ಬ್ರೆಕ್ಟ್ ಕವನಗಳ ಓದು – 19 ನೆಯ ಕಂತು

– ಸಿ.ಪಿ.ನಾಗರಾಜ.

*** ಜರ್ಮನ್ ಯುದ್ಧದ ಬಾಲಬೋಧೆ ***

(ಕನ್ನಡ ಅನುವಾದ: ಶಾ.ಬಾಲುರಾವ್)

ಮೇಲಿನವರು ಹೇಳುತ್ತಾರೆ
ಇದು ಕೀರ್ತಿ ವೈಭವಗಳಿಗೆ ದಾರಿ
ಕೆಳಗಿನವರು ಹೇಳುತ್ತಾರೆ
ಅಲ್ಲ… ಸುಡುಗಾಡಿಗೆ.

ದೇಶದ ದೊಡ್ಡ ಅದಿಕಾರದ ಗದ್ದುಗೆಯಲ್ಲಿ ಕುಳಿತಿರುವವರ ಪಾಲಿಗೆ ಯುದ್ದವೆಂಬುದು ದೇಶಪ್ರೇಮದ ಮಾತಿನ ಅಬ್ಬರಕ್ಕೆ ಕಾರಣವಾದರೆ, ರಣರಂಗದಲ್ಲಿ ಹೋರಾಡುವವರ ಪಾಲಿಗೆ ಸಾವು ನೋವಿನ ಮಸಣವಾಗುತ್ತದೆ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಮೇಲಿನವರು=ದೇಶದಲ್ಲಿ ದೊಡ್ಡ ಅದಿಕಾರದಲ್ಲಿರುವ ರಾಜ/ಪ್ರದಾನಿ/ಸರ್‍ವಾದಿಕಾರಿ/ಅದ್ಯಕ್ಶ; ಕೀರ್ತಿ=ಹೆಸರುವಾಸಿ/ಪ್ರಸಿದ್ದಿ; ವೈಭವ=ಹಿರಿಮೆ/ಸೊಗಸು ;

ಮೇಲಿನವರು ಹೇಳುತ್ತಾರೆ ಇದು ಕೀರ್ತಿ ವೈಭವಗಳಿಗೆ ದಾರಿ=ಹಗೆಯು ದೇಶದ ಗಡಿಯ ಎಲ್ಲೆಯನ್ನು ದಾಟಿ ದೇಶದೊಳಕ್ಕೆ ನುಗ್ಗದಂತೆ ತಡೆಗಟ್ಟುವುದಕ್ಕಾಗಿ; ದೇಶದ ಜನರ ಮಾನ ಪ್ರಾಣ ಸಂಪತ್ತನ್ನು ಕಾಪಾಡುವುದಕ್ಕಾಗಿ; ದೇಶದ ಹೆಸರಾಂತ ಜನಾಂಗದ ಹಿರಿಮೆಯನ್ನು ಎತ್ತಿಹಿಡಿಯುವುದಕ್ಕಾಗಿ ಮತ್ತು ದೇಶದ ಸಂಸ್ಕ್ರುತಿಯನ್ನು ಉಳಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಪಣವಾಗಿ ಒಡ್ಡಿ ಹೋರಾಡುವುದು ಪ್ರತಿಯೊಬ್ಬ ದೇಶಪ್ರೇಮಿಯ ಕರ್‍ತವ್ಯವೆಂದು ಹುರಿದುಂಬಿಸುತ್ತ “ರಣರಂಗದಲ್ಲಿ ಮಡಿದರೆ ವೀರಸ್ವರ್‍ಗ ದೊರೆಯುತ್ತದೆ ಮತ್ತು ಹುತಾತ್ಮನೆಂಬ ಹೆಸರನ್ನು ಪಡೆದು ಅಮರರಾಗುತ್ತೀರಿ” ಎಂದು ಜನಸಮುದಾಯಕ್ಕೆ ಕರೆಯನ್ನು ನೀಡುತ್ತ, ದೇಶದ ರಾಜಕೀಯ ಅದಿಕಾರದ ದೊಡ್ಡ ಗದ್ದುಗೆಯಲ್ಲಿರುವ ವ್ಯಕ್ತಿಗಳು ಯುವ ಜನಾಂಗವನ್ನು ಯುದ್ದರಂಗಕ್ಕೆ ದೂಡುತ್ತಾರೆ;

ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಿಂದ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ದಗಳಲ್ಲಿ ದೇಶದ ಉನ್ನತ ಗದ್ದುಗೆಯಲ್ಲಿರುವ ರಾಜಕೀಯ ವ್ಯಕ್ತಿಗಳು ತಾವೇ ನೇರವಾಗಿ ರಣರಂಗದಲ್ಲಿ ಶತ್ರುವಿನ ಎದುರು ಹೋರಾಡಲು ಹೋಗುವುದಿಲ್ಲ. ಯುದ್ಧ ನಡೆಯುತ್ತಿರುವ ಕಾಲದಲ್ಲಿ ರಾಜಕೀಯ ಅದಿಕಾರದಲ್ಲಿರುವವರ ಪ್ರಾಣಕ್ಕೆ ಅಪಾಯ ತಟ್ಟದಂತೆ ಕಾಪಾಡಲು ದೊಡ್ಡ ಮಟ್ಟದ ಕಾವಲುಪಡೆಯೇ ಹಗಲಿರುಳೆನ್ನದೆ ಸಜ್ಜಾಗಿರುತ್ತದೆ;

ಕೆಳಗಿನವರು=ರಣರಂಗದಲ್ಲಿ ಹೋರಾಡುವ ಕಾದಾಳುಗಳು. ಪ್ರತಿಯೊಂದು ದೇಶದ ಸೇನೆಯ ಕಾದಾಳುಗಳಲ್ಲಿ ದುಡಿಯುವ ಶ್ರಮಜೀವಿಗಳಾದ ಬಡವರ ಮಕ್ಕಳೇ ದೊಡ್ಡ ಸಂಕೆಯಲ್ಲಿರುತ್ತಾರೆ;

ಸುಡುಗಾಡು=ಹೆಣಗಳನ್ನು ಸುಡುವ ಜಾಗ/ಮಸಣ;

ಕೆಳಗಿನವರು ಹೇಳುತ್ತಾರೆ. ಅಲ್ಲ… ಸುಡುಗಾಡಿಗೆ=ಯಾವುದೇ ದೇಶದ ಸೇನೆಯ ಮುಂಚೂಣಿಯಲ್ಲಿ ನಿಂತು ಹೋರಾಡುವ ಕಾದಾಳುಗಳಲ್ಲಿ ಬಹುತೇಕ ಮಂದಿ ಬಡತನದ ಬೇಗೆಯಿಂದ ಬೇಯುತ್ತಿರುವ ಕೆಳವರ್‍ಗಕ್ಕೆ ಸೇರಿದ ಜನರೇ ಹೆಚ್ಚಿನ ಸಂಕೆಯಲ್ಲಿರುತ್ತಾರೆ. ತಮ್ಮ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ, ಹೆಂಡತಿ-ಮಕ್ಕಳ ಬದುಕನ್ನು ರೂಪಿಸಲೆಂದು ಸಂಬಳದ ಆಸೆಗಾಗಿ ಸೇನೆಯನ್ನು ಸೇರಿರುತ್ತಾರೆ. ಯುದ್ದ ನಡೆದಾಗ ಯಾವುದೇ ದೇಶದ ಸೈನಿಕನಾಗಿರಲಿ ತನ್ನ ದೇಶಕ್ಕೆ ಆಪತ್ತೆಂದು ತಿಳಿದಿರುವ ಶತ್ರುವನ್ನು ಕೊಲ್ಲುತ್ತಾನೆ ಇಲ್ಲವೇ ಶತ್ರುವಿನಿಂದ ಸಾವು ನೋವಿಗೆ ತಾನೇ ಬಲಿಯಾಗುತ್ತಾನೆ. ದೊಡ್ಡ ಯುದ್ದಗಳು ನಡೆದಾಗ ಬದುಕಿ ಉಳಿಯುವ ಕಾದಾಳುಗಳಿಗಿಂತ ಸಾವು ಇಲ್ಲವೇ ಅಂಗವಿಕಲರಾಗಿ ನರಳುವುವರೇ ಹೆಚ್ಚಾಗಿರುತ್ತಾರೆ. ಒಬ್ಬ ಕಾದಾಳುವಿನ ಸಾವು ಇಲ್ಲವೇ ಅಂಗವಿಕಲತೆಯು ಅವನ ಇಡೀ ಕುಟುಂಬವನ್ನೇ ಸಂಕಟದ ಮಡುವಿಗೆ ಮುಳುಗಿಸುತ್ತದೆ;

ಈ ಕವನವನ್ನು ಬ್ರೆಕ್ಟ್ ಅವರ ಜೀವನದಲ್ಲಿನ ಕೆಲವು ಪ್ರಸಂಗಗಳ ಹಿನ್ನೆಲೆಯಲ್ಲಿ ನೋಡಬೇಕಾದ ಅಗತ್ಯವಿದೆ. ಬ್ರೆಕ್ಟ್ (1898-1956) ಅವರು ತಮ್ಮ ಜೀವಿತ ಕಾಲದಲ್ಲಿಯೇ ನಡೆದಿದ್ದ ಮೊದಲನೆಯ ಮಹಾಯುದ್ದ (1914-1919) ಮತ್ತು ಎರಡನೆಯ ಮಹಾಯುದ್ದ (1939-1945)ಗಳಿಂದ ಉಂಟಾದ ದುರಂತವನ್ನು ಕಣ್ಣಾರೆ ಕಂಡವರು. ಜೀವರಾಶಿಗಳ ನೆಲೆಯಾದ ನಿಸರ್‍ಗ ಸಂಪತ್ತಿನ , ಮಾನವ ಸಮುದಾಯದ ಕ್ರಿಯಾಶೀಲ ಚಟುವಟಿಕೆಯಿಂದ ನಿರ‍್ಮಾಣಗೊಂಡಿರುವ ಕಟ್ಟಡಗಳ, ಸೇತುವೆಗಳ, ರಸ್ತೆಗಳ, ಅಣೆಕಟ್ಟೆಗಳ, ಜೀವನೋಪಯೋಗಿಯಾದ ವಸ್ತುಗಳ ಮತ್ತು ಮಾನವನ ಬದುಕಿನ ಸರ‍್ವನಾಶಕ್ಕೆ ಕಾರಣವಾಗುವ ಯುದ್ದಗಳನ್ನು ಬ್ರೆಕ್ಟ್ ವಿರೋದಿಸುತ್ತಿದ್ದರು. ಯುದ್ದಗಳಿಂದ ದುಡಿಯುವ ಶ್ರಮಜೀವಿಗಳಾದ ಶ್ರೀಸಾಮಾನ್ಯರ ಬದುಕು ಹೇಗೆ ಹಸಿವು. ಬಡತನ. ಅಪಮಾನ ಮತ್ತು ಸಾವು ನೋವಿಗೆ ಗುರಿಯಾಗುತ್ತದೆ ಎಂಬುದರ ಬಗ್ಗೆ ಸದಾಕಾಲ ಚಿಂತಿಸುತ್ತಿದ್ದ ಬ್ರೆಕ್ಟ್ ಅವರು ಯುದ್ದದಿಂದ ಉಂಟಾಗುವ ಸಂಗತಿಗಳನ್ನು ಕುರಿತು ಕೆಲವು ಕವನಗಳನ್ನು ಬರೆದಿದ್ದಾರೆ.

ಅಂತಹ ಕವನಗಳಲ್ಲಿ ಕೆಲವನ್ನು ‘ಜರ‍್ಮನ್ ಯುದ್ದದ ಬಾಲಬೋದೆ’ ಎಂಬ ತಲೆಬರಹದಲ್ಲಿ ಅನುವಾದ ಮಾಡಲಾಗಿದೆ. ‘ಬಾಲಬೋದೆ’ ಎಂದರೆ ಮೊದಲನೆಯ ತರಗತಿಯ ಮಕ್ಕಳಿಗೆ ಹೇಳಿಕೊಡುವ ವರ‍್ಣಮಾಲೆಯ ಪುಸ್ತಕ. ಬಾಲಬೋದೆ ಎನ್ನುವ ಪದ ‘ವ್ಯಕ್ತಿಯು ಪಡೆಯಬೇಕಾದ ಮೊದಲ ಅರಿವು’ ಎಂಬ ರೂಪಕದ ತಿರುಳಿನಲ್ಲಿ ಬಳಕೆಗೊಂಡಿದೆ. ಯೂರೋಪ್ ಪ್ರಾಂತ್ಯವನ್ನೆಲ್ಲಾ ತನ್ನ ವಶಕ್ಕೆ ತೆಗೆದುಕೊಂಡು, ಆರ‍್ಯನ್ ಜನಾಂಗಕ್ಕೆ ಸೇರಿದ ಜರ‍್ಮನ್ನರೇ ಬಹುದೊಡ್ಡ ಶಕ್ತಿಯಾಗಿ ರೂಪುಗೊಂಡು ಜಗತ್ತೆಲ್ಲವನ್ನೂ ನಿಯಂತ್ರಿಸುವಂತಾಗಬೇಕು ಎಂಬ ಸಂಕಲ್ಪತೊಟ್ಟಿದ್ದ ನಿರಂಕುಶಾದಿಕಾರಿ ಅಡಾಲ್ಪ್ ಹಿಟ್ಲರನ ಕಾಲದಲ್ಲಿ ನಡೆಯುತ್ತಿರುವ ಯುದ್ದದಿಂದ ಮಾನವ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಕೇಡು ಮತ್ತು ದುರಂತ ಉಂಟಾಗುತ್ತಿದೆ ಎಂಬ ಅರಿವನ್ನು ಮೊದಲ ಪಾಟವನ್ನಾಗಿ ಎಲ್ಲರೂ ತಿಳಿದುಕೊಂಡಿರಬೇಕು ಎಂಬ ತಿರುಳಿನಲ್ಲಿ ‘ಜರ‍್ಮನ್ ಯುದ್ದದ ಬಾಲಬೋದೆ’ ಎಂಬ ತಲೆಬರಹ ಬಳಕೆಗೊಂಡಿದೆ.

ಬ್ರೆಕ್ಟ್ ಅವರು ಕ್ರಿ.ಶ.1917 ರಲ್ಲಿ ಹತ್ತೊಂಬತ್ತು ವರುಶದ ಯುವಕನಾಗಿದ್ದಾಗ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಜ್ನಾನ ಮತ್ತು ಜೀವಶಾಸ್ತ್ರವನ್ನು ಓದಲೆಂದು ಕಾಲೇಜಿಗೆ ಸೇರುತ್ತಾರೆ. ಆ ವೇಳೆಗಾಗಲೇ 1914 ರಲ್ಲಿ ಆರಂಬಗೊಂಡಿದ್ದ ಮೊದಲನೆಯ ಮಹಾಯುದ್ದದ ಹೋರಾಟ ಯುರೋಪಿನ ಎಲ್ಲೆಡೆಯಲ್ಲಿ ಬೀಕರವಾಗಿ ನಡೆಯುತ್ತಿರುತ್ತದೆ. 1918 ರಲ್ಲಿ ಜರ‍್ಮನಿಯ ಸೇನಾಶಿಬಿರವೊಂದರಲ್ಲಿ ಬ್ರೆಕ್ಟ್ ಅವರನ್ನು ವೈದ್ಯಕೀಯ ಪರಿಚಾರಕನಾಗಿ ಕಡ್ಡಾಯ ಸೇವೆಗೆ ನೇಮಿಸಲಾಗುತ್ತದೆ. ಯುದ್ದರಂಗದಲ್ಲಿ ಮದ್ದುಗುಂಡು ಮತ್ತು ಬಾಂಬಿನ ದಾಳಿಗೆ ಒಳಗಾಗಿ ಚಿದ್ರಚಿದ್ರಗೊಂಡ ದೇಹದ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಉಪಚರಿಸುವ ಸನ್ನಿವೇಶದಲ್ಲಿ ಯುದ್ದದಿಂದ ಉಂಟಾಗುವ ಎದೆಬಿರಿಯುವಂತಹ ನೋಟಗಳನ್ನು ಬ್ರೆಕ್ಟ್ ಕಾಣುತ್ತಾರೆ. ತಮ್ಮ ಅನುಬವವನ್ನು ಈ ರೀತಿ ಒಂದು ಕಡೆ ಹೇಳಿಕೊಂಡಿದ್ದಾರೆ.

“ಬಲವಂತದ ಮಿಲಿಟೆರಿ ಸೇವೆಗೆಂದು ನನ್ನನ್ನು ಆಸ್ಪತ್ರೆಯ ಕೆಲಸಕ್ಕೆ ಹಾಕಿದರು. ಅಲ್ಲಿ ನಾನು ಗಾಯಗಳನ್ನು ತೊಳೆದು ಇಲಾಜು ಮಾಡುತ್ತಿದ್ದೆ. ಅಯೋಡಿನ್ ಬಳಿದು ಡ್ರೆಸ್ ಮಾಡುತ್ತಿದ್ದೆ. ಎನಿಮಾ ಕೊಡುತ್ತಿದ್ದೆ. ರಕ್ತದಾನ (Blood Transfusion) ನಡೆಸುತ್ತಿದ್ದೆ. ಶಸ್ತ್ರವೈದ್ಯನು “ಬ್ರೆಕ್ಟ್… ನೋಡಿಲ್ಲಿ… ಈ ರೋಗಿಯ ರೋಗಿಯ ಕಾಲು ಕತ್ತರಿಸು” ಅಂದಾಗ ನಾನು “ಆಗಲಿ ಸ್ವಾಮಿ” ಎಂದು ಹೇಳಿ , ಆ ಕಾಲನ್ನು ತುಂಡರಿಸಿ ಬಿಸಾಡುತ್ತಿದ್ದೆ. ಡಾಕ್ಟರು “ಈತನ ತಲೆಚಿಪ್ಪನ್ನು ಗರಗಸದಿಂದ ಕೊರೆದು ಸಿದ್ದಪಡಿಸು” ಎಂದು ಆಜ್ನಾಪಿಸಿದಾಗ, ನಾನು ಕೂಡಲೆ ತಲೆಬುರುಡೆಯನ್ನು ಕೊರೆದು ಒಳಗಿನ ಮೆದುಳನ್ನು ಮುಟ್ಟಾಡುತ್ತಿದ್ದೆ. ಕಾದಾಳುಗಳನ್ನು ಬಹು ತುರ‍್ತಾಗಿ ದುರಸ್ತುಮಾಡಿ ಪುನಹ ಅವರನ್ನು ರಣರಂಗಕ್ಕೆ ರವಾನೆ ಮಾಡುತ್ತಿದ್ದುದನ್ನು ಆಗ ನಾನು ಕಣ್ಣಾರೆ ಕಂಡೆ. ಇಂತಹ ಅತಿ ಬೀಕರವಾದ ನೋಟಗಳನ್ನು ಕಂಡಿದ್ದ ಬ್ರೆಕ್ಟ್ ಅವರಿಗೆ “ಯುದ್ದವೆಂಬುದು ಮಾನವ ಸಮುದಾಯಕ್ಕೆ ಒಂದು ಶಾಪ” ಎಂಬುದು ಚೆನ್ನಾಗಿ ಮನದಟ್ಟಾಗಿತ್ತು.

ರಣರಂಗದಲ್ಲಿ ಪೆಟ್ಟುತಿಂದು ಗಾಯಾಳುಗಳಾಗಿ ಸೇನಾಶಿಬಿರದಲ್ಲಿ ನರಳುತ್ತಿದ್ದವರಲ್ಲಿ ಬಹುತೇಕ ಮಂದಿ ಜರ‍್ಮನಿಯ ದುಡಿಯುವ ಶ್ರಮಜೀವಿಗಳ ಬಡಕುಟುಂಬಗಳಿಂದ ಬಂದಿದ್ದ ವ್ಯಕ್ತಿಗಳಾಗಿದ್ದರು. ಇದೇ ರೀತಿ ಯಾವುದೇ ದೇಶಗಳ ನಡುವೆ ಯುದ್ದಗಳು ನಡೆದಾಗ ಸಾವು ನೋವಿಗೆ ಗುರಿಯಾಗುವವರು ಆಯಾಯ ದೇಶಗಳ ಬಡಜನರೇ ಎಂಬ ವಾಸ್ತವವನ್ನು ಬ್ರೆಕ್ಟ್ ಅವರು ಈ ಕವನದ ಮೂಲಕ ನಿರೂಪಿಸಿದ್ದಾರೆ.

ಎರಡು ಮಹಾಯುದ್ದದಲ್ಲಿ ಪಾಲ್ಗೊಡ ದೇಶಗಳು:

ಮೊದಲನೆಯ ಮಹಾಯುದ್ದ(1914-19): ಇಂಗ್ಲೆಂಡ್, ಅಮೆರಿಕ, ಪ್ರಾನ್ಸ್. ರಶ್ಯಾ, ಇಟಲಿ ದೇಶಗಳು ಒಂದು ಕಡೆ; ಮತ್ತೊಂದು ಕಡೆ ಜರ‍್ಮನಿ, ಆಸ್ಟ್ರೋ ಹಂಗೇರಿಯ, ಬಲ್ಗೇರಿಯ ದೇಶಗಳು;

ಎರಡನೆಯ ಮಹಾಯುದ್ದ(1939-1945): ಇಂಗ್ಲೆಂಡ್, ಅಮೆರಿಕ, ಪ್ರಾನ್ಸ್, ರಶ್ಯಾ ದೇಶಗಳು ಒಂದು ಕಡೆ; ಮತ್ತೊಂದು ಕಡೆ ಜರ‍್ಮನಿ, ಇಟಲಿ ಮತ್ತು ಜಪಾನ್ ದೇಶಗಳು;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks