ಅಂತರಜಾಲ ನನ್ನ ಮೇಲೆ ಬೀರಿದ ಪ್ರಬಾವ!

–  ಪ್ರಕಾಶ್ ಮಲೆಬೆಟ್ಟು.

ಇಂದಿನ ಯುಗದಲ್ಲಿ ಅಂತರಜಾಲ(ಇಂಟರ‍್ನೆಟ್) ನಮ್ಮ ಜೀವನದ ಅವಿಬಾಜ್ಯ ಬಾಗವಾಗಿದೆ. ಬೆಳಿಗ್ಗೆ ಎದ್ದು ರಾತ್ರಿ ಮಲಗುವವರೆಗೆ ಅಂತರಜಾಲ ನಮ್ಮ ಬದುಕನ್ನು ನೇರವಾಗಿ ಅತವಾ ಪರೋಕ್ಶವಾಗಿ ಪ್ರಬಾವಿಸುತ್ತಿದೆ. ನನ್ನ ಜೀವನದಲ್ಲೂ ಅಂತರ್‍ಜಾಲವು ದೊಡ್ಡ ಬದಲಾವಣೆ ತಂದಿದೆ. ಬಾರತದಲ್ಲಿ ಇಂಟರ‍್ನೆಟ್ ಸೇವೆ ಆರಂಬವಾಗಿದ್ದು 1995 ರಲ್ಲಿ. ಇಂಟರ‍್ನೆಟ್ ಮಂಗಳೂರಿಗೆ ಕಾಲಿಟ್ಟದ್ದು 1996 -1997 ರಲ್ಲಿ. ಆಗ ನಾನು ಅಂದುಕೊಂಡಿರಲಿಲ್ಲ, ಈ ಇಂಟರ‍್ನೆಟ್ ಯುಗ ಜಗತ್ತನ್ನೇ ಬದಲಾಯಿಸಲು ಹೊರಟಿದೆಯೆಂದು!. ಮಂಗಳೂರಿನ ಮೊರ‍್ಗನ್ಸ್ ಗೇಟ್ ನಲ್ಲಿ ಒಬ್ಬ ಉದ್ಯಮಿ ಇಂಟರ‍್ನೆಟ್ ಸೇವಾಕೇಂದ್ರವನ್ನು ಆ ಸಮಯದಲ್ಲಿ ಆರಂಬಿಸಿದರು. ನಾನು ಮತ್ತು ನನ್ನ ಸ್ನೇಹಿತ ಆ ಸೇವಾಕೇಂದ್ರಕ್ಕೆ ಆಗಾಗ ಬೇಟಿಕೊಡುತಿದ್ವಿ. ಆಗ ಚಾಲ್ತಿಯಲ್ಲಿದ್ದ ಡೊಮೈನ್ ಹೆಸರು USA.COM ಅಂತ. [email protected] ಅಂತ ಇರಬೇಕು ನನ್ನ ಮೊದಲ ಇಮೇಲ್ ID. ಮೊದಲಿಗೆ ನಾವು ಸ್ನೇಹಿತರೆ ಪರಸ್ಪರ ಇಮೇಲ್ ಕಳುಹಿಸಿಕೊಂಡು, ನಿನಗೆ ನನ್ನ ಈ ಮೇಲ್ ಸಿಗ್ತಾ ಅಂತ ಕೇಳಿಕೊಂಡು, ಕುತೂಹಲದಿಂದ ಪರಸ್ಪರ ಇನ್ಬಾಕ್ಸ್ ನೋಡಿ ಇಮೇಲ್ ಓದುತಿದ್ವಿ. ದಿನಗಳೆದಂತೆ ಅಂತರ‍್ಜಾಲದಲ್ಲಿ ಹೊಸ ಹೊಸ ಸಾದ್ಯತೆಗಳು ಹುಟ್ಟಿಕೊಳ್ಳುತ್ತ ಹೋದವು. 2001 ರಲ್ಲಿ ನನ್ನ ಚಿಕ್ಕಪ್ಪನ ಸ್ನೇಹಿತ ಪ್ರಾನ್ಸ್ ದೇಶದಿಂದ ಬಾರತಕ್ಕೆ ಬಂದಿದ್ರು. ಅವರ ಜೊತೆ ನಾವು ದಕ್ಶಿಣ ಬಾರತ ಪ್ರವಾಸಕ್ಕೆ ಹೋಗಿದ್ವಿ. ಅವರು ಆಗ ತುಂಬಾ ಪೋಟೋ ತೆಗಿದಿದ್ದರು. ಮರಳಿ ಹೋಗುವಾಗ ಅವರು ನನ್ನ ಬಳಿ ಕೇಳಿದ್ರು ನೀನು ಇಮೇಲ್ ಬಳಕೆ ಮಾಡುತ್ತೀಯ? ಹೌದು ಅಂದಿದ್ದೆ. ನಾವು ಊರಿಗೆ ಹೋಗಿ ತಲುಪಿದ ನಂತರ ನಿನಗೆ ಪೋಟೋ ಕಳುಹಿಸುತ್ತೇನೆ ಅಂತ ಹೇಳಿ ಹೋದ್ರು. ಆಮೇಲೆ ಅವರು ಒಂದು ಲಿಂಕ್ ಕಳುಹಿಸಿದರು . ನೋಡಿದರೆ ಅಲ್ಲಿ ಅವರು ತೆಗೆದ ಪೋಟೋಗಳಿದ್ದವು. ಈಗ ಇದೆಲ್ಲ ಚಿಕ್ಕ ವಿಚಾರ. ಕೇಳಿದವರು ನಗಬಹುದು. ಅದರ ಆಗ ಇವೆಲ್ಲ ನಮಗೆ ಹೊಸ ವಿಚಾರಗಳು. ಆಗ ನನ್ನ ಬದುಕು ಕೂಡ ಹೊಸ ತಿರುವು ಪಡೆಯಿತು. ಹೊಟ್ಟೆ ಪಾಡಿಗಾಗಿ ದುಬೈಗೆ ಪ್ರಯಾಣ. ನನ್ನ ಮೊದಲ ವೀಸಾ ಬಂದದ್ದು ಇಮೇಲ್ ಮೂಲಕ ಅಲ್ಲ ಬದಲಿಗೆ ಪ್ಯಾಕ್ಸ್ ಮೂಲಕ. ನಿಜ ಆಗ ಅದಿಕ್ರುತವಾಗಿ ದಾಕಲೆಗಳನ್ನು ಕಳುಹಿಸಲು ಉಪಯೋಗಿಸುತಿದ್ದದ್ದು ಪ್ಯಾಕ್ಸ್! ಇಮೇಲ್ ಕೇವಲ ಸಂವಹನವಾಗಿ ಬಳಸುತಿದ್ದರು. ನಾನು ಕೆಲಸ ಹುಡುಕುತ್ತಿದ್ದೆ. ಅಕ್ಟೋಬರ್ 2001 . ದುಬೈ ಚರ‍್ಚಿನ ಆವರಣದಲ್ಲಿ ಶ್ರೀಯುತ ವಾಲ್ತರ್ ರವರ ಬೇಟಿಯಾಯಿತು. ಅವರು ಯಾವುದೋ ಕಂಪನಿಯಲ್ಲಿ ಕೆಲಸಮಾಡುತಿದ್ರು ಅನಿಸುತ್ತೆ ಆಗ. ನನ್ನ ಅಂಕಲ್ ನ ಸ್ನೇಹಿತರು ಅವರು. ಅಂದು ಎಲ್ಲರೂ ಅವರಿಗೆ ಶುಬ ಹಾರೈಸುತ್ತಿದ್ದರು. ಅವರು, ಅವರ ಕಾರ್‍ಡ್ ತೆಗೆದು ಕೊಟ್ಟರು ನನಗೆ. ಅದರಲ್ಲಿ ಬರೆದಿತ್ತು ದೈಜಿ ದುಬೈ. ನಾನು ಇದರಲ್ಲಿ ಕೆಲಸಗಳಿದ್ದರೆ ಹಾಕುತ್ತೇನೆ. ನಾವು ಹೊಸದಾಗಿ ಆನ್ಲೈನ್ ವೆಬ್ಸೈಟ್ ಶುರು ಮಾಡಿದ್ದೇವೆ. ನೀನು ನೋಡುತ್ತಾ ಇರು ಅಂತ ಹೇಳಿದ್ರು. ನೋಡಿ ಸರಿಯಾದ ಸಮಯಕ್ಕೆ ಅವರು ಸರಿಯಾದ ನಿರ‍್ದಾರ ತೆಗೆದುಕೊಂಡರು. ಇಂದು ‘ದೈಜಿ ದುಬೈ’ ಬೆಳೆದು ನಿಂತು ದೈಜಿ ವರ‍್ಲ್ಡ್ ಆಗಿ ಬಿಟ್ಟಿದೆ. ವಾಲ್ಟೇರ‍್ ನಂದಳಿಕೆ ಹೆಸರು ಅರಿಯದವರು ವಿರಳ. ಅದು 2001 ರಿಂದ 2007 ರ ಸಮಯ. ನಾನು ಕೆಲಸಮಾಡುತಿದ್ದದ್ದು ಟ್ರೇಡಿಂಗ್ ಕಂಪನಿಯಲ್ಲಿ. ಆಗ ವಸ್ತುಗಳು ಎಲ್ಲಿ ದೊರಕುತ್ತವೆ ಎಂದು ಗೊತ್ತಾಗಬೇಕಾದರೆ ನಾವು ಅದನ್ನು ಹುಡುಕಿಕೊಂಡು ಹೋಗಬೇಕಿತ್ತು. ಕೇವಲ ಅನುಬವ ನಮಗೆ ಜ್ನಾನ ಒದಗಿಸುತಿದ್ದ ಕಾಲವದು!

ನಾವು ಇಮೇಲ್ ಮೂಲಕ ಕೋಟೇಶನ್ ಕಳುಹಿಸುತ್ತಿದ್ದರೂ, ಪರ್‍ಚೇಸ್ ಆರ‍್ಡರ‍್ ಮಾತ್ರ ಪ್ಯಾಕ್ಸ್ ಮೂಲಕ ಬರುತಿತ್ತು. ಕ್ರಮೇಣ ಪಿಡಿಎಪ್ ಬಂತು . ಇಮೇಲ್ ಅದಿಕ್ರುತ ಸಂವಹನ ಮಾದ್ಯಮವಾಯಿತು. ಡಿಜಿಟಲ್ ಸೈನ್ ಕೂಡ ಬಂತು. ಹಾಗೆಯೇ ಗೂಗಲ್ ಕೂಡ ಮುನ್ನೆಲೆಗೆ ಬಂದಿತು; ಅಂತರ‍್ಜಾಲದಲ್ಲಿ ಮಾಹಿತಿ ಹುಡುಕಲು ಬಳಕೆಯಾಗುವ ಒಂದು ಅದ್ಬುತವಾದ ಸಾದನ. ನನ್ನ ಕೆಲಸಕ್ಕೆ ನಾನು ಅದ್ಬುತವಾಗಿ ಬಳಕೆ ಮಾಡಿದ ಸಾದನ ಗೂಗಲ್. ಕಚೇರಿಯ ನಾಲ್ಕು ಗೋಡೆಗಳ ನಡುವೆ ಕೆಲಸ ಮಾಡುತಿದ್ದ ನನಗೆ ಹೊರ ಪ್ರಪಂಚದ ಜ್ನಾನವನ್ನು ದೊರಕಿಸಿಕೊಟ್ಟದ್ದೇ ಗೂಗಲ್. ತುಂಬಾ ಅದ್ಬುತವಾಗಿ ನಾನು ಗೂಗಲ್ ಅನ್ನು ಬಳಕೆ ಮಾಡಿದೆ. ಇಂದು ನಾನು ಯಾವ ಹಂತಕ್ಕೆ ಬೆಳೆದುನಿಂತಿರುವೆನೋ , ನನ್ನ ಯಶಸ್ವಿನ ಹಿಂದಿರುವ ಶಕ್ತಿಗಳಲ್ಲಿ ಗೂಗಲ್ ಕೂಡ ಒಂದು. ಒಂದೆರಡು ಚಿಕ್ಕ ಉದಾಹರಣೆ ಹೇಳೋದಾದ್ರೆ, ಒಮ್ಮೆ ಒಂದು ಚಿಕ್ಕ ವಸ್ತು ತುಂಬಾ ತುರ‍್ತಾಗಿ ಒಂದು ಹಡಗಿಗೆ ಬೇಕಿತ್ತು. ಹಡಗು ಅಂದ್ರೆ ಹಾಗೇನೇ. ತುಂಬಾ ಸಮಯ ನಿಲ್ಲೋದಿಲ್ಲ. ಬಂದರಿನಲ್ಲಿ ಎಶ್ಟು ದಿನ ಹೆಚ್ಚು ನಿಲ್ಲುತ್ತದೆಯೋ ಅಶ್ಟು ದುಡ್ಡು ಕಟ್ಟಬೇಕು. ಹಡಗು ಒಮ್ಮೆ ದುಬೈ ಬಂದರಿಗೆ ಬಂದ್ರೆ ಎಶ್ಟು ಬೇಗ ಸಾದ್ಯವೋ ಅಶ್ಟು ಬೇಗ ನಿರ‍್ವಹಣೆ ಮಾಡಿ ಹೊರಡುತ್ತಾರೆ. ಆ ಹಡಗಿಗೆ ಬೇಕಿದ್ದ ವಸ್ತು ಎಲ್ಲಿ ಸಿಗುತ್ತದೆ ಅಂತ ಗೊತ್ತಿರಲಿಲ. ಆದರೆ ಗೂಗಲ್ ನಲ್ಲಿ ನನಗಿದ್ದ ಜ್ನಾನ, ಆ ವಸ್ತುವನ್ನು ಸುಲಬದಲ್ಲಿ ಹುಡುಕುವಂತೆ ಮಾಡಿತು ಮತ್ತು ನಾನು ಕೆಲಸಮಾಡುತ್ತಿದ್ದ ಕಂಪನಿಗೆ ದೊಡ್ಡ ಲಾಬ ದೊರಕಿತು. ಹಾಗಂದ ಮಾತ್ರಕ್ಕೆ ಗೂಗಲ್ ನಲ್ಲಿ ಹುಡುಕೋದು ಸುಲಬ , ಯಾರು ಬೇಕಾದರೂ ಹುಡುಕಬಹುದು ಅಂದರೆ! ಕಂಡಿತ ಹೇಳಿದಶ್ಟು ಸುಲಬವಲ್ಲ ಅದು. ನಾವು ಯಾವ ರೀತಿಯಲ್ಲಿ ಪ್ರಶ್ನೆ ಕೇಳುತ್ತೆವೆ ಅನ್ನೋದು ಕೂಡ ಬಲು ಮುಕ್ಯ . ಹೋದ ವರ‍್ಶ ಕಳಸದ ಜನಪ್ರಿಯ ಶಿಕ್ಶಕಿ , ಲೇಕಕಿಯೊಬ್ಬರು ಪೇಸ್ ಬುಕ್ನಲ್ಲಿ ಒಂದು ದಾರಾವಾಹಿಯ ಪೋಟೋ ಹಾಕಿ ಇವರು ಸುದೀಪ್ ಹೌದೋ ಅಲ್ಲವೋ ಅಂತ ಕೇಳಿದ್ದರು. ಒಬ್ಬ ವ್ಯಕ್ತಿ ನೋಡಲು ನಮ್ಮ ನಟ ಸುದೀಪ್ ನಂತೆ ಕಾಣುತಿದ್ದರು , ನಾನು ಒಂದು ನಿಮಿಶದಲ್ಲಿ ಆ ನಟ ಸುದೀಪ್ ಅಲ್ಲ ಅಂತ ಹೇಳಿ ಆ ನಟನ ಹೆಸರು ಮತ್ತು ಆ ದಾರಾವಾಹಿಯ ಹೆಸರು ಕೂಡ ಹೇಳಿದ್ದೆ. ಕೇವಲ ಒಂದು ಪೋಟೋ ನೋಡಿ ಮಾಹಿತಿ ಹುಡುಕೋದು ಯೋಚಿಸಿದಶ್ಟೂ ಸುಲಬವಲ್ಲ. ಗೂಗಲ್ ನಲ್ಲಿ ಮಾಹಿತಿ ಹೂಡೋಕೋದು ಕೂಡ ಒಂದು ಕಲೆ.

ಈ ಗೂಗಲ್ ನಲ್ಲಿ ನನಗೆ ತುಂಬಾ ಕುಶಿಕೊಟ್ಟ ಒಂದು ವಿಚಾರ ಹೇಳುತ್ತೇನೆ ಕೇಳಿ. ನಾನು ಕೆಲಸ ಮಾಡುತಿದ್ದ ಕಂಪನಿಯ ಪಿಕ್ ಅಪ್ ವಾಹನದ ಇಂಜಿನ್ ಕೈ ಕೊಟ್ಟಾಗ, ಬೇರೆ ಕಾರಿನ ಒಂದು ಸೆಕೆಂಡ್ ಹ್ಯಾಂಡ್ ಇಂಜಿನ್ ಕರೀದಿಸಿ ಹಾಕಿದ್ದರು. ಸಲ್ಪ ಸಮಯದ ನಂತರ ಆದರ ಬೆಲ್ಟ್ ಹಾಳಾಯಿತು. ಅದು ಯಾವ ಕಾರಿನ ಎಂಜಿನ್ ಹಾಕಿದ್ದು ಅಂತ ಗೊತ್ತಿಲ್ಲ. ಬೆಲ್ಟ್ ಇಡೀ ದುಬೈಯಲ್ಲಿ ಎಲ್ಲಿ ಹುಡುಕಿದರೂ ಸಿಗಲಿಲ್ಲ. ಹಳೆಯ ಬೆಲ್ಟ್ಅನ್ನು ತೆಗೆದುಕೊಂಡು ನಮ್ಮ ಚಾಲಕ ಪ್ರತಿ ಅಂಗಡಿ ಅಂಗಡಿ ಹೋಗಿ ಹುಡುಕಿದರೂ ಅದು ಸಿಗಲಿಲ್ಲ. ಕೆಲವರು ಬೇರೆ ಬೆಲ್ಟ್ ಕೊಟ್ಟರೂ ಅದು ಒಂದೆರಡು ದಿನದಲ್ಲೇ ಹಾಳಾಯಿತು. ತುಂಬಾ ಹಣ ಕರ‍್ಚಾಯಿತು. ಗಾಡಿಯನ್ನು ವಿದಿ ಇಲ್ಲದೆ ನಿಲ್ಲಿಸಬೇಕಾಯಿತು. ನಾನು ಆ ಹಳೆಯ ಬೆಲ್ಟು ಅನ್ನು ಚೆನ್ನಾಗಿ ತೊಳೆದು ಅದರಲ್ಲಿ ಹೆಸರೇನಾದರೂ ಇದೆಯಾ ಅಂತ ಹುಡುಕಲಾರಂಬಿಸಿದೆ. ಅಶ್ಟರಲ್ಲಿ ಆ ಇಂಜಿನ್ ಯಾವ ಬ್ರಾಂಡಿನ ಕಂಪನಿಯ ಕಾರಿನದ್ದು ಅನ್ನುವ ವಿಚಾರ ಗೊತ್ತಾಯಿತು. ಆದರೇನು ಪ್ರಯೋಜನ. ಯಾವುದೇ ಕಾರಿನ ಕಂಪನಿ ಇರಲಿ , ಅದಕ್ಕೆ ಬೇಕಾದ ಪರಿಕರಗಳನ್ನು ಪೂರೈಸುವುದು ಬೇರೆ ಬೇರೆ ಕಂಪನಿಗಳು. ಹಾಗಾಗಿ ಆ ಬೆಲ್ಟ್ ಪೂರೈಕೆಯಾಗಿದ್ದು ಯಾವ ಕಂಪನಿಯಿಂದ ಅಂತ ಗೊತ್ತಾಗಲಿಲ್ಲ. ನಾನು ಬೆಲ್ಟು ತೊಳೆದು ಹುಡುಕಿದಾಗ ನನಗೆ ಅದರಲ್ಲಿ ಕೆಲವು ನಂಬರ್ ಗಳು ಮಾತ್ರ ದೊರಕಿದವು.

ಆ ನಂಬರ್ ಗಳನ್ನು ಗೂಗಲ್ ನಲ್ಲಿ ಹಾಕಿ ಹುಡುಕಲು ತೊಡಗಿದೆ. 3 ದಿನದ ಸತತ ಪ್ರಯತ್ನದ ನಂತರ ಲಂಡನ್ ನ ಒಬ್ಬ ಕಾರ್ ಡೀಲರ್ ನ ಮಾಹಿತಿ ದೊರಕಿತು. ಅವರಿಗೆ ಇಮೇಲ್ ಮಾಡಿದೆ. ಎರಡು ದಿನಗಳ ನಂತರ ಅವರು ಶಾರ‍್ಜಾದ ಒಂದು ಕಾಂಟಾಕ್ಟ್ ನಂಬರ್ ನನಗೆ ಕಳುಹಿಸಿದರು. ಆ ಶಾರ‍್ಜಾದ ಕಂಪೆನಿಯವ ನನಗೆ ಆ ಬೆಲ್ಟ್ ಪೂರೈಕೆ ಮಾಡುವ ಕಂಪನಿಯ ನಂಬರ್ ಕೊಟ್ಟ. ಕಡೆಗೆ ಆ ಕಂಪನಿಗೆ ಪೋನ್ ಮಾಡಿದಾಗ ಈ ಬೆಲ್ಟ್ ದುಬೈಯಲ್ಲೇ ನಮಗೆ ದೊರಕಿತು. ಅದು ಕೇವಲ ನೂರೈವತ್ತು ರುಪಾಯಿಗೆ!. ಇದು ನನಗೆ ಬಹಳ ಸಂತೋಶ ಕೊಟ್ಟ ಕೆಲಸ. ಇಲ್ಲವಾದಲ್ಲಿ ಆ ಗಾಡಿ ನೇರ ಗುಜರಿಗೆ ಕೊಡಬೇಕಿತ್ತು. ಈಗ ಗೂಗಲ್ ದೈತ್ಯ ಕಂಪನಿಯಾಗಿ ಬೆಳೆದು ನಿಂತಿದೆ. ಗೂಗಲ್ ಮೂಲಕ ಅನೇಕ ವಿದೇಶಿ ಕಂಪನಿಗಳ ಸಂಪರ‍್ಕ ದೊರಕಿದೆ. ಅಮೇರಿಕ , ಪೋಲೆಂಡ್ , ಲಂಡನ್ , ಚೀನಾ ಮತ್ತು ಟರ‍್ಕಿ ದೇಶದಿಂದ ವಸ್ತುಗಳನ್ನು ಸುಲಬವಾಗಿ ತರಿಸಿಕೊಳ್ಳಲು ನನಗೆ ಸಾದ್ಯವಾಗಿದೆ.

ಒಟ್ಟಿನಲ್ಲಿ ಗೂಗಲ್ ಬಳಕೆ ದಿನನಿತ್ಯದ ಅಗತ್ಯ ವಾಗಿಬಿಟ್ಟಿದೆ. ಆದರೆ ಕಾಲ ನಿಂತ ನೀರಾಗಿರೋದಿಲ್ಲ ಅಲ್ವ. ಒಂದು ಪುಟ್ಟ ಮೊಬೈಲ್ ಮೂಲಕ ಏನನ್ನು ಬೇಕಾದ್ರು ಮಾಡುವಶ್ಟು ಮುಂದು ವರೆದು ಬಿಟ್ಟಿದೇವೆ. ಒಂದು ವಾಟ್ಸಪ್ಪ್ ಇಡೀ ದೇಶದ ಜನರ ಚಿಂತನೆಯನ್ನು ಬದಲಿಸುವ ಸಮರ‍್ತ ಪಡೆದು ಬಿಟ್ಟಿದೆ. ವ್ಯವಹಾರದಲ್ಲಿ ವಾಟ್ಯಾಪ್ಪ್ ಬಳಕೆ ಇಂದಿನ ಅಗತ್ಯವಾಗಿ ಬಿಟ್ಟಿದೆ. 2009 ರಲ್ಲಿ ವಾಟ್ಸಪ್ಪ್ ದುಬೈಯಲ್ಲಿ ಬಳಸಲಾರಂಬಿಸಿದರು .ಆದರೆ 2018 ರ ನಂತರ ವ್ಯವಹಾರಲ್ಲಿ ವಾಟ್ಸಪ್ಪ್ ಬಳಕೆ ಹೆಚ್ಚಾಯಿತು. ಅದರಲ್ಲೂ ಲ್ಯಾಂಡ್ ಲೈನ್ ನಂಬರ್ ಕೂಡ ವಾಟ್ಸಪ್ಪ್ ಗೆ ಬಳಕೆ ಮಾಡಲು ಅನುಮತಿ ದೊರಕಿದ ಮೇಲೆ ಪ್ರತಿ ಕಂಪನಿ ಕೂಡ ವಾಟ್ಸಪ್ಪ್ ಅದಿಕ್ರತವಾಗಿ ಬಳಸುತ್ತಿವೆ . ನಾನು ಕೂಡ ಇದಕ್ಕೆ ಹೊರತಲ್ಲ. ಇಮೇಲ್ ಕೂಡ ನಿದಾನವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ.

ನಮ್ಮ ಎಲೆಕ್ಟ್ರಿಕಲ್ ಟ್ರೇಡಿಂಗ್ ವ್ಯವಹಾರದಲ್ಲಿ ವಾಟ್ಸಪ್ಪ್ ನಿಂದ ತುಂಬಾ ಪ್ರಯೋಜನ ವಾಗಿದೆ. ಕ್ಶಣ ಮಾತ್ರದಲ್ಲಿ ನಮ್ಮ ಗ್ರಾಹಕರೊಂದಿಗೆ, ಪೂರೈಕೆದಾರರೊಂದಿಗೆ, ಸಹೋದ್ಯೋಗಿಗಳೊಂದಿಗೆ ಸಂಪರ‍್ಕ ಸಾದ್ಯವಾಗುತ್ತಿದೆ. ಕಂಪನಿ ಬೆಳೆಯಲು ಕೂಡ ಇದು ಕಾರಣವಾಗಿದೆ. ಇನ್ನು AI ಬಗ್ಗೆ ಹೇಳೋದೇ ಬೇಡ. ನಮ್ಮ ಕೆಲಸಗಳನ್ನು ಅದು ಕ್ಶಣಮಾತ್ರದಲ್ಲಿ ಮಾಡಿ ಮುಗಿಸುತಿದೆ. ಆದರೆ ಒಂದು ಮಾತು ನಮಗೆ ನೆನಪಿರಬೇಕು. ಅಂತರ್‍ಜಾಲಕ್ಕೆ ನಾವು ಗುಲಾಮರಾಗಿರಬಾರದು ಬದಲಿಗೆ ಅಂತರಜಾಲವನ್ನು ನಾವು ನಮ್ಮ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳಬೇಕು. ನಾನು ಈಗ ಕೋಟೇಶನ್ ಟೈಪ್ ಮಾಡುತ್ತ ಕುಳಿತುಕೊಳ್ಳುವುದಿಲ್ಲ. AI ಗೆ ಹೇಳುತ್ತೇನೆ; ಇದು ರೆಪರೆನ್ಸ್ ನಂಬರ್, ಇದು ಮಾರಾಟಮಾಡಬೇಕಾದ ಸಾದನ , ಇಶ್ಟು ಬೆಲೆ. ಕೊಟೇಶನ್ ರೆಡಿ ಮಾಡಿ ಕೊಡು. ಕ್ಶಣಮಾತ್ರದಲ್ಲಿ ನನ್ನ ಕೋಟೇಶನ್ ತಯಾರಾಗಿರುತ್ತೆ. ವಸ್ತುಗಳ ಹೋಲಿಕೆ, ಗುಣ ಮಟ್ಟ , ಮಾರುಕಟ್ಟೆಯಲ್ಲಿ ಇರುವ ಬೇಡಿಕೆ, ಪ್ರತಿಯೊಂದು ಮಾಹಿತಿ AI ಮೂಲಕ ಸುಲಬವಾಗಿ ವಿಶ್ಲೇಶಣೆ ಮಾಡಲು ಸಾದ್ಯವಾಗುತ್ತಿದೆ.

ಕೆಲವು ಸಮಯದ ಹಿಂದೆ ನಾನು ಯು ಟ್ಯೂಬ್ ನಲ್ಲಿ ಒಂದು ವಿಡಿಯೋ ಮಾಡಿದ್ದೆ. ಅದರಲ್ಲಿನ ದ್ರಶ್ಯವನ್ನು ನಾನು ಸ್ರುಶ್ಟಿಸಿದ್ದು AI ಮೂಲಕ.
ಒಟ್ಟಿನಲ್ಲಿ ಮಿಂಬಲೆ (ಅಂತರ್‍ಜಾಲ) ದಿನ ನಿತ್ಯ ಜೀವನದ ಅಗತ್ಯ ವಾಗಿದೆ. ನನ್ನ ಮಾತ್ರವಲ್ಲ ಪ್ರತಿಯೊಬ್ಬರ ಅಗತ್ಯ ಕೂಡ! ಆದರೆ ನಾನು ಮೊದಲೇ ಹೇಳಿದಂತೆ ಅದನ್ನು ನಾವು ನಮ್ಮ ಗುಲಾಮರಂತೆ ಬಳಸಬೇಕೇ ವಿನಹ ನಾವು ಅದರ ಗುಲಾಮರಾಗಬಾರದು. ಆದರೆ ಮಿಂಬಲೆಯ ಅತಿಯಾದ ಬಳಕೆ ಕೆಲವೊಮ್ಮೆ ನಕಾರಾತ್ಮಕ ಪರಿಣಾಮವನ್ನೂ ಉಂಟುಮಾಡುತ್ತದೆ. ಹೆಚ್ಚು ಸಮಯ ಮೊಬೈಲ್ ಅತವಾ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವುದರಿಂದ, ಸಮಯ ವ್ಯರ‍್ತ ಮತ್ತು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಅಂತರಜಾಲವನ್ನು ಸರಿಯಾದ ಮಿತಿಯಲ್ಲಿ ಬಳಸುವುದು ಅತ್ಯಂತ ಅಗತ್ಯ.

( ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *