ನಾಡೊಡೆಯುವ ಕಯ್ಗಳಿಗೆ ಬೀಳಲಿ ಕಡಿವಾಣ

ಚೇತನ್ ಜೀರಾಳ್.

thehindudotcom

ಹಯ್ದರಾಬಾದ್ ಕರ್‍ನಾಟಕದ ಹಲವರುಶಗಳ ಕನಸಾಗಿದ್ದ “ವಿಶೇಶ ಸ್ತಾನಮಾನ”ದ ಬೇಡಿಕೆ ಇನ್ನೇನು ಜಾರಿಗೆ ಬರುವ ಹಂತಕ್ಕೆ ಬಂದಿದೆ. ಕಳೆದ ಸರ್‍ಕಾರದ ಅವದಿಯಲ್ಲಿ ಕೇಂದ್ರ ಸರ್‍ಕಾರದಿಂದ ಒಪ್ಪಿಗೆ ಪಡೆದು ಸಂವಿದಾನದಲ್ಲಿ ಕಲಂ 371 (ಜೆ) ಅಡಿಯಲ್ಲಿ ಕರ್‍ನಾಟಕದ ಕಲ್ಬುರ್‍ಗಿ, ರಾಯಚೂರು, ಯಾದಗಿರಿ, ಬೀದರ್‍, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ವಿಶೇಶ ಸವ್ಲಬ್ಯಗಳನ್ನು ನೀಡುವ ಬಗ್ಗೆ ತಿದ್ದುಪಡಿ ಮಾಡಲಾಯಿತು. ಅದರಂತೆ ಈಗಿನ ರಾಜ್ಯ ಸರ್‍ಕಾರ ಇದಕ್ಕಾಗಿ ವಿಶೇಶ ಸಂಪುಟ ಉಪಸಮಿತಿಯೊಂದನ್ನು ರಚಿಸಿ ನೀಲನಕ್ಶೆಯೊಂದನ್ನು ಸಲ್ಲಿಸಲು ಹೇಳಿತ್ತು, ಇದರಂತೆ ಸಮಿತಿಯು 22 ಶಿಪಾರಸುಗಳನ್ನು ಸರ್‍ಕಾರಕ್ಕೆ ಸಲ್ಲಿಸಿತ್ತು. ಈಗ ಅವುಗಳನ್ನು ಜಾರಿಗೆ ತರಲು ರಾಜ್ಯ ಸರ್‍ಕಾರ ಒಪ್ಪಿಗೆ ನೀಡಿದೆ.

ಈ ಶಿಪಾರಸುಗಳು ಹೇಳುವಂತೆ ಹಯ್.ಕ ಜನರಿಗೆ ವ್ರುತ್ತಿಪರ ಕಲಿಕೆ ಸೇರಿದಂತೆ ಹಯ್.ಕ ಬಾಗದ ಕಲಿಕೆ ಸಂಸ್ತೆಗಳಲ್ಲಿ ಶೇ 70 ರಶ್ಟು ಮೀಸಲು, ರಾಜ್ಯದ ಇತರೆ ಬಾಗದ ಕಲಿಕಾ ಸಂಸ್ತೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಶೇ 8 ರಶ್ಟು ಮೀಸಲು, ರಾಜ್ಯಮಟ್ಟದ ಕೆಲಸದಲ್ಲಿ ಶೇ 8 ರಶ್ಟು ಮೀಸಲು, ಸ್ತಳೀಯ ಸರಕಾರಿ ಇಲಾಕೆ, ನಿಗಮ ಮಂಡಳಿ ಹಾಗೂ ಸಂಸ್ತೆಗಳಲ್ಲಿ ಕಾಲಿ ಹುದ್ದೆಗಳಿಗೆ ನೇರ ನೇಮಕಾತಿ, ಹೆಂಗಸರು ಹಾಗೂ ಮಕ್ಕಳಿಗೆ ಹಲವು ವಲಯದಲ್ಲಿ ವಿಶೇಶ ಕಾರ್‍ಯಕ್ರಮಗಳು, ಕಲಿಕೆ ಸಂಸ್ತೆಗಳಿಗೆ ಅನುದಾನ ಹಾಗೂ ಮೂಲಸವ್ಕರ್‍ಯ ನೀತಿ, ಪರಿಶಿಶ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಶ ಗಟಕಗಳ ಸ್ತಾಪನೆಗೆ ಸಲಹೆಗಳನ್ನು ನೀಡಲಾಗಿದೆ.

ಬೆಳಕು ಕಾಣಲಿರುವ ಹಯ್.ಕ ಬಾಗ

ನಿಜಾಮರ ಆಳ್ವಿಕೆಯಲ್ಲಿದ್ದ ಕಾರಣಕ್ಕೆ ಏಳಿಗೆಯಲ್ಲಿ ಕೊಂಚ ಹಿಂದೆಯೇ ಉಳಿದುಕೊಂಡಿದ್ದ ಹಯ್.ಕ ಪ್ರದೇಶಕ್ಕೆ ಈ ವಿಶೇಶ ಸ್ತಾನಮಾನ ತನ್ನ ಬೆಳವಣಿಗೆಯ ವೇಗವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು ಅನ್ನುವುದು ಸಂತೋಶದ ವಿಶಯ. ಈಗಾಗಲೇ ರಾಜ್ಯಕ್ಕೆ ಸಲ್ಲಿಸಲಾಗಿದ್ದ ಹಲವು ವರದಿಗಳು ಹಾಗೂ ಇತ್ತೀಚಿನ ಡಾ. ಡಿ. ಎಂ. ನಂಜುಂಡಪ್ಪ ಸಮಿತಿ ವರದಿಯಲ್ಲಿಯೂ ಸಹ ಹಯ್.ಕ ಪ್ರದೇಶವು ಏಳಿಗೆಯಲ್ಲಿ ಹಿಂದುಳಿದಿರುವುದರ ಬಗ್ಗೆ ಮಾತನಾಡಲಾಗಿತ್ತು. ಈಗ ಸರ್‍ಕಾರವು ಸಂವಿದಾನದ ವಿದಿ 371 (ಜೆ) ಅಂತೆ ಈ ಬಾಗದ ಜನರ ಬೇಡಿಕೆಗೆ ಸ್ಪಂದಿಸಿ ಸವಲತ್ತುಗಳನ್ನು ಒದಗಿಸಲು ಮುಂದಾಗಿದೆ. ಮುಕ್ಯವಾಗಿ ಕಲಿಕೆ, ಮೂಲಬೂತ ಸವ್ಕರ್‍ಯ, ಉದ್ಯಮಗಳು, ರಸ್ತೆಗಳು, ನೀರಾವರಿ ಯೋಜನೆಗಳು ಏಳಿಗೆ ಕಾಣಬೇಕಿವೆ. ಸಮಿತಿ ಶಿಪಾರಸು ಮಾಡಿರುವ ವಿಶಯಗಳಲ್ಲಿ ಇವುಗಳ ಬಗ್ಗೆ ಗಮನಹರಿಸಲಾಗಿರುವುದು ಸಂತಸದ ವಿಶಯ. ಒಂದು ಜನಾಂಗದ ಅತವಾ ಪ್ರದೇಶದ ಏಳಿಗೆಯಲ್ಲಿ ಕಲಿಕೆಯು ತುಂಬಾ ದೊಡ್ಡ ಪಾತ್ರವಹಿಸುತ್ತದೆ. ಇನ್ನೊಂದೆಡೆ ಕೆಲಸದಲ್ಲಿ ಸಿಗುವ ಮೀಸಲಾತಿಯಿಂದ ಈ ಬಾಗದ ಜನರಿಗೆ ತಮ್ಮ ಜೀವನ ಮಟ್ಟ ಸುದಾರಿಸಿಕೊಳ್ಳಲು ನೆರವಾಗುತ್ತದೆ. ಇದರ ಜೊತೆಗೆ ಇಲ್ಲಿ ಹರಿಯುವ ನದಿಗಳ ಮೂಲಕ ಸಿಗುವ ನೀರನ್ನು ಸರಿಯಾಗಿ ಬಳಸಿಕೊಳ್ಳಲು ನೀರಾವರಿ ಯೋಜನೆಗಳನ್ನು ತುರ್‍ತಾಗಿ ಜಾರಿಗೆ ತರಬೇಕಾಗಿದೆ.

ನಮ್ಮ ಜನಪ್ರತಿನಿದಿಗಳು ಎಚ್ಚೆತ್ತುಕೊಳ್ಳಬೇಕಿದೆ

ಅಯ್ತಿಹಾಸಿಕವಾಗಿ ಹಯ್.ಕ ಬಾಗದ ಹಿಂದುಳಿಯುವಿಕೆಗೆ ಏನೇ ಕಾರಣಗಳಿದ್ದರೂ ಅವನ್ನು ಒಪ್ಪಿಕೊಳ್ಳುತ್ತಲೇ, ನಮ್ಮ ಬಾಗ ಏಳಿಗೆಯಲ್ಲಿ ಹಿಂದುಳಿಯಲು ಹಯ್.ಕ ವನ್ನು ಪ್ರತಿನಿದಿಸಿರುವ ಜನಪ್ರತಿನಿದಿಗಳ ಪಾಲು ದೊಡ್ಡದೇ ಇದೆ. ನಂಜುಂಡಪ್ಪ ಸಮಿತಿ ವರದಿಯ ಪ್ರಕಾರ ಗುಲ್ಬರ್‍ಗಾ ವಿಬಾಗದಲ್ಲಿ 21 ಅತಿ ಹಿಂದುಳಿದ, 5 ಹೆಚ್ಚು ಹಿಂದುಳಿದ ಹಾಗೂ 2 ಹಿಂದುಳಿದ ತಾಲೂಕುಗಳಿವೆ. ಗುಲ್ಬರ್‍ಗಾ ವಿಬಾಗವು ಕಲಿಕೆ, ಆರಯ್ಕೆ, ಮಾನವ ಸಂಪನ್ಮೂಲದ ಏಳಿಗೆ ಮುಂತಾದ ವಿಶಯಗಳಲ್ಲಿ ಅತಿ ಹಿಂದುಳಿದಿರುವುದು ಸ್ಪಶ್ಟವಾಗಿ ಕಾಣಿಸುತ್ತದೆ. ಈ ಹಿಂದುಳಿಯುವಿಕೆಯಲ್ಲಿ ಬೇರೆಲ್ಲ ಕಾರಣಗಳಿಗಿಂತ ದೊಡ್ಡ ಕಾರಣ ನಮ್ಮ ಪ್ರದೇಶದ ರಾಜಕಾರಣಿಗಳ ಕೆಲಸಗಳ್ಳತನ ಅನ್ನಬಹುದು. ಈ ಬಾಗದಿಂದ ವೀರೇಂದ್ರ ಪಾಟೀಲರು (2 ಬಾರಿ), ದರಂ ಸಿಂಗ್ (1 ಬಾರಿ) ಮುಕ್ಯಮಂತ್ರಿಗಳಾಗಿದ್ದರು, ಹಾಗೆಯೇ ಮಲ್ಲಿಕಾರ್‍ಜುನ ಕರ್‍ಗೆ, ಎಂ. ವಯ್. ಗೋರ್‍ಪಡೆ, ಎಂ. ಪಿ. ಪ್ರಕಾಶ್, ಜನಾರ್‍ದನ ರೆಡ್ಡಿ, ಬಸವರಾಜ ರಾಯರೆಡ್ಡಿ, ಮಾಲೀಕಯ್ಯ ಗುತ್ತೇದಾರ್‍, ಹೆಚ್. ಜಿ. ರಾಮುಲು, ಶಿವರಾಜ ತಂಗಡಗಿ, ಶಿವನಗವ್ಡ ನಾಯಕ್, ಇಕ್ಬಾಲ್ ಅನ್ಸಾರಿ, ವಯ್ಜನಾತ ಪಾಟೀಲ್ ಹಾಗೂ  ಮುಂತಾದವರು ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದರು. ಆದರೆ ಇವರುಗಳಿಂದ ನಮ್ಮ ಬಾಗದ ಏಳಿಗೆಗೆ ಸಿಕ್ಕಿರುವ ಕೊಡುಗೆ ಮಾತ್ರ ತುಂಬಾ ಕಡಿಮೆ. ಇಂತಹ ಹೊತ್ತಲ್ಲೇ ವಿಶೇಶ ಸ್ತಾನಮಾನ ಬಂದಿದೆ. ಅದನ್ನು ತಕ್ಕಂತೆ ಅನುಶ್ಟಾನಗೊಳಿಸುವತ್ತ ಹಯ್ದರಾಬಾದ್ ಕರ್‍ನಾಟಕದ ಜನಪ್ರತಿನಿದಿಗಳು ಗಮನ ಹರಿಸದೇ ಹೋದರೆ ಇದು ಕಯ್ಗೆ ಬಂದ ತುತ್ತು ಬಾಯಿಗೆ ಬರದಂತಾಗುವ ಸಾದ್ಯತೆಯೇ ಹೆಚ್ಚು.

ನಾಡೊಡೆಯುವ ಕಯ್ಗಳಿಗೆ ಕಡಿವಾಣ ಹಾಕಬೇಕಾಗಿದೆ

ಆಂದ್ರಪ್ರದೇಶದಿಂದ ಒಡೆದು ಹೊಸ ರಾಜ್ಯವಾಗಿರುವ ತೆಲಂಗಾಣದ ಮಾದರಿಯಲ್ಲಿ ನಮ್ಮ ನಾಡಿನ ಕೆಲವು ಜನರು ಹಯ್.ಕ ಬಾಗವನ್ನು ಒಡೆದು ಹೊಸ ರಾಜ್ಯ ಮಾಡುವ ಬಗ್ಗೆ ಮಾತನಾಡುವುದು ಆಗಾಗ ಕೇಳಿಬರುತ್ತಿದೆ. ರಾಜ್ಯ ಸರ್‍ಕಾರಗಳು ಹಯ್.ಕ ಪ್ರದೇಶದ ಬೆಳವಣಿಗೆಯನ್ನು ಕಡೆಗಣಿಸುತ್ತಲೇ ಬಂದಿದ್ದಾವೆ, ಇದಕ್ಕೆ ಹೊಸ ರಾಜ್ಯವು ಪರಿಹಾರ ಅನ್ನುವ ದಾಟಿಯಲ್ಲಿ ಮಾತನಾಡಿರುವುದೂ ಇದೆ. ಆದರೆ ನಿಜವಾಗಿಯೂ ಏಳಿಗೆಯಲ್ಲಿ ಹಿಂದುಳಿಯಲು ಕಾರಣ ಇಲ್ಲಿನ ಜನಪ್ರತಿನಿದಿಗಳ ಅಸಡ್ಡೆಯೇ ಅನ್ನುವುದು ಗೊತ್ತಿರುವಾಗ ಇದೇ ನಾಯಕರಿಗೆ ಹೊಸ ರಾಜ್ಯವೊಂದನ್ನು ಒಪ್ಪಿಸಿದರೆ ಅಲ್ಲಿ ರಾಮರಾಜ್ಯ ಕಟ್ಟಲ್ಪಡುತ್ತದೆ ಅನ್ನುವುದು ಬ್ರಮೆಯಲ್ಲವೇ? ಪುಣ್ಯಕ್ಕೆ ಅಂತಹ ಬ್ರಮೆ ಇಲ್ಲಿನ ಕನ್ನಡಿಗರಲ್ಲೂ ಇಲ್ಲ. ಕರ್‍ನಾಟಕದಲ್ಲಿ ತೆಂಕಣ ಕರ್‍ನಾಟಕ ಹಾಗೂ ಬಡಗಣ ಕರ್‍ನಾಟಕ ಬಾಗದ ಜನರು ಒಬ್ಬರೊನ್ನೊಬ್ಬರು ಬೇರೆ ಬೇರೆ ಎನ್ನುವ ರೀತಿಯಲ್ಲಿ ನಡೆದುಕೊಂಡಿಲ್ಲ. ಸಾಂಸ್ಕ್ರುತಿಕವಾಗಿಯೂ, ಮಾನಸಿಕವಾಗಿಯೂ ನಾಡಿನ ಜನರು ಒಬ್ಬರೊನ್ನಬ್ಬರು ಒಪ್ಪಿಕೊಳ್ಳುತ್ತಾ, ಅಪ್ಪಿಕೊಳ್ಳುತ್ತಲೇ ಬಂದಿದ್ದಾರೆ. ಕಾವೇರಿ ನದಿ ವಿಚಾರವಾಗಿ ವಿವಾದಗಳು, ಹೋರಾಟಗಳು ನಡೆದಾಗ ಬಡಗಣ ಕರ್‍ನಾಟಕದ ಜನರು ತೆಂಕಣ ಬಾಗದ ಜನರಿಗೆ ಹೆಗಲುಕೊಟ್ಟಿದ್ದಾರೆ. ಅದೇ ರೀತಿ ಬಡಗಣ ಕರ್‍ನಾಟಕದಲ್ಲಿ ಗಡಿ ವಿವಾದ, ಪ್ರವಾಹ, ನದಿ ನೀರು ಹಂಚಿಕೆ ಮುಂತಾದ ವಿಶಯಗಳ ಬಗ್ಗೆ ಹೋರಾಟಗಳು ನಡೆದಾಗ ತೆಂಕಣ ಕರ್‍ನಾಟಕದ ಜನರು ನಮಗೆ ಒತ್ತಾಸೆಯಾಗಿ ನಿಂತಿದ್ದಾರೆ. ಒಗ್ಗಟ್ಟೊಂದೇ ಈ ನಾಡಿನ ಏಳಿಗೆಗೆ ದಾರಿ ಅನ್ನುವುದನ್ನ ನಾವುಗಳು ಮರೆಯಬಾರದು. ಈಗ ನಾಡೊಡೆಯುವ ಬಗ್ಗೆ ಏಳುತ್ತಿರುವ ದನಿಗಳನ್ನು ಚಿಗುರಿನಲ್ಲೇ ಚಿವುಟಿ ಹಾಕಬೇಕಾಗಿದೆ. ಈ ಮೂಲಕ ಹಯ್ದರಾಬಾದ್ ಕರ್‍ನಾಟಕ ಹಿಂದುಳಿದ ಪ್ರದೇಶ ಅನ್ನುವ ಹಣೆಪಟ್ಟಿಯನ್ನು ಕಿತ್ತೊಗೆದು ಜೊತೆ ಜೊತೆಯಾಗಿ ನಾಡಿನ ಜನರೆಲ್ಲರೂ ಏಳಿಗೆಯ ಹಾದಿದಲ್ಲಿ ಮುನ್ನಡೆಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.

(ಚಿತ್ರ: hindu.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: