‘ಹೊರಬೀಡು’ – ಒಂದು ವಿಶೇಶ ಆಚರಣೆ

ಶ್ಯಾಮಲಶ್ರೀ.ಕೆ.ಎಸ್.

ನಮ್ಮ ಪೂರ‍್ವಜರು ಆಚರಿಸುತ್ತಿದ್ದ ಹಲವು ಆಚರಣೆಗಳ ಹಿಂದೆ ವೈಜ್ನಾನಿಕ ಹಿನ್ನೆಲೆಯು ಅಡಗಿದೆ ಎಂಬುವುದಕ್ಕೆ, ಈಗಲೂ ಕೆಲವು ಗ್ರಾಮಗಳಲ್ಲಿ ಅನುಸರಿಸುತ್ತಿರುವ ಹಳೆಯ ಆಚರಣೆಗಳೇ ಸಾಕ್ಶಿ. ಅಂತಹ ಆಚರಣೆಗಳಲ್ಲಿ ಒಂದು ‘ಹೊರಬೀಡು’. ಹೆಸರೇ ಸೂಚಿಸುವಂತೆ ಹೊರಗಡೆ ನೆಲೆಸುವುದು ಎಂಬುದು ಇದರ ಹುರುಳು.

ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಎಲ್ಲಾ ಆಚರಣೆಗಳಲ್ಲಿ ಮೌಡ್ಯತೆ ಇದೆಯೆಂದು ಬಾವಿಸುವುದು ಕೆಲವೊಮ್ಮೆ ತಪ್ಪಾಗುವುದು ಎಂಬುವುದಕ್ಕೆ ‘ಹೊರಬೀಡು’ ಎಂಬ ಆಚರಣೆಯೇ ಪ್ರಮುಕ ಉದಾಹರಣೆ. ಶತಮಾನಗಳ ಹಿಂದೆ ಹಳ್ಳಿಗಳಲ್ಲಿ ಜನರು ಸಾಂಕ್ರಾಮಿಕ ರೋಗಗಳಿಂದ ತತ್ತರಿಸುತ್ತಿದ್ದಾಗ, ಅದು ಉಲ್ಬಣಗೊಳ್ಳುವುದನ್ನು ತಡೆ ಹಿಡಿಯಲು ಹಾಗೂ ಅದರಿಂದ ಹೊರಬರಬಹುದೆಂಬ ನಂಬಿಕೆಯಿಂದ ಶಕ್ತಿ ದೇವತೆಗಳನ್ನು ಪ್ರತಿಶ್ಟಾಪಿಸುತ್ತಿದರು. ಆಮೇಲೆ ದೇವತೆಗಳಿಗೆ ಪೂಜೆ ಸಲ್ಲಿಸಿ, ಗ್ರಾಮದ ಜನರು ಬೆಳ್ಳಂಬೆಳಗ್ಗೆ ತಮ್ಮ ಪಾತ್ರೆಗಳು, ಬಟ್ಟೆ ಬರೆ, ದನಕರುಗಳು, ಮೇಕೆ, ಕುರಿಕೋಳಿ, ಬೆಕ್ಕು ಸೇರಿದಂತೆ ಎಲ್ಲಾ ಸಾಕು ಪ್ರಾಣಿಗಳನ್ನು ತಮ್ಮ ಜೊತೆ ಕೊಂಡೊಯ್ಯುತ್ತಿದ್ದರು. ಹೀಗೆ ಊರೂರೇ ಕಾಲಿ ಮಾಡಿ ಊರಾಚೆಯಲ್ಲಿರುವ ತಮ್ಮ ಹೊಲ ತೋಟಗಳಲ್ಲಿ, ಹೊಳೆ ದಂಡೆಗಳಲ್ಲಿ ಬೇರೆ ಬೇರೆಯಾಗಿ ತಮ್ಮ ತಮ್ಮ ಪರಿವಾರದವರೊಂದಿಗೆ ಕೇವಲ ಒಂದು ದಿನದ ಮಟ್ಟಿಗೆ ವಾಸ್ತವ್ಯ ಹೂಡುತ್ತಿದ್ದರು. ಆದಶ್ಟು ನೀರು ದೊರೆಯುವ ಸ್ತಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಕಾಲಿಯಾದ ಊರಿನ ಸುತ್ತಲೂ ಬೇಲಿಹಾಕಿ ಯಾರನ್ನು ಊರಿನ ಒಳಗೆ ಪ್ರವೇಶಿಸದಂತೆ ಆಜ್ನಾಪಿಸಿ, ಯಾರೂ ಒಳಬರದಂತೆ ತಡೆಯಲು ಬೇಲಿಯ ಸುತ್ತ ತೋಟಿ ತಳವಾರರನ್ನು ನೇಮಿಸಿ ಕಾಯಲು ಬಿಡುತ್ತಿದ್ದರು. ಜೊತೆಗೆ ಯಾರಾದರೂ ಆಜ್ನೆಯನ್ನು ಉಲ್ಲಂಗಿಸಿ ಊರಿನ ಒಳಗೆ ಹೋದರೆ ಅವರಿಗೆ ಕೆಡುಕು ಉಂಟಾಗುವುದೆಂಬ ನಂಬಿಕೆಯಿತ್ತಂತೆ. ಹೀಗೆ ಬಿಡಾರ ಹೂಡಿದ ಸಮಯದಲ್ಲಿ ತಮಗಿಶ್ಟವಾದ ಸಿಹಿ ಮತ್ತು ಕಾರದ ಬಗೆ ಬಗೆಯ (ಸಸ್ಯಹಾರಿ ಮತ್ತು ಮಾಂಸಾಹಾರಿ) ಕಾದ್ಯಗಳನ್ನು ತಯಾರಿಸಿ, ಸವಿದು ವಿಶ್ರಾಂತಿ ಪಡೆಯುತ್ತಿದ್ದರು. ಆಮೇಲೆ ಸೂರ‍್ಯಾಸ್ತದ ಬಳಿಕ ಊರಿಗೆ ಹಿಂದಿರುಗಿ ಗೋದೂಳಿ ಸಮಯದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣ ಎಂಬ ಬೂತ ದೇವತೆಗಳು ಹಾಗೂ ಮಾರಮ್ಮ ಸೇರಿದಂತೆ ಹೀಗೆ ತಮ್ಮೂರಿನ ಶಕ್ತಿ ದೇವತೆಗಳನ್ನು ಆರಾದಿಸುತ್ತಿದ್ದರು. ಜೊತೆಗೆ ತಮ್ಮ ತಮ್ಮ ಮನೆಗಳ ಹೊಸ್ತಿಲು ಬಾಗಿಲುಗಳಿಗೆ ಮೊಸರನ್ನದ ನೈವೇದ್ಯದೊಂದಿಗೆ ಪೂಜಿಸಿ, ಮನೆಗೆ ಶಾಂತಿ ನೆಲೆಸುವ ಸಲುವಾಗಿ ಮನೆಯ ಸುತ್ತ ಮುತ್ತ ಮೊಸರನ್ನವನ್ನು ಹಾಕಿ ನಂತರ ಮನೆಯೊಳಗೆ ಪ್ರವೇಶ ಮಾಡುತ್ತಿದ್ದರು. ತದನಂತರ, ಮನೆಯನ್ನು ಸ್ವಚ್ಚಗೊಳಿಸಿ ಎಂದಿನಂತೆ ತಮ್ಮ ಕೆಲಸ ಕಾರ‍್ಯಗಳಲ್ಲಿ ಮಗ್ನರಾಗುತ್ತಿದ್ದರು.

ಹೊರಬೀಡು ಆಚರಣೆಯ ಒಳಿತುಗಳು

ಹೀಗೆ ಒಂದು ದಿವಸದ ಮಟ್ಟಿಗೆ ಊರನ್ನು ತೊರೆಯುವುದರಿಂದ ಊರಿಗೆ ಅಂಟಿರುವ ಕೆಟ್ಟ ರೋಗ-ರುಜಿನಗಳು, ದುಶ್ಟ ಶಕ್ತಿಗಳು, ಕಂಟಕಗಳು ನಿವಾರಣೆಯಾಗಬಹುದೆಂಬ ಬಲವಾದ ನಂಬಿಕೆ ನಮ್ಮ ಪೂರ‍್ವಿಕರಲ್ಲಿತ್ತು. ವರ‍್ಶಕ್ಕೊಮ್ಮೆಈ ಹೊರಬೀಡನ್ನು ಆಚರಿಸುವ ಪದ್ದತಿ ಹಲವೆಡೆ ರೂಡಿಯಲ್ಲಿತ್ತು. ಕಾಲ ಕ್ರಮೇಣ ಈ ಪದ್ದತಿಗಳು ಕಡಿಮೆಯಾಗಿ ಐದು ವರ‍್ಶ, ಹತ್ತು ವರ‍್ಶಕ್ಕೊಮ್ಮೆ ಮುಂದೂಡಿ ಆಚರಿಸುತ್ತಾ ಬರಲಾಗುತ್ತಿದೆ. ಬಹಳ ಹಿಂದೆ ಮಲೇರಿಯಾ ಮತ್ತು ಕ್ಶಯ ರೋಗ ಮೊದಲ ಬಾರಿಗೆ ಆವರಿಸಿದ್ದಾಗಲೂ ನಮ್ಮ ಹಿರಿಯರು ಈ ಪದ್ದತಿಯನ್ನು ಅನುಸರಿಸಿದ್ದರೆಂಬ ವಿಚಾರ ತಿಳಿದು ಬಂದಿದೆ. ಇತ್ತೀಚೆಗೆ ಕೊರೋನ ಬಂದ ಹಿನ್ನೆಲೆಯಲ್ಲಿ, ಹಲವು ಗ್ರಾಮಗಳಲ್ಲಿ ಅಲ್ಲಲ್ಲಿ ಈ ‘ಹೊರಬೀಡು’ ಆಚರಣೆಯು ಮತ್ತೆ ಬೆಳಕಿಗೆ ಬಂದಿರುವುದು ಗಮನಾರ‍್ಹ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: