ಕನಸು ನನಸಾಗಿಸಿದ ’ಸ್ಕಯ್ಪ್’ ಗೆಳೆಯರ ಕತೆ

-ವಿವೇಕ್ ಶಂಕರ್

skype

ಎಣ್ಣುಕಗಳನ್ನು ಬಳಸುವವರಿಗೆ ಸ್ಕಯ್ಪ್ ಅಂದರೆ ಮಿಂಬಲೆ ಹರಟೆ ಅದೂ ಓಡುತಿಟ್ಟದ ಹರಟೆಗೆ(video chat) ಬಳಸುವ ಒಂದು ಮೆದುಸರಕು(software) ಅಂತ ಚೆನ್ನಾಗಿ ಗೊತ್ತಿದೆ. ಇತ್ತೀಚೆಗೆ ಈ ಸ್ಕಯ್ಪಿನ ಹತ್ತನೆಯ ಸೂಳುಹಬ್ಬ(anniversary) ಮುಗಿಯಿತು. ಸ್ಕಯ್ಪು ಈ ಹತ್ತೇಡುಗಳಲ್ಲಿ ತುಂಬಾ ಹೆಸರು ಕೂಡ ಪಡೆದಿದೆ.

ಆದರೆ ಇದು ಮೊದಲು ಶುರುವಾದಾಗ ಇಂತ ಮಟ್ಟಕ್ಕೆ ಬೆಳೆಯುತ್ತದೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಇದರ ಕತೆ ಒಂದು ಬಗೆಯಲ್ಲಿ ಕನಸಿನ ಕತೆ ಅಂತನೇ ನಾವು ಹೇಳಬಹುದು. ಯಾವುದೇ ನಿಡಿದಾದ ಪಯಣ ಹೊರಡುವುದು ಕೆಲವು ಸಣ್ಣ ಹೆಜ್ಜೆಗಳಿಂದಲೇ ಅಲ್ವೇ ? ಬನ್ನಿ ಇವರ ಕತೆಯನ್ನು ಮೊದಲಿನಿಂದ ಕೇಳೋಣ.

ಮೊದಲ ಮಾತು

ಆಗ 2000 ನೆಯ ಇಸ್ವಿ,’ಡಾಟ್ ಕಾಮ್’ ಕಾವು ಅಮೇರಿಕಾದಲ್ಲಿ ಎಲ್ಲರಿಗೂ ದೊಡ್ಡ ಮಟ್ಟದಲ್ಲಿ ತಟ್ಟಿತ್ತು. ಆಗ ಯುರೋಪಿನಲ್ಲಿ ಎವ್ರಿಡೇ.ಕಾಮ್ (everyday.com) ಎಂಬ ಒಂದು ಮಿಂಬಾಗಿಲು(portal) ಆರು ಯುರೋಪಿಯನ್ ಗೆಳೆಯರನ್ನು ಒಟ್ಟುಗೂಡಿಸಿತು. ಮೊದಲಿಗೆ ಇದರಲ್ಲಿ ಸೇರಿದವರು ನಿಕ್ಲಾಸ್ ಜೆನ್ನ್-ಸ್ಟ್ರಾಮ್(Niklas Zennström) ಹಾಗೂ ಜಾನಸ್ ಪಿರಿಸ್(Janus Friis).

ಈ ಗೆಳೆಯರಿಗೆ ಮಿಂಬಾಗಿಲ ಬಿಡುಗಡೆ ಬೇಗ ಆಗಬೇಕಿತ್ತೆಂಬ ಬಯಕೆ ಇತ್ತು ಹಾಗಾಗಿ ಈ ಕೆಲಸಕ್ಕೆ ಹೆಚ್ಚು ಮಂದಿ ಪಾಲ್ಗೊಳ್ಳಬೇಕಾಗಿತ್ತು. ಆಗ ಜಾನ್ ಟಲ್ಲಿನ್ನ್(Jaan Tallinn),ಅಹ್ತಿ ಹೆನ್ಲಾ (Ahti Heinla) ಹಾಗೂ ಪ್ರಿತ್ ಕಸೆಸಲು(Priit Kasesalu) ಜತೆಗೂಡಿದರು. ಕೊನೆಯಲ್ಲಿ ಟೊವಿಯೊ ಅನ್ನಸ್(Toivo Annus) ಈ ಬಳಗಕ್ಕೆ ಸೇರಿದರು.

ಆದರೆ ಇವರು ತುಂಬಾ ಒಲವಿನಿಂದ ಮಾಡಿದ ಮೊದಲ ಮಿಂಬಾಗಿಲಿಗೆ ಗೆಲುವು ಎಟುಕಲಿಲ್ಲ ಹಾಗಂತ ಆ ಸೋಲು ಇವರ ಹುರುಪು ಮಾತ್ರ ಇಳಿಸಲಿಲ್ಲ. ಒಟ್ಟಿಗೆ ಸೇರಿ ಒಂದು ಹೊಸ ಮೆದುಸರಕು ತರಲು ಮತ್ತೇ ಅವರೆಲ್ಲಾ ಅಣಿಯಾದರು. ಆ ಹೊಸ ಮೆದುಸರಕಿನ ಹೆಸರು ಕಾಜಾ(kazaa).

ಕಾಜಾ 

ಬೇರೆ ಯಾವುದೇ ಎಣ್ಣುಕದ ನೆರವಿಲ್ಲದೆ ಕಡತಗಳನ್ನು ಒಂದು ಎಣ್ಣುಕದಿಂದ ಇನ್ನೊಂದು ಎಣ್ಣುಕಕ್ಕೆ ನೇರವಾಗಿ ’ಕಾಜಾ’ ಹಮ್ಮುಗೆ ಕಳುಹಿಸಬಲ್ಲದಾಗಿತ್ತು. ಆದರೆ ’ಕಾಜಾ’ ಕೂಡಾ ಮಂದಿಯ ಮೆಚ್ಚುಗೆ ಪಡೆಯುವಲ್ಲಿ ಸೋತಿತು ಯಾಕೆಂದರೆ ಇದನ್ನು ಬಳಕೆ ಮಾಡಿ ಕದ್ದಿರುವ ಹಾಡುಗಳು, ಓಡುತಿಟ್ಟಗಳನ್ನು ಮಂದಿ ಹಂಚುತ್ತಿದ್ದರು. ಹಾಗಾಗಿ ಹಲವರ ಅದರಲ್ಲೂ ಅಮೇರಿಕಾದ ಕಟ್ಟಲೆಯರಿಗರಿಂದ(lawyers) ಇವರು ಕಣ್ಣಾಮುಚ್ಚಾಲೆ ಆಟ ಆಡಬೇಕಾಗಿತ್ತು.

ಕೊನೆಗೆ ಇದು ಇವರಿಗೆ ತುಂಬಾ ದೊಡ್ಡ ಮಟ್ಟದಲ್ಲಿ ಪೆಟ್ಟು ಕೂಡಾ ಕೊಟ್ಟಿತು. ಕಳ್ಳರಿಗೆ ’ಕಾಜಾ’ ಅನುವು ಮಾಡಿಕೊಡುತ್ತಿರುವುದಕ್ಕಾಗಿ ಹಾಡು ಹಾಗೂ ಓಡುತಿಟ್ಟದ ಕಯ್ಗಾರಿಕೆಯವರಿಗೆ ಹಾನಿಯಾಗಿದ್ದಕ್ಕೆ ಸುಮಾರು $ 100,000,000 (ಸುಮಾರು ಆರ ನೂರು ಕೋಟಿ ರೂಪಾಯಿಗಳು) ಕೊಡಬೇಕಾಯಿತು!

ಹೊಸ ಹುಟ್ಟು 

ಈ ಹಿಂದಿನ ಎಡವಟ್ಟನ್ನು ದಾಟಿ 2002 ರಲ್ಲಿ ಈ ಗೆಳೆಯರು ಹೊಮ್ಮಿಸಿದ ಹೊಳಪೇ ’ಸ್ಕಯ್ಪ್’. ಇದು ಕರೆಗಳನ್ನು ಕಡಿಮೆ ಬೆಲೆಗೆ ದೊರಕಿಸಿಕೊಡುವಂತ ಏರ‍್ಪಾಟಾಗಿತ್ತು. 2003 ರಲ್ಲಿ ಇದರ ಮೊದಲ ವರಸೆಯನ್ನು ಮಾಡಿ ಸುಮಾರು ಇಪ್ಪತ್ತು ಮಂದಿಯ ಜೊತೆಗೆ ಒರೆಗೆ ಹಚ್ಚಿದರು.

ಈ ಹಮ್ಮುಗೆಯ(project) ಹೆಸರನ್ನು ’ಸ್ಕಯ್’ (ಬಾನು) ಮತ್ತು ’ಪೀಯರ್’ (ಒಂದೇ ಮಟ್ಟದವರು) ಪದಗಳನ್ನು ಸೇರಿಸಿ ’ಸ್ಕಯ್ಪರ್’ ಅಂತ ಇಡಬೇಕೆಂದು ತೀರ‍್ಮಾನ ಆಗಿತ್ತು ಆದರೆ ಸ್ಕಯ್ಪರ್ ಹೆಸರು ಆಗಲೇ ಬಳಕೆಯಲ್ಲಿ ಇರುವುದರಿಂದ ಅದನ್ನು ಚಿಕ್ಕದಾಗಿಸಿ ’ಸ್ಕಯ್ಪ್’ ಅನ್ನುವ ಹೆಸರು ಇಡಲಾಯಿತು.

ಇದೊಂದು ಮಯ್ಲುಗಲ್ಲು ಆಗಿದ್ದರೂ ಮುಂದೆ ಸಾಗಲು ಹಲವು ತೊಡಕುಗಳಿದ್ದವು. ಸ್ಕಯ್ಪ್ ಬಳಸಿ ಮಾಡಿದ ಕರೆಗಳನ್ನು ಕಂಡುಹಿಡಿಯುವುದು ತುಂಬಾ ಸಿಕ್ಕಲಾಗಿತ್ತು. ಹೆಚ್ಚು ಕಡಿಮೆ ಆಗದ ಕೆಲಸ ಅಂತನೇ ಹೇಳಬಹುದು. ಇದರಿಂದಾಗಿ ಕಳ್ಳರಿಗೆ ’ಸ್ಕಯ್ಪ್’ ಒಂದು ಒಳ್ಳೆಯ ಸಲಕರಣೆ ಆಗುವತ್ತ ಸಾಗಿತ್ತು. ’ಸ್ಕಯ್ಪ್’ ಗೆಳೆಯರ ಬಳಗ ತಾವು ’ಕಾಜಾ’ ಹಮ್ಮುಗೆಯಲ್ಲಿ ಮಾಡಿದ ತಪ್ಪುಗಳನ್ನು ಮತ್ತೇ ಮಾಡದಂತೆ ಎಚ್ಚರದಿಂದಿರಬೇಕಾಗಿತ್ತು.

ಮಿಂಗಳ್ಳರ ಎದುರು ಹೋರಾಡುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿತು. ಮಿಂಗಳ್ಳರ ಕಾಟದ ಗಾಯಕ್ಕೆ ಬರೇ ಎಳೆದಂತೆ ಮೊದಲ ಹಂತದಲ್ಲಿ ಸ್ಕಯ್ಪ್ ಮಂದಿ ಮೆಚ್ಚುಗೆ ಪಡೆಯುವಲ್ಲಿಯೂ ಸೋತಿತ್ತು. ಆದರೆ ಗೆಳೆಯರ ಬಳಗ ಯಾವುದಕ್ಕೂ ಎದೆಗುಂದದೇ ತಮ್ಮ ದುಡಿಮೆಯನ್ನು ಮುಂದುವರೆಸಿದರು.’ಸ್ಕಯ್ಪ್’ನಲ್ಲಿದ್ದ ಹಲವು ತೊಡಕುಗಳನ್ನು ಬಗೆಹರಿಸಿದರು.

ಕೊನೆಗೂ ಆ ನಲ್ನಾಳು ಬಂದಿತು ಅಗಸ್ಟ್ 29, 2003 ತೇದಿಯೆಂದು ಹೊರಗಿನ ಜಗತ್ತಿಗೆ ಸ್ಕಯ್ಪ್ ಬಿಡುಗಡೆ ಆಯಿತು. ಮೊದಲ ದಿನವೇ 10,000 ಮಂದಿ ಸ್ಕಯ್ಪನ್ನು ತಮ್ಮ ಎಣ್ಣುಕಕ್ಕೆ ಇಳಿಸಿಕೊಂಡರು.ಮುಂದಿನ ಎರಡೇ ಎರಡು ತಿಂಗಳಲ್ಲೇ ಇದಕ್ಕೆ 10,00,000 ಬಳಕೆದಾರರು ಒಡಗೂಡಿದರು.

ದುಡ್ಡಿನ ಹರಿವು 

ಸ್ಕಯ್ಪಿಗೆ ದುಡ್ಡು ಹರಿದು ಬರಲು ಶುರುವಾಯಿತು. ಹಲವು ಹೂಡಿಕೆದಾರರು ಇದರಲ್ಲಿ ದುಡ್ಡು ಹಾಕಿದರು. ಅದರಲ್ಲಿ ಇಂಡೆಕ್ಸ್ ವೆಂಚರ್(index ventures), ಬೆಸ್ಸೆಮರ್ ವೆಂಚರ್ ಪಾರ‍್ಟನರ್(Bessemer Venture Partners),ಮಾನ್ಗ್ರೋವ್ ಕ್ಯಾಪಿಟಲ್(Mangrove Capital) ಹಾಗೂ ಡ್ರೇಪರ್ ಪಿಸ್ಟರ್ ಜುರುವೆಟ್ಸನ್(Draper Fisher Jurvetson) ನಂತಹ ದೊಡ್ಡ ಹೂಡಿಕೆದಾರರು ಪಾಲ್ಗೊಂಡರು.

ಇವೆಲ್ಲಾ ಒಳ್ಳೆಯ ಬೆಳವಣಿಗೆಗಳ ಜತೆಗೆ ಹಲವು ಕಟ್ಟಲೆಗಳ ನಡುವೆಯೂ ಇವರು ಕೆಲಸ ಮಾಡಬೇಕಾಗಿತ್ತು. ಅಮೇರಿಕಾದಲ್ಲಿ ಇದರ ಮೇಲೆ ತಡೆ ತಂದರೆ ಬೇರೆ ಕಡೆ ಕೂಡ ಬರಬಹುದೆಂಬ ಅಳುಕು ಇವರಲ್ಲಿ ಯಾವಾಗಲೂ ಇತ್ತು. ಹಾಗಾಗಿ ಇದೊಂದು ನಾಡುನಡುವಿನ ಕೂಟವಾದರು (international company) ಹಲವರ ಕಣ್ಣಿಗೆ ಬೀಳದೆ, ಕೆಲಸ ಮಾಡುವುದೇ ಸರಿ ಎಂದು ತೀರ‍್ಮಾನಿಸಲಾಯಿತು.

ಸಿಡಿತ

2005 ತನಕ ಇದರ ಕೆಲಸ ಹಾಗೇ ನಡೆಯುತ್ತಿತ್ತು. ಇಲ್ಲಿ ಕೆಲಸ ಮಾಡುವ ಮಂದಿ ಕೆಲಸ ಮಾಡುತ್ತಿದ್ದರಶ್ಟೇ ಆದರೆ ಅದಕ್ಕೆ ಒಂದು ಕಟ್ಟುನಿಟ್ಟು ಇರಲಿಲ್ಲ. ಇದು ಹೀಗೆ ಸಾಗಿದರೇ ಸರಿಯಲ್ಲ ಅಂತಾ ಗೆಳೆಯರಿಗೆ ಅನ್ನಿಸತೊಡಗಿತು. ಹಣಕಾಸಿನ ಕಟ್ಟುನಿಟ್ಟು ಮತ್ತು ಮುಂಗೆಲಸದ ಪಟ್ಟಿಯನ್ನೊಳಗೊಂಡ ’ಒಂದೇಡಿನ ಮುಂಗಡೋಲೆ’ (annual budget) ಆಗ ಅಣಿಯಾಯಿತು. 

ಮುಂದಿನ ನಾಳುಗಳಲ್ಲಿ ಸ್ಕಯ್ಪ್ ಎಲ್ಲರ ಅಚ್ಚುಮೆಚ್ಚಿನ ಮಿನ್ಮನೆಯಾಗಿ ಮಾರ‍್ಪಟ್ಟಿತು. ಎದೆಗುಂದದೆ ಮುನ್ನುಗ್ಗಿದ್ದ ಗೆಳಯರ ದುಡಿಮೆಗೆ ತಕ್ಕ ಮದಿಪು-ಮನ್ನಣೆ ಆಗ ದೊರೆತಂತಾಯಿತು.

ಮಾರಾಟ

ಗೆಲುವಿನ ಹೊಳೆಯಲ್ಲಿ ತೇಲಿದ ಸ್ಕಯ್ಪನ್ನು ಈ-ಬೇ (e-bay) ಅವರು ಸೆಪ್ಟೆಂಬರ್ 2005 ನಲ್ಲಿ ಕೊಂಡುಕೊಂಡರು. ಅದರ ಬೆಲೆ $2,600,000. ಆದರೆ ಈ-ಬೇ ಮತ್ತು ಸ್ಕಯ್ಪಿನವರಿಗೂ ಹೊಂದಾಣಿಕೆ ಆಗದ ದೂಸರಕ್ಕೆ ಬಿರುಕುಬಿಟ್ಟಿತು. 2011 ರಲ್ಲಿ ಮಯ್ಕ್ರೋಸಾಪ್ಟ್ ಸ್ಕಯ್ಪನ್ನು $8,500,000,000 ಗೆ ಕೊಂಡುಕೊಂಡರು.

ಆದರೆ ಸ್ಕಯ್ಪಿನಲ್ಲಿ ಮೊದಲಿನಿಂದ ದುಡಿಯುತ್ತಿರುವವರಿಗೆ ಈ ದೊಡ್ಡ ಕೂಟಗಳ ಮುಂದಾಳುತನ ಯಾಕೋ ಹಿಡಿಸುತ್ತಿಲ್ಲ. ಎಲ್ಲದಕ್ಕೂ ಕಟ್ಟಲೆ, ಕೀಟಲೆಗಳು. ಈಳಿಗೆ (freedom) ನೆಚ್ಚಿದ್ದ ಸ್ಕಯ್ಪಿಗರಿಗೆ ಬೇರೆಯವರ ಅಡಿಯಲ್ಲಿ ಕೆಲಸ ಮಾಡುವುದು ಒಪ್ಪಿಗೆಯಾಗುತ್ತಿಲ್ಲ.

ಕೊನೆಮಾತು

ಬರೀ ಆರು ಮಂದಿ ಸೇರಿ ಜಗತ್ತು ಬೆರಗಾಗುವಂತ ಕೆಲಸವನ್ನು ’ಸ್ಕಯ್ಪ್’ ಗೆಳೆಯರು ಮಾಡಿ ತೋರಿಸಿದ್ದಾರೆ. ಈ ಹೊತ್ತಿನಲ್ಲಿ ಡಾ.ರಾಜ್ ಕುಮಾರ್ ಅವರ ’ಆಗದು ಎಂದು ಕಯ್ಲಾಗದುಯೆಂದು ಕಯ್ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…’ ಹಾಡು ನೆನಪಿಗೆ ಬರುತ್ತದೆ.

ಅದೆಂತದೇ ಕನಸಾಗಲಿ ಅದರ ಸಲುವಾಗಿ ಗಟ್ಟಿಯಾದ ನಿಲುವಿನ ಜೊತೆ ಕೆಚ್ಚೆದೆಯ ದುಡಿಮೆ ಇದ್ದರೆ ಅದು ನನಸಾಗುವುದರಲ್ಲಿ ಎರಡು ಮಾತಿಲ್ಲ.

(ಒಸಗೆಯ ಸೆಲೆ: arstechnica.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. NVDA ಮತ್ತು JAWS ಇವು ಪರದೆ ಓದುಗ (screen reader) ಮೆದುಜಾಣುಗಳು. ಸ್ಕಯ್ಪ್  ಇವಕ್ಕೆ ಹೊಂದುಕೊಂಡಿದೆ. ಆದ್ದುದ್ದರಿಂದ ಸ್ಕಯ್ಪ್ ಎಲ್ಲಾ ತರಹದ ಮಂದಿಗಳ ಮೆಚ್ಚುಗೆ ಗಳಿಸಿದೆ ಎನ್ನಬಹುದು.

ಅನಿಸಿಕೆ ಬರೆಯಿರಿ: