‘ನನ್ನ ಬದುಕಿನ ಕತೆ’ – ರೂಮಿ

rumi

{ಹದಿಮೂರನೇ ಶತಮಾನದ ಪರ‍್ಶಿಯನ್ ಕವಿ, ಸೂಪಿ ಸಂತ ಜಲಾಲುದ್ದೀನ್ ಮುಹಮ್ಮದ್ ರೂಮಿಯ The Story of My Life ಎಂಬ ಹೆಸರಿನಲ್ಲಿ ಇಂಗ್ಲಿಶ್ ಗೆ ನಾದರ್ ಕಲೀಲಿ ಅವರಿಂದ ನುಡಿಮಾರಿಸಲಾದ ಕವಿತೆಯ ಕನ್ನಡ ನುಡಿಮಾರು ಇದು.}

ಶಶಿಕುಮಾರ್

ನನ್ನ ಕತೆಯ ಹೇಳಲು ನಾ
ಅಣಿಯಾಗಿದ್ದೆ
ಆದರೆ ಕಂಬನಿಯ ಕಿರುದೆರೆಗಳು,
ಎದೆಯ ಕಳವಳ
ಹೇಳಬಿಡಲಾರವು ನನ್ನ

ಅಲ್ಲೊಂದು ಇಲ್ಲೊಂದು ಪದ
ನುಡಿಯುತ್ತ ಉಗ್ಗತೊಡಗಿದೆ ನಾ
ಒಡೆಯಲಣಿಯಾಗಿರೋ ನವುರು
ಹರಳಿನಂತನಿಸಿತು
ಉದ್ದಕ್ಕೂ

ಬಿರುಗಾಳಿಯ ಕಡಲು
ಎಂದು ಕರೆವೆವು ನಾವೀ ಬದುಕನು
ಎಲ್ಲ ದೊಡ್ಡಡಗುಗಳು ಕೂಡ
ಚೂರುಚೂರಾಗುವುವು
ಒಂದೊಂದು ಮರದ ತುಂಡಂತೆ

ಯಾವ ಹುಟ್ಟುಗೋಲಿಲ್ಲ
ಯಾವ ಕಯ್ದೂ ಇಲ್ಲ
ಇನ್ನು ಹೇಗೆ ತಾನೇ
ಸಾಗಿಸಲಿ ಈ ಒಂಟಿ
ಪುಟ್ಟ ದೋಣಿಯ

ಕಡಲಲೆಗೆ ಸಿಕ್ಕಿ ಕಡೆಗೂ
ಒಡೆದು ಚೂರಾಯಿತೆನ್ನ ದೋಣಿ
ಒಂಟಿ ಹಲಗೆಗೆ ಕಟ್ಟಿಕೊಂಡಿದ್ದ
ನಾನು ತಪ್ಪಿಸಿಕೊಂಡೆ
ಅಂಕೆಯಿಂದ

ದಿಗಿಲು ಮಾಯವಾದರೂ
ನನಗೇಕೋ ನೋವು
ಒಂದಲೆ ಜೊತೆ ಮೇಲೇಳುತ್ತ
ಮತ್ತೊಂದರ ಜೊತೆ ಕುಸಿವಶ್ಟು
ಕಯ್ಲಾಗದವನೇ ನಾನು

ನಾನು ಇರುವಾಗ
ಇಲ್ಲದಿರುವೆನೇ
ತಿಳಿಯದೊಂದೂ ನನಗೆ
ತಿಳಿದಿರುವುದೊಂದೇ
ನಾನಿರುವಾಗ
ಇಲ್ಲ

ಇಲ್ಲದಿರುವಾಗ ಇರುವೆ
ಈಗ ಮರುಹುಟ್ಟು
ಮರಳಿ ಬದುಕು ಪಡೆವ ಬಗ್ಗೆ
ಮುಂತಾದವನ್ನು
ಹೇಗೆ ತಾನೇ ನಾ
ನಂಬದಿರಲಿ

ಏಕೆಂದರೆ,
ನನ್ನದೇ ನೆನಸಿಕೆಯಂತೆ
ಈ ನೆಲದಲಿ
ನಾನೆಶ್ಟೋ ಸಲ
ಸತ್ತು ಹುಟ್ಟಿದ್ದೇನೆ

ಅದರಿಂದಲೇ
ಬೇಟೆಗಾರನ
ಈ ನಿಡಿದಾದ ಬೇಗುದಿಯ
ಬದುಕಿನ ಬಳಿಕವೂ
ನಾ ಕಡೆಯದಾಗಿ ಬಿಡುಗಡೆಯಾದೆ
ಬೆನ್ನತ್ತಿಸಿಕೊಂಡೆ
ಅಂಕೆಯಿಲ್ಲದವನಾದೆ

(ಚಿತ್ರ: http://www.vimlapatil.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: