ಕುಮಾರವ್ಯಾಸ ಬಾರತ ಓದು – ಆದಿಪರ್ವ – ಸಹಚರರೊಡನೆ ದುರ್ಯೋದನನ ಸಮಾಲೋಚನೆ – 18
ಸಹಚರರೊಡನೆ ದುರ್ಯೋದನನ ಸಮಾಲೋಚನೆ
(ಆದಿಪರ್ವ: ಸಂಧಿ: 8 ಪದ್ಯ: 1-20, 23, 29-30, 32, 53-56)
ಪಾತ್ರಗಳು:
ದುರ್ಯೋಧನ: ಧೃತರಾಷ್ಟ್ರ ಮತ್ತು ಗಾಂಧಾರಿಯ ಮಗ.
ಕರ್ಣ: ಸೂರ್ಯದೇವ ಮತ್ತು ಕುಂತಿಯ ಮಗ.
ಶಕುನಿ: ಗಾಂಧಾರಿಯ ಸೋದರ. ದುರ್ಯೋಧನನ ಸೋದರಮಾವ
ಪುರಜನ: ಹಸ್ತಿನಾವತಿಯ ಪ್ರಜೆಗಳು
*** ಸಹಚರರೊಡನೆ ದುರ್ಯೋಧನನ ಸಮಾಲೋಚನೆ ***
ಕೇಳು ಜನಮೇಜಯ ಧರಿತ್ರೀಪಾಲ, ಗಜನಗರಿಯಲಿ ದಿವಸ ದಿವಸದಲಿ… ಕೌರವರಾಳ… ಪಾಂಡವರಾಳ ಸೆಣಸಿನ ಕಾಲು ಮೆಟ್ಟುಗಳ ಸೂಳು… ಮತ್ಸರ ಬಿರುದು ಪಾಡಿನ ಚೂಳಿ… ಕಲಹದ ಕದಡು… ಜೂಜಿನ ತೋಳುವಲರ ಒಳತೋಟಿ ಮಸಗಿತು… ಬೀದಿ ಕಲಹದ ಕದಡು ಬೀಡಿನಲೈದೆ ಹಬ್ಬಿತು… ಬೀಡು ಕಲಹದ ಕೈದೊಳಸುಕೊಂಡು ನಾಡು ನಾಡಿನಲಿ ಎಸಗಿ ನಟಿಸಿತು… ಎರಡು ಅರಸು ಆದುದು… ಇಭಪುರಿಗೆ ಕಾಳಾದುದು… ಭೀಮ ದುರ್ಯೋಧನರ ಹೋರಟೆಗೆ ಪುರಜನವೈದೆ ಇನ್ನೇನೆಂದು ಹೆದರಿತು…
ಪುರಜನ: ಪಾಂಡುವರು ಬೇರೆ ಇರಲಿ… ರಾಯನ ನೂರು ಮಕ್ಕಳು ಪುರವನು ಆಳಲಿ… ಕೌರವರು ಬೇರೆ ಇರಲಿ… ಪಾಂಡವರು ಇಭಪುರಿಯ ಆಳಲಿ… ಈ ಪುರಿ ನೂರರೊಡನೆ ಐವರನು ಧರಿಸಿರಲಾರದು.
(ಎನುತ ಹಸ್ತಿನಾನಗರ ದುಗುಡವ ಹೇರಿ ಹೊದಕುಳಿಗೊಳುತಲು ಇರ್ದುದು… ಒಂದು
ದಿವಸ ಸುಯೋಧನನು ನಿಜಮಂದಿರದೊಳು ಏಕಾಂತದಲಿ ಶಕುನಿ ಕರ್ಣ
ಜಯದ್ರಥಾದ್ಯರಿಗೆ ಮನನೊಂದು ನುಡಿದನು.)
ದುರ್ಯೋಧನ: ಅಂದು ಭೀಮಾರ್ಜುನರು ದ್ರುಪದನ ತಂದು ಗುರುವಿಗೆ ದಕ್ಷಿಣೆಯಿತ್ತು ಸಂದರೈ…
ತಮಗೆ ಸಮರದಲಿ ಪರಿಭವವಾಯ್ತು… ಭೀಮಸೇನನ ಇರವು ತಮ್ಮೊಳಗೆ ವನಜ
ವನದಲಿ ತುರುಚೆ… ಕಬ್ಬಿನ ಬನದಿ ಕಡಸಿಗೆ… ಚೂತಮಯ ಕಾನನದಿ
ಬೊಬ್ಬುಲಿ… ಪಾರ್ಥನ ಮೇಲೆ ಯಮಳರ ಜಿನುಗಿನಲಿ ಇನಿತು ಜಾರೆನು…
ಯುಧಿಷ್ಠಿರ ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲ… ಇವರೊಡನೆ ಹುದು
ನಡೆಯದು… ನಮ್ಮಲಿ ಕದನವೇ ಕೈಗಟ್ಟುವುದು… ಕಾದಿದೊಡೆ ಹೆಬ್ಬಲವಹುದು…
ದುರ್ಬಲ ದೈವಗತಿ ಬೇರೆ… ನದಿಗಳು ಅರಳೆಯ ಹಾಸು… ನವ ವಿಷವು ಉದರ
ದೀಪನ ಚೂರ್ಣ… ಆವ ಅಂಗದಲಿ ಸಾಪತ್ನರಲಿ ಸದರವ ಕಾಣೆ ತಾನು.
(ಎಂದ. ಆಗ ಕರ್ಣನು ದುರ್ಯೋಧನನ ಆತಂಕವನ್ನು ಹೋಗಲಾಡಿಸುವಂತೆ
ನುಡಿಯತೊಡಗುತ್ತಾನೆ.)
ಕರ್ಣ: ದುಗುಡವೇತಕೆಜೀಯ, ಡೊಂಬಿನಜಗಳವನುತೆಗೆದು ಅರಿನೃಪರಸುಂಟಗೆಯನು
ಆಯ್ಸುವೆನು… ಅವರ ತನುವನು ಯುದ್ಧ ರಂಗದಲಿ ದಿಗು ಬಲಿಯ ಕೊಡಿಸುವೆನು… ಸಾಕಿನ್ನು
ಒಗುಮಿಗೆಯ ಚಿಂತಾಂಗನೆಯನು ಓಲಗಿಸದಿರು… ಕುರುರಾಯ ಚಿತ್ತೈಸು, ತನಗೆ ನೇಮವನು
ಕೊಡು… ಒಂದು ನಿಮಿಷದಲಿ ಹೊಡೆದು ಹೊಡೆ ಚೆಂಡಾಡಿ ರಿಪುಗಳ ಗಡಣವನು
ಯಮರಾಜಧಾನಿಗೆ ನಡೆಸುವೆನು… ನೀ ನೋಡುತಿರು ಸಾಕು… ದುಗುಡವ ಬಿಡು… ಮನಸ್ಸಿನ
ಕಂದು ಕುಂದನು ಹಿಡಿಯದಿರು ಕುರುರಾಯ ಚಿತ್ತೈಸು… ಪಾಂಡವರ ಕೊಬ್ಬುಗಳ ನಿಲಿಸುವೆನು…
ಹದಿನಾಲ್ಕು ಲೋಕದ ಹಬ್ಬುಗೆಯ ಮೊಬ್ಬುಗಳನು ಈಡಾಡಿ ನಭದೊಳಗೆ ಒಬ್ಬನೇ ರವಿ
ತೊಳಗಿ ಬೆಳಗುವ ವೋಲು… ಧರೆಯೊಳಗೆ ಒಬ್ಬನೇ ದುರ್ಯೋಧನನು ಮತ್ತೊಬ್ಬರಿಲ್ಲ
ಎಂದೆನಿಸಿ ತೋರುವೆನು… ವಿದುರ ಭೀಷ್ಮಾದಿಗಳು ನಿನ್ನಯ ಸದನದೊಳಗೆ ಉಂಡುಟ್ಟು
ಪರರ ಅಭ್ಯುದಯವನೆ ಬಯಸುವರು… ಎಮ್ಮನು ದೂರುವರು… ಅವರುಗಳ ಹದನ ನೀನೇ
ಬಲ್ಲೆ… ಸಾಕಿನ್ನು, ಅದರ ಮಾತೇಕೆ… ಅರಸ, ತನ್ನಯ ಕದನವನು ಚಿತ್ತೈಸು… ಸಾಕಿನ್ನು.
(ಎಂದನಾ ಕರ್ಣ… ಕರ್ಣನಾಡಿದ ನುಡಿಗಳನ್ನು ಒಪ್ಪಿಕೊಳ್ಳುತ್ತ ಶಕುನಿಯು ಈಗ
ಮಾತನಾಡತೊಡಗುತ್ತಾನೆ.)
ಶಕುನಿ: ಕರ್ಣನು ಆಡಿದನು… ಈ ನುಡಿ ಸಹಜ ಅಹುದು… ಪಾಂಡವರೆಂಬವರು ಕಡುಸಹಸಿಗಳು…
ಗೆಲಲು ಅರಿದು… ಅಹಿತರನು ಕುಹಕೋಪಾಯ ಮಾರ್ಗದಲಿ ಪರಿಕರಸಹಿತ ಅವರುಗಳ
ಗೆಲಬಹುದು… ನಿಮ್ಮ ಚಿತ್ತಕೆ ಬಹರೆ, ತನ್ನ ಅಭಿಮತವನು ಅವಧರಿಸು… ಐದು ಮುಖ..
ಈರೈದು ಭುಜ.. ಹದಿನೈದು ಕಂಗಳ.. ವಿಗಡ ರುದ್ರನು ಮೇದಿನಿಯ ಮೇಲೆ ಒಂದು
ಶಿರ.. ಭುಜ ಎರಡನು ಅಳವಡಿಸಿ ಆದಿಪುರುಷನು ಭೀಮ ಪೆಸರಿನಲೈದೆ ಜನಿಸಿದನು…
ಆತನ ಇದಿರಲಿ ಕೈದುಕಾರನು ಅದಾವನೈ ಹೇಳು…
ಅರಸ ಕೇಳು, ಧರೆಯೊಳಗೆ ಬಿಲು ವಿದ್ಯದಲಿ ಮೂವರು ಕಣಾ ಸಾಮರ್ಥ್ಯ ಪುರುಷರು…
ಒಬ್ಬರಿಗೆ ಒಂದು ಗುಣ… ಪಾರ್ಥಂಗೆ ಮೂರು ಗುಣ ಭರಿತವಾಗಿಹುದು… ಆತನೊಬ್ಬನ
ಸರಿಸದಲಿ ಮಾರಾಂತು ಜೀವಿಸಿ ಮರಳ ಬಲ್ಲವನು ಆವನೈ ಹೇಳು… ಸಮರದಲಿ
ರಾಮಚಂದ್ರನ ಚರಣಯುಗ… ನಿಸ್ಸೀಮ ಭೀಷ್ಮಾಚಾರಿಯರ ಶಿರ… ಆ ಮಹಾರಥ
ದ್ರೋಣನ ಎದೆ ನಡುಗುವುದು… ಸೌಮನಸ್ಯನು ನಿಷ್ಪ್ರಕಂಪ ಸನಾಮನು ಅರ್ಜುನ
ದೇವನ ಇದಿರಲಿ ಭೂಮಿಯಲಿ ಬಿಲ್ಲಾಳು ಅದಾವವನು…
ಶತ್ರುಗಳ ಸಂಹರಿಸಿ ರಾಜ್ಯವನು ಒತ್ತಿ ಆಳುವೆನು ಎಂಬ ಸಾಹಸ ಸತ್ವಗುಣ ನಿನಗಿಲ್ಲ…
ಪಾಂಡವರು ಅತುಲ ಭುಜಬಲರು… ಕೃತ್ರಿಮದ ಮುಖದಿಂದ ರಿಪುಗಳ ಕಿತ್ತು ಹಾಯಿಕಿ…
ನೆಲನನು ಏಕಚ್ಛತ್ರದಲಿ ಸಲಹುವುದು ಮತ… ಕೇಳು, ನೀವು ಸೋದರರುಗಳು…
ನಿಮ್ಮೊಳು ಭೇದ ಮಂತ್ರವ ಮಾಡುವುದು ಮರ್ಯಾದೆಯೇ… ನಾವ್ ನಿಮ್ಮಡಿಯಲಿ
ಅರಮನೆಯ ಸೇವಕರು… ವಾದಿಸುವರು ಇತ್ತಂಡ ಸರಿ… ನಮಗಾದರೆಯು ಕಂಡುದ
ನುಡಿಯ ಬೇಕು… ಆದರಿಸು ಮೇಣ್ ಮಾಣು ಬಿನ್ನಹವು…
ಲೋಕದೊಳ್ ಪಕ್ಷವೆರಡೇ… ಪಿತೃ ಪಕ್ಷ ಮೇಣ್ ಆ ಮಾತೃಪಕ್ಷ… ತಂದೆಯ ದೆಸೆ
ವಿಪಕ್ಷ… ತಾಯ ದೆಸೆಯವರು ಸಪಕ್ಷವು… ತಕ್ಷಕನ ತೆರನಂತೆ ನಿಮ್ಮನು ಭಕ್ಷಿಸುವರು…
ಪಾಂಡು ಪುತ್ರರನು ಆವ ಅಂಗದಲಿ ನೀನು ಈಕ್ಷಿಸುವುದೈ… ಮೊಳೆಯಲೇ ಮುರುಡಿಸಲು
ಬೇಹುದು… ಬಲಿದ ಬಳಿಕ ಅದು ನಿನ್ನ ಹವಣೇ… ಇಳೆಯೊಳು ಅರ್ಧವನು ಇತ್ತು ರಿಪುಗಳ
ಹೆಚ್ಚಿಸಿದ ಬಳಿಕ ಗೆಲುವನಾವನು…
ದೇವ ದಾನವರೊಳಗೆ ಭೀಮಾರ್ಜುನರ ಕೈ ಮನದ ಅಳವನು ಅರಿಯಾ… ಮೇಲೆ
ಭಾರವೈ. ಧಾರುಣಿಯೊಳು ಪಿಪೀಲಿಕೆಯು ವಿಸ್ತಾರದಲಿ ಮಾಡಿದ ಮನೆಯ
ಕಾಳೋರಗನು ಹೊಗುವಂತೆ… ರಿಪು ಕುಂತೀಕುಮಾರಕರು ವೈರದಲಿ
ಸಪ್ತಾಂಗವನು ತಪ್ಪದೆ ಕೈಸೂರೆಗೊಂಬರು… ಇದಕೆ ಕಾಲದಲಿ ವಿಚಾರವನು
ಮಾಡುವುದು.. ಹಿಂದೆ ನೀನು ಅವರುಗಳ ನಾನಾ ಚಂದದಲಿ ನೋಯಿಸಿದೆ… ಕಷ್ಟ
ವೃತ್ತಿಯನು ಆಚರಿಸುತಿಹರು…
ಮನದಲಿ ಕಂದು ಕುಂದದು… ಇಂದು ನೀನು ಆ ಪಾಂಡುಪುತ್ರರನು ಅಂದಗೆಡಿಸದೆ
ಬಿಟ್ಟೆಯಾದೊಡೆ… ಮುಂದೆ ರಾಜಕಾರಿಯವು ಬೆಟ್ಟಿತು… ಇರುಬಿನಲಿ ಸಿಕ್ಕಿರ್ದ
ಹುಲಿಯನು ಮುರಿದು ಕಳೆಯದೆ ತಳಪಟಕೆ ಬಿಟ್ಟು ಇರಿಯ ಬಹುದೇ… ಬಳಿಕ
ಕೊಂದು ಕೂಗದೆ ಬಿಡುವುದೇ… ಕರುಬರಹ ಪಾಂಡವರಿಗೆ ಈಗಲೆ ಹರುವ ನೆನೆ..
ಹೊರಬಿದ್ದರಾದೊಡೆ ತರಿದು ಬಿಸುಡದೆ ಮಾಣ್ಬರೇ ಹೇಳು…
ಅಡವಿಯಲಿ ಜನಿಸಿದರು… ಅಡವಿಯೊಳಗೆ ಬೆಳವಿಗೆ… ಅಡವಿಯೇ ಇನ್ನು ಅವರ
ಬಾಳಿಕೆಗೆ ನೆಲಮನೆಯದಲ್ಲದೆ… ಪಾಂಡು ಪುತ್ರರಿಗೆ ಪೊಡವಿಯ ಒಡೆತನ
ಸಲ್ಲದು… ಕಾಲದಲಿ ರಾಜ್ಯವ ಕೊಡುವುದು… ಅವರನು ನಡೆಸುವುದು… ಆವ
ಅಂಗದಲಿ ಮತವಲ್ಲ…
ಗೂಗೆಗಳು ಕಾಲವನು… ಆ ದೈತ್ಯರುಗಳು ನಿರ್ಜರರ ಏಳಿಗೆಯನು… ತಮಾಳಿ
ರವಿರಶ್ಮಿಗಳನು… ಆ ಚೋರ ಬಲು ನಿದ್ರೆಯನು… ಕಾಲ ಭುಜಗನು ಗರುಡನ
ಉಳಿವನು ತಾಳದ ಅಂದದಿ… ಪಾಂಡವರು ನಿನ್ನ ಏಳಿಗೆಯ ಸೈರಿಸರು
ಚಿತ್ತೈಸು… ವಿಗಡ ರುದ್ರನು ಲೋಚನಾಗ್ನಿಯೊಳು ಒಗುಮಿಗೆಯ ಕೋಪದಲಿ
ಕಾಮನ ಮಿಗೆ ದಹಿಸಿದ ಅಂದದಲಿ… ಲಾಕ್ಷಾಭವನದಲಿ ರಿಪು ಕುಂತೀಕುಮಾರಕರ
ಹೊಗೆದು ಕಳೆ… ಹಗೆಗೆ ಹರಿವಹುದು… ಅಲ್ಲದಿರ್ದೊಡೆ ರಾಜಕಾರ್ಯವಿದು
ವಿಗಡಿಸುವುದೈ…
ಕೌರವ ಜನಪ, ಇನಿತು ಚಿಂತಿಸಲೇಕೆ… ನಿಮ್ಮಡಿಗಳಿಗೆ ತಾನೊಂದು ಅನುವ
ಬಿನ್ನಹ ಮಾಡುವೆನು… ಪಾಂಡವರ ನೆಳಲಿರಲು ನಿನಗೆ ರಾಜ್ಯವನು ಆಳ್ವ ಫಲ
ಸಂಜನಿಸಲರಿಯದು… ಕಾಲದಲಿ ನೀ ನೆನೆ ಉಪಾಯವನು ಒಂದನು.
(ಎಂದು ಕಳಿಂಗ ಕೈ ಮುಗಿದ. ಶಕುನಿಯು ಮತ್ತೆ ಮಾತನ್ನು ಮುಂದುವರಿಸುತ್ತಾನೆ.)
ಶಕುನಿ: ದನಿಗೆ ನಡೆದು ಒಳಪೊಕ್ಕು ಮರೆಗೂಡಿನಲಿ ಸಿಲುಕಿದ ಹುಲಿಯವೋಲು… ಗಾನಕ್ಕೆ ಮನ
ಸೋಲ್ದು ಕಾನನದಿ ಬೀಸಿದ ಬಲೆಯೊಳಗೆ ಹನನವರಿಯದ ಮೃಗದವೋಲು… ಇರುಬಿನಲಿ
ಕೆಡಹಿದ ಕರಿಯವೋಲು… ರಿಪು ಜನಪರ ಅಭ್ಯುದಯದ ವಿನಾಶವನು ಎಸಗಬೇಕು.
(ಎಂದು ದುರ್ಬೋಧೆಗಳ ನಾನಾ ಚಂದದಲಿ ಬೋಧಿಸಿ… ಸುನೀತಿಯನು
ಅಂದಗೆಡಿಸಿ.. ತದೀಯ ವಂಶಚ್ಛೇದ ಮಾರ್ಗವನು ಒಂದುಗೂಡಿ… ಸುಯೋಧನಂಗೆ
ಆನಂದವೆನಿಸಿ ಕಳಿಂಗ ಲೋಕವ ಕೊಂದನೈ ಜನಮೇಜಯ ಕ್ಷಿತಿಪಾಲ ಕೇಳೆಂದ.)
ದುರ್ಯೋಧನ: ಎಮ್ಮ ಬಹುಮಾನ ಅವಮಾನವು ನಿಮ್ಮದಲ್ಲದೆ ಬೇರೆ ನಮ್ಮಯ ಸೊಮ್ಮು
ಸಂಬಂಧದಲಿ ಬೇರೆ ಹಿತವರ ನಾನು ಕಾಣೆ… ಇನ್ನು ಸಮ್ಮತದಿ ಪಾಂಡವರಿಗೆ
ಅಗ್ನಿಯಲಿ ಒಮ್ಮೆ ಹರಿವನು ನೆನೆವೆನು… ಒದವಿದಡೆ ಎಮ್ಮ ಸುಕೃತೋದಯದ ಫಲ.
(ಎನೆ… ಕಳಿಂಗಾದಿಗಳು ತಂತಮ್ಮನುಮತವ ಹೇಳಿದರು… ಕೌರವ ಜನಪನು
ಪಾಂಡವರಿಗೆ ಮನದೊಳಗೆ ಕೇಡ ನಿಶ್ಚೈಸಿದನು.)
ಹೊಸಗನ್ನಡ ಗದ್ಯ ರೂಪ
ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ಹಸ್ತಿನಾವತಿಯಲ್ಲಿ ಕೌರವರ ಮತ್ತು ಪಾಂಡವರ ನಡುವಣ ಪರಸ್ಪರ ಪೈಪೋಟಿಯಿಂದ ಉಂಟಾಗುತ್ತಿರುವ ಪ್ರಸಂಗಗಳನ್ನು ಹೇಳತೊಡಗಿದ್ದಾನೆ.
ಜನಮೇಜಯ ರಾಜನೇ ಕೇಳು, ದಿನ ದಿನಗಳು ಉರುಳಿದಂತೆಲ್ಲಾ ಹಸ್ತಿನಾವತಿ ಪಟ್ಟಣದಲ್ಲಿ ಕೌರವರ ಮತ್ತು ಪಾಂಡವರ ಕಡೆಯ ವ್ಯಕ್ತಿಗಳ ನಡುವಣ ಹಗೆತನ ಹೆಚ್ಚಾಯಿತು. ಕಾಲು ಕೆರೆದುಕೊಂಡು ಒಬ್ಬರ ಮೇಲೆ ಮತ್ತೊಬ್ಬರು ಜಗಳಕ್ಕೆ ಹೋಗುವ… ತಮ್ಮನ್ನು ತಾವೇ ಹೊಗಳಿಕೊಳ್ಳುತ್ತ ಮುನ್ನುಗ್ಗಿ ಹೋಗಿ ಹೊಡೆದಾಡುವ… ಬಲವುಳ್ಳವರ ಪೈಪೋಟಿಯಿಂದ ಒಳಕಲಹ ಇಮ್ಮಡಿಗೊಂಡಿತು. ಬೀದಿಯ ಜಗಳ ಮನೆಯೊಳಗೂ ವ್ಯಾಪಿಸಿತು. ಪಾಂಡವರ ಮತ್ತು ಕೌರವರ ಹೊಡೆದಾಟದ ಸಂಗತಿ ನಾಡಿನ ಉದ್ದಕ್ಕೂ ಹರಡಿ, ನಾಡಿನ ಆಚೆಗೂ ವ್ಯಾಪಿಸಿತು. ಬೀಮ ದುರ್ಯೋದನನ ಕಾದಾಟದಿಂದಾಗಿ ನೊಂದುಕೊಂಡ ಪ್ರಜೆಗಳು.
“ಇಬ್ಬರ ದೊರೆತನಕ್ಕೆ ಒಳಗಾಗಿ ಹಸ್ತಿನಾಪುರವು ಹಾಳಾಯಿತು… ಇನ್ನೇನು ಗತಿಯೆಂದು ಬಹಳವಾಗಿ ಹೆದರಿದರು.. ಪಾಂಡವರು ಬೇರೆ ಇರಲಿ… ರಾಜನ ನೂರು ಮಕ್ಕಳು ಈ ಪುರವನ್ನಾಳಲಿ… ಇಲ್ಲವೆ… ಕೌರವರು ಬೇರೆ ಇರಲಿ… ಪಾಂಡವರು ಹಸ್ತಿನಾಪುರವನ್ನಾಳಲಿ… ಈ ಪಟ್ಟಣ ಈ ನೂರ್ವರನ್ನೂ ಐವರನ್ನೂ ಒಟ್ಟಿಗೆ ತಡೆದುಕೊಳ್ಳಲಾರದು” ಎಂದು ಹಸ್ತಿನಾಪುರದ ಪ್ರಜೆಗಳೆಲ್ಲರೂ ಆತಂಕದಿಂದ ಚಿಂತೆಗೀಡಾದರು.
ಒಂದು ದಿವಸ ದುರ್ಯೋದನನು ತನ್ನ ಅರಮನೆಯಲ್ಲಿ ಶಕುನಿ.. ಕರ್ಣ.. ಜಯದ್ರತ ಮೊದಲಾದವರಿಗೆ ಏಕಾಂತದಲ್ಲಿ ಮನನೊಂದು ಹೀಗೆ ನುಡಿದನು. ಹೀಗೆ ನುಡಿದನು.
“ಅಂದು ಬೀಮಾರ್ಜುನರು ದ್ರುಪದನನ್ನು ಸೆರೆಹಿಡಿದು ತಂದು ಗುರುಕಾಣಿಕೆಯನ್ನು ಒಪ್ಪಿಸಿ ಹೆಸರನ್ನು ಗಳಿಸಿದರು. ನಮಗೆ ಯುದ್ದದಲ್ಲಿ ಅವಮಾನವಾಯಿತು. ಕಮಲವನದಲ್ಲಿ ತುರಿಕೆ ಗಿಡವೂ, ಕಬ್ಬಿನ ತೋಟದಲ್ಲಿ ಕಡಸಿಗೆಯೂ, ಮಾವು ತುಂಬಿದ ಅರಣ್ಯದಲ್ಲಿ ಜಾಲಿ ಗಿಡವೂ ಇರುವಂತೆ ನಮ್ಮ ನಡುವೆ ಬೀಮನ ಇರುವಿಕೆಯಾಗಿದೆ. ಅರ್ಜುನ.. ಯಮಳರಾದ ನಕುಲ ಸಹದೇವರ ಬಗ್ಗೆ ನಾನು ಹೆಚ್ಚಾಗಿ ಚಿಂತಿಸುವುದಿಲ್ಲ. ದರ್ಮರಾಯನೇ ರಾಜನಾಗಲಿ… ಆಗದಿರಲಿ ನನಗೆ ಅಂಜಿಕೆಯಿಲ್ಲ. ಇವರೊಡನೆ ಹೊಂದಿಕೊಂಡು ಬಾಳಲು ನನಗೆ ಆಗುವುದಿಲ್ಲ. ನಮ್ಮಲ್ಲಿ ಕಾಳಗವೇ ಒದಗುತ್ತದೆ. ಹೋರಾಡೋಣವೆಂದರೆ ಅವರು ಹೆಚ್ಚು ಶಕ್ತಿಶಾಲಿಗಳು. ನಮ್ಮ ದೈವಗತಿ ಬೇರೆ ದುರ್ಬಲವಾಗಿದೆ. ಅವರಿಗೆ ನದಿಗಳು ಹತ್ತಿಯ ಹಾಸಿಗೆಯಾದವು. ನಾವು ಇಕ್ಕಿದ ವಿಶ ಹೊಟ್ಟೆಯಲ್ಲಿ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಪಚನದ ಪುಡಿಯಾಯಿತು. ಯಾವ ರೀತಿಯಲ್ಲೂ ಈ ದಾಯಾದಿಗಳಲ್ಲಿ ಸಲುಗೆಯಿಂದಿರುವ ದಾರಿಯನ್ನು ಕಾಣೆನು” ಎಂದು ತನ್ನ ಮನದ ಸಂಕಟವನ್ನು ಸಹಚರರ ಮುಂದೆ ತೋಡಿಕೊಂಡನು.
ದುರ್ಯೋದನನ ಮಾತುಗಳನ್ನಾಲಿಸಿದ ಕರ್ಣನು
“ಸಂಕಟವೇತಕ್ಕೆ ಜೀಯ… ಕಪಟತನದಿಂದ ಜಗಳವನ್ನು ತೆಗೆದು ಶತ್ರುರಾಜರ ಗುಂಡಿಗೆಯನ್ನು ಬಗೆದು ತೆಗೆದು ಮಾಂಸದ ತುಂಡುಗಳನ್ನು ಆಯ್ದುಕೊಳ್ಳುವಂತೆ ಮಾಡುತ್ತೇನೆ… ಕಾಳೆಗದ ಕಣದಲ್ಲಿ ಅವರ ದೇಹವನ್ನು ದಿಗ್ಬಲಿ ಕೊಡುತ್ತೇನೆ… ಸಾಕಿನ್ನು, ಹೆಚ್ಚಾಗಿ ಚಿಂತೆ ಮಾಡಬೇಡ. ಗಮನವಿಟ್ಟು ಕೇಳು… ನನಗೆ ಅಪ್ಪಣೆಯನ್ನು ಕೊಡು. ಒಂದು ಗಳಿಗೆಯಲ್ಲಿ ಹೊಡೆದು ಹೊಡೆಚೆಂಡಾಡಿ ಶತ್ರುಗಳ ಸಮೂಹವನ್ನು ಯಮನ ಪಟ್ಟಣಕ್ಕೆ ಕಳುಹಿಸಿಕೊಡುವೆನು. ನೀನು ನೋಡುತ್ತಿರು ಸಾಕು. ಕಳವಳವನ್ನು ಬಿಡು.
ಮನಸ್ಸಿನ ಆತಂಕದಿಂದ ಇಲ್ಲವೇ ಹಿಂಜರಿಕೆಯಿಂದ ಕುಗ್ಗಬೇಡ… ಪಾಂಡವರ ಸೊಕ್ಕನ್ನು ಮುರಿದು… ಹದಿನಾಲ್ಕು ಲೋಕದಲ್ಲಿಯೂ ಹರಡಿರುವ ಕತ್ತಲೆಯನ್ನು ಚೆದುರಿಸಿ ಆಕಾಶದೊಳಗೆ ಒಬ್ಬನೇ ಸೂರ್ಯ ಹೊಳೆದು ಬೆಳಗುವಂತೆ ಬೂಮಂಡಲದೊಳಗೆ ಒಬ್ಬನೇ ದುರ್ಯೋದನ … ಮತ್ತೊಬ್ಬರಿಲ್ಲ ಎಂದೆನಿಸಿ ತೋರುವಂತೆ ಮಾಡುತ್ತೇನೆ… ವಿದುರ.. ಬೀಶ್ಮ ಮೊದಲಾದವರು ನಿನ್ನ ಮನೆಯಲ್ಲಿ ಉಂಡುಟ್ಟು ಇತರರ ಏಳಿಗೆಯನ್ನು ಬಯಸುವರು. ನಮ್ಮನ್ನು ತೆಗಳುವರು. ಅವರುಗಳ ರೀತಿಯನ್ನು ನೀನೇ ಬಲ್ಲೆ. ಸಾಕಿನ್ನು ಅದರ ಮಾತೇಕೆ… ಒಡೆಯ, ನನ್ನ ಹೋರಾಟವನ್ನು ನೋಡು… ಗಮನ ಕೊಡು… . ಸಾಕು… ಇನ್ನು ಚಿಂತಸಬೇಡ” ಎಂದು ಕರ್ಣ ನುಡಿದನು.
ಕರ್ಣನು ಆಡಿದ ನುಡಿಗಳನ್ನು ಶಕುನಿಯು ಒಪ್ಪಿಕೊಳ್ಳುತ್ತ, ಈಗ ದುರ್ಯೋದನನನ್ನು ಕುರಿತು ಮಾತನಾಡಲು ತೊಡಗುತ್ತಾನೆ.
“ಕರ್ಣನು ಆಡಿದ ಈ ಮಾತು ದಿಟವಾಗಿದೆ. ಪಾಂಡವರು ಮಹಾ ಪರಾಕ್ರಮಿಗಳು. ಅವರನ್ನು ಗೆಲ್ಲುವುದು ಅಸಾದ್ಯ. ಕಪಟದ ಉಪಾಯ ಮಾರ್ಗದಲ್ಲಿ ಮಾತ್ರ ಹಿತರಲ್ಲದ ಅವರನ್ನು ಪರಿವಾರ ಸಮೇತ ಗೆಲ್ಲಬಹುದು. ನಿಮ್ಮ ಮನಸ್ಸಿಗೆ ಬಂದರೆ ನನ್ನ ಅಬಿಪ್ರಾಯವನ್ನು ಮನವಿಟ್ಟು ಕೇಳು” ಎಂದು ಶಕುನಿ ವಿನಂತಿಸಿಕೊಂಡನು… ಐದು ಮುಕ.. ಹತ್ತು ಬುಜ.. ಹದಿನೈದು ಕಣ್ಣುಗಳ ಉಗ್ರರೂಪದ ಶಿವನು ಬೂಮಿಯ ಮೇಲೆ ಒಂದು ತಲೆ, ಎರಡು ಬುಜವನ್ನು ಅಳವಡಿಸಿಕೊಂಡು ಬೀಮನೆಂಬ ಹೆಸರಿನಿಂದ ಹುಟ್ಟಿ ಬಂದಿದ್ದಾನೆ. ಅವನಿಗೆ ಎದುರಾಗಿ ಆಯುದವನ್ನು ಹಿಡಿದು ನಿಲ್ಲುವ ವೀರನು ಯಾವನು ತಾನು ಇದ್ದಾನೆ… ಹೇಳು..
ಅರಸ, ಕೇಳು, ಈ ಲೋಕದಲ್ಲಿ ಬಿಲ್ಲು ವಿದ್ಯೆಯಲ್ಲಿ ಯೋಗ್ಯತೆ ಇರುವವರು ಮೂವರು ಕಣಾ… ಅವರಲ್ಲಿ ಒಬ್ಬೊಬ್ಬರಿಗೆ ಒಂದು ಗುಣವಾದರೆ, ಅರ್ಜುನನಲ್ಲಿ ಮೂರೂ ಗುಣಗಳು ತುಂಬಿವೆ. ಅರ್ಜುನನಿಗೆ ಸರಿಸಮಾನವಾಗಿ ಎದುರಿಸಿ ನಿಂತು, ಜೀವವನ್ನು ಉಳಿಸಿಕೊಂಡು ಹಿಂತಿರುಗಿ ಬರಬಲ್ಲವನು ಯಾರಿದ್ದಾನೆ ಹೇಳು… ಒಂದು ವೇಳೆ ಅರ್ಜುನನಿಗೆ ಎದುರಾಗಿ ರಾಮಚಂದ್ರ-ಬೀಶ್ಮಾಚಾರ್ಯ—ದ್ರೋಣರು ಕಾಳೆಗವನ್ನು ಮಾಡಲು ತೊಡಗಿದರೆ, ರಾಮಚಂದ್ರನ ಎರಡು ಪಾದಗಳು… ಬೀಶ್ಮಾಚಾರ್ಯರ ತಲೆ… ಆ ಮಹಾರತನಾದ ದ್ರೋಣನ ಎದೆ ನಡುಗತೊಡಗುತ್ತವೆ.
ಒಳ್ಳೆಯ ಮನಸ್ಸಿನವನಾದ, ಅಂಜಿಕೆಯಿಲ್ಲದ, ಹೆಸರಾಂತ ಅರ್ಜುನನ ಎದುರಿನಲ್ಲಿ ಹೋರಾಡಲೆಂದು ನಿಲ್ಲುವ ಬಿಲ್ಲಾಳು ಲೋಕದಲ್ಲಿ ಯಾವನಿದ್ದಾನೆ… ಶತ್ರುಗಳನ್ನು ಸಂಹಾರ ಮಾಡಿ… ರಾಜ್ಯವನ್ನು ಆಕ್ರಮಿಸಿ ಆಳಬಲ್ಲೆ ಎಂಬ ಶಕ್ತಿ ಸಾಹಸ ಪರಾಕ್ರಮ ಗುಣಗಳು ನಿನ್ನಲ್ಲಿಲ್ಲ. ಪಾಂಡವರು ದೊಡ್ಡ ಶೂರರು… ಆದುದರಿಂದ ಕಪಟ ತಂತ್ರದ ಮೂಲಕ ಹಗೆಗಳಾದ ಅವರನ್ನು ಕಿತ್ತುಹಾಕಿ, ರಾಜ್ಯವನ್ನು ನೀನೊಬ್ಬನೇ ಆಳುವುದು ಸರಿಯಾದ ಮಾರ್ಗ ಎಂಬುದು ನನ್ನ ಸಲಹೆ.
ನೀವುಗಳು ಸೋದರರು. ನಿಮ್ಮಲ್ಲಿ ಒಡಕನ್ನುಂಟುಮಾಡುವುದು ಮರ್ಯಾದೆಯನ್ನು ತರುವ ಕೆಲಸವಲ್ಲ… ನಾವಾದರೋ ನಿಮ್ಮ ಪಾದದಡಿಯಲ್ಲಿನ ಅರಮನೆಯ ಸೇವಕರು… ಕೆಲವರು ಪಾಂಡವರಿಗೆ ಮತ್ತು ನಿನಗೆ ಸಮಾನವಾಗಿ ರಾಜ್ಯ ದೊರೆಯಬೇಕು ಎಂದು ವಾದಿಸುತ್ತಾರೆ… ನಮಗಾದರೆ ಕಂಡದ್ದನ್ನು ಕಂಡಂತೆಯೇ ಹೇಳಬೇಕು. ನನ್ನ ಸಲಹೆಯನ್ನು ಬೇಕಾದರೆ ಸ್ವೀಕರಿಸು ಇಲ್ಲವೆ ನಿನ್ನ ಮನಸ್ಸಿಗೆ ಒಪ್ಪಿಗೆಯಾಗದಿದ್ದರೆ ಬಿಡು…
ಲೋಕದಲ್ಲಿ ಇರುವುದು ಎರಡೇ ಕುಲ. ಒಂದು ತಂದೆಯ ಕುಲ… ಇನ್ನೊಂದು ತಾಯಿಯ ಕುಲ. ತಂದೆಯ ಕುಲದವರು ಹಗೆಗಳು… ತಾಯಿಯ ಕುಲದವರು ಒಲವಿನವರು. ಹಗೆಗಳಾದ ತಂದೆಯ ಕುಲದವರು ತಕ್ಶಕನ ರೀತಿಯಲ್ಲಿ ನಿಮ್ಮನ್ನು ಕಬಳಿಸುತ್ತಾರೆ. ಪಾಂಡುಪುತ್ರರನ್ನು ನೀನು ಯಾವ ಕುಲದವರೆಂದು ನೋಡಲು ಬಯಸುತ್ತೀಯೆ… ಹಗೆಯ ಕುಲದವರೆಂದೋ ಇಲ್ಲವೇ ಒಲವಿನ ಕುಲದವರೆಂದೋ… ಸಸಿಯ ಬೆಳವಣಿಗೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಬಲಿತು ಮರವಾದ ಬಳಿಕ ಅದು ನಿನ್ನ ಇಚ್ಚೆಯಂತೆ ಬಾಗುವುದೇ…
ರಾಜ್ಯದಲ್ಲಿ ಅರ್ದ ಬಾಗವನ್ನು ಕೊಟ್ಟು ಹಗೆಗಳನ್ನು ಶಕ್ತಸಂಪನ್ನರಾಗಿಸಿದ ಬಳಿಕ ಅವರನ್ನು ಯಾರು ತಾನೆ ಗೆಲ್ಲುತ್ತಾನೆ… ದೇವದಾನವರೊಳಗೆ ಬೀಮಾರ್ಜುನರ ಕಯ್ ಮನದ ಶಕ್ತಿ ಏನೆಂಬುದನ್ನು ನೀನು ತಿಳಿದಿಲ್ಲವೇ… ಹಗೆಯನ್ನು ಈಗಲೇ ನಾಶಮಾಡದಿದ್ದರೆ, ಅನಂತರ ಬಹಳ ಕಶ್ಟವಾಗುತ್ತದೆ. ಬೂಮಂಡಲದಲ್ಲಿ ಇರುವೆಗಳು/ಗೆಜ್ಜಲು ಹುಳುಗಳು ದೊಡ್ಡದಾಗಿ ಕಟ್ಟಿದ ಹುತ್ತದೊಳಗೆ ಕರಿಯ ನಾಗರಹಾವು ಒಳಹೊಕ್ಕು ತನ್ನ ನೆಲೆಯಾಗಿಸಿಕೊಳ್ಳುವಂತೆ ಹಗೆಗಳಾದ ಕುಂತಿಯ ಮಕ್ಕಳು ಹಗೆತನದಿಂದ ರಾಜ್ಯದ ಸಪ್ತಾಂಗಗಳನ್ನು ಕೊಳ್ಳೆ ಹೊಡೆದು ಬಿಡುತ್ತಾರೆ… ಇದು ನಿಶ್ಚಿತ.
ಹಾಗೆ ಆಗುವುದನ್ನು ತಡೆಗಟ್ಟಲು ಈಗಲೇ ವಿಚಾರ ಮಾಡಬೇಕು. ಹಿಂದೆ ನೀನು ಅವರುಗಳನ್ನು ನಾನಾ ಬಗೆಯಲ್ಲಿ ಹಿಂಸಿಸಿದೆ. ಅದರಿಂದ ಮನಸ್ಸಿನಲ್ಲುಂಟಾಗಿರುವ ಗಾಸಿಯನ್ನು ಅವರು ಮರೆಯುವುದಿಲ್ಲ. ಈಗ ಅವರು ಬಿಕ್ಕಟ್ಟಿನಲ್ಲಿ ಬಾಳುತ್ತಿದ್ದಾರೆ. ಈಗಲೇ ಆ ಪಾಂಡು ಪುತ್ರರನ್ನು ನಾಶಗೊಳಿಸದೆ ಬಿಟ್ಟೆಯಾದರೆ ಮುಂದಿನ ರಾಜ್ಯಕಾರ್ಯವು ಜಟಿಲವಾಗುತ್ತದೆ. ಹಳ್ಳದಲ್ಲಿ ಬಿದ್ದಿರುವ ಹುಲಿಯನ್ನು ಕೊಂದು ಹಾಕದೆ, ಅದನ್ನು ಬಯಲಿಗೆ ಬರಲು ಬಿಟ್ಟು. ಆಮೇಲೆ ಕೊಲ್ಲಲು ಆಗುತ್ತದೆಯೇ… ಹಾಗೆ ಬಿಟ್ಟರೆ ಆ ಬಳಿಕ ಅದು ಬಿಟ್ಟವನನ್ನು ಕೊಂದು ಗರ್ಜಿಸದೇ ಇರುವುದೇ… ನಿಮ್ಮನ್ನು ಕಂಡು ಕರುಬುವ ಪಾಂಡವರ ನಾಶÀದ ಬಗೆಗೆ ಈಗಲೇ ಉಪಾಯವನ್ನು ಯೋಚಿಸು.
ಈಗಿರುವ ಬಿಕ್ಕಟ್ಟಿನಿಂದ ಅವರು ಪಾರಾದರೆ ನಿಮ್ಮನ್ನೆಲ್ಲಾ ಕತ್ತರಿಸಿ ಬಿಸಾಡದೆ ಬಿಡುತ್ತಾರೆಯೇ… ಹೇಳು. ಅವರು ಕಾಡಿನಲ್ಲಿ ಹುಟ್ಟಿದರು. ಕಾಡಿನಲ್ಲೇ ಬೆಳೆದರು. ಇನ್ನು ಅವರ ಬಾಳಿಕೆಗೆ ಕಾಡೇ ನೆಲೆಮನೆಯಲ್ಲದೆ, ಬೂಮಿಯ ಒಡೆತನ ಸಲ್ಲದು. ಅವರನ್ನು ಕಾಪಾಡಿ ಅವರಿಗೆ ರಾಜ್ಯವನ್ನು ಕೊಡುವುದು ಯಾವ ರೀತಿಯಿಂದಲೂ ಒಪ್ಪುವ ಮಾತಲ್ಲ. ಗೂಗೆಗಳು ಹಗಲು ಹೊತ್ತನ್ನು… ರಕ್ಕಸರು ದೇವತೆಗಳ ಏಳಿಗೆಯನ್ನು… ಕತ್ತಲೆಯು ಸೂರ್ಯನ ಬೆಳಕಿನ ಕಿರಣಗಳನ್ನು… ಕಳ್ಳನು ಹೆಚ್ಚು ಕಾಲ ನಿದ್ರೆಯನ್ನು… ಕರಿಯ ನಾಗರ ಗರುಡನ ಉಳಿವನ್ನು ಸಹಿಸದಿರುವಂತೆ ಪಾಂಡವರು ನಿನ್ನ ಏಳಿಗೆಯನ್ನು ಸಹಿಸರು. ಈಗ ನಾನು ಹೇಳುವುದನ್ನು ಮನವಿಟ್ಟು ಕೇಳು.
ಬಯಂಕರನಾದ ರುದ್ರನು ಹೆಚ್ಚಿನ ಕೋಪದಿಂದ ಕೆರಳಿ ತನ್ನ ಹಣೆಗಣ್ಣಿನ ಬೆಂಕಿಯಿಂದ ಕಾಮನನ್ನು ಸುಟ್ಟಂತೆ, ಹಗೆಗಳಾದ ಕುಂತೀ ಕುಮಾರಕರನ್ನು ಅರಗಿನ ಮನೆಯಲ್ಲಿ ಸುಟ್ಟು ನಾಶಪಡಿಸುವುದು. ಹಗೆಗಳನ್ನು ಕೊನೆಗಾಣಿಸದಿದ್ದರೆ, ರಾಜಕಾರ್ಯ ತುಂಬಾ ತೊಡಕಿನದಾಗುತ್ತದೆ. ಇಶ್ಟೊಂದು ಯೋಚಿಸುವುದೇಕೆ.. ದುರ್ಯೋದನ, ನಿಮಗೆ ನಾನು ಒಂದು ಅನುಕೂಲ ಸನ್ನಿವೇಶವನ್ನು ಅರಿಕೆ ಮಾಡುತ್ತೇನೆ. ಪಾಂಡವರ ನೆರಳಿದ್ದರೆ ನಿನಗೆ ರಾಜ್ಯವನ್ನು ಆಳುವ ಅವಕಾಶ ದಕ್ಕುವುದಿಲ್ಲ. ಈ ಸಮಯದಲ್ಲಿ ಒಂದು ಉಪಾಯವನ್ನು ಆಲೋಚಿಸು” ಎಂದು ಶಕುನಿ ಕೈಮುಗಿದು ಕೇಳಿಕೊಂಡನು. ಮತ್ತೆ ಶಕುನಿಯು ತನ್ನ ಮಾತನ್ನು ಮುಂದುವರಿಸಿದನು.
“ಬೇಟೆಗಾರನ ಇಂಪಾದ ದನಿಯನ್ನು ಕೇಳಿ ಮರುಳುಗೊಂಡು ಬಂದು ಬಲೆಯೊಳಗೆ ಬಿದ್ದ ಹುಲಿಯಂತೆ… ಗಾನಕ್ಕೆ ಮನಸೋತು ಮುಂದೆ ಕಾದಿರುವ ಸಾವನ್ನು ಅರಿಯದೆ ಕಾಡಿನಲ್ಲಿ ಬೇಟೆಗಾರನು ಒಡ್ಡಿದ ಬಲೆಯೊಳಗೆ ಸಿಕ್ಕಿಕೊಂಡ ಜಿಂಕೆಯಂತೆ… ದೊಡ್ಡ ಗುಂಡಿಯಲ್ಲಿ ಕೆಡೆದು ಬಿದ್ದ ಆನೆಯಂತೆ… ಶತ್ರುರಾಜರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಅವರ ಏಳಿಗೆಯನ್ನು ನಾಶಗೊಳಿಸಬೇಕು.”
ಈ ರೀತಿಯಲ್ಲಿ ಶಕುನಿಯು ನಾನಾ ರೀತಿಗಳಲ್ಲಿ ಕೆಟ್ಟ ಉಪದೇಶಗಳನ್ನು ಹೇಳಿ, ಒಳ್ಳೆಯ ನೀತಿಯನ್ನು ವಿರೂಪಗೊಳಿಸಿ… ಕುರುವಂಶದ ರಾಜಕುಮಾರರ ಒಡಕಿಗೆ ದಾರಿಯನ್ನು ಕಾಣಿಸಿ ದುರ್ಯೋದನನಿಗೆ ಆನಂದವುಂಟುಮಾಡಿದನು. ಜನಮೇಜಯ ಮಹಾರಾಜನೇ ಕೇಳು… ಹೀಗೆ ಮಾಡಿ ಶಕುನಿಯು ಲೋಕಕ್ಕೆ ಕೇಡನ್ನು ಉಂಟುಮಾಡಿದನು ಎಂದು ವೈಶಂಪಾಯನ ಮುನಿಯು ಹೇಳಿದನು.
ಆಗ ದುರ್ಯೋದನನು ಶಕುನಿಯ ಮಾತಿಗೆ ತಲೆದೂಗುತ್ತ
“ನಮ್ಮ ಮಾನ, ಅಪಮಾನಗಳು ನಿಮ್ಮದೂ ಆಗಿದೆ. ಅಲ್ಲದೆ ನಮ್ಮ ಆತ್ಮೀಯವಾದ ನಂಟಿನಲ್ಲಿ ನಿಮಗಿಂತ ಹಿತವಂತರನ್ನು ನಾನು ಕಾಣೆ. ಇನ್ನು ನಿಮ್ಮ ಒಪ್ಪಿಗೆಯಿಂದ ಪಾಂಡವರನ್ನು ಬೆಂಕಿಯಲ್ಲಿ ಸುಡುವ ಯೋಜನೆಯನ್ನು ರೂಪಿಸುವೆನು. ಈ ಯೋಜನೆ ನೆರವೇರಿದರೆ, ಅದು ನಮ್ಮ ಪುಣ್ಯೋದಯದ ಪಲವಾಗುತ್ತದೆ” ಎಂದು ತನ್ನ ಮನದ ನಿಶ್ಚಯವನ್ನು ತಿಳಿಸಿದನು. ದುರ್ಯೋದನನ ಮಾತಿಗೆ ಶಕುನಿ ಮೊದಲಾದವರು ತಮ್ಮ ತಮ್ಮ ಒಪ್ಪಿಗೆಯನ್ನು ತಿಳಿಸಿದರು. ದುರ್ಯೋದನನು ತನ್ನ ಮನದಲ್ಲಿ ಪಾಂಡವರಿಗೆ ಕೆಡುಕನ್ನು ನಿಶ್ಚಯಿಸಿದನು.
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು