ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 28ನೆಯ ಕಂತು
– ಸಿ.ಪಿ.ನಾಗರಾಜ.
ದುರ್‍ಯೋದನನ ಸಾವು
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನಾವಸಾನಂ’ ಎಂಬ ಹೆಸರಿನ 9 ನೆಯ ಅದ್ಯಾಯದ 20ನೆಯ ಪದ್ಯದಿಂದ 23ನೆಯ ಪದ್ಯವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ದುರ್ಯೋಧನ: ಗಾಂಧಾರಿ ಮತ್ತು ಧೃತರಾಷ್ಟ್ರ ರಾಜ ದಂಪತಿಯ ಹಿರಿಯ ಮಗ. ಹಸ್ತಿನಾವತಿಯ ರಾಜ.
ಅಶ್ವತ್ಥಾಮ: ದ್ರೋಣಾಚಾರ್ಯರ ಮಗ. ದುರ್ಯೋಧನನ ಸೇನಾಬಲದಲ್ಲಿ ಪ್ರಮುಖನಾದ ವೀರ.
ದುರ್ಯೋಧನನ ಸಾವು
ಅಶ್ವತ್ಥಾಮನ್… ಅಂತು ಅವರಮ್ ನಿಯೋಜಿಸಿ… ನೇಸರ್ ಪಡುವಿನಮ್ ಇರ್ದು… ನಿಜಪತಿಯನ್ ಬೀಳ್ಕೊಂಡು ಪಯಣಮ್ ಪೋಗಿ… ಹಸ್ತಿನಪುರಮನ್ ಪೊಕ್ಕು… ಅಲ್ಲಿ… ಕಂಜವನದಂತೆ ಲಕ್ಷ್ಮೀರಂಜಿತಮುಮ್… ಚಿತ್ರಪತ್ರಮುಮ್… ಚಕ್ರಾಂಕ ವ್ಯಂಜಿತಮುಮಪ್ಪ ಬೀಡಮ್… ಇರುಳೊಳ್ ಮಂಜಿರಿವಂತೆ ಇರಿದನ್. ಅಂತು ಅಶ್ವತ್ಥಾಮನ್ ಇರಿವಾಗಳ್… ಪಲವು ದಿವಸಮ್ ಕಾದಿ ಪಿರಿದುಮ್ ಪಯಣಮ್ ಬಂದು ಬಳಲ್ದು ನಿದ್ರೆ ಗೆಯ್ದವರ್… ಕೋರೈಸಿ ಮುಟ್ಟೆವಂದಾಗಳ್… ತೊಟ್ಟನೆ ನಿದ್ರೆಯಿಂದೆ ಎಳ್ಚತ್ತು… ಆ ಕಳಕಳಮನ್ ಕೇಳ್ದು… ಕರತಳದಿಮ್ ಕಣ್ಣಮ್ ಪೊಸೆಯುತ್ತುಮ್ ಎಳ್ದು… ತಂತಮ್ಮ ತಲೆದೆಸೆಯೊಳ್ ಇರ್ದ ಕರವಾಳಮ್ ಕೊಂಡು ನಿಂದ ನೆಲೆಯೊಳ್…
ತಳರದಿರ್ದ ತಲೆಗಾಪಿನಾಳ ಉಕ್ಕಡದ ಆಳ ಮೇಲಿಕ್ಕಿ… ಉಕ್ಕಡದಾಳ ಘರವಟ್ಟಿಗೆಯಾಳ ಮೇಲಿಕ್ಕಿ… ಘರವಟ್ಟಿಗೆಯಾಗೆ ಮಾಮಸಕಮ್ ಮಸಗಿ ಜವಮ್ ನೇರಿ ಬರ್ಚಿದಂತೆ ಪೆಂಡಿರ್ ಮಕ್ಕಳ್ ಎನ್ನದೆ ನಿವಳಿವಟ್ಟಮುಪ್ಪಿನಮ್ ಒಂದು ಅಕ್ಷೋಹಿಣೀ ಬಲಮ್ ಎಲ್ಲಮಮ್… ಪೇಳ ಪೆಸರಿಲ್ಲವೆಂಬಂತೆ ಕೊಂದು… ತನಗೆ ಕಟ್ಟಿದಿರೊಳ್ ಇರ್ದ ಧೃಷ್ಟದ್ಯುಮ್ನನುಮನ್ ಮುಟ್ಟಿ ಮೂದಲಿಸಿ… ತಮ್ಮಯ್ಯನನ್ ಪರಿಭವಿಸಿದ ಪಗೆಯನ್ ಕೊಂದು ದೆಸೆವಲಿಗೆಯ್ದು… ಶಿಖಂಡಿ ಚೇಕಿತಾನಕ ಯುಧಾಮನ್ಯು ಉತ್ತಮೌಜಸ ಪ್ರಭೃತಿಗಳನ್ ಇಕ್ಕಿ… ಪಾಂಡವರ ಶಂಕೆಯಿಮ್ ಶ್ರುತ ಸೋಮಕ ಪ್ರಭೃತಿಗಳಪ್ಪ ಪಂಚಪಾಂಡವರ ತಲೆಗಳಮ್ ಕೊಂಡು ಥಳಥಳನೆ ನೇಸರ್ ಮೂಡುವಾಗಳ್ ಬಂದು…)
ಅಶ್ವತ್ಥಾಮ: ಕೊಳ್ ನಿನ್ನ ನಚ್ಚಿನ ಪಾಂಡವರ ತಲೆಗಳಿವೆ.
(ಎಂದು ದುರ್ಯೋಧನನ ಮುಂದಿಕ್ಕಿದೊಡೆ ಆ ಮಹಾನುಭಾವನ್ ಆ ತಲೆಗಳಮ್ ನೀಡುಮ್ ಭಾವಿಸಿ ನೋಡಿ…)
ದುರ್ಯೋಧನ: ಪವನಜನ ಆಸ್ಯಮಲ್ತಿದು. ಅವನ ಆನನಮಪ್ಪೊಡೆ ಮಟ್ಟಮಿರ್ದು ನೋಡುವುದೆ ಮದೀಯ ವಕ್ತ್ರಮನೆ… ಕೆಮ್ಮನೆ ಪೋಯ್ತು… ಅರಿವಿಲ್ಲದಾಯ್ತು… ಪಾಂಡವರ ಶಿರಂಗಳಲ್ಲವು… ಇವು ಪಾಂಡವ ಸೂನುಗಳಪ್ಪ ಪಂಚಪಾಂಡವರ ಶಿರಂಗಳಮ್… ಅಕ್ಕಟ, ನೆರೆ ವಿಚಾರಿಸದೆ ಕೊಂಡು ಬರ್ಪುದೇ… ಪರಮೇಶ್ವರ ಅವತಾರನೆ… ಪರಮಜ್ಞಾನಿಯೆ… ವಿವೇಕವಿಕಳರವೊಲ್ ಬಾಲರ ತಲೆಯಮ್ ಅರಿದು ತಂದೆಯೊ… ನಿನಗೆ ಬಾಲವಧಮ್ ಪಾತಕಮ್ ದೊರೆಕೊಂಡುದು … ಅದು ಕಾರಣಮ್ ರೌದ್ರಪ್ರಾಯಶ್ಚಿತ್ತ ಪ್ರವರ್ತನಾರ್ಥಮ್ ಹಿಮವತ್ ಪರ್ವತಕ್ಕೆ ಪೋಪುದು.
(ಎಂದು ಚಿತ್ತ ಸಮಾಧಾನಮ್ ಗೆಯ್ದು…)
ದುರ್ಯೋಧನ: ಅಜಿತನಮ್ ಸ್ಮರಿಯಿಸಿ ಸುರಲೋಕಮಮ್ ಸಾಧಿಸುವೆನ್.
(ಎಂದು ಅಶ್ವತ್ಥಾಮಾದಿಗಳಮ್ ವಿಸರ್ಜಿಸಿ… ತತ್ ದಿನ ಅವಸಾನದೊಳ್ ದುರ್ಯೋಧನನ್ ಪ್ರಾಣವಿಸರ್ಜನ ಉನ್ನುಖನಾದನ್… ಪಂಕಜಮುಮ್ ಸುಹೃತ್ ವದನ ಪಂಕಜಮುಮ್ ಮುಗಿವನ್ನಮ್… ಉಗ್ರತೇಜಮ್ ಕಿಡುತಿರ್ಪಿನಮ್… ನಿಜಕರಂಗಳನ್ ಅಂದು ಉಡುಗುತ್ತುಮ್ ಇರ್ದು… ಚಕ್ರಾಂಕಮ್ ಅಗಲ್ವಿನಮ್… ಕ್ರಮದಿನ್ ಅಂಬರಮಮ್ ಬಿಸುಟು ಉರ್ವಿಗೆ ಅಂಧಕಾರಮ್ ಕವಿತರ್ಪಿನಮ್… ಕುರುಕುಲ ಅರ್ಕನುಮ್… ಅರ್ಕನುಮ್ ಅಸ್ತಮ್ ಎಯ್ದಿದರ್.)
ಪದ ವಿಂಗಡಣೆ ಮತ್ತು ತಿರುಳು: ದುರ್‍ಯೋದನನ ಸಾವು
ಅಂತು=ಆ ರೀತಿ; ಅವರಮ್=ಬೂದೇವಿ ಮತ್ತು ಶ್ರೀದೇವಿಯರನ್ನು; ನಿಯೋಜಿಸಿ=ನೇಮಿಸಿ; ಪಡು=ಪಶ್ಚಿಮ ದಿಕ್ಕು; ನಿಜ ಪತಿ=ತನ್ನ ಒಡೆಯನಾದ ದುರ್‍ಯೋದನ;
ಅಂತು ಅವರಮ್ ನಿಯೋಜಿಸಿ ನೇಸರ್ ಪಡುವಿನಮ್ ಇರ್ದು ನಿಜಪತಿಯನ್ ಬೀಳ್ಕೊಂಡು ಪಯಣಮ್ ಪೋಗಿ ಹಸ್ತಿನಪುರಮನ್ ಪೊಕ್ಕು=ಅಶ್ವತ್ತಾಮನು ಆ ರೀತಿ ಅವರಿಬ್ಬರನ್ನು ನೇಮಿಸಿ, ಸೂರ್‍ಯನು ಪಶ್ಚಿಮದ ದಿಕ್ಕಿನಲ್ಲಿ ಮರೆಯಾಗುವ ತನಕ ದುರ್‍ಯೋದನನ ಬಳಿಯಲ್ಲಿದ್ದು, ಅನಂತರ ದುರ್‍ಯೋದನನಿಂದ ಬೀಳ್ಕೊಂಡು… ಪಯಣಿಸುತ್ತ ಹಸ್ತಿನಾವತಿಯನ್ನು ಹೊಕ್ಕು;
ಅಲ್ಲಿ=ಪಾಂಡವರ ಸೇನಾಬಲ ಬೀಡುಬಿಟ್ಟಿದ್ದ ಶಿಬಿರದಲ್ಲಿ; ಹಸ್ತಿನಾವತಿಯಲ್ಲಿ ಪಾಂಡವ ಸೇನೆಯು ಬೀಡುಬಿಟ್ಟಿದ್ದ ಶಿಬಿರದ ವರ್‍ಣನೆಯನ್ನು ಮಾಡಲಾಗುತ್ತಿದೆ;
ಕಂಜವನ=ತಾವರೆ ಹೂವಿನ ಸರೋವರ; ಲಕ್ಷ್ಮಿ=ಸಿರಿ/ಸಂಪತ್ತು; ರಂಜಿತ=ಚೆಲುವು/ಮನೋಹರ; ಲಕ್ಷ್ಮೀರಂಜಿತ=ಸಂಪತ್ತಿನಿಂದ ಕೂಡಿ ಮನೋಹರವಾದುದು;
ಕಂಜವನದಂತೆ ಲಕ್ಷ್ಮೀರಂಜಿತಮುಮ್=ತಾವರೆ ಹೂಗಳಿಂದ ಕಂಗೊಳಿಸುತ್ತಿರುವ ಸರೋವರದಂತೆ ಸಿರಿಸಂಪತ್ತಿನಿಂದ ಮನೋಹರವಾಗಿಯೂ;
ಚಿತ್ರಪತ್ರಮುಮ್=ಬಗೆಬಗೆಯ ಬಣ್ಣದ ಎಲೆಗಳ ಚಿತ್ರಗಳಿಂದ ಕೂಡಿರುವ ತೇರು;
ಚಕ್ರಾಂಕ=ಚಕ್ರವಾಕ ಎಂಬ ಹಕ್ಕಿ; ವ್ಯಂಜಿತಮುಮ್+ಅಪ್ಪ; ವ್ಯಂಜಿತ=ಗುರುತು/ಚಿಹ್ನೆ; ಬೀಡು=ಸೇನಾ ಶಿಬಿರ;
ಚಕ್ರಾಂಕ ವ್ಯಂಜಿತಮುಮಪ್ಪ ಬೀಡಮ್=ಚಕ್ರವಾಕ ಹಕ್ಕಿಗಳ ಚಿತ್ರದ ರಾಜಲಾಂಚನವುಳ್ಳ ಪಾಂಡವರ ಶಿಬಿರವನ್ನು;
ಇರುಳ್+ಒಳ್; ಇರುಳ್=ರಾತ್ರಿ; ಮಂಜು+ಇರಿವಂತೆ; ಮಂಜು=ಹಿಮ; ಮಂಜು+ಇರಿವ+ಅಂತೆ; ಇರಿ= ನಾಶಗೊಳಿಸು/ಹೊಡೆ/ಕೊಲ್ಲು;
ಇರುಳೊಳ್ ಮಂಜಿರಿವಂತೆ ಇರಿದನ್=ಹಗಲಿನಲ್ಲಿ ಅರಳಿದ್ದ ತಾವರೆ ಹೂವಿನ ಮೇಲೆ ರಾತ್ರಿಯಲ್ಲಿ ಮಂಜು ಸುರಿದು ಹೂವೆಲ್ಲವನ್ನೂ ನಾಶಗೊಳಿಸುವಂತೆ ಹಗಲಿನ ಗದಾಯುದ್ದದಲ್ಲಿ ಗೆದ್ದಿದ್ದ ಪಾಂಡವ ಸೇನಾಬಲದ ಮೇಲೆ ಅಶ್ವತ್ತಾಮನು ರಾತ್ರಿಯಲ್ಲಿ ದಾಳಿ ಮಾಡಿ ಶಿಬಿರದಲ್ಲಿದ್ದವರನ್ನು ಕಡಿದು ಕೊಚ್ಚತೊಡಗಿದನು;
ಅಂತು ಅಶ್ವತ್ಥಾಮನ್ ಇರಿವಾಗಳ್=ಆ ರೀತಿ ಅಶ್ವತ್ತಾಮನು ಪಾಂಡವರ ಶಿಬಿರದಲ್ಲಿದ್ದವರ ಮೇಲೆ ಆಕ್ರಮಣ ಮಾಡಿ ಸದೆಬಡಿದು ಕೊಲ್ಲುತ್ತಿರುವಾಗ;
ಕೋರೈಸು=ಅಟ್ಟಹಾಸ ಮಾಡು; ಮುಟ್ಟೆ+ಬಂದ+ಆಗಳ್; ಮುಟ್ಟೆವಂದಾಗಳ್= ಅತಿ ಹತ್ತಿರಕ್ಕೆ ಬಂದಾಗ;
ಪಲವು ದಿವಸಮ್ ಕಾದಿ, ಪಿರಿದುಮ್ ಪಯಣಮ್ ಬಂದು ಬಳಲ್ದು ನಿದ್ರೆ ಗೆಯ್ದವರ್… ಕೋರೈಸಿ ಮುಟ್ಟೆವಂದಾಗಳ್=ಹದಿನೆಂಟು ದಿನಗಳ ಕಾಲ ನಡೆದಿದ್ದ ಕುರುಕ್ಶೇತ್ರ ಕಾಳೆಗದಲ್ಲಿ ಹೋರಾಡಿ, ಬಹುದೂರದ ರಣರಂಗದಿಂದ ಹಸ್ತಿನಾವತಿಗೆ ಪಯಣಿಸಿ ಬಂದ ಆಯಾಸದಿಂದ ಮಯ್ ಮರೆತು ನಿದ್ರೆ ಮಾಡುತ್ತಿದ್ದವರು, ಅಶ್ವತ್ತಾಮನು ಆಕ್ರಮಣಮಾಡುತ್ತ ಅತಿ ಹತ್ತಿರಕ್ಕೆ ಬಂದಾಗ;
ತೊಟ್ಟನೆ=ಒಮ್ಮೆಲೆ; ಎಳ್ಚತ್ತು=ಎಚ್ಚರಗೊಂಡು;
ತೊಟ್ಟನೆ ನಿದ್ರೆಯಿಂದೆ ಎಳ್ಚತ್ತು=ಒಮ್ಮೆಲೆ ನಿದ್ರೆಯಿಂದ ಎಚ್ಚರಗೊಂಡು;
ಕಳಕಳಮ್+ಅನ್; ಕಳಕಳ=ಗದ್ದಲ/ಗಲಾಟೆ; ಪೊಸೆ= ಹೊಸೆ/ತಿಕ್ಕು/ ಉಜ್ಜು;
ಆ ಕಳಕಳಮನ್ ಕೇಳ್ದು ಕರತಳದಿಮ್ ಕಣ್ಣಮ್ ಪೊಸೆಯುತ್ತುಮ್ ಎಳ್ದು=ಅರಚಾಟ ಗೋಳಾಟದ ದನಿಯನ್ನು ಕೇಳಿ… ಹಸ್ತಿನಾವತಿಯ ಪಾಂಡವರ ಶಿಬಿರದಲ್ಲಿದ್ದ ಸೈನಿಕರು ಅಂಗಯ್ ಗಳಿಂದ ತಮ್ಮ ಕಣ್ಣಗಳನ್ನು ಉಜ್ಜಿಕೊಳ್ಳುತ್ತ ಸಂಪೂರ್‍ಣವಾಗಿ ಎಚ್ಚರಗೊಂಡು;
ಕರವಾಳ್=ಕತ್ತಿ;
ತಂತಮ್ಮ ತಲೆದೆಸೆಯೊಳ್ ಇರ್ದ ಕರವಾಳಮ್ ಕೊಂಡು ನಿಂದ ನೆಲೆಯೊಳ್=ತಮ್ಮ ತಮ್ಮ ತಲೆಯ ಬಳಿಯಿದ್ದ ಕತ್ತಿಯನ್ನು ಹೊರಸೆಳೆದು ನಿಂದ ಜಾಗದಲ್ಲಿಯೇ;
ತಳರದೆ+ಇರ್ದ; ತಳರ್=ಅಲುಗಾಡು; ತಲೆ+ಕಾಪಿನ+ ಆಳ್; ಕಾಪು=ಕಾಯುವಿಕೆ/ಪಹರೆ; ಆಳ್=ಯೋದ/ಕಾದಾಳು; ತಲೆಗಾಪಿನಾಳ್=ಅಂಗರಕ್ಶಕ ಪಡೆಯ ಸೈನಿಕ; ಉಕ್ಕಡ=ಊರಿನ ಗಡೆ/ನಗರದ ಎಲ್ಲೆ; ಉಕ್ಕಡದ ಆಳ್=ಗಡಿಯಲ್ಲಿ ಕಾವಲು ಇರುವ ಯೋದ;
ತಳರದಿರ್ದ ತಲೆಗಾಪಿನಾಳ ಉಕ್ಕಡದ ಆಳ ಮೇಲಿಕ್ಕಿ=ಗಾಬರಿಯಿಂದ ಅತ್ತಿತ್ತ ಅಲ್ಲಾಡದೆ ನಿಂತಿದ್ದ ಯೋದರನ್ನು ಅಶ್ವತ್ತಾಮನು ಕೊಂದು… ಅವರ ಹೆಣಗಳನ್ನು ಉಕ್ಕಡದ ಯೋದರ ಮೇಲೆ ಎಸೆದು;
ಘರವಟ್ಟಿಗೆ+ಆಳ್; ಘರವಟ/ಗರವಟ=ಗಸ್ತು/ಪಹರೆ; ಘರವಟ್ಟಿಗೆ=ಕಾವಲು ಕಾಯುವ/ಗಸ್ತು ತಿರುಗುವ; ಘಟರವಟ್ಟಿಗೆಯ ಆಳು=ನಗರದೊಳಗೆ ಗಸ್ತು ತಿರುಗುವ ಯೋದ;
ಉಕ್ಕಡದಾಳ ಘರವಟ್ಟಿಗೆಯಾಳ ಮೇಲಿಕ್ಕಿ=ಉಕ್ಕಡದ ಯೋದರ ಹೆಣಗಳನ್ನು ಗಸ್ತು ತಿರುಗುವ ಯೋದರ ಮೇಲೆ ಎಸೆದು;
ಗರವಟ್ಟಿಗೆ/ಘರವಟ್ಟಿಗೆ=ಸದ್ದು/ಗದ್ದಲ;
ಘರವಟ್ಟಿಗೆಯಾಗೆ=ಮಹಾಗದ್ದಲವಾಗುತ್ತಿರಲು;
ಮಹಾ+ಮಸಕಮ್; ಮಸಕ=ಸಿಟ್ಟು/ಕೋಪ; ಮಸಗು=ಕೆರಳು; ಜವ= ಯಮ; ನೇರಿ/ನೇರ್=ನೇರವಾಗಿ; ಬರ್ಚಿ=ಶೂಲ;
ಮಾಮಸಕಮ್ ಮಸಗಿ ಜವಮ್ ನೇರಿ ಬರ್ಚಿದಂತೆ=ಅತಿಯಾದ ಕೋಪದಿಂದ ಕೆರಳಿದ ಯಮನು ನೇರವಾಗಿ ಶೂಲದಿಂದ ಇರಿದಂತೆ;
ನಿವಳಿವಟ್ಟಮ್+ ಅಪ್ಪಿನಮ್; ನಿವಳಿವಟ್ಟ=ಸಂಪೂರ್‍ಣವಾಗಿ ನಾಶಗೊಳ್ಳುವದು; ಅಕ್ಷೋಹಿಣಿ ಬಲ=ಆನೆಗಳು 21,870 – ಕುದುರೆಗಳು 21,870 – ತೇರುಗಳು 21,870 – ಕಾಲಾಳುಗಳು 1,09,350 ಸಂಕೆಯಲ್ಲಿರುವ ಸೇನಾಬಲ;
ಪೆಂಡಿರ್ ಮಕ್ಕಳ್ ಎನ್ನದೆ ನಿವಳಿವಟ್ಟಮಪ್ಪಿನಮ್ ಒಂದು ಅಕ್ಷೋಹಿಣೀ ಬಲಮ್ ಎಲ್ಲಮಮ್ ಪೇಳ ಪೆಸರಿಲ್ಲವೆಂಬಂತೆ ಕೊಂದು=ಅಶ್ವತ್ಥಾಮನು ಶಿಬಿರದಲ್ಲಿದ್ದ ಹೆಂಗಸರು ಮಕ್ಕಳಿಗೂ ಕರುಣೆಯನ್ನು ತೋರಿಸದೆ ಸಂಪೂರ್‍ಣವಾಗಿ ಒಂದು ಅಕ್ಶೋಹಿಣಿ ಸೇನಾಬಲವೆಲ್ಲವನ್ನೂ ಹೇಳಲು ಹೆಸರಿಲ್ಲದಂತೆ ಅಂದರೆ ಒಂದು ಜೀವಿಯನ್ನು ಬಿಡದಂತೆ ಕೊಂದು;
ಕಟ್ಟಿದಿರ್+ಒಳ್; ಕಟ್ಟಿದಿರು= ಎದುರಾಗಿ/ಮುಂದುಗಡೆ; ಮುಟ್ಟಿ ಮೂದಲಿಸು=ಹೀನಾಯವಾಗಿ ತೆಗಳುವುದು/ನಿಂದಿಸುವುದು;
ತನಗೆ ಕಟ್ಟಿದಿರೊಳ್ ಇರ್ದ ಧೃಷ್ಟದ್ಯುಮ್ನನುಮನ್ ಮುಟ್ಟಿ ಮೂದಲಿಸಿ=ಅಶ್ವತ್ತಾಮನು ತನ್ನ ಎದುರಿಗೆ ಕಂಡುಬಂದ ದ್ರುಶ್ಟದ್ಯುಮ್ನನನ್ನು ಹೀನಾಯವಾಗಿ ತೆಗಳಿ;
ಅಯ್ಯ=ಅಪ್ಪ/ತಂದೆ; ತಮ್ಮಯ್ಯ= ಅಶ್ವತ್ತಾಮನ ತಂದೆಯಾದ ದ್ರೋಣಾಚಾರ್‍ಯ; ಪರಿಭವ=ಅಪಮಾನ/ಸೋಲು; ದೆಸೆ+ಬಲಿ+ಗೆಯ್ದು; ದೆಸೆ=ದಿಕ್ಕು; ಬಲಿ=ದೇವತೆಗಳನ್ನು ಇಲ್ಲವೇ ದೇವರನ್ನು ಪೂಜಿಸುವಾಗ ಹೂವು ಹಣ್ಣು ಬಟ್ಟೆ ಮುಂತಾದುವುದರ ಜತೆ ಪ್ರಾಣಿಗಳನ್ನು ಕೊಂದು ರಕ್ತ ಮಾಂಸವನ್ನು ಅರ್‍ಪಿಸುವುದು/ಚೆಲ್ಲುವುದು; ದೆಸೆವಲಿ=ಎಂಟು ದಿಕ್ಕಿನ ದೇವತೆಗಳಿಗೆ ಬಲಿಕೊಡುವುದು;
ತಮ್ಮಯ್ಯನನ್ ಪರಿಭವಿಸಿದ ಪಗೆಯನ್ ಕೊಂದು ದೆಸೆವಲಿಗೆಯ್ದು=ತನ್ನ ತಂದೆಯಾದ ದ್ರೋಣಾಚಾರ್‍ಯನನ್ನು ಅಪಮಾನಿಸಿ ಕೊಂದಿದ್ದ ಹಗೆಯಾದ ದ್ರುಶ್ಟದ್ಯುಮ್ನನನ್ನು ಕೊಂದು ಎಂಟು ದಿಕ್ಕಿನತ್ತ ಅವನ ರಕ್ತ ಮಾಂಸಗಳನ್ನು ಚೆಲ್ಲಿ; ಕುರುಕ್ಶೇತ್ರ ಯುದ್ದರಂಗದಲ್ಲಿ ದುರ್‍ಯೋದನನ ಸೇನಾಪಡೆಯಲ್ಲಿದ್ದ ‘ಅಶ್ವತ್ತಾಮ’ ಎಂಬ ಹೆಸರಿನ ಆನೆಯೊಂದು ಸತ್ತಾಗ, ಕ್ರಿಶ್ಣನ ಸೂಚನೆಯಂತೆ ದರ್‍ಮರಾಯನು ‘ಅಶ್ವತ್ತಾಮ ಆನೆ ಸತ್ತಿತು’ ಎಂದು ಗಟ್ಟಿಯಾದ ದನಿಯಲ್ಲಿ ಕೂಗಿ ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ದ್ರೋಣಾಚಾರ್‍ಯನು ತನ್ನ ಮಗ ಅಶ್ವತ್ತಾಮನೇ ಸತ್ತನೆಂದು ತಪ್ಪಾಗಿ ತಿಳಿದು, ತಮ್ಮ ಕಯ್ಯಲ್ಲಿದ್ದ ಬಿಲ್ಲುಬಾಣಗಳನ್ನು ಕೆಳಗಿಟ್ಟು ಪುತ್ರಶೋಕದಿಂದ ತೇರಿನಲ್ಲಿ ಕುಳಿತುಕೊಳ್ಳುತ್ತಾರೆ. ಅದೇ ಗಳಿಗೆಯಲ್ಲಿ ದ್ರುಪದನ ಮಗನಾದ ದ್ರುಶ್ಟದ್ಯುಮ್ನನು ತನ್ನ ತಂದೆಗೆ ದ್ರೋಣರಿಂದ ಆಗಿದ್ದ ಅಪಮಾನದ ಪ್ರತೀಕಾರವಾಗಿ ತೇರನ್ನೇರಿ ಬಂದು ದ್ರೋಣರ ತಲೆಯನ್ನು ಕತ್ತರಿಸುತ್ತಾನೆ;
ಪ್ರಭೃತಿಗಳ್+ಅನ್; ಪ್ರಭೃತಿಗಳು=ಮೊದಲಾದವರು;
ಶಿಖಂಡಿ ಚೇಕಿತಾನ ಯುಧಾಮನ್ಯು ಉತ್ತಮೌಜಸ ಪ್ರಭೃತಿಗಳನ್ ಇಕ್ಕಿ=ಶಿಖಂಡಿ, ಚೇಕಿತಾನ, ಯುದಾಮನ್ಯು, ಉತ್ತಮೌಜಸ ಮೊದಲಾದ ಪಾಂಡವರ ಕಡೆಯ ವ್ಯಕ್ತಿಗಳನ್ನು ಕೊಂದು;
ಶಂಕೆ+ಇಮ್; ಶಂಕೆ=ತಪ್ಪಾಗಿ ಗ್ರಹಿಸಿ; ಪಂಚಪಾಂಡವರು=ಅಯ್ದು ಮಂದಿ ಪಾಂಡವರಿಗೆ ದ್ರೌಪದಿಯ ಹೊಟ್ಟೆಯಲ್ಲಿ ಹುಟ್ಟಿದ ಅಯ್ದು ಮಂದಿ ಮಕ್ಕಳು. ಶ್ರುತಸೋಮ-ಪ್ರತಿವಿಂದ್ಯ-ಶ್ರುತಕೀರ್‍ತಿ-ಶತಾನೀಕ-ಶ್ರುತಸೇನ ಎಂಬ ಹೆಸರಿನವರು;
ಪಾಂಡವರ ಶಂಕೆಯಿಮ್ ಶ್ರುತಸೋಮಕ ಪ್ರಭೃತಿಗಳಪ್ಪ ಪಂಚಪಾಂಡವರ ತಲೆಗಳಮ್ ಕೊಂಡು=ಅಶ್ವತ್ತಾಮನು ಆ ಶಿಬಿರದಲ್ಲಿದ್ದ ಪಾಂಡವರ ಅಯ್ದು ಮಂದಿ ಗಂಡುಮಕ್ಕಳಾದ ಶ್ರುತಸೋಮ-ಪ್ರತಿವಿಂದ್ಯ- ಶ್ರುತಕೀರ್‍ತಿ–ಶತಾನೀಕ-ಶ್ರುತಸೇನರನ್ನು ಪಾಂಡವರೆಂದೇ ತಪ್ಪಾಗಿ ತಿಳಿದು, ಆ ಅಯ್ದು ಮಂದಿಯ ತಲೆಗಳನ್ನು ಕತ್ತರಿಸಿ ತೆಗೆದುಕೊಂಡು;
ನೇಸರ್=ಸೂರ್‍ಯ;
ಥಳಥಳನೆ ನೇಸರ್ ಮೂಡುವಾಗಳ್ ಬಂದು=ಬೆಳಕಿನ ಕಿರಣಗಳನ್ನು ಚೆಲ್ಲುತ್ತ ಪ್ರಕಾಶಮಾನವಾಗಿ ಸೂರ್‍ಯನು ಮೂಡುತ್ತಿರುವಾಗ ಅಶ್ವತ್ತಾಮನು ವೈಶಂಪಾಯನ ಸರೋವರದ ಸಮೀಪದ ರಣರಂಗದಲ್ಲಿ ಬಿದ್ದಿದ್ದ ದುರ್‍ಯೋದನನ ಬಳಿಗೆ ಬಂದು;
ನಚ್ಚು=ಹಂಬಲ/ಬಯಸು;
ಕೊಳ್… ನಿನ್ನ ನಚ್ಚಿನ ಪಾಂಡವರ ತಲೆಗಳಿವೆ ಎಂದು ದುರ್ಯೋಧನನ ಮುಂದಿಕ್ಕಿದೊಡೆ= ತೆಗೆದುಕೊ… ನೀನು ಜೀವನದ ಉದ್ದಕ್ಕೂ ಬಲಿ ತೆಗೆದುಕೊಳ್ಳಬೇಕು ಎಂದು ಹಂಬಲಿಸುತ್ತಿದ್ದ ಪಾಂಡವರ ತಲೆಗಳು ಇಲ್ಲಿವೆ ನೋಡು ಎಂದು ನುಡಿದು ದುರ್‍ಯೋದನನ ಮುಂದೆ ತಲೆಗಳನ್ನು ಇಟ್ಟಾಗ;
ನೀಡು=ಬಹಳ ಹೊತ್ತು/ಹೆಚ್ಚಿನ ಸಮಯ;
ಆ ಮಹಾನುಭಾವನ್ ಆ ತಲೆಗಳಮ್ ನೀಡುಮ್ ಭಾವಿಸಿ ನೋಡಿ=ಆ ಮಹಾನುಭಾವನಾದ ದುರ್‍ಯೋದನನು ತನ್ನ ಮುಂದಿದ್ದ ಅಯ್ದು ತಲೆಗಳನ್ನು ಬಹಳ ಹೊತ್ತು ಚೆನ್ನಾಗಿ ಗಮನಿಸಿ ನೋಡಿ;
ಪವನಜ=ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು/ಬೀಮ; ಆಸ್ಯಮ್+ಅಲ್ತು+ಇದು; ಆಸ್ಯ=ಮೊಗ;
ಪವನಜನ ಆಸ್ಯಮಲ್ತಿದು=ಇದು ಬೀಮನ ಮೊಗವಲ್ಲ; ತನ್ನ ಮುಂದಿದ್ದ ಅಯ್ದು ತಲೆಗಳಲ್ಲಿ ದುರ್‍ಯೋದನನು ಬೀಮನ ತಲೆ ಯಾವುದೆಂಬುದನ್ನು ಹುಡುಕಿದ್ದಾನೆ. ಅವನ ಕಣ್ಣಿಗೆ ಬೀಮನ ತಲೆ ಕಾಣಲಿಲ್ಲ;
ಆನನಮ್+ಅಪ್ಪೊಡೆ; ಆನನ=ಮೊಗ; ಮದೀಯ=ನನ್ನ; ವಕ್ತ್ರ=ಮೊಗ; ಮಟ್ಟಮ್+ಇರ್ದು; ಮಟ್ಟ=ಸುಮ್ಮನೆ/ತೆಪ್ಪಗೆ;
ಅವನ ಆನನಮಪ್ಪೊಡೆ ಮದೀಯ ವಕ್ತ್ರಮನೆ ಮಟ್ಟಮಿರ್ದು ನೋಡುವುದೆ=ಬೀಮನ ಮೊಗವಾಗಿದ್ದರೆ ಅದು ನನ್ನ ಮೊಗವನ್ನು ಸುಮ್ಮನೆ ನೋಡುತ್ತಿತ್ತೆ; ಬೀಮನದಾಗಿದ್ದರೆ ನೋಡನೋಡುತ್ತಿದ್ದಂತೆಯೇ ಸೇಡನ್ನು ತೀರಿಸಿಕೊಳ್ಳುವಂತೆ ನನ್ನ ಮೇಲೆ ಹಾರಿಬಂದು ಡಿಕ್ಕಿ ಹೊಡೆಯುತ್ತಿತ್ತು;
ಕೆಮ್ಮನೆ ಪೋಯ್ತು=ನಿನ್ನ ಹೋರಾಟದಿಂದ ಯಾವ ಪ್ರಯೋಜನವೂ ಆಗಲಿಲ್ಲ;
ಅರಿವು+ಇಲ್ಲದೆ+ಆಯ್ತು; ಅರಿವು=ತಿಳುವಳಿಕೆ;
ಅರಿವಿಲ್ಲದಾಯ್ತು=ಸರಿಯಾದ ತಿಳುವಳಿಕೆಯಿಲ್ಲದೆ ಇಂತಹ ದುರಂತವಾಗಿದೆ;
ಪಾಂಡವರ ಶಿರಂಗಳಲ್ಲವು=ಇವು ಪಾಂಡುಪುತ್ರರಾದ ದರ್‍ಮರಾಯ-ಬೀಮ-ಅರ್‍ಜುನ-ನಕುಲ-ಸಹದೇವರ ತಲೆಗಳಲ್ಲ;
ಸೂನುಗಳ್+ಅಪ್ಪ; ಸೂನು=ಮಗ;
ಇವು ಪಾಂಡವ ಸೂನುಗಳಪ್ಪ ಪಂಚಪಾಂಡವರ ಶಿರಂಗಳಮ್=ಇವು ಪಾಂಡವರ ಮಕ್ಕಳಾದ ಪಂಚಪಾಂಡವರಾದ ಶ್ರುತಸೋಮ-ಪ್ರತಿವಿಂದ್ಯ- ಶ್ರುತಕೀರ್‍ತಿ-ಶತಾನೀಕ-ಶ್ರುತಸೇನರ ತಲೆಗಳನ್ನು;
ಅಕ್ಕಟ=ಅಯ್ಯೋ; ನೆರೆ=ಚೆನ್ನಾಗಿ/ ಹೆಚ್ಚಾಗಿ;
ಅಕ್ಕಟ… ನೆರೆ ವಿಚಾರಿಸದೆ ಕೊಂಡು ಬರ್ಪುದೇ= ಅಯ್ಯೋ… ಸರಿಯಾಗಿ ಗಮನಿಸದೆ ಕತ್ತರಿಸಿಕೊಂಡು ಬರುವುದೇ;
ವಿಕಳರ+ವೊಲ್; ವಿಕಲ= ಭ್ರಮೆ/ ಭ್ರಾಂತಿ/ ಉದ್ವಿಗ್ನತೆ; ವೊಲ್=ಅಂತೆ; ಅರಿದು=ಕತ್ತರಿಸು; ಪರಮೇಶ್ವರ=ಶಿವ/ರುದ್ರ;
ಪರಮೇಶ್ವರ ಅವತಾರನೆ ಪರಮಜ್ಞಾನಿಯೆ ವಿವೇಕವಿಕಳರವೊಲ್ ಬಾಲರ ತಲೆಯಮ್ ಅರಿದು ತಂದೆಯೊ=ರುದ್ರನ ಅಂಶದಿಂದ ರೂಪುತಳೆದವನೇ … ಮಹಾ ಅರಿವುಳ್ಳವನಾದ ಅಶ್ವತ್ತಾಮನೇ… ಬುದ್ದಿಗೇಡಿಗಳಂತೆ ಬಾಲಕರ ತಲೆಯನ್ನು ಕತ್ತರಿಸಿ ತಂದೆಯಲ್ಲಾ;
ದೊರೆಕೊಳ್ಳು=ಉಂಟಾಗು;
ನಿನಗೆ ಬಾಲವಧಮ್ ಪಾತಕಮ್ ದೊರೆಕೊಂಡುದು= ನಿನಗೆ ಬಾಲಕರನ್ನು ಕೊಂದ ಪಾಪ ಸುತ್ತಿಕೊಂಡಿತ;
ರೌದ್ರ=ಬಯಂಕರ; ಪ್ರಾಯಶ್ಚಿತ್ತ= ಮಾಡಿದ ತಪ್ಪನ್ನು ತಿಳಿದುಕೊಂಡು, ಅದನ್ನು ಸರಿಪಡಿಸಿಕೊಂಡು ಬಾಳುವುದಕ್ಕಾಗಿ ಮಯ್ ಮನಸ್ಸಿಗೆ ದಂಡನೆಯನ್ನು ಕೊಟ್ಟುಕೊಳ್ಳುವುದು; ಪ್ರವರ್ತನ+ಅರ್ಥಮ್; ಪ್ರವರ್ತನ=ಮುನ್ನಡೆ/ಮುಂದುವರಿಸುವಿಕೆ; ಅರ್ಥ=ಉದ್ದೇಶ;
ಅದು ಕಾರಣಮ್ ರೌದ್ರಪ್ರಾಯಶ್ಚಿತ್ತ ಪ್ರವರ್ತನಾರ್ಥಮ್ ಹಿಮವತ್ ಪರ್ವತಕ್ಕೆ ಪೋಪುದು ಎಂದು ಚಿತ್ತ ಸಮಾಧಾನಮ್ ಗೆಯ್ದು=ಬಾಲಕರನ್ನು ಕೊಂದಿರುವ ಕಾರಣದಿಂದ ನಿನಗೆ ತಟ್ಟಿರುವ ಬಯಂಕರವಾದ ಪಾಪವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ನೀನು ಹಿಮಾಲಯ ಪರ್‍ವತಕ್ಕೆ ಹೋಗುವುದು ಎಂದು ಬಾಲಕರ ಕೊಲೆಯಿಂದ ಕಂಗಾಲಾಗಿರುವ ಅಶ್ವತ್ತಾಮನಿಗೆ ಸಮಾದಾನವನ್ನು ಹೇಳಿ;
ಅಜಿತನ್=ವಿಶ್ಣು; ಸ್ಮರಿಯಿಸು=ನೆನಪಿಸಿಕೊಳ್ಳು/ ಜಪಮಾಡು/ದ್ಯಾನಿಸು; ಸಾಧಿಸು=ಪಡೆ/ದೊರಕಿಸಿಕೊಳ್ಳು; ವಿಸರ್ಜಿಸು=ಬಿಡು/ತ್ಯಜಿಸು;
ಅಜಿತನಮ್ ಸ್ಮರಿಯಿಸಿ ಸುರಲೋಕಮಮ್ ಸಾಧಿಸುವೆನ್ ಎಂದು ಅಶ್ವತ್ಥಾಮಾದಿಗಳಮ್ ವಿಸರ್ಜಿಸಿ=ವಿಶ್ಣುವಿನ ನಾಮಸ್ಮರಣೆಯನ್ನು ಮಾಡುತ್ತ ದೇವಲೋಕದಲ್ಲಿ ನೆಲೆಯನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಿ, ಅಶ್ವತ್ತಾಮ, ಕ್ರುಪ, ಕ್ರುತವರ್‍ಮ ಮುಂತಾದವರನ್ನು ಅಲ್ಲಿಂದ ಕಳುಹಿಸಿ;
ಅವಸಾನ=ಕೊನೆ/ಅಂತ್ಯ; ಉನ್ಮುಖ=ಸಿದ್ದವಾಗಿರುವ;
ತತ್ ದಿನ ಅವಸಾನದೊಳ್ ದುರ್ಯೋಧನನ್ ಪ್ರಾಣವಿಸರ್ಜನ ಉನ್ಮುಖನಾದನ್=ಕುರುಕ್ಶೇತ್ರ ಯುದ್ದದ ಹದಿನೆಂಟನೆಯ ದಿನದ ಕೊನೆಯಲ್ಲಿ… ಸೂರ್‍ಯನು ಮುಳುಗುತ್ತಿರುವ ಸಮಯದಲ್ಲಿದುರ್‍ಯೋದನನು ತನ್ನ ಪ್ರಾಣವನ್ನು ಬಿಡಲು ಸಿದ್ದನಾದನು; ಕವಿಯು ಪಶ್ಚಿಮ ದಿಕ್ಕಿನಲ್ಲಿ ಮರೆಯಾಗುತ್ತಿರುವ ಸೂರ್‍ಯನ ನಿಸರ್‍ಗ ಚಿತ್ರಣದೊಡನೆ ದುರ್‍ಯೋದನನ ಸಾವಿನ ಸಂಗತಿಯನ್ನು ಸಮೀಕರಿಸುತ್ತ, ಅಸ್ತಂಗತನಾಗುವ ಸೂರ್‍ಯನಂತೆಯೇ ದುರ್‍ಯೋದನನು ಮರಣಹೊಂದಿ ಬೂಮಿಯಿಂದ ಕಣ್ಮರೆಯಾದನು ಎಂದು ಚಿತ್ರಿಸಿದ್ದಾನೆ;
ಪಂಕಜ=ತಾವರೆ; ಸುಹೃತ್=ಒಳ್ಳೆಯ ಮನಸ್ಸು; ಮುಗಿವ+ಅನ್ನಮ್; ಮುಗಿ=ಹೂವಿನ ದಳಗಳು ಮುಚ್ಚಿಕೊಳ್ಳುವುದು; ಅನ್ನಮ್=ರೀತಿಯಲ್ಲಿ;
ಪಂಕಜಮುಮ್ ಸುಹೃತ್ ವದನ ಪಂಕಜಮುಮ್ ಮುಗಿವನ್ನಮ್=ಸೂರ್‍ಯ ಕಿರಣಗಳು ಮರೆಯಾಗುತ್ತಿದ್ದಂತೆಯೇ ಸರೋವರದಲ್ಲಿನ ತಾವರೆ ಹೂವುಗಳ ದಳಗಳು ಮುಚ್ಚಿಕೊಳ್ಳುವಂತೆ ಸಾವಿನ ಕೊನೆಯ ಗಳಿಗೆಯಲ್ಲಿ ದೇವರ ನಾಮ ಸ್ಮರಣೆಯನ್ನು ಮಾಡುತ್ತ ಪ್ರಶಾಂತವಾಗಿದ್ದ ದುರ್‍ಯೋದನನು ಮೊಗವು ಮುದುಡಿಕೊಳ್ಳುತ್ತಿರಲು
ಉಗ್ರ=ಬಿಸಿ/ ಸುಡುವ; ತೇಜ=ಕಾಂತಿ; ಕಿಡು=ಮಸುಕಾಗು/ಇಲ್ಲವಾಗು;
ಉಗ್ರತೇಜಮ್ ಕಿಡುತಿರ್ಪಿನಮ್=ಉರಿಯುತ್ತಿದ್ದ ಸೂರ್‍ಯನ ಪ್ರಕರವಾದ ಕಾಂತಿಯು ಮಸುಕಾಗುವಂತೆಯೇ ಚಕ್ರವರ್‍ತಿಯಾಗಿ ಮೆರೆದಿದ್ದ ದುರ್‍ಯೋದನನ ಮೊಗದ ಕಾಂತಿಯು ಮಸುಕಾಗುತ್ತಿರಲು;
ನಿಜ=ತನ್ನ; ಕರ=ಕಿರಣ/ಕಾಂತಿ; ನಿಜಕರ= ಸೂರ್‍ಯನು ತನ್ನ ಕಿರಣಗಳನ್ನು; ಉಡುಗು=ಕುಗ್ಗು/ಅಡಗು;
ನಿಜಕರಂಗಳನ್ ಅಂದು ಉಡುಗುತ್ತುಮ್ ಇರ್ದು=ಪಶ್ಚಿಮದ ದಿಕ್ಕಿನಲ್ಲಿ ಮರೆಯಾಗುತ್ತಿರುವ ಸೂರ್‍ಯ ಕಿರಣಗಳ ಕಾಂತಿಯು ಕುಗ್ಗುತ್ತಿರುವಂತೆಯೇ ದುರ್‍ಯೋದನನ ದೇಹದ ಕಾಂತಿಯು ಅಡಗುತ್ತಿರಲು;
ಚಕ್ರಾಂಕ=ಚಕ್ರವಾಕ ಎಂಬ ಹೆಸರಿನ ಹಕ್ಕಿ. ಚಕ್ರವಾಕ ಗಂಡು ಮತ್ತು ಹೆಣ್ಣು ಹಕ್ಕಿಗಳು ಹಗಲಿನಲ್ಲಿ ಜತೆಯಾಗಿದ್ದು, ಇರುಳಿನಲ್ಲಿ ಬೇರೆಬೇರೆಯಾಗಿರುತ್ತವೆ ಎಂಬ ಒಂದು ಗ್ರಹಿಕೆ ಜನಮನದಲ್ಲಿದೆ; ಅಗಲ್=ಬಿಟ್ಟುಹೋಗು/ತೊರೆ;
ಚಕ್ರಾಂಕಮ್ ಅಗಲ್ವಿನಮ್=ಗಂಡು ಹೆಣ್ಣು ಚಕ್ರವಾಕ ಹಕ್ಕಿಗಳು ಒಂದನ್ನೊಂದು ಅಗಲುವಂತೆ ಬೆಳಗುತ್ತಿದ್ದ ಸೂರ್‍ಯನು ಭೂಮಿಯ ಆ ಎಡೆಯಿಂದ ಅಗಲಿದನು… ಅಂತೆಯೇ ದುರ್‍ಯೋದನನು ಬೂಮಿಯನ್ನು ತ್ಯಜಿಸುತ್ತಿದ್ದಾನೆ;
ಕ್ರಮ=ಮುಂದುವರಿಯುವಿಕೆ; ಅಂಬರ=ಆಕಾಶ; ಬಿಸುಟು=ತ್ಯಜಿಸಿ; ಉರ್ವಿ=ಬೂಮಿ; ಕವಿ=ಮುಸುಕು; ಅರ್ಕ= ಸೂರ್‍ಯ; ಕುರುಕುಲ ಅರ್ಕ=ಕುರುವಂಶದ ಸೂರ್‍ಯನಾಗಿದ್ದ ದುರ್‍ಯೋದನ; ಅಸ್ತ=ಮರೆಯಾಗುವುದು; ಎಯ್ದು=ಹೊಂದು;
ಕ್ರಮದಿನ್ ಅಂಬರಮಮ್ ಬಿಸುಟು ಉರ್ವಿಗೆ ಅಂಧಕಾರಮ್ ಕವಿತರ್ಪಿನಮ್ ಕುರುಕುಲ ಅರ್ಕನುಮ್ ಅರ್ಕನುಮ್ ಅಸ್ತಮ್ ಎಯ್ದಿದರ್=ಬೆಳಗುತ್ತಿದ್ದ ಸೂರ್‍ಯನು ಆಕಾಶವನ್ನು ಬಿಟ್ಟು ಪಶ್ಚಿಮದ ದಿಕ್ಕಿನತ್ತ ಸಾಗುತ್ತಿದ್ದಂತೆಯೇ ಬೂಮಂಡಲಕ್ಕೆ ಕತ್ತಲೆಯು ಕವಿಯುತ್ತಿರಲು ಸೂರ್‍ಯನು ಪಶ್ಚಿಮ ದಿಕ್ಕಿನಲ್ಲಿ ಮರೆಯಾದನು ಮತ್ತು ಕುರುಕುಲದ ಸೂರ್‍ಯ ನಾದ ದುರ್‍ಯೋದನನ ಪ್ರಾಣ ಬೂಮಂಡಲವನ್ನು ಬಿಟ್ಟುಹೋಯಿತು; ಸೂರ್‍ಯದೇವನೂ ದುರ್‍ಯೋದನನೂ ಕಣ್ಮರೆಯಾದರು;
(ಚಿತ್ರಸೆಲೆ: jainheritagecentres.com)


ಇತ್ತೀಚಿನ ಅನಿಸಿಕೆಗಳು