ಕುಮಾರವ್ಯಾಸ ಬಾರತ ಓದು: ಆದಿಪರ್ವ – ಕುಂತಿಯ ಬಯಕೆ – ನೋಟ – 7

ಕುಂತಿಯ ಬಯಕೆ
(ಆದಿ ಪರ್ವ : ನಾಲ್ಕನೆಯ ಸಂಧಿ: ಪದ್ಯ: 25 ರಿಂದ 35)
ಪಾತ್ರಗಳು:
ಕುಂತಿ: ಪಾಂಡು ರಾಜನ ಮೊದಲನೆಯ ಹೆಂಡತಿ.
ಪಾಂಡು: ಹಸ್ತಿನಾವತಿಯ ರಾಜನಾಗಿದ್ದವನು. ಮುನಿಯ ಶಾಪಕ್ಕೆ ಗುರಿಯಾಗಿ, ಮನನೊಂದು ರಾಜ್ಯವನ್ನು ತೊರೆದು ಕಾಡಿನಲ್ಲಿರುವ ಶತಶ್ರುಂಗ ಪರ್ವತ ಪ್ರಾಂತ್ಯದಲ್ಲಿ ತನ್ನ ಇಬ್ಬರು ಹೆಂಡತಿಯರಾದ ಕುಂತಿ ಮತ್ತು ಮಾದ್ರಿಯರೊಡನೆ ನೆಲೆಸಿದ್ದಾನೆ.
*** ಕುಂತಿಯ ಬಯಕೆ ***
ಪರಮ ವೈರಾಗ್ಯದಿ… ನಿರಂತಃಕರಣ ಭಾವ ಶುದ್ಧಿಯ… ನಿರುಪಮ ಮುರಹರ ಧ್ಯಾನೈಕ ಪೀಯೂಷ ಅಭಿಷೇಕದಲಿ ಹೊರೆದು ಹೊಂಗಿದ… ನಿಷ್ಪ್ರಪಂಚೋತ್ಕರದ ಸುಖದ ಧರಣಿಪತಿ ಮುನಿಪನ ಮಹಾಪಾತಕವ ಕೆಡೆ ಒದೆದು ಉನ್ನತಿಯಲಿದ್ದನು… ನಾರಿಯರು ಮರುಗಿದರು.
ಕುಂತಿ: ಅಕಟ… ಮುದಿ ಹಾರುವನ ತನಿಬೇಂಟ ನಮ್ಮಯ ಬೇರುಗೊಲೆ ಆಗಿರ್ದುದೇ… ಹಾ…
(ಎನುತ ಬಿಸುಸುಯ್ದು… ವಾರಿಜಾನನೆ ಕುಂತಿ ಆರು ಅರಿಯದವೋಲ್ ರಹಸ್ಯದಲಿ
ಮೆಲ್ಲನೆ ಸಾರಿದಳು… ನಯದಲಿ ಪತಿಗೆ ಬಿನ್ನಹ ಮಾಡಿದಳು)
ಕುಂತಿ: ನಿಮ್ಮಡಿಗಳು ಅರಿಯೆ… ಗಾಂಧಾರಿ ದೇವಿಗೆ ವರ ಮುನೀಶ್ವರನು ಇತ್ತ ವರವದು… ಭರತ
ವಂಶಕೆ ಪುತ್ರಶತ ಅವತರಿಸುವುದು… ಅರಸ, ಇನ್ನು ನಮಗೆ ದುರುಳ ಮುನಿಪನ ಶಾಪವೇ
ಸ್ತ್ರೀಪುರುಷ ಸಂಗ ವಿರೋಧ… “ನಾಪುತ್ರಸ್ಯಗತಿ”ಎಂದಿರದೆ ಶ್ರುತಿ ವಚನ… ಧರೆಯ
ರಾಜ್ಯಸ್ಥಿತಿಗೆ ಗಾಂಧಾರಿಗೆ ಸುತರು ಅವತರಿಸುವರು… ಆ ಪುತ್ರರಿಗೆ ಸುತರು… ಆ ಸುತರ
ಸುತರು… ಆ ಸುತರ ಸೂನುಗಳು… ಧರೆ ಪರಂಪರೆಯಿಂದಲಿ ಅತ್ತಲೆ ಸರಿವುದು… ಕಡೆಗೆ ಈ
ನಿಮ್ಮಡಿಗೆ ದರ್ಭಾಸ್ತರಣ ಸಮಿಧಾಧಾನವೇ.
(ಎಂದಳು ಆ ಕುಂತಿ.)
ಪಾಂಡುರಾಜ: ವಜನಮುಖಿ ಕೇಳ್, ಪುಣ್ಯಹೀನರಿಗೆ ಪುತ್ರಮುಖ ದರ್ಶನವು ಸುಲಭವೆ… ಎನಿತು
ಹಲುಬಿದರೇನು… ಮುನಿಯ ಬೇಟದ ಬೇಳುವೆಯ ದುಷ್ಕೃತಿಗೆ ಆವು ಹಂಗಿಗರು…
ಮಾತಿನ ಹವಣ ನೀ ಬಲ್ಲೆ… ಇನ್ನು ಎನಗೆ ಕರ್ತವ್ಯವನು ಹೇಳು… ಮಾನಿನಿ, ಭೀತಿ
ಬೇಡ.
ಕುಂತಿ: ನಾರಿಯರು… ಮತ್ತಲ್ಲಿ ರಾಜ ಕುಮಾರಿಯರು ಛಲವಾದಿಗಳು… ಗಾಂಧಾರಿಗೆ ಆದುದು ಪುತ್ರ
ಸಂತತಿಯೆಂಬ ಭೇದದಲಿ ಬಿನ್ನವಿಸಿದೆನು… ಧೀರ, ಕಾರ್ಯದ ಭಾರವನು ನೀ ಬಲ್ಲೆ… ಇವಳು
ವಿಕಾರಿ ಎನ್ನದಿರು.
(ಎಂದು ರಾಯನ ಚರಣಕೆ ಎರಗಿದಳು.)
ಪಾಂಡುರಾಜ: ಲೋಲಲೋಚನೆ… ದೃಢ ಪತಿವ್ರತೆ, ಏಳು ದುಃಖಿಸಬೇಡ… ಭೃಗು, ಜಾಬಾಲಿ, ಜಮದಗ್ನಿ
ಆದಿ ದಿವ್ಯ ಮುನೀಂದ್ರ ಗಣವಿದೆಲ… ಓಲಗಿಸುವುದು… ದುಷ್ಕೃತಿಗೆ ನಿಷ್ಪಾಳೆಯವು
ಬಳಿಕ ಅಹುದು… ಕಾಂತೆ ಕೇಳು, ಮಂತ್ರ ವಿಶಾಲ ಬೀಜದಿ ಸಂತತಿ ಅಹುದು.
ಕುಂತಿ: ಭವದನುಗ್ರಹದಿಂದ ಸುತರು ಉದ್ಭವಿಸಿದರೆ ಲೇಸು… ಅನ್ಯಥಾ ಸಂಭವಿಸಿದರೆ, ದುಷ್ಕೀರ್ತಿ
ವಧುವು ಕುಲವ ಎಂಜಳಿಸಲೇ… ಅವನಿಪತಿ ಕೇಳ್, ನಹುಷ, ನಳ, ಪೌರವ, ಸುಹೋತ್ರ
ಆದ್ಯರ ನಿಜಾತ್ಮ ಉದ್ಭವರ ಪಾರಂಪರೆಗೆ ಗತಿಯೇನು.
ಪಾಂಡುರಾಜ: ಅರಸಿ ಕೇಳ್, ತತ್ ಬೀಜ ಪಾರಂಪರೆ ಮುರಿಯೆ… ತತ್ ಕ್ಷೇತ್ರದಲಿ ಮುನಿವರರ
ಕಾರುಣ್ಯದಲಿ ಪುತ್ರೋದ್ಭವವು… ಅದೇ ವಿಹಿತ. ಪರಮ ವೈದಿಕ ಸಿದ್ಧವಿದು…
ಸರಸಿರುಹಮುಖಿ, ನಿಶ್ಯಂಕೆಯಲಿ ನೀ ಮುನಿ ಮಂತ್ರೋಪದೇಶವನು ಧರಿಸು…
ಇದುವೆ ನಿರ್ದೋಷ.
ಕುಂತಿ: ಆದಡೆ ಅವನಿಪ ಬಿನ್ನಹವು… ತನಗೆ ಆದಿಯಲಿ ದೂರ್ವಾಸಮುನಿ ಕರುಣೋದಯಲಿ ಇತ್ತ
ಐದು ಮಂತ್ರಾಕ್ಷರದ ವರವುಂಟು… ನೀ ದಯಾಂಬುಧಿ, ನಿನ್ನ ಅನುಗ್ರಹವು ಆದುದಾದರೆ,
ತತ್ ವಿಧಾನದಲಿ ಪುತ್ರ ಕಾಮ್ಯವನು ಆದರಿಸುವೆನು.
ಪಾಂಡುರಾಜ: ಲೇಸನಾಡಿದೆ ಕುಂತಿ. ಮುನಿಯು ಉಪದೇಶಿಸಿದನೇ… ನಮ್ಮ ಭಾಗ್ಯವು ಇದೈಸಲೇ…
ನೀ ದೃಢಪತಿವ್ರತೆ… ಎನ್ನ ಅನುಜ್ಞೆಯಲಿ ನೀ ಭಾಸುರರ… ಭರತವಂಶ ವಿಲಾಸರನು…
ಕೃತ ಶತ್ರುಪಕ್ಷವಿನಾಶರನು ಬೆಸಲಾಗು. ಹೊಗು… ಎನ್ನಾಣೆ ಹೋಗು.
(ಎಂದ.)
ಪದ ವಿಂಗಡಣೆ ಮತ್ತು ತಿರುಳು
ನಿರಂತಃಕರಣ ಭಾವ ಶುದ್ಧಿಯ=ಕರುಣೆ ಮತ್ತು ಪರಿಶುದ್ದ ಮನದಿಂದ ಕೂಡಿ;ನಿರುಪಮ=ಹೋಲಿಕೆಯಿಲ್ಲದ; ಮುರಹರ=ಕ್ರಿಶ್ಣ; ಧ್ಯಾನ+ಏಕ; ಧ್ಯಾನೈಕ=ದ್ಯಾನವೊಂದರಲ್ಲಿಯೇ ಮಗ್ನನಾಗಿ; ಪೀಯೂಷ=ಅಮ್ರುತ; ಹೊರೆ=ಕೂಡಿ/ಸೇರು; ಹೊಂಗು=ಹರಡು/ಅರಳು; ನಿಷ್ಪ್ರಪಂಚ+ಉತ್ಕರ; ನಿಷ್ಪ್ರಪಂಚ=ಲೋಕದ ಆಸೆಗಳಿಲ್ಲದಿರುವುದು/ಮಯ್ ಮನದ ಬಯಕೆಗಳನ್ನು ನಿಯಂತ್ರಿಸಿಕೊಳ್ಳುವುದು; ಉತ್ಕರ=ರಾಶಿ; ಅಕಟ=ಅಯ್ಯೋ; ಹಾರುವ=ಬ್ರಾಹ್ಮಣ;
ತನಿ=ಒಂಟಿಯಾಗಿರು/ಏಕಾಂತ; ಬೇಂಟ=ಪ್ರಣಯ; ಬೇರು+ ಕೊಲೆ=ಬೇರುಗೊಲೆ=ಬುಡಸಮೇತ ಹಾಳಾಗುವುದು; ವಾರಿಜ+ಆನನೆ; ವಾರಿಜ=ತಾವರೆಯ ಹೂವು; ಆನನ=ಮೊಗ; ನಿಮ್ಮ+ಅಡಿಗಳು; ಅಡಿ=ಪಾದ; ನಿಮ್ಮಡಿಗಳು ಅರಿಯೆ=ಬಹಳ ವಿನಯದಿಂದ ಮಾತನಾಡುವಾಗ, ಈ ಬಗೆಯ ನುಡಿಗಟ್ಟನ್ನು ಬಳಸುತ್ತಾರೆ;
ಶ್ರುತಿ=ವೇದಕಾಲೀನ ಜನಸಮುದಾಯದ ಆಚರಣೆಗಳನ್ನು ಹೇಳುವ ಪುಸ್ತಕ; ವಚನ=ನುಡಿ; “ನಾಪುತ್ರಸ್ಯಗತಿ”ಎಂದಿರದೆ ಶ್ರುತಿವಚನ=“ಗಂಡು ಮಗನಿಲ್ಲದವರಿಗೆ ಮೋಕ್ಶ ದೊರಕುವುದಿಲ್ಲ” ಎಂದು ಶ್ರುತಿವಚನದಲ್ಲಿ ಹೇಳಿಲ್ಲವೇ; ಧರೆ=ಬೂಮಂಡಲ; ರಾಜ್ಯಸ್ಥಿತಿ=ರಾಜ್ಯವನ್ನು ಆಳುವುದು;
ಸೂನು=ಮಗ;
ಪರಂಪರೆ=ತಲೆಮಾರಿನಿಂದ ತಲೆಮಾರಿಗೆ ನಿರಂತರವಾಗಿ ಹಾದು ಬರುವುದು; ನಿಮ್ಮಡಿಗೆ=ನಿಮ್ಮ ಪಾಲಿಗೆ; ದರ್ಭಾ+ಆಸ್ತರಣ; ದರ್ಭಾ=ಯಾಗದ ಕುಂಡದಲ್ಲಿ ಹೋಮ ಮಾಡುವುದಕ್ಕಾಗಿ ಹಾಕುವ ಸೂಜಿಯಂತೆ ಮೊನಚಾದ ಒಂದು ಬಗೆಯ ಹುಲ್ಲು; ಆಸ್ತರಣ=ಹರಡುವುದು; ದರ್ಭಾಸ್ತರಣ=ಯಾಗ ಕುಂಡದಲ್ಲಿ ದರ್ಬೆಯನ್ನು ಹಾಕುವುದು; ಸಮಿಧ+ಆಧಾನ; ಸಮಿಧ=ಹೋಮ ಮಾಡುವುದಕ್ಕಾಗಿ ಬಳಸುವ ಅತ್ತಿಮರ—ಅರಳಿ ಮರದ ಸಣ್ಣ ಸಣ್ಣ ಕಡ್ಡಿಗಳು; ಆಧಾನ=ಇಡುವುದು;
ವನಜ=ತಾವರೆಯ ಹೂವು; ವನಜಮುಖಿ=ತಾವರೆ ಮೊಗದ ಸುಂದರಿ; ಬೇಟ=ಪ್ರಣಯ; ಬೇಳುವೆ=ಎಚ್ಚರವಿಲ್ಲದಿರುವಿಕೆ; ದುಷ್ಕೃತಿ=ಕೆಟ್ಟ ಕೆಲಸ; ಆವು=ನಾವು; ಹಂಗಿಗರು=ಬಲಿಯಾದೆವು; ಹವಣು=ಕ್ರಮ/ರೀತಿ; ಮಾನಿನಿ=ಹೆಂಡತಿ; ಛಲವಾದಿಗಳು=ಮನೋ ನಿಶ್ಚಯವುಳ್ಳವರು/ ಹಟಗಾರರು/ಯಾವುದೇ ಕೆಲಸವನ್ನು ಪಟ್ಟುಹಿಡಿದು ಮಾಡುವವರು; ಭೇದ=ವ್ಯತ್ಯಾಸ/ಅಂತರ; ವಿಕಾರಿ=ಕೆಟ್ಟ ಮನಸ್ಸಿನವಳು; ಲೋಲ=ಚಂಚಲವಾದ/ಅತ್ತಿತ್ತ ಚಲಿಸುವ; ಲೋಚನ=ಕಣ್ಣು; ಲೋಲಲೋಚನೆ=ಸುಂದರವಾದ ಕಣ್ಣುಳ್ಳ ಚೆಲುವೆ;
ಆದಿ=ಮೊದಲಾದ; ಗಣ=ಸಮೂಹ/ಗುಂಪು; ಓಲಗಿಸು=ಸೇವೆ ಮಾಡು;
ನಿಷ್ಪಾಳೆಯ=ಎಡೆಯಿಲ್ಲದಿರುವುದು/ನೆಲೆಯಿಲ್ಲದಿರುವುದು; ಭವತ್+ಅನುಗ್ರಹದಿಂದ; ಭವತ್=ನಿನ್ನ; ಅನುಗ್ರಹ=ದಯೆ; ವಧು=ಹೆಣ್ಣು; ದುಷ್ಕೀರ್ತಿ ವಧು=ಇದೊಂದು ನುಡಿಗಟ್ಟು. ಕುಲಕ್ಕೆ ಕಳಂಕ ತರುವ ಹೆಣ್ಣು ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ; ಎಂಜಲು=1.ಇತರರು ತಿಂದ ಬಿಟ್ಟ ಉಣಿಸು ತಿನಿಸು. 2. “ಇತರರ ನಂಟಿನಿಂದ ಹಾಳಾದುದು” ಎಂಬ ರೂಪಕದ ತಿರುಳಿದೆ; ಅವನಿ=ಬೂಮಿ; ಅವನಿಪತಿ=ರಾಜ; ನಿಜ+ಆತ್ಮ+ಉದ್ಭವರು=ತನ್ನಿಂದಲೇ ಹುಟ್ಟಿದ ಮಕ್ಕಳು; ಪರಂಪರೆ=ಹಿಂದಿನಿಂದ ನಡೆದು ಬಂದ ಸಂಪ್ರದಾಯದ ಆಚರಣೆ;
ಮಹಾಬಾರತದ ಪ್ರಸಂಗಗಳು ನಡೆದ ಕಾಲದಲ್ಲಿನ ಸಮಾಜದಲ್ಲಿ ‘ನಿಯೋಗ ‘ ಎಂಬ ಒಂದು ಪದ್ದತಿಯು ಆಚರಣೆಯಲ್ಲಿತ್ತು. ಗಂಡ ಸತ್ತ ಹೆಂಗಸು ಇಲ್ಲವೇ ಮಕ್ಕಳಿಲ್ಲದ ಹೆಂಗಸು ಗುರು ಹಿರಿಯರ ಅನುಮತಿಯೊಡನೆ ಮತ್ತೊಬ್ಬ ಗಂಡಸಿನ ಜತೆಯಲ್ಲಿ ದೇಹದ ನಂಟನ್ನು ಪಡೆದು ಮಗುವನ್ನು ಪಡೆಯಬಹುದಾಗಿತ್ತು. ಆ ರೀತಿ ಹುಟ್ಟಿದ ಮಗುವನ್ನು ಆ ಕುಲದ ಇಲ್ಲವೇ ಮನೆತನದ ಮಗುವೆಂದೇ ಪರಿಗಣಿಸಲಾಗುತ್ತಿತ್ತು;
ಸರಸಿರುಹ=ಸರೋವರದಲ್ಲಿ ಹುಟ್ಟಿದುದು/ತಾವರೆ ಹೂವು; ಸರಸಿರುಹಮುಖಿ=ತಾವರೆ ಮೊಗದವಳು/ಕುಂತಿ; ಆದಿಯಲಿ=ಈ ಮೊದಲು; ದಯಾ+ಅಂಬುಧಿ; ಅಂಬುಧಿ=ಸಾಗರ/ಕಡಲು; ಕಾಮ್ಯ=ಬಯಕೆ; ಆದರಿಸು=ಸ್ವೀಕರಿಸು; ಪುತ್ರಕಾಮ್ಯ=ಗಂಡು ಮಗುವನ್ನು ಹೆರಬೇಕೆಂಬ ಆಸೆ; ಅನುಜ್ಞೆ=ಒಪ್ಪಿಗೆ; ಭಾಸುರ=ಶೂರ/ಕಲಿ; ವಿಲಾಸರು= ಸೊಗಸುಗಾರರು; ಕೃತ=ಮಾಡಿದ; ಬೆಸಲು=ಹಡೆಯುವಿಕೆ; ಬೆಸಲಾಗು=ಹೆರು;
ಹೊಸಗನ್ನಡ ಗದ್ಯರೂಪ
ಮುನಿದಂಪತಿಯ ಸಾವಿನಿಂದ ಉಂಟಾದ ಪಾಪವನ್ನು ಹೋಗಲಾಡಿಸಿಕೊಳ್ಳಲೆಂದು ಪಾಂಡು ವಿರಕ್ತಿಯನ್ನು ತಳೆದು, ಒಳ್ಳೆಯ ಮನಸ್ಸಿನಿಂದ ಮುರಹರನ ಸ್ಮರಣೆಯ ಅಮ್ರುತದ ಸ್ನಾನವನ್ನು ಮಾಡುತ್ತ ಆಶ್ರಮದಲ್ಲಿ ಲೋಕದ ಆಸೆಗಳಿಂದ ದೂರವಾಗಿ ನೆಮ್ಮದಿಯಿಂದಿದ್ದನು.
“ಅಯ್ಯೋ… ಆ ಮುದಿ ಹಾರುವನ ಏಕಾಂತದ ಪ್ರಣಯಕ್ರೀಡೆಯು ನಮ್ಮ ಕುಟುಂಬ ಮಕ್ಕಳಿಲ್ಲದೆ ಬುಡಸಮೇತ ನಾಶವಾಗುವುದಕ್ಕೆ ಕಾರಣವಾಗಿದೆಯಲ್ಲ… ಹಾ”ಎಂದು ಕುಂತಿಯು ನಿಟ್ಟುಸಿರನ್ನು ಬಿಡುತ್ತಾ, ಒಂದು ದಿನ ಪಾಂಡುವಿನೊಡನೆ ತನ್ನ ಮನದ ಸಂಕಟವನ್ನು ತೋಡಿಕೊಳ್ಳಲು ಅವನ ಬಳಿಗೆ ಬರುತ್ತಾಳೆ. ಬೇರೆ ಯಾರು ತಿಳಿಯದಂತೆ ಗುಟ್ಟಾಗಿ ಬಹಳ ಮೆದುನುಡಿಗಳಿಂದ ಗಂಡನಿಗೆ ತನ್ನ ಮನದ ಸಂಕಟವನ್ನು ಅರಿಕೆಮಾಡಿಕೊಳ್ಳತೊಡಗುತ್ತಾಳೆ.
“ನಿಮಗೆ ತಿಳಿದಿರುವಂತೆ ಬರತ ವಂಶದಲ್ಲಿ ಗಾಂದಾರಿ ದೇವಿಗೆ ವ್ಯಾಸರು ಕೊಟ್ಟ ವರದಿಂದ, ಆಕೆಗೆ ನೂರು ಗಂಡು ಮಕ್ಕಳು ಹುಟ್ಟುತ್ತಾರೆ… ಮುನಿಯ ಶಾಪದಿಂದ ನಾವು ಕಾಮದ ನಂಟನ್ನು ಹೊಂದುವ ಹಾಗಿಲ್ಲ… .‘ ಗಂಡು ಮಗನಿಲ್ಲದವರಿಗೆ ಮೋಕ್ಶ ದೊರಕುವುದಿಲ್ಲ ’ ಎಂದು ಶ್ರುತಿವಚನದಲ್ಲಿ ಹೇಳಿಲ್ಲವೇ… ರಾಜ್ಯವನ್ನು ಆಳುವುದಕ್ಕೆ ಗಾಂದಾರಿಗೆ ಗಂಡು ಮಕ್ಕಳು ಹುಟ್ಟುವರು… ಆ ಗಂಡು ಮಕ್ಕಳಿಗೆ… ಗಂಡು ಮಕ್ಕಳು… ಆ ಗಂಡು ಮಕ್ಕಳ… ಗಂಡು ಮಕ್ಕಳು… ಹೀಗೆ ವಂಶ ಪರಂಪರೆಯಿಂದ ಬೂಮಿ ಅವರ ಗಂಡು ಸಂತಾನಕ್ಕೆ ಸೇರುತ್ತದೆ. ಕಡೆಗೆ ನಿಮಗೆ ದರ್ಬೆಯ ಹಾಸು, ಹೋಮಕ್ಕೆ ಸಮಿತ್ತನ್ನು ಕಲೆಹಾಕುವುದೇ ಉಳಿಯುವುದು”ಎಂದು ಹೇಳಿದಳು. ಕುಂತಿಯ ನುಡಿಗಳಿಗೆ ಪಾಂಡುರಾಜನು ಶಾಂತಚಿತ್ತದಿಂದಲೇ ಪ್ರತಿಕ್ರಿಯಿಸುತ್ತಾನೆ.
“ಕುಂತಿ… ಕೇಳು, ಪುಣ್ಯಹೀನರಿಗೆ ಗಂಡು ಮಗುವಿನ ಮೊಗವನ್ನು ನೋಡುವುದು ಸುಲಬವಲ್ಲ. ಎಶ್ಟು ಹಲುಬಿದರೆ ತಾನೆ ಏನು ಪ್ರಯೋಜನ ? ಮುನಿ ದಂಪತಿಯನ್ನು ಕೊಂದ ಪಾಪದ ಹಂಗಿಗೆ ಒಳಗಾಗಿದ್ದೇವೆ. ಮುನಿಯು ಕೋಪದಿಂದಾಡಿದ ಶಾಪದ ಮಾತಿನ ರೀತಿಯನ್ನು ನೀನು ಬಲ್ಲೆ. ಈಗ ನಾನೇನು ಮಾಡಲಿ ಹೇಳು. ಹಿಂಜರಿಯಬೇಡ.” ಎಂದು ನುಡಿದನು.
“ನಾರಿಯರು… ಅದರಲ್ಲಿಯೂ ರಾಜಕುಮಾರಿಯರು ಹಟವಾದಿಗಳು. ಗಾಂದಾರಿಗೆ ಪುತ್ರ ಸಂತಾನವಾಗುವುದು ಎಂಬ ಕಾರಣದಿಂದ ನಾನು ನಿನ್ನಲ್ಲಿ ಈ ಸಂಗತಿಯನ್ನು ಹೇಳಿಕೊಂಡೆನು. ಅವಳಿಗೆ ಮಕ್ಕಳಾಗಿ… ನಮಗೆ ಮಕ್ಕಳಾಗದಿರುವುದರಿಂದ… ನಮ್ಮ ಕುಟುಂಬದ ಕುಡಿಗಳಿಗೆ ರಾಜ್ಯದ ಪಟ್ಟ ಕಯ್ ತಪ್ಪಿಹೋಗುವ ವ್ಯತ್ಯಾಸವನ್ನು ಗಮನಿಸಿ ನುಡಿದೆನು… ಮುಂದಿನ ಕೆಲಸವನ್ನು ನೀನೇ ಬಲ್ಲೆ… .ನನ್ನನ್ನು ಕೆಟ್ಟ ಮನಸ್ಸಿನವಳು ಎಂದುಕೊಳ್ಳಬೇಡ” ಎಂದು ಕುಂತಿ ಪಾಂಡುವಿನ ಪಾದಗಳಿಗೆ ನಮಸ್ಕರಿಸಿದಳು.
“ಕುಂತಿ… ಏಳು… ಏಳು… ಸಂಕಟದಿಂದ ಪರಿತಪಿಸಬೇಡ… ಬೃಗು-ಜಾಬಾಲಿ-ಜಮದಗ್ನಿ ಮೊದಲಾದ ಮುನಿಗಳಿದ್ದಾರಲ್ಲ… ಅವರಲ್ಲಿ ಯಾರನ್ನಾದರೂ ಓಲಯಿಸಿದರೆ… ನಮ್ಮ ಪಾತಕ ನಿವಾರಣೆಯಾಗುತ್ತದೆ… ಮುನಿಗಳು ಹೇಳಿಕೊಡುವ ಮಂತ್ರದ ಉಚ್ಚಾರಣೆಯಿಂದಾಗಿ… ಮಕ್ಕಳನ್ನು ಪಡೆಯಬಹುದು” ಎಂದು ಪಾಂಡುರಾಜನು ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಾನೆ;
ಅದಕ್ಕೆ ಕುಂತಿ ”ನಿನ್ನೊಡನೆ ಪಡೆಯುವ ದೇಹದ ನಂಟಿನಿಂದ ಗಂಡು ಮಕ್ಕಳು ಹುಟ್ಟಿದರೆ ಒಳ್ಳೆಯದು. ಇತರ ಗಂಡಸರೊಡನೆ ದೇಹದ ನಂಟನ್ನು ಪಡೆದು ಮಕ್ಕಳನ್ನು ಹಡೆದರೆ, ಅದರಿಂದ ಕುಲಕ್ಕೆ ಕೆಟ್ಟ ಹೆಸರಿನ ಕಳಂಕ ತಟ್ಟುವುದಿಲ್ಲವೇ; ಮಹಾರಾಜ ಕೇಳು… ನಹುಶ-ನಳ-ಪೌರವ-ಸುಹೋತ್ರ ಮೊದಲಾದರ ವಂಶ ಪರಂಪರೆಯ ಹೆಸರು ಕೆಡುತ್ತದೆ.” ಎಂದು ಹೇಳಿದಳು.
ಆಗ ಪಾಂಡು ಕುಂತಿಯನ್ನು ಕುರಿತು ”ಈ ಹಿಂದೆ ಯಾವಾಗಲಾದರೂ ಚಂದ್ರವಂಶದ ರಾಜರಲ್ಲಿ ಗಂಡು ಮಕ್ಕಳು ಹುಟ್ಟದಿದ್ದಾಗ , ಆ ರಾಜನ ನೆಲೆಯಲ್ಲಿ ರಾಣಿಯರು ಉತ್ತಮರಾದ ಮುನಿಗಳೊಡನೆ ದೇಹದ ನಂಟನ್ನು ಪಡೆದು, ಮುನಿಗಳ ಕರುಣೆಯಿಂದ ಪುತ್ರರನ್ನು ಹೆರುತ್ತಿದ್ದರು; ಅದೇ ಸೂಕ್ತವಾದುದು. ಪರಮ ವೇದಗಳ ಕಾಲದಿಂದಲೂ ಈ ಆಚರಣೆಯು ನಡೆದುಕೊಂಡು ಬಂದಿದೆ. ಆದ್ದರಿಂದ ಯಾವುದೇ ಹಿಂಜರಿಕೆಯಿಲ್ಲದೆ ಇಲ್ಲವೇ ಆತಂಕವಿಲ್ಲದೆ ಮುನಿಗಳಿಂದ ಮಂತ್ರೋಪದೇಶವನ್ನು ಸ್ವೀಕರಿಸು. ಇದರಲ್ಲಿ ಯಾವ ತಪ್ಪು ಇಲ್ಲ.” ಎಂದು ಪಾಂಡು ಸಂತಯಿಸಿದನು.
“ಹಾಗಾದರೆ… ಮಹಾರಾಜ, ನನ್ನದೊಂದು ಬಿನ್ನಹ. ಹಿಂದೆ ಬಾಲ್ಯದಲ್ಲಿ ನನಗೆ ದೂರ್ವಾಸ ಮುನಿಯು ಕರುಣೆಯಿಂದ ನೀಡಿರುವ ಅಯ್ದು ಮಂತ್ರಾಕ್ಶರಗಳ ವರವುಂಟು. ನೀನು ದಯಾಸಾಗರ. ನಿನ್ನ ಒಪ್ಪಿಗೆ ಇರುವುದಾದರೆ, ಆ ಮಂತ್ರಗಳ ಬಲದಿಂದ ಪುತ್ರರನ್ನು ಪಡೆಯುವ ಆಚರಣೆಯಲ್ಲಿ ತೊಡಗುತ್ತೇನೆ” ಎಂದು ಕುಂತಿ ಹೇಳಿದಳು.
“ಕುಂತಿ, ಒಳ್ಳೆಯದನ್ನು ಹೇಳಿದೆ. ಮುನಿ ಉಪದೇಶಿಸಿದನೆ !… ಇದು ನಮ್ಮ ಬಾಗ್ಯವಲ್ಲವೇ… ನೀನು ಮಹಾ ಪತಿವ್ರತೆ… ನನ್ನ ಸಮ್ಮತಿಯಿಂದ… ಕಡುಗಲಿಗಳೂ… ಬರತವಂಶ ವಿಲಾಸರೂ.. ಹಗೆಗಳನ್ನು ನಾಶಪಡಿಸುವವರೂ ಆದ ಗಂಡು ಮಕ್ಕಳನ್ನು ಹೆರು… ಹೋಗು… ಇದಕ್ಕೆ ನನ್ನ ಒಪ್ಪಿಗೆ ಇದೆ” ಎಂದು ಪಾಂಡು ಹೇಳಿದನು.

ಇತ್ತೀಚಿನ ಅನಿಸಿಕೆಗಳು