ಕವಿತೆ: ಆಗಸದೊಂದಿಗೆ ಮಾತು

– ವೆಂಕಟೇಶ ಚಾಗಿ

ನಾನು ಆಗಾಗ ಕೇಳುತ್ತೇನೆ ಆಕಾಶಕ್ಕೆ
ನೀನೇಕೆ ಇಶ್ಟು ವಿಶಾಲವಾಗಿರುವೆ
ತುಂಬಿಕೊಳ್ಳಲು ನಿನಗೆ ಎಶ್ಟೋ ಜಾಗವಿದೆ
ಆದರೂ ನೀನು ಬರಿದೇ ಆಗಿರುವೆ
ಒಂದು ನೆನಪಿನ ಕುರುವಿಲ್ಲ
ಒಂದು ದುಕ್ಕದ ಸುಳಿವಿಲ್ಲ
ಯಾವುದನ್ನು ಉಳಿಸಿಕೊಂಡಿಲ್ಲ
ನೀನೆಶ್ಟು ನಿರ‍್ಮಲ

ಆಗಾಗ ಮೋಡಗಳು ನಿನ್ನ ತಬ್ಬಿಕೊಂಡರೂ
ಒಂದಿಶ್ಟು ಕಣ್ಣೀರು ಹಾಕಿ
ಮತ್ತೆ ಕಳುಹಿಸಿ ಕೊಡುವೆ
ಸಿಟ್ಟಿನಲ್ಲಿ ಗುಡುಗಿದರು ಸಿಡಿಲಿದರೂ
ಮತ್ತೆ ಮತ್ತೆ ತಂಪಾಗುವೆ
ಅಲ್ಲಲ್ಲಿ ಕೆಂಪಾಗಿ ನೀಲಿಯಾಗುವೆ
ಮತ್ತೆ ಮತ್ತೆ ಬರಿದಾಗುವೆ
ನೀನೆಶ್ಟು ನಿರ‍್ಮಲ

ನೀನು ಮನಸ್ಸು ಮಾಡಿದರೆ
ಎಲ್ಲವನ್ನು ನೀನೇ ಇಟ್ಟುಕೊಳ್ಳಬಲ್ಲೆ
ನೀನು ಹೆಣ್ಣೋ ಗಂಡೋ
ಯಾವ ದರ‍್ಮವೋ ಯಾವ ಜಾತಿಯೊ
ಓದಿದ್ದೆಶ್ಟು ಬರೆದಿದ್ದೆಶ್ಟು
ಗಳಿಸಿದ್ದೆಶ್ಟು ಉಳಿಸಿದ್ದೆಶ್ಟು
ನಿನ್ನವರಾರು ಅಲ್ಲದವರಾರು
ಯಾವುದೂ ಇಲ್ಲ ಯಾರೂ ಇಲ್ಲ
ನೀನು ಬಡವನೋ ಶ್ರೀಮಂತನೋ
ನೀನೆಶ್ಟು ನಿರ‍್ಮಲ

ನಿನ್ನ ನೋಡಿದಾಗಲೆಲ್ಲಾ
ನನ್ನದೇ ನೋವುಗಳು ಕಾಣುತ್ತಿವೆ
ನಾನು ನಕ್ಕಾಗ ನೀನು ನಗುವೆ
ನೀನೊಂದು ಮಾಯೆಯೋ ಗೆಳೆಯನೋ
ನಾನೇನು ಕೇಳಲಿ ನಿನಗೆ
ನೀನೇನು ಕೊಡುವೆ ನೀನೇ ಕಾಲಿ
ಎಲ್ಲವನ್ನೂ ಕೊಡುವ ನೀನೇ ದನಿಕ
ಎಲ್ಲ ಇದ್ದರೂ ನಾನೇ ಬಡವ
ನಿನ್ನಂತಾಗಲು ಕಲಿಸು
ಅಶ್ಟೇ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *