ಕುಮಾರವ್ಯಾಸ ಬಾರತ ಓದು: ಆದಿಪರ್‍ವ – ಕರ್‍ಣನ ಜನನ – ನೋಟ – 4

– ಸಿ. ಪಿ. ನಾಗರಾಜ.

ಕರ್‍ಣನ ಜನನ

(ಆದಿ ಪರ್ವ: ಮೂರನೆಯ ಸಂಧಿ: ಪದ್ಯ: 11-28)

ಪಾತ್ರಗಳು

ದೂರ್ವಾಸ: ಒಬ್ಬ ಮುನಿ.
ಕುಂತಿ: ಶೂರಸೇನ ರಾಜನ ಮಗಳು.
ಸೂರ್ಯದೇವ: ಗಗನದಲ್ಲಿ ಉರಿಯುವ ಸೂರ್‍ಯನನ್ನು ಒಬ್ಬ ದೇವತೆಯೆಂದು ಜನಸಮುದಾಯ ಕಲ್ಪಿಸಿಕೊಂಡಿದೆ.
ಸೂತ: ಕರ್‍ಣನ ಸಾಕು ತಂದೆ.

*** ಕರ್ಣನ ಜನನ ***

ಕುಮಾರರು ಹರಿಣಪಕ್ಷದ ನಳಿನರಿಪುವಿನವೊಲ್ ಬೆಳೆವುತಿರ್ದರು… ತಾಯಿ ಉಮ್ಮಳಿಸದಂತಿರೆ… ಕಲಿ ಭೀಷ್ಮ ಇಬ್ಬರಿಗೆ ಕುಲವಿಹಿತ ಚೌಲೋಪನಯನವನು ರಚಿಸಿ… ಕಲಿತ ವಿದ್ಯರ ಮಾಡಿ… ಸೋಮವಂಶದ ಬೆಳವಿಗೆಯನೇ ಮಾಡಿ ಕೊಂಡಾಡಿದನು.

ಧಾರುಣೀಪತಿ ಚಿತ್ತವಿಸು, ಧೃತರಾಷ್ಟ್ರಭೂಪತಿಗೆ ಗಾಂಧಾರ ದೇಶದ ಸುಬಲರಾಜ ಕುಮಾರಿ ಕುಲವಧುವಾದಳು. ನಾರಿಯರೊಳು ಉತ್ತಮೆಯಲಾ ಆ ಗಾಂಧಾರಿಯೆನಿಸಿ ಸಮಸ್ತ ಜನ ಹೊಗಳೆ… ಪತಿವ್ರತಾ ವಿಸ್ತಾರಗುಣದಲಿ ಅಬಲೆ ಮೆರೆದಳು. ಕುಂತೀಭೋಜನೆಂಬ ನೃಪೋತ್ತಮನ ಭವನದಲಿ ಮುರಹರನ ಅತ್ತೆ ಬೆಳೆವುತ್ತಿರ್ದಳು. ಆ ವಸುದೇವ ನೃಪನ ಅನುಜೆ ಕುಂತಿ ಹೆತ್ತವರಿಗೆ… ಓಲೈಸುವರಿಗೆ… ಮಹೋತ್ತಮರಿಗೆ… ಅಖಿಳ ಲೋಕದ ಚಿತ್ತಕೆ ಅಹುದೆನೆ ನಡೆವ ಗುಣದಲಿ ಮೆರೆದಳು.

ಒಂದು ದಿನ ದೂರ್ವಾಸಮುನಿ ನೃಪ ಮಂದಿರಕೆ ಬರಲು, ಆ ಮಹೀಪತಿ ರಾಜಕಾರ್ಯದಲಿ ಬಂದ ಬರವಿನಲಿ ಅವರ ಮರೆದನು. “ಇಂದು ಕುಂತೀಭೋಜನ ಒಡೆತನ ಬೆಂದು ಹೋಗಲಿ ” ಎಂಬ ಶಾಪವನು ಇಂದುಮುಖಿ ಅವರ ಚರಣದಲಿ ಹೊರಳಿದಳು… ನಿಲಿಸಿದಳು. ತರುಣಿಯು ಆ ಮುನಿಯನು ಒಡಗೊಂಡು ಒಯ್ದು… ಕನ್ಯಾ ಪರಮ ಭವನದಲಿ ವಿವಿಧ ಅನ್ನ ಪಾನ ರಸಾಯನಂಗಳಲಿ ಉಪಚರಿಸಿದಳು.

ದೂರ್ವಾಸ: ಹರ… ಮಹಾದೇವ, ಈ ಮಗುವಿನ ಆದರಣೆಗೆ… ಈ ವಿನಯ ಉಪಚಾರಕೆ ಹಿರಿದು ಮೆಚ್ಚಿದೆನು.

(ಎಂದು ದೂರ್ವಾಸ ತಲೆದೂಗಿದನು.)

ದೂರ್ವಾಸ: ಮಗಳೆ, ಬಾ… ಐದು ಮಂತ್ರಾಳಿಗಳನು ಕೊಳ್. ಇವು ಸಿದ್ಧ ಪ್ರಯೋಗವು. ದಿವಿಜರೊಳು ಸೊಗಸು ಆರ ಮೇಲುಂಟು… ಅವರ ನೆನೆ ಸಾಕು… ಮಗನು ಜನಿಸುವನು.

(ಎಂದು ಕುಂತಿಗೆ ಮುನಿ ರಹಸ್ಯದೊಳು ಅರುಹಿ , ಮುನಿ ಮೌಳಿಗಳ ಮಣಿ ಪರಿತೋಷದಲಿ ನಿಜಾಶ್ರಮಕೆ ಸರಿದನು.)

ಕುಂತಿ: (ತನ್ನಲ್ಲಿಯೇ )

ಮಗುವುತನದಲಿ ಬೊಂಬೆಯಾಟಕೆ ಮಗುವನೇ ತಹೆನು.

(ಎಂದು ಬಂದಳು. ಗಗನ ನದಿಯಲಿ ಮಿಂದಳು ಲೋಹಿತಾಂಬರವ ಉಟ್ಟಳು. ವಿಗಡಮುನಿಪನ ಮಂತ್ರವನು ನಾಲಗೆಗೆ ತಂದಳು. ರಾಗರಸದಲಿ ಗಗನಮಣಿಯನು ನೋಡಿ ಯೋಗದಲಿ ಕಣ್ಮುಚ್ಚಿದಳು. ಅರಸ ಕೇಳ್, ಮುನಿಯಿತ್ತ ಮಂತ್ರಾಕ್ಷರ ಕರಹಕೆ ತಳುವಿದರೆ ದೂರ್ವಾಸ ವಿಗಡನಲ… ದಿನಕರನ ತೇಜವ ಕೊಂಬನೈ. ಸೂರ್ಯನು ಧರೆಗೆ ಬಂದನು. ಆತನ ಕಿರಣ ಲಹರಿಯ ಹೊಯ್ಲಿನಲಿ ಸರಸಿರುಹಮುಖಿ ಬೆಚ್ಚಿದಳು.)

ಕುಂತಿ: ಬಿಜಯಂಗೈಯಿ ನೀವು.

ಸೂರ್ಯದೇವ: ಎನ್ನಬಾರದಲೇ… ಋಷಿ ಪ್ರತಿಪನ್ನ ಮಂತ್ರವು ಅಮೋಘ. ಅದರಿಂದ ಎನ್ನ ತೂಕದ ಮಗನಹನು. ನೀನು ಅಂಜಬೇಡ.

(ಎನುತ ಕನ್ನಿಕೆಯ ಮುಟ್ಟಿದನು.)

ಸೂರ್ಯದೇವ: ಮುನ್ನಿನ ಕನ್ನೆತನ ಕೆಡದಿರಲಿ.

(ಎನುತವೆ ತನ್ನ ರಥವಿದ್ದ ಎಡೆಗೆ ವಹಿಲದಲಿ ರವಿ ತಿರುಗಿದನು. ಅರಸ ಕೇಳ್, ಆಶ್ಚರ್ಯವನು… “ತಾವರೆಯ ಮಿತ್ರನ ಕರಗಿ ಕರುವಿನೊಳು ಎರೆದರು” ಎಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ… ಕುರುಳು ತಲೆ… ನಿಟ್ಟೆಸಳು ಕಂಗಳ… ಚರಣ ಕರಪಲ್ಲವದ… ಕೆಂಪಿನ ವರಕುಮಾರಕನ ಕಂಡು ಆ ಕುಂತಿ ಬೆರಗಿನೊಳು ಇರ್ದಳು. ಅಳುವ ಶಿಶುವನು ತೆಗೆದು… ತೆಕ್ಕೆಯ ಪುಳಕಜಲದಲಿ ನಾದಿ… ಹರುಷದ ಬಳಿಯ ಲಜ್ಜೆಯ ಭಯದ ಹೋರಟೆಗೆ ಅಳುಕಿ ಹಳುವಾಗಿ… )

ಕುಂತಿ: (ತನ್ನಲ್ಲಿಯೇ )

ಕುಲದ ಸಿರಿ ತಪ್ಪುವುದಲಾ… ಸಾಕು ಇಳುಹ ಬೇಕು.

(ಎಂದೆನುತ ಜನದ ಅಪವಾದ ಭೀತಿಯಲಿ ಗಂಗಾ ಜಲದೊಳಗೆ ಹಾಯ್ಕಿದಳು.)

ಕುಂತಿ: (ಗಂಗೆಯನ್ನು ಕುರಿತು)

ತಾಯೆ, ಬಲ್ಲ ಅಂದದಲಿ ಕಂದನ ಕಾಯಿ ಮೇಣ್ ಕೊಲ್ಲು.

(ಎನುತ ಕಮಲದಳಾಯತಾಕ್ಷಿ ಕುಮಾರಕನ ಮಡುವಿನಲಿ ಹಾಯ್ಕಿದಳು. ರಾಯ ಕೇಳೈ, ಸಕಲ ಲೋಕದ ತಾಯಲಾ ಜಾಹ್ನವಿ… ತರಂಗದಿ ನೋಯಲೀಯದೆ ಮುಳುಗಲೀಯದೆ ತಡಿಗೆ ಚಾಚಿದಳು. ಮಳಲ ರಾಶಿಯನು ಕಾಲಲಿ ಕೆದರಿ ಒದೆದು, ಕೈಗಳ ಕೊಡಹಿ, ಶಿಶುಗಳ ಅರಸನು ರವಿಯನು ಈಕ್ಷಿಸುತ “ ಭೋ ” ಎಂದು ಒದರುತಿರ್ದನು. ಇದನು ಸೂತನೊಬ್ಬನು ಕಂಡನು. ಮುದದ ಮದದಲಿ ತನ್ನ ಮರೆದು ಉಬ್ಬಿದನು.)

ಸೂತ: ಇದು ಎತ್ತಣ ನಿಧಿಯೊ ಶಿವ ಶಿವ.

(ಎಂದು ನಡೆತಂದ.)

ಸೂತ: ತರಣಿ ಬಿಂಬದ ಮರಿಯೊ… ಕೌಸ್ತುಭ ವರಮಣಿಯ ಖಂಡದ ಕಣಿಯೊ… ಮರ್ತ್ಯರಿಗೆ ಮಗನು ಇವನಲ್ಲ… ಮಾಯಾ ಬಾಲಕನೊ… ಮೇಣು ಇರಿಸಿ ಹೋದವಳು ಆವಳೋ… ಶಿಶುವರನ ತಾಯ್ ನಿರ್ಮೋಹೆಯೈ… ಹರಹರ ಮಹಾದೇವ.

(ಎನುತ ಬಾಲಕನ ತೆಗೆದಪ್ಪಿದನು.)

ಸೂತ: ತಾನಿನ್ನು ತ್ರೈಲೋಕ್ಯ ರಾಜ್ಯವ ಗಣಿಸುವೆನೆ… ತೃಣವಲಾ… ಮೇಣ್… ಈ ಬಾಲಕಂಗೆ ತನ್ನಲಿ ರಿಣ ವಿಶೇಷ ಇದೇನೊ.

(ಎನುತ ಕ್ಷಣದೊಳು ಒದಗುವ ಬಾಷ್ಪಲುಳಿತೇಕ್ಷಣನು ಮನೆಗೆ ಬಂದನು.)

ಸೂತ: ರಮಣಿ ಕೊಳ್… ಪರುಷದ ಕಣಿಯ ತಂದೆನು.

(ಎಂದು ಅರ್ಭಕನ ಇತ್ತನು. ರಾಧೆಯಲಿ ಮಗನಾದನು ಎಂದು ಉತ್ಸವವ ಮಾಡಿ ಮಹೀದಿವಿಜರನು ದಾನ ಮಾನಂಗಳಲಿ ಸತ್ಕರಿಸಿ ಆದರಿಸಿದನು. ಆ ದಿನಮ್ ಮೊದಲಾಗಿ ಅವನ ಐಶ್ವರ್ಯ ಉದ್ಭವಾದುದು. ಆ ರವಿನಂದನನು ರಾಧೇಯ ನಾಮದಲಿ ಉನ್ನತವಾದನು. ಹೊಳೆ ಹೊಳೆದು… ಹೊಡೆಮರಳಿ… ನಡು ಹೊಸ್ತಿಲಲಿ ಮಂಡಿಸಿ… ಬೀದಿ ಬೀದಿಗಳೊಳಗೆ ಸುಳಿವರ ಸನ್ನೆಯೊಳಗೆ ಕರೆಕರೆದು ನಸುನಗುತ, ಲಲಿತ ರತ್ನದ ಬಾಲ ತೊಡಿಗೆಯ ಕಳಚಿ ಹಾಯ್ಕುವ ಹೆಸರು ಜನಜನದ ಕರ್ಣದಲಿ ಜಗದಲಿ ಬೆಳೆವುತಿರ್ದುದು ಹಬ್ಬಿದುದು. ಅರಸ ಕೇಳೈ, ಈತನ ಹೆಸರು ಕರ್ಣಪಾರಂಪರೆಯೊಳು ಜಗದಲಿ ಹರಿದುದು. ಅಲ್ಲಿಮ್ ಬಳಿಕಲ್ ಈತನ ನಾಮಕರಣದಲಿ ಸುರನರೋರಗ ನಿಕರವೇ ವಿಸ್ತರಿಸಿದುದು. ಕರ್ಣಾಭಿದಾನವ ಗುರುಪರಾಕ್ರಮಿ ಸೂತಭವನದಲಿ ಬೆಳೆವುತಿರ್ದನು.)

ಪದ ವಿಂಗಡಣೆ ಮತ್ತು ತಿರುಳು

ಕುಮಾರರು=ದ್ರುತರಾಶ್ಟ್ರ – ಪಾಂಡು; ಹರಿಣಪಕ್ಷ=ಅಮಾವಾಸ್ಯೆಯಿಂದ ಹಿಡಿದು ಹುಣ್ಣಿಮೆಯ ವರೆಗಿನ ಕಾಲ; ನಳಿನ=ತಾವರೆಯ ಹೂವು; ರಿಪು=ಶತ್ರು; ನಳಿನರಿಪು=ತಾವರೆಯ ಶತ್ರು/ಚಂದ್ರ; ವೊಲ್=ಅಂತೆ; ಉಮ್ಮಳಿಸು=ಚಿಂತಿಸು/ತವಕಿಸು; ವಿಹಿತ=ಸೂಕ್ತವಾದ/ಯೋಗ್ಯವಾದ; ಚೌಲ+ಉಪನಯನ; ಚೌಲ=ಜುಟ್ಟನ್ನು ಬಿಡಿಸುವುದು; ಉಪನಯನ=ಹುಡುಗರಿಗೆ ಜನಿವಾರವನ್ನು ತೊಡಿಸುವ ಆಚರಣೆ; ಕೊಂಡಾಡು=ವ್ಯವಹರಿಸು/ವ್ಯಕ್ತಪಡಿಸು; ಬೆಳವಿಗೆ=ಏಳಿಗೆ; ಧಾರುಣೀಪತಿ=ಬೂಮಂಡಲದ ಒಡೆಯ/ರಾಜ;

ಧಾರುಣೀಪತಿ ಚಿತ್ತವಿಸು=ಜನಮೇಜಯ ಮಹಾರಾಜನೇ ಕೇಳು- ಎಂದು ವೈಶಂಪಾಯನ ಮುನಿಯು ವ್ಯಾಸರು ಬರೆದ ಮಹಾಬಾರತದ ಕತೆಯನ್ನು ಹೇಳುತ್ತಿದ್ದಾನೆ; ಕುಲವಧು=ಹೆಂಡತಿ; ಮುರಹರ=ಕ್ರಿಶ್ಣ; ಅನುಜೆ=ತಂಗಿ; ಓಲೈಸು=ಒಲುಮೆ ನಲುಮೆಯಿಂದ ಕಾಣುವುದು;  ಚರಣ=ಪಾದ; ಹೊರಳು=ಉರುಳು; ಮಂತ್ರ+ಆಳಿ; ಮಂತ್ರ=ದೇವತೆಗಳಲ್ಲಿ ಮೊರೆಯಿಡುವ ಮತ್ತು ಅವರನ್ನು ಹೊಗಳುವ ನುಡಿಗಳು; ಆಳಿ=ಸಾಲು;

ದಿವಿಜ=ದೇವತೆ; ಸೊಗಸು=ಒಲವು/ಪ್ರೀತಿ; ಮೌಳಿ=ಕಿರೀಟ; ಮಣಿ=ರತ್ನ; ಪರಿತೋಷ=ಹೆಚ್ಚಿನ ಆನಂದ; ಮಗುವುತನ=ಹುಡುಗಾಟಿಕೆ/ ಒಳಿತಾಗುತ್ತದೆಯೋ ಇಲ್ಲವೇ ಕೆಡುಕಾಗುತ್ತದೆಯೋ ಎಂಬುದನ್ನು ಆಲೋಚಿಸದೆ ಆಡುವ ಮಕ್ಕಳ ಆಟ; ತಹೆನು=ತರುವೆನು; ಗಗನ=ಆಕಾಶ/ಬಾನು; ಗಗನ ನದಿ=ಗಂಗಾ ನದಿ; ಲೋಹಿತ+ಅಂಬರ; ಲೋಹಿತ=ಕೆಂಪುಬಣ್ಣ; ಅಂಬರ=ಬಟ್ಟೆ;

ವಿಗಡ=ಅತಿಶಯ/ಉಗ್ರವಾದ/ಬಲವುಳ್ಳ; ವಿಗಡಮುನಿಪ=ಅತಿಶಯವಾದ ಶಕ್ತಿಯುಳ್ಳ ಮುನಿ; ರಾಗ=ಒಲುಮೆ/ಪ್ರೀತಿ;

ಗಗನಮಣಿ=ಆಕಾಶದಲ್ಲಿ ಹೊಳೆಯುತ್ತಿರುವ ರತ್ನದಂತಹ ಸೂರ್‍ಯ; ಮುನಿ+ಇತ್ತ; ಇತ್ತ=ನೀಡಿದ/ಕೊಟ್ಟ; ಮಂತ್ರ+ಅಕ್ಷರದ; ಕರಹ=ಆಹ್ವಾನ; ತಳುವು=ತಡಮಾಡು; ವಿಗಡನಲ=ಉಗ್ರಕೋಪಿಯಲ್ಲವೇ; ದಿನಕರ=ಸೂರ್‍ಯ: ಕಿರಣ=ಬೆಳಕಿನ ಕಣ; ಲಹರಿ=ತರಂಗ/ಅಲೆ; ಹೊಯ್ಲು=ಹೊಡೆತ/ಮಿಡಿತ; ಸರಸಿರುಹಮುಖಿ=ತಾವರೆಮೊಗದವಳು/ಕುಂತಿ; ಬಿಜಯಂಗೈಯಿ ನೀವು=ಇಲ್ಲಿಂದ ತೆರಳಿರಿ ನೀವು ಎಂದು ಕುಂತಿಯು ನುಡಿದಳು; ಎನ್ನಬಾರದಲೇ=ಹಾಗೆಂದು ಹೇಳಬಾರದು;

ಪ್ರತಿಪನ್ನ=ಪಡೆದ/ಹೊಂದಿದ; ಅಮೋಘ=ತುಂಬಾ ಉಪಯುಕ್ತವಾದುದು/ಮಹತ್ತ್ವವಾದುದು; ತೂಕ= ಸಮಾನವಾದುದು; ವಹಿಲ=ಬೇಗ; ಕನ್ನೆತನ=ಮಗುವನ್ನು ಹಡೆಯುವುದಕ್ಕೆ ಮೊದಲು ಇರುವ ಹೆಣ್ಣಿನ ದೇಹದ ಸ್ತಿತಿ; ತಾವರೆಯ ಮಿತ್ರ=ಸೂರ್‍ಯದೇವ; ಕರು=ಪಡಿಯಚ್ಚು/ಎರಕದ ಬೊಂಬೆ; ಎರೆ=ಸುರಿ/ಹೊಯ್ಯು; ಎಂದು+ಎನೆ; ತೊಳಗು=ಪ್ರಕಾಶಮಾನವಾಗಿ ಬೆಳಗು; ತನು=ದೇಹ; ಛವಿ=ಕಾಂತಿ/ಹೊಳಪು; ಕುರುಳು ತಲೆ=ಕೂದಲು ತುಂಬಿದ ತಲೆಯ; ನಿಡಿದಾದ+ಎಸಳು; ನಿಡಿದು=ನೀಳವಾದ; ಎಸಳು=ಹೂವಿನ ದಳ;

ನಿಟ್ಟೆಸಳು ಕಂಗಳ= ಹೂವಿನ ನೀಳವಾದ ದಳಗಳಂತಹ ಕಣ್ಣುಗಳ; ಚರಣ ಕರ ಪಲ್ಲವದ=ಚಿಗುರಿನಂತೆ ಕೆಂಪನೆಯ ಬಣ್ಣದ ಕೋಮಲವಾದ ಕಯ್ ಕಾಲುಗಳ; ತೆಕ್ಕೆ=ಎರಡು ತೋಳುಗಳಿಂದ ಅಪ್ಪಿಕೊಳ್ಳುವುದು / ಆಲಿಂಗನ; ಪುಳಕಜಲ=ರೋಮಾಂಚನಗೊಂಡಾಗ ಹೊರಹೊಮ್ಮುವ ಬೆವರ ಹನಿಗಳು; ನಾದು= ಒದ್ದೆಮಾಡು/ತೋಯಿಸು; ಹೋರಟೆ=ತಾಕಲಾಟ/ಹೊಯ್ದಾಟ; ಅಳುಕಿ=ಹೆದರಿಕೊಂಡು; ಹಳುವು=ಕೀಳರಿಮೆ : ಸಿರಿ=ಸಂಪತ್ತು/ಹಿರಿಮೆ; ಕಮಲ+ದಳ+ಆಯತ+ಅಕ್ಷಿ; ಆಯತ=ನೀಳವಾದ/ ಉದ್ದನೆಯ; ಅಕ್ಷಿ=ಕಣ್ಣು;

ಕಮಲದಳಾಯತಾಕ್ಷಿ=ಕಮಲದ ಹೂವಿನ ದಳದಂತೆ ನೀಳವಾದ ಕಣ್ಣುಳ್ಳವಳು/ಕುಂತಿ; ಮಡು=ನದಿಯ ನೀರಿನ ಆಳವಾದ ಜಾಗ; ಹಾಯ್ಕು=ಇಡು/ಇರಿಸು;

ಜಾಹ್ನವಿ=ಜಹ್ನು ಎಂಬ ರಿಸಿಯ ಮಗಳಾದ ಗಂಗಾದೇವಿ; ತರಂಗ=ನೀರಿನ ಅಲೆ; ನೋಯಲು+ ಈಯದೆ; ಈಯದೆ=ಅವಕಾಶ ಮಾಡಕೊಡದೆ/ಬಿಡದೆ; ಮುಳುಗಲು+ಈಯದೆ; ತಡಿ=ನದಿಯ ದಂಡೆ; ಚಾಚು=ನೂಕು/ಮುಂದೆ ತಳ್ಳು; ಶಿಶುಗಳ ಅರಸ=ಮಕ್ಕಳಲ್ಲಿಯೇ ಸುಂದರಾಂಗ ಎಂಬ ತಿರುಳಿನ ನುಡಿಗಟ್ಟು; ಸೂತ=ಬೆಸ್ತ; ಉಬ್ಬು=ಹೆಮ್ಮೆ; ನಿಧಿ=ಸಂಪತ್ತು/ಸಿರಿ; ತರಣಿ=ಸೂರ್‍ಯ;

ತರಣಿ ಬಿಂಬದ ಮರಿಯೊ=ಸೂರ್‍ಯಬಿಂಬದ ಚಿಕ್ಕರೂಪವೊ; ಕೌಸ್ತುಭ=ದೇವರಾದ ವಿಶ್ಣುವಿನ ಎದೆಯಲ್ಲಿ ಕಂಗೊಳಿಸುತ್ತಿರುವ ರತ್ನದ ಒಡವೆ; ವರ=ಉತ್ತಮವಾದ; ಮಣಿ=ರತ್ನ, ಮುತ್ತು, ವಜ್ರದ ಹರಳುಗಳು; ಖಂಡ=ಚೂರು/ತುಂಡು; ಕಣಿ=ಕಲ್ಲು/ಶಿಲೆ; ಮರ್ತ್ಯ=ಮಾನವ; ತಾನು+ಇನ್ನು; ಗಣಿಸು=ಲೆಕ್ಕಿಸು/ ಪರಿಗಣಿಸು; ತೃಣ=ಹುಲ್ಲು/ಅಲ್ಪವಾದುದು; ಮೇಣ್=ಮತ್ತು; ರಿಣ ವಿಶೇಷ=ಈ ಮಗುವಿಗೂ ನನಗೂ ಯಾವುದೋ ಒಂದು ಬಗೆಯ ಪರಸ್ಪರ ನಂಟು ಇದ್ದಿರಬಹುದು; ಬಾಷ್ಪ+ಲುಳಿತ+ಈಕ್ಷಣನು; ಬಾಷ್ಪ=ಕಣ್ಣೀರು; ಲುಳಿತ=ತೊಟ್ಟಿಕ್ಕುತ್ತಿರುವ/ಹನಿಯುತ್ತಿರುವ;

ಈಕ್ಷಣ=ಕಣ್ಣು; ರಮಣಿ=ಹೆಂಡತಿ; ಪರುಷದ ಕಣಿ=ಮುಟ್ಟಿದ ಲೋಹವನ್ನು ಚಿನ್ನವನ್ನಾಗಿ ಪರಿವರ್‍ತಿಸುವ ಹರಳು. ಒಂದು ಕಲ್ಲಿನ ಹರಳಿನ ಬಗ್ಗೆ ಈ ಬಗೆಯ ಕಲ್ಪನೆಯು ಜನಮನದಲ್ಲಿದೆ; ಅರ್ಭಕ=ಎಳೆಯ ಕೂಸು/ಮಗು; ರಾಧೆ=ಸೂತನ ಹೆಂಡತಿಯ ಹೆಸರು; ಮಹೀ=ಬೂಮಿ;

ಮಹೀದಿವಜರು=ಬೂಲೋಕದ ದೇವತೆಗಳೆನಿಸಿರುವ ಬ್ರಾಹ್ಮಣರು; ಉದ್ಭವ=ಏಳಿಗೆ/ಉತ್ಪತ್ತಿ; ಹೊಡೆಮರಳು=ಮಗುಚಿಕೊಳ್ಳು; ಲಲಿತ=ಸುಂದರವಾದ; ಕರ್ಣ=ಕಿವಿ;  ಕರ್ಣಪಾರಂಪರೆ=ಕಿವಿಯಿಂದ ಕಿವಿಗೆ; ಸುರ=ದೇವತೆ; ನರ+ಉರಗ; ನರ=ಮಾನವ; ಉರಗ=ಹಾವು; ನಿಕರ=ಗುಂಪು/ಸಮೂಹ; ಕರ್ಣ+ಅಭಿಧಾನ; ಅಭಿದಾನ=ಹೆಸರು; ಸೂತಭವನ=ಬೆಸ್ತನ ಮನೆ;

ಹೊಸಗನ್ನಡ ಗದ್ಯರೂಪ

ಶುಕ್ಲಪಕ್ಶದ ಚಂದ್ರನಂತೆ ದ್ರುತರಾಶ್ಟ್ರ ಮತ್ತು ಪಾಂಡು ಬೆಳೆಯುತ್ತಿದ್ದರು. ಕುಲವಿಹಿತವಾದ ಚೌಲೋಪನಯನಗಳನ್ನು ಇಬ್ಬರು ರಾಜಕುಮಾರರಿಗೂ ಮಾಡಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ತಾಯಿ ಸತ್ಯವತಿಯು ಕೊರಗದಂತೆ ಮಕ್ಕಳನ್ನು ಮತ್ತು ಚಂದ್ರವಂಶದ ಏಳಿಗೆಯನ್ನು ಬೀಶ್ಮನು ಹೆಚ್ಚು ಮಾಡಿದನು. ಆ ದ್ರುತರಾಶ್ಟ್ರ ಬೂಪತಿಗೆ ಗಾಂದಾರ ದೇಶದ ಸುಬಲರಾಜನ ಕುಮಾರಿ ಪತ್ನಿಯಾದಳು. ನಾರಿಯರಲ್ಲಿ ಉತ್ತಮಳು… ಪತಿವ್ರತಾಗುಣದಲ್ಲಿ ಮೇಲು ಎನ್ನಿಸಿಕೊಂಡು ಗಾಂದಾರಿಯೆಂದು ಆಕೆಯು ಪ್ರಸಿದ್ದಳಾಗಿ, ಸಮಸ್ತ ಜನರ ಹೊಗಳಿಕೆಗೆ ಪಾತ್ರಳಾದಳು.

ಇನ್ನೊಂದೆಡೆ ಕುಂತಿಬೋಜನೆಂಬ ರಾಜನ ಮನೆಯಲ್ಲಿ ಕ್ರಿಶ್ಣನ ಸೋದರತ್ತೆಯೂ ವಸುದೇವ ಮಹಾರಾಜನ ತಂಗಿಯೂ ಆದ ಕುಂತಿಯು ಬೆಳೆಯುತ್ತಿದ್ದಳು. ಕುಂತಿಯು ಹೆತ್ತವರು, ಸೇವೆ ಮಾಡುವವರು, ಉಳಿದ ಸಮಸ್ತ ಲೋಕದವರೆಲ್ಲಾ ಮೆಚ್ಚುವ ಗುಣದಿಂದ ಕೂಡಿದ್ದಳು.

ಒಂದು ದಿನ ದೂರ‍್ವಾಸ ಮುನಿ ರಾಜನ ಅರಮನೆಗೆ ಬರಲು, ಆ ಮಹಾರಾಜನು ರಾಜಕಾರ‍್ಯದ ಕಾರಣದಿಂದಾಗಿ ದೂರ‍್ವಾಸರ ಬರುವಿಕೆಯನ್ನು ಗಮನಿಸಲಿಲ್ಲ. ಆಗ ದೂರ‍್ವಾಸ ಮುನಿಯು ಕಡುಕೋಪದಿಂದ “ಇಂದು ಕುಂತಿಬೋಜನ ರಾಜ್ಯಾಡಳಿತ ಹಾಳಾಗಲಿ” ಎಂದು ಶಾಪವನ್ನು ಕೊಡುವುದರಲ್ಲಿದ್ದಾಗ, ಕುಂತಿಯು ದೂರ‍್ವಾಸ ಮುನಿಯ ಪಾದಗಳಲ್ಲಿ ಹೊರಳಾಡಿ, ಶಾಪವನ್ನು ಕೊಡದಂತೆ ತಡೆದಳು. ಮುನಿ ದೂರ‍್ವಾಸರನ್ನು ಯುವತಿ ಕುಂತಿಯು ತನ್ನೊಡನೆ ರಾಣಿವಾಸಕ್ಕೆ ಕರೆದುಕೊಂಡು ಹೋಗಿ, ಅವರಿಗೆ ವಿದವಿದವಾದ ಆಹಾರ ಪಾನೀಯಗಳನ್ನು ನೀಡಿ ಉಪಚರಿಸಿದಳು. “ಹರ… ಮಹಾದೇವ… ಈ ಹುಡುಗಿಯ ಆದರದ ನಡೆನುಡಿಗೆ, ವಿನಯದ ಉಪಚಾರಕ್ಕೆ ಬಹಳವಾಗಿ ಮೆಚ್ಚಿದೆನು” ಎಂದು ದೂರ‍್ವಾಸ ಮುನಿಯು ತಲೆದೂಗಿದನು. “ಮಗಳೆ… ಬಾ” ಎಂದು ಕುಂತಿಯನ್ನು ಹತ್ತಿರಕ್ಕೆ ಕರೆದು “ಈ ಅಯ್ದು ಮಂತ್ರಗಳನ್ನು ತೆಗೆದುಕೊ… ಇವು ಸಿದ್ದಿ ಪಡೆಯಲು ಪ್ರಯೋಗಿಸುವಂತಹವು… ದೇವತೆಗಳಲ್ಲಿ ನಿನಗೆ ಯಾರ ಮೇಲೆ ಮೆಚ್ಚುಗೆಯುಂಟೋ… ಅವರನ್ನು ನೆನೆದರೆ ಸಾಕು… ನಿನಗೆ ಮಗನು ಹುಟ್ಟುತ್ತಾನೆ” ಎಂದು ದೂರ‍್ವಾಸ ಮುನಿಯು ರಹಸ್ಯವಾಗಿ ತಿಳಿಸಿ, ತನ್ನ ಆಶ್ರಮಕ್ಕೆ ಹೊರಟುಹೋದನು.

ಕುಂತಿಯು “ಬಾಲ್ಯದಲ್ಲಿ ಬೊಂಬೆಯ ಆಟಕ್ಕೆ ನಿಜವಾದ ಮಗುವನ್ನೇ ತರುವೆನು” ಎಂದು ಗಂಗಾ ನದಿಯ ತೀರಕ್ಕೆ ಬಂದಳು. ನದಿಯಲ್ಲಿ ಸ್ನಾನ ಮಾಡಿ, ಕೆಂಪು ಬಟ್ಟೆಯನ್ನು ಉಟ್ಟುಕೊಂಡಳು. ಮುನಿಯು ಹೇಳಿಕೊಟ್ಟಿದ್ದ ಮಂತ್ರವನ್ನು ಸ್ಮರಿಸಿಕೊಂಡು, ಪ್ರೀತಿಯಿಂದ ಸೂರ‍್ಯನನ್ನು ನೋಡಿ, ಕಣ್ಮುಚ್ಚಿ ಜಪಿಸತೊಡಗಿದಳು. ಜನಮೇಜಯ ರಾಜನೇ ಕೇಳು, “ಮುನಿ ಕೊಟ್ಟ ಮಂತ್ರಾಕ್ಶರದ ಕರೆಗೆ ತಡಮಾಡಿದರೆ… ನನ್ನ ತೇಜಸ್ಸನ್ನು ಕೊಳ್ಳದೇ ಇರುತ್ತಾನೆಯೇ… ದೂರ‍್ವಾಸನು ಉಗ್ರ ತಪಸ್ವಿಯಲ್ಲವೇ ಎಂಬ ಆತಂಕದಿಂದ ಸೂರ‍್ಯನು ಬೂಮಿಗೆ ಬಂದನು. ಸೂರ‍್ಯನ ಕಿರಣ ಸಮೂಹದ ಹೊಡೆತದಲ್ಲಿ ಕುಂತಿಯು ಬೆಚ್ಚದಳು. “ನೀವು ದಯಮಾಡಿ ಹೊರಟುಹೋಗಿ” ಎಂದು ಕುಂತಿಯು ಸೂರ‍್ಯನನ್ನು ಬೇಡಿಕೊಂಡಳು. ಆಗ ಸೂರ‍್ಯದೇವನು “ಹೀಗೆ ನಿರಾಕರಿಸಲಾಗದು… ಜ್ನಾನಿಯಾದ ರಿಸಿಯಿಂದ ಪಡೆದ ಮಂತ್ರವು ವ್ಯರ‍್ತವಾಗದು… ಅದರಿಂದ ನನ್ನ ಹಿರಿಮೆಯುಳ್ಳ ಮಗನು ಹುಟ್ಟುವನು… ನೀನು ಹೆದರಬೇಡ” ಎಂದು ಕನ್ನಿಕೆ ಕುಂತಿಯನ್ನು ಮುಟ್ಟಿ “ನಿನ್ನ ಕನ್ನೆತನ ಕೆಡದಿರಲಿ” ಎಂದು ಹೇಳುತ್ತ… ತನ್ನ ತೇರು ನಿಂತಿದ್ದ ಜಾಗಕ್ಕೆ ಬೇಗ ತಿರುಗಿದನು.

ಅರಸ, ಮುಂದಿನ ಅಚ್ಚರಿಯನ್ನು ಕೇಳು. ಸೂರ‍್ಯನನ್ನು ಎರಕದಲ್ಲಿ ಹೊಯ್ದರೋ ಎನ್ನುವಂತೆ ತಳತಳಿಸಿ ತೊಳಗುವ ಶರೀರ ಕಾಂತಿಯ… ತುಂಬುಗೂದಲಿನ ತಲೆಯ… ಹೂವಿನ ದಳದಂತೆ ವಿಶಾಲವಾದ ಕಣ್ಣುಗಳ… ಚಿಗುರಿನಂತೆ ಕೋಮಲವಾದ ಕಯ್ ಹಾಗೂ ಪಾದಗಳ ಮಗುವನ್ನು ಕಂಡು ಕುಂತಿ ಅಚ್ಚರಿಪಟ್ಟಳು. ಅಳುತ್ತಿರುವ ಮಗುವನ್ನು ತೆಗೆದು ಆಲಂಗಿಸಿ… ರೋಮಾಂಚನದ ನೀರಿನಲ್ಲಿ ನೆನೆಸಿ… ಆನಂದ, ನಾಚಿಕೆ, ಅಂಜಿಕೆಯ ತಾಕಲಾಟದಲ್ಲಿ ಬಳಲಿದ ಕುಂತಿಯು “ಕುಲದ ಸಿರಿ ಹಾಳಾಗುವುದಲ್ಲಾ… ಇನ್ನು ಮಗುವಿನಿಂದ ದೂರವಾಗಬೇಕು ಎನ್ನುತ್ತ, ಜನರ ಅಪವಾದದ ಹೆದರಿಕೆಯಿಂದ ಗಂಗಾ ನದಿಯಲ್ಲಿ ಮಗುವನ್ನು ಹಾಕಿದಳು. “ತಾಯೆ, ನಿನಗೆ ತಿಳಿದ ರೀತಿಯಲ್ಲಿ ಕಾಪಾಡು ಇಲ್ಲವೇ ಕೊಲ್ಲು ಎನ್ನುತ್ತ ಕುಂತಿಯು ಮಗನನ್ನು ಮಡುವಿನಲ್ಲಿ ಹಾಕಿದಳು.

ಜನಮೇಜಯನೇ ಕೇಳು, ಜಾಹ್ನವಿ ಲೋಕಕ್ಕೆ ತಾಯಲ್ಲವೇ!…ಅಲೆಗಳಲ್ಲಿ ನೋವಾಗದಂತೆ… ಮುಳುಗದಂತೆ… ಮಗುವನ್ನು ದಡ ಸೇರಿಸಿದಳು. ದಡ ಮುಟ್ಟಿದ ಮುದ್ದಾದ ಮಗು ಮರಳರಾಶಿಯನ್ನು ಕಾಲಲ್ಲಿ ಒದೆದು ಕೆದರಿ… ಕಯ್ಗಳಲ್ಲಿ ಕೊಡವುತ್ತ… ಸೂರ‍್ಯನನ್ನು ನೋಡುತ್ತಾ “ಬೋ” ಎಂದು ಗಟ್ಟಿಯಾಗಿ ಅಳುತ್ತಿತ್ತು. ಇದನ್ನು ಸೂತನೊಬ್ಬನು ನೋಡಿದನು. ಆನಂದದಲ್ಲಿ ತನ್ನನ್ನೇ ಮರೆತು ಹಿಗ್ಗಿದನು. “ಇದು ಎಲ್ಲಿಂದ ದೊರೆತ ಸಂಪತ್ತೋ” ಎಂದು ಮಗುವಿನ ಬಳಿಗೆ ಬಂದನು.

ಆ ಮಗುವಿನ ತೇಜಸ್ಸನ್ನು ಕಂಡು “ಸೂರ‍್ಯಬಿಂಬದ ಮರಿಯೋ… ಉತ್ತಮ ಕೌಸ್ತುಬ ಮಣಿಯ ತುಂಡೋ… ಇದು ಮಾನವ ಸಹಜ ಮಗುವಲ್ಲ… ಮಾಯಾಲೋಕದ ಬಾಲಕನೋ… ಇವನನ್ನು ಇಲ್ಲಿ ಇರಿಸಿ ಹೋದವಳು ಯಾವಳೋ… ಈ ಮಗುವಿನ ತಾಯಿ ಮಮತೆಯಿಲ್ಲದವಳಾಗಿರಬೇಕು… ಹರ… ಹರ… ಮಹಾದೇವ ” ಎನ್ನುತ್ತ ಮಗುವನ್ನು ಎತ್ತಿ ಎದೆಗಪ್ಪಿಕೊಂಡನು. ಮೂರು ಲೋಕದ ರಾಜ್ಯ ಸಿಕ್ಕಿದರೂ ಗಣಿಸುತ್ತೇನೆಯೇ… ಎಲ್ಲವೂ ಹುಲ್ಲಿಗೆ ಸಮಾನ… ಈ ಮಗುವಿಗೆ ನನ್ನಲ್ಲಿ ಏನು ರಿಣ ವಿಶೇಶವೋ ” ಎನ್ನುತ್ತ, ಆ ಗಳಿಗೆಯಲ್ಲಿ ಉಂಟಾದ ಆನಂದದಿಂದ ಕಣ್ಣೀರನ್ನು ಕರೆಯುತ್ತ ಮನೆಗೆ ಬಂದನು. “ರಮಣೀ, ಸ್ಪರ‍್ಶಮಣಿಯ ಶಿಲೆಯನ್ನು ತಂದಿದ್ದೇನೆ… ತೆಗೆದುಕೊ” ಎಂದು ಸೂತನು ತನ್ನ ಮಡದಿ ರಾದೆಗೆ ಮಗುವನ್ನು ಕೊಟ್ಟನು.

ರಾದೆಯಲ್ಲಿ ಮಗನಾದನೆಂದು ಹಬ್ಬವನ್ನು ಮಾಡಿ, ಬ್ರಾಹ್ಮಣರನ್ನು ದಾನಮಾನಾದಿಗಳಿಂದ ಉಪಚರಿಸಿದನು. ಅಲ್ಲಿಂದ ಮುಂದೆ ಅವನ ಸಿರಿಸಂಪತ್ತು ಹೆಚ್ಚತೊಡಗಿತು. ಆ ಸೂರ‍್ಯಪುತ್ರನು ‘ರಾದೇಯ’ ಎಂಬ ಹೆಸರಿನಿಂದ ಕೀರ‍್ತಿವಂತನಾದನು.

ರಾದೆಯ ಹತ್ತಿರ ಬೆಳೆಯುತ್ತಿರುವ ತೇಜಸ್ವಿಯಾದ ಮಗು… ದಿನ ಉರುಳಿದಂತೆಲ್ಲಾ ಮಗ್ಗುಲಾಗಿ ಮಗುಚಿಕೊಂಡು… ಅಂಬೆಗಾಲಿಟ್ಟು… ನಡು ಹೊಸ್ತಿಲಲ್ಲಿ ಕುಳಿತು… ಬೀದಿ ಬದಿಯಲ್ಲಿ ಸುಳಿಯುವವರನ್ನು ಸನ್ನೆ ಮಾಡಿ ಕರೆಕರೆದು ನಸುನಗುತ್ತ… ಸುಂದರವಾದ ರತ್ನದ ಒಡವೆಗಳನ್ನು ಬಿಚ್ಚಿಕೊಡುವ… ಇವನ ಹೆಸರು ಜನರ ಕಿವಿಯಿಂದ ಕಿವಿಗೆ ಹಾಯ್ದು… ಜಗತ್ತಿನ ಎಲ್ಲೆಡೆಯಲ್ಲಿಯೂ ಹಬ್ಬಿತು.

ಜನಮೇಜಯ ರಾಜನೇ ಕೇಳು, ಒಬ್ಬರಿಂದ ಮತ್ತೊಬ್ಬರಿಗೆ… ಕರ‍್ಣದಿಂದ ಕರ‍್ಣಕ್ಕೆ (ಕಿವಿಯಿಂದ ಕಿವಿಗೆ) ಇವನ ಹೆಸರು ಲೋಕದಲ್ಲಿ ವ್ಯಾಪಿಸಿ ‘ಕರ‍್ಣ’ ನೆಂಬ ಹೆಸರು ಬಂದಿತು. ಅಲ್ಲಿಂದ ಬಳಿಕ ಮೂರು ಲೋಕಗಳಾದ ದೇವಲೋಕ – ನಾಗಲೋಕ – ಮಾನವ ಲೋಕಗಳಲ್ಲಿ ಎಲ್ಲರೂ ಕರ‍್ಣನನ್ನು ಹಾಡಿ ಹೊಗಳಿದರು. ಹೀಗೆ ಆ ಮಹಾಶೂರನು ಕರ‍್ಣನೆಂಬ ಹೆಸರಿನಿಂದ ಸೂತನ ಮನೆಯಲ್ಲಿ ಬೆಳೆಯುತ್ತಿದ್ದನು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *