ಕುಮಾರವ್ಯಾಸ ಬಾರತ ಓದು-ಆದಿ ಪರ್ವ-ದ್ರೌಪದಿಯ ಸ್ವಯಂವರ-ಎರಡನೆಯ ಹಂತ-ನೋಟ-27
ಪ್ರಸಂಗ-27
ದ್ರೌಪದಿಯ ಸ್ವಯಂವರ–ಎರಡನೆಯ ಹಂತ
(ಆದಿಪರ್ವ: ಹದಿನಾಲ್ಕನೆಯ ಸಂದಿ: ಪದ್ಯ 1-34)
ಪಾತ್ರಗಳು:
ರಾಜ ಬಟ: ರಾಜನ ಆದೇಶವನ್ನು ಒಡ್ಡೋಲಗದಲ್ಲಿ ಸಾರುವವನು.
ಜರಾಸಂದ: ಮಗದ ದೇಶದ ರಾಜ.
ಶಿಶುಪಾಲ: ಚೇದಿ ದೇಶದ ರಾಜ.
ಶಲ್ಯ: ಮದ್ರ ದೇಶದ ರಾಜ.
ಕರ್ಣ: ಅಂಗರಾಜ್ಯದ ರಾಜ.
ಬಲರಾಮ: ದ್ವಾರಾವತಿ ಪಟ್ಟಣದ ರಾಜ. ಕ್ರಿಶ್ಣನ ಅಣ್ಣ.
ಕ್ರಿಶ್ಣ: ಬಲರಾಮನ ತಮ್ಮ. ಪಾಂಡವರ ಹಿತಚಿಂತಕ.
ದ್ರುಪದ: ಚತ್ರಾವತಿ ನಗರದ ರಾಜ. ದ್ರೌಪದಿಯ ತಂದೆ.
ರಾಜ ಪರಿವಾರ: ರಾಜನ ಒಡ್ಡೋಲಗದಲ್ಲಿರುವ ವ್ಯಕ್ತಿಗಳು.
ಸಕಿಯರು: ದ್ರೌಪದಿಯ ಸೇವಕಿಯರು.
*** ದ್ರೌಪದಿಯ ಸ್ವಯಂವರ-ಎರಡನೆಯ ಹಂತ ***
ಕೇಳು ಜನಮೇಜಯ ನೃಪತಿ, ಪಾಂಚಾಲೆ ಭದ್ರಮಂಟಪ ಶಾಲೆಯನು ಪೊಕ್ಕಳು…ಮನ್ಮಥನ ಒಡ್ಡು ಸತಿಯೊಡನೆ ಮರಳಿದುದು…ಡಂಗುರವ ಹೊಯ್ದು…
ರಾಜ ಭಟ: ಬಾಲೆಯನು ನಿಜರೂಪ ದರ್ಪದೊಳು ಆಳಲು ಅರಿದಿರೆ… ಬಾಹುಬಲದಲಿ ಸೋಲಿಸುವಡೆ ಅನುವಾಗಿ…ಇದೆ ಮಹಾಧನು…ಇದೆ ಬಾಣ ಪಂಚಕ…ನಭೋಗ್ರದ ಯಂತ್ರ ಹೊಳವುತ್ತಿದೆ…ಇದುವೆ ಕಬ್ಬಿನ ಬಿಲು…ಇದು ಕುಸುಮಮಯ ಶರಾವಳಿ. ಆವನು ಯಂತ್ರವ ವಿಭಾಡಿಸಿ ಬಾಹು ವಿಕ್ರಮವ ಮೆರೆವನು…ಆತನೆ ಅಬಲೆಯ ಹೃದಯ ರಮಣನು… ಆತನೆ ಕುಸುಮ ಶರನು.
(ಎಂದು ಸಾರಿದು…ಭಾರಿ ಧನುವನು ತಂದು ಧರೆಗೆ ಇಳುಹಿದರು…ಗಗನದಲಿ ಗವಸಣಿಗೆಗಳನು ಉಗಿದು…ಯಂತ್ರವನು ಅಂದವಿಟ್ಟರು…ಮುಂದೆ ಕೂರಂಬುಗಳ ಥರಥರದಿಂದ ನಿಲಿಸಿ…ವೈದಿಕ ವಿಧಾನದಲಿ ಸುಗಂಧದ ಅಕ್ಷತೆಯಿಂದ ಪೂಜೆಯ ರಚಿಸಿದರು…ಬಹು ವಾದ್ಯರವ ಮಸಗಿದುದು… ಘನಯಂತ್ರ ಭೇದಿಗಳ ಆವರ್ಜಿಸುವ ವೋಲ್ ನಿಪ್ಪಸರದಲಿ ನಿಸ್ಸಾಳತತಿ ಗರ್ಜಿಸಿದವು. ಇತ್ತಲು ಚಾಪ ಗರುವರಿಗೆ ಒಸಗೆಯಾಟವೊ…ಬಿಲ್ಲ ಹೊಯ್ಲಿನ ಹಸುಗೆಯಾಟವೊ…ಗಂಗಸೆಯ ಮಾಡಿತು…ಭೂಪ ಕೇಳೆಂದ…ನೆರವಿಯಲಿ ನಾನಾ ದಿಗಂತದ ಧರಣಿಪತಿಗಳು ಹಮ್ಮಿಕೆಯಲಿ ಉಬ್ಬರಿಸಿ ಹೊಕ್ಕರು…ಬೇರೆ ಬೇರೆ ಒಬ್ಬೊಬ್ಬರು ಉರವಣಿಸಿ ಹರಗಿರಿಗೆ ಹುಲು ರಕ್ಕಸರು ಮತ್ಸರಿಸುವಂತಾಯ್ತು…ಏನನೆಂಬೆನು…ಧರೆಯ ಬಿಡದ ಈ ಧನು…ಅವನಿಪರ ವಿಭಾಡಿಸಿ ಕೆಡಹಿತು…ಹಾರ ಹರಿದುದು…ಕರ್ಣಪೂರದ ಚಾರುಮಣಿಗಳು ಸಡಲಿದುವು…ಪದ ವೀರ ನೇವುರ ನೆಗ್ಗಿದವು…ನೆನಹುಗಳು ಕುಗ್ಗಿದವು… ನಾರಿಯರ ಕೈಹೊಯ್ಲ ನಗೆಯ ನಿಹಾರ ಜಡಿದುದು…ಮುಸುಕುದಲೆಯ ಮಹೀರಮಣರು ಓಸರಿಸಿ ಸಿಂಹಾಸನವ ಸಾರಿದರು.)
ರಾಜರು-1: ಈ ಧನು ಮಿಡುಕದು…ನಮ್ಮ ಝಾಡಿಸಿ ಕೆಡಹಿತು…ಅದನು ಇನ್ನಾರು ಕೊರಳಲಿ ಯಂತ್ರದಲಿ ಶರವ ತೊಡಿಸಿ…ತಿರುವನು ಸೆಳೆದು ಬಿಡುವರೊ… ಕಡುಹಿನಣ್ಣನ ಕಾಂಬೆವೈಸಲೆ…ನುಡಿದು ಮಾಡುವುದೇನು
(ಎನುತ ಸಿರಿಮುಡಿಯ ಮುಸುಕಿನ ರಾಯರು…ಬಯಲ ಬಿಂಕದಲಿ ಇದ್ದರು.)
ಜರಾಸಂಧ: ಎಮಗೆ ಸೌಭಾಗ್ಯ ಐಸಲೇ…ದ್ರುಪದಸುತೆ ಶರಾಸನ ಆಕರುಷಣದೊಳು…ಅತಿ ಡೊಳ್ಳಾಸದಲಿ ಡಾವರಿಸಿ…ನೃಪರ ಗೆಲಿದಳು…ಲೇಸು…ಇದಕೆ ತಪ್ಪೇನು.
(ಎನುತ ಭದ್ರಾಸನವನು ಇಳಿದು…ಉಲಿವ ತೊಡರಿನ ಘೋಷಣೆಯ ಘಳಿಲುಗಳ ಮಗಧ ನೃಪಾಲನೈತಂದ…ಚೌಪಟಮಲ್ಲ ಬಿಲ್ಲ ಹೊರೆಗೈದಿದನು… ನೋಡಿದನೈಸಲೇ…ತಪ್ಪಲ್ಲ ಎನುತ…ಮುಂಗೈಯ ಸರಪಣಿಯ ಮೇಲ್ದಿರುಹಿದನು…ಬಿಲ್ಲನು ಎತ್ತಿದರೆ..)
ಸಖಿಯರು: ಇವನನು ಅಂಗನೆಯು ಒಲ್ಲಳೋ…ಮೇಣ್ …ಒಲಿವಳೋ…ಮಿಗೆ ಬಲ್ಲಿದನು ತಾನೀತನು.
(ಎನುತ ಸಖೀನಿವಹ ಇರ್ದುದು…ಈತ ಕುಸಿದು ಎತ್ತಿದಡೆ…ಧನು ಮಾರಾತುದು…ಇವನು ಔಕಿದಡೆ…ಕಾರ್ಮುಕ ಈತನು ಆರೆಂದು ಅರಿಯದು… ಇವನು ಔಡೊತ್ತಿ ಮೈಬಲಿದು ಘಾತಿಯಲಿ ಘಲ್ಲಿಸಿದಡೆ…ಆ ಧನು ಸೋತುದೆ… ಎವೆಯಂತರಕೆ ತೊಲಗದು…ಧಾತುಗುಂದಿದನು…ಮಾಗಧನ ಅಳ್ಳೆಗಳು ಅಳ್ಳಿರಿದವು…ಬೆಮರನು ಆರಿಸಿಕೊಂಡು…ವಿಗತಶ್ರಮನು ದಂಡೆಯೊಳು ಮೊಳಕಾಲಿಕ್ಕಿ…ಅಮರಿ ದೇಹವ ಬಲಿದು…ವಕ್ಷದೊಳು ಔಂಕಿ…ಗಾಢದಲಿ ಕುಮತಿಯು ಅಲ್ಲಾಡಿದರೆ…ಅಮಮ…ಜವೆ ಮಾತ್ರಕ್ಕೆ ಬಿಟ್ಟುದು…ಘನ ವಿಕ್ರಮವನು ಒಡೆದುದು…ಆತನ ಗರ್ವವಿಭ್ರಮವ ಸದೆದುದು…ಕಾಂತಾ ಕದಂಬದ ಘೋಳುಘೊಳು ಘೋಳೆಂಬ ನಗೆಗಳ ಕೇಳಿದನು…)
ಜರಾಸಂಧ: ( ತನ್ನಲ್ಲಿಯೇ ) ಕಾಳು ಮಾಡಿದೆನೇಕೆ…ಧನು ತಾನೇಕೆ ಸುಡು.
(ಎನುತ ಬೇಳುವೆಯಲಿ ಉಡಿದ ಅಂಕದವೊಲು… ಉಬ್ಬಾಳುತನ ಪೈಸರಿಸೆ…ಕಡೆಯವ ಕಿರುದೊಡೆಗೆ ತಿರುಗಿ…ಮುಸುಕಿನ ಮೌಳಿ ಹಿಮ್ಮೆಟ್ಟಿದನು…ದಮಘೋಷನಂದನನು ಕೆರಳಿದನು…)
ಶಿಶುಪಾಲ: ಅರರೆ…ದಿಟ್ಟನ…ವಿಗಡ ಚಕ್ರಾಯುಧನ ಮಾಗಧನ…ಧನು ವಿಭಾಡಿಸಿ ತೆರಳಿಚಿತಲಾ…ಆ ಹರಿಬ ಎನ್ನದು…ದುರುಳ ಧನುವನು ಹೊಳ್ಳುಗಳೆವೆನು…ನಗುವ ಕೈನೆಯ ತುರುಬ ಕೊಯ್ಸುವೆನು.
(ಎನುತ ಕಲಿ ಶಿಶುಪಾಲನೈತಂದ.)
ಸಭಿಕರು: ಮುನ್ನಿನ ಭವದೊಳಗೆ ಇವನಲೇ ರಾವಣನು…ತಪ್ಪಿಲ್ಲ ಎನುತ… ಕೋಮಲಾಂಗಿಯ ಪುಣ್ಯವೆಂತು.
( ಎನುತ ಜನ ನಿವಹ ನಡುಗಿತು…ಅವನಿಪತಿ ಕೇಳು, ಇವ ಚಾಪವನು ಅಣೆದನು…ಧನುವ ಬೋಳೈಸಿದನು…ಬಲುಹೋ ಶಿವ ಎನುತ ಸೀವರಿಸಿದನು… ಡಾವರಿಸಿದನು…ಏನನು ಎಂಬೆನು…ಧನು ಸಘಾಡದ ಮಾನಭಂಗದ ಮೊದಲ ಮನೆಯೆನೆ…ಮಾನಿನಿಯರ ಅಪಹಾಸ್ಯ…ಈ ಜನರ…ಈ ನೃಪಾಲಕರ ಹೀನ
ನುಡಿಗಳ ಕಂಡು…ದೈತ್ಯ ಸಮಾನ…ಮನದಲಿ ನೊಂದು ತಿರುಗಿದನು…ಏನನು ಎಂಬೆನು…ಆತನ ಗರ್ವವಿಭ್ರಮವ ಸದೆದುದು ಕಂಡು…ಮಾಗಧ ಕರೆದನು.)
ಜರಾಸಂಧ: ಈ ಧನು ಚಂಡಿಯಿದು…ನಮಗಲ್ಲ…ನಾವ್ ಮುಂಕೊಂಡು ತಪ್ಪಿತು ನೊಪ್ಪಿತಾದುದು…ಈ ಭೂಮಿಪರು ಭಾರಿ ಅಗ್ಗಳಿಕೆ ಭಂಡರು…ದ್ರುಪದನ ಗುಂಡು ತೊತ್ತಿರು ನಗೆಯನು…ಇವರು ಮಂಡೆಗಳಲಿ ಆನಲಿ.
( ಎನುತ ತಮ್ಮ ಪಟ್ಟಣಕೆ ಹಾಯ್ದರು…ಚೈದ್ಯ ಮಾಗಧರು ಗರುವರಲ್ಲಾ ಇರದೆ ತಮ್ಮಯ ಪುರಕೆ ಗಮಿಸಿದರು…ಅರಸುಗಳ…ಮಿಕ್ಕವರ ವಿಧಿಯನು ಕೇಳು ನರನಾಥ ).
ರಾಜ ಪರಿವಾರ: ಧರಧುರದೊಳು ಅಭಿಮಾನಹಾನಿ ಬಿಲು ಹೋರಟೆಗೆ ನಿಲಲು ಹುರುಳಹುದು.
(ಎನುತ್ತ ನೆರೆದ ನೃಪನಿಕರ ಅಂಗವಣೆಗುಂದಿತು.)
ಶಲ್ಯ: ದುರುಳ ಪಾಂಚಾಲನ ಕುಮಾರಿಯವರ ಕಟಾಕ್ಷದ ಬೀಸುವಲೆಯಲಿ… ಶರ ಮಹಾಧನುವೆಂಬ ಬಲುದಡಿವಲೆಯನು ಅಳವಡಿಸಿ…ಧರಣಿಪಾಲ ಮೃಗಂಗಳನು ಸಲೆ ಬರಿಸಿ ಸದೆದನು…ಹೊಲ್ಲೆಹ ಏನಂತಿರಲಿ ನೋಡುವೆನು.
(ಎನುತ ಶಲ್ಯನೃಪಾಲನು ಐತಂದ.)
ಸಖಿಯರು: ಆ ಮಗಧ ಅಗ್ಗಳೆಯನು…ಶಿಶುಪಾಲ ಮಾತಿನಲಿ ಅಗ್ಗಿಗನು… ಸೋಲದ ಸುಗ್ಗಿಯು ಇಬ್ಬರಿಗಾಯ್ತು…ರಣಧೂಳಿ ಹಲಬರಿಗಾಯ್ತು…ಧನು ತಗ್ಗುವುದೊ ಧನು ವಿಘಾತಿಗೆ ಮುಗ್ಗುವನೊ…ಇವರೊಳಗೆ ಮಾದ್ರೇಶನು ಅಗ್ಗಳೆಯನಹನು.
(ಎಂದು ನಾರಿಯರು ಅಂದು ನೋಡಿದರು…ಈತನು ಬಂದನು…ಧನುವ ಸಾರಿದು ನಿಂದು ಸಂವರಿಸಿದನು…ಕಾಂತಾವೃಂದವನು ನೋಡಿದನು…ಮನದಲಿ ಧಿಕ್ಕು ಧಿಗಿಲ್ ಎನುತ…ಸಂದಣಿಯ ನಭಕೊತ್ತಿ…ಫಣಿಯಲಿ ಮಂದರವ ಬಿಗಿವಂತೆ ಭುಜದಲಿ ಮುಂದುವರಿದು…ದಂಡೆಯನಿಕ್ಕಿ…ಕೋಪದಲಿ ಅವುಚಿದನು…ಈ ಧನು ಕೊಳ್ಳದು…ಈತನು ಉಬ್ಬಿನೊಳು ಅಳ್ಳೆಗೊಬ್ಬಿನೊಳು ಔಕಿ…ತೊಡರಿನ ಘಲ್ಲಣೆಯ ಘನಕೆ ಉಲಿಯೆ…ನಿಮಿಷ ಮಾತ್ರದಲಿ ಪಂಟಿಸಿ…ಬಿಲ್ಲು ಬಿಡದೆ ಡೊಳ್ಳು ಮೇಲಾಗಿ ಅವನಿಯಲಿ ಬಿದ್ದನು ಇತ್ತ…ಸತಿಯರು ಘೊಳ್ಳೆನಲು..)
ಶಲ್ಯ: ಘೋರ ಧನುವನು ಸುಡು.
(ಎನುತ್ತ ಹೊರದೆಗೆದ.)
ಕರ್ಣ: ಮಾದ್ರೇಶನು ಹಿಂಗಿದನು…ಈ ಧನು ಮಾನ್ಯರನು ಭಂಗಿಸಿತು…ಜಡವಿದು ಜಂಗಮತ್ವದಲಿ ಏನಹುದೊ…ಜಗವ ಝೋಂಪಿಸಿತಲೈ…ರಾಯಂಗೆ ಅಂಗನಾ ಪಾಣಿಗ್ರಹಣ…ತಾನು ಈ ದುಷ್ಟ ಧನುವನು ಭಂಗಬಡಿಸದೆ ಬಿಡೆನು.
(ಎನುತ ಕಲಿ ಕರ್ಣನೈತಂದ.)
ಸಖಿಯರು: ಈತನ ಅರ್ಜುನನಲ್ಲಲೇ…ರೂಪಾತಿಶಯವುಳ್ಳಾತ…ಈತ ಯಂತ್ರವನು ಗೆಲಿದರೆ ಪುಣ್ಯವೈಸಲೆ…ಈತ ತಂಗಿಗೆ ಅನುಸಾರಿ ವರನಹುದು. ( ಎನುತ ಲಲನಾಜಾತವು ಆತನನು ಈಕ್ಷಿಸುತ… ಸಂಪ್ರೀತಿಯಲಿ ಕೊಂಡಾಡುತಿರ್ದುದು…ರಾಯ ಕೇಳೆಂದ. ಚಾಪವನು ತುಡುಕಿದನು…ಮಹಿಯಿಮ್
ಮಿಡುಕದಿರೆ…ದಂಡೆಯನಿಕ್ಕಿ ಮಂಡಳಿಸಿ ಝಾಡಿಸಿ ಜಡಿದು… ಕೋಪದಲಿ ಜರೆದು ಔಂಕಿದನು…ಸತ್ವಾತಿಶಯವು ಹೊಡಕರಿಸಿ ಇಮ್ಮಡಿಸೆ… ಸರ್ಷಪಮಾತ್ರ ತಿರುವನು ತೊಡಿಸಲು ಅರಿಯದೆ ಹಿಂಗಿ…ಆ ಕರ್ಣ ಮೌನದೊಳು ಇರ್ದನು.)
ರಾಜರ ಪರಿವಾರ: ಬಹುಭುವನಪತಿಗಳು ಇವರು ನಾಲ್ವರಿಗೆ ಒಂದೆ ಪಥ… ಹಲರು ಅವಗಡಿಸಿ ಮುನ್ನ ಅಳುಕಿದರು…ಬಾವನ್ನವನು ವೇಷ್ಟಿಸಿ ಭುಜಗವಿದೆ… ಭಾಮಿನಿಯ ಮುಂದೆ ಭಾರಿ ಧನುವಿದೆ…ಎವಗೆ ತವಗೆ ಇದು ವಶವೆ.
(ಎಂದು ಅವನಿಪರು ಭಯಮುಖದ ದುಗುಡದಲಿ ಹೊರಗುಂದಿದರು…ಕ್ಷಿತಿಪ ಕೇಳೈ, ವಿಗಡ ಚಾಪ ವ್ಯತಿಕರಕೆ…ದುರ್ಯೋಧನಾದಿ ಕ್ಷಿತಿಪತಿಗಳು ಅಂಜಿದುದ ಬಲರಾಮ ಕಂಡನು…ನಗುತ…)
ಬಲರಾಮ: ಉದ್ಧತನಲಾ ಪಾಂಚಾಲನು…ಕೃತಕ ಧನುವನು ಮುರಿದು… ದ್ರುಪದನ ಸುತೆಯ ಮುಂದಲೆವಿಡಿದು ತಹೆನು.
(ಎನುತ ವರಾಸನವ ಇಳಿದನು…ಹಲಧರನ ಮಸಕವನು ನಳಿನನಾಭನು ಕಂಡನು.)
ಕೃಷ್ಣ: ಇದೇನು…ಪೀಠವನು ಇಳಿದಿರಿ…ಎಲ್ಲಿಗೆ ಗಮನವು…ಆವುದು ನಿಮಗೆ ಕಾರ್ಯಗತಿ ತಿಳುಹಿ. (ಎನೆ)
ಬಲರಾಮ: ಬೇರೇನು…ಯಂತ್ರವ ಕಳಚಿ ಬಿಸುಟು…ಲತಾಂಗಿಯನು ಹಿಡಿದೆಳೆದು ತಹೆನು. (ಎನಲು)
ಕೃಷ್ಣ: ಐಸಲೇ ಕೇಳು…ಇಂದು ನಿಮಗೆ ಕುಂತೀ ಮಾನಿನಿಯರು ಏನಹರು… ಅತ್ತೆಯರಲೇ…ತತ್ಸೂನುಗಳು ಮೈದುನರು…ತತ್ ಪತ್ನಿಯರು ತಂಗಿಯರು… ಸಾನುರಾಗವೆ ಮನಕೆ…ಸಂಶಯವೇನು…ಇದಕೆ ತಪ್ಪಿಲ್ಲ…ಕುಂತೀ ಸೂನುಗಳು ದ್ರೌಪತಿಗೆ ರಮಣರು…ನೀವು ನೋಡಿ.
(ಎಂದ…ಬಲರಾಮನು ಮೂಗಿನಲಿ ಬೆರಳಿಟ್ಟು…ಮಕುಟವ ತೂಗಿದನು.)
ಬಲರಾಮ: ಅವನಿಯ ನೀಗಿ ಹೋದರ ಮಾತು…ಪಾಂಡವರು ಎತ್ತಲು ಇವಳೆತ್ತ…ಲೋಕವರಿಯೆ ಬೇಗುದಿಯೊಳು ಉರಿಯ ಅರಮನೆಯೊಳು ಒಂದಾಗಿ ಬೆಂದರು… ಶಠಾಗಮಿಕ, ನಿನಗೆ ಅಂಜುವೆನು ತಾನು.
(ಎನುತ ಕೈಮುಗಿದ.)
ಕೃಷ್ಣ: ಕ್ಷಿತಿಯೊಳು ಅವರು ಇಲ್ಲೆಂದು…ದ್ರುಪದನ ಸುತೆಗೆ ಪತಿ ಪರರು ಎಂದು… ಯಂತ್ರಚ್ಯುತಿಗೆ ನೀವು ಉಂಟೆಂದು…ನಿಮ್ಮ ಚಿತ್ತದಲಿ ತೋರಿತೆ…ಕ್ಷಿತಿಗೆ ಪಾಂಡವರಲ್ಲದೆ ಇಲ್ಲಿ ಈ ಸತಿಗೆ ಪತಿ ಪೆರರಿಲ್ಲ…ಕುಂತೀ ಸುತರನು ಈಗಳೆ ತೋರುವೆನು…ವಸುದೇವನಾಣೆ (ಎಂದ)
ಬಲರಾಮ: ಇದು ವಿಚಿತ್ರವಲಾ…ಗತ ಅಸುಗಳು ಉದಿಸಿದರೆ ಲೇಸೈಸಲೇ… ದ್ರೌಪದಿಯನು ಅವರು ಅನುರಾಗಿಸಲಿ…ಭೂತಳವ ಭೋಗಿಸಲಿ…ಇದುವೆ ನಿಶ್ಚಯವಾದರೆ ಅವರ ಅಭ್ಯುದಯವು…ಎಮ್ಮ ಅಭ್ಯುದಯವು.
(ಎಂದು ಆ ಪದುಮನಾಭನ ಹೊಗಳಿ…ಸರಾಗದಲಿ ಕುಳ್ಳಿರ್ದನು.)
ದ್ರುಪದ: ಈಕೆಯನು ರಾಜಾನೀಕ ಸೌಂದರ್ಯದಲಿ ಮೆಚ್ಚಿಸದು…ಚಾಪ ವ್ಯಾಕರಣ ಪಾಂಡಿತ್ಯ ಎಂಬಡೆ… ನಾನೀಗ ಕಾಣೆ…ಈಕೆಗೆ ಇನ್ನಾರು ಒಡೆಯರೋ…ಕುಂತೀ ಕುಮಾರಕರಿಲ್ಲಲೇ…ಸುಡಲಿ…ಇವರನು ಏಕೆ ನೆರಹಿದೆನು.
(ಎನುತ ಆ ದ್ರುಪದ ಚಿಂತಿಸಿದ.)
ಸಖಿಯರು: ಹರ…ಹರಾ…ತಂಗಿಗೆ ವರನು ಇನ್ನಾರೊ…ವಾರಿಧಿವಲಯದ ಅವನೀಶ್ವರರು ರೂಪು…ವಿಕ್ರಮ…ಎರಡು ಹೊರತಾಗಿ ನೆರೆದಿದೆ…ನರಪತಿಗಳು ಇವರೈಸಲೇ…ಇನ್ನು ಅರಸಿಗೆ ಆವುದು ಹದನು.
(ಎನುತ ಕಾಂತಾ ಕದಂಬದಲಿ ವಿಸ್ತರದ ಗುಜುಗುಜು ಮಸಗಿದುದು.)
ಹೊಸಗನ್ನಡ ಗದ್ಯ
ದ್ರೌಪದಿಯು ಮಂಗಳಮಂಟಪಶಾಲೆಗೆ ಹಿಂತಿರುಗಿದಳು…ಮನ್ಮತನ ಸೇನೆಯಂತಿದ್ದ ಅವಳ ಸಕಿಯರ ಸಮೂಹವು ಅವಳೊಡನೆ ಹಿಂತಿರುಗಿತು…“ತರುಣಿಯನ್ನು ನಿಮ್ಮ ರೂಪ, ದರ್ಪಗಳಿಂದ ಪಡೆಯಲು ನಿಮಗೆ ಸಾದ್ಯವಾಗಲಿಲ್ಲ…ತೋಳ್ಬಲದಿಂದ ಪಡೆಯುವುದಾದರೆ, ಅದಕ್ಕೆ ಸಿದ್ದವಾಗಿರಿ” ಎಂದು ಡಂಗುರ ಹೊಡೆದು ಸಾರಲಾಯಿತು.
“ಇಗೋ ಇಲ್ಲಿ ದೊಡ್ಡ ಬಿಲ್ಲು ಇದೆ…ಅಯ್ದು ಬಾಣಗಳಿವೆ…ಬಹಳ ಎತ್ತರದಲ್ಲಿ ಯಂತ್ರ ಹೊಳೆಯುತ್ತಿದೆ…ಇದುವೆ ಕಬ್ಬಿನ ಬಿಲ್ಲು…ಈ ಬಾಣಗಳ ಸಮೂಹವೇ ಕಾಮದೇವನ ಹೂಬಾಣಗಳು…ಯಂತ್ರವೇ ಮದುಮಗಳ ಹ್ರುದಯ…ಯಾರು ಈ ಯಂತ್ರವನ್ನು ಬೇದಿಸುತ್ತಾರೋ ಆತನೇ ಆಕೆಗೆ ಪತಿ…ಅವನೇ ಮನ್ಮತ” ಎಂದು ಸ್ವಯಂವರ ಮಂಟಪದಲ್ಲಿ ಸಾರಲಾಯಿತು.
ಹೀಗೆ ಸಾರಿದ ನಂತರ, ದೊಡ್ಡ ಬಿಲ್ಲನ್ನು ತಂದು ನೆಲದ ಮೇಲೆ ಇಳಿಸಿದರು…ಮುಸುಕನ್ನು ತೆಗೆದು ಒಂದು ಯಂತ್ರವನ್ನು ಮೇಲುಗಡೆ ಅಂದವಾಗಿ ಅಳವಡಿಸಿ ಇಟ್ಟರು…ಬಿಲ್ಲಿನ ಬಳಿಯಲ್ಲಿ ಹರಿತವಾದ ಬಾಣಗಳನ್ನು ಒಂದು ಕ್ರಮದಲ್ಲಿ ಜೋಡಿಸಿಟ್ಟು, ಪರಿಮಳದ ಅಕ್ಶತೆಯನ್ನು ಹಾಕುತ್ತ, ವೇದಗಳ ಆಚರಣೆಯ ಕ್ರಮದಂತೆ ಪೂಜೆಯನ್ನು ಮಾಡಿದರು.
ಅನೇಕ ವಾದ್ಯಗಳ ಮೊಳಗು ಹೆಚ್ಚಾಯಿತು…ಸಡಗರದಲ್ಲಿ ಬಹುತರ ವಾದ್ಯಗಳು ಆ ಮಹತ್ವದ ಯಂತ್ರ ಬೇದಿಸುವವರನ್ನು…ಯಂತ್ರ ಬೇದನ ಮಾಡುವಂತೆ ಗಟ್ಟಿಯಾಗಿ ಕರೆಯುತ್ತಿದ್ದವು…ಇತ್ತ ಕಡೆ ಇದೇನು ಮದುವೆಯ ಮಂಗಳ ಕಾರ್ಯದ ಆಟವೋ ಇಲ್ಲವೇ ಬಿಲ್ಲಿನ ಹೊಡೆತದ ಹಂಚಿಕೆಯ ಆಟವೋ ಎಂಬಂತೆ ಬಿಲ್ಲು ಬಲಶಾಲಿಗಳಿಗೆ ಅವಮಾನ ಮಾಡಿತು.
ನಾನಾ ದಿಕ್ಕಿನಿಂದ ಬಂದ ರಾಜರುಗಳು…ತಮಗೆ ತಾವೇ ಒಬ್ಬೊಬ್ಬರಾಗಿ ಸಡಗರದಿಂದ ಯಂತ್ರವನ್ನು ಬೇದಿಸಲು…ಅತಿಶಯವಾದ ಸೊಕ್ಕಿನಿಂದ ನಿಂತರು…ಇದು ಹೇಗಾಯಿತೆಂದರೆ ಕೈಲಾಸಪರ್ವತವನ್ನು ಎತ್ತಲು ಅಲ್ಪರಾದ ರಕ್ಕಸರು ಹುರುಡಿಸಿದಂತಾಯಿತು…ಏನೆಂದು ಹೇಳುವುದು…ಆ ಬಿಲ್ಲನ್ನು ನೆಲದಿಂದ ಮೇಲಕ್ಕೆ ಎತ್ತಿಕೊಳ್ಳಲಾಗದೆ…ರಾಜರು ಸೋತು ಬಿದ್ದರು.
ರಾಜರು ತೊಟ್ಟಿದ್ದ ಹಾರ ಕಿತ್ತುಹೋಯಿತು…ಕಿವಿಯ ಒಡವೆಯ ಸುಂದರ ರತ್ನಗಳು ಸಡಿಲಗೊಂಡವು…ಕಾಲಿನ ವೀರ ಕಡಗಗಳು ಜಜ್ಜಿಹೋದುವು… ಅವರ ಮನದಲ್ಲಿ ಆತಂಕ ಕವಿಯಿತು…ರಾಜರ ಈ ಬವಣೆಯನ್ನು ಕಂಡು ನಾರಿಯರು ಚಪ್ಪಾಳೆ ಹೊಡೆಯುತ್ತ ನಗುವ…ಅಪಹಾಸ್ಯದ ದನಿ ಬಂದು ಅಪ್ಪಳಿಸಿತು. ರಾಜರು ತಲೆಯ ಮೇಲೆ ಮುಸುಕು ಹಾಕಿಕೊಂಡು ಹಿಂಜರಿದು…ಅವರವರ ಪೀಟದ ಕಡೆಗೆ ತೆರಳಿದರು.
“ಈ ಬಿಲ್ಲು ಅಲ್ಲಾಡುವುದಿಲ್ಲ…ನಮ್ಮನ್ನು ಕೊಡಹಿ ಬೀಳಿಸಿತು…ಇನ್ನು ಯಾರು ಇದರ ಕೊರಳಲ್ಲಿ ಹಗ್ಗವನ್ನು ತೊಡಿಸಿ…ಬಾಣವನ್ನು ಹೂಡಿ..ಈ ಯಂತ್ರವನ್ನು ಬೇದಿಸುತ್ತಾರೋ…ನೋಡೋಣ…ಅಂತಹ ಪರಾಕ್ರಮದ ಅಣ್ಣ ಬರಲಿ…ಮಾತಾಡಿ ಮಾಡುವುದೇನು” ಎಂದುಕೊಳ್ಳುತ್ತ…ಸಿರಿಮುಡಿಯ ರಾಜರು ತೋರಿಕೆಯ ಬಿನ್ನಾಣದಲ್ಲಿ ಇದ್ದರು.
“ನಮಗೆ ಒಳ್ಳೆಯ ಅವಕಾಶವಲ್ಲವೇ…ದ್ರುಪದಪುತ್ರಿಯು ಬಿಲ್ಲಿನ ವಿದ್ಯಾಕುಶಲತೆಯ ಸೆಳೆತದಿಂದ…ಅತಿ ಮೋಸದಲ್ಲಿ ರಾಜರನ್ನು ಅಬ್ಬರಿಸುತ್ತಾ ಗೆದ್ದಳು…ಒಳ್ಳೆಯದು…ಇದರಲ್ಲಿ ತಪ್ಪೇನು” ಎನ್ನುತ್ತ ಪೀಟದಿಂದ ಇಳಿದು…ಕಾಲಿನ ಬಿರುದಿನ ಬಳೆಯ `ಗಳಿಲ್ ಗಳಿಲ್ ಸದ್ದಿನೊಂದಿಗೆ ಮಗದರಾಜನಾದ ಜರಾಸಂದನು ನಡೆತಂದನು. ಬಿಲ್ಲಿನ ಸಮೀಪಕ್ಕೆ ಬಂದು…ಜರಾಸಂದನು ಬಿಲ್ಲನ್ನು ಚೆನ್ನಾಗಿ ನೋಡಿದನು…“ಇಂತಹ ಪರಾಕ್ರಮದಲ್ಲಿ ತಪ್ಪೇನು” ಎನ್ನುತ್ತ ಮುಂಗೈಯ ಸರಪಣಿಯನ್ನು ಮೇಲಕ್ಕೆ ಸುತ್ತಿ ತಿರುಗಿಸಿದನು…ಬಿಲ್ಲನ್ನು ಎತ್ತಿದರೆ ಇವನನ್ನು ದ್ರೌಪದಿ ಒಲ್ಲೆ ಎನ್ನುತಾಳೆಯೋ ಇಲ್ಲವೇ ಒಲಿಯುತ್ತಾಳೋ…ಇವನು ಮಹಾ ಬಲಶಾಲಿ ಎಂದು ಸಕಿಯರು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು.
ಈತನು ಕೆಳಕ್ಕೆ ಬಗ್ಗಿ ಬಿಲ್ಲನ್ನು ಎತ್ತಲು ಹೋದರೆ…ಅದು ಇವನನ್ನು ಎದುರಿಸಿತು…ಇವನು ಬಿಲ್ಲನ್ನು ಅವುಕಿ ಹಿಡಿಯಲು ಹೋದರೆ…ಅದು ಇವನು ಯಾರೆಂದು ಲೆಕ್ಕಿಸಲಿಲ್ಲ. ಇವನು ಕೆಳತುಟಿಯನ್ನು ಒತ್ತಿ ದೇಹವನ್ನು ಬಲಪಡಿಸಿಕೊಂಡು…ಬಲವಾಗಿ ಬಿಲ್ಲನ್ನು ಅಲ್ಲಾಡಿಸಿದರೆ…ಆ ಬಿಲ್ಲು ಸ್ವಲ್ಪವಾದರೂ ಸೋಲುತ್ತದೆಯೇ…ತುಸುವಾದರೂ ಮಿಡುಕಲಿಲ್ಲ ಅವನು ಶಕ್ತಿ ಹೀನನಾದನು. ಅವನ ಪಕ್ಕೆಗಳಿಗೆ ನೋವಾಯಿತು.
ಆಗ ಕೆಲ ಗಳಿಗೆ ಸುಮ್ಮನಿದ್ದ ನೀಚ ಜರಾಸಂದನು…ಬೆವರನ್ನು ಒರೆಸಿಕೊಂಡು ಆಯಾಸ ಪರಿಹಾರ ಮಾಡಿಕೊಂಡನು…ಮೊಳಕಾಲೂರಿ ದೇಹವನ್ನು ಬಲಪಡಿಸಿಕೊಂಡು…ಬಿಲ್ಲನ್ನು ಎದೆಯಲ್ಲಿ ಬಲವಾಗಿ ಒತ್ತಿ ಅಲ್ಲಾಡಿಸಿದಾಗ…ಅಬ್ಬಬ್ಬಾ…ಆ ಬಿಲ್ಲು ಒಂದು ಜವೆ ಕಾಳಿನಶ್ಟು ಮೇಲಕ್ಕೆ ಬಂತು…ಅಲ್ಲಿಗೆ ಜರಾಸಂದನ ಬಲ ಉಡುಗಿತು…ಬಿಲ್ಲು ಆತನ ಸೊಕ್ಕನ್ನು ಅಡಗಿಸಿತು.
ಆ ಸಮಯದಲ್ಲಿ ರಾಣಿವಾಸದ ಹೆಂಗಸರ ಗುಂಪು ಗೊಳ್ ಗೊಳ್ ಎಂದು ನಕ್ಕಿದ್ದನ್ನು ಜರಾಸಂದನು ಕೇಳಿದನು. “ನಾನೇಕೆ ಈ ಹೀನ ಕೆಲಸಕ್ಕೆ ಕಯ್ ಹಾಕಿದೆ…ಈ ಬಿಲ್ಲಿಗೆ ಬೆಂಕಿ ಬೀಳಲಿ” ಎನ್ನುತ್ತ, ದಡ್ಡತನದಿಂದ ಕಾಳೆಗದಲ್ಲಿ ಹಿಮ್ಮೆಟ್ಟಿದವನಂತೆ…ಅವನು ತಲೆಯ ಮೇಲಿನ ಮುಸುಕಿನೊಂದಿಗೆ…ಕಡಗವನ್ನು ಮೀನಕಂಡದತ್ತ ತಿರುಗಿಸಿ, ಹಿಂದಕ್ಕೆ ಸರಿದು ಬಂದನು.
ಇದನ್ನು ನೋಡಿ ದಮಗೋಶನ ಮಗನಾದ ಶಿಶುಪಾಲನು ಕೋಪಗೊಂಡನು…“ಅರರೇ, ಬಲವುಳ್ಳ ಕ್ರಿಶ್ಣನನ್ನೇ ಹಿಮ್ಮೆಟ್ಟಿಸಿದ್ದ ಎದೆಗಾರನಾದ ಜರಾಸಂದನನ್ನು ಸೋಲಿಸಿ ಹಿಂತಿರುಗುವಂತೆ ಮಾಡಿತಲ್ಲಾ…ಈ ಕೆಲಸ ನನ್ನದು…ಈ ಕೆಟ್ಟ ಬಿಲ್ಲಿನ ಶಕ್ತಿಯನ್ನು ಕುಂದಿಸುತ್ತೇನೆ…ನಗುತ್ತಿರುವ ಈ ದಾಸಿಯ ಮುಡಿಯನ್ನು ಕತ್ತರಿಸುವೆನು” ಎನ್ನುತ್ತ ಶೂರನಾದ ಶಿಶುಪಾಲನು ಬಂದನು.
“ಇವನು ಹಿಂದಿನ ಜನ್ಮದಲ್ಲಿ ರಾವಣನಲ್ಲವೇ…ಈ ಸುಕುಮಾರಿಯ ಪುಣ್ಯ ಹೇಗಿದೆಯೋ” ಎನ್ನುತ್ತ ಜನರ ಗುಂಪು ನಡುಗಿತು…“ಅರಸನೇ ಕೇಳು, ಇವನು ಬಿಲ್ಲನ್ನು ಹಿಡಿದೆತ್ತಿದನು…ಅದನ್ನು ಸವರಿದನು..ಈ ಬಿಲ್ಲು ಬಲು ಶಕ್ತಿಯದೋ…ಶಿವ…” ಎನ್ನುತ್ತ ಅಬ್ಬರಿಸಿದನು. ಬಿಲ್ಲನ್ನು ಉತ್ಸಾಹದಿಂದ ಹಿಡಿದುಕೊಂಡನು.
ಏನೆಂದು ಹೇಳುವುದು…ಆ ಬಿಲ್ಲು…ಶೂರತನದ ಮಾನಹಾನಿಯ ಮೊದಲ ಮನೆ ಎನ್ನುವಂತಾಯ್ತು…ಹೆಂಗಸರ ಅಪಹಾಸ್ಯ…ರಾಜ ಪರಿವಾರದ ಜನರ ಹಾಗೂ ರಾಜರ ಕೆಟ್ಟ ಮಾತುಗಳನ್ನು ಕೇಳಿ…ಅಸುರ ಸಮಾನನಾದ ಶಿಶುಪಾಲನು ಮನಸ್ಸಿನಲ್ಲಿ ನೊಂದುಕೊಳ್ಳುತ್ತ ಹಿಂತಿರುಗಿದನು. ಆ ಬಿಲ್ಲು ಆತನ ಸೊಕ್ಕನ್ನು ಸದೆಬಡಿಯಿತು.
ಹಿಮ್ಮೆಟ್ಟಿ ಬಂದ ಶಿಶುಪಾಲನನ್ನು ನೋಡಿ…ಜರಾಸಂದನು ಅವನನ್ನು ಹತ್ತಿರಕ್ಕೆ ಕರೆದು “ಈ ಬಿಲ್ಲು ಪ್ರಚಂಡ ಶಕ್ತಿಯುಳ್ಳದ್ದು…ಇದು ನಮಗಲ್ಲ… ನಾವು ಮುಂದಾಗಿ ಹೋದದ್ದು ತಪ್ಪಾಯಿತು…ಇದರಿಂದ ನಮ್ಮ ಹಿರಿಮೆ ಹಗುರವಾಯಿತು…ಈ ರಾಜರುಗಳು ನಾಚಿಕೆಯಿಲ್ಲದವರು… ದ್ರುಪದನ ಸೇವಕ ಸಮೂಹವು ರಾಜರು ಪ್ರಯತ್ನಿಸಿ ಕುಸಿಯುತ್ತಿರುವದನ್ನು ಕಂಡು ನಗುತ್ತಿರಲಿ” ಎನ್ನುತ್ತ ತಮ್ಮ ಪಟ್ಟಣಗಳಿಗೆ ಹಿಂದಿರುಗಿದರು.
ಶಿಶುಪಾಲ ಮತ್ತು .ಜರಾಸಂದರು ಸೊಕ್ಕಿನವರಲ್ಲವೇ…ಅವರು ಅಲ್ಲಿರದೆ…ತಮ್ಮಯ ನಗರಗಳಿಗೆ ಹೊರಟು ಹೋದ ಮೇಲೆ…ಉಳಿದ ರಾಜರ ಮತ್ತು ಇತರರ ಮನದ ಆತಂಕವನ್ನು ಮಹಾರಾಜ ಕೇಳು, ಅಲ್ಲಿ ಸೇರಿದ್ದ ರಾಜರ ಮನದಲ್ಲಿ ನಾವು ಬಿಲ್ಲಿನ ಪ್ರಯೋಗದಲ್ಲಿ ಸೋತರೆ ಅಬಿಮಾನಬಂಗವುಂಟಾಗುವುದು…ಬಿಲ್ಲನ್ನು ಗೆಲ್ಲುವ ಈ ಸ್ಪರ್ದೆಯಲ್ಲಿ ನಿಲ್ಲುವುದು ಅಸಾದ್ಯ ಎಂದುಕೊಂಡರು…ಅವರ ಉತ್ಸಾಹ ಕುಂದಿಹೋಯಿತು.
“ದುರುಳನಾದ ದ್ರುಪದನ ಮಗಳ ಉತ್ತಮವಾದ ಕಡೆಗಣ್ಣ ನೋಟವೆಂಬ ಬೀಸು ಬಲೆಯಲ್ಲಿ…ಮಹಾಬಿಲ್ಲು ಬಾಣಗಳೆಂಬ ದಡಿಗಳುಳ್ಳ ಬಲೆಯನ್ನು ಅಳವಡಿಸಿ…ದ್ರುಪದನು ರಾಜರೆಂಬ ಪ್ರಾಣಿಗಳನ್ನು ಒಳಬರುವಂತೆ ಮಾಡಿ ಸದೆಬಡಿದಿದ್ದಾನೆ…ಅದರಲ್ಲಿ ತಪ್ಪೇನು…ಅದು ಹಾಗಿರಲಿ…ನಾನು ಪ್ರಯತ್ನಿಸುತ್ತೇನೆ” ಎನುತ್ತ ಶಲ್ಯನು ಎದ್ದು ಬಂದನು.
“ಆ ಜರಾಸಂದನು ಶೂರ…ಶಿಶುಪಾಲನು ಮಾತಿನಲ್ಲಿ ಅಗ್ರಗಣ್ಯ… ಅವರಿಬ್ಬರಿಗೂ ಸೋಲಿನ ಹಬ್ಬವಾಯಿತು…ಹಲವರು ಮಣ್ಣು ಮುಕ್ಕಿದರು…ಇವನಿಗೆ ಈ ಬಿಲ್ಲು ಸೋಲುವುದೋ ಇಲ್ಲವೇ ಬಿಲ್ಲಿನ ಹೊಡೆತಕ್ಕೆ ಇವನೇ ಬೀಳುವನೋ…ಇವರೊಳಗೆ ಶಲ್ಯನು ದೊಡ್ಡವೀರ” ಎಂದು ನಾರಿಯರು ಕುತೂಹಲ ದಿಂದ ನೋಡಿದರು.
ಈತನು ಬಿಲ್ಲನ್ನು ಸಮೀಪಿಸಿ ನಿಂತು ಸಿದ್ದನಾದನು. ಮನಸ್ಸಿನಲ್ಲಿನ ಗಾಬರಿಯಿಂದ ಹೆಂಗಸರ ಸಮೂಹವನ್ನು ನೋಡಿದನು. ಮನಸ್ಸಿನಲ್ಲಿ ಉಂಟಾದ ಉದ್ವೇಗವನ್ನು ಬದಿಗೊತ್ತಿ…ಮೊಣಕಾಲೂರಿ ನೆಲಕ್ಕೆ ಬಾಗಿ…ದಂಡೆಯನ್ನು ಇಕ್ಕಿ…ವಾಸುಕಿ ಮಂದರವನ್ನು ಸುತ್ತಿದಂತೆ ಬಿಲ್ಲನ್ನು ಎರಡು ತೋಳುಗಳಿಂದ ಕೋಪದಿಂದ ಅವುಚಿಕೊಂಡನು.
ಶಲ್ಯನನ್ನು ಬಿಲ್ಲು ಲೆಕ್ಕಿಸದು…ಇವನು ಅದನ್ನು ಬಿಡಲೊಲ್ಲ…ಸೊಕ್ಕಿನಿಂದ ಅದನ್ನು ಅಮುಕಿ ಹಿಡಿದು ಅಲುಗಿಸಿದನು…ಹೀಗೆ ಸಾಹಸ ಮಾಡುತ್ತಿರಲು…ಗಳಿಗೆ ಮಾತ್ರದಲ್ಲಿ ಮುಗ್ಗರಿಸಿ ಹೊಟ್ಟೆ ಮೇಲಾಗಿ ಬಿದ್ದನು. ಬಿದ್ದ ರಬಸಕ್ಕೆ ಅವನ ಕಾಲ್ಗಡಗ ಗಲ್ ಗಲ್ ಎಂದು ಶಬ್ದ ಮಾಡಿತು….ಇತ್ತ ಸತಿಯರು ಗೊಳ್ಳೆಂದು ನಗತೊಡಗಿದರು. “ಈ ಹಾಳು ಬಿಲ್ಲನ್ನು ಸುಡು” ಎನ್ನುತ್ತ ಶಲ್ಯನು ಹೊರಗೆ ಬಂದನು.
ಶಲ್ಯನು ಹಿಂದೆ ಸರಿದನು…“ಈ ಬಿಲ್ಲು ಮಾನ್ಯರನ್ನು ಸೋಲಿಸಿತು… ಜಡರೂಪಿಯಾದ ಈ ಬಿಲ್ಲು ಜಗ್ಗುತ್ತಿಲ್ಲ…ಚಲಿಸಿದರೆ ಏನಾಗುವುದೋ…ಇದು ಜಗತ್ತನ್ನೇ ನಡುಗಿಸಿತಲ್ಲ…ರಾಜ ದುರ್ಯೋದನನೇ ಈ ಹೆಣ್ಣನ್ನು ಕೈ ಹಿಡಿಯುವುದು…ನಾನು ಈ ಕೆಟ್ಟ ಬಿಲ್ಲನ್ನು ಮುರಿದು ತುಂಡು ಮಾಡದೆ ಬಿಡುವುದಿಲ್ಲ” ಎನುತ್ತ ಕರ್ಣನು ಬಿಲ್ಲಿನ ಕಡೆಗೆ ನಡೆದನು.
“ಈತನು ಅರ್ಜುನನಲ್ಲವೇ ಅಲ್ಲ…ಆದರೂ ಅತಿಶಯವಾದ ರೂಪನ್ನು ಹೊಂದಿರುವನು…ಈತ ಯಂತ್ರವನ್ನು ಗೆದ್ದರೆ ಪುಣ್ಯವಲ್ಲವೇ…ತಂಗಿ ದ್ರೌಪದಿಗೆ ಈತನು ಅನುರೂಪವಾದ ವರನಾಗುತ್ತಾನೆ” ಎನ್ನುತ್ತ…ಹೆಂಗಸರೆಲ್ಲ ಆತನನ್ನು ನೋಡುತ್ತ…ಪ್ರೀತಿಯಲ್ಲಿ ಹೊಗಳುತ್ತಿದ್ದರು.
ಕರ್ಣನು ಹತ್ತಿರ ಬಂದು ಬಿಲ್ಲನ್ನು ಹಿಡಿದನು…ಅದು ನೆಲದಿಂದ ತುಸುವಾದರೂ ಮಿಡುಕದಿರಲು…ಅವನು ಬಿಲ್ಲನ್ನು ಒಂದು ಸುತ್ತು ಬಳಸಿ ಬಂದು…ನೂಕಿ…ಗರ್ಜಿಸಿ…ದಿಕ್ಕರಿಸುತ್ತ… ಮೊಣಕಾಲೂರಿ ಕೋಪದಿಂದ ಒತ್ತಿ ಎತ್ತಿದನು…ಅತಿಶಯವಾದ ಶಕ್ತಿಯನ್ನು ಎರಡು ಪಟ್ಟು ಬಳಸಿದರೂ ಅವನಿಗೆ ಬಿಲ್ಲಿನ ಹೆದೆಯನ್ನು ತೊಡಿಸಲು ಸಾಸುವೆ ಕಾಳಿನಶ್ಟೂ ಸಾದ್ಯವಾಗದೆ ಹಿಮ್ಮೆಟ್ಟಿ…ಕರ್ಣನು ಸುಮ್ಮನಾದನು.
ಜರಾಸಂದ…ಶಿಶುಪಾಲ…ಶಲ್ಯ…ಕರ್ಣ- ಇವರು ನಾಲ್ವರಿಗೂ ಒಂದೇ ದಾರಿಯಾಯ್ತು…ಇನ್ನು ಹಲವರು ಮೊದಲು ಸಾಹಸ ಮಾಡಿ ಹಿಂಜರಿದರು…ಶ್ರೀಗಂದವನ್ನು ಸುತ್ತುವರಿದಿರುವ ಹಾವಿನಂತೆ ದೊಡ್ಡ ಬಿಲ್ಲು ಮದುಮಗಳು ದ್ರೌಪದಿಯ ಮುಂದಿದೆ…ನಮಗೆ ಈ ಬಿಲ್ಲನ್ನು ಹೆದೆಯೇರಿಸಲು ಆಗುತ್ತದೆಯೇ ಎಂದು ಅನೇಕ ರಾಜರು ಹೆದರಿಕೊಂಡು ಚಿಂತೆಯಲ್ಲಿದ್ದರು.
ಬಿಲ್ಲಿನ ಪರಾಕ್ರಮದ ವಿಚಾರಕ್ಕೆ ದುರ್ಯೋದನ ಮೊದಲಾದ ರಾಜರು ಹೆದರಿದುದನ್ನು ಕಂಡ ಬಲರಾಮನು ನಗುತ್ತ…“ಪಾಂಚಾಲನು ಉದ್ದಟನಾಗಿದ್ದಾನೆ…ಎಲ್ಲರನ್ನೂ ಅಪಮಾನಪಡಿಸುತ್ತಿರುವ ಈ ಅಸಹಜವಾದ ಬಿಲ್ಲನ್ನು ಮುರಿದು…ದ್ರುಪದ ಪುತ್ರಿಯ ಮುಂದಲೆಯನ್ನು ಹಿಡಿದು ತರುತ್ತೇನೆ” ಎಂದು ಹೇಳುತ್ತ ಪೀಟದಿಂದ ಇಳಿದನು.
ಬಲರಾಮನ ಕೋಪೋದ್ರೇಕವನ್ನು ಕ್ರಿಶ್ಣನು ನೋಡಿ…“ಇದೇನು… ಪೀಟದಿಂದ ಇಳಿದಿರಿ…ಎಲ್ಲಿಗೆ ಹೋಗುವಿರಿ…ಏನು ಮಾಡಬೇಕೆಂದಿರುವಿರಿ ತಿಳಿಸಿ” ಎಂದು ಕೇಳಿದನು.
ಅದಕ್ಕೆ ಬಲರಾಮನು “ಬೇರೆ ಏನು…ಯಂತ್ರವನ್ನು ಕಳಚಿ ತೆಗೆದು…ಆ ದ್ರೌಪದಿಯನ್ನು ಹಿಡಿದೆಳೆದು ತರುತ್ತೇನೆ”…
ಆಗ ಕ್ರಿಶ್ಣನು “ಇಶ್ಟೇ ತಾನೇ…ಹಾಗಾದರೆ ನಾನು ಹೇಳುವುದನ್ನು ಕೇಳು. ಈಗ ನಿಮಗೆ ಕುಂತೀ ದೇವಿಯರು ಏನಾಗಬೇಕು…ಅತ್ತೆಯವರಲ್ಲವೇ…ಅವರ ಮಕ್ಕಳು ನಿಮಗೆ ಮೈದುನರು….ಅವರ ಹೆಂಡತಿಯರು ನಿಮಗೆ ತಂಗಿಯರು…ಅವರಲ್ಲಿ ಮನಸಾಯಿತೇ…ಕುಂತಿಯ ಈ ಮಕ್ಕಳು ದ್ರೌಪದಿಗೆ ಪತಿಗಳು…ಇದರಲ್ಲಿ ಸಂಶಯವೇನು…ನನ್ನ ಮಾತಿನಲ್ಲಿ ತಪ್ಪಿಲ್ಲ…ನೀವೇ ನೋಡುವಿರಂತೆ” ಎಂದು ಕ್ರಿಶ್ಣನು ಹೇಳಿದನು.
ಕ್ರಿಶ್ಣನ ಮಾತನ್ನು ಕೇಳಿ…ಬಲರಾಮನು ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಯಿಂದ ತಲೆದೂಗಿದನು… “ಬೂಮಿಯನ್ನೇ ಬಿಟ್ಟು ಹೋದವರ ಮಾತು…ಪಾಂಡವರು ಎತ್ತ…ಇವಳೆತ್ತ…ಲೋಕವೇ ತಿಳಿದಿರುವಂತೆ ಅರಗಿನ ಮನೆಯ ಉರಿಯಲ್ಲಿ ಸಿಲುಕಿ ಬೆಂದುಹೋದರು… ವಂಚನೆಯಲ್ಲಿ ಪಾರಂಗತನಾದ ನಿನಗೆ ನಾನು ಹೆದರುತ್ತೇನೆ” ಎಂದು ಬಲರಾಮನು ಕ್ರಿಶ್ಣನಿಗೆ ಕೈಮುಗಿದನು.
ಕ್ರಿಶ್ಣನು ಸುಮ್ಮನಾಗದೆ ತನ್ನ ಮಾತನ್ನು ಮುಂದುವರಿಸುತ್ತಾನೆ… “ಬೂಮಿಯ ಮೇಲೆ ಪಾಂಡವರು ಇಲ್ಲವೆಂದೂ…ದ್ರುಪದನ ಮಗಳಿಗೆ ಪತಿ ಬೇರೆಯವರೆಂದೂ…ಯಂತ್ರವನ್ನು ಗೆಲ್ಲಲು ನೀವೇ ಸರಿಯೆಂದು…ನಿಮ್ಮ ಮನಸ್ಸಿಗೆ ತೋರಿತೆ…ಈ ಬೂಮಿಗೆ ಪಾಂಡವರಲ್ಲದೆ ಬೇರೆ ಒಡೆಯರಿಲ್ಲ.. ಈ ಸತಿಗೆ ಪತಿ ಬೇರೆ ಯಾರೂ ಇಲ್ಲ…ಕುಂತೀಸುತರನ್ನು ಈಗಲೇ ನಿಮಗೆ ತೋರಿಸುತ್ತೇನೆ…ವಸುದೇವನಾಣೆ” ಎಂದನು.
“ಇದು ವಿಚಿತ್ರವಾಗಿದೆ…ಪ್ರಾಣ ಹೋದವರು ಹುಟ್ಟಿ ಬಂದರೆ ಒಳ್ಳೆಯದೇ ಅಲ್ಲವೆ…ದ್ರೌಪದಿಯನ್ನು ಅವರು ಪ್ರೀತಿಸಲಿ…ಬೂಮಿಯನ್ನು ಅನುಬವಿಸಲಿ…ನಿನ್ನ ಮಾತುಗಳೇ ನಿಜವಾದರೆ…ಪಾಂಡವರ ಏಳಿಗೆಯೇ ನಮ್ಮ ಏಳಿಗೆ” ಎಂದು ಬಲರಾಮನು ಕ್ರಿಶ್ಣನನ್ನು ಪ್ರೀತಿಯಿಂದ ಹೊಗಳಿ ತನ್ನ ಪೀಟದಲ್ಲಿ ಕುಳಿತುಕೊಂಡನು.
“ಈಕೆಯನ್ನು ರಾಜರ ಸಮೂಹವು ಸೌಂದರ್ಯದಲ್ಲಿ ಮೆಚ್ಚಿಸಲಾರದು. ಬಿಲ್ಲಿನ ವಿದ್ಯೆಯ ಪರಿಣತಿಯನ್ನು ನೋಡೋಣವೆಂದರೆ…ಅದನ್ನಿಲ್ಲಿ ನಾನು ಕಾಣಲಿಲ್ಲ…ಈಕೆಗೆ ಇನ್ನು ಯಾರು ಒಡೆಯರಾಗುತ್ತಾರೋ…ಇಲ್ಲಿ ಕುಂತೀಕುಮಾರರು ಇಲ್ಲವಲ್ಲಾ…ರಾಜರ ಸಮೂಹವನ್ನು ನಾನೇಕೆ ಇಲ್ಲಿ ಕಲೆಹಾಕಿದೆನೋ…ಸುಡಲಿ”…ಎಂದು ದ್ರುಪದನು ಯೋಚಿಸತೊಡಗಿದನು.
“ಹರ…ಹರಾ…ಇನ್ನು ತಂಗಿಗೆ ವರನು ಇನ್ನಾರೋ…ಕಡಲಿನಿಂದ ಸುತ್ತುವರಿದ ಬೂಮಂಡಲದ ರಾಜರಲ್ಲಿ ರೂಪವಾಗಲಿ…ಪರಾಕ್ರಮವಾಗಲಿ ಇಲ್ಲದವರೇ ಇಲ್ಲಿ ನೆರೆದಿದ್ದಾರೆ…ಇನ್ನು ನಮ್ಮ ರಾಜಕುಮಾರಿಯ ಸ್ವಯಂವರದ ಗತಿ ಏನಾಗುವುದೋ” ಎಂಬ ರಾಣಿವಾಸದ ಹೆಂಗಸರ ಗುಸುಗುಸು ಮಾತು ಮಿತಿಯಿಲ್ಲದೆ ಮುಂದುವರಿಯಿತು.
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು