ಕಣ್ಮನ ಸೆಳೆಯುವ ಗುಲ್ಮೊಹರ್

– ಶ್ಯಾಮಲಶ್ರೀ.ಕೆ.ಎಸ್.
gulmohar, ಗುಲ್ಮೊಹರ್

ಕೆಲವು ದಿನಗಳ ಹಿಂದೆ ಅಂದರೆ ಮೇ ತಿಂಗಳ ಅವದಿಯಲ್ಲಿ ಚಾರಣಕ್ಕೆಂದು ದೇವರಾಯನದುರ‍್ಗಕ್ಕೆ ಹೋದಾಗ ಅಲ್ಲಿ ಕೆಂಬಣ್ಣದ ಹೂಗಳಿಂದ ಅರಳಿ ನಿಂತಿದ್ದ ಮರಗಳು ಕಣ್ಣಿಗೆ ಬಿದ್ದವು. ಬೆಟ್ಟದ ದಾರಿಯುದ್ದಕ್ಕೂ ಇರುವ ಹಸಿರು ಮರಗಳ ನಡುವೆ ಅಲ್ಲೊಂದು ಇಲ್ಲೊಂದು ಕೆಂಪು ಚಪ್ಪರದಂತೆ ಬೀಗುತ್ತಿದ್ದ ಆ ಮರಗಳ ಮನಮೋಹಕ ದ್ರುಶ್ಯ ಅದ್ಬುತವಾಗಿತ್ತು. ಅದರ ಬಳಿ ಸಾಗಿದಾಗಲೇ ತಿಳಿದದ್ದು ಅವು ಗುಲ್ಮೊಹರ್ ಮರಗಳೆಂದು. ಸುಮಾರು ವರ‍್ಶಗಳ ಹಿಂದೆಯೇ ನಗರಗಳ ರಸ್ತೆ ಬದಿ, ಉದ್ಯಾನವನ ಗಳಲ್ಲಿ ಅಲಂಕಾರಿಕವಾಗಿಯೂ ಹಾಗೂ ತಂಪಾದ ನೆರಳಿನ ಸಲುವಾಗಿ ಬೆಳೆಸಲಾಗಿತ್ತು. ಆದರೆ ಇತ್ತೀಚೆಗೆ ನಗರಗಳಲ್ಲಿ ಕಟ್ಟಡಗಳು ಹೆಚ್ಚಾದಂತೆ ಗುಲ್ಮೊಹರ್ ನ ಸಂಕ್ಯೆಯಲ್ಲಿ ಇಳಿಮುಕವಾಗಿದೆ. ಅಲ್ಲೊಂದು ಇಲ್ಲೊಂದು ಅಪರೂಪಕ್ಕೆ ನೋಡಲು ಸಿಗಬಹುದು.

ಬಾಲ್ಯದಲ್ಲಿ ಈ ಮರದ ಹೂವು, ಕಾಯಿಗಳ ಜೊತೆ ಆಡಿದ ನೆನಪು. ‘ಕೆಂಕೇಸರಿ’, ಕೆನ್ನಕೇಸರಿ,‘ಕೆಂಪು ಚೂಡ’ ಎಂದು ಕರೆಯಲ್ಪಡುವ ಈ ಹೂವು ಯಾವುದೇ ಜಾತ್ರೆಯಾಗಲಿ,ಮದುವೆಯ ಚಪ್ಪರದಲ್ಲಾಗಲಿ ಅತವಾ ಇನ್ನಾವುದೇ ದಾರ‍್ಮಿಕ ಅಚರಣೆಯ ವೇಳೆ ಅಲಂಕಾರಕ್ಕೆ ಮುಂದಿರುತ್ತಿತ್ತು. ಹಳ್ಳಿ ಕಡೆ ಇದನ್ನು ಕತ್ತಿ ಕಾಯಿ ಮರ ಎಂದು ಕರೆಯುವ ರೂಡಿಯೂ ಇದೆ. ಏಕೆಂದರೆ ಈ ಮರದ ಕಾಯಿ ಕತ್ತಿಯ ರೂಪದಲ್ಲಿದ್ದು ಕಾಯಿಯ ಕವಚ ಗಟ್ಟಿಯಾಗಿರುತ್ತದೆ. ಕತ್ತಿಕಾಯಿಯನ್ನು ಮಕ್ಕಳು ಆಟಿಕೆಯಾಗಿ ಬಳಸುತ್ತಿದ್ದರು. ಕಾಯಿಯನ್ನು ಅಲುಗಾಡಿಸಿದಾಗ ಅದರೊಳಗಿನ ಬೀಜಗಳು ಸದ್ದುಮಾಡಿದರೆ ಚಿಣ್ಣರಿಗೆ ಎಲ್ಲಿಲ್ಲದ ಆನಂದ. ಕೆಂಕೇಸರಿ ಹೂವಿನ ಮೊಗ್ಗುಗಳನ್ನು ಮಕ್ಕಳು ಇಶ್ಟ ಪಡುತ್ತಿದ್ದರು. ಕಾಲಕ್ರಮೇಣ ಮರಗಳು ಕಡಿಮೆಯಾದಂತೆ ಈಗಿನ ಪೀಳಿಗೆಗೆ ಪ್ರಕ್ರುತಿ ಜೊತೆಗಿನ ಒಡನಾಟ ದೂರದ ಮಾತಾಗಿದೆ. ಬಾರತದಲ್ಲಿ ಈ ಹೂವಿಗೆ ಕರೆಯುವ ವಿಶೇಶವಾದ ಹೆಸರು ‘ಮೇ ಪ್ಲವರ‍್’. ಮೇ ತಿಂಗಳು ಮಾತ್ರ ನಮ್ಮ ದೇಶದಲ್ಲಿ ಈ ಹೂವಿನ ಅವದಿಯಾಗಿರುವುದರಿಂದ ಮೇ ಪ್ಲವರ‍್ ಎಂಬ ಹೆಸರು ಪಡೆದಿದೆ. ಏಪ್ರಿಲ್ ಕೊನೆಯ ವಾರದಿಂದ ಹಿಡಿದು ಜೂನ್ ತಿಂಗಳ ಮೊದಲ ವಾರದವರೆಗೂ ಈ ಹೂವು ವರುಶಕ್ಕೊಮ್ಮೆ ಕಾಣಿಸಿಕೊಳ್ಳುವುದೇ ಅಚ್ಚರಿಯ ಸಂಗತಿ. ಉಳಿದಂತೆ ಈ ಹೂವಿನ ದ್ರುಶ್ಯ ಕಣ್ಣಿಗೆ ಬೀಳುವುದಿಲ್ಲ. ಬೇರೆ ಬೇರೆ ದೇಶಗಳಲ್ಲೂ ಇದೇ ರೀತಿ ವರುಶಕ್ಕೊಮ್ಮೆ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಬೇರೆ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಗುಲ್ಮೊಹರ್ ಅತವಾ ಮೇ ಪ್ಲವರ‍್ ಒಂದು ಸಮಶೀತೋಉಶ್ಣ ವಲಯದ ಗಿಡದ ಹೂ. ‘ಮಡಗಾಸ್ಕರ್’ ಎಂಬ ದ್ವೀಪ ಇದರ ತವರು. ಬ್ರಿಟಿಶ್ ವ್ಯಾಪಾರಿಗಳ ಮೂಲಕ ಬಂದು ಶತಮಾನದ ಹಿಂದೆಯೇ ಬಾರತದಲ್ಲಿ ಪರಿಚಿಸಲ್ಪಟ್ಟಿದೆ ಎಂಬ ಅಬಿಪ್ರಾಯವಿದೆ. ‘ಡೆಲೊನಿಕ್ಸ್ ರೆಜಿಯ’(Delonix regia) ಇದರ ವೈಜ್ನಾನಿಕ ಹೆಸರು. ಗುಲ್ಮೊಹರ್ ಎಂಬುದು ಪರ‍್ಶಿಯನ್ ಮೂಲದ ಪದ. ಗುಲ್ ಎಂದರೆ ಗುಲಾಬಿ ಹೂವು, ಮೊಹರ‍್ ಎಂದರೆ ಗುರುತು ಅತವಾ ಚಾಪ ಎಂಬುದಾಗಿದೆ. ಇಂಗ್ಲೀಶ್ ನಲ್ಲಿ ’ರಾಯಲ್ ಪೊಯಿನ್ಸಿಯಾನ’(Royal poinciana) ಅತವಾ ಪ್ಲೇಮ್ ಟ್ರೀ(Flame tree) ಇದರ ಇತರೆ ಹೆಸರುಗಳು. ಈ ಗಿಡ ಸುಮಾರು10 ರಿಂದ.15 ಮೀಟರ‍್ ರಶ್ಟು ಎತ್ತರಕ್ಕೆ ಬೆಳೆಯಬಲ್ಲದು.

ಸಾಮಾನ್ಯವಾಗಿ ಮರಗಿಡಗಳು ಬೇಸಿಗೆಯಲ್ಲಿ ಕಳಾಹೀನವಾಗಿರುತ್ತವೆ. ಆದರೆ ಗುಲ್ಮೊಹರ್ ಹಾಗಲ್ಲ. ಬಿರುಬಿಸಿಲಲ್ಲಿ ಮರದ ತುಂಬಾ ಕಿತ್ತಳೆ ಅತವಾ ಗಾಡಕೆಂಪು ಬಣ್ಣದ ಹೂ ಬಿಟ್ಟು.ತನ್ನ ಸೌಂದರ‍್ಯವನ್ನು ಎಲ್ಲರಿಗೂ. ಉಣಬಡಿಸುತ್ತದೆ. ಗುಲ್ಮೊಹರ್ ಹೂವುಗಳು ಸಾಮಾನ್ಯವಾಗಿ 5 ದಳಗಳನ್ನು ಹೊಂದಿರುತ್ತವೆ. ಇವುಗಳಲ್ಲಿ 4 ದಳಗಳು ಗಾಡವಾದ ಕೆಂಪು ಅತವಾ ಕಿತ್ತಳೆ ಬಣ್ಣದಲ್ಲಿದ್ದರೆ, 5ನೇ ದಳವು ಸ್ವಲ್ಪ ದೊಡ್ಡದಾಗಿದ್ದು ಸ್ವಲ್ಪ ಬಿಳಿ, ಸ್ವಲ್ಪ ಹಳದಿ ಬಣ್ಣದಿಂದ ಕೂಡಿದ್ದು ಕೆಂಪು ಗೆರೆಗಳನ್ನು ಹೊಂದಿರುತ್ತದೆ. ಇದು ಕೀಟಗಳನ್ನು ಆಕರ‍್ಶಿಸಲು ನೆರವಾಗುತ್ತದೆ. ಇವುಗಳ ಒಟ್ಟು ಗುಂಪನ್ನು ‘ಕರೋಲ್ಲಾ’ (Corolla) ಎನ್ನುತ್ತಾರೆ. ಇದರ ಎಲೆಯ ರಚನೆಯು ಗರಿಯ ಆಕಾರದಲ್ಲಿದ್ದು 20 ರಿಃದ 40 ಸಣ್ಣ ಸಣ್ಣ ಎಲೆಗಳಿಂದ ಕೂಡಿರುತ್ತದೆ.

ಇನ್ನು ಗುಲ್ಮೊಹರ್ ಪ್ರಯೋಜನಗಳ ಬಗ್ಗೆ ಹೇಳಬೇಕೆಂದರೆ ಇದರ ಎಲೆ ಮತ್ತು ತೊಗಟೆ ಆಯುರ‍್ವೇದದಲ್ಲಿ ಜೀರ‍್ಣಕ್ರಿಯೆಗೆ ಸಹಾಯವಾಗುವಂತಹ ಔಶದದಲ್ಲಿ ಬಳಕೆಯಾಗುವುದು ಎನ್ನಲಾಗುತ್ತದೆ. ಇದರ ಕಾಂಡವು ಇಂದನದ ಬಳಕೆಯಲ್ಲಿ ಬಾಗಿಯಾಗುತ್ತದೆ. ಹೂವಿನ ಹಿತವಾದ ಸುವಾಸನೆಯು ಜೇನುನೊಣಗಳಿಗೆ ಉತ್ತಮವಾದ ಮಕರಂದವನ್ನು ಒದಗಿಸುತ್ತದೆ. ಗುಲ್ಮೊಹರ್ ಮರವು ಬಿಸಿಲಿನಲ್ಲಿ ತಂಪಾದ ನೆರಳು ನೀಡುವುದರೊಂದಿಗೆ ಮಣ್ಣಿನ ಸವಕಳಿಯನ್ನು ತಪ್ಪಿಸುವಲ್ಲಿ ನೆರವಾಗುತ್ತದೆ.

ಒಟ್ಟಾರೆ ಗುಲ್ಮೊಹರ್ ನೋಡುಗರನ್ನು ತಣಿಸುವುದರೊಟ್ಪಿಗೆ ಪರಿಸರವನ್ನೂ ಕಾಪಾಡುತ್ತದೆ. ಇನ್ನೂ ಈ ವಿಶಿಶ್ಟ ಪ್ರಬೇದದ ಸುಂದರವಾದ ಮರಗಳು ಅಳಿವಿನ ಅಂಚಿಗೆ ತಲುಪದಂತೆ ಎಲ್ಲರೂ ಗಮನ ಹರಿಸಬೇಕಿದೆ.

( ಚಿತ್ರಸೆಲೆ : nurserylive.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *