಮೊಲೆಹಾಲು; ಜನನೀ ಸ್ತನ್ಯಮನ್=ತಾಯಿಯ ಎದೆ ಹಾಲನ್ನು;
ಆನ್ ಜನನೀ ಸ್ತನ್ಯಮನ್ ಉಂಡೆನ್ ಬಳಿಕೆ ನೀನ್=ಹಿರಿಯ ಮಗನಾದ ನಾನು ತಾಯಿ ಗಾಂದಾರಿಯ ಮೊಲೆವಾಲನ್ನು ಮೊದಲು ಕುಡಿದೆನು. ಕಿರಿಯವನಾದ ನೀನು ಅನಂತರ ಕುಡಿದೆ;
ಸೋಮ+ಅಮೃತಮ್; ಸೋಮಾಮೃತ=ಸೋಮವೆಂಬ ಬಳ್ಳಿಯಿಂದ ಮಾಡಿದ ರಸ;
ಸೋಮಾಮೃತಮ್ ದಿವ್ಯಭೋಜನಮ್ ಎಂಬ ಇಂತಿವನ್ ಉಂಡೆನ್ ಆನ್ ಬಳಿಕೆ ನೀನ್=ಸೋಮರಸವನ್ನು… ಒಳ್ಳೆಯ ಉಣಿಸು ತಿನಸು ಮೊದಲಾದುವೆಲ್ಲವನ್ನೂ ನಾನು ಮೊದಲು ಉಂಡೆನು. ಅನಂತರ ನೀನು ಸೇವಿಸಿದೆ;
ಬಾಲತ್ವದಿಂದೆ ಎಲ್ಲಿಯುಮ್ ವಿನಯ ಉಲ್ಲಂಘನಮ್ ಆದುದಿಲ್ಲ=ಚಿಕ್ಕಂದಿನಿಂದಲೂ ಜೀವನದ ಎಲ್ಲ ಕಡೆಗಳಲ್ಲಿಯೂ “ಅಣ್ಣನಾದ ನಾನು ಮೊದಲು; ತಮ್ಮನಾದ ನೀನು ನಂತರ” ಎಂಬ ಒಲವು ನಲಿವಿನ ನಡೆನುಡಿಯು ನಮ್ಮಿಬ್ಬರ ನಡುವೆ ಎಂದಿಗೂ ತಪ್ಪಿರಲಿಲ್ಲ;
ಮೊನೆ=ಕಾಳೆಗ/ಯುದ್ದ; ಮುಂಚು=ಮುಂಚಿತವಾಗಿ ಹೋಗು/ಮೊದಲು ಹೋಗು;
ಮೊನೆಯೊಳ್ ಮರಣಕ್ಕೆ ಎನ್ನಿಂದೆ ನೀನ್ ಮುಂಚಿದಯ್=ರಣರಂಗದಲ್ಲಿ ಸಾವನ್ನು ನನಗಿಂತ ಮುಂಚಿತವಾಗಿ ನೀನು ಅಪ್ಪಿದೆ;
ಸೂಳ್=ಸರದಿ;
ಇದೊಂದು ಎಡೆಯೊಳಮ್ ಸೂಳ್ ತಡಮಾಯ್ತು ಎಂದು ವಿಪ್ರಲಾಪಮ್ ಗೆಯ್ದು=ಇದೊಂದು ಜಾಗದಲ್ಲಿ ನನ್ನ ನಿನ್ನ ನಡುವೆ ಇದ್ದ ಸರದಿಯು ಹಿಂದುಮುಂದಾಯಿತು ಎಂದು ಅತಿಯಾಗಿ ಗೋಳಾಡುತ್ತ; ‘ದುರ್ಯೋಧನ‘ ಎಂದರೆ “ಯಾರಿಂದಲೂ ಸೋಲಿಸಲಾಗದಂತಹ ಶಕ್ತಿಯುಳ್ಳ ಕಾದಾಳು” ಎಂಬ ತಿರುಳಿದೆ;
ಅನುಜನ ನೆತ್ತರನ್ ಈಂಟಿದವನನ್ ಇಂದು ಆ ಪ್ರಾಣಸಹಿತಮ್ ಈಂಟದೆ ದುರ್ಯೋಧನನೆಂಬ ಪೆಸರ್ಗೆ ಮುಯ್ಯಾಂಪೆನೆ=ತಮ್ಮನ ರಕ್ತವನ್ನು ಕುಡಿದವನನ್ನು ಇಂದು ಜೀವಸಹಿತವಾಗಿ ನುಂಗಿನೊಣೆಯದೆ ದುರ್‍ಯೋದನನೆಂಬ ಹೆಸರಿಗೆ ತಕ್ಕಂತೆ ಸೇಡನ್ನು ತೀರಿಸಿಕೊಳ್ಳದೆ ಇರುತ್ತೇನೆಯೇ;
ಬನ್ನ=ಅವಮಾನ/ಸೋಲು; ನೀಗು=ನಿವಾರಿಸು/ಪರಿಹರಿಸು;
ದುಶ್ಶಾಸನನ ಬನ್ನಮನ್ ನೀಗುವೆನೆ ಎಂದು=ದುಶ್ಶಾಸನನಿಗೆ ಬೀಮನಿಂದಾಗಿರುವ ಅಪಮಾನದ ಸೋಲಿಗೆ ತಕ್ಕ ಪ್ರತೀಕಾರವನ್ನು ಮಾಡದೆ ಇರುತ್ತೇನೆಯೇ ಎಂದು ನುಡಿದು;
ಪಿಂಗ+ಅಕ್ಷನ್; ಪಿಂಗ=ಕಂದು ಬಣ್ಣ; ಅಕ್ಷ=ಕಣ್ಣು; ಪಿಂಗಾಕ್ಷನ್=ಕೆಂಗಣ್ಣುಳ್ಳವನು/ದುರ್‍ಯೋದನ; ಕೋಪ+ಅರುಣೀ+ಕೃತ+ನೇತ್ರನ್+ಆಗಿ; ಅರುಣ=ಕೆಂಪು; ಅರುಣೀಕೃತ=ಕೆಂಪಾದ; ನೇತ್ರ=ಕಣ್ಣು;
ಪಿಂಗಾಕ್ಷನ್ ಕೋಪಾರುಣೀಕೃತನೇತ್ರನಾಗಿ=ಕೋಪದ ತೀವ್ರತೆಯಿಂದ ಕೆಂಪಾದ ಕಣ್ಣುಗಳ ದುರ್ಯೋದನನು;
ಕಳೇಬರ=ಹೆಣ; ತಳರ್=ಹೊರಡು;
ತನ್ನ ತಮ್ಮನ ಕಳೇಬರಮನ್ ನೋಡಲಾರದೆ… ಅಲ್ಲಿಮ್ ತಳರ್ದು=ಚಿದ್ರಚಿದ್ರಗೊಂಡಿರುವ ತನ್ನ ತಮ್ಮನ ಹೆಣವನ್ನು ನೋಡಲಾರದೆ, ಅಲ್ಲಿಂದ ಹೊರಟು ಮುಂದಕ್ಕೆ ಅಡಿಯಿಟ್ಟನು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು