ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 26ನೆಯ ಕಂತು
– ಸಿ.ಪಿ.ನಾಗರಾಜ.
*** ಲಕ್ಶ್ಮಿಯನ್ನು ಅಡ್ಡಗಟ್ಟಿ ಎಳೆತಂದ ಅಶ್ವತ್ತಾಮ ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನಾವಸಾನಂ’ ಎಂಬ ಹೆಸರಿನ 9 ನೆಯ ಅದ್ಯಾಯದ 1ನೆಯ ಗದ್ಯದಿಂದ 9ನೆಯ ಪದ್ಯ ಮತ್ತು ಗದ್ಯವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ಅಶ್ವತ್ಥಾಮ: ದ್ರೋಣಾಚಾರ್ಯರ ಮಗ. ದುರ್ಯೋದನನ ಸೇನಾಬಲದಲ್ಲಿ ಪ್ರಮುಕನಾದ ವೀರ.
ಲಕ್ಷ್ಮಿ: ರಾಜ್ಯದ ಗದ್ದುಗೆ ಮತ್ತು ಸಂಪತ್ತಿನ ದೇವತೆ.
*** ಲಕ್ಷ್ಮಿಯನ್ನು ಅಡ್ಡಗಟ್ಟಿ ಎಳೆತಂದ ಅಶ್ವತ್ಥಾಮ ***
ಅನ್ನೆಗಮ್ ಚಕ್ರಿ ಅಸಮ ಸಾಹಸ ಉದ್ದಾಮನಪ್ಪ ಅಶ್ವತ್ಥಾಮನ ಬರವನ್ ಅರಿದು… ಅನಾಗತಬಾಧಾ ಪರಿಚ್ಛೇದಮಮ್ ಮಾಡಲೆಂದು ದೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯು ಉತ್ತಮೌಜಸರುವಮ್… ಶ್ರುತ ಸೋಮಕ ಪ್ರಮುಖರಪ್ಪ ಪಾಂಡವಸೂನುಗಳಪ್ಪ ಪಂಚ ಪಾಂಡವರುಮಮ್ ಬೀಡಿಂಗೆ ಕಾಪುವೇಳ್ದು… ಹಸ್ತ್ಯಶ್ವರಥಪದಾತಿಬಲಮ್ ಬೆರಸು ಹಸ್ತಿನಾಪುರಕ್ಕೆ ಕಳಿಪಿ… ಪಾಂಡವರ್ ಅಯ್ವರುಮನ್ ಒಡಗೊಂಡು ನೀಳಾಚಲಕ್ಕೆ ನೀಲಾಂಗನ್ ಪೋದನ್.
ಅನ್ನೆಗಮ್ ಇತ್ತ ಗಾಂಗೇಯನ್ ಅರಿಪೆ… ಕೌರವೇಶ್ವರನ್ ಇರ್ದ ಎಡೆಯಮ್ ಅಶ್ವತ್ಥಾಮನ್ ಅರಿದು ಬರ್ಪಾಗಳ್… .ಕನತ್ಕನಕ ತಾಮರಮ್ ಧವಳ ಚಾಮರಮ್ ಕಯ್ಗಳೊಳ್… ಮಾಸಿ ತಾರಿದ ಕುರುಳ್ಗಳುಮ್… ಮನಮ್ ಚಲಿಸೆ… ತನ್ನ ಬಿನ್ನನಿರ್ದ ಮೊಗದಿಮ್ ವಿಲಾಸಮುಮ್ ತವಿಲ್ದಿರೆ ಕಮಳಾಕ್ಷಿಯನ್ ಲಕ್ಷ್ಮಿಯಮ್ ವೃಷಭಲಕ್ಷಣನ್ ಅಲ್ಲಿ ಮುಂದೆ ಕಂಡನ್… ಅಂತು ಕುಂಭಸಂಭವಸಂಭವನ್ ಅಮೃತಾಬ್ಧಿ ಸಂಭವೆಯನ್ ಕಂಡು…
ಅಶ್ವತ್ಥಾಮ: ನೀನಾರ್ಗೆ… ಎತ್ತಣಿಂದಮ್ ಬಂದೆ… ಎಲ್ಲಿಗೆ ಪೋದಪೆ.
(ಎಂದು ಬೆಸಗೊಳೆ…)
ಲಕ್ಷ್ಮಿ: ಅಮೃತಪಯೋಧಿ ಮಂಥನದೆ ಪುಟ್ಟಿದ… ಪದ್ಮ ವನಾಂತರಾಳದೊಳ್ ರಮಿಯಿಪ ಪದ್ಮನಾಭನ ಉರದೊಳ್ ನೆಲಸಿರ್ಪ ಮಹಾನುಭಾವೆಯೆನ್… ಕಮಳೆಯೆನ್… ಇನ್ನೆಗಮ್ ಕುರುಮಹೀಪತಿಯೊಳ್ ನೆಲೆಸಿರ್ದೆನ್. ಈಗಳ್ ಉತ್ತಮ ಪುರುಷೋತ್ತಮನ್ ಬೆಸಸೆ, ಪಾಂಡವರೊಳ್ ನೆಲಸಲ್ಕೆ ಪೋದಪೆನ್.
(ಎಂಬುದುಮ್… “ನಾರಾಯಣನ್ ಬೆಸಸೆ ಪೋದಪೆನ್” ಎಂದ ಲಕ್ಷ್ಮಿಯ ಮಾತನ್ ದ್ರೋಣನಂದನನ್ ಅವಧಾರಿಸಿ ಮುಗುಳ್ನಗೆ ನಕ್ಕು)
ಅಶ್ವತ್ಥಾಮ: ಜಡಧಿಸಂಭವೆಯಪ್ಪುದರಿಮ್ ನೀನ್ ಚಳಮತಿಯಾದೆ… ಸರೋಜಸಂಕುಲರಜದಿಂದೆ ನೀನ್ ಪೊರೆದು ರಾಜಸದೊಳ್ ನೆಲೆಸಿರ್ಪೆ… ಗೋವುಗಾದು ಅಳವು ಅಳಿದಿರ್ದ ಕೃಷ್ಣನೊಡನೆ ಇರ್ದುದರಿಂದಮೆ ಗೋವಿಯಾದೆ… ನಿನಗೆ ಅಗ್ಗಳದ ವಿವೇಕಮಿಲ್ಲ… ಆ ಪುರುಷಾಂತರಂಗಳಾ ಎತ್ತ ಅರಿವೆ… ಕಲಿ ಪಂದೆಯೆಂದು ಬಗೆಯದೆ… ಕುಲಜನ್ ಕುಲಹೀನನೆಂದು ಬಗೆಯದೆ… ತರುಣನ್ ಸಲೆ ವೃದ್ಧನೆಂದು ಬಗೆಯದೆ ನೆಲಸುವೆ… ನಿನ್ನಿಮ್ ನಿಕೃಷ್ಟರ್ ಎಂಬರುಮ್ ಒಳರೇ… ತಂದೆ ಮಕ್ಕಳನ್ ಇರಿಯಿಸುವೆ… ಸೋದರರ್ಕಳಮ್ ಇರಿಯಿಸುವಯ್ … ಗುರುಶಿಷ್ಯರನ್ ತಮ್ಮೊಳ್ ತಳ್ತು ಇರಿಯಿಸುವಯ್… ಅರಗುಲಿ, ನಿನ್ನಿಮ್ ನಿಕೃಷ್ಟರಾದರುಮ್ ಒಳರೇ…
(ಎಂದು ಲಕ್ಷ್ಮಿಯನ್ ವಿಡಂಬನಮ್ ಗೆಯ್ದು…)
ಅಶ್ವತ್ಥಾಮ: ಪೋ, ಮಾಣ… ಧರ್ಮಜನ್ ಗಡ… ಭೀಮನ್ ಗಡ… ಫಲ್ಗುಣನ್ ಗಡ… ಅಮಳ್ಗಳ್ ಗಡ… ಅವಂದಿರ್ ಅಶ್ವತ್ಥಾಮಂಗೆ ಸಂಗ್ರಾಮದೊಳ್ ಆಪೋಶನಗೊಳಲ್ ನೆರೆದಪರೇ… ..ಎಲಗೆ, ನಿನ್ನ ಮುರವೈರಿಯ ಅಳವುಮನ್… ಎನ್ನ ಅಳವುಮನ್ ಕಾಣ್ಬೆ… ಮುನ್ನಮ್ ತ್ವತ್ ಪತಿಯಿಂದಮ್ ಕುರುಪತಿಯಿಂದಮ್ ನಿನ್ನನ್ ಅಗಲ್ಚಲ್ಕೆ ಕಪಟಗೋಪನ್ ಪ್ರಭುವೇ… ಕುರುರಾಜನ್ ರಾಜರಾಜನ್ ಸಕಲ ವಸುಮತಿಕಾಂತನ್ ಇರ್ದಂತೆ… ಯುದ್ಧಾತುರನ್ ಇನ್ನು ಈ ಸಾಹಸಾಂಕನ್ ಕುರುಕುಳಪತಿಯಿರ್ದಂತೆ… ಮೆಳ್ಪಟ್ಟು ದಾಮೋದರನ್ ಎಂದ ಈ ಕಜ್ಜದೊಳ್ ನೀನ್ ತೊಡರ್ದು… ಮರುಳೆ, ಬೆಂಡಾಗದಿರ್… ನೀನ್ ಚೆಚ್ಚರಮ್ ಅತ್ತ ಪೋಗು…… ಇನ್ನೆತ್ತ ಪೋಪೌ ಪರಿಭವಿಸಿದಪೆನ್… ನಿನ್ನನ್ ಇನ್ ಕಾವನ್ ಆವೊನ್…
(ಎಂದು ಅಶ್ವತ್ಥಾಮನ್ ಉದ್ದಾಮ ಕೋಪಾಟೋಪಬದ್ಧ ಭ್ರುಕುಟಿಯುಮ್ ತರಳತಾಮ್ರ ಲೋಚನನುಮ್ ಆಗೆ..)
ಲಕ್ಷ್ಮಿ: ಅತ್ತಲ್ ಅಸುರಾರಿ ಬೆಸಸಿದನ್. ಇತ್ತಲ್ ರುದ್ರಾವತಾರನ್ ಎಳೆದು ಒಯ್ದಪನ್… ಇಂತು ಅತ್ತ ಪುಲಿ… ಇತ್ತ ದರಿ.
(ಎಂದು ಅತ್ತಿತ್ತ ಅಡಿಯಿಡದೆ ಲಕ್ಷ್ಮಿ ತಳವೆಳಗಾದಳ್. ಅಂತು ತಳವೆಳಗಾದ ಲಕ್ಷ್ಮಿಯ ಚಳತ್ ಅಳಿವಿನೀಳ ಕುಟಿಲ ಕುಂತಳಂಗಳಮ್ ತಳಮಾರೆ ತೆಗೆದು ಕುರುಕುಲ ಕುಟುಂಬನ ಘಟಚೇಟಿಯನ್ ಕೊಂಡು ಪೋಪಂತೆ ಮಗುಳೆ ಕೊಂಡು ಪೋಗಿ…)
ಪದ ವಿಂಗಡಣೆ ಮತ್ತು ತಿರುಳು: ಲಕ್ಶ್ಮಿಯನ್ನು ಅಡ್ಡಗಟ್ಟಿ ಎಳೆತಂದ ಅಶ್ವತ್ತಾಮ
ಅನ್ನೆಗಮ್=ಅಶ್ಟರಲ್ಲಿ/ಆ ಸನ್ನಿವೇಶದಲ್ಲಿ; ಚಕ್ರಿ=ಕ್ರಿಶ್ಣ; ಅಸಮ=ಎಣೆಯಿಲ್ಲದ; ಉದ್ದಾಮನ್+ಅಪ್ಪ; ಉದ್ದಾಮನ್=ಉತ್ತಮನಾದ;
ಅನ್ನೆಗಮ್ ಚಕ್ರಿ ಅಸಮ ಸಾಹಸ ಉದ್ದಾಮನಪ್ಪ ಅಶ್ವತ್ಥಾಮನ ಬರವನ್ ಅರಿದು=ಬೀಮನು ತನ್ನ ಪ್ರತಿಜ್ನೆಗಳನ್ನು ಪೂರಯಿಸಿಕೊಂಡು, ತನ್ನ ಸೇನಾ ಶಿಬಿರವನ್ನು ಹೊಕ್ಕಾಗ, ಕ್ರಿಶ್ಣನು ಸರಿಸಾಟಿಯಿಲ್ಲದ ಪರಾಕ್ರಮಿಯಾದ ಅಶ್ವತ್ತಾಮನು ಕುರುಕ್ಶೇತ್ರ ರಣರಂಗದ ವೈಶಂಪಾಯನ ಸರೋವರದ ದಂಡೆಯಲ್ಲಿ ತೊಡೆಯುಡಿದು ಬಿದ್ದಿರುವ ದುರ್ಯೋದನ ಬಳಿಗೆ ಬರುತ್ತಿದ್ದಾನೆ ಎಂಬ ಸುದ್ದಿಯನ್ನು ತಿಳಿದು;
ಅನಾಗತ=ಮುಂದೆ ಬರಲಿರುವ/ಉಂಟಾಗಲಿರುವ; ಬಾಧೆ=ಆಪತ್ತು/ಅಪಾಯ/ಕೇಡು; ಪರಿಚ್ಛೇದ=ಕತ್ತರಿಸುವುದು/ತುಂಡುಮಾಡುವುದು;
ಅನಾಗತಬಾಧಾ ಪರಿಚ್ಛೇದಮಮ್ ಮಾಡಲೆಂದು=ಅಶ್ವತ್ತಾಮನಿಂದ ಪಾಂಡವರಿಗೆ ಉಂಟಾಗಲಿರುವ ಕೇಡನ್ನು ತಡೆಗಟ್ಟಲೆಂದು; ಪಾಂಡವ+ಸೂನುಗಳ್+ಅಪ್ಪ; ಸೂನು=ಮಗ;ಅಪ್ಪ=ಆಗಿರುವ; ಪಂಚ ಪಾಂಡವರು=ದ್ರೌಪದಿಯ ಹೊಟ್ಟೆಯಿಂದ ಅಯ್ದು ಮಂದಿ ಪಾಂಡವರಿಗೆ ಹುಟ್ಟಿದ ಅಯ್ದು ಮಂದಿ ಮಕ್ಕಳು;
ಶ್ರುತ-ಸೋಮಕ-ಪ್ರತಿವಿಂದ್ಯ-ಶ್ರುತಕೀರ್ತಿ-ಶತಾನೀಕ ಎಂಬ ಹೆಸರಿನ ಅಯ್ದು ಮಂದಿ ಮಕ್ಕಳು; ಬೀಡು=ಸೇನಾ ಶಿಬಿರ; ಕಾಪು+ಪೇಳ್ದು; ಕಾಪು=ಕಾವಲು;
ದೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯು ಉತ್ತಮೌಜಸರುವಮ್…ಶ್ರುತ ಸೋಮಕ ಪ್ರಮುಖರಪ್ಪ ಪಾಂಡವಸೂನುಗಳಪ್ಪ ಪಂಚ ಪಾಂಡವರುಮಮ್ ಬೀಡಿಂಗೆ ಕಾಪುವೇಳ್ದು=ಪಾಂಡವರ ಕಡೆಯ ವೀರರಾದ ದ್ರುಶ್ಟದ್ಯುಮ್ನ-ಶಿಕಂಡಿ-ಚೇಕಿತಾನ-ಯುದಾಮನ್ಯು ಮತ್ತು ಉತ್ತಮೌಜಸರನ್ನು ಮತ್ತು ಪಾಂಡವರ ಮಕ್ಕಳಾದ ಶ್ರುತ-ಸೋಮಕ-ಪ್ರತಿವಿಂದ್ಯ-ಶ್ರುತಕೀರ್ತಿ-ಶತಾನೀಕರನ್ನು ಒಳಗೊಂಡ ಪ್ರಮುಕ ವ್ಯಕ್ತಿಗಳನ್ನು ಹಸ್ತಿನಾಪುರದ ಸೇನಾ ಶಿಬಿರಕ್ಕೆ ಕಾವಲಿರುವಂತೆ ಹೇಳಿ;
ಹಸ್ತಿ+ಅಶ್ವ+ರಥ+ಪದಾತಿ+ಬಲಮ್; ಹಸ್ತಿ=ಆನೆ; ಅಶ್ವ=ಕುದುರೆ; ಪದಾತಿ=ನೆಲದ ಮೇಲೆ ನಿಂತು ಯುದ್ದ ಮಾಡುವ ಕಾದಾಳುಗಳು;
ಹಸ್ತ್ಯಶ್ವರಥಪದಾತಿಬಲಮ್ ಬೆರಸು ಹಸ್ತಿನಾಪುರಕ್ಕೆ ಕಳಿಪಿ=ಕುರುಕ್ಶೇತ್ರ ರಣರಂಗದಲ್ಲಿ ಅಳಿದುಳಿದಿದ್ದ ಆನೆ-ಕುದುರೆ-ತೇರು-ಕಾಲ್ದಳದ ಸೇನೆಯನ್ನು ಹಸ್ತಿನಾಪುರಕ್ಕೆ ಕಳುಹಿಸಿ;
ನೀಳಾಚರ=ನೀಲಗಿರಿ ಪರ್ವತ; ನೀಲಾಂಗ=ಕ್ರಿಶ್ಣ;
ಪಾಂಡವರ್ ಅಯ್ವರುಮನ್ ಒಡಗೊಂಡು ನೀಳಾಚಲಕ್ಕೆ ನೀಲಾಂಗನ್ ಪೋದನ್=ಕ್ರಿಶ್ಣನು ಅಯ್ದು ಮಂದಿ ಪಾಂಡವರಾದ ದರ್ಮರಾಯ-ಬೀಮಸೇನ-ಅರ್ಜುನ-ನಕುಲ-ಸಹದೇವರನ್ನು ಜತೆಯಲ್ಲಿ ಕರೆದುಕೊಂಡು ನೀಲಗಿರಿ ಪರ್ವತ ಪ್ರಾಂತ್ಯಕ್ಕೆ ಹೋದನು;
ಅನ್ನೆಗಮ್ ಇತ್ತ ಗಾಂಗೇಯನ್ ಅರಿಪೆ… ಕೌರವೇಶ್ವರನ್ ಇರ್ದ ಎಡೆಯಮ್ ಅಶ್ವತ್ಥಾಮನ್ ಅರಿದು ಬರ್ಪಾಗಳ್=ಅಶ್ಟರಲ್ಲಿ ಈ ಕಡೆ ಅಶ್ವತ್ತಾಮನು ಬೀಶ್ಮನಿಂದ ದುರ್ಯೋದನನು ವೈಶಂಪಾಯನ ಸರೋವರದ ಬಳಿಗೆ ಹೋದನು ಎಂಬ ಸುದ್ದಿಯನ್ನು ಕೇಳಿ ತಿಳಿದುಕೊಂಡು, ವೈಶಂಪಾಯನ ಸರೋವರದ ಕಡೆಗೆ ಬರುತ್ತಿರುವಾಗ;
ಕನತ್+ಕನಕ; ಕನತ್=ಹೊಳೆಯುವ; ಕನಕ=ಚಿನ್ನ; ತಾಮರ=ತಾವರೆಯ ಹೂವು; ಕನತ್ಕನಕ ತಾಮರ=ಕೆಂದಾವರೆ; ಧವಳ=ಬಿಳಿಯ ಬಣ್ಣ; ಚಾಮರ=ಚಮರವೆಂಬ ಪ್ರಾಣಿಯ ಬಾಲದ ಕೂದಲುಗಳಿಂದ ಮಾಡಿದ ಬೀಸಣಿಗೆ;
ಕಯ್ಗಳೊಳ್ ಕನತ್ಕನಕ ತಾಮರಮ್ ಧವಳ ಚಾಮರಮ್=ಒಂದು ಕಯ್ಯಲ್ಲಿ ಕೆಂದಾವರೆಯ ಹೂವನ್ನು… ಮತ್ತೊಂದು ಕಯ್ಯಲ್ಲಿ ಬಿಳಿಯ ಚಾಮರವನ್ನು ಹಿಡಿದುಕೊಂಡಿರುವ;\
ಮಾಸು=ಕೊಳೆಯಾದ/ ಮಲಿನವಾದ; ತಾರು=ಒಣಗು/ಬಾಡು/ಸೊರಗು; ಕುರುಳ್=ಮುಂಗೂದಲು/ಕೂದಲು;
ಮಾಸಿ ತಾರಿದ ಕುರುಳ್ಗಳುಮ್=ಕೊಳೆಯಾಗಿ ಬಾಡಿ ಕೆದರಿದ ತಲೆಗೂದಲಿನಿಂದಿರುವ;
ಬಿನ್ನನೆ+ಇರ್ದ; ಬಿನ್ನನೆ=ಚಿಂತೆಯಿಂದ ಕೂಡಿ/ಕೊರಗಿನಿಂದ;
ಮನಮ್ ಚಲಿಸೆ ತನ್ನ ಬಿನ್ನನಿರ್ದ ಮೊಗದಿಮ್=ಮನಸ್ಸು ಚಂಚಲಗೊಂಡಿರಲು; ಚಿಂತೆಯಿಂದ ಕೂಡಿ ಕಳಾಹೀನವಾಗಿದ್ದ ಮೊಗದಿಂದ;
ವಿಲಾಸ=ಉಲ್ಲಾಸ/ಸೊಬಗು/ಅಂದ; ತವಿಲ್=ಕುಗ್ಗು/ಕುಂದು;
ವಿಲಾಸಮುಮ್ ತವಿಲ್ದಿರೆ=ಉಲ್ಲಾಸವು ಕುಂದಿರುವ;
ಕಮಳಾಕ್ಷಿಯನ್ ಲಕ್ಷ್ಮಿಯಮ್=ತಾವರೆಗಣ್ಣಿನವಳಾದ ಲಕ್ಶ್ಮಿಯನ್ನು;
ವೃಷಭ=ಎತ್ತು; ಲಕ್ಷಣ=ಗುರುತು/ ಸಂಕೇತ; ವೃಷಭಲಕ್ಷಣನ್=ಎತ್ತಿನ ಚಿತ್ರವನ್ನು ತನ್ನ ಬಾವುಟದಲ್ಲಿ ಲಾಂಚನವಾಗಿ ಉಳ್ಳವನು/ಅಶ್ವತ್ಥಾಮ;
ವೃಷಭಲಕ್ಷಣನ್ ಅಲ್ಲಿ ಮುಂದೆ ಕಂಡನ್= ದುರ್ಯೋದನನ್ನು ಕಾಣಲೆಂದು ವೈಶಂಪಾಯನ ಸರೋವರದತ್ತ ಬರುತ್ತಿರುವ ಅಶ್ವತ್ತಾಮನು ರಣರಂಗದ ನಡುವೆ ಅಲ್ಲಿ ತನ್ನ ಮುಂದೆ ಲಕ್ಶ್ಮಿ ದೇವತೆಯನ್ನು ನೋಡಿದನು;
ಕುಂಭಸಂಭವ=ದ್ರೋಣಾಚಾರ್ಯ; ಅಮೃತ+ಅಬ್ಧಿ; ಅಮೃತ=ಹಾಲು; ಅಬ್ಧಿ=ಕಡಲು; ಸಂಭವೆ=ಹುಟ್ಟಿದವಳು; ಅಮೃತಾಬ್ಧಿ ಸಂಭವೆ=ಹಾಲಿನ ಕಡಲನ್ನು ದೇವತೆಗಳು ಮತ್ತು ರಕ್ಕಸರು ಕಡೆದಾಗ ಲಕ್ಶ್ಮಿಯು ಹುಟ್ಟಿದಳು ಎಂಬ ದಂತಕತೆಯು ಜನಮನದಲ್ಲಿದೆ;
ಅಂತು ಕುಂಭಸಂಭವಸಂಭವನ್ ಅಮೃತಾಬ್ಧಿ ಸಂಭವೆಯನ್ ಕಂಡು=ಆ ರೀತಿ ಕುರುಕ್ಶೇತ್ರ ರಣರಂಗದ ನಡುವೆ ಅಶ್ವತ್ತಾಮನು ಲಕ್ಶ್ಮಿ ದೇವತೆಯನ್ನು ಕಂಡು, ಆಕೆಯನ್ನು ಪ್ರಶ್ನಿಸತೊಡಗುತ್ತಾನೆ;
ಬೆಸಗೊಳ್=ಕೇಳು/ವಿಚಾರಿಸು/ಪ್ರಶ್ನಿಸು;
ನೀನಾರ್ಗೆ… ಎತ್ತಣಿಂದಮ್ ಬಂದೆ… ಎಲ್ಲಿಗೆ ಪೋದಪೆ ಎಂದು ಬೆಸಗೊಳೆ=ನೀನು ಯಾರು… ಯಾವ ಕಡೆಯಿಂದ ಬಂದೆ… ಎಲ್ಲಿಗೆ ಹೋಗುತ್ತಿರುವೆ ಎಂದು ವಿಚಾರಿಸಲು;
ಅಮೃತ=ಹಾಲು; ಪಯೋಧಿ=ಕಡಲು/ಸಮುದ್ರ; ಮಂಥನ=ಕಡೆಯುವುದು;
ಅಮೃತಪಯೋಧಿ ಮಂಥನದೆ ಪುಟ್ಟಿದ=ಹಾಲಿನ ಕಡಲನ್ನು ಕಡೆದಾಗ ಹುಟ್ಟಿದ;
ಪದ್ಮವನ+ಅಂತರಾಳದೊಳ್; ಪದ್ಮವನ=ತಾವರೆ ಹೂಗಳ ಉದ್ಯಾನ; ಅಂತರಾಳ=ಒಳಗೆ; ರಮಿಯಿಪ=ಆನಂದಪಡುವ;
ಪದ್ಮವನಾಂತರಾಳದೊಳ್ ರಮಿಯಿಪ=ತಾವರೆಯ ತೋಟದಲ್ಲಿ ಆನಂದದಿಂದಿರುವ;
ಪದ್ಮನಾಭ=ವಿಶ್ಣು; ಉರ=ಎದೆ;
ಪದ್ಮನಾಭನ ಉರದೊಳ್ ನೆಲಸಿರ್ಪ=ವಿಶ್ಣು ಪರಮಾತ್ಮನ ಎದೆಯಲ್ಲಿ ನೆಲೆಸಿರುವ;
ಮಹಾನುಭಾವೆಯೆನ್ ಕಮಳೆಯೆನ್=ಹಿರಿಮೆಯನ್ನು ಹೊಂದಿದವಳು ನಾನು… ಲಕ್ಶ್ಮಿ ಎಂದು ನನ್ನ ಹೆಸರು;
ಇನ್ನೆಗಮ್ ಕುರುಮಹೀಪತಿಯೊಳ್ ನೆಲೆಸಿರ್ದೆನ್=ಇದುವರೆಗೂ ದುರ್ಯೋದನ ಬಳಿಯಲ್ಲಿ ನೆಲೆಸಿದ್ದೆನು;
ಪುರುಷೋತ್ತಮ=ಕ್ರಿಶ್ಣ;
ಈಗಳ್ ಉತ್ತಮ ಪುರುಷೋತ್ತಮನ್ ಬೆಸಸೆ=ಈಗ ಉತ್ತಮ ದೇವನಾದ ಕ್ರಿಶ್ಣನು ಆಜ್ನಾಪಿಸಲು;
ಪಾಂಡವರೊಳ್ ನೆಲಸಲ್ಕೆ ಪೋದಪೆನ್ ಎಂಬುದುಮ್=ಪಾಂಡವರಲ್ಲಿ ನೆಲಸಲೆಂದು ಹೋಗುತ್ತಿದ್ದೇನೆ ಎಂದು ನುಡಿಯಲು; ಅವಧಾರಿಸು=ಮನಸ್ಸಿಟ್ಟು ಕೇಳು;
“ನಾರಾಯಣನ್ ಬೆಸಸೆ ಪೋದಪೆನ್” ಎಂದ ಲಕ್ಷ್ಮಿಯ ಮಾತನ್ ದ್ರೋಣನಂದನನ್ ಅವಧಾರಿಸಿ ಮುಗುಳ್ನಗೆ ನಕ್ಕು=“ಕ್ರಿಶ್ಣನು ಆಜ್ನಾಪಿಸಿದ್ದರಿಂದ ಹೋಗುತ್ತಿದ್ದೇನೆ” ಎಂದ ಲಕ್ಶ್ಮಿಯ ಮಾತನ್ನು ಅಶ್ವತ್ತಾಮನು ಆಲಿಸಿ… ಲಕ್ಶ್ಮಿಯು ದುರ್ಯೋದನನಿಗೆ ಎಂತಹ ಅಪಚಾರವನ್ನು ಮಾಡುತ್ತಿದ್ದಾಳೆ ಎಂಬ ಕೋಪಬೆರೆತ ತಿರಸ್ಕಾರದಿಂದ ಮುಗುಳ್ ನಕ್ಕು;
ಜಡಧಿ+ಸಂಭವೆ+ಅಪ್ಪುದರಿಮ್; ಜಡಧಿ= ಕಡಲು/ ಸಮುದ್ರ; ಸಂಭವೆ=ಹುಟ್ಟಿದವಳು; ಚಳಮತಿ=ಚಂಚಲ ಮನಸ್ಸಿನ ವ್ಯಕ್ತಿ;
ಜಡಧಿಸಂಭವೆಯಪ್ಪುದರಿಮ್ ನೀನ್ ಚಳಮತಿಯಾದೆ=ಹಾಲಿನ ಕಡಲನ್ನು ಕಡೆದಾಗ ಹುಟ್ಟಿದ ನೀನು, ಕಡಲಿನ ಅಲೆಗಳ ಉಬ್ಬರವಿಳಿತದಂತೆಯೇ ಚಂಚಲ ಮನದವಳಾಗಿರುವೆ;
ಸರೋಜ+ಸಂಕುಲ+ರಜದ+ಇಂದೆ; ಸರೋಜ=ತಾವರೆ; ಸಂಕುಲ=ಸಮೂಹ/ಗುಂಪು; ರಜ=ಹೂವಿನ ಪರಾಗ; ಪೊರೆ=ಮೆತ್ತಿಕೊಳ್ಳು/ಅಂಟು; ರಾಜಸ=ಕಾಮ ಮತ್ತು ಕೋಪತಾಪದ ಕೂಡಿದ ನಡೆನುಡಿ;
ಸರೋಜಸಂಕುಲರಜದಿಂದೆ ನೀನ್ ಪೊರೆದು ರಾಜಸದೊಳ್ ನೆಲೆಸಿರ್ಪೆ=ತಾವರೆಯ ಹೂವುಗಳ ಪರಾಗದ ಕಣಗಳಿಂದ ಲೇಪಿತಳಾಗಿರುವ ನೀನು ಕಾಮ ಕ್ರೋದದ ನಡೆನುಡಿಯ ವ್ಯಕ್ತಿಗಳಲ್ಲಿ ನೆಲೆಸಿರುವೆ;
ಗೋವು+ಕಾದು; ಕಾಯ್=ಕಾಪಾಡು; ಅಳವು=ಶಕ್ತಿ/ಪರಾಕ್ರಮ; ಅಳಿದು+ಇರ್ದ; ಅಳಿ=ಕೆಡು; ಗೋವಿ=ಗೊಲ್ಲತಿ;
ಗೋವುಗಾದು ಅಳವು ಅಳಿದಿರ್ದ ಕೃಷ್ಣನೊಡನೆ ಇರ್ದುದರಿಂದಮೆ ಗೋವಿಯಾದೆ=ದನ ಮೇಯಿಸಿ ಬಳಲಿರುವ ಕ್ರಿಶ್ಣನೊಡನೆ ಸೇರಿಕೊಂಡು ನೀನು ಗೊಲ್ಲತಿಯಾಗಿರುವೆ;
ಅಗ್ಗಳ=ಹಿರಿಮೆ/ಉತ್ತಮತನ; ವಿವೇಕ=ಯಾವುದು ಸರಿ-ಯಾವುದು ತಪ್ಪು ಎಂಬ ಅರಿವು;
ನಿನಗೆ ಅಗ್ಗಳದ ವಿವೇಕಮಿಲ್ಲ=ನಿನ್ನಲ್ಲಿ ಉತ್ತಮವಾದ ವಿವೇಕವಿಲ್ಲ;
ಪುರುಷ+ಅಂತರಮ್+ಗಳಾ; ಪುರುಷಾಂತರಮ್=ಒಬ್ಬ ಗಂಡಸಿಗೂ ಮತ್ತೊಬ್ಬ ಗಂಡಸಿಗೂ ನಡೆನುಡಿಯಲ್ಲಿರುವ ವ್ಯತ್ಯಾಸ;
ಆ ಪುರುಷಾಂತರಂಗಳಾ ಎತ್ತ ಅರಿವೆ=ಗಂಡಸರಲ್ಲಿ ಇರುವ ಬಹುಬಗೆಯ ನಡೆನುಡಿಗಳ ಅಂತರ ನಿನಗೆ ಹೇಗೆ ತಾನೆ ತಿಳಿಯುತ್ತದೆ; ಗಂಡಸರಲ್ಲಿ ಯಾರು ಒಳ್ಳೆಯವನು/ಯಾರು ಕೆಟ್ಟವನು; ಯಾರು ಪರಾಕ್ರಮಿ-ಯಾರು ಹೇಡಿ ಎಂಬುದನ್ನು ನೀನು ಹೇಗೆ ತಾನೆ ತಿಳಿಯಬಲ್ಲೆ;
ಕಲಿ=ಶೂರ/ಪರಾಕ್ರಮಿ; ಪಂದೆ=ಹೇಡಿ/ಪುಕ್ಕಳ; ಬಗೆ=ಅರಿ/ತಿಳಿ/ಆಲೋಚಿಸು;
ಕಲಿ ಪಂದೆಯೆಂದು ಬಗೆಯದೆ= ಗಂಡಸರ ವರ್ತನೆಯನ್ನು ಒರೆಹಚ್ಚಿನೋಡಿ ಯಾರು ಶೂರ-ಯಾರು ಹೇಡಿ ಎಂಬುದನ್ನು ತಿಳಿಯದೆ;
ಕುಲಜನ್ ಕುಲಹೀನನೆಂದು ಬಗೆಯದೆ=ಮೇಲು ಕುಲದಲ್ಲಿ ಹುಟ್ಟಿದವನು ಯಾರು-ಕೀಳು ಕುಲದಲ್ಲಿ ಹುಟ್ಟಿದವನು ಯಾರು ಎಂದು ಗಮನಿಸದೆ;
ಸಲೆ=ನಿಜವಾಗಿ/ವಾಸ್ತವವಾಗಿ;
ತರುಣನ್ ಸಲೆ ವೃದ್ಧನೆಂದು ಬಗೆಯದೆ=ನಿಜವಾಗಿಯೂ ವ್ಯಕ್ತಿಯೊಬ್ಬನು ತರುಣನೋ ಇಲ್ಲವೇ ಮುಪ್ಪಿನವನೋ ಎಂದು ತಿಳಿಯದೆ;
ನೆಲಸುವೆ= ಗಂಡಸರಲ್ಲಿರುವ ಗುಣಾವಗುಣಗಳನ್ನು, ಹುಟ್ಟಿನ ಕುಲದ ಮೇಲು ಕೀಳನ್ನು ಹಾಗೂ ವಯಸ್ಸಿನ ಅಂತರವನ್ನು ಗಮನಿಸದೆ ಸಂಪತ್ತು ಮತ್ತು ಅಧಿಕಾರ ಗದ್ದುಗೆಯ ದೇವತೆಯಾದ ನೀನು ಯಾರಲ್ಲಿ ಬೇಕಾದರೂ ನೆಲಸುತ್ತಿಯೆ;
ನಿಕೃಷ್ಟ=ನೀಚವಾದುದು/ಕೀಳಾದುದು; ಎಂಬರುಮ್=ಎನ್ನುವವರು;
ನಿನ್ನಿಮ್ ನಿಕೃಷ್ಟರ್ ಎಂಬರುಮ್ ಒಳರೇ=ನಿನಗಿಂತಲೂ ಕೀಳಾದವರು ಎನ್ನುವವರು ಯಾರಾದರೂ ಈ ಲೋಕದಲ್ಲಿದ್ದಾರೆಯೇ ಇದ್ದಾರೆಯೇ;
ಇರಿ= ಹೊಡೆ/ ಚುಚ್ಚು/ ಕೊಲ್ಲು/ ಹೋರಾಡು;
ತಂದೆ ಮಕ್ಕಳನ್ ಇರಿಯಿಸುವೆ=ಹಣ ಒಡವೆ ವಸ್ತು ಮತ್ತು ಅದಿಕಾರ ಗದ್ದುಗೆಯ ದೇವತೆಯಾದ ನಿನ್ನನ್ನು ಪಡೆಯುವುದಕ್ಕಾಗಿ ತಂದೆ ಮಕ್ಕಳು ಪರಸ್ಪರ ಹೊಡೆದಾಡಿ ಒಬ್ಬರೊಬ್ಬರನ್ನು ಕೊಲ್ಲುವಂತೆ ಮಾಡುತ್ತೀಯೆ;
ಸೋದರರ್ಕಳಮ್ ಇರಿಯಿಸುವಯ್=ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣತಮ್ಮಂದಿರನ್ನು ಕೊಲ್ಲಿಸುತ್ತೀಯೆ;
ತಳ್ತು=ಮೇಲೆ ಬಿದ್ದು/ಆಕ್ರಮಣ ಮಾಡಿ;
ಗುರುಶಿಷ್ಯರನ್ ತಮ್ಮೊಳ್ ತಳ್ತು ಇರಿಯಿಸುವಯ್=ಗುರುಶಿಶ್ಯರು ತಮ್ಮಲ್ಲಿ ತಾವೇ ಹೊಡೆದಾಡಿಕೊಂಡು ಸಾಯುವಂತೆ ಮಾಡುವೆ;
ಅರ+ಕುಲಿ; ಅರ=ದರ್ಮ; ಕುಲಿ=ಕೊಲ್ಲುವ ವ್ಯಕ್ತಿ; ಅರಗುಲಿ= ದರ್ಮ ದ್ರೋಹಿ; ವಿಡಂಬನ= ಅಲ್ಲಗಳೆಯುವಿಕೆ/ತಿರಸ್ಕಾರ; ವಿಡಂಬನ ಗೆಯ್=ಮೂದಲಿಸು/ಹೀಯಾಳಿಸು;
ಅರಗುಲಿ, ನಿನ್ನಿಮ್ ನಿಕೃಷ್ಟರಾದರುಮ್ ಒಳರೇ ಎಂದು ಲಕ್ಷ್ಮಿಯನ್ ವಿಡಂಬನಮ್ ಗೆಯ್ದು=ದರ್ಮದ್ರೋಹಿಯೇ, ನಿನಗಿಂತಲೂ ಕೀಳಾದವರೂ ಜಗತ್ತಿನಲ್ಲಿ ಯಾರಾದರೂ ಇದ್ದಾರೆಯೇ ಎಂದು ಲಕ್ಶ್ಮಿಯನ್ನು ಹೀಗಳೆದು;
ಮಾಣ್=ನಿಲ್ಲು/ಸುಮ್ಮನಿರು/ಬಿಟ್ಟುಬಿಡು;
ಪೋ, ಮಾಣ=ದುರ್ಯೋದನ ಬಳಿಗೆ ಮತ್ತೆ ಹಿಂತಿರುಗಿ ಹೋಗು… ಅವನನ್ನು ಬಿಟ್ಟು ಬರಬೇಡ;
ಗಡ=ಕಂಡೆಯಾ/ನೋಡಿದೆಯಾ ಹೇಗಿದೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸುವಾಗ ಇಲ್ಲವೇ ಅಣಕ ಮಾಡುವಾಗ ಇಲ್ಲವೇ ಯಾರನ್ನಾದರೂ ಅಲ್ಲಗಳೆಯುವಾಗ ಬಳಸುವ ಉದ್ಗಾರ ಸೂಚಕ ಪದ;
ಧರ್ಮಜನ್ ಗಡ=ದರ್ಮರಾಯನಂತೆ ಕಂಡೆಯಾ;
ಭೀಮನ್ ಗಡ=ಬೀಮನಂತೆ ಕಂಡೆಯಾ;
ಫಲ್ಗುಣನ್ ಗಡ=ಅರ್ಜುನನಂತೆ ಕಂಡೆಯಾ;
ಅಮಳ್ಗಳ್ ಗಡ=ಅವಳಿ ಜವಳಿಗಳಾದ ನಕುಲ ಸಹದೇವರಂತೆ ಕಂಡೆಯಾ;
ಆಪೋಶನ=ಊಟಕ್ಕೆ ಮೊದಲು ಮತ್ತು ಅನಂತರ ಮಂತ್ರವನ್ನು ಉಚ್ಚರಿಸುತ್ತ ಅಂಗಯ್ಯಲ್ಲಿರುವ ನೀರನ್ನು ಹೀರುವುದು; ನೆರೆ=ಸಾಕಾಗು/ಸಾಲು;
ಅವಂದಿರ್ ಅಶ್ವತ್ಥಾಮಂಗೆ ಸಂಗ್ರಾಮದೊಳ್ ಆಪೋಶನಗೊಳಲ್ ನೆರೆದಪರೇ=ಅವರೆಲ್ಲಾ ಈ ಅಶ್ವತ್ತಾಮನಾದ ನನಗೆ ರಣರಂಗದಲ್ಲಿ ಒಂದು ಗುಟುಕಿಗೆ ಸಾಕಾಗುತ್ತಾರೆಯೇ;
ಎಲಗೆ=ಹೆಂಗಸನ್ನು ಕುರಿತು ಏಕವಚನದಲ್ಲಿ ಮಾತನಾಡಿಸುವಾಗ ಬಳಸುವ ಪದ; ಮುರವೈರಿ=ಕ್ರಿಶ್ಣ; ಅಳವು=ಶಕ್ತಿ/ಪರಾಕ್ರಮ;
ಎಲಗೆ, ನಿನ್ನ ಮುರವೈರಿಯ ಅಳವುಮನ್… ಎನ್ನ ಅಳವುಮನ್ ಕಾಣ್ಬೆ=ಎಲೆ ಲಕ್ಶ್ಮಿಯೇ… ನಿನಗೆ ಆಜ್ನೆಮಾಡಿದ ಕ್ರಿಶ್ಣನ ಶಕ್ತಿಯನ್ನು… ನಿನ್ನನ್ನು ತಡೆದಿರುವ ನನ್ನ ಶಕ್ತಿಯನ್ನು ನೀನೇ ನೋಡಲಿರುವೆ;
ಮುನ್ನಮ್=ಈಗ; ತ್ವತ್=ನನ್ನ; ತ್ವತ್ ಪತಿ=ನನ್ನ ಒಡೆಯನಾದ ದುರ್ಯೋದನ; ಅಗಲು=ಬಿಟ್ಟುಹೋಗು/ತೊರೆ;
ಮುನ್ನಮ್ ತ್ವತ್ ಪತಿಯಿಂದಮ್ ಕುರುಪತಿಯಿಂದಮ್ ನಿನ್ನನ್ ಅಗಲ್ಚಲ್ಕೆ ಕಪಟಗೋಪನ್ ಪ್ರಭುವೇ=ಈಗ ನನ್ನ ಒಡೆಯನಾದ ದುರ್ಯೋದನನಿಂದ ನಿನ್ನನ್ನು ತೊರೆಯುವಂತೆ ಆಜ್ನೆಯನ್ನು ಮಾಡಿರುವ ಕಪಟಿಗೊಲ್ಲನೇನು ಚಕ್ರವರ್ತಿಯೇ;
ಕುರುರಾಜನ್ ರಾಜರಾಜನ್ ಸಕಲ ವಸುಮತಿಕಾಂತನ್ ಇರ್ದಂತೆ= ಕುರುಬೂಮಿಗೆ ಒಡೆಯನೂ… ಚಕ್ರವರ್ತಿಯೂ… ಸಕಲ ಬೂಮಂಡಲಕ್ಕೆ ಒಡೆಯನಾದ ದುರ್ಯೋದನನು ಜೀವಂತವಾಗಿರುವಾಗಲೇ;
ಯುದ್ಧ+ಆತುರನ್; ಆತುರ=ಬಲವಾದ ಆಸೆ; ಸಾಹಸಾಂಕ=ಹೆಸರಾಂತ ವೀರ;
ಯುದ್ಧಾತುರನ್ ಇನ್ನು ಈ ಸಾಹಸಾಂಕನ್ ಕುರುಕುಳಪತಿಯಿರ್ದಂತೆ=ರಣರಂಗದಲ್ಲಿ ಹಗೆಯ ಎದುರು ಹೋರಾಡಬೇಕೆಂಬ ಬಲವಾದ ಆಸೆಯುಳ್ಳವನಾದ ದುರ್ಯೋದನನು… ಇನ್ನು ಈ ಹೆಸರಾಂತ ವೀರನಾದ ಕುರುಕುಲದ ಒಡೆಯನು ಬದುಕಿರುವಾಗಲೇ;
ಮೆಲ್ಪಡು=ಮರುಳಾಗು/ತಿಳಿಗೇಡಿಯಾಗು; ದಾಮೋದರ=ಕ್ರಿಶ್ಣ; ಕಜ್ಜ=ಕೆಲಸ; ಮರುಳೆ=ಬುದ್ದಿಗೇಡಿಯೇ; ತೊಡರ್=ತೊಡಗು;ಬೆಂಡಾಗು= ಹಗುರವಾಗುವುದು/ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು ಎಂಬ ರೂಪಕದ ತಿರುಳು;
ಮೆಳ್ಪಟ್ಟು ದಾಮೋದರನ್ ಎಂದ ಈ ಕಜ್ಜದೊಳ್ ನೀನ್ ತೊಡರ್ದು ಮರುಳೆ, ಬೆಂಡಾಗದಿರ್=ತಿಳಿಗೇಡಿಯಾಗಿ ಕ್ರಿಶ್ಣನು ಹೇಳಿದ ಕೆಲಸದಲ್ಲಿ ನೀನು ತೊಡಗಿಕೊಂಡು… ಬುದ್ದಿಗೇಡಿಯೇ ನಿನ್ನ ದೇವತಾ ವ್ಯಕ್ತಿತ್ವವನ್ನು ಕಳೆದುಕೊಂಡು ಹಗುರಾಗಬೇಡ; ಚೆಚ್ಚರ=ಬೇಗನೆ;
ನೀನ್ ಚೆಚ್ಚರಮ್ ಅತ್ತ ಪೋಗು=ನೀನು ಬೇಗನೆ ಅತ್ತ ದುರ್ಯೋದನ ಬಳಿಗೆ ಹೋಗು;
ಪೋಪೌ=ಹೋದೆಯಾದರೆ; ಪರಿಭವ=ಅಪಮಾನ/ತಿರಸ್ಕಾರ/ಸೋಲು;
ಇನ್ನೆತ್ತ ಪೋಪೌ ಪರಿಭವಿಸಿದಪೆನ್=ಇನ್ನು ಯಾವ ಕಡೆಗೆ ಹೋದರೂ ನಿನ್ನನ್ನು ಸದೆಬಡಿಯುತ್ತೇನೆ;
ಉದ್ದಾಮ=ಅತಿ ಹೆಚ್ಚಾದ; ಕೋಪ+ಆಟೋಪ+ಬದ್ಧ; ಆಟೋಪ=ಅಬ್ಬರ/ಸೊಕ್ಕು; ಭ್ರುಕುಟಿ+ಉಮ್; ಭ್ರುಕುಟಿ=ಹುಬ್ಬುಗಂಟು; ತರಳ=ಹೊಳೆಯುವ; ತಾಮ್ರ=ಕೆಂಪುಬಣ್ಣ; ಲೋಚನ=ಕಣ್ಣು;
ನಿನ್ನನ್ ಇನ್ ಕಾವನ್ ಆವೊನ್ ಎಂದು ಅಶ್ವತ್ಥಾಮನ್ ಉದ್ದಾಮ ಕೋಪಾಟೋಪಬದ್ಧ ಭ್ರುಕುಟಿಯುಮ್ ತರಳತಾಮ್ರ ಲೋಚನನುಮ್ ಆಗೆ=ನಿನ್ನನ್ನು ಇನ್ನು ಕಾಪಾಡುವವನು ಯಾರು ಎಂದು ಅಶ್ವತ್ತಾಮನು ಅತಿಶಯವಾದ ಕೋಪೋದ್ರೇಕದಿಂದ ಕೂಡಿದವನಾಗಿ ಹುಬ್ಬುಗಂಟಿಕ್ಕಿಕೊಂಡು ಹೊಳೆಯುವ ಕೆಂಗಣ್ಣಿನಿಂದ ಲಕ್ಶ್ಮಿಯನ್ನು ನೋಡುತ್ತಿರಲು; ಲಕ್ಶ್ಮಿಯು ತನ್ನಲ್ಲಿಯೇ ಈ ರೀತಿ ಹೇಳಿಕೊಳ್ಳತೊಡಗುತ್ತಾಳೆ; \
ಅಸುರ+ಅರಿ; ಅಸುರ=ರಕ್ಕಸ; ಅರಿ=ಶತ್ರು; ಅಸುರಾರಿ=ಕ್ರಿಶ್ಣ;
ಅತ್ತಲ್ ಅಸುರಾರಿ ಬೆಸಸಿದನ್=ಆ ಕಡೆ ಕ್ರಿಶ್ಣನು ಆಜ್ನಾಪಿಸಿದ್ದಾನೆ;
ರುದ್ರಾವತರನ್=ಅಶ್ವತ್ತಾಮ; ಮುನಿದ ರೂಪಿನ ಶಿವನನ್ನು ರುದ್ರ ಎಂದು ಕರೆಯುತ್ತಾರೆ. ಆ ರುದ್ರನ ಅನುಗ್ರಹದಿಂದ ಅಶ್ವತ್ತಾಮನು ಹುಟ್ಟಿದ್ದಾನೆ ಎಂಬ ಪುರಾಣ ಕತೆಯಿದೆ;
ಇತ್ತಲ್ ರುದ್ರಾವತಾರನ್ ಎಳೆದು ಒಯ್ದಪನ್ =ಈ ಕಡೆ ಅಶ್ವತ್ತಾಮನು ಪಾಂಡವರ ಬಳಿಗೆ ಹೋಗದಂತೆ ತಡೆದು ನನ್ನನ್ನು ಮತ್ತೆ ದುರ್ಯೋದನ ಕಡೆಗೆ ಎಳೆದುಕೊಂಡು ಹೋಗಲು ಸಿದ್ದನಾಗಿದ್ದಾನೆ;
ದರಿ=ಆಳವಾದ ಹಳ್ಳ/ಕೊಳ್ಳ; ತಳವೆಳಗು+ಆದಳ್; ತಳವೆಳಗು=ದಿಗಿಲು/ಗಾಬರಿ/ತಬ್ಬಿಬ್ಬಾಗುವುದು;
ಇಂತು ಅತ್ತ ಪುಲಿ… ಇತ್ತ ದರಿ ಎಂದು ಅತ್ತಿತ್ತ ಅಡಿಯಿಡದೆ ಲಕ್ಷ್ಮಿ ತಳವೆಳಗಾದಳ್=ಈ ರೀತಿ ಅತ್ತ ಹುಲಿ… ಇತ್ತ ಹಳ್ಳ ಎಂದು ಅತ್ತಿತ್ತ ಹೆಜ್ಜೆಯಿಡಲಾಗದೆ ಲಕ್ಶ್ಮಿಯು ಏನು ಮಾಡಬೇಕೆಂದು ತೋಚದೆ ತಬ್ಬಿಬ್ಬಾದಳು;
ಚಳತ್=ಅತ್ತಿತ್ತ ಆಡುವ/ಚಲಿಸುವ; ಅಳಿ=ದುಂಬಿ; ವಿನೀಳ=ಕಡುನೀಲಿ ಬಣ್ಣ; ಕುಟಿಲ=ಗುಂಗುರಾದ; ಕುಂತಳ= ತಲೆಗೂದಲು; ತಳ=ಹಸ್ತ/ಅಂಗಯ್/ಬುಡ; ತಳಮಾರೆ=ಬುಡಸಮೇತ;
ಅಂತು ತಳವೆಳಗಾದ=ಆ ರೀತಿ ತಬ್ಬಿಬ್ಬಾಗಿರುವ;
ಲಕ್ಷ್ಮಿಯ ಚಳತ್ ಅಳಿವಿನೀಳ ಕುಟಿಲ ಕುಂತಳಂಗಳಮ್ ತಳಮಾರೆ ತೆಗೆದು=ಲಕ್ಶ್ಮಿಯ ಅತ್ತಿತ್ತ ಆಡುತ್ತಿರುವ ದುಂಬಿಯಂತೆ ಕಡುನೀಲಿಬಣ್ಣದ ಗುಂಗುರು ತಲೆಗೂದಲನ್ನು ಬುಡಸಮೇತವಾಗಿ ಅಂಗಯ್ ನಿಂದ ಹಿಡಿದು ಎಳೆದುಕೊಂಡು;
ಘಟಚೇಟಿ=ನೀರಿನ ಕೊಡವನ್ನು ಹೊತ್ತು ತರುವ ಸೇವಕಿ; ಮಗುಳ್=ಹಿಂತಿರುಗು/ಮರಳು;
ಕುರುಕುಲ ಕುಟುಂಬನ ಘಟಚೇಟಿಯನ್ ಕೊಂಡು ಪೋಪಂತೆ ಮಗುಳೆ ಕೊಂಡು ಪೋಗಿ=ಕುರುಕುಲದ ಮನೆತನದಲ್ಲಿ ನೀರಿನ ಕೊಡವನ್ನು ಹೊತ್ತು ತರುವ ಸೇವಕಿಯನ್ನು ಕರೆದುಕೊಂಡು ಹೋಗುವಂತೆ ಲಕ್ಶ್ಮಿಯನ್ನು ದುರ್ಯೋದನ ಬಳಿಗೆ ಹಿಂತಿರುಗಿಸಲೆಂದು ಅಶ್ವತ್ತಾಮನು ಎಳೆದುಕೊಂಡು ಹೋಗುತ್ತಿದ್ದಾನೆ;
(ಚಿತ್ರಸೆಲೆ: jainheritagecentres.com)


ಇತ್ತೀಚಿನ ಅನಿಸಿಕೆಗಳು